ಮನವು ಹಸನಾಗಿ, ಬಾಳು ಹಸುರಾಗಿ ಒಲವೆಂಬ ಒರತೆ ಸದಾ ಚಿಮ್ಮುತಿರಲಿ ಕಷ್ಟ-ಕೋಟಲೆಗಳ ಬಾಳ ಪಥದಲ್ಲಿ ಸದಾ ಹರ್ಷವು, ಮೊಳಗುತಿರಲಿ. ಸುಖಕೆ ದುಖವು ಸೇರಿ ಬಾಳು ಹದವಾಗಿರಲಿ ಬದುಕಿನ ಪಯಣದಲಿ ಯಸಸ್ಸು ನಿಮ್ಮದಾಗಿರಲಿ ಯುಗದ ಆದಿಯೂ ನಿಮಗೆ ಹರ್ಷ ತರಲಿ ಈ ವರ್ಷ ಪೂರ್ತಿ ನಿಮಗೆ ಶುಭವ ತರಲಿ.
"ನಾಳೆ ಹೋಳಿ, ಬಣ್ಣ ಹಚ್ಚಬೇಕು" ಎಂದು ಮಗಳು ಹೇಳಿದಾಗ ಮತ್ತೆ ಹೋಳಿ ಬಂದುದರ ನೆನಪಾಯಿತು. ನನಗಿದು ೩೬ ನೇ ಹೋಳಿಯಾದರೂ, ಬಣ್ಣ ಹಚ್ಚಿ ಆಡಿದ್ದು ತುಂಬಾ ಕಡಿಮೆಯೇ. ನನಗೆ ಅಥವಾ ನಮ್ಮ ಕಡೆಯವರಿಗೆ ಹೋಳಿ ಎಂದ ತಕ್ಷಣ ನೆನಪಾಗುವುದು ಸುಗ್ಗಿ ಹಬ್ಬವೇ ಹೊರತು ಬಣ್ಣದ ಆಟವಲ್ಲ. ಹಾಗಾಗಿಯೇ ಏನೋ ಮನಸ್ಸು ಮತ್ತೆ ಮತ್ತೆ ಸುಗ್ಗಿ ಹಬ್ಬದ ಕಡೆಯೇ ಓಡುತಿತ್ತು.
ನಾನು ಆಗಿನ್ನು ಚಿಕ್ಕ ವಯಸ್ಸಿನ ಹುಡುಗ . ಬಹುಷ: ೭-೮ ವರ್ಷಗಳಾಗಿರಬಹುದು. ಆಗ ಅಮ್ಮ ನಾಳೆ ಹಬ್ಬ ಎನ್ನುವ ದ್ರಷ್ಟಿ ಇಂದ ಕೊಟ್ಟೆ ಕಡಬು ಅಥವಾ ಕೊಟ್ಟೆ ರೊಟ್ಟಿಗಾಗಿ ಹಿಟ್ಟನ್ನ ಅರಿತಾ ಇದ್ದಳು. ಆಗ ನಮ್ಮ ಮನೆಯಲ್ಲಿ ಗ್ರೈಂಡರ ಅಥವಾ ಮಿಕ್ಸರಗಳಿರಲಿಲ್ಲ. ಕಲ್ಲಿನಲ್ಲೆ ಅರಿಯಬೇಕಾಗಿತ್ತು. ನಾವು ಆಗತಾನೆ ನಮ್ಮ ಪರೀಕ್ಷೆಗಳನ್ನ ಮುಗಿಸಿದ್ದರಿಂದ, ತರಗತಿಗಳಂತು ಇರಲಿಲ್ಲ. ಹಾಗಾಗಿ ಮನೆಯಲ್ಲೆ ಇದ್ದೆವು. ಬೆಳಿಗ್ಗೆ ಇಂದ "ತನದೇನಿದೋ ತಂದಾನ, ತಂದಂದ ದಂದ ದಂದ್ ತನದೇನಿದೋ ತಾನಾನಾ" ಎಂದು ತಂದಾನ ಹಾಕಲು ಬರುವವರ ಹಾಲಕ್ಕಿ ಹುಡುಗರ ಹಾಡನ್ನಂತೂ ಅದೆಷ್ಟೋ ಭಾರಿ ಕೇಳಿಯಾಗಿತ್ತು. ಇನ್ನು ಕೆಲವೇ ಗಂಟೆಗಳಲ್ಲಿ ಕರಡಿ ವೇಷದವರು ಬರುವವರಿದ್ದರಿಂದ ಮನೆಯ ಎದುರುಗಡೆನೆ ಕಾಯುತ್ತಾ ಕುಳಿತಿದ್ದೆವು. ಎಲ್ಲಾದರೂ ಹೋಗಿಬಿಟ್ಟರೆ ಎಲ್ಲಿ ಕರಡಿ ವೇಷದವರುತಪ್ಪಿ ಹೋಗುತ್ತಾರೆನೋ ಎನ್ನುವ ಯೋಚನೆಯಿಂದ ಮನೆಯ ಜಗುಲಿಯ ಮೇಲೆ ಕುಳಿತಿದ್ದೆವು. ಸಮಯ ಇನ್ನೇನು ೫ ಗಂಟೆಯಾಗಿರಬಹುದು. ಎತ್ತಲಿಂದಲೋ ಗುಮಟೆ, ತಾಳಗಳ ಧ್ವನಿ ಕೇಳಲು ಪ್ರಾರಂಭಿಸಿದವು. ಎಂದಿಗೂ ಅಂತಹ ರೀತಿಯ ಧ್ವನಿಯನ್ನ ನಾನು ಕೇಳಿರಲಿಲ್ಲ. ಓಡಿದವು ಧ್ವನಿ ಬಂದ ಕಡೆ, ನೋಡಿದರೆ ನಮ್ಮೂರ ಅಮ್ಮನವರ ಮನೆಯ ಪಕ್ಕದಲ್ಲಿರು, ಆಡು ಕಟ್ಟೆಯ ಹತ್ತಿರ ಒಂದಿಷ್ಟು ಗುಂಪು ಕೈಯಲ್ಲಿ ಕೊಲನ್ನ ಹಿಡಿದು, ತಲೆಗೆ ತುರಾಯಿಗಳಿಂದ ಕೂಡಿರುವ ಕಿರೀಟವನ್ನ ಧರಿಸಿ "ಹೋ ಹೋ ಹೋಹೋಚೋ" "ಹೋ ಹೋ ಹೋಹೋಚೋ" ಅಂತ ಭಾರಿಸುವ ವಾದ್ಯಗಳಿಗೆ ತಕ್ಕಂತೆ ನರ್ತಿಸುತ್ತಿದ್ದಾರೆ. ನಾನು ಅಲ್ಲಿಗೆ ಹೋದಾಗ ತಿಳಿಯಿತು. ಅದು ಸುಗ್ಗಿ ಕುಣಿತ ಎಂದು. ಅಲ್ಲಿಯವರೆಗೂ ನನಗೆ ಸುಗ್ಗಿ ಕುಣಿತ ಹೇಗಿರುತ್ತದೆ ಅಂತ ಗೊತ್ತಿರಲಿಲ್ಲ. ಪ್ರಥಮ ಭಾರಿಗೆ ಸುಗ್ಗಿ ಕುಣಿತವನ್ನ ನೊಡಿದೆ. ಅಲ್ಲಿಯವರೆಗೆ ಸುಗ್ಗಿ ಹಬ್ಬವನ್ನ ಆಚರಿಸುತ್ತಾರೆ, ಆದರೆ ಆ ಹಬ್ಬಕ್ಕೆ ಸುಗ್ಗಿ ಹಬ್ಬ ಅಂತ ಯಾಕೆ ಕರೆಯುತ್ತಾರೆ ಅನ್ನುವುದು ಗೊತ್ತಿರಲಿಲ್ಲ. ಅಲ್ಲಿ ಆಡು ಕಟ್ಟೆಯ ಹತ್ತಿರ ಸುಗ್ಗಿ ಕುಣಿತ ಮುಗಿದೊಡನೆ, ನಮ್ಮ ಮಕ್ಕಳ ತಂಡ ಸುಗ್ಗಿ ತಂಡವನ್ನ ಹಿಂಬಾಲಿಸಿಕೊಂಡು ಹೋಯಿತು. ಮುಂದೆ ನಮ್ಮೂರ ಸೇವಾ ಸಹಕಾರಿ ಸಂಘದ ಎದುರಿಗೆ, ನಂತರ ಗಾಂವಕರ ಕೇರಿಯಲ್ಲಿ, ಆಮೇಲೆ ಬೀರಜ್ಜನ ಮನೆ ಕೇರಿ ಹೀಗೆ ಎಲ್ಲಿ ಸುಗ್ಗಿಯೋ, ಅಲ್ಲಿ ನಾವುಗಳು. ಕರಡಿ ವೇಷ ಬರುವುದು ಮರತೇ ಹೋಗಿ ಬಿಟ್ಟಿತ್ತು. ಅಂತೂ ಮನೆಗೆ ಬಂದಾಗ ರಾತ್ರಿಯಾಗಿತ್ತು. ಅದಾದ ನಂತರ ನಾನು ಮತ್ತೆ ಸುಗ್ಗಿ ಕುಣಿತವನ್ನು ನೋಡಿದ್ದು ಮೂರು ವರ್ಷಗಳ ಹಿಂದೆ, ಅಂಕೋಲಾದ ಪೋಲಿಸ್ ಸ್ಟೇಷನ್ ಎದುರು, ಅದು ಕೂಡ ಅಂಕೋಲಾದಲ್ಲಿ ಸುಗ್ಗಿ ಕುಣಿತಕ್ಕೆ ಹೆಸರಾದ ಬೆಳಂಬಾರ ತಂಡದವರಿಂದ.
ಬಹುಷ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಗುವಂತಹ ಸಾಂಪ್ರದಾಯಿಕ ವೈಸಿಷ್ಟ್ಯಗಳು ಜಗತ್ತಿನ ಯಾವ ಮೂಲೆಯಲ್ಲೂ ಸಿಗಲಾರದು. ಯಾಕೆಂದರೆ ಬಹುಕಾಲದಿಂದ ಇಲ್ಲಿ ನೆಲಸಿರುವ, ವಲಸೆ ಬಂದಿರುವ ವಿವಿಧ ಜನಾಂಗಗಳು. ಆ ಪ್ರತಿಯೊಂದು ಜನಾಂಗಗಳಿಗೂ ತಮ್ಮದೇ ಆದ ಆಡುಭಾಷೆ, ತಮ್ಮದೇ ಆದ ಸಾಂಪ್ರದಾಯಿಕ ಮನೋಭಾವ, ತಮ್ಮದೇ ಆದಂತ ಒಂದು ಕಲೆ ಇದ್ದರೂ ಎಲ್ಲರೂ ಒಟ್ಟಿಗೆ ಜೀವಿಸುತ್ತಿರುವುದು. ಉತ್ತರ ಕನ್ನಡದಲ್ಲಿ ಪ್ರತಿಯೊಂದು ಜನಾಂಗವು ಬೇರೆ ಬೇರೆ ಸ್ಥಳಗಳಿಂದ ವಲಸೆ ಬಂದೂ ಇಲ್ಲಿ ನೆಲಸಿರುವುದು ಕೂಡ ವೈಸಿಷ್ಟ್ಯಕ್ಕೆ ಕಾರಣಗಳಿರಬಹುದು. ಭೂ ಒತ್ತಡಗಳಿಗೆ ಸಿಕ್ಕಿ ಉಗಮಿಸಿದ ಸ್ಥಳಗಳಲ್ಲಿ ಉತ್ತರ ಕನ್ನಡವೂ ಒಂದು. ಒಂದು ಕಡೆ ಸಹ್ಯಾದ್ರಿಯ ಪರ್ವತ ಶ್ರೇಣಿಗಳಾದರೆ ಇನ್ನೊಂದೆಡೆ ಅರಬ್ಬೀ ಸಮುದ್ರ, ನಡುವೆ ಹಚ್ಚ ಹಸುರಿನ ಭೂ ಸಿರಿ. ಇವೆಲ್ಲವುಗಳ ನಡುವೆ ನೆಲೆನಿಂತ ವಿವಿಧ ಜನಾಂಗಗಳು. ಅವು ಎಲ್ಲಿಂದ ಬಂದವೋ, ಹೇಗೆ ಬಂದವೋ ಎನ್ನುವುದು ಯಾರಿಗೂ ಸರಿಯಾಗಿ ವಿವರಿಸಿ ಹೇಳಲಾಗದಂತಹ ಇತಿಹಾಸ. ಅಂತಹ ಜನಾಂಗಗಳಲ್ಲಿ ಹಾಲಕ್ಕಿ ಒಕ್ಕಲಿಗರದು ಒಂದು ಜನಾಂಗ. ಇಲ್ಲಿರುವ ಜನಾಂಗಗಳಲ್ಲಿರೂವ ಇನ್ನೊಂದು ವೈಸಿಷ್ಟ್ಯವೆಂದರೆ, ಪ್ರತಿ ಜನಾಂಗಗಳಿಗೆ ತಮ್ಮದೇ ಭಾಷೆ , ಕಲೆ ಹಾಗೂ ಸಂಪ್ರದಾಯ. ಇದು ಹಾಲಕ್ಕಿ ಒಕ್ಕಲಿಗರಿಗೇನೂ ಹೊರತಾಗಿಲ್ಲ.
ಸುಗ್ಗಿ ಕುಣಿತ ಹಾಲಕ್ಕಿ ಒಕ್ಕಲಿಗರ ಒಂದು ಜಾನಪದ ಕಲೆ. ಊರ ಜನರಿಂದ ತಯಾರಿಸಲ್ಪಟ್ಟ ಸುಗ್ಗಿ ತುರಾಯಿ ಅಥವಾ ಕುಂಚಗಳನ್ನು ತಲೆಯ ಮೇಲೆ ಹೊತ್ತು ಕೈಯಲ್ಲಿ ಕೋಲು ಹಿಡಿದು ಗುಮ್ಟೆ, ತಾಳ ಜಾಗಟೆಗಳ ನಾದಕ್ಕೆ "ಹೋ ಹೋ ಹೋಹೋಚೋ" ಎಂದು ವೃತ್ತಾಕಾರವಾಗಿ ಕುಣಿಯುವ ಹಾಲಕ್ಕಿ ಸುಗ್ಗಿ ಮಕ್ಕಳ ಕುಣಿತವೇ ಸುಗ್ಗಿ ಕುಣಿತ. ಮೊದಲು ಈ ಸುಗ್ಗಿ ಕುಣಿತ ಒಂದು ಊರಿಂದ ಇನ್ನೊಂದು ಊರಿಗೆ ಸಾಗುತ್ತಾ ಹೋಗಿ ಕೊನೆಯಲ್ಲಿ ಹೋಳಿ ಹುಣ್ಣಿಮೆಯ ದಿನ ತಮ್ಮ ಊರಿಗೆ ವಾಪಸ್ ಬಂದು ಅವರ ದೇವರಾದ ಕರಿ ದೇವರ ಮುಂದೆ ತಮ್ಮ ವೇಷಗಳನ್ನು ಕಳಚಿಡುತಿದ್ದರು. ಆದರೆ ಕಾಲ ಕಳೆದಂತೆ ಈ ಪ್ರವೃತ್ತಿ ಕಡಿಮೆಯಾಗಿ ಊರೂರು ಸುತ್ತುವ ವಾಡಿಕೆ ಕಡಿಮೆಯಾಗಿದೆ. ಈಗಂತು ಸುಗ್ಗಿ ಕುಣಿತವೇ ಅಪರೂಪವಾಗಿದೆ. ಅಂಕೋಲಾದ ಪೋಲಿಸ್ ಸ್ಟೇಷನ್ ಎದುರು ಪ್ರತಿವರ್ಷ ಸುಗ್ಗಿ ಕುಣಿತವನ್ನು ನೋಡಬಹುದಾದರೂ ಅದು ಇನ್ನೆಷ್ಟು ವರ್ಷವೋ ಗೊತ್ತಿಲ್ಲ. ಕಾರಣಗಳು ಇಲ್ಲ ಎಂದಲ್ಲ, ಹುಡುಕುತ್ತಾ ಹೋದರೆ ಒಂದಲ್ಲ ಹತ್ತಾರು ಕಾರಣಗಳು ಸಿಗಬಹುದು. ಕಾರಣಗಳು ಏನೇ ಇರಲಿ, ಆದರೆ ಮುಂದಿನ ದಿನಗಳಲ್ಲಿ ಸುಗ್ಗಿ ಕುಣಿತ ಇತರ ಜನಪದ ಕಲೆಗಳಂತೆ ತನ್ನ ಹೊಳಪನ್ನು ಕಳೆದುಕೊಂಡು ಅವನತಿಯತ್ತ ಸಾಗಬೇಕಾದ ದಿನಗಳು ಬಹು ದೂರದಲ್ಲೇನಿಲ್ಲ. ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮಲ್ಲಿ ಸಾದ್ಯವಾದಷ್ಟು ಮಟ್ಟಿಗೆ ಜನಪದ ಕಲೆಯನ್ನು ಜೀವಂತವಾಗಿಸಲು ಪ್ರಯತ್ನಿಸಬೇಕು ಎನ್ನುವುದು ನನ್ನ ಆಶಯ. ನಮ್ಮ ಜನಪದ ಕಲೆಗಳನ್ನು ಪ್ರೋತ್ಸಾಹಿಸಿ ಬೆಳೆಸಿದಾಗಲೇ, ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯ
--ಮಂಜು ಹಿಚ್ಕಡ್
ಯೂ ಟ್ಯೂಬ್ ವಿಡಿಯೋ ಕೃಪೆ - ಗಣೇಶ್ ಗೌಡ
English Summary:
Suggi dance (or suggi kunita in Kannada) is one of the
folklore dance performed by Halakki Okkaliga tribes during Holi festivals in Northern
parts of the costal Karnataka. Because of this famous suggi dance this Holi festival is also called
as Suggi festival in those areas. On that day Halakki people will wear the
suggi tuft which is prepared with artificial flowers on their head and they
perform the circular dance according to their classical music. That dance is
called as suggi dance.