ಹನ್ಮುವಿಗೆ ವರ್ಷಕ್ಕೊ, ಎರಡು ವರ್ಷಕ್ಕೊ ಅಪರೂಪಕ್ಕೆ ಒಮ್ಮೆ ಬರುತ್ತಿದ್ದ ಜ್ವರ, ಇತ್ತೀಚೆಗೆ ನಾಲ್ಕು ತಿಂಗಳುಗಳಲ್ಲಿ ೩ ಬಾರಿ ಬಂದು ಹೋಗಿ ಈಗ ಒಮ್ಮೆಲೆ ಇದ್ದಕ್ಕಿದ್ದ ಹಾಗೆ ಮತ್ತೆ ಬಂದಿತ್ತು. ಆದರೆ ಈ ಬಾರಿ ಬಂದದ್ದು ಒಂದು ವಾರ ಕಳೆದರೂ ಕಡಿಮೆಯಾಗಲಿಲ್ಲ. ನಾಗಿ ತನ್ನ ಕೆಲಸ ಬಿಟ್ಟು ಜ್ವರ ಬಂದಿರುವ ಮಗನನ್ನು ಮನೆಯ ಹತ್ತಿರವೇ ಇರುವ ಸರ್ಕಾರಿ ಆಸ್ಪತ್ರೆಗೆ ಹೋಗಿ ಎರಡು ಬಾರಿ ತೋರಿಸಿಕೊಂಡು ಬಂದಳು. ಎರಡು ಬಾರಿ ಹೋದಾಗಲೂ ಒಂದಿಷ್ಟು ಔಷಧಿಯನ್ನು ಕೊಟ್ಟುಕಳಿಸಿ ಇನ್ನೆರಡು ದಿನ ಜ್ವರ ಬಿಟ್ಟಿಲ್ಲ ಎಂದರೆ ಮತ್ತೆ ಬನ್ನಿ ಎಂದು ಹೇಳಿ ಕಳಿಸಿದ್ದು ಆಯಿತು. ಹೀಗೆ ಹೇಳಿ ಕಳಿಸಿ ಮೂರು ದಿನವಾಯಿತು. ನಾಗಿಯು ಕೂಡ ಕೆಲಸಕ್ಕೆ ಹೋಗದೇ ಆಗಲೇ ಒಂದು ವಾರವಾಗಿ ಹೋಗಿತ್ತು. ನಾಳೆ ಏನೆ ಆಗಲಿ ಮಗನನ್ನು ಹೇಗಾದರೂ ಮಾಡಿ ಅಂಕೋಲೆಯ ದೊಡ್ಡ ಆಸ್ಪತ್ರೆಗೆ ಒಂದು ಸಾರಿ ತೋರಿಸಿ ಬಿಡುವುದು ಒಳ್ಳೆಯದೆನಿಸಿತು. ಆದರೆ ಏನು ಮಾಡುವುದು ಅದು ಅವಳಿಗೆ ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲವಲ್ಲ.
ಪಾಪ ನಾಗಿಯ ಬದುಕೆ ಹಾಗೆ. ಅವಳೇನು ಸ್ಥಿತಿವಂತಳಾಗಿರಲಿಲ್ಲ. ಅವಳ ಆಸ್ಥಿ ಎಂದರೆ ಈಗ ವಾಸಿಸುತ್ತಿರುವ ಎರಡು ಪಕ್ಕೆಯ ಹಂಚಿನ ಮನೆ, ಮನೆ ಇರುವ ಎರಡು ಗುಂಟೆಯ ಜಾಗ, ಆ ಜಾಗದಲ್ಲಿರುವ ಎರಡು ತೆಂಗಿನ ಮರ ಮತ್ತು ಒಂದು ಭಲಿತ ನುಗ್ಗೆಯ ಗಿಡ ಮಾತ್ರ. ನಾಲ್ಕಾರು ಮನೆಯ ಮುಸುರೆ ತಿಕ್ಕಿ ಮಗನನ್ನು ಓದಿಸುತ್ತಾ ಸಂಸಾರವನ್ನು ಸಾಗಿಸುತ್ತಿದ್ದಳು ನಾಗಿ. ಹಾಗಂತ ಅವಳಿಗೆ ಗಂಡ ಮತ್ತು ಇತರೆ ಮಕ್ಕಳಿಲ್ಲವೇ? ಇದ್ದಾರೆ ಅವಳಿಗೆ ಗಂಡನೂ ಇದ್ದಾನೆ. ಅವನು ದುಡಿಯುತ್ತಾನೆ. ದುಡಿದದ್ದನ್ನು ಕುಡಿದು ಮನೆಗೆ ಬರುತ್ತಾನೆ, ಅದೂ ನಾಗಿ ಮಾಡಿದನ್ನು ಉಣ್ಣಲು ಅಷ್ಟೇ. ಹನ್ಮುನ ಹಾಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಆದರೆ ಪ್ರಾಥಮಿಕ ಶಿಕ್ಷಣವನ್ನು ಓದಿಲ್ಲ ಅಷ್ಟೇ. ಅವರೂ ಕೂಡ ಸಮೀಪದ ಕಲ್ಲು ಕಣಿಯಲ್ಲಿ ದುಡಿಯುತ್ತಾರೆ.
ಮೊದಲನೇಯವನು ಇವರ ಜೊತೆ ವಾಸಿಸದೇ, ಅಲ್ಲೇ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ಎರಡು ಪಕ್ಕೆಯ ಚಿಕ್ಕ ಮನೆ ಕಟ್ಟಿಕೊಂಡು ಹೆಂಡತಿಯೊಡನೆ ವಾಸವಾಗಿದ್ದಾನೆ. ಮದ್ಯದವನದು ಹಮಾಲಿ ಕೆಲಸ. ದುಡಿದುದ್ದರಲ್ಲಿ ಒಂದು ಪೈಸೆಯನ್ನು ಮನೆಗೆ ಕೊಡುತ್ತಿರಲಿಲ್ಲ. ದುಡಿದದ್ದನ್ನು ಗೆಳೆಯರೊಂದಿಗೆ ಸೇರಿ ಇಸ್ಪೀಟು ಆಟ ಆಡುವುದರಲ್ಲಿ ಹಾಗೂ ವಾರಕೊಮ್ಮೆ ಅಂಕೋಲೆಗೆ ಹೋಗಿ ಸಿನೇಮಾ ನೋಡುವುದರಲ್ಲೇ ಕಾಲಿ ಮಾಡಿ ಬಿಡುತಿದ್ದ. ಆದರೆ ಅವನಿಗೂ ಅವನ ಅಪ್ಪನಿಗೂ ಇರುವ ವ್ಯತ್ಯಾಸವೊಂದೇ, ಅಪ್ಪ ಮನೆಗೆ ಊಟ್ಟಕ್ಕಾದರೂ ದಿನಾ ಮನೆಗೆ ಬರುತ್ತಿದ್ದ, ಆದರೆ ಈತ ನೆನಪಿದ್ದರೆ ಬಂದ ಇಲ್ಲಾ ಕುಡಿದು ಅಲ್ಲೆ ಬಿದ್ದ.
ಆದರೆ ಹನ್ಮು ಮಾತ್ರ ಇವರೆಲ್ಲರಿಗಿಂತಲೂ ಭಿನ್ನ. ಆಗಲೇ ಆತ ಬಿ.ಎಸ್.ಇ ಮುಗಿಸಿ ಬಿ.ಎಡ್ ಓದುತ್ತಿದ್ದ. ಬಿ.ಎಡ್ ಸೇರಿ ಆಗಲೇ ಒಂದೆರಡು ತಿಂಗಳಾಗಿದ್ದವು. ಅವರ ಆ ಗುಂಪಿನಲ್ಲಿ ಆತನೇ ಅತೀ ಹೆಚ್ಚು ಓದಿದ್ದು. ನಾಗಿಗೂ ಕಿರಿಯ ಮಗನನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ ಮತ್ತು ಹೆಮ್ಮೆ. ಈ ವರ್ಷ ಒಂದು ಕಳೆದರೆ ಸಾಕು ಮಗನ ಓದು ಮುಗಿದು ಬಿಡುತ್ತದೆ. ತಾನು ಇಲ್ಲಿಯವರೆಗೆ ಪಟ್ಟ ಕಷ್ಟಕ್ಕೂ ಒಂದು ಸಾರ್ಥಕತೆ ಸಿಗುತ್ತದೆ ಎಂದು ಕೊಂಡಿದ್ದವಳು ಮಗನ ಈ ಪರಿಸ್ಥಿತಿ ನೋಡಿ ಕಳವಳಕ್ಕಿಡಾಗಿದ್ದಳು.
ನಾಳೆ ಆಸ್ಪತ್ರೆಗೆ ಹೋಗಲು ಹೇಗೆ ರೊಕ್ಕ ಹೊಂದಿಸುವುದು ಎನ್ನುವ ಚಿಂತೆ ಕಾಡತೊಡಗಿತ್ತು. ತಾನು ಮುಸುರೆ ತಿಕ್ಕುವ ಎಲ್ಲರ ಮನೆಗೂ ತನ್ನ ಮಗನಿಗೆ ಹುಷಾರು ಇಲ್ಲದಿರುವ ವಿಷಯ ತಿಳಿದಿತ್ತಾದರೂ, ಎಲ್ಲರಲ್ಲೂ ರೊಕ್ಕ ಕೇಳಲು ಅವಳಿಗೆ ಮುಜುಗರ. ಎಲ್ಲರೂ ಬಂದೇ ರೀತಿ ಇಲ್ಲ ಎನ್ನುವ ಸತ್ಯ ಅವಳಿಗೂ ತಿಳಿದಿತ್ತು. ಹಾಗಂತ ಈಗೀನ ಪರಿಸ್ಥಿತಿಯಲ್ಲಿ ಕೇಳದೇ ಇರಲು ಸಾದ್ಯವೂ ಇಲ್ಲ. ಏನಾದರಾಗಲೀ ನೋಡೋಣವೆಂದು ವಿಚಾರಮಾಡಿಕೊಂಡು ಮಗನಿಗೆ ಸ್ವಲ್ಪ ಬಿಸಿ ಗಂಜಿ, ಒಂದು ಮಿಡಿ ಉಪ್ಪಿನ ಕಾಯಿಕೊಟ್ಟು ಊಟ ಮಾಡಿಸಿ ಪಾತ್ರೆ ತೊಳೆದು ಮನೆಯಿಂದ ಹೊರ ಬಂದಳು. ಮನೆಯಿಂದ ಹೊರ ಬಂದವಳೇ, ಪಶ್ಚಿಮದ ದಿಗಂತದತ್ತ ಕಣ್ಣು ಹಾಯಿಸಿ ಮಳೆ ಬರುವ ಲಕ್ಷಣವಿದೆಯೇ ಎಂದು ನೋಡಿದಳು. ಆಗಲೇ ಹುಬ್ಬಿ (ಹುಬ್ಬ) ಮಳೆ ಪ್ರಾರಂಭವಾಗಿ ನಾಲ್ಕೈದು ದಿನಗಳಾಗಿದ್ದವು. ಒಮ್ಮೆ ಜೋರಾಗಿ ಬಂದು ಒಂದರ್ದ ಗಂಟೆ ಹೊಯ್ದು ಹೋದರೆ ಇನ್ನೊಂದು ಗಂಟೆ ಅದರ ಪತ್ತೆಯೇ ಇರುವುದಿಲ್ಲ. ಒಮ್ಮೊಮ್ಮೆಯಂತು ಹನಿ ಹನಿಯಾಗಿ ಚಿಟಿ ಚಿಟಿ ಅಂತಾ ಬಿಳುತ್ತಲೇ ಇರುತ್ತದೆ. ಮೋಡ ಅಷ್ಟೊಂದು ಇಲ್ಲದ್ದನ್ನು ನೋಡಿ, ಮಳೆ ಬರಲಾರದು ಎಂದು ದಣಪೆಯವರೆಗೆ ಬಂದವಳು, ಊರಿಗೆ ಹೋಗಿ ರೊಕ್ಕ ತೆಗೆದುಕೊಂಡು ಬರುವವರೆಗೆ ಎಲ್ಲಾದರೂ ಮಳೆ ಬಂದರೆ ಮನೆಗೆ ಬರುವುದು ತಡವಾಗಬಹುದು ಎನಿಸಿ, ಮನೆಗೆ ಬಂದು ಕೊಡೆ ತೆಗೆದುಕೊಂಡು ಮತ್ತೆ ಹೊರಟಳು.
ಅವಳು ದಣಪೆ ದಾಟಿ ಹತ್ತು ಹೆಜ್ಜೆ ಆಜೆ ಬಂದಿರಬಹುದು. ಅವಳು ಮನೆಯಿಂದ ಹೊರ ಹೋಗುತ್ತಿದ್ದದನ್ನು ನೋಡಿದ ಸೊಸೆ "ಅತ್ತೆ, ಹನ್ಮುಗ್ ಜ್ವರ ಕಡ್ಮಿ ಆಯ್ತಾ?" ಎಂದಳು.
"ಇಲ್ವೇ, ಇನ್ನೂ ಬಿಟ್ಟಿಲ್ಲಾ, ಇಲ್ಲೇ ಒಡಿದಿರ್ ಮನಿಗ ಹೋಗ್ ಬತ್ತಿ, ಬರುಕ್ ಲೇಟಾದ್ರ ಮನಿಗೆ ಒಂದ ಸಲಾ ಬಂದ ಹನ್ಮು ಏನ್ಮಾಡ್ತಿಯಾ ಅಂದೆ ನೋಡ್ಕಂಡ ಹೋಗ್ ಆಗಾ. ಆಂವ್ಗೆ ಏನರ ಬೇಕಂದ್ರೆ ಕುಟ್ಟೆ ಹೋಗ್ ಆಯ್ತಾ." ಎಂದು ಸೊಸೆಗೆ ಹೇಳಿ ಅವಳ ಉತ್ತರಕ್ಕೂ ಕಾಯದೇ, ಊರ ನಾಯ್ಕರ ಕೇರಿಯತ್ತ (ನಾಯ್ಕರ ಕೊಪ್ಪದತ್ತ) ಹೊರಟಳು. ೩೫ ವರ್ಷದಿಂದ ಅವಳ ಮನೆಯಿಂದ ಆ ಕೇರಿಗೆ, ಆ ಕೇರಿಯಿಂದ ಅವಳ ಮನೆಗೆ ಅದೆಷ್ಟು ಸಲ ಓಡಾಡಿದ್ದಳೋ, ಆದರೆ ಇಂದಿನ ನಡಿಗೆ ಮೊದಲಿನಂತಿರಲಿಲ್ಲ. ಇವತ್ತಿನ ನಡಿಗೆಯಲ್ಲಿ ದುಗುಡವಿದೆ, ದುಃಖವಿದೆ, ಭಾವುಕತೆಯಿದೆ, ಸ್ವಹಿತದ ಸ್ವಾರ್ಥವಿದೆ. ಯಾವತ್ತು ಕೇಳದ ರೊಕ್ಕ ಇವತ್ತು ಕೇಳುತ್ತಿದ್ದಿನಲ್ಲ ಎನ್ನುವ ಭಾವನೆಯಿದೆ. ಮುಂದೆ ಹನ್ಮುನ ಪರಿಸ್ಥಿತಿ ಏನಾಗುವುದೋ ಎನ್ನುವ ಚಿಂತೆ ಮನಸ್ಸನ್ನು ಪೂರ್ತಿಯಾಗಿ ಆವರಿಸಿಕೊಂಡಿದೆ. ನಡಿಗೆಯಲ್ಲಿ ಆತುರವಿದೆ, ಕಾತರವಿದೆ. ಒಟ್ಟಿನಲ್ಲಿ ಅವಳು ನಡೆಯುತ್ತಿದ್ದಾಳೆಯೋ ಅಥವಾ ಯಾರೋ ಅವಳನ್ನು ನಡೆಸಿಕೊಂಡು ಹೋಗುತ್ತಿದ್ದಾರೋ ಎನ್ನುವ ರೀತಿಯಲ್ಲಿದೆ ಅವಳ ನಡಿಗೆ. ಹಾಗೂ ಹೀಗೂ ನಡೆಯುತ್ತಾ ಹೋಗಿ ಗೋವಿಂದ ನಾಯ್ಕರ ಮನೆಯ ದಣಪೆಯನ್ನು ದಾಟಿ, ಗೋವಿಂದ ನಾಯ್ಕರ ಮನೆಯ ಜಗುಲಿಗೆ ಬಂದು, "ಒಡ್ದಿರೋ," ಎಂದು ಕರೆದಳು.
ನಾಗಿ ಕರೆದ ಧ್ವನಿಯನ್ನು ಕೇಳಿ ಅಡಿಗೆ ಮನೆಯಲ್ಲಿ, ಆಗಲೇ ಗಂಡ ತಂದಿದ್ದ ಮೀನನ್ನು ಕೊಯ್ದು, ಉಪ್ಪು ಹಾಕಿ, ಬದಿಗೆ
ಇಟ್ಟು, ಮೀನು ಪಳದಿಗಾಗಿ ಕಾಯಿ ತುರಿದು ಮಸಾಲೆ ಹಾಕುತ್ತಿದ್ದಳು ಗೌರಿ.
"ಓ, ಯಾರ್? ಬಂದೆ ಒಂದ್ನಿಮಿಷ ನಿಲ್ಲಾಗಾ" ಎಂದು ಹೇಳಿ, ಮಿಕ್ಷರಿಗೆ ಮಸಾಲೆ ಹಾಕಿ ಅರೆಯಲು ಇಟ್ಟು ಹೊರಗೆ ಬಂದಳು. ಹೊರಗೆ ಬಂದವಳು ನಾಗಿಯನ್ನು ನೋಡಿ,
" ಏನೆ ನಾಗಿ, ಇಲ್ಲೋಗದ್ಯೆ ಇಟ್ ದಿವ್ಸೆ? ಮಗಗೆ ಆರಾಂ ಇಲ್ಲಾಗತ ಕಡಲಾ? ಏಗೆ ಆರಾಂ ಆಗಿದಾ ಹೆಂಗೆ?"
"ಇಲ್ರಾ ಅಮ್ಮೋರೆ, ಅದೇನಾಗಿದ್ ಅಂದ ಗುತ್ತೇ ಆತೇ ಇಲ್ಲಾ, ಏಯ್ಡ್, ಏಯ್ಡ್ ಸಲಾ ಆಸ್ಪತ್ರಿಗ ಹೋಗ್ ತೋರ್ಸಕುಂಡ ಬಂದೆ, ಜ್ವರ ಬಿಡ್ತೇನೆ ಇಲ್ಲಾ. ಎಂತಾ ಮಾಡುದ್ ಅಂತಾನೇ ಗುತ್ತ್ ಆತೆ ಇಲ್ರಾ".
"ಅದೆಂಗೆ ಹಾಂಗಾಯ್ತ ಆಂವ್ಗೆ, ಹೋಗ್ಲೆ ಅಂಕೋಲೆಗರೂ ಒಂದ್ಸಲಾ ಕರಕಂಡೆ ಹೋಗೆ ತೋರ್ಸ. ರಕ್ತ ಎಲ್ಲಾ ಚಕಪ ಮಾಡುಕೆ ಹೇಳ್ ಆ ಕಾಳ್ದ್ ಡೊಕ್ಟರ್ಕೋಡೆ."
"ಏಗ್ ಹಂಗೆ ಮಾಡ್ಬೇಕ್ ಅಂತೇ ಮಾಡೇನ್ರಾ, ಎಂತಾ ಮಾಡುಕ್ ಆತಿದ ಅಮ್ಮಾ ನಮ್ಕೋಡೆ, ಅಲ್ಲಿಗೆ ತೋರ್ಸುದಂದ್ರೆ ಸುಮ್ನೆ ಆತಿದಾ? ರೊಕ್ಕ ಬೇಡ್ರಾ, ಅಲ್ಲಿಗ್ ಕರಕುಂಡ ಹೋಗ ತೋರ್ಸುಕ.
ಅಷ್ಟರಲ್ಲೇ ಗೌರಿಗೆ ತಾನು ಒಳಗೆ ಮೀನು ಸಾರಿಗಾಗಿ ಮಸಾಲೆ ಅರಿಯಲು ಇಟ್ಟದ್ದು ನೆನಪಿಗೆ ಬಂತು. "ಅದೆ ನಾಗಿ, ಮಾತಾಡ್ತೇ, ಮಾತಾಡ್ತೇ ಹಾಂಗೇ ಕುತ್ ಬಿಟ್ಟೆ ನೋಡ, ಎಚ್ಚರಾನೇ ಇಲ್ಲಾ ಅರಿಯುಕೆ ಇಟ್ಟ ಬಂದದ್. ಉಂದ್ನಿಮಿಷ ನಿಲ್ಲ ಹಾಂ. ಈ ಹಾಳಾದ್ ಕರಂಟ್ನೋರ್ ಮಳೆ ಬಂದ್ರೆ ಸಾಕ್, ತಿಗ್ದೇ ಬಿಡ್ತರ್, ಹುತ್ತಿಲ್ಲಾ, ಗುತ್ತಿಲ್ಲಾ. ಅದ್ಕೆ ಕರೆಂಟ್ ಹೋದ್ರೆ ಕಷ್ಟ ಅಂದೆ ಅರುಕೆ ಗ್ರೈಂಡರ್ಗೆ ಹಾಕೆ ಬಂದದೆ. ತಡಿ, ಅರ್ದದ ಮಸಾಲೆ ಹಾಕೆ ಪಳದಿ ಕುದಬರ್ಸಿಕೆ ಬಂದೆ" ಎಂದು ಒಳಗೆ ಅಡಿಗೆ ಕೋಣೆಗೆ ಹೋದರು.
(ಮುಂದುವರೆಯುವುದು...)
--ಮಂಜು ಹಿಚ್ಕಡ್