Monday, October 14, 2013

ಹೊಸದಾರಿ. ಹಳೇದಾರಿ..

ಹೊಸದಾರಿ, ಹಳೇದಾರಿ
ಯಾವುದು ಬದುಕಿನ ರಹದಾರಿ?

ಹೊಸದಾರಿ ಸೇರೊದೆದು
ಮನೆ, ಮನ ಸೇರಿದ
ಹೊಸ ಮಧುಮಗನ
ನವ ವಧುವಿನಂತೆ
ಹೊಸ ಬಾಳ್ವೆ
ಹೊಸ ಕಲ್ಪನೆ
ಹೊಸ ಕನಸು
ಹೊಸ ನಡೆ
ಹೊಸ ಅನುಭವ
ಎಲ್ಲವೂ ಹೊಸತು.

ಹಳೆದಾರಿ ಹೆತ್ತು, ಹೊತ್ತು
ಸಾಕಿ ಸಲುಹಿದ
ತಾಯಿಯಂತೆ.
ಸರಿ ತಪ್ಪುಗಳ 
ತೂಗಿಸಿ ನೋಡಿ
ಸರಿದೂಗಿಸುವ ಆತುರ.
ಹೊಸದಾರಿಯಲಿ ಹೆಜ್ಜೆ
ತಪ್ಪದ ಹಾಗೆ ಮಗುವ
ಮುನ್ನೆಡೆಸುವ ಕಾತುರ. 
ಕೊಳಕಿಲ್ಲ, ಹಗೆಯಿಲ್ಲ
ಹಳತಾದರೂ ಸೊಗಸು ಮಾಸಿಲ್ಲ
ಅದು ಅನುಭವಗಳ ಸಾಕಾರ. 

ತನ್ನ ಮೇಲ್ನಡೆವರನು
ಗುರಿಯ ತಲುಪಿಸಿ
ಅವರ ಸೋಲು, ಗೆಲುವಿಗೆ
ಮೂಕ ಪ್ರೇಕ್ಷಕನಂತಿದ್ದು
ತಾನು ಹಳತಾಗಿ
ಮುಂದಿನ ಹೊಸದಾರಿಗೆ
ಮಾದರಿಯಾಗುವುದಲ್ಲವೇ
ಇಂದಿನ ಹೊಸದಾರಿ. 

ಜೀವನದ ಮುನ್ನಡೆಗೆ
ಹೊಸದಾರಿ ಭವಿಷ್ಯತ್ತಾದರೆ
ಹಳೇದಾರಿ ಇತಿಹಾಸದಂತೆ.
ಇತಿಹಾಸದ ಅನುಭವ
ಭವಿಷ್ಯದ ಕನಸುಗಳೆರಡಿರಲು
ಬಾಳ್ವೆಯೆಂಬುದು ಹೋಳಿಗೆಯ
ನಡುವಿನ ಹೂರಣದಂತೆ!

--ಮಂಜು ಹಿಚ್ಕಡ್ 

No comments:

Post a Comment