Saturday, September 28, 2013

ಜೀವನ- ಸುಖ-ದುಃಖಗಳ ಮಿಲನ

ಸುಖ,
ಮಳೆಗಾಲದಲಿ ಮಳೆಯಿಂದ
ಎಲ್ಲೆಂದರಲಿ ಸದಾ
ಹರೀಯುವ ನೀರ ತೊರೆಯಂತೆ
ಸದಾ ಹರಿಯುತಿರಲಿ.

ದುಃಖ,
ಬೇಸಿಗೆಯ ಊರಿಬಿಸಿಲಿಗೆ 
ಸಿಕ್ಕು ಆವಿಯಾಗುವ 
ನೀರ ಹನಿಯಂತೆ
ಸದಾ ಆವಿಯಾಗುತಿರಲಿ..

ನೀರು ಆವಿಯಾದರೆ ತಾನೇ
ಮುಂದೆ ಮಳೆ
ಬೇಸಿಗೆ ಕಳೆದರೆ ತಾನೆ
ಮುಂದೆ ಮಳೆಗಾಲ
ರಾತ್ರಿ ಕಳೆದರೆ ತಾನೆ
ಮುಂದೆ ಹಗಲು
ಹಾಗೆ ದುಃಖ ಕಳೆದರೆ ತಾನೆ
ಮುಂದುಂಟು ಸುಖ.

ಸುಖ ದುಃಖಗಳೆರಡು
ನಾಣ್ಯದ ಎರಡು
ಮುಖಗಳಂತೆ
ಜೊತೆಗಿದ್ದರೆ ತಾನೇ
ಈ ಜೀವಕ್ಕೊಂದು ಬೆಲೆ
ಬದುಕಿಗೊಂದು ನೆಲೆ.

--ಮಂಜು ಹಿಚ್ಕಡ್ 

Friday, September 27, 2013

ಸೋಲು ಗೆಲುವು!

ತಿಂಗಳ ಬೆಳಕಲ್ಲಿ
ತಂಗಾಳಿಗೆ ಹಿತವಾಗಿ 
ಓಲಾಡುವ ಆ
ನಿನ್ನ ಮುಂಗುರುಳ ಕಂಡು.

ಮುಂಗುರುಳುಗಳ ಸಂದಿಯಲಿ
ಇಣುಕಿನೋಡುವ
ಆ ನಯನಗಳ ಕಂಡು

ಆ ಮಿನುಗುವ
ನಯನದ್ವಯಗಳಲಿ
ನನ್ನ ಪುಟ್ಟ ಬಿಂಬವ ಕಂಡು

ನನ್ನ ಹೃದಯ 
ನಿನಗೆ ಸೋತು
ನನ್ನ ಪ್ರೀತಿ
ಗೆಲ್ಲಲಾರದೇನೇ?
ಗೆಳತಿ...

--ಮಂಜು ಹಿಚ್ಕಡ್ 

Saturday, September 21, 2013

ಹೂವ ಕೊಯ್ಯೋ ಹುಡುಗಿ!

ಅಣಕಿಸಿತು ಮಳ್ಳಿಯ ಮೊಗ್ಗು
ತಾನು ಬೆಳ್ಳಗಿಹನೆಂದು,
ಹೂವ ಕೊಯ್ಯುವ ಹುಡುಗಿಯ.

ನನ್ನ ಬಿಳುಪುಂಟೇನು ನಿನಗೆ?
ನನ್ನ ಒನಪುಂಟೇನು ನಿನಗೆ?
ನನ್ನ ವಾಸನೆಯುಂಟೇನು ನಿನಗೆ?
ಎಂದು ಕೇಳಿತು,
ತನ್ನ ಟೊಂಕ ಕುಣಿಸುತಾ!

ಹುಡುಗಿ ಉತ್ತರಿಸಿದಳು ಮೆಲ್ಲಗೆ,
ಸ್ವಲ್ಪ ನಾಚುತಾ!

ನಿನ್ನ ಸೌಂಧರ್ಯ, ನಾಳೆ
ನೀ ಅರಳಿ, ಮುದುಡುವವರೆಗೆ.
ಮುಡಿಯನ್ನೇರಿ ನಿನ್ನ,
ಕೆಳಗೆ ಎಸೆಯುವವರೆಗೆ.

ನನ್ನದೋ ಹಾಗಲ್ಲ.
ನಾ ಬೆಳೆದು, ಮುದುಕಿಯಾಗುವವರೆಗೆ,
ಅವನ ಮೈಯ್ಯನ್ನೇರಿ,
ಮನಸ್ಸಲ್ಲಿರುವವರೆಗೆ!

ನೀ ಮೊಗ್ಗಾಗಿದ್ದರೆ ಚೆನ್ನ,
ನಾ ಅರಳಿದರೆ ಚೆನ್ನ
ಎಂದಂದಳು 
ಹೂವ ಕೊಯ್ಯೋ ಹುಡುಗಿ!

--ಮಂಜು ಹಿಚ್ಕಡ್ 

Saturday, September 14, 2013

ಯೋಚಿಸು ಮೊದಲು ನಿನ್ನಯ ಬಗ್ಗೆ...

ಅವರಿವರ ಮನೆಯ
ಚಿಂತೆ ನಿನಗೇಕೆ?
ಕೇಳಿ ತಿಳಿದರೆ ಹೊಡೆಯುವಳು,
ಪಕ್ಕದ ಮನೆಯಾಕೆ.

ಮೊದಲು ನಿನೇನು, ನಿನ್ಯಾರು?
ಎನ್ನುವುದ ತಿಳಿ
ಮೊದಲು ನೀ ಬೆಳೆಸಿಕೋ
ನಿನ್ನವರ ಬಗ್ಗೆ ಕಳಕಳಿ.

ಅವರಿವರನು ಹಳಿದು ತೋರಿಸಬೇಡ
ನಿನ್ನೆಯ ಪ್ರತಾಪ.
ನಿನ್ನ ನೀ ತಿಳಿದರೆ,
ನಿನ್ನ ಬಾಳು ನಂದಾದೀಪ.

ಎಲ್ಲರ ಮನೆಯ
ದೋಸೆಯು ತೂತು
ಎಂದು ಅರಿತರೆ ತಾನೆ
ನಮಗೆ ಒಳಿತು.

ಯೋಚಿಸಿ ಹಾಳು ಮಾಡದಿರು ಸಮಯ,
ಪಕ್ಕದ ಮನೆಯವರ ಬಗ್ಗೆ
ಹುಚ್ಚಿರಲಿ, ಕೆಚ್ಚಿರಲಿ, ನೆಚ್ಛಿರಲಿ,
ನಿನ್ನ ಗುರಿ ತಲುಪುವ ಬಗ್ಗೆ.

--ಮಂಜು ಹಿಚ್ಕಡ್ 

Thursday, September 12, 2013

ಜೀವನ

ಜೀವನ,
ಅಸಹಾಯಕತೆಯಿಂದ ಕಾಲ ಕಳೆಯುತ್ತಿರುವ
ಕಾಶ್ಮೀರಿ ನಾಗರೀಕರ ಶೋಚನೀಯ ಬದುಕೋ?
ದೇಶದಲಿ ದೊಂಬಿ ಎಬ್ಬಿಸಿ
ಜನ ಸಾಮಾನ್ಯರನ್ನು ಹತ್ಯೆಗೈಯುತ್ತಿರುವ
ಉಗ್ರಗಾಮಿಗಳ ಬದುಕೋ?

ಜೀವನ,
ಮಹಲಿನಲಿ ಕುಳಿತು, ದೇಶ ಕೊಳ್ಳೆ ಹೊಡೆಯುತ್ತಾ
ದೇಶವಾಳುತಿರುವ ರಾಜಕಾರಣಿಗಳ ಬದುಕೋ?
ಮತ ಹಾಕಿ, ದೇಶವಾಳಲು ಕಳಿಸಿ
ಪರಿತಪಿಸುತಿರುವ ಶ್ರೀ ಸಾಮಾನ್ಯನ ಬದುಕೋ?
ಉದ್ಯೋಗಕ್ಕಾಗಿ ದಿನನಿತ್ಯ ಅಲೆಯುವ
ನಮ್ಮ ನಿರುದ್ಯೋಗಿಗಳ ಬದುಕೋ?

ಜೀವನ,
ಕಷ್ಟ ಕಾರ್ಪಣ್ಯಗಳಲೇ, ಮುಳುಗೇಳುತ್ತಿರುವ
ಬಡ ಜನರ ಬದುಕೋ?
ಕಾರ್ಖಾನೆಗಳಲಿ ದುಡುಯುತ್ತಿರುವ
ಕಾರ್ಮಿಕ, ಬಾಲ ಕಾರ್ಮಿಕರ ಬದುಕೋ?
ರಸ್ತೆಯಲಿ, ದೇವಸ್ಥಾನಗಳಲಿ ಸಾಲು ಗಟ್ಟಿ
ನಿಂತಿರುವ ಬಿಕ್ಷುಕರ ಬದುಕೋ?

ಜೀವನ,
ದೇಶದಲ್ಲುಳಿದು ದೇಶವೊಡೆಯುತ್ತಿರುವ
ದೇಶ ದ್ರೋಹಿಗಳ ಬದುಕೋ?
ಬದುಕಲಾರದೇ ಬದುಕುಳಿದು,
ಅಲ್ಲಿಲ್ಲಿ ಅಡ್ಡಾಡಿ ಜೀವಿಸುತ್ತಿರುವ
ನಿರ್ಗತಿಕರ ಬದುಕೋ?

ಜೀವನ,
ಜನರ ನಡುವೆ ಗುರುತಿಸಿಕೊಳ್ಳಲು
ಇಟ್ಟು ಕೊಂಡಿರುವ ನಾಮಾಕಿಂತವೋ?
ಅಥವಾ ಇನ್ನಾರ ಬದುಕೋ
ನಾನರಿಯೆ
ಒಟ್ಟಿನಲಿ ಇದು ನನ್ನ ಪುಟ್ಟ ಕವನ!

--ಮಂಜು ಹಿಚ್ಕಡ್ 

ರಚನೆ: ೧೫ ಜೂನ್ ೧೯೯೬

Tuesday, September 10, 2013

ಸೊಳ್ಳೆಗಳು ಸಾರ್ ಸೊಳ್ಳೆಗಳು!

ಕಿವಿಯಲ್ಲಿ ಕುಂಯ್ಗುಡುವ ಶಬ್ದಗಳ ಮೊರೆತ
ಕಾಲ್ಗಳ ಸಂಧಿಯಲಿ, ತುರಿಸಿಕೊಳ್ಳುವಷ್ಟು ಕಡೆತ.

ಒಂದನ್ನು ಹೊಡೆದರೆ, ಇನ್ನೊಂದರ ಪ್ರತಿಕಾರ
ಮಾಡಲು ಸಾದ್ಯವೇನು ಈ ಸೊಳ್ಳೆಗಳ ಸಂಹಾರ!

ಅರೆ ನಿದ್ದೆಯಲಿ ಹೊಡೆದದ್ದೇ ಹೊಡೆದದ್ದು
ನಿಲ್ಲಲಾರದು ಇವುಗಳ ಗುಂಯ್ಗಿಡುವ ಸದ್ದು.

ಗುಡ್ ನೈಟ್ ಅಂತೆ, ಆಲ್ ಔಟ್ ಅಂತೆ
ಇವುಗಳದು ರಕ್ತ ಬೀಜಾಸುರನ ಸಂತತಿಯಂತೆ.

ಏನು ಮಾಡಿದರು ಸಾಯಲ್ಲ
ಯಾವ ಔಷಧಿಗೂ ಬಗ್ಗಲ್ಲ.

ಉಳಿದುದ್ದೊಂದೆ ಶಬ್ಧವೇಧಿಯ ವಿದ್ಯೆ
ಇಲ್ಲದಿರೆ ಬಿಳಲಾರದು ರಾತ್ರಿ ಪೂರ್ತಿ ನಿದ್ದೆ!

-- ಮಂಜು ಹಿಚ್ಕಡ್ 

Monday, September 9, 2013

ಪ್ರೀತಿ..

ಮುಚ್ಚದಿರು ಚಲುವೆ
ನಿನ್ನ ಹೃದಯದಂಗಡಿಯ!

ಕೈತುಂಬ ಹಣವುಂಟು,
ಮನಸಲಿ ಹುರುಪುಂಟು,
ದುಡಿಯುವ ಛಲವುಂಟು,
ಸಾಕುವ ಶಕ್ತಿ ದೇಹದಲ್ಲುಂಟು.

ತುರ್ತಾಗಿ ತೆಗದು ಕೊಡುವೆಯೇನು
ಒಂದು ಸೇರು ಪ್ರೀತಿಯ?

ಹೃದಯ ಅಂಗಡಿಯಲ್ಲ,
ಪ್ರೀತಿ ಹಣಕೆ ಮಾರುವುದಲ್ಲ,
ನೋವಿಗೆ ಮರಗುವುದಿಲ್ಲ,
ಸಾವಿಗೆ ಸೊರಗುವುದಿಲ್ಲ,
ಬೇಡಿ ಬಂದವರಿಗೆ, ಧಾನ ಕೊಡುವುದಲ್ಲ.

ನಯನಗಳು ಬೆಸೆದಾಗ
ಮನದ ಮೂಲೆಯಲಿ
ತಾನು ತಾನಾಗೇ ಹುಟ್ಟುವುದು, ಪ್ರೀತಿ.

ನಿನ್ನಲಿ ಎನಿದ್ದರೇನು? 
ನಿನೆಷ್ಟು ಬೇಡಿದರೇನು?
ನೀ ಕಾಡಿದರೇನು?
ನೀ ನನಗೆ ಸರೀಕನಲ್ಲ.
ನಾ ನಿನಗೆಂದು ಸೋಲುವವಳಲ್ಲ.
ವೃತಾ ವೇಳೆ ಕಳೆಯುವುದು ಸರಿಯಲ್ಲ.
ನಿನ್ನಲಿ ನನಗೆಂದು, ಪ್ರೀತಿ ಹುಟ್ಟುವುದಿಲ್ಲ,
ನೀ ಹೊರಟರೆ ಒಳಿತು, ನಿನಗೆ ನನಗೆಲ್ಲ. 

-- ಮಂಜು ಹಿಚ್ಕಡ್ 

Sunday, September 8, 2013

ತುಟ್ಟಿ ಕಾಲ

ಡಿಸೈಲ್ ತುಟ್ಟಿ, ಪೆಟ್ರೋಲು ತುಟ್ಟಿ
ಆಹಾರಸಾಮಾಗ್ರಿಗಳಂತು ತುಟ್ಟಿಯೋ ತುಟ್ಟಿ.

ಬಸ್ಸಿನ ದರ ಹೆಚ್ಚು, ಹಾಲಿನ ದರ ಹೆಚ್ಚು
ಏರುತಿದೆ ದಿನದಿಂದ ದಿನಕ್ಕೆ ಖರ್ಚು ವೆಚ್ಚು

ಕಂಡ ಕನಸುಗಳಾಗುತ್ತಿವೆ ಇಂದು ನುಚ್ಚು ನುಚ್ಚು
ಒಲೆಯಲ್ಲಿ ಹಚ್ಚುವುದೆ ಕಷ್ಟವಾಗಿದೆಯಿಂದು ಕಿಚ್ಚು

ಇದು ಮೊದಲಲ್ಲ, ಇದು ಕೊನೆಯದು ಅಲ್ಲ
ಇದು ಮುಂದುವರೆಯುವುದೇ ಹೊರತು ನಿಲ್ಲಲ್ಲ.

ನಾವು ನಿಂತರೂ ನಮ್ಮ ಬಾಳು ನಿಲ್ಲಲ್ಲ.
ನಮ್ಮ ನಿಲುವಿಗೆ ಕಾಲ ಸೋಲಲ್ಲ.

ಹೊಂದಿ ಕೊಳ್ಳಬೇಕಾಗಿದೆ, ಇದಕಿಂದು ನಾವೀಗ
ಸೇರಿ ನಡೆಯೋಣ ಗುರಿಯೆಡೆಗೆ ಬೇಗ ಬೇಗ!

-- ಮಂಜು ಹಿಚ್ಕಡ್

Saturday, September 7, 2013

ನನ್ನ ಮನೆ!

ಓ ಹುಣ್ಣಿಮೆಯ ಚಂದಿರ
ಕೆಣಕುತಿಹೆ ಏನು ನನ್ನ
ಕನಸುಗಳ ಹಂದರ.

ಒಳಹೊಕ್ಕು ಮನೆ ಮನೊದಳು,
ನಿನ್ನ ಬೆಳಕನ್ನು ಬಿಟ್ಟು
ನಿನಗಲ್ಲದೇ ಇನ್ನಾರಿಗೆ ಗೊತ್ತು
ನನ್ನ ಕನಸುಗಳ ಗುಟ್ಟು.

ದುಡಿಯುವ ಚೈತನ್ಯವಿದೆ, 
ಸಾಧಿಸುವ ಬಯಕೆಗಳಿವೆ.
ಹಣವಿಲ್ಲ ಕೂಡಿಡಲು,
ಆದರೂ ಮನದಿ ಆಶೆಗಳಿವೆ. 

ಹಗಲಲ್ಲಿ ಸೂರ್ಯನ ಬೆಳಕು
ರಾತ್ರಿ ನಿನ್ನಯ ಬೆಳಕು
ಮನೆಯ ಒಳ ಬರುವಾಗ
ಇನ್ನೇಕೇ ಬೇಕು ನನಗೆ
ಉಳಿದ ಬೆಳಕು.

ನನ್ನ ಮನೆ ಕೌರವರ
ಚಕ್ರವ್ಯೂಹವಲ್ಲ,
ಒಳ ಬಂದವರು, ಹೊರಹೋಗಲು
ಮುರಿದ ಬಾಗಿಲುಗಳುಂಟಲ್ಲ.

ಗೋಡೆಯುಂಟು, ಬಾಗಿಲುಂಟು
ಕಳ್ಳ ಬಂದರೂ ಕಳೆಯಲೂ ಏನಿಲ್ಲ
ಸೊಳ್ಳೆಗಳುಂಟು, ತಿಗಣೆಗಳುಂಟು
ನಾನಿರುವಾಗ ಅವಕ್ಕೆ ತೊಂದರೆ ಇಲ್ಲ.

ಕೆಳಗೆ ಹರಿದ ಚಾಪೆ,
ಮೇಲೆ ಸೋರುವ ಮಾಡು
ಎಂದು ನನಸಾಗುವುದೋ,
ನನ್ನ ಕನಸಿನ ಗೂಡು.

--ಮಂಜು ಹಿಚ್ಕಡ್

Friday, September 6, 2013

ಹೋಲಿಕೆ...

ಪ್ರೀಯೆ!
ಅಹಲ್ಯೆ, ಸೀತೆ, ದ್ರೌಪದಿ, ಮಂಡೋದರಿ, ತಾರಾ,
ಈ ಐವರಲಿ, ನಿನ್ಯಾರ ಹೋಲಿಕೆ?

ಅಹಲ್ಯೆ?
ಇಂದ್ರನ ಮೋಸಕ್ಕೆ
ಅವಳ ಪ್ರೇಮದ ಸೋರಿಕೆ!

ಸೀತೆ?
ರಾವಣ ಹೊತ್ತೈದಿದಕೆ
ಇವಳ ಪಾತಿವ್ರತ್ಯದ ತನಿಕೆ!

ದ್ರೌಪದಿ?
ಒಬ್ಬನೊಂದಿಗೆ ಮದುವೆ
ಐವರೊಂದಿಗೆ ಹಂಚಿಕೆ!

ಮಂಡೋದರಿ?
ರಾವಣನ ದುಸ್ಸಾಹಸಕೆ
ಪರಿತಪಿಸಿದವಳಲ್ಲವೇ ಆಕೆ!

ತಾರಾ?
ಗಂಡ ವಾಲಿದ್ದ ಅತ್ತಿಗೆಯ ಮೋಹಕ್ಕೆ,
ಕೊಚ್ಚಿ ಹೋದಳು ಆಕೆ ಚಂದ್ರನ ಸೆಳತಕ್ಕೆ!

ಇನ್ನೂ ಈ ಐವರು ನನಗ್ಯಾಕೆ?
ಇದ್ದರೆ ಸಾಕಲ್ಲವೇ ನಮ್ಮಲ್ಲಿ ಹೊಂದಾಣಿಕೆ.
ನಾನಾಗಿದ್ದರೆ ಸಾಕಲ್ಲವೇ, ಎಂದೆಂದಿಗೂ ನಿನ್ನಾಕೆ
ನಾನು ನಾನಾಗಿದ್ದರೆ ಸಾಕು, ಇನ್ನ್ಯಾಕೆ ಹೋಲಿಕೆ?
ಎಂದು ಉಸುರಿ ಹೊರಟಳು ನನ್ನಾಕೆ,
ತನ್ನ ಕೆಲಸಕೆ!

--ಮಂಜು ಹಿಚ್ಕಡ್

Monday, September 2, 2013

ಬಡವನ ಆಶೆಗಳು..

ಕೊಡಲೇನು ಚಿನ್ನಾ, ಏಕೆ, ಕಳ್ಳರಿಡಲೇನು ಕನ್ನ?
ಕೊಡಲೇನು ರತ್ನ ವೈಡುರ್ಯ? ಸದ್ಯ ನನಗಿಲ್ಲ ಕೂಡಿಡುವ ಅನಿವಾರ್ಯ

ಕೊಡಲೇನು ಸ್ವಲ್ಪ ಹಣ? ಮಾರಿಕೊಳ್ಳಲು ಇಚ್ಛೆಯಿಲ್ಲ ನನ್ನ ಮೈಯನ್ನ
ಬೇಡವೇನು ಓಡಾಡಲು ಕಾರು? ಅದನಿಡಲು ಇರಬೇಕಲ್ಲ ನ್ನನ್ನಲ್ಲಿ ಸೂರು

ಕೈಯಲ್ಲಿದ್ದರೆ ಹುಡಿಯನ್ನ, ಕಲಿಸಲು ಇಲ್ಲ ಸಾರು
ಇನ್ನೂ ನನಗೇತಕೆ, ಈ ಕಾರುಬಾರು

ಹಾಗಿದ್ದರೆ ನಿನಗೆ ಇನ್ನೇನು ಬೇಕು?
ಕೊಡು ದುಡಿಯಲು ಕೆಲಸ ಎಲ್ಲಾ ದಿನಕು

ಕೊಡು ಮೈಮುಚ್ಛಲು ಎರಡು ಜೊತೆ ಬಟ್ಟೆ
ಎರಡೊತ್ತಿಗೆ ಊಟ, ತುಂಬಲು ಈ ಹೊಟ್ಟೆ

ವಾಸಿಸಲು ಕೊಡಲೊಂದು ಚಿಕ್ಕ ಜೋಪಡಿ
ಇದು ಈ ಬಡವನ ಆಶೆಗಳ ಪುಟ್ಟ ಕೈಪಿಡಿ

                --ಮಂಜು ಹಿಚ್ಕಡ್