ಮೊನ್ನೆ ಗುರುವಾರ ಮಧ್ಯಾಹ್ನ ಕಛೇರಿಯಲ್ಲಿ ಊಟ ಮುಗಿಸಿ ನನ್ನ ಜೊತೆ ಕೆಲಸ ಮಾಡುವ ಮೂವರು ಸಹೋದ್ಯೋಗಿಗಳೊಂದಿಗೆ, ಕಛೇರಿಯ ಬಲಬಾಗದೆಡೆ ಸುತ್ತಾಡಲು ಹೊರೆಟೆವು. ಕಛೇರಿಯಲ್ಲಿ ಊಟ ಮಾಡಿದ ಮೇಲೆ ಸಮಯವಿದ್ದಲ್ಲಿ ಒಂದು ಸುತ್ತು ಸುತ್ತಾಡಿ ಬರುತ್ತಿದ್ದೆವು. ತಿಂದ ಅನ್ನ ಜೀರ್ಣವಾಗಿ, ನಿದ್ದೆ ಸ್ವಲ್ಪ ದೂರವಾಗಲಿ ಎಂದು. ನಮ್ಮ ಕಛೇರಿಯ ಬಲಬಾಗಲ್ಲಿ ವಾಸವಾಗಿರುವರೆಲ್ಲ ದೊಡ್ಡ ಶ್ರೀಮಂತರೇ. ಹಾಗಾಗಿ ಅಲ್ಲೆಲ್ಲಾ ದೊಡ್ಡ ದೊಡ್ಡ ಮನೆಗಳು, ಮನೆಗಳ ಮುಂದೆ ಚಿಕ್ಕ ಚಿಕ್ಕ ಹೂದೋಟಗಳು. ಮನೆಯ ಜನರನ್ನು ನೋಡಲಾಗದಿದ್ದರು ಅವರು ಸಾಕಿ ಬೆಳೆಸಿರುವ ವಿವಿಧ ತಳಿಗಳ ಡೊಗಿಗಳನ್ನು, (ಕ್ಷಮಿಸಿ, ನಾಯಿಗಳು ಅಂದರೆ ತಪ್ಪಾಗುತ್ತದೆ ಎಂದು ಮುದ್ದಾಗಿ ಡೊಗಿಗಳು ಎಂದು ಕರೆದಿದ್ದೇನೆ. ಎಷ್ಟೇ ಅಂದರೂ ಅವು ಸಿರಿವಂತರ ಮನೆಯ ನಾಯಿಗಳಲ್ಲವೇ?) ಆಗಾಗ ಅಲ್ಲೊಮ್ಮೆ, ಇಲ್ಲೊಮ್ಮೆ ಓಡಾಡುವ, ಬಿ.ಎಮ್.ಡಬ್ಲ್ಯೂ, ಬೆಂಜ್, ಆಡಿಯಂತಹ ಐಶಾರಾಮಿ ಕಾರುಗಳು, ಮನೆಯ ಮುಂದೆ ಮನೆಯವರ ಹೆಸರು, ಹುದ್ದೆ, ಅವರ ಓದು ಮುಂತಾದವುಗಳನ್ನು ತಿಳಿಸಿ ಅಮೃತ ಶಿಲೆಯಲ್ಲಿ ಕೆತ್ತಿ ಬರೆದಿರುವ ಚಿಕ್ಕ ಫಲಕ, ಆಗಾಗ ಓಡಾಡುವ ವಾಹನಗಳ ಶಬ್ದವನ್ನು ಬಿಟ್ಟರೆ ಉಳಿದೆಲ್ಲ ಹೊತ್ತು ಬೇರೆ ಯಾವ ಶಬ್ದಗಳು ಕೇಳಲಾರದಷ್ಟು ಮೌನ. ಮರಗಿಡಗಳಿಂದ ಕೂಡಿದುದರಿಂದ ಬಿಸಿಲು ಕಾಣದ ರಸ್ತೆ, ವಾಹನ ಓಡಾಟ ಕಡಿಮೆ ಇದ್ದುದರಿಂದ, ಅಲ್ಲಲ್ಲಿ ನಿಂತ ವಾಹನಗಳಲ್ಲಿ ಆಗಾಗ ಕಾಣ ಸಿಗುವ ನವ ಪ್ರೇಮಿಗಳ ಸರಸ-ಸಲ್ಲಾಪಗಳು (ಮುದ್ದಣ್ಣ-ಮನೋರಮೆಯರ ಸರಸ-ಸಲ್ಲಾಪಗಳನ್ನೂ ಮೀರಿಸಿದ್ದು, ವ್ಯತ್ಯಾಸವೆಂದರೆ ಒಮ್ಮೊಮ್ಮೆ ಮುದ್ದಣ್ಣನು, ಒಮ್ಮೊಮ್ಮೆ ಮನೋರಮೆಯೂ ಬದಲಾಗುತ್ತಿರುವುದರಿಂದ, ಮುದ್ದಣ್ಣ ಮನೋರಮೆಗೆ ಹೋಲಿಸಲಾಗದು), ಹೀಗೆ ವರ್ಣಿಸುತ್ತಾ ಹೋದರೆ ಇದು ಇಷ್ಟಕ್ಕೆ ಮುಗಿಯುವಿದಿಲ್ಲ. ಅಲ್ಲಿ ಒಂದು ಸುತ್ತು ಸುತ್ತಿ ಬಂದರೆ ಸಾಕು, ಕಣ್ಣು ತಂಪಾಗಿ, ಮನಸು ಹಿತವಾಗಿ, ದೇಹ ಉಲ್ಲಾಸಗೊಂಡಿರುತ್ತದೆ.
ಕಳೆದ ಆರು ವರ್ಷಗಳಲ್ಲಿ ಅದೆಷ್ತು ಬಾರಿ ಹೀಗೆ ಸುತ್ತಾಡಿದ್ದೆವೋ ಗೊತ್ತಿಲ್ಲ. ಪ್ರತಿ ಸಾರಿ ಸುತ್ತುವಾಗಲೂ ಒಂದೊಂದು ಹೊಸ ಅನುಭವ. ಮೊನ್ನೆ ಗುರುವಾರ ನಡೆದ ಘಟನೆ ಮತ್ತು ಅನುಭವಗಳೆ ಈ ಲೇಖನದ ಹುಟ್ಟಿಗೆ ಒಂದು ಕಾರಣ. ನಾವು ಸುತ್ತಾಡುವ ರಸ್ತೆಯ ಪಕ್ಕದಲ್ಲಿ ಒಂದು ಮನೆ. ಇದುವರೆಗೂ ಆ ಮನೆಯಲ್ಲಿ ಯಾರನ್ನೂ ನೋಡಿರಲಿಲ್ಲ. ಆದರೆ ಮೊನ್ನೆ ಗುರುವಾರ ಆ ಮನೆಯಲ್ಲೂ ಜನರಿದ್ದಾರೆ ಎಂದು ನೋಡುವ ಭಾಗ್ಯ ಆಕಸ್ಮಿಕವಾಗಿ ಸಿಕ್ಕಿ ಬಿಟ್ಟಿತು. ಅದು ಮನೆಯ ಆವರಣದಲ್ಲಿ ನಿಂತು, ರಸ್ತೆಯಲ್ಲಿ ಪಟಾಕ್ಷಿ ಹೊತ್ತಿಸಿ ಎಸೆದು, ಅದು ಸ್ಪೋಟಗೊಳ್ಳುವವರೆಗೂ ಅದರ ಶಬ್ಧ ತನಗೆಲ್ಲಿ ಕೇಳಿ ಬಿಡತ್ತದೋ ಎಂದು ಕಿವಿ ಮುಚ್ಚಿನಿಂತಿರುವ ಬಾಲಕನ ರೂಪದಲ್ಲಿ. ಆತನಿಗೆ ಬಹುಷಃ ಹತ್ತು ಹದಿನೈದರ ಪ್ರಾಯವಿರಬಹುದು.
ಅಂದು ನಾವು ನಮ್ಮ ಕಷ್ಟ ಸುಖಗಳನ್ನು ಮಾತನ್ನಾಡಿಕೊಳ್ಳುತ್ತಾ ಸಾಗುತ್ತಿರುವಾಗ, ಆ ಹುಡುಗ ಮರೆಯಲ್ಲಿ ನಿಂತಿರುವುದನ್ನು ಗಮನಿಸಿದರು, ಆತ ಏನು ಮಾಡುತ್ತಿರಬಹುದೆಂದು ಗಮನಕ್ಕೆ ಬರಲಿಲ್ಲ. ಆತ ಆಗಲೇ ಪಟಾಕ್ಷಿ ಉರಿಸಿ ರಸ್ತೆಗೆ ಎಸೆದಿದ್ದರೂ ಆತನ ಕಡೆ ಗಮನವಿದ್ದುದರಿಂದ ನಮ್ಮ ಕಾಲಬಳಿಯೇ ಇದ್ದ ಪಟಾಕ್ಷಿಯ ಕಡೆ ಗಮನವಿರಲಿಲ್ಲ. ಆತನು ಕೂಡ ನಮ್ಮನ್ನು ನೋಡುತ್ತಿದ್ದರೂ ನಮ್ಮನ್ನು ಎಚ್ಛರಿಸಲಿಲ್ಲ. ಒಮ್ಮೆ ಢಂ! ಎನ್ನುವ ಶಬ್ದ ಪಟಾಕ್ಷಿಯಿಂದ ಕೇಳಿ ಬಂದರೆ, ಹೋ! ಅನ್ನುವ ಉದ್ಗಾರ ಆ ಹುಡುಗನ ಬಾಯಿಂದ ಕೇಳಿ ಬಂತು. ಅದನ್ನು ನಿರೀಕ್ಷಿಸದ ನಮಗೆ ಆತಂಕ, ಉಧ್ವೇಗ, ಕೋಪ, ಭಯ ಎಲ್ಲವೂ ಒಟ್ಟಿಗೆ ಹರಿದು ಬಂದವು. ಅನಿರೀಕ್ಷಿತವಾಗಿ ಇಂತಹ ಘಟನೆಗಳು ಸಂಭವಿಸಿದ್ದರಲ್ಲಿ ಯಾರಿಗಾದರೂ ಹೀಗಾಗುವುದು ಸಹಜವೇ. ಪುಣ್ಯಕ್ಕೆ ನಮ್ಮಲ್ಲಿ ಯಾರಿಗೂ ಹೃದಯ ಸಂಭಂದಿ ಕಾಯಿಲೆಗಳಿರಲಿಲ್ಲ. ಹಾಗೇನಾದರೂ ಇದ್ದರೆ ಬಹುಷಃ ಒಂದು ವಿಕೇಟ್ ಅಲ್ಲಿಯೇ ಹಿಟ್ ವಿಕೇಟ್ ಆಗಿ ಭೂಲೋಕ ಬಿಟ್ಟು ಹೋಗುತಿತ್ತೇನೋ. ಆದರೆ ಹಾಗಾಲಿಲ್ಲ ಅದೇ ನಮ್ಮ ಪುಣ್ಯ. ನಮ್ಮ ಸಹೋದ್ಯೋಗಿಯೊಬ್ಬರಿಗೆ ಆಗಲೇ ಕೋಪವುಕ್ಕಿ ಬಂದು, ಆ ಹುಡುಗನಿಗೆ,
"ಯಾಕೆ ರಸ್ತೆಯಲ್ಲಿ ಜನ ಬರುವುದು ನಿನ್ನ ಕಣ್ಣಿಗೆ ಕಾಣುವುದಿಲ್ಲವೇ?" ಎಂದು ಬೆಂಗಳೂರಿನ ಇಂದಿನ ಆಡು ಭಾಷೆಯಾದ ಇಂಗ್ಲೀಷಿನಲ್ಲಿಯೇ ಕೇಳಿ ಬಿಟ್ಟರು.
ಆ ಹುಡುಗನೇನು ಕಡಿಮೆ ಇರಲಿಲ್ಲ. ನರ್ಸರಿಗಿಂತ ಮೊದಲೇ, ಬೇರೆ ಏನನ್ನು ಕಲಿಯದಿದ್ದರೂ ಇಂಗ್ಲೀಷನ್ನು ಕಲಿಯುವ ಇತರ ಬೆಂಗಳೂರು ಹುಡುಗರಂತೆ ಆತನು ಇಂಗ್ಲೀಷನ್ನು ಕಲಿತಿದ್ದವ ಆತ. "ಯಾಕೆ ನೀವು ಈ ರಸ್ತೆಯಲ್ಲಿ ನಡೆದು ಬರುವಾಗ ಯಾಕೆ ಸುಮ್ಮನೆ ನಡೆದು ಬರುತ್ತಿರಾ? ಆ ಕಡೆ, ಈ ಕಡೆ ನೋಡಿಕೊಂಡು ಬರಲಾಗುವುದಿಲ್ಲವೇ? ನಾನು ನೀವು ಬರುವುದಕ್ಕಿಂತ ಮೊದಲೇ ಇಲ್ಲಿ ನಿಂತು ಪಟಾಕ್ಷಿ ಸಿಡಿಸುತ್ತಿದ್ದೇನೆ. ನೀವು ನಂತರ ಬಂದವರು ನೋಡಿ ಬರಬೇಕು" ಎಂದ, ಅದು ಅಮೇರಿಕಾದ ಶೈಲಿಯಲ್ಲಿ. ಎಂತಹ ನಯ ವಿನಯ ಎನಿಸಿತು ನನಗೆ.
ನಮ್ಮ ಸಹೋದ್ಯೋಗಿಗಳೆನು ಕಡಿಮೆಯೆ, ಅದೂ ಆ ಹುಡುಗನ ಮುಂದೆ, "ಏನೋ ಇದು, ರಸ್ತೆಯಲ್ಲಿ ಜನರು ಗಾಡಿಗಳು ಓಡಾಡುತ್ತಿರುತ್ತವೆ, ನೋಡಿ ಎಸೆಯುವುದನ್ನು ಬಿಟ್ಟು ಹೀಗೆಲ್ಲಾ ಮಾತನ್ನಾಡುತ್ತೀಯಾ? ಎರಡು ಕೊಡಲೇನು?" ಎಂದು ಗದರಿಸಿ ಮುಂದೆ ಹೋದರು.
ಆತ ತಕ್ಷಣ ಮನಸ್ಸಿನಲ್ಲಿಯೇ ಬಯ್ದು ಕೊಳ್ಳುತ್ತಾ ಮನೆಯ ಒಳಗೋಡಿದ. ಮನೆಯಿಂದ ಯಾವುದೇ ಶಬ್ಧಗಳು ಕೇಳಿಬರಲಿಲ್ಲ. ಬಹುಷಃ ಮನೆಯಲ್ಲಿ ಬೆಂಗಳೂರಿನ ಇತರ ಬಹುತೇಕ ಮಕ್ಕಳಂತೆ ಈತನು ಒಂಟಿ ಎನಿಸಿ ಮರುಕ ಹುಟ್ಟಿತು. ನನಗೆ ಆತನ ವರ್ತನೆ ನೋಡು ಆಶ್ಚರ್ಯವೆನಿಸಲಿಲ್ಲ. ಅದು ಆತನ ತಪ್ಪು ಅಲ್ಲ. ಆತನನ್ನು ಹುಟ್ಟಿಸಿ ಬೆಳೆಸಿದವರು ತಪ್ಪು ಅನ್ನಿಸಿತು. ಆತನ ತಂದೆ ತಾಯಿಯರು, ಬೆಂಗಳೂರಿನ ಇತರ ತಂದೆ ತಾಯಿಯರಂತೆ ಹಣ ಪ್ರತಿಷ್ಟೆಯ ಬೆನ್ನು ಹತ್ತಿ ಹೋದುದರ ಪರಿಣಾಮವೇ ಆ ಮಗುವಿನ ವರ್ತನೆ. ಇಂದು ನಮಗೆ ಹಣ ಪ್ರತಿಷ್ಟೆಗಳೇ ಮುಖ್ಯವಾಗಿ ಬಿಟ್ಟಿವೆ. ಅವುಗಳ ಮುಂದೆ ನಾವು ಬೇರೆ ಏನನ್ನು ನೋಡಲಾರದಷ್ಟು ಸಂಕುಚಿತಗೊಂಡಿದ್ದೇವೆ. ಹಣ ಪ್ರತಿಷ್ತೆಗಾಗಿ ನಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದೇವೆ. ನಾವು ಗಳಿಸುವ ಹಣ ಯಾರಿಗಾಗಿ? ಏತಕ್ಕಾಗಿ? ಅದು ನಮಗಾಗಿ, ನಮ್ಮ ಪ್ರತಿಷ್ಟೆಗಾಗಿ ಎಂದರೂ ಅದು ನಮ್ಮ ಮಕ್ಕಳಿಗಾಗಿಯೇ ಅಲ್ಲವೇ? ಹಾಗಿದ್ದರೆ ಮಕ್ಕಳಿಗೆ ಹಣ, ಹಣಕ್ಕಾಗಿಯೇ ಶಿಕ್ಷಣಕೊಡುವ ಶೈಕ್ಷಣಿಕ ಸಂಸ್ತೆಗಳಲ್ಲಿ ಒಂದಿಷ್ಟು ಶಿಕ್ಷಣ ಕೊಡಿಸಿದರೆ ಸಾಕೇ? ಅವರಿಗೆ ಮುಂದಿನ ಬದುಕು ಸಾಗಿಸುವ, ತಮ್ಮ ಬದುಕನ್ನೇ ತಾವೇ ಕಟ್ಟಿ ಕೊಳ್ಳುವ ವಿದ್ಯೆಯನ್ನು ಹೇಳಿ ಕೊಡುವುದು ಬೇಡವೆ? ಅವೆಲ್ಲವನ್ನು ಒಂದಿಷ್ಟು ಹಣ ಪಡೆದು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಹೇಗೆ ಪಾಸು ಮಾಡುವುದು? ಹೇಗೆ ನೌಕರಿಗಿಟ್ಟಿಸಿ ಕೊಳ್ಳುವುದು ಎನ್ನುವುದನ್ನು ಹೇಳಿ ಕೊಡುತ್ತವಯೇ ಹೊರತು, ಬದುಕು ಸಾಗಿಸುವ ದಾರಿಯನ್ನಲ್ಲ. ಅವನ್ನು ನಾವೇ ನಮ್ಮ ಮಕ್ಕಳಿಗೆ ಹೇಳಿ ಕೊಡಬೇಕೇ ಹೊರತು ಬೇರೆಯವರಲ್ಲ. ನಮಗೆ ಅನಿಸಬಹುದು ಈಗೇನು ಬಿಡಿ ಹಣ ಕೊಟ್ಟರೆ ಮಾರು ಕಟ್ಟೆಯಲ್ಲಿ ವ್ಯಕ್ತಿ ವಿಕಸನದ ಪುಸ್ತಕಗಳು ಸಿಗುತ್ತಾವಲ್ಲ ಎಂದು. ಅದಕ್ಕಾಗಿಯೇ ಅಲ್ಲವೇ ಇಂದು ಒಳ್ಳೆಯ ಸಾಹಿತ್ಯದ ಕೃತಿಗಳಿಗಿಂತ ವ್ಯಕ್ತಿ ವಿಕಸನದ ಪುಸ್ತಕಗಳೇ ಜಗತ್ತಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವುದು. ಇಂದು ನಾವು ಹೇಳಿ ಕೊಡದಿದ್ದುದನ್ನು ಮುಂದೆ ಅವರೆಷ್ಟು ಓದಿ ತಿಳಿದು ಕೊಂಡರೇನು ಪ್ರಯೋಜನ? ಚಿಕ್ಕವರಾಗಿದ್ದಾಗ ಏನನ್ನು ತಿಳಿಹೇಳದ ನಾವು , ಮಕ್ಕಳು ದೊಡ್ಡವರಾಗಿ ದಾರಿ ತಪ್ಪಿದ ಮೇಲೆ ಬುದ್ದಿ ಹೇಳಿದರೆ ಏನು ಪ್ರಯೋಜನ? ನಿಮ್ಮ ಮಕ್ಕಳ ವಿಕಸನಕ್ಕಾಗಿ, ಅವರ ಅಬಿವ್ರದ್ದಿಗಾಗಿ ಕನಿಷ್ಟ ಪಕ್ಷ ದಿನದ ಅರ್ಧ ಗಂಟೆಯಾದರೂ ಮೀಸಲಾಗಿಡಿ. ನೆನಪಿಡಿ ಇಂದು ಗಿಡವಾಗಿ ಬಗ್ಗಿಸಲಾಗದ್ದನ್ನು ಮುಂದೆ ಮರವಾಗಿ ಬೆಳೆದ ಮೇಲೆ ಬಗ್ಗಿಸಲಾಗುವುದಿಲ್ಲ.
--ಮಂಜು ಹಿಚ್ಕಡ್
No comments:
Post a Comment