Sunday, October 15, 2017

ಸುಂದರಮ್ಮನ ವಾರ್ತೆ

ವಿಜಯ ನಗರದ ಮೂರನೇ ಬೀದಿಯಲ್ಲಿನ ಮೊದಲೆನೆ ಮನೆಯ ನೆಲಮಹಡಿಯನ್ನು ಬಾಡಿಗೆ ಹಿಡಿದಿದ್ದರು ಸುಂದರಮ್ಮನವರು.  ಹೆಸರಲ್ಲೇನಿದೆ ಎಂಬಂತೆ, ಕಪ್ಪು ದೃಡಕಾಯದ ಶರೀರ. ವಯಸ್ಸು ಐವತ್ತರ ಆಸುಪಾಸಿರಬಹುದೇನೋ ಆ ಹೆಂಗಸಿಗೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದರಿಂದಲೋ ಏನೋ ಬಹುಭಾಷಾ ಪಾರಂಗತೆ. ಇಂಗ್ಲೀಷ ಒಂದನ್ನು ಬಿಟ್ಟು. ಬಹುಶಃ ಹೈಸ್ಕೂಲು ಮೆಟ್ಟಿಲು ಏರಿದ್ದರೆ ಆ ಭಾಷೆಯನ್ನು ಬಿಡುತ್ತಿರಲಿಲ್ಲ. ಏನು ಮಾಡುವುದು ವಿದ್ಯೆ ತಲೆಗೆ ಹತ್ತ ಬೇಕಲ್ಲ. ಹಾಗೂ ಹೀಗೂ ಜಗ್ಗಿ ಜಗ್ಗಿ ಏಳನೇ ತರಗತಿ ತಲುಪುವುದರಲ್ಲೇ ಸುಸ್ತಾಗಿ, ಅಲ್ಲಿಗೆ ಮೊಟಕುಗೊಳಿಸಿದ್ದರು ತಮ್ಮ ಶಿಕ್ಷಣವನ್ನು. ಇಸ್ - ವಾಸ್ ಎನ್ನುವುದನ್ನೇ , ಹೇಗೆ ಉಪಯೋಗಿಸಬೇಕು ಎನ್ನುವುದೇ ಅರ್ಥವಾಗದ ಅವರಿಗೆ ಅದೊಂದು ಕಬ್ಬಿಣದ ಕಡಲೆಯಾದ್ದರಿಂದಲೋ ಎನೋ ಆ ಭಾಷೆಯೊಂದು ಮಾತ್ರ ಕಡೆಯವರೆಗೂ ಒಲಿಯಲಿಲ್ಲ. ಆ ಕೊರಗಂತು ಆಗಾಗ ಅವರಿಗೆ ಕಾಡುತಿತ್ತು, ಈಗಲೂ ಕಾಡುತ್ತಿದೆ ಕೂಡ.

ವಿದ್ಯೆ ತಲೆಗೆ ಹತ್ತದಿದ್ದರು ಉಳಿದ ವಿಷಯಗಳಲ್ಲಿ ಚುರುಗಾಗಿದ್ದ ಸುಂದರಮ್ಮನವರಿಗೆ ಅವರ ತಂದೆ ಶ್ಯಾಮಣ್ಣ, ಮನೆಯಲ್ಲಿ ಮಗಳು ಖಾಲಿ ಕುಳಿತು ಕೊಂಡಿದ್ದಾಳೆ ಎಂದು, ಅವಳನ್ನು ಮೊದಲು ಟೈಪಿಂಗ್ ತರಗತಿಗೆ ಕಳುಹಿಸಿ ನೋಡಿದರು. ಆದರೆ ಅದೂ ಕೂಡ ಅವರ ತಲೆಗೆ ಹತ್ತಲಿಲ್ಲ. ಮುಂದೆ ಸಂಗೀತ, ನಾಟ್ಯ ತರಗತಿಗಳಿಗೂ ಪ್ರಯತ್ನಿಸಿ ಸೋತಿದ್ದೂ ಆಯಿತು. ಅವ್ಯಾವು ತಲೆಗೆ ಹೋಗದೇ ಅರ್ಧದಲ್ಲೇ ಬಿಟ್ಟು ಮನೆ ಸೇರಿದ್ದೂ ಆಗಿತ್ತು. ಮನೆಯಲ್ಲಿ ಆಗಾಗ ಹಳೆಯ ಬಟ್ಟೆಗಳನ್ನು ಕತ್ತರಿಸಿ ಗೊಂಬೆಗಳಿಗೆ ಬಟ್ಟೆ ಮಾಡಿ ತೊಡಿಸುವುದು, ದಿಂಬುಗಳಿಗೆ ಬಟ್ಟೆಯಿಂದ ಕವರ್ ಮಾಡಿ ತೋಡಿಸುವುದನ್ನು ಗಮನಿಸಿದ ಶಾಮಣ್ಣ, ಮಗಳಿಗೆ ಟೇಲರಿಂಗ್ನಲ್ಲಿ ಆಸಕ್ತಿ ಇರಬೇಕೆಂದು ತಿಳಿದು ತಮಗೆ ಪರಿಚಯವಿರುವ ಟೇಲರ್ ಬಳಿ ಟೇಲರಿಂಗ್ ಆದರೂ ಕಲಿಯಲಿ ನೋಡೋಣ ಎಂದು ಬಿಟ್ಟು ನೋಡಿದರು. ಬೇರೆ ಯಾವ ವಿದ್ಯೆಯು ತುರುಕದ ಆ ಮೆದುಳಿನಲ್ಲಿ ಆ ಹೊಲಿಗೆಯ ವಿದ್ಯೆ ಮಾತ್ರ ಬಹುಬೇಗ ಒಳಸೇರಿತು.

ಮುಂದೆ ಮದುವೆಯಾಗುವವರೆಗೆ ಒಂದಿಬ್ಬರು ಪ್ರತಿಷ್ಠಿತ ಟೇಲರ್ಗಳ ಜೊತೆ ಕೆಲಸ ಮಾಡಿ ಒಂದಿಷ್ಟು ಅನುಭವವನ್ನು ಪಡೆಯುವುದರ ಜೊತೆಗೆ ಅಲ್ಪ ಸ್ವಲ್ಪ ಹೆಸರನ್ನು ಸಂಪಾದಿಸಿ ಬಿಟ್ಟರು ಸುಂದರಮ್ಮ. ಬಹುಮಂದಿಯ ಬಾಯಲ್ಲಿ ಸುಂದರಮ್ಮ ಅದಾಗಲೇ ಟೇಲರಮ್ಮಳಾಗಿ ಹೆಸರಾಗಿದ್ದಳು. ಮುಂದೆ ನಾರಾಯಣ್ ಅವರನ್ನು ಮದುವೆಯಾಗಿ ಒಂದಿಬ್ಬರು ಮಕ್ಕಳಾದಮೇಲಂತು ಹೊರಗೆ ಕೆಲಸಕ್ಕೆ ಹೋಗುವುದು ಕಷ್ಟ ಎಂದು ತಿಳಿದು, ಮನೆಯಲ್ಲಿಯೇ ಎಲ್ಲಾ ತರಹದ ಮಷೀನುಗಳನ್ನು ಖರೀದಿಸಿ ಹೊಲಿಗೆ ಕೆಲಸಮಾಡಲಾರಂಭಿಸಿದರು. ಮೊದ ಮೊದಲು ಎಲ್ಲಾ ತರಹದ ಬಟ್ಟೆಗಳನ್ನು ಹೊಲಿಯುತಿದ್ದ ಅವರು, ಇತ್ತೀಚೆಗೆ ಕೆಲವು ವರ್ಷಗಳಿಂದ ತಮ್ಮ ಹೊಲಿಗೆಯನ್ನು ಕೇವಲ ಮಹಿಳೆಯರ ದಿರಿಸುಗಳಿಗಷ್ಟೇ ಮೀಸಲಾಗಿರಿಸಿಕೊಂಡಿದ್ದರು. ಬೇರೆ ದಿರಿಸುಗಳನ್ನು ಹೊಲೆಯಲು ಬಾರದು ಅಂತಲ್ಲ, ಮಹಿಳೆಯರ ದಿರಿಸುಗಳಿಗಿರುವಷ್ಟು ಬೇಡಿಕೆ ಪುರುಷರ ದಿರಿಸುಗಳಿರುವುದಿಲ್ಲ ಎನ್ನುವ ಕಾರಣಕ್ಕೆ ಮಾತ್ರ ಆ ಬದಲಾವಣೆ ಅಷ್ಟೇ.

ಒಂದು ಕಾಲದಲ್ಲಿ ಚಿಕ್ಕ ಓಣಿಯಲ್ಲಿದ್ದ ಸಂಸಾರ ಒಂದೆರಡು ವರ್ಷಗಳ ಹಿಂದೆಯಷ್ಟೇ ಆ ಬೀದಿಗೆ ಸ್ಥಳಾಂತರಗೊಂಡಿತ್ತು.   ಮೊದ ಮೊದಲು ಆ ಬೀದಿ ಅವಳಿಗೆ ಹೊಸತು, ಆ ಬೀದಿಯ ಜನರು ಹೊಸಬರು. ಅದರಲ್ಲೂ ಆ ಬೀದಿಯಲ್ಲಿ ವಾಸವಿರುವ ಬಹುತೇಕ ಜನ, ಆ ಬೀದಿಯಲ್ಲಿ  ಮದ್ಯಾಹ್ನದ ಸೂರ್ಯನನ್ನು ನೋಡುವುದು ರಜಾ ದಿನಗಳಲ್ಲೇ. ಉಳಿದ ಸಮಯದಲ್ಲಿ ನಡುವಯಸ್ಕ ಹೆಂಗಸರನ್ನು ಬಿಟ್ಟರೆ ಆ ಬೀದಿ ಬಹುತೇಕ ಖಾಲಿ ಖಾಲಿ ಇರುತಿತ್ತು. ಸದಾ ತಮ್ಮ ಕೆಲಸಗಳಲ್ಲಿ ಮಗ್ನರಾಗಿರುವ ಆ ಬೀದಿಯ ಜನರಿಗೆ ಸುಂದರಮ್ಮನವರ ಬಗ್ಗೆ ಅವರಿಗೇನು ಗೊತ್ತು. ಸುಂದರಮ್ಮನವರಿಗಾದರೂ ಆ ಬೀದಿಯ ಜನರ ಬಗ್ಗೆ ಗೊತ್ತಿದೆಯೇ? ಇಲ್ಲ. ಯಾಕಂದರೆ ಅವರು ಆ ಬೀದಿಗೆ ಹೊಸಬರಲ್ಲವೇ? ಹಾಗೆ ಗೊತ್ತಿಲ್ಲದೇ ತಮ್ಮ ಹೊಲಿಗೆಯ ಕರಾಮತ್ತನ್ನಾದರೂ ಪ್ರದರ್ಶಿಸುವುದು ಹೇಗೆ? ಹಾಗಂತ ಸುಮ್ಮನೇ ಕುಳಿತು ಬಿಟ್ಟರಾದೀತೇ?

ಆ ಬೀದಿಯ ಮೊದಲನೆಯ ಮನೆಯ ನೆಲಮಹಡಿ ಎಂದರೆ ಕೇಳಬೇಕೇ, ಆ ಬೀದಿಯ ತುದಿಯಲ್ಲಿರುವ ಐವತ್ತನೆಯ ಮನೆಯವರು ದಿನಕ್ಕೆ ಒಂದಿಲ್ಲ ಒಂದು ಬಾರಿ ಆ ಮನೆಯ ದಾರಿಯಲ್ಲಿಯೇ ಹಾದು ಹೋಗಬೇಕು. ಇದನ್ನರಿತ ಸುಂದರಮ್ಮ ಮೊದಲು ಮಾಡಿದ್ದೇನೆಂದರೆ ತಮ್ಮ ಒಂದು ಚಿಕ್ಕ ಹೊಲಿಗೆಯಂತ್ರವನ್ನು ಆ ಮನೆಯ ಹೊರಬಾಗದಲ್ಲಿ ಗಾಡಿ ನಿಲ್ಲಿಸಲು ಇರುವ ಜಾಗಕ್ಕೆ ಸ್ಥಳಾಂತರಿಸಿ, ಅಲ್ಲಿಯೇ ಕುಳಿತು ಹೊಲಿಯಲು ಸುರುಹಚ್ಚಿಕೊಂಡದ್ದು. ಸದಾ ವಾಚಾಳಿಯಾದ ಸುಂದರಮ್ಮನವರು ಬಹು ಭಾಷಾ ಪರಿಣಿತರು ಬೇರೇ. ಹಾಗಿದ್ದ ಮೇಲೆ ಕೇಳಬೇಕೇ. ಮೊದ ಮೊದಲು ಅಲ್ಲಿ ಮನೆಗೆಲಸ ಮಾಡುವ ಹೆಂಗಸರನ್ನು ತನ್ನ ತಕ್ಕೆಗೆ ತೆಗೆದುಕೊಂಡರು, ಆ ಕೆಲಸದವರ ಮೂಲಕ ತಮ್ಮ ವೃತ್ತಿ ಪ್ರಚಾರದ ಜೊತೆ ಜೊತೆಗೆ, ಅಕ್ಕ ಪಕ್ಕದವರ ಮನೆಯ ಮನೆ - ಮನ ವಾರ್ತೆಯನ್ನು ತಿಳಿದುಕೊಳ್ಳಲಾರಂಭಿಸಿದರು. ಹಾಗೆ ಕೇಳಿ ತಿಳಿದುಕೊಂಡ ಇನ್ನೊಬ್ಬರ ಮನೆಯ ವಾರ್ತೆಗಳಿಗೆ, ತಾವೊಂದಿಷ್ಟು ಉಪ್ಪು ಖಾರ ಸೇರಿಸಿ, ಅಕ್ಕ ಪಕ್ಕದಲ್ಲಿರುವ ನಡು ವಯಷ್ಕ ಮಹಿಳೆಯರಿಗೆ ಅವರವರ ಭಾಷೆಯಲ್ಲೇ ಬಿತ್ತರಿಸತೊಡಗಿದರು. ತಮ್ಮ ತಮ್ಮ ಮನೆಯ ದೋಸೆಯ ತೂತು ಕಾಣದ ಆ ಹೆಂಗಸರಿಗೆ, ಬೇರೊಬ್ಬರ ಮನೆಯ ದೋಸೆಯ ತೂತಿನ ವಿಷಯವೇ ಹಿತವಾಗಿರುತಿತ್ತು. ದಾರವಾಹಿಗಳು ಇರದ ಹೊತ್ತಿನಲ್ಲಿ ಹೊತ್ತು ಕಳೆಯಲಾರದ ಅವರಿಗೆ ಸುಂದರಮ್ಮ ಬಿತ್ತರಿಸುತಿದ್ದ, ಅಕ್ಕ ಪಕ್ಕದ ಮನೆಯವರ ಬಿಸಿ ಬಿಸಿ ಮನೆ ವಾರ್ತೆಗಳು ಆ ಮಹಿಳೆಯರಿಗೆ ತಮ್ಮ ಮನೆಯ ವಾರ್ತೆಗಳಿಗಿಂತ ಹಿತವೆನಿಸುತಿತ್ತು.

ದಿನಾ ಒಂದಲ್ಲ ಒಂದು ಸುದ್ದಿ ಬಿತ್ತರಿಸುತಿದ್ದ ಸುಂದರಮ್ಮನವರಿಗೆ ಆ ಬೀದಿಯಲ್ಲಿ ತಮ್ಮ ಹೊಲಿಗೆಯ ವಿಷಯಕ್ಕಿಂತ ಸುದ್ದಿ ಹೇಳುವುದಕ್ಕೆ ಪ್ರಸಿದ್ಧಿಯನ್ನು ಗಿಟ್ಟಿಸಿಬಿಟ್ಟರು. ಅವರ ಮನೆಯ ಸುದ್ದಿ ಇವರಿಗೆ, ಇವರ ಮನೆಯ ಸುದ್ದಿ ಅವರಿಗೆ ಹೇಳಿ, ಅವರಿಂದ ತಾವು ಒಂದಿಷ್ಟು ಹೊಸ ಸುದ್ದಿ ಕೇಳಿ ಇನ್ನಾರಿಗೋ ಹೇಳಿ, ಹೀಗೆ ಎರಡೇ ವರ್ಷದಲ್ಲಿ ಸುಂದರಮ್ಮ ಆ ಬೀದಿಯಲ್ಲಿ ಮನೆ ಮಾತಾಗಿಬಿಟ್ಟರು. ಆ ಬೀದಿಯಲ್ಲಿ ಯಾರಾದರು ಬಂದು ’ಇಲ್ಲಿ ಮನೆ ಖಾಲಿ ಇದೆಯೇ?’ ಎಂದು ಕೇಳಿದರೆ, ಉತ್ತರ, "ಆ ಸುಂದರಮ್ಮನವರಿಗೆ ಗೊತ್ತಿರತ್ತೇ ಕೇಳಿ". ’ಈ ಬೀದಿಯಲ್ಲಿ ಒಬ್ಬರು ಮನೀಶ್ ಅಂತಾ ಇದ್ದಾರೆ, ಇನ್ಪಿಯಲ್ಲಿ ಕೆಲಸ ಮಾಡ್ತಾರೆ, ಅವರ ಮನೆ ನಂಬರ್ ಗೊತ್ತಾ?’ ಎಂದು ಕೇಳಿದರೆ , ಉತ್ತರ, "ಆ ಸುಂದರಮ್ಮನವರಿಗೆ ಗೊತ್ತಿರತ್ತೇ ಕೇಳಿ". ’ಇಲ್ಲಿ ವಿನುತಾ ಅಂತಾ ಒಬ್ಬರು ವಿಧಾನಸೌಧದಲ್ಲಿ ಕೆಲಸ ಮಾಡ್ತಾರೆ ಗೊತ್ತಾ?" ಎಂದು ಯಾರಾದರೂ ಬಂದು ಕೇಳಿದರೆ, ಮತ್ತದೇ ಉತ್ತರ,  ಆ ಸುಂದರಮ್ಮನವರಿಗೆ ಗೊತ್ತಿರತ್ತೇ ಕೇಳಿ". ಅಷ್ಟರ ಮಟ್ಟಿಗೆ ಪ್ರಚಾರಗಿಟ್ಟಿಸಿಕೊಂಡುಬಿಟ್ಟಿದ್ದರು ಸುಂದರಮ್ಮ. ಹಾಗಾಗಿಯೇ ಏನೋ ಇತ್ತೀಚೆಗೆ, ಸದಾ ನೇತಾಡುತಿದ್ದ "ಸುಂದರಮ್ಮ ಲೇಡೀಸ್ ಟೇಲರ್" ಎನ್ನುವ ಹಳೆಯ ಬೋರ್ಡು ಹೋಗಿ, "ಸುಂದರಮ್ಮ ಲೇಡೀಸ್ ಟೇಲರ್ ಮತ್ತು ರಿಯಲ್ ಎಸ್ಟೇಟ್" ಎನ್ನುವ ಹೊಸ ಬೋರ್ಡು ನೇತಾಡುತಿತ್ತು ಮನೆಯ ಬಾಗೀಲ ಪಕ್ಕ.

ಸದಾ ಬೇರೆಯವರ ಮನೆಯ ದೋಸೆಯ ತೂತಿನ ವಿಚಾರದಲ್ಲೇ ಮಗ್ನಳಾಗಿರುತಿದ್ದ ಸುಂದರಮ್ಮನವರಿಗೆ ತಮ್ಮ ಮನೆಯ ದೋಸೆಯಲ್ಲೂ ತೂತಿದೆ ಎಂದು ಗೊತ್ತಾಗಲು ಬಹಳ ದಿನವೇನು ಹಿಡಿಯದೇ ಇರಲಿಲ್ಲ. ಕಾಲ ಎಲ್ಲಾ ಕಾಲಕ್ಕೂ ಒಂದೇ ತೆರನಾಗಿದ್ದರೆ, ಈ ಜೀವ ಸಂಕುಲಗಳಲ್ಲಿ ಅಷ್ಟೊಂದು ವೈವಿಧ್ಯತೆಯಾದರೂ ಎಲ್ಲಿರುತಿತ್ತು, ಜೀವ ವಿಕಾಸವಾದರೂ ಎಲ್ಲಾಗುತಿತ್ತು. ಕಾಲ ಬದಲಾಗದೇ ಇದ್ದಿದ್ದರೆ, ಮಂಗನಿಂದ ಮಾನವನಾಗಬೇಕಿದ್ದವನು ಮಂಗನಾಗಿಯೇ ಇದ್ದು ಬಿಡುತಿದ್ದ ಅಲ್ಲವೇ.  

ಅದು ಮೇ ತಿಂಗಳ ಮೊದಲ ವಾರ, ರಾತ್ರಿ ಸುಮಾರು ಹನ್ನೆರೆಡು ಗಂಟೆ, ಮನೆಯ ಹೊರಗಿನ ರಸ್ಥೆಯ ಬದಿಯ ದೀಪಗಳು ಒಮ್ಮೆ ಹಿಗ್ಗಿ ಬೆಳಗುತ್ತಾ, ಮತ್ತೆ ಕುಗ್ಗಿ ಮರೆಯಾಗುತ್ತಾ ಕಣ್ಣು ಮುಚ್ಚಾಲೆಯಾಟವಾಡುತಿದ್ದವು. ಒಂದೆರೆಡು ದಿನಗಳ ಹಿಂದಷ್ಟೇ ಪದವಿ ಪರೀಕ್ಷೆ ಬರೆದು ಮುಗಿಸಿದ ಮಗಳು, ಇನ್ನೂ ಸಿಇಟಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಗ ಒಳಗೆ ಮಲಗಿದ್ದರು. ಗಂಡ ಅದ್ಯಾವುದೋ ಕೆಲಸದ ಮೇಲೆ ಹೈದರಾಬಾದ್ಗೆ ಹೋಗಿದ್ದರು. ಮದುವೆ ಸೀಸನ್ ಜೋರಾಗಿದ್ದುದರಿಂದ ಸುಂದರಮ್ಮನವರಿಗೆ ಹೊಲಿಗೆಯ ಕೆಲಸವು ಜೋರಾಗಿತ್ತು. ವಾರ ಬಿಟ್ಟು ಕೊಡುತ್ತೇನೆ ಎಂದು  ಕಮಲಮ್ಮನವರಿಂದ ಇಸಿದುಕೊಂಡ ವಸ್ತ್ರಗಳಿನ್ನೂ ಬರೀಯ ವಸ್ತ್ರಗಳಾಗಿಯೇ ಇದ್ದವು ಬಿಟ್ಟರೆ ಅವಕ್ಕಾವುದೇ ಆಕಾರ ಬಂದಿರಲಿಲ್ಲ. ಕಮಲಮ್ಮನವರು ದೀನಾ ಬಂದು ಕೇಳಿದ್ದೇ ಕೇಳಿದ್ದು. ಸುಂದರಮ್ಮ ನಾಳೆ ಕೊಡುತ್ತೇನೆ ಎಂದು ಹೇಳಿದ್ದೇ ಹೇಳಿದ್ದು. ಬಟ್ಟೆ ಮಾತ್ರ ಇದ್ದಲ್ಲಿಯೇ ಇತ್ತು. ದೀನಾ ಕೇಳಿ ಬೇಸೆತ್ತಿದ್ದ ಕಮಲಮ್ಮನವರು ಇಂದು ಬೆಳಿಗ್ಗೆ ಸ್ವಲ್ಪ ಸಿಟ್ಟಿನಲ್ಲಿಯೇ

"ನೋಡಿ ಸುಂದರಮ್ಮನವರೇ, ದೀನಾ ನೀವು ನಾಳೆ, ನಾಳೆ ಎಂದು ಆಗಲೇ ಒಂದು ತಿಂಗಳು ಕಳೆದು ಬಿಟ್ಟಿರಿ, ಮುಂದಿನ ವಾರವೇ ಮೊಮ್ಮಗಳ ಮದುವೆ, ನೀವು ನೋಡಿದ್ರೆ, ಬಟ್ಟೆ ಹೊಲಿಯೋ ತರನೇ ಕಾಣಲ್ಲ, ಹೀಗೆ ಆದ್ರೆ ಹೇಗೆ?"

ಅದಕ್ಕೆ ಸುಂದರಮ್ಮನವರು " ಸಾರೀರಿ, ಕಮಲಮ್ಮನವರೇ, ದಯವಿಟ್ಟು ಬೇಜಾರು ಮಾಡ್ಕೋಬೇಡಿ, ನಾಳೆ ಅದೇನೇ ಆಗಲೀ ಖಂಡಿತ ಕೋಟ್ಟು ಬಿಡುತ್ತೇನೆ."

"ಅಯ್ಯೋ ಇನ್ನೆಷ್ಟು ನಾಳೆಗಳಮ್ಮ, ಬಾಯಿ ತೆರೆದರೆ ನಾಳೆ ಅಂತಿರಲ್ರೀ. ನೋಡಿ ನನಗೆ ನಾಳೆ ಬಟ್ಟೆ ಬೇಕೇ ಬೇಕು, ನಿಮ್ಮ ಹತ್ರ ಹೋಲಿಯೋಕ್ಕೆ ಆಗಲ್ಲ ಅಂದ್ರೆ ಹಾಗೆ ಕೊಡಿ, ನಾನು ೩ ನೇ ಪೇಸ್ ಅಲ್ಲಿರೋ ಮೋಹನ್ ಹತ್ರ ಕೊಡ್ತಿನಿ. ಮತ್ತೆ ನಾಳೆ ಅಂದ್ರೆ ಸುಮ್ಮನಿರಲ್ಲ ನೋಡಿ." ಎಂದು ಗದರಿಸಿ ಹೋಗಿದ್ದರು ಕಮಲಮ್ಮ.

ನಾಳೆ ಕೊಡುತ್ತೇನೆ ಎಂದು ಹೇಳಿ ಒಪ್ಪಿಕೊಂಡರೂ, ಇಷ್ಟೊತ್ತು ಹೊಲಿಯಲು ಪುರುಸೊತ್ತು ಸಿಕ್ಕಿರಲಿಲ್ಲ ಸುಂದರಮ್ಮನವರಿಗೆ. ಹಗಲಲ್ಲಿ ಅದ್ಯಾರೋ, ಮನೆ ಬಾಡಿಗೆಗೆ ಕೇಳಿಕೊಂಡು ಬಂದುದ್ದರಿಂದ, ಅವರಿಗೆ ಮನೆ ತೋರಿಸುವುದರಲ್ಲೇ ಕಳೆದು ಹೋಗಿತ್ತು. ಹೇಗಾದರು ಮಾಡಿ ರಾತ್ರಿ ಕುಳಿತು ಆದಷ್ಟು ಬಟ್ಟೆಯ ಕೆಲಸ ಮುಗಿಸಬೇಕೆಂದು ಒಳಗೆ ಕುಳಿತರೆ ಮಗನ ಓದಿಗೆ ತೊಂದರೆ ಆಗುತ್ತದೆಂದು ಹೊರಗೆ ದೀಪ ಹಚ್ಚಿ ಕುಳಿತರು ಸುಂದರಮ್ಮನವರು.

ಗಂಟೆ ಒಂದಾಯ್ತು, ಎರಡಾಯ್ತು, ಆದರೆ ಕೆಲಸ ಮಾತ್ರ ಅಂದುಕೊಂಡಷ್ಟು ಮುಗಿದಿರಲಿಲ್ಲ. ನಿದ್ದೆ ಬೇರೆ ಎಳೀತಾ ಇತ್ತು, ಆಗಾಗ ತೂಕಡಿಕೆ, ಆದರೆ ಎದ್ದು ಮಲಗಲು ಮನಸ್ಸಿಲ್ಲ. ನಾಳೆ ಬಟ್ಟೆ ಕೊಡಲೇ ಬೇಕೆನ್ನುವ ಚಿಂತೆ. ಅದೆಷ್ಟೇ ಪ್ರಯತ್ನಪಟ್ಟರು ನಿದ್ದೆಯ ಗುಂಗು ಕಣ್ಣ ಪೂರ್ತಿ ಆವರಿಸಿ ಕುಳಿತಿತ್ತು. ಅವರಿಗೆ ಅರಿವಿಲ್ಲದೇ ಒಂದೈದು ನಿಮಿಷ ತೂಕಡಸಿ ಅಲ್ಲೇ ನಿದ್ದೆಗೆ ಜಾರಿಬಿಟ್ಟರು. ತಕ್ಷಣ ಗೇಟಿನ ಶಬ್ಧ, ಯಾರದೋ ಹೆಜ್ಜೆಯ ಶಬ್ಧ ಕೇಳಿದಂತಾಗಿ, ಒಮ್ಮೇಲೆ ಹೆದರಿ, ತಡಬಡಿಸಿ, ಎದ್ದು, "ಯಾರು?" ಎಂದರು. ಉತ್ತರವಿಲ್ಲ. ಹೊರಗಡೆಯ ಬೀದಿದೀಪ, ಅಮವಾಸ್ಯೆಯ ಚಂದ್ರನಂತಾಗಿತ್ತು. ಬಹುಶಃ ಅವರಿಗೆ ಕನ್ನಡ ಬರಲಿಕ್ಕಿಲ್ಲವೆಂದು "ಅದಿ ಯಾರ್?" ಎಂದು ತಮಿಳಿನಲ್ಲೊಮ್ಮೆ ಕೇಳಿದರು. ಉತ್ತರವಿಲ್ಲ. ಹೌದು ಯಾರೋ ನಡೆದಾಡಿದ್ದಂತು ನಿಜ ಎಂದು, ಬಟ್ಟೆಗಳನ್ನು ಹೊಲಿಗೆಯಂತ್ರದ ಟೇಬಲ್ ಮೇಲಿಟ್ಟು, "ಯಾರಂಡಿ" ಎನ್ನುತ್ತಾ ಗೇಟು ತೆರೆಯಲು ನೋಡಿದರು. ಗೇಟಿನ  ಚಿಲಕ ಅರ್ಧಂಬರ್ಧ ತೆರೆದಂತಿದೆ. ಹೌದು ಯಾರೋ ಇಲ್ಲಿಯವರೆಗೆ ಬಂದು ಹೋದಂತಿದೆ. ಬಹುಶಃ ನನಗೆ ಎಚ್ಚರವಾಯಿತೆಂದು ಹೋಗಿರಬೇಕು. ನೋಡೋಣ ಎಂದು ಮುಖ್ಯರಸ್ಥೆಯವರೆಗೆ ನಡೆದು ಬಂದು, ಆ ಕಡೆ-ಈ ಕಡೆ ಸ್ವಲ್ಪ ದೂರದವರೆಗೆ ಕಣ್ಣಿಟ್ಟು ನೋಡಿದರು. ಅದ್ಯಾವುದೋ ಒಂದು ಬೈಕ್ ದೂರದಲ್ಲಿ ಕಾರ್ಡ್ ರೋಡ್ ನತ್ತ ಹೋಗುತಿತ್ತು ಬಿಟ್ಟರೆ ಮತ್ಯಾವುದೇ ಜನರ ಸುಳಿವಿರಲಿಲ್ಲ. ತನ್ನದೇ ಏನೋ ಭ್ರಮೆ ಇರಬೇಕೆಂದು ಮನೆಯತ್ತ ದಾವಿಸಿದರು.

ಮನೆಗೆ ಬಂದು ಮತ್ತೆ ಬಟ್ಟೆ ಕೈಗೆತ್ತಿಕೊಂಡರೂ, ಕೆಲಸಮಾಡಲು ಮೊದಲಿನ ಹುರುಪಿರಲಿಲ್ಲ. ಯಾಕೋ ಮನಸ್ಸು ಕುಲುಕಿದಂತಾಗಿತ್ತು. ಒಳಗೆ ದೃಷ್ಟಿಹಾಯಿಸಿದರೆ, ಒಳಗಡೆಯ ದೀಪಗಳೆಲ್ಲ ಅದಾಗಲೇ ಆರಿದ್ದವು. ಮಕ್ಕಳು ಮಲಗಿರಬೇಕೆಂದುಕೊಂಡರು. ಹೊರಗೆ ತೂಗು ಹಾಕಿದ ಗಡಿಯಾರ ನೋಡಿದರೆ, ಅದಾಗಲೇ ಗಂಟೆ ಮೂರು ಕಳೆದಿದ್ದನ್ನು ತೋರಿಸುತಿತ್ತು. ಇನ್ನೂ ಎಷ್ಟೊತ್ತು ಬಟ್ಟೆ ಹೊಲಿಯುವುದು. ಮಗಳಿಗೆ ಹೇಗೂ ಪರೀಕ್ಷೆ ಮುಗಿದಿದೆ. ನಾಳೆ ಅಡಿಗೆಯ ಕೆಲಸವನ್ನೆಲ್ಲ ಅವಳಿಗೆ ನೋಡಲು ಹೇಳಿ, ತಾನು ಕಮಲಮ್ಮನವರು ಕೊಟ್ಟ, ಬಟ್ಟೆಯ ಕೆಲಸವನ್ನೆಲ್ಲ ಮುಗಿಸಿ ಬಿಡುತ್ತೇನೆ ಎಂದು ಒಳನಡೆದು, ನಿದ್ದೆಗೆ ಜಾರಿದರು.

ಬೆಳಿಗ್ಗೆ ಇದ್ದಕ್ಕಿದ್ದ ಹಾಗೆ ಸುಂದರಮ್ಮನವರ ಮನೆಯಲ್ಲಿ ಅಳುವಿನ ಶಬ್ಧ ಕೇಳಿ, ಅಕ್ಕ ಪಕ್ಕದ ಮನೆಯವರೆಲ್ಲ ಬಂದು ಜಮಾಯಿಸಿ ಬಿಟ್ಟರು. ತಾನಾಯ್ತು, ತನ್ನ ಮನೆಯಾಯಿತು ಎಂದು ಕೊಂಡಿರುವ ವಿನುತಾ, ಇನ್ನೇನು ಕೆಲಸಕ್ಕೆ ಹೊರಡಬೇಕು ಎಂದು ಹೆಗಲಿಗೆ ಬ್ಯಾಗ್ ತುಗಿಕೊಂಡು, ತುಟಿಗೆ ಬಳಿದ ಬಣ್ಣದ ಚಪ್ಪಲಿ ಧರಿಸಿ, ಹೊರನಡೆಯುವುದಕ್ಕೆ ಬಾಗಿಲು ತೆರೆಯುವುದಕ್ಕೂ, ಮನೆಯ ಕೆಲಸದ ಮುನಿಯಮ್ಮ ಬಾಗಿಲ ಬಳಿ ಬರುವುದಕ್ಕೂ ಸರಿಯಾಯಿತು. ಇವಳೊಬ್ಬಳು ಹೊತ್ತಿಲ್ಲ ಗೊತ್ತಿಲ್ಲ, ತನಗೆ ಮನಸ್ಸಿಗೆ ಬಂದ ಹಾಗೆ ಕೆಲ್ಸಕ್ಕೆ ಬರ್ತಾಳೆ ಎಂದು ಮನಸ್ಸಿನಲ್ಲೇ ಬಯ್ಯುತ್ತಾ, "ಏನ್ ಮುನಿಯಮ್ಮ ಯಾಕೆ ಲೇಟ್ ಇವತ್ತು" ಎಂದು ಕೇಳಿದರು.

"ಸಾರಿ ಅಮ್ಮೋರೇ ಸ್ವಲ್ಪ ಲೇಟಾಯ್ತು. ಆ ಸುಂದರಮ್ಮನವರ ಮನೆ ಇದೆಯಲ್ಲಾ, ಅಲ್ಲಿ ಜನಾ ಸೇರಿದ್ದರು, ಏನಾಂತಾ ಕೇಳಿದ್ರೆ, ಅವಳ ಮಗಳು ರಾತ್ರಿ ಮನೆ ಬಿಟ್ಟು ಹೋಗಿದ್ದಾಳಂತೆ. ಅದ್ಯಾರ್ನೋ ಪ್ರೀತಿಸ್ತಿವ್ನಿ, ಮದ್ವೆ ಆಗ್ತೀವ್ನಿ, ಅಂತಾ ಕಾಗ್ದಾ ಬರ್ದು ಹೋಗವಳಂತೆ. ಅದನ್ನಾ ಕೇಳ್ತಾ ಲೇಟಾಗೋಯ್ತು, ಸಾರೀರೀ ಅಮ್ಮೋರೆ"

"ಓಹ್ ಹಾಗಾ, ನೋಡು ಇವಾಗ ನಾನು ಕೆಲಸಕ್ಕೆ ಹೋಗ್ಬೇಕು, ಲೇಟಾಗತ್ತೆ. ನಾಳೆ ಸ್ವಲ್ಪ ಬೇಗ ಬಂದು ಬಿಡು ಆಯ್ತಾ" ಎನ್ನುತ್ತಾ ಬಿರ ಬಿರನೇ ನಡೆದೇ ಬೀಟ್ಟರು ವಿನುತಾ ತನ್ನ ಕೆಲಸಕ್ಕೆ. ತನಗೂ ಅದೇ ಬೀದಿಯಲ್ಲಿನ ಪಕ್ಕದ ಮನೆಯ ಸುಂದರಮ್ಮನ ಸಂಸಾರಕ್ಕೂ ಏನು ಸಂಬಂಧ ಎನ್ನುವಂತೆ.

--ಮಂಜು ಹಿಚ್ಕಡ್

Wednesday, May 3, 2017

ನೀ ಇರಲು ಜೊತೆಯಲ್ಲಿ!

ನನ್ನ ಹೆಸರ ಮಧ್ಯದಲ್ಲಿ
ನಿನ್ನ ಹೆಸರ ಮೊದಲ ಶಬ್ಧ
ಕಡೆಯ ಶಬ್ಧಗಳೆರಡ ಬಳಸುವಾಗ
ಮನಸು ಮಂತ್ರ ಮುಗ್ಧ.

ನಿನ್ನ ನುಡಿಯ ಕೇಳುತಿರಲು
ಮನದಿ ಒಲವ ಸಿಂಚನ
ನಿನ್ನ ಸ್ಪರ್ಷ ತಾಕಿದಾಗ
ಹೃದಯ ವೀಣೆಯ ಕಂಪನ.

ಕಣ್ಣು ಕಣ್ಣು ಬೆರೆಯುವಾಗ
ಉಸಿರು ಮೌನ ಮರೆತಿದೆ
ಹೃದಯ ವೀಣೆ ಮೀಟುವಾಗ
ಪ್ರೀತಿ ಚಿಮ್ಮಿ ಹರಿದಿದೆ.

ದಿನಗಳುರುಳಲಿ, ವರ್ಷ ಕಳೆಯಲಿ
ಹೊಸತಿರಲು ನಮ್ಮ ಅನುಭವ
ಹಳತರಲ್ಲಿ ಹೊಸತ ಹುಡುಕುತ
ಕಳೆದು ಬೀಡುವ ಕಾಲವ.

ಚಳಿಯಿರಲಿ, ಬಿಸಿಲು ಮಳೆಯಿರಲಿ
ಹೀಗೆ ಸಾಗುತಿರಲಿ ಜೀವನ
ಗತಿಸಿದ್ದೆಲ್ಲವ ಮರೆತು ನಡೆಯುವ
ತಣ್ಣಗಿರುವುದು ಈ ಮೈಮನ.

ನೋವು ನಲಿವುಗಳೇನೇ ಇರಲಿ
ನೀನು ಇರಲು ಜೊತೆಯಲಿ
ಹೆಜ್ಜೆ ಹೆಜ್ಜೆ ಕೂಡಿ ಇಡುವ
ಬಾಳ್ವೆ ಎಂಬ ಪಥದಲಿ.

--ಮಂಜು ಹಿಚ್ಕಡ್

Thursday, April 20, 2017

ಬದುಕು-ಬವಣೆ: ಭಾಗ ೪

ಬದುಕು-ಬವಣೆ: ಭಾಗ ೩
ಸಂಜೆ ಸರಿದು ಕತ್ತಲು ಆವರಿಸಿತು. ರಾತ್ರಿಯ ಅನ್ನಕ್ಕಾಗಿ ಒಲೆಯ ಮೇಲೆ ಕುದಿಯುತ್ತಿದ್ದ ಅನ್ನದ ಪಾತ್ರೆಗೆ ಅಕ್ಕಿ ಹಾಕುತ್ತಿದ್ದ ನಾಗಿಗೆ, ಮನೆಯಿಂದ ಹತ್ತಿಪ್ಪತ್ತು ಮಾರು ದೂರದಿಂದಲೇ ಕುಡಿದು ಒದರುತ್ತಾ ಬರುತ್ತಿರುವ ಗಂಡ ಮಂಕಳುವಿನ ಧ್ವನಿ ಕೇಳಿ " ರಾತ್ರೆ ಆಯ್ತು ಇವ್ರಿಗ್, ಮನೆ ಕಡೆ ಏನಾಗ್ ಸತ್ರೂ ಇವ್ರೆಗ್ ಅಷ್ಟೇ". ಎಂದು ತನ್ನಷ್ಟಕ್ಕೆ ತಾನೆ ಹೇಳಿಕೊಳ್ಳುತ್ತಾ ಅಕ್ಕಿ ಹಾಕಿ ಹೊರಬಂದಳು. ಗಂಡ ಒದರುತ್ತಲೇ ತೂರಾಡುತ್ತಾ ಬಂದು ಮನೆಯ ದಣಪೆ ದಾಟಿ ಬಂದು ಹೊರಗೆ ನಿಂತ ಹೆಂಡತಿಯನ್ನು ನೋಡಿ, "ಹೆರ್ಗ್ ನಿಂತ ಏನ್ ಮಾಡ್ತೆ ಇಂವ್ಯೆ".

"ನೀವ್ ಯಾರ್ಕೋಡ ಜಗ್ಳಾ ಮಾಡ್ತೇ ಬತ್ತೇ ಇದ್ರಿ, ದಿನಾ ಒಂದೇ ಕತೆ ಅಲ್ಲಾ ನಿಮ್ದು".

"ನಿಂಗೆಂತಕ ಅವೆಲ್ಲಾ, ಸುಮ್ನೆ ಒಳ್ಗೆ ಹೋಗ್" ಎಂದು ಗದರಿಸಿದ.

ನಾಗಿಗೆ ಅದು ಅಭ್ಯಾಸವಾಗಿ ಹೋಗಿದೆ. ಇದೇನು ಹೊಸ ವಿಷಯವಲ್ಲ, ಕಳೆದ ೩೫ ವರ್ಷಗಳಿಂದ ರಾತ್ರಿಯಾದರೆ ಅದನ್ನೇ ನೋಡುತ್ತಾ ಬರುತ್ತಿದ್ದಾಳೆ. "ಕುಡುದ್ ಬಿಟ್ರೆ ಮತ್ತೆಂತದ ಬತ್ತಿದ" ಎಂದು ತನ್ನಷ್ಟಕ್ಕೆ ತಾನೇ ಗೊಣಗಿಕೊಳ್ಳುತ್ತಾ ಒಲೆಯ ಬಳಿ ಬಂದಳು. ಅನ್ನ ಆಗಲೇ ಕುದಿದು ಮೇಲೆ ಬರುತ್ತಿತು. ಸ್ವಲ್ಪ ಹೊತ್ತು ಕಾದು ಬೆಂದ ಅನ್ನವನ್ನು ಕೆಳಗಿಳಿಸಿ ಬಂದು ಮಗನ ಪಕ್ಕದಲ್ಲಿ ಕುಳಿತಳು. ವಾಸಿಯಾದರೆ ಸಾಕೆಂದು ಕಾಣದ ದೇವರಿಗಿಷ್ಟು, ದೆವ್ವಕಿಷ್ಟು ಮುಡಿಪು ಕಟ್ಟಿದಳು.

ರಾತ್ರಿ ಊಟ ಮುಗಿಸಿ, ಮಗನಿಗೆ ಔಷದಿಕೊಟ್ಟು ಮಲಗುವ ಹೊತ್ತಿಗೆ ರಾತ್ರಿ ಹತ್ತು ದಾಟಿತ್ತು. ನಾಳೆ ಬೇಗ ಏಳಬೇಕು,ಎದ್ದು ತಯಾರಾಗಿ ಆಸ್ಪತ್ರೆಗೆ ಹೋಗಬೇಕು ಎಂದುಕೊಂಡು ಮಲಗಿದಳು. ಮಲಗಿ ಕಣ್ಣು ಮುಚ್ಚಿದಳೇ ಹೊರತು ನಿದ್ರಿಸಲಿಲ್ಲ. ಮನಸ್ಸು ಪೂರ್ತಿ ಚಿಂತೆ ಆವರಿಸಿದರೆ ಕೇವಲ ಕಣ್ಣು ಮುಚ್ಚಬಹುದೇ ಹೊರತು ನಿದ್ರಿಸಲಾದೀತೇ, ಹಾಗೂ ಹೀಗೂ ಹೊರಳಾಡಿ ರಾತ್ರಿ ಕಳೆದಳು.

ಬೆಳಿಗ್ಗೆ ಬೇಗ ಎದ್ದು ಗಂಡನಿಗೆ ಮತ್ತು ಮಗನಿಗೆ ದೋಸೆ ಮಾಡಿಟ್ಟು, ಚಹಾ ಮಾಡಿದಳು. ಗಂಡ ಎದ್ದೊಡನೆ ಗಂಡನಿಗೆ "ಹನ್ಮುನ ಅಂಕೋಲೆ ಆಸ್ಪತ್ರೆಗಾ ಕರ್ಕುಂಡ ಹೋತೆ, ಬತ್ತರಿ" ಎಂದು ಕೇಳಿದಾಗ ಮಂಕಳು "ಆಯ್ತೇ ಬತ್ತೇ" ಎಂದು ತಾನೂ ಕೂಡ ಬರುವುದಾಗಿ ಒಪ್ಪಿಕೊಂಡ. ನಾಗಿಗೆ ತನ್ನ ಗಂಡನ ಮಾತು ಕೇಳಿ ಸ್ವಲ್ಪ ಸಮಾಧಾನವಾಯಿತು. ನಾಗಿ ಗಂಡನಿಗೆ ಚಹಾ ದೋಸೆ ಕೊಟ್ಟು ಮಗನಿಗೂ ತಿನ್ನಿಸಿ, ತಾನು ತಿಂದು ಮುಗಿಸಿ, ಮಗನನ್ನು ತಯಾರು ಮಾಡಿ ತಾನು ತಯಾರಾದಳು. ಅವಳು ತಯಾರಾಗುವ ಹೊತ್ತಿಗೆ ಮಂಕಾಳು ಕೂಡ ತಯಾರಾಗಿದ್ದ. ಗಂಡ ಹೆಂಡಿರಿಬ್ಬರೂ ಹನ್ಮೂನ ಕರೆದುಕೊಂಡು ಬರುವಾಗ ಸೊಸೆಗೆ ಮನೆಯ ಕಡೆ ನೋಡಿಕೊಂಡಿರುವಂತೆ ಹೇಳಿ ಹತ್ತು ಗಂಟೆಯ ಬಸ್ಸಿಗೆ ಹರೀಶನ ಆಸ್ಪತ್ರೆಗೆ ಹೊರಟರು.

ಹರೀಶನಿಗೆ ಆಗಲೇ ಅವನ ಅಮ್ಮ ಎಲ್ಲವನು ಹೇಳಿದ್ದರಿಂದ ನಾಗಿ ಮತ್ತು ಮಂಕಳು ಮಗನನ್ನು ಕರೆದುಕೊಂಡು ಬಂದೊಡನೆ ಅವರನ್ನು ಮೊದಲು ನೋಡಿ ಅವರಿಗೆ ಅಲ್ಲೇ ಉಳಿದುಕೊಳ್ಳಲು ಹೇಳಿದ. ತನ್ನ ಆಸ್ಪತ್ರೆಯ ನರ್ಸ ಒಬ್ಬಳಿಗೆ ಹನ್ಮುನ ರಕ್ತ ಹಾಗೂ ಉಚ್ಚೆಯ(ಯೂರಿನ್) ಸೆಂಪಲಗಳನ್ನು ತೆಗೆದುಕೊಂಡು ಹೆಚ್ಚಿನ ಪರೀಕ್ಷೆಗಾಗಿ ಕಾರವಾರಕ್ಕೆ ಕೂಡಲೇ ಕಳಿಸಿಕೊಡುವಂತೆ ತಿಳಿಸಿದ. ತಾನು ಇತರ ರೋಗಿಗಳನ್ನು ನೋಡುತ್ತಿದ್ದರೂ ಆಗಾಗ ಬಂದು ಹನ್ಮುವನ್ನು  ನೋಡಿ ಹೋಗುತಿದ್ದ. ಹನ್ಮುನ ಜ್ವರ ಕಡಿಮೆ ಮಾಡಲು ಹೆಚ್ಚಿನ ಡೋಸನ ಮಾತ್ರೆಗಳನ್ನು ನೀಡಿದ. ಆದಿನ ರಾತ್ರಿಯ ಹೊತ್ತಿಗೆ ಹನ್ಮುವಿನ ರಕ್ತ ಹಾಗೂ ಯೂರಿನಿನ ರಿಸಲ್ಟ ಬಂದಿತ್ತು. ಅದರಲ್ಲಿ ಹರಿಶ ಅಂದುಕೊಂಡಂತೆ ಹಂದೀ ಜ್ವರ ಇರುವುದು ಖಾತ್ರಿಯಾಗಿತ್ತು.
PC: Google

ನಾಗಿಯನ್ನು ಕರೆದು ಹರೀಶ ಏನನ್ನು ಮುಚ್ಚಿಟ್ಟುಕೊಳ್ಳದೇ ಹನ್ಮುಗೆ ಇರುವ ಹಂದೀ ಜ್ವರದ ಬಗ್ಗೆ ಹೇಳಿದ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದುಕೊಂಡು ಹೋಗುವುದು ಒಳ್ಳೆಯದು ಎಂದಾಗ ಅಂಕೋಲೆ, ಕಾರವಾರ, ಕುಮಟಾ ಬಿಟ್ಟು ಬೇರೆ ಊರುಗಳನ್ನು ನೋಡದ ನಾಗಿಗೆ ಮಣಿಪಾಲಕ್ಕೆ ಮಗನನ್ನು ಕರೆದುಕೊಂಡು ಹೋಗಬೇಕು ಎಂದಾಗ ಸ್ವಲ್ಪ ಅಧೀರಳಾಗಿ "ಅಲ್ಲಿಗೆ ಕರ್ಕಂಡೆ ಹೋಗ್ಲೇ ಬೇಕಾ? ಇಲ್ಲೇ ಏನೂ ಮಾಡಕ್ಕಾಗಲ್ರಾ?" ಎಂದು ಕೇಳಿದಳು.

"ನಾಗಿ ನಮ್ಮ ಹತ್ರೆ ಅದ್ಕೆ ಬೇಕಾಗು ಔಷಧವಿಲ್ಲಾ ಇಲ್ಲಿ. ನಾವ ಅಲ್ಲಿಂದ ತಂದೆ ಇಲ್ಲೆ ಚಿಕಿತ್ಸೆ ಕುಡುದ್ಕಿಂತ ನೀವೇ ಒಂದ್ಸಲಾ ಅಲ್ಲಿಗೆ ಹೋಗೆ ಬರುದ ಒಳ್ಳೇದ. ಹೆದ್ರುಕೊಳ್ಳುವಂತದೇನಿಲ್ಲಾ. ಅವ್ನಿಗೆ ಜ್ವರ ಮೊದಲಿನಷ್ಟಿಲ್ಲಾ. ಅಲ್ಲೆ ನನ್ನ ಕ್ಲಾಸಮೆಂಟ್ ಸಂಕೇತ್ ಅಂತೇ ಇಂವಾ. ಆಂವ್ಗೆ ನಾ ಒಂದು ಲೆಟರ ಬರ್ಕಂಡೆ ಕುಡ್ತಿ. ಆಂವ್ಗೆ ಕೊಡಿ, ಆಂವಾ ಎಲ್ಲಾ ನೋಡ್ಕಣ್ತಿಯಾ". ಎಂದು ಹೇಳಿ ಸ್ವಲ್ಪ ಧೈರ್ಯ ತುಂಬಿದ.

ಹರೀಶ ಅಷ್ಟು ಹೇಳಿದ ಮೇಲೆ ನಾಗಿಗೆ ಇಲ್ಲ ಎನ್ನಲಾಗಲಿಲ್ಲ. ಹೇಗೂ ಗೊತ್ತಿರಲಿ, ಇಲ್ಲದಿರಲಿ ಗಂಡ ಇದ್ದಾನೆ ಎನಿಸಿತು. ಮಾರನೆಯ ದಿನ ಹರೀಶನ ಆಸ್ಪತ್ರೆಯಿಂದ ಮಣಿಪಾಲಕ್ಕೆ ಹೊರಟರು. ಹರೀಶ ಅವರಿಂದ ಯಾವುದೇ ರೊಕ್ಕವನ್ನು ತೆಗೆದುಕೊಳ್ಳಲಿಲ್ಲ. ಹೋಗುವಾಗ ಮಂಕಾಳುಗೆ ಮುಂದೆ ಕರ್ಚಿಗೆ ಇರಲಿ ಎಂದು ಹೇಳಿ ಎರಡು ಸಾವಿರ ರೂಪಾಯಿ ಕೊಟ್ಟು ಕಳಿಸಿದ.

ಮಣಿಪಾಲಕ್ಕೆ ಬಂದಾಗ ಸಂಜೆ ನಾಲ್ಕು ದಾಟಿತ್ತು. ಹರೀಶ ಹೇಳಿದ ಸಂಕೇತನನ್ನು ಹುಡುಕಿಕೊಂಡು ಹೋದರು. ಸಂಕೇತನಿಗೆ ಹರೀಶ ಕೊಟ್ಟ ಲೆಟರನ್ನು ಕೊಟ್ಟರು. ಹರೀಶ ಪತ್ರದಲ್ಲಿ ಹನ್ಮುಗೆ ಇರುವ ಕಾಯಿಲೆಯನ್ನು, ಬಂದವರ ಪರೀಸ್ಥಿತಿಯನ್ನು ವಿವರಿಸಿದ್ದ. ಹರೀಶ ಕೊಟ್ಟ ಲೆಟರನ್ನು ನೋಡಿ ಅವರನ್ನು ಅಲ್ಲೇ ಎಡ್ಮಿಟ್ ಮಾಡಿಕೊಂಡು ಚಿಕಿತ್ಸೆಕೊಡಲು ಪ್ರಾರಂಭಿಸಿದ.

ಅಲ್ಲಿ ಸೇರಿದ ನಾಲ್ಕೈದು ದಿನಕ್ಕೆ ಹನ್ಮೂ ಸಂಪೂರ್ಣ ಗುಣಮುಖನಾದ. ಮಗನ ಈಗಿನ ಸ್ಥಿತಿಯನ್ನು ನೋಡಿ ನಾಗಿಗೆ ಸ್ವಲ್ಪ ಸಮಾಧಾನವಾಯಿತು. ಮಣಿಪಾಲಕ್ಕೆ ಬಂದು ಮಗ ಗುಣಮುಖನಾಗಿ ಊರು ಸೇರುವ ಹೊತ್ತಿಗೆ ನಾಗಿಯು ತಂದ ಹಣವೆಲ್ಲ ಕರಗಿ ಹೋಗಿತ್ತು. (ಹನ್ಮು ಸಂಪೂರ್ಣ ಗುಣಮುಖನಾದರೂ ಅವನಿಗೆ ಇನ್ನೆರಡು ವಾರದ ಔಷದಕ್ಕೆ ಇನ್ನೊಂದು ಸಾವಿರವಾದರೂ ಬೇಕು.) ಹನ್ಮುವೇನೋ ಗುಣಮುಖನಾದ, ಆದರೆ ನಾಗಿ ಹೊತ್ತ ಹರಕೆಗಳು. ಹಣವೆಲ್ಲ ಚಿಕಿತ್ಸೆಗೆ ಕರಗಿ ಹೋದಮೇಲೆ ಇನ್ನೂ ಹರಕೆಗಳಿಗೆ ಹಣವೆಲ್ಲಿ. ಈಗ ಸೀತಮ್ಮನವರಿಂದ ತೆಗೆದುಕೊಂಡ ರೊಕ್ಕ ತೀರಿಸಲು ದಿನ ನಿತ್ಯ ಅವರ ಮನೆಯಲ್ಲೇ ದುಡಿದರೂ ಇನ್ನೊಂದು ವರ್ಷವಾದರೂ ಬೇಕು. ಹರಕೆ ತೀರಿಸಿಲ್ಲವೆಂದರೆ ದೇವರು, ದೆವ್ವಗಳು ಸೇರಿ ಮತ್ತೆ ಹನ್ಮುಗೆ ತ್ರಾಸು ಕೊಟ್ಟರೆ ಎನ್ನುವ ಚಿಂತೆ ಕಾಡೀತು.

ಹೇಗೂ ಒಂದು ವರ್ಷ ತಾನೆ, ಈ ವರ್ಷಕಳೆದರೆ ಸಾಕು ಹನ್ಮುನ ಓದು ಮುಗಿಯುತ್ತದೆ. ಮುಂದೆ ಅವನು ದುಡಿಯುತ್ತಾನೆ. ಅವನಿಂದಲೇ ಹರಕೆ ತೀರೀಸಿ ಬಿಟ್ಟರೆ ಹೇಗೆ. ಈಗ ತಾನು ಹೊತ್ತ ಹರಕೆಗಳು ಸದ್ಯಕ್ಕೆ ಹನ್ಮುಗೆ ತೊಂದರೆ ಕೊಡದ ರೀತಿಯಲ್ಲಿ ತಪ್ಪು ಕಾಣಿಕೆ ಕೊಟ್ಟರೆ ಹೇಗೆ ಅನಿಸಿತು ನಾಗಿಗೆ. ಹಾಗೆ ಮನಸ್ಸಿಗೆ ಬಂದದ್ದೇ ತಡ, ಮನೆಯಿಂದ ಎರಡು ತೆಂಗಿನ ಕಾಯಿ ಸುಲಿದುಕೊಂಡು, ಮನೆಯ ಮುಂದಿನ ದಾಸವಾಳ ಗಿಡದಿಂದ ಒಂದಿಷ್ಟು ಹೂವು ಕೊಯ್ದುಕೊಂಡು ದೇವಸ್ಥಾನದ ಕಡೆ ಹೊರಟಳು ತಾನು ಹೊತ್ತ ಹರಕೆಗಳಿಗೆ ತಪ್ಪು ಕಾಣಿಕೆ ಸಲ್ಲಿಸಲು.
(ಮುಗಿಯಿತು...)

--ಮಂಜು ಹಿಚ್ಕಡ್

Wednesday, March 29, 2017

ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು

ಯುಗಾದಿ ಹಬ್ಬದ ಹಾರ್ಧಿಕ  ಶುಭಾಷಯಗಳು

ಮನವು ಹಸನಾಗಿ, ಬಾಳು ಹಸುರಾಗಿ
ಒಲವೆಂಬ ಒರತೆ ಸದಾ ಚಿಮ್ಮುತಿರಲಿ
ಕಷ್ಟ-ಕೋಟಲೆಗಳ ಬಾಳ ಪಥದಲ್ಲಿ
ಸದಾ ಹರ್ಷವು, ಮೊಳಗುತಿರಲಿ.

ಸುಖಕೆ ದುಖವು ಸೇರಿ
ಬಾಳು ಹದವಾಗಿರಲಿ
ಬದುಕಿನ ಪಯಣದಲಿ
ಯಸಸ್ಸು ನಿಮ್ಮದಾಗಿರಲಿ

ಯುಗದ ಆದಿಯೂ ನಿಮಗೆ
ಹರ್ಷ ತರಲಿ
ಈ ವರ್ಷ ಪೂರ್ತಿ ನಿಮಗೆ
ಶುಭವ ತರಲಿ.


ಶುಭ ಹಾರೈಕೆಗಳೊಂದಿಗೆ,

ಇಂತಿ ನಿಮ್ಮವ
ಮಂಜು ಹಿಚ್ಕಡ್ 

Saturday, March 11, 2017

ನಾಳೆ ಸುಗ್ಗಿ ಹಬ್ಬವಂತೆ... ಹೋ ಹೋ ಹೋಹೋಚೋ.....

"ನಾಳೆ ಹೋಳಿ, ಬಣ್ಣ ಹಚ್ಚಬೇಕು" ಎಂದು ಮಗಳು ಹೇಳಿದಾಗ ಮತ್ತೆ ಹೋಳಿ ಬಂದುದರ ನೆನಪಾಯಿತು. ನನಗಿದು ೩೬ ನೇ ಹೋಳಿಯಾದರೂ, ಬಣ್ಣ ಹಚ್ಚಿ ಆಡಿದ್ದು ತುಂಬಾ ಕಡಿಮೆಯೇ. ನನಗೆ ಅಥವಾ ನಮ್ಮ ಕಡೆಯವರಿಗೆ ಹೋಳಿ ಎಂದ ತಕ್ಷಣ ನೆನಪಾಗುವುದು ಸುಗ್ಗಿ ಹಬ್ಬವೇ ಹೊರತು ಬಣ್ಣದ ಆಟವಲ್ಲ. ಹಾಗಾಗಿಯೇ ಏನೋ  ಮನಸ್ಸು ಮತ್ತೆ ಮತ್ತೆ ಸುಗ್ಗಿ ಹಬ್ಬದ ಕಡೆಯೇ  ಓಡುತಿತ್ತು.

ನಾನು ಆಗಿನ್ನು ಚಿಕ್ಕ ವಯಸ್ಸಿನ ಹುಡುಗ . ಬಹುಷ: ೭-೮ ವರ್ಷಗಳಾಗಿರಬಹುದು. ಆಗ ಅಮ್ಮ ನಾಳೆ ಹಬ್ಬ ಎನ್ನುವ ದ್ರಷ್ಟಿ ಇಂದ ಕೊಟ್ಟೆ ಕಡಬು ಅಥವಾ ಕೊಟ್ಟೆ ರೊಟ್ಟಿಗಾಗಿ ಹಿಟ್ಟನ್ನ ಅರಿತಾ ಇದ್ದಳು. ಆಗ ನಮ್ಮ ಮನೆಯಲ್ಲಿ ಗ್ರೈಂಡರ ಅಥವಾ ಮಿಕ್ಸರಗಳಿರಲಿಲ್ಲ. ಕಲ್ಲಿನಲ್ಲೆ ಅರಿಯಬೇಕಾಗಿತ್ತು. ನಾವು ಆಗತಾನೆ ನಮ್ಮ ಪರೀಕ್ಷೆಗಳನ್ನ ಮುಗಿಸಿದ್ದರಿಂದ, ತರಗತಿಗಳಂತು ಇರಲಿಲ್ಲ. ಹಾಗಾಗಿ ಮನೆಯಲ್ಲೆ ಇದ್ದೆವು. ಬೆಳಿಗ್ಗೆ ಇಂದ "ತನದೇನಿದೋ ತಂದಾನ, ತಂದಂದ ದಂದ ದಂದ್ ತನದೇನಿದೋ ತಾನಾನಾ" ಎಂದು ತಂದಾನ ಹಾಕಲು ಬರುವವರ ಹಾಲಕ್ಕಿ ಹುಡುಗರ ಹಾಡನ್ನಂತೂ ಅದೆಷ್ಟೋ ಭಾರಿ ಕೇಳಿಯಾಗಿತ್ತು. ಇನ್ನು ಕೆಲವೇ ಗಂಟೆಗಳಲ್ಲಿ ಕರಡಿ ವೇಷದವರು ಬರುವವರಿದ್ದರಿಂದ ಮನೆಯ ಎದುರುಗಡೆನೆ ಕಾಯುತ್ತಾ ಕುಳಿತಿದ್ದೆವು. ಎಲ್ಲಾದರೂ ಹೋಗಿಬಿಟ್ಟರೆ ಎಲ್ಲಿ ಕರಡಿ ವೇಷದವರುತಪ್ಪಿ ಹೋಗುತ್ತಾರೆನೋ ಎನ್ನುವ ಯೋಚನೆಯಿಂದ ಮನೆಯ ಜಗುಲಿಯ ಮೇಲೆ ಕುಳಿತಿದ್ದೆವು. ಸಮಯ ಇನ್ನೇನು ೫ ಗಂಟೆಯಾಗಿರಬಹುದು. ಎತ್ತಲಿಂದಲೋ ಗುಮಟೆ, ತಾಳಗಳ ಧ್ವನಿ ಕೇಳಲು ಪ್ರಾರಂಭಿಸಿದವು. ಎಂದಿಗೂ ಅಂತಹ ರೀತಿಯ ಧ್ವನಿಯನ್ನ ನಾನು ಕೇಳಿರಲಿಲ್ಲ. ಓಡಿದವು ಧ್ವನಿ ಬಂದ ಕಡೆ, ನೋಡಿದರೆ ನಮ್ಮೂರ ಅಮ್ಮನವರ ಮನೆಯ ಪಕ್ಕದಲ್ಲಿರು, ಆಡು ಕಟ್ಟೆಯ ಹತ್ತಿರ ಒಂದಿಷ್ಟು ಗುಂಪು ಕೈಯಲ್ಲಿ ಕೊಲನ್ನ ಹಿಡಿದು, ತಲೆಗೆ ತುರಾಯಿಗಳಿಂದ ಕೂಡಿರುವ ಕಿರೀಟವನ್ನ ಧರಿಸಿ "ಹೋ ಹೋ ಹೋಹೋಚೋ" "ಹೋ ಹೋ ಹೋಹೋಚೋ" ಅಂತ ಭಾರಿಸುವ ವಾದ್ಯಗಳಿಗೆ ತಕ್ಕಂತೆ ನರ್ತಿಸುತ್ತಿದ್ದಾರೆ. ನಾನು ಅಲ್ಲಿಗೆ ಹೋದಾಗ ತಿಳಿಯಿತು. ಅದು ಸುಗ್ಗಿ ಕುಣಿತ ಎಂದು. ಅಲ್ಲಿಯವರೆಗೂ ನನಗೆ ಸುಗ್ಗಿ ಕುಣಿತ ಹೇಗಿರುತ್ತದೆ ಅಂತ ಗೊತ್ತಿರಲಿಲ್ಲ. ಪ್ರಥಮ ಭಾರಿಗೆ ಸುಗ್ಗಿ ಕುಣಿತವನ್ನ ನೊಡಿದೆ. ಅಲ್ಲಿಯವರೆಗೆ ಸುಗ್ಗಿ ಹಬ್ಬವನ್ನ ಆಚರಿಸುತ್ತಾರೆ, ಆದರೆ ಆ ಹಬ್ಬಕ್ಕೆ ಸುಗ್ಗಿ ಹಬ್ಬ ಅಂತ ಯಾಕೆ ಕರೆಯುತ್ತಾರೆ ಅನ್ನುವುದು ಗೊತ್ತಿರಲಿಲ್ಲ. ಅಲ್ಲಿ ಆಡು ಕಟ್ಟೆಯ ಹತ್ತಿರ ಸುಗ್ಗಿ ಕುಣಿತ ಮುಗಿದೊಡನೆ, ನಮ್ಮ ಮಕ್ಕಳ ತಂಡ ಸುಗ್ಗಿ ತಂಡವನ್ನ ಹಿಂಬಾಲಿಸಿಕೊಂಡು ಹೋಯಿತು. ಮುಂದೆ ನಮ್ಮೂರ ಸೇವಾ ಸಹಕಾರಿ ಸಂಘದ ಎದುರಿಗೆ, ನಂತರ ಗಾಂವಕರ ಕೇರಿಯಲ್ಲಿ, ಆಮೇಲೆ ಬೀರಜ್ಜನ ಮನೆ ಕೇರಿ ಹೀಗೆ ಎಲ್ಲಿ ಸುಗ್ಗಿಯೋ, ಅಲ್ಲಿ ನಾವುಗಳು. ಕರಡಿ ವೇಷ ಬರುವುದು ಮರತೇ ಹೋಗಿ ಬಿಟ್ಟಿತ್ತು. ಅಂತೂ ಮನೆಗೆ ಬಂದಾಗ ರಾತ್ರಿಯಾಗಿತ್ತು. ಅದಾದ ನಂತರ ನಾನು ಮತ್ತೆ ಸುಗ್ಗಿ ಕುಣಿತವನ್ನು ನೋಡಿದ್ದು ಮೂರು ವರ್ಷಗಳ ಹಿಂದೆ, ಅಂಕೋಲಾದ ಪೋಲಿಸ್ ಸ್ಟೇಷನ್ ಎದುರು, ಅದು ಕೂಡ ಅಂಕೋಲಾದಲ್ಲಿ ಸುಗ್ಗಿ ಕುಣಿತಕ್ಕೆ ಹೆಸರಾದ ಬೆಳಂಬಾರ ತಂಡದವರಿಂದ.


ಬಹುಷ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಗುವಂತಹ ಸಾಂಪ್ರದಾಯಿಕ ವೈಸಿಷ್ಟ್ಯಗಳು ಜಗತ್ತಿನ ಯಾವ ಮೂಲೆಯಲ್ಲೂ ಸಿಗಲಾರದು. ಯಾಕೆಂದರೆ ಬಹುಕಾಲದಿಂದ ಇಲ್ಲಿ ನೆಲಸಿರುವ, ವಲಸೆ ಬಂದಿರುವ ವಿವಿಧ ಜನಾಂಗಗಳು. ಆ ಪ್ರತಿಯೊಂದು ಜನಾಂಗಗಳಿಗೂ ತಮ್ಮದೇ ಆದ ಆಡುಭಾಷೆ, ತಮ್ಮದೇ ಆದ ಸಾಂಪ್ರದಾಯಿಕ ಮನೋಭಾವ, ತಮ್ಮದೇ ಆದಂತ ಒಂದು ಕಲೆ ಇದ್ದರೂ ಎಲ್ಲರೂ ಒಟ್ಟಿಗೆ ಜೀವಿಸುತ್ತಿರುವುದು. ಉತ್ತರ ಕನ್ನಡದಲ್ಲಿ ಪ್ರತಿಯೊಂದು ಜನಾಂಗವು ಬೇರೆ ಬೇರೆ ಸ್ಥಳಗಳಿಂದ ವಲಸೆ ಬಂದೂ ಇಲ್ಲಿ ನೆಲಸಿರುವುದು ಕೂಡ ವೈಸಿಷ್ಟ್ಯಕ್ಕೆ ಕಾರಣಗಳಿರಬಹುದು. ಭೂ ಒತ್ತಡಗಳಿಗೆ ಸಿಕ್ಕಿ ಉಗಮಿಸಿದ ಸ್ಥಳಗಳಲ್ಲಿ ಉತ್ತರ ಕನ್ನಡವೂ ಒಂದು. ಒಂದು ಕಡೆ ಸಹ್ಯಾದ್ರಿಯ ಪರ್ವತ ಶ್ರೇಣಿಗಳಾದರೆ ಇನ್ನೊಂದೆಡೆ ಅರಬ್ಬೀ ಸಮುದ್ರ, ನಡುವೆ ಹಚ್ಚ ಹಸುರಿನ ಭೂ ಸಿರಿ. ಇವೆಲ್ಲವುಗಳ ನಡುವೆ ನೆಲೆನಿಂತ ವಿವಿಧ ಜನಾಂಗಗಳು. ಅವು ಎಲ್ಲಿಂದ ಬಂದವೋ, ಹೇಗೆ ಬಂದವೋ ಎನ್ನುವುದು ಯಾರಿಗೂ ಸರಿಯಾಗಿ ವಿವರಿಸಿ ಹೇಳಲಾಗದಂತಹ ಇತಿಹಾಸ. ಅಂತಹ ಜನಾಂಗಗಳಲ್ಲಿ ಹಾಲಕ್ಕಿ ಒಕ್ಕಲಿಗರದು ಒಂದು ಜನಾಂಗ. ಇಲ್ಲಿರುವ ಜನಾಂಗಗಳಲ್ಲಿರೂವ ಇನ್ನೊಂದು ವೈಸಿಷ್ಟ್ಯವೆಂದರೆ, ಪ್ರತಿ ಜನಾಂಗಗಳಿಗೆ ತಮ್ಮದೇ ಭಾಷೆ , ಕಲೆ ಹಾಗೂ ಸಂಪ್ರದಾಯ. ಇದು ಹಾಲಕ್ಕಿ ಒಕ್ಕಲಿಗರಿಗೇನೂ ಹೊರತಾಗಿಲ್ಲ.



ಸುಗ್ಗಿ ಕುಣಿತ ಹಾಲಕ್ಕಿ ಒಕ್ಕಲಿಗರ  ಒಂದು ಜಾನಪದ ಕಲೆ. ಊರ ಜನರಿಂದ ತಯಾರಿಸಲ್ಪಟ್ಟ ಸುಗ್ಗಿ ತುರಾಯಿ ಅಥವಾ ಕುಂಚಗಳನ್ನು ತಲೆಯ ಮೇಲೆ ಹೊತ್ತು ಕೈಯಲ್ಲಿ ಕೋಲು ಹಿಡಿದು ಗುಮ್ಟೆ, ತಾಳ ಜಾಗಟೆಗಳ ನಾದಕ್ಕೆ "ಹೋ ಹೋ ಹೋಹೋಚೋ" ಎಂದು ವೃತ್ತಾಕಾರವಾಗಿ ಕುಣಿಯುವ ಹಾಲಕ್ಕಿ ಸುಗ್ಗಿ ಮಕ್ಕಳ ಕುಣಿತವೇ ಸುಗ್ಗಿ ಕುಣಿತ. ಮೊದಲು ಈ ಸುಗ್ಗಿ ಕುಣಿತ ಒಂದು ಊರಿಂದ ಇನ್ನೊಂದು ಊರಿಗೆ ಸಾಗುತ್ತಾ ಹೋಗಿ ಕೊನೆಯಲ್ಲಿ ಹೋಳಿ ಹುಣ್ಣಿಮೆಯ ದಿನ ತಮ್ಮ ಊರಿಗೆ ವಾಪಸ್ ಬಂದು ಅವರ ದೇವರಾದ ಕರಿ ದೇವರ ಮುಂದೆ ತಮ್ಮ ವೇಷಗಳನ್ನು ಕಳಚಿಡುತಿದ್ದರು. ಆದರೆ ಕಾಲ ಕಳೆದಂತೆ ಈ ಪ್ರವೃತ್ತಿ ಕಡಿಮೆಯಾಗಿ ಊರೂರು ಸುತ್ತುವ ವಾಡಿಕೆ ಕಡಿಮೆಯಾಗಿದೆ. ಈಗಂತು ಸುಗ್ಗಿ ಕುಣಿತವೇ ಅಪರೂಪವಾಗಿದೆ. ಅಂಕೋಲಾದ ಪೋಲಿಸ್ ಸ್ಟೇಷನ್ ಎದುರು ಪ್ರತಿವರ್ಷ ಸುಗ್ಗಿ ಕುಣಿತವನ್ನು ನೋಡಬಹುದಾದರೂ ಅದು ಇನ್ನೆಷ್ಟು ವರ್ಷವೋ ಗೊತ್ತಿಲ್ಲ.  ಕಾರಣಗಳು ಇಲ್ಲ ಎಂದಲ್ಲ, ಹುಡುಕುತ್ತಾ ಹೋದರೆ ಒಂದಲ್ಲ ಹತ್ತಾರು ಕಾರಣಗಳು ಸಿಗಬಹುದು. ಕಾರಣಗಳು ಏನೇ ಇರಲಿ, ಆದರೆ ಮುಂದಿನ ದಿನಗಳಲ್ಲಿ ಸುಗ್ಗಿ ಕುಣಿತ ಇತರ ಜನಪದ ಕಲೆಗಳಂತೆ ತನ್ನ ಹೊಳಪನ್ನು ಕಳೆದುಕೊಂಡು ಅವನತಿಯತ್ತ ಸಾಗಬೇಕಾದ ದಿನಗಳು ಬಹು ದೂರದಲ್ಲೇನಿಲ್ಲ. ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮಲ್ಲಿ ಸಾದ್ಯವಾದಷ್ಟು ಮಟ್ಟಿಗೆ ಜನಪದ ಕಲೆಯನ್ನು ಜೀವಂತವಾಗಿಸಲು ಪ್ರಯತ್ನಿಸಬೇಕು ಎನ್ನುವುದು ನನ್ನ ಆಶಯ. ನಮ್ಮ ಜನಪದ ಕಲೆಗಳನ್ನು ಪ್ರೋತ್ಸಾಹಿಸಿ ಬೆಳೆಸಿದಾಗಲೇ, ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯ

--ಮಂಜು ಹಿಚ್ಕಡ್

ಯೂ ಟ್ಯೂಬ್ ವಿಡಿಯೋ ಕೃಪೆ - ಗಣೇಶ್ ಗೌಡ

English Summary:


Suggi dance (or suggi kunita in Kannada) is one of the folklore dance performed by Halakki Okkaliga tribes during Holi festivals in Northern parts of the costal Karnataka. Because of this famous  suggi dance this Holi festival is also called as Suggi festival in those areas. On that day Halakki people will wear the suggi tuft which is prepared with artificial flowers on their head and they perform the circular dance according to their classical music. That dance is called as suggi dance. 

Thursday, March 2, 2017

ಸಂಧ್ಯಾಕಾಲ

ಮುತ್ತು ಕೇಳೋಕೆ
ಹೊತ್ತು ಕಳೆಯೋಕೆ
ಇದುವೆ ಸಂಧಿಕಾಲ
ಅದುವೆ ಸಂಧ್ಯಾಕಾಲ
-ಮಂಜು ಹಿಚ್ಕಡ್

Monday, February 13, 2017

ಬಂದು ಜೊತೆಯಾಗದಿರು

ಬರದಿರು,
ಬಂದು
ಜೊತೆಯಾಗದಿರು
ನೀ ನನ್ನ ,

ಕತೆಯಾಗುವೆ
ನೀ,
ನನ್ನ ಜೊತೆ
ಇನ್ನಾರಿಗೋ
ಚಿನ್ನ!

                          -ಮಂಜು ಹಿಚ್ಕಡ್

Wednesday, February 8, 2017

ಧನ್ಯೋಸ್ಮಿ

ನನಗೆ ದಿನಾ ಬರೆಯೋ ಚಾಳಿ ಎಂದಿಗೂ ಇಲ್ಲ, ಎಲ್ಲೋ ಅಪರೂಪಕ್ಕೆ ಒಮ್ಮೆ ಏನೋ ನೆನಪಾಗಿ ಬರೆಯ ಬೇಕೆನಿಸಿದಾಗ ಮಾತ್ರ ನನ್ನ ಬರವಣಿಗೆ. ಮನಸ್ಸಿಗೆ ತೋಚಿದ್ದನ್ನೇ ಗೀಚುತ್ತೇನೆ, ಅದು ಸರಿ ತಪ್ಪು ಎನ್ನುವ ನಿರ್ಧಾರ ನನಗಿಲ್ಲ, ಅದೂ ಬೇಕು ಇಲ್ಲ. ಹಾಗೆ ಮನಸ್ಸಿನ ಮೂಲೆಯಲ್ಲಿದ್ದುದ್ದನ್ನು ಗೀಚಲು ಪ್ರಾರಂಭಿಸಿ ಅದೆಷ್ಟೋ ವರ್ಷಗಳಾಗಿದ್ದವು. ಹಾಗೆ ಗೀಚಿದ್ದು ಒಮ್ಮೊಮ್ಮೆ ಎಲ್ಲೋ ಬಿದ್ದು ಗೆದ್ದಲು ಹಿಡಿದಿದ್ದು ಇದೆ. ಬರವಣಿಗೆ ಕೇವಲ ನನ್ನ ಹವ್ಯಾಸಕ್ಕೆ ಮಾತ್ರ ಸೀಮೀತವಾಗಿದ್ದುದರಿಂದಲೂ ಅಥವಾ ಅದನ್ನು ಕೂಡಿಡುವ ಆಸೆ ಅಂದು ನನಗಿಲ್ಲದ್ದರಿಂದಲೋ ಏನೋ, ಹಾಗೆ ಗೀಚಿದ್ದರಲ್ಲಿ ಅದೆಷ್ಟೋ ಬರಹಗಳು ಎಲ್ಲೋ ಬಿದ್ದು ಗೆದ್ದಲು ಹಿಡಿದಿದ್ದು ಉಂಟು.

ಒಮ್ಮೆ ಹೀಗೆ ಅಂತರ್ಜಾಲದಲ್ಲಿ ಅದೇನೋ ಹುಡುಕುತ್ತಿರುವಾಗ ಯಾರದೋ ಬ್ಲಾಗಿನ ಕಿಡಕಿ ತೆರೆದು ಕೊಂಡಿತು. ಹಾಗೆ ಅದರೊಳಗೆ ಇಣುಕಿ ನೋಡುತ್ತಾ ಹೋದ ಹಾಗೆ, ಅದರೊಂದಿಗೆ ಇನ್ನೊಂದಿಷ್ಟು ಬ್ಲಾಗಗಳ್ ಅನಾವರಣವಾಯಿತು. ಮುಂದೆ ಅವೇ ನನಗೆ ನನ್ನದೇ ಆದ ಬ್ಲಾಗ್ ಅನ್ನು ತೆರೆಯಲು ಪ್ರೇರೆಪಣೆಯಾಯಿತು. ಬರೆದು ಎಲ್ಲೋ ಇಟ್ಟ ಹಳೆಯ ತುಣುಕುಗಳ ಜೊತೆಗೆ ಹೊಸ ಬರಹಗಳು ಸೇರಿ ಈ ಬ್ಲಾಗ್ " ಹೀಗೆ ಸುಮ್ಮನೆ " ಹುಟ್ಟಿ ಬೆಳೆಯತೊಡಗಿತು.

ಇಂದಿಗೆ ಸರಿಯಾಗಿ ಮೂರುವರೆ ವರ್ಷಗಳ ಹಿಂದೆ ಹುಟ್ಟಿಕೊಂಡ ಬ್ಲಾಗ್ ಇಂದು ಅರವತ್ತು ಸಾವಿರಕ್ಕೂ ಹೆಚ್ಚಿನ ಪುಟವೀಕ್ಷಣೆಯನ್ನು ಮೀರಿ ಮುಂದೆ ಸಾಗುತ್ತಿದೆ. ಇದಕ್ಕೆ ಮೂಲ ಕಾರಣ ನಿಮ್ಮೆಲ್ಲರ ಸಲಹೆ, ಪ್ರೋತ್ಸಾಹ ಹಾಗೂ ಹಾರೈಕೆ. ಅದು ಅಂದಿನಂತೆ, ಇಂದಿಗೂ, ಮುಂದಿಗೂ ಇರುತ್ತದೆ ಎನ್ನುವ ಬರವಸೆ ಸದಾ ನನಗಿದೆ. ನನ್ನ ಈ ಬರವಣಿಗೆಯ ಪಥದಲ್ಲಿ ಬಂದು ನಿಂತು ಓದಿ ಹಾರೈಸಿದ ತಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕವಾದ ಅನಂತಾನಂತ ಧನ್ಯವಾದಗಳು.

ಇಂತಿ ನಿಮ್ಮವ,

ಮಂಜು ಹಿಚ್ಕಡ್

Sunday, February 5, 2017

ಬದುಕು-ಬವಣೆ: ಭಾಗ ೩

ಬದುಕು-ಬವಣೆ: ಭಾಗ ೧ 
ಬದುಕು-ಬವಣೆ: ಭಾಗ ೨
ದೂರದರ್ಶನದಲ್ಲಿ ಬರುತ್ತಿದ್ದ ಧಾರವಾಹಿಯನ್ನು ನೋಡುವುದರಲ್ಲಿ ಮಗ್ನಳಾಗಿದ್ದ ಸೀತಕ್ಕನಿಗೆ ನಾಗಿ ಮನೆಯ ಕಂಪೌಂಡ ಹಾಕಿದ ಗೇಟು ತೆರೆದು ಒಳ ಬರುವುದಕ್ಕೆ ಮೊದಲೇ "ಉಡ್ತೆರೋ" ಎಂದು ಕರೆದಿದ್ದು ಕೇಳಲಿಲ್ಲ. ನಾಗಿಗೂ ಸೀತಮ್ಮನವರು ಒಳಗೆಲ್ಲೋ ಕೆಲಸ ಮಾಡುತ್ತಿರಬಹುದೆಂದೆನಿಸಿ, ಗೇಟು ತೆರೆದು ಒಳಬಂದು ಮತ್ತೆ ಗೇಟು ಮುಚ್ಚಿ ಜಗುಲಿಯ ಬಳಿ ಬಂದು ಒಳಗಡೆ ದ್ರಷ್ಟಿ ಬೀರುತ್ತಾ ಮತ್ತೊಮ್ಮೆ "ಉಡ್ತೆರೋ" ಎಂದು ಕೂಗಿದಳು. ಈಗ ಕೂಗಿದ ಕರೆ ಸೀತಕ್ಕನ ಕರ್ಣ ಪಟಲಗಳನ್ನು ತಲುಪಿ, ಬಾಯಿಂದ "ಓ, ಯಾರ್ ನಾಗಿನೇ" ಎನ್ನುವ ಪದಗಳು ಹೊರಬಂದವೇ ಹೊರತು, ಕಣ್ಣುಗಳು ದೂರದರ್ಶನ ನೋಡುವುದನ್ನು ಬಿಟ್ಟು ಕೊಡಲಿಲ್ಲ. ಅಷ್ಟರಲ್ಲೇ ಬಂದ ಜಾಹಿರಾತುಗಳು ಧಾರವಾಹಿಯ ಗುಂಗಿನಿಂದ ಸೀತಕ್ಕನನ್ನು ಹೊರಕ್ಕೆಳೆದು ತಂದವು. ಈಗ ಸೀತಕ್ಕನಿಗೆ ನಾಗಿ ಕರೆದಿದ್ದು ನೆನಪಾಯ್ತು.

"ನಾಗಿ ಬಾರೆ, ಹನ್ಮು ಹೆಂಗೀವಾ ಏಗೆ?" ಎಂದಳು.

"ಜ್ವರಾ ಬಿಡ್ತೆನೇ ಇಲ್ಲ್ರಾ, ಎಂತಾ ಮಾಡುದ ಅಂದ್ ತಿಳಿತೇನೇ ಇಲ್ರಾ".

"ಅಂಕೋಲಿಗರೂ ಕರ್ಕಂಡೆ ಹೋಗ್ಬಾರೆ, ನನ್ನ ಮಗ್ನ ಆಸ್ಪತ್ರಿಗರೂ ಕರ್ಕಂಡೆ ಹೋಗ್ಬಾ. ರಾತ್ರಿಗೆ ಬಂದಗೆ ಮಗಗೆ  ಹೇಳ್ತಿ. ಇಟ್ಟ ದಿವ್ಸಾ ಅಂದೆ ನೋಡ್ತಿ, ಒಂದ್ಸಲಾ ರಕ್ತಾ ಚಕಪ್ ಮಾಡ್ಸ".

"ಗೌರಿ ಒಡ್ತೆರೋ ಹಂಗೇ ಹೇಳ್ತಾ ಇದದ್ರಾ. ಅವ್ರು ಅಂಕೋಲಿಗೆ ಕರ್ಕಂಡ ಹೋಗುಕ ಹೇಳರ. ಆದ್ರೆ ಹಂಗೆ ಆತಿದಾ, ರೊಕ್ಕ ಬೆಡ್ರಾ".

"ಅದು ಹೌದ, ಆದ್ರೆ ನನ್ನ ಮಗ್ನ ಆಸ್ಪತ್ರಿಗೆ ನಿಂಗೆ ಯಾರ ರೊಕ್ಕ ಕುಡ ಅಂದರ".

"ಹಂಗಲ್ರಾ, ಒಡ್ತೆರೋ"

"ಹಂಗೂ ಇಲ್ಲಾ, ಹಿಂಗೂ ಇಲ್ಲಾ. ಸುಮ್ನೆ ನನ್ನ ಮಗ್ನ ಆಸ್ಪತ್ರಿಗೆ ಕರ್ಕಂಡೆ ಹೋಗ, ನಾ ಎಲ್ಲಾ ಹೇಳ್ತಿ. ಅಂವ್ಗೆನ್ ನೀವ್ ಹೊಸ್ಬರೆ. ಅಂವ್ಗೂ ನೀವ್ ಗುತ್ತಿದ್ದೋರೆ ಅಲ್ಲಾ".

"ಆದ್ರೂ ಉಡ್ತೇರೇ" ಇನ್ನೂ ಅವಳ ಮಾತು ಮುಗಿದಿರಲಿಲ್ಲ, ಅಷ್ಟರಲ್ಲಿ ಸೀತಕ್ಕ ಅವಳ ಮಾತನ್ನು ತಡೆದು " ಆದ್ರೂ ಇಲ್ಲ, ಏನು ಇಲ್ಲ. ನಾ ಹೇಳ್ದ ಮೇಲೆ ಮುಗಿತ್. ಅದಿರ್ಲೆ, ನೀನ್ ಏಗೆ ಇಲ್ಲಿಗೆ ಹೋಗದೆ,  

"ನಿಮ್ಕೋಡ ನಾ ವಾದಾ ಮಾಡುದ್ ಇತ್ತಾ, ನಿವೇಳ್ದಂಗೆ ಆಗ್ಲೆ" ಎಂದಳು ನಾಗಿ.

ಅದೇನೋ ನೆನಪಾದವಳಂತೆ ಸೀತಕ್ಕ ನಾಗಿಗೆ "ಅಲ್ವೆ ನೀನ ಉಂಡ್ಯಾ ಹೆಂಗೆ?"

"ಇಲ್ರಾ ಉಡ್ತೆರೋ, ಮಗಗ್ ಗಂಜಿ ಉಣ್ಸಿಟ್ಟ, ಬ್ಯಾಗ ಬರುವಾ ಅಂದೆ ಹೋದ್ರ, ಇಟ್ಟುತ್ತಾಯ್ತು".

"ಹೌದೆ ನಿಲ್ಲ ಹಂಗಾರೆ ಬಂದೆ" ಎಂದು ಒಳ ಹೋದಳು ಸೀತಕ್ಕ.  
ಹರೀಶ ಅಂಕೋಲೆಯಲ್ಲಿಯೇ ಇದ್ದರೂ ದಿನಾ ಮನೆಗೆ ಹಗಲಿನ ಹೊತ್ತಿನಲ್ಲಿ ಊಟಕ್ಕೆ ಬರುತ್ತಿರಲಿಲ್ಲ. ಅಪರೂಪಕೊಮ್ಮೆ ಯಾವಾಗಲೋ ಒಂದು ದಿನ ಊಟಕ್ಕೆ ಬರುತ್ತಿದ್ದ. ಅದೂ ತಿಂಗಳಿಗೆ ಒಂದೆರಡು ದಿನವಾದರೆ ಹೆಚ್ಚು. ಹಾಗಾಗಿ ಸೀತಕ್ಕನಿಗೆ ಮಗ ಮನೆಗೆ ಬರಲಿ ಅಥವಾ ಬರದೇ ಇರಲಿ ಮಗ ಬಂದರೆ ಇರಲಿ ಎಂದು ಸ್ವಲ್ಪ ಜಾಸ್ತಿಯೇ ಅಡಿಗೆ ಮಾಡಿಡುವುದು ವಾಡಿಕೆ. ಮಗ ಬಂದಿಲ್ಲವೆಂದರೆ ರಾತ್ರಿ ಬೆಳಿಗ್ಗೆ ಮಿಕ್ಕಿದ್ದ ಅನ್ನವನ್ನು ತಾನೇ ಊಟಮಾಡುತ್ತಿದ್ದಳು. ಇಂದು ಮನೆಗೆ ಬಂದ ನಾಗಿಯನ್ನು ನೋಡಿ ಒಳಗೆ ಮಿಕ್ಕಿದ್ದ ಅಡಿಗೆ ನೆನಪಾಗಿ ಒಳಗೆ ಬಂದಿದ್ದಳು. ಒಳಗೆ ಬಂದು ಒಂದು ಪಾತ್ರೆಯಲ್ಲಿ ಅನ್ನವನ್ನು, ಇನೊಂದು ಪಾತ್ರೆಯಲ್ಲಿ ಸ್ವಲ್ಪ ಸಾರನ್ನು ತಂದು ನಾಗಿಗೆ ಕೊಟ್ಟಳು.

ನಾಗಿ ಸಿತಕ್ಕ ಕೊಟ್ಟ ಅಡಿಗೆಯನ್ನು, ಗೌರಕ್ಕ ಕೊಟ್ಟ ಸಾರನ್ನು ತೆಗೆದುಕೊಂಡು ಅವಳ ಮನೆಯೆಡೆಗೆ ಹೋಗಬೇಕು ಅಂತಿದ್ದವಳನ್ನು ನಿಲ್ಲಿಸಿದಳು ಸೀತಕ್ಕ.

"ನಿಲ್ಲೆ ಹಂಗೆ ಹೋಗ್ಬಿಟ್ಟೆ, ಬಾರೆ ಹೋಗಕ" ಎಂದಳು. ಸೀತಕ್ಕ ಹಾಗೆ ಕರೆದಾಗ, ಮನೆಗೆ ಹೋಗಬೇಕೆಂದಿದ್ದ ನಾಗಿಯ ಹೆಜ್ಜೆಗಳು ಅಲ್ಲಿಯೇ ನಿಂತವು. ಒಳಗೆ ಹೋಗಿ ಹೊರ ಬಂದ ಸೀತಕ್ಕ "ತಕಾ ಹಿಡಿ, ನಿಂಗೆ ಎಂತಾಕ್ಕರು ಬೇಕಾಗುದ ಇದ್ರ ಇಟ್ಕಾ" ಎಂದು ಐದು ನೂರರ ಎರಡು ನೋಟುಗಳನ್ನು ತಂದು ನಾಗಿಯ ಕೈಗಿಟ್ಟಳು.

ರೊಕ್ಕ ಬೇಡ ಅನ್ನಬೇಕೆನಿಸಿತ್ತಾದರೂ, ಸದ್ಯದ ಪರಿಸ್ಥಿತಿಯ ಅರಿವಿದ್ದ ನಾಗಿ ಬೇಡ ಅನ್ನದೇ ತೆಗೆದುಕೊಂಡು ಸೀರೆಯ ಸೆರಗಿಗೆ ಸಿಕ್ಕಿಸಿ ಮನೆಯತ್ತ ಹೊರಟಳು. ಮನೆಗೆ ಬಂದು ಮಗೆನಿಗೆ ಸೀತಕ್ಕ ಕೊಟ್ಟ ಅನ್ನವನ್ನು, ಗೌರಕ್ಕ ಕೊಟ್ಟ ಸಾರಿನೊಂದಿಗೆ ಕಲಿಸಿ ಮಗನಿಗೊಂದಿಷ್ಟು ಊಟ ಮಾಡಿಸಿ ಔಷದ ಕೊಟ್ಟು ತಾನು ಹೋಗಿ ಸ್ನಾನದ ಶಾಸ್ತ್ರ ಮಾಡಿ ಬಂದು ತನ್ನ ಹೊಟ್ಟೆಗೂ ಒಂದಿಷ್ಟು ಸೇರಿಸಿದಳು. ಎರಡು ಪಾತ್ರೆ ತೊಳೆದು ಬರುವ ಹೊತ್ತಿಗೆ ಸೂರ್ಯ ಪಶ್ಚಿಮ ದಿಗಂತದ ಅಂಚಿನಲ್ಲಿದ್ದ. ರಾತ್ರಿಯ ಊಟಕ್ಕೆ ಒಂದಿಷ್ಟು ಅನ್ನ ಮಾಡಿದರೆ ಸಾಕು, ಗೌರಮ್ಮ ಹಾಗೂ ಸೀತಮ್ಮೊರು ಕೊಟ್ಟ ಸಾರು ರಾತ್ರಿಯ ಊಟಕ್ಕು ಸಾಕೆನಿಸಿತು. ಮಗನು ಮಲಗಿದ್ದಲ್ಲಿಗೆ ಹೋಗಿ ನೋಡಿದಳು, ಮಗ ಆಗಲೇ ನಿದ್ದೆ ಹೋಗಿದ್ದ. ಅವನ ಸ್ಥಿತಿ ನೋಡಿ ಇನ್ನಷ್ಟು ಕರಳು ಕಿವುಚಿ ಬಂದಂತಾಯಿತು. ಕೂದಲು ಬಾಚಿಕೊಳ್ಳೋಣವೆನಿಸಿ ಗೋಡೆಗೆ ನೇತುಹಾಕಿದ ಕನ್ನಡಿಗೆ ಸಿಕ್ಕಿಸಿದ ಬಾಚಣಿಗೆಯನ್ನು ಹಿಡಿದು ಹೊರಬಂದು ಸುಕ್ಕು ಗಟ್ಟಿದ ಕೂದಲನ್ನು ಬಾಚಿಕೊಳ್ಳುತ್ತ ಕುಳಿತಳು.

ಅತ್ತೆ ಕೂದಲು ಬಾಚುತ್ತಾ ಕುಳಿತದ್ದನ್ನು ತನ್ನ ಮನೆಯ ಕಿಟಕಿಯಿಂದ ನೋಡಿದ ಗಿರಿಜೆ ಹೊರಬಂದು,

"ಅತ್ತೆ, ಹನ್ಮುಗ ಜ್ವರ ಬಿಟ್ಟೇದಾ?" ಎಂದು ಕೇಳಿದಳು.

"ಇಲ್ವೇ, ಅದ್ ಕಡ್ಮೀನೇ ಆತೇ ಇಲ್ಲಾ. ನಾಳಗ ಅಂಕೋಲಿಗ ಸೀತಮ್ಮೊರ ಮಗ್ನ ಆಸ್ಪತ್ರೆಗ ಕರ್ಕಂಡ ಹೋತೆ".

"ಹೌದಾ, ಅದೇ ಚಲೋ ಅತ್ತೆ. ಅಲ್ಲೋದ್ರ ಏನಾದ್ರೂ ಗುತ್ತಾತೇದಾಬೆಲಾ".

"ಹಂಗೆ ಮಾಡ್ತೇನೇ" ಎಂದು ಹೇಳಿ "ನಾಳಗಿಂದ ಮಾತ್ರ ಮನೆಕಡೆ ನೋಡ್ತೇ ಇರೆ".

"ಆಯ್ತೆ ಅತ್ತೆ" ಎಂದು ಹೇಳಿ ಒಳನಡೆದಳು ಗಿರಿಜೆ, ತನ್ನ ಕೆಲಸದ ನೆನಪಾಗಿ.


(ಮುಂದುವರೆಯುವುದು...)

--ಮಂಜು ಹಿಚ್ಕಡ್ 

Thursday, January 26, 2017

ಸಾಂಗತ್ಯ

ಚಿಗುರೊಡೆದು ಮೈಮರೆತ
ಮರದ ರೆಂಬೆಗಳ ಸುತ್ತ
ಬಿಳಿಯ ಹೂಗಳ ಸಂತೆ
ಒಡಲ ಸೀಳಿ, ಬಳುಕಿ ಬೆಳೆವ
ಆ ಎಳೆಯ ಕಾಯ್ಗಳಿಗೆ
ಬೆಳೆದು ಜೊಲುವ ಚಿಂತೆ.

ತಂಗಾಳಿಯ ತಂಪಿಗೆ,
ಕಂಪ ಸೂಸುತ
ಭೃಂಗಗಳ ಇಂಪಿಗೆ, 
ತನುವ ಕುಣಿಸುತ
ಬಾಗಿ ನರ್ತಿಸುತಲಿವೆ ಅವು
ಥೇಟು ಮೇನಕೆಯಂತೆ!

ಇಂದು ಇಂದಿಗೆ ಎಲ್ಲ
ನಾಳೆಯ ಪರಿಯಿಲ್ಲ,
ಅವ ಬಯಸಿ ಬರುವವರಿಗಷ್ಟೇ
ಅದರ ಚಿಂತೆ.

ನೋಡ ನೋಡುತಲೇ,
ಒಂದಾದ ಮೇಲೊಂದರಂತೆ
ಕಳೆದುಕೊಳ್ಳುವವು ಅವು
ತನ್ನವರ ಸಾಂಗತ್ಯ.

ಈ ಬದುಕು ನನದಲ್ಲ
ನನ್ನವರಿಗಾಗಿಯೂ ಅಲ್ಲ
ಎನ್ನುವುದಷ್ಟೇ
ಈ ಜಗದ ಸತ್ಯ.

--ಮಂಜು ಹಿಚ್ಕಡ್

Saturday, January 21, 2017

ಬದುಕು-ಬವಣೆ: ಭಾಗ ೨

ಬದುಕು-ಬವಣೆ: ಭಾಗ ೧

ಅವರು ಒಂದು ನಿಮಿಷ ಎಂದು ಒಳಗಡೆ ಹೋದವರು ಹದಿನೈದು ಇಪ್ಪತ್ತು ನಿಮಿಷವಾದರೂ ಹೊರಬರಲಿಲ್ಲ. ಒಳಗೆ ಒಲೆಯ ಮೇಲೆ ಮೀನು ಸಾರು ಕುದಿಯುತ್ತಿರುವಾಗ ಇಲ್ಲಿ ಹೊರಗೆ ನಾಗಿಯ ಮನಸ್ಸು ಮಗನ ಜ್ವರದ ನೆನಪಿನಿಂದ ಕುದಿಯುತಿತ್ತು. ಯಾವಾಗ ಅಮ್ಮನವರು ಹೊರಗೆ ಬರುತ್ತಾರೋ, ಅಮ್ಮ ಅವರು ರೊಕ್ಕ ಕೊಡಬಹುದೋ ಹೇಗೆ? ದೇವರ ದಯೆಯಿಂದ ರೊಕ್ಕ ಕೊಟ್ಟು ಬೇಗ ಕಳಿಸಿ ಬಿಟ್ಟರೆ ತಾನು ಮುಂದೆ ಕೆಲಸ ಮಾಡುವ ಶಾಂತಮ್ಮನವರ ಮನೆಗಾದ್ರೂ ಹೋಗಬಹುದಿತ್ತು, ಹೀಗೆ ಎಲ್ಲಾ ಕಡೆನೂ ತಡವಾದರೆ ಮನೆಗೆ ಹೋಗಲು ಸಂಜೆಯಾಗುತ್ತದೆ. ಹನ್ಮು ಮಲಗಿದವನು ಎದ್ದು ಬಿಟ್ಟನೋ ಏನೋ? ಸೊಸೆ ಮನೆ ಕಡೆ ಒಮ್ಮೆಯಾದರೂ ಹೋಗಿ ನೋಡಿ ಬಂದರೆ ಸಾಕಿತ್ತು. ಹೀಗೆ ಯೋಚಿಸುತ್ತಾ ಕುಳಿತವಳಿಗೆ, "ಏನೇ ನಾಗಿ, ಹಿಂಗೆ ಬಂದದೆ?" ಎಂದು ಹೊರಬಂದ ಗೌರಿ ಕೇಳಿದಾಗ ನಾಗಿ ಯೋಚನೆಯಿಂದ ಹೊರಬಂದಳು. ಒಮ್ಮೇಲೆ ಕೇಳಿದ ಗೌರಿಯ ಪ್ರಶ್ನೆಗೆ ಹಣ ಕೇಳಲೋ, ಬೇಡವೋ ಎಂದು ತಿಳಿಯದೇ ಅಮ್ಮನವರ ಮುಖ ನೋಡಿದಳು. ನಾಗಿ ಏನನ್ನು ಉತ್ತರಿಸದೇ ಇದ್ದುದನ್ನು ನೋಡಿ ಗೌರಿ,

"ನಾಗಿ ಅವ್ರು ಹೊರ್ಗೆ ಹೋಗರ್ ಬರುಕೆ ಇಟ್ಟುತ್ತ್ ಆತಿದಾ ಏನಾ? ಹೆಂಗೂ ನೀ ಮನಿಗೆ ಬರುದ್ ಬಂದಿ, ಮಾತ್ರೆ ಕೊಟ್ಗಿಗೆ ಹೋಗೆ ಸಿಗ್ಣಿ ತಿಗ್ದಿಟ್ಟೆ ಬರುವಾ?"

ಅಮ್ಮನವರು ಹಾಗೆ ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ ನಾಗಿಗೆ. ಇಲ್ಲ ಎಂದು ಬಿಟ್ಟರೆ ರೊಕ್ಕ ಕೊಡದೇ ಹಾಗೆ ಕಳಿಸಿ ಬಿಟ್ಟರೆ ಎನಿಸಿ, "ಆಯ್ತ್ರಾ, ಉಡ್ತೇರೆ". ಎಂದು ಹೇಳಿ ಮನೆಯ ಹಿತ್ತಲಿನ ತುದಿಯಲ್ಲಿದ್ದ ಕೊಟ್ಟಿಗೆಯ ಕಡೆ ಹೋದಳು.

ಕೊಟ್ಟಿಗೆಗೆ ಹೋಗಿ ದನದ ಸಿಗಣಿ ತೆಗೆದು, ಒಣ ದರುಕು ಹಾಗಿ ಹೊರಬರುವ ಹೊತ್ತಿಗೆ ಇನ್ನೂ ಹದಿನೈದು ಇಪ್ಪತ್ತು ನಿಮಿಷಗಳು ಕಳೆದು ಹೋದವು. ಊರಿಗೆ ಬರುವ ಒಂದು ಗಂಟೆಯ ಬಸ್ಸಿಗೆ ಬಂದ ಜನರನ್ನು ನೋಡಿ, ಗಂಟೆ ಒಂದಾಯ್ತು ಅನಿಸಿ, ಬೇಗ ಬೇಗನೆ ಅಮ್ಮನವರ ಮನೆ ಕಡೆ ಹೆಜ್ಜೆಯಿಟ್ಟಳು.

ಮನೆಯ ಹತ್ತಿರ ಬಂದವಳೇ, "ಉಡ್ತೇರೋ, ಸಿಗ್ಣೇ ತಿಗ್ದ್ ತರ್ಕ್ ಹಾಕ್ ಬಂದೇ, ಬತ್ತೇ ಆಗೋ?" ರೊಕ್ಕ ಹೇಗೆ ಕೇಳಲಿ ಎಂದನಿಸಿ ಒಲ್ಲದ ಮನಸ್ಸಿಂದ ಸುಮ್ಮನೇ ಹೋಗುವವಳೆಂತೆ ನಟಿಸಿದಳು.

"ನಿಲ್ಲೆ ನಾಗಿ ಬಂದೆ, ಮಾತ್ರ ತಡಿಯೆ, ಹೋಗಕ್".

"ಇಲ್ರಾ ಅಮ್ಮೋರೆ, ಮಗಗ್ ಗಂಜಿ ಕುಟ್ಬಿಟ್ ಹಾಂಗೇ ಬಂದಿದ್ನ್ರಾ. ಈಗ ಹೆಂಗೇವ್ನೋ ಏನೋ, ಅಲ್ಲಿ ನೋಡ್ಕಣುಕು ಯಾರು ಇಲ್ಲಾ."

"ಗುತ್ತಾಯ್ತೆ ಮಾರಾಯ್ತಿ, ಮಾತ್ರೆ ನಿಲ್ಲೆ ಬಂದೆ. ಅನ್ನಕ್ಕೆ ಅಕ್ಕಿ ಹಾಕಿಕೆ ಬತ್ತಿ."

ಗೌರಿ ಬೇಗ ಬೇಗ ಅನ್ನಕ್ಕೆ ಅಕ್ಕಿ ಹಾಕಿ ಹೊರ ಬಂದು, "ನಾಗಿ, ಹನಿ ಸಾರ್ ಕುಡ್ತಿ, ತಕಂಡೆ ಹೋಗಕ ಆಗಾ" ಎಂದು ಹೇಳಿ, ಒಳಕ್ಕೆ ಹೋಗಿ ಒಂದು ಹಳೆಯ ಪಾತ್ರೆಯಲ್ಲಿ ಒಂದೆರಡು ಮೀನು ಹೋಳು ೩-೪ ಸವಟು ಸಾರು ಹಾಕಿಕೊಂಡು, ಗಂಡನ ಅಂಗಿಯ ಕಿಸೆಯಿಂದ ಕೈಗೆ ಸಿಕ್ಕ ನೂರರ ೨ ನೋಟುಗಳನ್ನು ತಂದು ನಾಗಿಗೆ ಕೊಡುತ್ತಾ, "ನಾಗಿ ಈ ರೊಕ್ಕ ಸಾಕಾತಿದಾ ಏನಾ? ಅವ್ರು ಮನಿಲೆ ಇಲ್ಲಾ, ಏನಾರೂ ಬೇಕಂದ್ರೆ ಬಾ. ನಿಂಕೋಡೆ ಬರುಕಾಗಲಾ ಅಂದ್ರೆ ಯಾರ್ಕೋಡರು ಹೇಳಕಳ್ಸ ಅವ್ರ ಕುಟ್ಟ ಬರುರ" ಎಂದು ಹೇಳಿ ಕಳಿಸಿದಳು.

ನಾಗಿ ರೊಕ್ಕವನ್ನು ಸೊಂಟಕ್ಕೆ ಸಿಕ್ಕಿಸಿದ ಸುಕ್ಕುಗಟ್ಟಿದ ಸಿರೆಯ ಸೆರಗಿಗೆ ಸಿಕ್ಕಿಸಿ, ಮೀನು ಸಾರಿನ ಪಾತ್ರೆಯನ್ನು ಕೈಯಲ್ಲಿ ಹಿಡಿದು " ಬತ್ರೆನ್ರಾ ಹಾಂಗಾರ" ಎಂದು ಹೇಳಿ ಶಾಂತಿಯ ಮನೆಗೆ ಹೋದಳು.

ಶಾಂತಿಯ ಮನೆಗೆ ಹೋದರೆ ಮನೆಯ ಬೀಗ ಹಾಕಿತ್ತು. ನಾಗಿ ಬಂದಿಲ್ಲ ಎಂದು ತುರ್ತು ಕೆಲಸಕ್ಕಾಗಿ ಇಟ್ಟುಕೊಂಡ ನಾಗಿಯ ಮನೆಯ ಪಕ್ಕದ ಸೇವಂತಿ ಬಾವಿಯಿಂದ ನೀರು ಸೇದು ಬಚ್ಚಲು ಮನೆಯ ಹಂಡಿಗೆ ನೀರು ತುಂಬಿಸುತಿದ್ದದನ್ನು ನೋಡಿ,

"ಸೇವಂತಿ ಶಾಂತಮ್ಮೋರು ಎಲ್ಲಿಗ್ ಹೋಗೇರೇ?" ಎಂದು ಕೇಳಿದಳು.

"ಏನೋ ಮಗ್ಳ ಮನಿಗ ಅಂತೇ, ಹತ್ತಗಂಟೆ ಬಸ್ಸೇಗ ಹೋಗೇರ. ಬರುಕ ಸಂಜೇ ಆತಿದ ಅಂದಾಗ ಮಾಡೇದ್ರಪಾ" ಅಂದಳು ಸೇವಂತಿ.

"ಹೌದಾ?" ಎಂದು ಕೇಳಿ ಹೊರಟಳು ಸಾವಿತ್ರಮ್ಮನ ಮನೆಯ ಕಡೆ.

ಹೀಗೆ ಐದಾರು ಮನೆ ಸುತ್ತಿ ಸೀತಕ್ಕನ ಮನೆಗೆ ಬರುವ ಹೊತ್ತಿಗೆ ಮಧ್ಯಾಹ್ನ ಮೂರು ದಾಟಿತ್ತು. ಎಲ್ಲಿ ಹೋದರು ಅವಳಿಗೆ ಮಗನದೇ ಯೋಚನೆ. ಯಾವತ್ತು ಜ್ವರ ಬಿಡುವುದೋ? ಯಾವತ್ತು ಮಗ ಹುಷಾರು ಆಗುವನೋ ಎನ್ನುವುದೇ ಚಿಂತೆ. ಸೀತಕ್ಕನ ಮನೆಗೆ ಬರುವ ಹೊತ್ತಿಗೆ ಸೀತಕ್ಕ ಗಂಡನಿಗೆ ಊಟ ಬಡಿಸಿ, ತಾನು ಉಂಡು ಪಾತ್ರೆಗಳನ್ನೆಲ್ಲ ತೊಳೆದು ಟಿವಿ ಹಚ್ಚಿಕೊಂಡು, ನಿನ್ನೆ ರಾತ್ರಿ ನೋಡಿದ ದಾರವಾಹಿಗಳ ಮರು ಪ್ರಸಾರವನ್ನು ಮತ್ತೊಮ್ಮೆ ಮಧ್ಯಾಹ್ನ ನೋಡತೊಡಗಿದ್ದಳು. ದಿನಾ ನೋಡುತಿದ್ದಳು ಕೂಡ.

ಅಂಕೋಲೆಯಲ್ಲಿ ಚಿಕ್ಕ ಆಸ್ಪತ್ರೆಯಿಟ್ಟುಕೊಂಡ ಕಿರಿಯ ಮಗ ಹರೀಶನನ್ನು ಬಿಟ್ಟರೆ ಉಳಿದವರೆಲ್ಲ ದೂರ ದೂರದ ಊರುಗಳಲ್ಲಿ ನೌಕರಿ ಮಾಡುತ್ತಿದ್ದರು. ( ಹರೀಶ ಅಂಕೋಲೆಯಲ್ಲಿದ್ದರೂ ಮನೆಗೆ ಹಗಲಲ್ಲಿ ಊಟಕ್ಕೆ ಬರುತ್ತಿರಲಿಲ್ಲ. ಅಪರೂಪಕ್ಕೆ ಯಾವಾಗಲೋ ಒಮ್ಮೆ ಬಿಡುವಿದ್ದರೆ ಮಾತ್ರ ಮನೆಗೆ ಊಟಕ್ಕೆ ಬರುತ್ತಿದ್ದ. ಹಾಗಾಗಿ ಸೀತಾ ಮಗ ಮಧ್ಯಾಹ್ನ ಊಟಕ್ಕೆ ಬರಲಿ, ಬರದೇ ಇರಲಿ ಅವನಿಗಾಗಿ ಅಡುಗೆ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ. ಒಂದೊಮ್ಮೆ ಮಗ ಹಸಿದು ಬಂದರೆ ಹಾಗೆ ಹೊರಟು ಬಿಡಬೇಕಾಗುತ್ತಲ್ಲ ಎನ್ನುವ ಚಿಂತೆ) ಮಧ್ಯಾಹ್ನ ಊಟವಾದ ಮೇಲೆ ಗಂಡ ಸ್ವಲ್ಪ ಹೊತ್ತು ಮಲಗಿ ಬಿಡುತ್ತಿದ್ದರಿಂದ ಸೀತಕ್ಕನ ಬೇಸರಕ್ಕೆ ದೂರದರ್ಶನದ ಆ ನಿನ್ನೆಯ ಧಾರವಾಹಿಗಳೇ ಗತಿ.

(ಮುಂದುವರೆಯುವುದು...)

Saturday, January 14, 2017

ಬದುಕು-ಬವಣೆ


ಹನ್ಮುವಿಗೆ ವರ್ಷಕ್ಕೊ, ಎರಡು ವರ್ಷಕ್ಕೊ ಅಪರೂಪಕ್ಕೆ ಒಮ್ಮೆ ಬರುತ್ತಿದ್ದ ಜ್ವರ, ಇತ್ತೀಚೆಗೆ ನಾಲ್ಕು ತಿಂಗಳುಗಳಲ್ಲಿ ೩ ಬಾರಿ ಬಂದು ಹೋಗಿ ಈಗ ಒಮ್ಮೆಲೆ ಇದ್ದಕ್ಕಿದ್ದ ಹಾಗೆ ಮತ್ತೆ ಬಂದಿತ್ತು. ಆದರೆ ಈ ಬಾರಿ ಬಂದದ್ದು ಒಂದು ವಾರ ಕಳೆದರೂ ಕಡಿಮೆಯಾಗಲಿಲ್ಲ. ನಾಗಿ ತನ್ನ ಕೆಲಸ ಬಿಟ್ಟು ಜ್ವರ ಬಂದಿರುವ ಮಗನನ್ನು ಮನೆಯ ಹತ್ತಿರವೇ ಇರುವ ಸರ್ಕಾರಿ ಆಸ್ಪತ್ರೆಗೆ ಹೋಗಿ ಎರಡು ಬಾರಿ ತೋರಿಸಿಕೊಂಡು ಬಂದಳು. ಎರಡು ಬಾರಿ ಹೋದಾಗಲೂ ಒಂದಿಷ್ಟು ಔಷಧಿಯನ್ನು ಕೊಟ್ಟುಕಳಿಸಿ ಇನ್ನೆರಡು ದಿನ ಜ್ವರ ಬಿಟ್ಟಿಲ್ಲ ಎಂದರೆ ಮತ್ತೆ ಬನ್ನಿ ಎಂದು ಹೇಳಿ ಕಳಿಸಿದ್ದು ಆಯಿತು. ಹೀಗೆ ಹೇಳಿ ಕಳಿಸಿ ಮೂರು ದಿನವಾಯಿತು. ನಾಗಿಯು ಕೂಡ ಕೆಲಸಕ್ಕೆ ಹೋಗದೇ ಆಗಲೇ ಒಂದು ವಾರವಾಗಿ ಹೋಗಿತ್ತು. ನಾಳೆ ಏನೆ ಆಗಲಿ ಮಗನನ್ನು ಹೇಗಾದರೂ ಮಾಡಿ ಅಂಕೋಲೆಯ ದೊಡ್ಡ ಆಸ್ಪತ್ರೆಗೆ ಒಂದು ಸಾರಿ ತೋರಿಸಿ ಬಿಡುವುದು ಒಳ್ಳೆಯದೆನಿಸಿತು. ಆದರೆ ಏನು ಮಾಡುವುದು ಅದು ಅವಳಿಗೆ ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲವಲ್ಲ.

ಪಾಪ ನಾಗಿಯ ಬದುಕೆ ಹಾಗೆ. ಅವಳೇನು ಸ್ಥಿತಿವಂತಳಾಗಿರಲಿಲ್ಲ. ಅವಳ ಆಸ್ಥಿ ಎಂದರೆ ಈಗ ವಾಸಿಸುತ್ತಿರುವ ಎರಡು ಪಕ್ಕೆಯ ಹಂಚಿನ ಮನೆ, ಮನೆ ಇರುವ ಎರಡು ಗುಂಟೆಯ ಜಾಗ, ಆ ಜಾಗದಲ್ಲಿರುವ ಎರಡು ತೆಂಗಿನ ಮರ ಮತ್ತು ಒಂದು ಭಲಿತ ನುಗ್ಗೆಯ ಗಿಡ ಮಾತ್ರ. ನಾಲ್ಕಾರು ಮನೆಯ ಮುಸುರೆ ತಿಕ್ಕಿ ಮಗನನ್ನು ಓದಿಸುತ್ತಾ ಸಂಸಾರವನ್ನು ಸಾಗಿಸುತ್ತಿದ್ದಳು ನಾಗಿ. ಹಾಗಂತ ಅವಳಿಗೆ ಗಂಡ ಮತ್ತು ಇತರೆ ಮಕ್ಕಳಿಲ್ಲವೇ? ಇದ್ದಾರೆ ಅವಳಿಗೆ ಗಂಡನೂ ಇದ್ದಾನೆ. ಅವನು ದುಡಿಯುತ್ತಾನೆ. ದುಡಿದದ್ದನ್ನು ಕುಡಿದು ಮನೆಗೆ ಬರುತ್ತಾನೆ, ಅದೂ ನಾಗಿ ಮಾಡಿದನ್ನು ಉಣ್ಣಲು ಅಷ್ಟೇ. ಹನ್ಮುನ ಹಾಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಆದರೆ ಪ್ರಾಥಮಿಕ ಶಿಕ್ಷಣವನ್ನು ಓದಿಲ್ಲ ಅಷ್ಟೇ. ಅವರೂ ಕೂಡ ಸಮೀಪದ ಕಲ್ಲು ಕಣಿಯಲ್ಲಿ ದುಡಿಯುತ್ತಾರೆ.

ಮೊದಲನೇಯವನು ಇವರ ಜೊತೆ ವಾಸಿಸದೇ, ಅಲ್ಲೇ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ಎರಡು ಪಕ್ಕೆಯ ಚಿಕ್ಕ ಮನೆ ಕಟ್ಟಿಕೊಂಡು ಹೆಂಡತಿಯೊಡನೆ ವಾಸವಾಗಿದ್ದಾನೆ. ಮದ್ಯದವನದು ಹಮಾಲಿ ಕೆಲಸ. ದುಡಿದುದ್ದರಲ್ಲಿ ಒಂದು ಪೈಸೆಯನ್ನು ಮನೆಗೆ ಕೊಡುತ್ತಿರಲಿಲ್ಲ. ದುಡಿದದ್ದನ್ನು ಗೆಳೆಯರೊಂದಿಗೆ ಸೇರಿ ಇಸ್ಪೀಟು ಆಟ ಆಡುವುದರಲ್ಲಿ ಹಾಗೂ ವಾರಕೊಮ್ಮೆ ಅಂಕೋಲೆಗೆ ಹೋಗಿ ಸಿನೇಮಾ ನೋಡುವುದರಲ್ಲೇ ಕಾಲಿ ಮಾಡಿ ಬಿಡುತಿದ್ದ. ಆದರೆ ಅವನಿಗೂ ಅವನ ಅಪ್ಪನಿಗೂ ಇರುವ ವ್ಯತ್ಯಾಸವೊಂದೇ, ಅಪ್ಪ ಮನೆಗೆ ಊಟ್ಟಕ್ಕಾದರೂ ದಿನಾ ಮನೆಗೆ ಬರುತ್ತಿದ್ದ, ಆದರೆ ಈತ ನೆನಪಿದ್ದರೆ ಬಂದ ಇಲ್ಲಾ ಕುಡಿದು ಅಲ್ಲೆ ಬಿದ್ದ.

ಆದರೆ ಹನ್ಮು ಮಾತ್ರ ಇವರೆಲ್ಲರಿಗಿಂತಲೂ ಭಿನ್ನ. ಆಗಲೇ ಆತ ಬಿ.ಎಸ್.ಇ ಮುಗಿಸಿ ಬಿ.ಎಡ್ ಓದುತ್ತಿದ್ದ. ಬಿ.ಎಡ್ ಸೇರಿ ಆಗಲೇ ಒಂದೆರಡು ತಿಂಗಳಾಗಿದ್ದವು. ಅವರ ಆ ಗುಂಪಿನಲ್ಲಿ ಆತನೇ ಅತೀ ಹೆಚ್ಚು ಓದಿದ್ದು. ನಾಗಿಗೂ ಕಿರಿಯ ಮಗನನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ ಮತ್ತು ಹೆಮ್ಮೆ. ಈ ವರ್ಷ ಒಂದು ಕಳೆದರೆ ಸಾಕು ಮಗನ ಓದು ಮುಗಿದು ಬಿಡುತ್ತದೆ. ತಾನು ಇಲ್ಲಿಯವರೆಗೆ ಪಟ್ಟ ಕಷ್ಟಕ್ಕೂ ಒಂದು ಸಾರ್ಥಕತೆ ಸಿಗುತ್ತದೆ ಎಂದು ಕೊಂಡಿದ್ದವಳು ಮಗನ ಈ ಪರಿಸ್ಥಿತಿ ನೋಡಿ ಕಳವಳಕ್ಕಿಡಾಗಿದ್ದಳು.

ನಾಳೆ ಆಸ್ಪತ್ರೆಗೆ ಹೋಗಲು ಹೇಗೆ ರೊಕ್ಕ ಹೊಂದಿಸುವುದು ಎನ್ನುವ ಚಿಂತೆ ಕಾಡತೊಡಗಿತ್ತು. ತಾನು ಮುಸುರೆ ತಿಕ್ಕುವ ಎಲ್ಲರ ಮನೆಗೂ ತನ್ನ ಮಗನಿಗೆ ಹುಷಾರು ಇಲ್ಲದಿರುವ ವಿಷಯ ತಿಳಿದಿತ್ತಾದರೂ, ಎಲ್ಲರಲ್ಲೂ ರೊಕ್ಕ ಕೇಳಲು ಅವಳಿಗೆ ಮುಜುಗರ. ಎಲ್ಲರೂ ಬಂದೇ ರೀತಿ ಇಲ್ಲ ಎನ್ನುವ ಸತ್ಯ ಅವಳಿಗೂ ತಿಳಿದಿತ್ತು. ಹಾಗಂತ ಈಗೀನ ಪರಿಸ್ಥಿತಿಯಲ್ಲಿ ಕೇಳದೇ ಇರಲು ಸಾದ್ಯವೂ ಇಲ್ಲ. ಏನಾದರಾಗಲೀ ನೋಡೋಣವೆಂದು ವಿಚಾರಮಾಡಿಕೊಂಡು ಮಗನಿಗೆ ಸ್ವಲ್ಪ ಬಿಸಿ ಗಂಜಿ, ಒಂದು ಮಿಡಿ ಉಪ್ಪಿನ ಕಾಯಿಕೊಟ್ಟು ಊಟ ಮಾಡಿಸಿ ಪಾತ್ರೆ ತೊಳೆದು ಮನೆಯಿಂದ ಹೊರ ಬಂದಳು. ಮನೆಯಿಂದ ಹೊರ ಬಂದವಳೇ, ಪಶ್ಚಿಮದ ದಿಗಂತದತ್ತ ಕಣ್ಣು ಹಾಯಿಸಿ ಮಳೆ ಬರುವ ಲಕ್ಷಣವಿದೆಯೇ ಎಂದು ನೋಡಿದಳು. ಆಗಲೇ  ಹುಬ್ಬಿ (ಹುಬ್ಬ)  ಮಳೆ ಪ್ರಾರಂಭವಾಗಿ ನಾಲ್ಕೈದು ದಿನಗಳಾಗಿದ್ದವು. ಒಮ್ಮೆ ಜೋರಾಗಿ ಬಂದು ಒಂದರ್ದ ಗಂಟೆ ಹೊಯ್ದು ಹೋದರೆ ಇನ್ನೊಂದು ಗಂಟೆ ಅದರ ಪತ್ತೆಯೇ ಇರುವುದಿಲ್ಲ. ಒಮ್ಮೊಮ್ಮೆಯಂತು ಹನಿ ಹನಿಯಾಗಿ ಚಿಟಿ ಚಿಟಿ ಅಂತಾ ಬಿಳುತ್ತಲೇ ಇರುತ್ತದೆ. ಮೋಡ ಅಷ್ಟೊಂದು ಇಲ್ಲದ್ದನ್ನು ನೋಡಿ, ಮಳೆ ಬರಲಾರದು ಎಂದು ದಣಪೆಯವರೆಗೆ ಬಂದವಳು, ಊರಿಗೆ ಹೋಗಿ ರೊಕ್ಕ ತೆಗೆದುಕೊಂಡು ಬರುವವರೆಗೆ ಎಲ್ಲಾದರೂ ಮಳೆ ಬಂದರೆ ಮನೆಗೆ ಬರುವುದು ತಡವಾಗಬಹುದು ಎನಿಸಿ, ಮನೆಗೆ ಬಂದು ಕೊಡೆ ತೆಗೆದುಕೊಂಡು ಮತ್ತೆ ಹೊರಟಳು.

ಅವಳು ದಣಪೆ ದಾಟಿ ಹತ್ತು ಹೆಜ್ಜೆ ಆಜೆ ಬಂದಿರಬಹುದು. ಅವಳು ಮನೆಯಿಂದ ಹೊರ ಹೋಗುತ್ತಿದ್ದದನ್ನು ನೋಡಿದ ಸೊಸೆ "ಅತ್ತೆ, ಹನ್ಮುಗ್ ಜ್ವರ ಕಡ್ಮಿ ಆಯ್ತಾ?" ಎಂದಳು.

"ಇಲ್ವೇ, ಇನ್ನೂ ಬಿಟ್ಟಿಲ್ಲಾ, ಇಲ್ಲೇ ಒಡಿದಿರ್ ಮನಿಗ ಹೋಗ್ ಬತ್ತಿ, ಬರುಕ್ ಲೇಟಾದ್ರ ಮನಿಗೆ ಒಂದ ಸಲಾ ಬಂದ ಹನ್ಮು ಏನ್ಮಾಡ್ತಿಯಾ ಅಂದೆ ನೋಡ್ಕಂಡ ಹೋಗ್ ಆಗಾ. ಆಂವ್ಗೆ  ಏನರ ಬೇಕಂದ್ರೆ ಕುಟ್ಟೆ ಹೋಗ್ ಆಯ್ತಾ." ಎಂದು ಸೊಸೆಗೆ ಹೇಳಿ ಅವಳ ಉತ್ತರಕ್ಕೂ ಕಾಯದೇ, ಊರ ನಾಯ್ಕರ ಕೇರಿಯತ್ತ (ನಾಯ್ಕರ ಕೊಪ್ಪದತ್ತ) ಹೊರಟಳು. ೩೫ ವರ್ಷದಿಂದ ಅವಳ ಮನೆಯಿಂದ ಆ ಕೇರಿಗೆ, ಆ ಕೇರಿಯಿಂದ ಅವಳ ಮನೆಗೆ ಅದೆಷ್ಟು ಸಲ ಓಡಾಡಿದ್ದಳೋ, ಆದರೆ ಇಂದಿನ ನಡಿಗೆ ಮೊದಲಿನಂತಿರಲಿಲ್ಲ. ಇವತ್ತಿನ ನಡಿಗೆಯಲ್ಲಿ ದುಗುಡವಿದೆ, ದುಃಖವಿದೆ, ಭಾವುಕತೆಯಿದೆ, ಸ್ವಹಿತದ ಸ್ವಾರ್ಥವಿದೆ. ಯಾವತ್ತು ಕೇಳದ ರೊಕ್ಕ ಇವತ್ತು ಕೇಳುತ್ತಿದ್ದಿನಲ್ಲ ಎನ್ನುವ ಭಾವನೆಯಿದೆ. ಮುಂದೆ ಹನ್ಮುನ ಪರಿಸ್ಥಿತಿ ಏನಾಗುವುದೋ ಎನ್ನುವ ಚಿಂತೆ ಮನಸ್ಸನ್ನು ಪೂರ್ತಿಯಾಗಿ ಆವರಿಸಿಕೊಂಡಿದೆ. ನಡಿಗೆಯಲ್ಲಿ ಆತುರವಿದೆ, ಕಾತರವಿದೆ. ಒಟ್ಟಿನಲ್ಲಿ ಅವಳು ನಡೆಯುತ್ತಿದ್ದಾಳೆಯೋ ಅಥವಾ ಯಾರೋ ಅವಳನ್ನು ನಡೆಸಿಕೊಂಡು ಹೋಗುತ್ತಿದ್ದಾರೋ ಎನ್ನುವ ರೀತಿಯಲ್ಲಿದೆ ಅವಳ ನಡಿಗೆ. ಹಾಗೂ ಹೀಗೂ ನಡೆಯುತ್ತಾ ಹೋಗಿ ಗೋವಿಂದ ನಾಯ್ಕರ ಮನೆಯ ದಣಪೆಯನ್ನು ದಾಟಿ, ಗೋವಿಂದ ನಾಯ್ಕರ ಮನೆಯ ಜಗುಲಿಗೆ ಬಂದು, "ಒಡ್ದಿರೋ," ಎಂದು ಕರೆದಳು.

ನಾಗಿ ಕರೆದ ಧ್ವನಿಯನ್ನು ಕೇಳಿ ಅಡಿಗೆ ಮನೆಯಲ್ಲಿ, ಆಗಲೇ ಗಂಡ ತಂದಿದ್ದ ಮೀನನ್ನು ಕೊಯ್ದು, ಉಪ್ಪು ಹಾಕಿ, ಬದಿಗೆ                                  
 ಇಟ್ಟು, ಮೀನು ಪಳದಿಗಾಗಿ ಕಾಯಿ ತುರಿದು ಮಸಾಲೆ ಹಾಕುತ್ತಿದ್ದಳು ಗೌರಿ.

"ಓ, ಯಾರ್? ಬಂದೆ ಒಂದ್ನಿಮಿಷ ನಿಲ್ಲಾಗಾ" ಎಂದು ಹೇಳಿ, ಮಿಕ್ಷರಿಗೆ ಮಸಾಲೆ ಹಾಕಿ ಅರೆಯಲು ಇಟ್ಟು ಹೊರಗೆ ಬಂದಳು. ಹೊರಗೆ ಬಂದವಳು ನಾಗಿಯನ್ನು ನೋಡಿ,

" ಏನೆ ನಾಗಿ, ಇಲ್ಲೋಗದ್ಯೆ ಇಟ್ ದಿವ್ಸೆ? ಮಗಗೆ ಆರಾಂ ಇಲ್ಲಾಗತ ಕಡಲಾ? ಏಗೆ ಆರಾಂ ಆಗಿದಾ ಹೆಂಗೆ?"

"ಇಲ್ರಾ ಅಮ್ಮೋರೆ, ಅದೇನಾಗಿದ್ ಅಂದ ಗುತ್ತೇ ಆತೇ ಇಲ್ಲಾ, ಏಯ್ಡ್, ಏಯ್ಡ್ ಸಲಾ ಆಸ್ಪತ್ರಿಗ ಹೋಗ್ ತೋರ್ಸಕುಂಡ ಬಂದೆ, ಜ್ವರ ಬಿಡ್ತೇನೆ ಇಲ್ಲಾ. ಎಂತಾ ಮಾಡುದ್ ಅಂತಾನೇ ಗುತ್ತ್ ಆತೆ ಇಲ್ರಾ".

"ಅದೆಂಗೆ ಹಾಂಗಾಯ್ತ ಆಂವ್ಗೆ, ಹೋಗ್ಲೆ ಅಂಕೋಲೆಗರೂ ಒಂದ್ಸಲಾ ಕರಕಂಡೆ ಹೋಗೆ ತೋರ್ಸ. ರಕ್ತ ಎಲ್ಲಾ ಚಕಪ ಮಾಡುಕೆ ಹೇಳ್ ಆ ಕಾಳ್ದ್ ಡೊಕ್ಟರ್ಕೋಡೆ."

"ಏಗ್ ಹಂಗೆ ಮಾಡ್ಬೇಕ್ ಅಂತೇ ಮಾಡೇನ್ರಾ, ಎಂತಾ ಮಾಡುಕ್ ಆತಿದ ಅಮ್ಮಾ ನಮ್ಕೋಡೆ, ಅಲ್ಲಿಗೆ ತೋರ್ಸುದಂದ್ರೆ ಸುಮ್ನೆ ಆತಿದಾ? ರೊಕ್ಕ ಬೇಡ್ರಾ,  ಅಲ್ಲಿಗ್ ಕರಕುಂಡ ಹೋಗ ತೋರ್ಸುಕ.

ಅಷ್ಟರಲ್ಲೇ ಗೌರಿಗೆ ತಾನು ಒಳಗೆ ಮೀನು ಸಾರಿಗಾಗಿ ಮಸಾಲೆ ಅರಿಯಲು ಇಟ್ಟದ್ದು ನೆನಪಿಗೆ ಬಂತು. "ಅದೆ ನಾಗಿ, ಮಾತಾಡ್ತೇ, ಮಾತಾಡ್ತೇ ಹಾಂಗೇ ಕುತ್ ಬಿಟ್ಟೆ ನೋಡ, ಎಚ್ಚರಾನೇ ಇಲ್ಲಾ ಅರಿಯುಕೆ ಇಟ್ಟ ಬಂದದ್. ಉಂದ್ನಿಮಿಷ ನಿಲ್ಲ ಹಾಂ. ಈ ಹಾಳಾದ್ ಕರಂಟ್ನೋರ್ ಮಳೆ ಬಂದ್ರೆ ಸಾಕ್, ತಿಗ್ದೇ ಬಿಡ್ತರ್, ಹುತ್ತಿಲ್ಲಾ, ಗುತ್ತಿಲ್ಲಾ. ಅದ್ಕೆ ಕರೆಂಟ್ ಹೋದ್ರೆ ಕಷ್ಟ ಅಂದೆ ಅರುಕೆ ಗ್ರೈಂಡರ್ಗೆ ಹಾಕೆ ಬಂದದೆ. ತಡಿ, ಅರ್ದದ ಮಸಾಲೆ ಹಾಕೆ ಪಳದಿ ಕುದಬರ್ಸಿಕೆ ಬಂದೆ" ಎಂದು ಒಳಗೆ ಅಡಿಗೆ ಕೋಣೆಗೆ ಹೋದರು.

(ಮುಂದುವರೆಯುವುದು...)

--ಮಂಜು ಹಿಚ್ಕಡ್