Monday, December 23, 2013

ಅಕ್ಷರಗಳು!

ಮನಸಿನ ಭಾವಗಳು
ಮನದ ತಿರುಳುಗಳು
ಹೇಳಲಾಗದೇ, ಹೇಳಲಿರಲಾಗದೇ
ಸೋತು ತೊಳಲಾಡಿ,
ಹೀಗೆ ಸುಮ್ಮನೆ ಗೀಚಿದ
ಅಕ್ಷರದ ರೂಪಗಳಿವು.

ಒಮ್ಮೆ ಸುಮ್ಮನೆ
ಒಮ್ಮೆ ಭಿಮ್ಮನೆ
ಆಗೊಮ್ಮೆ, ಈಗೊಮ್ಮೆ
ಅಲ್ಲಿ, ಇಲ್ಲಿ, ಎಲ್ಲಂದರಲ್ಲಿ
ಹೀಗೆ ಸುಮ್ಮನೆ
ಗೀಚಿದ ಅಕ್ಷರಗಳಿವು.

ಬಿಳಿಯ ಹಾಳೆಯ ಮೇಲೆ
ಒಮ್ಮೊಮ್ಮೆ ಈ
ಅಕ್ಷರಗಳದೇ ಕಾರುಬಾರು
ಮತ್ತೊಮ್ಮೆ ಯೋಚಿಸಿದರೂ
ಬರಲಾರೆನೆಂದು ಅದರ ತಕರಾರು.

ಒಮ್ಮೆ ಹೊರಬರಲು
ಎಲ್ಲಿಲ್ಲದ ಆವೇಶ
ಮತ್ತೊಮ್ಮೆ ಬರಲೋ, ಬೇಡವೋ
ಎನ್ನುವ ಮೀನಾ ಮೇಷ.
ಗೀಚಿದ್ದು ಅಕ್ಷರವಾದಾಗ
ಮನಕೇಕೋ ಹರುಷವೋ, ಹರುಷ.

ಒಮ್ಮೆ ಕಥೆಯಾಗಿ
ಒಮ್ಮೆ ಕವಿತೆಯಾಗಿ
ಹೊರ ಬರುವವು
ಒಂದೊಂದು ಅಕ್ಷರಗಳು
ರೂಪಾಂತರವಾಗಿ.
ವ್ಯಕ್ತಿಯ, ವ್ಯಕ್ತಿತ್ವದ
ಬಿಂಬವಾಗಿ.

--ಮಂಜು ಹಿಚ್ಕಡ್ 

Friday, December 20, 2013

ನಿನ್ನ ಪ್ರೀತಿ.

ಹೊತ್ತಿರದ ಹೊತ್ತಿನಲಿ
ಗೊತ್ತಿರದ ವೇಳೆಯಲಿ
ಸುಮ್ಮನೆ ಒಳಹೊಕ್ಕು
ಮನವ ತಣಿಸುವುದು
ನಿನ್ನ ಪ್ರೀತಿ.

ದರವಿರದೇ ಸ್ವರವಿರುವ
ಉಸಿರಲ್ಲಿ ಹೆಸರ ನೆನಪಿಡುವ
ನಡು ಹಗಲ, ನಡು ಬಿಸಿಲಲ್ಲೂ
ಕನಸ ತೋರಿಸುವುದು
ನಿನ್ನ ಪ್ರೀತಿ.

ಒಲವಲ್ಲಿ ನಲಿವಿಟ್ಟು
ನಲಿವಲ್ಲಿ ಕನಸಿಟ್ಟು
ಕನಸಲ್ಲಿ ಬದುಕಿಟ್ಟು
ಮನವ ತಣಿಸುವುದು
ನಿನ್ನ ಪ್ರೀತಿ!

ಕಂಡ ಕಂಡಲ್ಲೆಲ್ಲಾ
ನಿನ್ನಯ ರೂಪ
ಹೋದ ಹೋದಲ್ಲೆಲ್ಲಾ
ನಿನ್ನಯ ನೆನಪು
ನೀ ಜೊತೆಯಿರದರೇನಂತೆ
ತಾವು ಜೊತೆಯಿರುವು
ನಾನಿರುವಲ್ಲೆಲ್ಲಾ.

--ಮಂಜು ಹಿಚ್ಕಡ್

Monday, December 16, 2013

ನಾ ಬರಲಾರೆ ಈಗ!

ನಿಮ್ಮೂರವರೆಗೆ ನಾನೀಗ
ಬರಲಾರೆ ಗೆಳೆಯ
ಬರಲು ನೀಡು ನನಗೆ
ಒಂದಿಷ್ಟು ಸಮಯ.

ನಿಮ್ಮೂರು ಬರೀಯ ಊರಲ್ಲ
ಊರ ತುಂಬ ಇಹವು
ವರದಿಗಾರರ ಸೂರು.

ಮೊದಲನೆಯ ಮನೆಯ
ಸುಬ್ಬಮ್ಮನಿಗೆ ಒಮ್ಮೆ
ತಿಳಿದರೆ ಸಾಕಂತೆ
ವಿಷಯ ಪರವೂರಿಗೂ
ಹೋಗಿ ತಲುಪುವುದಂತೆ.

ಕೆಳ ಮನೆಯ ಶಾರದಮ್ಮ
ಇನ್ನೂ ಚುರುಕಂತೆ
ಅವಳಿಗೆ ಒಮ್ಮೆ ತಿಳಿದರೆ ಸಾಕಂತೆ
ಹೋಗಿ ತಿಳಿಸಿ ಬರುವಳು
ಪ್ರತೀ ಮನೆಗೂ
ಜೀವಂತ ಪತ್ರಿಕೆಯಂತೆ.

ಆ ಮೂಲೆಮನೆ ವೆಂಕಮ್ಮ
ಇನ್ನೂ ಭಿಷಣವಂತೆ
ಇಲಿ ಹೋದರೆ, ಹುಲಿ ಹೋಯಿತು
ಎಂದು ಹೇಳುವವಳಂತೆ
ನಡೆಯಲಾರದ್ದನ್ನೂ ಬಾಯಲ್ಲಿಯೇ
ನಡೆಸಿ ಬಿಡುವವಳಂತೆ
ಇಂದಿನ ಚುನಾವಣೆಯ ಸಮೀಕ್ಷೆಯಂತೆ.

ಇಂದು ನಾ ಬಂದರೆ
ಆ ವರದಿಗಾರರ ಬಾಯಲ್ಲಿ
ಈ ನಮ್ಮ ನಿರ್ಮಲ ಪ್ರೀತಿ
ಹಾದರದಂತೆ ಕಂಡರೂ ತಪ್ಪಿಲ್ಲ
ಅವರ ನಾಲಿಗೆಗೆ ಸಿಕ್ಕು, ನಮ್ಮ ಪ್ರೀತಿ
ಬೆತ್ತಲಾಗದೇ ಉಳಿಯಲ್ಲ.

ನಾ ಬರಲಿಲ್ಲ ಎಂದು
ನೀ ಚಿಂತಿಸದಿರು ಇಂದು
ನೀ ಹೋಗು ಈಗ
ನಾ ಬರುವೆ ಇಂದಲ್ಲ, ಮುಂದೆ
ನೀ ತಾಳಿಕಟ್ಟಿ
ನಾ, ನಿನ್ನವಳಾದ ದಿನದಂದು.

--ಮಂಜು ಹಿಚ್ಕಡ್

Thursday, December 12, 2013

ಹುಟ್ಟು-ಸಾವು

ಹುಟ್ಟು:
ನಾ ಬಯಸದೇ
ಈ ಭೂಮಿಗೆ ಬಂದು
ಬಯಸಿದವರ ಮೊಗದಲ್ಲಿ
ಸಂತೋಷ ತಂದು.

ನವ ವಸಂತಗಳವರೆಗೆ
ಗರ್ಭ ಹೊತ್ತವಳ
ಕಾಡಿಸಿ, ಸತಾಯಿಸಿ ಈ
ಲೋಕಕೆ ಬಂದು.
ಜಾತಿ ಗೊತ್ತಿಲ್ಲ
ಹಣದ ಹಂಗಿಲ್ಲ
ಹೆಣ್ಣೋ, ಗಂಡೋ
ನನಗೆ ತಿಳಿದಿಲ್ಲ
ಮುಂದಿಡುವ ಹೆಸರು
ನನಗೇ ಗೊತ್ತಿಲ್ಲ
ಕನಸುಗಳಿಲ್ಲ, ಕಲ್ಪನೆಗಳಿಲ್ಲ
ನಗುವೋ, ಅಳುವೋ
ನನಗೆ ಪ್ರಶ್ನೆಯೇ ಎಲ್ಲ.

ಸಾವು:
ಈಗ ತನು ಒಪ್ಪಿದರೂ
ಮನ ಒಪ್ಪದು.
ಒಂದೊಮ್ಮೆ ಬಯಸಿ ಕರೆದರೂ
ನಮ್ಮ ಬಳಿ ಬಾರದು

ಸಾವಿರ ಕಲ್ಪನೆಗಳುಂಟು
ಆದರೆ ಉತ್ತರವಿಲ್ಲ.
ಮನಸು ಬಯಸಿದ್ದಲ್ಲ ಕನಸುಗಳೇ
ಹೊರತು ಎಂದು ನನಸಾಗಲ್ಲ.

ಬದುಕಿನ ಪ್ರಜ್ನೆ ಬಂದು,
ಬಾಳು ಕಟ್ಟುವಾಗ
ಈ ಜೀವನದ ಕನಸೆಲ್ಲ
ಬರೀ ಹಣ ಹಣ ಹಣ
ಇಂದು ಸಾವು ಬಂದಾಗ
ನಾವೀಗ ಕರೆಯಲು
ಹೆಸರಿಲ್ಲದ ಬರೀಯ ಹೆಣ.

--ಮಂಜು ಹಿಚ್ಕಡ್

Monday, December 9, 2013

ಶೀತಕ್ಕೆರಡು ಸಲಹೆ!

ಅವನಿಗೆ ಶೀತ, ನೆಗಡಿಯಂತೆ
ಮೂಗು ಕೂಡ ಸೋರುತ್ತಿದೆಯಂತೆ
ಗಂಟಲ ನೋವು ಉಂಟಂತೆ
ಅದಕೆ ಆ ಈರ್ವರ ಸಲಹೆ ಹೀಗಂತೆ

ಆತ:
ನಿನ್ನೆ ಕುಡಿದಿರಬೇಕು ಆತ
ತಂಪು ಬಿಯರು
ಇಲ್ಲಾ ಜಾಸ್ತಿ ತಿಂದಿರಬೇಕು
ಎಣ್ಣೆ ಹಾಕಿದ ಸಾರು.

ಇಂದು ಹಾಕಿದರೆ ಸಾಕು
ಬಿಸಿನೀರ ಜೊತೆಗೆ
ಒಂದೆರಡು ಪೆಗ್ಗು ರಮ್ಮು
ಕಡಿಮೆಯಾಗಿಯೇ ಹೋಗುವವು,
ನಾಳೆ ಶೀತ ನೆಗಡಿ ಕೆಮ್ಮು.

ಈತ:
ಮಾತ್ರೆ ಸೈರಪ್ಪು ಏಕೆ
ಅವುಗಳೆಂದರೆ ಏಕೋ ವಾಕರಿಕೆ
ಹಾಕಿ ಕುಡಿದರೆ ಸಾಕು
ಜೇನುತುಪ್ಪಕ್ಕೆ ಒಂದೆರಡು
ಹನಿ ಲಿಂಬೆರಸ
ಇವುಗಳ ಮುಂದೆ
ಬಿಯರು, ಬ್ರಾಂದಿ,
ರಮ್ಮುಗಳೆಲ್ಲವೂ ಏಕೆ

--ಮಂಜು ಹಿಚ್ಕಡ್

Friday, December 6, 2013

ಅವಲಂಬನೆ!

ನನ್ನ ಮನೆಯಂಗಳದಿ
ನಾಲ್ಕಾರು ಹೂ ಕುಂಡಗಳು
ಬಿಸಿಲು ಕಂಡಿಲ್ಲ
ಮಳೆ ನೀರು ನೋಡಿಲ್ಲ
ಕಾತರಿಸಿ ಕುಳಿತಿವೆ
ನನ್ನಕೆಯೊಡ್ಡುವ
ಬೊಗಸೆ ನೀರಿಗಾಗಿ!

ವಿದ್ಯುತ್ ದೀಪದ ಅರಿವುಂಟು
ದಿನಕರನ ಅರಿವಿಲ್ಲ
ಮಣ್ಣು ಗೊಬ್ಬರದ ಚಿಂತೆ
ಎಂದೂ ಕಾಡಿಲ್ಲ
ಆ ರೀತಿ ಬೆಳಸಿಹಳು ನನ್ನಾಕೆ!

ಪಂಕದ ಗಾಳಿಗೆ ಮೈಯೊಡ್ಡಿ
ಕುಣಿಯುತಿಹ ಇವಕೆ
ಹೊರಗಾಳಿ, ಬಿರುಗಾಳಿಯ
ಅರಿವಿಲ್ಲ ಇವಕೆ!

ಹುಟ್ಟುತ್ತ ಸ್ವಾವಲಂಬಿಗಳಿವು
ಆದರೂ ಅವಲಂಬನೆಯ ಬದುಕು
ನನ್ನವಳ ಆಸರೆಯ
ನಂಬಿ ಬದುಕಬೇಕು
ಇವು ತಮ್ಮದಲ್ಲದ ತಪ್ಪಿಗೆ!

--ಮಂಜು ಹಿಚ್ಕಡ್

Tuesday, December 3, 2013

ಅಂದು ಸವಿದ ಆ ನಾಟಿ ಮಾವಿನ ಹಣ್ಣುಗಳು!

ಅಂದು ನಾವು ಚಿಕ್ಕವರಿದ್ದಾಗ ನಮ್ಮೂರಿನ ಮೂಡಣ ದಿಕ್ಕಿನಲ್ಲಿ ನೂರಾರು ಜಾತಿಯ ನಾಟಿ ಮಾವಿನ ಮರಗಳಿದ್ದವು. ಜನವರಿ, ಪೆಬ್ರುವರಿ ತಿಂಗಳು ಮುಗಿಯುವ ಹೊತ್ತಿಗೆ ಮರಗಳೆಲ್ಲ ಹೂ ಬಿಟ್ಟು, ಎಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಆ ಹೂವುಗಳೆಲ್ಲ ಕಾಯಾಗಿ, ಹಣ್ಣಾಗುತ್ತಿದ್ದವು. ಆಗ ನಮಗೆಲ್ಲ ಬೇಸಿಗೆಯ ರಜೆ, ಆ ರಜೆ ನಮಗೆ ಮಾವಿನ ಹಣ್ಣನ್ನು ತಿನ್ನಲೆಂಬಂತೇ ಇದ್ದಂತಿತ್ತು. ಒಂದೊಂದು ಮರಕ್ಕು ಒಂದೊಂದು ತರಹದ ಹಣ್ಣುಗಳು, ಕೆಲವು ಅರ್ಧ ಅಂಗುಲದಷ್ಟು ಚಿಕ್ಕದಾಗಿದ್ದರೆ, ಕೆಲವು ಐದಾರು ಅಂಗುಲದಷ್ಟು ದೊಡ್ಡ ಹಣ್ಣುಗಳು. ಐದಾರು ಮರದ ಹಣ್ಣುಗಳು ಹುಳಿ ಎನಿಸಿದರೂ, ಉಳಿದ ಮರಗಳ ಹಣ್ಣುಗಳು ಸಿಹಿಯಾಗಿದ್ದವೂ. ಕೆಲವು ಹಣ್ಣುಗಳು ತುಂಬಾ ರುಚಿಯಿದ್ದರೂ ಆ ಹಣ್ಣುಗಳ ಅರ್ಧದಷ್ಟು ಸೊನೆ ತುಂಬಿರುತಿತ್ತು. ಅದೆಂತಹ ಸೊನೆಯೆಂದರೆ ಸಂಪೂರ್ಣ ತುಟಿ, ಬಾಯಿಗಳೆಲ್ಲವೂ ಹುಣ್ಣಾಗುವಷ್ಟು ಸೊನೆ. ಕೆಲವು ಹಣ್ಣುಗಳ ಗೊರಟೆಗಳು ಒಳಗೆ ತುಂಬಾ ದೊಡ್ಡದಾಗಿದ್ದರೆ, ಕೆಲವಕ್ಕಂತೂ ತುಂಬಾ ಚಿಕ್ಕ ಗಾತ್ರದ ಗೊರಟೆಗಳು. ಕೆಲವು ಹಣ್ಣುಗಳಿಗಂತೂ ತುಂಬಾ ಬಿಗಿಯಾದ ನಾರುಗಳಿದ್ದರೂ ರುಚಿ ತುಂಬಾ ಸೊಗಸಾಗಿರುತಿತ್ತು. ರಸ ಎಳೆಯಲು ಸಾಧ್ಯವಾಗದೇ, ಸಿಪ್ಪೆ ಸುಲಿದು ತಿನ್ನುತಿದ್ದೆವು. ಕೆಲವು ಮರಕ್ಕೆ ಮಾರ್ಚ-ಎಪ್ರಿಲಗಳಲ್ಲಿ ಹಣ್ಣು ಬಿಡುತಿದ್ದರೆ, ಕೆಲವು ಮರಗಳಿಗೆ ಮಳೆಗಾಲ ಪ್ರಾರಂಬವಾಗುತಿದ್ದಂತೆ ಹಣ್ಣು ಬಿಡಲು ಆರಂಭವಾಗುತಿದ್ದವು. ಹೀಗೆ ಒಂದೊಂದು ತರನಾದ ಮಾವಿನ ಮರಗಳು ನಮ್ಮ ಊರಿನಲ್ಲಿದ್ದವು.

ಮಾರ್ಚ ತಿಂಗಳಲ್ಲಿ ನಮ್ಮ ಪರೀಕ್ಷೆಗಳು ಮುಗಿದೊಡನೆ, ನಮ್ಮ ಮಾವಿನ ಹಣ್ಣಿನ ಬೇಟೆ ಪ್ರಾರಂಭವಾಗುತ್ತಿತ್ತು. ಯಾವ ಯಾವ ಮರಕ್ಕೆ ಹೂಬಿಟ್ಟಿದೆ, ಯಾವ ಮರಕ್ಕೆ ಹಣ್ಣುಗಳಾಗಿವೆ ಎಂಬೆಲ್ಲ ವಿವರಗಳನ್ನು ಸಂಗ್ರಹಿಸಿ ಹೊರಡುತ್ತಿದ್ದೆವು. ಬೆಳಿಗ್ಗೆ ಮಾವಿನ ಹಣ್ಣಿನ ಮರ ಸುತ್ತಿ ಹಣ್ಣು ತಿಂದು ಮನೆಗೆ ಬರುವಾಗ ಮಧ್ಯಾಹ್ನವಾಗುತಿತ್ತು. ಹೊಟ್ಟೆ ಪೂರ್ತಿ ಮಾವಿನ ಹಣ್ಣು ತಿಂದದ್ದರಿಂದ ಊಟವು ಅಷ್ಟಕಷ್ಟೇ. ಆ ಸುಡು ಬೇಸಿಗೆಯಲ್ಲಿ ಊಟವು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಮಧ್ಯಾಹ್ನ ಒಂದಿಷ್ಟು ಗಂಜಿ, ಬೆರಕೆ ಹಾಕಿದ ಬಸಲೆ ಹುಳಗಾ ತಿಂದು, ಮಲಗಬೇಕೆನಿಸಿದರೆ ಒಂದಿಷ್ಟು ಹೊತ್ತು ಮಲಗಿ, ಇಲ್ಲಾ ಅಂದರೆ ಮತ್ತೆ ಮಾವಿನ ಹಣ್ಣು ಹುಡುಕಿ ಹೋಗುತಿದ್ದೆವು.
.                  
ಆಗ ನಮಗೆ ಜೋರಾಗಿ ಗಾಳಿ ಬಿಸಿದರೆ ಅಥವಾ ಮಂಗಗಳ ಹಾರಾಟ ಜಾಸ್ತಿಯಾಗಿದ್ದರೆ ತುಂಬಾ ಸಂತೋಷವಾಗುತಿತ್ತು. ಆ ಸಂದರ್ಭದಲ್ಲಿ ಮರದ ಕೊಂಬೆಗಳೆಲ್ಲ ಅಲುಗಾಡಿ ಹಣ್ಣಾದ ಮಾವೆಲ್ಲವು ನೆಲಕುದುರುತ್ತಿದ್ದುದರಿಂದ ನಮಗೆಲ್ಲ ಸಂತೋಷ. ಒಂದೊಂದು ಹಣ್ಣು ಬಿದ್ದಾಗಲೂ, ಓಡಿ, ಓಡಿ ಹೋಗಿ ಆರಿಸಿ ತಂದು ತಿನ್ನುವುದು, ಅದರಲ್ಲೂ ಚಿಕ್ಕ ಹಣ್ಣುಗಳಾಗಿದ್ದರೆ, ಮೇಲಿನ ಸೊನೆ ತೆಗೆದು ಇಡಿ ಹಣ್ಣನ್ನೆ ಬಾಯಿಯಲ್ಲಿ ಸ್ವಾಹ ಮಾಡಿ, ಗೊರಟೆಯನ್ನು ಹೊರಗೆಸೆಯುವುದು. ಅದು ಕೂಡ ಇನ್ನೊಂದು ಮಾವಿನ ಹಣ್ಣು ಬಿಳುವವರಿಗೆ, ಇಲ್ಲಾ ಸಿಹಿಯ ಅಂಸ ಸಂಪೂರ್ಣ ಮಾಯವಾಗಿ ಸಪ್ಪೆಯಾಗುವರೆಗೆ, ನಮ್ಮ ಬಾಯಲ್ಲಿಯೇ ಬದ್ರವಾಗಿರುತಿತ್ತು.    

ನಮ್ಮ ಮನೆಯ ಅಣತಿ ದೂರದಲ್ಲಿ ಒಂದು ಮಾವಿನ ಮರವಿತ್ತು. ಅದರ ಹಣ್ಣು ಸ್ವಲ್ಪ ಹುಳಿ ಇದ್ದುದರಿಂದ ಅದಕ್ಕೆ ಊರವರೆಲ್ಲ " ಹುಳಿಯಪ್ಪಿ " ಮಾವಿನ ಮರ ಎಂದೇ ಕರೆಯುತ್ತಿದ್ದರೂ. ಬೇಡುವವರಿಗೆ ಕುಸಲಕ್ಕಿಯಾದರೇನು, ಬೆಣತಕ್ಕಿಯಾದರೇನು ಅಂತಾರಲ್ಲಾ, ಹಾಗೆ ಬಾಲ್ಯದಲ್ಲಿ ನಮಗೆ ಮಾವಿನ ಹಣ್ಣು ಸಿಹಿಯಾದರೇನು, ಹುಳಿಯಾದರೇನು? ಎಳೆಯ ಹುಳಿಯ ಮಾವಿನ ಕಾಯಿಯನ್ನೇ ತಿನ್ನುವ ನಮಗೆ, ಈ ಹಣ್ಣು ಅದ್ಯಾವ ಲೆಕ್ಕ. ಆ ಹುಳಿಯಪ್ಪಿ ಮಾವಿನ ಮರದ ಸುತ್ತಲು ನಮ್ಮ ಮನೆಯನ್ನು ಸೇರಿ ನಾಲ್ಕು ಮನೆಗಳು, ನಾಲ್ಕು ಮನೆಗಳಲ್ಲಿ, ಮೂರು ಮನೆಯ ಮಕ್ಕಳು ಹೆಚ್ಚು ಕಡಿಮೆ ನನ್ನ ವಯಸ್ಸಿನವರೇ. ಎಲ್ಲರ ಅಭಿರುಚಿಯೂ ಹೆಚ್ಚು ಕಡಿಮೆ ಒಂದೇ ತೆರನಾಗಿತ್ತು. ಆ ಮರಕ್ಕೆ ಹಣ್ಣು ಬಿಡಲು ಪ್ರಾರಂಭಿಸಿದಾಗ ನಮ್ಮ ಲಕ್ಷವೆಲ್ಲ ಆ ಮರದತ್ತಲೇ ಕೇಂದ್ರಿಕ್ರತವಾಗಿರುತ್ತಿತ್ತು. ಹಣ್ಣು ಗಾಳಿಗೆ ಕೆಳಕ್ಕೆ ಬಿದ್ದು "ಡಪ್" ಎನ್ನುವ ಶಬ್ಧ ಬಂದರೆ ಸಾಕು, ಶತ್ರು ಸೈನ್ಯದ ಮೇಲೆ ದಾಳಿಯಿಡುವ ಯುದ್ದ ವಿಮಾನಗಳಂತೆ, ನಾವು ಮೂರು ಕಡೆಯಿಂದಲೂ ಅಲ್ಲಿಗೆ ದಾಳಿ ಮಾಡುತಿದ್ದೆವು. ಯುದ್ದದಲ್ಲಿ ಶತ್ರು ಯಾರಿಗೆ ಸೆರೆ ಸಿಕ್ಕರೇನು, ಒಟ್ಟಿನಲಿ ಅದು ಆ ದೇಶಕ್ಕೆ ಹೆಮ್ಮೆ. ಆದರೆ ಇಲ್ಲಿ ಹಾಗಲ್ಲ, ಎಲ್ಲರೂ ಹಣ್ಣಿನ ವಿಷಯದಲ್ಲಿ ಶತ್ರುಗಳೇ. ಸಿಕ್ಕವನಿಗೆ ಗೆದ್ದ ಸಂಭ್ರಮ, ಸಿಗದಿದ್ದವರಿಗೆ ಸಿಗಲಿಲ್ಲ ಎನ್ನುವ ಚಿಂತೆ. ಸೋತರು, ಮುಂದೆ ಬಿಳಲಿರುವ ಹಣ್ಣು ನನಗೆ ಸಿಕ್ಕೀತು ಎನ್ನುವ ಆತ್ಮವಿಶ್ವಾಸ. ಆ ಆತ್ಮವಿಶ್ವಾಸವೇ ಇನ್ನೋಂದು ಹಣ್ಣಿಗಾಗಿ ಮತ್ತೆ ಕಾಯಲು ಪ್ರೇರೇಪಿಸುತ್ತಿತ್ತು.                        

ಅದೆಷ್ಟು ಹಣ್ಣು ತಿನ್ನುತ್ತಿದ್ದೇವೆಂದರೆ, ಮಾವಿನ ಹಣ್ಣಿನ ಸೊನೆಗೆ ಸೀತವಾಗಿ ಮೂಗು ಸೋರುತಿದ್ದರೂ ಮಾವಿನ ಹಣ್ಣನ್ನು ಬಿಡುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ಮಾವಿನ ಹಣ್ಣಿನ ಮೇಲೆ. ಆಗ ಮನೆಯಲ್ಲಿ ಈಸಾಡ ಹಾಗೂ ಹೈಬ್ರಿಡ್ ತಳಿಯ ಮಾವಿನ ಹಣ್ಣುಗಳಿದ್ದರೂ, ನಮಗೆ ಆ ನಾಟಿ ತಳಿಯ ಮಾವಿನ ಹಣ್ಣಿನಷ್ಟು ರುಚಿಯೆನಿಸುತ್ತಿರಲಿಲ್ಲ. ಇಂದು ಊರಿನಲ್ಲಿ ಅಂದಿನಷ್ಟು ನಾಟಿತಳಿಯ ಮಾವಿನ ಮರಗಳಿಲ್ಲ. ಕೆಲವು ಬಹುಗಾತ್ರದ ಮರಗಳು, ಇಂದಿನ ಹೈಬ್ರಿಡ್ ತಳಿಯ ಮಾವುಗಳಿಗಾಗಿ ಹುತಾತ್ಮವಾಗಿ ಬಿಟ್ಟಿವೆ. ಅಂದು ನಾಟಿ ಮಾವಿನ ಹಣ್ಣುಗಳನ್ನು ಸವಿದ ಮೇಲೆ ಹೈಬ್ರಿಡ್ ಹಣ್ಣುಗಳು ಅಷ್ಟೊಂದು ರುಚಿಯೆನಿಸುವುದಿಲ್ಲ. ಅದರಲ್ಲೂ ಇಂದಿನ ಹೈಬ್ರಿಡ್ ಹಣ್ಣುಗಳಲ್ಲಿ ರುಚಿಯಾದರೂ ಎಲ್ಲಿರುತ್ತೆ? ಎಳೆಯ ಕಾಯಿಯನ್ನೇ ಕೊಯ್ದು ರಾಸಾಯನಿಕಗಳನ್ನು ಹಾಕಿ, ಹಣ್ಣಿನಂತೆ ಮಾಡಿ ದುಪ್ಪಟ್ಟು ಬೆಲೆಗೆ ಮಾರುವ ಇಂದಿನ ಹೈಬ್ರಿಡ್ ಹಣ್ಣುಗಳು, ನಾಟಿ ಹಣ್ಣುಗಳ ಮುಂದೆ ರುಚಿಯಲ್ಲಿ ಎಂದೂ ಸರಿಸಾಟಿಯಾಗಲಾರವು ಎನ್ನುವುದು ನನ್ನ ಅನಿಸಿಕೆ. ಈಗಂತೂ ಹೈಬ್ರಿಡ್ ಹಣ್ಣುಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಅದರಲ್ಲೂ ಮಾವಿನ ಹಣ್ಣು ಸುರುವಾದ ಹೊಸದರಲ್ಲಂತೂ ಅದರ ಬೆಲೆ ಕೇಳಿದರೆ ಸಾಕು ತಲೆತಿರುಗತ್ತೆ, ಇನ್ನೆಲ್ಲಿ ಆ ಮಾವಿನ ಹಣ್ಣು. ಮಳೆಗಾಲ ಸುರುವಾದರೆ ಆ ಹಣ್ಣುಗಳನ್ನ ತಿನ್ನಲಾಗಲ್ಲ.

ಕೊನೆಯಲ್ಲಿ ಒಂದು ಮಾತು, ನಮ್ಮ ತಂದೆಯವರು ಆಗಾಗ ಹೇಳುತಿದ್ದರು ಅವರು ಚಿಕ್ಕವರಿದ್ದಾಗ ನಮ್ಮೂರಲ್ಲಿ ತುಂಬಾ ನಾಟಿ ಮಾವಿನ ಮರಗಳಿದ್ದವೂ ಅಂತ, ಈಗ ನಾನು ಹೇಳುತಿದ್ದೇನೆ ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ತುಂಬಾ ನಾಟಿ ಮಾವಿನ ಮರಗಳಿದ್ದವು ಅಂತ. ನಾವು ಚಿಕ್ಕವರಿರುವಾಗಲೇ ಅಷ್ಟೊಂದು ಮಾವಿನ ಮರಗಳಿದ್ದುದು ನಮ್ಮ ತಂದೆಯವರು ಚಿಕ್ಕವರಿರುವಾಗ ಇನ್ನೆಷ್ಟು ನಾಟಿ ಮಾವಿನ ಮರಗಳಿರಬೇಕು ಅಲ್ಲವೇ!

--ಮಂಜು ಹಿಚ್ಕಡ್

Monday, December 2, 2013

ಮತ್ತೆ ಕಟ್ಟಲಾದಿತೇ ರಾಮರಾಜ್ಯ!

[ಈ ವಾರದ ಪಂಜು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಇನ್ನೊಂದು ಕವನ www.panjumagazine.com/?p=5502]
ಹುಚ್ಚೆದ್ದು ಕುಣಿಯುತಿದೆ
ನಾಡಿನ ಜನತೆ.
ಮರೆಯಾಗಿ ಹೋಗುತಿದೆ
ಒಲವಿನ ಒರತೆ.

ಇತ್ತ ರೋಡಲಿ ಕಾರು
ಅತ್ತ ಬಾರಲಿ ಬೀರು
ಎಲ್ಲಿ ನೋಡಿದರಲ್ಲಿ
ಹಣದ ಕಾರುಬಾರು.

ಮಾನಕ್ಕೆ ಬೆಲೆಯಿಲ್ಲ
ಮಾನವಂತರು ಇಲ್ಲ.
ಆಗಿಹುದು ನಾಡು, ಸುಡುಗಾಡು
ಎರಡು ಮಾತಿಲ್ಲ.

ಹಣಕಾಗಿ ಜನ ಮರಳು
ಹಣಕಾಗಿ ಜಾತ್ರೆ ಮರಳು.
ಮರೆತು ಹೋಗಿದೆ ಇಂದು
ಮಾನವತೆಯ ತಿರುಳು.

ದ್ವೇಷದ ದಳ್ಳುರಿಯಲ್ಲಿ
ಪ್ರೀತಿ ಹೋಗಿದೆ ಸೋತು.
ಪ್ರೀತಿ-ಪ್ರೇಮ ಎನ್ನುವುದು
ಮರೀಚಿಕೆಯ ಮಾತು.

ಬೆಳೆದು ನಿಂತಿದೆ ಅಹಂ
ಇಂದು ಕಾಳ್ಗಿಚ್ಚಿನ ರೀತಿ
ಹುಡುಕಿದರು ಸಿಗಲಾರದು
ಇಲ್ಲಿ ನ್ಯಾಯ ನೀತಿ.

ಅಲ್ಲಿ ಕೊಲೆ ಅಂತೆ
ಇಲ್ಲಿ ಸುಲಿಗೆಯೂ ಅಂತೆ
ಅತ್ತ ಸ್ವಿಸ್ ಬ್ಯಾಂಕಲ್ಲಿ
ನೋಟುಗಳ ಕಂತೆ.

ಅಣ್ಣ-ತಮ್ಮರ ನಡುವೆ
ಅಕ್ಕ-ತಂಗಿಯರ ನಡುವೆ
ಬೆಳೆದು ನಿಂತಿದೆ ವ್ಯಾಜ್ಯ
ಮತ್ತೊಮ್ಮೆ ಹುಟ್ಟಿ ಬಂದರು ರಾಮ
ಕಟ್ಟಲಾಗದು ಮತ್ತೆ ರಾಮರಾಜ್ಯ.

ಛಲದಲ್ಲಿ ದುರ್ಯೋಧನನಾಗು
ದಾನಕ್ಕೆ ನೀ ಕರ್ಣನಾಗು
ಗುರುಭಕ್ತಿಯಲಿ ನೀ
ಏಕವಲವ್ಯನು ಆಗು.

ಮುಳ್ಳಲ್ಲಿರುವ ಹೂವಾಗಿ
ಎಲ್ಲರಿಗೂ ಹಿತವಾಗಿ
ಬಾಳಿದರೆ ನೀ ಬದುಕುವೆ
ಎಂದೆಂದು ಸುಖವಾಗಿ!

--ಮಂಜು ಹಿಚ್ಕಡ್ 

Sunday, December 1, 2013

ಯಾವುದು ಹುಚ್ಚು!

ಪ್ರೀತಿ ಹೆಚ್ಚಾದರೆ ಹುಚ್ಚು
ಮಮತೆ ಹೆಚ್ಚಾದರೆ ಹುಚ್ಚು
ಈಡೇರದ ಬಯಕೆಗಳು ಹೆಚ್ಚಾದರು ಹುಚ್ಚು
ಆಶೆ ಆಕಾಂಕ್ಷೆಗಳು ಹೆಚ್ಚಾದರೂ ಹುಚ್ಚು,
ಎನ್ನುವುದಾದರೆ?
ಹಣ ಐಶ್ವರ್ಯಗಳು ಹೆಚ್ಚಾದರೆ?

ಹೆಚ್ಚಾದ ಪ್ರೀತಿ ಮಮತೆಗಳೆಲ್ಲಾ
ಹುಚ್ಚೆನ್ನುವುದಾದರೆ,
ಹೆಚ್ಚಾದ ಹಣ, ಐಶ್ವರ್ಯಗಳೇಕೆ
ಹುಚ್ಚಲ್ಲ ಸ್ವಾಮಿ.

--ಮಂಜು ಹಿಚ್ಕಡ್

ತಾಂಬೂಲದ ಮಹಿಮೆ!

ಹಚ್ಚ ಹಸುರಿನ ಎಲೆಯ ಮೇಲೆ
ಒಂದಿಷ್ಟು ಬಿಳಿ ಸುಣ್ಣ ನೇವರಿಸಿ.
ನಾಲ್ಕಾರು ತುಂಡು ಅಡಿಕೆಗಳನು ಹಾಕಿ
ಮೆಲ್ಲಗೆ ಸುತ್ತಿಟ್ಟು ಬಾಯಿಗೆ ಸೇರಿಸಿ.

ಮಸಾಲೆ ಅರಿಯುವ ರುಬ್ಬುಕಲ್ಲಿನಂತೆ
ಅಲ್ಲಲ್ಲಿ ಕರಿ ಹಿಡಿದ ಹಲ್ಲುಗಳಿಂದ
ಅಗಿದು, ಅಗಿದು ಹೊರಸೂಸಿದರೆ ಆ ತಾಂಬೂಲ
ಕೆಂಪು ರಕ್ತಕಣಗಳಿಗಿಂತ ಮಿಗಿಲಾಗಿ
ಕಾಣುವುದು ಉಗಿದ ಆ ಜಿಹ್ವಾಜಲ

ಉಗಿದದ್ದು ಭೂಮಿ ತಲುಪಬೇಕಂದಿಲ್ಲ
ಯಾರ ಮೈ, ಬೆನ್ನ ಸವರಿದರೇನು?
ಯಾವ ಗೋಡೆಗೆ ತಗುಲಿ ಕೆಂಬಣ್ಣವಾದರೇನು?
ಬಸ್ಸಾದರೇನು? ಗಿಡ ಮರವಾದರೇನು?
ಕ್ಷಣಾರ್ಧದಲ್ಲಿ ಉಗಿದವ ನಾಪತ್ತೆ
ಉಗಿದ ಸಾಕ್ಷಿಯಿಲ್ಲದಂತೆ.

ಒಂದೊಮ್ಮೆ ಉಗಿಸಿಕೊಂಡಲ್ಲಿ ಮುಗಿಯಿತು
ಧರಿಸಿದ ಧಿರಿಸು ತೋಳೆಯಲು ಬೇಕು
ಒಂದರ್ಧ ಬಾರು ಸೋಪು
ಒಂದರ್ಧ ಗಂಟೆಯ ಸಮಯ
ನಮ್ಮದಲ್ಲದ ತಪ್ಪಿಗಾಗಿ.

--ಮಂಜು ಹಿಚ್ಕಡ್