ನಡು ರಾತ್ರಿಯ ತಂಗಾಳಿಯ
ನೀರವತೆಯಲ್ಲಿ,
ನೀ ತುಸು ದೂರದಿಂದ
ಕೂಗಿ ಕರೆದರೂ ನಾ
ಕೇಳಿಸಿ ಕೊಳ್ಳಲಾಗುತ್ತಿಲ್ಲ ಗೆಳತಿ.
ಆಗಲೇ ನೀ ಮುಂದಿಟ್ಟ
ದೀಪಾವಳಿಯ ಬೇಡಿಕೆಗಳು
ಸದಾ ಕಿವಿಯಲ್ಲಿ
ಗುಂಯ್ ಗುಡುತ್ತಿರುವಾಗ
ನಾ ಹೇಗೆ ಕೇಳಿಸಿಕೊಳ್ಳಲಿ
ನಿನ್ನ ಕರೆಯ ಗೆಳತಿ.
ನಾ ಕೇಳಿಸಿ ಕೊಂಡಿಲ್ಲ
ಎನ್ನುವ ಬಿಗುಮಾನ ಬೇಡ
ಪ್ರೀತಿ ಕಡಿಮೆಯಾಯಿತು
ಎನ್ನುವ ದುಮ್ಮಾನ ಬೇಡ.
ತಿಂಗಳ ಕೊನೆಯಲ್ಲವೇ
ಕಷ್ಟವಿರಬಹುದು ಗೆಳತಿ,
ಆದರೆ ಪ್ರೀತಿ ಕುಂದಿಲ್ಲ
ಬಯಕೆಗಳು ಸತ್ತಿಲ್ಲ.
ದುಡ್ಡಿಲ್ಲದಿರೇನಂತೆ
ಅಸಲು ಬಡ್ಡಿ ಸೇರಿ ತುಂಬಲು,
ಕಿಸೆಯಲ್ಲಿ ಸಾಲಾಗಿ ಕ್ರೆಡಿಟ್
ಕಾರ್ಡುಗಳುಂಟಲ್ಲ
ದೀಪಾವಳಿಯ ಸಮಯವಲ್ಲವೇ
ಡಿಸ್ಕೌಂಟು, ಆಫರಗಳಿಗೆ
ಕೊರತೆಯೇನಿಲ್ಲ.
ಹೇಗಾದರೂ ಪ್ರಯತ್ನಿಸುವೆ
ಹೆದರದಿರು ಚಿನ್ನ..
ದಿವಾಲಿಯಲ್ಲಿ ದಿವಾಳಿಯಾಗದೇ
ಹಬ್ಬ ಆಚರಿಸದಿರಲು ಹೇಗೆ ಸಾದ್ಯ
ಅಲ್ಲವೇ ಗೆಳತಿ!
--ಮಂಜು ಹಿಚ್ಕಡ್
No comments:
Post a Comment