ಬರೋಬ್ಬರಿ ಮವ್ವತ್ತು ಗುಂಟೆಯ ಮನೆಯ ಮುಂದಿನ ಜಾಗವನ್ನು ನಾಲ್ಕು ಹೋಳುಗಳನ್ನಾಗಿ ಮಾಡಿ ಹಾದು ಹೋದ ನಾಲ್ಕು ಕಾಲು ನಡಿಗೆಯ ಹಾದಿಗಳು ಇಂದು ಅಷ್ಟಾಗಿ ಅಸ್ಥಿತ್ವದಲ್ಲಿಲ್ಲದಿದ್ದರೂ ಹಿಂದೊಮ್ಮೆ ಇಲ್ಲಿ ಹಾದಿ ಇತ್ತು ಎನ್ನುವುದನ್ನು ನೋಡಿದೊಡನೆಯ ಸ್ಪಷ್ಟವಾಗಿ ಹೇಳ ಬಹುದಿತ್ತು. ಹತ್ತು ಇಪ್ಪತ್ತು ವರ್ಷಗಳ ಹಿಂದಿನವರೆಗೂ ಊರ ಗದ್ದೆಯ ಕೆಲಸಕ್ಕೆ ಹೋಗುವವರು, ಆ ಮನೆಯಿಂದ ಈ ಮನೆಗೆ ಓಡಾಡುವವರು ಬಳಸುತ್ತಿದ್ದ ಹಾದಿಗಳು ಇವು. ಆ ಹಾದಿಯ ಸುತ್ತಲಿನ ಮನೆಗಳ ಮಕ್ಕಳೆಲ್ಲ ಕಲಿತು ದೊಡ್ಡವಾರಾಗಿ ಊರು ಬಿಟ್ಟು ಪಟ್ಟಣ ಸೇರಿದ ಮೇಲೆ ಹೊಲಗದ್ದೆಗಳನ್ನು ನೋಡಿಕೊಳ್ಳುವವರಿಲ್ಲದ್ದರಿಂದಲೂ ಹಾಗೂ ಆ ಹಾದಿಗಳು ಕೂಡುವ ಊರ ಹೊರ ರಸ್ತೆ ಅಗಲೀಕರಣಗೊಂಡಿದ್ದರಿಂದಲೂ ಈ ಹಾದಿಗಳನ್ನು ಅಷ್ಟೊಂದಾಗಿ ಉಪಯೋಗಿಸದೇ ಪಾಳು ಬಿದ್ದಂತಿತ್ತು. ಈ ಹಾದಿ ಹಾಗೂ ಮನೆ ಇರುವ ಗೋವಿಂದನ ಜಾಗವು ಆ ಹಾದಿಗಳು ಹೋಗಿಸೇರುವ ಸುತ್ತಲಿನ ನಾಲ್ಕು ಮನೆಗಳ ಮಧ್ಯದಲ್ಲಿದ್ದು ಗೋವಿಂದನ ಮನೆಯವರು ಮಾತ್ರ ಆ ಹಾದಿಯನ್ನು ಬಳಸದೇ ಬೇರೇ ದಾರಿಯೇ ಇರಲಿಲ್ಲ. ಆದರೆ ಸುತ್ತಲಿನ ಉಳಿದ ಮನೆಗಳಿಗೆ ಹಾಗಲ್ಲ, ಅವರ ಮನೆಯ ಪಕ್ಕದಿಂದಲೇ ಹಾದು ಹೋಗುವ ರಸ್ತೆ ಅಗಲವಾಗಿದ್ದರಿಂದ ಅವರು ಓಡಾಡಲು ಹಾಗೂ ಅವರು ಕೊಂಡ ಗಾಡಿಗಳನ್ನು ಆ ರಸ್ತೆಗಳನ್ನು ಬಳಸುತ್ತಿದ್ದರಿಂದ ತಾವು ಹಿಂದೆ ಸವೆಸಿದ ಆ ಹಳೆಯ ಹಾದಿಗಳು ಈಗ ಬೇಕಿರಲಿಲ್ಲ.
ಗೋವಿಂದನಿಗೆ ಮಾತ್ರ ಆ ಹಾದಿಗಳೆಂದರೆ ಅದೇನೋ ಹೆಮ್ಮೆ, ತನ್ನ ತಾತ ಮುತ್ತಾತನ ಕಾಲದಿಂದಲೂ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಿಗಾಗಿ ಓಡಾಡಿದ ಹಾದಿಗಳಿವು ಎನ್ನುವ ಅಭಿಮಾನ. ಹಿಂದೆ ತನ್ನ ಮನೆಯ ಪಕ್ಕ ತೋಟದ ತೆಂಗಿನ ಕಾಯಿಗಳನ್ನು ತುಂಬಲು ಹಾಗೂ ಇತರೆ ರೈತಾಬಿ ವಸ್ತುಗಳನ್ನು ತುಂಬಲು ದಾಸ್ತಾನೊಂದನ್ನು ಕಟ್ಟುವಾಗಲೂ ಈ ಹಾದಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡಿದ್ದ. ಅಷ್ಟೇ ಅಲ್ಲ ಆ ಹಾದಿಗಳ ಮೇಲೆ ತೆಂಗಿನ ಮರದಿಂದ ಹೆಡೆ ಬೀಳಲಿ ಅಥವಾ ಮಳೆಗಾಲದಲ್ಲಿ ಮಾವಿನ ಟಿಸಿಲುಗಳು ಬೀಳಲಿ ಜನರಿಗೆ ತೊಂದರೆಯಾಗುತ್ತದೆ ಎನ್ನುವ ದೃಷ್ಟಿಯಿಂದ ತಕ್ಷಣ ತೆಗೆಸಿ ಬಿಡುತ್ತಿದ್ದ. ಅಂದು ಆ ಸುತ್ತ ಮುತ್ತಲಿನ ಮನೆಯವರು ಗದ್ದೆಗೆ ಹೋಗುವಾಗ ಅಥವಾ ಬರುವಾಗ ಒಂದೈದು ನಿಮಿಷ ಗೋವಿಂದನ ಮನೆಯೆದುರು ನಿಂತು ಒಂದಿಷ್ಟು ಹರಟೆ ಹೊಡದೇ ಹೋಗುವುದು ಸಾಮಾನ್ಯವಾಗಿತ್ತು. ಅದರಲ್ಲೂ ಎಲೆ ಅಡಿಕೆ ಹಾಕುವವರಂತೂ, "ಗೋವಿಂದ ಕವಳಕ್ಕೆ ಎಲೆ ಇದೆಯೇನೋ?", "ಅಡಿಕೆ ಇದೆಯೇನೋ?", ಸ್ವಲ್ಪ ತಂಬಾಕು ಇದ್ದರೆ ಕೊಡ್ತಿಯಾ?" ಎಂದು ಕೇಳಿಕೊಂಡು ಬಂದು, ಗೋವಿಂದನ ಮನೆಯ ಜಗುಲಿಯಲ್ಲಿ ಕುಳಿತು ಎಲೆ ಅಡಿಕೆ ಹಾಕಿಕೊಂಡೇ ಹೊರಡುತ್ತಿದ್ದರು. ಗದ್ದೆ ಕೆಲಸಕ್ಕೆ ಬರುವವರಂತು ಇವರ ಮನೆಯ ಬಾವಿಯಿಂದಲೇ ಕುಡಿಯುವ ನೀರು ತೆಗೆದುಕೊಂಡು ಗದ್ದೆಗೆ ಹೊರಡುತ್ತಿದ್ದರು. ಇಷ್ಟಿದ್ದರೂ ಗೋವಿಂದನಿಗಾಗಲೀ, ಗೋವಿಂದನ ಮನೆಯವರಿಗಾಗಲೀ ತಮ್ಮದು ಎನ್ನುವ ಅಹಂ ಇರಲಿಲ್ಲ. ಜನ ಇಷ್ಟೇಕೇ ತಮ್ಮ ಜಾಗದಲ್ಲಿ ಓಡಾಡುತ್ತಾರೆ ಎನ್ನುವ ಸಿಟ್ಟಾಗಲೀ, ಹೊಟ್ಟೆ ಉರಿಯಾಗಲೀ ಇರಲಿಲ್ಲ. ಬದಲಿಗೆ ಅವರು ಹಾಗೆ ಓಡಾಡುತ್ತಿದ್ದಕ್ಕೆ ಅಭಿಮಾನವಿತ್ತು. ತಾವು ಅಪರೂಪಕ್ಕೆ ಪೇಟೆಗೆ ಹೋಗುವಾಗ ಅಥವಾ ಇನ್ನಾವುದೋ ಕೆಲಸಕ್ಕೆ ಮನೆಯಿಂದ ಹೊರಹೋಗುವಾಗ ಅವರ ಮನೆಯ ದಾರಿಯಲ್ಲಿ ಹೋಗಲು ಬಿಡುತ್ತಾರಲ್ಲ ಎನ್ನುವ ಸಂತೋಷವಿತ್ತು.
ಹೀಗೆ ಅದೆಷ್ಟೋ ವರ್ಷಗಳು ಕಳೆದು ಹೋದವು. ಅಂದು ಅಂದರೆ ಇಪ್ಪತ್ತು ವರ್ಷಗಳ ಕೆಳಗೆ, ಒಮ್ಮೇಲೆ ಊರಲ್ಲಿ ಊರ ಹೊರವಲಯದ ರಸ್ತೆ ಅಗಲಗೊಳ್ಳುತ್ತದೆ ಎನ್ನುವ ಸುದ್ದಿ ಹಬ್ಬಿತು. ತಮ್ಮ ಊರು ಪಟ್ಟಣಕ್ಕೆ ಅತೀ ಹತ್ತಿರವಿರುವುದರಿಂದ ರಸ್ತೆ ಅಗಲಗೊಂಡರೆ ಆ ರಸ್ತೆಯ ಆಜು ಬಾಜು ಇರುವ ಜಾಗಗಳಿಗೆಲ್ಲ ಬೆಲೆ ಬರುತ್ತದೆ ಎನ್ನುವ ಗುಸು ಗುಸು ಸುದ್ದಿಗಳು ಹಬ್ಬಿಕೊಂಡವು. ಕೆಲವರು ಸುಳ್ಳು ಎಂದರು, ಕೆಲವರು ಸತ್ಯ ಎಂದರು. ಕೆಲವರು ಏನಾದರಾಗಲೀ ರಸ್ತೆ ಅಗಲಗೊಳ್ಳುವಾಗ ನೋಡಿಕೊಂಡರಾಯಿತು ಎಂದು ಸುಮ್ಮನಾದರು. ಗೋವಿಂದನಿಗೂ ಆ ಸುದ್ದಿ ಮುಟ್ಟಿತ್ತಾದರೂ ಅದೇನಾದರಾಗಲೀ ಎಂದು ಸುಮ್ಮನಾದ.
ಆ ಸುದ್ದಿ ಬಂದು ಒಂದೆರಡು ತಿಂಗಳುಗಳು ಕಳೆದಿರಬಹುದು, ಒಂದು ಸಂಜೆ ಊರಿನ ಹತ್ತೆನ್ನೆರಡು ಮುಖಂಡರು ಗೋವಿಂದನನ್ನು ಹುಡುಕಿಕೊಂಡು ಗೋವಿಂದನ ಮನೆಗೆ ಬಂದರು. ಅವರು ಬರುವ ಹೊತ್ತಿಗೆ ಸಂಜೆಯ ಚಹಾ ಕುಡಿದು ಎಲೆ ಅಡಿಕೆ ಹಾಕುತ್ತಾ ಕುಳಿತಿದ್ದ ಗೋವಿಂದ. ಬಂದವರಲ್ಲಿ ಒಬ್ಬ ಗೋವಿಂದನನ್ನು ನೋಡಿ "ಏನೋ ಗೋವಿಂದ, ಈಗ ಚಹಾ ಆಯ್ತಾ ಹೇಗೆ?" ಎಂದ.
"ಹೌದು" ಎಂದು ಗೋಣಲ್ಲಾಡಿಸಿ, "ಇದೇನು ಊರವರೆಲ್ಲಾ ಸೇರಿ ಬಂದಿದ್ದಿರಾ ನಮ್ಮಲ್ಲೇನು ಅಂತಾ ದೊಡ್ಡ ಕೆಲಸ."
"ಅಂತಾದ್ದೇನಿಲ್ಲ, ನಿನ್ನಿಂದ ಊರಿನವರಿಗೆ ಒಂದು ಕೆಲಸವಾಗಬೇಕಿದೆ, ಅದಕ್ಕೆ ನಾವೆಲ್ಲಾ ಒಟ್ಟಿಗೆ ಬಂದಿದ್ದೇವೆ" ಎಂದಾಗ ಗೋವಿಂದ " ನನ್ನಿಂದ ಊರಿನವರಿಗೆ ಕೆಲಸವಾಗಬೇಕಿದೆಯೇ? ಏನಪ್ಪಾ ಅಂತಾ ಕೆಲಸ?" ಎಂದು ಕೇಳಿದ.
ಬಂದವರಲ್ಲಿ ಸ್ವಲ್ಪ ದಪ್ಪಕ್ಕೆ, ಎತ್ತರಕ್ಕೆ ಇದ್ದ ತಿಮ್ಮಣ್ಣ "ನಿನಗೆ ಗೊತ್ತಲ್ಲ ನಮ್ಮೂರಿನ ರಸ್ತೆ ಅಗಲಗೊಳ್ಳುತ್ತಿರುವ ವಿಷಯ. ಆ ರಸ್ತೆ ಮೊದಲು ಪ್ರಾರಂಭವಾಗುವುದು ನಿನ್ನ ಮಾವಿನ ಹಕ್ಕಲಿನ ಹತ್ತಿರದಿಂದಲ್ಲವೇ, ನೀನು ರಸ್ತೆಗಾಗಿ ರಸ್ತೆ ಬದಿಯ ಸ್ವಲ್ಪ ಜಾಗ ಬಿಟ್ಟು ಕೊಟ್ಟರೆ ಊರವರಿಗೆಲ್ಲ ಅನುಕೂಲವಾಗುತ್ತದೆ" ಎಂದಾಗ ಗೋವಿಂದ "ಅದು ಸರಿ, ಎಲ್ಲರೂ ಬಿಟ್ಟು ಕೊಟ್ಟರೆ ನನ್ನದೇನು ತೊಂದರೆ ಇಲ್ಲಾ" ಎಂದು ಹೇಳಿ ಎಲ್ಲರಂತೆಯೇ ತಾನು ಎನ್ನುವುದಾಗಿ ಹೇಳಿ ಕಳಿಸಿದ.
ಆ ವರ್ಷದ ಮಳೆಗಾಲ ಕಳೆಯುವುದರಲ್ಲೇ ರಸ್ತೆ ಕೆಲಸ ಪ್ರಾರಂಭವಾಯಿತು. ಗೋವಿಂದನ ಮಾವಿನ ಹಕ್ಕಲಿನ ಪಾಗಾರದ ಗೋಡೆ ಒಡೆಯುವುದರ ಮೂಲಕ ರಸ್ತೆ ಕೆಲಸಕ್ಕೆ ಮಹೂರ್ತವನ್ನಿಟ್ಟರು. ರಸ್ತೆಯ ಕಂತ್ರಾಟುದಾರ ಪರವೂರಿನವನಾದ್ದರಿಂದ ಕೆಲಸ ತ್ವರೀತ ಗತಿಯಲ್ಲಿ ಸಾಗಿತು. ಮೂರ್ನಾಲ್ಕು ತಿಂಗಳು ಕಳೆಯುವುದರಲ್ಲಿ ರಸ್ತೆಯ ಅಗಲೀಕರಣ ಮುಗಿದು, ಮುಕ್ಕಾಲು ಬಾಗ ರಸ್ತೆ ಡಾಂಬರೀಕರಣಗೊಂಡಿತ್ತು. ಗೋವಿಂದನ ಮನೆ ಊರ ನಡುಬಾಗದಲ್ಲಿದ್ದರಿಂದ ಗೋವಿಂದ ಹಾಗೂ ಗೋವಿಂದನ ಹಾಗೇ ಊರ ನಡುವಲ್ಲಿರುವ ಕೆಲವೇ ಕೆಲವೇ ಮನೆಯವರ ಜಾಗವನ್ನು ಬಿಟ್ಟು ಉಳಿದೆಲ್ಲ ಮನೆಗಳಿಗೂ ಆ ರಸ್ತೆಯ ಅನುಕೂಲವಾಯಿತು. ಗೋವಿಂದನ ಮಾವಿನ ಹಕ್ಕಲಿನ ಸಮೀಪವೇ ರಸ್ತೆ ಹಾದು ಹೋಗಿತ್ತಾದರೂ ಅದು ಗೋವಿಂದನ ಮನೆಯಿಂದ ಒಂದರ್ಧ ಕಿಲೋಮೀಟರ್ ದೂರದಲ್ಲಿದ್ದುದರಿಂದ ಗೋವಿಂದನಿಗೆ ಅದರಿಂದಾವುದು ಪ್ರಯೋಜನವಾದಂತಿರಲಿಲ್ಲ.
ಊರಿಗೆ ರಸ್ತೆಯಾದ ಮೇಲೆ ಒಂದಿಷ್ಟು ವರ್ಷ ಆ ನಾಲ್ಕು ಹಾದಿಗಳಲ್ಲಿ ಜನಸಂಚಾರ ಮೊದಲಿನಂತಿರಲಿಲ್ಲದಿದ್ದರೂ, ಅಪರೂಪಕ್ಕೆ ಒಮ್ಮೆಯಾದರೂ ಒಬ್ಬೊಬ್ಬರು ಓಡಾಡುತ್ತಿದ್ದರು. ಅದರಲ್ಲೂ ಹೊಲದ ಕೆಲಸದ ಸಮಯದಲ್ಲಂತೂ ಹೊಲಕ್ಕೆ ಹೋಗುವವರು ಬರುವವರು ಬೇರೆ ರಸ್ತೆಯಿಲ್ಲದ ಕಾರಣ ಹೊಲದ ಕೆಲಸಕ್ಕೆ ಹೋಗುವವರು ಅದೇ ರಸ್ತೆಯನ್ನು ಬಳಸುತಿದ್ದರು. ಮೊದ ಮೊದಲು ಊರ ರಸ್ತೆಯಾದಾಗ ಸ್ವಲ್ಪ ಬೇಸರವೆನಿಸಿದರೂ ಆಮೇಲೆ ಹೊಲದ ಕೆಲಸದ ಸಮಯದಲ್ಲಿ ಜನ ಓಡಾಡುವುದನ್ನು ನೋಡಿದ ಮೇಲೆ ಗೋವಿಂದನಿಗೆ ಸಮಾಧಾನವಾಗಿತ್ತು. ಗೋವಿಂದನಿಗೂ ಅವನ ಮನೆಯ ಮುಂದಿನ ನಾಲ್ಕು ಹಾದಿಗಳು ಎಷ್ಟು ಮುಖ್ಯವೋ ಅವುಗಳು ಸೇರುವ ಗಮ್ಯದವರೆಗಿನ ನಿರಂತತೆಯೂ ಅಷ್ಟೇ ಮುಖ್ಯ. ಅವನ ಮನೆ ಊರ ಮಧ್ಯಭಾಗದಲ್ಲಿದ್ದುದರಿಂದ ಅವನು ಬೇರಯವರ ಮನೆಗೇ ಹೋಗಲೀ, ಅಥವಾ ಬೇರೆ ಇನ್ನಾವುದೇ ಕೆಲಸಗಳಿಗಾಗಿ ಊರಿನಿಂದ ಹೊರ ಹೋಗ ಬೇಕಾಗಿದ್ದರೂ ಆ ಹಾದಿಗಳ ಮುಖಾಂತರವಾಗಿ ಸಾಗಿ ಇನ್ನೊಬ್ಬರ ಮನೆಯನ್ನು ದಾಟೀಯೇ ಊರ ಹೊರ ರಸ್ತೆಯನ್ನು ಸೇರಬೇಕಾಗಿತ್ತು. ಆ ಹಾದಿಗಳು ಊರ ರಸ್ತೆಯನ್ನು ಸೇರುವ ನಡುವಲ್ಲಿ ಏನಾದರೂ ತೊಂದರೆಯಾದಲ್ಲಿ ಗೋವಿಂದನಿಗೂ ಗಮ್ಯ ಸೇರುವುದು ಕಷ್ಟವಾದೀತು. ಅದು ಮೊದ ಮೊದಲು ಹಾಗೆ ಅನ್ನಿಸದಿದ್ದರೂ, ಇತ್ತೀಚೆಗಂತು ಅದು ಎದುರಿಗೆ ನಡೆಯುತ್ತಿರುವ, ನಡೆಯಲಿರುವ ಊರ ಘಟನೆಗಳಿಂದ ಸತ್ಯವೆನಿಸಹತ್ತಿತು.
ಅದು ಆದದ್ದಿಷ್ಟೇ, ಊರಿನ ಹೊರ ರಸ್ತೆಯಾದ ಮೇಲೆ ಊರಿನ ಉಳ್ಳವರ ಮನೆಗಳಲ್ಲಿ ಕಾರುಗಳು, ಬೈಕುಗಳು ಬರಲಾರಂಭಿಸಿದವು. ಕಲಿತ ಊರ ಮಕ್ಕಳು ನೌಕರಿಗಾಗಿ ಊರು ಬಿಟ್ಟು ಹೊರ ಹೊಗಲು ಪ್ರಾರಂಭವಾದ ಮೇಲೆ ಕೆಲವರು ಗದ್ದೆ ಕೆಲಸಗಳನ್ನು ಮಾಡುವವರಿಲ್ಲದೇ ಕಡಿಮೆ ಮಾಡತೊಡಗಿದರು. ಕೆಲವರಂತೂ ಗದ್ದೆ ಕೆಲಸಗಳನ್ನೇ ನಿಲ್ಲಿಸಿ ಬಿಟ್ಟಿದ್ದರು. ಗದ್ದೆ ಕೆಲಸಗಳೇ ಇಲ್ಲದ ಮೇಲೆ ಗದ್ದೆಗೆ ಹೋಗುವವರು ಕಡಿಮೆಯಾಗಿ, ಗೋವಿಂದನ ಮನೆಯ ಮುಂದಿನ ನಾಲ್ಕು ಹಾದಿಗಳು ಕೇವಲ ಆ ಮನೆಯವರ ಓಡಾಟಕ್ಕಷ್ಟೇ ಸೀಮಿತವಾಗಿತ್ತು. ಆ ಮನೆಯವರನ್ನು ಬಿಟ್ಟರೆ ಯಾರಾದರು ಮದುವೆ ಮುಂಜಿಗಳಿಗೆ ತಿಳಿಸಲು ಬರುವವರೋ ಅಥವಾ ತೆಂಗಿನ ಮರ ಅಥವಾ ಮಾವಿನ ಮರ ಹತ್ತುವವರು ಮಾತ್ರ ಅಪರೂಪಕ್ಕೆ ತಿಂಗಳಿಗೋ, ಎರಡು ತಿಂಗಳಿಗೋ ಅಲ್ಲೊಬ್ಬರು ಇಲ್ಲೊಬ್ಬರು ಆ ರಸ್ತೆಯನ್ನು ಬಳಸುತ್ತಿದ್ದರು.
ಈಗ ಗೋವಿಂದನಿಗೂ ಮುಪ್ಪು ಆವರಿಸಿದೆ, ಗೋವಿಂದನ ಮಕ್ಕಳು ಕೂಡ ಊರು ಬಿಟ್ಟು ಕೆಲಸದ ನೀಮಿತ್ತ ದೂರದ ಸಹರಗಳಲ್ಲಿ ನೆಲೆಸಿದ್ದಾರೆ. ಅಪರೂಪಕ್ಕೆ ಆರು ತಿಂಗಳಿಗೋ , ವರ್ಷಕ್ಕೋ ಬಂದು ಹೋಗುತ್ತಾರೆ. ಈಗ ಗೋವಿಂದನಿಗೂ ವಯಸ್ಸಾಗಿದ್ದರಿಂದ ಕೋಲಿನ ಸಹಾಯವಿಲ್ಲದೇ ನಡೆದಾಡುವುದು ಕಷ್ಟ. ಈಗೀಗ ಅವನು ಹೊರಗಡೇ ಓಡಾಡುವುದೇ ಅಪರೂಪ. ನಾಲ್ಕು ಹಾದಿಗಳು ಇಂದು ಅವನ ಪಾಗಾರದ ತುದಿಯಲ್ಲೇ ಅಂತ್ಯಗೊಂಡಿವೆ. ಅದೂ ಕೂಡ ಇವನು ಮಾಡಿದ್ದಲ್ಲ. ಆಯಾ ಮನೆಯವರು ತಮಗೆ ಈ ಹಾದಿಯ ಅವಶ್ಯಕತೆಯಿಲ್ಲವೆನಿಸಿ, ಕ್ರಮೇಣ ಆ ಹಾದಿಯ ತುದಿಯನ್ನು ತಮ್ಮ ಪಾಗಾರದ ತುದಿಯಲ್ಲೇ ಪೂರ್ಣ ವಿರಾಮ ಹಾಕಿ ಬಿಟ್ಟಿದ್ದರು. ಮೊದಲು ವರ್ಷಕ್ಕೆ ಎರಡು ಮೂರು ಬಾರಿ ಬರುತ್ತಿದ್ದ ಮಕ್ಕಳು ಮನೆಗೆ ಬರಲು ಸರಿಯಾದ ಹಾದಿಗಳಿಲ್ಲದ ಕಾರಣ ಮನೆಗೆ ಬರುವುದನ್ನೇ ಕಡಿಮೆ ಮಾಡಿದ್ದರು. ಊರ ರಸ್ತೆಯ ಕೊನಯಲ್ಲಿರುವ ಮಾವಿನ ಹಕ್ಕಲಿನಲ್ಲಿ ಮಕ್ಕಳು ಮನೆ ಕಟ್ಟೋಣವೆಂದಾಗಲೂ ಗೋವಿಂದನಿಗೆ ಈ ಮನೆಯ ಜಾಗ ಬಿಟ್ಟುಬರುವುದು ಇಷ್ಟವಿರದ ಕಾರಣ "ನಾನು ಬದುಕಿರುವವರೆಗೂ ಈ ಮನೆಯಲ್ಲಿಯೇ ಇರುತ್ತೇನೆಯೇ, ನೀವು ಬೇಕಾದರೆ ಮುಂದೆ ನಾನು ಸತ್ತ ಮೇಲೆ ಮನೆ ಕಟ್ಟಿ ಕೊಳ್ಳಿ" ಎಂದು ಹೇಳಿ, ಮಕ್ಕಳು ಮನೆ ಕಟ್ಟುವ ಮಾತನ್ನೇ ತಳ್ಳಿ ಹಾಕಿದ್ದ. ಹಾಗೆ ತಂದೆ ಹೇಳಿದ ಮೇಲೆ ಮಕ್ಕಳು ಮನೆ ಕಟ್ಟುವ ವಿಚಾರವನ್ನೇ ಮರೆತು ಬಿಟ್ಟರು.
ಮನುಷ್ಯನಿಗೆ ಬದುಕಿನ ಮೌಲ್ಯಗಳು ಅತಿ ಬೇಗ ಅರ್ಥವಾಗುವುದು ಅವನ ಸಾವು ಸಮೀಪಿಸಿದಾಗಲೇ ಅಲ್ಲವೇ? ಈಗ ಗೋವಿಂದನಿಗೂ ಮುಪ್ಪು ಆವರಿಸಿದೆ. ಊರು ಹೋಗೆನ್ನುತ್ತಿದೆ ಕಾಡು ಬಾ ಎನ್ನುತ್ತಿದೆ. ಹಾಗಾಗಿ ಈಗ ಮುಪ್ಪಿನ ಅಂಚಿನಲ್ಲಿರುವ ಗೋವಿಂದನಿಗೆ ಬರಿ ಸಾವಿನದೇ ಚಿಂತೆ. ಮುಂದೆ ತಾನು ಸತ್ತಾಗ ಈ ನಾಲ್ಕು ಹಾದಿಗಳಲ್ಲಿ ಯಾವ ಹಾದಿಯಲ್ಲಿ ತನ್ನ ಮೃತ ದೇಹವನ್ನು ಸಾಗಿಸಬಹುದು? ಆ ಒಂದು ಗಳಿಗೆಯಲ್ಲಾದರೂ ಜನ ತನಗಾಗಿ ಹಾದಿ ಬಿಟ್ಟು ಕೊಡಬಹುದೇ? ಬಿಟ್ಟು ಕೊಡದೇ ಹೋದರೆ ತನ್ನ ಮಕ್ಕಳೇನು ಮಾಡಿಯಾರು? ತಾನು ಬದುಕಿದ್ದಾಗ ಹಾದಿ ಬಿಡದವರು ಸತ್ತ ಮೇಲೆ ಅನುಕಂಪದ ಮೇಲೆಯಾದರೂ ಹಾದಿ ಬಿಡದೇ ಇದ್ದಾರೆಯೇ?.
--ಮಂಜು ಹಿಚ್ಕಡ್