Friday, January 19, 2024

ನೆನಪುಗಳ ಮಾತು ಮಧುರ

ಸೆಕೆಂಡುಗಳು ನಿಮಿಷಗಳಾಗಿ, ನಿಮಿಷಗಳು ಗಂಟೆಗಳಾಗಿ, ಗಂಟೆಗಳು ದಿನಗಳಾಗಿ, ದಿನಗಳು ವರ್ಷಗಳಾಗಿ, ಮೊವ್ವತ್ತು ವರ್ಷಗಳು ಕಳೆದು ಹೋಗಿವೆ ಈ ಒಂದು ಘಟನೆ ನಡೆದು ಹೋಗಿ. ಪ್ರತೀ ವರ್ಷ ಮಳೆಗಾಲ ಸುರುವಾಗಿ, ಮಕ್ಕಳು ಶಾಲೆಗೆ ಹೋಗುವುದನ್ನ ನೋಡಿದಾಗಲೆಲ್ಲ ಈ ಘಟನೆ ಸುಖಾ ಸುಮ್ಮನೆ ಮನಸ್ಸಲ್ಲಿ ಹಾದು ಹೋಗಿ, ಮರೆತದ್ದನ್ನ ಹಾಗೆ ನೆನಪಿಸಿ, ಮುಖದಲ್ಲೊಮ್ಮೆ ಮಂದಹಾಸ ಮೂಡಿಸಿ ಹೊರಟು ಬಿಡುತ್ತದೆ. ಜೀವನ ಎನ್ನುವುದು ಹಾಗೆನೇ ಎಲ್ಲೋ ಎಂದೋ ನಡೆದು, ಮರೆತು ಹೋದ ಘಟನೆಗಳು, ಸೂಕ್ತ ಸನ್ನಿವೇಶಗಳು ದೊರೆತಾಗ ಮತ್ತೊಮ್ಮೆ ಮನಸ್ಸಲ್ಲಿ ಮೂಡಿ ಮರೆಯಾಗುತ್ತವೆ, ಇನ್ನೊಮ್ಮೆ ಅಂತಹ ಸನ್ನಿವೇಶಗಳು ದೊರೆಯುವವರೆಗೆ.

ಇವತ್ತು ನನ್ನ ಮಗಳು ಶಾಲೆಗೆ ಹೋಗಿ ಬರುವಾಗ ಆಗೊಮ್ಮೆ, ಈಗೊಮ್ಮೆ ಚಿಕ್ಕ ಚಿಕ್ಕ ಹನಿ ಮಳೆ ಬರುತ್ತಿತ್ತು. ಅದು ಎಷ್ಟು ಚಿಕ್ಕದೆಂದರೆ ಮಳೆ ಹನಿ ಬಿದ್ದ ಜಾಗ ನೋಡಿದರೆ, ಅದಾಗಲೇ ನಮ್ಮ ದೇಹದ ಉಷ್ಣತೆಗೆ ಆರಿ ಹೋಗಿರುತಿತ್ತು, ಅಷ್ಟು ಚಿಕ್ಕ ಹನಿ ಮಳೆ ಅದು.  ಆ ವಯಸ್ಸಿಗೆ ಅವಳಿಗೆ ಅದೊಂದು ಮಳೆ , ಮತ್ತು ಏನೋ ಒಂತರಾ ಖುಷಿ. ಜೊತೆಗೆ ನನಗೊಂದಿಷ್ಟು ಪ್ರಶ್ನೆಗಳ ಸುರಿಮಳೆ ಬೇರೆ. ಮಳೆ ಬರ್ತಾ ಇದೆ, ಕಾಮನ ಬಿಲ್ಲು ಬರತ್ತಾ? ಕಾಮನ ಬಿಲ್ಲು ಒಂದು ಬರತ್ತಾ ಇಲ್ಲಾ ಎರಡು ಬರತ್ತಾ? ಅದು ಏಕೆ ಬಿಸಿಲು ಮಳೆ ಇದ್ದಾಗ ಮಾತ್ರ ಬರತ್ತೆ? ಇವಾಗ ಬಿಸಿಲು ಮತ್ತು ಮಳೆ ಎರಡು ಇದೆ ಅಲ್ವಾ, ಈಗೇಕೆ ಬಂದಿಲ್ಲ? ಅದೇಕೇ ಸಾಯಂಕಾಲ ಇಲ್ಲ ಬೆಳಿಗ್ಗೆ ಬರುತ್ತೆ? ಮಧ್ಹ್ಯಾನ ಏಕೆ ಬರಲ್ಲ? ಅದಕ್ಕೇಕೆ ಅಷ್ಟೊಂದು ಬಣ್ಣಗಳು? ನಾನು ಫಿಸಿಕ್ಸ್ ಅಲ್ಲಿ ಗ್ರಾಡ್ಜುಏಟ್ ಬೇರೆ, ನಾನೇನು ಕಡಿಮೇನೇ? ನಾನು ಆಗ ಕಲಿತದ್ದು ಒಳ್ಳೆಯದಾಯ್ತು ಅನ್ನಿಸಿದ್ದು ಇಂದಿಗೆನೆ. ಎಂದೋ ಓದಿ, ಎಲ್ಲೋ ಬಿಟ್ಟು ಹೋದದ್ದನ್ನು ಮನಸ್ಸಲ್ಲಿಯೇ ಕಲೆ ಹಾಕುತ್ತಾ ಅವಳಿಗೆ ವಿವರಿಸುವುದರಲ್ಲಿ ಅವಳು ಮನೆ ಸೇರಿ, ಗಂಟೆ ಕಳೆದಿತ್ತು. ನನಗೂ ಸಾಕು ಸಾಕಾಗಿತ್ತು.

ಮೊವ್ವತ್ತು ವರ್ಷಗಳ ಹಿಂದೆ ನನಗಾಗ ಇಂದಿನ ನನ್ನ ಮಗಳಷ್ಟೇ ವರ್ಷ. ನಾನು ಆಗ ನಮ್ಮೂರಿನ ಶಾಲೆಯಲ್ಲಿ ಒಂದನೇ ತರಗತಿಗೆ ಹೋಗುತಿದ್ದೆ. ನನ್ನ ಮಗಳಿಗೆ ಹೇಗೆ ಕಾಮನಬಿಲ್ಲು, ಮಳೆ, ಬಸ್ಸು, ಕಾರುಗಳು ಇಷ್ಟವೋ, ಹಾಗೆ ಆಗ ಮಳೆಗಾಲದಲ್ಲಿ ಊಳಲು ನೇಗಿಲು ಹೊತ್ತು ನಡೆಯುವ ಜೋಡಿ ಎತ್ತುಗಳು, ಎತ್ತಿನ ಬಂಡಿಗಳು ಅಂದರೆ ನಮಗೆ ಅದೇನೋ ಆಸಕ್ತಿ ಆಗ. ಬಹುಶಃ ನಾವು ಬೆಳೆದ ಕಾಲ ಹಾಗೂ ಪರಿಸರ ಬೇರೇ ಇದ್ದುದು ಬೇರೇ ರೀತಿಯ ಆಸಕ್ತಿಗಳಿಗೆ ಕಾರಣವಿರಬಹುದೇನೋ. ಒಮ್ಮೆಮ್ಮೊ ನಾವು ಶಾಲೆಗೆ ಹೋಗುವಾಗ, ನಾನು ನನ್ನ ಬಾಲ್ಯದ ಗೆಳೆಯ ಸೇರಿ ನನ್ನ ಕೈ ಮತ್ತು ಅವನ ಕೈ ಸೇರಿಸಿ ದಾರ ಕಟ್ಟಿಕೊಂಡು ಜೋಡಿ ಎತ್ತುಗಳಂತೆ ಶಾಲೆಗೆ ಹೋಗುತಿದ್ದೆವು. ಆಗ ನಮ್ಮೂರಿನ ಊರ ದೇವಿಯ ಮನೆಯಿಂದ ಕಣಗಿಲ ಕಡೆಹೋಗುವ ಕಿರಿದಾದ ದಾರಿ ಆಗ ತಾನೇ ಅಗಲೀಕರಣಗೊಂಡು ಡಾಂಬರೀಕರಣಕ್ಕಾಗಿ ಕಾಯುತ್ತಿತ್ತು. ರಸ್ತೆ ಅಂಟು ಮಣ್ಣಿಂದ ಕೂಡಿದ್ದೂ, ಇನ್ನೂ ಡಾಂಬರಿಕರಣಗೊಳ್ಳದ ಕಾರಣ, ಮಳೆ ಬಂದಾಗಲೆಲ್ಲ ಕೆಸರು ತುಂಬಿಕೊಂಡಿರುತ್ತಿತ್ತು, ಅಂಟು ಮಣ್ಣಾದುದ್ದರಿಂದ ಕೆಲವಡೆ ಜಾರುತಿತ್ತು ಕೂಡ.

ಹೀಗಿರುವಾಗ ಒಮ್ಮೆ ಮಧ್ಹ್ಯಾನ ಊಟ ಮುಗಿಸಿ, ನಾನು ನನ್ನ ಗೆಳೆಯ ಇಬ್ಬರು ಕೈಗೆ ದಾರ ಕಟ್ಟಿಕೊಂಡು ಜೋಡಿ ಎತ್ತುಗಳಂತೆ ಶಾಲೆಗೆ ಹೋಗುತಿದ್ದೆವು. ನಾವು ಊರ ದೇವರಗುಡಿ ದಾಟಿ, ಆಕ್ಕವ್ವಿ ಗಣಪತಣ್ಣನವರ ಮನೆಯ ಗೇಟಿನ ಬಳಿ ಇನ್ನೇನು ಬಂದಿರಬೇಕು, ನಾನು ಕಾಲು ಜಾರಿ ಕೆಸರಲ್ಲಿ ಬಿದ್ದು ಬಿಟ್ಟೆ, ಕೈಗೆ ದಾರಕಟ್ಟಿಕೊಂಡ ಕಾರಣ, ನನ್ನ ಗೆಳೆಯ ನನ್ನಿಂದಾಗಿ ಅವನು ನನ್ನ ಜೊತೆ ಕೆಸರಲ್ಲಿ ಬಿದ್ದು ಬಿಟ್ಟ. ಮೈ ಪೂರ್ತಿ ಕೆಸರು, ಶಾಲೆಗೆ ಹಾಗೆ ಹೋದರೆ ಬೈಸಿ ಕೊಳ್ಳಬೇಕು, ಮನೆಗೆ ಹೋಗುವ ಹಾಗೂ ಇಲ್ಲ. ಅತ್ತ ಧರಿ ಇತ್ತ ಪುಲಿ ಅನ್ನುವ ಹಾಗಿತ್ತು ನಮ್ಮ ಪರಿಸ್ಥಿತಿ. ಮಳೆ ಬಂದರೆ ಮಳೆಗೆ ತೊಯ್ದು ಅಲ್ಪ ಸ್ವಲ್ಪ ಕೆಸರನ್ನಾದರೂ ತೊಳೆದುಕೊಂಡು ಹೋಗಿ, ಮಳೆಗೆ ಒದ್ದೆ ಆದ್ವಿ ಅಂತ ಹೇಳೋಣವೆಂದರೆ, ಮಳೆ ಕೂಡ ಕೈ ಕೊಟ್ಟಿತ್ತು. ಸಮಯ ಬೇರೆ ಜಾರುತ್ತಾ ಇತ್ತು. ಏನಾಗುತ್ತೋ ನೋಡೋಣ ಎಂದು ಇಬ್ಬರು ಶಾಲೆಯ ಕಡೆ ಹೊರಟೆವು. ನಮ್ಮೂರ ಕೊಪ್ಪ ದಾಟಿ ಬಯಲು ಬಂದೊಡನೆ ನೆನಪಾಗಿದ್ದು, ಪಕ್ಕದಲ್ಲಿ ಹರಿಯುತ್ತಾ ಸಾಗುವ ಚಿಕ್ಕ ತೊರೆಗಳು. ಇಬ್ಬರು ಆ ತೊರೆಯಲ್ಲಿ ಇಳಿದು, ಮೈಕೆಸರನ್ನು ತೊಳೆದುಕೊಂಡು ಶಾಲೆಯತ್ತ ಹೊರೆಟೆವು. ಸಮಯ ಮೀರಿ ಬಂದಿದಕ್ಕೂ, ಒದ್ದೆ ಬಟ್ಟೆಯಿಂದ ಹೋದದ್ದಕ್ಕೂ ಶಾಲೆಯಲ್ಲೊಂದಿಷ್ಟು ಬೈಗಳ ಮತ್ತು ಏಟುಗಳ ಸುರಿಮಳೆ. ಅದೇ ಬಹುಶಃ ಕಡೆಯ ಸಾರಿ ದಾರ ಕಟ್ಟಿಕೊಂಡು ಶಾಲೆಗೆ ಹೋಗಿದ್ದು. ತದನಂತರ ಅದನ್ನು ಬಿಟ್ಟು ಬಿಟ್ಟೆವು. ಮಳೆಗಾಲದಲ್ಲಿ ಇಂತಹ ಅದೆಷ್ಟೋ ಘಟನೆಗಳು ನಡೆದು ಮರೆತು ಹೋದರೂ ಆಗಾಗ ನೆನಪಾಗುತಿದ್ದ ಘಟನೆಗಳಲ್ಲಿ ಇದೊಂದು.

ಸಮಯ ಅನ್ನೋದು ಅದ್ಯಾಕೆ ಹೀಗೆ ಅನ್ನೋದೇ ಅರ್ಥವಾಗುವುದಿಲ್ಲ. ಒಮ್ಮೊಮ್ಮೆ ಈ ಹೊತ್ತು ಯಾಕೆ ಕಳೆದು ಹೋಗ್ತಾ ಇಲ್ಲ ಅನಿಸಿದರೆ , ಮಗದೊಮ್ಮೆ ಎಷ್ಟು ಬೇಗ ಹೊತ್ತು ಕಳೆದು ಹೋಯ್ತಲ್ಲ ಅನ್ನಿಸಿ ಬಿಡುತ್ತದೆ. ಇದ್ರಲ್ಲಿ ಹೊತ್ತಿನ ತಪ್ಪೇನು? ಅದು ಅದರಷ್ಟಕ್ಕೆ ತಾನು ನಡೆಯುತ್ತಲೇ ಇರುತ್ತದೆ. ತಪ್ಪೇನಿದ್ದರು ನಮ್ಮದೇ ತಾನೇ, ಒಂದು ವೇಳೆ ಬದುಕಿನಲ್ಲಿ ಒಳ್ಳೆಯ ಘಟನೆಗಳು ನಡೆದು ಬದುಕು ಸುಗಮವಾಗಿ ಸಾಗುತ್ತಿದ್ದರೆ, ಹಾಗೂ ಬದುಕಿನ ಪಯಣಕ್ಕೆ ಒಂದು ನಿಶ್ಚಿತತೆಯಿದ್ದರೆ ನಾವು ಸಮಯವನ್ನು ಮರೆತು ಸಾಗುತ್ತೇವೆ. ಆಗ ನಮಗೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಅದೇ ಬದುಕು ಅನಿಶ್ಚಿತತೆಯಿಂದ ಕೂಡಿದ್ದು, ಅದು ಎಲ್ಲೆಲ್ಲೋ ಹಾದಿ ತಪ್ಪಿ ಸಾಗುತಿದ್ದರೆ ಮಾತ್ರ ನಮಗೆ ಸಮಯ ಕಳೆಯುವುದೇ ಇಲ್ಲ ಎನ್ನುವುದು ಭಾಸವಾಗುತ್ತದೆ. ಆಗ ನಾವು ನಮ್ಮನ್ನು ದೂಷಿಸಿ ಕೊಳ್ಳುವುದರ ಬದಲು ಸಮಯವನ್ನು ದೂಷಿಸಲು ಪ್ರಾರಂಭಿಸುತ್ತೇವೆ. ಮನುಷ್ಯ ತನ್ನ ತಪ್ಪನ್ನು ಒಪ್ಪಿಕೊಳ್ಳಲ್ಲ ಎನ್ನುವುದಕ್ಕೆ ಇದೊಂದು ನೈಜ ಉದಾಹರಣೆ. ಇದಕ್ಕೆ ನಾನೇನು ಹೊರತಲ್ಲ. ನಾನೀಗಾಗಲೇ ನನ್ನ ಬದುಕಿನ ಮೊವ್ವತ್ತೇಳು ಸಂವತ್ಸರಗಳನ್ನು ಕಳೆದುಕೊಂಡಾಗಿದೆ. ಅದು ಹೇಗೆ ಮತ್ತು ಏಕೆ ಕಳೆದು ಹೋಯಿತು ಅನ್ನುವುದೇ ಆಶ್ಚರ್ಯ.  ಆಗಾಗ  ನೆನಪಾಗುವ ಇಂತಹ ಘಟನೆಗಳೇ, ನಮಗೆ ಕಳೆದು ಹೋದ ನಿಶ್ಚಿತವಾಗಿದ್ದ ಜೀವನವನ್ನು ಮೆಲುಕು ಹಾಕಿಸಿ ಮುಂದಿನ ಅನಿಶ್ಚಿತ ಬದುಕಿನ ಕಡೆ ದಾರಿ ತೋರಿಸುತ್ತವೆ.  ಅದನ್ನು ಅರ್ಥ ಮಾಡಿಕೊಳ್ಳುವುದು ಬಿಡುವುದು ನಮ್ಮ ನಮ್ಮ ಭಾವಕ್ಕೆ ಬಿಟ್ಟಿದ್ದು.

--ಮಂಜು ಹಿಚ್ಕಡ್

Monday, January 15, 2024

ಹುಚ್ಚೆದ್ದ ಕುದುರೆ

 


ಹುಚ್ಚೆದ್ದ ಕುದುರೆ

ಕುಣಿಯುತಿಹುದಿಲ್ಲಿ

ತಾನೆಂಬ ಭಾವದಿಂದ

ತಾ ಕೂಡಿಟ್ಟ

ಹಣವೆಂಬ ಮೋಹದಿಂದ.


ಇರಬಹುದು ಆಸ್ತಿ

ನಾಯಿ ಹಾಲಂತೆ

ಕೂಡಿಟ್ಟರೇನು ಬಂತು

ನೋಡುವವರ್ಯಾರು ಮುಗಿವಾಗ

ಜೀವನದ ಕೊನೆಯ ಕಂತು


ಕೂಡಿಟ್ಟ ಆಸ್ತಿಗೆ

ಇನ್ನಾರದೋ ಹೆಸರು

ಬದುಕಿ ನೋಡಿದವರ್ಯಾರು

ಕೊನೆಗೆ

ಹೇಳಿ ಕಳಿಸುವರ್ಯಾರು


ಇದ್ದಾಗ ಬೇಡವಾದವರು

ಕೊನೆಯಲ್ಲಿ ಬರುವರುಂಟೆ

ಕಳೆದೋದ ಕಾಲ

ಕಳಕೊಂಡ ಮಾನ

ಮತ್ತೆ ಬರುವುದುಂಟೆ


ಏರಿದ ಅಮಲು

ಏರುತ್ತಾ ಸಾಗಿದರೆ

ಹೆಸರೆಲ್ಲಿ?

ಅದು

ಉಸಿರುರುವರೆಗೆ ಮಾತ್ರ

ಗೊತ್ತಿಲ್ಲದ ನಾಳೆಗೆ

ಇರುವುದು ಇಂದು ಮಾತ್ರ!


-- ಮಂಜು ಹಿಚ್ಕಡ್