Saturday, August 13, 2022

ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ!

                                                          (ಚಿತ್ರ ಕೃಪೆ: ಗೂಗಲ್ )


ಬಹುಷಃ ನಮ್ಮ ಬದುಕಿನಲ್ಲಿ ಈ ಕರೋನಾ ಕಲಿಸಿದ ಬಹುತೇಕ ಪಾಠಗಳನ್ನು ಮತ್ತೆ ನಾವು ಬೇರೆಯವರಿಂದ ಕಲಿಯಲು ಅಸಾಧ್ಯ. ಪ್ರತೀಯೊಂದು ಬದುಕಿಗೂ ಮೌಲ್ಯಗಳಿವೆ ಅನ್ನುವುದನ್ನ ತಿಳಿಸಿಕೊಟ್ಟ ಕಾಲ ಅದು. ಸಂಯಮ, ಸಂತಾಪ, ಸಂತೋಷ, ಸಂಬಂಧ ಎಲ್ಲವೂ ಹೇಗಿರಬೇಕು, ಎಷ್ಟಿರಬೇಕು ಎನ್ನುವುದನ್ನ ಎಳೆ, ಎಳೆಯಾಗಿ ತಿಳಿಸಿಕೋಟ್ಟಿದ್ದು ಕರೋನಾ ಅಂದರೆ ತಪ್ಪಾಗಲಾರದು, ಮೊದ ಮೊದಲು ಶುರುವಾದಾಗ, ನಮ್ಮ ದೇಶಕ್ಕೆ ಬರಲಾರದು ಅನ್ನುವ ಆತ್ಮವಿಶ್ವಾಸ, ನಮ್ಮ ದೇಶಕ್ಕೆ ಬಂದಾಗ ನಮ್ಮೂರಿಗೆ ಬರಲಾರದು ಎನ್ನುವ ವಿಶ್ವಾಸ, ನಮ್ಮೂರಿಗೆ ಬಂದರೂ ಅದು ಆ ಬೀದಿಗೆ, ನಮ್ಮ ಬೀದಿಗೆ ಬರಲಾರದು ಅನ್ನುವ ಭರವಸೆ. ಎಲ್ಲಿಯೋ ಹುಟ್ಟಿದ ರೋಗ ಯಾವಾಗ ನಮ್ಮ ಪಕ್ಕದ ಬೀದಿಗೆ ಬಂದು ತಲುಪಿತ್ತೋ, ಆಗ ಶುರುವಾಗಿದ್ದು ಕಳವಳ.


ಲಾಕ್ಡೌನ ಶುರುವಾದಾಗಿನ ಕಳವಳವಳವಂತೂ ಹೇಳತೀರದ್ದು, ಅದರಲ್ಲೂ ನಗರ ಪ್ರದೇಶಗಳಲ್ಲಿದ್ದ ನಮ್ಮಂತವರ ಪಾಡು ಯಾರಿಗೂ ಬೇಡ. ಮನೆಯಲ್ಲಿ ನಾಲ್ಕು ಗೋಡೆಗಳ ನಡುವಲ್ಲಿ ಬಂದಿಗಳಾಗಿದ್ದ ಸ್ಥಿತಿ ಇನ್ನೂ ಭೀಕರ. ಹೊರಗೆ ಹೋಗುವ ಹಾಗಿಲ್ಲ. ಅವಶ್ಯಕ ವಸ್ತುಗಳ ಖರೀದಿಗೆ ಹೊರಗಡೆ ಕಾಲಿಟ್ಟರೆ ಭಯೋತ್ಪಾಕರ ರೀತಿಯಲ್ಲಿ ನೋಡುವ ಅಕ್ಕ ಪಕ್ಕದ ಮನೆಯವರ ಕಣ್ಣುಗಳು, ಅವುಗಳನ್ನು ಎದುರಿಸಿ ಹೊರಟರೆ ಹೊರಗೆ ಆಗಾಗ ಸುತ್ತುವ ಪೋಲೀಸ್ ಗಸ್ತು ವಾಹನಗಳು. ಹಾಗೂ ಹೀಗೂ ಅಂಗಡಿ ತಲುಪಿದರೆ 25 - 30 ಜನರ ಸರತಿ ಸಾಲು. ಅಂತೂ ಇಂತೂ ಖರೀದಿಸಿ ಮನೆಸೇರಿದರೆ ಸೀದಾ ಮನೆಯೋಳಗೆ ಹೋಗೋ ಹಾಗಿಲ್ಲ. ಸಾಮನುಗಳ ಜೊತೆ ಜೋತೆ ನಾವು ಕೂಡ ಸೆನೆಟೈಸ್ ಮಾಡಿ ಒಳಹೋಗಬೇಕು. ಮತ್ತೆ ಒಮ್ಮೆ ಒಳಸೇರಿದರೆ ಮತ್ಯಾವಾಗ ಹೊರಹೋಗುತ್ತೇವೆ ಅನ್ನುವುದು , ದಾರವಾಹಿಯ ಮುಂದಿನ ಭಾಗದಂತೆ ಸಶೇಷ. 


ಲಾಕ್ಡೌನ್ ಆಗ ಮುಗಿಯತ್ತೆ, ಈಗ ಮುಗಿಯತ್ತೆ ಅನ್ನುತ್ತಾ ಸುಮಾರು ಎರಡು ತಿಂಗಳುಗಳ ಹತ್ತೀರ ಕಳೆದಿದ್ದಾಯ್ತು. ಹೀಗೆ ದಿನಾದುಡುತ್ತಾ ಮನೆಯಲ್ಲೇ ಕುಳಿತ ನಮಗೆ ಯಾವಾಗ ಸರ್ಕಾರ, ಪ್ರಯಾಣ ಮಾಡುವವರು ಪ್ರಯಾಣ ಮಾಡಬಹುದು, ಆದರೆ ಅವರು ಹೋದ ಸ್ಥಳದಲ್ಲಿ ಕ್ವಾರೈಂಟೈನ್ ಆಗಬೇಕು ಅಂದಾಗ ಸ್ವಲ್ಪ ಸಮಾಧಾನವಾಯಿತು. ಊರಿಗೆ ಒಂದು ತಿಂಗಳ ಮಟ್ಟಿಗೆ ಹೋಗಿ ಬರುವ ಮನಸ್ಸಾಯಿತು. ಹಾಗೆ ಮನಸ್ಸಾದರು, ಒಮ್ಮಿಗೆ ಹೋಗುವ ಧೈರ್ಯ ಸಾಕಾಗಲಿಲ್ಲ. ಮನೆಯಲ್ಲಿ ವಯಸ್ಸಾದ ತಂದೆ ತಾಯಿಯರು, ಅಕ್ಕ ಪಕ್ಕದ ಮನೆಗಳು (ದೂರವಿದ್ದರೂ), ಅವರು ಹೇಗೆ ಸ್ವಿಕರಿಸಬಹುದು ಅನ್ನುವ ಸಂದೇಹ ಇನ್ನೊಂದೆಡೆ. ಒಮ್ಮೆ ವಿಚಾರಿಸೋಣ ಎಂದು ತಂದೆಯವರಿಗೆ ಪೋನಾಯಿಸಿದೆ, ನಮ್ಮ ಸ್ಥಿತಿಯನ್ನು ವಿವರಿಸಿ , ಮನೆಗೆ ಒಂದು ತಿಂಗಳ ಮಟ್ಟಿಗೆ ಬರಬಹುದೇ ಎಂದು ಕೇಳಿದೆ. ತಕ್ಷಣ ಅವರು " ಇದು ನಿಮ್ಮ ಮನೆ, ನಿಮಗೆ ಬೇಡ ಅಂದವರಾರು , ಬನ್ನಿ ನಮಗೆ ತೊಂದರೆ ಇಲ್ಲ, ಬಂದು ಸ್ವಲ್ಪ ದಿನ ಮನೆಯಲ್ಲೇ ಇದ್ದರಾಯಿತು " ಎಂದಾಗ ಸಮಾಧಾನವಾಯಿತು. ಆಗ ತಾನೇ ಬೆಂಗಳೂರಿಗೆ ಪ್ರವೇಶ ಪಡೆದಿದ್ದು ಇನ್ನೂ ಆರಂಭಿಕ ಹಂತದಲ್ಲಿ ಕರೋನಾ ಇದ್ದುದರಿಂದ, ನಮಗೆ ಅದು ತಗುಲುವ ಸಾದ್ಯತೆ ಇಲ್ಲ ಅನ್ನುವ ಆತ್ಮವಿಶ್ವಾಸ ಒಂದಿತ್ತು. ಅಂತು ಇಂತು ಒಂದು ದಿನ ವಿಚಾರಮಾಡಿ ಒಂದು ತಿಂಗಳ ಮಟ್ಟಿಗೆ ಊರೀಗೆ ಹೋಗಿ ಬರುವ ತೀರ್ಮಾನ ಮಾಡಿ ಊರಿಗೆ ಹೊರಟಾಯ್ತು.


ದಿನಗಳು ಉರುಳುತ್ತಾ, ಉರುಳುತ್ತಾ ಮೊದ ಮೊದಲು ತಿಂಗಳು ಅಂತಾ ಬಂದವರಿಗೆ, 2 - 3 ತಿಂಗಳು ಉರುಳಿದ್ದೇ ಗೊತ್ತಾಗಲಿಲ್ಲ. ಕಳೆದ 19 - 20 ವರ್ಷಗಳಿಂದ ಹೊರಗಿದ್ದ ಮಗ, ಆಗೊಮ್ಮೆ, ಈಗೊಮ್ಮೆ ರಜೆಗೆ ಬರುತ್ತಿದ್ದವನು, ಈಗ ಸಂಸಾರ ಸಮೇತನಾಗಿ ಬಂದು ಇಲ್ಲೇ ಇದ್ದುದರಿಂದ, ನಮ್ಮ ತಂದೆಯವರಿಗೆ ಎಲ್ಲಿಲ್ಲದ ಸಂತೋಷ.  ಹೀಗೆ  ಸಂತೋಷದಿಂದಲೇ ಇದ್ದ ಅವರು, ಒಮ್ಮೇಲೆ ಇದ್ದಕ್ಕಿದ್ದ ಹಾಗೆ  ಊಟ ತಿಂಡಿ ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡಲು ಪ್ರಾರಂಬಿಸಿದರು. ಅವರನ್ನು ವಿಚಾರಿಸಿದಾಗ ತಿಳಿಯಿತು, ಈ ರೀತಿ ಆಗಾಗ ಅಗುತಿದ್ದು ಸ್ವಲ್ಪ ದಿನದ ಮಟ್ಟಿಗೆ ಇದ್ದು ಅಮೇಲೆ ಕಡಿಮೆ ಆಗುತ್ತದೆ ಅನ್ನುವುದು. ನಾವು ಮೊದಲು ಅದು ಬಹುಷಃ ವಯಸ್ಸಿನ ಪರಿಣಾಮ ಇರಬೇಕು ಅಂದುಕೊಂಡೆವು. ಆದರೆ ಈ ಬಾರಿ ಅದು ತುಂಬಾದಿನ ಇದ್ದುದರಿಂದ, ನಿರ್ಲಕ್ಷಿಸಿವುದು ಬೇಡ ಎಂದುಕೊಂಡು ಆಸ್ಪತ್ರೆಗೆ ತೋರಿಸಿದೆವು. ಆಗ ತಿಳಿಯಿತು ಅವರಿಗೆ ಪಿತ್ತ ಕೋಶದ ಕ್ಯಾನ್ಸರ್ ಇದೆ ಎನ್ನುವುದು. ಅದೂ ಕೂಡ ಅಂತಿಮ ಹಂತದಲ್ಲಿದೆ ಎನ್ನುವುದು. ವೈದ್ಯರು ನಮ್ಮನ್ನು ಕರೆದು, "ನೋಡಿ ಅವರಿಗೆ ಈಗಾಗಲೇ 75 ವರ್ಷ ದಾಟಿದ್ದೂ, ಕಾಯಿಲೆಯೂ ಅಂತಿಮ ಹಂತದಲ್ಲಿದ್ದರಿಂದ, ಶಸ್ತ್ರ ಚಿಕಿತ್ಸೆ ಮಾಡುವುದು ತುಂಬಾ ಕಷ್ಟ, ಮಾಡಿದರೂ ಪ್ರಯೋಜನವಿಲ್ಲ, ಅವರು ತುಂಬಾದಿನ ಬದುಕುವ ಸಾದ್ಯತೆ ಇಲ್ಲ, ಇದ್ದಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ" ಎಂದು ಒಂದಿಷ್ಟು ಔಷದಿಕೊಟ್ಟು ಕಳಿಸಿದರು. 


ವೈದ್ಯರು ಕೊಟ್ಟ ಔಷದಿಯ ಪ್ರಭಾವದಿಂದಲೋ ಏನೋ  ಆರೋಗ್ಯ ಸ್ವಲ್ಪ ಸಮಾಧಾನಕರವಾಗಿದೆ ಅನ್ನುವಂತಾಗಿತ್ತು. ಊಟ ಸ್ವಲ್ಪ ಕಡಿಮೆ ಮಾಡಿದರೂ ಎರಡು ಹೊತ್ತಿಗೆ ಸರಿಯಾಗಿ ಮಾಡಲಾರಂಬಿಸಿದರು, ಹೀಗೆ ಒಂದೈದು ತಿಂಗಳುಗಳು ಕಳೆದಿದ್ದಾಯ್ತು. ನಾವು ಅಲ್ಲಿ ಇಲ್ಲಿ ರಿಪೋರ್ಟ್ ತೋರಿಸಿಯೂ ಆಯ್ತು, ಎಲ್ಲಾ ಕಡೆನು ಒಂದೇ ಉತ್ತರ, ವಯಸ್ಸಾಗಿದೆ, ರೋಗ ಕೊನೆಯ ಹಂತದಲ್ಲಿದೆ, ರಿಸ್ಕ ತಗೋಳ್ಳೋದು ಬೇಡ. ಹೀಗೆ ಅನ್ನುತ್ತಾ ಇನ್ನೊಂದು ಮೂರು ತಿಂಗಳುಗಳು ಕಳೆದು ಹೋದವು. ಆಮೇಲೆ ಶುರುವಾಯ್ತು , ಊಟ ಒಮ್ಮೆ ಮಾಡಿದರೆ ಇನ್ನೊಮ್ಮೆ ಇಲ್ಲ, ತಿಂಡಿ ತಿಂದರೆ ತಿಂದರು ಇಲ್ಲಾ ಅಂದರೆ ಇಲ್ಲ, ಮೈ ಎಲ್ಲಾ ತುರಿಕೆ , ಕೈ ಕಾಲು ಬಾತು ಕೊಳ್ಳುವುದು, ಎದೆ ಉರಿ, ಸುಸ್ತಾಗುವುದು, ತಲೆಸುತ್ತುವುದು ಹೀಗೆ ಒಂದಾದ ಮೇಲೆ ಒಂದು ಆರೋಗ್ಯ ಸಮಸ್ಯೆಗಳು ಪ್ರಾರಂಭವಾದವು. ಆಗಾಗ ಬೇಜಾರು ಬಂದಾಗ ಅಲ್ಲಿ ಇಲ್ಲಿ ತಿರುಗಾಡಲು ಹೋರಡುತಿದ್ದವರು ಮನೆಯಲ್ಲೇ ಇರಲಾರಂಭಿಸಿದರು. ಕ್ರಮೇಣ ಆರೋಗ್ಯ ಇನ್ನಷ್ಟು ಕ್ಷೀಣಿಸುತ್ತಾ ಹೋಗಿ, ಕೊನೆಗೆ ಅಗಷ್ಟ 13, 2021 ರಂದು ತಮ್ಮ ಕೊನೆಯ ಉಸಿರೆಳೆದರು. "ನೀನು ಅದೇನಾಗಿದ್ದಿಯೋ, ಅದೇನಾಗುತ್ತಿಯೋ ಗೊತ್ತಿಲ್ಲ, ಆದರೆ ಮೊದಲು ನೀನು ನೀನಾಗಿರು " ಎಂದು ನಾನು ತಪ್ಪಿದಾಗಲೆಲ್ಲ ಆಗಾಗ ಹೇಳಿ ಎಚ್ಚರಿಸುತ್ತಿದ್ದ ಅಪ್ಪ, ತಮ್ಮ ಬದುಕಿನ ಜಟಕಾ ಬಂಡಿಯನ್ನು ಎಳೆದು, ಎಳೆದು ಸುಸ್ತಾಗಿ, ವಿಧಾತನ ಕರೆಗೆ ಓ ಗೊಟ್ಟು ಹೊರಟು ಹೋದರು.


ಒಂದು ತಿಂಗಳಿಗೆ ಎಂದು ಬಂದವರು, ತಂದೆಯವರ ಆರೋಗ್ಯ ಕೈ ಕೊಟ್ಟಾಗ ಅವರನ್ನು ನೋಡಿಕೊಳ್ಳುತ್ತಾ ಇದ್ದವರಿಗೆ ಅವರು ಹೋದ ನಂತರ ಕೆಲಸದ ಜೊತೆ ಜೊತೆಗೆ, ಮನೆ, ತೋಟ, ಗದ್ದೆ ನೋಡಿಕೊಳ್ಳುವ ಹೊಸ ಜವಬ್ಧಾರಿ ನನ್ನ ಹೆಗಲಿಗೆ ಬಿತ್ತು. ಅವೆಲ್ಲವನ್ನು ಒಂದು ಹಂತಕ್ಕೆ ತಂದು, ಮತ್ತೆ ಬೆಂಗಳೂರು ತಲುಪುವವರೆಗೆ ಎರಡು ವರ್ಷಗಳು ಕಳೆದು ಹೋದವು. ಆ ಎರಡು ವರ್ಷಗಳಲ್ಲಿ, ನಾನು ಕಲಿತಿದ್ದು ಮತ್ತೆ ಯಾವ ವಿಶ್ವ ವಿದ್ಯಾಲಯವು ಕಲಿಸಲು ಸಾದ್ಯವಿಲ್ಲ. ನಗರದ ನಾಗಾಲೋಟದ ಬದುಕಿಗೆ ಒಗ್ಗಿ, ನಗರ ಬೆಳೆಯುತ್ತಿದೆ, ನಗರದ ಜನರು ಬದಲಾಗುತಿದ್ದಾರೆ ಅಂದುಕೊಂಡಿದ್ದ ನಮಗೆ, ಊರು ಕೂಡ ಬದಲಾಗುತ್ತಿದೆ ಅನ್ನಿಸಿದ್ದು ಆಗಲೇ. ಮರೆತು ಹೋಗಿದ್ದ ಬೇಸಾಯ ಪದ್ದತಿ ಮತ್ತೆ ಕಲಿತದ್ದು ಆಗಲೇ, ಯಾರೊಡನೆ ಎಲ್ಲಿ, ಯಾವಾಗ ಹೇಗಿರಬೇಕು ಎನ್ನುವುದನ್ನ ಕಲಿತಿದ್ದು ಆಗಲೇ, ಬೇಡದ್ದನ್ನು ಮಾಡಲು ಹೋಗಿ ಕೈ ಸುಟ್ಟು ಕೊಂಡಾಗ ತಪ್ಪು ಮಾಡಿದೆನಲ್ಲ ಅನ್ನುವ ದುಖ ಒಂದೆಡೆಯಾದರು, ಕಲಿತದ್ದು ಮಾತ್ರ ಅಪರೀಮಿತ. 


ಬದುಕಿದ್ದಾಗ ನಂದು ನಂದು ಎಂದುಕೊಂಡು ಆಸ್ತಿ, ಅಂತಸ್ತುಗಳಲ್ಲಿ ಕಳೆದು ಹೋದವರು, ಕರೋನಾ ಕಾಲದಲ್ಲಿ ಸತ್ತಾಗ ಮುಖ ನೋಡಲು ಕೊಡದೇ ಯಾರಿಂದಲೋ ಅಂತ್ಯ ಸಂಸ್ಕಾರ ಮಾಡಿಸಿಕೊಂಡವರನ್ನು ನೋಡಿದಾಗ, ಬದುಕು ಇಷ್ಟೇ ಅನ್ನಿಸಿದಂತು ನಿಜ. ಬದುಕಲ್ಲಿ ಅದೆಷ್ಟೇ, ಹೋರಾಡಿ ಕೂಡಿಟ್ಟರೂ ಕೊನೆಗೆ ವಿಧಿಯೆಂಬ ಸಾಹೇಬನಿಗೆ ಕೊರಳನ್ನ ಕೊಡಲೇ ಬೇಕು. ಡಿವಿಜಿಯವರ ಮಂಕುತಿಮ್ಮನ ಕೆಳಗಿನ ಪದ್ಯದಂತೆ ನಮ್ಮ ಬದುಕು, ಇನ್ನಾದರು ಅರಿತು ಬಾಳೋಣ,


ಬದುಕು ಜಟಕಾಬಂಡಿ,

ವಿಧಿ ಅದರ ಸಾಹೇಬ,

ಕುದುರೆ ನೀನ್,

ಅವನು ಪೇಳ್ದಂತೆ ಪಯಣಿಗರು.

ಮದುವೆಗೋ ಮಸಣಕೋ ಹೋಗೆಂದಕಡೆಗೋಡು

ಪದ ಕುಸಿಯೆ ನೆಲವಿಹುದು ಮಂಕುತಿಮ್ಮ!!

(ಡಿವಿಜಿ)


                                                                                                              -----ಮಂಜು ಹಿಚ್ಕಡ್