Saturday, May 24, 2014

ನನ್ನ ಮೊದಲ ಕಂಪಾಸ್ ಬಾಕ್ಸ.

ಇತ್ತೀಚೆಗೆ ನಾಲ್ಕೈದು ತಿಂಗಳ ಹಿಂದೆ ನಾನು ನನ್ನ ಕಂಪ್ಯುಟರನಲ್ಲಿ ಏನೋ ಮಾಡುತ್ತಿರುವಾಗ ನನ್ನ ೩ ವರ್ಷದ ಮಗಳು ಬಂದು "ಪಪ್ಪಾ, ನನಗೆ ಇದೇ ತರ ಒಂದು ಕಂಪ್ಯುಟರ್ ಬೇಕಿತ್ತು" ಎಂದಳು. ನಾನು "ನಿನಗೆ ಈಗ ಯಾಕೆ, ಬೇಗ ದೊಡ್ಡವಳಾಗು, ದೊಡ್ಡವಳಾದ ಮೇಲೆ ತಂದು ಕೊಡುತ್ತೇನೆ" ಎಂದೆ. "ಇಲ್ಲಾ ನನಗೆ ಈಗಲೇ ಬೇಕು, ನಾನು ನಿನ್ನ ಹಾಗೆ ಟೈಪ್ ಮಾಡಬೇಕು, ಅದು ಪರದೆ ಮೇಲೆ ಬರುವುದನ್ನು ನೋಡಬೇಕು, ಅದಕ್ಕೆ ನನಗೆ ಒಂದು ಕಂಪ್ಯುಟರ್ ಬೇಕು" ಅಂದಳು. ನಾನು ಹಾಗೋ ಹೀಗೋ ಅವಳನ್ನು ಪುಸಲಾಯಿಸಿತ್ತಾ ಸ್ವಲ್ಪ ದಿನ ಕಾಲ ಕಳೆದೆ. ನನ್ನ ಮಗಳು ಬಿಡಬೇಕಲ್ಲ, ಒಮ್ಮೆ ಏನನ್ನಾದರೂ ಕೇಳಿ ಬಿಟ್ಟರೆ ಮುಗಿಯಿತು, ತಂದು ಕೊಡುವವರೆಗೂ ಅವಳಿಗೆ ಸಮಾಧಾನವಿಲ್ಲ. ಬಹುಷಃ ಎಲ್ಲಾ ಮಕ್ಕಳು ಹೀಗೆ ಇರಬೇಕೇನೋ. ಅವಳು ಹೀಗೆ ದಿನಾ ಕೇಳುತ್ತಿದ್ದರಿಂದ ಒಂದು ದಿನ ನಾನು ವ್ಯಾಪಾರಿ ಮಳಿಗೆಗೆ ಏನನ್ನೋ ತರಲು ಹೋದವನು ಅಲ್ಲಿ ಒಂದು ಚಿಕ್ಕ ಕಂಪ್ಯುಟರ್ ತರಹದ ಒಂದು ಆಟಿಕೆಯನ್ನು ನೋಡಿದೆ. ಅದು ಕಂಪ್ಯೂಟರ್ ತರಹನೇ ಇದ್ದು ಅದಕ್ಕೆ ಕೀಲಿ ಮಣೆ ಎಲ್ಲಾ ಇತ್ತು. ಅದೇ ಅವಳಿಗೆ ಸರಿಯಾದುದ್ದೆಂದು ತಂದು ಕೊಟ್ಟೆ. ಸ್ವಲ್ಪ ದಿನ ಖುಸಿಯಿಂದ ಆಟವಾಡಿದಳು, ಆಮೇಲೆ ದಿನ ಕಳೆದ ಮೇಲೆ ಅವಳಿಗೆ ಅದರಲ್ಲಿ ಆಸಕ್ತಿ ಕಡಿಮೆಯಾಯಿತು. ಆಮೇಲೆ ನನಗೆ ಇದು ಬೇಡ ಇದು ಸರಿ ಇಲ್ಲ, ನನಗೆ ಬೇರೇ ತರಹದ ಕಂಪ್ಯುಟರ್ ತಂದು ಕೊಡು ಎನ್ನಲು ಪ್ರಾರಂಭಿಸಿದಳು. ನನಗೆ ಅವಳ ಬೇಡಿಕೆಗಳನ್ನೆಲ್ಲ ಕೇಳಿದಾಗ ನನಗೆ ನಾನು ಚಿಕ್ಕವನಿದ್ದಾಗ ನಾನು ನನ್ನ ಅಪ್ಪನ ಹತ್ತಿರ ಕಂಪಾಸ್ ಬಾಕ್ಸ್ ಕೇಳಿ ಬೈಸಿಕೊಂಡದ್ದು ನೆನಪಾಯಿತು.

ಅದು ೧೯೮೮ - ೧೯೮೯ ನೇ ಇಸ್ವಿ, ನಾನಾಗ ನಮ್ಮೂರಿನ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ಒದುತಿದ್ದೆ. ಅಂದು ನಾವು ನಾಲ್ಕನೇ ತರಗತಿಯಲ್ಲಿ ರೇಖಾಗಣಿತವೇನು ಇರಲಿಲ್ಲ, ಅದೇನಿದ್ದರು ಐದನೇ ತರಗತಿಯಿಂದ ಮಾತ್ರ. ನಾಲ್ಕನೇ ತರಗತಿಗೆ ರೇಖಾಗಣಿತ ಇಲ್ಲದ ಕಾರಣ ನಮಗೆ ಕಂಪಾಸ್ ಬಾಕ್ಸನ ಅವಶ್ಯಕತೆ ಇಲ್ಲದಿದ್ದರೂ ಕೆಲವು ಹುಡುಗರು ಶಾಲೆಗೆ ಕಂಪಾಸ್ ಬಾಕ್ಸ್ ತೆಗೆದುಕೊಂಡು ಬರುತಿದ್ದರು. ಆಗ ನಟರಾಜ್ ಮತ್ತು ಕೆಮೆಲ್ ಬ್ರಾಂಡಿನ ಕಂಪಾಸ್ ಬಾಕ್ಸ್ ಪ್ರಚಲಿತದಲ್ಲಿತ್ತು. ಆಗ ಕಂಪಾಸ್ ಬಾಕ್ಸಗೆ ಹದಿನೈದೋ , ಇಪ್ಪತ್ತೋ ರೂಪಾಯಿ ಇತ್ತು. ನಮಗೆ ಆ ಕಾಲಕ್ಕೆ ಅದು ದೊಡ್ಡದಾದ ಮೊತ್ತವೇ. ಕೈಯಲ್ಲಿ ಐದೋ, ಹತ್ತೋ ಪೈಸೆ ಸಿಕ್ಕರೆ ಸಂತೋಷ ಪಡೋ ನಮಗೆ ಹದಿನೈದು-ಇಪ್ಪತ್ತು ರೂಪಾಯಿ ಅಂದರೆ ಅದೊಂತರಾ ದೊಡ್ಡ ಮೊತ್ತವೇ. ಆ ಕಾಲವೂ ಹಾಗೆ ಇತ್ತು ಬಿಡಿ. ಆಗ ಹದಿನೈದು ಇಪ್ಪತ್ತು ರೂಪಾಯಿಗೆ ಒಂದು ದಿನದ ಸಂಸಾರ ಸಾಗಿಸಬಹುದಿತ್ತು.

ನನಗೆ ಆಗ ಕೆಲವು ಮಕ್ಕಳು ತರುತ್ತಿದ್ದ ಕಂಪಾಸ್ ಬಾಕ್ಸ್ ನೋಡಿ, ನನಗು ಅದರಲ್ಲಿ ಆಸಕ್ತಿ ಮೂಡ ತೊಡಗಿತು. ನನಗು ಒಂದು ಕಂಪಾಸ್ ಬಾಕ್ಸ್ ಬೇಕು ಎನ್ನುವಷ್ಟರ ಮಟ್ಟಿಗೆ ಅನಿಸಿಬಿಟ್ಟಿತು. ಆದರೆ ಅದನ್ನು ಮನೆಯಲ್ಲಿ ಹೇಗೆ ಹೇಳಲಿ ಎನ್ನುವುದೇ ಸಮಸ್ಯೆ. ನಮ್ಮ ತಂದೆಯವರಿಗೆ ನಾವೇನಾದರೂ ಅವಶ್ಯಕತೆಯಿಲ್ಲದ್ದನ್ನು ಕೇಳಿ ಬಿಟ್ಟರೆ ಕೋಪ ಉಕ್ಕೇರುತಿತ್ತು. ಹಾಗಾಗಿ ಕೇಳಲು ಹಿಂಜರಿಕೆ. ಹೇಗೋ ನನ್ನ ಆಸೆಗಳನ್ನು ಸ್ವಲ್ಪ ದಿನ ಹಾಗೆ ತಡೆಹಿಡಿದುಕೊಂಡು ಸ್ವಲ್ಪ ದಿನ ಕಳೆದೆ. ಶಾಲೆಯಲ್ಲಿ ಬೇರೇ ನನ್ನ ಸಾಧನೆಗಳು ಕೂಡ ಹೇಳಿಕೊಳ್ಳುವಂತಿರಲಿಲ್ಲ. ಹೇಗೋ ಒಂದು ತರಗತಿಯಿಂದ ಇನ್ನೊಂದು ತರಗತಿಗೆ ತೇರ್ಗಡೆಯಾಗುತ್ತಾ ಬಂದು ನಾಲ್ಕನೇ ತರಗತಿಯವರೆಗೆ ಬಂದು ತಲುಪಿದ್ದಷ್ಟೇ ನನ್ನ ಅಂದಿನ ಸಾಧನೆ. ನನಗೆ ಶಾಲೆಗೆ ಇತರ ಮಕ್ಕಳು ತರುವ ಕಂಪಾಸ್ ಬಾಕ್ಸನ್ನು ದಿನಾ ನೋಡಿದಾಗ ಸ್ವಲ್ಪ ದಿನದವರೆಗೆ ಮನಸ್ಸಲ್ಲೇ ಅದುಮಿಟ್ಟುಕೊಂಡು ಬಂದ ಆಸೆಯನ್ನು ತುಂಬಾ ದಿನ ತಡೆ ಹಿಡಿಯಲಾರದೇ ಒಂದು ದಿನ ಅಮ್ಮನಿಗೆ ಹೇಳಿಯೇ ಬಿಟ್ಟೆ. ನಮ್ಮ ಅಮ್ಮನಿಗೆ ನಾನು ಮುದ್ದಿನ ಮಗನಾಗಿದ್ದರಿಂದ ಅಮ್ಮ ತಡಮಾಡದೇ ತಂದೆಗೆ ನನ್ನ ಪರವಾಗಿ ಹೇಳಿ ಬಿಟ್ಟರು.

ನಮ್ಮ ತಂದೆಗೆ ಅದನ್ನು ಕೇಳಿದ ತಕ್ಷಣ ಒಮ್ಮೇಲೆ ಕೋಪ ಬಂತು, ಕೂಡಲೇ ನಮ್ಮ ಮನೆಯಿಂದ ಹೊರಟು ಅಕ್ಕ ಪಕ್ಕದ ನನ್ನ ಓರಗೆಯ ಹುಡುಗರ ಮನೆಗೆ ಹೋಗಿ, ಕಂಪಾಸ್ ಬಾಕ್ಸ ತರಲು ಶಾಲೆಯಲ್ಲಿ ಹೇಳಿದ್ದಾರೆಯೇ ಎಂದು ವಿಚಾರಿಸಿ ಮನೆಗೆ ಬಂದರು. ಹಾಗೆ ಮಾರನೆಯ ದಿನ ಶಾಲೆಗೆ ಬಂದು ಶಾಲೆಯಲ್ಲಿಯೂ ವಿಚಾರಿಸಿದರು. ಅವರಿಂದ ನಾಲ್ಕನೇ ತರಗತಿಗೆ ಕಂಪಾಸ್ ಬಾಕ್ಸನ ಅವಶ್ಯಕತೆಯಿಲ್ಲ ಎಂದು ತಿಳಿದ ಮೇಲೆ ಅವರ ಕೋಪ ನೆತ್ತಿಗೇರಿತ್ತು. ಶಾಲೆಯಿಂದ ಮನೆಗೆ ಬಂದವರು ನಾನು ಬರುವುದನ್ನೇ ಕಾದು ಕುಳಿತರು. ನಾನು ಮನೆಯೊಳಗೆ ಬರುತ್ತಿದ್ದಂತೆ ಮೈ ಮೇಲೆ ಬಾಸುಂಡೆ ಮೂಡುವಂತೆ ಒಂದೆರಡು ಏಟು ಕೊಟ್ಟರು. "ಮುಂದಿನ ತರಗತಿಗೆ ಬೇಕಾಗುವ ಕಂಪಾಸ್ ಬಾಕ್ಸನ್ನು ಈಗಲೇ ತೆಗೆದುಕೊಂಡು ಹೋಗಿ ಏನು ಶೋಕಿ ಮಾಡಿತ್ತಿಯಾ? ಈಗಲೇ ಓದುವುದನ್ನು ಬಿಟ್ಟು ಶೋಕಿ ಮಾಡುವುದನ್ನು ಕಲಿತಿದ್ದಿಯಾ ಹೇಗೆ?" ಹಾಗೆ ಅದು ಇದು ಅನ್ನುತ್ತಾ ರಾತ್ರಿ ನಾನು ಮಲಗುವವರೆಗೂ ಬಯ್ಯುತ್ತಲೇ ಇದ್ದರು. ಅಂದಿನಿಂದ ನಾನು ಏನೇ ಬೇಕು ಎಂದು ಕೇಳಲಿ ಅದನ್ನು ನಂಬದೇ, ಅಕ್ಕ ಪಕ್ಕದವರನ್ನು ವಿಚಾರಿಸಿಯೇ ತಂದು ಕೊಡುತಿದ್ದರು. ನನಗೆ ಅವಶ್ಯಕತೆಯಿದೆ ಎಂದು ತಿಳಿದು ಬಂದಲ್ಲಿ ಅವರಿಗೆ ಎಷ್ಟೇ ಕಷ್ಟವಿರಲಿ ತಂದು ಕೊಡುತಿದ್ದರು. ಹಾಗೆ ನಾನು ಐದನೇ ತರಗತಿ ಪ್ರವೇಸಿಸುತ್ತಿದ್ದಂತೆ, ನಾನು ಕೇಳದಿದ್ದರೂ ಅವರೇ ಹೋಗಿ ಕಂಪಾಸ್ ಬಾಕ್ಸ್ ತಂದು ಕೊಟ್ಟಿದ್ದರು. ಆ ಕಂಪಾಸ್ ಬಾಕ್ಸ ನಾನು ಹತ್ತನೇ ತರಗತಿ ಮುಗಿಯುವವರೆಗೂ ನನ್ನ ಬಳಿ ಜೋಪಾನವಾಗೇ ಇತ್ತು.

ಈಗಲು ನಾನೇನಾದರು ಅವಶ್ಯಕತೆಯಿಲ್ಲದ ವಸ್ತುವನ್ನೇನಾದರು ಕೊಂಡರೆ, ನೀನಗೇಕಪ್ಪಾ ಬೇಕಿತ್ತು ಅನ್ನುತ್ತಾ , "ನೀನು ಬೀಡು ಶೋಕಿ ಮನುಷ್ಯ, ಆಗಲೇ ಕಂಪಾಸ್ ಬಾಕ್ಸ್ ಬೇಕು ಅಂದು ಕೇಳಿದವನು, ಈಗ ಕಾಸು ಓಡಾಡುವಾಗ ಬಿಡುತ್ತಿಯಾ?" ಅಂತಾ ಕೇಳುತ್ತಿರುತ್ತಾರೆ.

ಈಗಂತು ನಾನು ಮನೆಯಿಂದ ದೂರವಿದ್ದೇನೇ,ಹಾಗಾಗಿ ಶೋಕಿ ಮಾಡಿದರೂ ಅಪ್ಪನಿಂದ ಬೈಸಿ ಕೊಳ್ಳುವುದು ತಪ್ಪ ಬಹುದು, ಆದರೆ ಕಾಡುವ ನೆನಪುಗಳಿಂದ ತಪ್ಪಿಸಿಕೊಳ್ಳಲು ಸಾದ್ಯವೇ?

ಇಂದು ಬೀಡಿ ನಾವು ನಮ್ಮ ಮಕ್ಕಳಿಗೆ ಅವರೇನು ಕೇಳುತ್ತಾರೆ, ಅದರ ಅವಶ್ಯಕತೆ ಅವರಿಗೆ ಇದೆಯೇ ಎನ್ನುವುದನ್ನು ನೋಡುವುದಾಗಲಿ, ವಿಚಾರಿಸುವುದಾಗಲಿ ಮಾಡದೇ, ಅವರು ಕೇಳಿದ್ದನ್ನೆಲ್ಲ ತಂದು ಕೊಡುತ್ತೇವೆ. ಇಂದು ನಮ್ಮ ಕೈಯಲ್ಲಿ ಕಾಸು ಇದೆಯೇ ಹೊರತು, ಹಿಂದಿನವರಂತೆ ಅದರ ಬೆಲೆ ತಿಳಿದಿಲ್ಲ.

--ಮಂಜು ಹಿಚ್ಕಡ್

Wednesday, May 21, 2014

ರೇಷ್ಮೆ ಸೀರೆ

ಗೊಂಬೆಗಳಿಗೆ ತೊಡಿಸಿದ
ಆ ಬಣ್ಣ ಬಣ್ಣದ
ರೇಷ್ಮೆ ಸೀರೆಗಳು
ಚಂದವುಂಟೆಂದು ಉದ್ಘರಿಸಿ
ಒಳನಡೆದಳು ನನ್ನಾಕೆ!

ಓಳಹೊಕ್ಕು ನೋಡಿದಾಗಷ್ಟೇ
ಆಕೆಗೆ ತಿಳಿದದ್ದು
ಚೆನ್ನಗಿರುವ ಸೀರೆಗಳನ್ನಷ್ಟೇ
ಆರಿಸಿ ಆರಿಸಿ
ಆ ಗೊಂಬೆಗಳಿಗೆ
ತೊಡಿಸಿಹರೆಂದು!

--ಮಂಜು ಹಿಚ್ಕಡ್

Monday, May 19, 2014

ಹುಟ್ಟಿನಲ್ಲೇನುಂಟು?

ಹುಟ್ಟಿನಲ್ಲೇನುಂಟೋ ಭೂಪ
ಹುಟ್ಟಿದ ಮಾತ್ರಕ್ಕೆ
ಈ ಮಾನವ ರೂಪ,
ಎಲ್ಲಿ ಹುಟ್ಟಿದರೇನು?
ಹೇಗೆ ಹುಟ್ಟಿದರೇನು?
ಹುಟ್ಟಿ ಮಣ್ಣಾಗುವವರೆ
ಏನು ಸಾಧಿಸದಿದ್ದರೆ
ಹುಟ್ಟಿ ನೀ ಫಲವೇನು?

--ಮಂಜು ಹಿಚ್ಕಡ್

Wednesday, May 14, 2014

ಇಂದಿನ ಸಂಸಾರ

ಆವಳಲ್ಲಿ, ನಾನಿಲ್ಲಿ
ನಾನಲ್ಲಿ ಹೋದರೆ,
ನನಗಿದು ದೂರ.
ಅವಳಿಲ್ಲಿ ಬಂದರೆ,
ಆಕೆಗದು ಬಲು ದೂರ.
ಭಾವವೋ, ಅಭಾವವೋ,
ದುಡಿದು ಗಮ್ಯ ಸೇರುವ ಆತುರ
ಒಟ್ಟಿನಲಿ ಇದು ಸಾರವಿಲ್ಲದ ಸಂ-ಸಾರ...

--ಮಂಜು ಹಿಚ್ಕಡ್

Monday, May 12, 2014

ಇಂದು ಸಂಬಂಧಗಳೆಂದರೆ- ಅಂಕಲ್ ಗಳು ಮತ್ತು ಆಂಟಿಯರು ಮಾತ್ರವೇ?

ಸಮಯ ಆಗಲೇ ರಾತ್ರಿ ಎಂಟು ದಾಟಿತ್ತು, ಒಂದು ಗಂಟೆಯ ಹಿಂದೆ ಹೋದ ವಿದ್ಯುತ್ ಇನ್ನು ಪತ್ತೆಯೇ ಇಲ್ಲ. ಅಪರೂಪಕ್ಕೊಮ್ಮೆ ಅತಿಥಿಗಳಂತೆ ಬರುವ ಮಳೆ, ಕಳೆದ ಎರಡು ಮೂರು ದಿನಗಳಿಂದ ರಾತ್ರಿಯೊಂದಿಗೆ ತಾನು ಬರುತಿತ್ತು. ಇಂದಂತೂ ತುಂಭಾ ಜೋರಾಗಿ ಬರುತಿತ್ತು. ಗುಡುಗು ಸಿಡಿಲುಗಳೇನು? ಮಿಂಚುಗಳ ಆರ್ಭಟಗಳೇನು? ಒಂದು ಗಂಟೆಯ ಹಿಂದೆ ಕಚ್ಚಿದ್ದ ಮೊಂಬತ್ತಿ ಆಗಲೇ ತಳ ಸೇರುವುದರಲ್ಲಿತ್ತು. ಹೊರಗಡೆ ಚುಮು ಚುಮು ಚಳಿಯಿದ್ದರೂ, ಬೇಸಿಗೆಯ ಕಡೆಯದಿನಗಳಾಗಿದ್ದರಿಂದಲೋ ಏನೋ ಒಳಗಡೆ ಸಖೆಯಿನ್ನು ಕಡಿಮೆಯಾಗಿರಲಿಲ್ಲ. ಮನೆಯಲ್ಲಿ ಒಬ್ಬಂಟಿ ಬೇರೆ. ಹೆಂಡತಿ ಮಕ್ಕಳನ್ನು ಊರಲ್ಲಿ ಬಿಟ್ಟು ಬಂದು ಆಗಲೇ ಒಂದು ವಾರ ಕಳೆದಿತ್ತು. ಹಾಗಾಗಿ ಮನೆಯಲ್ಲಿ ಏನೋ ಒಂಥರಾ ನೀರವ ನಿಶ್ಯಬ್ಧ. ಶನಿವಾರ ಬೇರೇ ಆಗಿದ್ದರಿಂದ ಇನ್ನೂ ಮನೆಯಲ್ಲೆ ಇದ್ದೆ. ಹೊರಗೆ ಗುಡುಗು ಮಳೆಯ ಸಪ್ಪಳ ಬಿಟ್ಟರೆ ಎಲ್ಲವೂ ಮೌನ. ಯಾರಿಗಾದರೂ ಕರೆ ಮಾಡೋಣ ಅಂತ ಮೊಬೈಲ್ ನೋಡಿದರೆ, ಮೊಬೈಲ್ ಬ್ಯಾಟರಿಯೂ ನಾನು ಉರಿಸುತ್ತಿದ್ದ ಮೊಂಬತ್ತಿಯಂತಾಗಿತ್ತು. ವಿದ್ಯುತ್ ಬರುವವರೆಗಾದರೂ ತುರ್ತು ಕರೆಗಳು ಬಂದರೆ, ಚಾರ್ಜ ಇರಲಿ ಎಂದು ಹಾಗೆಯೇ ಇಟ್ಟೆ. ಊಟನಾದರೂ ಮಾಡಿ ಬರೋಣವೆಂದರೆ ಹೊರಗಡೆ ಮಳೆ. ಛತ್ರಿ ಬೇರೆ ಇರಲಿಲ್ಲ. ನೋಡೋಣ ಅಂತ ಹಾಗೆ ಕುಳಿತೆ.
ಅಷ್ಟರಲ್ಲೇ ಯಾರೋ ಕದ ಬಡಿದ ಸದ್ದು. ಅದು ಹೊರಗಡೆಯ ಗುಡುಗಿನ ಶಭ್ದಕ್ಕಿಂತಲೂ ಜೋರಾಗಿತ್ತು. ಈ ಮಳೆಯಲ್ಲಿ ಯಾರಪ್ಪಾ ಎಂದು ಹೋಗಿ ಸಿಟ್ಟಿನಿಂದ ಕದ ತೆರೆದೆ. ಅಲ್ಲಿಯೇ ನಿಂತಿದ್ದ ನಮ್ಮ ಕೆಳ ಮಹಡಿಯ ಹುಡುಗ. ಅಂಕಲ್, 'ಕರೆಂಟ್ ಬಿಲ್' ಎಂದು ಕೊಟ್ಟು ನಡೆದ. ಸಿಟ್ಟು ಇನ್ನೂ ಜಾಸ್ತಿಯಾಯಿತು. ದಿನಕ್ಕೆ ಮೂರು ನಾಲ್ಕು ತಾಸು ಕರೆಂಟ್ ಇಲ್ಲದಿದ್ದರೂ, ತಿಂಗಳಿಗೊಮ್ಮೆ ಮಾತ್ರ ಕರೆಂಟ್ ಬಿಲ್ ಮಾತ್ರ ತಪ್ಪಲ್ಲ. ಬಿಲ್ ನೋಡಿದೆ ೯೫೨ ರೂಪಾಯಿ. ಅಭ್ಭಾ! ಇಷ್ಟೊಂದಾ ಅನ್ನಿಸಿತು. ಈಗಿರುವ ಸ್ಥಿತಿಯಲ್ಲಿ ಇದಕ್ಕಿಂತ ಕಡಿಮೆ ಉಳಿಸಲು ಸಾಧ್ಯವಿಲ್ಲ ಅನ್ನಿಸಿತು. ಹೇಗೂ ವಿದ್ಯುತ್ ಕಂಪನಿಯವರೇ ದಿನಕ್ಕೆರಡು ಬಾರಿ ವಿದ್ಯುತ್ ತೆಗೆದು ಉಳಿಸುತ್ತಾರಲ್ಲಾ ಎಂದು ಸಮಾಧಾನ ಪಡೋಣ ಎಂದರೆ, ಆ ಹುಡುಗ ಅಂಕಲ್ ಎಂದು ಕರೆದಿದ್ದು ಹಾಗೆ ಕಿವಿಯಲ್ಲಿ ಕೊರೆಯಹತ್ತಿತು.
ಬೆಂಗಳೂರಲ್ಲಿ ಇದು ಸಾಮಾನ್ಯವಲ್ಲವೇ? ಹುಡುಗ ಮದುವೆಯಾದರೆ ಅಂಕಲ್, ಹುಡುಗಿ ಮದುವೆಯಾದರೆ ಆಂಟಿ. ಅವರ ವಯಸ್ಸಿಗಿಂತ ಅವರ ಮದುವೆಯ ಆದಾರದ ಮೇಲೆ ಕರೆಯುವುದು ಇಲ್ಲಿಯವಾಡಿಕೆಯಲ್ಲವೇ? ನನಗಿಂತ ೧೦ ವರ್ಷ ದೊಡ್ಡವಳಾದ ಅವಳಮ್ಮನೇ, ನನಗಿಂತ ೫ ವರ್ಷ ಚಿಕ್ಕವಳಾದ ನನ್ನ ಹೆಂಡತಿಯನ್ನು ಆಂಟಿ ಎಂದು ಕರೆಯುವಾಗ, ಈ ಹುಡುಗ ನನ್ನನ್ನು ಅಂಕಲ್ ಎಂದಿದ್ದರಲ್ಲಿ ತಪ್ಪಿಲ್ಲ ಎನ್ನಿಸಿತು.
ನಾವು ಆಗಿನ್ನೂ ಐದಾರು ವರ್ಷದ ಎಳೆ ಹುಡುಗರು, ರಜೆ ಬಿದ್ದಾಗ ಅಮ್ಮನೊಡನೆ ಅವಳ ತವರೂರಿಗೆ ಹೋಗುತ್ತಿದ್ದೆವು. ಅಮ್ಮನ ತವರು ಮನೆ ಬಸ್ ನಿಲ್ದಾಣದಿಂದ ಒಂದರ್ದ್ ಕಿಲೋಮೀಟರ್ ದೂರದಲ್ಲಿತ್ತು. ಬಸ್ ಇಳಿದು ನಡದೆ ಹೋಗಬೇಕಿತ್ತು. ಹಾಗೆ ಹೋಗುವಾಗ ನಮ್ಮ ಅಮ್ಮನಿಗೆ ಪರಿಚಯದವರು ಯಾರದರೂ ಸಿಕ್ಕಲ್ಲಿ, ಏನಕ್ಕ ಒಬ್ಬಳೇ ಬಂದಿದ್ದಿಯಾ ಭಾವ ಬರಲಿಲ್ಲವೇ ಎಂದು ಕೇಳುತಿದ್ದರು. ನಾನೊಮ್ಮೆ ಅಮ್ಮನನ್ನ್ ಅವರೆಲ್ಲ ಯಾರು ಎಂದು ಕೇಳಿದಾಗ, ಅಮ್ಮ ಅವರೆಲ್ಲ ನನ್ನ ಮಾವಂದಿರೆಂದು ಉತ್ತರಿಸಿದ್ದಳು. ಆಗ ನನಗನ್ನಿಸುತಿತ್ತು ನನಗೆ ಇಷ್ಟೊಂದು ಮಾವಂದಿರಿದ್ದಾರ ಅಂತ. ಅದು ಅಲ್ಲಿಯ ವಾಡಿಕೆ, ಆ ಊರಿನ ಹೆಣ್ಣನ್ನು ಮದುವೆಯಾದವರೆಲ್ಲರೂ ಅವರಿಗೆ ಭಾವಂದಿರೋ, ಇಲ್ಲಾ ಅಳಿಯಂದಿರೋ ಆಗಿರುತಿದ್ದರು. ಅಲ್ಲಿಂದ ಮದುವೆಯಾಗಿ, ತಮ್ಮ ಮಕ್ಕಳೊಂದಿಗೆ ತವರಿಗೆ ಬರುವಾಗ, ಪರಿಚಿತರು ಸಿಕ್ಕಲ್ಲಿ ತಮ್ಮ ಮಕ್ಕಳಿಗೆ, ಆ ಮಾವ, ಈ ಮಾವ ಅಂತ ಪರಿಚಯಿಸುತಿದ್ದರೂ. ಇಂದಿಗೂ ಅದು ಕೆಲವು ಹಳ್ಳಿಗಳಲ್ಲಿ ಆ ರೀತಿಯ ಸಂಪ್ರದಾಯವಿದೆ. ನಮ್ಮ ಊರಲ್ಲೂ ಅಷ್ಟೆ, ನಮಗಿಂತ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರನ್ನು ಅಣ್ಣ ಅಂತಲೋ, ನಮ್ಮ ತಂದೆಯ ಸಮಾನ ವಯಸ್ಕರಾಗಿದ್ದಲ್ಲಿ ಹೆಸರಿನೊಂದಿಗೆ ಅಪ್ಪ ಸೇರಿಸಿ (ಉದಾಹರಣೆಗೆ ಹೆಸರು ಉದಯ ಎಂದಿದ್ದರೆ, ಉದಯಪ್ಪ ಅಂತ) ಕರೆಯುತಿದ್ದೆವು. ಇನ್ನೂ ತುಂಭಾ ಹಿರೀಯರಾಗಿದ್ದಲ್ಲಿ ಗಂಡಾದರೆ ಅಜ್ಜಾ ಅಂತಲೋ, ಹೆಣ್ಣಾಗಿದ್ದರೆ ಅಜ್ಜಿ ಅಂತಲೋ ಕರೆಯುತಿದ್ದೆವು. ನಮಗಿಂತ ಚಿಕ್ಕವರಾಗಿದ್ದಲ್ಲಿ, ಇಲ್ಲವೇ ಸಮಾನ ವಯಸ್ಕರಾಗಿದ್ದಲ್ಲಿ ಮಾತ್ರ ನಾವು ಹೆಸರಿಡಿದು ಕರೆಯುತಿದ್ದೆವು. ಅದು ಇಂದಿಗೂ ವಾಡಿಕೆಯಲ್ಲಿದೆ. ಏಕೆಂದರೆ ಹಿರೀಯರು ತಮ್ಮ ಮಕ್ಕಳನ್ನ ಆ ರೀತಿ ಬೆಳೆಸಿದ್ದಾರೆ. ಗುರು ಹಿರಿಯರಿಗೆ ಗೌರವ ಕೊಡುವುದನ್ನು ಹೇಳಿ ಕಲಿಸಿದ್ದಾರೆ. 
ಆದರೆ ಬೆಂಗಳೂರಲ್ಲಿ ಹಾಗಲ್ಲವಲ್ಲ. ಮಕ್ಕಳಿಗೆ ಇವೆಲ್ಲ ಹೇಳಿಕೊಡಲು ತಂದೆ ತಾಯಂದಿರು ಮನೆಯಲ್ಲಿದ್ದರೆ ತಾನೆ? ದಿನಾ ಬೆಳಿಗ್ಗೆ ಮಕ್ಕಳು ಏಳುವ ಮೊದಲೆ ಹೋಗಿ ರಾತ್ರಿ ಮಕ್ಕಳು ಮಲಗಿದ ಮೇಲೆ ಮನೆ ಸೇರಿದರೆ ಯಾವಾಗ ಮಕ್ಕಳಿಗೆ ಇವೆಲ್ಲ ಹೇಳಿ ಕೊಡುವುದು. ಹಾಗಾಗಿ ಮಕ್ಕಳಿಗೆ ಅಪ್ಪ-ಅಮ್ಮಂದಿರನ್ನು ಬಿಟ್ಟರೆ ಉಳಿದವರೆಲ್ಲರೂ ಅಂಕಲ್ - ಆಂಟಿಯರೆ.
ಇನ್ನೂ ಸಂಬಂಧಗಳ ಬಗ್ಗೆ ಹೇಳುವುದಾದರೆ. ಅಂದು ಅವಿಭಕ್ತ ಕುಟುಂಬಗಳಿದ್ದವು. ಮನೆಯಲ್ಲಿ ಅಪ್ಪ ಅಮ್ಮಂದಿರ ಜೊತೆಯಲ್ಲಿ ಅಜ್ಜ-ಅಜ್ಜಿಯರು, ದೊಡ್ಡಪ್ಪ-ದೊಡ್ಡಮ್ಮಂದಿರು, ಚಿಕ್ಕಪ್ಪ-ಚಿಕ್ಕಮ್ಮಂದಿರು, ಅವರೆಲ್ಲರ ಮಕ್ಕಳು ಒಟ್ಟಿಗೆ ಇರುತ್ತಿದ್ದರು. ಇನ್ನೂ ಅಪ್ಪನಿಗೆ ಅಕ್ಕ-ತಂಗಿಯರಿದ್ದರೆ ಅವರು ಆಗಾಗ ಬಂದು ಹೋಗುತಿದ್ದರು. ತಾಯಿಯ ತವರು ಮನೆಗೆ ಹೋದಲ್ಲಿ ಮಾವಂದಿರು, ಅತ್ತೆಯರು, ದೊಡ್ಡಮ್ಮ, ಚಿಕ್ಕಮ್ಮಂದಿರು ಇರುತಿದ್ದರು. ಹೀಗಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೆ ಸಂಬಂಧಗಳ ಪರಿಚಯವಿರುತಿತ್ತು. ಅತ್ತೆ ಅಂದರೆ ಯಾರು? ಚಿಕ್ಕಮ್ಮ ಅಂದರೆ ಯಾರು? ದೊಡ್ಡಪ್ಪ ಅಂದರೆ ಯಾರು? ಎಲ್ಲವು ತಿಳಿದಿರುತಿತ್ತು. ಆದರೆ ಇಂದು ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ, ಸಂಸಾರ ಎಂದರೆ ಗಂಡ-ಹೆಂಡತಿ, ಅವರ ಮಗು ಎಂದಾದ ಮೇಲೆ ಮಕ್ಕಳಿಗೆ ಅವೆಲ್ಲ ಹೇಗೆ ತಿಳಿಯಬೇಕು (ಈಗಿಗ ಒಂದೇ ಮಗು ಸಾಮಾನ್ಯವಾಗಿದ್ದುದರಿಂದ, ಮಕ್ಕಳು ಎನ್ನುವುದಕ್ಕಿಂತ ಮಗು ಎಂದರೆ ಸೂಕ್ತ). ಅದೂ ಬೆಂಗಳೂರಿನಂತ ಸಹರದಲ್ಲಿ ಇನ್ನೂ ಕಷ್ಟ. ಅಪ್ಪ ಅಮ್ಮಂದಿರು ಮಕ್ಕಳೊಂದಿಗೆ ಮನೆಯಲ್ಲಿರುವುದು ರಜಾದಿನಗಳಲ್ಲಿ ಮಾತ್ರ. ಇನ್ನು ರಜಾ ದಿನಗಳಲ್ಲಿ ಸಮಯವೆಲ್ಲಾ ಮನೆಕೆಲಸಕ್ಕೆ ವಿನಿಯೋಗವಾಗುವಾಗ ಮಕ್ಕಳಿಗೆ ಹೇಳಿಕೊಡುವುದು ಯಾವಾಗ? ತಂದೆ ತಾಯಿಯರೇ ಮಕ್ಕಳಿಗೆ ಸಂಬಂಧಗಳ ಹೇಳಿಕೊಡದಿದ್ದ ಮೇಲೆ, ಇವನ್ನೆಲ್ಲ ಪ್ಲೇ ಹೋಮ್ ಗಳಾಗಲೇ, ಬೇಬಿ ಸಿಟ್ಟರ್ ಗಳಾಗಲಿ ಹೇಳಿಕೊಡುತ್ತವೆಯೇ? ಹಾಗಾಗಿ ಇಂದಿನ ಮಕ್ಕಳಿಗೆ ತಂದೆ ತಾಯಿರನ್ನು ಬಿಟ್ಟರೆ ಉಳಿದವರೆಲ್ಲ ಅಂಕಲ್-ಆಂಟಿಯರೇ.
--ಮಂಜು ಹಿಚ್ಕಡ್