Monday, April 28, 2014

ಗೆಳತಿ ನಿನ್ನ ರೂಪ!

ಗೆಳತಿ,
ನಿನ್ನ ರೂಪ
ಆ ಹುಣೀಮೆಯ
ಚಂದಿರನಂತಿರಬೇಕಿಲ್ಲ
ಸ್ವಂತದ್ದಾದಿದ್ದರೆ ಸಾಕು,

ನೆನಪಿರಲಿ,
ಹುಣ್ಣಿಮೆಯ ರೂಪವೂ
ಆತನ ಸ್ವಂತದ್ದಲ್ಲ,
ಬಾಡಿಗೆಗೆ ತಂದದ್ದು.

ಮಂಜು ಹಿಚ್ಕಡ್

Wednesday, April 23, 2014

ಬಾಡಿತೇಕೆ ಮುಖವು ನಿನ್ನದು?

ಬಾಡಿತೇಕೆ ಮುಖವು ನಿನ್ನದು
ನನ್ನ ಪ್ರೀತಿಯು ಸಾಲದೇ
ಕುಳಿತೆಯೇಕೆ ಹೀಗೆ ಸುಮ್ಮನೆ
ನಗುವ ಮೋರೆಯ ತೋರದೇ.

ಅಳುವ ಮರೆಸಿ, ಒಲವ ಬೆರೆಸಿ
ನಗುವ ತೋರಲು ಬಾರದೇ
ಒಲವಿಗಾಗಿ, ನಲುವಿಗಾಗಿ
ಒಮ್ಮೆ ಮನವು ಬಾಗದೇ.

ಹಣಕೆ ಒಲವ, ಕ್ಷಣಕೆ ಮನವ
ಮಾರಿ ಕೂರಲು ಸಾದ್ಯವೇ
ಹಣವ ವ್ಯಯಿಸಿ, ಬೆವರ ಹನಿಸಿ
ಪ್ರೀತಿ ಪಡೆಯಲು ಸಾದ್ಯವೇ

ಕ್ಷಣಕೂ ಮೀರದ, ಕ್ಷಣಿಕ ವಿರಹವ
ಒಮ್ಮೆ ತಾಳಲು ಆಗದೇ
ಒಂದು ಕ್ಷಣದ ನೋಟವಿರದೇ
ಬದುಕು ಮುಂದೆ ಸಾಗದೇ

ಕ್ಷಣವ ಮರೆತೆನು, ಹಣವ ಮರೆತನು
ನಿನ್ನ ನಾನು ಮರೆಯನು
ಬಯಸಿದವಳ ಮರೆತು ಬಾಳಲು
ಮೆಚ್ಚಿ ಹರಸುವನೇನು ಆತನು?

--ಮಂಜು ಹಿಚ್ಕಡ್

Tuesday, April 22, 2014

ಪ್ರೀತಿ!

ಸುಮ್ಮನೆ ಕಣ್ಣೋಟಕ್ಕೆ ಹುಟ್ಟಿದರೂ
ಬಿಮ್ಮನೆ ಮನಸಲಿ ಗಟ್ಟಿಯಾಗಿ,
ಸುಖಾ ಸುಮ್ಮನೆ ಕುಳಿತು
ಆಗಾಗ ಬಯಸಿ,
ಕಾಡುವುದೇ - ಈ ಪ್ರೀತಿ..

--ಮಂಜು ಹಿಚ್ಕಡ್


Saturday, April 19, 2014

ದುರ್ಗಾಸ್ತಮಾನ.

ಅದೆಷ್ಟೋ ವರ್ಷಗಳಿಂದ ಓದಬೇಕು, ಓದಬೇಕು ಎಂದಿಟ್ಟುಕೊಂಡ "ದುರ್ಗಾಸ್ತಮಾನ" ಕಾದಂಬರಿಯನ್ನು ಇದೀಗ ತಾನೆ ಓದಿ ಮುಗಿಸಿದೆ. ಮದಕರಿನಾಯಕ ಮತು ಚಿತ್ರದುರ್ಗದ ಪತನದ ವಸ್ತುವೇ ತ.ರಾ.ಸು ಅವರ ದುರ್ಗಾಸ್ತಮಾನ ಕಾದಂಬರಿ. ಕಾದಂಬರಿ ಕೇವಲ ಮದಕರಿನಾಯಕ ಮತ್ತು ಚಿತ್ರದುರ್ಗಗಳಿಗಷ್ಟೇ ಸೀಮಿತವಾಗಿರದೇ, ಮೈಸೂರಿನಿಂದ ಪೂನಾದವರೆಗಿನ ಅಂದಿನ ಜನಜೀವನ, ಸಾಮಾಜಿಕ ಸ್ಥಿತಿಗತಿಗಳು, ಅಂದಿನ ರಾಜಕಾರಣಗಳ ತಂತ್ರಗಳು, ರಾಜಕೀಯ ಮಸಲತ್ತುಗಳು, ರಣ ತಂತ್ರಗಳು, ಆಂತರೀಕ ಕಲಹಗಳು ಹೀಗೆ ಒಂದಲ್ಲ ಎರಡಲ್ಲ ನೂರಾರು ವಸ್ತುಗಳನ್ನು ಒಳಗೊಂಡಿವೆ. ಕಾದಂಬರಿ ಓದುತ್ತಾ ಕುಳಿತರೆ ಇದು ಹಿಂದೆ ನಡೆದದ್ದಲ್ಲ ನಮ್ಮ ಮುಂದೆ ನಡೆಯುತ್ತಿದೆ ಎನ್ನುವ ರೀತಿಯಲ್ಲಿ ಕಾದಂಬರಿಯನ್ನು ಸೃಷ್ಟಿಸಿದ್ದಾರೆ ತ.ರಾ.ಸು ಅವರು. ನೀವು ಇದುವರೆಗೆ ಈ ಕಾದಂಬರಿಯನ್ನು ಒದಿಲ್ಲವಾದಲ್ಲಿ ಒಮ್ಮೆ ಓದಿ.



--ಮಂಜು ಹಿಚ್ಕಡ್ 

Tuesday, April 15, 2014

ಬಾಡಿಗೆ

ನನ್ನಾಕೆ ಕೇಳಿದಳು,
ನನ್ನೂರಿಗಿಂತ
ಬೆಂಗಳೂರಲ್ಲಿ ತುಟ್ಟಿ ಅಲ್ಲವೇ
ಈ ಉಡುಗೆ?

ಅದಕ್ಕೆ ನಾನಂದೆ,
ಎಣಿಸಿ, ಎಣಿಸಿ
ಕಟ್ಟಬೇಕಲ್ಲವೇ ಆತ
ಪ್ರತೀ ತಿಂಗಳು ಬಾಡಿಗೆ,
ಅದಕಾಗಿ ತುಟ್ಟಿ
ಈ ಉಡುಗೆ.

--ಮಂಜು ಹಿಚ್ಕಡ್

Sunday, April 13, 2014

ಮಾತು-ಮೌನ!

ಮಾತಿಲ್ಲ, ಕತೆಯಿಲ್ಲ
ಏಕಿನಿತು ಮೌನ - ನಲ್ಲೆ?

ಮಾತಿಗಿಲ್ಲದ ಬೆಲೆ
ಮೌನಕ್ಕಿರುವಾಗ
ಮಾತಿಗಿಂತ,
ಮೌನ ಲೇಸಲ್ಲವೇ -ನಲ್ಲ?

--ಮಂಜು ಹಿಚ್ಕಡ್

Saturday, April 12, 2014

ಗಂಡ ಹೆಂಡಿರ ಜಗಳ, ಕುಡಿದಿದ್ದು ಇಳಿಯುವ ತನಕ!

ಅದೊಂದು ಚಿಕ್ಕದಾದ ಬಡ ಕುಟುಂಬ, ಗಂಡ ಹೆಂಡತಿ, ಎರಡು ಮಕ್ಕಳು. ಆರತಿಗೊಬ್ಬ ಮಗಳು, ಕಿರುತಿಗೊಬ್ಬ ಮಗ. ಊರ ಕೇರಿಯ ಪಕ್ಕದಲ್ಲಿ ಚಿಕ್ಕ ಗುಡಿಸಲಲ್ಲಿ ವಾಸ. ಗಂಡ ಹೆಂಡತಿ ಇಬ್ಬರ ಉದ್ಯೋಗ ಒಂದೇ, ಕೂಲಿ ಕೆಲಸ. ಗಂಡನದು ಕಲ್ಲು ಒಡೆಯುವ ಕೆಲಸವಾದರೆ, ಹೆಂಡತಿಯದು ಒಡೆದ ಕಲ್ಲುಗಲನ್ನು ಜೋಡಿಸಿ ಇಡುವುದು. ಇಬ್ಬರ ಕೆಲಸವು ಒಂದೇ ಕಲ್ಲು ಕೋರೆಯಲ್ಲಿ ಆದ್ದರಿಂದ ಒಟ್ಟಿಗೆ ಹೋಗಿ ಬರುವುದು ಒಂದು ವಾಡಿಕೆ. ತುಂಭಾ ಅನೋನ್ಯವಾದ ಧಾಂಪತ್ಯ ಜೀವನ. ಅವರು ಜೊತೆಯಲ್ಲಿ ಕೆಲಸ ಮಾಡುವಗಾಗಲಿ, ಅಥವಾ ರಸ್ತೆಯಲ್ಲಿ ಒಟ್ಟಿಗೆ ಕೆಲಸಕ್ಕೆ ಹೋಗುವಗಾಗಲಿ ಯಾರೇ ಈ ಜೋಡಿಯನ್ನ ನೋಡಿದರೂ ಅಂದು ಕೊಳ್ಳುವುದಿಷ್ಟೆ ಗಂಡ ಹೆಂಡತಿ ಅಂದರೆ ಹೀಗಿರಬೇಕು ಅಂಥಾ. ಇವರು ಕೈ ಕೈ ಹಿಡಿದು ಓಡಾಡುವುದನ್ನಾಗಲೀ, ಅಥವಾ ಕೆಲಸ ಮಾಡುವಾಗ ಅವರಾಡುವ ಸರಸ ಸಲ್ಲಾಪಗಳನ್ನಾಗಲೀ ಆಲಿಸಿದವರಾರು ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ ಎಂದು ಹೇಳಲಾರರು. ನೋಡಿದಾಗ ಅನ್ನಿಸುವುದಿಷ್ಟೇ, ಒಂದೋ ಮದುವೆಗಾಗಿ ಪ್ರಯತ್ನಿಸುತ್ತಿರುವ ನವ ಪ್ರೇಮಿಗಳಿರಬೇಕು, ಇಲ್ಲಾ ಮದುವೆಯಾಗಿ ಒಂದೆರಡು ವಾರ ಕಳೆದಿರಬೆಕೆಂದು. ನನಗೂ ಒಂದೆರಡು ಬಾರಿ ಈ ಜೋಡಿಯನ್ನ ನೋಡಿದಾಗ ಹಾಗೆನಿಸಿದ್ದು ಸತ್ಯ.
ಇಷ್ಟೊಂದು ಅನೋನ್ಯತೆ ಇದ್ದರೂ ಅವರ ಕುಟುಂಬದಲ್ಲಿ ಒಂದು ಸಮಸ್ಯೆ ಅಥವಾ ಕೊರತೆ ಇದೆ ಅನ್ನುವ ಸತ್ಯ ಅರಿವಾಗಿದ್ದು ಮೊನ್ನೆ ಮೊನ್ನೆಯೇ. ಗಂಡನಿಗೆ ದಿನಾ ರಾತ್ರಿ ಕುಡಿಯುವ ಚಟ. ಆ ಒಂದು ಕೆಟ್ಟ ಹವಸವೇ ಈ ಒಂದು ಸಮಸ್ಯೆಯ ಮೂಲ ಕಾರಣ. ಬಹುಷಃ ಅದೊಂದು ಇಲ್ಲಾ ಅಂತಿದ್ದರೆ, ಆ ಸಂಸಾರ ಜಗತ್ತಿನ ಅತ್ಯಂತ ಸುಖಿ ಸಂಸಾರಗಳಲ್ಲಿ ಒಂದು ಅನ್ನಬಹುದಿತ್ತೆನೋ. ದಿನಾ ರಾತ್ರಿ ಕುಡಿದು ಬರುವ ಗಂಡ, ಸುಮ್ಮನೆ ತಿಂದು ಬಿದ್ದಿರುವುದಿಲ್ಲ. ಸದಾ ಒಟಗುಡುವ ಬಾಯಿ, ಮನಸ್ಸಿಗೆ ತೋಚಿದ್ದನ್ನೆಲ್ಲ ಒದರುವುದು. ಅವನು ಒದರುತ್ತಿದ್ದಾನೋ, ಅವನೊಳಗೆ ಹೊಕ್ಕ ಎಣ್ಣೆ ಒದರಿಸುತ್ತದೋ. ಒಟ್ಟಿನಲ್ಲಿ ಸುಮ್ಮನಿರಲಾರದು. ಇದೇ ವಿಷಯವಾಗಿ, ದಿನಾ ರಾತ್ರಿ ಗಂಡ ಹೆಂಡಿರ ನಡುವೆ ಜಗಳ , ಕಿತ್ತಾಟ, ಹೊಡೆದಾಟ. ಏನನ್ನು ಅರಿಯದ ಅಸಾಹಯಕ ಮಕ್ಕಳು. ಅವರ ಪಾಡನ್ನು ಕೇಳುವವರಿಲ್ಲ. ಅದೇನೋ ಅಂತಾರಲ್ಲ ಗಂಡ ಹೆಂಡಿರ ಜಗಳಕ್ಕೆ ಕೂಸು ಬಡವಾಯಿತು ಅಂತಾರಲ್ಲ ಆ ರೀತಿಯ ಸ್ಥಿತಿ ಮಕ್ಕಳದು.
ಇಷ್ಟೆಲ್ಲಾ ನಡೆದರೂ, ಮಾರನೆ ದಿನ ಮತ್ತದೆ ಅನೋನ್ಯತೆ, ನಿನ್ನೆ ರಾತ್ರಿ ಏನು ನಡೆದಿಲ್ಲ ಎನ್ನುವ ಭಾವನೆ. ಕುಡಿದ ಗಂಡನ ಮತ್ತು ಇಳಿದೊಡನೆ ಮತ್ತೆ ಹೆಂಡತಿಯ ಮೇಲಿನ ಪ್ರೀತಿ ಉಕ್ಕೇರುತ್ತದೆ. ಹೆಂಡತಿಯು ಅಷ್ಟೇ, ಮತ್ತಿನಲ್ಲಿ ಗಂಡ ಮಾಡಿದ್ದನ್ನೆಲ್ಲ ಕ್ಷಮಿಸಿ, ಮತ್ತೆ ತನ್ನ ಪ್ರೀತಿಯ ಧಾರೆಯನ್ನ ಸುರಿಸುತ್ತಾಳೆ. ಮತ್ತೆ ಒಂದಾಗಿ ಕೈ ಕೈ ಹಿಡಿದು ಕೆಲಸಕ್ಕೆ ಹೋಗುತ್ತಾರೆ. ಮತ್ತದೇ ಸರಸ, ಸಲ್ಲಾಪ. 'ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ' ಅನ್ನುವ ಗಾದೆ ಇದೆ. ಆದರೆ ಇವರ ಜೀವನದಲ್ಲಿ ಹಾಗಲ್ಲ, 'ಗಂಡ ಹೆಂಡಿರ ಜಗಳ ಕುಡಿದದ್ದು ಇಳಿಯುವ ತನಕ' ಎಂದರೆ ತಪ್ಪಾಗಲಾರದು.
ನಮಗೆ ಅನಿಸಬಹುದು ಸಂಸಾರ ಎಷ್ಟು ಚೆನ್ನಾಗಿದೆ, ಗಂಡ ಹೆಂಡಿರ ನಡುವೆ ಅದೆಂತಹ ತಿಳುವಳಿಕೆ ಇದೆ, ಇಂತಹ ಹೆಂಡತಿಯನ್ನು ಪಡೆದ ಆತನೇ ಅದ್ರಷ್ಟವಂತ ಎಂದು. ಆದರೆ ನನಗನ್ನಿಸಿದ್ದು ಇಷ್ಟೇ, ಗಂಡ ಹೆಂಡತಿ ಎಲ್ಲೋ ಒಂದು ಕಡೆ ತಪ್ಪು ಮಾಡುತಿದ್ದಾರೆ ಎಂದು. ಅಷ್ಟು ಅನೋನ್ಯವಾಗಿರುವ ಹೆಂಡತಿ ಮನೆಗೆ ಬರುವಾಗ ಗಂಡನನ್ನ ಪುಸಲಾಯಿಸಿ , ಮತ್ತೆ ಹೆಂಡದಂಗಡಿಗೆ ಹೋಗದಂತೆ ತಡೆಯಲು ಪ್ರಯತ್ನಿಸಬೇಕು. ಗಂಡನಿಗೆ ಕುಡಿದುದ್ದು ಇಳಿದ ಮೇಲೆ ಬುಧ್ದಿ ಹೇಳಬೇಕು. ಕುಡಿದ ಅಮಲಿನಲ್ಲಿ ಆತ ಮಾಡಿದ ತಪ್ಪುಗಳನ್ನು ಸಾವಧಾನವಾಗಿ ತಿಳಿಸಿ ಹೇಳಬೇಕು. ಗಂಡನು ಅಷ್ಟೇ, ತಾನು ಮಾಡಿದ ತಪ್ಪುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ತಾನು ಹೀಗೆ ಕುಡಿತವನ್ನು ಮುಂದುವರಿಸಿದ್ದಲ್ಲಿ, ತನ್ನ ಸಂಸಾರ ಹಾಳಾಗುತ್ತದೆ, ತನ್ನ ಆರೋಗ್ಯ ಕೆಡುತ್ತದೆ, ಹೆಂಡತಿ ಮಕ್ಕಳು ಬೀದಿಗೆ ಬರುತ್ತಾರೆ ಅನ್ನುವ ನೈಜತೆಯನ್ನ ಅರ್ಥ ಮಾಡಿಕೊಳ್ಳಬೇಕು.
ಇದು ಕೇವಲ ಈ ಒಂದು ಸಂಸಾರಕ್ಕೆ ಅನ್ವಯವಾಗುವುದಿಲ್ಲ. ಜಗತ್ತಿನಲ್ಲಿ ಇಂತಹ ಅದೆಷ್ಟು ಸಂಸಾರಗಳಿವೆಯೋ. ಬಹುತೇಕ ಇಂತಹ ಎಲ್ಲಾ ಸಂಸಾರಗಳಲ್ಲಿರುವ ಮೂಲ ಸಮಸ್ಯೆ ಎಂದರೆ ಕುಡಿತ. ಬಹುಷಃ ಅದೊಂದು ಇಲ್ಲಾ ಅಂತಾಗಿದ್ದರೆ ಇವರ ಸಂಸಾರ ಸಧಾ ಸುಖಿ ಸಂಸಾರವಾಗುವುದರಲ್ಲಿ ಎರಡು ಮಾತಿಲ್ಲ.
--ಮಂಜು ಹಿಚ್ಕಡ್ 

Thursday, April 10, 2014

ಸ್ಪರ್ಧೆ-ಪ್ರತಿಸ್ಪರ್ಧೆ!

ಸ್ಪರ್ಧೆಗೆ ಪ್ರತಿಸ್ಪರ್ಧೆ ಎನ್ನದಿರು ಚಿನ್ನ
ಯೋಚಿಸು ಮಗದೊಮ್ಮೆ ಸ್ಪರ್ಧಿಸುವ ಮುನ್ನ
ಬದುಕಿನ ಪಯಣಕೆ ಸ್ಪರ್ಧೆಯಲ್ಲ ಪ್ರೀತಿಯದೇ ಸಾರಥ್ಯ
ಅರ್ಥಮಾಡಿಕೊಂಡರೆ ಸಾಕು ನಮ್ಮ ಬದುಕು ಸಾಹಿತ್ಯ.

--ಮಂಜು ಹಿಚ್ಕಡ್

Thursday, April 3, 2014

ಕವಿ ಬರೆದ ಕವಿತೆಗಳು!

ಕವಿಯ ಮನದೊಳಗೆ ಮೂಡಿ
ಹೊರ ಬಂದ ಕವಿತೆಗಳೆಲ್ಲವೂ
ಒಂದೇ ತೆರನಾಗಿಲ್ಲದಿದ್ದರೂ
ಬರೆದ ಕವಿಗೆ ಎಲ್ಲವೂ ಒಂದೇ

ಕವಿ ಎಲ್ಲವನು ಪ್ರೀತಿಸಬೇಕು
ತಾಯಿ ತನ್ನ ಒಡಲೊಳಗೆ
ಹುಟ್ಟಿದ ಎಲ್ಲಾ ಮಕ್ಕಳನು
ಪ್ರೀತಿಸುವಂತೆ

--ಮಂಜು ಹಿಚ್ಕಡ್

Tuesday, April 1, 2014

ನಿನ್ನ ಪ್ರೀತಿ

ಎಲೆಯ ಸರಿಸಿದರಷ್ಟೇ ತೋರುವ
ಎಲೆಯ ಮರೆಯ ಕಾಯಿಯಂತೆ
ನಗುವ ತುಟಿಯ ಪರದೆಯ
ಸರಿಸಿದರಷ್ಟೇ ತೋರುವುದು
ನಿನ್ನಯ ಪ್ರೀತಿ.

--ಮಂಜು ಹಿಚ್ಕಡ್