Wednesday, December 30, 2015

ಅಲ್ಲೊಂದು ದಿನ

ಅಂದು ಆ ಶಾಲೆಯಲ್ಲಿ ಬರೀ ಗಡಿಬಿಡಿಯ ವಾತಾವರಣ. ಎಲ್ಲರ ಕೈಕಾಲುಗಳು ಓಡಾಡುತ್ತಿವೆ. ಒಮ್ಮೆ ಅವರವರ ಸ್ವಂತ ಆಲೋಚನೆಗಳಿಗೆ ಓಡಾಡಿದರೆ, ಇನ್ನೊಮ್ಮೆ ಇನ್ನಾರದೋ ಮನಸ್ಸಿನ ಮೋಲೆಯಲ್ಲಿ ಮೂಡಿದ ಆಲೋಚನೆಗಳ ಪರಿಣಾಮವಾಗಿ ಇವರ ಕೈಕಾಲುಗಳು ಓಡಾಡುತಿವೆ. ಕೋಣೆಯಲ್ಲಿ ಬೆಳಿಗ್ಗೆಯಿಂದ ಕುಳಿತೇ ಇದ್ದ ಮಕ್ಕಳಿಂದ ಹಿಡಿದು, ಹೊರಗೆ ಓಡಾಡುವ, ಆ ಅಕ್ಕೋರು, ಮಾಸ್ತರರು, ಅಷ್ಟೇ ಅಲ್ಲ ಘಂಟೆ ಹೊಡೆಯುವ ಗಣಪು ಇವರಿಗೆಲ್ಲ ಅದೊಂದೇ ಯೋಚನೆ, ಯಾವಾಗ ಅವರು ಬರಬಹುದು? ಹೇಗೆ ಬರಬಹುದು? ಬಂದರೆ ಯಾವ ಕಡೆಯಿಂದ ಬರಬಹುದು, ದಕ್ಷಿಣಕಡೆಯ ಗೇಟಿನಿಂದ ಒಳಗೆ ಬರಬಹುದೇ, ಅಥವಾ ಉತ್ತರದ ಆ ದಣಪೆಯ ಬಳಿಯಿಂದ ಒಳಗೆ ಬರಬಹುದೇ, ಈ ಯೋಚನೆಯಲ್ಲೇ ಗಂಟೆ ಹತ್ತು ಕಳೆದಿತ್ತೇ ಹೊರತು ಶಾಲೆಗೆ ಬರಬೇಕಾದ ಸಾಹೇಬರಿನ್ನೂ (ಇನ್ಸಪೆಕ್ಟರ್) ಮಾತ್ರ ಬಂದಿಲ್ಲ.

ಇನ್ನೆರೆಡು ವರ್ಷದಲ್ಲಿ ನಿವೃತ್ತಿಯಾಗಲಿರುವ ಮುಖ್ಯ ಶಿಕ್ಷಕಿ ಸುಮಿತ್ರಾರವರಿಗಂತೂ ಬೆಳಿಗ್ಗೆಯಿಂದ ಆಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಓಡಾಡಿ, ಕೈಕಾಲೆಲ್ಲ ಸುಸ್ತಾಗಿ ಮರಗಟ್ಟಿದಂತಾಗಿ ಬಿಟ್ಟೀದೆ. ಮೊನ್ನೆ ಬೆಂಗಳೂರಿನಿಂದ ಮಗ ತಂದುಕೊಟ್ಟ ನೋವಿನ ತೈಲವನ್ನು ಕಾಲಿಗೆ ಸ್ವಲ್ಪ ಹಚ್ಚಿಕೊಂಡರೆ ನೋವಾದರೂ ಸ್ವಲ್ಪ ಕಡಿಮೆಯಾಗಬಹುದಿತ್ತೇನೋ? ಆದರೆ ಹಚ್ಚಿಕೊಳ್ಳುವುದು ಈಗ ಹೇಗೆ ಸಾದ್ಯ? ಹಚ್ಚಿಕೊಳ್ಳುವಷ್ಟರಲ್ಲಿ ಸಾಹೇಬರು ಬಂದರೆ ಏನು ಮಾಡುವುದು? ಹಾಗಂತ ಹಚ್ಚಿಕೊಳ್ಳದೇ ಹೋದರೆ ಈ ನೋವು ಕಡಿಮೆಯಾಗಬೇಕಲ್ಲ, "ಹಾಳಾದ್ ಸಾಯ್ಬ್ರ, ಇಲ್ಲೆ ಹಾಳಾಗ್ ಹೋದ್ರೋ ಏನೋ?" ಎಂದು ಮನಸ್ಸಲ್ಲೇ ಒಂದಿಷ್ಟು ಹಿಡಿಸಾಪ ಹಾಕಿ, ಅಲ್ಲೇ ತಮ್ಮ ಕುರ್ಚಿಗೆ ಆನಿಸಿಕೊಂಡು ಕುಳಿತರು.

ಹಾಗೆ ಅನಿಸಿದಾಗಲೇ ಅವರಿಗೊಂದು ಆಲೋಚನೆ ಹೊಳದೇ ಬಿಟ್ಟಿತು. ಸಾಹೇಬರು ಬರುತ್ತಾರೆ ಎಂದು ಸರ್ಫ್ ಹಾಕಿ ತೊಳೆದು, ಅದಕ್ಕೆ ಮತ್ತೆ ನೀಲಿ ಹಾಕಿ ಒಪ್ಪವಾಗಿ ಇಸ್ತ್ರಿ ಮಾಡಿಸಿದ ಬಿಳಿ ಅಂಗಿ, ಬಿಳಿ ಪ್ಯಾಂಟು ಧರಿಸಿ ಬಾಯಲ್ಲಿ ಸೀಟಿ (ವಿಜಲ್) ತುರುಕಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಿರುವ ಹಾವೇರಿ ಕಡೆಯ ಪಿಟಿ ಮಾಸ್ತರ್ ಹನುಮಪ್ಪ ಅಲ್ಲೇ ಬಾಗಿಲನ್ನು ದಾಟಿ ಮುಂದಕ್ಕೆ ಹೋಗುತಿದ್ದುದನ್ನು  ತಮ್ಮ ಕೋಣೆಯಿಂದ ನೋಡಿದ ಸುಮಿತ್ರಾ ಅವರು, "ಏ ಹನ್ಮಪ್ಪಾ, ಇಲ್ಲ್ ಬಾ, ಮಾತ್ರ ಬಾ" ಎಂದು ಕೂಗಿದರು.

"ಏನ್ರಿ ಮೆಡಂ, ಕರಿದ್ರೇನ್ರೀ" ಎಂದು ಕೇಳುತ್ತಲೆ ಒಳಗೆ ಬಂದ ಹನುಮಪ್ಪ.

"ಈ ಸಾಯ್ಬ್ರ ಇಟ್ಟೊತ್ತಿಗೆ ಬತ್ತರಾ ಏನಾ? ಹಾಳಾದೋರ ಬರುದ್ ಬತ್ತರ ಇಟ್ಟೊತ್ತಿಗೆ ಬತ್ತಿ ಅಂದೂ ಹೇಳಲಾ. ಅವ್ರ ಇಲ್ಲಿಂದ್ ಬತ್ತರಾ ಏನಾ ಬೆಲಾ. ಉಂದ್ ಕೆಲ್ಸಾ ಮಾಡ, ಆರ್ನೇ ಕ್ಲಾಸಂದೂ, ಏಳ್ನೇ ಕ್ಲಾಸಂದೂ ಮುಖ್ಯಮಂತ್ರಿಗಳ ಕರ್ದೆ, ಒಬ್ಬೊಬ್ಬ್ರಿಗೆ ಉಂದುಂದ ಕಡಿಗೆ ಹೋಗ್ ನಿಂತ್ಕಂಡೆ ಕಾಯುಕ್ ಹೇಳ್, ಸಾಹೇಬ್ರ್ ಬಂದಕೂಡ್ಲೇ ಓಡ್ ಬಂದೆ ಹೇಳುಕ್ ಹೇಳ". ಎಂದು ತಮ್ಮ ಸಲಹೆ ಮತ್ತು ಆಜ್ನೆ ಎರಡನ್ನೂ ಒಟ್ಟಿಗೆ ನೀಡಿ ಕಳಿಸಿದರು.

ಮೂರ್ನಾಲ್ಕು ವರ್ಷಗಳ ಹಿಂದೆ ಈ ಶಾಲೆಗೆ ಬಂದಿದ್ದ ಹನುಮಪ್ಪ, ಇದೇ ಕೊನೆ ವರ್ಷ, ಇದೇ ಕೊನೆ ವರ್ಷ ಎಂದು ನಾಲ್ಕು ವರ್ಷಗಳನ್ನು ಇಲ್ಲಿಯೇ ಕಳೆದಿದ್ದ. ಆಗ ಈತನಿಗೆ ಈ ಶಾಲೆ, ನೌಕರಿ ಎರಡು ಹೊಸತಾಗಿದ್ದರೆ, ಆ ಶಾಲೆಗೂ ಆತ ಹೊಸಬನಾಗಿದ್ದ. ಬರುವಾಗಲೇ ಒಂದು ವರ್ಷದೊಳಗೆ ತನ್ನೂರಿನ ಕಡೆ ಟ್ರಾನ್ಸಪರ್ ಮಾಡಿಕೊಂಡು ಹೋಗಬೇಕು ಎಂದು ಬಂದವನು, ಅತ್ತ ಟ್ರಾನ್ಸಪರು ಸಿಗದೇ, ಇತ್ತ ಈ ಊರು, ಈ ಭಾಷೆ, ಈ ಕಡೆಯ ಊಟವೂ ಹೊಂದಾಣಿಕೆಯಾಗದೇ ತ್ರಿಷಂಕು ತರಹ ಇಲ್ಲಿಯೇ ಉಳಿದು ಬಿಟ್ಟಿದ್ದ. ಆ ಊರಿನ ಕಡೆಯವರೇ ತುಂಬಿ ಹೋಗಿರುವ ಶಾಲೆಯಲ್ಲಿ ಹೊರಗಿನವನಾಗಿ ಹೊಸತಾಗಿ ಸೇರಿದಾಗ ಇಲ್ಲಿಯ ಜನರ ಆಡುಭಾಷೆ ಅರ್ಥವಾಗದೇ ತೊಳಲಾಡಿದ್ದ. ಆದರೆ ಈಗ ಅಲ್ಪ ಸ್ವಲ್ಪ ಅರ್ಥವಾಗುತಿತ್ತಾದರೂ ಸಂಪೂರ್ಣವಾಗಿ ಅರ್ಥವಾಗುತ್ತಿರಲಿಲ್ಲ. ಹೆಡ್ ಬಾಯಿಯವರ ಮಾತು ಸಂಪೂರ್ಣವಾಗಿ ಅರ್ಥವಾಗದೇ ಇದ್ದರೂ ಅಲ್ಪ ಸ್ವಲ್ಪವಾಗಿ ಅರ್ಥವಾದ ಕಾರಣ ವಿಷಯ ಏನೆಂದು ಅರ್ಥವಾಗಿ " ಆಯ್ತ್ರೀ ಮೇಡಂ ಅವ್ರ" ಎಂದು ಅಲ್ಲಿಂದ ಹೊರಟ.

ಪಿಟಿ ಮಾಸ್ತರರು ಕರೆದೊಡನೆ ಎದುರಿಗೆ ಹಾಜರಾದರೂ ಆಯಾ ಕ್ಲಾಸಿನ ಮಕ್ಕಳಿಂದ ಆಯ್ಕೆಯಾದ ಮುಖ್ಯ ಮಂತ್ರಿಗಳು. ಪಿಟಿ ಮಾಸ್ತರು ಆರನೇ ತರಗತಿಯವನನ್ನು ದಕ್ಷಿಣದಿಕ್ಕಿನ ಗೇಟಿನತ್ತಲೂ, ಏಳನೇ ತರಗತಿಯವನನ್ನು ಉತ್ತರದಿಕ್ಕಿನ ಕಡೆಗೂ ಹೋಗಿ ಸಾಹೇಬ್ರು ಬಂದಾಗ ಓಡಿ ಬಂದು ತನಗೆ ತಿಳಿಸುವಂತೆ ಅತ್ತ ಕಡೆ ಕಳಿಸಿ, ತಾನು ತನ್ನ ಕೆಲಸದತ್ತ ಹೊರಳಿದ. ಮಕ್ಕಳಿಗೂ ಅಷ್ಟೇ ಇಷ್ಟೊತ್ತು ಕ್ಲಾಸಲ್ಲಿ ಕೂತು ಕೂತು ಸಮಯ ಕಳೆಯುವುದು ಹೇಗೆಂದು ಅರ್ಥವಾಗದ ಅವರಿಗೆ ಪಿಟಿ ಮಾಸ್ತರರು ಹೇಳಿದ್ದು ವೈದ್ಯರು ಹಾಲು ಹಣ್ಣು ಅಂದಂತಾಗಿ ಮಾಸ್ತರರು ಹೇಳಿದ ಕಡೆ ಓಡಿದರು.

ಸುಮಿತ್ರಾ ಮೆಡಂಗೆ ಈಗ ಸ್ವಲ್ಪ ಸಮಾಧಾನವಾದಂತಾಗಿ ತಮ್ಮ ಬಗ್ಗೆ ಹಾಗೂ ತಾವು ಕೈಗೊಂಡ ಕಾರ್ಯದ ಬಗ್ಗೆ ಹೆಮ್ಮೆ ಮೂಡಿದಂತಾಯಿತು. ಮೆಲ್ಲಗೆ ಎದ್ದು ಕಪಾಟಿನಲ್ಲಿ ಇಟ್ಟ ತಮ್ಮ ಬ್ಯಾಗಿನತ್ತ ಹೊರಟು ಬ್ಯಾಗಿನಲ್ಲಿಟ್ಟ ನೋವಿನ ಎಣ್ಣೆಯನ್ನು ಹೊರತೆಗೆದು ತಮ್ಮ ಸ್ಥಳಕ್ಕೆ ಬಂದು ಕುಳಿತು ಸೀರೆಯನ್ನು ಸ್ವಲ್ಪ ಮಂಡಿಯವರೆಗೆ ಎತ್ತಿ ನೋವಿನ ಎಣ್ಣೆಯನ್ನು ಕೈಗೆ ಹಚ್ಚಿಕೊಂಡರು. ಯಾಕೋ ಮನಸ್ಸಿಗೆ ಸ್ವಲ್ಪ ಹಾಯಾದಂತೆನಿಸಿತು. ಆ ಹಿತವಾದ ಅನುಭವದಲ್ಲಿದ್ದ ಅವರಿಗೆ ಹೊರಗಡೆಯ ಅಡುಗೆ ಕೋಣೆಯಿಂದ ಗಡಿಬಿಡಿಯಲ್ಲಿ ಒಳಗೆ ಬಂದ ಲತಾ ಬಾಯಿ (ಮೆಡಂ) ಅವರ ಗಮನಕ್ಕೆ ಬರಲಿಲ್ಲ. ತಾವು ಕಾಲು ನೇವರಿಸಿಕೊಳ್ಳುವುದರಲ್ಲೇ ತನ್ಮಯರಾಗಿಬಿಟ್ಟಿದ್ದರು.

ಲತಾ ಬಾಯಿಯವರಿಗೆ ಇದೇನು ಹೊಸತಲ್ಲ. ಅವರು ಆಗಾಗ ಹೆಡ್ ಬಾಯಿಯವರು ಕಾಲಿಗೆ ಎಣ್ಣೆ ನೀವುತ್ತಿರುವುದನ್ನು ಆಗಾಗ ನೋಡಿದ್ದಾರೆ. ಮನಸ್ಸಲ್ಲಿ ಮಕ್ಕಳು ದೊಡ್ಡ ದೊಡ್ಡ ನೌಕರಿಯಲ್ಲಿ ಇರುವಾಗ ಇವರೇಕೆ ಇನ್ನೂ ಶಾಲೆಗೆ ಬರುತಿದ್ದಾರೆ? ಸುಮ್ಮನೇ ಸ್ವಯಂ ನಿವೃತ್ತಿ ತಗೊಂಡು ಮನೆಯಲ್ಲಿ ಹಾಯಾಗಿ ಕುಳಿತುಕೊಂಡರೆ ಸೀನಿಯಾರಿಟಿಯಲ್ಲಿ ಅವರ ನಂತರದವರಾಗಿದ್ದ ತಾವಾದರೂ ಹೆಡ್ ಬಾಯಿಯಾಗಿ ಮೆರೆಯಬಹುದಿತ್ತು ಅನಿಸಿದರೂ, ತೋರಿಸಿ ಕೊಳ್ಳದವರಂತೆ, "ಏನ್ ಮೆಡಂ, ಕಾಲ್ ನೋವ್ ಬಾಳೀದೆ?"ಎಂದು ಕೇಳಿದರು.

ಅವರ ಮಾತಿಗೆ ಎಚ್ಚೆತ್ತ ಸುಮಿತ್ರಾ ಬಾಯಿಯವರು ತಮ್ಮ ನೇವರಿಕೆಯನ್ನು ಅಷ್ಟಕ್ಕೆ ನಿಲ್ಲಸಿ, "ಓಹ್, ಲತಾ ಇಟ್ಟೊತ್ತಿಗೆ ಬಂದೆ?"

"ಏಗ್ ಬಂದದ್ದೇ, ಏನ್ ಬಾಳ್ ನೋವಿದೆ"

"ಹೌದೆ ಮಾರಾಯ್ತಿ, ಸತ್ತದ್ ಓಡಾಡೆ ಕಾಲ್ ನೋವ್ ಬಂದೋಯ್ತು ಅದಿರ್ಲೆ, ಅಡ್ಗೆ ಹೆಂಗೆ ನಡೀತೇ ಇದ, ಮಸಾಲೆ ಎಲ್ಲಾ ರೆಡಿ ಆಯ್ತೆ"

"ಹ, ಮಸಾಲಿ ಎಲ್ಲಾ ಹಾಕಾಯ್ತ, ಕುತ್ತುಂಬ್ರಿ ಸುಪ್ಪ ತಕಂಡೆ ಹೋಗುಕೆ ಮರ್ತೇ ಹೋಗತ್, ಅದ್ಕೇ ತಕಂಡೆ ಹೋಗ್ವಾ ಅಂತೆ ಬಂದೆ"

"ಹೌದೆ, ಕಾಡೀಗೆ ಕೋಳೆ ಸಾಕಾಗುದೆ?"

"ಸಾಕಾಗುದ್ ಮಡಿಯೆ, ಇಲ್ಲಾ ಅಂದ್ರು ಇದ್ದದ್ರಲ್ಲೇ ಎಡ್ಜಸ್ಟ ಮಾಡಿದ್ರ ಆಯ್ತ, ಸಾಯ್ಲ ಏಗ್ ಮಾತ್ತೆ ಯಾರ್ ತತ್ತೇ ಕುಳ್ಳುರ್. ಪೀಸ್ ಕಾಡ್ಮಿ ಆತೀದ್ ಅಂದೆ ಕಂಡಂಗೆ ಆದ್ರೆ, ಕೆಲ್ಸಕ್ಕಿರು ಮಕ್ಕಳಿಗೆ ಕಾಡೀಗ್ ಬಡ್ಸದ್ರ ಆಯ್ತ"

"ಹ, ಅದೂ ಹೌದೆ, ಬಡ್ಸುಕೆ ನೀವೇ ಇರಿ, ನೀವಾದ್ರೆ ಎಡ್ಜಸ್ಟ್ ಮಾಡ್ತರಿ, ಅದೇ ಶಕುಂತಲಾ ಮೆಡಂ ಆದ್ರೆ, ಪೀಸ್ ಎಲ್ಲಾ ಗೋರ್ ಹಾಕ್ ಬಿಡ್ತರ, ಕಾಡಿಗೆ ಊಟಕ್ಕೆ ಕುಳಿತೋರಿಗೆ ಪೀಸೇ ಇರುಲಾ" ಅಂದು ಹೇಳುತಿದ್ದವರು ಹೊರಗಡೆಯಿಂದ  "ರೂಂಯ್, ರೂಂಯ್" ಎನ್ನುತ್ತಾ ಓಡಿ ಬರುತ್ತಿರುವ ಏಳನೇ ತರಗತಿಯ ಶಂಕರನನ್ನು ನೋಡಿ, ತಮ್ಮ ಮಾತನ್ನು ಅಷ್ಟಕ್ಕೆ ನಿಲ್ಲಿಸಿ, "ಏ ಶಂಕರಾ! ಯಾಕಾ ಓಡ್ ಬತ್ತೇ ಇಂವೆ? ಸಾಯ್ಬ್ರ ಬಂದ್ರೆ".

"ಹೌದಿರ್ಬೇಕ್ ಆಕ್ಕೋರೆ, ಯಾರೋ ಬೈಕ್ ಅಲ್ಲೆ ಬತ್ತೇ ಇವ್ರ, ಮಾಸ್ತರಿಗೆ ಹೇಳ್ವಾ ಅಂದೆ ಓಡ್ ಬಂದೆ, ಆದ್ರ ಅವ್ರ ಇಲ್ಲೂ ಕಾಣಸ್ತೇ ಇಲ್ಲಾ"

ಬೈಕ್ ಮೇಲೆ ಬಂದ್ರು ಅಂದ ತಕ್ಷಣ ಸುಮಿತ್ರಾ ಅವರಿಗೆ ಬಂದವರು ಸಾಹಿಬರೇ ಎನ್ನುವುದು ನಿಶ್ಚಯವಾಗಿ ಹೋಯಿತು. ಕೂಡಲೇ ಸೀಟಿನಿಂದ ಎದ್ದು, " ನೀ ಹೋಗೆ ಕ್ಲಾಸಲೆ ಕುತ್ಕಾ, ಗಲಾಟೆ ಮಾಡ್ಬೇಡಿ" ಎಂದು ಶಂಕರನನ್ನು ಕ್ಲಾಸಿಗೆ ಕಳಿಸಿ, "ಲತಾ, ಈ ಪಿಟಿ ಮಾಸ್ತರ್ ಇಲ್ಲೋಗೆ ಸತ್ನಾ ಬೆಲಾ, ಆಂವಾ ಅಲ್ಲಿಲ್ಲರೂ ಕಂಡ್ರೆ ಮಾತ್ರೆ ಇಲ್ಲೆ ಬರುಕ್ ಹೇಳ, ಹಾಂಗೆ ಅಡ್ಗಿ ಮುಗ್ದದ್ದೇ ಸ್ವಲ್ಪ ಬಂದೆ ಹೇಳಗಾ" ಎಂದು ಹೇಳಿ ಲತಾ ಮೆಡಂ ಅನ್ನು ಕಳಿಸಿದರು.

ಬೆಳಿಗ್ಗೆಯಿಂದ ಕಟ್ಟಿ ಹಿಡಿದ ಸೊಂಟದ ನಡುವಿನ ತೊಳಲಾಟವನ್ನು ಸ್ವಲ್ಪ ಹಗೂರಗೊಳಿಸಿಕೊಂಡು ನೆಮ್ಮದಿಯಿಂದ ಮೂತ್ರ ಕೋಣೆಯಿಂದ ಹೊರಬರುತ್ತಿರುವ ಪಿಟಿ ಮಾಸ್ತರರನ್ನು ನೋಡಿದ ಲತಾ ಮೆಡಂ "ಹೇ ಹನುಮಪ್ಪ ಅವ್ರೇ, ಹೆಡ್ ಬಾಯಿಯೋರ ನಿಮ್ಮ ಕರೀತೇ ಇವ್ರ ನೋಡಿ, ಸಾಯ್ಬ್ರ ಏನೋ ಬತ್ತೇ ಇವ್ರ ಕಡ ನೋಡ, ಬ್ಯಾಗ್ ಹೋಗ."

ಅಷ್ಟು ಹೇಳಿದ್ದೇ ಓಡಿದ ಹನುಮಪ್ಪ ಹೆಡ್ ಬಾಯಿಯವರ ಕೋಣೆಯ ಕಡೆಗೆ. ಓಡಿ ಕೋಣೆ ತಲುಪುತ್ತಿರುವವನನ್ನು ನೋಡಿದ ಸುಮಿತ್ರಾ ಬಾಯಿಯವರು ಸ್ವಲ್ಪ ಸಿಟ್ಟಿನಿಂದಲೇ "ಇಲ್ಲೆ ಹಾಳಾಗ್ ಹೋಗದೇ, ಅಲ್ಲೆ ಸಾಯ್ಬ್ರ ಬತ್ತೇ ಇವ್ರ ಕಡ, ಅವ್ರ ಒಳ್ಗ ಬರುದ್ರೊಳ್ಗೆ ಸೀತಾರಾಮ್ಗೆ ಬ್ಯಾಗ್ ಬಂದೆ ಕ್ಲಾಸಲ್ಲೆ ಕುತ್ಕಣುಕೆ ಹೇಳ್, ಹಂಗೆ ಎಲ್ಲಾ ಕ್ಲಾಸಿಗೂ ಹೋಗೆ ಸಾಯ್ಬ್ರ ಬತ್ತೇ ಇರು ವಿಷಯ ಹೇಳ್"

ಅಷ್ಟು ಹೇಳಿದ್ದೇ ಹನುಮಪ್ಪ ಅಲ್ಲಿಂದ ಹೊರಬಂದು ದಕ್ಷಿಣದಿಕ್ಕಿನ ದ್ವಾರಪಾಲಕ ಸೀತಾರಾಮನನ್ನೂ ದೂರದಿಂದಲೇ ಸನ್ನೆಯ ಮೂಲಕ ಕರೆದು ಕ್ಲಾಸಿಗೆ ಹೋಗಲು ತಿಳಿಸಿ, ತಾನು ಪ್ರತಿ ಕ್ಲಾಸಿಗೂ ಹೋಗಿ ಆಯಾ ಕ್ಲಾಸಿನ ಶಿಕ್ಷಕರಿಗೆ ಹೆಡಬಾಯಿಯವರ ಹೇಳಿದದ್ದನ್ನು ತಿಳಿಸಿ, ತಾನು ಹೆಡ್ ಬಾಯಿಯವರ ಕೋಣೆಯ ಬಳಿ ಹೋಗುವಷ್ಟರಲ್ಲಿ ಸಾಹೇಬರು ಆಗಲೇ ಒಳ ಬಂದು ಹೆಡ್ ಬಾಯಿಯವರ ಮುಂದಿನ ಕುರ್ಚಿಯಲ್ಲಿ ಅಲಂಕೃತರಾಗಿದ್ದು ಸುಮಿತ್ರಾ ಅವರೊಂದಿಗೆ ಮಾತಿಗೆ ಇಳಿದಿದ್ದರು. ತಾನು ಈಗ ಓಳ ಹೋಗುವುದು ಸರಿಯಲ್ಲವೆಂದು, ತನ್ನ ಕೆಲಸವೇನಿದ್ದರೂ ಹೆಡ್ ಬಾಯಿಯವರ ಜೊತೆ ಸಾಹೇಬರನ್ನು ಎಲ್ಲಾ ಕೋಣೆಗೂ ಕರೆದುಕೊಂಡು ಹೋಗಿ ಬರುವುದಷ್ಟೇ ಆದುದರಿಂದ ಅವರು ಹೊರ ಬರುವ ವರೆಗೂ ಕಾಯೋಣ ಎಂದು ಅಲ್ಲೇ ಕೋಣೆಯ ಪಕ್ಕದಲ್ಲೇ ಕಾಯುತ್ತಾ ನಿಂತ. ಗಂಟೆ ಹನ್ನೆರಡಾಯ್ತು, ಒಂದಾಯ್ತು, ಒಳಗಡೆ ಕುಳಿತ ಮೆಡಂ ಆಗಲೀ, ಸಾಹೇಬರಾಗಲೀ ಮಾತ್ರ ಹೊರಗಡೆ ಬರುತ್ತಿರಲಿಲ್ಲ.

ಗಣಪು ಬಂದು ಒಂದು ಗಂಟೆಯ ವಿರಾಮದ ಘಂಟೆ ಭಾರಿಸಿದೊಡನೆ ಹತ್ತಿರದ ಮಕ್ಕಳೆಲ್ಲ ಮಧ್ಯಾಹ್ನದ ಊಟಕ್ಕೆ ಮನೆಗೆ ಹೊರಟರೆ, ದೂರದ ಮಕ್ಕಳು ತಾವು ಮನೆಯಿಂದ ತಂದ ದೋಸೆಯನ್ನೋ, ಇಡ್ಲಿಯನ್ನೋ, ಉಪ್ಪಿಟ್ಟನ್ನೋ, ಇಲ್ಲಾ ನಿನ್ನೆ ಮಿಕ್ಕಿ ಉಳಿದ ಅನ್ನದ ಇಂದಿನ ಚಿತ್ರನ್ನವನ್ನೂ ತಿನ್ನುತ್ತಾ ಜಗುಲಿಯಲ್ಲಿ ಕುಳಿತರು.

ಇತ್ತ ಲತಾ ಮೆಡಂ ಅವರು ಬಂದು ಹೆಡ್ ಬಾಯಿಯವರ ಕೋಣೆಯ ಬಾಗಿಲಲ್ಲಿ ನಿಂತು ಹೆಡ್ ಬಾಯಿಯವರಿಗಷ್ಟೇ ಗೊತ್ತಾಗುವ ರೀತಿಯಲ್ಲಿ ಅಡಿಗೆ ರೆಡಿಯಾಗಿದೆ ಎನ್ನುವ ಸನ್ನೆ ಮಾಡಿ ಹೋದೊಡನೆಯೇ, ಹೆಡ್ ಬಾಯಿಯವರು  ಊಟಕ್ಕೆ ಎಲೆ ಹಾಸಿ ರೆಡಿಯಾದರು. ಪಕ್ಕದ ಅಡುಗೆ ಕೋಣೆಯಿಂದ, ಬಿಸಿ, ಬಿಸಿ ಅನ್ನದ ಜೊತೆಗೆ ಗರಂ ಮಸಾಲೆಯಿಂದ ಸ್ವಾದ ಬರಿತ ಕೋಳಿ ಆಸಿ (ಸಾರು) ಲತಾ ಮೆಡಂ ಅವರ ಉಸ್ತುವಾರಿಯಲ್ಲಿ ಹೆಡ್ ಬಾಯಿಯವರ ಕೋಣೆ ಸೇರಿತು. ಉಳಿದ ಮಾಸ್ತರರು, ಅಕ್ಕೋರುಗಳು ಅಡುಗೆ ಕೆಲಸಕ್ಕೆ ನೆರವಾದ ಹುಡುಗರೊಂದಿಗೆ ಹೆಡ್ ಬಾಯಿಯವರ ಕೋಣೆ ಸೇರಿದೊಡನೆಯೇ, ಕೋಣೆಯ ಬಾಗಿಲು ಮುಚ್ಚಿಕೊಂಡಿತು.

ಬಾಗಿಲು ಮುಚ್ಚ ಬಹುದು ಆದರೆ ವಾಸನೆ ಮುಚ್ಚಿಡಲಾದೀತೇ? ಕೋಳಿ ಆಸೆಯ ಗಮಲಿನಲ್ಲಿ ಹೊರಗೆ ಊಟಕ್ಕೆ ಕುಳಿತ ಮಕ್ಕಳಿಗೆ ತಮ್ಮ ಊಟ ಹೊಟ್ಟೆಗೆ ಸೇರಿದ್ದೇ ಗೊತ್ತಾಗಲಿಲ್ಲ. ವಾಸನೆಯ ರುಚಿಯಲ್ಲಿಯೇ ಊಟ ಮುಗಿಸಿದ ಆ ಮಕ್ಕಳ ಜೊತೆ ಮನೆಗೆ ಊಟಕ್ಕೆ ಹೋದ ಮಕ್ಕಳು ಬಂದು ಕೋಣೆ ಸೇರಿದ್ದಾಯ್ತು, ಗಂಟೆ ಎರಡು, ಎರಡುವರೆ ಆಯ್ತು ಹೆಡ್ ಬಾಯಿಯವರ ಕೋಣೆಯ ಬಾಗಿಲು ತೆರಯಲಿಲ್ಲ, ಮಾಸ್ತರರಾರು ಹೊರಬರಲಿಲ್ಲ. ಮಕ್ಕಳಿಗೆ ಯಾರು, ಏಕೆ, ಏನು, ಎತ್ತ  ಎಂದು ಕೇಳುವವರಿಲ್ಲದೇ ಅವರವರ ಲೋಕದಲ್ಲೇ ಕಾಲಕಳೆಯ ತೊಡಗಿದರು.

ಗಂಟೆ ಮೂರು ದಾಟಿತು, ಹೆಡ್ ಬಾಯಿಯವರ ಕೋಣೆಯ ಬಾಗಿಲು ಮೆಲ್ಲಗೆ ತೆರೆದುಕೊಂಡಿತು, ಮಕ್ಕಳೆಲ್ಲ ತಮ್ಮ ಕೋಣೆಯಿಂದಲೇ ಅತ್ತ ಇಣುಕಿ ನೋಡುತಿದ್ದರು. ಅವರು ಇದುವರೆಗೂ ನೋಡದ, ಮಾತನಾಡದ ಮನುಷ್ಯನ ಆಕೃತಿಯೊಂದು ಹೆಡ್ ಬಾಯಿಯವರ ಕೋಣೆಯಿಂದ ಹೊರ ಬಿತ್ತು. ಅದು ಹೊರ ಬಿಳುತ್ತಲೇ ಹೆಡ್ ಬಾಯಿಯವರನ್ನು ಕರೆದು, "ನೋಡಿ ಮೇಡಂ, ನಿಮ್ಮ ವಿನಂತಿಯಂತೆ ಈ ಬಾರಿ ನಾನು ಡಿಡಿಪಿಐ ಅವರಲ್ಲಿ ನಿಮ್ಮ ಶಾಲೆಯ ಅಡುಗೆ ಕೋಣೆಯ ಪಕ್ಕದಲ್ಲೇ ಒಂದು ಊಟದ ಕೋಣೆಯನ್ನು ಕಟ್ಟಿಸಲು ಸಿಪಾರಸು ಮಾಡುತ್ತೇನೆ" ಎಂದು ಹೇಳಿ ತಮ್ಮ ಬೈಕಿನತ್ತ ಹೆಜ್ಜೆ ಹಾಕಿದರು. ಮಕ್ಕಳೆಲ್ಲ " ಹೋ, ಅದೆ, ಅದೆ, ಅಲ್ಲೆ ಹೋತೆ ಇವ್ರ ಅಲಾ, ಅವ್ರೇ ನೋಡ್ರೋ ಸಾಯ್ಬ್ರು" ಎಂದು ಹೊರಡುತ್ತಿರುವ ಸಾಹೇಬರನ್ನು ನೋಡಿ ಕೇಕೆ ಹಾಕಲಾರಂಬಿಸಿದರು. ಸಾಹೇಬರಿಗೆ ಮೊದಲ ಬಾರಿಗೆ ಮುಜುಗರವಾದಂತಾಗಿ ಬೇಗ ಬೇಗನೇ ಹೆಜ್ಜೆಯಿಡತೊಡಗಿದರು. "ಏಯ್ ಏನ್ರಲೇ ಸುಮ್ಕಿರಲೇ" ಎನ್ನುತ್ತಾ ಮಕ್ಕಳನ್ನು ಗಧರಿಸಲು ಮೆಡಂ ಅವರ ಕೋಣೆಯಿಂದ ಹೊರ ಬಿದ್ದರು ಹನುಮಪ್ಪ ಮಾಸ್ತರು, ತಮ್ಮ ತಟ್ಟೆಯಲ್ಲೇ ಕೈತೊಳೆದು.

-ಮಂಜು ಹಿಚ್ಕಡ್

Saturday, December 19, 2015

ಹೊಂಗೆ ಮರದಡಿಯಲ್ಲಿ

ಹೊಂಗೆ ಮರದಡಿಯಲ್ಲಿ, ಜೋಗಿ ಸರ್ ಮತ್ತು ತ್ರಿಕೇ ಬಳಗದ ಜೊತೆ...











Thursday, November 12, 2015

ಆ ಹಬ್ಬ, ಈಗ ಇನ್ನೆಲ್ಲಿ!

ಮನದ ಅಂಗಳದಲಿ
ಕಾಪಿಟ್ಟ ನೆನಪುಗಳ
ಮತಾಪು ಹಚ್ಚಿದಾಗ
ಬಾಲ್ಯದಾಟಗಳು ಮೇಳೈಸುತಿವೆ
ಕತ್ತಲ ಗರ್ಭದಿಂದೋಡುವ
ಬೆಳಕಿನ ಕಿರಣಗಳಂತೆ.

ಗ್ಲಿಜರಿನೆದರು ಸೋತು ಹೆದರಿ
ನೀರು ತುಂಬುವ ಹಂಡೆ
ಅಟ್ಟ(ವೋ ಗುಜರಿಯೋ) ಸೇರಿರುವಾಗ
ನೀರು ತುಂಬುವ ಹಬ್ಬ
ಇಂದು ಇನ್ನೆಲ್ಲಿ.

ಲಕ್ಷ್ಮೀಯ ಆಸೆಗೆ ನಾವೆಲ್ಲ
ಒಡೆದೊಡೆದು ಬಿಂದು ಆಗಿರುವಾಗ
ಸಂತೆಯಂತಯ ಆ ತುಂಬು ಮನೆಯ
ಲಕ್ಷ್ಮೀಯ ಪೂಜೆ ಈಗ ಇನ್ನೆಲ್ಲಿ.

ಮೌವತ್ತು ನಲ್ವತ್ತರ ಸೈಟಲ್ಲಿ
ಮನೆಕಟ್ಟಿ ಮೆರೆವ ಈ ಕಾಲದಲ್ಲಿ
ಬಿಟ್ಟೊಡನೆ ಕೊಟ್ಟಿಗೆಯಿಂದೋಡುವ
ಆ ದನಗಳ ಕೊರಳ
ಗಂಟೆಯ ಆ ನಾಧ ಇನ್ನೆಲ್ಲಿ.

ದೀಪ ಬೆಳಗುವ ಕೈಯಲ್ಲಿ
ರಿಂಗು ಮೊಳಗುವ ಮೊಬೈಲೇ
ಇರುವಾಗ ಆ ಕಾಲದ ಹಬ್ಬ
ಈಗ ಇನ್ನೆಲ್ಲಿ.





ವಾಟ್ಸಪ್, ಪೇಸ್ಬುಕಗಳ
ಸಂದೇಶಗಳ ನಡುವಲ್ಲಿ
ಕರಗಿ ಹೋಗಿರುವ ಹಬ್ಬ
ಅಂದಿನಂತೆ ಇಂದಿಗೆಲ್ಲಿ.
ಆ ಹಬ್ಬ ಈಗ,
ಬರೀ ನೆನಪಿನಲ್ಲಿ.

--ಮಂಜು ಹಿಚ್ಕಡ್

Sunday, November 1, 2015

ಹೊಂಗೆಮರದಡಿಯಲ್ಲಿ ನನ್ನದೊಂದು ಕಥೆ "ಆಸೆ-ನಿರಾಸೆ"

ಹೊಂಗೆಮರದಡಿಯಲ್ಲಿ ನನ್ನದೊಂದು ಕಥೆ "ಆಸೆ-ನಿರಾಸೆ". 3K ಬಳಗಕ್ಕೆ ಹಾಗೂ ನಿರ್ಣಾಯಕರಿಗೆ ಧನ್ಯವಾದಗಳು...


Thursday, October 22, 2015

ಮತ್ತೆ ಬಾರದಿರಲೀ

ನಮ್ಮ ಸೋದರ ಮಾವ ಮನೆ, ಊರು ಬಿಟ್ಟು ಹೊರಟು ಹೋದದ್ದು ನನಗೆ ತಿಳಿದದ್ದು, ಮಾನ ಮನೆ ಬಿಟ್ಟು ಹೋಗಿ ಒಂದುವಾರವಾದ ಮೇಲೆಯೇ, ಅದೂ ಮಾವನೂರಿನ ಕೆಲವರು ಮಾವ ಬೆಂಗಳೂರಿನಲ್ಲಿ ಇರಬಹುದೇನೋ ಎಂದು ಹುಡುಕಿಕೊಂಡು ಬೆಂಗಳೂರಿನ ನನ್ನ ರೂಮಿಗೆ ಬಂದ ಮೇಲೆಯೇ. ಊರಿನಲ್ಲಿ ಯಾರೋ "ಬೆಂಗಳೂರಿಗೆ ಹೋಗಿರಬಹುದೇನೋ ಒಮ್ಮೆ ಅಲ್ಲಿ ಹುಡುಕಿ ನೋಡಿ" ಎಂದು ಹೇಳಿದ್ದನ್ನು ನಂಬಿಕೊಂಡು ಬೆಂಗಳೂರಿಗೆ ಬಂದಿದ್ದರೂ ಪಾಪ. ಪಕ್ಕದ ಮನೆಯಲ್ಲಿ ಇರುವವನು ಯಾರು ಎಂದು ತಿಳಿದುಕೊಳ್ಳಲು ವರ್ಷ ಹಿಡಿಯುವಾಗ, ಈ ವಿಶಾಲವಾದ ಬೆಂಗಳೂರಿನಲ್ಲಿ ಒಂದೆರಡು ವಾರದಹಿಂದೆ ಬಂದು ಸೇರಿಕೊಂಡಿದ್ದರೂ, ಅವನನ್ನು ಹುಡುಕುವುದೆಂದರೇನು ಅಷ್ಟು ಸುಲಭವೇ. ಹಾಗಂತ ಹೇಳಿ ಅವರನ್ನು ಅಷ್ಟಕ್ಕೆ ಕಳಿಸಿಬಿಡಲು ಆದೀತೇ. ಅವರೊಟ್ಟಿಗೆ ನಾನು ಹುಡುಕಬೇಕಾದುದ್ದು, ಅಳಿಯನಾದ ನನ್ನ ಕರ್ತವ್ಯವಲ್ಲವೇ? ಹಾಗಂತ ಹುಡುಕುವುದಾದರೂ ಎಲ್ಲಿ? ನನಗೆ ತಿಳಿದ ಎಲ್ಲರನ್ನೂ ಸಂಪರ್ಕಿಸಿದ್ದಾಯಿತು. ಬೆಂಗಳೂರಿನಲ್ಲಿರುವ ಎಲ್ಲಾ ಸಂಬಂಧಿಕರ ಮನೆಯ ಬಾಗಿಲನ್ನು ತಟ್ಟಿ ಬರಿಗೈಲಿ ವಾಪಸ್ ಬಂದಿದ್ದಾಯ್ತು. ಪೇಸ್ ಬುಕ್ಕಲ್ಲಿ, ವಾಟ್ಸ್ ಅಪನಲ್ಲಿ ಮಾವನ ಪೋಟೋ ಹಾಕಿ, ಸಿಕ್ಕರೆ ತಿಳಿಸಿ ಎಂದು ಸಂದೇಶ ಕಳಿಸಿದ್ದಾಯ್ತು. ಆದರೆ ಮಾವನ ಸುಳಿವು ಸಿಗದಾಯ್ತು.

ಊರಿಂದ ಬಂದವರು ಎಂದ ಮೇಲೆ ಎಲ್ಲಾ ಅವರ ಮೇಲೆ ಬಿಟ್ಟು ಬಿಡಲಾದೀಟೇ. ನಾನು ಒಂದು ವಾರ ರಜೆ ಹಾಕಿ, ಅವರಜೊತೆ ಓಡಾಡಿದ್ದಾಯಿತು. ಅವರ ಊಟ, ತಿಂಡಿ, ಚಹಾಕ್ಕೆ, ಕೊನೆಗೆ ಅವರು ಊರಿಗೆ ಹೊರಡಲು ಬೇಕಾಗುವ ಟಿಕೇಟನ್ನು ನಾನೇ ಹಣ ಕೊಟ್ಟು ತಂದದ್ದು ಆಯ್ತು. ಅವರೆಲ್ಲ ಊರಿಂದ ಬರುವ ಒಂದೆರಡು ದಿನ ಮೊದಲು ಬಂದ ತಿಂಗಳ ಸಂಬಳವೂ ಖಾಲಿಯಾಗುತ್ತಾ ಬಂದಿತ್ತು. ಇನ್ನೂ ಹುಡುಕುವುದರಲ್ಲಿ ನನಗಾಗಲೀ, ಊರಿಂದ ಬಂದವರಿಗಾಗಲೀ ಈಗ ಯಾವ ಊತ್ಸಾಹವಾಗಲೀ, ಆಸಕ್ತಿಯಾಗಲೀ ಇರಲಿಲ್ಲ. "ಎಲ್ಲೋಗ್ತಾನೆ, ತಕಂಡೆ ಹೋದದ್ದ ಖರ್ಚಾದ್ಮೆಲೆ,ಆವ್ನಾಗೇ ಬತ್ಯಾ ಬಿಡಿ" ಎಂದು ತಮ್ಮಷ್ಟಕ್ಕೆ, ತಾವೇ ಸಮಾಧಾನ ಮಾಡಿಕೊಂಡು ಅವರೂ ಊರಿಗೆ ಹೊರಟರು.

ನಾನದೆಷ್ಟೇ ತಲೆ ಕೆಡಿಸಿಕೊಂಡರು, ಮಾವ ಮನೆ ಬಿಟ್ಟು ಹೋದುದ್ದೇಕೆ ಎಂದು ಹೊಳೆಯಲಿಲ್ಲ. ಅವನು ಮನೆ ಬಿಟ್ಟು ಹೋದುದ್ದಾದರೂ ಏಕೆ? ಹೆಂಡತಿಯ ಕಾಟ ಎನ್ನಲು, ಹೆಂಡತಿ ಮಾವನಿಗಿಂತ ತುಸು ಹೆಚ್ಚೇ ಒಳ್ಳೆಯವಳು. ಇನ್ನೂ ಸಾಲ ಸೂಲ? ಅದೇಗೆ ಸಾದ್ಯ, ನಮ್ಮ ಅಜ್ಜ ಬಿಟ್ಟು ಹೋದ ಆಸ್ತಿ ಇದೆಯಲ್ಲ. ಅದು ಅವನು, ಅವನ ಮಕ್ಕಳು ಕುಳಿತು ತಿಂದರೂ ಕರಗದು ಅಷ್ಟಿದೆ. ನನಗೆ ತಿಳಿದ ಮಟ್ಟಿಗೆ ಅವನಿಗಿರುವ ಹುಚ್ಚೆಂದರೆ ಯಕ್ಷಗಾನ. ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಯಕ್ಷಗಾನ ಎಲ್ಲಿದ್ದಿತೋ ಅಲ್ಲಿ ಮಾವನಿರುತ್ತಿದ್ದ. ಅಷ್ಟೇ ಅಲ್ಲಾ, ವರ್ಷಕೊಮ್ಮೆ ಅವರೂರಿನಲ್ಲಿ ವಾರಗಟ್ಟಲೆ ಮೇಳದವರನ್ನು ಕರಿಸಿ ಸ್ವಂತ ಖರ್ಚಿನಲ್ಲಿ ಯಕ್ಷಗಾನ ಸಪ್ತಾಹ, ಅದು ಇದು ಮಾಡಿಸುತ್ತಿದ್ದುದು ಉಂಟು. ಕೇವಲ ಒಂದು ಯಕ್ಷಗಾನದ ಹುಚ್ಚಿನಿಂದಲೇ ಊರು ಬಿಟ್ಟು ಹೋಗಲು ಸಾದ್ಯವೇ?

ಯಾಕೆ ಮನೆ ಬಿಟ್ಟು ಹೋಗಿರಬಹುದು ಎಂದು ಮನೆಗೆ ಬಂದವರನ್ನು ಕೇಳಿದ್ದಾಗ, ಒಬ್ಬಬ್ಬೊರು ಒಂದೊಂದು ರೀತಿಯಲ್ಲಿ ಉತ್ತರ ಕೊಟ್ಟಿದ್ದರು. ನಿಮ್ಮ ಮಾವ ತಾನು ಮಾಡಿದ ತಪ್ಪಿನಿಂದಲೇ ಊರು ಬಿಟ್ಟ ಎಂದು ಒಬ್ಬ. ಯಕ್ಷಗಾನ, ಯಕ್ಷಗಾನ ಎಂದು ಊರು ಸುತ್ತುತ್ತಾ ವಾರಗಟ್ಟಲೇ ಮನೆಗೆ ಹೋಗುತ್ತಿರಲಿಲ್ಲವಂತೆ. ಯಕ್ಷಗಾನದ ಜೊತೆಗೆ ಇಸ್ಪೀಟಿನ ಚಟವು ಇದೆಯಂತೆ. ಕೆಲಸ ಮಾಡದೇ ಬರೀ ಚಟದಿಂದಲೇ ಜೀವನ ಸಾಗೀತೇ ಹೇಗೆ. ಒಬ್ಬೊಬ್ಬರು ಒಂದೊಂದು ರೀತಿಯ ಕಾರಣಗಳನ್ನು ನೀಡಿದ್ದೂ ಆಯ್ತು. ಕಾರಣಗಳು ಬೇರೆ ಬೇರೆ ಎನಿಸಿದರೂ, ಒಂದಕ್ಕೊಂದು ಸಂಭಂಧವಿದ್ದ ಹಾಗೆ ಎನಿಸಿತು. ಆದರೆ ಚಿಕ್ಕಂದಿನಿಂದ, ಇತ್ತೀಚೆಗೆ ಐದಾರು ವರ್ಷಗಳ ಕೆಳಗೆ ಮಾವನನ್ನು ನೋಡಿದ ನನಗೆ ಮಾವನಿಗೆ ಅಷ್ಟೊಂದು ಚಟವಿರಲಿಕ್ಕಿಲ್ಲ ಎನಿಸಿತು. ಅವರೆಲ್ಲಾ ಒಂದೊಂದು ಕಾರಣ ಹೇಳುವುದನ್ನು ಕೇಳಿ ಇದ್ದರೂ ಇರಬಹುದೇನೋ ಅನಿಸಿ ಮನಸ್ಸು ಗೊಂದಲಕ್ಕಿಡಾಯಿತು.

ಅವರೆಲ್ಲ ಊರಿಗೆ ಹೋದ ಮೇಲೆ ಮನೆಗೆ ಕರೆ ಮಾಡಿ ಅಮ್ಮನಿಗೆ ಕೇಳಿದೆ. ಅಮ್ಮ "ದುಡಿದೇ, ಅಪ್ಪಾ ಮಾಡಿಟ್ಟ ಆಸ್ತಿಯೆಲ್ಲಾ ಚಟಕ್ಕೆ ಹಾಳ್ ಮಾಡ್ ಬಿಟ್ಟ. ಕಡಿಗೆ ಹೆಂಡತಿ ತಾಳಿನೂ ಅಡ ಇಟ್ಟ, ಓಡಿ ಹೋಗಿನ ಕಡಾ ನಮ್ಮಣ್ಣ. ಪಾಪ ಅವ್ಳ ಆದದಕ್ಕೆ ಇಟ್ಟ ದಿನ ಆವ್ನಾ ಸಹಿಸಕಂಡಿದ ಪಾಪ. ಆವ್ನನೇನೋ ಊರ ಬಿಟ್ಟ ಹೋದ, ಆದ್ರೆ ಆವ್ನ ಹೆಂಡತಿ, ಮಕ್ಳ ಗತಿ ಏನ್?" ಎಂದು ಹೇಳಿ ಅತ್ತಾಗ ನನ್ನ ಕಣ್ಣಂಚಿನಲ್ಲೂ ನೀರು ಜಿನುಗದಿರಲಿಲ್ಲ.
-------- + --------- + ----------- + ----------
ಮಾವ ಊರು ಬಿಟ್ಟು ಹೋಗಿ ಆಗಲೇ ಒಂದೆರಡು ತಿಂಗಳು ಕಳೆದು ಹೋಗಿದ್ದವು. ಆಗಲೇ ಒಂದೆರಡು ತಿಂಗಳು ಕಳೆದು ಹೋದದ್ದರಿಂದಲೋ ಏನೋ, ನನಗೂ ಮಾವನ ನೆನೆಪು ಅಷ್ಟಾಗಿ ಕಾಡುತ್ತಿರಲಿಲ್ಲ. ನಮ್ಮ ಮನೆಯವರೂ ಅವನ ವಿಷಯವನ್ನು ಬಹುತೇಕ ಮರೆತಿದ್ದರೂ. ನಾನು ಊರಿಗೆ ಹೋಗದೇ ಬಹಳ ದಿನಗಳಾದುದರಿಂದ, ಒಮ್ಮೆ ಊರಿಗೆ ಹೋಗಿ ಬರುವ ಮನಸ್ಸಾಗಿ ಊರಿಗೆ ಹೊರಟೆ. ಊರಿಗೆ ಹೋದವನು ಒಮ್ಮೆ ಅತ್ತೆಯನ್ನು ಅವಳ ಮಕ್ಕಳನ್ನು ಮಾತನಾಡಿಸಿಕೊಂಡು ಬರೋಣವೆಂದು ಅವರ ಮನೆಯತ್ತ ಹೊರಟೆ.

ನಾನು ಅವರ ಮನೆಯ ಅಂಗಳ ತಲುಪಿದಾಗ ಅತ್ತೆ ಮನೆಯ ಪ್ರಾಂಗಣದಲ್ಲಿ ಹೊಲಿಗೆಯಂತ್ರದ ಮೇಲೆ ಕುಳಿತು ಬಟ್ಟೆ ಹೊಲೆಯುತ್ತಿದ್ದಳು. ನಾನು ಬರುವುದನ್ನು ನೋಡಿ "ಏನ್ ರಮೇಶಾ, ಅಪ್ರೂಪಾ ಆಗ್ಬಿಟ್ಟಿ, ಯಾವಾಗ ಬಂದೆ? ಬಾ ಬಾ " ಎಂದು ಕರೆದರು.    
                                                                                                                                                                                                                                                                         ಅತ್ತೆ ನನನ್ನು ಕರೆದದ್ದನ್ನು ಕೇಳಿ ಒಳಗೆ ಓದುತ್ತಾ ಕುಳಿತ ಮಕ್ಕಳು "ರಮೇಶ ಭಾವ, ರಮೇಶ ಭಾವ" ಎನ್ನುತ್ತಾ ಹೊರಕ್ಕೆ ಓಡಿ ಬಂದು, ನನ್ನ ಕೈ ಎಳೆದುಕೊಂಡು ಒಳಗೆ ಹೊರಟರು.

ಒಳಗೆ ಅಡಿಯಿಡುವಾಗ ಅತ್ತೆಯ ಕತ್ತು ಅಕಸ್ಮಾತ್ ಆಗಿ ಕಣ್ಣಿಗೆ ಬಿದ್ದು, ಅತೆಯ ಕತ್ತಿನಲ್ಲಿ ಚಿನ್ನದ ಮಂಗಳ ಸೂತ್ರದ ಬದಲಿಗೆ, ನೂಲಿನಲ್ಲಿ ಪೋಣಿಸಿದ ಕರಿಮಣಿ ದಾರ ಕಣ್ಣಿಗೆ ಬಿದ್ದು, ಅಮ್ಮ ಹೇಳಿದ್ದು ನೆನಪಾಯ್ತು. ಅಂತೂ ಮಾವ ಏನೋ ಮಾಡಿ, ಗುಲ್ಲೆಬ್ಬಿಸಿ ಹೊರಡಿದ್ದಂತೂ ನಿಜವೆನಿಸಿತು.

"ಇಟ್ಟ ವರ್ಷ ಆಯ್ತು ನಿನ್ನ ನೋಡ್ದೆ, ಬಾ ಕುತ್ಕಾ. ಚಾ ಮಾಡ್ಕಂಡೆ ಬತ್ತಿ ಕುಳ್ಳ"ಎಂದು ಅತ್ತೆ ಅಡಿಗೆ ಕೋಣೆಗೆ ಹೊರಟಳು. ನಾನು ಬರುವಾಗ ದಾರಿಯಲ್ಲಿ ಸಿಗುವ ಸಂದೀಪ ಶೆಟ್ಟಿಯ ಅಂಗಡಿಯಿಂದ ತಂದ, ಚೊಕಲೇಟು, ಬಿಸ್ಕೇಟುಗಳನ್ನು ಮಕ್ಕಳಿಗೆ ಕೊಟ್ಟು ಆಡಲು ಕಳಿಸಿ, ಸುಮ್ಮನೆ ಪ್ರಾಂಗಣದಲ್ಲಿ ಕುಳಿತು, ಪ್ರಾಂಗಣದಿಂದ ಕಾಣುವ ತೋಟ, ಗದ್ದೆಗಳನ್ನು ನೋಡುತ್ತಾ ಕುಳಿತೆ.

ನಾನು ಚಿಕ್ಕಂದಿನಿಂದ ನೋಡಿದ, ಆಡಿದ ತೋಟ ಅಂದಿನಂತಿರಲಿಲ್ಲ. ದೊಡ್ಡ ದೊಡ್ಡ ತೆಂಗಿನ ಮರಗಳೆಲ್ಲಾ ಕಾಯಿಗಳಿಲ್ಲದೇ ಒಣಗಿ ನಿಂತಿದ್ದವು. ಅಂದು ಕಣ್ತುಂಬಾ ಕಾಣುವ ಅಡಿಕೆ ಮರಗಳಲ್ಲಿ, ಅಲ್ಲೊಂದು, ಇಲ್ಲೊಂದು ತಪ್ಪಿ ಉಳಿದಂತೆ ಕಾಣುತಿದ್ದವು. ದಟ್ಟವಾದ ತೋಟದ ಕಾರಣ ಮುಂದೆ ಕಾಣದಿದ್ದ ಗದ್ದೆಗಳನ್ನು ಈಗ ಮನೆಯಿಂದಲೇ ಕುಳಿತು ನೋಡಬಹುದಿತ್ತು. ನೀರು ಹಾಯಿಸಲು ಅಜ್ಜ ಮಾಡಿದ್ದ ದೊಡ್ಡ ದೊಡ್ಡ ತೋಡುಗಳು, ಒಡೆದು ಮಣ್ಣಾಗಿ ಮರದ ಬುಡ ಸೇರಿದ್ದವು. ಅವೆಲ್ಲವು ಒಂದೊಂದಾಗಿ ಮಾವ ಏಕೆ ಮನೆ ಬಿಟ್ಟು ಹೋಗಿರಬೇಕು ಎನ್ನುವುದನ್ನು ಗೌಪ್ಯವಾಗಿ ಸೂಚಿಸುತ್ತಿದ್ದವು.

ಹಾಗೆ ನೋಡುತ್ತಾ ಕುಳಿತಿದ್ದವನಿಗೆ ಅತ್ತೆ ಚಾ ಮಾಡಿಕೊಂಡ ಬಂದದ್ದು ತಿಳಿದದ್ದು "ತಕಾ, ಚಾ ಕುಡಿ, ಅಲ್ಲೆ ನೋಡುಕೆ ಏನು ಇಡ್ಲಾ" ಎಂದು ಹೇಳಿದಾಗಲೇ.

ಅತ್ತೆ ಚಾ ಕೊಟ್ಟು ನನ್ನ ಎದುರಿನ ಕುರ್ಚಿಯ ಮೇಲೆ ಕುಳಿತಳು. ನಾನು ಅತ್ತೆ ಕೊಟ್ಟ ಚಾ ಕುಡಿಯುತ್ತಾ ಏನು ಮಾತನಾಡನೇಕೆಂದು ತಿಳಿಯದೇ ಸುಮ್ಮನೆ ಕುಳಿತೆ. ಸ್ವಲ್ಪ ಹೊತ್ತಿನಲ್ಲಿ ಅತ್ತೆಯೇ ಮಾತಿಗೆಳೆದಳು.
" ಏನ್ ಅಮ್ಮಾ ಆರಾಂ ಇದೆ? ಅಪ್ಪಾ?"
"ಎಲ್ಲಾರೂ ಆರಂ ಇವ್ರ ಅತ್ತೆ"
"ಹೌದೆ, ನೀ ಯಾವಾಗ ಬಂದೆ? ಏನ್ ಅಪರೂಪ ಆಗ್ಬಿಟ್ಟೆ, ನಿನ್ನ ನೋಡ್ದೆ ಐದಾರು ವರ್ಷ ಆಯ್ತೋ ಏನೋ?"

"ನಾ ಬಂದೆ ಮೂರ್ನಾಲ್ಕ ದಿನ ಆಯ್ತ. ಈ ಆಯ್ತಾರೆ ಹೋಗ್ಬೇಕ್. ಕೆಲ್ಸಾ ಬಾಳ್ ಆತೀದ್ ಹಾಂಗಾಕಂಡೆ ಬರುಕೇ ಆಗುಲಾ, ಏಗೆ ಬಂದವಾ, ಹಂಗೆ ಮಾತಾಡ್ಡಕಂಡೆ ಹೋಗ್ವಾ ಅಂದೆ ಬಂದೆ."

"ನೋಡುಕೆ ಏನು ಇಡ್ಲಾ, ನಿಮ್ಮ ಮಾವಾ" ಎಂದು ಮತ್ತೆ ಅಳಲು ಸುರು ಹಚ್ಚಿಕೊಂಡರು ಅತ್ತೆ,

"ಏಗೆ ಏನ್ಮಾಡುಕೆ ಆತೀದ್ ಅತ್ತೆ? ಆದ್ರೂ ಮಾವಾ ಹಂಗೆ ಮಾಡುಕೆ ಇಲ್ಲಾಗತ" ಎಂದು ನನ್ನದೇ ಆದ ರೀತಿಯಲ್ಲಿ ಸಮಾಧಾನ ಪಡಿಸಲು ಪ್ರಯತ್ನಿಸಿದೆ.

"ಮಾಡುಕೆ ಇನ್ನೇನು ಇಲ್ಲಾ ಅಂದೇ ಹೋಗಿರ್ ಬೇಕ್" ಎಂದಳು.

"ಹಂಗಲಾ ಅತ್ತೆ, ಮನೆ ಬಿಟ್ಟೋಗುವಂತದ ಏನಾಗತ" ಎಂದಾಗ, ಅತ್ತೆ.

"ಅಂತೂ ಏಗಾದ್ರೂ ಬುದ್ದಿ ಬಂತಲ್ಲ" ಎಂದಳು.

ಅವಳು ಹಾಗೆ ಹೇಳುವಾಗ ಅವಳೆಷ್ಟು ನೊಂದಿರಬಹುದೆನಿಸಿತು. ಮಾವ ಬಿಟ್ಟು ಹೋದ ಕಾರಣ ತಿಳಿಯುವ ಮನಸ್ಸಾಗಿ ಮತ್ತೆ ಅತ್ತೆಯನ್ನು "ಮಾವ ಮನೆ ಬಿಟ್ಟು ಹೋದದ್ ಯಾಕೆ? ಎಲ್ಲಾರ್ದೂ ಮರ್ಯಾದಿ ಕಳಿಯುಕೆ ಅಲ್ಲಾ" ಅಂದೆ.

"ಮರ್ಯಾದಿ ಕಳುಕೆ ಮರ್ಯಾದಿ ಏನ್ ತುಂಬೇ ಇತ್ತೆ ತಮ್ಮಾ ನಿಮ್ಮ ಮಾವಂಗೆ. ಅವ್ರ ಮರ್ಯಾದಿ ಕಳ್ಳಂಡೆ ಅಲ್ಲಾ ಓಡ್ ಹೋದದ್"

"ಅಂದ್ರೆ, ಅರ್ಥಾ ಆಗಲ್ಲಾ ಅತ್ತೆ" ಎಂದೆ.

"ನೀ ಇಂದೆ ಇಲ್ಲೇ ಇರ್, ಊಟ ಮಾಡ್ಕಂಡೆ ನಾಳಗೆ ಹೋಗಕ. ನಿಂಗೆ ಅವ್ರ ಬಗ್ಗೆ ಏನೂ ಗುತ್ತಿಲ್ಲಾ ಅಲ್ಲಾ, ನಾ ಎಲ್ಲಾ ಹೇಳ್ತಿ" ಎಂದು ಅತ್ತೆ ಹೇಳಿದಾಗ ಬಂದು ಹಾಗೆ ಹೋಗಬೇಕು ಎಂದು ಬಂದವನಿಗೆ ಹಾಗೆ ಬಿಟ್ಟು ಬರಲು ಮನಸ್ಸಾಗಲಿಲ್ಲ.
---------- + --------- + ---------- + -------------- + -----------
ರಾತ್ರಿ ಊಟವಾದ ಮೇಲೆ ಅತ್ತೆ ಒಂದೊಂದಾಗಿ  ಮಾವನ ಗುಣಗಳನ್ನು ಬಣ್ಣಿಸತೊಡಗಿದಳು. ನಾನು ತಿಳಿದ ಹಾಗೆ ಮಾವ ಗುಣದಲ್ಲಿ ಒಳ್ಳೆಯವನೇ, ಆದರೆ ಅವನ ಹವ್ಯಾಸಗಳೇ, ಚಟಗಳಾಗಿ ಅವನನ್ನು ಹಾಳು ಮಾಡಿ ಬಿಟ್ಟಿದ್ದವು. ಯಕ್ಷಗಾನದ ಹುಚ್ಚಿನಿಂದಾಗಿ ಮಾವ ಊರೂರು ಅಲೆಯತೊಡಗಿದ. ರಾತ್ರಿ ಯಕ್ಷಗಾನದ ನಿದ್ದೆ ತಪ್ಪಿಸಲು ಇಸ್ಪೀಟು ಆಡುವುದನ್ನು ಕಲಿತ. ಮೊದ ಮೊದಲು ಹೀಗೆ ಇಸ್ಪೀಟು ಆಡುತ್ತಿದ್ದವನು, ಆಮೇಲೆ ಗೆಳೆಯರ ಒತ್ತಾಯಕ್ಕೆ ಹಣವಿಟ್ಟು ಆಡಲು ಪ್ರಾರಂಭಿಸಿದ. ಹವ್ಯಾಸ ಕ್ರಮೇಣ ಚಟವಾಗಿ ಬೆಳೆಯತೊಡಗಿತು. ಚಟ ಅಷ್ಟಕ್ಕೆ ನಿಲ್ಲಲಿಲ್ಲ. ಮುಂದೆ ಕ್ರಿಕೆಟ್, ಬೆಟ್ಟಿಂಗ್ ಚಟ ಕೂಡ ಅಂಟಿಸಿಕೊಂಡ. ಆ ಚಟದಿಂದಾಗಿ ಮಾವ ದಿನೇ ದಿನೇ ಒಂದೊಂದೇ ವಸ್ತುವನ್ನು ಕಳೆದು ಕೊಳ್ಳತೊಡಗಿದವು. ಮೊದಲು ಚಟಕ್ಕೆ ಬಲಿಯಾದುದ್ದು ಅಜ್ಜ ಕೂಡಿಟ್ಟ ಹಣ. ಆಮೇಲೆ ಹೆಂಡತಿಯ ಒಡವೆ, ಕ್ರಮೇಣ ತೋಟದ ಮೇಲಿನ ಗದ್ದೆ, ಕೆಳಗಿನ ಗದ್ದೆಗಳು ಬಲಿಯಾದವು. ಹೀಗೆ ಅಜ್ಜ ಮಾಡಿಟ್ಟ ಆಸ್ತಿ ಕ್ರಮೇಣ ಕರಗತೊಡಗಿತು. ಕೊನೆಗೆ ಉಳಿದದ್ದೆಂದರೆ ಉಳಿದುಕೊಂಡ ಮನೆ ಹಾಗೂ ಅದಿರುವ ಹತ್ತು ಗುಂಟೆಯ ಜಾಗ ಮಾತ್ರ. ಅದೇಗೆ ಅದೊಂದು ತಪ್ಪಿ ಉಳಿಯಿತೆನ್ನುವುದೇ ಆಶ್ಚರ್ಯ. ಒಳ್ಳೆಯ ಮನೆತನದಿಂದ ಬಂದ ಅತ್ತೆ ಅವನ ಚಟಕ್ಕೆ ಸೋತು ಸುಮ್ಮನೆ ಕೂರಬೇಕಾಯಿತು. ಗಂಡನನ್ನು ನಂಬಿ ಕುಳಿತರೆ ಕಷ್ಟವೆಂದು ತಿಳಿದು ಹೋಲಿಗೆ ಕಲಿತು, ಹೋಲಿಗೆಯಂತ್ರ ಇಟ್ಟುಕೊಂಡು ತಾನೇ ದುಡಿದು ಮಕ್ಕಳನ್ನು ಓದಿಸತೊಡಗಿದಳು.

ಓಡಿ ಹೋಗುವ ಮೊದಲು ಹೆಂಡತಿ ಕಷ್ಟ ಪಟ್ಟು ದುಡಿದು ಮಕ್ಕಳ ಹೆಸರಲ್ಲಿ ಕೂಡಿಟ್ಟ ಹಣವನ್ನು ಬರಿದು ಮಾಡಿ ಹೊರಟು ಹೋಗಿದ್ದ. ಇಷ್ಟೆಲ್ಲವನ್ನು ಹೇಳಿ ಮುಗಿಸಿದ ಅತ್ತೆ ಒಮ್ಮೇಲೆ ಅಳತೊಡಗಿದಳು. ಅವಳ ಕಣ್ಣಿನಿಂದ ಉದುರುತಿದ್ದ ಒಂದೊಂದು ಹನಿಗಳು ಅವಳು ಮಾವನಿಂದಾಗಿ ಅನುಭವಿಸಿದ ಕಷ್ಟಗಳನ್ನು ಸೂಚಿಸುತ್ತಿದ್ದವು. ನಾನು ಅದೆಷ್ಟೇ ಧೈರ್ಯ ಹೇಳಿದರೂ ಅವಳನ್ನು ಸಮಧಾನ ಪಡಿಸಲಾಗಲಿಲ್ಲ.

ಅಂತೂ ಆದಿನ ಕಳೆದು ಮಾರನೆ ದಿನ ಬೆಳಿಗ್ಗೆ ಚಹಾ ಕುಡಿದು ಅಲ್ಲಿಂದ ಹೊರಟುನಿಂತೆ. ನಾನು ಹೊರಡುವಾಗ ಅತ್ತೆ "ಆಗಾಗ ಬತ್ತೇ ಇರ್" ಎಂದು ಹೇಳಿದಾಗ, "ಆಯ್ತು ಅತ್ತೆ, ಮುದ್ದಾಂ" ಎಂದು ಹೇಳಿ ಹೊರಗೆ ಬಂದೆ.

ನಾನು ಇನ್ನೇನು ಅಂಗಳಕ್ಕೆ ಬಂದು, ದಣಪೆಯ ಹತ್ತಿರ ಹತ್ತಿರ ಬಂದಿರಬೇಕು. ಅತ್ತೆ ನನ್ನ ಬಳಿ ಬಂದು "ನಿನ್ನ ಹತ್ತಿರ ಉಂದ ಮಾತ್ " ಎಂದಾಗ ನಾ "ಹೇಳ ಅತ್ತೆ" ಎಂದು ನಿಂತೆ,

"ಏನಿಲ್ಲ ದಯವಿಟ್ಟೆ ನಿಮ್ಮ ಮಾವನನ್ನು ಹುಡುಕ್ಸು ಪ್ರಯತ್ನ ಮಾತ್ರ ಮಾಡ್ಬೇಡ್. ಅವ್ರು ಏಗೆ ಬಿಟ್ಟೋಗು ಬದಲು ಮುದ್ಲೆ ಬಿಟ್ಟೋಗಿದ್ರೆ ಸ್ವಲ್ಪನಾದ್ರೂ ಉಳಿತತ್. ಏಗಾದ್ರೂ ಮನಿ-ಜಾಗ ಇದೆ. ಏಗೆ ಮತ್ತೆ ವಾಪದ್ ಬಂದ್ರೆ ಇದ್ದ ಮನಿನೂ ಇರುಲಾ, ಅದ್ಕೆ ಹೇಳ್ದೆ" ಎಂದಾಗ ಅವಳ ಮಾತಿನಲ್ಲಿ ತಪ್ಪಿಲ್ಲವೆನಿಸಿ "ಆಯ್ತು ಅತ್ತೆ" ಎಂದಷ್ಟೇ ಹೇಳಿ ಅಲ್ಲಿಂದ ಹೊರಟು ಬಂದೆ.                

-ಮಂಜು ಹಿಚ್ಕಡ್

Tuesday, October 6, 2015

ಮರೆಯಲಾಗದ ಬಾಲ್ಯದ ಮಳೆಗಾಲದ ನೆನಪುಗಳು

ಒಮ್ಮೆ ಮಳೆಗಾಲ ಶುರುವಾಗಿ ಮಣ್ಣಿನ ಗಮಲು ಮೂಗಿಗೆ ಬಡಿಯಿತೆಂದರೆ ತಕ್ಷಣ ನೆನಪಾಗುವುದು ನಮ್ಮ ಕಡೆಯ ಮಳೆಗಾಲದ್ದು. ನಮ್ಮ ಕಡೆ ಮಳೆಗಾಲ ಶುರುವಾದರೆ ಸಾಕು, ಮನೆಯ ಹೊರಗಡೆ ನೀರು ನಿಲ್ಲದ, ನೀರು ಕಾಣದ ಸ್ಥಳಗಳು ಸಿಗುವುದು ಕಡಿಮೆ. ಅಂತ ನಿಂತ ನೀರಲ್ಲಿ ಆಡುವುದೆಂದರೆ  ಯಾವ ಮಕ್ಕಳಿಗೆ ಇಷ್ಟವಾಗುವುದಿಲ್ಲ ಹೇಳಿ. ನೀರಲ್ಲಿ ಆಟವಾಡುವುದೆಂದರೆ ದೊಡ್ಡವರಿಗೆ ಇಷ್ಟವಾಗುವಾಗ ಮಕ್ಕಳಿಗೆ ಇಷ್ಟವಾಗದಿರುತದೆಯೇ? ನಾವು ಕೂಡ ಚಿಕ್ಕವರಾಗಿರುವಾಗ, ಇತರೆ ಮಕ್ಕಳಂತೆ ನೀರಲ್ಲಿ ಆಟವಡಿಯೇ ಬೆಳೆದವರೇ, ಹಾಗೆ ನೆನೆಪಿರುವ ಒಂದಿಷ್ಟು ಘಟನೆಗಳನ್ನು ಇಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸುತ್ತೇನೆ.

ನಮ್ಮ ಊರಲ್ಲಿ ಮಳೆ ಬಂತೆಂದರೆ, ನಮ್ಮ ಮನೆಯ ಸುತ್ತ ಮುತ್ತಲೆಲ್ಲ ಒರತೆಗಳು ಹುಟ್ಟಿಕೊಂಡು, ಭೂಮಿಯಿಂದ ನೀರು ಜಿನುಗಲು ಪ್ರಾರಂಭವಾಗುತ್ತದೆ. ಆ ಒರತೆಯಿಂದ ಹರೀವ ನೀರು ಹರಿದು ಗದ್ದೆ ಸೇರುವ ಸಲುವಾಗಿಯೇ ನಮ್ಮ ಮನೆಯ ಪಕ್ಕದಲ್ಲಿ ಚಿಕ್ಕ ಕಾಲುವೆ ಇದೆ. ಮಳೆ ನಿಂತು ಹತ್ತು-ಹದಿನೈದು ದಿನ ಕಳೆದರೂ ಆ ಕಾಲುವೆಯಲ್ಲಿ ಹರಿವ ನೀರು ನಿಲ್ಲುತ್ತಿರಲಿಲ್ಲ. ಹಾಗೆ ಹರಿವ ನೀರಿನಲ್ಲಿ ದಿನ ನಿತ್ಯ ಆಡಿ ಕಾಲು ಹುಣ್ಣಾಗಿ ಮನೆಯಲ್ಲಿ ದೊಡ್ಡವರಿಂದ ಬೈಸಿಕೊಂಡರೂ ನಾವು ಆಟವಾಡುವದನ್ನು ನಿಲ್ಲಿಸುತ್ತಿರಲಿಲ್ಲ. ಒರತೆಗಳು ಜಿನುಗುವ ಜಾಗದಲ್ಲಿ ಕೋಲು ದೂಡಿ ಆ ಒರತೆಗಳನ್ನು ದೊಡ್ಡದಾಗಿ ಮಾಡುವುದು, ಹರಿವ ನೀರಿಗೆ ಒಡ್ದು ಕಟ್ಟಿ ನಿಲ್ಲಿಸುವ ವಿಫಲ ಪ್ರಯತ್ನ ಮಾಡುವುದು, ಆ ಹರಿವ ನೀರಲ್ಲಿ ಈ ಕಡೆಯಿಂದ ಆ ಕಡೆ ನೀರು ಎರೆಚಾಡುತ್ತಾ ಓಡಾಡುವುದು ಹೀಗೆ ಒಂದೇ, ಎರಡೇ. ಹಾಗೆ ನೀರಲ್ಲಿಯೇ ಇದ್ದು ಬಿಡುತ್ತಿದ್ದೆವು.

ಇನ್ನು ಶಾಲೆಗೆ ಹೋದರೂ ಅಷ್ಟೇ, ಎಲ್ಲೆಲ್ಲಿ ನೀರು ಹರಿಯುತ್ತೆ, ಅಲ್ಲಿ ಹೋಗಿ ನೀರು ನಿಲ್ಲಿಸಿ, ಆ ನೀರು ಒಂದೆ ಕಡೆ ಹರಿದು ಹೋಗುವಂತೆ ಬಿಟ್ಟು, ಎತ್ತರದಿಂದ ಆ ನೀರು ಬೀಳುವ ಸ್ಥಳದಲ್ಲಿ ಮಾವಿನ ಎಲೆಯನ್ನೋ, ಹಲಸಿನ ಎಲೆಯನ್ನೋ ಇಟ್ಟು ನೀರು ಜಲಪಾತದಂತೆ ಬಿಡುವುದು. ಶಾಲೆಯಿಂದ ಮನೆಗೆ ಬರುವಾಗ ರಸ್ಥೆಯ ಇಕ್ಕೆಲಗಳಲ್ಲಿ ಹರಿಯುವ ಕಾಲುವೆಗಳಲ್ಲಿ ಕಾಗದದ ದೋಣೆ ಬಿಡುವುದು, ನೀರಿನಲ್ಲಿ ಈಜಾಡುವ ಮೀನಿನ ಮರಿಗಳನ್ನು ಹಿಡಿಯುವ ವ್ಯರ್ಥ ಪ್ರಯತ್ನ ಮಾಡುವುದು, ಒಮ್ಮೊಮ್ಮೆ ಕೊಡೆ ಇದ್ದರೂ ಸುಮ್ಮನೆ ಕೊಡೆ ಮಡಿಚಿ ನೆನೆಯುತ್ತಾ ಬರುವುದು.

ಹಾಗೆಯೇ ಆಗಾಗ ನೆನಪಾಗುವ ಇನ್ನೊಂದು ಸಂಗತಿಯೆಂದರೆ ನಮ್ಮ ಮನೆಯಿಂದ ಅಣತಿ ದೂರದಲ್ಲಿರುವ ಪಕ್ಕದ ಮನೆಯವರ ಜಾಗದಲ್ಲಿ ಬೇಸಿಗೆಯಲ್ಲಿ ಯಾವುದೋ ಕಟ್ಟಡ ಕಟ್ಟುವುದಕ್ಕಾಗಿ ಚಿಕ್ಕದಾದ ಹೊಂಡ(ಗುಳಿ) ತೋಡಿದ್ದರೂ. ಅದು ಚಿಕ್ಕದೆಂದರೂ ೩ ಅಡಿ ಆಳವಿದ್ದು, ೪-೫ ಅಡಿ ಉದ್ದಗಲವಿತ್ತು. ಯಾವುದೋ ಕಾರಣದಿಂದ ಕಟ್ಟಡ ಕಟ್ಟದೇ ಖಾಲಿ ಬಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಂಡಿತ್ತು. ನಾವಾಗ ೭-೮ ವರ್ಷದ ಮಕ್ಕಳು. ಈಜು ಕೂಡ ಬರುತ್ತಿರಲಿಲ್ಲ. ಆಗ ನಮಗೆ ಆ ನೀರು ತುಂಬಿದ ಹೊಂಡವೇ ಈಜು ಕೊಳ. ಶಾಲೆ ಬಿಟ್ಟು ಬಂದೊಡನೆ ಒಮ್ಮೆ ಹೋಗಿ ಅದರಲ್ಲಿ ಬಿದ್ದು ಎದ್ದು ಬಂದಿಲ್ಲ ಎಂದರೆ ತಿಂದ ಅನ್ನ ಮೈಗೆ ಒಗ್ಗುತ್ತಿರಲಿಲ್ಲ. ಶನಿವಾರ, ಭಾನುವಾರಗಳಲ್ಲಂತು ಬೆಳಿಗ್ಗೆಯಿಂದ ಸಂಜೆಯವೆರೆಗೂ ಅಲ್ಲೇ.

ನಮ್ಮ ನೀರಾಟ ಇಷ್ಟಕ್ಕೇ ನಿಲ್ಲಲಿಲ್ಲ. ಮುಂದೆ ಈಜು ಕಲಿತ ಮೇಲೆ, ಮಳೆಗಾಲದಲ್ಲಿ ಕೆರೆ, ಭಾವಿಗಳಲ್ಲಿ ಈಜಾಡುತ್ತಾ ಕಾಲಕಳೆದೆವು. ಕಾಲೇಜು ಮುಗಿದು ಹೆಚ್ಚಿನ ಓದಿಗೆ ದಾರವಾಡದ ಮಡಿಲು ಸೇರಿದ ಮೇಲೆ ಇದು ನಿಂತು ಬಿಟ್ಟಿತು.

ಆಗ ಅದೇಷ್ಟೇ ಮಳೆಯಲ್ಲಿ ನೆನೆದರೂ, ನೀರಲ್ಲಿ ಆಟವಾಡಿದರೂ ನೆಗಡಿ ಜ್ವರ ಬರುತಿದ್ದುದು ಕಡಿಮೆಯೇ. ಚಿಕ್ಕವರಿರುವಾಗ ವರ್ಷಕ್ಕೊಂದೆರಡು ಸಾರಿ ನೆಗಡಿ, ವರ್ಷಕೊಮ್ಮೆ ಜ್ವರ ಬರುವುದು ಬಿಟ್ಟರೆ, ಅಂತಹ ಕಾಯಿಲೆ ಕಸಾಲೆಗಳು ಬರುತಿರಲಿಲ್ಲ. ಆದರೆ ಈಗ ಒಮ್ಮೆ ಬೆಂಗಳೂರಿನ ಹನಿ ಮಳೆಯಲ್ಲಿ ಸ್ವಲ್ಪನೆನೆದರೂ ಸಾಕು, ನೆಗಡಿಯಾಗಿ ಮಳೆ ನೀರಿಗಿಂತ ಜಾಸ್ತಿ ನೀರು ಮೂಗಿನಿಂದಲೇ ಇಳಿಯುತ್ತದೆ. ಅದಕ್ಕೆ ಬಹುಶಃ ಇಲ್ಲಿಯ ವಾತಾವರಣದ ಪ್ರಭಾವವೂ ಇರಬಹುದೇನೋ. ಅದೇನೇ ಇರಲಿ ನಿಸರ್ಗದ ಮಡಿಲಲ್ಲಿ ಹುಟ್ಟಿ ಬೆಳೆದು ಅಸ್ವಾಧಿಸುವ ಆ ಮಳೆಗಾಲಕ್ಕೂ, ಕಾಂಕ್ರೆಟ್ ಕಾಡುಗಳ ನಡುವಲ್ಲಿ ಹುಟ್ಟಿ ಬೆಳೆದು ಅಸ್ವಾಧಿಸುವ ಮಳೆಗಾಲಕ್ಕೂ ಅಜಗಜಾಂತರ ವ್ಯತ್ಯಾಸ.

-ಮಂಜು ಹಿಚ್ಕಡ್

Wednesday, September 9, 2015

ಆ ರಾತ್ರಿ

ಬೆಳಿಗ್ಗೆಯಿಂದ ಎಡೆಬಿಡದೇ ಸುರಿಯುತಿದ್ದ ಶ್ರಾವಣದ ಮಳೆ ಸಂಜೆಯಾದರೂ ಸುರಿಯುತ್ತಲೇ ಇತ್ತು. ಈಗ ಕಡಿಮೆಯಾಗಬಹುದು, ಆಗ ಕಡಿಮೆಯಾಗಬಹುದು ಎಂದುಕೊಂಡಿದ್ದೇ ಬಂತು ಆದರೆ ಮಳೆ ಮಾತ್ರ ಕಡಿಮೆಯಾಗುತ್ತಲೇ ಇರಲಿಲ್ಲ. ಇನ್ನೂ ಕಾಯುತ್ತಾ ಕುಳಿತರೆ ರಾತ್ರಿಯಾಗಬಹುದೇ ಹೊರತು ಮಳೆ ಕಡಿಮೆಯಾಗಲಾರದು ಎಂದುಕೊಂಡ ರಾಮ, ಬೆಳಿಗ್ಗೆ ಹುಲ್ಲು ತರಲು ಹೋದಾಗ ಕೊಯ್ದು ತಂದು ಒಣಗಿಸಿ ಮಡಚಿ ಇಟ್ಟ ಬಾಳೆ ಎಲೆಯನ್ನು ಕೈಚೀಲದಲ್ಲಿ ತೂರಿಸಿ, ಬೆಳಿಗ್ಗೆ ಬುಟ್ಟಿಯಲ್ಲಿಯೇ ಮುಚ್ಚಿಟ್ಟ  ನಾಲ್ಕೈದು ತಿಂಗಳ ಕೋಳಿಮರಿಯನ್ನು  ಹಿಡಿದು ಕಾಲು ಕಟ್ಟಿ ಬಾಳೆ ಎಲೆ ಇಟ್ಟ ಚೀಲದಲ್ಲೇ ತುರುಕಿಕೊಂಡು, ಉದ್ದ ದಂಟಿನ ಕೊಡೆಯನ್ನು ಹಿಡಿದು ಹೆರಬೈಲ ದೇವರ ಮನೆಯತ್ತ ಹೊರಡಲು ಅಣಿಯಾದ. ಅವನು ಮನೆಯ ಮುಂದಿನ ದಣಪೆಯ ಹತ್ತಿರ ಹತ್ತಿರ ನಡೆದಿರಬಹುದು, ಆಗ ಅವನ ಮಗ "ಆಪ್ಪಾ, ನಾನೂ ಬತ್ತೀ" ಎಂದು ಅಳುತ್ತಾ ಅವನ ಬೆನ್ನು ಹತ್ತಿದ.

"ನಿಂಗೇನ್ ತಾಲಿ ಕಿಟ್ಟಿದೆ, ಸುಮ್ಗೇ ಮನಿಲೆ ಕುತ್ಕಾ, ಮೊಳೆ ಹುಯ್ತೇ ಇರುದ್ ಕಾಣುಲಾ", ಎಂದು ಹಿಂದೆ ಮಳೆಯಲ್ಲೇ ನೆನೆಯುತ್ತಾ ಬಂದ ಮಗನನ್ನು ಗದರಿಸಿ ಮನೆಯೊಳಗೆ ಕಳಿಸಲು ಪ್ರಯತ್ನಿಸಿದ.

"ಇಲ್ಲಾ, ನಾನು ಬತ್ತೀ" ಎಂದು ಮಗ ಹಠ ಹಿಡಿದ. ಮಗನ ಹಠಕ್ಕೆ ಮಣಿದ ರಾಮ ಮಗನನ್ನು ಕರೆದುಕೊಂಡು ಹೆರಬೈಲ ದೇವರ ಮನೆಯ ಕಡೆ ಹೊರಟ.

ಅದಾಗಲೇ ಊರಿನ ಜನರೆಲ್ಲಾ ಅವರವರ ಹರಕಗೆ ತಕ್ಕಂತೆ, ಕೋಳಿ, ಕುರಿ ಹಾಗೂ ದೇವರ ನೈವೇದ್ಯಕ್ಕೆ ಪಂಚಕಜ್ಜಾಯ ಹೀಗೆ ಹಿಡಿದು ದೇವರ ಮನೆಯ ಕಡೆಗೆ ಹೊರಟು ನಡೆದಿದ್ದರು. ಇಂದು ಅಲ್ಲಿಗೆ ಹೊರಡುತ್ತಿರುವವರ ಬಾಯಲೆಲ್ಲಾ ಎಡೆಬಿಡದೇ ಸುರುಯುತ್ತಿರುವ ಮಳೆಯದೇ ಮಾತು.

"ಏನ್ ರಾಮಾ, ಮೊಳೆ ಸಾಕಾ? ಬೇಕಾ?" ಎಂದು ಹಿಂದಿನಿಂದ ಬರುತಿದ್ದ ಸುಬ್ರಾಯ ಕೇಳಿದ.

"ಮೊಳೆ ಏಗ್ ಸದ್ಯಕ್ಕೆ ಸಾಕಾಗತಾ ಮಾರಾಯಾ, ಹಿಂಗೆ ರಾತ್ರಿ ಪೂರ್ತಿ ಬೀಳ್ತೇ ಇದ್ರೆ, ಗಾದ್ದಿಯವೆಲ್ಲಾ ಹೋದಂಗೇ"

"ಹ, ನೀ ಹೇಳುದು ಖರೇನೇಯಾ. ನಿಮ್ಮ ಗಾದ್ದಿಯವೆಲ್ಲಾ ಹೆಂಗಾಗವ?"

"ಗಾದ್ದಿಯವ ಈ ಸಲಾ ಸ್ವಲ್ಪೆ ಅಡ್ಡಿಲ್ಲಾ, ಹೊಡಿಗೆ ಬಂದವ, ಏಗೆ ದಿವ್ಸಕೆ ಉಂದ ಮೊಳೆ ಬಂದ್ರೆ ಸಾಕ, ನಿನ್ನ ಗಾದ್ದಿಯವ ಹೆಂಗಾಗವ?"

"ನಮ್ದ್ ಹಳ್ಳದ್ ಬದಿಗೆ ಇದ್ದದ್ ಈ ಸಲಾ ಹಳ್ಳಾ ಮರ್ದೆಗೆ ಮಣ್ಣೆಲ್ಲಾ ಕುಚ್ಕಂಡ್ ಹೋಗೆ ಸ್ವಲ್ಪ ಪಡಪೂಸ್ ಆಗವ್ ಬಿಟ್ರೆ ಉಳ್ದ ಗದ್ದಿಯವ ಅಡ್ಡಿಲ್ಲಾ"

ಹೀಗೆ ಮಾತನಾಡುತ್ತಾ ಹೋದವರಿಗೆ ಹೆರಬೈಲ್ ದೇವರ ಗುಡಿಯವರೆಗೆ ಬಂದು ತಲುಪಿದ್ದೇ ಗೊತ್ತಾಗಲಿಲ್ಲ. ದೇವರ ಗುಡಿ ತಲುಪಿದಾಗ ಆಗಲೇ ಹಲವಾರು ಜನ ಬಂದು ಸೇರಿದ್ದರು. ರಾಮ ಮತ್ತು ಸುಬ್ರಾಯ ಒಂದು ಮತ್ತಗಿನ ಜಾಗವನ್ನು ನೋಡಿ, ಹಾಗೆ ನೆಲಕ್ಕೆ ಕುಳಿತರೆ ಮಣ್ಣಾಗುತ್ತೆ ಎಂದು ಕೊಡೆ ಹಿಡಿದುಕೊಂಡು ತುದಿಗಾಲಲ್ಲೇ ಕುಳಿತರು. ಕುಳಿತ ಸ್ವಲ್ಪ ಹೊತ್ತಿನಲ್ಲಿಯೇ ದೇವರ ಪೂಜೆ ಪ್ರಾರಂಭವಾಯಿತು. ಎಲ್ಲರು ದೇವರ ಪೂಜೆ ಮುಗಿದೊಡನೆ ಪಂಚಕಜ್ಜಾಯದ ನೈವೇದ್ಯ ಮಾಡಿಸಿಕೊಂಡು ಬಂದು ಅಲ್ಲಿ ಕುಳಿತವರಿಗೆಲ್ಲಾ ಹಂಚಲು ಪ್ರಾರಂಭಿಸಿದರು. ಮಕ್ಕಳೆಲ್ಲಾ ಮಳೆಯಲ್ಲಿಯೇ ಓಡಾಡಿ ಪಂಚಕಜ್ಜಾಯ ತಿನ್ನಲು ಪಂಚಕಜ್ಜಾಯ ಹಚ್ಚುವಲ್ಲಿಗೆ ಓಡಾಡತೊಡಗಿದರು. ಹಾಗೆ ಓಡಾಡುವ ಆ ಮಕ್ಕಳನ್ನು ನೋಡಿದ ರಾಮನ ಮಗನಿಗೂ ಪಂಚಕಜ್ಜಾಯದ ಆಸೆಯಾಗಿ, "ಆಪ್ಪಾ, ನಂಗೆ ಪಾಂಚ್ಕಾಯ್ ಬೇಕ್, ಹೋಗ್ಲೆ ಅಲ್ಲೆ?" ಅಂದಾ.

"ಅಲ್ಲೆಂತಕೆ ಈ ಮಳೀಲೆ, ಇಲ್ಲೇ ಹಚ್ಚುಕೆ ಬತ್ತರ್. ಸುಮ್ನೆ ಕುತ್ಕಾ ಇಲ್ಲೆ" ಎಂದು ಗದರಿದ ರಾಮಾ.

ಸುಬ್ರಾಯ ಅದನ್ನು ನೋಡಿ "ಯಾಕ್ ಆಂವ್ಗೆ ಹಿದ್ರಸ್ತಿ, ನಿಲ್ಲ್ ಅಪು ಆಣ್ಣಾ ಬೆಗೆ ದೆವ್ರಿಗೆ ಪಂಚ್ಕಾಯ ಮಾಡ್ಸಕಂಡೆ ಬತ್ತಿ, ನಿಲ್ಲ ಹಾಂ. ಇಲ್ಲೇ ತಿನ್ನಕ" ಎಂದು ಹೇಳಿ ದೇವರ ಗುಡಿಯ ಬಳಿ ಹೊರಟ.

ಸುಬ್ರಾಯ ಪಂಚಕಜ್ಜಾಯದ ನೈವೇದ್ಯ ದೇವರಿಗೆ ಒಪ್ಪಿಸಿ ಬರುವ ಹೊತ್ತಿಗಾಗಲೇ ರಾಮನ ಮಗ ಅಲ್ಲಿಗೆ ಪ್ರಸಾದ ಹಂಚಲು ಬಂದ ಮೂರ್ನಾಲ್ಕು ಜನರಿಂದ ಪ್ರಸಾದವನ್ನು ಕೇಳಿ ಪಡೆದು ತಿಂದು ಮುಗಿಸಿದ್ದರೂ, ಸುಬ್ರಾಯ ಕೊಟ್ಟ ಪ್ರಸಾದವನ್ನು ಬೇಡ ಎಂದು ಹೇಳದೇ ತೆಗೆದುಕೊಂಡ.

"ಪ್ರಸಾದ ಎಲ್ಲಾ ಮುಗ್ದೆ, ಏಗೆ ಕುರಿ ಕಡಿಯುಕೆ ಸುರು ಮಾಡರ, ನೀ ಹೋಗೆ ಕೋಳಿ ಕುಟ್ಟೆ ಬಾ" ಎಂದು ಹೇಳುತ್ತಾ ಪಂಚಕಜ್ಜಾಯಿಯ ಡಬ್ಬವನ್ನು ಮುಚ್ಚಿ ಕುಳಿತುಕೊಂಡ.

"ಹೌದೆ, ಹಂಗಾರೆ ಕೋಳಿ ಕುಟ್ಟೇ ಬತ್ತಿ, ನೀ ಇಲ್ಲೇ ಇರ್" ಎಂದು ಮಗನಿಗೆ ಹೇಳಿ ತಾನು ದೇವರ ಗುಡಿಯ ಬಳಿ ಹೊರಟ. ಅಪ್ಪ ಹೇಳಿದ್ದಷ್ಟೇ ಬಂತು, ಮಗ ಕೇಳ ಬೇಕಲ್ಲ. "ನಾನು ಬತ್ತಿ" ಎನ್ನುತ್ತಾ ಅಪ್ಪನ ಬೆನ್ನು ಹಿಡಿದು ಹೊರಟ.

ರಾಮ ದೇವರ ಬಳಿ ಬಂದರೂ ಕುರಿ ಕಡಿಯುವುದಿನ್ನು ಮುಗಿದಿರಲಿಲ್ಲ. ಇನ್ನೂ ಐದಾರು ಕುರಿಗಳು ಬಾಕಿಯಿದ್ದವು. ಕುರಿ ಕಡಿದು ಮುಗಿದು ಕೋಳಿ ಕಡಿಯುವ ಹೊತ್ತಿಗಾಗಲೇ ಸಾಯಂಕಾಲ ಸರಿದು ರಾತ್ರಿಯ ಕತ್ತಲೆ ಮೆಲ್ಲಗೆ ಮುತ್ತಿಕೊಳ್ಳಲಾರಂಬಿಸಿತು.

ಕಳೆದ ವರ್ಷ ಇದೇ ಸಮಯದಲ್ಲಿ ಮಗನಿಗೆ ಚಳಿ ಜ್ವರ ಬಂದದ್ದು ಒಂದು ವಾರವಾದರೂ ಕಡಿಮೆಯಾಗದೇ ಇದ್ದಾಗ, ಆದಷ್ಟು ಬೇಗ ವಾಸಿಯಾದರೆ ಹೆರಬೈಲ ದೇವರಿಗೆ ಕೋಳಿ ಕೊಡುತ್ತೇನೆ ಎಂದು ಹರಕೆ ಹೊತ್ತು ಕೊಂಡಿದ್ದ ರಾಮ. ಹರಕೆಯ ಪ್ರಭಾವವೋ, ವೈದ್ಯರು ಕೊಟ್ಟ ಔಷಧಿಯ ಪ್ರಭಾವವೋ, ಅಂತೂ ಹರಕೆ ಹೊತ್ತ ಒಂದೆರಡು ದಿನದಲ್ಲೇ ಮಗನಿಗೆ ಬಂದ ಜ್ವರ ಕಡಿಮೆಯಾಯಿತು. ಹರಕೆಯಿಂದಲೇ ಜ್ವರ ಕಡಿಮೆಯಾಯಿತು ಎಂದುಕೊಂಡು ಮುಂದಿನ ವರ್ಷದ ಹಬ್ಬಕ್ಕೆ ಕೋಳಿ ಕೊಡಲೇ ಬೇಕೆಂದು ನಿರ್ಧರಿಸಿದ್ದ. ಹಾಗಾಗಿಯೇ ಈ ವರ್ಷಯಾರೋ ಈ ತಿಂಗಳ ೨೦ಕ್ಕೆ ಹೆರಬೈಲ್ ದೇವರ ಹಬ್ಬ ಎಂದಾಗ ಅಂಕೋಲೆಗೆ ಹೋಗಿ ಮೀನು ಪೇಟೆಯ ಪಕ್ಕದಲ್ಲೇ ಕೋಳಿ ಮಾರುವ ಲಕ್ಷ್ಮಿಯಿಂದ ೧೫೦ ರೂಪಾಯಿ ಕೊಟ್ಟು ನಾಲ್ಕೈದು ತಿಂಗಳ ಒಂದು ಕೋಳಿ ಮರಿಯನ್ನು ಕೊಂಡು ತಂದಿದ್ದ. ೨೫೦-೩೦೦ ರೂಪಾಯಿ ಕೊಟ್ಟು ದೊಡ್ಡ ಕೋಳಿಯನ್ನು ತಂದು ಕೊಡುವಷ್ಟು ಸ್ಥಿತಿವಂತನಾಗಿರಲಿಲ್ಲ ರಾಮ.

ತಾನು ತಂದ ಕೋಳಿಯನ್ನು, ಕೋಳಿ ಕೊಯ್ಯುವ ಬೀರನ ಕತ್ತಿಗೆ ಒಡ್ಡಿ, ಅದನ್ನು ಅಂದಿನ ರಾತ್ರಿಯ ಊಟಕ್ಕೆ ಅಲ್ಲಿಯೇ ಬಿಟ್ಟು, ಮಗನನ್ನು ಕರೆದುಕೊಂಡು ಸುಬ್ರಾಯನ ಬಳಿ ಬಂದು ಕುಳಿತ. ಮಳೆ ಆಗತಾನೇ ಸ್ವಲ್ಪ ಹೊಳುವಾಗಿತ್ತು.

ಇಬ್ಬರು ಊರ ಕಡೆಯ ಮಾತು, ಗದ್ದೆಯ ಮಾತು, ಹಬ್ಬ ಹರಿದಿನಗಳ ಮಾತು, ಕಳೆದ ಬಾರಿಯ ಹೆರಬೈಲ್ ಹಬ್ಬದ ಬಗ್ಗೆಯ ಮಾತು, ಹೀಗೆ ಅದು ಇದು ಮಾತನಾಡುವ ಹೊತ್ತಿಗೆ ಹಿಚಕಡ ಊರಿನ ಎಂಟುವರೆಗಿನ ಗಾಡಿ ಬಂದು ಅಂಕೋಲೆಯ ಕಡೆ ಹೊರಟು ಹೋಗಿತ್ತು. ಇಷ್ಟೊತ್ತು ಹೆದ್ದಾರಿಯಲ್ಲಿ ಓಡಾಡುವ ವಾಹನಗಳನ್ನು ನೋಡುತ್ತಾ ಮನಸ್ಸಲ್ಲೇ ಕಾಗುಣಿತ ಹಾಕುತ್ತಾ ಕುಳಿತಿದ್ದ ರಾಮನ ಮಗನಾಗಲೇ ನಿದ್ದೆಯಿಂದ ಕುಳಿತಲ್ಲಿಯೇ ತೂಕಡಿಸ ತೊಡಗಿದ. ಮಳೆ ಹೊಳುವಾಗಿದ್ದರಿಂದ ಮಗನಿಗೆ ತಾನು ಹೆಗಲಮೇಲೆಯೇ ಇಟ್ಟುಕೊಂಡು ಬಂದ ಚಿಕ್ಕ ಪಂಚೆಯನ್ನು ಹಾಸಿ ಅಲ್ಲಿಯೇ ಮಲಗಿಸಿ ಸುಬ್ರಾಯನೊಂದಿಗೆ ಮತ್ತೆ ಮಾತಿಗೆ ಇಳಿದ.

"ಈಸರಿ ಇಪ್ಪತ್ತೈದೋ, ಇಪ್ಪತ್ಯೋಳೋ ಕುರಿಯವ ಬಂದವ ಕಡಾ, ಹೊದ್ ವರ್ಷೆ ಹದಿನೆಂಟೋ ಹತ್ತೊಂಬತ್ತೋ ಏನೋ ಆಗತ್ ಅಂತೇ ಇವ್ರ."

"ಓಹ್! ಹೌದೆ, ಪಾಪಾ ಅಡ್ಗಿ ಮಾಡುವರಿಗೆ ಅಟ್ಟೆಲ್ಲಾ ಕುರಿ ಮಾಡೆ ಪುರೈಸುಕೆ ಬೇಕ"

"ಹ, ಅದೂ ಖರೇನೇ, ಆದ್ರೆ ಈ ಸಲಾ ಕುರಿ ಸುಲುಕೆ ಯಾರ್ನೋ ಕರ್ಸರ್ ಕಡಾ"

"ಹಂಗರೆ ಅಡ್ಡಿಲ್ಲಾ. ಅಲ್ನೋಡಾ! ಆಗೆ ೩೦೦-೪೦೦ ಜನಾ ಆಗುರ್ ಅನ್ಸತ್, ಏಗೆ ನೋಡಾ ೧೦೦೦ ಜನಾ ಮೆನಾಗುರ"

"ಹೌದಲಾ ಮಾರಾಯಾ! ಮೊಳೆ ಕಡ್ಮಿ ಆಯ್ತಲಾ ಜನಾ ಬರುಕೆ ಸುರು ಆಗರ. ಊಟದ್ ಟೈಮ್ ಬರುವರಿಗೆ ಮತ್ತೂ ೨೦೦-೩೦೦ ಜನನರೂ ಆಗುರ."

"ಹ ಜನಾ ಏನ್ ಕಡ್ಮಿ ಆಗುಲಾ"

ಹೀಗೆ ಮಾತುಕತೆಯಲ್ಲಿ ತೊಡಗಿರುವಾಗಲೇ ಕೆಳಗೆ ಅಡಿಗೆ ಮಾಡುತ್ತಿರುವರ್ಯಾರೋ ಲಾಟೀನು ಹಿಡಿದು ಮೇಲೆ ಬಂದು ಸುತ್ತಲೂ ನೋಡಿ ಮತ್ತೆ ಕೆಳಕ್ಕೆ ಹೋದರು.

"ಅಡ್ಗಿ ಆಯ್ತ ಮಡಿ, ಬಂದೆ ನೋಡ್ಕಂಡೆ ಹೋದ್ರ" ಅಂದ ರಾಮ.

"ಹ, ಹ ಹೊಂಡಾ ತಿಗಿ, ಹಂಗೆ ಮಾಗ್ನೂ ಏಳ್ಸ"

ಇಬ್ಬರು ಆಗಲೇ ದೇವರಿಗೆ ಒಡೆಸಿ ತಂದು ತಿಂದ ತೆಂಗಿನಕಾಯಿಯ ಚಿಪ್ಪಿನಿಂದ ನೆಲವನ್ನು ಅಗಿದು, ಅದರ ಮೇಲೆ ಬಾಳೆ ಎಲೆ ಹರಡಿ ಕುಳಿತರು. ರಾಮ ಮಲಗಿದ ಮಗನನ್ನು ಎಬ್ಬಿಸಿ ಕುಳಿಸಿದ. ಎಲೆ ಹಾಸಿಕೊಂಡು ಅರ್ಧ ಗಂಟೆ ಕಾದರೂ ಊಟ ಬಡಿಸುವವರು ಮೇಲೆ ಬರಲಿಲ್ಲ. ರಾಮನ ಮಗನ ಹೊಟ್ಟೆ ಹಸಿವಿನಿಂದ ಚುರುಗುಟ್ಟುತಿತ್ತು, "ಇನ್ನೂ ಇಟ್ಟುತ್ತ್ ಆಪ್ಪಾ" ಎಂದು ಅಪ್ಪನನ್ನು ಕೇಳಿದ.

"ನೋಡ್ವಾ ತಡಿ, ಅಡ್ಗಿ ಮಾಡೆ ಬಡ್ಸಬೇಡಾ, ಅದ್ಕೇ ನಿಂಗೆ ಬರ್ಬೇಡಾ ಅಂದದೆ, ಮನೀಲೆ ಇದ್ರೆ ಇಟ್ಟೋತ್ತಿಗೆ ಉಂಡ್ಕಂಡೆ ಮಲ್ಗುಲಾ ಆಗದೆ?" ಎಂದ.

ಮಗ ಮರು ಮಾತನಾಡದೇ ಕುಳಿತ. ಸ್ವಲ್ಪ ಹೊತ್ತಿನಲ್ಲಿಯೇ ಲಾಟಿನು ಹಿಡಿದವನೊಬ್ಬ ಕೆಳಗಿನಿಂದ ಮೇಲೇರಿ ಬಂದ. ಜನ ಮತ್ತೆ ಎಲೆಯನ್ನು ಸರಿಪಡಿಸಿಕೊಂಡು ಕುಳಿತರು. ಆದರೆ ಈಗ ಮೊದಲಿನಂತೆ ಲಾಟೀನು ಹಿಡಿದವನೊಬ್ಬನೇ ಬರದೇ, ಅವನ ಹಿಂದೆ ಅನ್ನ, ಬೇಯಿಸಿದ ಮಾಂಸ, ಹಾಗೂ ಸಾರು ಹಿಡಿದು ಎರಡು ಮೂರು ಜನ ಮೇಲೇರಿದರು. ಇಷ್ಟೊತ್ತು, ನಿಂತವರೆಲ್ಲಾ ಸಿಕ್ಕ ಸಿಕ್ಕಲ್ಲಿಯೇ ಕುಳಿತುಕೊಂಡರು. ಬಡಿಸುವವರು ಒಂದು ಕಡೆಯಿಂದ ಬಡಿಸುತ್ತಾ ನಡೆದರೆ ಇನ್ನೊಂದು ಕಡೆ, ಈ ಕಡೆ ಬನ್ನಿ ಎಂದು ಜನ ಕರೆಯತೊಡಗಿದರು. ಈ ಕಡೆ ಬಂದರೆ ಆ ಕಡೆಯವರು ನಮ್ಮ ಕಡೆ ಬನ್ನಿ ಎಂದು ಕರೆದರು. ಹಾಗೆ ಕರೆದವರನ್ನೆಲ್ಲಾ ಲಾಟೀನು ಹಿಡಿದವ ಸಮಧಾನ ಪಡಿಸುತ್ತಾ, "ಬೇಜಾರ ಮಾಡ್ಬೇಡಿ ಎಲ್ಲಾ ಕಡೀಗೂ ಬತ್ತವ" ಎಂದು ಕರೆದವರೆಲ್ಲರಿಗೂ ಅಶ್ವಾಸನೆ ಕೊಡುತ್ತಾ ಸಾಗೀದ.

ರಾಮ, ಸುಬ್ರಾಯ ಇರುವ ಕಡೆ ಬಡಿಸುವವರು ಬಂದು ತಲುಪಲು ಅರ್ಧ ಗಂಟೆಯ ಮೇಲೆಯೇ ತಗುಲಿತ್ತು. ಬೇಯಿಸಿದ ಬಿಸಿ ಬಿಸಿ ಕುಸಲಕ್ಕಿಯ ಅನ್ನದ ಮೇಲೆ, ಬೇಯಿಸಿದ ಮಾಂಸದ ಜೊತೆಗೆ, ಗಮಗಿಡುವ ತಿಳಿಸಾರು ಎಲೆಗೆ ಬಿದ್ದೊಡನೆ ಎಲೆಯ ಮುಂದಿದ್ದವರ ಮಾತು ನಿಂತು, ಕೈ ಬಾಯಿಯ ಕೆಲಸ ಪ್ರಾರಂಭವಾಯಿತು. ರಾಮನ ಮಗ ಒಂದೆರೆಡು ಮಾಂಸದ ತುಂಡು ತಿಂದು, ನಾಲ್ಕೈದು ತುತ್ತು ತಿಂದು ಸಾಕು ಎಂದು ಅಷ್ಟಕ್ಕೆ ತನ್ನ ಊಟವನ್ನು ಮುಗಿಸಿದ, ರಾಮ ತನ್ನ ಎಲೆಯಲ್ಲಿದ್ದುದ್ದನ್ನೆಲ್ಲ ಬರೀದು ಮಾಡಿ ಮಗ ಬಿಟ್ಟ ಎಲೆಯನ್ನು ಖಾಲಿ ಮಾಡಿದರೂ ಹೊಟ್ಟೆ ತುಂಬಿದಂತೆ ಎನಿಸಲಿಲ್ಲ. ಮತ್ತೆ ಇನ್ನೊಂದು ಸುತ್ತು ಬಡಿಸಲು ಬರುವುದನ್ನು ಕಾಯುವುದರಿಂದ ಪ್ರಯೋಜನವಿಲ್ಲವೆಂದು, ಬೇರೆ ಉಪಾಯವಿಲ್ಲದೇ ಸುಮ್ಮನೇ ಎಲೆ ಬಿಟ್ಟು ಏಳಬೇಕಾಯಿತು. ಊಟ ಮುಗಿಸಿ ಅಲ್ಲಿಯೇ ನಿಂತ ನೀರಿನಲ್ಲಿ ಕೈ ಅಷ್ಟೇ ತೊಳೆದು ಮಗನಿಗೂ ಕೈ ಅಷ್ಟೇ ತೊಳಿಸಿ, ಸುಬ್ರಾಯನೊಂದಿಗೆ ಮನೆಯ ಕಡೆ ದಾರಿ ಹಿಡಿದ.

ಊರಿನ ಹುಲಿ ದೇವರ ಮನೆಯ ಸಮೀಪ ಬಂದೊಡನೆ ನೆನಪಾಯ್ತು. ಹೆರಬೈಲ್ ದೇವರ ಮನೆಯಿಂದ ಏನನ್ನೂ ತೆಗೆದುಕೊಂಡು ಮನೆಗೆ ಹೋಗಬಾರದು, ಹಾಗೇನಾದರೂ ತೆಗೆದುಕೊಂಡು ಬಂದಿದ್ದರೆ ಅದನ್ನೂ ಹುಲಿದೇವರ ಮನೆಗಿಂತ ಮೊದಲೇ ತೆಗೆದಿಟ್ಟು ಹೊರಡಬೇಕು, ಹಾಗೇನಾದರೂ ತೆಗೆದುಕೊಂಡು ಹೋದರೆ ಮನೆಗೆ ಹುಲಿ ಬರುತ್ತೆ ಎಂದು ಹಿಂದಿನಿಂದಲೂ, ಹಿಂದಿನವರಿಂದಲೂ ನೆಡೆದುಕೊಂಡು, ಆಚರಿಸಿಕೊಂಡು ಬಂದ ವಾಡಿಕೆ. ಹಾಗೆ ನೆನಪಾದೊಡನೆಯೇ ಎಲ್ಲಾದರೂ ದೇವರ ಹೂವಿನ ಎಸಳಿದೆಯೇ ಎಂದು ತಲೆಯ ಕೂದಲೆನ್ನೆಲ್ಲಾ ಕೆದರಿ ನೋಡಿದ. ಹಣೆಯ ಕುಂಕುಮವೆನ್ನೆಲ್ಲಾ ಅಳಿಸಿದ. ಕೈ ಚೀಲವನ್ನು ಕೊಡವಿ ಮತ್ತೆ ಮಡಿಚಿಟ್ಟು ಕೊಂಡ. ಮಗನ ಚಡ್ಡಿಯ ಕಿಸೆ, ಅಂಗಿಯ ಕಿಸೆ, ತಲೆ, ಕಿವಿ, ಹಣೆ ಎಲ್ಲವನ್ನು ಪರೀಕ್ಷಿಸಿ, ಸಂಸಯ ಬಂದದ್ದನೆಲ್ಲ ಕತ್ತಲೆಯಲ್ಲಿಯೇ ತೆಗೆದು ಎಸೆದ.

ಸುಬ್ರಾಯ, "ಉಳ್ದ್ ಪಂಚ್ಕಾಯಾ, ಚೌತಿಗೆ ಊರಿಗೆ ಮಕ್ಕಳ್ ಬಂದಗರೂ ತಿನ್ನುರ್, ಇಲ್ಲೇ ಗೇರ್ ಬ್ಯಾಣದಲ್ಲೆ ಇಟ್ಟ್ ಬತ್ತಿ, ನಾಳಗೆ ಗಾದ್ದಿ ಬದಿಗೆ ಬಂದಗೆ ಸಿಗ್ವಾ ಆಗಾ" ಎಂದು ಹೇಳಿ ರಾಮನ ಉತ್ತರಕ್ಕೂ ಕಾಯದೇ ಅವನ ಗೇರು ಹಕ್ಕಲಿನತ್ತ ಹೋದ. ಮಗನ ಮೈಮೇಲೆ, ತನ್ನ ಮೈಮೇಲೆ ಇನ್ನೇನು ಉಳಿದಿಲ್ಲ ಎನ್ನುವುದು ನಿಶ್ಚಿತವಾದೊಡನೆ, ರಾಮ ಮಗನೊಂದಿಗೆ ಮನೆಯ ದಾರಿ ಹಿಡಿದ.

-ಮಂಜು ಹಿಚ್ಕಡ್

Wednesday, August 12, 2015

ಮತ್ತದೇ ಮಳೆ

ಮತ್ತದೇ ಮಳೆ
ಮತ್ತದೇ ನೀರು
ಈಜಿ ಜೈಸುವ ಆಸೆ
ಎಂದಿನಂತೆ
ಮತ್ತೆ ಈ ಮನಕೆ

ನಿನ್ನ ಕಂಡಾಗಲೆಲ್ಲಾ.

-ಮಂಜು ಹಿಚ್ಕಡ್

Sunday, August 2, 2015

ಹುಡುಕಾಟದ ಹಾದಿಯಲ್ಲಿ- ಭಾಗ ೪

ಹುಡುಕಾಟದ ಹಾದಿಯಲ್ಲಿ ಭಾಗ ೧
ಹುಡುಕಾಟದ ಹಾದಿಯಲ್ಲಿ ಭಾಗ ೨
ಹುಡುಕಾಟದ ಹಾದಿಯಲ್ಲಿ ಭಾಗ ೩


"ಹಲೋ, ನಾನು ಸಂತೋಷ ಹತ್ತಿರ ಮಾತನಾಡಬಹುದೇ" ಎಂದು ಅತ್ತ ಕಡೆಯಿಂದ ಬಂದ ಹೆಣ್ಣು ಧ್ವನಿ ಉಲಿಯಿತು.

"ನಾನೇ ಸಂತೋಷ, ಹೇಳಿ ಏನಾಗಬೇಕಿತ್ತು?"

"ಹಾಯ್ ಸಂತೋಷ್, ನಾನು ಪ್ರೀತಿ, ಐಬಿಎಂ ಕಂಪನಿಯಿಂದ. ನೀವು ನಮ್ಮ ಕಂಪನಿಗೆ ಕೊಟ್ಟ ಇಂಟರ್ವೂವ್ ನಲ್ಲಿ ಸಿಲೆಕ್ಟ ಆಗಿದ್ದಿರಾ. ಶುಭಾಷಯಗಳು. ನಿಮ್ಮ ಆಫರ್ ಲೆಟರ್ ರೆಡಿ ಇದೆ. ನಿಮ್ಮ ಮಿಂಚಂಚೆಗೆ ಒಂದು ಪ್ರತಿಯನ್ನು ಕಳಿಸಿದ್ದೇವೆ. ನಿಮಗೆ ಒಪ್ಪಿಗೆಯಾದಲ್ಲಿ ಉತ್ತರಿಸಿ"

ಸಂತೋಷನಿಗೆ ತನ್ನ ಕಿವಿಗಳನ್ನು ನಂಬಲಾಗಲಿಲ್ಲ. ಹೌದು ಎರಡು ತಿಂಗಳ ಹಿಂದೆ, ಆ ಕಂಪನಿಗೆ ಇಂಟರ್ವೂವಗೆ ಹೋಗಿದ್ದು ನಿಜ. ಅಲ್ಲಿ ಮೂರು ಸುತ್ತು ಇಂಟರ್ವೂವ್ ಕೊಟ್ಟಿದ್ದು ನಿಜ. ಆದರೆ ಅಲ್ಲಿ ಸಿಲೆಕ್ಟ ಆಗುತ್ತೇನೆ, ಎಂದುಕೊಂಡಿರಲಿಲ್ಲ. ಯಾಕೆಂದರೆ ಅದೇ ರೀತಿ ಅವನು ಅದೆಷ್ಟೋ ಕಂಪನಿಗಳಿಗೆ ಇಂಟರ್ವೂವ್ ಕೊಟ್ಟು ಬಂದಿದ್ದ. ಎಲ್ಲ ಕಡೆ ಆಮೇಲೆ ಕರೆ ಮಾಡುತ್ತೇವೆ ಎಂದು ಕಳಿಸಿದ್ದರೇ ಹೊರತು ಯಾರು ಕರೆ ಮಾಡಿರಲಿಲ್ಲ. ಎರಡು ತಿಂಗಳ ಹಿಂದೆ ಆ ಕಂಪನಿಗೆ ಇಂಟರ್ವೂವ್ ಕೊಟ್ಟಾಗಲೂ ಅವರು ಹೀಗೆಯೇ ಹೇಳಿ ಕಳಿಸಿದ್ದರು.

"ಓಹ್ ಧನ್ಯವಾದಗಳು ಪ್ರೀತಿ. ಖಂಡಿತ. ನೋಡುತ್ತೇನೆ."

"ಸಂತೋಷ ಹಾಗೆ ಇನ್ನೊಂದು ವಿಷಯ, ಆಪರ್ ಲೆಟರನಲ್ಲಿ ನೋಡಿ, ನಿಮಗೆ ಒಪ್ಪಿಗೆ ಆದಲ್ಲಿ ಆ ಮೇಲ್ಗೆ ಉತ್ತರಿಸಿ. ನಿಮಗೆ ಏನಾದರೂ ಪ್ರಶ್ನೆಗಳಿದ್ದರೆ ಈ ನಂಬರಗೆ ಕರೆ ಮಾಡಬಹುದು".

"ಖಂಡಿತ ಪ್ರೀತಿ, ನಾನು ಏನಾದರೂ ಬೇಕಿದ್ದಲ್ಲಿ ಕರೆ ಮಾಡುತ್ತೇನೆ." ಎಂದು ಹೇಳಿ ಮತ್ತೊಮ್ಮೆ ಧ್ಯನ್ಯವಾದಗಳನ್ನು ತಿಳಿಸಿ ಮೊಬೈಲ ಇಟ್ಟ. ಮನಸ್ಸು ಸ್ವಲ್ಪ ಸಮಾಧಾನಗೊಂಡಿತ್ತು. ಪೆಟ್ಟಿಗೆ ಅಂಗಡಿಯವನಿಗೆ ರೊಕ್ಕ ಕೊಟ್ಟು, ಅವನ ಹಾಗೆ ಅಲ್ಲಿಗೆ ಚಹಾ ಕುಡಿಯಲು ಬಂದವರೊಬ್ಬರಿಗೆ, ಅಲ್ಲಿ ಯಾವುದಾದರೂ ಇಂಟರನೆಟ್ ಸೆಂಟರ್ ಇದೆಯಾ ಎಂದು ವಿಚಾರಿಸಿದ.

ಒಂದಿಷ್ಟು ಜನರನ್ನು ವಿಚಾರಿಸಿದ ಮೇಲೆ, ಅಲ್ಲಿ ಹತ್ತಿರದಲ್ಲಿ ಯಾವುದೇ ಇಂಟರನೆಟ್ ಸೆಂಟರಗಳಿಲ್ಲವೆಂದು, ಮಾರತಹಳ್ಳಿಗೆ ಹೋದರೆ ಬೇಕಾದಷ್ಟು ಇಂಟರನೆಟ್ ಸೆಂಟರಗಳು ಸಿಗುತ್ತವೆಂದು ಮಾರತಳ್ಳಿಯ ಕಡೆ ಹೊರಡುವ ಬಸ್ ಹತ್ತಲು ಬಸ್ ನಿಲ್ದಾಣಕ್ಕೆ ಹೋದ. ಅವನು ಬಸ್ ನಿಲ್ದಾಣ ತಲುಪುತಿದ್ದಂತೆ ಐ.ಟಿ.ಪಿ.ಎಲ್ ಕಡೆಯಿಂದ ಒಂದು ಪುಸ್ಬಕ ಬಸ್ ಬಂತು. ಅದನ್ನು ಹತ್ತಿ ಕುಳಿತ. ಮದ್ಯಾಹ್ನ ಅಷ್ಟೋಂದು ಟ್ರಾಪಿಕ್ ಇರದ ಕಾರಣ ೧೫-೨೦ ನಿಮಿಷದಲ್ಲಿ ಬಸ್ ಮಾರತಹಳ್ಳಿ ತಲುಪಿತು. ಮಾರತಹಳ್ಳಿ ಸೇತುವೆಯ ಹತ್ತಿರ ಇಳಿದು ಅಲ್ಲಿದ್ದ ಒಬ್ಬರನ್ನು ವಿಚಾರಿಸಿ ಅವರು ತೋರಿಸಿದ ನೆಟ್ ಸೆಂಟರಗೆ ಹೋದ ಸಂತೋಷ.

ತನ್ನ ಮೇಲ್ ಗೆ ಬಂದ ಆಪರ್ ಲೆಟರನ್ನು ನೋಡಿದ. ಸಂಬಳ ಚೆನ್ನಾಗಿಯೇ ಇತ್ತು. ಇನ್ನೊಂದು ಹದಿನೈದು ದಿನದಲ್ಲಿ ಸೇರಿಕೊಳ್ಳುವಂತೆ ತಿಳಿಸಿದ್ದರು. ಇನ್ನೊಮ್ಮೆ ಮತ್ತೊಮ್ಮೆ ಆಪರ್ ಲೆಟರನ್ನು ಪರಿಶೀಲಿಸಿ ನೋಡಿದ. ಎಲ್ಲವೂ ಅವನಿಗೆ ಒಳ್ಳೆಯದೆನಿಸಿತು. ಹೇಗೂ ನೌಕರಿ ಇಲ್ಲ ತಡಮಾಡುವುದು ಏಕೆ ಎಂದು ಅವರು ಹೇಳಿದ ದಿನವೇ  ಸೇರಿಕೊಳ್ಳುವುದಾಗಿ ಆ ಮೇಲ್ಗೆ ಉತ್ತರಿಸಿ, ನೆಟ್ ಸೆಂಟರಿನಿಂದ ಹೊರಗೆ ಬಂದು ಮಾರತ ಹಳ್ಳಿ ಬ್ರಿಜಗೆ ಬಂದು ಜಯನಗರ ಅಥವಾ ಜೇಪಿನಗರದ ತಮ್ಮ ರೂಮಿನ ಸಮೀಪದ ಕಡೆ ಹೋಗುವ ಬಸ್ಸುಗಳಿಗಾಗಿ ಕಾದು ನಿಂತ.

ಈಗ ಅವನ ಮನಸ್ಸು ಶಾಂತಗೊಂಡಿತ್ತು. ಆಗಿನ ಉದ್ವೇಗವಾಗಲೀ ಉದ್ಯೋಗದ ಚಿಂತೆಯಾಗಲೀ ಇಲ್ಲ. ಹಾಗಾಗಿ ಬಸ್ಸಿಗಾಗಿ ಅಷ್ಟೋಂದು ಆತುರವಿರಲಿಲ್ಲ. ಅಂತೂ ಹತ್ತು -ಹದಿನೈದು ನಿಮಿಷದಲ್ಲೇ ಬಸ್ಸು ಬಂತು. ಈಗ ಆಪೀಸಿನ ಸಮಯವಲ್ಲದ ಕಾರಣ ಬಸ್ಸುಕಳು ಆಗಿನಷ್ಟು ರಷ್ ಆಗಿರಲಿಲ್ಲ. ಬಸ್ ಏರಿದ, ಮದ್ಯದಲ್ಲಿ ಒಂದು ಸೀಟ್ ಸಿಕ್ಕಿತು. ಹೋಗಿ ಕುಳಿತ.

ಅವನು ಜಯನಗರದ ಇಸ್ಟ್ ಎಂಡ್ ಅಲ್ಲಿ ಇಳಿದು ಮನೆತಲುಪುವ ಹೊತ್ತಿಗೆ ನಾಲ್ಕು ಗಂಟೆಯಾಯಿತು.ಮನೆ ತಲಿಪುತಿದ್ದಂತೆ ಪ್ರಕಾಶನ ಕಾಲ್ ಬಂತು. ಆ ಕಡೆಯಿಂದ ಪ್ರಕಾಶ "ಹಾಯ್ ಸಂತೋಷ,ಇಂಟರವ್ಯೂವ್ ಏನಾಯ್ತೋ?" ಎಂದು ಕೇಳಿದ.

"ನಂದಿರಲೀ ನಿಂದೇನಾಯ್ತು?" ಎಂದು ಕೇಳಿದ ಸಂತೋಷ.

"ಹೇ, ಟೆಸ್ಟ್ ಬರೆದು, ಆಮೇಲೆ ಮೂರು ಸುತ್ತು ಇಂಟರವ್ಯೂವ್ ಮುಗಿಸುವಷ್ಟರಲ್ಲಿ ಇಷ್ಟೊತ್ತಾಯಿತು ನಂದು. ಇಂಟರವ್ಯೂವ್ ಆಗಿದೆ ಇನ್ನೊಂದು ವಾರದಲ್ಲಿ  ಆಪರ್ ಲೆಟರ್ ಕೋಡುತ್ತೇವೆಯೆಂದು ಎಚ್. ಅರ್ ಹೇಳಿದ್ದಾರೆ. ಆದರೂ ನೋಡಬೇಕು."

"ಓಹ್ ಗುಡ್, ಒಳ್ಳೆಯ ಸುದ್ದಿ. ಗುಡ್ ಲಕ್"

"ಧನ್ಯವಾದಗಳು, ಸಂತೋಷ. ನಿಂದೇನಾಯ್ತು? ಈಗ ಎಲ್ಲಿದ್ದೀಯಾ?"

"ಹೇಯ್ ನಂದೂ ಸೆಲೆಕ್ಟ್ ಆಗಿ ಆಪರ್ ಲೆಟರ್ ಬಂತು, ಆದರೆ ಇಂದು ಹೋದ ಕಂಪನಿಯಿಂದಲ್ಲ. ಎರಡು ತಿಂಗಳ ಹಿಂದೆ ಇಂಟರವ್ಯೂವ ಕೊಟ್ಟ ಎಕ್ಸೆಂಚರ್ ಕಂಪನಿಯಿಂದ. ನನಗೆ ಇನ್ನೊಂದು ಹದಿನೈದು ದಿನದಲ್ಲಿ ಸೇರಿಕೊಳ್ಳಲು ತಿಳಿಸಿದ್ದಾರೆ".

"ಓಹ್ ಗ್ರೇಟ್ ಕಂಗ್ರಾಚೂಲೇಸನ್ಸ. ಅಂತೂ ಇಂದು ವರ್ಷ ಕಷ್ಟ ಪಟ್ಟಿದಕ್ಕೆ  ಒಂದ್ ಫಲ ಸಿಕ್ಕಿತು."

"ಥೆಂಕ್ಯೂ ಕಣೋ, ಬಹುಶಃ ಇಬ್ಬರೂ ಒಟ್ಟಿಗೆ ಬೇರೆ ಬೇರೆ ಕಂಪನಿಗೆ ಸೇರುತ್ತಿದ್ದೇವೆ ಅನೆಸುತ್ತೆ."

"ಹೌದು ನೀನು ಹೇಳುವುದು ಸತ್ಯ. ನೋಡೋಣ. ನಾಡಿದ್ದು ಶನಿವಾರ ಸಿಗುತ್ತೇನೆ." ಎಂದು ಹೇಳಿ ಪ್ರಕಾಶ ಕಾಲ್ ಇಟ್ಟ.

ಸಂತೋಷ ರೂಂಗೆ ಬಂದರೆ, ರೂಂನಲ್ಲಿ ಯಾರು ಇರಲಿಲ್ಲ. ಎಲ್ಲರೂ ಅವರವರ ಕೆಲಸಕ್ಕೆ ಹೋಗಿದ್ದರೂ. ಅವರು ಬರುವುದು ಇನ್ನೂ ಏಳು ಗಂಟೆಯ ನಂತರವೇ. ಅವರು ಬರುವ ಹೊತ್ತಿಗೆ ತನ್ನ ಬಟ್ಟೆಯಲ್ಲ ತೊಳೆದು ಹತ್ತಿರದ ಹೋಟೇಲಿಗೆ ಹೋಗಿ ಒಂದಿಷ್ಟು ತಿಂಡಿ ತಿಂದು ಬರೋಣವೆಂದುಕೊಂಡು ತನ್ನ ಬಳಿ ಇದ್ದ ಇನ್ನೊಂದು ಡ್ಯೂಪ್ಲಿಕೇಟ್ ಕೀ ಇಂದ ರೂಮ್ ಬಾಗಿಲು ತೆಗೆದು ಒಳಹೋಗಿ ಬಟ್ಟೆ ತೆಗೆದು ಬೇರೆ ಬಟ್ಟೆ ತೊಟ್ಟು ಕಳಚಿದ ಬಟ್ಟೆಗಳನ್ನು ನೀರಲ್ಲಿ ನೆನೆಹಾಕಿ, ಬೇಗ ತಿಂಡಿ ತಿಂದು ಬರೋಣವೆಂದು ಹೊರಗೆ ಹೊರಟ.

ಈಗ ಅವನ ಮನಸ್ಸಿನಲ್ಲಿ ಬೆಳಗ್ಗಿನ ಗಲಿಬಿಲಿಯಾಗಲೀ, ಉದ್ವೇಗಗಳಾಗಲೀ ಇಲ್ಲ. ಮನಸ್ಸು ಸಂಪೂರ್ಣ ಶಾಂತಗೊಂಡಿತ್ತು. ಎಲ್ಲಾ ಕಳೆದು ಕೈಯಲ್ಲಿ ೬೫ ರೂಪಾಯಿ ಇದ್ದರೂ ಈಗ ಅವನಲ್ಲಿ ಅದರ ಚಿಂತೆಯಿಲ್ಲ. ಅಂತೂ ನೌಕರಿಯ ಹುಡುಕಾಟಕ್ಕೆ ಸ್ವಲ್ಪ ವಿರಾಮ ಸಿಕ್ಕಿದ್ದರಿಂದ ಮನಸ್ಸು ಪ್ರಪುಲ್ಲಗೊಂಡಿತ್ತು. ಅಬ್ಬಾ ನೌಗರಿ ಇಲ್ಲದ ಸ್ಥೀತಿ ಮನುಷ್ಯನನ್ನು ಎಷ್ಟು ಅಧೀರನನ್ನಾಗಿ ಮಾಡಿಬಿಡುತ್ತದಲ್ಲಾ. ಅದೇ ಒಂದು ಉದ್ಯೋಗ ಸಿಕ್ಕ ಖುಸಿ ಮನಸ್ಸನ್ನು, ಮನುಷ್ಯನನ್ನು ಎಷ್ಟು ನೆಮ್ಮದಿಯಲ್ಲಿಡುತ್ತದಲ್ಲ. ಉದ್ಯೋಗವಿಲ್ಲದ ಸಮಯದಲ್ಲಿ ಮನಸ್ಸು ಉದ್ಯೋಗವನ್ನು ಬಿಟ್ಟು ಬೇರೇನು ಬಯಸುವುದಿಲ್ಲ. ಉದ್ಯೋಗದ ಹುಡುಕಾಟ  ಆ ಸಮಯದಲ್ಲಿ ಹಸಿವೆಯನ್ನು ದೂರ ಸರಿಸುತ್ತದೆ ಎನ್ನುವುದು ಇಂದಿನ ಉದಾಹರಣೆ ಎಂದು ಮನಸ್ಸಲೇ ಅಂದುಕೊಳ್ಳುತ್ತಾ ಹೋಟೇಲ್ ತಲುಪಿ ಬಹುದಿನಗಳ ಹಿಂದೆ ತಿಂದ ತನಗಿಷ್ಟವಾದ ಮಸಾಲಾ ದೋಸೆಯನ್ನು ಒರ್ಡರ ಮಾಡಿ ಅದರ ಬರುವಿಕೆಯನ್ನೇ ಕಾಯುತ್ತಾ ಕುಳಿತ.

--ಮಂಜು ಹಿಚ್ಕಡ್

Tuesday, July 28, 2015

ಹುಡುಕಾಟದ ಹಾದಿಯಲ್ಲಿ ಭಾಗ ೩


ಆತ ತೋರಿಸಿದ ದಾರಿಯಲ್ಲಿ ಒಂದೆರಡು ನೂರು ಮೀಟರ್ ನಡೆದೊಡೊನೆ ಅವನು ಹುಡುಕುತಿದ್ದ ವಿಳಾಸ ಸಿಕ್ಕಿತು. ಅವನು ಕಂಪನಿಯ ಗೇಟಿನ ಹತ್ತಿರ ಹೊರಡುವ ಹೊತ್ತಿಗೆ ಅವನ ಗಡಿಯಾರದಲ್ಲಿ ೯ ಹೊಡೆದಿತ್ತು. ಗೇಟಿನತ್ತ ನೋಡಿದ ಗೇಟಿನ್ನು ಮುಚ್ಚೇ ಇತ್ತು. ಇಂಟರ್ವೂವ್ಗೆ ಬಂದ ಜನ ಸಾಲಾಗಿ ಆರು ಸಾಲುಗಳಲ್ಲಿ ನಿಂತಿದ್ದರು. ಆತ ಹೋಗಿ ಒಂದು ಸಾಲಿನ ತುದಿಯನ್ನು ನೋಡಿ ನಿಂತುಕೊಂಡ. ಒಂದೊಂದು ಸಾಲಿನಲ್ಲೂ ಮೂನ್ನೂರಕ್ಕೂ ಹೆಚ್ಚು ಜನ ನಿಂತಿದ್ದರೂ. ಅವನು ಒಂದು ನಿಂತ ಕೆಲವೇ ನಿಮಿಷಗಳಲ್ಲಿ ಅವನು ನಿಂತ ಸಾಲು ಬೆಳೆಯುತ್ತಲೇ ಇತ್ತು. ತಿರುಗಿ ನೋಡಿದ ಅವನ ಹಿಂದೆ ನೂರಕ್ಕೂ ಹೆಚ್ಚು ಜನ ನಿಂತಿದ್ದರು. ಗೇಟಿನ ಎದುರಿಗೆ ನಿಂತಿದ್ದ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಉದ್ಯೋಗಿಯೊಬ್ಬರು ಚಿಕ್ಕದಾದ ಧ್ವನಿವರ್ಧಕ ಹಿಡಿದು ಏನೇನೋ ಕೂಗುತ್ತಿದ್ದರೂ ಆ ಅಭ್ಯರ್ಥಿಗಳ ಗಲಾಟೆಯಲ್ಲಿ ಅದೇನೆಂದು ಹಿಂದಿನವರಿಗೆ ತಿಳಿಯುತ್ತಿರಲಿಲ್ಲ. ಜನ ಹಿಂದಿನಿಂದ, ಮುಂದಿನಿಂದ ತಳ್ಳುತ್ತಲೇ ಇದ್ದರು. "ಹಾಳಾದ್ದು ನೌಕರಿ ಒಂದು ಸಿಕ್ಕರೆ ಇವೆಲ್ಲ ತಾಪತ್ರಯ ವಿರುತ್ತಿತ್ತೇ" ಎಂದಿತು ಅವನ ಮನಸ್ಸು.

ಗಂಟೆ ೯-೩೦ ಗೇಟಿನತ್ತ ನೋಡಿದ ಸಾಲು ಹಾಗೇ ಇತ್ತು, ಯಾರು ಮುಂದೆ ಗೇಟನ್ನು ದಾಟಿ ಹೋಗಿರಲಿಲ್ಲ. ಹಿಂದೆ ನೋಡಿದ ಸಾಲು ಅವನ ಮುಂದಿದ್ದಕ್ಕಿಂತ ದೊಡ್ಡದಾಗಿ ಬೆಳೆದಿತ್ತು. ಅಂತೂ ಬೆಂಗಳೂರಿನಲ್ಲಿ ಈಗ ತಾನು ಒಂಟಿಯಲ್ಲ. ನನಗೂ ನನಗೆ ತಿಳಿಯದ ರೀತಿಯಲ್ಲಿ ಇಷ್ಟೊಂದು ಜನ ಗೆಳೆಯರಿದ್ದಾರೆ ಎನಿಸಿತು. ಬೆಂಗಳೂರಿನಲ್ಲೇನು ನಿರುದ್ಯೋಗಿಗಳಿಗೆ ಕೊರತೆಯೇ, ಪೋನ್ ರಿಂಗ್ ಆಯಿತು. ಎತ್ತಿ ನೋಡಿದ ಪ್ರಕಾಶನ ನಂಬರ್.

"ಹಲೋ" ಎಂದ

"ಹಲೋ ಸಂತೋಷ ಎಲ್ಲಿದ್ದಿಯಾ?" ಎಂದು ಕೇಳಿದ ಪ್ರಕಾಶ.

"ನಾನು ಇಲ್ಲೇ ಸಾಲಲ್ಲಿ ನಿಂತಿದ್ದೇನೆ" ಎಂದು ಹಿಂದೆ- ಮುಂದೆ, ಅಕ್ಕ-ಪಕ್ಕ ಎಲ್ಲಾ ನೋಡಿ "ನೀನೆಲ್ಲಿದ್ದಿಯಾ?" ಎಂದು ಕೇಳಿದ.

"ನಾನು ಮೂರನೇ ಸಾಲಿನಲ್ಲಿ ಇದ್ದೇನೆ, ನನಗಿಂತ ಮುಂದೆ ೧೭-೧೮ ಜನ ಇದ್ದಾರೆ"

"ಹೌದಾ, ನಾನು ತುಂಬಾ ಹಿಂದೆ ಇದ್ದೇನೆ ಕಣೋ, ಐದನೇ ಸಾಲಿನಲ್ಲಿ ನಿಂತಿದ್ದೇನೆ. ನನಗಿಂತ ಮುಂಚೆ ತುಂಬಾ ಜನರಿದ್ದಾರೆ" ಎಂದ.

"ಓಹ್ ಹಾಗಾ, ಇಂಟರ್ವೂವ್ ಹತ್ತು ಗಂಟೆಗಂತೆ, ಇನ್ನೊಂದು ಅರ್ಧ ಗಂಟೆಯಲ್ಲಿ ೫೦-೫೦ ಜನರ ಗುಂಪು ಮಾಡಿ ಒಳಗೆ ಬಿಡುತ್ತಾರಂತೆ."

"ಓಹ್, ಓಕೆ", ಎಂದು "ಇಂಟರ್ವೂವ್ ಆದ ಮೇಲೆ ಹೇಳು" ಎಂದು ಪೋನಿಟ್ಟ ಸಂತೋಷ.

ಹತ್ತು ನಿಮಿಷ ಕಳೆಯುವುದರಲ್ಲಿ, ಸಾಲಿನಲ್ಲಿ ಸ್ವಲ್ಪ ಬದಲಾವಣೆ ಆದಂತಾಯಿತು. ಅವನ ಮುಂದಿದ್ದ ಕೆಲವು ಜನ ಮುಂದಕ್ಕೆ ಹೋದರು. ಅಸ್ಪಷ್ಟವಾಗಿ ಕಾಣುತಿದ್ದ ಗೇಟಿನತ್ತ ನೋಡಿದ, ಗೇಟಿನಿಂದ ಒಳಗೆ ಕೆಲವರು ಒಳ ಹೋಗುತ್ತಿರುವುದು ಕಾಣಿಸಿತು. ಹೀಗೆ ಒಂದು ತಾಸು ಕಳೆಯುವಷ್ಟರಲ್ಲಿ, ಮೂರು ಬಾರಿ ಲೈನ್ ಮುಂದಕ್ಕೆ ಹೊರಟಿತು. ಮೊದಲು ಅಸ್ಪಷ್ಟವಾಗಿ ಕಾಣುತಿದ್ದ ಗೇಟಿನ ಭಾಗ ಈಗ ಮೊದಲಿನದಕ್ಕಿಂತ ಸ್ವಲ್ಪ ಜಾಸ್ತಿ ಎನ್ನುವಷ್ಟು ಕಾಣಿಸುತಿತ್ತು. ಒಳಗೆ ಹೋದವರಾರು ಇಲ್ಲಿಯವರೆಗೆ ಹೊರಗೆ ಬಂದಿರಲಿಲ್ಲ. ಎಲ್ಲರೂ ಮುಂದಿನ ತಮ್ಮ ಸರತಿಗಾಗಿ ಕಾಯುತ್ತಾ ಕುಳಿತರು.

ಗಂಟೆ ಹನ್ನೊಂದಾಯ್ತು, ಹನ್ನೊಂದುವರೆ ಆಯ್ತು ಆದರೆ ಸಾಲು ಮುಂದಕ್ಕೆ ಹೋಗಲಿಲ್ಲ. ಆಗ ಸಾಲಿನಲ್ಲಿ ಗುಸು ಗುಸು ಸುರುವಾಯ್ತು. ಮುಂದುದ್ದವನನ್ನು ಏನೆಂದು ಕೇಳಿದ. "ಕಳೆದ ಒಂದುವರೆ ಗಂಟೆಯಿಂದ ಯಾರನ್ನು ಒಳಗೆ ಬೀದುತ್ತಿಲ್ಲವಂತೆ. ಆಗಳೇ ೩೦೦ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಒಳಗಡೆ ಇದ್ದಾರಂತೆ ಅವರಲ್ಲಿ ಯಾರು ಹೊರಗೆ ಬಂದಿಲ್ಲ. ಅವರು ಒಳಗಿದ್ದವರಲ್ಲೇ ಕೆಲವರನ್ನು ಆಯ್ದುಕೊಂಡು ಉಳಿದವರನ್ನು ಹೊರಗೆ ಕಳಿಸಬಹುದು ಎಂದು ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ" ಎಂದ. ಸಂತೋಷನಿಗೂ ಅದು ನಿಜವಿರಬಹುದೆನಿಸಿದರೂ ಏನಾದರಾಗಲೀ ನೋಡೋಣವೆಂದು ಅಲ್ಲಿಯೇ ನಿಂತ.

ಹನ್ನೆರಡು ಗಂಟೆಯ ಹೊತ್ತಿಗೆ ಇನ್ನೊಮ್ಮೆ ಕೆಲವರನ್ನು ಒಳಗಡೆ ಬಿಟ್ಟು ಮತ್ತೆ ಗೇಟು ಹಾಕಿದರು. ಮತ್ತರ್ಧ ಗಂಟೆ ಯಾರನ್ನೂ ಒಳಗೆ ಬಿಡಲಿಲ್ಲ. ಹಿಂದೆ ನೋಡಿದ ಅವನ ಹಿಂದೆ ಸಾಲಿನಲ್ಲಿ ೫೦೦ಕ್ಕೂ ಹೆಚ್ಚು ಜನ ನಿಂತಿದ್ದರೂ. ಮುಂದೆ ನೋಡಿದ ಮುಂದೆ ಏನಿಲ್ಲವೆಂದರೂ ಒಂದೊಂದು ಸಾಲಿನಲ್ಲಿ ೧೫೦ಕ್ಕೂ ಹೆಚ್ಚು ಜನರಿರಬಹುದು. ಒಂದೊಂದು ಸಾಲಿನಲ್ಲಿ ೧೫೦ಜನ ಅಂದರೆ ಆರು ಸಾಲಿನಲ್ಲಿ ೯೦೦ಕ್ಕೂ ಹೆಚ್ಚು ಜನರಿದ್ದಾರೆ. ಇದೇ ರೀತಿ ಗಂಟೆಗೆ ೧೦೦ ಜನರನ್ನು ಒಳಗೆ ಬಿಟ್ಟರೂ ಇನ್ನೂ ಆರು ಗಂಟೆಗಳಾದರೂ ಬೇಕು. ಹೀಗೆ ಲೆಕ್ಕಾಚಾರ ಹಾಕುತ್ತಾ ನಿಂತವನನ್ನು ಹಿಂದಿನಿಂದ ನಿಂತವರು ಭಲವಾಗಿ ತಳ್ಳಿದರು. ಅವನು ಆಯತಪ್ಪಿ ಪಕ್ಕದಲ್ಲಿ ಬಿದ್ದ. ಬಿದ್ದವನು ಏಳುವಷ್ಟರಲ್ಲಿ ಇನ್ನಿಬ್ಬರು ಬಿದ್ದ ಅವನ ಬೆನ್ನ ಮೇಲೆ ತಮ್ಮ ಹೆಜ್ಜೆಯ ಗುರುತು ಹಾಕಿ ಮುಂದೆ ಹೊರಟುಹೋಗಿದ್ದರು. ಎದ್ದು ಏನಾಯ್ತು ಎಂದು ನೋಡುವಷ್ಟರಲ್ಲಿ ಅವನ ಹಿಂದೆ ಮುಂದೆ ಇದ್ದ ಸಾಲೇ ಇರಲಿಲ್ಲ. ಎಲ್ಲರೂ ಗೇಟಿನತ್ತ ಹೊರಟು ಒಬ್ಬರಿಗೊಬ್ಬರು ನೂಕುತ್ತಾ ನಿಂತಿದ್ದರೂ. ಅವನ ಅಲ್ಲೇ ಪಕ್ಕದಲ್ಲಿ ನಿಂತು ತನ್ನ ಪ್ಯಾಂಟು, ಅಂಗಿಯನ್ನು ನೋಡಿಕೊಂಡ. ಇಂಟರ್ವೂವ್ ಎಂದು ತೊಟ್ಟುಬಂದ ಬಿಳಿಯ ಅಂಗಿ ಕೆಲವು ಕಡೆ ಕೆಂಪಗಾಗಿತ್ತು. ಕೈಯ ತೋಳಿನ ಭಾಗದಲ್ಲಿ ಚಿಕ್ಕದಾಗಿ ಹರಿದಿತ್ತು. ಮುಂದೆ ನೋಡಿದ, ಕೆಲವರು ಆಗಲೇ ಗೇಟು ಹತ್ತಿ ಒಳಹೋಗಲು ಪ್ರಯತ್ನಿಸುತಿದ್ದರು. ಆ ಕಂಪನಿಯ ಸುತ್ತ ಮಾತ್ರ ಇದ್ದ ಸೆಕ್ಯೂರಿಟಿ ಗಾರ್ಡಗಳೆಲ್ಲ ಎಷ್ಟೇ ಪ್ರಯತ್ನಿಸಿದರೂ ಆ ನೂಕು ನುಗ್ಗಲನ್ನು ತಡೆಯಲು ಆಗುತ್ತಿರಲಿಲ್ಲ. ಬಹುಶಃ ಆಗಲೇ ಕಂಪನಿಯವರು ಪೋಲಿಸರಿಗೆ ಕರೆ ನೀಡಿರಬೇಕು. ನಾಲ್ಕಾರು ಪೋಲೀಸ್ ಜೀಪುಗಳು ಬಂದವು. ಜನ ದಿಕ್ಕಾ ಪಾಲಾಗಿ ಓಡ ತೊಡಗಿದರು. ಇನ್ನೂ ನಿಂತು ಪ್ರಯೋಜನವಿಲ್ಲವೆಂದು ಆ ಸ್ಥಳವನ್ನು ಬಿಟ್ಟು ಹೊರಗೆ ಬಂದು, ಚಿಕ್ಕ ಪೆಟ್ಟಿಗೆ ಅಂಗಡಿಯ ಬಳಿ ನಿಂತ. ಅಂಗಿ ಪ್ಯಾಂಟು ತೊಳೆಯಲು ಅರ್ಧ ಬಾರು ಸೋಪು ಬೇಕೆನಿಸಿತು ಆತನಿಗೆ. ಬೆಳಿಗ್ಗೆಯಿಂದ ಏನು ತಿನ್ನದೇ ಇದ್ದುದರಿಂದ ಹೊಟ್ಟೆ ತಾಳ ಹಾಕುತಿತ್ತು.

ಪೆಟ್ಟಿಗೆ ಅಂಗಡಿಯ ಬಳಿ ನಿಂತವನು ಸಮಯ ನೋಡಿದ ಗಂಟೆ ಒಂದುವರೆ ದಾಟಿತ್ತು. ಬೆಳಿಗ್ಗೆಯಿಂದ ಏನು ತಿನ್ನದೇ ಇದ್ದುದರಿಂದ ಹೊಟ್ಟೆ ತಾಳ ಹಾಕುತಿತ್ತು. ಪೆಟ್ಟಿಗೆ ಅಂಗಡಿಯವನಿಂದ ಚಹಾ ಒಂದು ಬನ್ ತೆಗೆದುಕೊಂಡು ಚಹಾದಲ್ಲಿ ಬನ್ ನೆನೆಸಿಕೊಂಡು ತಿನ್ನುತ್ತಾ ನಿಂತವನು. ಮೊಬೈಲ್ನಲ್ಲಿ ಬರುತ್ತಿರುವ ಕರೆಯನ್ನು ಕೇಳಿ. ಬಹುಶಃ ಪ್ರಕಾಶ ಇವೊತ್ತಿಗೆ ಇಂಟರ್ವೂವ್ ಮುಗಿಸಿ ಕರೆ ಮಾಡುತ್ತಿರಬೇಕು ಎಂದುಕೊಂಡು ಮೊಬೈಲನ್ನು ಎತ್ತಿದ. ಯಾವುದೋ ಗೊತ್ತಿಲ್ಲದ ನಂಬರ್ನಿಂದ ಕರೆ ಬರುತಿತ್ತು. ಬಹುಶಃ ಯಾವುದೋ ಜಾಹಿರಾತಿನ ಕರೆ ಇರಬಹುದು ಎಂದು ಮೊಬೈಲನ್ನು ಕಿಸಿಯಲ್ಲಿ ತುರುಕಲು ಹೊರಟವನು, ನೋಡಿಯೇ ಬಿಡೋಣವೆಂದು, "ಹಲೋ" ಎಂದ.

-ಮುಂದುವರೆಯುವುದು....

--ಮಂಜು ಹಿಚ್ಕಡ್

Monday, July 20, 2015

ಹುಡುಕಾಟದ ಹಾದಿಯಲ್ಲಿ:ಭಾಗ ೨

ನಿಮಿಷಕ್ಕೆ ಒಂದರಂತೆ ವೋಲ್ವೋ ಬಸ್ಸುಗಳು ಬಂದರೂ, ಸಾಮಾನ್ಯ ವರ್ಗದ ಬಸ್ಸುಗಳು ಮಾತ್ರ ಬರುತ್ತಿರಲಿಲ್ಲ. ಸಾರಿ, ಮಿಡಿ, ಚೂಡಿ, ಪ್ಯಾಂಟು ಹೀಗೆ ಹಲವಾರು ತರಹದ ಬಣ್ಣ ಬಣ್ಣದ ವಸ್ತ್ರ ಧರಿಸಿ, ಮುಖಕ್ಕೆ ತುಟಿಗೆ ಬಣ್ಣ ಬಳಿದು ಬಸ್ ನಿಲ್ದಾಣಕ್ಕೆ ಬಂದು ಕ್ಷಣ ಮಾತ್ರದಲ್ಲೇ ವೋಲ್ವೋ ಬಸ್ಸಿನಲ್ಲಿ ಮಾಯವಾಗುವ ಮಾಯಾಂಗಿನಿಯರನ್ನು ನೋಡಿದ್ದೇ ನೊಡಿದ್ದು. ಅಲ್ಲಿ ಎಷ್ಟು ನಿಮಿಷ ಕಳೆದರೂ ಬೇಸರವೆನಿಸುತ್ತಿರಲಿಲ್ಲ. ಹಾಗೆ ಅಲ್ಲಿಯೇ ನಿಂತವನಿಗೆ ಹತ್ತು ಹದಿನೈದು ನಿಮಿಷ ಜಾರಿದ್ದು ಗೊತ್ತಾಗಲಿಲ್ಲ. ಅಂತೂ ಅಷ್ಟು ಹೊತ್ತು ಕಾದಮೇಲೆ ಬನಶಂಕರಿ ಕಡೆಯಿಂದ ಐಟಿಪಿಎಲ್ ಕಡೆಗೆ ಹೋಗುವ ಒಂದು ಪುಸ್ಪಕ್ ಬಸ್ ಬಂತು. ಒಂದೇ ಬಾಗಿಲು, ಬಸ್ಸಿನ ಚಾಲಕನೇ ಕಂಡಕ್ಟರ್ ಕೂಡ. ಒಂಥರಾ ೨ ಇನ್ ೧. ಡ್ರೈವರ್ "ಬೇಗ ಬನ್ನಿ, ಬೇಗ ಬನ್ನಿ, ಹತ್ರಿ ಬೇಗ" ಎಂದು ಅಲ್ಲಿದ್ದ ಎಲ್ಲರನ್ನೂ ಆ ಬಸ್ಸಿನೊಳಗೆ ತುರುಕಿಸಿಕೊಂಡ. ಎಲ್ಲರಿಗಿಂತ ಮೊದಲೇ ಒಳಹೊಕ್ಕಿದ್ದರಿಂದ ಆರನೇ ಸಾಲಿನಲ್ಲಿ ಒಂದು ಸ್ಥಳ ಸಿಕ್ಕಿತು. ಅಲ್ಲಿ ಹೋಗಿ ಕುಳಿತ.  ಬಸ್ ಎಚ್ಚೆಸ್ಸಾರ್ ಬಡಾವಣೆಯ ಕೊನೆಯ ನಿಲ್ದಾಣವನ್ನು ಪ್ರವೇಶಿಸುತಿದ್ದಂತೆ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿದ, ಇದುವರೆಗೆ ಚಾಲಕನಾದವನು ಕಂಡಕ್ಟರನಾದ, "ಟಿಕೇಟ್-ಟಿಕೇಟ್" ಎಂದು ಎಲ್ಲರನ್ನು ವಿಚಾರಿಸಿ ಮತ್ತೆ ತನ್ನ ಸ್ಥಳಕ್ಕೆ ಬಂದು ಕುಳಿತು ಬಸ್ಸು ಬಿಡುವ ಹೊತ್ತಿಗೆ ಇನ್ನೈದು ನಿಮಿಷ ಕಳೆದು ಹೋಯಿತು. ಆಗಲೇ ಒಂದೆರಡು ಸಾಮಾನ್ಯ ವರ್ಗದ ಬಸ್ಸುಗಳೆರಡು ಹಾದು ಹೋದದ್ದನ್ನು ನೋಡಿದ ಸಂತೋಷಗೆ ಇದ್ಯಾವ ಬಸ್ಸನ್ನು ಹತ್ತಿದನೋ ಅನಿಸಿತು. ಸ್ವಲ್ಪ ಕಾದು ಬೇರೆ ಬಸ್ಸು ಹತ್ತಿದ್ದರೆ ಇಷ್ಟೊತ್ತಿಗೆ ಬೆಳಂದೂರಿನ ಹತ್ತಿರ ಇರಬಹುದಾಗಿತ್ತು. ಇವನು ಇದೇ ರೀತಿ ನಿಲ್ಲುತ್ತಾ ಹೋದರೆ ನಾನು ಸಂದರ್ಶನಕ್ಕೆ ಸಮಯಕ್ಕೆ ಸರಿಯಾಗಿ ಹೋದ ಹಾಗೆಯೇ.

ಬಸ್ಸು ಬೆಳೆಂದೂರು ತಲುಪುವ ಹೊತ್ತಿಗೆ ಸಂತೊಷನ ಗಡಿಯಾರದಲ್ಲಿ ಸಮಯ ಎಂಟುಗಂಟೆಯಾಗಿತ್ತು. ಆಗಿನ್ನೂ ಎಂಟು ಗಂಟೆಯೂ ಆಗಿರದ ಕಾರಣ ಅಷ್ಟೊಂದು ಟ್ರಾಪಿಕ್ ಇರಲಿಲ್ಲ. ಇದೇ ವೇಗದಲ್ಲಿ ಹೊರಟರೆ ಇನ್ನರ್ಧ ಗಂಟೆಯಲ್ಲಿ ಐಟಿಪಿಎಲ್ ತಲುಪಬಹುದೆನಿಸಿ ಮೊಬೈಲ್ ಕೈಗೆತ್ತಿಕೊಂಡು ಅದರಲ್ಲಿ ಆಟವಾಡತೊಡಗಿದ. ತುಂಬಾ ಹೊತ್ತು ಆಡಲು ಮನಸ್ಸಾಗದೇ ಮತ್ತೆ ಮೊಬೈಲನ್ನು ಕಿಸೆಗೆ ತುರುಕಿದ. ಬಸ್ಸು ಮಾರತಹಳ್ಳಿ ದಾಟಿ ವೈಟಪೀಲ್ಡ ಹತ್ತೀರ ಹತ್ತೀರ ಬಂದಿತ್ತು. ಕಿಸೆಯಲ್ಲಿ ತುರುಕಿದ ಮೊಬೈಲ್ ಬಡಿದುಕೊಳ್ಳಲು ಪ್ರಾರಂಭಿಸಿತು. ಮೊಬೈಲ್ ಎತ್ತಿ ನೋಡಿದ ಅವನು ಒಂದು ಹತ್ತು ದಿನಗಳ ಹಿಂದೆ ಇಟ್ಟ ರಿಮೈಂಡರ್ ಅದು. ಓದಿ ನೋಡಿದ "ಕಾಲ್ ರಮೇಶ್" ಎಂದಿದ್ದನ್ನು ನೋಡಿದವನಿಗೆ ಈಗ ತಾನು ರಮೇಶ ಎನ್ನುವವರಿಗೆ ಇಂದು ಕರೆ ಮಾಡಬೇಕು ಎಂದಿದ್ದು ನೆನಪಾಯಿತು. ಆದರೆ ಈಗ ಕರೆ ಮಾಡಲು ಕರೆನ್ಸಿ ಇಲ್ಲ. ಆ ಮೇಲೆ ಇಂಟರ್ವೂವ್ ಮುಗಿದ ಮೇಲೆ ಕರೆನ್ಸಿಹಾಕಿ ಮಾತನಾಡೋಣ ಎಂದುಕೊಂಡು ಮೊಬೈಲ್ ಒಳಗಿಡಲು ಹೋದವನು ಮತ್ತೆ ಕರೆ ಮಾಡಲು ಮರೆತು ಹೋದರೆ ಎಂದು ರಿಮೈಂಡರ್ನ ಸಮಯವನ್ನು ಬೆಳಿಗ್ಗೆ ೮-೩೦ಕ್ಕೆ ಎಂದಿದ್ದುದ್ದನ್ನು ಸಾಯಂಕಾಲ ೬-೩೦ ಕ್ಕೆ ಎಂದು ಬದಲಾಯಿಸಿ ಮತ್ತೆ ಕಿಸೆಗೆ ತುರುಕಿದ.

ಮೊಬೈಲನಲ್ಲಿ ರಮೇಶನ ಹೆಸರು ನೋಡಿದೊಡನೆ ರಮೇಶನ ನೆನಪಾಯಿತು. ರಮೇಶ ಅವನ ತಂದೆಯ ದೂರದ ಸಂಬಂಧವಾದರೂ ಅವರಲ್ಲಿ ಒಳ್ಳೆಯ ಭಾಂದವ್ಯವಿತ್ತು. ಆಗಾಗ ರಮೇಶನ ತಂದೆ ತಾಯಿಯರೂ ಇವನ ಮನೆಗೆ ಬರುತಿದ್ದರು. ಇವನ ತಂದೆ ತಾಯಿಯರು ಅವರ ಮನೆಗೆ ಹೋಗುತಿದ್ದರು. ರಮೇಶ ವಯಸ್ಸಿನಲ್ಲಿ ಸಂತೋಷನಿಗಿಂತಲೂ ನಾಲ್ಕೈದು ವರ್ಷದೊಡ್ಡವನಾಗಿದ್ದರೂ ಒಳ್ಳೆಯ ಸ್ನೇಹಿತರಂತೆಯೇ ಇದ್ದರು. ಮೊದ ಮೊದಲು ಚಿಕ್ಕವರಾಗಿದ್ದಾಗ ಇವರು ಅವರವರ ತಂದೆ ತಾಯಿಯರೊಂದಿಗೆ ಒಬ್ಬರ ಮನೆಗೆ ಇನ್ನೊಬ್ಬರು ಹೋಗುತಿದ್ದರು. ಆಮೇಲೆ ದೊಡ್ಡವರಾದ ಮೇಲೆ ದೂರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರಿಂದ ಹೋಗಲಾಗುತ್ತಿರಲಿಲ್ಲ. ಈಗ ಸಂತೋಷ ಮತ್ತು ರಮೇಶ ನೋಡಿ ಆಗಲೇ ಆರೇಳು ವರ್ಷಗಳೇ ಆಗಿ ಹೋಗಿದ್ದವು. ರಮೇಶನ ಮದುವೆಯ ಸಂದರ್ಭದಲ್ಲಿ ಸಂತೋಷನಿಗೆ ಪರೀಕ್ಷೆಗಳಿದ್ದುದರಿಂದ ಮದುವೆಗೂ ಹೋಗಿರಲಿಲ್ಲ. ಈಗ ರಮೇಶ ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದು ತನ್ನ ಸಂಸಾರ ಕೆಲಸ ಎನ್ನುವುದರಲ್ಲೇ ಬ್ಯೂಸಿಯಾಗಿದ್ದ.

ಸಂತೋಷ ಬೆಂಗಳೂರಿಗೆ ಬಂದ ಹೊಸತರಲ್ಲಿ, ರಮೇಶಗೆ ಕಾಲ್ ಮಾಡಿದ್ದ. ತನ್ನ ಬಗ್ಗೆ ಹೇಳಿಕೊಂಡು, ಅವನ ಕಂಪನಿಯಲ್ಲಿ ಓಪ್ನಿಂಗ್ಸ್ ಇದ್ದರೆ ತಿಳಿಸು ಎಂದು ಕೂಡ ಕೇಳಿದ್ದ. ಆಗ ರಮೇಶ ಅವನ ಬಯೋಡಾಟಾ ಕಳಿಸಿಕೊಡು ಎಂದು ಕೇಳಿ ಬಯೋಡಾಟಾ ತರಿಸಿಕೊಂಡವನು. ಪ್ರತಿಸಾರಿ ಸಂತೋಷ ಅದರ ಬಗ್ಗೆ ಕೇಳಲು ಹೋದರೆ, "ಈಗ ಸದ್ಯಕ್ಕೆ ಏನು ಓಪನಿಂಗ್ಸ್ ಇಲ್ಲ. ಇದ್ದರೆ ಹೇಳುತ್ತೇನೆ" ಎಂದು ಹೇಳುತ್ತಲೇ ಇದ್ದ. ಸಂತೋಷನ ಸ್ನೇಹಿತರಿಬ್ಬರು ರಮೇಶನ ಕಂಪನಿಯನ್ನು ಸೇರಿದಾಗ ಕೇಳಿದಾಗಲು ರಮೇಶ ತಮ್ಮ ಕಂಪನಿಯಲ್ಲಿ ಈಗ ಸದ್ಯಕ್ಕೆ ಓಪನಿಂಗ್ಸ್ ಇಲ್ಲ ಎಂದು ಹೇಳಿದ್ದ. ಆದರೆ ಅವನ ಗೆಳೆಯರು, ಅವನ ಗೆಳೆಯರ ಗೆಳೆಯರು ಬೇರೆ ಬೇರೆ ಮೂಲಗಳಿಂದ ಅದೇ ಕಂಪನಿಯನ್ನು ಸೇರಿದಾಗ ಮಾತ್ರ ಬೇಸರವಾಗದಿರಲಿಲ್ಲ. ಸಂತೋಷನ ಓರಗೆಯವನಾದ ರಮೇಶನ ನೆಂಟನೂ ಕೂಡ ರಮೇಶನ ಮುಖಾಂತರ ರಮೇಶನ ಕಂಪನಿಗೆ ಸೇರಿದ ಮೇಲೆ ರಮೇಶನ ಮೇಲೆ ಬೇಸರ ಮೂಡಿ ಅವನಿಗೆ ಕರೆ ಮಾಡುವುದನ್ನೇ ನಿಲ್ಲಿಸಿದ್ದ.

ಆದರೆ ಒಂದು ತಿಂಗಳ ಹಿಂದೆ ಸಂತೋಷನ ಮನೆಗೆ ಬಂದಿದ್ದ ರಮೇಶನ ತಂದೆ ಸಂತೋಷನ ತಂದೆಗೆ "ಏನು ನಿಮ್ಮಮಗನಿಗೆ ಇನ್ನೂ ನೌಕರಿ ಸಿಗಲಿಲ್ಲವೇ? ನಿಮ್ಮ ಮಗ ಆ ಬಗ್ಗೆ ಪ್ರಯತ್ನನೇ ಮಾಡುತ್ತಿಲ್ಲ ಇರಬೇಕು. ನನ್ನ ಮಗನನ್ನು ಕೇಳಿದಾಗ ಗೊತ್ತಾಯಿತು. ನಮ್ಮ ಮಗೆ ಅದೆಷ್ಟೋ ಇಂಟರ್ವೂವ್ ಕೊಡಿಸಿದರೂ ನಿಮ್ಮ ಮಗ ಸಿಲೆಕ್ಟ ಆಗಲಿಲ್ಲವಂತೆ. ಅವನು ಕಂಪ್ಯೂಟರ್ ಸೈನ್ಸ್ ಓದಿದ್ದರೂ ಆ ಬಗ್ಗೆ ಕೇಳಿದರೆ ಏನೂ ಗೊತ್ತಿಲ್ಲವಂತೆ. ಅವನಿಗೆ ಮಾತನಾಡಲು ಬರುವುದು ಅಷ್ಟಕಷ್ಟೇ ಅಂತೆ. ಹಾಗಾಗಿ ನಿಮ್ಮ ಮಗನಿಗೆ ಹೇಸಿಗೆಯಾಗಿ ನಮ್ಮ ಮಗನಿಗೆ ಕರೆ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದಾನಂತೆ" ಎಂದು ದೂರಿ ಹೋದಾಗ ಸಂತೋಷನ ತಂದೆ ಸಂತೋಷನ ಮಾತನ್ನು ಕೇಳದೇ, ಸಂತೋಷನಿಗಿಷ್ಟು ಬಯ್ದು, ಮತ್ತೆ ರಮೇಶನಿಗೆ ಕರೆ ಮಾಡುವಂತೆ ಹೇಳಿದ್ದರೂ ಹಾಗೆ ಒಲ್ಲದ ಮನಸ್ಸಿನಿಂದ ಅವನಿಗೆ ಕರೆ ಮಾಡಲು ನಿರ್ಧರಿಸಿದ. ಹಾಗೆ ನಿರ್ಧರಿಸಿ ಹತ್ತು ದಿನವಾದರೂ ಕರೆ ಮಾಡಲಾಗದೇ ಆ ರಿಮೈಂಡರನ್ನು ಮುಂದುಡುತ್ತಲೇ ಬಂದಿದ್ದ.

"ಐಟಿಪಿಎಲ್ ಲಾಸ್ಟ ಸ್ಟಾಪ್ ಇಳಿರಿ, ಇಳಿರಿ" ಎಂದು ಡ್ರೈವರ್ ಕಮ್ ಕಂಡಕ್ಟರ್ ಹೇಳಿದಾಗ ಸಂತೊಷ ಆ ನೆನಪುಗಳಿಂದ ಹೊರಬಂದು, ಬಸ್ಸಿನಿಂದ ಇಳಿದು ಹೊರಬಂದ. ಸುತ್ತಲೂ ನೋಡಿದ. ಸಂದರ್ಶನ ನೀಡಬೇಕಾದ ಯಾವುದೇ ಕಂಪನಿಗಳು ಅವನು ಇಳಿದ ಸ್ಥಳದಲ್ಲೆಲ್ಲೂ ಕಾಣಲಿಲ್ಲ. ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇದ್ದ ಚಹಾ ಅಂಗಡಿಯಲ್ಲಿ ನಿಂತು ಆ ವಿಳಾಸವನ್ನು ಕೇಳಿದ. ಆತ ತಮಿಳರವನು ಬೆಂಗಳೂರಿನಲ್ಲಿ ಇದ್ದು ಅದೆಷ್ಟು ವರ್ಷವಾಗಿದೆಯೋ, ಕನ್ನಡ ಮಾತ್ರ ಬರುತ್ತಿರಲಿಲ್ಲ. ಬಹುಶಃ ಬೆಂಗಳೂರಿನಲ್ಲಿ ಅದರ ಅವಸ್ಯಕತೆಯಿಲ್ಲ ಎಂದು ತಿಳಿದುದ್ದರಿಂದ ಆತ ಕಲಿತಿರಲಿಕ್ಕಲ್ಲ. ರಮೇಶ ಆ ಕಂಪನಿಯ ವಿಳಾಸವನ್ನು ಕೇಳಿದೊಡನೆ ತಮಿಳಿನಲ್ಲಿಯೇ " ಈಂಗ್ ಸ್ಟೇಟ್ ಪೋ" ಎಂದು ಅವನ ಕೈಯಿಂದ ಒಂದು ದಾರಿಯನ್ನು ತೋರಿಸಿ ಅದೇ ದಾರಿಯಲ್ಲಿ ನೇರವಾಗಿ ಹೋಗುವಂತೆ ತಿಳಿಸಿದ.

-ಮುಂದುವರೆಯುವುದು....

--ಮಂಜು ಹಿಚ್ಕಡ್

Monday, July 13, 2015

ಹುಡುಕಾಟದ ಹಾದಿಯಲ್ಲಿ

ಹುಡುಕಾಟದ ಹಾದಿಯಲ್ಲಿ:ಭಾಗ ೨
ಹುಡುಕಾಟದ ಹಾದಿಯಲ್ಲಿ:ಭಾಗ ೩
ಹುಡುಕಾಟದ ಹಾದಿಯಲ್ಲಿ:ಭಾಗ ೪
"ನಮಸ್ಕಾರ ಸರ್, ನಾನು ಸಂತೋಷ ಅಂತ, ನಿಮ್ಮ ಕಂಪನಿಯಲ್ಲಿ ಹೊಸಬರಿಗೆ  ಸಂದರ್ಶನ ಇವತ್ತು ನಡೆಯುತ್ತಿದೆ ಎಂದು ನನ್ನ ಗೆಳೆಯರಿಂದ ತಿಳಿಯಿತು. ಆ ಸಂದರ್ಶನಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ." ಎಂದು ಹೇಳುತ್ತಾ ತನ್ನ ಬ್ಯಾಗಿನಲ್ಲಿದ್ದ ಬಾಯೋಡಾಟಾವನ್ನು ತೆಗೆದು ಸೆಕ್ಯೂರಿಟಿ ಗೇಟಿನಲ್ಲಿದ್ದ ಸೆಕ್ಯೂರಿಟಿ ಗಾರ್ಡಗೆ ಕೊಡಲು ಹೋದ.

ಸೆಕ್ಯೂರಿಟಿ ಗಾರ್ಡ ಅದನ್ನು ತೆಗೆದು ಕೊಳ್ಳದೇ, ಅವನಿಗೆ "ನಮಗೆ ತಿಳಿದ ಮಟ್ಟಿಗೆ ಇಂದು ಇಲ್ಲಿ ಯಾವುದೇ ಸಂದರ್ಶನ ನಡೆಯುವ ಬಗ್ಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ. ಒಂದು ನಿಮಿಷ ನಿಲ್ಲಿ, ನಾನು ವಿಚಾರಿಸುತ್ತೇನೆ," ಎಂದು ಸೆಕ್ಯೂರಿಟಿ ಕೌಂಟರನಿಂದ ಇಂಟರಕಾಮ್ ಮೂಲಕ ಯಾರಿಗೋ ಕರೆ ಮಾಡಿ ಇಟ್ಟು " ನೋಡಿ ಸಂತೋಷ ಇಲ್ಲಿ ಯಾವುದೇ ಇಂಟರವ್ಯೂನ ವ್ಯವಸ್ಥೆಯಾಗಿಲ್ಲ. ಬಹುಶಃ ನಮ್ಮ ಐಟಿ. ಪಿ. ಎಲ್ ಅಥವಾ ವೈಟ್ ಪೀಲ್ಡ್ ಗಳಲ್ಲಿರುವ ನಮ್ಮ ಉಳಿದ ಬ್ರಾಂಚಗಳಲ್ಲಿ ಇಂಟರವ್ಯೂವ ನಡಿತಾ ಇದ್ದರೂ ಇರಬಹುದು. ನೀವು ಅಲ್ಲಿಗೆ ಹೋಗಿ ಬೇಕಿದ್ದರೆ ವಿಚಾರಿಸಬಹುದು." ಎಂದು ಹೇಳಿ ತನ್ನ ಕೆಲಸದಲ್ಲಿ ಮಗ್ನನಾದ.

ಸಂತೋಷ ತಾನು ಕಟ್ಟಿದ ಕೈ ಗಡಿಯಾರವನ್ನು ನೋಡಿದ ಅದರಲ್ಲಿ "ಏಳು ಗಂಟೆ" ಎಂದು ತೋರಿಸುತ್ತಿದ್ದರೂ, ನಿಜವಾದ ಸಮಯ "೬-೪೫" ಎಂದು ಅವನಿಗೆ ತಿಳೀದಿತ್ತು. ಅವನಿಗೆ ಯಾವಾಗಲೂ ಗಡಿಯಾರದ ಸಮಯವನ್ನು ಮುಂದಿಟ್ಟೇ ಅಭ್ಯಾಸ. ಇನ್ನೂ ಸಂದರ್ಶನ ಪ್ರಾರಂಭವಾಗಲೂ ೨ಗಂಟೆಗಿಂತಲೂ ಹೆಚ್ಚಿನ ಸಮಯವಿದ್ದರೂ ಅದು "ವಾಕ್ ಇನ್" ಆದುದರಿಂದ ಬಹಳ ಜನ ಬರುತ್ತಾರೆಂದು ಅವನಿಗೂ ಗೊತ್ತು. ಇದೇ ರೀತಿ ಕಳೆದ ಒಂದು ವರ್ಷದಿಂದ ಇಂತಹ ಅದೆಷ್ಟೋ ವಾಕ್ ಇನಗಳಿಗೆ ಹೋದ ಅನುಭವವಿತ್ತಲ್ಲವೇ ಅವನಿಗೆ. ಹಾಗಾಗಿಯೇ ಆತ ಬೇಗನೇ ಎದ್ದು ತನ್ನ ರೂಮಿನ ಸ್ನೇಹಿತರಿಗೂ ತಿಳಿಸದೇ ರೂಮಿನಿಂದ ಹೊರಟು ಬಂದಿದ್ದ. ಸಂದರ್ಶನಕ್ಕೆ ಇನ್ನೂ ಎರಡುಗಂಟೆಳಿವೆಯಾದರೂ ತಾನೂ ಅಲ್ಲಿಗೆ ಹೋಗುವುದು ತಡವಾದರೆ ನೂಕು ನುಗ್ಗಲಾಗುತ್ತದೆ. ಏನು ಮಾಡುವುದು ಎಂದು ಎಂದು ವಿಚಾರಮಾಡುತ್ತಾ ಒಂದೆರಡು ನಿಮಿಷ ನಿಂತವನು. ಒಮ್ಮೆ ಹೋಗಿ ನೋಡಿಯೇ ಬಿಡೋಣವೆಂದು ಬಸ್ ನಿಲ್ದಾಣದತ್ತ ಹೊರಟ.

ನಿನ್ನೆ ಸಾಯಂಕಾಲವಷ್ಟೇ ಅವನಿಗೆ ಈ ಸಂದರ್ಶನದ ಬಗ್ಗೆ ತಿಳಿದದ್ದು. ಆವನ ಹಾಗೆಯೇ ನೌಕರಿ ಹುಡುಕುತಿದ್ದ ಅವನ ಸ್ನೇಹಿತ ಪ್ರಕಾಶ ಅವನಿಗೆ ಕರೆಮಾಡಿ " ನಾಳೆ ಆ ಕಂಪನಿಯಲ್ಲಿ ಇಂಟರ್ವ್ಯೂವ್ ಇದೆ ಅಂತೆ, ನಾನು ಇಲ್ಲಿ ಯಾರೋ ಇಬ್ಬರು ಉತ್ತರ ಭಾರತದ ಕಡೆಯ ಹುಡುಗರು ಮಾತನಾಡುವುದನ್ನು ಕೇಳಿಸಿಕೊಂಡೆ. ನಾನು ಹೋಗುತಿದ್ದೇನೆ, ನೀನು ಬರುತ್ತೀಯಾ?" ಎಂದು ಕೇಳಿದಾಗ "ಹೂಂ, ಆಯ್ತು ಬರುತ್ತೇನೆ" ಎಂದು ಹೇಳಿ, ಎಡ್ರೆಸ್ ಕೂಡ ಕೇಳುವುದನ್ನು ಮರೆತು ಫೋನ್ ಇಟ್ಟು ಬಿಟ್ಟ. ಆದರೆ ಅವನಿಗೆ ಆ ಕಂಪನಿ ಎಲ್ಲಿ ಬರುತ್ತದೆ ಎನ್ನುವುದು ಗೊತ್ತಿರಲಿಲ್ಲ. ರಾತ್ರಿ ತನ್ನ ರೂಂನ ಸಹಪಾಟಿಯೊಂದಿಗೆ ಕೇಳಿದಾಗ, ಅವನು ಅದು ಬಹುಶಃ ಎಲೆಕ್ಟ್ರಾನಿಕ್ ಸಿಟಿ ಹತ್ತಿರ ಇರಬಹುದು. ನಾನು ಒಮ್ಮೆ ನೋಡಿದ ಹಾಗಿದೆ, ಎಂದು ಹೇಳಿದ್ದಷ್ಟನ್ನೇ ಕೇಳಿ ಅಲ್ಲಿಗೆ ಬಂದಿದ್ದ. ಅವನ ಸ್ನೇಹಿತನಿಗೆ ಕರೆ ಮಾಡಿ ಕೇಳೋಣವೆಂದರೆ ಕರೆನ್ಸಿ ಬೇರೆ ಇಲ್ಲ. ಕರೆನ್ಸಿ ಹಾಕೋಣವೆಂದರೆ ಕಿಸೆಯಲ್ಲಿ ಇದ್ದುದೇ ೧೭೦ ರೂಪಾಯಿ. ಕರೆನ್ಸಿಗೆ ರೊಕ್ಕ ಕರ್ಚು ಮಾಡಿದರೆ ಮಧ್ಯದಲ್ಲಿ ಬೇರೆ ಯಾವುದಕ್ಕಾದರೂ ಹಣ ಬೇಕಾದರೆ ಎಂದು ಕರೆನ್ಸಿ ಬೇರೆ ಹಾಕಿರಲಿಲ್ಲ. ಅವನ ಹತ್ತಿರ ಬಸ್ ಪಾಸ್ ಇದ್ದುದರಿಂದ ಬಸ್ಸಿನಲ್ಲಿ ಓಡಾಡುವುದಕ್ಕಂತೂ ತೊಂದರೆ ಇರಲಿಲ್ಲ.

ಸಮೀಪದ ಬಸ್ ನಿಲ್ದಾಣಕ್ಕೆ ಬಂದು ಐದು ನಿಮಿಷವಾಗುತ್ತಾ ಬಂದರೂ ಅವನು ಕಾಯುತಿದ್ದ ಬಸ್ ಬರುತ್ತಿರಲಿಲ್ಲ. ಒಂದೆರಡು ವೋಲ್ವೋ ಬಸ್ಸುಗಳು ಬಂದು ಹೋದರೂ ಅವನಿಗೆ ಆ ಬಸ್ಸುಗಳಿಂದ ಪ್ರಯೋಜನವಿರಲಿಲ್ಲ. ಹಾಗಾಗಿ ತನಗೆ ಪ್ರಯೋಜನವಾಗುವಂತಹ, ಅಂದರೆ ತನ್ನ ಪಾಸು ನಡೆಯುವ ಬಸ್ಸಿಗಾಗಿ ಕಾಯುತ್ತಾ ನಿಂತ. ಇನ್ನೈದು ನಿಮಿಷ ಕಳೆಯುವಷ್ಟರಲ್ಲಿ ಅವನು ಕಾಯುತಿದ್ದ ಸಾಮಾನ್ಯ ವರ್ಗದ ಬಸ್ಸು ಬಂತು. ಆ ಬಸ್ಸು ಜನರಿಂದ ತುಂಬಿ ಬಸುರಿ ಹೆಂಗಸಿನಂತಾಗಿದ್ದರಿಂದ ಅವನಿಗೆ ಒಳಗೆ ಸಂಪೂರ್ಣ ಹೋಗಲಾರದೇ ಬಾಗಿಲಿನಲ್ಲೇ ನಿಂತ. ಬಸ್ಸನ ಪಕ್ಕದಲ್ಲಿ ಹಾದು ಹೋಗುವ ಇತರೆ ಕಂಪನಿಯ ಕಾರುಗಳು, ಆ ಕಾರಿನಲ್ಲಿ ನಾಲ್ಕೈದು ಜನ ಕೂಡುವಂತಿದ್ದರೂ, ಒಂದಿಬ್ಬರೂ ಮಾತ್ರ ಆರಾಂ ಆಗಿ ಕುಳಿತು ಓಡಾಡುವುದನ್ನು ನೋಡಿ, ನಾನ್ಯಾವಾಗ ನೌಕರಿ ಹಿಡಿಯುವುದು, ನಾನ್ಯಾವಾಗ ಅವರಂತೆ ಓಡಾಡುವುದು, ಆಗಲೇ ಎಂ.ಎಸ್.ಸಿ ಮುಗಿಸಿ ವರ್ಷ ಕಳೆದರೂ ಇದುವರೆಗೂ ನೌಕರಿ ಇಲ್ಲ. ನನ್ನ ಹಣೆಬರಹಕ್ಕೆ ಈ ಹೊಟ್ಟೆ ತುಂಬಿದ ಬಸ್ಸುಗಳೇ ಗತಿ ಏನೋ? ಹೀಗೆ ಯೋಚಿಸುತಿದ್ದವನಿಗೆ, ಕಂಡಕ್ಟರ್, "ಗಾರೇಪಾಳ್ಯ, ಗಾರೇಪಾಳ್ಯ, ಯಾರ್ರೀ ಗಾರೇಪಾಳ್ಯ ಇಳಿವವರು ಇಳಿರಿ" ಎಂದೂ ಕೂಗಿ ಕೊಂಡಾಗ ತನ್ನ ವಿಚಾರದಿಂದ ಹೊರಬಂದು. ಬಾಗಿಲಿನಿಂದ ಇಳಿದು ಬಸ್ಸಿನಿಂದ ಅಲ್ಲಿ ಇಳಿಯುವವರಿಗೆ ಅವಕಾಶ ಮಾಡಿಕೊಟ್ಟು, ಜನರು ಇಳಿದ ಮೇಲೆ ಮತ್ತೆ ಬಸ್ಸನ್ನು ಏರಿದ.

ಆ ಜನರ ರಸ್ಸಿನಲ್ಲಿ ಅಲ್ಲಿಯವರೆಗೆ ಅದೂವರೆಗೂ ಬಂದು ತಲುಪಲಾರದ ಕಂಡಕ್ಟರ್, ಮುಂಬಾಗಿಲಿನಿಂದ ಇಳಿದು ಹಿಂಬಾಗಿಲಿನಲ್ಲಿ ಮತ್ತೆ ಹತ್ತಿ " ಟಿಕೇಟ್, ಟಿಕೇಟ್, ಯಾರ್ರಿ ನಿಮ್ದಾಯ್ತೇನ್ರೀ" ಎಂದು ಸಂತೋಷನನ್ನು ಕೆಳಿದಾಗ, "ಪಾಸ್" ಎಂದ.

"ಎಲ್ರಿ ಪಾಸು ತೋರ್ಸ್ರಿ"

"ತಗೊಳ್ಳಿ" ಎಂದು ತೋರಿಸಿ ಮತ್ತೆ ತನ್ನ ಅಂಗಿಯ ಕಿಸೆಯಲ್ಲಿಯೇ  ಇಟ್ಟುಕೊಂಡ. ಹಾಗೆ ಪಾಸನ್ನು ತೆಗೆದು ತೋರಿಸುವಾಗ, ಆ ಪಾಸಿಗೆ ಅಂಟಿಕೊಂಡಿದ್ದ ೨೦ರ ನೋಟೊಂದು ಕೆಳಗೆ ಬಿತ್ತು. ಅವನು ನೋಡುವಷ್ಟರಲ್ಲಿ ಅದು ಮಾಯವಾಗಿ ಇನ್ನಾರದೋ ಕಿಸೆಯನ್ನು ಸೇರಿಯೂ ಆಗಿತ್ತು. "ಥೂತ್, ಇಪ್ಪತ್ತು ರೂಪಾಯಿ ಹೋಯ್ತಲ್ಲ" ಎಂದು ಯೋಚಿಸುವಷ್ಟರಲ್ಲಿ ಬಸ್ಸು ಬೊಮ್ಮನಹಳ್ಳಿ ದಾಟಿ ಸಿಲ್ಕ ಬೋರ್ಡವರೆಗೆ ಬಂದಿತ್ತು. ಆ ಬಸ್ಸು ಮುಂದೆ ಮೆಜೆಸ್ಟಿಕ್ ಹೋಗುತ್ತಿದ್ದುದರಿಂದ ಆತ ಆ ಸಿಲ್ಕ ಬೋಡಿನಲ್ಲಿ ಇಳಿದು, ವೈಟಪೀಲ್ಡ್ ಅಥವಾ ಐಟಿಪಿಎಲ್ ಕಡೆ ಹೊರಡುವ ಬಸ್ಸುಗಳಿಗಾಗಿ ಸಿಲ್ಕಬೋರ್ಡ ಸಿಗ್ನಲ್ ದಾಟಿ ಎಚ್ಚೆಸ್ಸಾರ್ ಕಡೆಯ ರಸ್ತೆಯಲ್ಲಿ ಬಂದು ನಿಂತ.

(ಮುಂದುವರೆಯುವುದು...)

--ಮಂಜು ಹಿಚ್ಕಡ್

Sunday, June 28, 2015

ಬದುಕಿನ ಪಯಣ

ಬಸ್ಸು ಈಗ ಬಹುಶಃ ಚಿತ್ರದುರ್ಗದ ಹತ್ತಿರ, ಹತ್ತಿರ ಬಂದಿರಬಹುದೇನೋ ಎಂದುಕೊಳ್ಳುತ್ತಾ ತನ್ನ ಪಕ್ಕದ ಕಿಟಕಿಯನ್ನು ಸರಿಸಿ ಹೊರಗೆ ನೋಡಿದ. ಹುಣ್ಣಿಮೆಯ ತಿಂಗಳ ಬೆಳಕಲ್ಲಿ ಎತ್ತ ನೋಡಿದರೂ ಬಯಲು ಬಯಲಾಗಿ ಕಾಣುವ ಬಯಲು ಸೀಮೆಯ ಬಯಲು ಪ್ರದೇಶವೇ ಕಾಣುತ್ತಿತ್ತೇ ಹೊರತು, ಬಸ್ಸು ಎಲ್ಲಿಯವರೆಗೆ ಬಂದು ತಲುಪಿದೆ ಎನ್ನುವುದು ತಿಳಿಯಲಿಲ್ಲ. ಹೊರಗಿನ ತಂಗಾಳಿ ಬಸ್ಸಿನ ವೇಗಕ್ಕೆ ರಭಸವಾಗಿ ಬಳ ನುಗ್ಗುತ್ತಿದುದರಿಂದ, ಕಿಟಕಿಯನ್ನು ಹಾಗೆ ತೆಗೆದಿಡಲು ಮನಸ್ಸು ಬಾರದೇ, ಮತ್ತೆ ಮುಚ್ಚಿದ. ಚಳಿಗಾಲವಾಗಿದ್ದರಿಂದಲೋ ಏನೋ, ಹೊಟ್ಟೆ ತುಂಬಾ ನೀರು ತುಂಬಿ, ತೊಡೆಗಳ ಮದ್ಯದಲ್ಲಿ ಕೋಲಾಹಲವನ್ನೆಬ್ಬಿಸುತ್ತಿತ್ತು. ಬಸ್ಸು ನಿಲ್ಲಿಸಿದರೆ ಸಾಕು ಒಮ್ಮೆ ಹೊರಹೋಗಿ ಟ್ಯಾಂಕ್ ಖಾಲಿ ಮಾಡಿ ಬಂದು ಬಿಡಬೇಕು ಎಂದುಕೊಂಡು ಮತ್ತೆ ಕುಳಿತ. ಸಮಯ ಎಷ್ಟಾಗಿರಬಹುದು ಎಂದು ನೋಡೋಣವೆಂದುಕೊಂಡು ಕಿಟಕಿಯ ಗ್ಲಾಸಿನಿಂದ ಒಳತುರುಕುವ ಚಂದ್ರನ ಬೆಳಕಿಗೆ ತನ್ನ ಕೈಗಡಿಯಾರವನ್ನು ಒಡ್ಡಿದ. ಗಂಟೆ ಎರಡು ಕಳೆದು ಮೂರರತ್ತ ವಾಲಿದಂತೆ ಕಂಡಿತೆ ಹೊರತು ಸರಿಯಾಗಿ ಸಮಯವನ್ನು ಗುರುತಿಸಲಾಗಲಿಲ್ಲ. ಸ್ವಲ್ಪ ಹೊತ್ತಾದರೂ ಮಲಗೋಣವೆಂದು ಕುಳಿತ ಕುರ್ಚಿಗೆ ಸ್ವಲ್ಪ ಒರಗಿದ. ಬಸ್ಸಿನಲ್ಲಿ ಮಲಗಿ ಅಭ್ಯಾಸವಿಲ್ಲದ್ದರಿಂದಲೇ ಏನೋ ನಿದ್ದೆ ಹತ್ತಿರ ಸುಳಿಯಲಿಲ್ಲ. ನಿದ್ದೆ ಹತ್ತಿರ ಬರುತ್ತೇನೆ ಎಂದರೂ ಹೊಟ್ಟೆಯ ತಳಭಾಗದಲ್ಲಾಗುತ್ತಿರುವ ಕೋಲಾಹಲ ನಿದ್ದೆಯನ್ನು ಹತ್ತಿರ ಸುಳಿಯಲು ಬಿಡಲಿಲ್ಲ.

ಹೊಟ್ಟೆ ಖಾಲಿ ಮಾಡದೇ ನಿದ್ದೆ ಬರಲಾರದು ಎಂದುಕೊಂಡವ ಡ್ರೈವರ್ನಿಗೆ ಸ್ವಲ್ಪ ಹೊತ್ತು ಬಸ್ಸು ನಿಲ್ಲಿಸಲು ಹೇಳಿ, ಹೊಟ್ಟೆ ಖಾಲಿ ಮಾಡಿ ಬಂದು ಬಿಡಬೇಕೆಂದು ನಿರ್ಧರಿಸಿ ಸೀಟಿನಿಂದ ಎದ್ದು ಡ್ರೈವರ್ನ ಬಳಿ ಹೋಗಿ ಸ್ವಲ್ಪ ಹೊತ್ತು ಬಸ್ಸು ನಿಲ್ಲಿಸುವಂತೆ ಬೇಡಿಕೊಂಡ. ಡ್ರೈವರ್ ಇವನ ಮುಖವನ್ನು ಕೂಡ ನೋಡದೇ "ಒಂದು ಹತ್ತು ನಿಮಿಷ ತಡಕೊಳ್ಳಿರಿ. ಟೋಲ್ ದಾಟಿದ ಮೇಲೆ ನಿಲ್ಲಿಸುತ್ತೇನೆ" ಎಂದ.

 ಹತ್ತು ನಿಮಿಷ ತಾನೆ ಹೇಗೂ ಇಷ್ಟು ಹೊತ್ತು ತಡೆದುಕೊಂಡಿದ್ದೇನೆ. ಇನ್ನೊಂದು ಹತ್ತು ನಿಮಿಷ ತಡೆದು ಕೊಂಡರಾಯಿತು ಎಂದುಕೊಂಡು ಮತ್ತೆ ಸೀಟಿನಲ್ಲಿ ಬಂದು ಕುಳಿತ. ಹತ್ತು ನಿಮಿಷ, ಟೋಲ್ ದಾಟಿದ ಮೇಲೆ ನಿಲ್ಲಿಸುತ್ತೇನೆ ಎಂದವನು ಟೋಲ್ ದಾಟಿ ಅರ್ಧಗಂಟೆ ಕಳೆದರೂ ಡ್ರೈವರ್ ನಿಲ್ಲಿಸಲಿಲ್ಲ. ಅವನ ಅವಸರ ಅವನಿಗೆ ಬಿಟ್ಟರೆ, ಬೇರೆ ಯಾರಿಗೆ ಗೊತ್ತಾಗಬೇಕು. ಎಲ್ಲರ ಬಳಿಯೂ ಹೇಲಿ ಕೊಳ್ಳಲು ಅದೇನು ಸಂಭ್ರಮದ ವಿಷಯವೇ. ಕುಳಿತು ಕುಳಿತು ಅವಸರ ಹೆಚ್ಚಾಗುತಿತ್ತೇ ಹೊರತು ಬಸ್ಸು ಮಾತ್ರ ನಿಲ್ಲಲಿಲ್ಲ. ಇನ್ನೂ ಕುಳಿತರೆ ತಡೆದುಕೊಳ್ಳುವುದು ಕಷ್ಟ ಎಂದನಿಸಿ, ಡ್ರೈವರ್ನನನ್ನ ಧಬಾಯಿಸಿಯಾದರೂ ಬಸ್ಸು ನಿಲ್ಲಿಸಬೇಕೆಂದು ಮತ್ತೆ ಹೊರಡುವ ಹೊತ್ತಿಗೆ "ಫಟ್" ಎನ್ನುವ ಶಬ್ಧ ಬಸ್ಸಿನ ಹಿಂದುಗಡೆಯ ಚಕ್ರದಿಂದ ಬಂತು. ಈಗ ಬಸ್ಸು ನಿಲ್ಲಿಸದೇ ಬೇರೆ ಗತಿಯಿಲ್ಲದ ಕಾರಣ ಡ್ರೈವರ್ನಿಗೆ ಬಸ್ಸು ನಿಲ್ಲಿಸಲೇ ಬೇಕಿತ್ತು. ಬಸ್ಸು ನಿಂತಿದ್ದೇ ತಡ ಗಿರೀಶ ಎಲ್ಲರಿಗಿಂತ ಮೊದಲು ಬಸ್ಸು ಇಳಿದ. ಬಸ್ಸಿನ ಹಿಂದೆ ಏನಾಗಿದೆ ಎಂದು ತಿಳಿಯುವ ಅವಸರಕ್ಕಿಂತ ಟ್ಯಾಂಕ್ ಖಾಲಿ ಮಾಡಬೇಕಾದ ಅವಸರ ಹೆಚ್ಚಾಗಿದ್ದರಿಂದ ಬಸ್ಸಿನ ಬಗ್ಗೆ ಯೋಚಿದದೇ, ಸ್ವಲ್ಪ ದೂರಕ್ಕೆ ಹೋಗಿ ಟ್ಯಾಂಕ್ ಖಾಲಿ ಮಾಡಿದ. ಹೊಟ್ಟೆಯ ಊರಿ ಸ್ವಲ್ಪ ಕಡಿಮೆಯಾದಂತೆ ಅನಿಸಿತು. ಟ್ಯಾಂಕ್ ಖಾಲಿ ಮಾಡಿದವನೇ ಬಸ್ಸಿನ ಹಿಂದಿನ ಚಕ್ರದ ಬಳಿ ಬಂದು ನಿಂತ. ಹಿಂದಿನ ಚಕ್ರ ಪಂಕ್ಚರ್ ಆಗಿದ್ದರಿಂದ ಚಕ್ರದ ಹೊಟ್ಟೆ ಬಿರಿದುಕೊಂಡು ಬಿಟ್ಟಿತು.

ಬಸ್ಸಿನ ಚಕ್ರವನ್ನು ಬದಲಿಸಿ ಇನ್ನೊಂದು ಚಕ್ರವನ್ನು ಹೊಂದಿಸುವವರೆಗೆ ಇನ್ನರ್ಧ ಗಂತೆ ಕಳೆದಿತ್ತು. ಚಂದ್ರನಾಗಲೇ ಪೂರ್ವದಿಕ್ಕನ್ನು ಬದಲಾಯಿಸಿ ಪಶ್ಚಿಮದ ದಿಕ್ಕಿನ ಮಡಿಲನ್ನು ಸೇರಿದ್ದ. ರಸ್ತೆ ಬದಿಯ ದೀಪದ ಸಹಾಯದಿಂದ ಸಮಯ ನೋಡಿದ, ಗಂಟೆ ಮೂರು ದಾಟಿತ್ತು. ಬಸ್ಸಿನ ನಿರ್ವಾಹಕ ಬಂದು ಹತ್ತಿ, ಹತ್ತಿ ಎಲ್ಲರನ್ನೂ ಅವಸರ ಪಡಿಸಿದ್ದರಿಂದ, ಎಲ್ಲರಂತೆ ಗಿರೀಶನು ಬಸ್ಸು ಹತ್ತಿ, ಅಂದಿನ ಮಟ್ಟಿಗೆ ಅವನದಾದ ಆಸನದಲ್ಲಿ ಆಸೀನನಾದ. ಬಸ್ಸು ಬೆಂಗಳೂರಿನತ್ತ ಚಲಿಸತೊಡಗಿತು. ಹೊಟ್ಟೆಯ ಊರಿ ಸ್ವಲ್ಪ ಕಡಿಮೆಯಾದ್ದರಿಂದ ಸ್ವಲ್ಪ ಹಿತವೆನಿಸತೊಡಗಿತು. ಹಾಗೆ ಸೀಟಿಗೆ ಒರಗಿದ ನಿದ್ದೆ ಮಾಡೋಣವೆಂದು. ನಿದ್ದೆ ಹತ್ತಿರ ಸುಳಿಯಲು ಪ್ರಯತ್ನಿಸಿ ಸೋತು ದೂರ ಸರಿಯಿತು. ಮನಸ್ಸು ಒಮ್ಮೆ ಮುಂದಕ್ಕೂ, ಒಮ್ಮೆ ಹಿಂದಕ್ಕೂ ಒಲಾಡತೊಡಗಿತು. ಮನಸ್ಸು ನೆಮ್ಮದಿಯಾಗಿದ್ದರೆ ತಾನೆ ನಿದ್ದೆ ಸುಳಿಯಲು ಸಾದ್ಯ.

-----------------   ೨  ---------------

"ಒಂದುವರೆ ವರ್ಷ ಆಯ್ತು ನೀನು ಬೆಂಗಳೂರಿಗೆ ಹೋಗಿ, ಇದುವರೆಗೂ ಒಂದು ನೌಕರಿ ಹಿಡಿಯಲು ಸಾಧ್ಯವಾಗಲಿಲ್ಲ ನಿನಗೆ. ನಿನ್ನ ವಯಸ್ಸಿನವರೆಲ್ಲ ಆಗಲೇ ನೌಕರಿ ಹಿಡಿದು ಮದುವೆಗೆ ಸಿದ್ದವಾಗಿದ್ದಾರೆ, ಆದರೆ ನೀನಿನ್ನೂ ನೌಕರಿ ಹುಡುಕುತ್ತಲೇ ಇದ್ದೀಯಾ. ನೌಕರಿ ನೌಕರಿ ಎಂದು ಬೆಂಗಳೂರು ಸುತ್ತುವ ಬದಲು ಊರಲ್ಲೇ ಬಂದು ಇದ್ದರೆ ಆಗಲ್ವೇ. ನೋಡು ಇದೇ ಕೊನೆ, ಈಗೇನೋ ಇಂಟರ್ವ್ವೂವ್ ಇದೆ ಎಂದು ಹೋಗುತ್ತಿದ್ದಿಯಾ ಮತ್ತೆ ನೌಕರಿ ಇಲ್ಲದೇ ವಾಪಸ್ ಬಂದು, ಮತ್ತೆ ಬೆಂಗಳೂರಿಗೆ ಹೋಗುತ್ತೇನೆ ಎಂದರೆ ನಾನು ಬಿಡುವುದಿಲ್ಲ. ನೌಕರಿ ಜೊತೆ ಬಂದರೆ ಒಳಿತು, ಇಲ್ಲ ಎಂದರೆ ಬೆಂಗಳೂರು ಕನಸು ಎಂದು ತಿಳಿದುಕೋ" ಎಂದು ಅಪ್ಪ ಬರುವಾಗ ಹೇಳಿದ್ದು ನೆನಪಾಯಿತು.

ಅಪ್ಪ ಹೇಳಿದ್ದರಲ್ಲಿ ತಪ್ಪೇನಿಗೆ. ವಯಸ್ಸಾದ ಕಾಲಕ್ಕೆ ತಮಗೆ ಮಕ್ಕಳು ದಿಕ್ಕಾಗಿರಲಿ ಎಂದು ಅವರು ಬಯಸುವುದು ತಪ್ಪೇ. ಆದರೆ ನಾನೇನು ಮಾಡಲಿ. ನಾನು ಅದೆಷ್ಟೇ ಪ್ರಯತ್ನಿಸಿದರೂ ಕರೆಗಳೇ ಬರುತ್ತಿಲ್ಲ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಕರೆ ಬಂದರೆ ಕೇಳೋದು ನೌಕರಿಯಲ್ಲಿ ಅನುಭವ. ನೌಕರಿ ಇಲ್ಲದೇ ಅನುಭವವಿಲ್ಲ, ಅನುಭವವಿಲ್ಲದೇ ನೌಕರಿ ಇಲ್ಲ. ಇದೊಂದರ ಬೀಜ ವೃಕ್ಷ ನ್ಯಾಯವಿದ್ದಂತೆ.

ಈ ಭಾರಿ ಎಷ್ಟು ಕಷ್ಟವಾದರೂ ಸರಿ ಇಂಟರ್ವೂವ್ ಪಾಸ್ ಮಾಡಲೇ ಬೇಕು. ಇಂದು ಇಲ್ಲ ಅಂದರೆ ಮುಂದೆಂದೂ ಇಲ್ಲ ಎಂದು ಯೋಚಿಸುತ್ತಾ ಕುಳಿತವನಿಗೆ "ಜಾಲಳ್ಳಿ ಕ್ರಾಸ್", "ಜಾಲಳ್ಳಿ ಕ್ರಾಸ್" ಎಂದು ಬಸ್ಸಿನಲ್ಲಿಯ ಹುಡುಗ ಕೂಗುತ್ತಾ ಬಳ ಬಂದ. "ಒಹ್ ಬಸ್ಸು ಆಗಲೇ ಬೆಂಗಳೂರು ತಲುಪಿತು ಎನಿಸಿತು. ಗಡಿಯಾರ ನೋಡಿದ, ಗಂಟೆ ೭ ಕಳೆದಿತ್ತು. ಆಗಲೇ ಸಾಕಷ್ಟು ಸಮಯವಾಗಿದೆ. ಬಸ್ಸು ಇನ್ನೊಂದು ಗಂಟೆಯೊಳಗೆ ನವರಂಗ ತಲುಪಿದರೆ ಒಳ್ಳೆದು, ಇಲ್ಲಾ ಅಂದರೆ ಜಾಮ್ ಆಗಿ ರೂಮು ಸೇರುವುದೇ ಕಷ್ಟ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ. ಒಂದೊಮ್ಮೆ ಮನೆ ಸೇರುವುದು ತಡವಾದರೆ ರೆಡಿಯಾಗಿ ಇಂಟರ್ವೂವ್ಗೆ ಹೋಗಲು ತಡವಾಗುತ್ತದೆ ಎನ್ನುವ ಆತಂಕ ಒಮ್ಮೆ ಮನಸ್ಸನ್ನು ಕಾಡಿ ಮರೆಯಾಯಿತು

ಎಂದಿನಷ್ಟು ಬೆಂಗಳೂರಿನ ಟ್ರಾಪಿಕ್ ಇಂದಿಲ್ಲದ ಕಾರಣದಿಂದಲೋ ಏನೋ ಬಸ್ಸು ನವರಂಗ ತಲುಪಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಲಿಲ್ಲ. ಬಸ್ಸು ನವರಂಗ ತಲುಪಿ, ಅವನು ಅಲ್ಲಿಂದ ತನ್ನ ವಿಜಯನಗರದ ರೂಮು ಸೇರುವ ಹೊತ್ತಿಗೆ ಸಮಯ ೮-೩೦ ದಾಟಿತ್ತು. ಬೇಗ ಬೇಗ ಸ್ನಾನದ ಶಾಸ್ತ್ರ ಮುಗಿಸಿ, ಪ್ಯಾಂಟು ಅಂಗಿ ಧರಿಸಿ ಹೊರ ಬಂದ. ಹೊರ ಬಂದವನೇ ಧರಿಸುವ ಶೂ ನೋಡಿದ, ಶೂ ಸಾಕಷ್ಟು ಕೊಳೆಯಾದಂತೆ ಅನಿಸಿತು. ಶೂ ಕೈಗೆತ್ತಿಕೊಂಡು ಪಾಲಿಷ್ ಮಾಡುವಾಗ ಯಾಕೋ ಶೂ ತುಂಬಾ ಹಳತಾಗಿ ಸವೆದಂತೆ ಕಂಡಿತು. ಬೆಂಗಳೂರಿಗೆ ಬಂದ ಹೊಸತರಲ್ಲಿ, ಇಂಟರ್ವೂವ್ಗೆ ಎಂದು ತೆಗೆದುಕೊಂಡ ಆ ಕರಿಯ ಬಣ್ಣದ ಲೆದರ್ ಶೂ ಗೆ ಅವನು ಇಂಟರ್ವೂವ್ ಕೊಟ್ಟಷ್ಟೇ ಅನುಭವವಾಗಿತ್ತು. ಈಗ ಬೇರೆ ದಾರಿ ಇಲ್ಲ, ಸದ್ಯಕ್ಕೆ ಇದನ್ನೇ ಸ್ವಲ್ಪ ಪಾಲೀಷ್ ಮಾಡಿ ಧರಿಸಿಕೊಂಡು ಹೋಗೋಣ. ನೌಕರಿ ಸಿಕ್ಕ ಮೇಲೆ ಮತ್ತೊಂದು ಶೂ ಕರೀದಿಸಿದರಾಯಿತು ಎಂದುಕೊಂಡು ಅದೇ ಶೂ ಅನ್ನು ಪಾಲೀಷ್ ಮಾಡಿ ಧರಿಸಿದ. ಇಂಟರ್ವೂವ್ಗೆ ಅಂತಲೇ ಆಗಲೇ ಜೋಡಿಸಿಟ್ಟ ಬಯೋಡೇಟಾವನ್ನು, ಕಾಲ್ ಲೆಟರ್ನೊಂದಿಗೆ ತೆಗೆದುಕೊಂಡು ಮೆನೆಯಿಂದ ಹೊರಬಂದ.

ಇದೇ ತನ್ನ ಕೊನೆಯ ಇಂಟರ್ವೂವ್ ಎನ್ನುವ ಕಾರಣದಿಂದಲೋ ಏನೋ ಹಿಂದಿದ್ದ ಹೆದರಿಕೆ, ಆತಂಕ ಇಂದಿರಲಿಲ್ಲ. ಈಗ ಹೆದರಿಕೆಯ ಬದಲು ನೌಕರಿ ಗಿಟ್ಟಿಸಿಕೊಳ್ಳುವ ಛಲವಿತ್ತು. ನೌಕರಿ ಸಿಗದಿದ್ದರೆ ಎನ್ನುವ ಆತಂಕದ ಬದಲಿಗೆ, ಸಿಕ್ಕೆ ಸಿಗುತ್ತದೆ ಎನ್ನುವ ಆತ್ಮ ವಿಶ್ವಾಸವಿತ್ತು. ಒಂದೊಮ್ಮೆ ಸಿಗದಿದ್ದರೂ ಊರಲ್ಲಿಯೇ ಏನಾದರು ಮಾಡುವನೆನ್ನುವ ಭರವಸೆ ಇತ್ತು. ಆ ಒಂದು ಧೈರ್ಯದ ಮೇಲೆಯೇ ದಾಪುಗಾಲು ಇಡುತ್ತಾ ಬಸ್ ನಿಲ್ದಾಣದತ್ತ ಹೊರಟ, ತನ್ನ ಹೊಸ ಬದುಕಿನ ಪಯಣಕ್ಕೆ ಹೊಸ ದಾರಿ ತೋರಲಿರುವ ದಿಕ್ಕಿನಡೆಗೆ ಹೊರಡಬಹುದಾದ ಬಸ್ಸನ್ನು ಬಯಸಿ.

--ಮಂಜು ಹಿಚ್ಕಡ್

Saturday, June 20, 2015

ನಾವು ಮತ್ತು ನಮ್ಮ ಪೆಟ್ಲಂಡಿ (ಪಿಟ್ಲಿ ಆಂಡಿ)

ಚಿತ್ರಕೃಪೆ ಫೇಸಬುಕ್
ನಮ್ಮೂರಲ್ಲಿ ಹೆರಬೈಲ್ ದೇವರ ಹಬ್ಬ ಹಾಗೂ ಚೌತಿ ಹಬ್ಬಗಳೆರಡು ಒಟ್ಟಿಗೆ ಬರುವುದು ಸಾಮಾನ್ಯ. ಚೌತಿ ಎಲ್ಲರಿಗೂ ಸೀಮಿತವಾಗಿದ್ದರೂ, ಹೆರಬೈಲ್ ದೇವರ ಹಬ್ಬ ನಮ್ಮೂರಿಗೆ ಮಾತ್ರ ಸೀಮಿತವಾಗಿತ್ತು. ನಮ್ಮ ಊರಿನಲ್ಲಿ ಮಕ್ಕಳಿಂದ ಮುದುಕರವರೆಗೂ ಚೌತಿಗಿಂತ ಹೆಚ್ಚಾಗಿ ಸಂಭ್ರಮಿಸುತಿದ್ದ ಹಬ್ಬವೆಂದರೆ ಹೆರಬೈಲ್ ದೇವರ ಹಬ್ಬ. ಅದು ಮಳೆಗಾಲದ ಮಧ್ಯಮ ಅವಧಿಯಲ್ಲಿ ನಡೆಯುವ ಹಬ್ಬವಾದ್ದರಿಂದ, ಒಮ್ಮೆ ಮಳೆ ಜೊರಾಗಿಯೂ, ಒಮ್ಮೆ ನಿಧಾನವಾಗಿಯೂ ಬರುವ ಕಾಲ. ಅದೆಷ್ಟೋ ಹೊಸ ಗಿಡಗಳು ಹುಟ್ಟಿ ಮೈದೆಳೆಯುವ ಸಮಯ. ಅದರಲ್ಲೂ ಬಿದಿರು ಗಿಡಗಳು ಮಾತ್ರ ಒಂದೆರಡು ತಿಂಗಳಲ್ಲೇ ನೋಡು ನೋಡುತ್ತಿದ್ದಂತೆ ದೊಡ್ಡದಾಗಿ ಬೆಳೆದು ಬಾಗಿ ಬಿಡುತಿದ್ದವು. ಆ ಬಿದಿರಿನಲ್ಲೂ ಹಲವಾರು ಬಗೆಯ ಬಿದಿರುಗಳಿದ್ದವು. ಅದರಲ್ಲಿ ಕೆಲವು ಬಿದಿರುಗಳಂತೂ ಅಷ್ಟೋಂದು ಹಿಂಡಾಗಿ ಬೆಳೆಯದೇ ಸಾಮಾನ್ಯ ಬಿದಿರಿಗಿಂತ ದೊಡ್ಡದಾಗಿ ಬೆಳೆಯುತ್ತಿದ್ದವು. ಅದಕ್ಕೆ ಅಷ್ಟೋಂದು ಮುಳ್ಳು ಸಹ ಇರುತ್ತಿರಲಿಲ್ಲ. ಅದಕ್ಕೆ ನಮ್ಮ ಕಡೆ ಬಂದಗ (ಬಿದಿರಿನ ಒಂದು ಜಾತಿ) ಎಂದು ಕರೆಯುತ್ತಾರೆ. ಆ ಬಂದಗದಲ್ಲೂ ಗಂಡು, ಹೆಣ್ಣುಗಳೆಂಬ ಜಾತಿಗಳು ಬೇರೆ. ಬಿದಿರಿನ ಕಡ್ಡಿಯ  ಒಳಬಾಗದಲ್ಲಿ ಬಿಡುಸಾಗಿದ್ದು ಚಿಕ್ಕದಾದ ನಳಿಕೆಯಿದ್ದರೆ ಅದನ್ನು ಗಂಡು ಅಂತಲೂ, ಒಳಗೆ ದೊಡ್ಡದಾದ ನಳಿಕೆಯಿದ್ದರೆ  ಅದನ್ನು ಹೆಣ್ಣು ಅಂತಲೂ ಕರೆಯುತ್ತಾರೆ.

ನಾವು ಆ ಹೆಣ್ಣು ಬಂದಗದ ತುದಿಯನ್ನು ಕಡೆದು, ಅದರಿಂದ ಪೆಟ್ಲಂಡಿಯನ್ನು ಮಾಡುತಿದ್ದೆವು. ಅದೇ ನಮ್ಮ ಆಗಿನ ಕಾಲದ ಪಿಸ್ತೂಲು, ಬಂದೂಕು ಎಲ್ಲಾ. ಬಿದಿರಿನ ನಳಿಕೆಯಲ್ಲಿ ಮುಂದೊಂದು, ಹಿಂದೊಂದು ಜುಮ್ಮನಕಾಯಿ(ಒಂದುರೀತಿಯ ಕಾಯಿ)ಯನ್ನೋ, ಕೆಸುವಿನ ಎಲೆಯ ಮುದ್ದೆಯನ್ನೋ ತುರುಕಿ, ಇನ್ನೊಂದು ಹಿಡಿಕೆಯಿಂದ ಹಿಂದಿನ ಕಾಯಿಯನ್ನು ಜೋರಾಗಿ ತಳ್ಳಿದರೆ ಅದು ಮುಂದಿನ ಕಾಯಿಗೆ ಬಡಿದು, ಮುಂದಿನ ಕಾಯಿ ಹೊರಗೆ ಸಿಡಿಯುತ್ತಿತ್ತು ಹಾಗೆ ಸಿಡಿದಾಗ ಟಪ್, ಟಪ್ ಎನ್ನುವ ಶಬ್ಧ ಬೇರೆ ಬರುತ್ತಿತ್ತು. ನಮ್ಮಲ್ಲಿ ಆಗ ತಾನೆ ಕಬ್ಬಿಣದ ತಗಡಿನಲ್ಲಿ ಮಾಡಿದ ಪಿಸ್ತೂಲಗಳು, ಅದಕ್ಕೆ ಕೇಪಗಳು ಸಿಗುತ್ತಿದ್ದರೂ ಆಗ ಅವು ನಮ್ಮ ಕೈಗೆಟಕುವಂತಿರಲಿಲ್ಲ. ನಮಗೇನಿದ್ದರೂ ಈ ಪೆಟ್ಲಂಡಿಗಳೇ ಸರ್ವಸ್ವ. ಆ ಪೆಟ್ಲಂಡಿ ಮಾಡಿಕೊಂಡು ಅಲ್ಲಿ, ಇಲ್ಲಿ ಜುಮ್ಮನಕಾಯಿ ಹುಡುಕುತ್ತಾ, ಊರ ಹೊರಗಿನ ಬಯಲು, ಬೇಣ ಸುತ್ತುತ್ತಾ, ನಮ್ಮಂತಹ ಉಳಿದ ಮಕ್ಕಳೊಂದಿಗೆ ಆಟವಾಡುತ್ತಾ ಕಾಲಕಳೆಯುತಿದ್ದೆವು. ಆಗ ನಮಗೆ ಯಾವ ಯಾವ  ಜಾಗದಲ್ಲಿ ಜುಮ್ಮನಕಾಯಿ ಮರ ಇದೆ, ಯಾವ ಮರದ ಕಾಯಿ ಕೈಗೆಟಕುತ್ತದೆ,  ಯಾವ ಮರದ ಕಾಯಿಯನ್ನು ಹೇಗೆ ಕೀಳಬಹುದು ಎನ್ನುವುದು ಕರಗತವಾಗಿ ಬಿಟ್ಟಿದ್ದವು. ನಮ್ಮೂರ ಕುರುಚಲು ಗುಡ್ಡಗಳಾದ ಮುಳ್ಳಾಕೇರಿ, ಹಿರೇಗದ್ದೆಯ ಪ್ರದೇಶಗಳು ನಮಗಾಗ ಬೆಟ್ಟವೆನಿಸುತ್ತಲೂ ಇರಲಿಲ್ಲ.(ಈಗ ಬೆಂಗಳೂರಿನ ಸುತ್ತ ಮುತ್ತಲಿನ ಕುರುಚಲು ಗುಡ್ಡ ಪ್ರದೇಶಗಳನ್ನು ಇಲ್ಲಿಯ ಜನರು ಬೆಟ್ಟ ಅನ್ನುವುದನ್ನು ನೋಡಿದರೆ ನಮ್ಮೂರಿನ ಕುರುಚಲು ಗುಡ್ಡಗಳನ್ನೂ ಕೂಡ ಬೆಟ್ಟವೆನ್ನಬಹುದೇನೋ).

ನಮ್ಮಲ್ಲಿ ಆಗ ಯಾರ ಹತ್ರ ಪೆಟ್ಲಂಡಿ ಇರುತ್ತಿರಲಿಲ್ವೋ ಆತನನ್ನು ನಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅವರನ್ನು ಪೆಟ್ಲಂಡಿ ತೋರಿಸಿ ಹೆದರಿಸಿ ಓಡಿಸಿ ಬಿಡುತ್ತಿದ್ದೆವು. ಪೆಟ್ಲೆಂಡಿ ಇಲ್ಲದವರು ಆಗ ಪೆಟ್ಲಂಡಿ ಮಾಡಿಸಿಕೊಳ್ಳಲು ಹಾತೊರೆಯುತ್ತಿದ್ದರು. ನಾವು ಚಿಕ್ಕವರಿದ್ದಾಗ, ಆಗಾಗ ನೆನಪಾಗುವ ಪೆಟ್ಲಂಡಿ ಘಟನೆಯೆಂದರೆ, ನಾವು ಪೆಟ್ಲಂಡಿ ಮಾಡಲು ಹೋದದ್ದು ೧೯೮೭-೧೯೮೮ನೇ ಇಸ್ವಿ, ನಾವು ಎರಡನೇ ತರಗತಿಯಲ್ಲಿ ಓದುತ್ತಾ ಇದ್ದೆವು. ಆಗ ತಾನೇ ಶ್ರಾವಣ ಮಾಸ ಪ್ರಾರಂಭವಾಗಿತ್ತು. ಇನ್ನೂ ಕೆಲವೇ ದಿನಗಳಲ್ಲಿ ಹೆರಬೈಲ್ ದೇವರ ಹಬ್ಬ ಎನ್ನುವುದು ಕೂಡ ನಿಶ್ಚಯವಾಗಿ ಬಿಟ್ಟಿತು. ನಮ್ಮ ಸ್ನೇಹಿತರಲ್ಲಿ ಒಂದಿಬ್ಬರು ಪೆಟ್ಲಂಡಿ ಮಾಡಿಸಿಕೊಂಡಿದು ನಮಗೆ ಕೆಲವು ಬಲ್ಲ         ಮೂಲಗಳಿಂದ ತಿಳಿದು ಬಿಟ್ಟಿತು. ನಮಗೆ ಅವರು ಪೆಟ್ಲೆಂಡಿ ತೆಗೆದುಕೊಂಡು ಹಬ್ಬಕ್ಕೆ ಹೋದರೆ, ನಮ್ಮ ಹತ್ತಿರ ಪೆಟ್ಲೆಂಡಿ ಇಲ್ಲಾ ಅಂತಾದರೆ ನಮ್ಮನ್ನು ಸೇರಿಸಿಕೊಳ್ಳಲಾರರು ಎನ್ನುವುದು ತಿಳಿದಿತ್ತು. ಆಗ ಅವರ ಉದ್ದೇಶವು ಅದೇ ಆಗಿತ್ತು ಕೂಡ. ವಿಷಯ ತಿಳಿದ ನಾನು ಮತ್ತು ನನ್ನ ಸ್ನೇಹಿತ ಇರ್ವರೂ ಸೇರಿ ನಾವು ಕೂಡ ಪೆಟ್ಲಂಡಿ ಮಾಡಿಸಿಕೊಳ್ಳವುದಾಗಿ ತಿರ್ಮಾನಿಸಿದೆವು. ಆದರೆ ಹೇಗೆ, ನಮ್ಮ ಮನೆಯ ಜಾಗದಲ್ಲಾಗಲಿ ಅಥವಾ ಅವರ ಮನೆಯ ಜಾಗದಲ್ಲಾಗಲಿ ಬಿದಿರಿನ ಗಿಡಗಳಿರಲಿಲ್ಲ. ಹಾಗಂತ ಪೆಟ್ಲಂಡಿಯ ಆಸೆಯನ್ನು ಅಲ್ಲಿಗೇ ಬಿಟ್ಟು ಬಿಡಲಾಗತ್ತದೆಯೇ. ಆಗ ನೆನಪಾಗಿದ್ದು ನಮ್ಮೂರ ಹಿರೇಗದ್ದೆಯಲ್ಲಿ ಒಬ್ಬರ ಜಾಗದಲ್ಲಿ ಒಂದೆರಡು ಬಿದಿರು ಹಿಂಡುಗಳಿರುವುದು. ಹೇಗಾದರೂ ಮಾಡಿ ಹೋಗಿ ಒಂದೆರಡು ಚಿಕ್ಕ ಬಿದಿರಿನ ತುದಿಯನ್ನು ತಂದು ಪೆಟ್ಲಂಡಿ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಆ ದಿನ ಶನಿವಾರ, ಅರ್ಧ ದಿನ ಮಾತ್ರ ಶಾಲೆ.  ನಾನು, ನನ್ನ ಗೆಳೆಯ ಇಬ್ಬರು ಸೇರಿ ಹೇಗಾದರು ಮಾಡಿ ಆ ಬಿದಿರಿನ ತುಂಡುಗಳನ್ನು ಕಡಿದು ತರಬೇಕು ಎಂದು ಶಾಲೆಯಿಂದ ಮನೆಗೆ ಬರುತ್ತಲೇ ನಿಶ್ಚಯಿಸಿ ಬಿಟ್ಟೆವು. ಮನೆಗೆ ಬಂದವರೇ ಪಠ್ಯ ಪುಸ್ತಕದ ಚೀಲದ ಅವಶ್ಯಕತೆ ಆ ವಾರಕ್ಕೆ ಮುಗಿದಿದ್ದರಿಂದ ಅದನ್ನು ಅಲ್ಲಿಯೇ ಎಲ್ಲೊ ಮೂಲೆಗೆ ಎಸೆದು, ಮನೆಯಿಂದ ಒಂದು ಕತ್ತಿಯನ್ನು ತೆಗೆದುಕೊಂಡು ಅಲ್ಲಿಗೆ ಹೊರಟೆವು.

ಬಿದಿರಿನ ಹಿಂಡಿನ ಬಳಿ ಹೋಗಿ ಅದರ ಬಾಗಿದ ತುದಿಯನ್ನು ನೋಡಿದವು, ಅವು ನಮ್ಮ ಕೈಗೆಟಕುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಿದ್ದ ಹಾಗೆ ನನ್ನ ಗೆಳೆಯ ಅದರ ಬುಡ ಕಡಿದರೆ ಅದರ ತುದಿ ನಮ್ಮ ಕೈಗೆ ಸಿಗುತ್ತದೆ ಎಂದು, ಒಂದು ಗಿಡದ ಬುಡ ಕಡಿದ, ನೋಡಿದರೆ ಅದು ಗಂಡು. ಅದು ಗಂಡು ಎಂದು ಇನ್ನೊಂದನ್ನು ಕಡಿದ, ಅದೂ ಕೂಡ ಗಂಡು. ಹೀಗೆ ಮೂರ್ನಾಲ್ಕು ಬಿದಿರನ್ನು ಕಡಿದಿರಬಹುದು. ಅಷ್ಟರಲ್ಲಿ, ಅಲ್ಲಿಯೇ ಸ್ವಲ್ಪ ದೂರದಲ್ಲಿ ತನ್ನ ಹಸುಗಳಿಗೆ ಹುಲ್ಲು ಕೊಯುತ್ತಿದ್ದ ಕುಂಬಾರ ಬಾಬು ನಮ್ಮ ಬಳಿಗೆ ಬಂದ. ನಮ್ಮಿಬ್ಬರಿಗೆ ಹೆದರಿಕೆ ಸುರುವಾಯ್ತು. ಅವನು ಬಂದವನು, ನಮ್ಮ ಸ್ಥಿತಿ ನೋಡಿ ಹೆದರಬೇಡಿ, ನಾನು ನಿಮ್ಮ ಬಗ್ಗೆ ಹೇಳುವುದಿಲ್ಲ ಎಂದು, ಇದು ಗಂಡು ಬಿದಿರು, ಅದರ ಪಕ್ಕದಲ್ಲಿಯ ಹಿಂಡು ಹೆಣ್ಣು ಬಿದಿರಿನ ಹಿಂಡು ಎಂದು ಹೇಳಿ, ಆ ಹೆಣ್ಣು ಬಿದಿರಿನಿಂದ ನಮ್ಮಿಬ್ಬರಿಗೂ ಒಂದೊಂದು ಪೆಟ್ಲಂಡಿ ಮಾಡಿಕೊಟ್ಟು ತಾನು ಹುಲ್ಲು ಕೊಯ್ಯಲು ಹೊರಟ. ನಮಗೆ ಪೆಟ್ಲಂಡಿ ಸಿಕ್ಕಿತಲ್ಲ ಎನ್ನುವ ಖುಸಿಯಿಂದ ಅಲ್ಲಿಂದ ಹೊರಟು ಮನೆಗೆ ಬಂದೆವು.

ಹೇಗೂ ಅಲ್ಲಿ ಹುಲ್ಲು ಕೊಯ್ಯುತಿದ್ದ ಬಾಬು ಆ ಜಾಗದ ಮಾಲಿಕನಿಗೆ ವಿಷಯ ತಿಳಿಸಲಾರ ಎನ್ನುವ ನಂಬಿಕೆಯಲ್ಲೇ ನಮ್ಮ ಪೆಟ್ಲಂಡಿಯೊಂದಿಗೆ ಕಾಲ ಕಳೆಯತೊಡಗಿದೆವು. ಈ ಘಟನೆ ನಡೆದು ಒಂದೆರಡು ದಿನ ಕಳೆದಿರಬಹುದು, ಸೋಮವಾರ ಮದ್ಯಾಹ್ನ ಶಾಲೆ ಮುಗಿಸಿ ಮನೆಗೆ ಊಟ ಮಾಡಿ ಬರಲು ಬರುತ್ತಿದ್ದೆವು. ನಮ್ಮೂರಿನ ಹೃದಯ ಭಾಗದಲ್ಲಿ ಆಗ ಗಾಂವಕರ್ ಬಾಬು ಎನ್ನುವವರ ಒಂದು ಕಿರಾಣಿ ಅಂಗಡಿ ಇತ್ತು. ಅಲ್ಲಿ ನಾವು ಪೆಟ್ಲಂಡಿಗಾಗಿ ಕಡಿದ ಬಂದಗದ ಜಾಗದ ಮಾಲೀಕ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದ. ನಾವು ಅಂಗಡಿ ಸಮೀಪಿಸುತ್ತಿದಂತೆ, ಆ ಜಾಗದ ಮಾಲೀಕ ನಮ್ಮ ಎದುರಿಗೆ ಬಂದು ನಿಂತು, ನನಗೂ ನನ್ನ ಸ್ನೇಹಿತನಿಗೂ ತಲಾ ಎರಡು ಏಟು ಕೊಟ್ಟು, ಇನ್ನು ಮುಂದೆ ಬಿದಿರು ಹಿಂಡಿನ ಬಳಿ ಹೋಗದಂತೆ ಎಚ್ಚರಿಕೆ ನೀಡಿ ಮನೆಗೆ ಕಳಿಸಿದ. ಆ ಏಟು ತಿಂದ ಮೇಲೆ ತಿಳಿದದ್ದು, ನಮ್ಮ ಮುಂದೆ, ತಾನು ಜಾಗದ ಮಾಲಿಕನಿಗೆ ಹೇಳುವುದಿಲ್ಲ ಎಂದ ಬಾಬು, ಆ ದಿನವೇ ಅವನ ಮನೆಗೆ ಹೋಗಿ ನಾವು ಬಿದಿರು ಕಡಿದ ವಿಷಯ ತಿಳಿಸಿ ಬಂದಿದ್ದನೆಂದು. ಆಗಲೇ ನಮ್ಮ ಬಳಿ ಪೆಟ್ಲಂಡಿಗಳಿದ್ದರಿಂದ ನಾವು ಆ ಬಿದಿರು ಹಿಂಡಿನ ಬಳಿ ಪೆಟ್ಲಂಡಿಗಾಗಿ ಮತ್ತೆ ಹೋಗಲಿಲ್ಲ. ಇಂದಿಗೂ ಆ ಜಾಗದ ಮಾಲಿಕನನ್ನಾಗಲೀ ಅಥವಾ ಬಾಬುವನ್ನಾಗಲೀ ನೋಡಿದಾಗ ನಮ್ಮ ಪೆಟ್ಲಂಡಿ ಕಥೆ ನೆನಪಾಗದೇ ಇರದು.

-ಮಂಜು ಹಿಚ್ಕಡ್

Saturday, May 23, 2015

ಮೊದಲ ನೋಟ!

ಸಾಗರದ ತಿರುವಿನಲಿ
ನಾಕಂಡ ಆ ನಿನ್ನ
ಮುಗುಳುನಗೆ

ನೆನೆಸಿ ಕೊಂಡಾಗೆಲ್ಲ
ಶ್ಥಬ್ಧಗೊಳ್ಳುವುದು ಮನ
ಒಂದು ಗಳಿಗೆ

ಇಳಿಬಿಟ್ಟ ಮುಂಗುರುಳು
ತುಟಿಯಲರಳಿದ ಆ ನಗು

ಕಾಡುತ್ತಲೇ ಇರುವುವು
ನನ್ನ ಆಗು ಈಗು.

ಮುಂಗುರಳ ಜೊತೆಯಲ್ಲಿ
ಕಿರುಬೆರಳಿನಾಟ

ಆ ಗೊಮ್ಮೆ ಈಗೊಮ್ಮೆ
ಅರೆ ಬರೆಯ ನೋಟ

ಕಾಡುತ್ತಲೇ ಇಹುವು
ಇಂದಿಗೂ
ನೆನೆಪು ನೆನಪಾಗಿ.


-ಮಂಜು ಹಿಚ್ಕಡ್

Tuesday, May 5, 2015

ಹಾಗಾಗಿಯೇ ಈ ಮುಂಜಾವಿನ ನಡಿಗೆ!

ಇಂದು ಬೆಳಿಗ್ಗೆ ಬೆಂಗಳೂರಿನಿಂದ ಬಂದ ಬಸ್ಸು ಅಂಕೋಲಾ ತಲುಪಿದಾಗ ಸಮಯ ೬-೧೫. ಹೊಸ ರಸ್ಥೆಯಾಗುತಿದ್ದುದರಿಂದ ನಾನು ಹತ್ತಿ ಬಂದ ಖಾಸಗಿ ಬಸ್ಸನ್ನು ಕಣಕಣೇಶ್ವೇರ ದೇವಸ್ಥಾನದ ಬಳಿಯೇ ಕೊನೆಯ ನಿಲ್ದಾಣವೆಂದು ನಿಲ್ಲಿಸಿದ್ದರಿಂದ ಬೇರೆ ವಿಧಿಯಿಲ್ಲದೇ ಬಸ್ಸು ಇಳಿದೊಡನೆಯೇ ಮನೆಯ ಸೇರುವ ತವಕದೊಂದಿಗೆ .ಕಣಕಣೇಶ್ವರ ದೇವಸ್ಥಾನದಿಂದ ನಡೆದು ಬಸ್ ನಿಲ್ದಾಣದತ್ತ ಮುಖಮಾಡಿ ಹೊರಟೆ. ನಿನ್ನೆಯ ದಿನ ಸ್ವಲ್ಪ ಮಳೆ ಬಂದು ಇಳೆ ತೊಯ್ದಿದರಿಂದಲೋ, ಅಥವಾ ಮುಂಜಾವಿನ ತುಸು ಚಳಿ ಇನ್ನೂ ಸ್ವಲ್ಪ ಇದ್ದುದರಿಂದಲೋ ಏನೋ ಬೇಸಿಗೆಯಾಗಿದ್ದರೂ  ಬೇಸಿಗೆ ಅಂತೆನಿಸಲಿಲ್ಲ. ಅಂಕೋಲೆಯ ನೆಲಕ್ಕೆ ಕಾಲಿಟ್ಟೊಡನೆ ಮಲಗಿರುವ ಮೈಮೇಲಿನ ಬೆವರಗ್ರಂಥಿಗಳು ಎಚ್ಚರಗೊಂಡು ಎಡೆಬಿಡದೇ ಸದಾ ಜಿನುಗುವ ಬೆವರಹನಿಗಳು ಇಂದೇಕೋ ಜಿನುಗುತ್ತಿರಲಿಲ್ಲ.

ಕಣಕಣೇಶ್ವರ ದೇವಸ್ಥಾನದಿಂದ ಹೊರಟ ನಾನಿನ್ನೂ ಮೀನು ಪೇಟೆಯವರೆಗೂ ತಲುಪಿರಲಿಲ್ಲ, ಹಿಂದಿನಿಂದ ಯಾರೋ ಕೂಗಿದಂತಾಗಿ ಹಿಂದಿರುಗಿ ನೋಡಿದೆ. ಯಾರೋ ಒಬ್ಬಾತ ನನ್ನನ್ನು ಕರೆದು "ಆಟೋ ಬೇಕಾ" ಎಂದು ಕೇಳಿದ. "ಹೌದು" ಎಂದೆ. "ಐದು ನಿಮಿಷ" ಎಂದವನು ಯಾರಿಗೋ ಕರೆ ಮಾಡಿದ. ಎರಡು ನಿಮಿಷ ಕಳೆಯುವುದರಲ್ಲಿ ಆಟೋ ನನ್ನ ಮುಂದೆ ಪ್ರತ್ಯಕ್ಷವಾಗಿ ನಿಂತಿತ್ತು. ಆಟೋದವನು ಎಲ್ಲಿಗೆ ಎಂದು ಕೇಳಿದಾಗ, "ಹಿಚ್ಕಡ್" ಎಂದು ಹೇಳಿ ಕುಳಿತೆ. ಮೀಟರ್ ಹಾಕುವುದು ನಮ್ಮ ಕಡೆಯ ಆಟೋದವರ ವಾಡಿಕೆಯಲ್ಲದ ಕಾರಣ, ಮರು ಮಾತನಾಡದೆ ಸುಮ್ಮನೆ ಕುಳಿತೆ. ಆಟೋ ಹೊರಟಿತು ನನ್ನನ್ನು ನನ್ನ ಕೈಲಿರುವ ಚೀಲವನ್ನು ಹೊತ್ತು ನಮ್ಮೂರ ಮುಖವಾಗಿ.

ಎಂದಿನ ಅಭ್ಯಾಸದಂತೆ ಆಟೋದಲ್ಲಿ ಕುಳಿತು ಹೊರಗಿನ ಮುಂಜಾವಿನಲ್ಲಿ ಆಗತಾನೇ ಅರಳುತ್ತಿರುವ ಪರಿಸರವನ್ನು ವೀಕ್ಷಿಸುತ್ತಾ ಹೊರಟೆ. ನಾ ನೋಡುತ್ತಾ ಬೆಳೆದ ಊರಿನ ಪರಿಸರ ಮೊದಲಿನಂತಿರದೇ ಸಾಕಷ್ಟು ಬದಲಾದಂತೆ ಅನಿಸದಿರಲಿಲ್ಲ. ಅನಿಸುವುದೇನು ಬದಲಾಗಿದೆ ಕೂಡ. ಮುಂಜಾವಿನ ಸೂರ್ಯ ಆಗತಾನೇ ಕೆಂಪು ಬಣ್ಣವನ್ನು ತೊಟ್ಟು ಪೂರ್ವದಲ್ಲಿ ಕರಬಂಧ ಸತ್ಯಾಗ್ರಹಕ್ಕೆ ಒಂದಕ್ಕೊಂದು ಕೈಹಿಡಿದು ನಿಂತತೆ ತೋರುವ ಸಹ್ಯಾದ್ರಿಗಳ ಶ್ರೇಣಿಯಿಂದ ಮೆಲ್ಲಗೆ ಮೇಲೇರುತ್ತಾ ಬರುತಿದ್ದ. ಅದರಲ್ಲೇನು ಬದಲಾವಣೆ ಇರಲಿಲ್ಲ, ಆದರೆ ಒಂದು ಕಾಲದಲ್ಲಿ ವರ್ಷಕ್ಕೆ ಎರಡು ಬಾರಿ ಬೇಸಾಯಗೊಳ್ಳುತ್ತಿದ್ದ ರಸ್ತೆಯ ಇಕ್ಕಲದ ಗದ್ದೆಗಳು ಇಂದು ಮೂರು ಗುಂಟೆಯ ಸೈಟುಗಳಾಗಿ ವಿಭಜನೆಗೊಂಡು, ಅಲ್ಲಲ್ಲಿ ಎರಡೆರಡು ಅಂತಸ್ತಿನ ಸಿಮೆಂಟ್ ಮನೆಗಳು ಮೆಲೆದ್ದಿದ್ದವು. ಸದಾ ಹಸಿರು ಹೊದ್ದು ಮಲಗಿರುತಿದ್ದ ಹಲಸದ ಗುಡ್ಡದಲ್ಲಿ ಇಂದು ಹಸಿರಿರಲಿಲ್ಲ. ಬದಲಾಗಿ ದೂರದಿಂದ ಕಪ್ಪನೆ ಕಾಣುವ ನೆಲದ ನಡುವಿಂದ ಕೆಂಪನೆಯ ಮಣ್ಣು ಹೊರಹೋಗುತಿತ್ತು ಲಾರಿಗಳಲ್ಲಿ. ರಸ್ತೆಯ ಅಗಲೀಕರಣದ ಹೆಸರಲ್ಲಿ ರಸ್ತೆಯ ಅಕ್ಕಪಕ್ಕದ ಗಿಡಗಳೆಲ್ಲ ಕೊಡಲಿ ಪೆಟ್ಟಿಗೆ ಉದುರಿ ನೆಲದ ಮೇಲೆ "ಸೇಪ್ಟಿ" ಮಾಪನದಲ್ಲಿ ಅಳೆಯುವ ನಾಟಾಗಳಾಗಿ ಮಲಗಿದ್ದವು. ಎಲ್ಲಕ್ಕಿಂತ ಮಿಗಿಲಾದ ಬದಲಾವಣೆಯೆಂದರೆ ಅಲ್ಲಿನ ಜನರ ಮುಂಜಾವಿನ ನಡಿಗೆ. ಪ್ರತೀ ಐವತ್ತು ಅರವತ್ತು ಮೀಟರಗೆ ಒಬ್ಬರು ಕೈಯಲ್ಲಿ ಕೋಲು ಹಿಡಿದು ಮುಂಜಾವಿನ ನಡಿಗೆಯಲ್ಲಿ ತೊಡಗಿದ್ದು. ಬಹುಷಃ ಲಿಂಗಬೇಧವಿಲ್ಲದೇ ನಡೆದಂತಹ ಅತ್ಯಂತ ವೇಗವಾದ ಬದಲಾವಣೆಯೆಂದರೆ ಇದೇ ಇರಬಹುದೇನೋ.

೨೫-೩೦ ವರ್ಷಗಳ ಹಿಂದೆ ಈ ರೀತಿ ಇರಲಿಲ್ಲ. ಅಂದು ಬೇಸಾಯ ಮಾಡದೇ ಖಾಲಿ ಬಿಟ್ಟ ಭೂಮಿಗಳು ಸಿಗುತಿದ್ದುದೇ ಕಡಿಮೆ. ಅತೀ ವಿರಳಕ್ಕೊಬ್ಬರು ಒಂದೊಮ್ಮೆ ಮಕ್ಕಳು ಹೊರಗಿದ್ದು ನೌಕರಿ ಮಾಡುತಿದ್ದರೆ ತಮ್ಮ ಗದ್ದೆಗಳನ್ನು ಗೇಣಿಗೆ ಕೊಡುತಿದ್ದರೂ. ಆದರೆ ಇಂದು ಗೇಣಿಗೆ ಕೊಳ್ಳುವವರಿಗಿಂತ ಗೇಣಿಗೆ ಕೊಡುವವರೇ ಹೆಚ್ಚಾಗಿ ಗದ್ದೆಗಳು ಪಾಡು ಬಿಳುತ್ತಿವೆ. ಇನ್ನೂ ಭೂಮಿಯ ಬೆಲೆಯೂ ಈಗೀನ ಒಂದಂಶದಷ್ಟು ಇರಲಿಲ್ಲ. ಮಾರುತ್ತೆನೆ ಎಂದರೆ ಕೊಳ್ಳುವವರಿರಲಿಲ್ಲ. ಈಗಂತೂ ಕೊಳ್ಳುತ್ತೇನೆ ಎಂದರೂ ಮಾರುವವರಿಲ್ಲ. ಮಾರುವವರಿದ್ದರೂ ಬೆಲೆ ಮಾತನಾಡಿಸುವಂತಿಲ್ಲ. ಅಂದು ಗದ್ದೆ ಮಾಡುತಿದ್ದ ಕಾಲದಲ್ಲಿ, ರಸ್ತೆಯ ಇಕ್ಕಲದಲ್ಲಿ, ನೇಗಿಲು ಹೊತ್ತು ಗದ್ದೆಗೆ ಎತ್ತು ಹೊಡೆದುಕೊಂಡು ಹೋಗುತಿದ್ದುದನ್ನು ಕಾಣಬಹುದಿತ್ತು. ಈಗ ಗದ್ದೆ ಮಾಡುವರೇ ಇಲ್ಲದ ಮೇಲೆ, ಇನ್ನೂ ಬೆಳಿಗ್ಗೆ ನೇಗಿಲು ಹೊತ್ತು ರಸ್ತೆಯ ಇಕ್ಕಲದಲ್ಲಿ ಹೊರಡಬೇಕಾದ ಅಂದಿನ ರೈತರು ಇನ್ನೆಲ್ಲಿ.

ಗದ್ದೆ ಮಾಡದ ಮೇಲೆ ಗದ್ದೆಗಳಲ್ಲಿ ಬೇಸಾಯದ ಬೆಳೆಯ ಹಸುರೆಲ್ಲಿ? ನೆಲದ ಬೆಲೆ ಮುಗಿಲೆತ್ತರಕ್ಕೆ ಏರುತ್ತಿರುವಾಗ ಖಾಲಿ ಗದ್ದೆಗಳಿದ್ದೇನು ಪ್ರಯೋಜನ? ಹಾಗಾಗಿ ಗದ್ದೆಗಳು ಸೈಟುಗಳಾಗಿವೆ. ಗದ್ದೆ ಸೈಟು ಆಗಿ, ಅದನ್ನು ದುಪ್ಪಟ್ಟು ಬೆಲೆ ಕೊಟ್ಟು ಕೊಂಡ ಮೇಲೆ ಹಾಗೆ ಇಟ್ಟು ಕೊಳ್ಳಲಾದೀತೇ. ಅಲ್ಲೊಂದು ಮನೆ ಬೇಡವೇ? ಖಾಲಿ ಮನೆ ಇದ್ದರೆ ಸಾಕೇ? ಮನೆಯ ಮುಂದೆ ಕಾರು, ಬೈಕುಗಳು ಬೇಡವೇ? ಕಾರು ಬೈಕುಗಳು ಇದ್ದ ಮೇಲೆ ರಸ್ತೆ ಬೇಡವೇ? ನಾಲ್ಕಾರು ಹತ್ತಾರು ಮನೆಗಳಿಂದ ಹೊರಕ್ಕೆ ಬಂದು ಹೋಗುವ ಬೈಕು ಕಾರುಗಳಿಗೆ ರಸ್ತೆ ಸಪೂರ ಇದ್ದರೆ ಆದೀತೇ? ರಸ್ತೆ ಅಗಲಗೊಳ್ಳ ಬೇಕಲ್ಲವೇ? ರಸ್ತೆ ಅಗಲವಾಗಬೇಕು ಎಂದರೆ, ರಸ್ತೆಯ ಇಕ್ಕಲದ ಗಿಡ ಮರಗಳನ್ನು ಕಡಿಯಬೇಕಲ್ಲವೇ? ರಸ್ತೆಯ ಬಳಿಯ ಮರ ಕಡಿದು ರಸ್ತೆಯನ್ನು ಹಾಗೆ ಬಿಟ್ಟರಾದಿತೇ? ಅದನ್ನು ಸಮತಟ್ಟಾಗಿ ಮಾಡಲು ಮಣ್ಣು ಬೇಕಲ್ಲವೇ? ರಸ್ತೆಯ ಉಬ್ಬರದ ಮಣ್ಣು ಸಾಲದಾದಾಗ ಗುಡ್ಡಗಳ ಮೇಲಿನ ಮಣ್ಣು ಬೇಕಲ್ಲವೇ? ಆ ಮಣ್ಣು ಅಗಿಯಲು ಗುಡ್ಡ ಕಡಿಯಬೇಕಲ್ಲವೇ? ಗುಡ್ಡ ಕಡಿದ ಮೇಲೆ ಅಲ್ಲಿರುವ ಹಸಿರು ಇರುತ್ತದಯೇ? ಇನ್ನೂ ಮನೆಯಿಂದ ಹೊರಹೋಗಲು ಬರಲು ಬೈಕು ಕಾರುಗಳು ಇರುವಾಗ ನಡಿಗೆಗೆ ಅವಕಾಶವೆಲ್ಲಿ. ನಡಿಗೆ ಇಲ್ಲದ ಮೇಲೆ ಮೈ ಬೆಳೆಯಲೇ ಬೇಕೆಲ್ಲ. ಮೈ ಸುಮ್ಮನೆ ಬೆಳೆದಿರುತ್ತದೆಯೇ? ಕಾಯಿಲೆಗಳನ್ನು ತುಂಬಿಕೊಂಡಿರುವುದಿಲ್ಲವೇ? ಕಾಯಿಲೆಗಳು ಕಡಿಮೆಯಾಗಬೇಕು ಎಂದರೆ ಮೈ ಕರಗಬೇಕು. ಮೈಕರಗಬೇಕು ಎಂದರೆ ನಡಿಗೆ ಮಾಡಬೇಕು. ಎಲ್ಲಾ ಕೆಲಸಕ್ಕು ನಡೆದು ಹೋದರೆ ವೇಳೆಯ ಅಭಾವವಾಗುವುದಿಲ್ಲವೇ? ಅದಕ್ಕೆ ಕೆಲಸವಿರದ ಮುಂಜಾವಿನ ವೇಳೆಯೇ ಸೂಕ್ತವಲ್ಲವೇ? ಹಾಗಾಗಿಯೇ ಈ ಮುಂಜಾವಿನ ನಡಿಗೆ.

-ಮಂಜು ಹಿಚ್ಕಡ್

Saturday, May 2, 2015

ಎಲೆಯ ಮರೆಯ ಕಾಯಿ!

ಕಂಡ ಕಂಡವರೆಲ್ಲ ಕಲ್ಲು ಎಸೆವ
ತೋರಿಕೆಯ ಕಾಯಾಗಿ
ನೆಲವ ಸೇರುವುದಕ್ಕಿಂತ
ಎಲೆಯ ಮರೆಯ ಕಾಯಾಗಿ
ಬಲಿತು ಹಣ್ಣಾಗುವುದು ಲೇಸು!

-ಮಂಜು ಹಿಚ್ಕಡ್

Saturday, April 11, 2015

ಆಸೆ-ನಿರಾಸೆ!

ಅಮವಾಸ್ಯೆ ಕಳೆದು ಆಗಲೇ ಎರಡು ಮೂರು ದಿನ ಕಳೆದು ಹೋಗಿರಬಹುದೆಂದು ಪಂಚಾಂಗ ಹೇಳದಿದ್ದರೂ, ಆಗಲೇ ಸೂರ್ಯ ಮುಳುಗಿ ಅರ್ಧ ಗಂಟೆ ಕಳೆದರೂ ಕತ್ತರಿಸಿದ ಉಗುರಿನಂತೆ ಕಾಣುವ ಇನ್ನೂ ಮುಳುಗದ ಚಂದ್ರನನ್ನು ನೋಡಿ ತನ್ನ ಅನುಭವದಿಂದಲೇ ಗೃಹಿಸಬಲ್ಲವನಾಗಿದ್ದ ಸೋಮ. ಮುಂದೆ ಬರಲಿರುವ ಭಜೆನೆ ಆಟದ ನಿಮಿತ್ತ ಸಂಕ್ರಾಂತಿಯ ಮಾರನೇ ದಿನದಿಂದ ಸುರುವಾದ ಭಜನೆಗಾಗಿ ತನ್ನ ಮನೆ ಸೇರಿದ ಸಂಬಂಧಿಕರನ್ನು ಸಂತೃಪ್ತಿ ಪಡಿಸಲು ಮನೆಗೆ ಬಂದ ನೆಂಟರನ್ನು ಸಂಜೆಯ ತೀರ್ಥ ಸೇವನೆಗಾಗಿ ಕರೆದುಕೊಂಡು ಬಂದು ದೇವಿಯ ಅಂಗಳ ಸೇರಿದ. ದೇವಿಯೇನು ಸುಮ್ಮನೆ ಬಿಟ್ಟಿಯಾಗಿ ಕುಡಿಯಲು ಕೊಡುತ್ತಾಳೆಯೇ? ನಿನ್ನೆಯ ಸಾಲ ತೀರಿದರೆ ತಾನೇ ಇಂದಿನ ತೀರ್ಥ. ಅದು ಅವನಿಗೆ ತಿಳಿಯದ ವಿಷಯವೇ. ಹಾಗಾಗಿ ಕಳೆದು ಒಂದು ವಾರದಿಂದ ತಾನು ಸೊಪ್ಪು ತರುವಾಗ ಅಲ್ಲಲ್ಲಿ ಹೊರ ಬೇಣಗಳಲ್ಲಿ ಬಿಟ್ಟಿ ಬೆಳೆದ ಗೇರು ಮರಗಳಿಂದ ಕೊಯ್ದು ತಂದು ಶೇಖರಿಸಿಟ್ಟ ಒಣ ಗೇರುಬೀಜಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಬಂದಿದ್ದ. ತಂದ ಮಾಲನ್ನು ದೇವಿಯ ಅಂಗಡಿಯ ಅಳೆತೆಯಿಲ್ಲದ ತಕ್ಕಡಿಗೆ ಸುರಿದ. ದೇವಿಯ ಲೆಕ್ಕದಲ್ಲಿ ಅದು ನಿನ್ನೆ ಕುಡಿದ ಎಣ್ಣೆಗೆ ಸರಿಹೊಂದುವಷ್ಟಾಗಿ ಸ್ವಲ್ಪ ಮಿಕ್ಕಿತ್ತು. ಹೇಗಿದ್ದರೂ ಇವತ್ತಿನ ಸಾಲವನ್ನು ನಾಳೆ ತೀರಿಸುವುದು ಅಲ್ಲಿಯ ಸಂಪ್ರದಾಯವಲ್ಲವೇ. ನಾಳೆಯದನ್ನು ನಾಳೆ ನೋಡಿದರಾಯಿತು ಎಂದು ಮಿಕ್ಕ ಹಣವನ್ನು ಇಂದಿನ ಲೆಕ್ಕಕ್ಕೆ ಸರಿ ಹೊಂದಿಸುವುದು ಬೇಡವೆಂದು, ಉಳಿದ ಹಣವನ್ನು ಕಿಸೆಗೆ ತುರುಕಿಸಿದ. ದೇವಿ ಸಾಲಕ್ಕೆ ಕೊಟ್ಟ ತೀರ್ಥದ ಕೊಟ್ಟೆಗಳಲ್ಲಿ ಒಂದೆರಡು ಕೊಟ್ಟೆಯ ತೀರ್ಥವನ್ನು ಹೊಟ್ಟೆಗಿಳಿಸಿ ತನ್ನೊಂದಿಗೆ ಬಂದ ನೆಂಟರಿಗೂ ಕೊಟ್ಟು ತಾನು ಸಂತೃಪ್ತಿಯ ಭಾವ ಹೊಂದುತ್ತಿರುವಾಗಲೇ ಕಂತುತಿದ್ದ ಸೂರ್ಯನನ್ನು ನೋಡಿ, ಹೆಂಡತಿ ಬರುವಾಗ "ಆಸಿಗೇನಾರ್ ತಕಂಬರ್ರೇ" ಎಂದದ್ದು ನೆನಪಾಯ್ತು. ಶಿರೂರಿನ ಜಂತ್ರೋಡಿಗೆ ಹೋದರೆ ಸಿಟ್ಲಿ (ಸಿಗಡಿ ಮೀನು) ಸಿಕ್ಕರೂ ಸಿಗಬಹುದೇನೋ ಎಂದನಿಸಿ ತನ್ನೊಟ್ಟಿಗೆ ಬಂದವರಿಗೆ ತೀರ್ಥ ಸೇವನೆ ಮುಗಿದೊಡನೆಯೇ ಮನೆಗೆ ಹೋಗಲು ತಿಳಿಸಿ, ತಾನು ಚಡ್ಡಿಯ ಒಂದು ಕಿಸೆಯಲ್ಲಿ ಒಂದೆರಡು ಪ್ಯಾಕೆಟ್ ತೀರ್ಥ ತೂರಿಸಿ, ಇನ್ನೊಂದು ಕಿಸೆಯಲ್ಲಿ ಬೀಡಿ ಬಂಡಲ್ ಕಡ್ಡಿ ಪೆಟ್ಟಿಗೆ ತುರುಕಿಸಿ "ದೇವಕ್ಕ, ನಾಳೆಗ್ ಕುಡ್ತೆನೇ" ಎಂದು ದೇವಿಗೆ ಕೇಳುವಂತೆ ಹೇಳಿ ದೇವಿಯ ಸರಾಯಿ ಅಂಗಡಿಯಿಂದ ಶಿರೂರಿನ ಜಂತ್ರೋಡಿಯತ್ತ ಹೊರಟ ಸೋಮ.

ಅಮವಾಸ್ಯೆ ಹುಣ್ಣಿಮೆಯ ಸಂಧಿಗಳಲ್ಲಿ ಜಂತ್ರೋಡಿಯಲ್ಲಿ ಸೆಟ್ಲಿ ಹಿಡಿಯುವುದು ಸೋಮನಿಗೆ ತಿಳಿಯದ ವಿಷಯವೇನಲ್ಲ. ಅವನು ಚಿಕ್ಕಂದಿನಿಂದ ಇಲ್ಲಿಯವರೆಗೆ ಅದೆಷ್ಟೋ ಭಾರಿ ಹೋಗಿ ಬಂದಿದ್ದ. ಪ್ರತಿಭಾರಿಯೂ ಹೋದರೆ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲ. ಜಾಸ್ತಿ ಸಿಕ್ಕು ಜನ ಕಡಿಮೆ ಬಂದರೆ ಉಂಟು, ಇಲ್ಲವೆಂದರೆ ಸಾರಿಗಾಗಿ ಅರೆದು ಇಟ್ಟ ಬರಿಯ ಮಸಾಲೆಯೇ ಗತಿ. ಸಿಕ್ಕರೆ ಸಿಗಲಿ ನೋಡೋಣವೆಂದು ಹೊರಟಿದ್ದ ಸೋಮ.

ಹಗಲು ಕಡಿಮೆಯಾದ ಸಮಯವಾದ್ದರಿಂದಲೋ ಏನೋ ಬೀರರ ಮನೆ ದಾಟಿ ಬೊಮ್ಮಯ್ಯ ದೇವರ ಗುಡಿ ತಲುಪುವ ಹೊತ್ತಿಗೆ ಕತ್ತಲಾವರಿಸಿತ್ತು. ಬೊಮ್ಮಯ್ಯ ದೇವರ ಮನೆಯವರೆಗೆ ಗದ್ದೆ ಬಯಲಿನಲ್ಲಿ ಹೇಗೋ ನಡೆದುಕೊಂಡು ಬರಬಹುದು, ಆದರೆ ಮುಂದಿನ ದಾರಿ ಸ್ವಲ್ಪ ಕಡಿದಾದುದರಿಂದ ಸ್ವಲ್ಪ ಆಯ ತಪ್ಪಿದರೂ, ಕಾನುಮೂಲೆಯ ಗುಡ್ಡದ ಧರೆಯಿಂದ ಕೆಳಕ್ಕೆ ಜಾರುವ ಸಂಭವ ಉಂಟು. ಅದೇನು ಸೋಮನಿಗೆ ತಿಳಿಯದ ವಿಚಾರವೇನಲ್ಲ. ಮಂದವಾಗಿ ಬೀರುವ ತಿಂಗಳ ಬೆಳಕಿನಿಂದಾಗಿಯೋ ಅಥವಾ ತನಗಿರುವ ಆ ದಾರಿಯ ಅನುಭವದಿಂದಾಗಿಯೋ ಅವನು ಆ ದಾರಿಯನ್ನು ಕ್ರಮಿಸಿ ಅಂಬೇರರ ಮನೆ ದಾಟಿ ಜಿಂತ್ರೋಡಿಯ ಹತ್ತಿರ ಹತ್ತಿರ ಬಂದ.

ಹತ್ತಿರ ಹತ್ತಿರ ಬರುತ್ತಿದ್ದಂತೆ ಚಂದುಮಠದ ಕಡೆ ಗದ್ದೆ ಬಯಲಿನಲ್ಲಿ ಲಾಟೀನು ಬೆಳಕು ಕಾಣಿಸಿತು. ಲಾಟೀನಿನ ಬೆಳಕು ಕಾಣುವ ದಿಕ್ಕಿನತ್ತ ನೋಡಿದ. ಬೆಳಕಿನಲ್ಲಿ ಮಾಡುವ ಅಸ್ಪಷ್ಟ ಜನರ ನೆರಳುಗಳನ್ನು ನೋಡಿದಾಗ ಆಗಲೇ ಸಾಕಷ್ಟು ಜನರು ಸೇರಿರಬಹುದೆನಿಸಿತು.

ಗಂಗಾವಳಿ ನದಿಗೆ, ಬೆಳಸೆ, ತಳಗದ್ದೆ ಕಡೆಯಿಂದ ಬಂದು ಸೇರುವ ಕಿರಿದಾದ ಹಳ್ಳಕ್ಕೆ ಕಟ್ಟು ಕಟ್ಟಿ ಚಿಕ್ಕ ಗಂಡಿ ಬಿಟ್ಟು, ಇಳಿತದ ಸಮಯದಲ್ಲಿ ಆ ಗಂಡಿಗೆ ಕೊಳವೆಯಾಕಾರದ ಬಲೆ ತುರುಕಿಸಿ ಸಿಟ್ಲಿ ಹಿಡಿಯುತ್ತಿದ್ದರು. ನೀರು ಹೋಗುವ ಗಂಡಿಯ ಬಳಿ ಒಂದು ಲಾಟೀನು ಇಟ್ಟಿದ್ದರು. ಇಳಿತದ ಸಮಯದಲ್ಲಿ ನೀರಿನ ಹರಿವಿನ ರಭಸಕ್ಕೆ, ನೀರಿನಲ್ಲಿದ್ದ ಸಿಗಡಿ ಮೀನುಗಳಲ್ಲ ಬೆಳಕಿಗೆ ಆಕರ್ಷಣೆಗೊಂಡು ಸೋತು ನೀರು ಸೇರಿ ಬಲೆ ಸೇರುತಿದ್ದವು. ಸೋಮ ಮೆಲ್ಲಗೆ ಆ ಹಳ್ಳಕ್ಕೆ ಕಟ್ಟಿದ ಕಟ್ಟಿನ ಮೇಲೆ ನಡೆದುಕೊಂಡು ನಡೆವಾಗ ಲಾಟೀನಿನ ಬೆಳಕು ನೋಡಿ ಹಾರಾಡುವ ಸಿಟ್ಲಿಗಳನ್ನು ನೋಡಿದಾಗ ಬಾಯಲ್ಲಿ ಇನ್ನಷ್ಟು ನೀರೂರಿತು. "ಇವತ್ತ್ ಹೆಂಗಾರೂ ಮಾಡ್ ಸಿಟ್ಲಿನ್ ತಕ್ಕುಂಡೇ ಹೋಗುದೇ" ಎಂದು ಹಾರಾಡುವ ಸಿಟ್ಲಿಗಳನ್ನು ನೋಡುತ್ತಾ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ, ಹಾಗೆ ಒಂದೆರಡು ನಿಮಿಷ ನಿಂತವನು, ತಡ ಮಾಡಿದರೆ ಕಷ್ಟ ಎಂದು ಮೆಲ್ಲ ಮೆಲ್ಲನೆ ಕಟ್ಟನ್ನು ದಾಟಿ, ಚಂದುಮಠದ ಕಡೆಯ ಕಳದತ್ತ ಜೋರಾಗಿ ಹೆಜ್ಜೆ ಹಾಕಿದ.

ಅವನು ಕಳ ಸೇರುವ ಹೊತ್ತಿಗೆ ಶಿರೂರಿನ ಕಡೆಯವರು, ಚಂದುಮಠ-ಬೆಳಸೆ ಕಡೆಯವರು, ಹಿಚ್ಕಡ-ಕಣಗಿಲ ಕಡೆಯವರು, ಸಗಡಗೇರಿ-ಜೂಗಾ ಕಡೆಯವರು ಹೀಗೆ ಸಾಕಷ್ಟು ಜನ ಅಲ್ಲಿ ಸಿಗಲಿರುವ ತಾಜಾ ತಾಜಾ ಸಿಟ್ಲಿಗಾಗಿ ಅಲ್ಲಿ ಬಂದು ಸೇರಿದ್ದರು. ಅಲ್ಲಿ ಬಂದವರಲ್ಲಿ ತಾನು ಒಬ್ಬನಾಗಿ ದೂರದಲ್ಲಿ ಬೀಡಿ ಕಚ್ಚಿ ಹೊಗೆ ಉಗುಳುತ್ತಾ ಕುಳಿತ ಸೋಮ.

ತನಗರಿವಿಲ್ಲದಂತೆ ಬೀಡಿ ಸೇಯುವ ಕಾಯಕದಲ್ಲಿ ಅವನಿದ್ದರೂ ಅವನ ಮನಸ್ಸು ದೃಷ್ಟಿಯೆಲ್ಲಾ, ಕಳದತ್ತ ಬರಲಿರುವ ಸಿಟ್ಲಿ ಬಲೆಯತ್ತಲೇ ನಾಟೀತ್ತು. ಅವನು ಬೀಡಿ ಸೇದಿ ಮುಗಿಯುವ ಹೊತ್ತಿಗೆ ಕಳಕ್ಕೆ ಸಿಟ್ಲಿಯ ಮೊದಲ ಬಲೆ ಬಂತೆನ್ನುವ ಜನರ ಗುಸು-ಗುಸು ಸದ್ದು ಇವನ ಕಿವಿಗೂ ತಲುಪಿ, ಬಲೆ ತಂದು ಇಳಿಸಲಿರುವ ಕಡೆ ಇತರರಂತೆ ಓಡಿದ. ಅಲ್ಲಿ ಆ ಮಟ್ಟಿಗೆ ಬಲೆ ಹಿಡಿದು ಬಂದ ಶುಕ್ರುವೇ ಹಿರೋ. ಅವನು ಬಲೆ ಹಿಡಿದು ಆ ಕಡೆ, ಈ ಕಡೆ ಓಡಾಡಿ ಬಂದವರನ್ನು ತನ್ನೊಡನೆ ಓಡಾಡುವಂತೆ ಮಾಡಿ, ತನ್ನ ಸಹಾಯಕನಿಗೆ, "ಏ ಹನ್ಮು ಎಂತಾ ಮಾಡ್ತಾ ಇದ್ದಿಯಕಾ ನೀನು, ಚತ್ತೋನೆ ಕಣ್ಣ ಕಾಂಬುದಿಲ್ವೇನಾ ನಿಂಗೆ, ಬ್ಯಾಗ್ ಲಾಟೀನ್ ತಕಂಬಾರಾ" ಎಂದು ಕೂಗಿ ಒಂದು ಮೂಲೆಯಲ್ಲಿ ಬಂದು ಆಸೀನನಾದ. "ಆಯ್ತಾ ತಂದ್ನಾ ಚ್ವಲ್ಪ್ ತಡ್ಕಣಾ" ಎನ್ನುತ್ತಾ ಹನ್ಮು ಒಂದು ಬಕೇಟ ಮತ್ತು ಬುಟ್ಟೀಯನ್ನು ತಂದು ಶುಕ್ರುವಿನ ಮುಂದಿರಿಸಿದ. ಹನ್ಮು ತಂದ ಬುಟ್ಟಿಯಲ್ಲಿ ಬಲೆಯಿಂದ ತಂದ ಸಿಟ್ಲಿಯನ್ನು ಸುರುವಿದ ಶುಕ್ರು.

ಆ ಸಿಟ್ಲಿಯಲ್ಲಿ ದೊಡ್ಡ ದೊಡ್ಡ ಸೆಟ್ಲಿಗಳನ್ನು ಆರಿಸಿ ಆರಿಸಿ ಒಂದು ಪ್ಲಾಸ್ಟಿಕ್ ಬಕೇಟಿಗೆ ಹಾಕತೊಡಗಿದರು ಹನ್ಮು ಹಾಗೂ ಶುಕ್ರು.ದೊಡ್ಡ ಸೆಟ್ಲಿಗೆ ಜಾಸ್ತಿ ರೊಕ್ಕವಿದ್ದುದರಿಂದ ಅವೆಲ್ಲವನ್ನು ಕೇಜಿ ಲೆಕ್ಕದಲ್ಲಿ ಮಾರುತಿದ್ದರು. ಅಲ್ಲಿ ಬಂದವರಲ್ಲಿ ಬಹುಜನ ಸೋಮುವಿನಂತೆ ಬಯಸಿ ಬಂದದ್ದು ಸಿದ್ದೆ, ಅಳ್ಳದಲ್ಲಿ (ಹಳೆಯ ಕಾಲದ ಮಾಪುಗಳು) ಅಳೆದು ಕೊಡಬಹುದಾದ ಚಿಕ್ಕ ಚಿಕ್ಕ ಸಿಟ್ಲೆಯನ್ನು ಬಯಸಿ. ಸಿಟ್ಲಿಯ ಜೊತೆಗೆ ಬಂದ ಕೊಳ ಹಾವುಗಳನ್ನು (ಜೌಗು ನೀರಿನಲ್ಲಿರುವ ಹಾವುಗಳು) ದೊಡ್ಡ ಸೆಟ್ಲಿ ಆರಿಸುವಾಗ ಸಿಕ್ಕರೆ ಅವುಗಳನ್ನು ಹೊರಗೆ ಎಸೆಯುತಿದ್ದರೂ. ಅವುಗಳು ಕಚ್ಚುತ್ತಿಲ್ಲವಾದರೂ ಬಂದವರ ಕಾಲಿನ ಬಳಿಯಲ್ಲಿ ಹರಿದಾಡಿ ಬಂದವರ ಪಾದಗಳಲ್ಲಿ ಕಚಕುಳಿಯಿಡುತಿದ್ದವು. ಹಾಗೆ ಹರಿದು ಬಂದ ಒಂದು ಹಾವು ಸೋಮನ ಕಾಲಿನ ಬಳಿಬಂದು ಹರಿದಾಡಿತು. ಎಲ್ಲಾ ಆರಿಸಿದ ಮೇಲೆ ಎಷ್ಟು ಸೆಟ್ಲಿ ಸಿಗಬಹುದು, ಇಲ್ಲಿದ್ದವರಿಗೆ ಎಷ್ಟು ಜನಕ್ಕೆ ಸಿಗಬಹುದು ಎಂದು ಲೆಕ್ಕ ಹಾಕುತ್ತಾ ಕುಳಿತ ಸೋಮನಿಗೆ, ಹಾವು ತನ್ನ ಕಾಲ ಬಳಿಕಚಕುಳಿ ಇಡುತ್ತಿದ್ದುದನ್ನು ನೋಡಿ ಆ ಹಾವಿನ ಮೇಲೆ ಸಿಟ್ಟು ಬಂದು, ಆ ಹಾವನ್ನು ಕೈಯಲ್ಲಿ ಹಿಡಿದು ಎತ್ತಿ, "ನಿನ್ನ್ ಕುಲಾ ಹಾಳಾಗುಕ" ಎಂದು ಕಳದಿಂದ ಹೊರಕ್ಕೆ ಎಸೆದ. ಹಾಗೆ ಎಸೆದ ಹಾವು ಅಲ್ಲಿಗೆ ಬರುತ್ತಿರುವ ಯಾರದೋ ಮೈಮೇಲೆ ಬಿದ್ದು, ಆತನಿಗೆ ಸಿಟ್ಟು ಬಂದು, "ಆದ್ಯಾರಂವ, ಜನ ಬರುದ್ ನೋಡ್ಕಂಡೆ ಹುತಾಕುಗೆ ಆಗುಲ್ವಾ" ಎಂದು ಗದರಿದ. ಸೋಮ ತನಗೆ ಸಂಬಂಧವಿಲ್ಲದವನಂತೆ ಮತ್ತೆ ಸಿಟ್ಲಿಯ ಬುಟ್ಟಿಯ ಕಡೆಗೆ ದೃಷ್ಟಿ ಬೀರಿದ.

ಸೋಮ ಹಾವು ಎಸೆದು ಮತ್ತೆ ಬುಟ್ಟಿಯ ಕಡೆ ದೃಷ್ಟಿ ಬೀರುವ ಹೊತ್ತಿಗೆ, ದೊಡ್ಡ ಸೆಟ್ಲಿಯೆಲ್ಲ ಆರಿಸಿ ಮುಗಿಸಿದ್ದರೂ. ಈಗ ಸಿದ್ದೆಯಲ್ಲಿ ಅಳೆದು ಕೊಡಲಿರುವ ಸಣ್ಣ ಸಿಟ್ಲಿಗಾಗಿ ಅದಾಗಲೇ ಜನ ಪ್ಲಾಸ್ಟಿಕ್ ಚೀಲ ಹಿಡಿದು ಬುಟ್ಟಿಯ ಸುತ್ತಾ ನಿಂತಿದ್ದರು. ಸಿಟ್ಲಿಯನ್ನು ಅಳೆದು ಹಾಕಲಿರುವ ಶುಕ್ರು ಸುತ್ತಲೂ ದೃಷ್ಟಿ ಬೀರಿ, ತನಗೆ ಪರಿಚಯವಿರುವರ ಪ್ಲಾಸ್ಟಿಕ್ ಚೀಲಕ್ಕೆ ಮೊದಲು ಸುರಿದು ದುಡ್ಡು ಇಸಿದುಕೊಂಡು ಕಳಿಸಲಾರಂಭಿಸಿದ. ಹತ್ತು ಹದಿನೈದು ನಿಮಿಷದೊಳಗೆ ಬುಟ್ಟಿಯಲ್ಲಿದ್ದ ಸಿಟ್ಲಿಯೆಲ್ಲ ಖಾಲಿಯಾಯಿತು. ಬಂದ ಜನರಲ್ಲಿ ಅರ್ಧದಷ್ತು ಜನರು ಸಿಟ್ಲಿ ಸಿಗದೇ ಎರಡನೆಯ ಭಾರಿಯ ಬಲೆಗಾಗಿ ಕಾದು ನಿಂತರು. ದೂರದಿಂದ ಬಂದ ಕೆಲವರು ಇನ್ನೊಂದು ಬಲೆಗೆ ಕಾದು ನಿಂತರೆ ತಡವಾಗುತ್ತದೆ ಎಂದು ದೊಡ್ಡ ಸಿಟ್ಲಿಯನ್ನೇ ಅರ್ಧ ಅರ್ಧ ಕೇಜಿ ಹೆಚ್ಚಿಗೆ ದುಡ್ಡು ಕೊಟ್ಟು ಕೊಂಡು ಹೋದರು. ಅದು ಸೋಮುವಿನ ಕೈಗೆಟುಕದ್ದಾದ್ದರಿಂದ ಸೋಮು ಸುಮ್ಮನಾದ.

ಹೇಗೂ ಸಿಟ್ಲಿಗಾಗಿ ಬಂದಿದ್ದೇನೆ, ಇನ್ನೊಂದು ಬಲೆ ನೋಡಿಯೇ ಹೋಗೋಣವೆಂದು ಕಾದು ಕುಳಿತ ಸೋಮ. ಮುಕ್ಕಾಲು ಗಂಟೆ ಕಳೆದ ಮೇಲೆ ಎರಡನೆಯ ಬಲೆ ಬಂತು. ಜನ ಮತ್ತೆ ಮುಗಿ ಬಿದ್ದರು. "ಯಾರು ಗಡಿಬಿಡಿ ಮಾಡ್ಬೇಡ್ರಕಾ, ಬಂದೋರಿಗೆಲ್ಲಾ ತೊಡಿನಾದ್ರೂ ಸಿಗುವಂಗ ಮಾಡ್ತೆವ್ರಾ" ಎನ್ನುವ ಶುಕ್ರುವಿನ ವಾಣಿಯನ್ನು ಕೇಳಿ, ತನಗೆ ಒಂದು ಆಸಿಗಾದರೂ (ಸಾರಿಗಾದರೂ) ಆಗುವಷ್ಟು ಸಿಟ್ಲಿ ಸಿಗಬಹುದೆಂದು ಸಮಾಧಾನವಾಗಿ ನಿಂತ.

ಶುಕ್ರು ಹೇಳೋದನ್ನೇನೋ ಹೇಳಿದ ಆದರೆ ಜನ ಕೇಳಬೇಕಲ್ಲ, ತಂಗಿಷ್ಟು-ನಂಗಿಷ್ಟು ಎಂದು ಮುಗಿ ಬಿದ್ದರು. ಬುಟ್ಟಿ ಖಾಲಿಯಾಯಿತು ಆದರೆ ಸೋಮನಿಗೆ ಸಿಟ್ಲಿ ಸಿಗಲಿಲ್ಲ. ಇಲ್ಲಿಗೆ ಬಂದು ಪ್ರಯೋಜನವಾಗಲಿಲ್ಲವೆಂದು ಮನೆಗೆ ಹೋಗಲು ಅಣಿಯಾದ. ಕಳದಾಟಿ ಇನ್ನೇನು ಹೊರಡಬೇಕು ಎನ್ನುವವನಿಗೆ, ಇನ್ನೊಂದು ಬಲೆ ಇದೆ ಎನ್ನುವುದು ಯಾರೋ ಹೇಳಿದ್ದು ಕೇಳಿ, "ಸಿಟ್ಲಿ ತಕ್ಕುಂಡೆ ಹೋಗ್ವಾ" ಎಂದು ನಿಂತ. ಹಾಗೆ ನಿಂತವನಿಗೆ ಕಿಸೆಯಲ್ಲಿದ್ದ ತೀರ್ಥದ ನೆನಪಾಗಿ ಒಂದು ಕೊಟ್ಟೆಯನ್ನು ಹರಿದು ಒಳಗಿದ್ದ ತೀರ್ಥವನ್ನು ಹೊಟ್ಟೆಗೆ ಸೇರಿಸಿದ. ಮೈ-ಮನಗಳಿಗೆ ಸ್ವಲ್ಪ ಸಮಧಾನವಾದಂತೆನಿಸಿತು. ತೀರ್ಥದ ನಶೆಯನ್ನು ಅನುಭವಿಸುತ್ತಿರುವಾಗಲೇ ಮಾರನೆಯ ಹಾಗೂ ಕೊನೆಯ ಬಲೆ ಕಳಕ್ಕೆ ಬಂತು. ಮೊದಲಿನಷ್ಟು ಜನವಿರದ ಕಾರಣ ಸೋಮನಿಗೂ ಒಂದು ಸಿದ್ದೆ ಸಿಟ್ಲಿ ಸಿಕ್ಕಿಯೇ ಸಿಕ್ಕಿತು.

ಸಿಟ್ಲಿ ತೆಗೆದುಕೊಂಡು ಕಳದಿಂದ ಸಂತೋಷಿತನಾಗಿ ಯಕ್ಷಗಾನದ ಪದಗಳನ್ನು ಹಾಡುತ್ತಾ ಹೊರಬಂದವನು ಪಶ್ಚಿಮದ ದಿಕ್ಕನ್ನು ನೋಡಿದ. ಚಂದ್ರನಾಗಲೇ ಕಂತಿದ್ದ. ಅಮವಾಸ್ಯೆಯ ಸಂಧಾಗಿದ್ದರಿಂದ ಸುತ್ತಲೂ ಕತ್ತಲು ಹಾಸಿಕೊಂಡು ಮಲಗಿತ್ತು. ಹಾಗೂ ಹೀಗೂ ಅಲ್ಲಿ ಬಂದವರ ಬೆಳಕಿನ ಸಹಾಯದಿಂದ ಕಟ್ಟನ್ನು ದಾಟಿ ನದಿಯ ದಡದತ್ತ ಬಂದ. ಸುತ್ತಲು ಕತ್ತೆ ದಾರಿ ಕೂಡ ಕಾಣಿಸುತ್ತಿಲ್ಲ, ಜೊತೆಗೆ ತೀರ್ಥದ ನಶೆ ಬೇರೆ. ಕಾನುಮೂಲೆಯ ದಿಕ್ಕಿನಲ್ಲಿದ್ದ ಅಂಬೇರರ ಮನೆಯ ಕಡೆಯಿಂದ ಬೆಳಗುವ ದೀಪಗಳ ದಿಕ್ಕನ್ನು ಹಿಡಿದು ಅವರ ಮನೆಯತ್ತ ಹೊರಟ.

----------******----------
ಗಂಡನ ಜೊತೆ ಕುಡಿಯಲು ಹೊರಟ ನೆಂಟರೆಲ್ಲ ಮನೆ ತಲುಪಿದರೂ ಗಂಡ ಬರದಿದ್ದುದನ್ನು ನೋಡಿ ನಾಗಿ ಮನೆಗೆ ಬಂದವರಿಗೆ, "ಅವ್ರರೆಲ್ಲ್ ಹೋಗೇರ್?" ಎಂದು ಕೇಳಿದಳು. ಬಂದವರು "ಮೀನು ಅಂದ್ಕುಂಡ ಹೋಗೆ" ಎನ್ನುವುದನ್ನು ಕೇಳಿ ತರಲಿರುವ ಮೀನಿಗಾಗಿ ಮಸಾಲೆ ಅರೆದು ಗಂಡನಿಗಾಗಿ ಕಾಯುತ್ತಾ ಕುಳಿತಳು.

ಭಜನೆ ಮುಗಿದು ತಾಸು ಕಳೆದರೂ ಗಂಡ ಬರದಿದ್ದುದನ್ನು ನೋಡಿ, ಅವನೆಲ್ಲೋ ಕುಡಿದು ಬಿದ್ದಿರಬೇಕು ಅನಿಸಿತು ಅವಳಿಗೆ. ಅದೇನು ಹೊಸತೇನಲ್ಲ, ಆಗಾಗ ಕುಡಿದು ಎಲ್ಲೋ ಬಿದ್ದು, ಮಾರನೆಯ ದಿನ ಬೆಳಿಗ್ಗೆಯೋ, ಇಲ್ಲಾ ಮಧ್ಯಾಹ್ನದ ಹೊತ್ತಿಗೆ ಆತ ಮನೆ ಸೇರಿದ್ದೂ ಇದೆ. ಇಂದು ಅದೇ ರೀತಿ ಎಲ್ಲೋ ಕುಡಿದು ಬಿದ್ದಿರಬೇಕೆಂದು ತಿಳಿದು, ಬೆಳಿಗ್ಗೆ ತಾನು ಕೆಲ್ಸ ಮಾಡುವ ಮಾಣೇಶ್ವರ್ ಒಡೆಯರ ಹೆಂಡತಿ ಸಾವಿತ್ರಿ ಒಡ್ತೆಯರ ಕಡೆಯಿಂದ ಇಸಿದುಕೊಂಡು ಬಂದ ಐದು ಒಣ ಬಂಗಡೆಯಲ್ಲಿ ಮೂರನ್ನು ಕೊಯ್ದು, ಅರೆದಿಟ್ಟ ಮಸಾಲೆಗೆ ಹಾಕಿ ಕುಡಿಸಿದಳು.

ಮೊದಲು ಮಕ್ಕಳಿಗೆಲ್ಲ ಬಡಿಸಿದಳು ಗಂಡ ಬಂದರೆ ಬರಲೀ ಎಂದು ಸ್ವಲ್ಪ ಹೊತ್ತು ಕಾಯ್ದಳು. ಅರ್ಧ ಗಂಟೆ ಕಳೆದರೂ ಗಂಡ ಬರದಿದ್ದುದನ್ನು ನೋಡಿ ಬಂದ ನೆಂಟರಿಗೆಲ್ಲ ಆ ಒಣ ಬಂಗಡೆಯ ಆಸಿಯಲ್ಲಿ ಬಡಿಸಿದಳು. ಬಂದವರ ಊಟ ಮುಗಿದು, ಅವಳ ಊಟ ಮುಗಿದರೂ ಗಂಡ ಬರಲಿಲ್ಲ. ಈತ ಎಲ್ಲೋ ಕುಡಿದು ಬಿದ್ದಿರಬೇಕು, ಇನ್ನೂ ಇಂದು ಆತ ಬರಲಾರ ಎಂದು ಉಂಡ ಪಾತ್ರೆಗಳನ್ನೆಲ್ಲ ತೊಳೆದಿಟ್ಟು ಬಂದು, ಬಂದವರಿಗೆಲ್ಲಾ ಅಂಗಳದಲ್ಲಿ ಹಾಸಿಕೊಟ್ಟು ಮಲಗಲು ಹೇಳಿ, ತಾನು ಒಳಗೆ ಬಂದು ಮಲಗಿದಳು.

----------******----------
ಅಂಬೇರರ ಕೊನೆಯ ಮನೆಯವರೆಗೆ ಬಂದ ಸೋಮನಿಗೆ ಮುಂದೆ ಬೆಳಕಿಲ್ಲದೇ ನಡೆದು ಹೋಗುವುದು ಕಷ್ಟವೆನಿಸಿತು. ಅಂಬೇರರ ಮನೆಯ ಮುಂದೆ ಬಿದ್ದ ಒಣ ತೆಂಗಿನ ಹೆಡೆಯಿಂದ ಒಂದಿಷ್ಟು ಗರಿಗಳನ್ನು ಕಿತ್ತು ಚೂಡಿಯಾಕಾರ ಮಾಡಿ, ತಂದ ಬೆಂಕಿ ಪೆಟ್ಟಿಗೆಯಿಂದ ಒಂದು ಕಡ್ಡಿ ಗೀರಿ ಮೊದಲು ಬೀಡಿ ಕಚ್ಚಿಕೊಂಡು, ಉಳಿದ ಬೆಂಕಿಯಿಂದ ಆ ತೆಂಗಿನ ಗರಿಯ ಚೂಡಿಯನ್ನು ಕಚ್ಚಿಕೊಂಡು ಊರಿನತ್ತ ಹೊರಟ.

ಬೊಮ್ಮಯ್ಯ ದೇವರ ಗುಡಿಯವರೆಗೆ ಹಾಗೂ ಹೀಗು ನಿಧಾನವಾಗಿ ನಡೆದು ಬಂದು ಗದ್ದೆ ಬಯಲನ್ನು ತಲುಪಿದ. ಮುಂದೆ ಗದ್ದೆ ಬಯಲಾದ್ದರಿಂದ ಆರಾಂ ಆಗಿ ನಡೆದು ಹೋಗ ಬಹುದೆನಿಸಿತು. ಆದರೂ ಇದ್ದರೆ ಇರಲಿ ಎಂದು ಒಂದು ಕೈಯಲ್ಲಿ ಸಿಟ್ಲಿಯ ಚೀಲ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಸಿಟ್ಲಿಯ ಚೀಲ ಹಿಡಿದುಕೊಂಡು ಮನೆಯಲ್ಲಿ ಹೆಂಡತಿ ಮಾಡಬಹುದಾದ ಸಿಟ್ಲಿಯ ಸಾರಿನ ಬಗ್ಗೆ ಕನಸು ಕಾಣುತ್ತಾ ಹಳ್ಳದ ಬದಿಯಿಂದಲೇ ನಡೆಯುತ್ತಾ ಸಾಗಿದ. ಪಕ್ಕದಲ್ಲಿ ನದಿ ಉಬ್ಬರದಿಂದ ತುಂಬಿ ಹರಿಯುತಿತ್ತು. ಉಬ್ಬರದ ಸಮಯದಲ್ಲಿ ನದಿಯಿಂದ ಮುಳುಗೇಳುವ ಮೀನುಗಳ ಸದ್ದಾಗಲೀ, ಕಾನುಮೂಲೆ, ಮುಳ್ಳಾಕೇರಿ ಹಾಗು ಮೋಡುಕಟ್ಟೆಯ ಕಡೆಯಿಂದ ಆಗಾಗ ಊಳಿಡುವ ನರಿಗಳ ಸದ್ದಾಗಲೀ, ಊಳಿಡುವ ನರಿಗಳಿಗೆ ಪ್ರತಿಸ್ಪರ್ಧಿಗಳಾಗಿ ಕೂಗು ಹಾಕುತ್ತಿರುವ ನಾಯಿಗಳ ಕೂಗುಗಳಾಗಲೀ ತೀರ್ಥದ ನಶೆಯಲ್ಲಿದ್ದರಿಂದಲೋ ಅಥವಾ ಸಿಟ್ಲಿಯ ಆಸಿಯ ಕನಸಿನಲ್ಲಿದ್ದರಿಂದಲೋ ಸೋಮುವನ್ನಿಂದು ಅಧೀರನನ್ನಾಗಿಸಲಿಲ್ಲ.

ಸೋಮ ಜೂಗಾದೇವಿಯ ಮನೆಯನ್ನು ದಾಟಿ ಚಿರಕ್ಲಿಯತ್ತ ಮುಖಮಾಡುವ ಹೊತ್ತಿಗೆ ಕೈಯಲ್ಲಿದ್ದ ಚೂಡಿ ಸಂಪೂರ್ಣ ಆರಿ ಹೋಗಿತ್ತು. ಇನ್ನೇನು ಮಾಡುವುದು ಎನ್ನುವ ಯೋಚನೆಯಲ್ಲಿದ್ದವನಿಗೆ ಕಿಸೆಯಲ್ಲಿ ಮಿಕ್ಕಿದ್ದ ಇನ್ನೊಂದು ಪ್ಯಾಕೇಟನ ನೆನಪಾಯ್ತು. ಇನ್ನು ಇದನ್ನು ಕಿಸೆಯಲ್ಲೇ ಇಟ್ಟುಕೊಂಡು ಏನು ಮಾಡುವುದು ಎಂದು ತಿಳಿದು ಕೊನೆಯ ಪ್ಯಾಕೇಟನ್ನು ಹೊಟ್ಟೆಗೆ ಇಳಿಸಿದ. ತಲೆ ಗಿರ್ ಅನಿಸಿದಂತಾಗಿ ಅಲ್ಲೇ ಸ್ವಲ್ಪ ಹೊತ್ತು ಕುಳಿತುಕೊಳ್ಳೋಣವೆನಿಸಿ ಕುಳಿತ. ಮನದ ತುಂಬೆಲ್ಲ ನಾಗಿ ಮಾಡಲಿರುವ ಸಿಟ್ಲಿಯ ಆಸಿ ಆವರಿಸಿಕೊಂಡು ಬಿಟ್ಟಿತ್ತು. ನಾಗಿ ಮನೆಯಲ್ಲಿ ಸಿಟ್ಲಿಯ ಆಸಿ, ಪುಡಿ (ಪಲ್ಯೆ) ಮಾಡಿದಂತೆಯೂ, ತಾನು ಅದನ್ನು ಅನ್ನದಲ್ಲಿ ಹಾಕಿ ಕಲಸಿ ಕಲಸಿ ತಿಂದಂತೆಯೂ ಕನಸು ಕಾಣತೊಡಗಿದ. ಹಾಗೆ ಕನಸಿನಲ್ಲಿ ಮುಳುಗಿದ್ದವನು ಕುಳಿತಲ್ಲಿಂದಲೇ ಅನತಿ ದೂರ ಕಾಣುವ ಹಿಚ್ಕಡ್ ಕೊಪ್ಪದತ್ತ ದೃಷ್ಟಿ ಹಾಯಿಸಿದ, ಯಾರ ಮನೆಯಿಂದಲೂ ಬೆಳಕು ಕಾಣದ್ದನ್ನು ನೋಡಿ, ಕರೆಂಟ್ ಹೋಗಿರಬೇಕೆಂದು ತಿಳಿದ. ಅವನಿಗೇನು ಗೊತ್ತು ಸಮಯ ಆಗಲೇ ಹನ್ನೊಂದು ದಾಟಿದೆಯೆಂದು. ದಂಡೆಯ ಕಡೆ ಹೋಗುವ ದಾರಿಯ ಬಳಿ ಇರುವ ರಸ್ತೆ ದೀಪ ಇನ್ನೂ ಉರಿಯುತ್ತಿರುವುದು ಕಣ್ಣಿಗೆ ಬಿದ್ದೊಡನೆ ರಾತ್ರಿ ಬಹಳವಾಗಿದೆ ಅನಿಸಿ ಎದ್ದು ಬೇಗ ಬೇಗನೇ ಮನೆಯ ಕಡೆಯ ದಾರಿ ಹಿಡಿದ.

ಇವನು ಚಿರಕ್ಲಿಯನ್ನು ಹೊಕ್ಕೊಡನೆ ಬೀದಿ ನಾಯಿಗಳೆಲ್ಲ ಒಂದೊಂದಾಗಿ ಬೊಗಳಲು ಶುರು ಮಾಡಿದವು, ಕತ್ತಲಾವರಿಸಿದ ಒಂದೆರಡು ಗಂಟೆಯಲ್ಲಿ ಉಂಡು ಮಲಗುವ ಆ ಕೊಪ್ಪದಲ್ಲಿ, ಅಷ್ಟು ರಾತ್ರಿಯ ನಂತರ ಅಲ್ಲಿ ಓಡಾಡುತ್ತಿರುವ ಅಪರೂಪದ ವ್ಯಕ್ತಿಯಾಗಿದ್ದ ಸೋಮ. ಹಾಗಾಗಿ ಅವುಗಳಿಗೂ ಆಶ್ಚರ್ಯವಾಗಿತ್ತು. ಸೋಮ ಊರು ಹೊಕ್ಕು ತೂಗಾಡುತ್ತಾ, ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುತ್ತಾ ತನ್ನ ಮನೆಯ ಅಂಗಳಕ್ಕೆ ಬಂದು ಸೇರಿದ.

ಸೋಮನೊಟ್ಟಿಗೆ ಬರುವ ನಾಯಿಯ ಕೂಗುಗಳನ್ನು ಕೇಳಿ ಎಚ್ಚರಗೊಂಡು, "ಇಟ್ಟ್ ರಾತ್ರೆಗ್ ಅದ್ಯಾರದ್" ಎಂದು ಕೇಳುತ್ತಾ ಎದ್ದು ಹೊರಬಂದಳು ನಾಗಿ. ತನ್ನ ಮನೆಯ ಕಡೆಗೆ ಬರುತ್ತಿರುವ ವ್ಯಕ್ತಿಯನ್ನು ನೋಡಿ, "ಅದ್ಯಾರದ್? ಇಟ್ಟ ರಾತ್ರೇಗ್?" ಎಂದಳು.

"ನಾನೇ, ಸೋಮ" ಎಂದ ಸೋಮ.

"ಇಟ್ಟೋತ್ನೋರಿಗ ಎಲ್ಲ್ ಹಾಳಾಗ್ ಸತ್ತದ್ರಿ"

"ಸಿಟ್ಲೆಗ್ ಹೋಗೇದ್ನೆ, ಇದೇ, ನೋಡೇ.. ತಕ್ಕುಂಡ್ ಹೋಗ್ ಮಾಡ್ ಬಾರೇ" ಎಂದು ಹೆಂಡತಿಯನ್ನು ಕರೆದ.

ನಾಗಿಗೆ ಸಿಟ್ಟು ತಡೆಯಲಾಗದೇ, "ಇಟ್ಟ್ ರಾತ್ರೇಗಾ ನಾ ನಿಮ್ಗೆ ಸಿಟ್ಲೇ ಬೈಸಾಕ್ಬೇಕಾ? ನಿಮ್ಗೇನ್ ಬಾಯ್ಕೇನಾ? ಅಲ್ಲ ಉಣ್ಗುದ್ ಮೀನ್ ಸಾರೇತ್, ಅನ್ನಾನೂ ಇತ್ತ್. ಉಂಡ್ಕುಂಡ್ ಮನೇಕಣಿ, ಸುಮ್ಗ್" ಎಂದು ಗಂಡನ ಮೇಲೆ ಹರಿಹಾಯ್ದಳು.

ಸೋಮನಿಗೆ ಇಷ್ಟೊಂದು ಶ್ರಮಪಟ್ಟು ಸಿಟ್ಲಿ ತಂದದ್ದು ಇದಕ್ಕೇನಾ ಅನಿಸಿ ಬೇಸರವಾಗಿ, "ಹಂಗಾರ್ ಇದ್ನೇನ್ ಮಾಡುದೇ? ಸುಮ್ನೇ ಹೊತಾಕುದ್ ಏನೇ?" ಅಂದ.

"ಅಲ್ಲೇ ಮೂಲೇಲ್ ಬಕೇಟ್ನ್ ತುಂಡ್ ಇತ್ತ್, ನೀರಾಕ್ ಹಂಗೆ ಇಡ್ರೆ, ನಾಳಗ್ ಮದ್ಯಾನ್ಕ ಮಾಡ್ತೇನ್ರೆ" ಎಂದಾಗ, ಇಂದಿಲ್ಲದಿದ್ದರೇನಾಯ್ತು, ನಾಳೆಯಾದರೂ ತಿಂದರಾಯ್ತು ಎಂದನಿಸಿ, ತಂದ ಸಿಟ್ಲೆಯನ್ನೆಲ್ಲ ಒಳಗಿದ್ದ ಒಡೆದ ಬಕೇಟ್ನ ತುಂಡಿನಲ್ಲಿ ಸ್ವಲ್ಪ ನೀರು ಹಾಕಿ ಇಟ್ಟ. ಅಷ್ಟೊತ್ತು ಉಸಿರುಗಟ್ಟಿದಂತೆ ಬಿದ್ದುಕೊಂಡಿದ್ದ ಸಿಟ್ಲೆಗಳು, ನೀರಿಗೆ ಬಿದ್ದೊಡನೆ ಒಂದೊಂದಾಗಿ ಸುದಾರಿಸಿಕೊಂಡು ಹಾರಾಡಲು ಶುರು ಮಾಡಿದವು. ಅದನ್ನು ನೋಡಿದ ಸೋಮುವಿಗೆ ಇನ್ನೂ ಹಸಿಯಾಗಿವೆ, ನಾಳೆಯವರೆಗೆ ಹಳಸಲ್ಲ ಎಂದನಿಸಿ ಸ್ವಲ್ಪ ಸಮಾಧಾನವೆನಿಸಿ, ಮಡಿಕೆಗಳಲ್ಲಿ ಅಳಿದುಳಿದ ಅನ್ನ-ಸಾರು ಹಾಕಿಕೊಂಡು ಉಣ್ಣತೊಡಗಿದ. ಹೊಟ್ಟೆ ತುಂಬಿದೆಯೋ, ಇಲ್ಲವೋ ಎಂದು ತಿಳಿಯುವ ಹೊತ್ತಿಗೆ ಅನ್ನ ಕಾಲಿಯಾಗಿತ್ತು. ಉಣ್ಣುವ ಶಾಸ್ತ್ರ ಮುಗಿಸಿಬಂದು ಗೋಡೆಗೆ ಆನಿಸಿ ಇಟ್ಟ ಚಾಪೆಯನ್ನು ತೆಗೆದು ಹಾಸಿ ಮಲಗಿದ. ತೀರ್ಥದ ಗುಂಗಿಗೆ ತಲೆ ನೆಲ ಸೇರಿದೊಡನೆಯೇ ನಿದ್ದೆ ಆವರಿಸಿತು.


--ಮಂಜು ಹಿಚ್ಕಡ್

Sunday, March 22, 2015

ಇಂದು ಶಿಕ್ಷಣ ಎಂದರೆ?

ಕೆಲವು ದಿನಗಳ ಹಿಂದೆ ಅಂಕೋಲಾಕ್ಕೆ ಹೋಗಿದ್ದಾಗ ದೂರದ ಸಂಭಂದಿಯೊಬ್ಬರ ಬೇಟಿ ಆಯಿತು. ಉಭಯ ಕುಶಲೋಪಹಾರಿಗಳ ನಂತರ ನಾನು ಅವರ ಮಕ್ಕಳ ಬಗ್ಗೆ ಕೇಳತೊಡಗಿದೆ. ಮಕ್ಕಳ ಬಗ್ಗೆ ಕೇಳಿದರೆ ಯಾರಿಗೆ ತಾನೆ ಸಂತೋಷವಾಗಲ್ಲ ಹೇಳಿ. ಅವರು ಕುತೂಹಲದಿಂದ ಅವರ ಮಕ್ಕಳ ಬಗ್ಗೆ ಹೇಳಿ ಕೊಂಡರು. ಅವರು ಓದಿನ ಬಗ್ಗೆ, ಅವರು ಓದುತ್ತಿರುವ ಶಾಲೆಯ ಬಗ್ಗೆ, ಅವರಿಗೆ ಇಬ್ಬರು ಮಕ್ಕಳು, ಒಬ್ಬ ೬ನೇ ತರಗತಿಯಲ್ಲೂ, ಇನ್ನೊಬ್ಬ ೪ನೇ ತರಗತಿಯಲ್ಲೂ ಓದ್ತಾ ಇದ್ದಾರೆ. ತಂದೆ ತಾಯಿ ಇಬ್ಬರೂ ಶಿಕ್ಷಕರೂ. ಮಕ್ಕಳು ದಿನಾ ಶಾಲೆ ಬಿಟ್ಟ ನಂತರ ಟ್ಯೂಷನಗೆ ಹೋಗೋದು ಅಭ್ಯಾಸ. ನಾನು ಕೇಳಿದೆ ಯಾಕೆ ಟ್ಯೂಷನಗೆ ಕಳಿಸ್ತಿರಾ, ನೀವೇ ಮನೆಯಲ್ಲಿ ಹೇಳಬಹುದಲ್ವಾ ಅಂತಾ. ಅದಕ್ಕೆ ಅವರು ಹೇಳಿದ್ದು "ಇಲ್ಲಾ ನಾವು ಹೇಳಿದರೆ ಮಕ್ಕಳು ಕೇಳಲ್ಲ, ನಮಗೆ ಮನೆ ಕೆಲಸ ಬೇರೆ ಇರುತ್ತೆ ನಾವು ಏನನ್ನಾದರೂ ಹೇಳೋಣಾ ಅಂದರೆ ಮಕ್ಕಳು ಆಸಕ್ತಿನೇ ತೋರಿಸಲ್ಲ. ಟ್ಯೂಷನ್ ಆದರೆ ತುಂಬಾ ಜನ ಮಕ್ಕಳಿರ್ತಾರೆ, ಅವರಲ್ಲಿ ಎಲ್ಲರ ಹಾಗೆ ತಾವೂ ಓದಬೇಕಾಗತ್ತೇ ಅನ್ನುವ ಹುಮ್ಮಸ್ಸು ಇರುತ್ತದೆ. ಮನೆಯಲ್ಲಿ ಆ ವಾತಾವರಣ ಇರಲ್ಲ ಹಾಗಾಗಿ ಮಕ್ಕಳು ಟ್ಯೂಷನ ಹೋಗ್ತಾರೆ ಅಂಥಾ" ನಾನು ಕೇಳಿದೆ ಟ್ಯೂಷನ ಯಾರು ಹೇಳ್ತಾರೆ ಅಂಥಾ, ಅದಕ್ಕೆ ಅವರು ಹೇಳಿದು "ಅವರ ಶಾಲೆಯ ಶಿಕ್ಷಕರೇ, ಶಾಲೆ ಮುಗಿದ ಮೇಲೆ ಟ್ಯೂಷನ ಹೇಳ್ತಾರೆ ಅಂತಾ". ಎಂತಹ ವಿಪರ್ಯಾಸ ನೋಡಿ. ಶಾಲೆ ಮುಗಿದ ಬಳಿಕ ಟ್ಯೂಷನ ಹೇಳಿ ಇತರೆ ಆದಾಯ ಗಳಿಸೋ ಶಿಕ್ಷಕ ಒಂದು ಕಡೆಯಾದರೆ, ತಮ್ಮ ಇಬ್ಬರು ಮಕ್ಕಳಿಗೆ ಪಾಠ ಹೇಳಲಾಗದ ದುರ್ಭಾಗ್ಯ ಈ ಶಿಕ್ಷಕರು ಇನ್ನೋಂದೆಡೆಗೆ. ತನ್ನ ಮಕ್ಕಳಿಗೆ ತಲೆನೋವು ಎಂದು ಇನ್ನೊಬ್ಬ ವೈದ್ಯರ ಬಳಿಗೆ ಕರೆದೊಯ್ಯುವ  ವೈದ್ಯನಂತಾಗಿದೆ ಇವರ ಪರಿಸ್ಥಿತಿ.

ಇವತ್ತು ಟ್ಯೂಷನ ಅನ್ನೋದು ಪಾಲಕರಿಗೆ ಪ್ರತಿಷ್ಟೆಯ ವಿಷಯ. ತನ್ನ ಮಗ ಟ್ಯೂಷನಗೆ ಹೋಗ್ತಾ ಇದ್ದಾನೆ ಅನ್ನೋದೆ ಹೆಮ್ಮೆ. ೧ನೇ ತರಗತಿಯಿಂದ ಪ್ರಾರಂಭವಾದ ಟ್ಯೂಷನ ಶಿಕ್ಷಣ ಮುಗಿಯುವವರೆಗೂ ಬೆನ್ನಟ್ಟಿ ಹೋಗ್ತಾನೇ ಇರುತ್ತದೆ. ಕೆಲವು ಶಿಕ್ಷಕರಿಗೂ, ಸಂಸ್ಥೆಗೆಳಿಗಂತೂ ಎಲ್ಲಿಲ್ಲದ ಖುಸಿ. ಈ ವಿಷಯಕ್ಕೆ ಇಷ್ಟು ಹಣ ಅಂತಾ ವಸೂಲಿ ಮಾಡೋದೇ ಇವರ ಅಭ್ಯಾಸ. ಬೆಂಗಳೂರಿನಂತಹ ಮಹಾನಗರದಲ್ಲಿ ಕೆಲವು ಶಿಕ್ಷಕರೂ ಶಾಲೆಗೆ ಹೋಗದನ್ನು ಬಿಟ್ಟು ಟ್ಯೂಷನ ಪ್ರಪಂಚದಲ್ಲಿ ಅಲೆದಾಡ್ತಾ ಇದ್ದಾರೆ.

ಇವತ್ತಿನ ಶೈಕ್ಷಣಿಕ ಪದ್ದತಿಯಂತೂ ಹೇಳತೀರದೂ, ಕೊಳೆತು ನಾರುತ್ತಿರುವ ಹಳೆಯ ಶೈಕ್ಷಣಿಕ ಪದ್ದತಿಯಲ್ಲೇ ಇನ್ನೂ ಶಿಕ್ಷಣ ಮುಂದುವರೆಯುತ್ತಿದೆ. ಕಾಲ ಬದಲಾಗುತ್ತಾ ಇದ್ದ ಹಾಗೆ ತೆಗೆದುಕೊಳ್ಳುವ ಹಣ ಏರಿಕೆಯಾಗುತ್ತಿದೆಯೇ ಹೊರತು ಶೈಕ್ಷಣಿಕ ಪದ್ದತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಪಾಲಕರಲ್ಲೂ ಅಷ್ಟೇ ತನ್ನ ಮಗ ಇಂಜೀನಿಯರ್ ಆಗಬೇಕು, ಡಾಕ್ಟರ್ ಆಗಬೇಕು, ಇಲ್ಲಾ ಸರ್ಕಾರಿ ಊದ್ಯೋಗಿ ಆಗಬೇಕು ಅನ್ನೋದನ್ನು ಬಿಟ್ಟರೆ ಬೇರೆ ಇನ್ನೇನಿಲ್ಲ. ಹಾಗಾಗಿ ನಾವು ಅತ್ಯಧಿಕ ಪೀಸ್ ಕೋಡೋದು, ಇಂಜಿನಿಯರಿಂಗ್, ಮೆಡಿಕಲ್ ಸೀಟಿಗೆ ಹಾಗೂ ವ್ರತ್ತಿಪರ ಶಿಕ್ಷಣಗಳಿಗೆ. ಆದರೆ ಯಾವುದೇ ಪಾಲಕರಾಗಲಿ, ಶಿಕ್ಷಕರಾಗಲಿ, ವಿದ್ಯಾರ್ಥಿಗಳಿಗೆ, ಅವರ ಮನಸ್ಸಲ್ಲಿರೋ, ಆಸಕ್ತಿಯಿರೋ ವಿಷಯಗಳನ್ನೂ ಓದಲು ಬಿಡಲ್ಲ. ಕೆಲವು ಶೈಕ್ಷಣಿಕ ಸಂಸ್ಥೆಗಳಂತೂ, ತಮ್ಮಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಎಷ್ಟೆಷ್ಟು ಅಂಕ ಗಳಿಸಬೇಕು ಅಂತಾ, ಯಾರು ಎಷ್ಟು ಹೆಚ್ಚು ಅಂಕ ಗಳಿಸುತ್ತಾರೋ ಅವರಿಗೆ ಅಷ್ಟು ಮನ್ನಣೆ. ಆದರೆ ವಿದ್ಯಾರ್ಥಿಗೆ ಶೈಕ್ಷಣಿಕ ವಿಷಯ ಬಿಟ್ಟರೆ ಬೇರೆ ಯಾವುದೇ ಸಾಮಾನ್ಯ ಜ್ನಾನ ಇರುವುದಿಲ್ಲ. ಕೆಲವರಿಗಂತೂ ನಮ್ಮ ಪ್ರದಾನಿಯಾರು, ರಾಷ್ಟ್ರಪತಿಯಾರು ಅಂತಾನೂ ಗೊತ್ತಿರಲ್ಲ. ಅದಕ್ಕೆ ಇತ್ತಿಚೆಗೆ ನಡೆದ ಪ್ರಹಸನವೇ ಸಾಕ್ಷಿ. ಕೆಲವು ದಿನಗಳ ಹಿಂದೆ, ಆಗ ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿದ್ದ ಕಾಲ  ಸುದ್ದಿ ವಾಹಿನಿಯೊಂದು, ಕೆಲವು ವಿದ್ಯಾರ್ಥಿನಿಯರಿಗೆ ಸಾಮಾನ್ಯ ಜ್ನಾನ ಸ್ಪರ್ಧೆ ಏರ್ಪಡಿಸಿತ್ತು.ಅದರಲ್ಲಿ ಒಂದು ವಿದ್ಯಾರ್ಧಿನಿಗೆ ಕೇಳಿದ ಪ್ರಶ್ನೆ " ನಮ್ಮ ದೇಶದ ರಾಷ್ಟ್ರಪತಿ ಯಾರು?" ಅಂತಾ. ಅದಕ್ಕೆ ಅವಳಲ್ಲಿ ಉತ್ತರ ಇರಲಿಲ್ಲ. ಒಬ್ಬ ವಿದ್ಯಾರ್ಥಿನಿಯಾಗಿ, ಓರ್ವ ಭಾರತಿಯ ಮಹಿಳೆಯಾಗಿ, ನಮ್ಮ ದೇಶದ ಮಹಿಳಾ ರಾಷ್ಟ್ರಪತಿ " ಪ್ರತಿಭಾ ಪಾಟೀಲ್ " ಅನ್ನುವುದು ಗೊತ್ತಿರಲಿಲ್ಲ. ಹೇಗಿದೆ ನೋಡಿ ನಮ್ಮ ಶೈಕ್ಷಣಿಕ ಪದ್ದತಿ. ಓದುವ ಪುಸ್ತಕ ಬಿಟ್ಟರೆ ಬೇರೇನು ಗೊತ್ತಿಲ್ಲ.

ಪುಸ್ತಕ ಓದಿ ಪ್ರಥಮ ಶ್ರೇಣಿ ಗಳಿಸಿದರಷ್ಟೇ, ಅವರ ಬದುಕು ಸಾರ್ಥಕ. ನನ್ನ ಮಗ/ಮಗಳು ೯೫% ಮಾಡಿದಳು, ೧೦೦% ಮಾಡಿದಳು ಅಂತಾ ಓಡಾಡಿಕೊಂಡು ಪ್ರತಿಷ್ಟೆಯನ್ನು ತೋರಿಸುವ ಇಂದಿನ ಪಾಲಕರಿಗೆ ಗೊತ್ತಿಲ್ಲ, ತಮ್ಮ ಮಕ್ಕಳಿಗೆ ಪುಸ್ತಕ  ಬಿಟ್ಟು ಬೇರೇನು ಗೊತ್ತಿಲ್ಲ ಅಂತಾ. ಟ್ಯೂಷನ್ ಆಗಲಿ, ಶೈಕ್ಷಣಿಕ ಸಂಸ್ಥೆಗಳಾಗಲಿ, ಸಾಮಾನ್ಯ ಜ್ನಾನವನ್ನು ಹೇಳಿ ಕೊಡುವುದಿಲ್ಲ. ಹಾಗಾಗಿ ಇಂದಿನ ಮಕ್ಕಳಿಗೆ ಸಾಮಾನ್ಯ ಜ್ನಾನದ ಸೊಗಡೇ ಇಲ್ಲ. ಇಂಥ ವಿದ್ಯಾರ್ಥಿಗಳೂ ಎಲ್ಲದರೂ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಿದರಂತೂ ಮುಗಿದೇ ಹೋಯಿತು. ಸಿಕ್ಕ ಸಿಕ್ಕ ಕೋಚಿಂಗ್ ಸೆಂಟರಗಳಿಗೆ ಸೇರಿ, ಒಂದಿಷ್ಟು ಹಣ ಸುರಿದು, ಸಾಮಾನ್ಯ ಜ್ನಾನವನ್ನು ಅಭ್ಯಾಸ ಮಾಡುವುದು.

ಇನ್ನು ಕೆಲವು ವಿದ್ಯಾರ್ಥಿಗಳು, ಉನ್ನತ ಶಿಕ್ಷಣಕ್ಕಾಗಿ ನಡೆಸುವ ಪರೀಕ್ಷೆಗಳನ್ನು ಬರೆಯುದಕ್ಕೂ ಕೋಚಿಂಗ್ ಕ್ಲಾಸಗಳೆ ಬೇಕು. ಅದೇ ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ಒಂದಿಷ್ಟು ಸಮಯವನ್ನು ಸಾಮಾನ್ಯ ಜ್ನಾನಕ್ಕಾಗಿ ಮೀಸಲಟ್ಟರೆ ಇಷ್ಟೊಂದು ಸಮಸ್ಯೆಗಳು ಕಾಡುತ್ತಿರಲಿಲ್ಲ. ಇವತ್ತು ಶಿಕ್ಷಣ ಅನ್ನುವುದು, ಬ್ಯುಸಿನೆಸ್ ಆಗಿ ಬಿಟ್ಟಿದೆ. ದಿನ ನಾಯಿಕೊಡೆಗಳಂತೆ ಅಲ್ಲಲ್ಲಿ ಒಂದೊಂದು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ತಲೆ ಎತ್ತುತ್ತಿವೆ. ಒಂದು ಕಾಲದಲ್ಲಿ ವರ್ಷಕ್ಕೆ ೫ ಸಾವಿರ ಹತ್ತು ಸಾವಿರ ಇದ್ದ ಫೀಸು ಇವತ್ತು ಲಕ್ಷ ದಾಟಿದೆ. ಸಾಮಾನ್ಯ ಮುಗ್ಧ ವಿದ್ಯಾರ್ಥಿಗಳಿಗೆ ಇವತ್ತು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಕನಸಾಗಿ ಬಿಟ್ಟಿದೆ. ಇದು ಫೀಸಗಳಿಗೇ ಸಿಮಿತವಾಗಿಲ್ಲ, ಲಕ್ಷ ಲಕ್ಷ ಡೊನೇಷನ ಬೇರೆ. ಹೇಗಿದೆ ನೋಡಿ ಈ ಬ್ಯುಸಿನೆಸ್. ಇಂದಿಗೆ ಶಿಕ್ಷಣ ಅನ್ನುವುದು ಶ್ರೀಮಂತ ವ್ಯಕ್ತಿಗಳಿಗೆ ಶಿಮೀತವಾಗಿ ಬಿಟ್ಟಿದೆ. ಶಿಕ್ಷಣದಲ್ಲಿ ಉನ್ನತ ಶ್ರೇಣಿ ಪಡೆದು, ಸೀಟ್ ಸಿಕ್ಕರೂ, ಶಿಕ್ಷಣ ಕೊಡಿಸಲಾಗದ ಪರಿಸ್ಥಿತಿ. ಅಷ್ಟೇ ಅಲ್ಲ ಇವತ್ತು ಎಂ.ಬಿ.ಎ ಮಾಡಬೇಕಾದರೆ ಲ್ಯಾಪ್ ಟಾಪ್               ಇಲ್ಲದೇ ಪ್ರವೇಶವಿಲ್ಲ. ಹೇಗಿದೆ ನೋಡಿ ವಿಪರ್ಯಾಸ.

ಇನ್ನೂ ಕೆಲವು ಸಂಸ್ಥೆಗಳಂತೂ, ಅಲ್ಲಿ ಸೇರಿದ ವಿದ್ಯಾರ್ಥಿಗಳಿಗೆ ಅವರೇ  ಲ್ಯಾಪ್ ಟಾಪ್ ಕೊಡಿಸುತ್ತಾರೆ. ಯಾವುದೋ ಕಂಪ್ಯೂಟರ್ ಮಾರಾಟ ಮಾಡುವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು, ಇವರು ಲ್ಯಾಪ್ ಟಾಪ್ ಕರಿದಿಸಿ, ವಿದ್ಯಾರ್ಥಿಗಳಿಗೆ ಮಾರಾಟ ಮಾಡುವುದು. ಹೇಗಿದೆ ನೋಡಿ. ಇವತ್ತು ಶಿಕ್ಷಣ ಅನ್ನುವುದು ಕೇವಲ ಹಣಾ ಇರುವವನಿಗೆ ಮಾತ್ರ ಮೀಸಲಾಗಿ ಬಿಟ್ಟಿದೆ. ಇನ್ನು ಸರಕಾರಿ ಶಾಲಾ- ಕಾಲೇಜುಗಳ ಪರಿಸ್ಥಿತಿ ಅಂತೂ ಹೇಳತೀರದು. ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿ. ಶಿಕ್ಷಕರಿದ್ದರೆ ವಿದ್ಯಾರ್ಥಿಗಳಿಲ್ಲ, ವಿದ್ಯಾರ್ಥಿಗಳಿದ್ದರೆ ಸರಿಯಾದ ಕೊಠಡಿಗಳಿಲ್ಲ, ಕೊಠಡಿಗಳಿದ್ದರೆ ಶಿಕ್ಷಕರಿಲ್ಲ, ವಿದ್ಯಾರ್ಥಿಗಳಿದ್ದರೆ ಶಿಕ್ಷಕರಿಲ್ಲ.

ಇಂದು ಶಿಕ್ಷಣ ಎಂದರೆ ದಿನದಿಂದ ದಿನಕ್ಕೆ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಶೈಕ್ಷಣಿಕ ಸಂಸ್ಥೆಗಳೋ, ಅವರು ತೆಗೆದು ಕೊಳ್ಳುತ್ತಿರುವ ಲಕ್ಷಾಂತರ ರೂಪಾಯಿ ಡೊನೇಷನ್ಗಳೋ, ತನ್ನ ಮಗುವನ್ನು ಈ ಸಂಸ್ಥೆಗೆ ಸೇರಿಸಿದೆ, ಆ ಸಂಸ್ಥೆಗೆ ಸೇರಿಸಿದೆ ಎನ್ನುವ ತಂದೆ ತಾಯಿಯರ ಪ್ರತೀಷ್ಟೆಯೋ ಆಗಿದೆಯೇ ಹೊರತು ಬೇರೇನು ಅಲ್ಲ್ ಅನ್ನುವುದು ನನ್ನ ಅನಿಸಿಕೆ.

--ಮಂಜು ಹಿಚ್ಕಡ್