[೨೯-ಸೆಪ್ಟಂಬರ್-೨೦೧೪ ರ ಪಂಜು ವಾರ ಪತ್ರಿಕೆಯಲ್ಲಿ ಪ್ರಕಟವಾದ ಕಥೆ ’ಸಂಸಾರ ಸಾರ’ http://www.panjumagazine.com/?p=8674]
ಟಕ್, ಟಕ್, ಟಕ್ ಎಂದು ಕೇಳಿ ಬರುವ ಜನರ ಹೆಜ್ಜೆಗಳ ಸಪ್ಪಳ. ಗುಂಯ್, ಗುಂಯ್, ಗುಂಯ್ ಎಂದು ರಸ್ತೆಯಲ್ಲಿ ಓಡಾಡುವ ವಾಹನಗಳ ಶಬ್ಧ. ಆಗೊಮ್ಮೆ ಈಗೊಮ್ಮೆ ಕೊಂಯ್, ಕೊಂಯ್, ಕೊಂಯ್ ಎಂದು ಕೇಳಿ ಬರುತ್ತಿದ್ದ ಅಂಬ್ಯೂಲನ್ಸ್ ಸಪ್ಪಳ. ಅಲ್ಲಲ್ಲಿ ಆಗಾಗ ಕೇಳಿ ಬರುತ್ತಿದ್ದ ಜನರ ಪಿಸುಮಾತುಗಳು. ಒಮ್ಮೊಮ್ಮೆ ಅಲ್ಲೊಬ್ಬರು, ಇಲ್ಲೊಬ್ಬರು ಅಳುವ ಸಪ್ಪಳ. ಇವೆಲ್ಲಾ ಆಗಾಗ ಕೇಳಿ ಬರುತ್ತಲೇ ಇದ್ದುದರಿಂದ ಇಂದಾದರೂ ಸ್ವಲ್ಪ ಹೊತ್ತು ನಿದ್ದೆ ಮಾಡಬೇಕೆಂದುಕೊಂಡು ಮಲಗಿದ ಸುಮಾಳಿಗೆ ನಿದ್ದೇನೆ ಹತ್ತಿರ ಸುಳಿಯುತ್ತಿರಲಿಲ್ಲ. ತಾನು ಮಲಗಿ ಆಗಲೇ ತುಂಬಾ ಗಳಿಗೆಯಾಯಿತು , ಬೆಳಿಗ್ಗೆಯಾಗಿರಬಹುದೇ ಎಂದು ಯೋಚಿಸಿ ತಲೆಯ ಹಿಂಬಾಗದ ಚಿಕ್ಕದಾದ ಟಿಪಾಯಿಯ ಮೇಲಿಟ್ಟ ಮೊಬೈಲನ್ನು ಕೈಗೊತ್ತಿಕೊಂಡು ಸಮಯ ನೋಡಿದಳು. ಸಮಯ ಆಗಷ್ಟೇ ಒಂದು ಕಳೆದು ಎರಡರತ್ತ ಮುಖಮಾಡಿತ್ತು. ಮೊಬೈಲಿನ ಬೆಳಕು ಕಣ್ಣ ಮೇಲೆ ಬಿದ್ದು ಪಕ್ಕದಲ್ಲೇ ಮಲಗಿದ ಆರು ವರ್ಷದ ಮಗ ಕಣ್ತೆರೆದು "ಅಮ್ಮಾ" ಎಂದು ಅಳಲಾರಂಭಿಸಿದ. ಹಾಗೆ ಎದ್ದ ಮಗನ ಹಣೆ ಮುಟ್ಟಿ ನೋಡಿದಳು, ಜ್ವರ ಸ್ವಲ್ಪ ಕಡಿಮೆಯಾಗಿದೆ. ಕಂಕುಳಿಗೆ ಥರ್ಮಮೀಟರ ಇಟ್ಟು ನೋಡಿದಳು. ಎರಡು ದಿನದಿಂದ ೧೦೦ ಡಿಗ್ರಿಯ ಮೇಲೆಯೇ ಇದ್ದ ಜ್ವರ ಇಂದು ೯೯ಕ್ಕೆ ಬಂದು ತಲುಪಿತ್ತು. ಮಗನನ್ನು ಸಮಾಧಾನ ಪಡಿಸಿ ಮತ್ತೆ ಮಲಗಿಸಿದಳು. "ಜ್ವರ ನಾಳೆ ಬೆಳಿಗ್ಗೆ ಅಷ್ಟೋತ್ತಿಗೆ ಕಡಿಮೆ ಆಗುತ್ತೆ ಅಮ್ಮ" ಎಂದು ರಾತ್ರಿ ಎಂಟು ಗಂಟೆಗೆ ತಪಾಸಣೆಗೆ ಬಂದುಹೊದ ಲೇಡಿ ಡಾಕ್ಟರ್ ಹೇಳಿ ಹೋಗಿದ್ದರಿಂದಲೋ , ಈಗ ಜ್ವರ ಇಳಿದಿದ್ದರಿಂದಲೋ ಸ್ವಲ್ಪ ಸಮಾಧಾನಗೊಂಡಳು.
ಈಗ ಅವಳ ಯೋಚನೆ ಗಂಡನತ್ತ ಹೊರಳಿತು. ಬೆಳಿಗ್ಗೆ ೯ ಗಂಟೆಗಲ್ಲವೇ ಇಂದು ಅವರು ಆಸ್ಪತ್ರೆಯಿಂದ ಆಪೀಸಿಗೆ ಹೊರಟಿದ್ದು. ಹೋಗುವಾಗ ಆದಷ್ಟು ಬೇಗ ಬರುತ್ತೇನೆ ಎಂದು ಬಿಲ್ ಕಟ್ಟಿ ಕರ್ಚಿಗಿರಲಿ ಎಂದು ಕೈಗೊಂದಿಷ್ಟು ಹಣ ತುರುಕಿ ಹೊರಟವರು ಇಷ್ಟೊತ್ತಾದರೂ ಬಂದಿಲ್ಲ. ಇದೇನು ಹೊಸತೇನಲ್ಲ ಅದೂ ದಿನಾ ಇದ್ದುದ್ದೇ. ನಿನ್ನೆ ಮೊನ್ನೆ ಒಂದೆರಡು ದಿನ ರಜೆ ಹಾಕಿ ಆಸ್ಪತ್ರೆಯಲ್ಲಿ ಇದ್ದುದೇ ದೊಡ್ಡದು. ಇಂದು ಆಪೀಸಿಗೆ ಹೋದವರು ಬೇಗ ಬರಬಹುದೆಂದು ಕೊಂಡವಳಿಗೆ ಇವತ್ತು ನೋಡಿದರೆ ದಿನಕ್ಕಿಂತ ಲೇಟು.
ಮನಸ್ಸು ಇನ್ನೂ ಹಿಂದಕ್ಕೆ ಓಡಿತು. ಅದು ಮದುವೆಯಾದ ಹೊಸತು, ಆಗತಾನೇ ಅವಳು ಬೆಂಗಳೂರಿಗೆ ಬಂದ ಹೊಸತು. ಆಗಲೂ ಗಂಡ ನೌಕರಿ ಮಾಡುತ್ತಿದ್ದ. ಆದರೆ ೬.೩೦-೭ ಗಂಟೆಗೆ ಮನೆಯಲ್ಲಿ ಇರುತ್ತಿದ್ದ. ಅದೆಷ್ಟೋ ಬಾರಿ ಅವನು ಮನೆಗೆ ಬಂದ ಮೇಲೆ ಇಬ್ಬರು ಹೊರಗೆಲ್ಲ ಸುತ್ತಾಡಿ ಮನೆಗೆ ಬಂದದ್ದು ಇದೆ. ದಿನ ಕಳೆದಂತೆ ಅವನು ಒಂದು ಹುದ್ದೆಯಿಂದ ಇನ್ನೊಂದು ಹುದ್ದೆಗೆ ಏರತೊಡಗಿದ, ಹುದ್ದೆಯ ಜೊತೆಗೆ ಸಂಬಳವು ಏರಿತು, ಸಂಬಳದ ಜೊತೆಗೆ ಕೆಲಸದ ಒತ್ತಡವೂ ಕೂಡ. ಮೊದ ಮೊದಲು ೬.೩೦-೭ಕ್ಕೆ ಬರುತ್ತಿದ್ದವನು ಮುಂದೆ ೮ ಆಯ್ತು, ೯ ಆಯ್ತು, ಈಗಂತೂ ೧೦ ಗಂಟೆಯೊಳಗೆ ಬಂದದ್ದೆ ಅಪರೂಪ. ಮುಂದೆ ಮಗ ಹುಟ್ಟಿದಾಗಲೂ ಅಷ್ಟೇ ಒಂದೆರಡು ದಿನ ಇದ್ದು ಮಗನನ್ನು ನೋಡಿ ಹೋದವರು ಆಮೇಲೆ ಬಂದದ್ದು ೩ ತಿಂಗಳ ನಂತರವೇ, ಅದೂ ಕೂಡ ಮಗುವಿನ ನಾಮಕರಣಕ್ಕೆ. ಯಾವತ್ತು ನೋಡಿದರೂ ಆಪೀಸು-ಕೆಲಸ, ಆಪೀಸು-ಕೆಲಸ ಅಷ್ಟೇ. ಹೋಗಲಿ ಮನೆಗೆ ಬಂದ ಮೇಲಾದರೂ ಆಪೀಸನ್ನು ಮರೆಯುತ್ತಾರೆಯೇ, ಅದೂ ಇಲ್ಲ. ಕ್ಲೈಂಟ ಕಾಲಂತೆ, ಕ್ಲೈಂಟ ಸಪೋರ್ಟ ಅಂತಾ ಲ್ಯಾಪ್ ಟಾಪ್ ಹಿಡಿದು ಕೂತು ಬಿಡುತ್ತಾರೆ. ಅದೆಷ್ಟೋ ಬಾರಿ ಇವನ್ನೆಲ್ಲ ನೋಡಿದಾಗ, ಇವರಿಗ್ಯಾಕೆ ಹೆಂಡತಿ ಮಕ್ಕಳು ಅನಿಸಿದ್ದು ಇದೆ.
ಹೀಗೆ ಯೋಚನೆಯಲ್ಲಿಯೇ ಕಾಲ ಕಳೆಯುತ್ತಿದ್ದವಳಿಗೆ ಗಂಡ ಬಂದು ಎರಡು ಬಾರಿ ಕದ ಬಡಿದದ್ದು ಅವಳಿಗೆ ಕೆಳಿಸಲಿಲ್ಲ. ಆಕೆ ಬಹುಷ: ನಿದ್ದೆಗೆ ಜಾರಿರಬಹುದೆಂದು ತಿಳಿದು, ಮಲಗಿದರೆ ಮಲಗಲಿ ಎಂದು ಕದ ಬಡಿಯುವುದನ್ನು ನಿಲ್ಲಿಸಿ ಆಸ್ಪತ್ರೆಯ ಹೊರ ರೋಗಿಗಳು ಬಂದು ಕುಳಿತುಕೊಳ್ಳುವ ಸ್ಥಳಕ್ಕೆ ಬಂದು ಒಂದು ಮೂಲೆಯಲ್ಲಿ ಕುಳಿತ. ಅಂತೂ ನಾಳೆ ಶನಿವಾರ ಆಪೀಸಿಗೆ ಹೋಗುವ ರಗಳೆಯಿಲ್ಲ ಎಂದು ಸ್ವಲ್ಪ ಸಮಾಧಾನವಾಯಿತು. ಹೊರ ರೋಗಿಗಳಿಗಾಗಿ ಟಿ.ವಿ ಹಚ್ಚಿಟ್ಟಿದ್ದರಾದರೂ, ಅಲ್ಲಿ ಕುಳಿತು ಸರಿಯಾಗಿ ಟಿ.ವಿ ನೋಡುವವರ್ಯಾರು ಇರಲಿಲ್ಲ. ಮನಸ್ಸಿನಲ್ಲಿ ನೋವು, ದುಗುಡಗಳು ತುಂಬಿಕೊಂಡಿರುವವರಿಗೆ ಮನರಂಜನೆಯ ಅವಶ್ಯಕತೆ ಇದೆಯೇ? ಎಲ್ಲರಂತೆಯೇ ರಮೇಶನಿಗೂ ಟಿ.ವಿ ನೋಡುವ ಮನಸ್ಸಿರದಿದ್ದುದರಿಂದ ಟಿ.ವಿಯ ಕಡೆ ನೋಡದೆ ದೂರದಲ್ಲೆಲ್ಲೊ ದ್ರಷ್ಟಿ ಇಟ್ಟು ಕುಳಿತಿದ್ದ. ನಿದ್ದೆ ಮಾಡೋಣವೆಂದರೆ ನಿದ್ದೆಯೂ ಸುಳಿಯುತ್ತಿಲ್ಲ. "ಥೂ ಹಾಳಾದದ್ದು" ಇವತ್ತಾದರೂ ಬೇಗ ಬರೋಣವೆಂದರೆ ಇವತ್ತೇ ಲೇಟಾಗಬೇಕೆ? ಅನಿಸಿತು. ಅದೊಂದೂ ಸಮಸ್ಯೆ ಬರದೇ ಇದ್ದರೆ ಬೇಗ ಬರಬಹುದಿತ್ತೇನೋ. ಯಾವಾಗ ಬೇಗ ಆಪೀಸಿನಿಂದ ಹೋಗಬೇಕೆಂದುಕೊಂಡಿರುತ್ತೇನೋ ಆವತ್ತೇ ಇಂತಹ ಸಮಸ್ಯೆಗಳು ಬಂದು ಒಕ್ಕರಿಸಿಕೊಂಡು ಬಿಡುತ್ತವೆಯಲ್ಲ. ಕಳೆದ ಒಂದು ತಿಂಗಳಿಂದ ಯಾವುದೇ ಕಾಲ್ ಮಾಡದೇ ಇದ್ದ ಜಾನ್ ಇವತ್ತೇ ಕಾಲ್ ಮಾಡಬೇಕಿತ್ತೇ. ಅವರಿಗೇನು ಅಮೇರಿಕಾದಲ್ಲಿ ಕುಳಿತಿರುತ್ತಾರೆ. ಅವರಿಗೆ ಹಗಲು ಆದರೆ ನಮಗೆ ಇಲ್ಲಿ ರಾತ್ರಿ. ಇಲ್ಲ ಎಂದು ಹೇಳುವಂತೆಯೂ ಇಲ್ಲ. ಅಕಸ್ಮಾತ್ ಇಲ್ಲ ಅಂದರೆ ನೌಕರಿಗೆ ಕುತ್ತು. ಈ ರೀತಿಯ ಹಾಳು ಹುದ್ದೆಗಿಂತ ಅಪ್ಪ ಮಾಡುತ್ತಿದ್ದ ರೈತಾಬಿ ಕೆಲಸವೇ ಒಳ್ಳೆಯದೆನಿಸಿತು. ಕಟ್ಟ ಕಡೆಯಲ್ಲಿ ಬೇಸಾಯವಿರದ ಸಮಯದಲ್ಲಿ ಸ್ವಲ್ಪ ನೆಮ್ಮದಿಯಾದರೂ ಇರುತ್ತದೆ. ಆದರೆ ಇಲ್ಲಿ ಅದೂ ಇಲ್ಲ. ಎಲ್ಲಾ ಬಿಟ್ಟು ಊರ ಕಡೆ ಹೊರಟು ಬಿಡೋಣವೆಂದರೆ ಮಗನ ಓದಿನ ಸಮಸ್ಯೆ. ಒಂದು ತರ ತ್ರಿಷಂಕು ಸ್ಥಿತಿ. ಆಕಡೆನೂ ಇಲ್ಲ, ಈಕಡೆನೂ ಇಲ್ಲ. ಪಾಪ ಸುಮ ಬೆಳಿಗ್ಗೆಯಿಂದ ಮಗುವನ್ನು ನೋಡಿಕೊಂಡು ಅದೆಷ್ಟು ಕಷ್ಟ ಪಡುತ್ತಿದ್ದಳೋ. ನನ್ನಿಂದಾಗಿ ಅವಳಿಗೂ ಸಮಸ್ಯೆ. ಪಾಪ ಅವಳಾಗಿದ್ದಕ್ಕಾಗಿ ಇಷ್ಟು ದಿನ ಹೊಂದಿಕೊಂಡು ಇದ್ದಾಳೆ. ಬೇರೆಯವರಾಗಿದ್ದರೆ ಎಲ್ಲಾ ಬಿಟ್ಟು ಹೊರಟು ಬಿಡುತ್ತಿದ್ದರೇನೋ. ಹೀಗೆ ಯೋಚನೆ ಮಾಡುತ್ತಾ ಕುಳಿತವನಿಗೆ ಬೆಳಿಗ್ಗೆಯಾಗುವ ಹೊತ್ತಿಗೆ ಸ್ವಲ್ಪ ನಿದ್ದೆ ಹತ್ತಿತ್ತು.
ಬೆಳಿಗ್ಗೆ ಕೋಣೆಗೆ ಬಂದ ನರ್ಸ, ಡಾಕ್ಟರ್ ಒಂದಿಷ್ಟು ಔಷಧಿ ತಂದಿಡಳು ಹೇಳಿದ್ದಾರೆ ಎಂದು ಔಷಧಿ ಚೀಟಿಯನ್ನು ಸುಮಳಿಗೆ ಕೊಟ್ಟಳು. ಮಗನಿನ್ನೂ ಮಲಗಿದ್ದ. ಬೇಗ ಹೋಗಿ ಔಷಧಿ ತೆಗೆದುಕೊಂಡು ಬರೋಣವೆಂದು ಆಸ್ಪತ್ರೆಯೊಳಗಿನ ಔಷಧಾಲಯಕ್ಕೆ ಬಂದು ಔಷಧಿ ತೆಗೆದುಕೊಂಡು ಇನ್ನೇನು ಒಳ ಹೋಗಬೇಕು ಎನ್ನುವವಳಿಗೆ, ಅಲ್ಲೇ ಹತ್ತಿರದ ಮೂಲೆಯಲ್ಲಿ ಕುಳಿತ ಬಂಗಿಯಲ್ಲೇ ನಿದ್ರಿಸುತಿದ್ದ ರಮೇಶ ಕಣ್ಣಿಗೆ ಬಿದ್ದ. ಆಸ್ಪತ್ರೆಗೆ ಬಂದವರು ಕೊಣೆಗೆ ಬರದೇ ಇಲ್ಯಾಕೆ ಕುಳಿತಿದ್ದಾರೆ ಎಂದೆನಿಸಿ ಅವನ ಹತ್ತಿರ ಬಂದು ಮೈ ತಟ್ಟಿ ರಮೇಶ ಎಂದು ಎಚ್ಚರಿಸಿದಳು. ನಿದ್ದೆಯ ಗುಂಗಿನಲ್ಲಿದ್ದ ರಮೇಶ ಒಮ್ಮೆಲೆ ಬೆಚ್ಚಿಬಿದ್ದು "ಹಾಂ ಯಾರು" ಎಂದೆದ್ದ "ಹೇಯ್ ರಮೇಶ್ , ಇಲ್ಯಾಕೆ ಮಲಗಿದ್ದಿಯಾ? ರೂಮಿಗೇಕೆ ಬಂದಿಲ್ಲಾ" ಎಂದು ಕೇಳಿದಳು. ಅವಳು ಅವನನ್ನು ಕರೆಯುತ್ತಿದ್ದುದು ಹಾಗೆ. ಮದುವೆಯಾದಾಗಿನಿಂದ ಇಲ್ಲಿಯವರೆಗೂ ಎಂದೂ ಅವಳೂ ಅವನನ್ನು ಬಹುವಚನದಿಂದ ಮಾತನಾಡಿಸಲ್ಲಿಲ್ಲ. ಮೊದ ಮೊದಲು ಒಂದೆರಡು ಬಾರಿ ಪ್ರಯತ್ನಿಸಿದ್ದರೂ ರಮೇಶ ಬೇಡ ಎಂದಿದ್ದ. ರಮೇಶ ನಿದ್ದೆಯಿಂದ ಸ್ವಲ್ಪ ಹೊರಬಂದು "ಆಕಾಶ್ ಹೇಗಿದ್ದಾನೆ? ರಾತ್ರಿನೇ ಬಂದೆ. ಕದ ಬಡಿದೆ ನಿನು ಕದ ತೆಗೆಯಲಿಲ್ಲ ಬಹುಷ: ಮಲಗಿರಬಹುದೆಂದು ಇಲ್ಲಿ ಬಂದು ಕುಳಿತೆ."
"ಹೌದೆ ಮೊಬೈಲ್ ಇತ್ತಲ್ಲ, ರಿಂಗ ಕೊಡಬಹುದಿತ್ತು"ಎಂದಳು.
"ಹಾಂ ಹೌದು ಕೊಡೋಣವೆಂದುಕೊಂಡಿದ್ದೆ, ಮಗ ಮಲಗಿದ್ದವನು ಎಚ್ಚರವಾದರೆ ಎಂದೆನಿಸಿತು ಅದಕ್ಕೆ ಕೊಡಲಿಲ್ಲ ಹೋಗಲಿ ಹೇಗಿದ್ದಾನೆ ಆಕಾಶ"
"ಈಗ ಪರವಾಗಿಲ್ಲ ಇವತ್ತು ಜ್ವರ ಸಂಪೂರ್ಣ ಬಿಡಬಹುದು" ಎಂದು ಡಾಕ್ಟರ್ ಹೇಳಿದ್ದಾರೆ
"ಓಹ್ ಗುಡ್ , ಬಾ ಹೋಗೋಣ"
ಇಬ್ಬರು ರೂಮಿಗೆ ಬಂದರು. ಅವರು ರೂಮಿಗೆ ಬರುತ್ತಿದ್ದಂತೆ ಬೆಳಗ್ಗಿನ ಪಾಳಿಯ ಡಾಕ್ಟರ್ ರೂಮಿಗೆ ಬಂದು ಮಗುವಿನ ಜ್ವರವನ್ನು ಪರಿಶೀಲಿಸಿ, "ಮಗುವಿನ ಸ್ಥಿತಿ ಈಗ ತುಂಬಾ ಇಂಪ್ರೂವ್ ಆಗಿದೆ, ಜ್ವರ ಅಷ್ಟೊಂದು ಇಲ್ಲಾ, ಸಂಜೆ ಅಷ್ಟೊತ್ತಿಗೆ ಸಂಪೂರ್ಣ ಕಡಿಮೆಯಾಗಬಹುದು" ಎಂದು ಹೇಳುತ್ತಾ ಬೆಡ್ನ ತುದಿಗೆ ನೇತು ಹಾಕಿದ್ದ ನೋಟ್ ಬುಕ್ ತೆಗೆದುಕೊಂಡು ನೋಡಿದರು. ಬೆಳಿಗ್ಗೆ ತರಲು ಹೇಳಿದ ಔಷಧಿಗಳನ್ನು ಸುಮಾಳಿಂದ ತೆಗೆದುಕೊಂಡು ನರ್ಸಗೆ ಕೊಟ್ಟು ಮಗುಗೆ ಕೊಡಲು ಹೇಳಿ ಹೊರಗೆ ಹೊರಡುವ ಮುನ್ನ ಸುಮಾಳನ್ನು ನೋಡಿ ಇನ್ನೊಮ್ಮೆ " ನಿನ್ನೆಗೆ ಹೋಲಿಸಿದರೆ ಜ್ವರ ಅಷ್ಟೊಂದು ಇಲ್ಲ, ಇವತ್ತು ಸಾಯಂಕಾಲದ ಹೊತ್ತಿಗೆ ಸಂಪೂರ್ಣ ಕಡಿಮೆಯಾಗ ಬಹುದು. ನಾಳೆ ಡಿಸ್ಚಾರ್ಜ ಮಾಡಿಕೊಂಡು ಹೊರಡಲು ತೊಂದರೆ ಇಲ್ಲಾ" ಎಂದು ಹೇಳಿ ಇನ್ನೊಂದು ರೂಮಿನ ಕಡೆ ಹೊರಟಾಗ ಇಬ್ಬರಿಗೂ ಸ್ವಲ್ಪ ಸಮಾಧಾನವಾಗಿತ್ತು.
ಎಲ್ಲರಿಗೂ ಆಸ್ಪತ್ರೆಯ ಕ್ಯಾಂಟಿನಿನಿಂದ ಚಹಾ ತಿಂಡಿ ತರುವುದಾಗಿ ಹೇಳಿ ಹೊರಟ ರಮೇಶ. ಮಗುವಿನ ಆರೋಗ್ಯ ಸುಧಾರಿಸಿದ್ದರಿಂದ ಸ್ವಲ್ಪ ಸಮಾಧಾನವಾಗಿತ್ತಾದರೂ ಮನಸ್ಸು ಇನ್ನೂ ಸಂಪೂರ್ಣ ಹತೋಟಿಗೆ ಬಂದಿರಲಿಲ್ಲ. ಈ ಸಂಸಾರ ಎನ್ನುವುದು ಎಷ್ಟೊಂದು ವಿಚಿತ್ರವಾಗಿದೆ. ಎಲ್ಲಿಯೋ ಹುಟ್ಟಿ ಬೆಳೆದ ಗಂಡು, ಇನ್ನೆಲ್ಲಿಯೋ ಹುಟ್ಟಿ ಬೆಳೆದ ಹೆಣ್ಣು. ಅವರವರದೇ ಆ ಕನಸುಗಳನ್ನು, ಭಾವನೆಗಳನ್ನು ಮರೆತು ಇಷ್ಟವಿದ್ದೋ, ಇಷ್ಟವಿಲ್ಲದೆಯೋ ಒಟ್ಟಿಗೆ ಬದುಕುವುದನ್ನೇ ಸಂಸಾರ ಎಂದರೆ ಎಷ್ಟರ ಮಟ್ಟಿಗೆ ಸರಿ. ಅವರವರು ಹೊತ್ತು ಬಂದ ಕನಸುಗಳು, ಭಾವನೆಗಳು ಮದುವೆಯಲ್ಲಿಯೇ ಕೊನೆಯಾದರೆ ಹೇಗೆ. ಕನಸುಗಳು ಮದುವೆಯಲ್ಲಿ ಕೊನರಿಹೋಗದೇ ನನಸಾಗಬೇಕು. ಅವರವರ ಭಾವನೆಗಳನ್ನು ಅರಿತು ಒಬ್ಬರಿಗೊಬ್ಬರು ಸಹಕಾರಕೊಟ್ಟು ಹೊಂದಿಕೊಂಡು ಹೋಗಬೇಕು. ಒಬ್ಬರ ಕನಸು ನನಸಾಗಲು ಇನ್ನೊಬ್ಬರು ಸಹಾಯಮಾಡಬೇಕು. ಒಬ್ಬರಿಗೊಬ್ಬರು ಸಹಾಯ, ಸಹಕಾರ ಕೊಟ್ಟು ಹೊಂದಿಕೊಂಡಿ ಹೋಗುವುದನ್ನು ಸಂಸಾರ ಎನ್ನಲಾದೀತೇ ಹೊರತು ಒಬ್ಬರ ಏಳ್ಗೆಗಾಗಿ ಇನ್ನೊಬ್ಬರು ತಮ್ಮ ಕನಸುಗಳನ್ನು ಬಲಿಕೊಟ್ಟು ಇನ್ನೊಬ್ಬರ ಏಳ್ಗೆಯಲ್ಲೇ ತಮ್ಮನ್ನು ಮರೆತು ಕೊನೆಗೆ ಪರಿತಪಿಸುವುದನ್ನು ಸಂಸಾರ ಎನ್ನಲಾದಿತೇ?
ಬಹುಷಃ ಸುಮಾ ಇಲ್ಲಾ ಅಂದರೆ ನಾನು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲವೇನೋ. ಆದರೆ ನನ್ನ ಬೆಳವಣಿಗೆಯಲ್ಲಿ ನಾನು ಅವಳನ್ನು ಅರಿಯಲು ಪ್ರಯತ್ನಿಸಿಲ್ಲ. ನನ್ನ ಹಾಗೆ ಅವಳಿಗು ತನ್ನದೇ ಆದ ಕನಸುಗಳು ಭಾವನೆಗಳು ಇರಲೇ ಬೇಕಲ್ಲವೇ. ನನ್ನ ಬೆಳವಣಿಗೆಯಲ್ಲಿ ನಾನು ಅವೆಲ್ಲವನ್ನು ಕಡೆಗಣಿಸಿ ಬಿಟ್ಟೆನಲ್ಲ. ಇನ್ನಾದರೂ ನಾನು ಅವಳಿಗಾಗಿ ಸ್ವಲ್ಪ ಸಮಯ ಮೀಸಲಿಡಬೇಕು. ನನ್ನಂತೆ ಅವಳಿಗೂ ಬೆಳೆಯಲು ಸಹಾಯ ಸಹಕಾರ ನೀಡಬೇಕು ಹಾಗಿದ್ದರೆ ಮಾತ್ರ ನಮ್ಮ ಸಂಸಾರಕ್ಕೊಂದು ಅರ್ಥ. ಈ ಹುದ್ದೆ ಹಣ, ಕಾರು, ಬಂಗಲೆ ಇವೆಲ್ಲವೂ ಯಾತಕ್ಕಾಗಿ? ಹೆಂಡತಿ ಮಕ್ಕಳಿಗಾಗಿಯೇ ಅಲ್ಲವೇ. ಹೆಂಡತಿ ಮಕ್ಕಳು ಇಲ್ಲ ಅಂದರೆ ಅವೆಲ್ಲವೂ ನಗಣ್ಯ ಅಲ್ಲವೇ. ಇನ್ನಾದರೂ ನಾನು ಸ್ವಲ್ಪ ಸಮಯವನ್ನಾದರೂ ಕಳೆಯಲೇ ಬೇಕು. ಹೀಗೆ ಯೋಚಿಸುತ್ತಾ ಹೆಂಡತಿ ಮಗನಿಗಾಗಿ ಚಹಾ ತಿಂಡಿ ತೆಗೆದುಕೊಂಡು, ತಾನು ಇಲ್ಲಿಯೇ ತಿಂದು ಹೋಗೋಣವೆಂದು ಕೊಂಡು ಬಂದವನು, ಚಹಾ ತಿಂಡಿಯನ್ನು ಪಾರ್ಸಲ್ ಮಾಡಿಸಿಕೊಂಡು ಹೆಂಡತಿ ಮಗನಿದ್ದ ಕೋಣೆಗೆ ಹೊರಟ, ಇಂದಿನಿಂದಲಾದರೂ ಹೆಂಡತಿ ಮಗನೊಂದಿಗೆ ಕುಳಿತು ತಿಂಡಿ ತಿನ್ನೋಣವೆಂದು.
ಮಂಜು ಹಿಚ್ಕಡ್