ಮನೆಯ
ಮುಂದಿದ್ದ ಒಂದು ಕುತ್ರಿಯನ್ನು ಬಡಿದು ಮುಗಿಸಿ ಅದರ ಬತ್ತವನ್ನೆಲ್ಲ ಒಂದೆಡೆ ರಾಶಿಮಾಡುವ ವೇಳೆಗೆ
ಸೂರ್ಯ ಪಶ್ಚಿಮ ದಿಗಂತದ ಅಂಚನ್ನು ಸೇರಿದ್ದ. ಆ ಕುತ್ರಿಯನ್ನೇನೋ ಬಡಿದು ಮುಗಿಸಿಯಾಗಿತ್ತು, ಆದರೆ ಬಡಿದು ಬತ್ತವನ್ನು ಇನ್ನೂ ಎತ್ತಿರಲಿಲ್ಲ, ಬಡಿದು ಒಂದೆಡೆ
ಹಾಕಿದ ಹುಲ್ಲುಗಳನ್ನು ಕಟ್ಟು ಕಟ್ಟಿ ಕೊಟ್ಟಿಗೆಯ ಅಟ್ಟಕ್ಕೆ ಇನ್ನೂ ಹಾಕಿರಲಿಲ್ಲ. ಇಂದೇ ಏನು,
ಇನ್ನೊಂದು ವಾರ ಹೋದರು ಇವೆಲ್ಲ ಮುಗಿಯುವ ಕೆಲಸಗಳಲ್ಲ ಇವು ಎನಿಸಿತು ಅವನಿಗೆ. ಮನೆಯ
ಮುಂದೆ ಇದೇ ರೀತಿ ದೊಡ್ಡದಾದ ಇನ್ನಾರು ಕುತ್ರಿಗಳಿದ್ದವು, ದಿನಕ್ಕೊಂದು
ಕುತ್ರಿ ಬಡಿದರೂ ಇನ್ನಾರೂ ದಿನಗಳಾದರೂ ಬೇಕು. ಈ ಕುತ್ರಿ ಬಡಿದ ಬತ್ತವನ್ನು ಇಂದು ಎತ್ತುವುದೋ,
ಅಥವಾ ಎಲ್ಲಾ ಕುತ್ರಿಗಳನ್ನು ಬಡಿದ ಮೇಲೆ ಎತ್ತುವುದೋ ಎಂದು ಯೋಚಿಸುತ್ತಿರುವಾಗಲೇ,
"ಫಿಂ, ಫಿಂ, ಫಿಂ,
ಗುಂಯ್, ಗುಂಯ್" ಎನ್ನುತ್ತಾ ಶಾಲೆಯಿಂದ ಓಡುತ್ತಾ
ಬಂದ ಮಗ ಅಂಗಳವನ್ನು ಬಂದು ಸೇರಿದ.
"ಯಾಕಾ, ಹಿಂಗೆ ಓಡ್ ಬತ್ತಿ,
ಹಗುರ್ಕೆ ಬರುಕಾಗುಲಾ? ಮನೆ ಏನ್ ಓಡ್ ಹೋತಿದೆ?"
ಎಂದು ಓಡಿ ಬಂದ ಮಗನನ್ನು ಸ್ವಲ್ಪ ಗದರಿಸಿದಂತೆ ಮಾಡಿ "ಹೋಗೆ ಕೈ ಕಾಲ್ ಮುಖ
ತುಳಕಂಡೆ, ಒಳಗೆ ಹೋಗೆ ದೊಸಿ ತಿನ್ನ ಹೋಗ್" ಎಂದು ತನ್ನ ಕೆಲಸದಲ್ಲಿ
ಮಗ್ನನಾದ ಬೊಮ್ಮಯ್ಯ.
ಆತನಿಗೆ ಬೇಕಾಗಿದ್ದು ಅದೇ ಆದ್ದರಿಂದ, ಶಾಲೆಯಿಂದ
ತಂದ ಪಾಠಿ ಚೀಲವನ್ನು, ಜಗುಲಿಯ ಒಳಗೆ ಎಸೆದು, ಮನೆಯ ಪಕ್ಕದ ಬಚ್ಚಲು ಮಾಡಿಗೆ ಹೋಗಿ ಒಂದೆರೆಡು ಚೆಂಬು ನೀರನಲ್ಲಿ ಕೈಕಾಲು ಮುಖ ತೊಳೆದ ಶಾಸ್ತ್ರ
ಮಾಡಿ ಅಡಿಗೆ ಕೋಣೆಯನ್ನು ಸೇರಿದ ದೋಸೆ ಬೆಲ್ಲ ತಿನ್ನಲು.
ದೋಸೆ ಬೆಲ್ಲ ತಿಂದು, ಅಮ್ಮ ಕೊಟ್ಟ ಚಹಾ ಕುಡಿದು
ಮನೆಯ ಚಿಟ್ಟೆಯ ಮೇಲೆ ನಿಂತು ಅಪ್ಪ ಆಗ ತಾನೇ ಬಡಿದು ಮುಗಿಸಿದ ಕುತ್ರಿಯ ತಳ ಬಾಗ ಕಪ್ಪಗಾಗಿದ್ದು,
ಆ ಜಾಗದಿಂದ ಹೊರಬರುತ್ತಿದ್ದ ಹುಳುಗಳ ಜೋತೆಗೆ ಆಟವಾಡುತಿದ್ದ ಮನೆಯ ಬೆಕ್ಕಿನ ಮರಿಗಳನ್ನು
ನೋಡುತ್ತಾ ಕುಳಿತ. ಬಹಳ ಹೊತ್ತಿನಿಂದ ಹಾಗೆ ನೋಡುತ್ತಾ ಕುಳಿತ ಮಗನನ್ನು "ಏನ್ ತಮ್ಮಾ,
ಹಾಂಗೆ ನೋಡ್ತೇ ಕುತಿ, ನಾಳಗೆ ಶಾಲಿಗೆ ಲೆಕ್ಕಾ ಮಾಡ್ಕಂಡೆ
ಹೋಗುದೇನು ಇಲ್ವಾ ಹೆಂಗೆ? ದೊಸಿ ತಿಂದಾಯ್ತಲ್ಲಾ? ಹೋಗೆ ಲೆಕ್ಕ ಮಾಡ್ಕ ಹೋಗ್ ನಿಡಿ" ಎಂದು ಮಗನ್ನನ್ನು ಗದರಿಸಿದ ಬೊಮ್ಮಯ್ಯ.
"ನಾಳಗೆ ನಾನ್ ಅಂಕೋಲಿಗೆ ರಶಪ್ರಶ್ನೆ ಕಾರ್ಯಕ್ರಮಕೆ ಹೋಗ್ಬೇಕ್
ಕಡಾ, ಹಂಗಂದೆ ಮಾಸ್ತರ್ ಹೇಳರ, ಅದ್ಕೆ ನಾನ್ ನಾಳಗೆ
ಶಾಲಿಗೆ ಹೋಗುದೇನು ಇಲ್ಲಾ, ಹಂಗಾಕಂಡೆ ಏನು ಕೆಲಸಾ ಮಾಡ್ಕಣುದೇನು ಇಲ್ಲಾ"
ಅಂದ ಮಗರಾಯ.
"ಹಾಂಗಂದ್ರೆ? ನೀ ಎಂತಕೆ ಹೋಗುದ್
ಅಲ್ಲಿಗೆ?"
ಪಾಪಾ ಗುಡ್ಡಗಾಡಿನ ಆ ಗುಂಡಬಾಳಾ ಎಂಬ ಹಳ್ಳಿಯಲ್ಲೇ ಹುಟ್ಟಿ, ಅಲ್ಲೇ ಬೆಳೆದ ಬೆಳೆದು ಕನ್ನಡದಲ್ಲಿ ಸಹಿ ಹಾಕುವಷ್ಟು ಕಲಿತ ಬೊಮ್ಮಯ್ಯನಿಗೆ
ಅವೆಲ್ಲವುಗಳ ಬಗ್ಗೆ ತಿಳಿದಿದ್ದು ಅಷ್ಟಕಷ್ಟೇ. ಅವರ ಮನೆಯಲ್ಲಿ ಈಗ ಆರನೇ ತರಗತಿಗೆ ಹೋಗುತ್ತಿರುವ
ಅವರ ಮಗನೇ ಸ್ವಲ್ಪ ಹೆಚ್ಚಿಗೆ ಓದಿದ್ದರಿಂದ ಹಾಗೆ ಅವನನ್ನು ಕೇಳಬೇಕಾಯಿತು.
"ಅಪ್ಪಾ, ಅದ ಉಂದ ತರಾ ಕಾರ್ಯಕ್ರಮ,
ನಿಂಗೆ ಹೇಳಿದ್ರೆ ಅರ್ಥ ಆಗುಲಾ, ಅಲ್ಲೆ ಪ್ರಶ್ನೆ ಕೇಳತರ್,
ನಾವ್ ಉತ್ತರ ಹೇಳಬೇಕ್. ಯಾರ್ ಜಾಸ್ತಿ ಉತ್ರ ಕುಡ್ತರೋ ಅವ್ರ ವಿನ್ ಆದಂಗೆ"
ಎಂದು ತನಗೆ ತಿಳಿದ ಮಟ್ಟಿಗೆ ಅಪ್ಪನಿಗೆ ವಿವರಿಸಿದ.
"ಅದಾಯ್ತಾ, ನೀ ನಾಳಗೆ ಯಾವ್ ಮಾಸ್ತರ್
ಸಂತಿಗೆ ಅಂಕೋಲಿಗೆ ಹೋಗುದ್, ನಿಮ್ಮ ಬಾಲಚಂದ್ರ ಮಾಸ್ತರ್ ಸಂತಿಗೆ?
ಇಲ್ಲ್ ಆತಿದ್ ಆ ಕಾರ್ಯಕ್ರಮ?"
"ಆಪ್ಪಾ ಅದ ಇಲ್ಲೆ ಆತಿದ್ ಅಂದೆ ನಂಗೂ ಗುತ್ತಿಲ್ಲಾ,
ನಂಬರ್ ಒನ್ ಶಾಲಿಲೆ ಅಂದರ. ಅದಿಲ್ಲೆ ಅಂದೆ ಕೇಳಿದ್ರೆ ಬಸ್ ಸ್ಟೆಂಡ್ನಿಂದೆ ಸೀದಾ
ಕೆಳಗೆ ಹೋದ್ರೆ ಸಿಕ್ತಿದ್ ಅಂದ್ರ. ಬಾಲಚಂದ್ರ ಮಾಸ್ತರ್ ಅವ್ರ ಬರ್ಲಾ ಕಡಾ, ಹೆಡ್ ಮಾಸ್ತರ್ ಸೀದಾ ಅಲ್ಲಿಗೆ ಬತ್ತಿ ಅಂದರ. ಹಾಂಗಾಕಂಡೆ ನಾ ಒಬ್ನೆ ಹೋಗ್ಬೇಕ್ ಆಗಿದ."
"ಆಲ್ವಾ ಗಂಪು, ನಿಂಕೋಡೆ ಒಬ್ನ್
ಕೋಡೆ ಹೋಗುಕೆ ಆಗುದೆ, ನಾ ಬರುವಾ ಅನ್ನುಕು ಕುತ್ರಿ ಬಡುದ ಇದ್"
"ನಾ ಆಂಕೋಲಿಗೆ ಹೆಂಗರೂ ಹೋಗ್ವೆ ಅಪ್ಪಾ, ಆದ್ರೆ ಆ ಶಾಲಿ ಹುಡ್ಕುದೇ ಕಷ್ಟ"
ಪಾಪ ಆರನೇ ತರಗತಿ ಓದುತಿದ್ದರೂ ಗಣಪತಿ ಅಂಕೋಲೆಗೆ ಹೋಗಿದ್ದೇ ಕಡಿಮೆ. ಯಾವಾಗಲೋ ಅಪರೂಪಕ್ಕೊಮ್ಮೆ
ಅಪ್ಪನ ಜೊತೆಯಾಗಿ ಇಷಾಡು ಮಾವಿನಹಣ್ಣು ಮಾರಲು ಹೋದಾಗಲೋ ಅಥವಾ ದೀಪಾವಳಿ ಹಬ್ಬದ ಸಂಧಿಯಲ್ಲಿ ಮೊಗ್ಗೆಕಾಯಿ
ಮಾರಲು ಹೋದಾಗಲೋ ಒಂದೆರೆಡು ಭಾರಿ ಅಂಕೋಲಾ ಪೇಟೆಗೆ ಬಂದಿದ್ದ. ಅದನ್ನು ಬಿಟ್ಟರೆ ಅಮ್ಮನ ಜೊತೆಗೆ ಬೆಲೇಕೇರಿಯಲ್ಲಿರುವ
ಅಜ್ಜಿ ಮನೆಗೆ ಹೋಗುವಾಗ ಹೊರಗಿನಿಂದಲೇ ಅಂಕೋಲಾವನ್ನು ನೋಡಿದ್ದ. ನಮ್ಮ ದೇಶದ ರಾಜಧಾನಿಯಿಂದ ಜಗತ್ತಿನ
ಎಲ್ಲಾ ದೇಶಗಳ ರಾಜಧಾನಿಗಳ ಹೆಸರುಗಳನ್ನು, ಅಲ್ಲಿಯ
ಪ್ರಮುಖ ವ್ಯಕ್ತಿಗಳ ಹೆಸರುಗಳನ್ನು, ಅಲ್ಲಿರುವ ಪ್ರಮುಖ ಊರುಗಳ ಹೆಸರುಗಳನ್ನೂ
ಹೇಳಬಲ್ಲವನಾಗಿದ್ದರೂ, ಅಂಕೋಲೆಯ ನಂಬರ್ ಒನ್ ಶಾಲೆ ಎನ್ನುವುದು ಅವನಿಗೆ
ತಿಳಿದಿರಲಿಲ್ಲ.
"ಅದ್ನಾ ಅಲ್ಲೇ, ಮೆಲನ್ ಮನಿ ಶಾರದೆ
ಇದ್ದಲ್ಲೆ ಹೋಗೆ ಕೇಳ್ಕಂಡೆ ಬಾ ಹೋಗ, ಅವ್ಳ ಅಲ್ಲೇ ಹತ್ರೆ ಹೊಸಗದ್ದಿ ಶಾಲಿಲೆ
ಮಾಸ್ತರಿಕೆ ಮಾಡ್ತಿದ ಕಡಾ, ಅದ್ಕೆ ಗುತ್ತಿರುದ್, ನೀನೂ ಬೇಕರೆ ಅವ್ಳ ಸಂತಿಗೆ ಹೋಗಕ್" ಎಂದ ಬೊಮ್ಮಯ್ಯ.
ಅಪ್ಪ ಅಷ್ಟು ಹೇಳಿದ್ದೇ ತಡ, ಗುಂಯ್...
ಗುಂಯ್... ಎಂದು ಕೊಂಡು ಬಾಯಲ್ಲೇ ಗಾಡಿ ಬಿಡುತ್ತಾ ಓಡಿದವನು ಮೇಲಿನ ಮನೆಯ ಶಾರದೆಯ ಮನೆಯ ಹತ್ತಿರ
ಬಂದಾಗಲೇ ಅವನ ಕೈ, ಕಾಲು, ಬಾಯಿ ನಿಂತಿದ್ದು.
ಶಾರದೆ ಆಗತಾನೇ ಮನೆಗೆ ಬಂದು, ಅಮ್ಮನೊಟ್ಟಿಗೆ ಅಡಿಗೆ ಮನೆಯಲ್ಲಿ ಚಹಾ ಹೀರುತ್ತಾ ಕುಳಿತಿದ್ದಳು.
ಒಂದಿಪ್ಪತ್ತು ಮನೆ ಇರುವ ಆ ಊರಿನಲ್ಲಿ ಟಿ.ಸಿ.ಹೆಚ್ ಮುಗಿಸಿರುವ ಶಾರದೆಯೇ ಅತೀ ಹೆಚ್ಚು
ಓದಿದವಳುಅಷ್ಟೇ ಅಲ್ಲ ಆ ಊರಿನವರಿಗಿಂತ ಅತೀ ಹೆಚ್ಚಿನ ಪ್ರದೇಶಗಳನ್ನೂ ಸುತ್ತಿದವಳು ಕೂಡ ಅವಳೇ. ಶಾರದೆ
ಹುಬ್ಬಳ್ಳಿಯಲ್ಲಿ ಟಿ.ಸಿ.ಹೆಚ್ ಮುಗಿಸಿಕೊಂಡು ಬಂದು ಒಂದೆರೆಡು ಬಾರಿ ನೌಕರಿಗೆ ಪ್ರಯತ್ನಿಸಿದ್ದರೂ
ನೌಕರಿ ಸಿಕ್ಕಿರಲಿಲ್ಲ. ನೌಕರಿ ಜಮ್ಮು ಕಾಶ್ಮೀರವಾದರೂ ಅಡ್ಡಿಯಿಲ್ಲ, ನೌಕರಿ ಸಿಕ್ಕರೆ ಸಾಕು ಅನ್ನುತ್ತಾ ಕುಳಿತವಳಿಗೆ ಮೂರನೆಯ ಬಾರಿ
ಪ್ರಯತ್ನಿಸಿದಾಗ ಗುಲ್ಬರ್ಗಾದಲ್ಲಿ ಅವಳಿಗೆ ನೌಕರಿ ಸಿಕ್ಕಿತು. ನೌಕರಿ ಸಿಗುವಾಗ ಜಮ್ಮೂ ಕಾಶ್ಮೀರ
ಎಂದರೂ ಸಿಕ್ಕ ಮೇಲೇ, ಅದೂ ದೂರವಾಯಿತು ಎನ್ನುವ ಭಾವನೆ ಎಲ್ಲರಲ್ಲಿಯೂ ಮೂಡುವಂತೆ
ಶಾರದೆಯಲ್ಲಿಯು ಮೊಳೆಯತೊಡಗಿತು. ಅಲ್ಲಿಂದ ಒಮ್ಮೆ ನಮ್ಮ ಜಿಲ್ಲೆಗೆ ಬಂದರೆ ಸಾಕು, ಆ ಮೇಲೆ ನಮ್ಮ ತಾಲೋಕಿಗೆ ಬಂದರೆ ಸಾಕು, ಆ ಮೇಲೆ ಮನೆ ಹತ್ತಿರ
ಇದ್ದರೆ ಸಾಕಿತ್ತು. ಹೀಗೆ ಮನುಷ್ಯನ ಆಸೆಗಳಿಗೆ ಕೊರತೆಯಿರಬೇಕಲ್ಲವೇ? ಶಾರದೆಯೂ
ಎಲ್ಲರಂತೆ ಮನುಷ್ಯಳೇ ಅಲ್ಲವೇ? ಗುಲ್ವರ್ಗಾ ಸೇರಿದ ಒಂದು ವರ್ಷಕ್ಕೆ ಅವರಿವರ
ಕಾಲು ಹಿಡಿದು, ಕಾಡಿ ಬೇಡಿ, ಒಂದಿಬ್ಬರ ಕೈ ಬೆಚ್ಚಗೆ
ಮಾಡಿ ಗುಲ್ಬರ್ಗಾದಿಂದ ಶಿರ್ಸಿಗೆ ಬಂದಳು. ಆಮೇಲೆ ಒಂದೆರೆಡು ವರ್ಷ ಕಳೆಯುವುದರೊಳಗೆ ಶಿರ್ಸಿಯಿಂದ
ಅಂಕೋಲೆಯ ಪಟ್ಟಣದ ಸಮೀಪದ ಹೊಸಗದ್ದೆ ಶಾಲೆಗೆ ಮ್ಯೂಚುವಲ್ ಮಾಡಿಸಿಕೊಂಡಿದ್ದಳು. ಮನೆಯಿಂದ ಹತ್ತಿಪ್ಪತ್ತು
ಕಿಲೋ ಮೀಟರ್ ದೂರದಲ್ಲಿರುವ ಹೊಸಗದ್ದೆಯೂ ಈಗೀಗ ದೂರವೆನಿಸುತ್ತಿದೆ. ಆದರೆ ಏನು ಮಾಡುವುದು ಅವಳ ಮನೆಯ
ಹತ್ತಿರದ ಶಾಲೆಗಳೆಲ್ಲವೂ ಬೆರೆಯವರಿಂದ ಬರ್ತಿಯಾಗಿದ್ದರಿಂದ ನೋಡೋಣ ಎಂದು ಸದ್ಯ ಸುಮ್ಮನಿದ್ದಳು. ಬೆಳಿಗ್ಗೆ
ಅಂಗಡಿಬೈಲ್ ಕಡೆಯಿಂದ ಬರುವ ಹೊಲ್ಟಿಂಗ್ ಬಸ್ಸಿಗೆ ಶಾಲೆಗೆ ಹೋದವಳು, ಬರುವುದು
ಸಂಜೆ ಆರರ ಅಂಗಡಿಬೈಲ್ ಬಸ್ಸಿಗೆ.
ಮನೆಯ ಹಿಂಬಾಗದ ಅಡಿಗೆ ಕೋಣೆಯಲ್ಲಿ ಅಮ್ಮನೊಂದಿಗೆ ಚಹಾ ಹೀರುತ್ತಾ ಕುಳಿತ ಶಾರದೆಗೆ, ಗಣಪತಿ ಒಂದೆರೆಡು ಬಾರಿ ಕರೆದಿದ್ದೂ ಕೇಳಿಸಿರಲಿಲ್ಲ. ತಂದೆ ಸೀತಾರಾಮ
ಗಣಪತಿ ಬಂದಿರುವ ವಿಷಯವನ್ನು ತಿಳಿಸಿದಾಗಲೇ ಅವಳಿಗೆ ಗಣಪತಿ ಬಂದಿರುವ ವಿಷಯ ತಿಳಿದಿದ್ದು. ವಿಷಯ ತಿಳಿದೊಡನೆ
ಶಾರದೆ ಅಡುಗೆ ಮನೆಯಿಂದ "ಚಹಾ ಲೋಟದೊಂದಿಗೆ ಜಗುಲಿಗೆ ಬಂದು, "ಏನ್ ಗಂಪು, ಏನ್ ಬೇಕಾಗತ್ ಅಪ್ಪು? ಬಾರಾ
ಚಾ ಕುಡಿಯಕ." ಎಂದಳು.
"ಶಾರದಕ್ಕಾ ನಾಳಗೆ ಅಂಕೋಲಿಲೆ ನಂಬರ್ ಒನ್ ಶಾಲಿಲೆ ರಸಪ್ರಶ್ನೆ
ಕಾರ್ಯಕ್ರಮ ಈದ್ ಕಡಾ, ನಾ ಅಲ್ಲಿಗೆ ಹೋಗ್ಬೇಕ ಅಂದೆ ಶಾಲಿಲೆ ಹೇಳರ. ಆದ್ರೆ
ನಂಗೆ ಅದ ಇಲ್ಲೆ ಬತ್ತಿದೆ ಅಂದೇ ಗುತ್ತಿಲ್ಲಾ. ಅದ್ಕೇ ನಿಂಗೆ ಏನರೂ ಗುತ್ತಿದೆ ಅಂದೆ ಕೇಳುವಾ ಅಂತೆ
ಬಂದೆ" ಎಂದು ತಾನು ಬಂದ ವಿಷಯವನ್ನು ಶಾರದೆ ತಾನು ನಿಂತಿದ್ದ ಅಂಗಳದಿಂದಲೇ ಅರುಹಿದ.
"ಹೌದೆ, ಹಂಗಾರೆ ನೀ ಉಂದ ಕೆಲ್ಸಾ
ಮಾಡ, ನೀನ ಬಸ್ ಸ್ಟೆಂಡಿಂದೆ ಬಸ್ ಇಳದೆ, ಹಂಗೆ
ಕಿತೂರ್ ಚೆನ್ನಮ್ಮಾ ರೋಡಲ್ಲೆ ಸೀದಾ ಹೋಗ. ಹಂಗೆ ಹೋತೆ ಇದ್ರೆ ಅಲ್ಲೆ ಎಡ್ಬದಿಗೆ ಉಂದ ಉರ್ದು ಶಾಲೆ
ಸಿಕ್ತಿದ. ಅದಾದ ಕೂಡ್ಲೆ ಸಿಗುದೇ ನಂಬರ್ ಒನ್ ಶಾಲೆ."
ಕಿತ್ತುರ್ ಚೆನ್ನಮ್ಮಾ ರೋಡ್, ಹಂಗಂದ್ರೆ
ಅವನಿಗೆ ಹೇಗೆ ತಿಳಿಯಬೇಕು. ನಂಬರ್ ೧೦ ಡೌನಿಂಗ್ ಸ್ಟ್ರೀಟ್ ಅಂದ್ರೆ ಪಟ್ಟನೆ ಹೇಳುತಿದ್ದ ಅಥವಾ ಕಿತ್ತೂರು
ಚೆನ್ನಮ್ಮಾಳ ಬಗ್ಗೆ ಭಾಷಣ ಮಾಡು ಅಂದರೆ ಮಾಡುತಿದ್ದ. ಆದರೆ ಅವಳ ಹೆಸರಿನ ರೋಡಿದೆ ಎನ್ನುವುದು ಅವನಿಗೆ
ಹೇಗೆ ತಿಳಿಯಬೇಕು. ಆ ಹೆಸರಿನ ರಸ್ತೆ ಅಂಕೋಲಾದಲ್ಲಿದೆ ಎಂದು ಅವನಿಗೆ ತಿಳಿದದ್ದೇ ಇವತ್ತು. ಹಾಗೆ
ಮೊದಲೇ ತಿಳಿದಿರಲು ಅಲ್ಲೇನು ದೊಡ್ಡ ಬೋರ್ಡ ಇದೆಯೇ ಅಥವಾ ಆ ಬಗ್ಗೆ ಯಾವುದಾದರೂ ಪುಸ್ತಕದಲ್ಲಿ ಬಂದಿದೆಯೇ.
"ಆಕ್ಕಾ ಆ ರಸ್ತೆ ಇಲ್ಲಿದ ಅಂದೆ ಗುತ್ತಿಲ್ಲಾ" ಅಂದಾ.
"ನಿಂಗೆ ನಮ್ಮ ಬಿ.ಇ.ಓ ಒಪೀಸ್ ಗುತ್ತಿದೆ?"
ಬಿ.ಇ.ಓ ಗೊತ್ತು ಅವನಿಗೆ ಈ ಬಾರಿ ಶಾಲೆಯ ಇನ್ಸಪೆಕ್ಷನಗೆ ಶಾಲೆಗೆ ಬಂದಿದ್ದಾಗ, ಗಣಪತಿಗಿರುವ ಸಾಮಾನ್ಯ ಜ್ನಾನವನ್ನು ನೋಡಿ ಹೊಗಳಿ ಹೋಗಿದ್ದರು.
ಅವನಿಗೆ ಬಿ.ಇ.ಓ ಗೊತ್ತಿತ್ತೇ ವಿನಃ ಅವರ ಕಛೇರಿಯ ಬಗ್ಗೆ ತಿಳಿದಿರದ ಕಾರಣ ತನಗೆ ಗೊತ್ತಿಲ್ಲ ಎನ್ನುವಂತೆ
ಮುಖ ಅಲ್ಲಾಡಿಸಿದ.
"ಹೋಗ್ಲೆ ಬಿಡ, ನಿಂಗೆ ಅಂಕೋಲಿಯಿಂದೆ
ಬೆಲೆಕೇರಿಗೆ ಹೋಗು ರೋಡ್ ಗುತ್ತಿದ ಅಲ್ಲಾ".
ಅದು ಅವನಿಗೆ ಗೊತ್ತಿಲ್ಲದೇ ಇರುತ್ತದಯೇ, ಅದೆಷ್ಟೋ ಬಾರಿ ಆ ರಸ್ತೆಯಲ್ಲಿಯೇ ಬೆಲೆಕೇರಿಗೆ ಹೋದವನಿಗೆ ಅದು ತಿಳಿಯದಿರುತ್ತದಯೇ..
"ಮೂದ್ಲೇ ಬೆಲೆಕೇರಿ ರಸ್ತೆ ಅಂದ್ರೆ ಏನ್ ಆತತ" ಅಂದು ಮನಸ್ಸಲ್ಲಿ ಅನಿಸಿದ್ದರೂ,
ಅದನ್ನು ತೋರಗೊಡದೇ, "ಹ, ಅಕ್ಕಾ ಏಗೆ ಗುತ್ತಾಯ್ತ, ಅದೇ ಬೆಲಿಕೇರಿ ರೋಡಲೆ ಎಡ ಬದಿಗೆ ಸಿಗು
ಶಾಲೆ ಅಲಾ" ಎಂದು ಒಮ್ಮೇಲೆ ಜ್ನಾನೋದಯವಾದಂತವನಾಗಿ ಹೇಳಿದ. ಆ ಶಾಲೆಯನ್ನು ಪ್ರತಿ ಬಾರಿ ಬೆಲೇಕೇರಿಗೆ
ಹೋಗುವಾಗಲು ನೋಡುತಿದ್ದ. ಅವನಿಗೆ ಇಲ್ಲಿಯವರೆಗೆ ಕಿತ್ತೂರು ಚೆನ್ನಮ್ಮಾ ರಸ್ತೆ ಬೆಲೇಕೇರಿ ರಸ್ತೆ
ಎನ್ನುವುದಷ್ಟೇ ಗೊತ್ತಿತ್ತು. ಅದನ್ನಿ ಬಿಟ್ಟರೆ ಬೇರಿನ್ನೇನು ಗೊತ್ತಿರಲಿಲ್ಲ.
"ಹ ತಮ್ಮಾ ಅದೇ, ಏಗೆ ಗುತ್ತಾಯ್ತೆ"
ಅನ್ನುತ್ತಾ "ಒಳಗೆ ಬಾರಾ ಅಲ್ಲೇ ನಿಂತೆ ಇಂವ್ಯಯಲ್ಲಾ" ಎಂದು ಒಳಗೆ ಮತ್ತೆ ಕರೆದಳು ಶಾರದೆ.
ಗಣಪತಿಗೆ ತಾನು ಬಂದ ಕೆಲಸ ಮುಗಿಯಿತು ಎಂದನಿಸಿ, ಒಳಗೆ ಕರೆಯುತ್ತಿದ್ದ ಶಾರದೆಯ ಮಾತುಗಳು ಕಿವಿಗೆ ಬೀಳುತ್ತಿದ್ದರೂ
ಆ ಕಡೆಗೆ ಗಮನವನ್ನು ಕೊಡದೇ ತನ್ನ ಗಾಡಿಯನ್ನು ಮನೆಯ ಕಡೆ ತಿರುಗಿಸಿ ಓಡಿದ.
"ಏನ್ ತಮ್ಮಾ, ಗುತ್ತಾಯ್ತಾ ಹೆಂಗೆ?
ನಾಳಗೆ ಒಬ್ನೇ ಹೋಗ್ವುಯಲ್ಲಾ?" ಎಂದು ಮನೆಯ ಒಳ ಪ್ರವೇಶಿಸುತ್ತಿರುವ
ಮಗನನ್ನು ಕೇಳಿದ ಬೊಮ್ಮಯ್ಯ.
"ಹ, ಆಪ್ಪಾ, ಅದ ನಮ್ಮ ಬೆಲಿಕೇರಿಗೆ ಹೋಗು ಹಾದಿಲೇ ಬತ್ತಿದ, ನಾನು ನೋಡಿ ಅದ್ನಾ,
ಆದ್ರೆ ಅದೇ ಅಂದೆ ಗುತ್ತಿಲ್ಲಾ ಆಗತ" ಎಂದು ತಿಳಿಸಿ, "ಆಪ್ಪಾ ನಂಗೆ ನಾಳಗೆ ಆಂಕೋಲಿಗೆ ಹೋಗುಕೆ ರೊಕ್ಕಾ ಕುಡ ಹಾಂ" ಎಂದು ಕೇಳಿದ.
ಇಲ್ಲಿಯವರೆಗೆ ಎಲ್ಲವೂ ಶಾಲೆಯದೇ ಖರ್ಚು ಎಂದು ತಿಳಿದು ಸುಮ್ಮನಿದ್ದ ಬೊಮ್ಮಯ್ಯನ ಮುಖದಲ್ಲಿ
ಕೋಪ ಆವರಿಸ ತೊಡಗಿತು. "ನಿಮ್ಮ ಶಾಲಿಯೋರಿಗೆ ಬೆರೆ ಕೆಲ್ಸಾ ಇಲ್ಲಾ ಕಡಾ? ಆ ಕಾರ್ಯಕ್ರಮ, ಈ ಕಾರ್ಯಕ್ರಮ ಅಂತೆ
ಕೇಳ್ತೇ ಇರುದೇ? ಸರ್ಕಾರಿ ಶಾಲಿ ಅನ್ನುದು, ಎಲ್ಲಾದ್ಕು
ಆಪ್ಪದಿರ್ಕೋಡೆ ರೊಕ್ಕಾ ಕೇಳುದು. ಹೇಳೋರು ಕೇಳೋರು ಯಾರು ಇಲ್ಲಾ ಮಡಿ, ಅದ್ಕೇ
ಹಿಂಗೆ. ನಾನೇನ್ ಇಲ್ಲೆ ರೊಕ್ಕದ ಗಿಡಾ ನಿಟ್ಟಿನೆ, ಅಲ್ಗಸುದ್ ಕೋಡ್ಲೇ ರೊಕ್ಕಾ
ಉದ್ರುಕೆ. ನೀ ರೊಕ್ಕಾ ಖರ್ಚ ಮಾಡ್ಕಂಡೆ ಹೋಗುದರೆ ಎಂತಕೆ ಹೋಗುದ. ನಾಳಗೆ ಸುಮ್ನೆ ಶಾಲಿಗೆ ಹೋಗ. ಶಾಲಿಲೆ
ಯಾಕೆ ಹೋಗಲಾ ಅಂದೆ ಕೇಳಿದ್ರೆ , ನಮ್ಮ ಆಪ್ನ ಹತ್ರೆ ರೊಕ್ಕಾ ಇಲ್ಲಾ ಆಂಕೋಲಿಗೆ
ಹೋಗುಕೆ ಅದ್ಕೆ ಹೋಗಲಾ ಅಂದ ಹೇಳ" ಎಂದು ಬಾಯಿಯ ತುದಿಗೆ ಬಂದ ಮಾತುಗಳನ್ನೆಲ್ಲ ಒಮ್ಮೇಲೆ ಉದುರಿಸಿದ
ಬೊಮ್ಮಯ್ಯ.
ಇಷ್ಟೊತ್ತು ಖುಷಿಯಾಗಿದ್ದ ಗಣಪತಿಯ ಮುಖ ಕಪ್ಪಿಟ್ಟಿತು. ಅಳುತ್ತಾ ಅಡುಗೆ ಕೋಣೆ ಸೇರಿ
ಅಮ್ಮನ ಸೆರಗಿನ ಹಿಂದೆ ನಿಂತು ಅಳಲು ಶುರು ಹಚ್ಚಿಕೊಂಡ. ಅಮ್ಮನಿಗೆ ಅದೆಲ್ಲಾ ಏನು, ಎಂದು ತಿಳಿಯದಿದ್ದರೂ ಮಗ ಶಾಲೆಯ ಪರವಾಗಿ ಅಂಕೋಲೆಗೆ ಹೋಗುತಿದ್ದಾನೆ,
ಹೋದರೆ ಹೋಗಲಿ ಎನ್ನುವ ಮನಸ್ಸು. ಆ ಮನಸ್ಸಿನಿಂದಲೇ ಗಂಡನನ್ನು "ಏನ್ರೆ,
ಅಂವಾ ಏನ್ ದಿನ್ನಾ ರೊಕ್ಕ ಕೇಳ್ತಿನೆ ನಮ್ಮ ಆಣ್ನ ಮಕ್ಕಳ ಹೆಂಗೆ. ಅವ್ರ ನೋಡಿ ದಿನಾ
ಅವ್ರ ಆಪ್ಪ್ನ ಹತ್ರೆ ರೊಕ್ಕ ಕೇಳ್ತೇ ಇರ್ತರ" ಎಂದು ಕೇಳಿದಳು.
"ನೀನೊಬ್ಳ ಕಡ್ಮಿ ಆಗದಿ ಮಡಿ, ಆಲ್ವೆ,
ನಿಂಗೆ ಏನ್ ಗುತ್ತಾತಿದೆ. ನಾನ್ ಇಲ್ಲೆ ಇಲ್ಗ (ಮೂಳೆ) ಮುರ್ದೆ ದುಡ್ದರೂ ಉಂದ ಐದ್
ಪೈಸಿ ಉಳ್ಸುಕೆ ಆಗುಲಾ, ಆಂತಾದ್ರಲ್ಲೆ ಆಂಕೋಲಿಗೆ ಹೋಗ್ ಬರುಕೆ ಐವತ್ ರೂಪಾಯಿ
ಇಲ್ಲಿಂದೆ ತಂದಕುಡ್ಲೆ? ನಿಮ್ಮ ಆಣ್ಣಾ ಶಾನಭೋಗಾ, ಆಂವ್ಗೆ ಸಂಬ್ಳಾನೇ ಬೇಕಂದೆ ಇಲ್ಲಾ, ಗಿಂಬ್ಳದಲ್ಲೇ ಸಂಸಾರ ನಡಿತೀದ.
ಆಂವ್ಗೆ ನಂಗೆ ಹೋಲ್ಸುಕೆ ಆಗುದೆ?" ಎಂದು ಮಗನ ಪರವಾಗಿ ಬಂದ ಹೆಂಡತಿಯನ್ನು
ಗಧರಿಸಿ ಬಾಯಿ ಮುಚ್ಚಿಸಿದ.
ಗಣಪತಿಗೆ ಇನ್ನೂ ತಾನು ಅಂಕೋಲೆಗೆ ಹೋದ ಹಾಗೆ ಅನಿಸಿತು. ನಾಳೆ ಹೇಗೆ ಶಾಲೆಗೆ ಹೋಗಲಿ? ಶಾಲೆಯಲ್ಲಿ ಏನೆಂದು ಉತ್ತರ ಕೊಡಲಿ ಎನ್ನುವ ಚಿಂತೆ ಕಾಡ ತೊಡಗಿತು.
ಹೀಗೆ ಯೋಚಿಸುತ್ತಾ ಕುಳಿತವನು ಎದ್ದು ಸಪ್ಪೆ ಮೂರೆ ಹಾಕಿಕೊಂಡು, ಗಂಡನ ಮುಂದೆ
ವಾಧಿಸಲು ವಿಪಲವಾಗಿ ಬಂದು ನಾಳೆಯ ಬೆಳಗಿನ ಉಪಹಾರಕ್ಕೆ ದೋಸೆ ಹಿಟ್ಟು ರುಬ್ಬುತ್ತಾ ಕುಳಿತ ಅಮ್ಮನ
ಪಕ್ಕದಲ್ಲಿ ಬಂದು ಕುಳಿತ. ಅಮ್ಮನಿಗೂ ಅವನ ಮುಖ ನೋಡಿ ಬೇಸರವಾಯಿತು. ಮನೆಗೆ ಒಬ್ಬನೇ ಮಗನಾದರೂ ಈ ರೀತಿ
ಹಣಕ್ಕೆ ಬೈಸಿಕೊಳ್ಳುವುದು ತಪ್ಪಿಲ್ಲವಲ್ಲ. ಹೀಗೆ ಇದ್ದರೆ ಇನ್ಯಾವಾಗ ನಮ್ಮ ಮನೆಯ ಪರಿಸ್ಥಿತಿ ಸುದಾರಿಸುವುದು.
ಪಾಪ ನಮ್ಮ ಮಗನಾಗಿ ಹುಟ್ಟಿದ್ದಕ್ಕೆ ಈ ರೀತಿಯ ಪಾಡು ಪಡಬೇಕೇ ಎಂದು ತಾಯಿ ಕರಳು ಮರುಗಿತು. ಕಳೆದ ಬಾರಿ
ಬಂದಾಗ ಅಣ್ಣ ಸೀರೆಗೆ ಎಂದು ಕೊಟ್ಟು ಹೋದ ೨೦೦ ರೂಪಾಯಿ ನೆನಪಾಗಿ, "ತಮ್ಮಾ, ನೀನ ಹಿದ್ರ ಬೆಡಾ, ನಾಳಗೆ ಆಮ್ಮಾ
ನಿಂಗೆ ರೊಕ್ಕಾ ಕುಡ್ತಿ, ನೀ ಹಿಂಗೆ ಸೆಪ್ಪಿ ಮುಖ ಹಾಕಂಡೆ ಕುತ್ಕಣಬೆಡಾ
ಹೋಗ". ಎಂದು ಮಗನಿಗೆ ಹೇಳಿದಳು.
ಅಮ್ಮ ಹಾಗೆ ಹೇಳಿದ ಮೇಲೆ ಅವನ ಮುಖ ಸ್ವಲ್ಪ ಚಿಗುರಿತು. ಆದರೆ ಅಲ್ಲಿಂದ ಎದ್ದು ಹೋದರೆ
ಮತ್ತೆ ಎಲ್ಲಿ ಅಪ್ಪನ ಕೈಯಲ್ಲಿ ಬೈಸಿಕೊಳ್ಳಬೇಕಾದೀತೋ ಎಂದನಿಸಿ ಅಲ್ಲಿಯೇ ಕುಳಿತ. ಅಮ್ಮನ ದೋಸೆ ಹಿಟ್ಟು
ರುಬ್ಬುವ ಕಾರ್ಯಕ್ರಮ ಮುಗಿದೊಡನೆ ಅಮ್ಮನೊಂದಿಗೆ ಅಡುಗೆ ಕೋಣೆ ಸೇರಿದ. ಊಟ ಮುಗಿಸಿದ ಮೇಲೆಯೇ ಅಲ್ಲಿಂದ
ಆತ ಹೊರಬಂದಿದ್ದು. ಹೊರ ಬಂದವನು ಸ್ವಲ್ಪ ಪುಸ್ತಕ ಹಿಡಿದ ಶಾಸ್ತ್ರ ಮಾಡಿ, ಪುಸ್ತಕದೊಂದಿಗೆ ಅಲ್ಲಿಯೇ ಮಲಗಿದ.
ಬೆಳಿಗ್ಗೆ ಅಪ್ಪ ಬಡಿಯುತ್ತಿದ್ದ ಕುತ್ರಿಯ ಸಪ್ಪಳ ಕೇಳಿ ಎದ್ದ ಗಣಪತಿ ಗಡಿಯಾರ ನೋಡಿದ, ಗಂಟೆಯಾಗಲೇ ಐದು ದಾಟಿತ್ತು. ಹೋಗಿ ಮುಖ ತೊಳೆದು ಬಂದು,
ಅಮ್ಮ ಕೊಟ್ಟ ದೋಸೆ ಬೆಲ್ಲ ಮೆದ್ದು, ಚಹಾ ಕುಡಿದು ಟ್ರಂಕನತ್ತ
ಹೋಗಿ ತನಗೆ ಉತ್ತಮವೆನಿಸಿದ ಒಂದು ಅಂಗಿಯನ್ನು ತೊಟ್ಟು, ಚಡ್ಡಿಯನ್ನು ಹಾಕುತ್ತಿರುವಾಗಲೇ
ಚಡ್ಡಿಯ ಹುಕ್ ಪಟ್ ಎಂದು ಕಿತ್ತು ಬಂತು. ಏನು ಮಾಡುವುದು ಎಂದು ತಿಳಿಯದೇ, "ಅಮ್ಮಾ.." ಎಂದು ಅಮ್ಮನನ್ನು ಕೂಗಿದ. ಅಮ್ಮ ಏನಾಯ್ತು ಎಂದು ಓಡಿ ಬಂದವಳು ಮಗನ ಸ್ಥಿತಿಯನ್ನು
ನೋಡಿ, ಅಯ್ಯೋ ಎನಿಸಿತು. ಕೂಡಲೇ ತನ್ನ ಸೀರೆಯ ಸೆರಗಿಗೆ ಸಿಕ್ಕಿಸಿದ ಸೇಪ್ಟಿ
ಪಿನ್ ಅನ್ನು ತೆಗೆದು ತುರ್ತು ಮಟ್ಟಿಗೆ ಅವನ ಚಡ್ಡಿಯನ್ನ ಬದ್ರಪಡಿಸಿದಳು. "ಏಗೆ ಸದ್ಯ ಹಿಂಗೆ
ಇರ್ಲೆ, ನೀನ್ ಹೋಗೆ ಬಾ. ಬಂದ್ಮೆಲೆ ಆಮ್ಮಾ ನಿಂಗೆ ಹುಲ್ಕಂಡೆ ಕುಡುವೆ"
ಎಂದು ಒಳಗೆ ಹೋದಳು. ಒಳಗೆ ಹೋದವಳು ಬರುವಾಗ ಸಾಸಿವೆ ಡಬ್ಬದಲ್ಲಿ ಇಟ್ಟ ನಾಲ್ಕು ಐವತ್ತು ರೂಪಾಯಿಗಳಲ್ಲಿ
ಒಂದು ಐವತ್ತನ್ನು ತಂದು ಮಗನ ಕೈಗಿಟ್ಟು, "ಹಗುರ್ಕೆ ಹೋಗ್ಬಾ. ಹೋಗ್ಬೇಕರೆ
ತುಳಸಿಮನಿಗೆ , ಊರ ದೆವ್ರಿಗೆ ಕೈ ಮುಕ್ಕಂಡೆ ಹೋಗ" ಎಂದು ತನಗೆ ತಿಳಿದ
ಮಟ್ಟಿನಲ್ಲಿ ಹಾರೈಸಿ ಕಳಿಸಿದಳು.
ಅಷ್ಟು ಹೇಳಿದ್ದೇ ತಡ ಮಗರಾಯ ಕಾಲಿಗೆ ಚಪ್ಪಲಿಯನ್ನು ಕೂಡ ಧರಿಸದೇ ಗುಂಯ್.. ಎನ್ನುತ್ತಾ
ಗಾಡಿಯನ್ನು ಬಿಟ್ಟುಕೊಂಡು ಸಮೀಪದ ಬಸ್ ನಿಲ್ದಾಣದ ಕಡೆಗೆ ಓಡಿದ. ಬಸ್ ನಿಲ್ದಾಣಕ್ಕೆ ಹೋದರೆ ಅಲ್ಲಿ
ಯಾರು ಇರಲಿಲ್ಲ. ಬಹುಷಃ ತಾನು ಬರುವ ಮೊದಲೇ ಬಸ್ ಹೋಯ್ತೋ ಹೇಗೆ ಎಂದು ಗಾಬರಿಯಾಯಿತು. ಇರಲಿ ಒಂದು
ಹತ್ತು ನಿಮಿಷ ಕಾದು ನೋಡೋಣವೆಂದುಕೊಂಡು ಕಾಯುತ್ತಾ ನಿಂತ, ಅವನು ಬಂದು ಹದಿನೈದು ನಿಮಿಷವಾದ ಮೇಲೆ ಶಾರದೆ ತನ್ನ ಜಂಬದ ಚೀಲವನ್ನು ಹಿಡಿದು ಬಳಕುತ್ತಾ
ಬರುವುದನ್ನು ನೋಡಿದಾಗ ತಾನು ಬೇಗನೆ ಬಸ್ ನಿಲ್ದಾಣಕ್ಕೆ ಬಂದಿದ್ದೇನೆ ಅನಿಸಿತು. ಅವಳು ಬಂದವಳೇ,
"ಏನ್ ಗಂಪು, ಇಷ್ಟ್ ಬೆಗೆ ರೆಡಿಯಾಗೆ ಬಂದ್ಬಿಟ್ಟಿ.
ನಿನ್ನಗೆ ಯಾಕೆ ಕರದ್ರೂ ಒಳ್ಗೆ ಬರ್ಲಾ" ಎಂದು ಕೇಳಿದಳು.
"ಹಾಂಗೇನಿಲ್ಲಾ ಆಕ್ಕಾ, ನಿನ್ನಗೆ
ಸ್ವಲ್ಪೆ ಓದ್ಕಣುದ ಇದ ಅಂದೆ ಹಂಗೆ ಓಡೋಗ್ ಬಿಟ್ಟೆ" ಎಂದು ಒಂದು ಹಸಿ ಹಸಿಯಾದ ಸುಳ್ಳನ್ನು ಎಸೆದ.
ಹಾಗೆ ಅದು ಇದು ಮಾತನ್ನಾಡುತ್ತಾ ನಿಂತುರುವಾಗಲೇ ಅಂಗಡಿಬೈಲ್ ಕಡೆಯಿಂದ ಅಂಕೋಲೆಗೆ
ಹೋಗುವ ಬಸ್ ಬಂತು. ಆಗಲೇ ಬಸ್ ಅರ್ಧಕ್ಕಿಂತು ಹೆಚ್ಚಿಗೆ ತುಂಬಿ ಹೋಗಿದ್ದರಿಂದ ಕುಳಿತು ಕೊಳ್ಳಲು ಜಾಗ
ಸಿಗದೇ ನಿಂತು ಕೊಳ್ಳಬೇಕಾಯಿತು.
"ಹೆಂಗೂ ಮಾದ್ನಗೇರಿವರಿಗೆ ಅಷ್ಟೇ ಗಂಪು, ಅಲ್ಲೆ ಹೋದ್ಮೆಲೆ ಸೀಟ್ ಸಿಕ್ತಿದ" ಎಂದು
ಶಾರದೆ ಅಂದಾಗ, "ಹೂಂ" ಅನ್ನುವಂತೆ ತಲೆಯಲ್ಲಾಡಿಸಿದ
ಗಣಪತಿ.
ಅಂತೂ ಬಸ್ ಮಾದನಗೇರಿ ತಲುಪಿದಾಗ ಇಬ್ಬರಿಗೂ ಸೀಟ್ ಸಿಕ್ಕಿತು. ಸೀಟ ಸಿಕ್ಕೊಡನೆಯೇ
ಬಸ್ಸಿನಲ್ಲಿ ಕುಳಿತ ಗಣಪತಿ ಬಸ್ಸಿನಿಂದ ಇಣುಕಿ ಹೊರ ಪ್ರಪಂಚವನ್ನು ನೋಡುತ್ತಾ ಹೊರಟ. ಅವನಿಗೆ ಇದು
ಬಹಳ ದಿನಗಳ ನಂತರದ ಪ್ರಯಾಣ. ಮಾದನಗೇರಿಯನ್ನು ದಾಟಿ ಗುಡ್ಡ ಹತ್ತುತ್ತಿದಂತೆ ಆ ಗುಡ್ಡದ ಮೇಲಿಂದ ಪಶ್ಚಿಮದ
ದಿಗಂತದವರೆಗೂ ಹಾಸಿದಂತೆ ತೋರುವ ಅರಬ್ಬೀ ಸಮುದ್ರ, ಅಲ್ಲಿಂದ
ಕಾಣುವ ಉಪ್ಪಿನಾಗರಗಳು. ಮುಂದೆ ಹೋದಂತೆ ಬರುವ ಗಂಗಾವಳಿ ನದಿ, ಅದರ ಇಕ್ಕೆಲದ
ಹಸಿರು ಕಣಿವೆಗಳು. ಆಗಾಗ ಗುಂಯ್, ಸುಂಯ್ ಎಂದು ಓಡಾಡುವ ವಾಹನಗಳು ಅವನನ್ನು
ದಿಘ್ಮೂಡನನ್ನಾಗಿ ಮಾಡಿದವು.ಅವನು ಅಂಕೋಲೆ ಬರುವವರೆಗೂ ತಾನು ಎಲ್ಲಿಗೆ ಹೋಗುತ್ತಿದ್ದೇನೆ,
ಯಾಕೆ ಹೋಗುತಿದ್ದೇನೆ, ಬಸ್ ಎಲ್ಲಿ ಎಲ್ಲಿ ನಿಲ್ಲುತ್ತಾ
ಹೋಗುತ್ತಿದೆ ಎನ್ನುವುದನ್ನೇ ಮರೆತು ನೋಡುತ್ತಾ ಕುಳಿತಿದ್ದ. ಶೆಟಗೇರಿ ಕ್ರಾಸ್ ಬಂದಾಗ ,"
ಗಂಪು, ನಾನಿಲ್ಲೇ ಇಳಿತಿ, ಛಲೋ
ಮಾಡ ಹಾಂ" ಎಂದು ಶಾರದೆ ಹೇಳಿದಾಗಲೇ ಅವನು ಎಚ್ಚರಗೊಂಡಿದ್ದು. ಅಂಕೋಲಾ ತಲುಪಿ ಬಸ್ ಇಳಿದು ಶಾಲೆಯತ್ತ
ಹೊರಟಾಗ ಸಮಯ ಇನ್ನೂ ಎಂಟು ಆಗಿರಲಿಲ್ಲ. ಸಮಯ ಆಗಿರದ ಕಾರಣ ಶಾಲೆಯ ಕೋಣೆಯ ಬಾಗಿಲುಗಳಿನ್ನು ತೆರೆದಿರಲಿಲ್ಲ.
ಗಣಪತಿ ಹೋಗಿ ಶಾಲೆಯ ಆವರಣದಲ್ಲಿರುವ ಕಟ್ಟೆಯ ಮೇಲೆ ಸುಮ್ಮನೆ ಒಬ್ಬನೇ ಕುಳಿತು ಶಾಲೆಗೆ ಬರುವರನ್ನು
ಶಾಲೆಯಿಂದ ಹೊರಹೋಗಿ ಮತ್ತೆ ಶಾಲೆಗೆ ಬರುವ ಮಕ್ಕಳನ್ನು ನೋಡುತ್ತಾ ಕುಳಿತ. ಕ್ರಮೇಣ ಒಂದೊಂದೇ ವಿದ್ಯಾರ್ಥಿಗಳು
ಬರಲಾರಂಭಿಸಿದರು. ಆಗಾಗ ಅಲ್ಲೊಬ್ಬರು ಇಲ್ಲೊಬ್ಬರು ಸ್ಪರ್ಧಿಗಳು ತಮ್ಮ ತಂದೆಯರೊಂದಿಗೋ ಅಥವಾ ಶಾಲೆಯ
ಶಿಕ್ಷಕರೊಂದಿಗೋ ಬರುವುದನ್ನು ನೋಡಿ, ಅವರ ಹಾಗೆ ತಾನು ಬಂದಿದ್ದರೆ ನಿನ್ನೆ
ಶಾರದಕ್ಕನ ಮನೆಗೆ ಹೋಗುವುದು ತಪ್ಪುತಿತ್ತು ಅನಿಸಿತು. ಒಂದರ್ಧ ಗಂಟೆ ಕಳೆಯುವುದರಲ್ಲಿ ಶಾಲೆ ವಿದ್ಯಾರ್ಥಿಗಳಿಂದ
ಕಿಕ್ಕಿರಿಯಲಾರಂಭಿಸಿತು. ಸ್ವಲ್ಪ ಹೊತ್ತಿನಲ್ಲಿಯೇ ಪ್ರಾರ್ಥನಾ ಗೀತೆಯೂ ಮುಗಿಯಿತು.
ಆಗಷ್ಟೇ ಸಮಯ ಒಂಬತ್ತು ದಾಟಿರಬಹುದು, ರಸಪ್ರಶ್ನೆ
ಕಾರ್ಯಕ್ರಮಕ್ಕೆ ಬಂದಿರುವವರನ್ನೆಲ್ಲಾ ಒಂದು ಕೋಣೆಗೆ ಆಹ್ವಾನಿಸಿದರು. ಇತರ ಸ್ಪರ್ಧಿಗಳಂತೆ ತಾನು
ಆ ಕೋಣೆಯನ್ನು ಸೇರಿದ. ಅಲ್ಲಿಗೆ ತ ಅದಾಗಲೇ ಆ ಕೋಣೆಯಲ್ಲಿ ಅತಿಥಿಗಳು, ಅದ್ಯಕ್ಷರು
ಆಸೀನರಾಗಿದ್ದರು. ಸ್ಪರ್ಧೆಯ ನಿರ್ವಾಹಕರು ಸ್ಪರ್ಧಿಗಳ ಹೆಸರನ್ನು ಕರೆದು ಅವರಿಗಾಗಿ ಮೀಸಲಿಟ್ಟ ಸ್ಥಾನಗಳಲ್ಲಿ
ಕರೆದು ಕೂಡಿಸಿದರು. ಎಲ್ಲರಂತೆ ಕುರ್ಚಿಯಲ್ಲಿ ಕುಳಿತವನು ಸುತ್ತಲು ನೋಡಿದ. ಅವರ ಶಾಲೆಯ ಹೆಡಮಾಸ್ತರ್
ರಮೇಶ ಆಗಲೇ ಬಂದು ಪ್ರಥಮ ಸಾಲಿನಲ್ಲಿ ಕುಳಿತಿದ್ದರು. ವೇದಿಕೆಯ ಮೇಲೆ ಕುಳಿತ ಅದ್ಯಕ್ಷರನು ನೋಡಿದ.
ಓಹ್! ಇವರೆ ,ಈ ಬಾರಿ ಶಾಲೆಗೆ ಇನ್ಸಸ್ಪೆಕ್ಟರ್ ಆಗಿ ತಮ್ಮ ಶಾಲೆಗೆ ಬಂದವರು
ಎನಿಸಿತು.
ಸ್ವಲ್ಪ ಹೊತ್ತಿನಲ್ಲೇ ಸ್ಪರ್ಧೆ ಪ್ರಾರಂಭವಾಯಿತು. ಎಲ್ಲರಿಗೂ ಐದೈದು ಪ್ರಶ್ನೆಗಳನ್ನು
ಕೇಳಿದರು. ಅದ್ರಷ್ಟವೋ ಅಥವಾ ಅವನ ಬುದ್ಧಿಮತೆಯೋ ಗೊತ್ತಿಲ್ಲ. ಅವನಿಗೆ ಕೇಳಿದ ಐದು ಪ್ರಶ್ನೆಗಳಿಗೂ
ಉತ್ತರಿಸಿದ ಗಣಪತಿ ಪ್ರಥಮ ಸ್ಥಾನವನ್ನು ಗಳಿಸಿದ. ಆಮೇಲೆ ಒಂದೆರಡು ಮಾತನ್ನಾಡುತ್ತೇನೆ ಎಂದು ಹೇಳಿ
ಮಾತನ್ನಾಡಲು ಪ್ರಾರಂಭಿಸಿದ ಅಧ್ಯಕ್ಷರ, ಹಾಗೂ ಅತಿಥಿಗಳ ಭಾಷಣವೆಲ್ಲಾ
ಮುಗಿದು ಬಹುಮಾನ ವಿತರಣೆಯಾಗುವ ಹೊತ್ತಿಗೆ ಒಂದು ಗಂಟೆ ಕಳೆಯಿತು. ತನ್ನ ಹೆಸರು ಕೂಗಿದೊಡನೆಯೇ ಒಮ್ಮೇಲೆ
ಮೇಲೆದ್ದ ಗಣಪತಿ. ಅವನು ಎದ್ದ ರಭಸಕ್ಕೆ ಅಮ್ಮ ಭದ್ರಪಡಿಸಲು ಹಾಕಿದ ಸೇಪ್ಟಿಪಿನ್ ಪಟ್ ಎಂದು ಬಿಚ್ಚಿಕೊಂಡು
ಅವನ ಚಡ್ಡಿ ಕೇವಲ ಒಂದು ಗುಂಡಿಯ ಮೇಲೆ ನಿಂತಿತು. ಎಲ್ಲರೂ ಹೋ! ಎಂದು ನಗೆಯಾಡಿದರು. ಉಳಿದವರು ತನ್ನನ್ನು
ನೋಡಿ ನಗೆಯಾಡುವುದನ್ನು ಗಮನಿಸಿದ ಗಣಪತಿಗೆ ನಾಚಿಕೆಯಾಗಿ ಬಹುಮಾನ ಸ್ವೀಕರಿಸಲು ಹೋಗಲೋ ಬಿಡಲೋ ಎಂದು
ಅನುಮಾನಿಸುತ್ತಾ ನಿಂತ. ಆಗಲೇ ಕಾರ್ಯಕ್ರಮದ ನಿರ್ವಾಹಕರು ಉಳಿದವರನ್ನು ಸುಮ್ಮನಿಳಿಸಿದ್ದರಿಂದ,
ಹಾಗೂ ತನ್ನ ಹೆಸರನ್ನು ಇನ್ನೆರೆಡು ಬಾರಿ ಉಚ್ಚರಿಸಿದ್ದರಿಂದ , ಬೇರೆ ಉಪಾಯವಿಲ್ಲದೇ ಸೇಪ್ಟಿಪಿನ್ ಅನ್ನು ಮತ್ತೆ ಸರಿಪಡಿಸಿಕೊಂಡು ಹೋಗಿ ತನಗೆ ಬಹುಮಾನವಾಗಿ
ಇತ್ತ ಅಂಟು ಹಾಕಿ ಮುಚ್ಚಿದ ಲಕೋಟೆಯನ್ನು, ಅವನ ಹೆಸರನ್ನು ನಮೂದಿಸಿ ಕೊಟ್ಟ
ಪಾರಿತೋಷಕ ಪತ್ರವನ್ನು ತೆಗೆದುಕೊಂಡು ಬಂದು ತನ್ನ ಸ್ಥಳದಲ್ಲಿ ಬಂದು ಕುಳಿತ. ಈಗ ಅವನ ಲಕ್ಷವೆಲ್ಲಾ
ಲಕೋಟೆಯಲ್ಲಿ ಇರಬಹುದಾದ ಹಣದ ಬಗ್ಗೆಯೇ ಹೊರತು ಪಾರಿತೋಷಕ ಪತ್ರದ ಬಗ್ಗೆಯಂತೂ ಅಲ್ಲಾ. ಅಲ್ಲಿಯೇ ಒಡೆದು
ನೋಡೋಣ ಎನ್ನುವ ಕುತುಹಲವಿದ್ದರೂ ಸುಮ್ಮನೆ ಕುಳಿತ.
ಸಮಾರಂಭ ಮುಗಿಯುವ ಹೊತ್ತಿಗೆ ಹನ್ನೆರಡು ದಾಟಿತ್ತು. ಸಮಾರಂಭ ಮುಗಿಯುತ್ತಿದ್ದಂತೆ
ಅಲ್ಲಿ ನಿಲ್ಲದೇ ಹೊರಬಂದು, ಲಕ್ಷ್ಮೇಶ್ವರ ಕಡೆಯ ರಸ್ಥೆಯಲ್ಲಿ
ಸಾಗಿ ಅಲ್ಲಿ ಒಂದಡೆ ನಿಂತು, ಸುತ್ತಾ ಯಾರು ತನ್ನನ್ನು ಗಮನಿಸುತ್ತಿಲ್ಲ
ಎನ್ನುವುದನ್ನು ದ್ರಡಪಡಿಸಿಕೊಂಡು, ಆ ಲಕೋಟೆಯನ್ನು ಒಡೆದು ನೋಡಿದ. ಅದರೊಳಗೆ
ಇದ್ದ ಎರಡು ಹೊಸ ಐದು ನೂರರ ನೋಟುಗಳು ಮಿಂಚುತಿದ್ದವು. ಅದನ್ನು ನೋಡಿ ಆತನ ಮನಸ್ಸಿನಲ್ಲಿ ಆಶ್ಚರ್ಯ
ಹರ್ಷಗಳೆರಡು ಒಟ್ಟಿಗೆ ಮೂಡಿ ಬಂದವು. ಆ ಲಕೋಟೆಯಲ್ಲಿದ್ದ ಹಣವನ್ನು ಜೋಪಾನವಾಗಿ ತನ್ನ ಚಡ್ಡಿಯ ಕಿಸಿಗೆ
ತುರುಕಿಕೊಂಡು, ಆ ಲಕೋಟೆಯನ್ನು ಅಲ್ಲಿಯೇ ಹರಿದು ಎಸೆದ. ಈಗ ಸ್ವಲ್ಪ ಹೊತ್ತಿನಲ್ಲಿಯೇ
ಹಿಲ್ಲೂರು ಕಡೆ ಹೋಗುವ ಬಸ್ ಇರುವ ನೆನಪಾಗಿ ಬಸ್ ನಿಲ್ದಾಣದತ್ತ ಹೊರಟ.
ಗಣಪತಿ ಸ್ಪರ್ಧೆಯಲ್ಲಿ ಜಯಗಳಿಸಿದ ವಿಷಯ ಮುಖ್ಯಾದ್ಯಾಪಕರಿಂದ ಶಾಲೆಗೆ ತಿಳಿದು, ಆ ಶಾಲೆಯ ಬಾಲಚಂದ್ರ ಮಾಸ್ತರರಿಂದ ಗಣಪತಿಯ ತಂದೆ ಬೊಮ್ಮಯ್ಯನಿಗೂ
ತಿಳಿಯಿತು. ಬೊಮ್ಮಯ್ಯನ ಮನಸ್ಸು ಈಗ ಮಗ ತರಲಿರುವ ಬಹುಮಾನ, ಪ್ರಶಸ್ತಿಗಿಂತಲೂ
ಮಗ ಬಹುಮಾನವಾಗಿ ಗೆದ್ದ ೧೦೦೦ ರೂಪಾಯಿಯ ಬಗ್ಗೆಯೇ ಯೋಚಿಸುತಿತ್ತು. ಕಳೆದ ತಿಂಗಳು ಬತ್ತ ಮಾರಿದ ಮೇಲೆ
ಹಣ ಕೊಡುತ್ತೇನೆ ಎಂದು ಆಗಲೇ ಹಿಲ್ಲೂರಿನ ರಾಮಚಂದ್ರನ ಅಂಗಡಿಯಿಂದ ೩೦೦ ರೂಪಾಯಿಯ ಉದ್ರಿ ಮಾಡಿ ಮನೆಗೆ
ಸಾಮಾನು ತಂದಿದ್ದು ಇಲ್ಲಿಯವರೆಗೆ ಮರೆತು ಹೋದರೂ ಈಗ ಮಗ ತರಲಿರುವ ಸಾವಿರ ರೂಪಾಯಿಯಿಂದಾಗಿ ಮತ್ತೆ
ನೆನಪಾಯಿತು. ಸಾವಿರದಲ್ಲಿ ಮೂನ್ನೂರು ಹೋದರೆ ಏಳು ನೂರು ಉಳಿಯುತ್ತದೆ ಅದರಿಂದ ಏನು ಮಾಡುವುದು ಎಂದು
ತನ್ನಷ್ಟಕ್ಕೆ ವಿಚಾರ ಮಾಡಿದಾಗ ಸ್ವಲ್ಪ ಕಲ್ಲಂಗಡಿ ಬೀಜ ತಂದು ಕೆಳಗಿನ ಮಕ್ಕಿ ಗದ್ದೆಗಳಿಗೆ ಹಾಕಿದರೆ
ಹೇಗೆ ಅಂದುಕೊಳ್ಳುತ್ತಾ ಕುತ್ರಿ ಬಡಿಯುತ್ತಿದ್ದ. ಅವನೇನು ಮಗನ ಹಣ ಲಪಟಾಯಿಸಿ ಮಜಾ ಮಾಡಬೇಕೆಂದು ಹಾಗೆ
ಯೋಚಿಸುತ್ತಿರಲಿಲ್ಲ. ಪಾಪ ಬೊಮ್ಮಯ್ಯನ ಪರೀಸ್ಥಿತಿಯೂ ಕೂಡ ಹಾಗೆ ಇತ್ತು. ಮನೆಯ ಹಿರೀಕರಿಂದ ಬಳುವಳಿಯಾಗಿ
ಬಂದ ಮೂರು ಎಕರೆ ಜಮೀನು, ಮನೆಯಿರುವ ಜಾಗದಲ್ಲಿರುವ ೧೦ ಗುಂಟೆಯ ತೆಂಗಿನ
ತೋಟ ಹಾಗೂ ಗದ್ದೆಯ ಕೊನೆಯ ತುದಿಯಲ್ಲಿರುವ ೫ ಗುಂಟೆಯ ಜಾಗದಲ್ಲಿ ಇತ್ತೀಚೆಗೆ ಆರೇಳು ವರ್ಷಗಳಿಂದ ಕಾಯಿ
ಬಿಡುತ್ತಿರುವ ಐದಾರು ಇಷಾಡು ಮಾವಿನ ಮರ ಬಿಟ್ಟರೆ ಬೇರೇನು ಇಲ್ಲಾ. ಬೆಟ್ಟದ ಕಡೆಯ ಜಮೀನಾಗಿದ್ದರಿಂದ
ಇಳುವರಿ ಸ್ವಲ್ಪ ಕಡಿಮೆಯೇ. ಸ್ವಲ್ಪ ಕಾದು ಬೆಳೆ ಬೆಳೆದರೆ
ಕೈಗೆ ಹತ್ತೀತು ಇಲ್ಲಾ ಅಂದರೆ ಅದೂ ಕೂಡ ಕಾಡು ಪ್ರಾಣಿಗಳ ಪಾಲಾದೀತು. ಮನೆಯ ಪರಿಸ್ಥಿತಿಗೆ
ಮಗನ ಹಣ ಸ್ವಲ್ಪ ಉಪಯೋಗಕ್ಕೆ ಬಂದೀತು ಎಂದು ಹಾಗೆ ಆತ ಯೋಚಿಸುತ್ತಿದ್ದುದು. ಹಾಗೆ ಯೋಚಿಸುತ್ತಿದ್ದವನು
ಒಮ್ಮೆ ಹೆಂಡತಿಗೂ ವಿಷಯ ಹೇಳಿ ಬಿಡೋಣ ಎನ್ನಿಸಿ. "ಏನೆ? ಏನ್ಮಾಡ್ತೇ
ಇಂವ್ಯೆ? ಹಂಗೆ ಕವಳದ ಹರಿವಾಣ ತಕಂಡೆ ಮಾತ್ರೆ ಬಾ ನೋಡು." ಎಂದು ಹೆಂಡತಿಯನ್ನು
ಕರೆದ.
ಕುದಿಯುತ್ತಿರುವ ಗಂಜಿ ಮಡಿಕೆಗೆ ಅಕ್ಕಿ ಹಾಕಿ, ಹುಳಗಾ ಮಾಡಲು ಬಸಲೇ ಸೊಪ್ಪು ತುರಿಯುತ್ತಿದ್ದ ಸೀತೆ ಗಂಡ ಹೊರಗೆ
ಕರೆಯುತ್ತಿದ್ದುದನ್ನು ಕೇಳಿ, ಕವಳದ ಹರಿವಾಣ ಹಿಡಿದು ಹೊರಗಿನ ಚಿಟ್ಟೆಗೆ
ಬಂದು, "ತಕಣಿ" ಎಂದು ಹರಿವಾಣವನ್ನು ನೀಡಿದಳು.
"ಏನೆ, ಇಲ್ಲ್ ಬಾರೆ ಕುತ್ಕಣೆ"
ಎಂದು ಗಂಡ ಹೇಳಿದಾಗ. "ನಾ ಇಲ್ಲೆ ಕುತ್ರೆ, ಅಲ್ಲೆ ಹುಳುಗಾ ಮಾಡುವವ್ರ
ಯಾರ, ಮುದ್ಲೇ ತಡಾ ಆಗಿದ, ಪಾಪ ಆಂಕೋಲಿಗೆ ಹೋದಂವ
ಇಟ್ಟೊತ್ತಿಗೆ ಬತ್ತಿನಾ ಏನಾ" ಎಂದು ಒಳಗೆ ಹೋಗಲು ಅಣಿಯಾದವಳನ್ನು ಮತ್ತೆ ತಡೆದು.
"ಹಾನೆ ಕುಳ್ಳೆ, ಗುತ್ತಿದ,
ಐದ್ ನಿಮಿಷೆ ಕುತ್ರೆ ಏನೂ ಆಗುಲಾ ಕುಳ್ಳ"
ಗಂಡನ ಹುರುಪಾಗಿರುವ ಮನಸ್ಥಿಯನ್ನು ಗಮನಿಸಿದ ಸೀತಾಗೆ ಏನೋ ಸಂತಸದ ವಿಷಯವಿರಬೇಕೆನಿಸಿ, "ಆಯ್ತ, ಏನ್ ಹೇಳಿ"
"ನಿಂಗೆ ವಿಷ್ಯಾ ಗುತ್ತಾಯ್ತೆ?"
"ಏನ್ ವಿಷ್ಯಾ? ನಂಗೆ ವಿಷ್ಯವೆಲ್ಲಾ
ಗುತ್ತಾಗುಕೆ ನಾನ ನಿಮ್ಮಂಗೆ ಹೊರ್ಗೆ ದುಡಿತಿನೆ, ಅಡ್ಗಿ ಮನಿಲೆ ಕುತೋಳಿಗೆ
ವಿಷ್ಯೋವೆಲ್ಲಾ ಹೆಂಗೆ ಗುತ್ತಾತಿದ? ನೀವ್ ಹೇಳಿದ್ರೆ ಮಾತ್ರ ನಂಗೆ ಗುತ್ತಾಗುದಲ್ಲಾ?
ಅದ ಹೋಗ್ಲೆ ಏನ್ ವಿಷ್ಯಾ ಹೇಳಿ".
"ನಮ್ಮ ಗಂಪುಗೆ ಇಂದೆ ಒನ್ನೇ ಬಹುಮಾನ ಸಿಕ್ತ ಕಡಾ,
ಸಾವಿರ್ ರೂಪಾಯ್ ಕುಟ್ಟರ ಕಡಾ"
ಅವನಿಗೆ ಬಹುಮಾನಕ್ಕಿಂತ ಮಗ ತರಲಿರುವ ಹಣವೇ ಮುಖ್ಯವಾದ್ದರಿಂದ, ಆ ಸಾವಿರ ರೂಪಾಯಿಯನ್ನು ಒತ್ತು ಕೊಟ್ಟು ಹೇಳಿದ. ಸೀತಾಳಿಗೆ ವಿಷಯ
ಕೇಳಿ ಸಂತೋಷವಾಯಿತು. ಅವಳಿಗೆ ಅಂತೂ ತಮ್ಮ ತಮ್ಮ ಹೆಸರನ್ನು ಉಳಿಸಿದನಲ್ಲ ಅನಿಸಿತು. ಮುಂದೆ ಯಾರ ಕಣ್ಣು
ಬೀಳದೇ ಅವನ ಕೀರ್ತಿ ಹೀಗೆ ಮುಂದೆ ಸಾಗಲಿ ಎಂದು ಮನದಲ್ಲೇ ಹರಸಿದಳು.
ಅವಳು ಮೌನವಾಗಿದ್ದನ್ನು ಗಮನಿಸಿದ ಬೊಮ್ಮಯ್ಯ, "ಆಲ್ವೆ, ಅಂವ್ಗೆ ಬಂದ ರೊಕ್ಕಾ ಏನ ಮಾಡುದ ಅಂದೆ ವಿಚಾರ ಮಾಡ್ತೇ
ಇದ್ದೆ" ಎಂದಾಗ
"ಏನಾ?" ಎಂದು ಕೇಳಿದಳು
"ನಾನ ಹಿಲ್ಲೂರ್ ರಾಮಚಿರಣ್ಣನ ಅಂಗ್ಡಿಗೆ ೩೦೦ ರೂಪಾಯ್ ಕುಡುದೀದ್,
ಇಂದೇ ಸಂಜಿಗೆ ಹೋಗೆ ಕುಟ್ಟೆ ಬಂದ್ಬಿಡ್ತಿ. ಹಂಗೆ ಉಳ್ದ ರೊಕ್ಕದಲ್ಲೆ, ಚಿಮ್ಡಿ ಬೀಜ ತಂದೆ ಕೆಳಗ್ನ ಗದ್ದಿಯವ್ಕೆ ಹಾಕಿದ್ರೆ ಹೆಂಗೆ?" ಎಂದು ಹೆಂಡತಿಯನ್ನು ಕೇಳಿದ.
ಸೀತಾಳಿಗೆ ಸಿಟ್ಟು ಬಂದು, "ಆಲ್ವೆ ನಿಮ್ಗೆ ಬ್ಯಾರೇ ಕೆಲ್ಸಾ ಇಲ್ಲಾ, ಆಂವಾ ಕಷ್ಟ ಪಟ್ಟೆ ಓದೆ
ಗಿದ್ದದ್ ರೊಕ್ಕ್ ತಕಂಡೆ ನಿಮ್ಮ ಸಾಲ ತೀರಸ್ತರಿ ಅಂತರಿ, ನಿಮ್ಗೇನ್ ತಲೆ
ಹಾಳಾಗಿದೆ, ಅಂವ್ಗೆ ಆ ರೊಕ್ಕ ಮುಂದೆ ಬೇಕಾಗುದ ಅನ್ನು ಕಾಳ್ಜಿನೂ ಇಲ್ಲಾ
ನಿಮ್ಗೆ" ಎಂದು ಸ್ವಲ್ಪ ಸಿಟ್ಟಿನಿಂದಲೇ ಕೇಳಿದಳು ಸೀತಾ.
"ಹಂಗಾಲ್ವೆ, ಮಾರಾಯ್ತಿ,
ನೀ ಎಲ್ಲದ್ಕೂ ಸಿಟ್ಟ ಆತಿ ಅಲ್ಲಾ. ನಾನೇನ್ ರೊಕ್ಕ್ ಹಾಳ್ ಮಾಡ್ತಿ ಅಂದ್ನೆ. ನಾ
ದುಡಿಯುದು ಆವ್ನ ಸಲ್ವುವಾಗೆ ಅಲ್ಲಾ?"
"ಅದ ಹೌದ್ರೆ, ಆದ್ರೂ ನಾವ್ ಆವ್ನ್
ರೊಕ್ಕ ಮುಟ್ಟುದ್ ಬ್ಯಾಡಾ. ಹೆಂಗೂ ಮತ್ತೂಂದ ಎರ್ಡ ವಾರದಲ್ಲೆ ಕುತ್ರಿ ಬಡ್ದೆ ಮುಗಿತಿದಲ್ಲಾ ಆಗ್ಬೇಕರೆ
ಸ್ವಲ್ಪ ಬತ್ತಾ ಕುಟ್ಕಂಡೆ ಸಾಲಾ ತೀರಸ್ದರೆ ಆಯ್ತ. ಅದ್ಕೆ ಆವ್ನ ರೊಕ್ಕ ಮುಟ್ಟುದ್ ಬ್ಯಾಡಾ. ಆ ರೊಕ್ಕಾ
ಹಾಂಗೆ ಆವ್ನ ಹಿಸ್ರಲ್ಲೆ ಪೋಸ್ಟಾಪೀಸನಲ್ಲೆ ಇಟ್ರೆ ಆಯ್ತ" ಎಂದು ತನ್ನ ಸಲಹೆಯನ್ನು ನೀಡಿದಳು.
"ಆಯ್ತ ಬಿಡ ಹಂಗಾರೆ, ಆಂವ್ನ ರೊಕ್ಕಾ
ಆವ್ನ ಕೋಡೆ ಇರ್ಲೆ" ಎಂದು ಬೊಮ್ಮಯ್ಯ ಅಷ್ಟಕ್ಕೆ ತನ್ನ ಮಾತನ್ನು ನಿಲ್ಲಿಸಿ ಕುತ್ರಿ ಬಡಿಯಲು
ಮತ್ತೆ ತೋಡಗಿದ.
ಬಸ್ ನಿಲ್ದಾಣದಿಂದ ಮನೆಗೆ ಬರುವವರೆಗೂ ಹತ್ತಾರು ಬಾರಿ ತನ್ನ ಕಿಸೆಯನ್ನು ಪರೀಕ್ಷಿಸಿಕೊಳ್ಳುತ್ತಾ
ಬಂದು ಮನೆಯನ್ನು ಸೇರಿದ ಗಣಪತಿ ಮನೆಯ ಹೊರಗಿನ ಬಚ್ಚಲು ಮನೆಗೆ ಹೋಗಿ ಕೈಕಾಲು ತೊಳೆದು ಬಂದು
" ಆಮ್ಮಾ, ಆಮ್ಮಾ" ಎಂದು ತಾನು ಬಂದಿರುವುದನ್ನು ಸೂಚಿಸಲು ಅಮ್ಮನನ್ನು
ಕೂಗಿದ.
ಒಳಗೆ ಆಗತಾನೇ ಬೆಂದ ಬಸಲೆ ಸೊಪ್ಪಿನ ಹುಳುಗಾದ ಪಾತ್ರೆಯನ್ನು ಒಲೆಯ ಮೇಲಿಂದ ಕೆಳಗಿಳಿಸಿ.
ಕಳೆದ ತಿಂಗಳು ತದಡಿ ಕಡೆಯ ಹರಿಕಂತರವಳು ತಂದು ಕೊಟ್ಟಿದ್ದ ನೂರು ಒಣ ಬಂಗಡೆಗಳಲ್ಲಿ ದೊಡ್ಡದಾದ ಎರಡು
ಬಂಗಡೆಗಳನ್ನು ತೆಗೆದು ಸುಡಲು ಒಲೆಗೆ ತುರುಕುತ್ತಿರುವಾಗ ಮಗನ ಕೂಗು ಕೇಳಿ, ಬೆಂಕಿಯೊಳಗೆ ತುರುಕುತ್ತಿದ್ದ ಬಂಗಡೆಗಳು ಸುಟ್ಟು ಕರಕಲಾದವು ಅನಿಸಿ,
ಅವುಗಳನ್ನು ಹೊರಕ್ಕೆ ತೆಗೆದು, "ಏನ್ ಆಪ್ಪಾ,
ಬಂದೆ ನಿಲ್ಲ" ಎಂದು ಕೈಗೆ ಬಡಿದ ಬೂದಿಯನ್ನು ಸೀರೆಗೆ ಒರಿಸಿಕೊಳ್ಳುತ್ತಾ ಹೊರಬಂದಳು
ಸೀತಾ.
ಅಮ್ಮಾ ಹೊರಗೆ ಬರುತ್ತಿದ್ದಂತೆ ತನ್ನ ಕಿಸೆಯಲ್ಲಿದ್ದ ಐದು ನೂರರ ನೋಟುಗಳನ್ನು ಹೊರತೆಗೆದು
" ಇದೆ ನೋಡೆ, ನಂಗೆ ಒನ್ನೇ ನಂಬರ್ ಬಂತು"
ಎಂದು ಆ ನೋಟುಗಳನ್ನು ಕೈಲಿ ಹಿಡಿದು ಅಮ್ಮನಿಗೆ ತೋರಿಸಿದ.
ಖುಸಿಯನ್ನಾಗಲೀ, ದುಃಖವನ್ನಾಗಲೀ ವ್ಯಕ್ತಪಡಿಸಿಯೇ
ಗೊತ್ತಿಲ್ಲದ ಸೀತಾಗೆ ಮಗ ತಂದ ನೋಟುಗಳು ಹೃದಯದಲ್ಲಿ ಖುಸಿಯನ್ನು ಉಕ್ಕೇರಿಸುತಿದ್ದರೂ ಅದನ್ನು ವ್ಯಕ್ತಪಡಿಸಲಾಗದೇ
ಸುಮ್ಮನೇ ನಕ್ಕು, "ಓಳ್ಳೇದಾಗ್ಲೆ ಮಗ್ನೆ, ಆ ನೋಟ ಸರಿ ಮಾಡಿಟ್ಕ, ನಾಳಗೆ ಇಲ್ಲಾ ನಾಡ್ದಿಗೆ ಪೋಸ್ಟಆಪೀಸಿಗೆ
ಹೋಗೆ ನಿನ್ನ ಹಿಸ್ರಲ್ಲೆ ಇಟ್ಟ ಬರುವನಿ. ಏಗೆ ಮಧ್ಯಾನಾ ಆಗೋಯ್ತ, ಬ್ಯಾಗ್
ಮಿಂದ್ಕಂಡೆ ಉಣ್ಣುಕೆ ಬಾ ಹೋಗ" ಎಂದು ಮತ್ತೆ ಒಣ ಬಂಗಡೆಗಳನ್ನು ಸುಡಲು ಅಡುಗೆ ಕೋಣೆ ಸೇರಿದಳು
ಸೀತಾ.
ಹೊರಗೆ ಕುತ್ರಿ ಬಡಿಯುತ್ತಾ ಅವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರೂ ಅದೂ
ತನಗೆ ಸಂಬಂಧಿಸಿದ ವ್ಯವಹಾರವಲ್ಲ ಎನ್ನುವಂತೆ ಸುಮ್ಮನೆ ಕುತ್ರಿ ಬಡಿಯುತ್ತಾ ಇದ್ದ.
ಅಮ್ಮ ಒಳಗೆ ಸುಡುತ್ತಿರುವ ಒಣ ಬಂಗಡೆಯ ವಾಸನೆ ಮೂಗಿಗೆ ಬಡಿದು, ಗಣಪತಿಯ ಬಾಯಲ್ಲಿ ನೀರು ಸುರಿಯಲಾರಂಭಿಸಿತು. ತನಗೆ ಬಹುಮಾನವಾಗಿ
ಬಂದ ಪ್ರಶಸ್ತಿ ಪತ್ರವನ್ನು ಹಾಗೆ ಅಲ್ಲೇ ಟಿಪಾಯಿಯ ಮೇಲೆ ಎಸೆದು. ಐದು ನೂರರ ನೋಟುಗಳನ್ನು ತನ್ನ ಅಂಗಿ
ಕಿಸೆಯಲ್ಲಿ ತುರುಕಿ, ಆ ಅಂಗಿಯನ್ನು ತೆಗೆದು ಮನೆಯ ನಡುಕೋಣೆಯ ಗಿಳಿಗೆ ಸಿಕ್ಕಿಸಿದ.
ಹುಕ್ಕು ಹರಿದ ಚಡ್ಡಿಯನ್ನು ತೆಗೆದು ಒಳಗಿನಿಂದಲೇ ಹೊರ ಜಗುಲಿಗೆ ಎಸೆದು ಪಂಚೆಯನ್ನು ಸುತ್ತಿಕೊಂಡು
ಬಚ್ಚಲು ಮನೆಯ ಕಡೆ ಓಡಿದ.
ಅವನು ಓಡುವುದನ್ನು ನೋಡಿದ ಬಹುಮಾನದ ಪ್ರಶಸ್ತಿ ಪತ್ರ ತನ್ನಷ್ಟಕ್ಕೆ ತಾನು ನಕ್ಕಿತು, ಈಗ ಆತ ಬಚ್ಚಲು ಮನೆಗೆ ಹೋಗುತ್ತಿದ್ದಾನೆ ಸ್ನಾನ ಮುಗಿಸಿ ಬರಲು,
ನಾನು ನಾಳೆ ಹೋಗುತ್ತಿದ್ದೇನೆ ಮತ್ತೆ ಅಲ್ಲಿಂದ ಹೊರಬರಲು ಅಲ್ಲ, ಅಲ್ಲಿಯೇ ಉಳಿದು, ಉರಿದು ನಾಳೆಯ ಸ್ನಾನದ ನೀರ ಹಂಡೆಗೆ ಉರುವಲಾಗಲು!
--ಮಂಜು ಹಿಚ್ಕಡ್