Showing posts with label ನಾನು ಓದಿದ್ದು. Show all posts
Showing posts with label ನಾನು ಓದಿದ್ದು. Show all posts

Saturday, July 27, 2024

ಚಂದ್ರಗುಪ್ತ ಮೌರ್ಯ - ಓದಿ ಮರೆಯಲಾಗದ ಒಂದು ಐತಿಹಾಸಿಕ ಕಾದಂಬರಿ.

 
                                  

        ಕಳೆದವಾರ ಜಯನಗರದ  ನಾಲ್ಕನೇ ಬಡಾವಣೆಯಲ್ಲಿರುವ ಟೋಟಲ್ ಕನ್ನಡ ಪುಸ್ತಕ ಮಳಿಗೆಗೆ ಹೋದಾಗ "ಚಂದ್ರಗುಪ್ತ ಮೌರ್ಯ" ಎನ್ನುವ ಹೊತ್ತಿಗೆ ತನ್ನ ಹೊದಿಕೆಯಿಂದಲೇ ನನ್ನ ಕಣ್ಣು ಸೆಳೆಯಿತು. ಇತಿಹಾಸದಲ್ಲಿ ಸ್ವಲ್ಪ ಆಸಕ್ತಿ ಹೊಂದಿರುವ ನನಗೆ ಆ ಹೊತ್ತಿಗೆಯನ್ನು ನೋಡಿದ ತಕ್ಷಣ ಓದುವ ಮನಸ್ಸಾಗದೇ ಇರಲು ಸಾದ್ಯವಾಗದೇ ಆ ಹೊತ್ತಿಗೆಯನ್ನು ನನ್ನ ಕೈಗೆತ್ತಿಕೊಂಡೆ. ಎಂದಿನ ವಾಡಿಕೆಯಂತೆ, ಅಲ್ಲೇ ನಿಂತು ಹೊತ್ತಿಗೆಯ ಲೇಖಕರು ಯಾರು  ಎಂದು ನೋಡಿದೆ, ಬಳಿಕ ಬೆನ್ನುಡಿ, ಮುನ್ನುಡಿಯಲ್ಲಿ ಏನಿದೆ ಎಂದು ನೋಡಿ ಓದಿದೆ.


        ಇದು ಹಿಲ್ಡಾ ಸೆಲಿಗ್ಮೆನ್ ಅವರು ಬರೆದಂತ "ಪಿಕಾಕ್ಸ್ ಕಾಲಿಂಗ್" ಎನ್ನುವ ಐತಿಹಾಸಿಕ ಕಾದಂಬರಿಯ ಅನುವಾದ. ಮೂಲ ಕೃತಿಯ ಬರಹಗಾರರ ಬಗ್ಗೆ ತಿಳಿದಿದ್ದು ಅತ್ಯಲ್ಪವೇ ಆದರೂ ಅನುವಾದಕರ ಪರಿಚಯ ಮೊದಲಿನಿಂದಲೂ ಇದೆ. ಅವರು ಎಂದಿಗೂ ಮುಖಾ ಮುಖಿಯಾಗಿ ಬೇಟಿಯಾಗದೇ ಇದ್ದರೂ ಮುಖ ಪುಸ್ತಕದಲ್ಲಿ ಅವರ ಪರಿಚಯವಿದೆ. ಅವರ ಅದೆಷ್ಟೋ ಲೇಖನಗಳನ್ನ ಓದಿ ಮೆಚ್ಚಿಕೊಂಡವರಲ್ಲಿ ನಾನು ಒಬ್ಬ. ನನ್ನ ಜಿಲ್ಲೆಯವರು, ನಮ್ಮೂರಿನವರು ಅನ್ನುವ ಅಭಿಮಾನ ನನಗೆ. ಅದ್ಯಾಪಕರಾಗಿ ನನಗೆ ಅವರ ಕುದ್ದುನಿಂತು ವಿದ್ಯೆ ಕಲಿಸದೇ ಇದ್ದರೂ, ಅವರ ಸಹೋದರ ನನಗೆ ಕಾಲೇಜಿನಲ್ಲಿ ಬೌತಶಾಸ್ತ್ರವನ್ನು ಬೋಧಿಸಿದ ಗುರುಗಳು ಆದ, ಒಳ್ಳೆಯ ಸಾಹಿತಿಗಳು ಆದ   ಮೋಹನ್ ಹಬ್ಬು. ಅವರ ಸಹೋದರ ಉದಯಕುಮಾರ ಹಬ್ಬು ಅವರೇ ಈ ಕೃತಿಯ ಅನುವಾದಕರು.


        ಪುಸ್ತಕದ ಮುಖಪುಟ, ಪುಸ್ತಕದ ಹೆಸರು, ಅನುವಾದಕರ ಹೆಸರು ಇವಿಷ್ಟು ನನಗೆ ಆಸಕ್ತಿಯನ್ನು ಕೆರಳಿಸಲು ಸಾಕಿತ್ತು. ತಡಮಾಡದೇ ಪುಸ್ತಕವನ್ನು ಮನೆಗೆ ಕೊಂಡುತಂದೆ. ಆದಿನ ಶನಿವಾರ, ವಾರಾಂತ್ಯದ ಮೊದಲದಿನ, ಹೊರಗೆ ಪುರುಸೊತ್ತು ಕೊಡದೇ ಸುರಿಯುತ್ತಿರುವ ಬೆಂಗಳೂರಿನ ಆಷಾಡದ ಜಿಟಿ ಜಿಟಿ ಮಳೆ. ಮದ್ಯಾಹ್ನದ ಊಟ ಮುಗಿಸಿ ಪುಸ್ತಕವನ್ನು ಕೈಗೆತ್ತಿಕೊಂಡು ಓದಲು ಕುಳಿತೆ. ಓದುತ್ತಾ ಕುಳಿತೆ.


        ಒಂದು ಅಧ್ಯಾಯ ಇನ್ನೊಂದಕ್ಕೆ ಮುನ್ನುಡಿಯಾಗುತ್ತಾ ಸಾಗಹತ್ತಿತು. ಒಂದು ಅಧ್ಯಾಯವನ್ನು ಮುಗಿಸುತ್ತಿದಂತೆ ಇನ್ನೊಂದು ಅಧ್ಯಾಯವನ್ನು ಓದುವ ಕುತುಹಲ, ಅಷ್ಟು ಚೆನ್ನಾಗಿ ಅನುವಾದಗೊಂಡ ಪುಸ್ತಕವದು. ವಿಕ್ಟೋರಿಯ ಕಾಲಘಟ್ಟದಲ್ಲಿ ಇಂಗ್ಲಿಷಿನಲ್ಲಿ ರಚಿಸಲ್ಪಟ್ಟ ಕೃತಿಯನ್ನು , ಇಂಗ್ಲಿಷ ಅಧ್ಯಾಪಕರೊಬ್ಬರು ಸುಲಲಿತವಾಗಿ ಇಂದಿನ ಕಾಲದ ಆಧುನಿಕ ಕನ್ನಡಕ್ಕೆ ಅನುವಾದಿಸಿದ್ದಂತೂ ಒಂದು ಮಹಾನ್ ಸಾಧನೆಯೆಂದರೆ ತಪ್ಪಾಗಲಾರದೇನೋ. 


        ಹಿಮಾಲಯದ ತಪ್ಪಲಿನಲ್ಲಿ ಆಳ್ವಿಕೆ ನಡೆಸುತಿದ್ದ ಹಿಮವಂತ ರಾಜ ಮಗದದ ದೋರೆ ನಂದರಿಂದ ಸೋತು ಹತನಾದಾಗ, ಆತನ ರಾಣಿ ಮುರಾ, ಅಲ್ಲಿಂದ ತಪ್ಪಿಸಿಕೊಂಡು, ನಂದರಿಗೆ ಗೊತ್ತಾಗದ ರೀತಿಯಲ್ಲಿ ಮಗು ಬೆಳೆಯಲಿ ಎಂದು ಒಂದು ರಾತ್ರಿ ಬೆಟ್ಟ ಗುಡ್ಡಗಳನ್ನು ಸುತ್ತಿ ಹತ್ತಿರವಿರುವ ಕಾಡಿನಲ್ಲಿ, ದನಗಳಿಗೆ ನೀರು ಕುಡಿಯಲು ಇಟ್ಟಿರುವ ಮರಿಗೆಯನ್ನು ನೋಡಿ, ಆ ಮರಿಗೆಯನ್ನ ಕಾಡಹೂವುಗಳಿಂದ ತೊಟ್ಟಿಲ ರೀತಿ ಸಿಂಗರಿಸಿ ಆ ಮಗುವನ್ನು ಆ ಮರಿಗೆಯಲ್ಲಿ ಮಲಗಿಸಿ ಅದರ ಪಕ್ಕ ತಮ್ಮ ವಂಶದ ಸುರಿಗೆಯನ್ನು ಜನರಿಗೆ ತಿಳಿಯಲಿ ಎಂದು ಅಲ್ಲಿಯೇ ಹೂತಿಟ್ಟು ಹೊರಟುಬಿಡುತ್ತಾಳೆ. 


        ಮಾರನೇ ದಿನ ಅಲ್ಲಿಗೆಬಂದ ಕುರಿಗಾಹಿಗಳಿಗೆ ಮಗುವಿನ ಧ್ವನಿ ಕೇಳಿ ಮರಿಗೆಯ ಬಳಿಗೆ ಬರುತ್ತಾರೆ. ಕುರಿಗಾಹಿಗಳ ನಾಯಕ ಆ ಮಗುವನ್ನು ಹಾಗೂ ಸುರಿಗೆಯನ್ನು ನೋಡಿದಾಗ ಅದು ತಮ್ಮ ರಾಜವಂಶದ ಕುಡಿ ಎಂದು ಮಗುವನ್ನು ತಮ್ಮಹಟ್ಟಿಗೆ ತೆಗೆದುಕೊಂಡು ಹೋಗುತ್ತಾರೆ. ಮರಿಗೆಯ ಹತ್ತಿರ ಇರುವಾಗ , ಆ ಮಗುವನ್ನು ಪ್ರೀತಿಯಿಂದ ನೆಕ್ಕಿದ ತಮ್ಮ ಪ್ರೀತಿಯ ಎತ್ತಿನ ಹೆಸರಾದ ಚಂದ್ರನನ್ನ ಆ ಮಗುವಿಗೆ ಇಡುತ್ತಾರೆ. ಕುರಿಗಾಹಿಗಳಿಂದ ನಾಮಾಂಕಿತನಾದ ಮಗು ಚಂದ್ರಗುಪ್ತ ಮುಂದೆ ಚಂದ್ರಗುಪ್ತ ಮೌರ್ಯನಾಗಿ, ಸ್ನೇಹಿತ ಕೌಟಿಲ್ಯನೋಡಗೂಡಿ ನಂದರನ್ನ ಸೋಲಿಸಿ ಬೃಹತ್ ಮೌರ್ಯ ಸಾಮ್ರಾಜ್ಯವನ್ನ ಸ್ಥಾಪಿಸುತ್ತಾನೆ. ಮುಂದೆ ತನ್ನ ಸಾಮ್ರಾಜ್ಯವನ್ನ ಉತ್ತರದಿಂದ ದಕ್ಷಿಣದ ವರೆಗೆ ವಿಸ್ತರಿಸಿ ಸುಮಾರು ೨೪ ವರ್ಷಗಳ ರಾಜ್ಯವನ್ನಾಳುತ್ತಾನೆ. ತದನಂತರ ಅಶೋಕ ಹುಟ್ಟಿದಮೇಲೆ ತನ್ನ ರಾಜ್ಯಬಾರವನ್ನು ತನ್ನ ಮಗ ಬಿಂದುಸಾರನಿಗೆ ಒಪ್ಪಿಸಿ, ಶ್ರವಣಬೆಳಗೊಳಕ್ಕೆ ಬಂದು ಜೈನದೀಕ್ಷೆಯನ್ನು ಪಡೆದು , ಜೈನಮುನಿಯಾಗಿ ತನ್ನ ಉಳಿದ ಜೀವಿತದ ಅಂತ್ಯದವರೆಗೂ ಅಲ್ಲಿಯೇ ಕಳೆಯುತ್ತಾನೆ. ಇದು ಕೃತಿಯ ಸಾರಂಶ.


        ಇಲ್ಲಿ ವಿಮರ್ಷೆ ಅಂತ ಬಂದರೆ ಅದು ಮೂಲಕೃತಿಗೆ ಸಂಬದಿಸಿದ್ದೇ ಬಿಟ್ಟರೆ ಅನುವಾದಿದ ಕೃತಿಗಲ್ಲ. ಉದಾಹರಣೆಗೆ, ಇದರಲ್ಲಿ ಬರುವ ಕೆಲವು ಪ್ರಸಂಗಗಳನ್ನು ಗಮನಿಸಿದಾಗ, ಇಲ್ಲಿ ಎಲ್ಲಿಯೂ ಗ್ರೀಕ್ ದೊರೆಗಳು ಸೋಲುವುದಿಲ್ಲ ಎನ್ನುವುದು. ಉದಾಹರಣೆಗೆ ಅಲೆಕ್ಸಾಂಡರ್ ಹಾಗೂ ಪೌರವನ ನಡುವೆ ನಡೆದ ಯುದ್ದದಲ್ಲಿ ಅಲೆಕ್ಸಾಂಡರ್ ಗೆದ್ದೂ ಕೂಡ ಪೌರವನಿಗೆ ರಾಜ್ಯವನ್ನು ಮರಳಿ ನೀಡಿದ್ದು ಎನ್ನುವುದು, ಮುಂದೆ ಚಂದ್ರಗುಪ್ತ ಮತ್ತು ಸೆಲ್ಯೂಕಸ್ ನಡುವೆ ಯುದ್ದ ನಡೆಯಲೇ ಇಲ್ಲ . ಸೆಲ್ಯೂಕಸ್ ಮೌರ್ಯ ಸೇನೆಯನ್ನ ನೋಡಿ ವಿಚಲಿತಗೊಂಡು ಸಂಧಾನ ಮಾಡಿಕೊಂಡು ತಾನು ಆಳುತ್ತಿದ್ದ ಕೆಲವು ಪ್ರದೇಶಗಳನ್ನು ಚಂದ್ರಗುಪ್ತನಿಗೆ ಬಿಟ್ಟು ಕೊಟ್ಟ ಎನ್ನುವುದು. ಯುದ್ದವೇ ನಡೆಯದೇ, ತಾನು ಸೋಲದೇ, ಅದು ಹೇಗೇ ತನ್ನ ಸಾಮ್ರಾಜ್ಯದ ಭಾಗಳನ್ನು ಬಿಟ್ಟು ಕೊಡಲು ಸಾಧ್ಯ. ಕೆಲವು ಇತಿಹಾಸಗಳ ಪ್ರಕಾರ ಚಂದ್ರಗುಪ್ತ ಸೆಲ್ಯೂಕಸನನ್ನು ಸೋಲಿಸಿ ತನ್ನ ಸಾಮ್ರಾಜ್ಯವನ್ನು ಈಗಿನ ಸಿರಿಯಾವರೆಗೆ ವಿಸ್ತರಿಸಿದ ಎನ್ನುವುದು. ಇನ್ನೂ ಕೆಲವು ಇತಿಹಾಸಗಳ ಪ್ರಕಾರ ಗೀಕ್ ಸಾಹಿತ್ಯಗಲ್ಲಿ ಉಲ್ಲೇಕಿಸಿದ ಸಂದ್ರಕೋಸ್ ಎನ್ನುವ ಪದ ಗುಪ್ತ ದೊರೆ ಸಮುದ್ರಗುಪ್ತನಿಗೆ ಸಂಬಂದಿಸಿರಬಹುದೇ ಹೊರತು ಮೌರ್ಯರ ಚಂದ್ರಗುಪ್ತನಿಗೆ ಸಂಬಂದಿಸಿದ್ದಲ್ಲ ಎನ್ನುವುದು. 


        ಈ ಕಾದಂಬರಿಯಲ್ಲಿ ಎಲ್ಲಿಯೂ ಚಂದ್ರಗುಪ್ತ ಮತ್ತು ಗ್ರೀಕ್ ಕನ್ಯೆ ಹೆಲನರ ಮದುವೆಯ ಪ್ರಸ್ತಾಪ ಬರುವುದಿಲ್ಲ. ಚಂದ್ರಗುಪ್ತ ಒಂದು ಕನ್ಯೆಯನ್ನು ವರಿಸಿದ ಪ್ರಸಂಗ ಬರುತ್ತದಾದರೂ, ಅದು ಹೆಲನ್ಗೆ ಸಂಬಂದಿಸಿದ್ದು ಎಂದು ತಿಳಿದುಬರುವುದಿಲ್ಲ. ಪೂರ್ವದ ಒಬ್ಬ ಹಿಂದೂ ಸಾಮ್ರಾಟ ಪಶ್ಚಿಮದ ಕನ್ಯೆಯನ್ನು ವರಿಸಿದ್ದ ಎಂದು ಹೇಳಲು ಸಂಕೋಚವೋ ಗೊತ್ತಿಲ್ಲ.


        ಇನ್ನೂ ಚಂದ್ರಗುಪ್ತನ ತಾಯಿಯಿಂದ ಮೌರ್ಯ ಎನ್ನುವ ಹೆಸರು ಬಂತು ಎನ್ನುವುದು ಎಷ್ಟು ಸತ್ಯವೋ ಗೊತ್ತಿಲ್ಲ. ಮುರಾ ಹಿಮವಂತ ರಾಜ್ಯದ ರಾಣಿ ಎನ್ನುವುದು ಸತ್ಯಕ್ಕೆ ಎಷ್ಟು ಹತ್ತಿರವಿದೆ  ಎನ್ನುವುದು . ಕೆಲವು ಇತಿಹಾಸಗಳ ಪ್ರಕಾರ ಮುರಾ ನಂದರ ರಾಣಿವಾಸಕ್ಕೆ ಸೇರಿದ ಹೆಂಗಸು ಎನ್ನುವುದು, ಇದು ಕೂಡ ಸತ್ಯಕ್ಕೆ ಎಷ್ಟು ಹತ್ತಿರವಿದೆ ಎನ್ನುವುದು ಗೊತ್ತಿಲ್ಲ.


        ಈ ಇತಿಹಾಸಎನ್ನುವುದು ಹಾಗೆ. ಇದು ಹೀಗೆ ಇರಬಹುದು ಎಂದು ಹೇಳುತ್ತದಯೇ ಹೊರತು, ಹೀಗೆ ಎಂದು ಹೇಳುವುದಿಲ್ಲ. ಇನ್ನೂರು ಮುನ್ನೂರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಎಲ್ಲಿದ್ದರೂ, ಅವರು ಇಲ್ಲೀಯೇ ನೆಲಸಿದ್ದರೇ, ಅಥವಾ ಬೇರೇ ಪ್ರದೇಶಗಳಿಂದ ಇಲ್ಲಿಗೆ ವಲಸೇ ಬಂದವರೇ, ಒಂದೊಮ್ಮೆ ವಲಸೆಬಂದಿದ್ದರೆ ಅವರೆಲ್ಲಿಂದ ಬಂದವರು ಮತ್ತು ಯಾಕೆ ಇಲ್ಲಿಗೆ ಬಂದರು ಎನ್ನುವುದು ನಮಗೆ ತಿಳಿದಿರುವುದಿಲ್ಲ. ಅಲ್ಪ ಸ್ವಲ್ಪ ತಿಳಿದಿದ್ದರೂ ಅದು ತಲೆ ತಲಾಂತರದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹೇಳಿಕೊಂಡು ಬಂದ ವಿಷಯವಾಗಿರಬಹುದು. ಆ ಕತೆ ಒಬ್ಬರಿಂದ ಇನ್ನೊಬ್ಬರ ಕಿವಿಗೆ ತಲುಪುವ ಹೊತ್ತಿಗೆ ಅದೆಷ್ಟು ಮಾರ್ಪಟ್ಟಿರುತ್ತೆ ಎಂದು ತಿಳಿದಿರುವುದಿಲ್ಲ. ಅಂತಾದ್ದರಲ್ಲಿ ಸುಮಾರು ೨೪೦೦ ವರ್ಷಗಳ ಹಿಂದೆ ನಡೆದುಹೋದ ಘಟನೆಗಳನ್ನು ಇದು ಹೀಗೆ, ಇದು ಹಾಗೆ ಎಂದು ಹೇಳಲು ಸಾಧ್ಯವಿಲ್ಲ. ಅಳಿದುಳಿದ ಕೆಲವೇ ಕೆಲವು ಶಾಸನಗಳ ಹಾಗೂ ಗ್ರಂಥಗಳ ಆಧಾರದಮೇಲೆ, ಇದು ಹೀಗಿರಬಹುದು ಎನ್ನಬಹುದು ಹೊರತೂ ಹೀಗೆ ಎಂದಲ್ಲ.


        ಹಾಗಾಗಿ, ಇಲ್ಲಿ ನಾವು ಹೀಗೆ ಇರಬೇಕಿತ್ತು, ಹಾಗೆ ಇರಬೇಕಿತ್ತು ಎಂದು ನೋಡುವುದರ ಬದಲು ಇದು ಹೀಗೂ ಕೂಡ ಇರಬಹುದು ಎಂದು ನೋಡಿ ಓದಿಕೊಂಡರೆ ಇದೊಂದು ಅದ್ಭುತವಾದ ಕಾದಂಬರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೂಲ ಕೃತಿಯಲ್ಲಿ ಹೇಗಿದೆಯೋ ಹಾಗೆ  ಅದನ್ನು ಅತ್ಯತ್ಭುತವಾಗಿ ಕನ್ನಡಕ್ಕೆ ಅನುವಾದ ಮಾಡಿರುವುದು ಒಂದು ಸಾಹಸವೇ ಸರಿ. ಇಂತಹ ಒಂದು ಸಾಹಸಕ್ಕಾಗಿಯೇ ನನಗೆ ಹಬ್ಬು ಅವರು ಇಷ್ಟವಾಗುವುದು. 


        ಇದೊಂದು ಕೇವಲ ಐತಿಹಾಸಿಕ ಕಾದಂಬರಿಯಾಗಿರದೇ ಸದಾ ಸಂಗ್ರಹಿಸಿಟ್ಟು ಕೊಂಡಿರಬಹುದಾದ ಒಂದು ಕೃತಿ ಕೂಡ. ಇಂತಹ ಒಂದು ಸುಂದರವಾದ ಕೃತಿಯನ್ನು ಹೊರತಂದು ನನ್ನಂತ ಓದುಗರಿಗೆ ಓದಿನ ರಸಾಯನ ಬಡಿಸಿದ ಹಬ್ಬು ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಕೃತಿಯ ಮುಂದಿನ ಭಾಗ ಆದಷ್ಟೂ ಬೇಗ ಬಿಡುಗಡೆಯಾಗಿ ನಮ್ಮ ಕೈಸೇರುವಂತಾಗಲಿ ಎಂದು ಆಶಿಸುತ್ತೇನೆ.


        ಮುಖಪುಟ ಎನ್ನುವುದು ಕೃತಿಯ ಮುಖವಿದ್ದಂತೆ. ಓದುಗ ಕೃತಿಯ ಒಳಗಿನ ಅಕ್ಷರಗಳನ್ನು ನೋಡುವ ಮೊದಲು ನೋಡುವುದೇ ಕೃತಿಯ ಮುಖಪುಟವನ್ನ. ಅಂತಹ ಸುಂದರ ಮುಖಪುಟವನ್ನು ರಚಿಸಿಕೊಟ್ಟ ನನ್ನ ಮುಖಪುಟದ ಗೆಳೆಯ ಹಾದಿಮನಿಯವರಿಗೂ ಸಹ ನನ್ನ ಅಭಿನಂದನೆಗಳು. ಹಾಗೆ ಲೇಖಕರನ್ನು ಅವರ ಕೃತಿಯನ್ನು ನಂಬಿ ಅದನ್ನು ಪ್ರಕಟಿಸಿದ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿಯವರಿಗೂ ನನ್ನ ಅಭಿನಂದನೆಗಳು. 


        ಈ ಕೃತಿ ಇನ್ನಷ್ಟು, ಮತ್ತಷ್ಟು, ಮಗದಷ್ಟು ಓದುಗರನ್ನ ಸೇರಲಿ, ಸೇರುತ್ತಲೇ ಇರಲಿ, ಮುದ್ರಣ ಮರುಮುದ್ರಣಗೊಳ್ಳುತ್ತಲೇ ಇರಲಿ ಎಂದು ಆಶಿಸುತ್ತೇನೆ.


ಧನ್ಯವಾದಗಳೊಂದಿಗೆ... 


ಇಂತಿ ನಿಮ್ಮವ,

ಮಂಜು ಹಿಚ್ಕಡ್  

Saturday, April 19, 2014

ದುರ್ಗಾಸ್ತಮಾನ.

ಅದೆಷ್ಟೋ ವರ್ಷಗಳಿಂದ ಓದಬೇಕು, ಓದಬೇಕು ಎಂದಿಟ್ಟುಕೊಂಡ "ದುರ್ಗಾಸ್ತಮಾನ" ಕಾದಂಬರಿಯನ್ನು ಇದೀಗ ತಾನೆ ಓದಿ ಮುಗಿಸಿದೆ. ಮದಕರಿನಾಯಕ ಮತು ಚಿತ್ರದುರ್ಗದ ಪತನದ ವಸ್ತುವೇ ತ.ರಾ.ಸು ಅವರ ದುರ್ಗಾಸ್ತಮಾನ ಕಾದಂಬರಿ. ಕಾದಂಬರಿ ಕೇವಲ ಮದಕರಿನಾಯಕ ಮತ್ತು ಚಿತ್ರದುರ್ಗಗಳಿಗಷ್ಟೇ ಸೀಮಿತವಾಗಿರದೇ, ಮೈಸೂರಿನಿಂದ ಪೂನಾದವರೆಗಿನ ಅಂದಿನ ಜನಜೀವನ, ಸಾಮಾಜಿಕ ಸ್ಥಿತಿಗತಿಗಳು, ಅಂದಿನ ರಾಜಕಾರಣಗಳ ತಂತ್ರಗಳು, ರಾಜಕೀಯ ಮಸಲತ್ತುಗಳು, ರಣ ತಂತ್ರಗಳು, ಆಂತರೀಕ ಕಲಹಗಳು ಹೀಗೆ ಒಂದಲ್ಲ ಎರಡಲ್ಲ ನೂರಾರು ವಸ್ತುಗಳನ್ನು ಒಳಗೊಂಡಿವೆ. ಕಾದಂಬರಿ ಓದುತ್ತಾ ಕುಳಿತರೆ ಇದು ಹಿಂದೆ ನಡೆದದ್ದಲ್ಲ ನಮ್ಮ ಮುಂದೆ ನಡೆಯುತ್ತಿದೆ ಎನ್ನುವ ರೀತಿಯಲ್ಲಿ ಕಾದಂಬರಿಯನ್ನು ಸೃಷ್ಟಿಸಿದ್ದಾರೆ ತ.ರಾ.ಸು ಅವರು. ನೀವು ಇದುವರೆಗೆ ಈ ಕಾದಂಬರಿಯನ್ನು ಒದಿಲ್ಲವಾದಲ್ಲಿ ಒಮ್ಮೆ ಓದಿ.



--ಮಂಜು ಹಿಚ್ಕಡ್ 

Saturday, November 23, 2013

ಪಾತ್ರ ಅನ್ವೇಷಣಾ.

ನಾನು ವಿಮರ್ಷಕನಲ್ಲ, ಆದರೂ ಬದರಿನಾಥರ ಕವಿತೆಗಳನ್ನು ಓದಿದ ಮೇಲೆ, ಅವುಗಳ ಬಗ್ಗೆ ಒಂದೆರಡು ಮಾತುಗಳನ್ನಾಡದೇ ಹೋದರೆ ತಪ್ಪಾದೀತು ಎನ್ನುವುದು ನನ್ನ ಅನಿಸಿಕೆ ಅಷ್ಟು ಸುಂದರವಾಗಿ ಮೂಡಿ ಬಂದಿದೆ ಗೆಳೆಯ ಬದರಿಯವರ ಚೊಚ್ಚಲ ಕವನ ಸಂಕಲನ "ಪಾತ್ರ ಅನ್ವೇಷಣಾ". ಈ ಕವನ ಸಂಕಲನದ ಏನಿದೆ, ಏನಿಲ್ಲ? ಇಲ್ಲಿ ಪ್ರೀತಿಯ ಸೆಳತವಿದೆ, ನೋವಿದೆ, ಬದುಕಿನ ವಿವಿಧ ಮಜಲುಗಳನ್ನು ನೋಡಿದ ಅನುಭವವಿದೆ, ಕಾಳಜಿಯಿದೆ, ಸಂಬ್ರಮವಿದೆ ಹೀಗೆ ಎಲ್ಲವೂ ಇವೆ.

ಪಾಚಿ ಬೆಳೆದ ಹೊಂಡದಲ್ಲಿ ಹೇಗೆ ಆ ಹೊಂಡದ ಆಳವನ್ನು ತಿಳಿಯಲಾಗುವುದಿಲ್ಲವೋ ಹಾಗೆ, ನಮ್ಮ ಜೊತೆಯಲ್ಲೇ ಇದ್ದು ನಮ್ಮ ವಿರುದ್ದ ಪಿತೂರಿ ನಡೆಸುವ ಹಿತ ಶತ್ರುಗಳನ್ನು ಅರಿಯುವುದು ಕಷ್ಟ ಎನ್ನುವ ಈ ಕೆಳಗಿನ ಸಾಲಿನೊಂದಿಗೆ ಪ್ರಾರಂಭವಾಗುತ್ತದೆ ಗೆಳೆಯ ಬದರಿನಾಥ ಪಲವಳ್ಳಿಯವರ "ಪಾತ್ರ ಅನ್ವೇಷಣಾ" ಕವನ ಸಂಕಲನ.

ಎಲ್ಲೆಲ್ಲಿ ವಾಮನರೋ
ಪಿತೂರಿ ಸಾಧಕರೋ
ಬುಡ ಘಾತುಕರೋ
ತಿಳಿಯಲ್ಲ್ ಪಾಚಿ ಹೊಂಡ...

ಹೀಗೆ ಪ್ರಾರಂಭವಾಗುವ ಕವನ ಸಂಕಲನ, ಸೇದು ಹೊಗೆಯುಗುಳುವ ಧೂಮಪಾನದ ಜೊತೆಗೆ ಮದ್ಯಪಾನದಂತಹ ಚಟಗಳು ಮನುಷ್ಯನನ್ನು ಬಹು ಬೇಗ ಚಟ್ಟ ಹತ್ತಿಸಿ ಮನೆ ಮುಂದೆ ಹೊಗೆಯಾಡಿಸುವುಂತೆ ಮಾಡೀತು ಎನ್ನುವ ಎಚ್ಚರಿಕೆಯೊಂದಿಗೆ ಮುಕ್ತಾಯವಾಗುತ್ತದೆ.

ಚಟ ಚಟ್ಟವ ಹತ್ತಿಸೀತು,
ಸೇದಿದರೆ ಧೂಮಪಾನ
ಜೊತೆಗೆ ಮದ್ಯಪಾನ
ಮನೆ ಮುಂದೆ ಹಾಕ್ತಾರೆ
ಹೊಗೆ ಜೋಪಾನ!

ಆರಂಭ ಮುಕ್ತಾಯಗಳ ನಡುವೆ ಇಂತಹ ಹಲವು ಸಾಲುಗಳಿರುವ ೯೮ ಕವನಗಳ , ಕವನ ಸಂಕಲನ " ಪಾತ್ರ ಅನ್ವೇಷಣಾ". ಒಂದೊಂದು ಸಾಲಲ್ಲೂ ಒಂದೊಂದು ಬಗೆಯ ಅರ್ಥ, ಭಾವಾರ್ಥಗಳು ಹುದುಗಿಕೊಂಡಿವೆ ಎನ್ನುವುದು ಒಂದೊಂದು ಸಾಲುಗಳನ್ನು ಓದಿದಾಗಲೂ ಭಾಸವಾಗುತ್ತದೆ. ಅಂತಹುಗಳಲ್ಲಿ ನನಗಿಷ್ಟವಾದ ಒಂದೆರಡು ತುಣುಕುಗಳನ್ನು ಇಲ್ಲಿ ಪ್ರಕಟಿಸಿದ್ದೇನೆ.

ಇಂದಿನ ರಸ್ತೆಯ ಪಯಣದಲ್ಲಿ ಅಂಗಾಂಗಳಿಗೆ ಯಾವುದೇ ಹಾನಿಯಾಗದೇ, ಮನೆಗೆ ಜೀವಂತವಾಗಿ ತಲುಪಿಸಿ ಬಿಡು ಎಂದು, ತಮ್ಮ "ಪಾಪಿಷ್ಠ ಕೆಟ್ಟ ರಸ್ತೆ..." ಎಂಬ ಕವನದಲ್ಲಿ ಹೀಗೆ ಬರೆಯುತ್ತಾರೆ,

ಪಾಪಿಷ್ಠ ಕೆಟ್ಟ ರಸ್ತೆ ಇದು
ಬ್ರೇಕು ಬ್ರೇಕಿಗೂ ಭೂನರಕ
ಜೋರು ಗೇರೂ ಕಂಗಾರು,
ದಾಟಿಸಿ ಬಿಡು ಲೆಕ್ಕಿಗನೇ
ಬದುಕಲಿನ್ನೂ ಬೇಜಾರಿದೆ
ಸವಿಯಲು ಮಧುಪಾನ!
ಜೀವಂತ ತಲುಪಿಸಿ ಬಿಡು
ಮನೆಗೆ ಪೂರ್ಣ ಅಂಗಾಂಗ....

ನಾಳೆಗೆ ಬಾಡಿ ಹೋಗುವ ಮಾವಿನ ಎಲೆಯನ್ನು ಹಣಕೊಟ್ಟು ತಂದು ಅದರಿಂದ ತೋರಣ ಕಟ್ಟಿ ಪಜೀತಿಪಟ್ಟಿಕೊಳ್ಳುವುದಕ್ಕಿಂತ ಪ್ಲಾಸ್ಟಿಕಿನ ಸಿದ್ದ ತೋರಣವೇ ಬಾಗಿಲಿಗೆ ಓಳ್ಳಯದಲ್ಲವೇ, ಬಾಡುವುದಿಲ್ಲ, ತೋರಣ ಕಟ್ಟುವ ಪಜೀತಿಯಿಲ್ಲ, ಈ ವರ್ಷದನ್ನು ಮುಂದಿನ ವರ್ಷವೂ ಬಳಸಬಹುದಲ್ಲ ಎಂದು "ಬಂತು ಉಗಾದಿ" ಎನ್ನುವ ಕವನದಲ್ಲಿ ಹೀಗೆ ಹೇಳುತ್ತಾರೆ,

ಮಾವಿನ ಎಲೆ ತೋರಣ
ತಂದು ಕಟ್ಟುವ ಪಜೀತಿ
ಪ್ಲಾಸ್ಟಿಕಿನ ಸಿದ್ದ ತೋರಣ
ಅಲಂಕರಿಸಲಿ ಬಾಗಿಲಿಗೆ!

ಕಾರಾಗೃಹದಲ್ಲಿ ಕುಳಿತು ಭಗವದ್ಗೀತೆ ಪಠಿಸಿದರೆ ಮೈದಾನದಲ್ಲಿ ಮೈ ಮಾರಿಕೊಂಡು ಕಳ್ಳಾಟವಾಡಿದ್ದು ಕಳೆದು ಹೋಗುತ್ತದೆಯೇ ಎಂದು ಬದರಿಯವರು ಹೀಗೆ ಬರೆಯುತ್ತಾರೆ,

ಕಾರಾಗೃಹದಲಿ ಕುಳಿತು
ಭಗವದ್ಗೀತೆ ಪಠಿಸಿದರೆ
ಕಳೆಯುವುದೇ ಮೈದಾನದಲಿ
ಮೈಮಾರಿಕೊಂಡ ಕಳ್ಳಾಟ.

ಹೀಗೆ ಇಂತಹ ಹಲವಾರು ಸುಂದರ ಸಾಲುಗಳು ಈ ಕವನ ಸಂಕಲನದಲ್ಲಿದೆ. ತಮ್ಮ ಕವನ ಸಂಕಲನದ ಒಂದು ಪ್ರತಿಯನ್ನು ನನಗೆ ನೀಡಿ, ಆ ಕವನ ಸಂಕಲನದ ಕವನಗಳನ್ನು ಓದಲು ಅವಕಾಶ ಮಾಡಿಕೊಟ್ಟ ಗೆಳೆಯ ಬದರಿಯವರಿಗೆ ಹಾಗೂ ಅದನ್ನು ಪ್ರಕಟಿಸಿದ ಕುಶಿ ಪ್ರಕಾಶನ ಬಳಗಕ್ಕೂ ನನ್ನ ಅಭಿನಂದನೆಗಳು. ಬದರಿಯವರಿಂದ ಹಾಗೂ ಅವರ ಕವನಗಳಿಗೆ ಪುಸ್ತಕ ರೂಪಕೊಟ್ಟು ಪ್ರಕಟಿಸಿದ ಕುಶಿ ಪ್ರಕಾಶನ ಇವರಿಂದ ಇಂತಹ ಹಲವು ಕವನ ಸಂಕಲನಗಳು ಮೂಡಿ ಬರಲಿ ಎಂದು ಹಾರೈಸಿ, ಶುಭಕೋರುತ್ತೇನೆ.

--ಮಂಜು ಹಿಚ್ಕಡ್