Friday, December 30, 2016

ಬದುಕೆಂಬ ಮೇನೆಯಲಿ


ಬದುಕೆಂಬ ಮೇನೆಯಲಿ
ನೆನಪುಗಳ ಮೆರವಣಿಗೆ
ನೆನೆಯುತ್ತಾ, ಕುಂಟುತ್ತಾ
ಸಾಗಿಹುದು, ನನ್ನ ಬರವಣಿಗೆ

-ಮಂಜು ಹಿಚ್ಕಡ್

Tuesday, December 27, 2016

ಆಧುನಿಕ ಶ್ರವಣಕುಮಾರರು

ಬಹುಶಃ ಭಾರತದಲ್ಲಿ ಶ್ರವಣಕುಮಾರನ ಹೆಸರು ಕೇಳದ ಒಬ್ಬನೇ ಒಬ್ಬ ವ್ಯಕ್ತಿ ಇರಲಿಕ್ಕಿಲ್ಲ. ಶ್ರವಣಕುಮಾರನ ಹೆಸರು ಬರುವುದು ರಾಮಾಯಣದಲ್ಲಿ. ಪಿತ್ರವಾತ್ಸಲ್ಯಕ್ಕೆ ಹೆಸರಾದ ಪುರಾಣ ಪುರುಷ. ಕುರುಡರಾದ ವ್ರದ್ದ ತಂದೆ ತಾಯಿಯರು ತಿರ್ಥಯಾತ್ರೆಗೆ ಹೊರಡಬೇಕೆಂದು ಬಯಸಿದಾಗ ಅವರನ್ನು ಎರಡು ಬುಟ್ಟಿಗಳಲ್ಲಿ ಕುಡಿಸಿ. ಆ ಎರಡು ಬುಟ್ಟಿಗಳನ್ನು ಒಂದು ಉದ್ದವಾದ ಮರದ ಕಂಬಿಗೆ ಆ ಕಡೆ ಈ ಕಡೆ ಕಟ್ಟಿ. ಆ ಕಂಬಿಯನ್ನು ಹೆಗೆಲ ಮೇಲೆ ಹೊತ್ತು ತಿರ್ಥಯಾತ್ರೆಗೆ ಕರೆದುಕೊಂಡು ಹೋದ ಮಹಾನ ಪುರುಷ. ಹೀಗೆ ಮುಂದೆ ಕಾಡಿನಲ್ಲಿ ಹೋಗುತ್ತಿದ್ದಾಗ ತಂದೆ-ತಾಯಿಯರಿಗೆ ಬಾಯಾರಿಕೆಯಾಗುತ್ತದೆ ಅಂದು ಹೇಳಿದಾಗ, ನೀರು ತರಲು ಅಲ್ಲೆ ಸಮೀಪವಿದ್ದ ಕೆರೆಗೆ ಹೋಗುತ್ತಾನೆ. ಆಗ ಅದೇ ಸಂಧರ್ಭದಲ್ಲಿ ಅಯೋದ್ಯೆಯ ಮಹಾರಾಜ ದಶರಥ ಬೇಟೆಗೆ ಎಂದು ಕಾದು ಕುಳಿತಿರುತ್ತಾನೆ. ಶ್ರವಣ ಕುಮಾರ ಕೆರೆಯ ಬಳಿ ನೀರು ತೆಗೆಯುತ್ತಿದ್ದಾಗ ದಶರಥ ಯಾವುದೋ ಪ್ರಾಣಿ ನೀರು ಕುಡಿಯುತ್ತಿದೆ ಎಂದು ತಿಳಿದು ಬಾಣ ಬಿಡುತ್ತಾನೆ. ಆ ಬಾಣ ಶ್ರವಣ ಕುಮಾರನಿಗೆ ತಗುಲಿ ಅಯ್ಯೋ ಎಂದು ಒದ್ದಾಡುತ್ತಿರುತ್ತಾನೆ. ಆ ಧ್ವನಿ ಕೇಳಿ ದಶರಥ ಅಲ್ಲಿಗೆ ಬರುತ್ತಾನೆ. ಅಲ್ಲಿಗೆ ಬಂದಾಗ ಆತನಿಗೆ ತಿಳಿಯುತ್ತದೆ ತಾನು ಬಾಣ ಬಿಟ್ಟಿದು ಪ್ರಾಣಿಗೆ ಅಲ್ಲ, ಮನುಷ್ಯನಿಗೆ ಎಂದು. ತನ್ನ ತಪ್ಪಿನ ಅರಿವಾಗಿ ಬೇಸರಗೊಂಡು ಶ್ರವಣ ಕುಮಾರನ ಬಳಿ ಹೊರಡುತ್ತಾನೆ. ರಾಜನನ್ನು ನೋಡಿ ಶ್ರವಣ ಕುಮಾರ ತನ್ನ ವ್ರತ್ತಾಂತವನ್ನು ಹೇಳಿ, ತನ್ನ ತಂದೆ-ತಾಯಿಯರಿಗೆ ಕುಡಿಯಲು ನೀರು ಕೊಟ್ಟು ಕಳಿಸುತ್ತಾನೆ. ದಶರಥ ನೀರು ತೆಗೆದುಕೊಂಡು ಹೋಗಿ ನೀರು ಕೊಟ್ಟು ನಡೆದಿರುವ ಸಂಗತಿಯನ್ನು ತಿಳಿಸಿ ಅವನ ತಂದೆ ತಾಯಿಯರಿಗೆ, ಅವರನ್ನು ಶ್ರವಣ ಕುಮಾರನಿದ್ದಲ್ಲಿಗೆ ಕರೆತರುತ್ತಾನೆ. ಅಷ್ಟರಲ್ಲಾಗಲೇ ಶ್ರವಣ ಕುಮಾರನ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ. ಇದೆಲ್ಲವನ್ನು ನೋಡಿ ಶ್ರವಣ ಕುಮಾರನ ತಂದೆ-ತಾಯಿಯರಿಗೆ ತುಂಬಾ ಧುಖವಾಗಿ, ದಶರಥನಿಗೆ ನಿನಗೂ ಪುತ್ರ ವಿಯೋಗದಿಂದಲೇ ಸಾವು ಬರಲಿ ಎಂದು ಶಪಿಸುತ್ತಾರೆ.

ಇವೆಲ್ಲ ಪುರಾಣ ಕತೆಯನ್ನು ಮತ್ತೆ ಯಾಕೆ ಬರೆಯುತ್ತಿದ್ದಾನೆ ಎಂದುಕೊಳ್ಳಬೇಡಿ. ನಾನು ಇಲ್ಲಿ ಬರೆಯಹೊರಟಿದ್ದು ಆಧುನಿಕ ಶ್ರವಣ ಕುಮಾರರ ಬಗ್ಗೆ. ಆ ಶ್ರವಣ ಕುಮಾರನಿಗೂ ಈ ಶ್ರವಣ ಕುಮಾರರಿಗೂ ಇರುವ ಹೋಲಿಕೆ ನೋಡುವುದಕ್ಕೆ ಒಂದೇ ಆದರೂ ನಡತೆಯಲ್ಲಿ, ನುಡಿಯಲ್ಲಿ, ಆಚಾರ ವಿಚಾರಗಳಲ್ಲಿ ಭಿನ್ನತೆಯನ್ನು ಹೊಂದಿದೆ. ಆದ್ದರಿಂದಲೇ ನಾನು ಇವರನ್ನು ಆಧುನಿಕ ಶ್ರವಣ ಕುಮಾರರು ಎಂದು ಕರೆದಿದ್ದು. ಹಾಗಿದ್ದರೆ ಶ್ರವಣ ಕುಮಾರರು ಯಾಕೆ ಶ್ರವಣ ಕುಮಾರ ಅನ್ನಬಹುದಲ್ಲವೇ ಅಂದುಕೊಳ್ಳಬೇಡಿ. ಅಂದು ಇದ್ದಿದ್ದು ಒಬ್ಬನೇ ಒಬ್ಬ ಶ್ರವಣ ಕುಮಾರ. ಆದರೆ ಇಂದು ಅದೆಷ್ಟೋ ಮಂದಿ ಆ ತರದ ಶ್ರವಣ ಕುಮಾರರಿದ್ದಾರೆ. ಬಹುತೇಕ ಅವರೆಲ್ಲ ಶ್ರವಣ ಕುಮಾರರು ವಾಸಿಸುವುದು ದೊಡ್ಡ ದೊಡ್ಡ ಐ.ಟಿ.ಸಿಟಿಗಳಲ್ಲೇ(ತಾಂತ್ರಿಕ ನಗರ) ಆದುದ್ದರಿಂದ, ಹಳ್ಳಿಯಲ್ಲಿರುವ ಜನರಿಗೆ ಅವರ ದರ್ಶನ ಭಾಗ್ಯ ತುಂಬಾ ಕಡಿಮೆ.

ಬೆಂಗಳೂರಲ್ಲಿ ಬೆಳಿಗ್ಗೆ ಆದರೆ ಸಾಕು ಇವರ ಯಾತ್ರೆ ಪ್ರಾರಂಭ. ಹೆಗಲಿನ ಒಂದು ಬಗ್ಗುಲಿಗೆ ಲ್ಯಾಪಟೊಪ್ ಸಹಿತವಿರುವ ಚೀಲ,ಹೆಗಲ ಇನ್ನೊಂದು ಬದಿಗೆ ಊಟದ ಡಬ್ಬ ಹಾಗೂ ಇತರೆ ಸಾಮಾನುಗಳಿರುವ ಇನ್ನೊಂದು ಚಿಕ್ಕ ಚೀಲ ದರಿಸಿ ಕಛೇರಿಗೆ ಹೊರಡುವ ಸೊಪ್ಟವೇರ್ ಇಂಜನಿಯರಗಳನ್ನು ದೂರದಿಂದ ನೋಡಿದಾಗ ನೆನಪಾಗುವುದು, ತಂದೆ-ತಯಿಯರನ್ನು ಹೊತ್ತು ತಿರ್ಥಯಾತ್ರೆಗೆ ಸಾಗುತ್ತಿರುವ ಶ್ರವಣ ಕುಮಾರನ ನೆನೆಪು. ಹುಡುಗಿಯರಾಗಿದ್ದರಂತೂ ಇನ್ನೂ ಥೇಟ್ ಶ್ರವಣ ಕುಮಾರಿಯರೇ. ಒಂದು ಹೆಗಲಿಗೆ ಲ್ಯಾಪಟೊಪ್ ಚೀಲ, ಇನ್ನೊಂದು ಹೆಗಲಿಗೆ ಶ್ರಂಗಾರ ಸಾಮಗ್ರಿಗಳ ಚೀಲ.

ಇನ್ನೂ ಶಾಲೆಗೆ ಹೋಗುವ ಮಕ್ಕಳೇನು ಕಮ್ಮಿ ಇಲ್ಲ ಬಿಡಿ. ಒಂದು ತೋಳಲ್ಲಿ ಊಟದ ಬುತ್ತಿ ಆದರೆ, ಇನ್ನೊಂದು ತೋಳಲ್ಲಿ ನೀರಿನ ಚೀಲ, ಅಷ್ಟೇ ಸಾಲದು ಎಂಬಂತೆ ಬೆನ್ನಿನ ಮೇಲೆ ಪಠ್ಯ ಪುಸ್ತಕಗಳ ಚೀಲ. ಇವು ಕೇವಲ ಉದಾಹರಣೆಗಳಷ್ಟೇ. ಇಂತಹ ಅದೆಷ್ಟೋ ಪ್ರಸಂಗಗಳಲ್ಲಿ ನೀವು ಶ್ರವಣ ಕುಮಾರರಂತವರನ್ನು ನೋಡಬಹುದು.

ಅಂದಿನ ಶ್ರವಣ ಕುಮಾರ ಕೇವಲ ಪಿತ್ರ ಭಕ್ತಿಗೆ ಹೆಸರಾದರೆ, ಇಂದಿನ ಶ್ರವಣ ಕುಮಾರರು ಪಿತ್ರ ಭಕ್ತಿಯನ್ನು ಬಿಟ್ಟು ವ್ರತ್ತಿ ಬದುಕಿಗೆ ಮಾರು ಹೋದವರು. ಇಂದು ಪಿತ್ರಭಕ್ತಿ ಏನಿದ್ದರು ಅಪ್ಪ-ಅಮ್ಮಂದಿರು ದುಡಿದು ಮಕ್ಕಳನ್ನು ಸಾಕುವವರಿಗೆ ಮಾತ್ರ. ಒಮ್ಮೆ ಮಗ/ಮಗಳು ದುಡಿಯಲು ಪ್ರಾರಂಭವಾದರೆ ಅವರಿಗೆ ಪಿತ್ರಭಕ್ತಿ ಹೊರಟು, ವ್ರತ್ತಿ ಭಕ್ತಿ, ಧನ ಭಕ್ತಿ ಸುರುವಾಗುತ್ತದೆ. ಅದು ಮೋಹನ/ಮೋಹಿನಿಯ ಭಕ್ತಿ ಮೂಡಿದರಂತೂ ಅಪ್ಪ-ಅಮ್ಮಂದಿರನ್ನು ಸಂಪೂರ್ಣ ಮರತೇ ಬಿಡುತ್ತಾರೆ. ಹಿಗಾಗಿಯೇ ಅಲ್ಲವೇ ಪಟ್ಟಣಗಳಲ್ಲಿ ವ್ರದ್ದಾಶ್ರಮಗಳ ಸಂಖ್ಯೆ ಜಾಸ್ತಿ ಆಗ್ತಾ ಇರೋದು.

ವ್ರತ್ತಿ ಭಕ್ತಿಗೆ ಮಾರು ಹೋಗಿ, ಇಂದು ಹೆಂಡತಿ ಮಕ್ಕಳನ್ನೇ ಮರೆಯುತ್ತಾ ಇದ್ದೇವೆ. ಕೆಲಸ-ಕೆಲಸ-ಕೆಲಸ, ಹೆಂಡತಿ ಮಕ್ಕಳಿಗೆ ಸಮಯ ನೀಡಲಾಗದಷ್ಟು ಕೆಲಸ. ಇನ್ನೂ ಗಂಡ-ಹೆಂಡತಿ ಇಬ್ಬರು ದುಡಿಯುವರಾಗಿದ್ದರಂತೂ ಮಕ್ಕಳ ಗತಿ ಅಧೋಗತಿ. ಮಕ್ಕಳು ಕೆಲಸದವರ ಜೊತೆಯಲ್ಲೋ, ಡೇ ಕೇರಗಳಲ್ಲೋ ಬೆಳೆಯಬೇಕಾದ ಪರಿಸ್ಥಿತಿ. ಹೀಗೆ ಬೆಳೆದ ಮಕ್ಕಳು ಮುಂದೆ ತಂದೆ-ತಾಯಿಯರನ್ನು ಸರಿಯಾಗಿ ನೋಡಿಕೊಳ್ಳುತ್ತಾರೆ ಅನ್ನುವುದಕ್ಕೆ ಏನು ಗ್ಯಾರಂಟಿ. ಈಗೇನೇ ಹೀಗೆ, ಮುಂದೆ ಇನ್ನೇನಾಗಲಿದೆಯೋ.

                 "ಪುತ್ರ ಭಕ್ತಿಯೇ ಇಲ್ಲದ ಮೇಲೆ ಇನ್ನೆಲ್ಲಿಯ ಪಿತ್ರಭಕ್ತಿ".

-ಮಂಜು ಹಿಚ್ಕಡ್

Wednesday, February 3, 2016

ಆ ರುಚಿಯ ಮರೆಯುವುದು ಹೇಗೆ!

ಇಲ್ಲಿ ಬರೆಯ ಹೊರಟಿರುವ ವಿಷಯ ಹಲವು ವರ್ಷಗಳ ಹಿಂದೆ ನಡೆದಿದ್ದು, ಅದು ನೋಡಿದ್ದು, ಕೇಳಿದ್ದು, ಆಡಿದ್ದು ಮರೆತು ಹೋಗುವ ವಯಸ್ಸು ಕಳೆದು ಅಲ್ಪ ಸ್ವಲ್ಪ ಘಟನೆಗಳು ಮನಸ್ಸಲ್ಲಿ ನೆನಪು ಮೂಡುತಿದ್ದ ಬಾಲ್ಯದ ವಯಸ್ಸದು ನನಗೆ. ನಮ್ಮ ತಂದೆ ತಾಯಿ ಹೋದಲೆಲ್ಲ ನನಗರಿವಿಲ್ಲದೇ ಬೆನ್ನು ಹತ್ತಿ ಹೋಗುತಿದ್ದ ವಯಸ್ಸದು. ಅಂತಹ ವಯಸ್ಸಲ್ಲಿಯೇ ನಡೆದ, ಅರ್ಧಂಬರ್ಧ ನೆನಪಾಗುವ ಒಂದು ರುಚಿಕರವಾದ ಅಡುಗೆಯ ಬಗ್ಗೆ ಇಲ್ಲಿ ಬರೆಯ ಹೊರಟಿದ್ದೇನೆ. ಇದು ಅರ್ಧಂಬರ್ಧ ನೆನಪಿರುವ ವಿಷಯವಾಗಿರುವ ವಿಷಯವಾಗಿರುವುದರಿಂದ ಎಷ್ಟು ನೆನಪಿದೆಯೋ ಅಷ್ಟನ್ನು ನನಗೆ ತಿಳಿದ ಮಟ್ಟಿಗೆ ಬರೆಯಲು ಪ್ರಯತ್ನಿಸುತ್ತೇನೆ.

ಅಂಕೋಲೆ ಇದು ನಮ್ಮ ತಾಲೋಕಾ ಕೇಂದ್ರವಾಗಿದ್ದು, ನಮ್ಮೂರಿಂದ ೬-೭ ಕೀಲೋ ಮೀಟರ್ ದೂರದಲ್ಲಿದೆ. ಕೇವಲ ಆರೇಳು ಕೀಲೋ ಮೀಟರ್ ದೂರದಲ್ಲಿದ್ದರೂ ೮೦ರ ದಶಕದ ಅಂತ್ಯದ ಅಂದಿನ ದಿನಗಳಲ್ಲಿ ನಮಗೆ ಅಂಕೋಲೆ ಎನ್ನುವುದು ಚಿರಪರಿಚಿತವಾಗಿದ್ದರೂ, ನಮಗೆ ಅಪರೂಪದ ಸ್ಥಳವಾಗಿತ್ತು. ಆಗ ನಾವು ವರ್ಷಕ್ಕೆ ನಾಲ್ಕೈದು ಬಾರಿ ಅಂಕೋಲೆಗೆ ಹೋದರೆ ಹೆಚ್ಚು. ಅಂತಹ ವಯಸ್ಸಲ್ಲಿ ನಮಗೆ ಅಂಕೋಲೆಗೆ ಹೋಗಲು ಅವಕಾಶ ಸಿಕ್ಕರೆ ನಮಗೆ ಪಾರವೇ ಇರುತ್ತಿರಲಿಲ್ಲ.

ನಮ್ಮಲ್ಲಿ ವರ್ಷಕ್ಕೆ ಎರಡು ಭಾರಿ, ಅದರಲ್ಲೂ ವಿಶೇಷವಾಗಿ ಶ್ರಾವಣ ಮತ್ತು ಕಾರ್ತಿಕ ಮಾಸಗಳಲ್ಲಿ ಬರುವ ಶನಿವಾರದ ದಿನ ಊರವರೆಲ್ಲ ಸೇರಿ ಅಂಕೋಲೆಯ ವೆಂಕಟ್ರಮಣ ದೇವಸ್ಥಾನಕ್ಕೆ ಹೋಗಿ ಉಪಹಾರ ಮಾಡಿಸಿಕೊಂಡು ಬರುವುದು ನಮ್ಮ ಕಡೆಯ ಎಲ್ಲಾ ಊರುಗಳಲ್ಲಿಯೂ ನಡೆದು ಬಂದಿರುವ ವಾಡಿಕೆ. ಆ ವಾಡಿಕೆ ಇತರ ಊರುಗಳಂತೆ ನಮ್ಮೂರಲ್ಲೂ ರೂಡಿಯಲ್ಲಿದೆ. ಅಂದು ಹಾಗೆ ಉಪಹಾರಕ್ಕೆ ಹೋಗುವಾಗ ಅಕ್ಕಿ, ಕಾಯಿ ಮತ್ತು ಪೂಜಾ ಸಾಮಾಗ್ರಿಗಳ ಜೊತೆ ಬಾಳೆಯೆಲೆಯನ್ನು ತೆಗೆದುಕೊಂಡು ಹೋಗುತಿದ್ದರು. ಇಂದಿಗೂ ಊಪಹಾರದ ವಾಡಿಕೆ ಮುಂದುವರೆದಿದೆಯಾದರೂ ಬಾಳೆಯೆಲೆಯನ್ನು ತೆಗೆದುಕೊಂದು ಹೋಗುವ ಪದ್ದತಿ ಇಲ್ಲ. ಏಕೆಂದರೆ ಊಟದ ವ್ಯವಸ್ಥೆ ಅಲ್ಲಿಯೇ ಇರುವುದರಿಂದ. ನಮ್ಮ ತಂದೆಯವರು ಉಪಹಾರಕ್ಕೆ ಹೊರಟು ನಿಂತ ಸಮಯದಲ್ಲಿ ನನಗೇನಾದರೂ ಶಾಲೆಗೆ ರಜಾ ಇತ್ತು ಎಂದಾದರೆ ನಾನು ನಮ್ಮ ತಂದೆಯವರು ಬೇಡ ಎಂದರೂ ಕೇಳದೇ ಹಟ ಮಾಡಿ ಹೊರಟು ಬಿಡುತಿದ್ದೆ.

ಅಂದು ಅಲ್ಲಿ ಉಪಹಾರಕ್ಕೆ ತಂದ ಅಕ್ಕಿಯಲ್ಲಿ ದೇವರಿಗೆ ಅರ್ಪಿಸಿ ಉಳಿದ ಮಿಕ್ಕ ಅಕ್ಕಿಯನ್ನು ಪೂಜೆ ಮುಗಿದೊಡನೆಯೇ ಅಲ್ಲಿಯೇ ಬೇಯಿಸಿ ಊಟ ಮಾಡಿಕೊಂಡು ಬರುತಿದ್ದರು. ಆಗ ಅಲ್ಲಿ ಈಗಿನಂತೆ ಅಡುಗೆ ಕೋಣೆಯಿರಲಿಲ್ಲ, ಕುಳಿತು ಉಣ್ಣಲು ಪ್ರತ್ಯೇಕ ಕೋಣೆ ಇರಲಿಲ್ಲ, ಬೇಯಿಸಲು ಪಾತ್ರೆ ಪಗಡೆಗಳಿರಲಿಲ್ಲ. ಆ ಕಾಲದಲ್ಲಿ ನಮ್ಮ ಊರಿನವರು ಸೇರಿ ತಯಾರಿಸುತಿದ್ದ ಆ ಅಡುಗೆಯನ್ನು ನೆನೆಸಿಕೊಂಡರೆ ಇಂದಿಗೂ ಒಮ್ಮೆ ಬಾಯಲ್ಲಿ ನೀರು ಬರುತ್ತದೆ.

ಪೂಜೆ ಮುಗಿದೊಡನೆ ಒಬ್ಬರು ಪೇಟೆಗೆ ಹೋಗಿ ಮೆಣಸು, ಹುಣಸೆಹಣ್ಣು, ಬೆಳ್ಳುಳ್ಳಿ, ಉಪ್ಪು ತರಲು ಹೋಗಲು ಹೋಗುತಿದ್ದರು. ಇನ್ನೊಬ್ಬರು ದೇವಸ್ಥಾನದ ಪಕ್ಕದಲ್ಲಿ ಇರುವ ಐಗಳರ ಮನೆಗೆ ಹೋಗಿ ಅಡುಗೆ ಮಾಡಲು ಮೂರ್ನಾಲ್ಕು ಪಾತ್ರೆಗಳನ್ನು, ಕಾಯಿ ತುರಿಯಲು ಈಳಿಗೆ ಮಣೆಯನ್ನು ತೆಗೆದುಕೊಂಡು ಬರುತಿದ್ದರು. ಪಾತ್ರೆಗಳು ಬಂದೊಡನೆ ಒಬ್ಬರು ಪಾತ್ರೆಯಲ್ಲಿ ನೀರು ಕಾಯಿಸಿ, ಅದಕ್ಕೆ ಅಕ್ಕಿ ಹಾಕಿ ಬೇಯಿಸಲು ಸುರು ಹಚ್ಚಿಕೊಂಡರು, ಇನ್ನೊಂದಿಬ್ಬರು ಈಳಿಗೆ ಮಣೆ ಹಿಡಿದು ದೇವರಿಗೆ ಒಡೆಸಿದ ಕಾಯಿಗಳನ್ನು ತುರಿಯಲು ಪ್ರಾರಂಭಿಸುತಿದ್ದರು. ಕಾಯಿ ತುರಿಯುವುದು ಮುಗಿಯುವಷ್ಟರಲ್ಲಿ ಪೇಟೆಗೆ ಹೋದವರು ಮೆಣಸು, ಹುಣಸೆಹಣ್ಣು, ಬೆಳ್ಳುಳ್ಳಿ ಮತ್ತು ಉಪ್ಪು ಮುಂತಾದ ಸಾಮಾನುಗಳೊಂದಿಗೆ ಬಂದು ಸೇರುತಿದ್ದರು. ತುರಿದ ಕಾಯಿಗೆ ಪ್ರಮಾಣ ಬದ್ದವಾಗಿ ಮೆಣಸು, ಹುಣಸೆಹಣ್ಣು, ಬೆಳ್ಳುಳ್ಳಿ ಮತ್ತು ಉಪ್ಪು ಹಾಕಿದೊಡನೆಯೇ ಇನ್ನೊಬ್ಬರು ಅದನ್ನು ತೆಗೆದುಕೊಂಡು ಹೋಗಿ ಐಗಳರ ಮನೆಯಲ್ಲಿರುವ ರುಬ್ಬುವ ಕಲ್ಲಲ್ಲಿ ರುಬ್ಬಿ ಗುಂಡಗಿನ ಚಟ್ಣಿಯ ಮುದ್ದೆಯನ್ನು ಮಾಡಿ ತರುತಿದ್ದರು. ಆ ಚಟ್ಣಿ ಮುದ್ದೆ ಬರುವಷ್ಟರಲ್ಲಿ ಇಲ್ಲಿ ಬಿಸಿ ಬಿಸಿ ಅನ್ನವು ರೆಡಿಯಾಗಿರುತಿತ್ತು. ಚಟ್ಣಿ ಅನ್ನ ರೆಡಿಯಾದೊಡನೆ ಎಲ್ಲರು ಅವರವರ ಮನೆಯಿಂದ ತಂದ ಬಾಳೆ ಎಲೆ ಹರಡಿ ಕೂಡುತಿದ್ದರು.

ಆ ಬಿಸಿ ಬಿಸಿ ಅನ್ನಕ್ಕೆ ಆ ಚಟ್ನಿಯೇ ಪಲ್ಯೆ ಹಾಗೂ ಸಾರು. ಆ ಚಟ್ನಿಯ ಹುಳಿ ಖಾರ ಮಿಶ್ರಿತ ರುಚಿ ಹಾಗೂ ಸ್ವಾಧಕ್ಕೆ ಅನ್ನ ಹೊಟ್ಟೆಗೆ ಸೇರಿದ್ದೇ ನೆನಪಾಗುತ್ತಿರಲಿಲ್ಲ. ಆ ಊಟ, ಆ ಚಟ್ಣಿ, ಆ ರುಚಿ ಮತ್ತೆಲ್ಲೂ ಅನುಭವಿಸಲು ಸಾಧ್ಯವಿಲ್ಲ. ಆ ಚಟ್ಣಿಯ ನೆನಪಾದಾಗಲೆಲ್ಲಾ ಆ ರೀತಿಯ ಚಟ್ಣಿ ಮಾಡಲು ಹೋಗಿ ನಾನೇ ಅದೆಷ್ಟೋ ಬಾರಿ ಸೋತಿದ್ದೇನೆ ಹೊರತು ಆ ರುಚಿಯನ್ನು ಅನುಭವಿಸಲಾಗಲಿಲ್ಲ.

ಆದರೆ ಈಗ ಅಲ್ಲಿ ಸಂಪೂರ್ಣ ಬದಲಾಗಿದೆ. ಈಗ ಉಪಹಾರಕ್ಕೆ ಹೋದವರು ಅಲ್ಲಿ ಸ್ವ ಅಡುಗೆ ಮಾಡುವ ಅವಶ್ಯಕತೆ ಇಲ್ಲ. ಅಲ್ಲಿ ಈಗ ದೇವಸ್ಥಾನದ ಆಡಳಿತ ಮಂಡಳಿಯವರೇ ಊಟದ ವ್ಯವಸ್ಥೆಯನ್ನು ಮಾಡುತಿದ್ದಾರೆ. ಅಂದು ಶಿಥಿಲಗೊಂಡಿದ್ದ ಅಡುಗೆ ಕೋಣೆ ಪುನರ್ ನಿರ್ಮಿತಗೊಂಡಿದೆ. ಮದುವೆ ಮತ್ತು ಇತರ ಕಾರ್ಯಕ್ರಮಗಳು ನಡೆಯಲು ಚಿಕ್ಕದಾದರೂ ಚೊಕ್ಕದಾದ ಸಬಾಂಗಣವಿದೆ. ಸುಸಜ್ಜಿತ ಊಟದ ಕೊಠಡಿಯಿದೆ. ಒಟ್ಟಿನಲ್ಲಿ ಹಳೆಯತನ ಮರೆಯಾಗಿ ಹೊಸತನದ ಸೊಗಡು ಮೂಡ ತೊಡಗಿದೆ. ಅದೇನೆ ಇರಲಿ. ನಾವು ಅದೆಷ್ಟೇ ಸ್ಥಿತಿವಂತರಾಗಿ, ಆಧುನಿಕರಣಗೊಂಡು, ಹೊಸ ಹೊಸ ವಸ್ತು ಸಲಕರಣೆಗಳನ್ನು ಬಳಸಿಕೊಂಡರೂ ಅಂದಿನ ಹಳೆಯ ಸೊಗಡನ್ನು ಮತ್ತೆ ಪುನರ್ ಸೃಷ್ಠಿಸುವುದು ಅಷ್ಟೊಂದು ಸಾದ್ಯವಾಗದ ಮಾತು. ಅಂದಿನ ಆ ಜನರ ಆ ರುಚಿ, ಆ ಸ್ವಾಧವನ್ನು ಅಂದು ಅನುಭವಿಸಿದ ನಾವೇ ಒಂದು ರೀತಿಯಲ್ಲಿ ಧನ್ಯರು ಅಂತಾ ಭಾವಿಸುತ್ತೇನೆ.

-ಮಂಜು ಹಿಚ್ಕಡ್

Sunday, January 17, 2016

ಹೊತ್ತು ನಡೆವವಗೆ ಗೊತ್ತು


ಹೊತ್ತು ನಡೆವವಗೆ ಗೊತ್ತು
ಹೊತ್ತ ವಸ್ತುವಿನ ಭಾರ!
ದುಃಖ ಹೊತ್ತವಗೆ ಗೊತ್ತು
ಕಣ್ಣ ಕಂಬನಿಯ ಭಾರ!

-ಮಂಜು ಹಿಚ್ಕಡ್

Saturday, January 9, 2016

ಅವನು ಅವಳು ಸೇರಿ ನಡೆದರು!

ಅವನು, ಅವಳು
ಸೇರಿ ನಡೆದರು
ಮರದ ಕೆಳಗೆ
ಕೂಡಿ ಬರೆಯಲು
ಶಬ್ಧವ!

ಅವನ ಬಾಯಿಗೆ
ಇವಳ ಕಿವಿಯು
ಅವಳ ಮಾತಿಗೆ
ಇವನು ಕವಿಯು
ಕೂಡಿ ರಚಿಸಲು
ಕಾವ್ಯವ!

ಮೌನ ಮರೆಯಲು
ಮಾತು ಹುಡುಕುತಾ
ಮಾತು ತೆರಯಲು
ವೇಳೆ ಕಾಯುತಾ
ಮರೆತು ಬಿಟ್ಟರು
ಕಾಲವ!

ಒಮ್ಮೆ ಇಣುಕುತಾ
ಒಮ್ಮೆ ಅಣುಕುತಾ
ಸಮಯ ಕಳೆದರು
ದಾರಿಹೋಕರ ನಯನಕೆ
ಬೆದರುತಾ!

ದಾರಿ ಹೋಕರ
ಸದ್ದು ಗದ್ದಲಕೆ
ಹೊರಟುನಡೆದರು ಹೊರಗೆ
ತೋರಲಾರದೇ
ಪ್ರೇಮವ!

--ಮಂಜು ಹಿಚ್ಕಡ್