ಬಾಲ್ಯ:
ಅಂಬೆಗಾಲಿಟ್ಟು ನಡೆಯುವ ಆ ನಿನ್ನ ನಡಿಗೆ
ಕೈ ಬೀಸಿ ಕರೆಯುವುದು ನೋಡುಗರ ಬಳಿಗೆ
ಗಂಡು ಹೆಣ್ಣುಗಳ ನಡುವೆ ನೀ ತಿಳಿದಿಲ್ಲ ವ್ಯತ್ಯಾಸ
ನೀ ಬಯಸುವೆ ಎಲ್ಲರ ಸಹವಾಸ.
ಆಡಿದ್ದೇ ಆಟ, ಕುಣಿದಿದ್ದೇ ನೃತ್ಯ
ನೋಡಿದ್ದೇ ನೋಟ, ನುಡಿಯುವುದೆಲ್ಲವು ಸತ್ಯ
ಹೇಗೆ ತಿರುಗಿದರು ಬಳಕುವುದು ನಿನ್ನ ದೇಹ
ನೋಡಿದ್ದನ್ನೆಲ್ಲ ತಿಳಿದುಕೊಳ್ಳುವ ದಾಹ.
ಜಾತಿಮತ ಗೊತ್ತಿಲ್ಲ, ಮೋಸದ ಅರಿವಿಲ್ಲ
ಬಡತನ, ಸಿರಿತನದ ವ್ಯತ್ಯಾಸ ತಿಳಿದಿಲ್ಲ
ಆಕರ್ಷಿಸುವೆ ಎಲ್ಲರನು, ಮಂದಹಾಸವ ಸೂಸಿ
ಬಳಿ ಕರೆಯುವೆ ನೀ, ಆ ಪುಟ್ಟ ಕೈಗಳನು ಬೀಸಿ.
ಯೌವ್ವನ :
ಎಂದು ನಿನ್ನಲ್ಲಿ ಮೂಡಿತೋ ಯೌವ್ವನ
ಬಾಯಲ್ಲಿ ಬರೀ ಜಾತಿಮತದ ವಚನ
ಬಡತನವ, ಸಿರಿತನವ ತೂಗಿ ನೋಡುವೆ ಈಗ
ಸಿರಿವಂತರಲು, ಸಿರಿವಂತನಾಗುವ ಆವೇಗ.
ಒಮ್ಮೆ ಹತ್ತಿಕ್ಕುವ ಕೋಪ
ಮಗದೊಮ್ಮೆ ಹೊಟ್ಟೆಯುರಿಯ ತಾಪ.
ನಿನ್ನೇಳ್ಗೆಗಾಗಿ ಕತ್ತೆಯ ಸ್ವರೂಪ
ಬದಲಾಯಿಸುವೆ ನೀ ಕ್ಷಣಕ್ಕೊಂದು ರೂಪ.
ಹೆಣ್ಣು, ಮಣ್ಣಿನ ಬಗ್ಗೆ ನಿನಗೆನಿತೋ ಮೋಹ
ತಿಂದು ತೇಗಿದರು, ತಿರಲಾರದಷ್ಟು ದಾಹ
ಬಡವರನು ನೀ ತುಳಿದು ಬದುಕುವ ನೀಚ
ಕಾಣದ ಜಗತ್ತಿಗೆ ನಿನೋರ್ವ ಸಾಚ.
ಮುಪ್ಪು:
ಬೇಡವಾಗಿದ್ದಾಗ ಇದ್ದುದು, ಬೇಕಿದ್ದಾಗ ಇಲ್ಲ
ಹೀಗಾಗುತ್ತದೆ ಎಂದು, ಅಂದು ಯಾವನೋ ಬಲ್ಲ.
ಕಾಲ ಬದಲಾಗಿದೆ, ನಾನಲ್ಲ ಎಂದು ದೂಷಿಸುವ ಯತ್ನ
ಆಗಲಾರದ ಕೆಲಸಗಳಿಗೆ, ಮಾಡುವೆ ನೀ ವ್ಯರ್ಥ ಪ್ರಯತ್ನ.
ಅಂದು ನೀಚನಾಗಿದ್ದರೂ, ಇಂದು ಸಭ್ಯಸ್ತ
ಅಂದು ಎನ ಅನುಭವಿಸಿದರು, ನೀ ಸಭ್ಯ ಗ್ರಹಸ್ತ.
ಬರೀಯ ಕನವರಿಕೆಯಲಿ, ಕಾಲಕಳೆಯುವ ವಯಸ್ಸು
ಕಳೆದುದರ ಚಿಂತಿಸಿ, ನೆನೆಯುವುದು ಮನಸು.
ಮುಪ್ಪು ಸಮೀಪಿಸುತಲಿ, ದೈವ ಕಾಣುವ ಬಯಕೆ
ಈಗ ತೀರಿಸಿದರೇನು ಬಂತು, ದೈಯ್ಯದ ಹರಕೆ
ಮನೆ ಹತ್ತಿ ಉರಿದಮೇಲೆ, ಬಾವಿ ತೆರೆದರೆ ಏನು?
ಎಲ್ಲ ಮುಗಿದ ಮೇಲೆ, ಚಿಂತಿಸಿ ಫಲವೇನು?