ಸುಮಾರು ಮೂರು ತಿಂಗಳ ನಂತರ, ಗಣೇಶ ಹಬ್ಬದ ರಜೆಗಾಗಿ ಯೋಗೇಶ್ ತನ್ನ ಸಂಸಾರ ಸಮೇತ ಊರಿಗೆ ಹೊರಟಿದ್ದ. ಬಸ್ ಅಲ್ಲಿ ಟಿಕೇಟ್ ಸಿಗದ ಕಾರಣ, ತನ್ನ ಕಾರನ್ನೇ ತೆಗುದುಕೊಂಡು ಹೊರಟಿದ್ದ. ಬೆಂಗಳೂರಿನಿಂದ ಊರಿಗೆ ಸಾಕಷ್ಟು ಬಸ್ಸಿವೆ. ಆದರೆ ಈಗ ಹಬ್ಬದ ಸಮಯ ಆದ್ದರಿಂದ, ಬಸ್ನಲ್ಲಿ ಟಿಕೇಟ್ ಸಿಗೋದೇ ಕಷ್ಟವಾಗಿತ್ತು. ಟಿಕೇಟ ಧರವನ್ನು ಕೂಡ ಯಧ್ವಾ ತಧ್ವಾ ಏರಿಸಿದ್ದರು ಕೂಡ. ಹೇಗೂ ಕಾರ್ ತೆಗೆದು ಕೊಂಡು ಹೋಗಿ, ತನ್ನ ಕಾರನ್ನು, ಸಂಸಾರವನ್ನು ಊರಲ್ಲೇ ಬಿಟ್ಟು, ದೀಪಾವಳಿಗೆ ಮತ್ತೆ ಹೋದಾಗ ಕಾರು ತೆಗೆದುಕೊಂಡು, ಸಂಸಾರವನ್ನು ಕರೆದುಕೊಂಡು ಬಂದರಾಯಿತು ಎಂದು, ಕಾರು ತೆಗೆದು ಕೊಂಡು ಹೊರಟಿದ್ದ. ಊರು ತಲುಪಲು ಇನ್ನು ಕೇವಲ ಮೂರು ನಾಲ್ಕು ಕಿಲೋ ಮೀಟರ್ ದೂರ ಉಳಿದಿತ್ತು. ಆಗಲೇ ಸಪ್ಟಂಬರ್ ತಿಂಗಳ ಮಳೆ, ಅಷ್ಟೇನು ಹರೀತವಿಲ್ಲದಿದ್ದರೂ, ಚಿಕ್ಕದಾಗಿ ಎಡೆ ಬಿಡದೇ ಬೀಳುತಿತ್ತು. ಮನಸ್ಸಲ್ಲಿ ಊರು ತಲುಪಲಿದ್ದೇನೆ ಅನ್ನುವ ರೋಮಾಂಚನ ಬೇರೆ. ಅವನ ಊರೀಗೆ ಹೋಗುವಾಗ, ಪಟ್ಟಣದ ಮಧ್ಯದಲ್ಲಿದ್ದ ಗಣೇಶ ದೇವಸ್ಥಾನವನ್ನೇ ಬಳಸಿ ಹೋಗಬೇಕಾಗಿತ್ತು. ಪ್ರತೀ ಸಾರಿ ಆ ಗಣೇಶ ದೇವಸ್ಥಾನವನ್ನು ಬಳಸಿ ಹೋಗುವಾಗಲೂ, ಅದೇ ಆ ಹಳೆಯ ನೆನಪು ಮತ್ತೆ ಮತ್ತೆ ಕಾಡುತಿತ್ತು. ಆ ಘಟನೆ ನಡೆದು ಆಗಲೇ ಇಪ್ಪತ್ತು ವರ್ಷಗಳು ಕಳೆದಿವೆ. ಆದರೂ, ಮೊನ್ನೆ ಮೊನ್ನೆ ನಡೆದಿದೆ ಅನ್ನುವಂತಿದೆ. ಅದನ್ನು ನೆನೆದಾಗಲೆಲ್ಲ ಮನಸ್ಸು ಆ ಘಟನೆಯನ್ನೇ ಮತ್ತೆ, ಮತ್ತೆ ಮೆಲುಕು ಹಾಕುತಿತ್ತು. ಇಂದು ಹಾಗೆ ಅದೇ ನೆನಪು ಮತ್ತೆ ಮತ್ತೆ ಕಾಡ ತೊಡಗಿತು.
ಕಾಲೇಜಿನಿಂದ ತನ್ನ ತರಗತಿಯನ್ನು ಮುಗಿಸಿ, ಮನೆಗೆ ಹೋಗಲು ಬಸ್ ನಿಲ್ದಾಣಕ್ಕೆ ಹೋಗಿತಿದ್ದ ಯೋಗೇಶನಿಗೆ ಹಿಂದಿನಿಂದ ಯಾರೋ ಬಂದು ತನ್ನ ಕಿಸೆಗೆ ಎನೋ ತುರುಕಿದ ಅನುಭವವಾಯಿತು. ಏನೆಂದು ನೋಡಿದ. ಅದೇ ತನ್ನ ಹೈಸ್ಕೂಲು ಸಹಪಾಠಿ ನವೀನ , ಅವನ ಮುಂದೆ ನಿಂತಿದ್ದ. ನವೀನ್ ಹತ್ತನೇ ತರಗತಿಯವರೆಗೆ ಓದಿ, ಮುಂದೆ ಓದಲಾಗದೇ ಆಟೋ ಒಡಿಸುತಿದ್ದ.
"ಏನೋ ಯೋಗೇಶ್, ಕಾಲೇಜಿಗೆ ಹೋಗಿ ಬರ್ತಾ ಇದ್ದಿಯಾ?" ಎಂದು ಕೇಳಿದ. ವಾರಕ್ಕೆರಡುಬಾರಿಯಾದರೂ ನವೀನ , ಯೋಗೇಶನಿಗೆ ಸಿಗುತ್ತಿದ್ದ. ಮೊದಲಿನ ಸಲಿಗೆ ಇನ್ನೂ ಹಾಗೆಯೇ ಇದ್ದಿತು.
"ಹೌದು, ನವೀನ್" ಎಂದು ಉತ್ತರವಿತ್ತ ಯೋಗೇಶ್. ಹಾಗೆ ಮುಂದುವರಿಸುತ್ತಾ, "ಏನೋ ಇದು, ಕಿಸೆಯಲ್ಲಿ ತುರುಕಿದ್ದು"
"ಹೇಯ್, ನಿನಗೆ ಗೊತ್ತಿಲ್ವೇನೋ, ನಮ್ಮ ಆಟೋ ಚಾಲಕರವತಿಯಿಂದ, ವರ್ಷಂಪ್ರತಿಯಂತೆ ಗಣೇಶೋತ್ಸವ ಆಚರಿಸುತ್ತಿದ್ದುದು. ಪ್ರತಿ ವರ್ಷ ಗಣೇಶೋತ್ಸವದಲ್ಲೂ ಲಾಟರಿ ಇಟ್ಟು ಮಾರಾಟ ಮಾಡುವುದು, ಅದೇ ರೀತಿ ಈ ವರ್ಷವು ಲಾಟರಿ ಇಟ್ಟಿದ್ದೇವೆ ಕಣೋ, ಹಾಂ, ಹಾಗೆ ಇನ್ನೊಂದು, ಈ ವರ್ಷ ಮೊದಲ ಬಹುಮಾನ 'ಮಾರುತಿ' ಕಾರು ಇಟ್ಟಿದ್ದೇವೆ ಕಣೋ.ಅದೇ ಲಾಟರಿ ಟಿಕೇಟನ್ನೇ ನಿನ್ನ ಕಿಸೆಯಲ್ಲಿ ತುರುಕಿದ್ದು"
ಒಂದು ಕ್ಷಣ ಯೋಗೇಶನಿಗೆ ಏನು ಹೇಳಬೇಕಂದೇ ತೋಚಲಿಲ್ಲ. ಲಾಟರಿ ಟಿಕೇಟಗೆ ಕೊಡಲು ಹಣವಾದರೂ ಎಲ್ಲಿದೆ. ಮೊದಲೇ ಬಡ ಕುಟುಂಬ, ಹಾಗೋ, ಹೀಗೋ ಕುಡಿಸಿಟ್ಟ ಹಣ ಕಾಲೇಜು ಫೀ, ಬಸ್ ಪಾಸ್ಗೆ ಆಗಿಬಿಡತ್ತೆ. ಇನ್ನು ಇವಕ್ಕೆಲ್ಲ ಎಲ್ಲಿದೆ ರೊಕ್ಕ. ಬೇಡ ಅನ್ನಲು ಸಂಕೋಚ. ಗೆಳೆಯ ನವೀನನಿಗೂ ಇವೆಲ್ಲ ಗೊತ್ತಿಲ್ಲದ ವಿಷಯವೇನಲ್ಲ. ಯೋಗೇಶ್ ಒಂದು ಕ್ಷಣ ಯೋಚಿಸಿ, ತನ್ನ ಕಿಸೆಯಲ್ಲಿದ್ದ್ದ ಲಾಟರಿ ಟಿಕೇಟನ್ನು ಹೊರಗೆ ತೆಗೆದು, "ಬೇಡ ಕಣೋ ನವೀನ್, ನಿನಗೆ ಗೊತ್ತಲ್ಲ, ನನ್ನ ಹತ್ತಿರ ಇವಕ್ಕೆಲ್ಲ ಹಣ ಇಲ್ಲಾ ಎಂದು"
"ನೀನೇನು, ನನಗೆ ಹೊಸಬನೇನೋ? ನಿನ್ನ ಹತ್ತಿರ ಇದ್ದಾಗ ಕೊಡುವಿಯಂತೆ ತಗೋ. ನನಗೂ ಇಷ್ಟು ಟಿಕೇಟು ಮಾರಾಟ ಮಾಡಬೇಕು ಅಂತಾ ತಾಕೀತು ಮಾಡಿದ್ದಾರೆ. ಅದಕ್ಕೆ ನಿನಗೊಂದು ಕೊಟ್ಟಿದ್ದೇನೆ. ಇಟ್ಟುಕೋ, ಸಮಯ ಬಂದಾಗ ಕೊಡುವಿಯಂತೆ. ಅಗೋ ಅಲ್ಲಿ ಗಿರಾಕಿ ಬಂದಿದ್ದಾರೆ, ಹೋಗ್ತಿನಿ" ಎಂದು ಹೊರಟ.
ಯೋಗೇಶ್ ಬಸ್ ನಿಲ್ದಾಣಕ್ಕೆ ಹೋದ, ಆಗಲೇ ಬಸ್ಸು ಹೊರಡುವುದರಲ್ಲಿತ್ತು. ಈ ಬಸ್ಸನ್ನ ಕಳೆದುಕೊಂಡರೆ, ಇನ್ನೂ ಎರಡು ಗಂಟೆ ಬಸ್ ನಿಲ್ದಾಣದಲ್ಲಿ ಕಳೀಬೇಕಾಗುತ್ತದೆ ಎಂದು ಓಡಿ ಹೋಗಿ ಬಸ್ ಹತ್ತಿದ. ಬಸ್ ಹೊರಟಿತು. ಲಾಟರಿ ಟಿಕೇಟು ತೆಗೆದು ನೋಡಿದ, ಅದರಲ್ಲಿ ನವೀನ್ ಹೇಳಿದ ಹಾಗೆ ಬಂಪರ್ ಬಹುಮಾನ ಮಾರುತಿ ೮೦೦ ಎಂದು ಬರೆದಿತ್ತು. ಅದರ ಜೊತೆಗೆ ಇನ್ನೂ ಐದಾರು ವಸ್ತುಗಳನ್ನು ಇಟ್ಟಿದ್ದರು. ಹಾಗೆ ಲಾಟರಿ ಟಿಕೇಟನ್ನು ಕಿಸೆಗೆ ತೂರಿಸಿ ಕುಳಿತ.
ಯೋಗೇಶ್ ಒಬ್ಬ ಬಡ ರೈತ ಮನತನದಿಂದ ಬಂದವನು. ಮನೆಯಲ್ಲಿ ಸದಾ ಬಡತನ. ತಂದೆಗೆ ಗದ್ದೆ ತೋಟಗಳನ್ನು ಬಿಟ್ಟರೆ ಬೇರೆ ಜಗತ್ತೇ ಗೊತ್ತಿಲ್ಲ. ಯೋಗೇಶ್ ಬಿಡುವಿದ್ದಾಗ ಗದ್ದೆ ತೋಟಗಳಲ್ಲಿ ಕೆಲಸಮಾಡಿಕೊಂಡು, ತಾಯಿಗೂ ಅವಳ ಕೆಲಸದಲ್ಲಿ ಸಹಾಯ ಮಾಡುತಿದ್ದ. ತಾವೇ ದುಡಿದು ಬೇಸಾಯ ಮಾಡುತಿದ್ದರಿಂದ ಮನೆಗೆ ಬೇಕಾಗುವ ಖರ್ಚಿಗೆ ಅಷ್ಟೇನು ತೊಂದರೆ ಇರಲಿಲ್ಲ. ಮಗನ ಕಾಲೇಜು ಫೀ ಮತ್ತು ಬಸ್ನ ಪಾಸ್ಗೆ ವರ್ಷದ ಕೊನೆಗೆ ಬಂದ ಮಾವಿನ ಮರದ ಗುತ್ತಿಗೆಯ ಹಣದಿಂದಲೋ, ಅಥವಾ ಅಲ್ಪ ಸ್ವಲ್ಪ ಉಳಿಸಿ ಮಾರಿದ ತೆಂಗಿನ ಕಾಯಿಯಿಂದಲೋ ಹೊಂದಿಸಿ ಕೊಡುತಿದ್ದರು. ಹಾಗಾಗಿ ಯೋಗೇಶ್ ಕಾಲೇಜಿಗೆ ಬಸ್ನ್ ಪಾಸ್ನ್ ಸಹಾಯದಿಂದಲೇ ಹೋಗಿ ಬರುತಿದ್ದ. ಎಲ್ಲೋ ಹತ್ತೋ-ಇಪ್ಪತ್ತೋ ಎಲ್ಲಾದರೂ ಉಳಿದರೆ ತನ್ನ ಪೆನ್ನಿಗೋ, ಪಠ್ಯ ಪುಸ್ತಕಕ್ಕೋ ಕಾದಿಡುತಿದ್ದ ಅಷ್ಟೇ.
ಲಾಟರಿ ಟಿಕೇಟು ಇಟ್ಟುಕೊಂಡು ಆಗಲೇ ತಿಂಗಳುಗಳು ಕಳೆದು ಹೋದವು. ಗಣೇಶ ಹಬ್ಬ ಮುಗಿದು ಆಗಲೇ ಇಪ್ಪತ್ತು ದಿನಗಳಾಗಿದ್ದವು. ಯೋಗೇಶ್ ಕಾಲೇಜಿನಿಂದ ಬರುವಾಗ ಸಿಗುವ ಆಟೋ ನಿಲ್ದಾಣದಲ್ಲಿ ಹಾಕಿದ್ದ ಬಹುಮಾನ ವಿಜೇತ ಲಾಟರಿ ಟಿಕೇಟುಗಳ ನಂಬರಗಳು ಕಾಣಿಸಿದವು. ನಂಬರಗಳ ಕೊನೆಯಲ್ಲಿ 'ಲಾಟರಿ ವಿಜೇತರು ೩೦ ದಿನಗಳ ಒಳಗಾಗಿ, ತಮ್ಮ ಸಾಮಾನುಗಳನ್ನು ತೆಗೆದುಕೊಂಡು ಹೋಗಬೇಕು, ಇಲ್ಲವಾದಲ್ಲಿ ಅದು ಕಂಪನಿಗೆ ಸೇರುತ್ತದೆ'. ಯೋಗೇಶ್ ಕುತುಹಲಕ್ಕಾಗಿ ಆ ಸಂಖ್ಯೆಗಳನ್ನು ಒಂದು ಹಾಳೆಯಲ್ಲಿ ಬರೆದುಕೊಂಡು ಹೋದ. ಮನೆಯಲ್ಲಿ ತನ್ನಲ್ಲಿ ಇರುವ ಲಾಟರಿ ಟಿಕೇಟಿನಲ್ಲಿರುವ ಸಂಖ್ಯೆಗೂ, ಹಾಳೆಯಲ್ಲಿ ಇರುವ ಸಂಖ್ಯೆಗೂ ತಾಳಿ ಹಾಕಿ ನೋಡಿದ. ಒಮ್ಮೆ ಕುತುಹಲ, ಒಮ್ಮೆ ಆಶ್ಚರ್ಯ. ತನ್ನ ಕಣ್ಣನ್ನು ತಾನೇ ನಂಬದವನಾದ ಒಂದು ಕ್ಷಣ. ಯೋಗೇಶನಿಗೆ ಮೊದಲ ಬಹುಮಾನ ಬಂದಿತ್ತು. ಮೋದಲ ಬಹುಮಾನ ಬಂದಿತ್ತೇನೋ ನಿಜ. ಆದರೆ ಏನು ಮಾಡುವುದು. ಕಾರು ಇಟ್ಟುಕೊಂಡು ಏನು ಮಾಡುವುದು? ಕಾರು ಹೊಡೆಯಲು ಬರಲ್ಲ, ಕಲಿತು ಕೊಳ್ಳಲು ರೊಕ್ಕ ಇಲ್ಲ. ಏನು ಮಾಡುವುದು. ಬಂದ ಬಹುಮಾನವನ್ನು ಬಿಡಲಾದಿತೇ? ಅದು ಇಂತಹ ಕಷ್ಟ ಕಾಲದಲ್ಲಿ. ಮಾರನೇ ದಿನ ಕಾಲೇಜಿಗೆ ಹೋಗುವಾಗ ಲಾಟರಿ ಟಿಕೇಟನ್ನು ಕಿಸೆಯಲ್ಲಿಟ್ಟುಕೊಂಡು, ಮನೆಯಲ್ಲಿ ಸ್ವಲ್ಪ ಲೇಟಾಗಿ ಬರ್ತಿನಿ ಎಂದು ಹೇಳಿ ಹೊರಟ. ಕಾಲೇಜಿಗೆ ಹೋಗಲು ಮನಸ್ಸಾಗಲಿಲ್ಲಿ. ಗೆಳೆಯ ನವೀನನಿಗಾಗಿ ಆಟೋ ನಿಲ್ದಾಣದ ಬಳಿ ಕಾದು ನಿಂತ. ಸುಮಾರು ಒಂದು ಗಂಟೆಯ ನಂತರ ನವೀನ್ ಬಂದ. ನವೀನ್ ಯೋಗೇಶನನ್ನು ನೋಡಿ.
"ಏನೋ ಇಲ್ಲಿ ನಿಂತಿದ್ದಿಯಾ?"
"ಏನಿಲ್ಲ ನವೀನ್, ನಿನ್ನ ಹತ್ತಿರ ಒಂದು ವಿಷಯ ಹೇಳಬೇಕಿತ್ತು"
"ಏನೋ, ಹೇಳೋ, ಅದಕ್ಕೇನೋ ಸಂಕೋಚ"
"ಹಾಗೇನಿಲ್ಲ, ಆದಿನ ನೀನು ಒಂದು ಲಾಟರಿ ಟಿಕೇಟ್ ಕೊಟ್ಟಿದ್ದೆಯಲ್ಲ. ಅದಕ್ಕೆ ಮೊದಲ ಬಹುಮಾನ ಬಂದಿದೆ ಕಣೋ. ಆ ಕಾರನ್ನ ಇಟ್ಕೊಂಡು ನಾನೇನು ಮಾಡಲಿ, ಯಾರಿಗಾದರೂ ಕೊಟ್ಟು, ರೊಕ್ಕ ತೆಗೆದು ಕೊಂಡು ಬಿಡೋಣ"
ನವೀನ್ ಸಂತೋಷದಿಂದ, "ಹೇಯ್! ಶುಭಾಶಯಗಳು ಕಣೋ, ಯಾಕೋ ಹೀಗೆ ಮಾತಾಡ್ತಿದ್ದಿಯಾ, ಮೊದಲು ಕಾರು ತೆಗೆದು ಕೊಳ್ಳೋಣ ಕಣೋ, ಆಮೇಲೆ ನೋಡೋಣ"
"ನನಗೆ ಕಾರು ಹೊಡೆಯೋಕ್ಕೆ ಬರಲ್ಲ, ಅದು ಹೋಗ್ಲಿ ಪೆಟ್ರೋಲಿಗೂ ನನ್ನ ಹತ್ತಿರ ರೊಕ್ಕ ಇಲ್ಲ"
"ಅದಕ್ಯಾಕೆ ಯೋಚನೆ ಮಾಡ್ತಿಯಾ? ನಾನೇ ಒಂದೆರಡು ಲೀಟರ್ ಪೆಟ್ರೋಲ್ ಹಾಕಿ ಕೊಡ್ತಿನಿ, ಆಮೇಲೆ ಕೊಡುವೆಯಂತೆ. ನನಗೂ ಡ್ರೈವಿಂಗ್ ಬರತ್ತೆ, ಬಾ ಹೊರಡೋಣ, ಕಾರು ತೆಗೆದುಕೊಂಡು ಗಣೇಶ್ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರೋಣ" ಎಂದು ಒತ್ತಾಯ ಪೂರ್ವಕವಾಗಿ, ಲಾಟರಿ ಟಿಕೇಟು ಕಮೀಟಿಯ ಹತ್ತಿರ ಕರೆದು ಕೊಂಡು ಬಂದ.
ಸಂಸ್ಥೆಯ ಅಧ್ಯಕ್ಷರಿಗೆ ಟಿಕೇಟು ಕೊಟ್ಟು. ಹಾಗೆ ಕಾರು ತೆಗೆದುಕೊಂಡು ದೇವಸ್ಥಾನದ ಕಡೆ ಹೊರಟರು. ಇನ್ನೇನು ದೇವಸ್ಥಾನ ಒಂದರ್ಧ ಕಿಲೋ ಮೀಟರ್ ಇದೆ, ಎನ್ನುವಾಗ, ಕಾರು ಸ್ವಲ್ಪ ನಿಯಂತ್ರಣ ತಪ್ಪಿ, ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಬೈಕಗೆ ಡಿಕ್ಕಿ ಹೊಡೆಯಿತು. ಕಾರಿನ ಮುಂಬಾಗದ ಎಡಬಾಗದಲ್ಲಿದ್ದ ಲೈಟ್, ಮಿರರ್, ಇಂಡಿಕೇಟರ್ ಎಲ್ಲಾ ಒಡೆದು ತುಂಡಾಯಿತು. ಮುಂಬಾಗದ ಬೋನೆಟ್ ಸ್ವಲ್ಪ ಒಳ ಸೇರಿತ್ತು. ಆ ಒಂದು ಡಿಕ್ಕಿಗೆ ರಸ್ತೆಯ ಅಕ್ಕ ಪಕ್ಕದಲ್ಲಿದ್ದ ಜನರೆಲ್ಲ ಸೇರಿದ್ದರು. ಇಬ್ಬರ ಹತ್ತಿರನೂ ಲೈಸನ್ಸ್ ಇಲ್ಲಾ, ಇನ್ಸೂರನ್ಸ ಇಲ್ಲ. ಆಮೇಲೆ ಬೈಕ್ ಸವಾರನಿಗೂ, ನವೀನನಿಗೂ ಒಂದು ಒಪ್ಪಂದವೆರ್ಪಟ್ಟು, ಬೈಕ್ ಸವಾರನಿಗೆ ಹತ್ತು ಸಾವಿರ ಕೊಡುವುದಾಗಿ, ಆತ ಕೇಸ್ ಮಾಡಬಾರದಾಗಿಯೂ ಎಂದು ನಿರ್ಧಾರವಾಯಿತು. ಇಷ್ಟೊಂದು ಹಣ ಯೋಗೇಶನ ಹತ್ತಿರ ಇಲ್ಲಾ ಎಂದು ಗೊತ್ತಿರುವುದರಿಂದ ಎಲ್ಲಾ ಹಣವನ್ನು ನವೀನನೇ ತನ್ನ ಆಟೋ ಚಾಲಕ ಗೆಳೆಯರಿಂದ ವ್ಯವಸ್ಥೆಮಾಡಿ, ಆ ಹಣವನ್ನು ಬೈಕ್ ಸವಾರನಿಗೆ ಕೊಟ್ಟು ಕಳಿಸಿದ. ಹಾಗೆ ದೇವಸ್ಥಾನಕ್ಕೆ ಹೋಗಿ ಪೂಜೆಯ ಶಾಸ್ತ್ರವನ್ನು ಮುಗಿಸಿ, ಗ್ಯಾರೇಜಿಗೆ ಬಂದರು. ಆ ಪೇಟೆಯಲ್ಲಿದ್ದುದು ಅದೊಂದೇ ಗ್ಯಾರೇಜು. ಗ್ಯಾರೇಜಿನಾತ ಹತ್ತು ಸಾವಿರ ಕೊಟ್ಟರೆ ಮಾತ್ರ ರಿಪೇರಿ ಮಾಡಿಕೊಡುವುದಾಗಿ ಒಪ್ಪಿದ. ಈ ಹಣವೂ ಕೂಡ ನವೀನದೇ.
ಯೋಗೇಶನಿಗೆ ಇವನ್ನೆಲ್ಲ ನೋಡಿ ತಡೆಯಲಾಗಲಿಲ್ಲಿ, ಕೂಡಲೇ ಇದನ್ನು ಮಾರಿ ಬಿಡಬೇಕು ಎಂದು ನವೀನನ್ನು ಒತ್ತಾಯಿಸಿದ. ಯೋಗೇಶನ ಒತ್ತಾಯಕ್ಕೆ ಮಣಿದು ನವೀನ ನಗರದಲ್ಲಿದ್ದ ಮೋಹನ ಎಂಬ ಕಾರು ಲೇವಾದೇವಿ ವ್ಯವಹಾರಸ್ಥನನ್ನು ಬೇಟಿ ಆದರು.ಮೋಹನ ಇದು, ಸೆಕೆಂಡ್ ಹ್ಯಾಂಡ್ ಕಾರು, ಮೊದಲೇ ಎಕ್ಸಿಡೆಂಟ್ ಬೇರೆ ಆಗಿದೆ, ಹಾಗಿದೆ ಹೀಗಿದೆ ಎಂದು ಮೂರು ಲಕ್ಷದ ಕಾರನ್ನು ಒಂದು ಲಕ್ಷ ಎಪ್ಪತೈದು ಸಾವಿರ ರೂಪಾಯಿಗೆ ಇಳಿಸಿ. ಅದರ್ಲ್ಲಿ ತನಗೆ ಎರಡು ಪರ್ಸೆಂಟ್ ಕಮಿಷನ್ ನೀಡಬೇಕು ಎಂದು ಬೇರೆ ಕೇಳಿದ. ಯೋಗೇಶ್ ಏನು ಹೇಳುವ ಸ್ಥಿತಿಯಲ್ಲಿರಲಿಲ್ಲ. ಅವನಿಗೆ ಅದೇನು ಚಿಕ್ಕ ಮೊತ್ತವಾಗಿರಲಿಲ್ಲ. ಸಧ್ಯಕ್ಕೆ ಕಾರು ಅವನ ಕೈ ಇಂದ ಹೋದರೆ ಸಾಕಾಗಿತ್ತು. ಬಂದಷ್ಟು ಬರಲಿ ಎಂದು ಒಪ್ಪಿಯೇ ಬಿಟ್ಟ. ಮೋಹನ ತಾನು ೨೭೫೦ ರೂಪಾಯಿ ಇಟ್ಟುಕೊಂಡು, ಉಳಿದ ೧,೭೨,೨೫೦ ರೂಪಾಯಿಯನ್ನು ಕೊಟ್ಟು ಕಳಿಸಿದ. ಸದ್ಯಕ್ಕೆ ಕಾರು ಪುರಾಣ ಮುಗಿಯಿತ್ತಲ್ಲ ಎಂದು ತಾನು ಒಂದುವರೆ ಲಕ್ಷ ಇಟ್ಟುಕೊಂಡು, ಉಳಿದ ಹಣವನ್ನೂ ತನಗೆ ಆಪತ್ಕಾಲಕ್ಕೆ ಸಹಾಯ ಮಾಡಿದ ನವೀನನಿಗೆ, ಇಷ್ಟೆಲ್ಲ ಬೇಡ ಎಂದರೂ ಕೇಳದೇ ಕೊಟ್ಟು, ಅವನಿಗೆ ಧನ್ಯವಾದ ತಿಳಿಸಿ. ಸಮಾಧಾನದಿಂದ ಮನೆಗೆ ಹೊರಟ.
--ಮಂಜು ಹಿಚ್ಕಡ್