Sunday, June 28, 2015

ಬದುಕಿನ ಪಯಣ

ಬಸ್ಸು ಈಗ ಬಹುಶಃ ಚಿತ್ರದುರ್ಗದ ಹತ್ತಿರ, ಹತ್ತಿರ ಬಂದಿರಬಹುದೇನೋ ಎಂದುಕೊಳ್ಳುತ್ತಾ ತನ್ನ ಪಕ್ಕದ ಕಿಟಕಿಯನ್ನು ಸರಿಸಿ ಹೊರಗೆ ನೋಡಿದ. ಹುಣ್ಣಿಮೆಯ ತಿಂಗಳ ಬೆಳಕಲ್ಲಿ ಎತ್ತ ನೋಡಿದರೂ ಬಯಲು ಬಯಲಾಗಿ ಕಾಣುವ ಬಯಲು ಸೀಮೆಯ ಬಯಲು ಪ್ರದೇಶವೇ ಕಾಣುತ್ತಿತ್ತೇ ಹೊರತು, ಬಸ್ಸು ಎಲ್ಲಿಯವರೆಗೆ ಬಂದು ತಲುಪಿದೆ ಎನ್ನುವುದು ತಿಳಿಯಲಿಲ್ಲ. ಹೊರಗಿನ ತಂಗಾಳಿ ಬಸ್ಸಿನ ವೇಗಕ್ಕೆ ರಭಸವಾಗಿ ಬಳ ನುಗ್ಗುತ್ತಿದುದರಿಂದ, ಕಿಟಕಿಯನ್ನು ಹಾಗೆ ತೆಗೆದಿಡಲು ಮನಸ್ಸು ಬಾರದೇ, ಮತ್ತೆ ಮುಚ್ಚಿದ. ಚಳಿಗಾಲವಾಗಿದ್ದರಿಂದಲೋ ಏನೋ, ಹೊಟ್ಟೆ ತುಂಬಾ ನೀರು ತುಂಬಿ, ತೊಡೆಗಳ ಮದ್ಯದಲ್ಲಿ ಕೋಲಾಹಲವನ್ನೆಬ್ಬಿಸುತ್ತಿತ್ತು. ಬಸ್ಸು ನಿಲ್ಲಿಸಿದರೆ ಸಾಕು ಒಮ್ಮೆ ಹೊರಹೋಗಿ ಟ್ಯಾಂಕ್ ಖಾಲಿ ಮಾಡಿ ಬಂದು ಬಿಡಬೇಕು ಎಂದುಕೊಂಡು ಮತ್ತೆ ಕುಳಿತ. ಸಮಯ ಎಷ್ಟಾಗಿರಬಹುದು ಎಂದು ನೋಡೋಣವೆಂದುಕೊಂಡು ಕಿಟಕಿಯ ಗ್ಲಾಸಿನಿಂದ ಒಳತುರುಕುವ ಚಂದ್ರನ ಬೆಳಕಿಗೆ ತನ್ನ ಕೈಗಡಿಯಾರವನ್ನು ಒಡ್ಡಿದ. ಗಂಟೆ ಎರಡು ಕಳೆದು ಮೂರರತ್ತ ವಾಲಿದಂತೆ ಕಂಡಿತೆ ಹೊರತು ಸರಿಯಾಗಿ ಸಮಯವನ್ನು ಗುರುತಿಸಲಾಗಲಿಲ್ಲ. ಸ್ವಲ್ಪ ಹೊತ್ತಾದರೂ ಮಲಗೋಣವೆಂದು ಕುಳಿತ ಕುರ್ಚಿಗೆ ಸ್ವಲ್ಪ ಒರಗಿದ. ಬಸ್ಸಿನಲ್ಲಿ ಮಲಗಿ ಅಭ್ಯಾಸವಿಲ್ಲದ್ದರಿಂದಲೇ ಏನೋ ನಿದ್ದೆ ಹತ್ತಿರ ಸುಳಿಯಲಿಲ್ಲ. ನಿದ್ದೆ ಹತ್ತಿರ ಬರುತ್ತೇನೆ ಎಂದರೂ ಹೊಟ್ಟೆಯ ತಳಭಾಗದಲ್ಲಾಗುತ್ತಿರುವ ಕೋಲಾಹಲ ನಿದ್ದೆಯನ್ನು ಹತ್ತಿರ ಸುಳಿಯಲು ಬಿಡಲಿಲ್ಲ.

ಹೊಟ್ಟೆ ಖಾಲಿ ಮಾಡದೇ ನಿದ್ದೆ ಬರಲಾರದು ಎಂದುಕೊಂಡವ ಡ್ರೈವರ್ನಿಗೆ ಸ್ವಲ್ಪ ಹೊತ್ತು ಬಸ್ಸು ನಿಲ್ಲಿಸಲು ಹೇಳಿ, ಹೊಟ್ಟೆ ಖಾಲಿ ಮಾಡಿ ಬಂದು ಬಿಡಬೇಕೆಂದು ನಿರ್ಧರಿಸಿ ಸೀಟಿನಿಂದ ಎದ್ದು ಡ್ರೈವರ್ನ ಬಳಿ ಹೋಗಿ ಸ್ವಲ್ಪ ಹೊತ್ತು ಬಸ್ಸು ನಿಲ್ಲಿಸುವಂತೆ ಬೇಡಿಕೊಂಡ. ಡ್ರೈವರ್ ಇವನ ಮುಖವನ್ನು ಕೂಡ ನೋಡದೇ "ಒಂದು ಹತ್ತು ನಿಮಿಷ ತಡಕೊಳ್ಳಿರಿ. ಟೋಲ್ ದಾಟಿದ ಮೇಲೆ ನಿಲ್ಲಿಸುತ್ತೇನೆ" ಎಂದ.

 ಹತ್ತು ನಿಮಿಷ ತಾನೆ ಹೇಗೂ ಇಷ್ಟು ಹೊತ್ತು ತಡೆದುಕೊಂಡಿದ್ದೇನೆ. ಇನ್ನೊಂದು ಹತ್ತು ನಿಮಿಷ ತಡೆದು ಕೊಂಡರಾಯಿತು ಎಂದುಕೊಂಡು ಮತ್ತೆ ಸೀಟಿನಲ್ಲಿ ಬಂದು ಕುಳಿತ. ಹತ್ತು ನಿಮಿಷ, ಟೋಲ್ ದಾಟಿದ ಮೇಲೆ ನಿಲ್ಲಿಸುತ್ತೇನೆ ಎಂದವನು ಟೋಲ್ ದಾಟಿ ಅರ್ಧಗಂಟೆ ಕಳೆದರೂ ಡ್ರೈವರ್ ನಿಲ್ಲಿಸಲಿಲ್ಲ. ಅವನ ಅವಸರ ಅವನಿಗೆ ಬಿಟ್ಟರೆ, ಬೇರೆ ಯಾರಿಗೆ ಗೊತ್ತಾಗಬೇಕು. ಎಲ್ಲರ ಬಳಿಯೂ ಹೇಲಿ ಕೊಳ್ಳಲು ಅದೇನು ಸಂಭ್ರಮದ ವಿಷಯವೇ. ಕುಳಿತು ಕುಳಿತು ಅವಸರ ಹೆಚ್ಚಾಗುತಿತ್ತೇ ಹೊರತು ಬಸ್ಸು ಮಾತ್ರ ನಿಲ್ಲಲಿಲ್ಲ. ಇನ್ನೂ ಕುಳಿತರೆ ತಡೆದುಕೊಳ್ಳುವುದು ಕಷ್ಟ ಎಂದನಿಸಿ, ಡ್ರೈವರ್ನನನ್ನ ಧಬಾಯಿಸಿಯಾದರೂ ಬಸ್ಸು ನಿಲ್ಲಿಸಬೇಕೆಂದು ಮತ್ತೆ ಹೊರಡುವ ಹೊತ್ತಿಗೆ "ಫಟ್" ಎನ್ನುವ ಶಬ್ಧ ಬಸ್ಸಿನ ಹಿಂದುಗಡೆಯ ಚಕ್ರದಿಂದ ಬಂತು. ಈಗ ಬಸ್ಸು ನಿಲ್ಲಿಸದೇ ಬೇರೆ ಗತಿಯಿಲ್ಲದ ಕಾರಣ ಡ್ರೈವರ್ನಿಗೆ ಬಸ್ಸು ನಿಲ್ಲಿಸಲೇ ಬೇಕಿತ್ತು. ಬಸ್ಸು ನಿಂತಿದ್ದೇ ತಡ ಗಿರೀಶ ಎಲ್ಲರಿಗಿಂತ ಮೊದಲು ಬಸ್ಸು ಇಳಿದ. ಬಸ್ಸಿನ ಹಿಂದೆ ಏನಾಗಿದೆ ಎಂದು ತಿಳಿಯುವ ಅವಸರಕ್ಕಿಂತ ಟ್ಯಾಂಕ್ ಖಾಲಿ ಮಾಡಬೇಕಾದ ಅವಸರ ಹೆಚ್ಚಾಗಿದ್ದರಿಂದ ಬಸ್ಸಿನ ಬಗ್ಗೆ ಯೋಚಿದದೇ, ಸ್ವಲ್ಪ ದೂರಕ್ಕೆ ಹೋಗಿ ಟ್ಯಾಂಕ್ ಖಾಲಿ ಮಾಡಿದ. ಹೊಟ್ಟೆಯ ಊರಿ ಸ್ವಲ್ಪ ಕಡಿಮೆಯಾದಂತೆ ಅನಿಸಿತು. ಟ್ಯಾಂಕ್ ಖಾಲಿ ಮಾಡಿದವನೇ ಬಸ್ಸಿನ ಹಿಂದಿನ ಚಕ್ರದ ಬಳಿ ಬಂದು ನಿಂತ. ಹಿಂದಿನ ಚಕ್ರ ಪಂಕ್ಚರ್ ಆಗಿದ್ದರಿಂದ ಚಕ್ರದ ಹೊಟ್ಟೆ ಬಿರಿದುಕೊಂಡು ಬಿಟ್ಟಿತು.

ಬಸ್ಸಿನ ಚಕ್ರವನ್ನು ಬದಲಿಸಿ ಇನ್ನೊಂದು ಚಕ್ರವನ್ನು ಹೊಂದಿಸುವವರೆಗೆ ಇನ್ನರ್ಧ ಗಂತೆ ಕಳೆದಿತ್ತು. ಚಂದ್ರನಾಗಲೇ ಪೂರ್ವದಿಕ್ಕನ್ನು ಬದಲಾಯಿಸಿ ಪಶ್ಚಿಮದ ದಿಕ್ಕಿನ ಮಡಿಲನ್ನು ಸೇರಿದ್ದ. ರಸ್ತೆ ಬದಿಯ ದೀಪದ ಸಹಾಯದಿಂದ ಸಮಯ ನೋಡಿದ, ಗಂಟೆ ಮೂರು ದಾಟಿತ್ತು. ಬಸ್ಸಿನ ನಿರ್ವಾಹಕ ಬಂದು ಹತ್ತಿ, ಹತ್ತಿ ಎಲ್ಲರನ್ನೂ ಅವಸರ ಪಡಿಸಿದ್ದರಿಂದ, ಎಲ್ಲರಂತೆ ಗಿರೀಶನು ಬಸ್ಸು ಹತ್ತಿ, ಅಂದಿನ ಮಟ್ಟಿಗೆ ಅವನದಾದ ಆಸನದಲ್ಲಿ ಆಸೀನನಾದ. ಬಸ್ಸು ಬೆಂಗಳೂರಿನತ್ತ ಚಲಿಸತೊಡಗಿತು. ಹೊಟ್ಟೆಯ ಊರಿ ಸ್ವಲ್ಪ ಕಡಿಮೆಯಾದ್ದರಿಂದ ಸ್ವಲ್ಪ ಹಿತವೆನಿಸತೊಡಗಿತು. ಹಾಗೆ ಸೀಟಿಗೆ ಒರಗಿದ ನಿದ್ದೆ ಮಾಡೋಣವೆಂದು. ನಿದ್ದೆ ಹತ್ತಿರ ಸುಳಿಯಲು ಪ್ರಯತ್ನಿಸಿ ಸೋತು ದೂರ ಸರಿಯಿತು. ಮನಸ್ಸು ಒಮ್ಮೆ ಮುಂದಕ್ಕೂ, ಒಮ್ಮೆ ಹಿಂದಕ್ಕೂ ಒಲಾಡತೊಡಗಿತು. ಮನಸ್ಸು ನೆಮ್ಮದಿಯಾಗಿದ್ದರೆ ತಾನೆ ನಿದ್ದೆ ಸುಳಿಯಲು ಸಾದ್ಯ.

-----------------   ೨  ---------------

"ಒಂದುವರೆ ವರ್ಷ ಆಯ್ತು ನೀನು ಬೆಂಗಳೂರಿಗೆ ಹೋಗಿ, ಇದುವರೆಗೂ ಒಂದು ನೌಕರಿ ಹಿಡಿಯಲು ಸಾಧ್ಯವಾಗಲಿಲ್ಲ ನಿನಗೆ. ನಿನ್ನ ವಯಸ್ಸಿನವರೆಲ್ಲ ಆಗಲೇ ನೌಕರಿ ಹಿಡಿದು ಮದುವೆಗೆ ಸಿದ್ದವಾಗಿದ್ದಾರೆ, ಆದರೆ ನೀನಿನ್ನೂ ನೌಕರಿ ಹುಡುಕುತ್ತಲೇ ಇದ್ದೀಯಾ. ನೌಕರಿ ನೌಕರಿ ಎಂದು ಬೆಂಗಳೂರು ಸುತ್ತುವ ಬದಲು ಊರಲ್ಲೇ ಬಂದು ಇದ್ದರೆ ಆಗಲ್ವೇ. ನೋಡು ಇದೇ ಕೊನೆ, ಈಗೇನೋ ಇಂಟರ್ವ್ವೂವ್ ಇದೆ ಎಂದು ಹೋಗುತ್ತಿದ್ದಿಯಾ ಮತ್ತೆ ನೌಕರಿ ಇಲ್ಲದೇ ವಾಪಸ್ ಬಂದು, ಮತ್ತೆ ಬೆಂಗಳೂರಿಗೆ ಹೋಗುತ್ತೇನೆ ಎಂದರೆ ನಾನು ಬಿಡುವುದಿಲ್ಲ. ನೌಕರಿ ಜೊತೆ ಬಂದರೆ ಒಳಿತು, ಇಲ್ಲ ಎಂದರೆ ಬೆಂಗಳೂರು ಕನಸು ಎಂದು ತಿಳಿದುಕೋ" ಎಂದು ಅಪ್ಪ ಬರುವಾಗ ಹೇಳಿದ್ದು ನೆನಪಾಯಿತು.

ಅಪ್ಪ ಹೇಳಿದ್ದರಲ್ಲಿ ತಪ್ಪೇನಿಗೆ. ವಯಸ್ಸಾದ ಕಾಲಕ್ಕೆ ತಮಗೆ ಮಕ್ಕಳು ದಿಕ್ಕಾಗಿರಲಿ ಎಂದು ಅವರು ಬಯಸುವುದು ತಪ್ಪೇ. ಆದರೆ ನಾನೇನು ಮಾಡಲಿ. ನಾನು ಅದೆಷ್ಟೇ ಪ್ರಯತ್ನಿಸಿದರೂ ಕರೆಗಳೇ ಬರುತ್ತಿಲ್ಲ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಕರೆ ಬಂದರೆ ಕೇಳೋದು ನೌಕರಿಯಲ್ಲಿ ಅನುಭವ. ನೌಕರಿ ಇಲ್ಲದೇ ಅನುಭವವಿಲ್ಲ, ಅನುಭವವಿಲ್ಲದೇ ನೌಕರಿ ಇಲ್ಲ. ಇದೊಂದರ ಬೀಜ ವೃಕ್ಷ ನ್ಯಾಯವಿದ್ದಂತೆ.

ಈ ಭಾರಿ ಎಷ್ಟು ಕಷ್ಟವಾದರೂ ಸರಿ ಇಂಟರ್ವೂವ್ ಪಾಸ್ ಮಾಡಲೇ ಬೇಕು. ಇಂದು ಇಲ್ಲ ಅಂದರೆ ಮುಂದೆಂದೂ ಇಲ್ಲ ಎಂದು ಯೋಚಿಸುತ್ತಾ ಕುಳಿತವನಿಗೆ "ಜಾಲಳ್ಳಿ ಕ್ರಾಸ್", "ಜಾಲಳ್ಳಿ ಕ್ರಾಸ್" ಎಂದು ಬಸ್ಸಿನಲ್ಲಿಯ ಹುಡುಗ ಕೂಗುತ್ತಾ ಬಳ ಬಂದ. "ಒಹ್ ಬಸ್ಸು ಆಗಲೇ ಬೆಂಗಳೂರು ತಲುಪಿತು ಎನಿಸಿತು. ಗಡಿಯಾರ ನೋಡಿದ, ಗಂಟೆ ೭ ಕಳೆದಿತ್ತು. ಆಗಲೇ ಸಾಕಷ್ಟು ಸಮಯವಾಗಿದೆ. ಬಸ್ಸು ಇನ್ನೊಂದು ಗಂಟೆಯೊಳಗೆ ನವರಂಗ ತಲುಪಿದರೆ ಒಳ್ಳೆದು, ಇಲ್ಲಾ ಅಂದರೆ ಜಾಮ್ ಆಗಿ ರೂಮು ಸೇರುವುದೇ ಕಷ್ಟ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ. ಒಂದೊಮ್ಮೆ ಮನೆ ಸೇರುವುದು ತಡವಾದರೆ ರೆಡಿಯಾಗಿ ಇಂಟರ್ವೂವ್ಗೆ ಹೋಗಲು ತಡವಾಗುತ್ತದೆ ಎನ್ನುವ ಆತಂಕ ಒಮ್ಮೆ ಮನಸ್ಸನ್ನು ಕಾಡಿ ಮರೆಯಾಯಿತು

ಎಂದಿನಷ್ಟು ಬೆಂಗಳೂರಿನ ಟ್ರಾಪಿಕ್ ಇಂದಿಲ್ಲದ ಕಾರಣದಿಂದಲೋ ಏನೋ ಬಸ್ಸು ನವರಂಗ ತಲುಪಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಲಿಲ್ಲ. ಬಸ್ಸು ನವರಂಗ ತಲುಪಿ, ಅವನು ಅಲ್ಲಿಂದ ತನ್ನ ವಿಜಯನಗರದ ರೂಮು ಸೇರುವ ಹೊತ್ತಿಗೆ ಸಮಯ ೮-೩೦ ದಾಟಿತ್ತು. ಬೇಗ ಬೇಗ ಸ್ನಾನದ ಶಾಸ್ತ್ರ ಮುಗಿಸಿ, ಪ್ಯಾಂಟು ಅಂಗಿ ಧರಿಸಿ ಹೊರ ಬಂದ. ಹೊರ ಬಂದವನೇ ಧರಿಸುವ ಶೂ ನೋಡಿದ, ಶೂ ಸಾಕಷ್ಟು ಕೊಳೆಯಾದಂತೆ ಅನಿಸಿತು. ಶೂ ಕೈಗೆತ್ತಿಕೊಂಡು ಪಾಲಿಷ್ ಮಾಡುವಾಗ ಯಾಕೋ ಶೂ ತುಂಬಾ ಹಳತಾಗಿ ಸವೆದಂತೆ ಕಂಡಿತು. ಬೆಂಗಳೂರಿಗೆ ಬಂದ ಹೊಸತರಲ್ಲಿ, ಇಂಟರ್ವೂವ್ಗೆ ಎಂದು ತೆಗೆದುಕೊಂಡ ಆ ಕರಿಯ ಬಣ್ಣದ ಲೆದರ್ ಶೂ ಗೆ ಅವನು ಇಂಟರ್ವೂವ್ ಕೊಟ್ಟಷ್ಟೇ ಅನುಭವವಾಗಿತ್ತು. ಈಗ ಬೇರೆ ದಾರಿ ಇಲ್ಲ, ಸದ್ಯಕ್ಕೆ ಇದನ್ನೇ ಸ್ವಲ್ಪ ಪಾಲೀಷ್ ಮಾಡಿ ಧರಿಸಿಕೊಂಡು ಹೋಗೋಣ. ನೌಕರಿ ಸಿಕ್ಕ ಮೇಲೆ ಮತ್ತೊಂದು ಶೂ ಕರೀದಿಸಿದರಾಯಿತು ಎಂದುಕೊಂಡು ಅದೇ ಶೂ ಅನ್ನು ಪಾಲೀಷ್ ಮಾಡಿ ಧರಿಸಿದ. ಇಂಟರ್ವೂವ್ಗೆ ಅಂತಲೇ ಆಗಲೇ ಜೋಡಿಸಿಟ್ಟ ಬಯೋಡೇಟಾವನ್ನು, ಕಾಲ್ ಲೆಟರ್ನೊಂದಿಗೆ ತೆಗೆದುಕೊಂಡು ಮೆನೆಯಿಂದ ಹೊರಬಂದ.

ಇದೇ ತನ್ನ ಕೊನೆಯ ಇಂಟರ್ವೂವ್ ಎನ್ನುವ ಕಾರಣದಿಂದಲೋ ಏನೋ ಹಿಂದಿದ್ದ ಹೆದರಿಕೆ, ಆತಂಕ ಇಂದಿರಲಿಲ್ಲ. ಈಗ ಹೆದರಿಕೆಯ ಬದಲು ನೌಕರಿ ಗಿಟ್ಟಿಸಿಕೊಳ್ಳುವ ಛಲವಿತ್ತು. ನೌಕರಿ ಸಿಗದಿದ್ದರೆ ಎನ್ನುವ ಆತಂಕದ ಬದಲಿಗೆ, ಸಿಕ್ಕೆ ಸಿಗುತ್ತದೆ ಎನ್ನುವ ಆತ್ಮ ವಿಶ್ವಾಸವಿತ್ತು. ಒಂದೊಮ್ಮೆ ಸಿಗದಿದ್ದರೂ ಊರಲ್ಲಿಯೇ ಏನಾದರು ಮಾಡುವನೆನ್ನುವ ಭರವಸೆ ಇತ್ತು. ಆ ಒಂದು ಧೈರ್ಯದ ಮೇಲೆಯೇ ದಾಪುಗಾಲು ಇಡುತ್ತಾ ಬಸ್ ನಿಲ್ದಾಣದತ್ತ ಹೊರಟ, ತನ್ನ ಹೊಸ ಬದುಕಿನ ಪಯಣಕ್ಕೆ ಹೊಸ ದಾರಿ ತೋರಲಿರುವ ದಿಕ್ಕಿನಡೆಗೆ ಹೊರಡಬಹುದಾದ ಬಸ್ಸನ್ನು ಬಯಸಿ.

--ಮಂಜು ಹಿಚ್ಕಡ್

Saturday, June 20, 2015

ನಾವು ಮತ್ತು ನಮ್ಮ ಪೆಟ್ಲಂಡಿ (ಪಿಟ್ಲಿ ಆಂಡಿ)

ಚಿತ್ರಕೃಪೆ ಫೇಸಬುಕ್
ನಮ್ಮೂರಲ್ಲಿ ಹೆರಬೈಲ್ ದೇವರ ಹಬ್ಬ ಹಾಗೂ ಚೌತಿ ಹಬ್ಬಗಳೆರಡು ಒಟ್ಟಿಗೆ ಬರುವುದು ಸಾಮಾನ್ಯ. ಚೌತಿ ಎಲ್ಲರಿಗೂ ಸೀಮಿತವಾಗಿದ್ದರೂ, ಹೆರಬೈಲ್ ದೇವರ ಹಬ್ಬ ನಮ್ಮೂರಿಗೆ ಮಾತ್ರ ಸೀಮಿತವಾಗಿತ್ತು. ನಮ್ಮ ಊರಿನಲ್ಲಿ ಮಕ್ಕಳಿಂದ ಮುದುಕರವರೆಗೂ ಚೌತಿಗಿಂತ ಹೆಚ್ಚಾಗಿ ಸಂಭ್ರಮಿಸುತಿದ್ದ ಹಬ್ಬವೆಂದರೆ ಹೆರಬೈಲ್ ದೇವರ ಹಬ್ಬ. ಅದು ಮಳೆಗಾಲದ ಮಧ್ಯಮ ಅವಧಿಯಲ್ಲಿ ನಡೆಯುವ ಹಬ್ಬವಾದ್ದರಿಂದ, ಒಮ್ಮೆ ಮಳೆ ಜೊರಾಗಿಯೂ, ಒಮ್ಮೆ ನಿಧಾನವಾಗಿಯೂ ಬರುವ ಕಾಲ. ಅದೆಷ್ಟೋ ಹೊಸ ಗಿಡಗಳು ಹುಟ್ಟಿ ಮೈದೆಳೆಯುವ ಸಮಯ. ಅದರಲ್ಲೂ ಬಿದಿರು ಗಿಡಗಳು ಮಾತ್ರ ಒಂದೆರಡು ತಿಂಗಳಲ್ಲೇ ನೋಡು ನೋಡುತ್ತಿದ್ದಂತೆ ದೊಡ್ಡದಾಗಿ ಬೆಳೆದು ಬಾಗಿ ಬಿಡುತಿದ್ದವು. ಆ ಬಿದಿರಿನಲ್ಲೂ ಹಲವಾರು ಬಗೆಯ ಬಿದಿರುಗಳಿದ್ದವು. ಅದರಲ್ಲಿ ಕೆಲವು ಬಿದಿರುಗಳಂತೂ ಅಷ್ಟೋಂದು ಹಿಂಡಾಗಿ ಬೆಳೆಯದೇ ಸಾಮಾನ್ಯ ಬಿದಿರಿಗಿಂತ ದೊಡ್ಡದಾಗಿ ಬೆಳೆಯುತ್ತಿದ್ದವು. ಅದಕ್ಕೆ ಅಷ್ಟೋಂದು ಮುಳ್ಳು ಸಹ ಇರುತ್ತಿರಲಿಲ್ಲ. ಅದಕ್ಕೆ ನಮ್ಮ ಕಡೆ ಬಂದಗ (ಬಿದಿರಿನ ಒಂದು ಜಾತಿ) ಎಂದು ಕರೆಯುತ್ತಾರೆ. ಆ ಬಂದಗದಲ್ಲೂ ಗಂಡು, ಹೆಣ್ಣುಗಳೆಂಬ ಜಾತಿಗಳು ಬೇರೆ. ಬಿದಿರಿನ ಕಡ್ಡಿಯ  ಒಳಬಾಗದಲ್ಲಿ ಬಿಡುಸಾಗಿದ್ದು ಚಿಕ್ಕದಾದ ನಳಿಕೆಯಿದ್ದರೆ ಅದನ್ನು ಗಂಡು ಅಂತಲೂ, ಒಳಗೆ ದೊಡ್ಡದಾದ ನಳಿಕೆಯಿದ್ದರೆ  ಅದನ್ನು ಹೆಣ್ಣು ಅಂತಲೂ ಕರೆಯುತ್ತಾರೆ.

ನಾವು ಆ ಹೆಣ್ಣು ಬಂದಗದ ತುದಿಯನ್ನು ಕಡೆದು, ಅದರಿಂದ ಪೆಟ್ಲಂಡಿಯನ್ನು ಮಾಡುತಿದ್ದೆವು. ಅದೇ ನಮ್ಮ ಆಗಿನ ಕಾಲದ ಪಿಸ್ತೂಲು, ಬಂದೂಕು ಎಲ್ಲಾ. ಬಿದಿರಿನ ನಳಿಕೆಯಲ್ಲಿ ಮುಂದೊಂದು, ಹಿಂದೊಂದು ಜುಮ್ಮನಕಾಯಿ(ಒಂದುರೀತಿಯ ಕಾಯಿ)ಯನ್ನೋ, ಕೆಸುವಿನ ಎಲೆಯ ಮುದ್ದೆಯನ್ನೋ ತುರುಕಿ, ಇನ್ನೊಂದು ಹಿಡಿಕೆಯಿಂದ ಹಿಂದಿನ ಕಾಯಿಯನ್ನು ಜೋರಾಗಿ ತಳ್ಳಿದರೆ ಅದು ಮುಂದಿನ ಕಾಯಿಗೆ ಬಡಿದು, ಮುಂದಿನ ಕಾಯಿ ಹೊರಗೆ ಸಿಡಿಯುತ್ತಿತ್ತು ಹಾಗೆ ಸಿಡಿದಾಗ ಟಪ್, ಟಪ್ ಎನ್ನುವ ಶಬ್ಧ ಬೇರೆ ಬರುತ್ತಿತ್ತು. ನಮ್ಮಲ್ಲಿ ಆಗ ತಾನೆ ಕಬ್ಬಿಣದ ತಗಡಿನಲ್ಲಿ ಮಾಡಿದ ಪಿಸ್ತೂಲಗಳು, ಅದಕ್ಕೆ ಕೇಪಗಳು ಸಿಗುತ್ತಿದ್ದರೂ ಆಗ ಅವು ನಮ್ಮ ಕೈಗೆಟಕುವಂತಿರಲಿಲ್ಲ. ನಮಗೇನಿದ್ದರೂ ಈ ಪೆಟ್ಲಂಡಿಗಳೇ ಸರ್ವಸ್ವ. ಆ ಪೆಟ್ಲಂಡಿ ಮಾಡಿಕೊಂಡು ಅಲ್ಲಿ, ಇಲ್ಲಿ ಜುಮ್ಮನಕಾಯಿ ಹುಡುಕುತ್ತಾ, ಊರ ಹೊರಗಿನ ಬಯಲು, ಬೇಣ ಸುತ್ತುತ್ತಾ, ನಮ್ಮಂತಹ ಉಳಿದ ಮಕ್ಕಳೊಂದಿಗೆ ಆಟವಾಡುತ್ತಾ ಕಾಲಕಳೆಯುತಿದ್ದೆವು. ಆಗ ನಮಗೆ ಯಾವ ಯಾವ  ಜಾಗದಲ್ಲಿ ಜುಮ್ಮನಕಾಯಿ ಮರ ಇದೆ, ಯಾವ ಮರದ ಕಾಯಿ ಕೈಗೆಟಕುತ್ತದೆ,  ಯಾವ ಮರದ ಕಾಯಿಯನ್ನು ಹೇಗೆ ಕೀಳಬಹುದು ಎನ್ನುವುದು ಕರಗತವಾಗಿ ಬಿಟ್ಟಿದ್ದವು. ನಮ್ಮೂರ ಕುರುಚಲು ಗುಡ್ಡಗಳಾದ ಮುಳ್ಳಾಕೇರಿ, ಹಿರೇಗದ್ದೆಯ ಪ್ರದೇಶಗಳು ನಮಗಾಗ ಬೆಟ್ಟವೆನಿಸುತ್ತಲೂ ಇರಲಿಲ್ಲ.(ಈಗ ಬೆಂಗಳೂರಿನ ಸುತ್ತ ಮುತ್ತಲಿನ ಕುರುಚಲು ಗುಡ್ಡ ಪ್ರದೇಶಗಳನ್ನು ಇಲ್ಲಿಯ ಜನರು ಬೆಟ್ಟ ಅನ್ನುವುದನ್ನು ನೋಡಿದರೆ ನಮ್ಮೂರಿನ ಕುರುಚಲು ಗುಡ್ಡಗಳನ್ನೂ ಕೂಡ ಬೆಟ್ಟವೆನ್ನಬಹುದೇನೋ).

ನಮ್ಮಲ್ಲಿ ಆಗ ಯಾರ ಹತ್ರ ಪೆಟ್ಲಂಡಿ ಇರುತ್ತಿರಲಿಲ್ವೋ ಆತನನ್ನು ನಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅವರನ್ನು ಪೆಟ್ಲಂಡಿ ತೋರಿಸಿ ಹೆದರಿಸಿ ಓಡಿಸಿ ಬಿಡುತ್ತಿದ್ದೆವು. ಪೆಟ್ಲೆಂಡಿ ಇಲ್ಲದವರು ಆಗ ಪೆಟ್ಲಂಡಿ ಮಾಡಿಸಿಕೊಳ್ಳಲು ಹಾತೊರೆಯುತ್ತಿದ್ದರು. ನಾವು ಚಿಕ್ಕವರಿದ್ದಾಗ, ಆಗಾಗ ನೆನಪಾಗುವ ಪೆಟ್ಲಂಡಿ ಘಟನೆಯೆಂದರೆ, ನಾವು ಪೆಟ್ಲಂಡಿ ಮಾಡಲು ಹೋದದ್ದು ೧೯೮೭-೧೯೮೮ನೇ ಇಸ್ವಿ, ನಾವು ಎರಡನೇ ತರಗತಿಯಲ್ಲಿ ಓದುತ್ತಾ ಇದ್ದೆವು. ಆಗ ತಾನೇ ಶ್ರಾವಣ ಮಾಸ ಪ್ರಾರಂಭವಾಗಿತ್ತು. ಇನ್ನೂ ಕೆಲವೇ ದಿನಗಳಲ್ಲಿ ಹೆರಬೈಲ್ ದೇವರ ಹಬ್ಬ ಎನ್ನುವುದು ಕೂಡ ನಿಶ್ಚಯವಾಗಿ ಬಿಟ್ಟಿತು. ನಮ್ಮ ಸ್ನೇಹಿತರಲ್ಲಿ ಒಂದಿಬ್ಬರು ಪೆಟ್ಲಂಡಿ ಮಾಡಿಸಿಕೊಂಡಿದು ನಮಗೆ ಕೆಲವು ಬಲ್ಲ         ಮೂಲಗಳಿಂದ ತಿಳಿದು ಬಿಟ್ಟಿತು. ನಮಗೆ ಅವರು ಪೆಟ್ಲೆಂಡಿ ತೆಗೆದುಕೊಂಡು ಹಬ್ಬಕ್ಕೆ ಹೋದರೆ, ನಮ್ಮ ಹತ್ತಿರ ಪೆಟ್ಲೆಂಡಿ ಇಲ್ಲಾ ಅಂತಾದರೆ ನಮ್ಮನ್ನು ಸೇರಿಸಿಕೊಳ್ಳಲಾರರು ಎನ್ನುವುದು ತಿಳಿದಿತ್ತು. ಆಗ ಅವರ ಉದ್ದೇಶವು ಅದೇ ಆಗಿತ್ತು ಕೂಡ. ವಿಷಯ ತಿಳಿದ ನಾನು ಮತ್ತು ನನ್ನ ಸ್ನೇಹಿತ ಇರ್ವರೂ ಸೇರಿ ನಾವು ಕೂಡ ಪೆಟ್ಲಂಡಿ ಮಾಡಿಸಿಕೊಳ್ಳವುದಾಗಿ ತಿರ್ಮಾನಿಸಿದೆವು. ಆದರೆ ಹೇಗೆ, ನಮ್ಮ ಮನೆಯ ಜಾಗದಲ್ಲಾಗಲಿ ಅಥವಾ ಅವರ ಮನೆಯ ಜಾಗದಲ್ಲಾಗಲಿ ಬಿದಿರಿನ ಗಿಡಗಳಿರಲಿಲ್ಲ. ಹಾಗಂತ ಪೆಟ್ಲಂಡಿಯ ಆಸೆಯನ್ನು ಅಲ್ಲಿಗೇ ಬಿಟ್ಟು ಬಿಡಲಾಗತ್ತದೆಯೇ. ಆಗ ನೆನಪಾಗಿದ್ದು ನಮ್ಮೂರ ಹಿರೇಗದ್ದೆಯಲ್ಲಿ ಒಬ್ಬರ ಜಾಗದಲ್ಲಿ ಒಂದೆರಡು ಬಿದಿರು ಹಿಂಡುಗಳಿರುವುದು. ಹೇಗಾದರೂ ಮಾಡಿ ಹೋಗಿ ಒಂದೆರಡು ಚಿಕ್ಕ ಬಿದಿರಿನ ತುದಿಯನ್ನು ತಂದು ಪೆಟ್ಲಂಡಿ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಆ ದಿನ ಶನಿವಾರ, ಅರ್ಧ ದಿನ ಮಾತ್ರ ಶಾಲೆ.  ನಾನು, ನನ್ನ ಗೆಳೆಯ ಇಬ್ಬರು ಸೇರಿ ಹೇಗಾದರು ಮಾಡಿ ಆ ಬಿದಿರಿನ ತುಂಡುಗಳನ್ನು ಕಡಿದು ತರಬೇಕು ಎಂದು ಶಾಲೆಯಿಂದ ಮನೆಗೆ ಬರುತ್ತಲೇ ನಿಶ್ಚಯಿಸಿ ಬಿಟ್ಟೆವು. ಮನೆಗೆ ಬಂದವರೇ ಪಠ್ಯ ಪುಸ್ತಕದ ಚೀಲದ ಅವಶ್ಯಕತೆ ಆ ವಾರಕ್ಕೆ ಮುಗಿದಿದ್ದರಿಂದ ಅದನ್ನು ಅಲ್ಲಿಯೇ ಎಲ್ಲೊ ಮೂಲೆಗೆ ಎಸೆದು, ಮನೆಯಿಂದ ಒಂದು ಕತ್ತಿಯನ್ನು ತೆಗೆದುಕೊಂಡು ಅಲ್ಲಿಗೆ ಹೊರಟೆವು.

ಬಿದಿರಿನ ಹಿಂಡಿನ ಬಳಿ ಹೋಗಿ ಅದರ ಬಾಗಿದ ತುದಿಯನ್ನು ನೋಡಿದವು, ಅವು ನಮ್ಮ ಕೈಗೆಟಕುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಿದ್ದ ಹಾಗೆ ನನ್ನ ಗೆಳೆಯ ಅದರ ಬುಡ ಕಡಿದರೆ ಅದರ ತುದಿ ನಮ್ಮ ಕೈಗೆ ಸಿಗುತ್ತದೆ ಎಂದು, ಒಂದು ಗಿಡದ ಬುಡ ಕಡಿದ, ನೋಡಿದರೆ ಅದು ಗಂಡು. ಅದು ಗಂಡು ಎಂದು ಇನ್ನೊಂದನ್ನು ಕಡಿದ, ಅದೂ ಕೂಡ ಗಂಡು. ಹೀಗೆ ಮೂರ್ನಾಲ್ಕು ಬಿದಿರನ್ನು ಕಡಿದಿರಬಹುದು. ಅಷ್ಟರಲ್ಲಿ, ಅಲ್ಲಿಯೇ ಸ್ವಲ್ಪ ದೂರದಲ್ಲಿ ತನ್ನ ಹಸುಗಳಿಗೆ ಹುಲ್ಲು ಕೊಯುತ್ತಿದ್ದ ಕುಂಬಾರ ಬಾಬು ನಮ್ಮ ಬಳಿಗೆ ಬಂದ. ನಮ್ಮಿಬ್ಬರಿಗೆ ಹೆದರಿಕೆ ಸುರುವಾಯ್ತು. ಅವನು ಬಂದವನು, ನಮ್ಮ ಸ್ಥಿತಿ ನೋಡಿ ಹೆದರಬೇಡಿ, ನಾನು ನಿಮ್ಮ ಬಗ್ಗೆ ಹೇಳುವುದಿಲ್ಲ ಎಂದು, ಇದು ಗಂಡು ಬಿದಿರು, ಅದರ ಪಕ್ಕದಲ್ಲಿಯ ಹಿಂಡು ಹೆಣ್ಣು ಬಿದಿರಿನ ಹಿಂಡು ಎಂದು ಹೇಳಿ, ಆ ಹೆಣ್ಣು ಬಿದಿರಿನಿಂದ ನಮ್ಮಿಬ್ಬರಿಗೂ ಒಂದೊಂದು ಪೆಟ್ಲಂಡಿ ಮಾಡಿಕೊಟ್ಟು ತಾನು ಹುಲ್ಲು ಕೊಯ್ಯಲು ಹೊರಟ. ನಮಗೆ ಪೆಟ್ಲಂಡಿ ಸಿಕ್ಕಿತಲ್ಲ ಎನ್ನುವ ಖುಸಿಯಿಂದ ಅಲ್ಲಿಂದ ಹೊರಟು ಮನೆಗೆ ಬಂದೆವು.

ಹೇಗೂ ಅಲ್ಲಿ ಹುಲ್ಲು ಕೊಯ್ಯುತಿದ್ದ ಬಾಬು ಆ ಜಾಗದ ಮಾಲಿಕನಿಗೆ ವಿಷಯ ತಿಳಿಸಲಾರ ಎನ್ನುವ ನಂಬಿಕೆಯಲ್ಲೇ ನಮ್ಮ ಪೆಟ್ಲಂಡಿಯೊಂದಿಗೆ ಕಾಲ ಕಳೆಯತೊಡಗಿದೆವು. ಈ ಘಟನೆ ನಡೆದು ಒಂದೆರಡು ದಿನ ಕಳೆದಿರಬಹುದು, ಸೋಮವಾರ ಮದ್ಯಾಹ್ನ ಶಾಲೆ ಮುಗಿಸಿ ಮನೆಗೆ ಊಟ ಮಾಡಿ ಬರಲು ಬರುತ್ತಿದ್ದೆವು. ನಮ್ಮೂರಿನ ಹೃದಯ ಭಾಗದಲ್ಲಿ ಆಗ ಗಾಂವಕರ್ ಬಾಬು ಎನ್ನುವವರ ಒಂದು ಕಿರಾಣಿ ಅಂಗಡಿ ಇತ್ತು. ಅಲ್ಲಿ ನಾವು ಪೆಟ್ಲಂಡಿಗಾಗಿ ಕಡಿದ ಬಂದಗದ ಜಾಗದ ಮಾಲೀಕ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದ. ನಾವು ಅಂಗಡಿ ಸಮೀಪಿಸುತ್ತಿದಂತೆ, ಆ ಜಾಗದ ಮಾಲೀಕ ನಮ್ಮ ಎದುರಿಗೆ ಬಂದು ನಿಂತು, ನನಗೂ ನನ್ನ ಸ್ನೇಹಿತನಿಗೂ ತಲಾ ಎರಡು ಏಟು ಕೊಟ್ಟು, ಇನ್ನು ಮುಂದೆ ಬಿದಿರು ಹಿಂಡಿನ ಬಳಿ ಹೋಗದಂತೆ ಎಚ್ಚರಿಕೆ ನೀಡಿ ಮನೆಗೆ ಕಳಿಸಿದ. ಆ ಏಟು ತಿಂದ ಮೇಲೆ ತಿಳಿದದ್ದು, ನಮ್ಮ ಮುಂದೆ, ತಾನು ಜಾಗದ ಮಾಲಿಕನಿಗೆ ಹೇಳುವುದಿಲ್ಲ ಎಂದ ಬಾಬು, ಆ ದಿನವೇ ಅವನ ಮನೆಗೆ ಹೋಗಿ ನಾವು ಬಿದಿರು ಕಡಿದ ವಿಷಯ ತಿಳಿಸಿ ಬಂದಿದ್ದನೆಂದು. ಆಗಲೇ ನಮ್ಮ ಬಳಿ ಪೆಟ್ಲಂಡಿಗಳಿದ್ದರಿಂದ ನಾವು ಆ ಬಿದಿರು ಹಿಂಡಿನ ಬಳಿ ಪೆಟ್ಲಂಡಿಗಾಗಿ ಮತ್ತೆ ಹೋಗಲಿಲ್ಲ. ಇಂದಿಗೂ ಆ ಜಾಗದ ಮಾಲಿಕನನ್ನಾಗಲೀ ಅಥವಾ ಬಾಬುವನ್ನಾಗಲೀ ನೋಡಿದಾಗ ನಮ್ಮ ಪೆಟ್ಲಂಡಿ ಕಥೆ ನೆನಪಾಗದೇ ಇರದು.

-ಮಂಜು ಹಿಚ್ಕಡ್