ಕಳೆದ ಬಾರಿ ದೀಪಾವಳಿಗೆ ಊರಿಗೆ ಹೋಗಿದ್ದಾಗ ನಮ್ಮ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ಅದು ಇದು ಮಾತನ್ನಾಡುತ್ತಾ ಕುಳಿತಿದ್ದಾಗ ಇಂಟರ್ನೆಟ್ನ ವಿಷಯ ಬಂತು. ಅಷ್ಟೊತ್ತಿಗಾಗಲೇ ಒಬ್ಬ ಬುದ್ದಿವಂತನ ಆಗಮನವಾಯಿತು. ತಾನು ಕಂಡಿದ್ದೇ ನಿಜ ಎಂದು ಸಾಧಿಸುವ ಜಿಜ್ನಾಸು ಆತ. ಆತ ನನಗೇನು ಅಪರಿಚಿತ ವ್ಯಕ್ತಿ ಏನಲ್ಲ, ಹಾಗಂತ ತುಂಭಾ ಬೇಕಾದಷ್ಟು ಪರಿಚಿತನಂತು ಅಲ್ಲ. ವಯಸ್ಸಿನಿಂದಲೂ ನನಗಿಂತ ಹದಿನೈದು ಇಪ್ಪತ್ತು ವರ್ಷ ದೊಡ್ಡವನು. ಮಕ್ಕಳೆಲ್ಲ ಆಗಲೇ ಕಾಲೇಜಿನಲ್ಲಿ ಒದುತ್ತಿದ್ದರು. ಆತ ನನಗೆ ಸ್ವಲ್ಪ ಮಟ್ಟಿಗೆ ಪರಿಚಿತನಾದ್ದರಿಂದ ಮತ್ತೆ ಇಂಟರ್ನೆಟ್ ಬಗ್ಗೆ ಮಾತು ಮುಂದುವರೆಸಲು ಮುಂದಾದೆ. ಅಷ್ಟರಲ್ಲೇ ಆ ವ್ಯಕ್ತಿ ನನ್ನನ್ನು ತಡೆದು, "ಅಲ್ಲಾ, ಇಂಟರ್ನೆಟ್ ಅಲ್ಲಿ ಏನಿರುತ್ತೆ? ಅದೊಂತರಹ ಹಳಸಿದ ಅನ್ನದ ತರಹ. ಎಲ್ಲರೂ ಓದಿ, ನೋಡಿ ಬಿಟ್ಟಿರುವುದೇ ಅಲ್ಲಿರುವುದು, ಅದರಲ್ಲಿ ಹೊಸದೇನು ಇರುವುದಿಲ್ಲ, ಅದರಲ್ಲಿರುವುದೆಲ್ಲ ಹಳಯದೇ" ಎಂದು ಬಿಟ್ಟ. ನನಗೆ ಆತನ ಮಾತು ಸಹ್ಯವಾಗದೇ, ಚಿಕ್ಕ ಧ್ವನಿಯಲ್ಲಿ ಆತನನ್ನು ಕೇಳಿದೆ "ನಾವು ನಮ್ಮ ಮಕ್ಕಳಿಗೆ ಕೊಡುವ ಶಿಕ್ಷಣ? ಅದು ಹಳಸಿದ್ದಲ್ಲವೇನು?" ಎಂದು. ಆತನಲ್ಲಿ ಉತ್ತರವಿರಲಿಲ್ಲ. ನನ್ನ ಮಾತು ಕೇಳಿಸಿಕೊಂಡ ನನ್ನ ಪರಿಚಿತರ ಮನೆಯಾಕೆಗೆ ನನ್ನ ಮನೆಯಾಕೆಗೆ ಅರ್ಥವಾಗಿ, ನಕ್ಕು ಚಹಾಮಾಡುವ ನೆಪದಿಂದ ಒಳಗೆ ಹೋದಳು.
ಅದೊಂದು ಚಿಕ್ಕ ಪ್ರಶ್ನೆಯಾದರೂ, ನನ್ನ ಮನದಾಳದಲ್ಲಿ ಹೊಕ್ಕು ಬಹಳದಿನಗಳಿಂದ ಕೊರೆಯುತಿತ್ತು. ಇಂಟರ್ನೆಟಲ್ಲಿರುವುದೆಲ್ಲಾ ಹಳೆಯದೇ, ಹಳಸಿದ್ದೇ ನಿಜ ಒಪ್ಪಿಕೊಳ್ಳೋಣ, ಆದರೆ ನಾವು ನಮ್ಮ ಮಕ್ಕಳಿಗೆ ಕೊಡುವ ಶಿಕ್ಷಣ, ಇದೇನು ಹೊಸತೇ? ನಾವು ಓದುವಾಗಿನ ವಿಷಯಗಳನ್ನು, ನಮ್ಮ ತಮ್ಮಂದಿರೂ, ನಮ್ಮ ತಂಗಿಯರೂ ಕೂಡ ಓದಲಿಲ್ಲವೇ? ಇನ್ನೂ ನಮ್ಮ ಇತಿಹಾಸ ಇದೇನು ಹೊಸತೇ, ಎಲ್ಲರೂ ಓದಿದ ಇತಿಹಾಸವನ್ನೇ ನಾವು ಓದಲಿಲ್ಲವೇ? ನಮ್ಮ ಸಂವಿಧಾನ, ನಮ್ಮ ಭಾಷೆ, ನಮ್ಮ ವಿಜ್ನಾನ ಇವುಗಳಲ್ಲಿ ಎಷ್ಟು ಹೊಸತಿದೆ? ಇವುಗಳಲ್ಲೂ ಬಹುಪಾಲು ಹಳೆಯದೇ ಅಲ್ಲವೇ? ಹಾಗಂತ ಇವುಗಳನ್ನು ನಾವು ನಮ್ಮ ಮಕ್ಕಳಿಗೆ ಹೇಳಿ ಕೊಡುವುದಿಲ್ಲವೇ? ನಮ್ಮ ರಾಮಾಯಣ, ಮಹಾಭಾರತಗಳು, ಪಂಚತಂತ್ರ ಕಥೆಗಳು ಇವೆಲ್ಲವೂ ಹಳತಲ್ಲದೇ ಹೊಸದೇನಲ್ಲವಲ್ಲ.
ಇನ್ನೂ ಈ ಜಗತ್ತಿನಲ್ಲಿ ಹೊಸತು ಎನ್ನುವುದಾದರೂ ಎಷ್ಟಿದೆ? ಒಂದೊಮ್ಮೆ ಹೊಸದೊಂದು ಘಟನೆ ನಡೆದರೂ, ಅದು ಎಷ್ಟು ದಿನ ಹೊಸತಾಗಿರುತ್ತದೆ. ಘಟನೆ ನಡೆಯುವುದೇ ತಡ, ದಿನಕ್ಕೆ ಹತ್ತಿಪ್ಪತ್ತು ಭಾರಿ ಬ್ರೆಕಿಂಗ್ ಸುದ್ದಿಯಾಗಿ ದೂರದರ್ಶನದಲ್ಲಿ ಬಿತ್ತರವಾಗುತ್ತಿರುತ್ತದೆ. ಹಾಗಂತ ನಾವು ದೂರದರ್ಶನವನ್ನು ಮತ್ತೆ ಮತ್ತೆ ನೋಡುವುದಿಲ್ಲವೇ. ಇಂದು ದೂರದರ್ಶನದಲ್ಲಿ ಹತ್ತಾರು ಭಾರಿ ಪ್ರಸಾರವಾದ ಸುದ್ದಿ, ಮರುದಿನ ಮತ್ತೆ ವ್ರತ್ತ ಪತ್ರಿಕೆಯಲ್ಲಿ ಪ್ರಕಟವಾದಾಗ ನಾವದನ್ನು ಮತ್ತೆ ಓದುವುದಿಲ್ಲವೇ? ಅದೇ ವ್ರತ್ತ ಪತ್ರಿಕೆ ನಾಳೆ ಹಳತಾಗಿ ರದ್ದಿಯಾದ ಮೇಲೂ ಅದೇ ಸುದ್ದಿ ಮತ್ತೆ ವಾರ ಪತ್ರಿಕೆಯಲ್ಲಿ ಪ್ರಕಟವಾಗುವುದಿಲ್ಲವೇ?
ಇಲ್ಲಿ ನಮಗೆ ವಿಷಯ ಹಳೆಯದೋ, ಹೊಸತೋ ಮುಖ್ಯವಲ್ಲ. ಕೆಲವರಿಗೆ ಹಳೆತಾಗಿರುವ ವಿಷಯ ಇನ್ನು ಕೆಲವರಿಗೆ ಹೊಸತಾಗಿರಬಹುದು. ಕೆಲವರು ವಿಷಯ ಹಳತಾಗಿದ್ದರೂ ಮತ್ತೆ ಮತ್ತೆ ಓದುವುದಿಲ್ಲವೇ? ಒಂದೇ ವಿಷಯದ ಬಗ್ಗೆ ಹಲವಾರು ಜನ ಹಲವಾರು ರೀತಿ ಬರೆಯುವುದಿಲ್ಲವೇ? ಸೂರ್ಯ ಚಂದ್ರರ ಬಗ್ಗೆ ಅದೆಷ್ಟು ಜನರಿಗೆ ಗೊತ್ತಿಲ್ಲ ಹೇಳಿ, ಅವುಗಳ ಬಗ್ಗೆ ಅದೆಷ್ಟು ಜನ ಕವಿತೆ, ಲೇಖನ ಬರೆದಿಲ್ಲ. ನಮಗೆ ಸೂರ್ಯ ಚಂದ್ರ ಬಗ್ಗೆ ತಿಳಿದಿದೆ ಎಂದು ನಾವದನ್ನು ಓದುವುದಿಲ್ಲವೇ? ಇಲ್ಲಿ ನಮಗೆ ವಿಷಯ ಮುಖ್ಯವಲ್ಲ, ವ್ಯಕ್ತಿಯ ಬರವಣಿಗೆ, ಅವನು ಮಾಡಿದ ವಿಷಯದ ಪ್ರಸ್ತಾಪ ಮುಖ್ಯವಾಗಿರುತ್ತೆ ಅಲ್ಲವೇ?
ಇನ್ನೂ ಇಂಟರ್ನೆಟ್, ಇಂಟರ್ನೆಟ್ ಅಲ್ಲಿ ಏನಿದೆ, ಏನಿಲ್ಲ? ಗೂಗಲ್, ಯಾಹೂ ಮುಂತಾದ ಸರ್ಚ ಇಂಜಿನಗಳ ಸಹಾಯದಿಂದ ಅದೆಷ್ಟು ಉಪಯೋಗಕರ ಮಾಹಿತಿಯನ್ನು ಹುಡುಕಿ ಹೊರತೆಗೆಯಬಹುದು. ಅದಷ್ಟೇ ಏನು? ಇಂಟರ್ನೆಟ್ ಇಂದ ಕ್ಷಣಾರ್ಧದಲ್ಲಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಯಿಸಬಹುದು, ಮನೆಯಲ್ಲೇ ಕುಳಿತು ಸಾಮಾನುಗಳನ್ನು ಖರಿದಿಸಬಹುದು, ಸಂದೇಶ ರವಾನಿಸಬಹುದು, ಎಲ್ಲೋ ಇರುವ ಗೆಳೆಯನ ಜೊತೆ ಮಾತನ್ನಾಡಬಹುದು, ಚಲನ ಚಿತ್ರಗಳನ್ನು ವೀಕ್ಷಿಸಬಹುದು, ಕಳೆದು ಹೋದ ಗೆಳೆತನವನ್ನು ಮತ್ತೆ ಸಂಪಾದಿಸಬಹುದು, ನಿಮ್ಮದೇ ಆದ ವೆಬ್ ಸೈಟ್ಗಳನ್ನು ರಚಿಸಬಹುದು ಹೀಗೆ ಒಂದೇ, ಎರಡೇ. ಇಲ್ಲಿ ಕೆಟ್ಟದ್ದು ಇಲ್ಲ ಅಂತಲ್ಲ, ಇಲ್ಲೂ ಕೆಟ್ಟದ್ದೂ ಇದೆ. ಇಂದು ಕೆಟ್ಟದೆನ್ನುವುದು ಎಲ್ಲಿಲ್ಲ ಹೇಳಿ, ಎಲ್ಲಿ ಒಳೆಯದಿದೆಯೋ, ಅಲ್ಲಿ ಕೆಟ್ಟದ್ದು ಇದೆ. ಒಳ್ಳೆಯದನ್ನು ತೆಗೆದುಕೊಂಡು, ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರೆ ಮಾತ್ರ ನಮಗೆ ಒಳ್ಳೆಯದಾಗುತ್ತದೆ ಅಲ್ಲವೇ.
ಯಾವುದೇ ವಿಷಯವನ್ನು ಹಳೆಯದು, ಹಳಸಿದ್ದು ಎನ್ನುವುದಕ್ಕೆ ಮೊದಲು, ಅದರಲ್ಲಿ ಏನಿದೆ, ಅದರಿಂದ ನನಗೇನು ಉಪಯೋಗ ಎನ್ನುವುದರ ಬಗ್ಗೆ ಚಿಂತಿಸುವುದು ಒಳ್ಳಯದಲ್ಲವೇ? ಒಂದೇ ವಸ್ತು ಬೇರೆ ಬೇರೆ ಜನರಿಗೆ ಬೇರೆ, ಬೇರೆ ರೀತಿ ಕಾಣಿಸಬಹುದು. ನಮ್ಮ ನಮ್ಮ ಭಾವನೆಗಳಿಗೆ ತಕ್ಕಂತೆ ನಾವು ಗ್ರಹಿಸುವ ವಿಷಯವೂ ಕೂಡ ಬೇರೆ ಬೇರೆಯಾಗಿರುತ್ತದೆ ಅಲ್ಲವೇ? ಹಾಗಾಗಿ ಯಾವುದೇ ವಿಷಯವನ್ನು ಹಳೆಯದ್ದು ಹಳಸಿದ್ದು ಎನ್ನುವುದರ ಮೊದಲು ಅದರ ಬಗ್ಗೆ ಮೊದಲು ಯೋಚಿಸುವುದು ಒಳ್ಳಯದಲ್ಲವೇ? ನಮಗೆ ಗೊತ್ತಿಲ್ಲದ ವಿಷಯವನ್ನು ಎಲ್ಲಿಂದ, ಯಾವಾಗ, ಯಾರಿಂದ ತಿಳಿದರೇನು?
--ಮಂಜು ಹಿಚ್ಕಡ್