Wednesday, October 28, 2020

ಪ್ರೇಮ ರಾಗ



ಹುಚ್ಚು ಪ್ರೀತಿಯ ತುಂಬಿ

ಹರಿಸದಿರು ನನ್ನಲ್ಲಿ

ಒಲವಿನ ಕೆರೆಕಟ್ಟೆ

ಒಡೆಯ ಬಹುದಿಲ್ಲಿ

 

ಪ್ರೇಮದ ಅಮೃತಧಾರೆ

ಸುರಿಸುತ್ತಿರಲಿಲ್ಲಿ

ಉತ್ಕರ್ಷತೆಯ ಭಾವ

ಇನ್ನು, ಇನ್ನೆಲ್ಲಿ

 

ಸಿಕ್ಕರಾಯಿತಲ್ಲ ಹೊತ್ತು

ಅದಕೆಲ್ಲಿಯ ಮಹೂರ್ತ

ಮೇಳೈಸುತ್ತಿರಲು ತಾನಾಗಿ

ಹುಡುಕಿ ಸಮಯ ವ್ಯರ್ಥ

 

ಎಡೆಯಿಲ್ಲ ಶಬ್ದಗಳಿಗೆ

ಇದು ಮೌನರಾಗ

ಹೊತ್ತಿಲ್ಲ ಗೊತ್ತಿಲ್ಲ

ಇದು ಪ್ರೇಮರಾಗ

 

ತಲೆಗೇರಿರಲು ಪ್ರೇಮದಾಮಲು

ಯೋಚಿಸಲೆಲ್ಲಿದೆ ಕಾಲ

ಬಂಧನವಲ್ಲ ಇದು

ಪ್ರೀತಿಯ ಮಾಯಾಜಾಲ

 

ಜೀವ ಎರಡಾದರೇನು

ಭಾವ ಒಂದಲ್ಲವೇನು

ಸಾಗುತ್ತಿರಲು ಹೀಗೆ

ಬೇಕು ಇನ್ನೇನು?

 

                                       -- ಮಂಜು ಹಿಚ್ಕಡ್

Wednesday, October 21, 2020

ದಿನದಂಚಿನ ಸೂರ್ಯಂಗೂ !





ದಿನದಂಚಿನ ಸೂರ್ಯಂಗೂ                                 

ಕೆಲಸವಿಹುದಂತೆ ನಾಳೆ

ಮತ್ತೆ ಇಲ್ಲಿ

ಇಣುಕುತ್ತಾ , ಹುಡುಕುತ್ತಾ

ಬರುವ ನಾಳೆ

ಮೂಡಣದ ಅಂಚಿನಲ್ಲಿ.


ಬರುವಾಗ ಕೆಂಬಣ್ಣ                                             

ನಡೆವಾಗ ಕೆಂಬಣ್ಣ

ನಡುವೆ ಸುಡುವ ಸುಣ್ಣ

ಆಗೊಮ್ಮೆ, ಈಗೊಮ್ಮೆ

ಕರಿ ಇದ್ದಿಲ ಬಣ್ಣ

ನಡುವೆ ಚಂದ್ರನಂತಣ್ಣ.

 

ಸೊಕ್ಕಿಲ್ಲ ಸೊಗಡಿಲ್ಲ

ಬಿಗುಡು ದುಮ್ಮಾನಗಳಿಲ್ಲ

ರಜೆಯ ಪರಿಯಿಲ್ಲ ಅಂವಗೆ

ತನ್ನ ತಾ ಸುಟ್ಟು

ಜಗವ ಬೆಳಗುವುದೊಂದೇ                                                 

ಬಯಕೆ ದಿನವೂ ಅಂವಗೆ.


ಅವನಿರಲು ಹಗಲು

ಅವನಿಂದಲೇ ರಾತ್ರಿ

ನಿಂತಿಲ್ಲ ಒಂದು ದಿನವೂ

ಸುತ್ತುತ್ತಲೇ ಇರುವ

ಉರಿಯುತ್ತಲೇ ಇರುವ

ಎಂದಿಲ್ಲ ಎಂದು ದಣಿವು .

 

ಅವನಿದ್ದರೆ ತಾನೇ

ಈ ಜೀವ

ಜೀವನವು ಎಲ್ಲ

ನಾನು ತಾನೆನ್ನುವ ಹಮ್ಮು

ಈ ಮನುಕುಲಕೇಕೊ

ಅವನೇ ಬಲ್ಲ.

 

-- ಮಂಜು ಹಿಚ್ಕಡ್

Monday, July 27, 2020

ಹೊಸತೇಕೆ!




ಕನ್ನಡಿ ಹೊಸತಾದರೇನು
ತೋರುವ ಬಿಂಬ ಹೊಸತೇ !
ರೂಪ ಹೊಸತಾದರೇನು
ನೋಡುವ ನೋಟ ಹೊಸತೇ!

ಬದುಕೇ ಹಳತಾಗಿರುವಾಗ
ಬಯಕೆ ಹೊಸತೇಕೆ ಇನ್ನಾ!
ಇಂದು ಹೊಸತಾದರೇನು
ನಾಳೆ ಹಳತಲ್ಲವೆ ಚಿನ್ನ!

         -- ಮಂಜು ಹಿಚ್ಕಡ್

Sunday, February 23, 2020

ನಿನ್ನೊಲವ ಹರಕೆ

ನೀನು ನನ್ನೊಳಗಿರಲು
ನನ್ನಲೊವ ಪರಿಯೇಕೇ
ನೀ ತಿಳಿಸದಿರಲು ತಿಳಿಯುವುದು
ನಿನ್ನೊಲವ ಬಯಕೆ

ಆತುರದೀ ಆರದಿರು
ಕಾತುರದೀ ಕಾಯದಿರು
ತೀರಿಸುವೆನು ಮೌನದಿ
ನಿನ್ನೊಲವ ಹರಕೆ!

                                                                                                            --ಮಂಜು ಹಿಚ್ಕಡ್

Friday, January 24, 2020

ಸಂ(ಸಾರ)


ಸಂಸಾರ ಎನ್ನುವುದು
ಜೋಡಿ ಎತ್ತಿನ  ಬಂಡಿ

ನಿಜ ಇರಬಹುದೇನೋ ,
ನೀನೊಂದು ಗಾಲಿ
ನಾನೊಂದು ಗಾಲಿ

ಇರುವೆವು
ಹತ್ತಿರ ಬಲು ಹತ್ತಿರ

ಸಾಗುವೆವು
ದೂರ ಬಹು ದೂರ
ಅರಿಯದೇ 
ಒಬ್ಬರ  ಇನ್ನೊಬ್ಬರ!

     -- ಮಂಜು ಹಿಚ್ಕಡ್