ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ ಹಿಲ್ಲೂರಿನಲ್ಲಿ ಕರಾವಳಿಯ ತೀರದಷ್ಟು ಸಖೆ ಇಲ್ಲದಿದ್ದರೂ, ಅಲ್ಲಿಯೇ ಹುಟ್ಟಿ ಬೆಳೆದವರಿಗೆ ಅದು ತೀರಾ ಸಖೆಯೇ ಅನಿಸುತಿತ್ತು.ಮನೆ ಕೆಲಸಗಳೆಲ್ಲವನ್ನು ಹೊತ್ತು ಏರುವ ಮುನ್ನವೇ ಮುಗಿಸಿ, ಮಧ್ಯಾಹ್ನ ಹೆಂಡತಿ ಮಾಡಿದ ಗಂಜಿ- ಬೆರಕೆ ಹಾಕಿದ ಬಸಲೆ ಸೊಪ್ಪಿನ ಸಾರು ತಿಂದು, ಮನೆಯ ಹೊರಗಿನ ಚಿಟ್ಟೆಯಮೇಲೆ, ಹೊರಗೆ ಬೀಸುವ ಗಾಳಿಗೆ ಮೈಯೊಡ್ಡಿ ಮಲಗಿದ ಸಾತಣ್ಣನಿಗೆ, ಅದೇನೋ ನಿದ್ದೆ ಹತ್ತಿತ್ತೋ. ಆ ಗಾಢ ನಿದ್ದೆಯಲ್ಲಿ ಹೆಂಡತಿ ತಿಮಕ್ಕ ಬಂದು ಒಂದೆರಡು ಬಾರಿ ಎಚ್ಚರಿಸಿದಾಗಲೂ ನೆನಪಾಗಲಿಲ್ಲ. ಮಲಗುವ ಮೊದಲು ತಿಮ್ಮಕ್ಕನಿಗೆ " ಏನೆ ನಾಲ್ಕಗಂಟಿ ಅಷ್ಟೊತ್ತಿಗೆ ಏಳ್ಸ, ಹಿಲ್ಲೂರಬೈಲ್ ರ್ರಾಮಚಂದ್ರಣ್ಣನ ಅಂಗ್ಡಿಗೆ ಹೋಗ್ಬೇಕ" ಎಂದು ಹೇಳಿ ಮಲಗಿದ್ದರಿಂದ ಹೆಂಡತಿ ಮೂರುವರೆಯಿಂದ ನಾಲ್ಕು ಗಂಟೆಯಾಗುವುದನ್ನೇ ಕಾಯುತ್ತಾ ಕುಳಿತವಳು, ನಾಲ್ಕು ಗಂಟೆಯಾಗುತಿದ್ದ ಹಾಗೆ ಒಂದೆರಡು ಬಾರಿ, ಮನೆಯ ಎದುರಿನ ಜಗಲಿಗೆ ಬಂದು, " ಏನ್ರೆ, ಏಳ್ರೆ," ಅಂದು ಹೇಳಿ ಹೋದಳು.
ಒಂದೆರಡು ಬಾರಿ ಹೀಗೆ ಕರೆದರೂ, ಅವಳ ಮನಸ್ಸಲ್ಲಿ ಗಂಡ ಇನ್ನೂ ಸ್ವಲ್ಪ ಹೊತ್ತು ಮಲಗಲಿ ಎನ್ನುವುದೇ ಆಗಿತ್ತು. ನಿನ್ನೆ ರಾತ್ರಿ ರಾಮಚಂದ್ರನ ಅಂಗಡಿಗೆ ತಾನು ತೆಗೆದುಕೊಂಡು ಹೋಗಬೇಕಾದ ಒಣಗಿದ ಗೇರು ಬೀಜ, ವಾಂಟೆ ಹುಳಿ, ಮುರಲಕಾಯಿ ಎಲ್ಲಾ ಒಂದು ಚೀಲದಲ್ಲಿ ತುಂಬಿ ಸಾತಣ್ಣ ಮಲಗುವಾಗ ಮದ್ಯರಾತ್ರಿಯ ಹತ್ತಿರವೇ ಆಗಿತ್ತು. ದಿನಾ ಎಂಟು, ಒಂಬತ್ತು ಗಂಟೆಗೆ ನಿದ್ದೆ ಹೋಗುವ ಸಾತಣ್ಣ ನಿನ್ನೆ ಸ್ವಲ್ಪ ತಡವಾಗಿಯೇ ಮಲಗಿದ್ದ. ರಾತ್ರಿ ಎಷ್ಟೇ ತಡವಾಗಿ ಮಲಗಿದರೂ ಬೆಳಿಗ್ಗೆ ಐದಕ್ಕೇ ಏಳುವುದು ಅವನ ಅಭ್ಯಾಸ. ಬೆಳಿಗ್ಗೆ ಎದ್ದು ಮುಖ ಮಜ್ಜನ ಮುಗಿಸಿ ಒಂದಿಷ್ಟು ನೀರು ಕುಡಿದು ಮನೆಯಿಂದ ಹೊರಬಿದ್ದರೆ, ಆರು ಗಂಟೆಗೆ ಚಹಾ ಕುಡಿಯುವ ಹೊತ್ತಿಗೆ ಒಂದು ಹೊರೆ ಸೊಪ್ಪು, ಇಲ್ಲವೇ ದನಕ್ಕೆ ಹುಲ್ಲು ದನದ ಕೊಟ್ಟಿಗೆ ಸೇರಿರುತ್ತಿತ್ತು. ಚಹಾ ಕುಡಿದು ಮನೆಯ ಹೊರಗಿರುವ ತೋಟಕ್ಕೆ ಹೋಗಿ ಅದು ಇದು ಸಣ್ಣ ಪುಟ್ಟ ಕೆಲಸ ಮಾಡಿ ಮನೆ ಸೇರುವ ಹೊತ್ತಿಗೆ ಹನ್ನೆರಡು ದಾಟಿರುತ್ತಿತ್ತು. ಮನೆಗೆ ಬಂದು ಊಟ ಮುಗಿಸಿ ಸ್ವಲ್ಪಹೊತ್ತು ನಿದ್ದೆ ಮಾಡಿ ಎದ್ದು ಚಹಾ ಕುಡಿದು ತೋಟಕ್ಕೋ, ಗದ್ದೆಗೋ ಹೋದರೆ ಮನೆ ಸೇರುವುದು ಸಂಜೆ ಹೊತ್ತು ಮುಳುಗಿದ ಮೇಲೆಯೇ. ಇದು ಸಾತಣ್ಣನ ದಿನಚರಿಯೂ ಹೌದು.
ನಿನ್ನೆ ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ಬೇಗ ಎದ್ದಿದ್ದರಿಂದ ಅವನಿಗೆ ಸ್ವಲ್ಪ ಜಾಸ್ತಿಯೇ ನಿದ್ದೆ ಹತ್ತಿತ್ತು. ಒಂದೆರಡು ಬಾರಿ ಕರೆದ ತಿಮ್ಮಕ್ಕ ದನದ ಕೊಟ್ಟಿಗೆಗೆ ಹೋಗಿ ಹಾಲು ಕರೆದು ತಂದು, ಚಹಾಕ್ಕೆ ನೀರಿಟ್ಟು ಮತ್ತೆ ಸಾತಣ್ಣನನ್ನು ಕರೆಯಲು ಹೊರಬರುವ ಹೊತ್ತಿಗೆ ಗಂಟೆ ಐದು ದಾಟಿತ್ತು. ಇನ್ನೂ ತಡ ಮಾಡಿದರೆ ಗಂಡನ ಹತ್ತಿರ ಬೈಸಿ ಕೊಳ್ಳಬೇಕಾದೀತು ಎಂದು, ಸಾತಣ್ಣ ಮಲಗಿದ ಚಿಟ್ಟೆಯ ಹತ್ತಿರ ಬಂದು, "ಏನ್ರೆ, ಏಳ್ರೆ. ಅದೇನೋ ರಾಮಚಿರಣ್ಣನ ಅಂಗ್ಡಿಗೆ ಹೋಗ್ಬೇಕ ಅಂದದ್ರಿ. ಏಳುಲಾ" ಎಂದು ಒಂದೆರಡು ಬಾರಿ ಮೆಲ್ಲಗೆ ಮೈತಟ್ಟಿ ಏಳಿಸಿದಳು.
"ಹಾಂ!" ಎಂದು ಏನೋ ಜ್ನಾನೋಧಯವಾದಂತಾಗಿ ಎದ್ದು ಕುಳಿತು, ಅರ್ಧಂಬರ್ಧ ನಿದ್ದೆಗಣ್ಣಿನಿಂದ ಕಣ್ಣು ತೆರೆದು ಸುತ್ತಲೂ ನೋಡಿ, " ಈ ಹಾಳಾದ್ ನಿದ್ದೆ, ಮಲಗಿದ್ರೆ ಎಚ್ಚರವೇ ಆಗ್ದೇ ಇರೋ ಹಂಗೆ ಮಾಡ್ತಿದ" ಎಂದು ನಿದ್ದೆಗೆ ಒಂದಿಷ್ಟು ಬೈಯ್ದು "ಟೈಮ್ ಇಟ್ಟಾಯ್ತ?" ಎಂದು ಹೆಂಡತಿಯನ್ನು ಕೇಳಿದ.
"ಟೈಮ್ ಏಗೆ ಐದ ಗಂಟಿ ಆಗೋಯ್ತ, ಆಗನಿಂದೆ ನಿಮ್ಗೆ ಏಳಸ್ತೆ ಇಂವೆ, ಮೂರ್ನಾಲ್ಕು ಸಲಾನಾದ್ರೂ ಆಗುದ್, ನೀವ್ ಕುಂಬಕರ್ಣ ಮಲಗ್ದಂಗೆ ಮಲ್ಗರಿ, ಏಳುದೆ ಇಲ್ಲಾ". ಎಂದು ತಾನು ಎಂದೋ ಕೇಳಿ ತಿಳಿದ ಕುಂಬಕರ್ಣನೆಂಬುವ ರಾಕ್ಷಸನಿಗೆ ತನ್ನ ಗಂಡನನ್ನು ಹೋಲಿಸಿ, "ಆಯ್ತ ಏಳಿ, ಚಾಕ್ಕೆ ಇತ್ತಿ, ಕಣ್ಣಿಗೆ ಇಟ್ಟ ನೀರ್ ಹಾಕಂಡೆ ಬರ್ರಿ, ಚಾ ಕುಡ್ಕಂಡೆ ಹೋಗಕಿ" ಎಂದು ಹೇಳಿ ತಾನು ಚಹಾ ತಯಾರಿಮಾಡಲು ಹೊರಟಳು.
ಹೆಂಡತಿ ಅಡಿಗೆ ಕೋಣೆಗೆ ಹೋಗುತ್ತಿದ್ದಂತೆ, ಸಾತಣ್ಣ ಎದ್ದು ಮನೆಯ ಹಿತ್ತಲಿನಲ್ಲಿ ಇಟ್ಟ ನೀರ ಹಂಡೆಯ ಬಳಿ ತೆರಳಿ, ಹಂಡೆಯಿಂದ ಒಂದು ಚೆಂಬು ನೀರು ತೆಗೆದು ಮುಖಕ್ಕೆ ಒಂದಿಷ್ಟು ಸಿಂಪಡಿಸಿ, ಕೈಕಾಲು ತೊಳೆದ ಶಾಸ್ತ್ರಮಾಡಿ ಹೆಂಡತಿ ಮಾಡಿದ ಚಹಾ ಸವಿಯಲು ಅಡಿಗೆ ಕೋಣೆ ಸೇರಿದ. ಸಾತಣ್ಣ ಅಡಿಗೆ ಕೋಣೆ ಸೇರುವಷ್ಟರಲ್ಲಿ, ತಿಮ್ಮಕ್ಕ ಚಹಾವನ್ನು ತಪ್ಪಲೆಯಿಂದ ಲೋಟಕ್ಕೆ ಸುರಿಯುತ್ತಿದ್ದಳು. ಸಾತಣ್ಣನಿಗೆ ಯಾವಾಗಲೂ ಬಿಸಿ ಚಹಾ ಕುಡಿದೇ ಅಭ್ಯಾಸ. ಚಹಾ ತಣ್ಣಗಾದರೆ, ಇದೇನು ಕಲಗಚ್ಚು ಇದ್ದ ಹಾಗಿದೆ ಎಂದು ತಣಿದ ಚಹಾವನ್ನು ತೆಗೆದುಕೊಂಡು ಹೋಗಿ ಹೊರಗೆ ಚೆಲ್ಲಿ ಬರುತ್ತಿದ್ದ. ಹಾಗಾಗಿ ತಿಮ್ಮಕ್ಕ ಯಾವಾಗಿನಿಂದಲೂ ಗಂಡನಿಗೆ ಒಲೆಯ ಮೇಲೆ ಊರಿಯುತ್ತಿದ್ದ ಚಹಾವನ್ನೇ ಲೋಟಕ್ಕೆ ಹಾಕಿ ಕೊಡುತ್ತಿದ್ದಳು. ತಿಮ್ಮಕ್ಕ ಕೊಟ್ಟ ಬಿಸಿ ಬಿಸಿ ಚಹಾವನ್ನು ನಾಲ್ಕೈದು ಗುಟುಕಿಗೆ ಕುಡಿದು ಮುಗಿಸಿ, " ನಾನ್ ಹಂಗಾರೆ ರಾಮಚಿರಣ್ಣನ ಅಂಗಡಿಗೆ ಹೋಗಿ ಬತ್ತಿ" ಎಂದು ಹೆಂಡತಿಯ ಉತ್ತರಕ್ಕೂ ಕಾಯದೇ ಎದ್ದು ಮನೆಯ ನಡುಕೋಣೆಗೆ ಬಂದು, ಗಿಳಿಗೆ ತೂಗಿಟ್ಟ ಅಂಗಿಯನ್ನು ಧರಿಸಿ, ಸೊಂಟಕ್ಕೆ ಮುಂಡವನ್ನು ಸುತ್ತಿಕೊಂಡು ಹೊರಬಂದು, ಮನೆಯ ಚಿಟ್ಟೆಯ ಇನ್ನೊಂದು ಬದಿಗೆ ನಿನ್ನೆ ರಾತ್ರಿ ತಯಾರಿ ಮಾಡಿಟ್ಟ ಚೀಲವನ್ನು, ಹೆಂಡತಿ ಹೊರಗೆ ಬರುವುದಕ್ಕೂ ಕಾಯದೇ, ತಾನೇ ಕಷ್ಟಪಟ್ಟು ಹೊತ್ತುಕೊಂಡು ಹೆಂಡತಿಗೆ "ಬತ್ತಿ ಹಂಗಾರೆ, ಬರ್ಬೇಕಾದ್ರೆ ಹಿಲ್ಲೂರಬೈಲ್ ಅಂಗ್ಡಿ ಹತ್ರೆ ಮೀನ್ ಸಿಕ್ಕರೆ ತಕ್ಕಂಡೆ ಬತ್ತಿ." ಎಂದು ಹೇಳಿ, ಹಿಲ್ಲೂರ್ ಬೈಲ್ ರಾಮಚಂದ್ರನ ಅಂಗಡಿಯತ್ತ ಹೊರಟ.
ಹಿಲ್ಲೂರಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿಯ ಜನ ತಮಗೆ ಬೇಕಾಗುವ ಸಾಮಾನುಗಳನ್ನು ಕೊಳ್ಳುತ್ತಿದ್ದುದು ಈ ರಾಮಚಂದ್ರನ ಅಂಗಡಿಯಲ್ಲೇ, ಅಲ್ಲಿಯ ಜನರಿಗೆ ಈ ಅಂಗಡಿಯನ್ನು ಬಿಟ್ಟರೆ ಇರುವ ಸಮೀಪದ ಅಂಗಡಿಗಳೆಂದರೆ ಗುಂಡಬಾಳಾದ ಶೆಟ್ಟರ ಅಂಗಡಿಗೋ ಇಲ್ಲಾ ಮಾಸ್ತಿಕಟ್ಟೆಯ ಮದನ ಶೆಟ್ಟರ ಅಂಗಡಿಗೋ ಹೋಗಬೇಕು. ಆ ಅಂಗಡಿಗಳನ್ನು ಬಿಟ್ಟರೆ ದೂರದ ಮಾದನಗೇರಿಗೋ, ಇಲ್ಲಾ ಅಂಕೋಲಾಕ್ಕೋ ಹೋಗಿ ಬರಬೇಕು. ಹಾಗಾಗಿ ಆ ಸುತ್ತಲಿನ ಹಳ್ಳಿಯ ಜನರೆಲ್ಲ ತಮ್ಮ ತುರ್ತು ಅವಶ್ಯಕತೆಗಳಿಗೆ ಹೆಚ್ಚಾಗಿ ಅವಲಂಬಿಸಿದ್ದು ಸಮೀಪದ ರಾಮಚಂದ್ರನ ಅಂಗಡಿಯನ್ನೇ. ಗೋಕರ್ಣದಿಂದ ಹಿಲ್ಲೂರಿನ ಮುಖಾಂತರ ಸಿರಸಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ತನ್ನ ತೋಟದ ಮನೆಯಲ್ಲೇ ಅಂಗಡಿಯನ್ನು ತೆರೆದಿದ್ದರು ರಾಮಚಂದ್ರ. ಅಲ್ಲಿ ದಿನ ಬಳಕೆಗೆ ಬೇಕಾಗುವ ವಸ್ತುಗಳಿಂದ ಹಿಡಿದು, ಒಣ ಮೀನು, ಹಿಂಡಿ, ಹತ್ತಿಕಾಳು, ಹುರುಳಿ ಹಿಟ್ಟು, ಸಾಬೂನು, ಪ್ಲಾಸ್ಟಿಕ್ ಸಾಮಾನುಗಳು, ಬುಟ್ಟಿ, ಕತ್ತಿ, ಬಂದಿಗಳು ಸಿಗುತಿದ್ದವೂ. ಅಲ್ಲಿಯ ಜನರಿಗೆ ಏನೇ ತುರ್ತಾಗಿ ಬೇಕಿದ್ದರೂ ರಾಮಚಂದ್ರನ ಅಂಗಡಿಯಲ್ಲಿ ಸಿಗುತ್ತಿತ್ತು. ಇನ್ನೊಂದು ವಿಷಯವೆಂದರೆ ಅಲ್ಲಿಂದ ಸಾಮಾನು ತೆಗೆದುಕೊಂಡು ಹೋಗುವವರು ಕೈಯಲ್ಲಿ ರೊಕ್ಕ ಹಿಡಿದೇ ಬರಬೇಕೆಂದಿಲ್ಲ. ರೊಕ್ಕ ಇಲ್ಲದಿದ್ದರೆ ಮನೆಯಲ್ಲಿ ಬೆಳೆದ ಬತ್ತ, ತೆಂಗಿನಕಾಯಿ, ಗೇರು ಬೀಜ, ವಾಂಟೆಹುಳಿ, ಮುರಲಕಾಯಿ ಏನೆ ಆದರೂ ಆದೀತು. ಜನರು ಆ ಸಾಮಾನುಗಳನ್ನು ಕೂಡ ಅಂಗಡಿ ಬಂದ ತಕ್ಷಣವೇ ಕೊಡಬೇಕೆಂದಿಲ್ಲ, ಈಗ ಸಾಮಾನು ತೆಗೆದುಕೊಂಡು ಹೋಗಿ ಆ ಪದಾರ್ಥಗಳು ಹೊಂದಿಕೆಯಾದ ಮೇಲೆ ತಂದು ಕೊಟ್ಟರು ಆಯಿತು. ಈ ತಿಂಗಳು ಆಗದಿದ್ದರೆ, ಮುಂದಿನ ತಿಂಗಳು. ಈ ವರ್ಷ ಆಗದಿದ್ದರೆ, ಮುಂದಿನ ವರ್ಷ ಯಾವಾಗ ಬೇಕಾದರೂ ಅಡ್ಡಿಯಿಲ್ಲ. ಅಲ್ಲಿ ಬರುವ ಜನರೆಲ್ಲ ಅಲ್ಲಿಯೇ ಹುಟ್ಟಿ ಬೆಳೆದು ಪರಿಚಿತರೇ ಆದುದರಿಂದ ಅವರ ಬಗ್ಗೆ ಚಿಂತಿಸಬೇಕಿರಲಿಲ್ಲ. ಹಾಗೆ ಜನರಿಂದ ಕೊಂಡ ಸಾಮಾನುಗಳನ್ನು ಅಂಕೋಲಾ ಪೇಟೆಗೆ ಹೋಗಿ ಮಾರಿ ಅದರಿಂದ ಬಂದ ರೊಕ್ಕದಲ್ಲಿ ಸ್ವಲ್ಪ ಲಾಭವನ್ನು ತನಗಿಟ್ಟುಕೊಂಡು ಉಳಿದಿದ್ದರಲ್ಲಿ ತನ್ನ ಅಂಗಡಿಗೆ ಸಾಮಾನು ಕೊಂಡು ಬರುತ್ತಿದ್ದ ರಾಮಚಂದ್ರ.
ಇಂದು ಸಾತಣ್ಣ ಮನೆಯಿಂದ ಹೊರೆ ಹೊತ್ತು ಹೊರಟಿದ್ದು, ಮುಂದೆ ಕೆಲವೇ ದಿನಗಳಲ್ಲಿ ಬರಲಿರುವ ಮಳೆಗಾಲ ಬರಲಿದ್ದು, ಆಗ ದಿನನಿತ್ಯದ ಕರ್ಚಿಗೆ ಬೇಕಾಗುವ ಸಾಮಾನುಗಳನ್ನು ತರಲು. ಗೇರು ಹಕ್ಕಲದಲ್ಲಿ ಬೆಳೆದ ಗೇರು ಬೀಜ, ಸುತ್ತಲಿನ ಕಾಡಿನಿಂದ ತಂದು ಕೊಯ್ದು ಒಣಗಿಸಿದ ವಾಂಟೆ ಹುಳಿ, ಮುರಲಕಾಯಿ ರಾಮಚಂದ್ರನ ಅಂಗಡಿಯಲ್ಲಿ ಮಾರಿ ಮಳೆಗಾಲಕ್ಕೆ ಬೇಕಾಗುವಷ್ಟು ಬೆಳ್ಳುಳ್ಳಿ, ಮೆಣಸು, ಕೊತ್ತಂಬರಿ, ಹೀಗೆ ಒಂದಿಷ್ಟು ಸಾಮಾನು ತೆಗೆದುಕೊಂಡು ಬರುವುದು, ಮನೆಗೆ ಒಂದು ಪಳದಿಗಾಗುವಷ್ಟು ಮೀನು ತೆಗೆದುಕೊಂಡು ಹೋಗುವುದು. ಇನ್ನೂ ಸ್ವಲ್ಪ ರೊಕ್ಕ ಮಿಕ್ಕಲ್ಲಿ ಮಳೆಗಾಲದ ಗದ್ದೆ ಕೆಲಸಗಳಿಗಾದೀತು ಎಂದು ಯೋಚಿಸುತ್ತಾ ರಾಮಚಂದ್ರನ ಅಂಗಡಿಯತ್ತ ಹೊರಟ.
ರಾಮಚಂದ್ರನ ಅಂಗಡಿ ತಲುಪುವ ಹೊತ್ತಿಗೆ, ಆಗಲೇ ಎಂಟು ಹತ್ತು ಜನ ಗಿರಾಕಿಗಳು ಬಂದು ನಿಂತಿದ್ದರು, ಸಾತಣ್ಣ ಒಳಗೆ ಬರುವ ಹೊತ್ತಿಗೆ ಅಂಗಡಿಬೈಲ್ ರಾಕಣ್ಣ ತಂದ ಬತ್ತ ತೂಗುತಿದ್ದ ರಾಮಚಂದ್ರ, ಸಾತಣ್ಣನನ್ನು ಅವನು ಹೊತ್ತ ಹೊರೆಯನ್ನು ನೋಡಿ, ಬತ್ತ ತೂಗುತ್ತಲೇ, "ಹೋ! ಸಾತು, ಬಾ, ಬಾ. ಬಾಳ್ ದಿವ್ಸಾ ಆಯ್ತ ಇಬದಿಗೆ ಬರ್ದೇ" ಎಂದು ಅಂಗಡಿಯ ಪ್ರಾಂಗಣಕ್ಕೆ ಕರೆದ. ಹೊತ್ತು ತಂದ ಹೊರೆಯನ್ನು ಅಂಗಡಿಯ ಪಕ್ಕದಲ್ಲಿಳಿಸಿ, ಅಂಗಡಿಯ ಹೊರಗೆ ಮರದ ಬಾಂಕಿನ ಮೇಲೆ "ಉಸ್ಸಪ್ಪ" ಎಂದು ಕುಳಿತ ಸಾತಣ್ಣ, ತನ್ನ ಸರದಿ ಎಂದು ಬರುವುದೆಂದು.
ಅಂಗಡಿಗೆ ತಮ್ಮ ಮನೆಯಿಂದ ತಂದ ಇತರರ ಸಾಮಾನುಗಳನ್ನು ತೂಗಿ ಮುಗಿಸುವಷ್ಟರಲ್ಲಿ ಹೊತ್ತು ಮುಳುಗಿತ್ತು. ಮನೆಗೆ ಬೇಕಾಗುವ ಸಾಮಾನುಗಳಲ್ಲಿ ಯಾವುದಾದರೂ ಮರೆತು ಹೋಗುತ್ತದೆಯೋ ಎನೋ ಎಂದು ತೆಗೆದುಕೊಂಡು ಹೋಗಬೇಕಾದ ಸಾಮಾನುಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾ ಕುಳಿತಿದ್ದ ಸಾತಣ್ಣನನ್ನು, "ಏನ್ ತಕ್ಕಂಡೆ ಬಂದಿ, ನೋಡುವಾ ತಿಗಿ" ಎಂದು ರಾಮಚಂದ್ರ ಕರೆದಾಗಲೇ ಸಾತಣ್ಣ ಯೋಚನೆಯಿಂದ ಹೊರಬಂದದ್ದು. ತಂದ ಚೀಲವನ್ನು ತೆರೆದು ರಾಮಚಂದ್ರನಿಗೆ ತೋರಿಸಿದ. ತಂದ ಸಾಮಾನುಗಳನ್ನೆಲ್ಲ ತೂಗಿ, ಸಾಮಾನನ್ನು ಅದರ ಪಕ್ಕದಲ್ಲಿ ಬೆಲೆಯನ್ನು ಬರೆದುಕೊಂಡು, ಸಾತಣ್ಣನಿಗೆ " ರೊಕ್ಕ ತಕ್ಕಂಡೆ ಹೋತ್ಯಾ ಅಥವಾ ಮನಿಗೆ ಏನಾರೂ ಸಾಮಾನ್ ತಕಂಡೆ ಹೋತ್ಯಾ" ಎಂದು ಕೇಳಿದಾಗ, ತನ್ನ ಮನೆಗೆ ಬೇಕಾಗುವ ಸಾಮಾನುಗಳ ಪಟ್ಟಿಯನ್ನು ತಿಳಿಸಿದ. ಸಾತಣ್ಣ ಹೇಳಿದ ಸಾಮಾನುಗಳನ್ನೆಲ್ಲ ಒಂದು ಚಿಕ್ಕ ಪಟ್ಟಿಯಲ್ಲಿ ಬರೆದುಕೋಂಡು ಅವುಗಳನ್ನು ಕಟ್ಟಿ ಕೊಡಲು ತನ್ನ ಮಗ ರಮೇಶನಿಗೆ ತಿಳಿಸಿ, ತಾನು ಹಣದ ಲೆಕ್ಕ ಹಾಕಿ, "ಐವತ್ ರೂಪಾಯಿ ಉಳಿತಿದ, ರೊಕ್ಕಾ ಕುಡ್ಲಾ, ಮತ್ತೇನಾದ್ರು ಬೇಕಾ?" ಎಂದು ಸಾತಣ್ಣನನ್ನು ಕೇಳಿದ. ಸಾತಣ್ಣ ಮತ್ತೊಮ್ಮೆ ಮನೆಗೆ ಬೇಕಾಗುವ ಯಾವುದಾದರೂ ಸಾಮಾನುಗಳನ್ನು ಮರೆತಿದ್ದೇನೋ ಎಂದು ಯೋಚಿಸಿ, ತಾನು ಯಾವುದನ್ನು ಮರೆತಿಲ್ಲ ಎಂದು ತನ್ನಷ್ಟಕ್ಕೆ ಖಾತ್ರಿ ಮಾಡಿಕೊಂಡು, "ಇಲ್ಲಾ ಮತ್ತೇನು ಬೇಡಾ, ಊಳದದ್ದ ರೊಕ್ಕ ಕುಟ್ಟೇ ಬಿಡ, ಮೀನರೂ ತಕಂಡೆ ಹೋತಿ" ಎಂದ. ರಾಮಚಂದ್ರ ಲೆಕ್ಕ ಹಾಕಿ ಹತ್ತರ ಐದು ನೋಟುಗಳನ್ನು ತೆಗೆದು ಸಾತಣ್ಣನ ಕೈಗಿತ್ತ. ಅದೇ ಸಮಯಕ್ಕೆ ರಮೇಶ ಸಾತಣ್ಣ ಹೇಳಿ ಬರೆಸಿದ ಸಾಮಾನುಗಳನ್ನೆಲ್ಲಾ ಪೊಟ್ಟಣ ಕಟ್ಟಿ ಸಾತಣ್ಣ ತಂದ ಚೀಲಕ್ಕೆ ತುಂಬಿ ಕೊಟ್ಟ. ರಾಮಚಂದ್ರ ಕೊಟ್ಟ ಹತ್ತರ ನೋಟುಗಳನ್ನು ಅಂಗಿಯ ಕಿಸೆಗೆ ತುರುಕಿ, ರಮೇಶಕೊಟ್ಟ ಚೀಲವನ್ನು ಹೆಗಲಮೇಲೆ ಹೊತ್ತುಕೊಂಡು, "ಬತ್ತಿನೋ ರಾಮಚಿರಣ್ಣ" ಎಂದು ಅಂಗಡಿಯಿಂದ ಹೊರಟ. ಹಾಗೆ ಹೊರಟವನು ಅಂಗಡಿಯನ್ನು , ಅಂಗಡಿಯ ಮುಂದಿನ ದಣಪೆಯನ್ನು ದಾಟಿ ಸ್ವಲ್ಪ ಮುಂದೆ ಹೊರಟಿರಬಹುದು, ಆಗ ಅಂಗಡಿಯ ಗಲ್ಲಿಯ ಮೇಲೆ ಕುಳಿತ ರಾಮಚಂದ್ರನಿಗೆ, ನಿನ್ನೆ ಅಗಸೂರಿಂದ ಬಂದು, ರಾಮಚಂದ್ರನ ಮನೆಯಲ್ಲಿ ಉಳಿದು ಬೆಳಿಗ್ಗೆ ಹೊರಡುವಾಗ, ಆ ಅಗಸೂರ ಹೊನ್ನಯ್ಯ ಸಾತಣ್ಣನಿಗೆ ಕೊಡಲು ಕೊಟ್ಟ ಅವನ ಮಗನ ಮದುವೆಯ ಕರೆಯೋಲೆ ನೆನಪಾಗಿ, "ಸಾತು, ಸಾತು, ಮಾತ್ರೆ ನಿಲ್ಲೋ ಎಂದು ಕೂಗಿದ.
ಆಗಲೇ ಕತ್ತಲೆ ಆವರಿಸಿದ್ದರಿಂದ ಮನೆಗೆ ಹೋಗಲು ತಡವಾಗುತ್ತದೆ ಎಂದು, ದೊಡ್ಡ, ದೊಡ್ಡ ಹೆಜ್ಜೆ ಇಡುತ್ತಾ ಮೀನು ಮಾರಲು ಕುಳಿತ ಸುಬ್ಬಿಯ ಕಡೆ ಹೊರಟ ಸಾತಣ್ಣನಿಗೆ, ರಾಮಚಂದ್ರ ಕೂಗಿದ್ದೂ ಕೇಳಿಸಲಿಲ್ಲ. ಸಾತಣ್ಣ ಕೂಗಿದ್ದು ಕೇಳಿಸದ ಕಂಡು, ಮಗನನ್ನು ಕರೆದು, "ಏ, ತಮ್ಮಾ, ಅಲ್ಲೇ ಸಾತು ಹೋತೇ ಇಂವಾ, ಹೋಗೆ ನಾ ಕರೀತೆ ಇಂವೆ ಅಂದೆ ಹೇಳೆ ಕರ್ಕಂಡೆ ಬಾ" ಎಂದು ಹೇಳಿ ಕಳಿಸಿದ. ರಮೇಶ ಅಂಗಡಿಯಿಂದ ಹೊರಟು ಅನತಿ ದೂರದಲ್ಲಿ ಮೀನು ಮಾರಲು ಕುಳಿತ ಸುಬ್ಬಿ ಇದ್ದಲ್ಲಿಗೆ ಹೋಗುವಷ್ಟರಲ್ಲಿ ಸಾತಣ್ಣ, ಮೀನು ತೆಗೆದುಕೊಂಡು ಸುಬ್ಬಿಯಿಂದ ಬರಬೇಕಾದ ಚಿಲ್ಲರೆ ತೆಗೆದುಕೊಂಡು ಮನೆಯತ್ತ ಹೊರಡುವುದರಲ್ಲಿದ್ದ. ಅವನು ಮನೆಯತ್ತ ಮುಖಮಾಡಿ ಒಂದೆರಡು ಹೆಜ್ಜೆ ನಡೆದಿರಬಹುದು, ಹಿಂದಿನಿಂದ ಓಡುತ್ತಾ ಬಂದ ರಮೇಶ, " ಅಣ್ಣಾ, ಅಪ್ಪಾ ಯಾಕೋ ನಿಂಗೆ ಕರೀತೆ ಇಂವಾ, ನಂಕೋಡೆ ಕರ್ಕೊಂಡೆ ಬಾ ಅಂದ್ಯಾ", ಎಂದು ತಂದೆ ಹೇಳಿದ್ದನ್ನು ಸಾತಣ್ಣನಿಗೆ ತಿಳಿಸಿದ. "ಆಯ್ತ ತಮ್ಮಾ ಬಂದೆ ಹೋಗ" ಎಂದು ರಮೇಶನನ್ನು ಮುಂದೆ ಕಳಿಸಿ, "ರಾಮಚಂದ್ರ ಈಗೇಕೆ ನನ್ನ ಕರೀತಿರಬಹುದು? ಲೆಕ್ಕಚಾರದಲ್ಲಿ ಏನಾದರೂ ಹೆಚ್ಚು ಕಡಿಮೆಯಾಯಿತೇ? ಅದು ಸಾದ್ಯವಿಲ್ಲ ಎನಿಸಿತು. ಒಮ್ಮೆ ಲೆಕ್ಕ ಹಾಕಿದರೆ ತಪ್ಪುವವನಲ್ಲ ರಾಮಚಂದ್ರ, ಮತ್ತೇಕೆ ಕರೆದಿರಬಹುದು? ಕರಿಕಲ್ಲಿನ ನನ್ನ ಗದ್ದೆಯಿಂದ ಒಂದರ್ದ ಪರ್ಲಾಂಗು ದೂರದಲ್ಲಿದ್ದ ಅವನ ಗದ್ದೆ, ಯಾರು ಮಾಡುವವರಿಲ್ಲದೇ ಕಳೆದ ವರ್ಷ ಹಾಗೇ ಇತ್ತು. ಅದನ್ನೇನಾದರೂ ಗೇಣಿಗೆ ತೆಗೆದುಕೋ ಎಂದು ಹೇಳುವುದಕ್ಕಿರಬಹುದೇ ಎಂದು ಯೋಚಿಸುತ್ತಾ ಹೋಗುವಷ್ಟರಲ್ಲಿ ಅಂಗಡಿ ತಲುಪಿದ್ದ.
ಸಾತಣ್ಣ ಬರುವುದನ್ನು ನೋಡಿ ರಾಮಚಂದ್ರ, "ಈ ಹಾಳ್ ತಲಿಗೆ ಎಲ್ಲಾ ಮರ್ತೇ ಹೋತಿದ, ಬೆಳಿಗ್ಗೆ ಇಂದ ನೀನೇನಾದ್ರೂ ಈ ಕಡೆ ಬಂದ್ರೆ ಇದನ್ನ ಕುಡ್ಬೇಕ್ ಅಂದಂವ್ಗೆ, ನೀನು ಅಂಗಡಿಗೆ ಬಂದ್ರೂ ಎಚ್ಚರಾ ಆಗಲಾ ನೋಡ. ನಿನ್ನಗೆ ನಿಮ್ಮ ಹೊನ್ನಯ್ಯ ಮಾವ ಬಂದದ, ಅವ್ನ ಕೋಸನ್ ಮುದ್ಯಾ ಕಡ. ತಕಾ ಇದ್ನಾ ನಿಂಗೆ ಕುಡ ಅಂದೆ ಕುಟ್ಯಾ" ಎಂದು ಹೊನ್ನಯ್ಯ ಕೊಟ್ಟ ಲಗ್ನ ಪತ್ರಿಕೆಯನ್ನು ತೆಗೆದು ಸಾತಣ್ಣನಿಗೆ ಕೊಟ್ಟು ತನ್ನ ಜವಬ್ಧಾರಿಯಿಂದ ಮುಕ್ತನಾದ. ಅಂತು ತನ್ನಿಂದ ಲಗ್ನ ಪತ್ರಿಕೆ ಮುಟ್ಟಲಿಲ್ಲ ಎನ್ನುವ ಮಾತು ತಪ್ಪಿತಲ್ಲ ಎಂದು ರಾಮಚಂದ್ರನ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು.
ರಾಮಚಂದ್ರ ಕೊಟ್ಟ ಲಗ್ನ ಪತ್ರಿಕೆಯನ್ನು ಮಡಚಿ, ಅಂಗಿಯ ಕಿಸೆಗೆ ತುರುಕಿ, ಅಲ್ಲಿಂದ ನಿಧಾನವಾಗಿ ಮನೆಯ ಕಡೆ ಹೆಜ್ಜೆಯಿಡಲಾರಂಭಿಸಿದ. ಇಲ್ಲಿಯವರೆಗೆ ನಿರಾಳವಾಗಿದ್ದ ಮನಸ್ಸು ಲಗ್ನಪತ್ರಿಕೆಯ ದೆಸೆಯಿಂದಾಗಿ ಕದಡತೊಡಗಿತು. ಹಳೆಯ ಮರೆತ ಘಟನೆಗಳು ಮತ್ತೆ ನಿಧಾನವಾಗಿ ಮೈದೊಳೆಯತೊಡಗಿದವು. ಹೆಜ್ಜೆಯ ವೇಗ ನಿಧಾನವಾಗತೊಡಗಿತು. ಹೊನ್ನಯ್ಯ ಸಾತಣ್ಣನಿಗೆ ದೂರದವನೇನಲ್ಲ, ಅವನ ಸೋದರ ಮಾವ. ಅಮ್ಮನ ಖಾಸಾ ತಮ್ಮ. ಸಾತಣ್ಣನ ತಂದೆ ಬೊಮ್ಮಯ್ಯ ತೀರಿಕೊಂಡಾಗ ಸಾತನ್ಣನಿಗಿನ್ನೂ ಹತ್ತು ತುಂಬಿರಲಿಲ್ಲ. ತಂದೆ ತೀರಿಕೊಂಡ ನಂತರ ಒಂದೆರಡು ವರ್ಷ ಅಜ್ಜ ಅಜ್ಜಿಯರೊಂದಿಗೆ ಉಳಿದ ಸಾತಣ್ಣ. ತಂದೆ ತೀರಿಹೋದ ನಂತರ ಎರಡು ವರ್ಷಗಳಲ್ಲಿಯೇ, ಮಗ ತೀರಿಹೋದ ಕೊರಗಿನಲ್ಲಿ ಅಜ್ಜ ಅಜ್ಜಿಯರು ಈ ಲೋಕದ ಯಾತ್ರೆ ಮುಗಿಸಿ ಹೋದಾಗ ಸಾತಣ್ಣ ತನ್ನ ತಾಯಿಯೊಂದಿಗೆ ಅಜ್ಜಿಮನೆ ಸೇರಿದ. ಆಗಿನ್ನೂ ಸಾತಣ್ಣನಿಗೆ ಹನ್ನೆರಡ ಹರೆಯ. ಸಾತಣ್ಣ ಅಜ್ಜಿಮನೆಗೆ ಹೋದಾಗ ಸಾತಣ್ಣ ಅಂದುಕೊಂಡಂತೆ ಎಲ್ಲವೂ ಸರಿ ಇರಲಿಲ್ಲ. ಅಜ್ಜಿ ಮನೆಯಲ್ಲಿ ಮಾವನಿಗೆ ಮದುವೆಯಾಗಿ ಅತ್ತೆ ಬಂದಿದ್ದಳು. ಅಜ್ಜ ಅಜ್ಜಿಯರಿಗೆ ವಯಸ್ಸಾಗಿತ್ತು. ಮನೆಯಲ್ಲಿ ಎಲ್ಲವು ಅತ್ತೆಯದೇ ಕಾರುಬಾರು.
ಅಜ್ಜಿಮನೆಯಲ್ಲಿ ಅಮ್ಮ ಮಗ ಕೆಲಸದ ಆಳುಗಳಂತೆ ದುಡಿಯತೊಡಗಿದರು. ಆಳುಗಳಿಗೆ ಸಂಬಳವಾದರೂ ದೊರೆಯುತ್ತದೆ, ಆದರೆ ಇವರು ಸಂಬಳವಿಲ್ಲದ ಆಳುಗಳು. ಅಮ್ಮ ಮನೆಕೆಲಸ ಮಾಡುವುದು, ಗದ್ದೆ ಕೆಲಸದ ಸಮಯದಲ್ಲಿ ಕೆಲಸಕ್ಕೆ ಬಂದ ಆಳುಗಳಂತೆ ಸಸಿ ನೆಡುವುದು, ಗದ್ದೆ ಕೊಯ್ಯುವುದು ಮುಂತಾದ ಕೆಲಸ ಮಾಡಿದರೆ, ಸಾತಣ್ಣ ದನ ಮೇಯಿಸುವುದು, ದನಕ್ಕೆ ಸೊಪ್ಪು ತರುವುದು, ಹುಲ್ಲು ಕೊಯ್ದುತರುವುದು ಮೊದಲಾದ ಕೆಲಸಗಳನ್ನು ಮಾಡತೊಡಗಿದ. ಎಷ್ಟೇ ಕೆಲಸಮಾಡಿದರೂ ಅವರು ಅಲ್ಲಿ ಕೂಲಿಯಾಳುಗಳಂತೆ ಇರಬೇಕಾಯಿತು. ಸ್ವಂತ ಮನೆಯಲ್ಲಿ ಇದ್ದಂತೆ ಇಲ್ಲಿರಲಿಲ್ಲ. ಇವನ್ನೆಲ್ಲ ನೋಡಿದ ಸಾತಣ್ಣನಿಗೆ ಅಲ್ಲಿ ಉಳಿಯಲಾಗಲಿಲ್ಲ. ಆ ಊರನ್ನೇ ಬಿಟ್ಟು ಬಿಡುವುದಾಗಿ ನಿರ್ಧರಿಸಿ ಒಂದು ದಿನ ರಾತ್ರಿ ತಾಯಿಗೆ ಹೇಳಿದಾಗ ತಾಯಿಗೂ ಅದೇ ಬೇಕಾಗಿತ್ತಾದರೂ ಹೋಗುವುದೆಲ್ಲಿಗೆ ಎನ್ನುವ ಪ್ರಶ್ನೆ. ಹಾಗಾಗಿ ಆಕೆ "ಬೇಡಾ ತಮ್ಮಾ ಎಲ್ಲಿಗೆ ಹೋಗುದ್, ಎಲ್ಲೇ ಹೋದ್ರು ಹಿಂಗೆ ಅಲ್ಲಾ?ನಮ್ಮಲ್ಲೇ ಅದೇನೋ ಅಂತಾರಲ್ಲಾ ಗಟ್ಕೆ ಹೋದಂವಾ ವಾಪಸ್ ಬಂದದ್ನ ಕಡಾ ಆದ್ರೆ ಹೊಟ್ಟಿ ತುಂಬುಕೆ ಹೋದಂವಾ ವಾಪಸ್ ಬರಲಾ ಆಗದ್ನ ಕಡಾ. ನಮ್ಮ ಪರಿಸ್ಥಿನೂ ಹಾಗಾಗುದ್ ಬೇಡಾ" ಎಂದು ತನ್ನ ದುಃಖವನ್ನು ತೋಡಿಕೊಂಡಳು ಅದಕ್ಕೆ ಸಾತಣ್ಣ "ನೀ ಹೆದರಬೇಡಾ ಅವ್ವಾ ಎಲ್ಲಾರೂ ಗೇಣಿಗೆ ಗದ್ದೆ ಸಿಕ್ಕರೆ ನೋಡ್ತಿ, ಗೇಣಿಗಾದ್ರೂ ಗದ್ದೆ ತಕಂಡೆ ನಾವಾರೂ ದುಡಿಯುವಾ. ನಾ ನಾಳಗೆ ಬೆಳಿಗ್ಗೆ ಹಿಲ್ಲೂರ್ ಬದಿಗೆ ಹೋಗ್ ಬತ್ತಿ, ಅಲ್ಲೆ ನಮ್ಮೂರ್ ವೆಂಕಣಣ್ಣ ಇಂವ್ನಲ್ಲಾ ಅವ್ನ ಕೇಳಿದ್ರೆ ಗುತ್ತಾತಿದ. ಹಂಗೇನಾದ್ರೂ ನಾ ಇಲ್ಲ್ಗೆ ವಾಪಸ್ ಬರುಲಾ, ಯಾರತ್ರಾದ್ರೂ ಹೇಳಿ ಕಳಸ್ತಿ, ನೀ ಬಂದ್ ಬಿಡಕ ಅಲ್ಲಿಗೆ" ಎಂದು ಹೇಳಿ ಮಲಗಿದ. ಅದೇ ಅವನ ಅಜ್ಜಿಮನೆಯಲ್ಲಿ ಕಡೆಯ ರಾತ್ರಿ. ಮಾರನೆಯ ದಿನ ಬೆಳಿಗ್ಗೆ ಅಜ್ಜಿ ಮನೆಯಿಂದ ಹೊರಟವನು ಸಂಜೆಯ ಹೊತ್ತಿಗೆ ಹಿಲ್ಲೂರಿನ ವೆಂಕಣ್ಣನ ಮನೆ ಸೇರಿದ. ವೆಂಕಣ್ಣ ಸಾತಣ್ಣನ ತಂದೆಯ ದೂರದ ಸಂಬಂಧಿಯೂ ಹೌದು. ಸಾತಣ್ಣನ ಸ್ಥಿತಿ ನೋಡಿದ ವೆಂಕಣ್ಣನಿಗೆ ಸಾತಣ್ಣನ ಮೇಲೆ ಅನುಕಂಪ ಮೂಡಿ "ಒಂದೆರಡು ದಿನ ಇಲ್ಲೇ ಇರ, ಇಲ್ಲೇ ಅಂಗಡಿಬೈಲ್ ಬಟ್ರ ಗದ್ದೆ ಗೇಣಿಗೆ ಇದ, ನಾಳಗೆ ಹೋಗೆ ಮಾತಾಡ್ಕಂಡೆ ಬರುವಾ" ಎಂದು ಹೇಳಿ ಅಲ್ಲೇ ರಾತ್ರಿ ಉಳಿಸಿಕೊಂಡರು. ಮಾರನೆಯ ದಿನವೇ ಅಂಗಡಿಬೈಲ ಬಟ್ಟರ ಜಮೀನನ್ನು ಗೇಣಿಗೆ ಕೂಡ ದಕ್ಕಿಸಿಕೊಂಡ ಸಾತಣ್ಣ. ವೆಂಕಣ್ಣನ ಮುಖಾಂತರ ತಾಯಿಗೆ ತಿಳಿಸಿ ತಾಯಿಯನ್ನು ಅಲ್ಲಿಗೆ ಕರೆಸಿಕೊಂಡ ಸಾತಣ್ಣ.
ಆ ಬಟ್ಟರ ಜಮೀನನ್ನು ತನ್ನದೇ ಜಮೀನು ಎನ್ನುವ ರೀತಿಯಲ್ಲಿ ದುಡಿಯತೊಡಗಿದರೂ ತಾಯಿ ಮಗ. ತಾಯಿ ಶಿವಮ್ಮನು ಮಗನ ಜೊತೆ ಗದ್ದೆಯಲ್ಲಿ ಮಧ್ಯಾನದವರೆಗೆ ಕೆಲಸ ಮಾಡಿ, ಮನೆಗೆ ಬಂದು ಮಗನಿಗೆ ತನಗೆ ಅಡಿಗೆ ಮಾಡುವುದರ ಜೊತೆಗೆ ದನ ಕೊಟ್ಟಿಗೆಯ ವ್ಯವಹಾರವನ್ನು ನೋಡಿ ಕೊಳ್ಳ ತೊಡಗಿಳು. ಅಲ್ಲಿ ಅಂಗಡಿಬೈಲ್ ಬಟ್ಟರ ಮನೆಯ ಜಮೀನನ್ನು ಗೇಣಿಗೆ ನೋಡಿಕೊಂಡು ಒಂದೆರಡು ವರ್ಷವಾದಾಗ ಯಾರಿಂದಲೋ ಈಗಿರುವ ಕರಿಕಲ್ಲು ಬಳಿಯ ಜಾಗ ಮಾರುವುದಿದೆ ಎಂದು ಕೇಳಿ ತಿಳಿದು. ಆ ಜಾಗವನ್ನು ಕೃಯಕ್ಕೆ ತೆಗೆದುಕೊಂಡರು ಸಾತನ್ಣ. ಕರಿಕಲ್ಲಿನ ಜಾಗವನ್ನು ತೆಗೆದುಕೊಂದ ಮೇಲೂ ಒಂದೆರಡು ವರ್ಷ ಎರಡು ಕಡೆ ಬೇಸಾಯ ಮಾಡ ತೊಡಗಿದರು. ಬೆಟ್ಟದ ಕಡೆಯ ಗದ್ದೆಯಾದ್ದರಿಂದ ತುಂಬಾ ಕಾಳಜಿವಹಿಸಿ ಸಾಗುವಳಿ ಮಾಡಬೇಕಿತ್ತು. ಒಮ್ಮೆ ಎಚ್ಚರ ತಪ್ಪಿದರೂ ಕಾಡು ಹಂದಿಗಳಿಗೋ, ನವಿಲುಗಳಿಗೋ, ಆನೆ, ನರಿಗಳಿಗೋ ಸಿಕ್ಕಿ ಸಂಪೂರ್ಣ ಬೆಳೆ ಕಳೆದು ಕೊಳ್ಳಬಹುದಾದ ಸಂಭವವಿತ್ತು. ಒಮ್ಮೆ ಅಂಗಡಿಬೈಲಲ್ಲಿ ಗದ್ದೆ ಕೊಯ್ಯುವ ಕೆಲಸವಿದ್ದುದರಿಂದ, ಕರಿಕಲ್ಲಿನ ಜಮೀನಿಗೆ ಒಂದು ರಾತ್ರಿ ಬಂದು ಉಳಿಯಲಾಗಲಿಲ್ಲ. ಪಕ್ಕದ ಜಮೀನಿನ ಮುರ್ಕುಂಡಿಗೆ ಹೇಳಿದ್ದನಾದರೂ, ಮುರ್ಕುಂಡಿಗೆ ಆ ದಿನ ಆರಾಮು ತಪ್ಪಿ ಗದ್ದೆ ನೋಡಿಕೊಳ್ಳಲಾಗಲಿಲ್ಲ. ಆ ರಾತ್ರಿ ಕಾಡು ಹಂದಿಗಳೆಲ್ಲಾ ಗದ್ದೆಗೆ ನುಗ್ಗಿ ಮುಕ್ಕಾಲು ಭಾಗಕ್ಕಿಂತ ಹೆಚ್ಚಿನ ಬೆಳೆ ನಾಶಪಡಿಸಿದ್ದವು. ಅದಾದ ನಂತರ ಅಂಗಡಿಬೈಲು ಬಟ್ಟರ ಜಮೀನನ್ನು ಗೇಣಿಗೆ ಮಾಡುವುದನ್ನು ಬಿಟ್ಟು ಬಿಟ್ಟಿದ್ದ. ಕರಿಕಲ್ಲಿನಲ್ಲೇ ಮನೆ ಕಟ್ಟಿಕೊಂಡು ತಾಯಿಯೊಂದಿಗೆ ವಾಸವಾಗಿದ್ದ. ಕರಿಕಲ್ಲಿಗೆ ಬಂದ ಒಂದೆರಡು ವರ್ಷದಲ್ಲಿ ಬಿಡುವಿಲ್ಲದ ದುಡಿತದಿಂದಲೋ, ಆಗಾಗ ಬಂದು ಹೋಗುತಿದ್ದ ಚಿಕ್ಕ ಪುಟ್ಟ ಕಾಯಿಲೆಗಳನ್ನು ನಿರ್ಲಕ್ಷಿಸಿದ್ದರಿಂದಲೋ ಒಂದು ದಿನ ಜ್ವರ ಎಂದು ಮಲಗಿದ್ದ ತಾಯಿ ಬೆಳಿಗ್ಗೆ ಏಳಲೇ ಇಲ್ಲಾ. ತಾಯಿ ಶಿವಮ್ಮ ಸತ್ತಾಗ ಮನೆಗೆ ಬಂದ ಮಾವ ಹೊರಗಿಂದಲೇ ಬಂದು ಹೊರಗಿಂದಲೇ ಹೋಗಿದ್ದ ತಾನು ಬಂದ ಕೆಲಸ ಮುಗಿಯಿತೆಂದು. ತಾಯಿ ತೀರಿ ಹೋದಾಗ ಸಾತಣ್ಣ ಬಾಯಿ ಬಿಟ್ಟು ಅಳದೇ ಇದ್ದರೂ ಮನಸ್ಸಲ್ಲೇ ಅತ್ತ ತನ್ನ ದುಃಖದಿಂದ ಇತರರಿಗೆ ನೋವಾಗ ಬಾರದೆಂದು. "ತಾಯಿ ನಮ್ಮ ಸಂತಿಗೆ ಇರ್ಲೆ ಎಂದೆ ಎಲ್ಲರಿಗೂ ಅನ್ನಿಸ್ತಿದ, ಆದ್ರೆ ಎಲ್ಲಾ ನಾವಂದ್ಕಂಡಗೆ ಆದ್ರೆ ಮನಸ್ರೆಲ್ಲಾ ದೇವರಾಗ್ ಬಿಡ್ತದ್ರೇನೋ" ಎಂದು ತನ್ನಷ್ಟಕ್ಕೆ ತಾನು ಸಮಾಧಾನ ತಂದು ಕೊಂಡಿದ್ದ. ತಾಯಿ ಸತ್ತ ಮೇಲೆ ಒಬ್ಬಂಟಿಯಾಗಿ, ತನ್ನ ಅಡಿಗೆಯನ್ನು ತಾನೇ ಮಾಡಿಕೊಂಡು ಮೂರ್ನಾಲ್ಕು ವರ್ಷ ಕಳೆದ. ಇವನ ಪಾಡನ್ನು ನೋಡಿದ ಹಿಲ್ಲೂರ ವೆಂಕಣ್ಣ ಅವನ ತಂಗಿ ಪಾರ್ವತಿಯ ಮಗಳು ತಿಮ್ಮಕ್ಕನನ್ನು ತಂದು ಸಾತಣ್ಣನಿಗೆ ಮದುವೆ ಮಾಡಿಸಿದ್ದ.
ಮದುವೆಗೆ ಕರೆಯಲು ಮಾವನ ಮನೆಗೆ ಹೋಗಿದ್ದನಾದರೂ ಅಲ್ಲೂ ಹನಿ ನೀರನ್ನೂ ಕುಡಿಯದೇ, ಮಾವನನ್ನೂ, ಅತ್ತೆಯನ್ನೂ ಮದುವೆಗೆ ಆಮಂತ್ರಿಸಿ ಬಂದಿದ್ದ. ಅದಾದ ನಂತರ ಅವರ ನಡುವೆ ಯಾವುದೇ ಸಂಪರ್ಕವಾಗಲೀ, ಒಡನಾಟವಾಗಲೀ ಇರಲಿಲ್ಲ. ಎಲ್ಲಾದರೂ ಒಬ್ಬರಿಗೊಬ್ಬರು ಎದುರು ಸಿಕ್ಕರೆ, "ಹಾಂ, ಹುಂ" ಎಂದಷ್ಟೇ ಹೇಳಿ ಮುಂದೆ ಹೋಗುತ್ತಿದ್ದರೇ ವಿನಃ ಬೇರೆ ಮಾತುಗಳಿರಲಿಲ್ಲ. ಸಾತಣ್ಣನ ಮದುವೆಯಾಗಿ ಆಗಲೇ ಐದಾರು ವರ್ಷಗಳಾಗಿ ಹೋಗಿವೆ. ಮದುವೆಯ ನಂತರ ಆಗೊಮ್ಮೆ, ಈಗೊಮ್ಮೆ ಯಾರಾದರೂ ಪರಿಚಯಸ್ಥರು ಸಿಕ್ಕಿ ಮಾವನ ಬಗ್ಗೆ ಹೇಳಿದರೆ ಕೇಳಿ ಹುಂ ಎಂದಷ್ಟೇ ಹೇಳುತಿದ್ದರೇ ವಿನಃ ಬೇರೇನು ಮಾತಾಡುತ್ತಿರಲಿಲ್ಲ. ಆದರೆ ಈಗ ಅದೇ ಮಾವ ತನ್ನ ಊರಿಗೆ ಬಂದಿದ್ದ, ಇಲ್ಲಿಯೇ ಒಂದು ರಾತ್ರಿ ಇದ್ದ, ತೊಂದರೆ ಇಲ್ಲ. ನನ್ನ ಮನೆಗೆ ಬಂದು ಉಣ್ಣುವುದು, ಉಳಿಯುವುದು ಬೇಡದಿದ್ದರೂ ಲಗ್ನ ಪತ್ರಿಕೆ ಕೊಟ್ಟು ಹಾಗೆ ಹೋದರೆ ಏನಾಗುತ್ತಿತ್ತು. ಆದರೆ ಹೀಗೆ ಬೇರೆಯವರ ಮನೆಗೆ ಬಂದು ತನಗೆ ಪತ್ರಿಕೆ ಕೊಡಲು ಹೇಳುವ ಅವಶ್ಯಕತೆಯಾದರೂ ಏನಿತ್ತು, ಮನೆಗೆ ಬಂದು ಕೊಡಬಹುದಾದ ಪತ್ರಿಕೆಯನ್ನ ನನಗೆ ಅವಮಾನ ಮಾಡಲೆಂದು ಬೇರೆಯವರ ಮನೆಯಲ್ಲಿ ಕೊಟ್ಟು ಹೋದನಲ್ಲ. ನಾವು ಬಡವರಿರಬಹುದು, ಆದರೆ ನಮ್ಮ ನಡುವಳಿಕೆ, ಗುಣಕ್ಕೆ ಬಡತನವಿಲ್ಲವಲ್ಲ. ಹೀಗೆ ಯಾರದೋ ಮನೆಯಲ್ಲಿ ಲಗ್ನ ಪತ್ರಿಕೆಯನ್ನು ಕೊಟ್ಟರೆ ಮದುವೆಗೆ ಯಾರಾದರೂ ಹೋಗುತ್ತಾರೆಯೇ? ಬಹುಷಃ ಮದುವೆಗೆ ಬರುವುದು ಬೇಡಾ ಅಂತಾನೇ ಹೀಗೆ ಕೊಟ್ಟಿರಬಹುದೇ? ಮದುವೆಗೆ ಬರಬೇಕಂತಿಲ್ಲ ಎನ್ನುವುದಾದರೆ ಪತ್ರಿಕೆಯ ಅವಶ್ಯಕತೆ ಏನಿತ್ತು? ಎಂದು ಯೋಚಿಸುತ್ತಾ ಹೊರಟ ಸಾತಣ್ಣನಿಗೆ ಸಂಜೆಯ ತೀರ್ಥ ಸೇವನೆಗೆ ಹೊರಟ ಶುಕ್ರು " ಏನ್ರಾ ಒಡೆಯಾ? ಇಷ್ಟೊತ್ತಿಗೆ ಎಲ್ಲಿಗೆ ಹೋತೇ ಇವ್ರಾ?" ಎಂದು ಕರೆದಾಗಲೇ ಆ ಯೋಚನೆಯಿಂದ ಹೊರಬಂದದ್ದು. "ಥೋ ಹಾಳಾದ್! ಏನೋ ವಿಚಾರ್ ಮಾಡ್ತೇ, ಮಾಡ್ತೇ ಮನೆ ಬಂದ್ ಹೋದದ್ದೇ ಗುತ್ತಾಗಲ ನೋಡ್ ಶುಕ್ರು" ಎಂದು ತಾನು ಯಾವುದೋ ವಿಚಾರದಲ್ಲಿ ಮಗ್ನನಾಗಿ ಮನೆ ದಾಟಿ ಬಂದದ್ದು ನೆನಪಾಗಿ ಮನೆಯತ್ತ ನಡೆದ.
ಮನೆಗೆ ಬಂದು ಹೆಂಡತಿಗೆ ತಾನು ತಂದ ಮೀನಿನ ಚೀಲ ಕೊಟ್ಟು, ಸಾಮಾನು ತಂದ ಚೀಲವನ್ನು ಮನೆಯ ಒಳಕೋಣೆಯಲ್ಲಿ ಇರಿಸಿ, ರಾಮಚಂದ್ರ ಕೊಟ್ಟ ಲಗ್ನ ಪತ್ರಿಕೆಯನ್ನು ಹೆಂಡತಿಗೆ ಕೊಡುತ್ತಾ ಮನಸ್ಸಲ್ಲಿ ನೋವಿದ್ದರೂ ತೋರ್ಪಡಿಸಿ ಕೊಳ್ಳದೇ ನಗುತ್ತಾ "ತಕಾ ಹಿಡಿ, ಪಾಯ್ಸಕೆ ಹೋಗಕ್ ತಕಾ" ಎಂದ. ಗಂಡನ ಮಾತಿಗೆ ತಿಮ್ಮಕ್ಕ ಸ್ವಲ್ಪ ಹುಸಿ ಮುನಿಸಿನಿಂದ " ಹೋಗ್ರೆ ನೀವ್, ನಾನೇನ್ ನಿಮ್ಮಂಗೆ ಎಲ್ಲಾರ್ದು ಮುದಿಕೆ ಹೋಗೆ ಪಾಯ್ಸಾ ಸುರ್ಕಂಡೆ ಬತ್ತೇ ಇರ್ತಿನೆ, ಊರಲ್ಲೇ ಮುದಿ ಆದ್ರೆ ಹೋಗುಲ್ಲಾ" ಎಂದು ಹೇಳುತ್ತಾ ಲಗ್ನ ಪತ್ರಿಕೆಯನ್ನು ನೋಡಿ "ಇದೇನಿದ ಇದ್ಕಿದ್ದಂಗೆ ನಿಮ್ಮ ಸಂಬಂಧದ ಮೆಲೆ ಪ್ರೀತಿ ಹುಟ್ಬಿಟ್ಟಿದ" ಎಂದಾಗ, ಅದರ ಬಗ್ಗೆ ಇನ್ನೇನು ಹೇಳದೇ " ಹಾಳಾದ್ ಸಖೆ, ಉಂದೆರಡ್ ಚಿಂಬ್ ಮಿಂದ್ಕಂಡೆ ಬತ್ತಿ" ಎಂದು ಹೇಳಿ ಮನೆಯ ಪಕ್ಕದಲ್ಲಿರಿಸಿ ನೀರಂಡೆಯತ್ತ ಹೊರಟರು ಸಾತಣ್ಣ, ಮೈಯನ್ನು ಮನಸ್ಸನ್ನು ಸ್ವಲ್ಪ ತಣ್ಣಗಾಗಿಸಲು.
--ಮಂಜು ಹಿಚ್ಕಡ್