ಕಣ್ಣು ಮುಚ್ಚಿದ ಮಣ್ಣು!!
ಕಾರು ಬಂತು, ಲಾರಿ ಬಂತು
ಅದರ ಹಿಂದೆ ಹಣವು ಬಂತು
ದೂರ ಪಶ್ಚಿಮದ ತೀರಕೆ.
ಯಾಕೆಂದು ಕೇಳುವವರಿಲ್ಲ
ತಿಳಿಯುವುದು ಬೇಕಿರಲಿಲ್ಲ
ಆ ಹಣದ ಕಂತೆಗಳ ಮುಂದೆ.
ಎಲ್ಲಿಯದೋ ಮಣ್ಣಂತೆ
ಎಲ್ಲಿಗೋ ಹೋಗುವುದಂತೆ
ಅದಕೆ ಅಲ್ಲಿ ಬೆಲೆಯುಂಟಂತೆ.
ಎಲ್ಲಿಂದ ಬಂದರೇನು?
ಎಲ್ಲಿಗೆ ಹೋದರೇನು?
ಹಣ ಹರಿದು ಬರುವಾಗ
ಏಕೆ ಅದರ ಚಿಂತೆ?
ಓದು ಬಿಟ್ಟರು ಕೆಲವರು
ಬೇಸಾಯ ಮಾಡುವ
ಭೂಮಿ ಕೊಟ್ಟರು.
ತಂದು ನಿಲ್ಲಿಸಿದರು ಲಾರಿಗಳ
ಸಾಲಾಗಿ ಮನೆಯ ಮುಂದೆ
ಬರಲಿರುವ ಹಣದ ಗುಂಗಿನಲಿ.
ಹಣದ ಮಹಿಮೆಯ ಕಂಡು
ತೀರಿ ಹೋದ ಹೆಣಕು
ಹೊಟ್ಟೆ ಕಿಚ್ಚಂತೆ.
ಕರೆದು ಕೊಂಡವು ಕೆಲವು
ಜನರನು, ತಮ್ಮ ತಕ್ಕಗೆ.
ಬೆಳೆ ಬೆಳೆವ ಗದ್ದೆಗಳಲಿ
ಕೆಂಪು ದೂಳಿನ ರಾಶಿ.
ವೇಗದ ಲಾರಿಗೆ ಸಿಕ್ಕಿ
ಒಂದಡೆ ಹೆಣಗಳ ರಾಶಿ.
ಏನಾದರೇನು? ಯಾಕಾದರೇನು?
ಹಣ ತಾನಾಗೇ ಬರುವಾಗ
ಚಿಂತಿಸಿ ಫಲವೇನು?
ಇದು ಬರೀಯ ಮಣ್ಣಲ್ಲ
ಆರೋಗ್ಯಕ್ಕೆ ಒಳ್ಳೆಯದಲ್ಲ
ಎಂದು ತಿಳಿಸಹೋದರು ಹಲವರು.
ಹೊಟ್ಟೆ ಕಿಚ್ಚಿನ ಜನ
ಎಂದು ಜರಿದು ಬಿಟ್ಟರು ಕೆಲವರು.
ನಮ್ಮದು ನಮ್ಮಿಷ್ಟ
ನಿಮಗೇಕೆ ಕಷ್ಟ
ಎಂದವರೆಲ್ಲಿ ಹಲವರಿಗೆ
ಇಂದು ಮಣ್ಣಿಲ್ಲ, ಕೈಯಲ್ಲಿ ಕಾಸಿಲ್ಲ
ಹಾಗಾಗಿ. ಲೆಕ್ಕ ಹಾಕುತ್ತಿದ್ದಾರೆ
ಹಣವನ್ನಲ್ಲ. ಮುಂದೆ
ಕಳೆಯಬೇಕಿರುವ ದಿನವನ್ನ.
0 comments:
Post a Comment