Wednesday, October 30, 2013

ಹೂ-ದುಂಬಿ

[ಈ ವಾರದ (೨೮-೧೦-೨೦೧೩) ಪಂಜು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಒಂದು ಕವನ http://www.panjumagazine.com/?p=5002 ]
ಹೂಬನದಿ ಆಗತಾನೇ
ಅರಳಿದ ಹೂ
ಕಾದಿಹುದು ದುಂಬಿ
ತನ್ನ ಚುಂಬಿಸಲೆಂದು.

ಮುಂಜಾವಿನ ತಂಗಾಳಿಗೆ
ಮೈಯೊಡ್ಡಿ ಕಾದಿಹುದು
ಎಂದು ಸೂರ್ಯ,
ಉದಯಿಸುವನೆಂದು.

ಪಕಳೆಗಳ ಅರಳಿಸಿ
ಕಾದಿಹ ಸುಮವ ಕಂಡು
ತಾ ಮೋಹಗೊಂಡು
ಹಾರಿತು ದುಂಬಿ
ಆಗತಾನೆ ಅರಳಿನಿಂತ
ಆ ಸುಮದೆಡೆಗೆ.

ಝೇಂಕರಿಸಿ ತನ್ನೆಡೆಗೆ
ಹಾರಿ ಬಂದ ದುಂಬಿಗೆ
ತನ್ನ ಮೈ ಅಲುಗಿಸಿ
ಸ್ವಲ್ಪ ಸತಾಯಿಸಿ
ಸಹಕರಿಸಿತು ದುಂಬಿಗೆ
ತನ್ನ ಮಕರಂದ ಹೀರಲು.

ಮಕರಂದ ಹೀರಿ
ತನ್ನಾಸೆ ತೀರಿತೆಂದು
ಹಾರಿತು ದುಂಬಿ
ಇನ್ನೊಂದರ ಬಳಿಗೆ.

ಆತ ಮತ್ತೆ ಬರಬಹುದೆಂದು
ಸೂರ್ಯ ಮುಳುಗಿ
ಭಾನು ಕೆಂಪಾಗುವವರೆಗೆ ಕಾದು
ತಾನು ಮರುಗಿ, ಸುಸ್ತಾಗಿ
ಹಾರಿ ಹೋದ ಆ
ದುಂಬಿಯ ನೆನಪಾಗಿ
ಪಕಳೆಗಳನ್ನುದಿರಿಸಿತು
ತನ್ನ ಗಿಡದ, ಬುಡದ ಬಳಿಗೆ.

ಮಕರಂದ ಹೀರಿ
ಆಸೆ ಹತ್ತಿದ ದುಂಬಿಗೆ
ಕಂಡ ಕಂಡದ್ದೆಲ್ಲ ಹೂವೆಂದು
ತಿಳಿದು ಹಾರಿತು
ರಸ್ತೆ ದೀಪದ ಬಳಿಗೆ.

ಉರಿವ ದೀಪವ ಸುತ್ತಿ
ಸುಟ್ಟು ಕರಕಲಾಗಿ ಬಿದ್ದಿತು
ದೀಪದ ಕಂಬದ ಬಳಿಗೆ.
–ಮಂಜು ಹಿಚ್ಕಡ್ 

Sunday, October 27, 2013

ಆಗಾಗ ನೆನಪಾಗುವ ನನ್ನ ಬಾಲ್ಯದ ಸೈಕಲ್ ಸವಾರಿಗಳು!

ಎರಡನೆಯ ಮಹಡಿಯಲ್ಲಿರುವ ನನ್ನ ಮನೆಯ ಜಗುಲಿಯಲ್ಲಿ ನಿಂತು, ಪಕ್ಕದ ಮನೆಯ ಬಾಲಕ ಮನೆಯಿಂದ ಸ್ವಲ್ಪ ಹೊರಗೆ ಸೈಕಲ್ ಹೊಡೆಯುತ್ತಾ ಹೋಗಿ ಮತ್ತೆ ಮನೆಗೆ ಬಂದು, ಮತ್ತೆ ಹೋಗಿ ಬರುವುದನ್ನು ಮಾಡುತಿದ್ದ. ಸುಮಾರು ಒಂದು ಗಂಟೆಯಿಂದ ಅದನ್ನೇ ನೋಡುತಿದ್ದ ನನಗೂ ನನ್ನ ಬಾಲ್ಯದ ದಿನಗಳಲ್ಲಿ ನಾನು ನಡೆಸಿದ ಸೈಕಲ್ ಸವಾರಿಗಳು ನೆನಪಿಗೆ ಬರತೊಡಗಿದವು. ಮನುಷ್ಯ ಎಷ್ಟೇ ದೊಡ್ಡವನಾದರೂ, ಹಣಗಳಿಸಿ ಶ್ರೀಮಂತನಾದರೂ, ಇಂದು ಬೈಕು ಕಾರುಗಳಲ್ಲಿ ಓಡಾಡುತಿದ್ದರೂ ಆತನಿಗೆ ತಾನು ಬಾಲ್ಯದಲ್ಲಿ ನಡೆಸಿದ ಸೈಕಲ್ ಸವಾರಿಯನ್ನು ಮಾತ್ರ ಮರೆಯಲಾರ ಅನ್ನಿಸುತ್ತದೆ. ಆ ಸೈಕಲ್ ನೀಡಿದಷ್ಟು ಸುಖ-ಸಂತೋಷ ಇಂದಿನ ಐಷಾರಾಮಿ ಕಾರುಗಳು ನೀಡಲಾರವು ಎನ್ನುವುದು ನನ್ನ ಅನಿಸಿಕೆ. ಬಹುಷಃ ಹಲವರ ಅನಿಸಿಕೆನೂ ಇರಬಹುದೇನೋ ಏನೋ? ನಾನು ಕೂಡ ಅದಕ್ಕೇನು ಹೊರತಾಗಿಲ್ಲ. ನನ್ನ ಬಾಲ್ಯದ ನೆನಪುಗಳಲ್ಲಿ ಈ ಸೈಕಲ್ ಸವಾರಿಯೂ ಒಂದು. ಅಂತಹ ಕೆಲವು ಘಟನೆಗಳೇ ಇಲ್ಲಿಯ ಲೇಖನ.

ಬೆಲ್ಟಿನ ರುಚಿ ತೋರಿಸಿದ ಮಾವ:
ನಾನಾಗ ಏಳೆಂಟು ವರ್ಷದ ಬಾಲಕ, ಶಾಲೆಗೆ ರಜಾ ಬಿತ್ತು ಎಂದರೆ ನಮ್ಮ ತಾಯಿಯ ತವರು ಮನೆಗೆ ಹೊರಟುಬಿಡುವುದು ವಾಡಿಕೆ. ಒಮ್ಮೆ ಹೀಗೆ ಅಜ್ಜಿ ಮನೆಯಲ್ಲಿದ್ದಾಗ, ನಮ್ಮ ಸಂಬಂಧಿಕರಾರೋ ಅವರ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಮಂತ್ರಿಸಲು ಬಂದಿದ್ದರು. ಅವರ ಊರು ಅದೇ ಊರಿನಿಂದ ಮೂರು ನಾಲ್ಕು ಕಿಲೋ ಮೀಟರ್ ದೂರದಲ್ಲಿತ್ತು. ಆಗೆಲ್ಲಾ ಈಗಿನಷ್ಟು ಬೈಕುಗಳಾಗಲೀ, ಕಾರುಗಳಾಗಲೀಇರಲಿಲ್ಲ. ಹೆಚ್ಚಿನ ಜನ ಬೈಕ್, ಕಾರುಗಳ ಬದಲು ಸೈಕಲ್ಗಳನ್ನೇ ಉಪಯೋಗಿಸುತ್ತಿದ್ದ ಕಾಲ ಅದು. ಅಂದು ಹಾಗೆ ಸೈಕಲ್ ಮೇಲೆ ಮನೆಗೆ ಬಂದವರು ಅದು ಇದು ಮಾತನಾಡುತ್ತಾ ಕುಳಿತಿದ್ದರು. ಹೊರಗೆ ಆಡುತಿದ್ದ ನಮಗೆ ಅಲ್ಲಿ ಸೈಕಲ್ ನಿಲ್ಲಿಸಿರುವುದು ನಮ್ಮ ಗಮನಕ್ಕೆ ಬಂತು. ನನಗಾಗ ಸೈಕಲ್ ಹೊಡೆಯಲು ಬರುತ್ತಿರಲಿಲ್ಲ, ನಮ್ಮ ಮಾವನ ಮಗ ಆಗ ತಾನೇ ಸೈಕಲ್ ಚಲಾಯಿಸಲು ಕಲಿತಿದ್ದರಿಂದ. ನನಗೂ ಆಗ ಸೈಕಲ್ ಕಲಿಯುವ ಆಸೆ ಇದ್ದುದರಿಂದ ಇಬ್ಬರು ಸೈಕಲ್ ತೆಗೆದುಕೊಂಡು ಸಮುದ್ರ ತೀರದತ್ತ ಹೊರಟೆವು. ನಾವು ಹೊರಟಾಗ ಸಾಯಂಕಾಲ್ ೩-೪ ಗಂಟೆಯಿರಬಹುದೇನೋ. ನನಗೂ ಅಷ್ಟು ಇಷ್ಟು ಸೈಕಲ್ ಹೇಳಿ ಕೊಟ್ಟು, ತಾನು ಹೊಡೆಯುತ್ತಾ ಇದ್ದ. ಹೀಗೆ ಸೈಕಲ್ ಹೊಡೆಯುವುದರಲ್ಲಿ ಮಗ್ನವಾಗಿದ್ದ ನಮಗೆ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಇಬ್ಬರಿಗೂ ಮನೆಯ ನೆನಪಾಗಿ ಸೈಕಲ್ ತೆಗೆದುಕೊಂಡು ಮನೆಗೆ ಬಂದೆವು.

ನಾವು ಮನೆಗೆ ಬರುವಷ್ಟರಲ್ಲಿ, ಮನೆಗೆ ಬಂದ ಅತಿಥಿಗಳು ಮನೆಯಲ್ಲಿ ಇರಲಿಲ್ಲ. ಅವರು ನಮಗಾಗಿ ಕಾದು ಕಾದು ಸುಸ್ತಾಗಿ ಮನೆಗೆ ಹೊದರೆಂದು ತಿಳಿಯಿತು. ಮನೆಗೆ ಬಂದು ಇನ್ನೇನು ಮನೆಯ ಒಳಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ನಮ್ಮನ್ನು ನೋಡಿದ ನಮ್ಮ ಮಾವ ಒಳ ಹೋಗಿ ಹೊರಬಂದು ಒಂದೇ ಸಮನೇ ಬೆಲ್ಟನ ಸೇವೆ ನೀಡಲಾರಂಭಿಸಿದರು. ಅವರಿಗೆ ನಾವು ಹೇಳದೇ ಕೇಳದೇ ಸೈಕಲ್ ತೆಗೆದುಕೊಂಡು ಹೋಗಿ, ಮನೆಗೆ ಬಂದ ಅತಿಥಿಗಳನ್ನು ಕಾಯಿಸಿ, ಮನೆಗೆ ಬಂದ ಅತಿಥಿಗಳನ್ನು ಕಾಯಿಸಿ, ಅವರು ಸೈಕಲ್ ಇಲ್ಲದೇ ನಡೆದು ಹೊರಡುವಂತೆ ಮಾಡಿ, ನಾವೂ ರಾತ್ರಿ ತಡ ಮಾಡಿ ಮನೆಗೆ ಬಂದುದ್ದು ಅವರಿಗೆ ಸಹಜವಾಗಿ ಕೋಪ ತರಿಸಿತ್ತು. ಈಗಲು ಆ ಬೆಲ್ಟನ ರುಚಿ ಆಗಾಗ ಕಣ್ಣ ಮುಂದೆ ಬರುತ್ತಿರುತ್ತದೆ.

ಸಾವಿನ ದವಡೆಯಿಂದ ಪಾರಾಗಿದ್ದು:
ನಾವು ಚಿಕ್ಕವರಿರುವಾಗ, ರಸ್ತೆಯಲ್ಲಿ ಯಾವುದೇ ಸೈಕಲ್ಗಳು ನಿಂತಿರಲಿ, ಅದಕ್ಕೆ ಕೀಲಿ ಹಾಕಿದ್ದಾರೋ, ಇಲ್ಲವೋ ಎಂದು ಪರೀಕ್ಷಿಸಿ, ಕೀಲಿ ಹಾಕಿಲ್ಲ ಎಂದರೆ ಮುಗಿಯಿತು. ಆ ಸೈಕಲ್ ತೆಗೆದುಕೊಂಡು ಹೋಗಿ ಮನಸ್ಸು ಖುಸಿ ಎನ್ನಿಸುವವರೆಗೆ ಅಲ್ಲದಿದ್ದರೂ, ಮನೆಯ ನೆನಪು ಬರುವವರೆಗೆ ಓಡಿಸಿ ತಂದಿಡುತಿದ್ದೆವು. ಅದರಲ್ಲೂ ನಮ್ಮೂರಿಗೆ ದಿನಾ ಬರುವ ಮೇಸ್ತ್ರಿ ಗಣಪತಿಯ ಸೈಕಲ್ಗಳೆಂದರೆ ನಮಗೆ ಎಲ್ಲಿಲ್ಲದ ಪ್ರೀತಿ. ಆತನ ಸೈಕಲ್ಗೆ ಕೀಲಿ ಹಾಕುವ ವ್ಯವಸ್ತೆಯಿಲ್ಲದ ಕಾರಣ, ಆ ಸೈಕಲ್ ನಮಗೆ ಸಿಗಬಾರದು ಎಂದು, ಯಾರದೋ ಮನೆಯಲ್ಲಿ ಬಚ್ಚಿಟ್ಟು, ಯಾರದೋ ಮನೆ ಕೆಲಸಕ್ಕೆ ಹೋಗುತ್ತಿದ್ದ. ಅದರಲ್ಲೂ ನಮಗೆ ಬಿಚ್ಚಿಟ್ಟಿದ್ದಕ್ಕಿಂತ ಬಚ್ಚಿಟ್ಟಿದ್ದರಲ್ಲಿ ಪ್ರೀತಿ ಜಾಸ್ತಿ ಅಲ್ಲವೇ, ಹಾಗಾಗಿ ಆತ ಎಲ್ಲೇ ಸೈಕಲ್ ಬಚ್ಚಿಡಲಿ, ಅದನ್ನು ಹುಡುಕಿ ತೆಗೆಯುವುದನ್ನು ಮಾತ್ರ ಬಿಡುತ್ತಿರಲಿಲ್ಲ. ಒಮ್ಮೆ ನಾನು ಮತ್ತು ನನ್ನ ಸ್ನೇಹಿತ ಇಬ್ಬರು ಸೇರಿ, ಅವನ ಸೈಕಲ್ ಹುಡುಕುತ್ತಾ ಹೊರಟಾಗ, ಯಾರದೋ ಮನೆಯ ದನದ ಕೊಟ್ಟುಗೆಯಲ್ಲಿ ಆತ ಸೈಕಲ್ ಬಚ್ಚಿಟ್ಟಿರುವುದು ನಮ್ಮ ಕಣ್ಣಿಗೆ ಬಿತ್ತು. ನಮ್ಮ ಕಣ್ಣಿಗೆ ಬಿದ್ದ ಮೇಲೆ ಮುಗಿಯಿತು, ಅದನ್ನು ತೆಗೆದುಕೊಂಡು ಹೋಗಿ ಹೊಡೆಯಲೇ ಬೇಕು. ತಡ ಏನು ಎಂದು ಇಬ್ಬರು ಸೈಕಲ್ ತೆಗೆದುಕೊಂಡು ಹೊರಟೆವು.

ಸೈಕಲ್ ತೆಗೆದುಕೊಂಡು ಬಂದು, ಅಲ್ಲಿಂದ ಬೆಳಸೆ, ಚಂದು ಮಠ ಎಲ್ಲಾ ಊರುಗಳನ್ನು ಸುತ್ತಿ, ವಾಪಸ್ ಬರುತ್ತಿದ್ದೆವು, ಬೆಳಸೆಯ ಏರಿನಲ್ಲಿ ನನ್ನ ಗೆಳೆಯ ನನ್ನನ್ನು ಸೈಕಲ್ ಮುಂದೆ ಕುಳ್ಳಿಸಿಕೊಂಡು ತಾನು ಸೈಕಲ್ ಹೊಡೆಯುತಿದ್ದ. ಆ ಬೆಳಸೆ ಏರು ಎಂದರೆ, ಅದೊಂದು ಯಮನ ಅಚ್ಚು ಮೆಚ್ಚಿನ ಸ್ಥಳ, ವರ್ಷಕ್ಕೆ ಕನಿಷ್ಟ ಹತ್ತಾರು ಅಪಘಾತಗಳಾದರೂ ಸಂಭವಿಸುತ್ತಿದ್ದವು ಅಲ್ಲಿ. ನನ್ನ ಗೆಳೆಯ ಆಕಡೆ, ಈ ಕಡೆ ಸೈಕಲ್ ಚಲಿಸುತ್ತಾ ಬೆಳಸೆಯ ಏರು ಹತ್ತಿಸುತಿದ್ದ. ಇನ್ನೇನು ಅರ್ಧ ಏರು ಹತ್ತಿರಬಹುದು, ನಮ್ಮ ಎದುರುಗಡೆಯಿಂದ ಒಂದು ಕಾರು, ಹಿಂದುಗಡೆಯಿಂದ ಒಂದು ಲಾರಿ ಬರುತ್ತಿತ್ತು. ಲಾರಿಯಾತ ನಮ್ಮ ಸಮೀಪಕ್ಕೆ ಬರುತ್ತಿದ್ದಂತೆ, ಜೋರಾಗಿ ಶಬ್ಧ ಮಾಡತೊಡಗಿದ. ಸೈಕಲ್ ಓಡಿಸುತ್ತಿದ್ದ ನನ್ನ ಗೆಳೆಯ ಹೆದರಿದ್ದರಿಂದ, ಸೈಕಲ್ ನಿಯಂತ್ರಿಸಲು ಆಗದೆ ಬಿಳಿಸಿಬಿಟ್ಟ. ನಮಗೆ ಒಂದು ಕ್ಷಣ ಏನಾಯ್ತು ಅಂತಾ ತಿಳಿಯುವ ಹೊತ್ತಿಗೆ, ನಮ್ಮ ಅರ್ಧ ದೇಹ ರಸ್ತೆಯಲ್ಲೂ, ಇನ್ನರ್ಧ ದೇಹ ರಸ್ತೆಯ ಹೊರಗೂ ಇತ್ತು. ಇಬ್ಬರೂ ಒಬ್ಬರಿಗೊಬ್ಬರು ನೋಡಿಕೊಂಡೆವು, ಅಂತೂ ಬದುಕಿದೆವಲ್ಲ ಎನಿಸಿತು. ನಮ್ಮ ಅದ್ರಷ್ಟಕ್ಕೆ ಲಾರಿ ಅಷ್ಟೋಂದು ವೇಗವಾಗಿರದ ಕಾರಣ, ಆ ಲಾರಿಯವನ ಕೃಪೆಯಿಂದ ಆಗುತಿದ್ದ ಅವಘಡದಿಂದ ತಪ್ಪಿಸಿಕೊಂದಿದ್ದೆವು. ನಮಗೆ ಏನು ಆಗದ ರೀತಿಯಲ್ಲಿ, ನಮ್ಮನ್ನು ತಪ್ಪಿಸಿ ಪಕ್ಕದಿಂದಲೇ ಲಾರಿ ಓಡಿಸಿಕೊಂಡು ಹೋಗಿದ್ದರಿಂದ ನಾವು ಕುದಲೂ ಎಳೆಯಷ್ಟು ಅಂತರದಿಂದ ಪಾರಾದೆವು. ಸ್ವಲ್ಪ ಹೆಚ್ಚು ಕಡಿಮೆಯಾದರೂ ನಾವು ಸಾಯದಿದ್ದರೂ, ಬದುಕಿ ಸತ್ತಂತಿರುತಿದ್ದೆವೋ ಏನೋ?

ಸೈಕಲ್ ನಾರಾಯಣನ ಹೃದಯವಂತಿಕೆ:
ನಮ್ಮ ಮನೆಯ ಹತ್ತಿರದ ಮನೆಯಲ್ಲಿ ಓರ್ವ ಬಾಲಕನಿದ್ದ, ನನಗಿಂತ ಐದಾರು ವರ್ಷ ಚಿಕ್ಕವನು, ಆತನ ಬಳಿ ಒಂದು ಚಿಕ್ಕ ಸೈಕಲ್ ಇತ್ತು. ನನಗೆ ಆ ಸೈಕಲ್ ಮೇಲೆ ಏನೋ ಒಂದು ತರಹ ಆಸಕ್ತಿ, ಒಮ್ಮೆಯಾದರೂ ಅದನ್ನು ಓಡಿಸಬೇಕು ಎನ್ನುವ ತವಕ. ಒಮ್ಮೆ ಆ ಹುಡುಗನ ಮನೆಗೆ ಹೋಗಿ ಆತನ ತಾಯಿಯನ್ನು ಕಾಡಿ ಬೇಡಿ ಸೈಕಲ್ ತೆಗೆದುಕೊಂಡು ಹೋದೆ. ಸೈಕಲ್ ಏರಿ ನಮ್ಮೂರ ಏರಿಯನ್ನು ಏರಿ ಮತ್ತೆ ವಾಪಸ್ ಏರಿ ಇಳಿಯುವಾಗ ಸೈಕಲ್ ಹಿಂದಿನ ಗಾಲಿಯಿಂದ 'ಟಪ್' ಎಂದು ಶಬ್ಧ ಬಂತು, ಆಗಲೇ ಗಾಲಿ ಪಂಚರ್ ಆಗಿತ್ತು, ಆ ಶಬ್ಧಕ್ಕೂ, ಗಾಲಿ ಪಂಚರ್ ಆಗಿದ್ದರಿಂದಲೂ ನಾನು ಸೈಕಲ್ ನಿಯಂತ್ರಿಸಲಾಗದೇ, ರಸ್ತೆಯ ಪಕ್ಕದಲ್ಲಿಯ ಮುಳ್ಳು ಕುಂಟೆಯ ಮೇಲೆ ಹೋಗಿ ಬಿದ್ದೆ. ಮೈ ಕೈಗೆಲ್ಲ ಗಾಯ. ಸೈಕಲ್ ನೋಡಿದೆ ಹಿಂದಿನ ಗಾಲಿಯಿಂದ ಗಾಳಿ ಸಂಪೂರ್ಣ ಹೊರ ಹೋಗಿತ್ತು, ಎರಡು ಬ್ರೆಕ್ ಗಳು ಮೇಲೆದಿದ್ದವು, ನನಗೆ ನನಗಾದ ಗಾಯಗಳಿಗಿಂತ, ಸೈಕಲ್ಗಾದ ಗಾಯ ನೋಡಿ ಇನ್ನಷ್ಟು ನೋವಾಯ್ತು. ಮನೆಗೆ ಹಾಗೇ ಹೋಗುವಂತೆಯೂ ಇರಲಿಲ್ಲ, ಅದು ಬೇರೆಯವರ ಸೈಕಲ್ ಬೇರೆ. ರಿಪೇರಿ ಮಾಡಿಸಲು ಕೈಯಲ್ಲಿ ಕಾಸೂ ಇರಲಿಲ್ಲ, ಮನೆಗೆ ಹೋಗಿ ಕೇಳುವಂತೆಯೂ ಇರಲಿಲ್ಲ. ಏನು ಮಾಡುವುದು ಅಂತಾ ಯೋಚಿಸುತಿದ್ದಾಗ ಸೈಕಲ್ ನಾರಾಯಣನ ನೆನಪಾಯಿತು. 

ಸೈಕಲ್ ನಾರಾಯಣ ಇಂದಿನ ಅಂಕೋಲಾ ರೇಲ್ವೆ ನಿಲ್ದಾಣದ ಹತ್ತೀರ, ಜುಮಗೋಡದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ತನ್ನ ಮನೆಯಲ್ಲಿಯೇ ಸೈಕಲ್ ರಿಪೇರಿ ಮಾಡುತ್ತಿದ್ದ. ಆತ ಸೈಕಲ್ ರಿಪೇರಿ ಮಾಡುತ್ತಿದ್ದರಿಂದ ಆತನಿಗೆ ಎಲ್ಲರೂ ಸೈಕಲ್ ನಾರಾಯಣ ಎಂದೇ ಕರೆಯುತ್ತಿದ್ದರು. ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸೈಕಲ್ ಸವಾರರು, ಆತನ ಬಳಿಯೇ ಸೈಕಲ್ ತಂದು ರಿಪೇರಿ ಮಾಡಿಸಿಕೊಂಡು ಹೋಗುತ್ತಿದ್ದರು. ನನಗೆ ಆತನ ನೆನಪಾದದ್ದೇ ತಡ ಸೈಕಲ್ ನಡೆಸಿಕೊಂಡು ಅವನ ಮನೆಯತ್ತ ಹೊರಟೇ ಬಿಟ್ಟೇ. ಅದೇನು ಸಮೀಪವೇನು ಇರಲಿಲ್ಲ, ನಮ್ಮ ಊರಿನಿಂದ ೩ ಕಿಲೋ ಮೀಟರ್ ಆದರೂ ಹೋಗಬೇಕು. ನನಗಾಗ ಮನಸ್ಸಲ್ಲಿ ಇದ್ದುದು ಸೈಕಲ್ ರಿಪೇರಿ ಮಾಡಿಸಬೇಕು ಎನ್ನುವುದಾದ್ದರಿಂದ, ನನಗಾಗುತ್ತಿದ್ದ ನೋವನ್ನು ಲೆಕ್ಕಿಸದೇ, ಸೈಕಲ್ ತಳ್ಳಿಕೊಂಡು ಹೊರಟೆ. ನಾನು ಹೋದಾಗ ಆತ ಮನೆಯಲ್ಲಿ ಇಲ್ಲದಿದ್ದರೂ ಒಂದರ್ಧ ಗಂಟೆಯಲ್ಲಿ ಮನೆಗೆ ಬಂದ. ನನ್ನ ಸ್ಥಿತಿಯನ್ನು ನೋಡಿ ಆತನಿಗೂ ಮರುಕ ಹುಟ್ಟಿತು. ಬಂದು ಸೈಕಲ್ ರಿಪೇರಿ ಮಾಡಿಕೊಟ್ಟ. ನಾನು "ಹಣ ಎಷ್ಟಾಯ್ತು" ಎಂದು ಕೇಳಿದೆ. ಆತ ನಗುತ್ತಾ, "ನಿನಗಿಂತ, ನೀನು ಸೈಕಲ್ ಮೇಲೆ ಕಾಳಜಿ ತೋರಿಸುವುದನ್ನು ನೋಡಿ ನನಗೆ ಹೆಮ್ಮೆ ಎನಿಸುತ್ತಿದೆ" ಎಂದು, ಎಷ್ಟು ಕೇಳಿದರೂ ರೊಕ್ಕ ಎಷ್ಟೆಂದು ಹೇಳಲಿಲ್ಲ. ನಾನು ನಾಳೆ ಬಂದು ಕೊಡುತ್ತೇನೆ, ರೊಕ್ಕ ಎಷ್ಟಾಯ್ತು ಎಂದರೂ, ಬೇಡ ಹೋಗು ಎಂದು ಹೇಳಿ ಕಳಿಸಿಬಿಟ್ಟ. ನಾನು ರಿಪೇರಿಯಾದ ಸೈಕಲ್ ಅನ್ನು ಸಾವಕಾಸವಾಗಿ ತೆಗೆದುಕೊಂಡು ಬಂದು, ಸೈಕಲನ್ನು ಆ ಮೆನೆಯವರಿಗೆ ತಲುಪಿಸಿ, ನಡೆದ ವಿಷಯವನ್ನು ಅವರ ಮನೆಯಲ್ಲೂ, ನಮ್ಮ ಮನೆಯಲ್ಲೂ ಮುಚ್ಚಿಟ್ಟು ಬಿಟ್ಟೆ. ಇಂದು ಸೈಕಲ್ ನಾರಾಯಣ ಇಲ್ಲ ಆದರೆ ಆತನ ನೆನಪು ಮಾತ್ರ ಹಾಗೆ ಅಚ್ಚಳಿಯದೇ ನನ್ನ ಮನಸ್ಸಲ್ಲಿ ಇದೆ.

--ಮಂಜು ಹಿಚ್ಕಡ್ 

ದೀಪಾವಳಿ!

ನಡು ರಾತ್ರಿಯ ತಂಗಾಳಿಯ
ನೀರವತೆಯಲ್ಲಿ, 
ನೀ ತುಸು ದೂರದಿಂದ
ಕೂಗಿ ಕರೆದರೂ ನಾ
ಕೇಳಿಸಿ ಕೊಳ್ಳಲಾಗುತ್ತಿಲ್ಲ ಗೆಳತಿ.

ಆಗಲೇ ನೀ ಮುಂದಿಟ್ಟ
ದೀಪಾವಳಿಯ ಬೇಡಿಕೆಗಳು
ಸದಾ ಕಿವಿಯಲ್ಲಿ
ಗುಂಯ್ ಗುಡುತ್ತಿರುವಾಗ
ನಾ ಹೇಗೆ ಕೇಳಿಸಿಕೊಳ್ಳಲಿ
ನಿನ್ನ ಕರೆಯ ಗೆಳತಿ.

ನಾ ಕೇಳಿಸಿ ಕೊಂಡಿಲ್ಲ
ಎನ್ನುವ ಬಿಗುಮಾನ ಬೇಡ
ಪ್ರೀತಿ ಕಡಿಮೆಯಾಯಿತು
ಎನ್ನುವ ದುಮ್ಮಾನ ಬೇಡ.

ತಿಂಗಳ ಕೊನೆಯಲ್ಲವೇ
ಕಷ್ಟವಿರಬಹುದು ಗೆಳತಿ,
ಆದರೆ ಪ್ರೀತಿ ಕುಂದಿಲ್ಲ
ಬಯಕೆಗಳು ಸತ್ತಿಲ್ಲ. 

ದುಡ್ಡಿಲ್ಲದಿರೇನಂತೆ
ಅಸಲು ಬಡ್ಡಿ ಸೇರಿ ತುಂಬಲು,
ಕಿಸೆಯಲ್ಲಿ ಸಾಲಾಗಿ ಕ್ರೆಡಿಟ್
ಕಾರ್ಡುಗಳುಂಟಲ್ಲ 
ದೀಪಾವಳಿಯ ಸಮಯವಲ್ಲವೇ
ಡಿಸ್ಕೌಂಟು, ಆಫರಗಳಿಗೆ
ಕೊರತೆಯೇನಿಲ್ಲ.
ಹೇಗಾದರೂ ಪ್ರಯತ್ನಿಸುವೆ
ಹೆದರದಿರು ಚಿನ್ನ..

ದಿವಾಲಿಯಲ್ಲಿ ದಿವಾಳಿಯಾಗದೇ
ಹಬ್ಬ ಆಚರಿಸದಿರಲು ಹೇಗೆ ಸಾದ್ಯ
ಅಲ್ಲವೇ ಗೆಳತಿ!

--ಮಂಜು ಹಿಚ್ಕಡ್ 

Saturday, October 26, 2013

ಟ್ರಾಪಿಕ್-ಟ್ರಾಪಿಕ್, ನಮ್ಮ ಬೆಂಗಳೂರ ಟ್ರಾಪಿಕ್!

ಹೆಚ್ಚುತ್ತಲೇ ಇದೆ ಇಂದು, ನಮ್ಮ ಬೆಂಗಳೂರ ಟ್ರಾಪಿಕ್ಕು
ಎಲ್ಲರ ಬಾಯಲ್ಲೂ, ಇದರದ್ದೇ ಟಾಪಿಕ್ಕು
ರಸ್ತೆಯಲಿ ನಿಂತಿರುವವು, ಅಡಿಗೊಂದು ಗಾಡಿ
ನಮಗೇನು? ಹೇಗೂ ಬ್ಯಾಂಕ್ ಸಾಲ ಕೊಡತ್ತಲ್ಲ ನೋಡಿ!

ಹೊಗೆ ಉಗುಳುತ, ಸಿಳ್ಳೆ ಹಾಕುತಾ, ರಭಸದಿಂದಲಿ ಸಾಗುತಾ
ಒಂದಕ್ಕೊಂದು ಉಜ್ಜಿ-ಜಜ್ಜಿ ಮುಖಕೆ ಮುಖವ ತಿವಿಯುತಾ
ಮಾರಿಗೊಂದು ಸಿಗ್ನಲ್ ಉಂಟು, ನಮ್ಮ ಬೆಂಗಳೂರ ರೋಡಲಿ
ಸಿಗ್ನಲ್ ಎಂದು ಬಿಡುವರೋ ಎನ್ನುವ ಚಿಂತೆ ನಮ್ಮ ಮನದಲಿ.

ಗಾಡಿ ಕೊಂಡರೆ ಎಲ್ಲಿ ಉಂಟು, ಗಾಡಿ ನಿಲ್ಲಿಸಲು ನೆಲೆ
ಒಂದಡೆ ಗಗನಕ್ಕೇರುತ್ತಿದೆ, ಇಂದನದ ಬೆಲೆ
ನಡಿಗೆಗೆ ಎಡೆಯಿಲ್ಲ, ಸೈಕಲ್ ತುಳಿಯುವ ಶಕ್ತಿ ನಮಗಿಲ್ಲ
ಮುಂದೇನಾಗುವುದೋ ಕಾಣೆ, ಆ ದೇವನೇ ಬಲ್ಲ.

--ಮಂಜು ಹಿಚ್ಕಡ್ 

ಮರೆತೆನೆಂದರೂ ಮರೆಯಲಾರದ ಬೆಲೇಕೇರಿಯ ನೆನಪುಗಳು!

ಬೆಲೇಕೇರಿ ಎಂದ ತಕ್ಷಣ ಇಂದು ಎಲ್ಲರಿಗೂ ನೆನಪಾಗುವುದು ಮ್ಯಾಂಗನೀಸ್ ಹಾಗೂ ಅದರ ಸುತ್ತ ಆವರಿಸಿರುವ ರಾಜಕೀಯ ಹಗರಣಗಳಿರಬಹುದು, ಆದರೆ ನನಗೆ ನೆನಪಾಗುವುದು ನನ್ನ ಬಾಲ್ಯದ ದಿನಗಳಲ್ಲಿ ನಾ ಅಲ್ಲಿ ಕಳೆದ ರಜಾ ದಿನಗಳು, ಅಲ್ಲಿನ ಜನರ ಪ್ರೀತಿ, ಮುಗ್ಧತೆ, ಆ ಊರಿನ ಸುಂದರ ಕಡಲ ತೀರ ಇತ್ಯಾದಿ. ಇತ್ಯಾದಿ.. ಆ ನೆನಪುಗಳೇ ಇಂದಿಗೂ ನನ್ನನ್ನು ಆ ಊರಿಗೆ ಕರೆದುಕೊಂಡು ಹೋಗುತ್ತದೆ ಅಂದರೂ ತಪ್ಪಾಗಲಾರದು. ನನಗೂ ಬೆಲೇಕೇರಿಗೂ ಹುಟ್ಟಿನಿಂದಲೂ ಏನೋ ಒಂದು ರೀತಿಯ ಆತ್ಮೀಯ ಸಂಭಂದ. ಬೆಲೇಕೇರಿ ನನ್ನ ತಾಯಿಯ ತವರು ಮನೆಯ ಊರು ಹಾಗು ನನ್ನಾಕೆಯ ತವರು ಮನೆಯ ಊರು ಕೂಡ. ನನ್ನ ತಾಯಿಯ ತವರು ಮನೆಯ ಊರಾದ್ದರಿಂದ ನಾನು ಆಗಾಗ ಬೆಲೇಕೇರಿಗೆ ಹೋಗಿಬರುತ್ತಿದ್ದೆ. ಚಿಕ್ಕವರಿದ್ದಾಗ ರಜೆ ಬಿದ್ದರೆ ಸಾಕು ನಾನು ಬೆಲೇಕೇರಿಗೆ ಹೊರಟುಬಿಡುತಿದ್ದೆ. ಅಲ್ಲಿ ನಮ್ಮ ಮಾವನ ಮಕ್ಕಳು, ಆಡಲು ಅಕ್ಕ ಪಕ್ಕದ ಮಕ್ಕಳು, ಜೊತೆಗೆ ಪ್ರೀತಿಯ ಚಿಕ್ಕಮ್ಮಂದರು ಹಾಗು ಅವರ ಆತ್ಮೀಯತೆ ನನ್ನನ್ನೂ ಅಲ್ಲಿಗೆ ಸೆಳೆಯುತ್ತಿದ್ದವೂ. 

ನಮ್ಮ ಮಾವನಿಗೆ ಮೂರು ಮಕ್ಕಳಲ್ಲಿ, ಮಗಳು ನನಗಿಂತ ೩ ವರ್ಷ ದೊಡ್ಡವಳು, ಮದ್ಯದವನು ನನ್ನ ಓರಗೆಯವನು, ಚಿಕ್ಕವನು ನನ್ನ ತಮ್ಮನ ಓರಗೆಯವನು, ನನಗಿಂತ ೩ ವರ್ಷ ಚಿಕ್ಕವನು. ನಮ್ಮ ಮಕ್ಕಳ ತಂಡಕ್ಕೆ ಆಗ ನಮ್ಮ ಮಾವನ ಮಗಳೇ ನಾಯಕಿ. ಆಗ ನಾವೇನಿದ್ದರೂ ಅವಳು ಹೇಳಿದ ಹಾಗೆ ಕೇಳುವ ಅನುಯಾಯಿಗಳು ಮಾತ್ರ. ನಮ್ಮ ತಾಯಿಯ ತವರು ಮನೆಯನ್ನು ದಾಟಿ ಆಗ ತೋಟವಿದ್ದ (ಈಗ ಆ ಜಾಗದಲ್ಲಿ ನನ್ನಾಕೆಯ ಚಿಕ್ಕಪ್ಪನ ಮನೆಯಿದೆ) ಸ್ಥಳವನ್ನು ದಾಟಿ ಹೋದರೆ, ಇನ್ನೊಂದು ಚಿಕ್ಕ ತೋಟ. ಆ ತೋಟದಲ್ಲಿ ಒಂದು ತೋತಾಪುರಿ ಮಾವಿನ ಮರ, ಮರದ ತುಂಬಾ ಕಾಯಿಗಳು ಎಂತಹ ಮಕ್ಕಳ ಬಾಯಲ್ಲೂ ನೀರೂರಿಸುವಂತಿತ್ತು. ಒಂದು ದಿನ ಮಧ್ಯಾಹ್ನ ಮನೆಯ ಹೊರಗೆ ಆಟ ಆಡುತಿದ್ದ ನಮಗೆ ನಮ್ಮ ಮಾವನ ಮಗಳು, ಆ ಮಾವಿನ ಮರದಿಂದ ಒಂದೆರೆಡು ಕಾಯಿಗಳನ್ನು ಕಿತ್ತು ತರುವಂತೆಯೂ, ನಾವು ಬರುವರೆಗೆ ಆಕೆ ಉಪ್ಪು ಕಾರ ಕೂಡಿಸಿಡುವುದಾಗಿಯೂ ಹೇಳಿ ನಮ್ಮನ್ನು ಕಳಿಸಿದಳು. ನನಗೆ ಆಗಿನ್ನೂ ಆರೇಳು ವರ್ಷ. ನಮಗೆ ಆಗ ಅದು ಯಾರ ಮರವಾದರೇನು? ನಮಗೆ ಬೇಕಿದ್ದುದು ಆಮರದ ಮಾವಿನ ಕಾಯಿ. ನಾವು ಹೋಗಿ ಆ ತೋಟದ ಒಳಗೆ ಪ್ರವೇಶಿಸಿ ಒಂದೆರೆಡು ಮಾವಿನ ಕಾಯಿ ಕಿತ್ತು ಕೊಂಡಿರಬಹುದು, ಅಷ್ಟರಲ್ಲಿ ಒಂದೆರಡು ಮಕ್ಕಳು ಓಡಿಬಂದು ನಮ್ಮನ್ನು ವಿರೋಧಿಸಿದರು. ಆ ವಯಸ್ಸಿನಲ್ಲಿ ಜಗಳವಾಡುವುದನ್ನು ಹೇಳಿಕೊಡಬೇಕೆ, ಅವರಲ್ಲಿ ಒಬ್ಬಳು ನನಗಿಂತ ಚಿಕ್ಕವಳು, ನನಗೆ ಕೋಪ ತಡೆಯಲಾಗಲಿಲ್ಲ ಅಲ್ಲಿಯೇ ಬಿದ್ದಿದ್ದ ಒಂದು ಒಡೆದ ಹಂಚಿನ ಚಿಕ್ಕ ತುಂಡನ್ನು ತೆಗೆದುಕೊಂಡು ಆಕೆಯ ತಲೆಯತ್ತ ಬೀಸಿದೆ. ಪುಣ್ಯಕ್ಕೆ ಅದು ಅವಳಿಗೆ ತಾಗಿದರೂ ಅಷ್ತೊಂದು ದೊಡ್ಡ ಗಾಯಗಳಾಗಿರಲಿಲ್ಲ. ಅವಳು ಅಳುತ್ತಾ ಅವಳ ಮನೆಯತ್ತಾ ಓಡಿದರೆ, ನಾವು ಕಿತ್ತುಕೊಂಡ ಮಾವಿನಕಾಯಿಗಳನ್ನು ನಮ್ಮ ಮನೆಗೆ ತಂಡು ತಿನ್ನ ತೊಡಗಿದವು. ಆಗ ನಮಗೆ ಮಾವಿನ ಕಾಯಿಯ ರುಚಿ ಹಿಡಿಸುತ್ತಿತ್ತೇ ಹೊರತು ಆಕೆಯ ನೋವಿಲ್ಲ. ಈಗಲೂ ಆ ಸಹೋದರಿಯನ್ನು ನೋಡಿದಾಗ ಆ ಮಾವಿನ ಕಾಯಿಯ ನೆನಪುಗಳು ಒಮ್ಮೆ ಮನಸ್ಸಲ್ಲಿ ಸುಳಿಯದೇ ಇರದು.

ನಾವು ತವರು ಮನೆಯಲ್ಲಿರುವಷ್ಟು ದಿನ, ಆ ಮನೆಯಲ್ಲಿರುವವರಿಗೆ ಒಂದಿಲ್ಲ ಒಂದು ಸಮಸ್ಯೆಯನ್ನು ತಂದೊಡ್ಡುತ್ತಿದ್ದುದು ಸರ್ವೆ ಸಾಮಾನ್ಯ. ನಮ್ಮ ಅಜ್ಜಿಮನೆಯ ಒಂದು ಪಕ್ಕದ ಮನೆಯವರ ತೋಟದಲ್ಲಿ ಒಂದು ದಾಳಿಂಬೆಯ ಗಿಡ, ನಮ್ಮ ಅಜ್ಜಿಮನೆಯವರ ತೋಟಕ್ಕೆ ಹೊಂದಿಕೊಂಡಂತೆ ಇತ್ತು. ಗಿಡ ಪಕ್ಕದ ತೋಟದಲ್ಲಿದ್ದರೂ, ಟಿಸಿಲುಗಳೆಲ್ಲವು ನಮ್ಮ ಅಜ್ಜಿ ಮನೆಯ ತೋಟದಲ್ಲೇ ಇತ್ತು. ಆ ಗಿಡ ಆಗ ತಾನೇ ಕಾಯಿ ಬಿಡಲು ಪ್ರಾರಂಭವಾಗಿ ಒಂದೆರಡು ತಿಂಗಳು ಕಳೆದಿರಬಹುದೇನೋ. ಅದರ ಕಾಯಿಗಳು ಹಣ್ಣಾಗದಿದ್ದರೂ ಕೆಂಪಗಾಗಿದ್ದು ನಮಗೆ ಹಣ್ಣಿನಂತೆಯೇ ಕಾಣುತ್ತಿದ್ದರಿಂದ, ನಮಗೆ ಹೇಗಾದರೂ ಮಾಡಿ ಅದನ್ನು ಕೀಳಲೇ ಬೇಕೆಂದು ಒಂದು ದಿನ ನಿರ್ಧಾರಮಾಡಿದ್ದೆವು. ಹಗಲಲ್ಲಿ ಅದು ಸಾದ್ಯವಿಲ್ಲವೆಂದು ರಾತ್ರಿಗಾಗಿ ಕಾಯುತ್ತಾ ಕುಳಿತೆವು. ಆರಾತ್ರಿ ಊಟ ಮಾಡಿದವರೇ ಹೋಗಿ ಒಂದಿಷ್ಟು ಕಾಯಿಗಳನ್ನು ಕಿತ್ತು ತಂದೆವು. ಮನೆಗೆ ತಂದು ತಿನ್ನಲೂ ನೋಡಿದಮೇಲೆಯೇ ತಿಳಿದಿದ್ದು ಅವು ಕಾಯಿಗಳೆಂದು. ತಿನ್ನಲೂ ಆಗದೇ, ಇಟ್ಟುಕೊಳ್ಳಲು ಆಗದೇ ಹಾಗೆ ಅವನ್ನು ಎಸೆದು ಬಿಟ್ಟೆವು. ಮಾರನೇ ದಿನ ಆ ಗಿಡ ನೋಡಿದ ಆಮನೆಯವರಿಗೆ ಅಲ್ಲಿ ಒಂದಿಷ್ಟು ಕಾಯಿಗಳಿಲ್ಲವೆನ್ನುವುದನ್ನು ತಿಳಿದು ನಮ್ಮ ಮನೆಯಲ್ಲಿ ತಿಳಿಸಿದರು. ನಮ್ಮ ಮನೆಯಲ್ಲಿ ನಮಗೊಂದಿಷ್ಟು ಏಟುಗಳನ್ನು ತಿಂದಿದ್ದು ಆಯಿತು. ಆಗ ಆ ಹೊಡೆತಗಳೆಷ್ಟು ದಿನ ನೆನಪಿರುತ್ತವೆ. ಮತ್ತೊಮ್ಮೆ ತಪ್ಪು ಮಾಡುವವರೆಗೆ ಅವೆಲ್ಲಾ ಮರೆತು ಹೋಗುತ್ತವೆ ಅಷ್ಟೇ. 

ಒಮ್ಮೆ ನಾನು ನಮ್ಮ ಅಜ್ಜಿ ಮನೆಗೆ ಹೋದಾಗ ನಮ್ಮ ಮಾವನ ಮಕ್ಕಳೆಲ್ಲ, ಅವರ ತಾಯಿಯ ತವರು ಮನೆಗೆ ಹೋಗಿದ್ದರು. ಅಮ್ಮನ ಜೊತೆ ಹೋದ ನಾನು ಅಲ್ಲಿ ಅವರು ಇಲ್ಲದ ಮೇಲೆ ನಾನು ಅಮ್ಮನ ಜೊತೆಗೆ ಮತ್ತೆ ಊರಿಗೆ ಹೊರಡುವುದಾಗಿ ತೀರ್ಮಾನಿಸಿದ್ದೆ. ಆದರೆ ನಮ್ಮ ಚಿಕ್ಕಮ್ಮಂದಿರು ನಮ್ಮ ಮಾವನ ಮಕ್ಕಳು ಕೆಲವು ದಿನಗಳಲ್ಲೇ ಬರುತ್ತಾರೆ ಎಂದು ನನಗೆ ಅಲ್ಲಿಯೇ ಇರುವಂತೆ ಹೇಳಿ ಇಟ್ಟುಕೊಂಡರು. ನನಗೆ ಬೇಸರವಾದರೂ ಒಂದೆರಡು ದಿನ ಅಂತಾ ಸುಮ್ಮನಿದ್ದೆ. ಮಾರನೆಯ ದಿನಾ ಹೀಗೆ ಮನೆಯ ಎದುರುಗಡೆಯ ಜಗುಲಿಯ ಹೊರಗಡೆ ಆಡುತ್ತಾ ಕುಳಿತಿದ್ದಾಗ ಒಬ್ಬ ಹುಡುಗ ಬಂದ. ನನಗೆ ಆತನ ನಿಜ ಹೆಸರು ಏನಂತ ತಿಳಿಯದಿದ್ದರೂ ಆತನನ್ನು ಎಲ್ಲರೂ ಮಾಣಿಕೋಸ (ಮಾಣಿಯ ಮಗ) ಎಂದೇ ಕರೆಯುತ್ತಿದುರಿಂದ ನಾನು ಅವನ ಹೆಸರು ಮಾಣಿಕೋಸ ಎಂತನೇ ತಿಳಿದಿದ್ದೆ ಆಗ. ಆಮೇಲೆ ದೊಡ್ಡವನಾದ ಮೇಲೆ ತಿಳಿದಿದ್ದು ಆತನ ಹೆಸರು ಮಹಾಬಲೇಶ್ವರನೆನ್ನುವುದು. ಆತ ಅಲ್ಲಿಗೆ ಬಂದಾಗ ನನಗೆ ಸಂತೋಷವಾಯಿತು. ನಾವಿಬ್ಬರು ಆಟ ಆಡುತ್ತಾ ಹಾಗೆ ಜೈನಬೀರ ದೇವಸ್ಥಾನದ ಹತ್ತಿರ ಹೋದೆವು. ಜೈನಬೀರ ದೇವಸ್ಥಾನದ ಹಿಂದೆ, ಪಾಂಡುರಂಗ ನಾಯಕರ ಮನೆಯ ಪಕ್ಕದ ಹೊಲದಲ್ಲಿ ಯಾರೋ ಕಲ್ಲಂಗಡಿ ಬೆಳೆ ಬೆಳೆಸಿದ್ದರು, ಕಾಯುಗಳಿನ್ನು ಬೆಳೆಯುತ್ತಿದ್ದವು, ಇನ್ನೂ ಹಣ್ಣಾಗಿರದಿದ್ದರೂ ದೊಡ್ಡದಾಗುತ್ತಾ ಬಂದಿದ್ದವು. ಆ ಕಾಯಿಗಳನ್ನು ನೋಡಿ ನಮಗೆ ಅವನ್ನು ತಿನ್ನುವ ಆಸೆ. ಆ ವಯಸ್ಸೇ ಹಾಗಲ್ಲವೇ ತಿನ್ನುವ ವಸ್ತುಗಳನ್ನು ನೋಡಿದಾಗ ಅವು ಯಾರದ್ದಾದರೇನು? ಸಿಕ್ಕರೆ ತಿಂದು ಬಿಡುವುದು ಅಷ್ಟೇ. ನಾವಿಬ್ಬರೂ ಆ ಹೊಲದತ್ತ ಹೋದೆವು ಯಾರು ಇರಲಿಲ್ಲ, ಸಮಯ ಮಧ್ಯಾಹ್ನವಾಗುತ್ತಾ ಬಂದಿತ್ತು. ಇಬ್ಬರು ಒಂದು ಕಾಯಿ ಕಿತ್ತು ಒಡೆದು ನೋಡಿದೆವು  ಹಣ್ಣಾಗಿರಲಿಲ್ಲ. ಅದು ಹಣ್ಣಾಗಿಲ್ಲವೆಂದು ಇನ್ನೊಂದನ್ನು ಕಿತ್ತೆವೂ ಅದು ಹಣ್ಣಾಗಿರಲಿಲ್ಲ. ಹೀಗೆ ಒಂದಾದ ಮೇಲೊಂದರಂತೆ ಐದಾರು ಕಾಯಿಗಳನ್ನು ಕಿತ್ತಿರಬಹುದು. ದೇವಸ್ಥಾನ ಪೂಜೆಗೆ ಬಂದ ಯಾರೋ ನಮ್ಮನ್ನು ನೋಡಿ "ಏಯ್" ಎಂದು ಕೂಗಿದರು. ಅವರಿಗೂ ನಾವ್ಯಾರು ಅಂತ ಬಹುಷಃ ತಿಳಿದಿರಲಿಕ್ಕಿಲ್ಲ ಹಾಗಾಗಿ ಮನೆಗೆ ತಿಳಿಸಿರಲಿಲ್ಲ. ನಮಗೆ ಒಂದಡೆ ನಿರಾಶೆ, ಇನ್ನೊಂದೆಡೆ ಅವರೆಲ್ಲಿ ಮನೆಗೆ ತಿಳಿಸುತ್ತಾರೋ ಎನ್ನುವ ಹೆದರಿಕೆ, ಅಲ್ಲಿಂದ ಓಡಿ, ಗದ್ದೆಯನ್ನು ದಾಟಿ, ಕಂಡಕ್ಟರ್ ಗಿರಿಯಣ್ಣನವರ ಮನೆಯ ಹಿಂಬಾಗದಿಂದ ಊರ ಒಳಗೆ ಸೇರಿ, ಹೇನಜ್ಜಿ ದೇವಸ್ಥಾನವನ್ನು ಬಳಸಿ ಮನೆ ಸೇರಿದ್ದೆವು. ದೇವಸ್ಥನಕ್ಕೆ ಬಂದವರಿಗೆ ನಾವ್ಯಾರು ಅಂತ ತಿಳಿಯದ ಕಾರಣದಿಂದಲೋ ಅಥವಾ ಹೋಗಲಿ ಮಕ್ಕಳು ಅಂತಲೋ ಮನೆಗೆ ತಿಳಿಸದೇ ಇದ್ದುದರಿಂದ ಮನೆಗೆ ಈ ವಿಷಯದ ಬಗ್ಗೆ ಅರಿವಿರದಿದ್ದರಿಂದ ಬೈಸಿಕೊಳ್ಳುವುದೇನೋ ತಪ್ಪಿತು. ಆದರೆ ಕಾಡುವ ನೆನಪುಗಳಿಂದ ತಪ್ಪಿಸಿಕೊಳ್ಳಲು ಸಾದ್ಯವೇ?

ಇಂದಿಗೂ ನಾನು ಮಾವಿನಕಾಯಿಯನ್ನಾಗಲಿ, ದಾಳಿಂಬೆ, ಕಲ್ಲಂಗಡಿಯ ಹಣ್ಣುಗಳನ್ನಾಗಲಿ ನೋಡಿದರೆ ಮೊದಲು ನೆನಪಾಗುವುದು ಬೆಲೇಕೇರಿಯಲ್ಲಿ ನಡೆದ ಈ ಘಟನೇಗಳೇ. 

--ಮಂಜು ಹಿಚ್ಕಡ್ 

Thursday, October 24, 2013

ಇಚ್ಛೆ!

ಬರಹ ನಿನ್ನಿಚ್ಛೆ
ಬದುಕು ನಿನ್ನಿಚ್ಛೆ
ಇರಬಹುದು, ಹಾಗೆ
ಅಡುಗೆ ನನ್ನಿಚ್ಛೆ,
ರುಚಿಯು ನನ್ನಿಚ್ಛೆ
ಎಂದರೆ ಸಿಡುಕುವುದೇಕೆ?
ಎಲ್ಲಾ ನಿನ್ನಿಚ್ಚೆಗಳಾದರೆ,
ನಿನಗೆ ನಾನೇಕೆ?
ಬೇಕಿತ್ತು ಗೆಳೆಯ!

--ಮಂಜು ಹಿಚ್ಕಡ್

Wednesday, October 23, 2013

ಏರುತಿರುವ ಈರುಳ್ಳಿಯ ಬೆಲೆಯ ಕಂಡು!

ಸ್ಪರ್ಷಿಸುವ ಮೊದಲೇ
ನೂರಾರು ಭಾವಗಳು ಮೇಳೈಸುತಿವೆ
ಈ ಪುಟ್ಟ ಹೃದಯದಲಿ
ನೋಡಿದಾಕ್ಷಣವೇ ತೊಟ್ಟಿಕ್ಕುತ್ತಲಿದೆ
ಹನಿಯಾಗಿ ಕಣ್ಣಿರು
ನಯನಗಳ ಅಂಚಿನಲಿ
ಯೋಚಿಸಿ ಮರುಗದಿರು ಚಲುವೆ
ಇದು ನಿನ್ನ ನೋಡಿಯಲ್ಲ,
ಗಗನಕ್ಕೇರುತಿರುವ ಈರುಳ್ಳಿಯ
ಬೆಲೆಯ ನೋಡಿ.

--ಮಂಜು ಹಿಚ್ಕಡ್ 

Tuesday, October 22, 2013

ಹೂ-ನಗೆ!

ಸಂಜೆಯಾವರಿಸಿ 
ಭಾನು ಕೆಂಪೇರಿ
ಸೂರ್ಯನ ಹೊಂಗಿರಣಗಳು
ದಿಗಂತದಲಿ ಮರೆಯಾಗಿ
ಕತ್ತಲಾವರಿಸತೊಡಗಿದಾಗ
ನಿನ್ನ ಮುಖದಿ ಮೂಡಿದ
ಆ ಹೂ ನಗೆಯು
ಚಂದ್ರನುದಯಿಸಿರಬಹುದೆಂಬ
ಕಲ್ಪನೆಯನೊಮ್ಮೆ ಮನದಿ
ಮೂಡಿಸದೇ ಇರದು ಗೆಳತಿ!

--ಮಂಜು ಹಿಚ್ಕಡ್ 

Monday, October 21, 2013

ಕವಿಗೂ ಕಪಿಗೂ ವ್ಯತ್ಯಾಸವುಂಟೆ!

ಕವಿಗೂ ಕಪಿಗೂ ಇರುವ ವ್ಯತ್ಯಾಸ ಬಾಲ ಮಾತ್ರ
ಕಪಿ ಮರದಿಂದ  ಮರಕೆ ಹಾರಿದರೆ
ಕವಿ  ವಿಷಯದಿಂದ ವಿಷಯಕ್ಕೆ ಹಾರುತಿರುತ್ತಾನೆ
ವೈವಿಧ್ಯತೆಗಳಿರಲೆಂದು
ಕವಿತೆಗಳು ರುಚಿಸಲಿ ಎಂದು ಅಷ್ಟೇ.

--ಮಂಜು ಹಿಚ್ಕಡ್ 

Sunday, October 20, 2013

ಹುಡುಕಾಟ!

ತನ್ನ ಬಾಲದ ಬುಡದಲ್ಲಿ ಬೆಳಕಿದ್ದರೂ
ಬೆಳಕ ಹುಡುಕಿ ಸಾಗುವ ಮಿಂಚುಹುಳದಂತೆ
ನನ್ನಲಿ ಪ್ರೀತಿ ತುಂಬಿದರೂ
ಮತ್ತೆ ಪ್ರೀತಿ ಹುಡುಕುತಾ ಸಾಗಿದೆ
ಈ ಗುರಿಯಿಲ್ಲದ ಬದುಕು!

--ಮಂಜು ಹಿಚ್ಕಡ್ 

Saturday, October 19, 2013

O Jaane - Preetiya Puta ( The Page of LOVE)

ಧನ್ಯವಾದಗಳು!

ಹೀಗೆ ಸುಮ್ಮನೆ, ಮನೆಯಲ್ಲಿ ಕುಳಿತು ಬಿಡುವಿನ ವೇಳೆಯಲ್ಲಿ ಬರೆದು ಪ್ರಕಟಿಸಿದ ನನ್ನ ಬ್ಲಾಗ್ ಹೀಗೆ ಸುಮ್ಮನೆ!ಗೆ ಇಂದು ಇದ್ದಕ್ಕಿದ್ದ್ದಹಾಗೆ ೧೭೫ ಜನ ಪುಟ ವೀಕ್ಷಿಸಿದ್ದು ಒಂದು ಆಶ್ಚರ್ಯವೇ ಸರಿ. ಇದು ನನ್ನ ಬ್ಲಾಗಿನಲ್ಲಿ ಒಂದೇ ದಿನಕ್ಕೆ ಇಷ್ಟೊಂದು ಜನ ವೀಕ್ಷಿಸಿದ್ದು ದಾಖಲೆಯೂ ಕೂಡ. ದಿನಕ್ಕೆ ಸರಾಸರಿ ೪೦ ರಿಂದ ೫೦ ಜನ ಪುಟ ವೀಕ್ಷಿಸುತ್ತಿದ್ದುದು ನಿನ್ನೆಯಿಂದ ಒಮ್ಮೇಲೆ ೧೫೦ ರಿಂದ ೧೭೫ಕ್ಕೆ ಏರಿದೆ. ಇನ್ನೊಂದು ಸಂತೋಷದ ವಿಷಯವೆಂದರೆ ನನ್ನ ಬ್ಲಾಗ ಹೀಗೆ ಸುಮ್ಮನೆ! ಈ ತಿಂಗಳ ೨೧ ಕ್ಕೆ ೭೫ ದಿನಗಳನ್ನೂ ಪೂರೈಸಲಿದ್ದು, ಆಗಲೇ ೨೭೮೫ ಪುಟ ವೀಕ್ಷಣೆಯಾಗಿದ್ದು ೩೦೦೦ ಸಾವಿರದತ್ತ ಮುನ್ನಡೆಯುತ್ತಿದೆ. ಬಹುಷಃ ಇದೇ ರೀತಿ ಮುಂದುವರೆದಲ್ಲಿ ೨೧ನೇ ತಾರೀಖಿನ ಹೊತ್ತಿಗೆ ೩೦೦೦ ಸಾವಿರಕ್ಕೂ ಮಿಕ್ಕಿ ಪುಟ ವೀಕ್ಷಣೆಯಾದಲ್ಲಿ ಆಶ್ಚರ್ಯವಿಲ್ಲ.

ನಾನಿಲ್ಲಿ ಪ್ರಕಟಿಸಿದ ಅದೆಷ್ಟೋ ಕವಿತೆಗಳು, ಲೇಖನಗಳು ಅದೆಷ್ಟೋ ಪತ್ರಿಕೆಗಳ ನಿಯತಕಾಲಿಕಗಳ ಕದ ತಟ್ಟಿ, ಒಳ ಪ್ರವೇಸಿಸಲೂ ಆಗದೇ, ಹೊರಬರಲು ಆಗದೇ ಕಸದ ಬುಟ್ಟಿ ಸೇರಿದ ದಿನಗಳಲ್ಲಿ, ಉತ್ತರ ಬರಬಹುದೇನೋ ಎಂದು ಕಾತರಿಸಿ ಬೇಸತ್ತಾಗ, ನನ್ನ ಕವನಗಳನ್ನು, ಲೇಖನಗಳನ್ನೂ ತಮ್ಮ ಬ್ಲಾಗನಲ್ಲಿ ಪ್ರಕಟಿಸಲು ಅವಕಾಸವಿತ್ತು, ನನ್ನ ಒಳ್ಳೆಯ ಲೇಖನಗಳನ್ನು ತಮ್ಮ ಮುಖ ಪುಟದಲ್ಲಿ ವಾರಗಟ್ಟಲೇ ಪ್ರಕಟಿಸಿದ ಸಂಪದ ಬಳಗಕ್ಕೂ, ಸಂಪದ ಓದುಗರಿಗೂ, ನನ್ನ ಬ್ಲಾಗ್ ವೀಕ್ಷಿಸಿ ನನ್ನ ಕವಿತೆಗಳಲ್ಲಿನ ಓರೆ ಖೋರೆಗಳನ್ನು ತಿದ್ದಲು ಸಹಕರಿಸಿದ ಬದ್ರಿನಾಥ ಪಲ್ಲವಿಯವರಿಗೆ, ನಾನು ಶೀರ್ಷಿಕೆಗೆ ಹೆಸರು ಸೂಚಿಸುವುದರಲ್ಲಿ ಸ್ವಲ್ಪ ಜಾರಿದಾಗ, ಅದಕ್ಕೆ ಸರಿಯಾಗಿ ಹೆಸರು ಸೂಚಿಸಿದ ಗೆಳೆಯ ಕೃಷ್ಣಮೂರ್ತಿ ನಾಯಕರಿಗೆ, ನಾನು ಬರೆಯುವುದನ್ನು ಸಂಪೂರ್ಣ ಬಿಟ್ಟು ಬಿಟ್ಟದ್ದ ಸಮಯದಲ್ಲಿ ಮತ್ತೆ ಬರೆಯಲು ಪ್ರೋತ್ಸಾಹಿಸಿ ಮುನ್ನೆಡಿಸಿದ ನನ್ನ ಗುರುಗಳು, ಸಾಹಿತಿಗಳು ಆದ ಶಾಂತಾರಾಮ್ ನಾಯಕರಿಗೆ. ನಾನು ಗೀಚಿ ಎಸೆದಿದ್ದನ್ನೆಲ್ಲ ಒಂದೆಡೆ ಕೂಡಿಸಿ ಕ್ರೋಡಿಕರಿಸಿಡುವ ನನ್ನ ಮನದನ್ನೆ ನಾಗರತ್ನಳಿಗೆ, ನನ್ನ ಬದುಕಿನ ಪಯಣದಲ್ಲಿ ನಾನು ಆಗಾಗ ದಾರಿ ತಪ್ಪಿ ನಡೆದಾಗ, ಮತ್ತೆ ಮತ್ತೆ ಕೈ ಹಿಡಿದು ಸರಿ ದಾರಿಗೆ ಕರೆದು ತಂದ ನನ್ನ ತಂದೆ ತಾಯಿಯರಿಗೆ, ನನ್ನ ಹುಚ್ಚು ವಿಚಾರಗಳನ್ನು ಕವಿತೆಗಳ ರೂಪದಲ್ಲಿ, ಲೇಖನಗಳ ರೂಪದಲ್ಲಿ ಬರೆದಾಗ ಅವೆಲ್ಲವನ್ನೂ ಓದಿ ಪ್ರೋತ್ಸಾಹಿಸಿದ ತಮ್ಮಲ್ಲರಿಗೂ ನನ್ನ ಹೃದಯ ಪೂರ್ವಕ ಕೃತಜ್ನತೆಗಳು. ನಿಮ್ಮ ಪ್ರೋತ್ಸಾಹ, ಸಲಹೆ, ಸಹಕಾರ ಹೀಗೆ ಎಂದೆಂದಿಗೂ ಹೀಗೆ ಮುಂದುವರಿಯುತ್ತಿರಲಿ.

ಇಂತಿ ನಿಮ್ಮವ 

ಮಂಜು ಹಿಚ್ಕಡ್ 

ಗಿಡವಾಗಿದ್ದಾಗ ಬಗ್ಗಿಸಲಾಗದ್ದನ್ನು, ಮರವಾದಾಗ ಬಗ್ಗಿಸಲು ಸಾದ್ಯವೇ?

ಮೊನ್ನೆ ಗುರುವಾರ ಮಧ್ಯಾಹ್ನ ಕಛೇರಿಯಲ್ಲಿ ಊಟ ಮುಗಿಸಿ ನನ್ನ ಜೊತೆ ಕೆಲಸ ಮಾಡುವ ಮೂವರು ಸಹೋದ್ಯೋಗಿಗಳೊಂದಿಗೆ, ಕಛೇರಿಯ ಬಲಬಾಗದೆಡೆ ಸುತ್ತಾಡಲು ಹೊರೆಟೆವು. ಕಛೇರಿಯಲ್ಲಿ ಊಟ ಮಾಡಿದ ಮೇಲೆ ಸಮಯವಿದ್ದಲ್ಲಿ ಒಂದು ಸುತ್ತು ಸುತ್ತಾಡಿ ಬರುತ್ತಿದ್ದೆವು. ತಿಂದ ಅನ್ನ ಜೀರ್ಣವಾಗಿ, ನಿದ್ದೆ ಸ್ವಲ್ಪ ದೂರವಾಗಲಿ ಎಂದು. ನಮ್ಮ ಕಛೇರಿಯ ಬಲಬಾಗಲ್ಲಿ ವಾಸವಾಗಿರುವರೆಲ್ಲ ದೊಡ್ಡ ಶ್ರೀಮಂತರೇ. ಹಾಗಾಗಿ ಅಲ್ಲೆಲ್ಲಾ ದೊಡ್ಡ ದೊಡ್ಡ ಮನೆಗಳು, ಮನೆಗಳ ಮುಂದೆ ಚಿಕ್ಕ ಚಿಕ್ಕ ಹೂದೋಟಗಳು. ಮನೆಯ ಜನರನ್ನು ನೋಡಲಾಗದಿದ್ದರು ಅವರು ಸಾಕಿ ಬೆಳೆಸಿರುವ ವಿವಿಧ ತಳಿಗಳ ಡೊಗಿಗಳನ್ನು, (ಕ್ಷಮಿಸಿ, ನಾಯಿಗಳು ಅಂದರೆ ತಪ್ಪಾಗುತ್ತದೆ ಎಂದು ಮುದ್ದಾಗಿ ಡೊಗಿಗಳು ಎಂದು ಕರೆದಿದ್ದೇನೆ. ಎಷ್ಟೇ ಅಂದರೂ ಅವು ಸಿರಿವಂತರ ಮನೆಯ ನಾಯಿಗಳಲ್ಲವೇ?) ಆಗಾಗ ಅಲ್ಲೊಮ್ಮೆ, ಇಲ್ಲೊಮ್ಮೆ ಓಡಾಡುವ, ಬಿ.ಎಮ್.ಡಬ್ಲ್ಯೂ, ಬೆಂಜ್, ಆಡಿಯಂತಹ ಐಶಾರಾಮಿ ಕಾರುಗಳು, ಮನೆಯ ಮುಂದೆ ಮನೆಯವರ ಹೆಸರು, ಹುದ್ದೆ, ಅವರ ಓದು ಮುಂತಾದವುಗಳನ್ನು ತಿಳಿಸಿ ಅಮೃತ ಶಿಲೆಯಲ್ಲಿ ಕೆತ್ತಿ ಬರೆದಿರುವ ಚಿಕ್ಕ ಫಲಕ, ಆಗಾಗ ಓಡಾಡುವ ವಾಹನಗಳ ಶಬ್ದವನ್ನು ಬಿಟ್ಟರೆ ಉಳಿದೆಲ್ಲ ಹೊತ್ತು ಬೇರೆ ಯಾವ ಶಬ್ದಗಳು ಕೇಳಲಾರದಷ್ಟು ಮೌನ. ಮರಗಿಡಗಳಿಂದ ಕೂಡಿದುದರಿಂದ ಬಿಸಿಲು ಕಾಣದ ರಸ್ತೆ, ವಾಹನ ಓಡಾಟ ಕಡಿಮೆ ಇದ್ದುದರಿಂದ, ಅಲ್ಲಲ್ಲಿ ನಿಂತ ವಾಹನಗಳಲ್ಲಿ ಆಗಾಗ ಕಾಣ ಸಿಗುವ ನವ ಪ್ರೇಮಿಗಳ ಸರಸ-ಸಲ್ಲಾಪಗಳು (ಮುದ್ದಣ್ಣ-ಮನೋರಮೆಯರ ಸರಸ-ಸಲ್ಲಾಪಗಳನ್ನೂ ಮೀರಿಸಿದ್ದು, ವ್ಯತ್ಯಾಸವೆಂದರೆ ಒಮ್ಮೊಮ್ಮೆ ಮುದ್ದಣ್ಣನು, ಒಮ್ಮೊಮ್ಮೆ ಮನೋರಮೆಯೂ ಬದಲಾಗುತ್ತಿರುವುದರಿಂದ, ಮುದ್ದಣ್ಣ ಮನೋರಮೆಗೆ ಹೋಲಿಸಲಾಗದು), ಹೀಗೆ ವರ್ಣಿಸುತ್ತಾ ಹೋದರೆ ಇದು ಇಷ್ಟಕ್ಕೆ ಮುಗಿಯುವಿದಿಲ್ಲ. ಅಲ್ಲಿ ಒಂದು ಸುತ್ತು ಸುತ್ತಿ ಬಂದರೆ ಸಾಕು, ಕಣ್ಣು ತಂಪಾಗಿ, ಮನಸು ಹಿತವಾಗಿ, ದೇಹ ಉಲ್ಲಾಸಗೊಂಡಿರುತ್ತದೆ.

ಕಳೆದ ಆರು ವರ್ಷಗಳಲ್ಲಿ ಅದೆಷ್ತು ಬಾರಿ ಹೀಗೆ ಸುತ್ತಾಡಿದ್ದೆವೋ ಗೊತ್ತಿಲ್ಲ. ಪ್ರತಿ ಸಾರಿ ಸುತ್ತುವಾಗಲೂ ಒಂದೊಂದು ಹೊಸ ಅನುಭವ. ಮೊನ್ನೆ ಗುರುವಾರ ನಡೆದ ಘಟನೆ ಮತ್ತು ಅನುಭವಗಳೆ ಈ ಲೇಖನದ ಹುಟ್ಟಿಗೆ ಒಂದು ಕಾರಣ. ನಾವು ಸುತ್ತಾಡುವ ರಸ್ತೆಯ ಪಕ್ಕದಲ್ಲಿ ಒಂದು ಮನೆ. ಇದುವರೆಗೂ ಆ ಮನೆಯಲ್ಲಿ ಯಾರನ್ನೂ ನೋಡಿರಲಿಲ್ಲ. ಆದರೆ ಮೊನ್ನೆ ಗುರುವಾರ ಆ ಮನೆಯಲ್ಲೂ ಜನರಿದ್ದಾರೆ ಎಂದು ನೋಡುವ ಭಾಗ್ಯ ಆಕಸ್ಮಿಕವಾಗಿ ಸಿಕ್ಕಿ ಬಿಟ್ಟಿತು. ಅದು ಮನೆಯ ಆವರಣದಲ್ಲಿ ನಿಂತು, ರಸ್ತೆಯಲ್ಲಿ ಪಟಾಕ್ಷಿ ಹೊತ್ತಿಸಿ ಎಸೆದು, ಅದು ಸ್ಪೋಟಗೊಳ್ಳುವವರೆಗೂ ಅದರ ಶಬ್ಧ ತನಗೆಲ್ಲಿ ಕೇಳಿ ಬಿಡತ್ತದೋ ಎಂದು ಕಿವಿ ಮುಚ್ಚಿನಿಂತಿರುವ ಬಾಲಕನ ರೂಪದಲ್ಲಿ. ಆತನಿಗೆ ಬಹುಷಃ ಹತ್ತು ಹದಿನೈದರ ಪ್ರಾಯವಿರಬಹುದು. 

ಅಂದು ನಾವು ನಮ್ಮ ಕಷ್ಟ ಸುಖಗಳನ್ನು ಮಾತನ್ನಾಡಿಕೊಳ್ಳುತ್ತಾ ಸಾಗುತ್ತಿರುವಾಗ, ಆ ಹುಡುಗ ಮರೆಯಲ್ಲಿ ನಿಂತಿರುವುದನ್ನು ಗಮನಿಸಿದರು, ಆತ ಏನು ಮಾಡುತ್ತಿರಬಹುದೆಂದು ಗಮನಕ್ಕೆ ಬರಲಿಲ್ಲ. ಆತ ಆಗಲೇ ಪಟಾಕ್ಷಿ ಉರಿಸಿ ರಸ್ತೆಗೆ ಎಸೆದಿದ್ದರೂ ಆತನ ಕಡೆ ಗಮನವಿದ್ದುದರಿಂದ ನಮ್ಮ ಕಾಲಬಳಿಯೇ ಇದ್ದ ಪಟಾಕ್ಷಿಯ ಕಡೆ ಗಮನವಿರಲಿಲ್ಲ. ಆತನು ಕೂಡ ನಮ್ಮನ್ನು ನೋಡುತ್ತಿದ್ದರೂ ನಮ್ಮನ್ನು ಎಚ್ಛರಿಸಲಿಲ್ಲ. ಒಮ್ಮೆ ಢಂ! ಎನ್ನುವ ಶಬ್ದ ಪಟಾಕ್ಷಿಯಿಂದ ಕೇಳಿ ಬಂದರೆ, ಹೋ! ಅನ್ನುವ ಉದ್ಗಾರ ಆ ಹುಡುಗನ ಬಾಯಿಂದ ಕೇಳಿ ಬಂತು. ಅದನ್ನು ನಿರೀಕ್ಷಿಸದ ನಮಗೆ ಆತಂಕ, ಉಧ್ವೇಗ, ಕೋಪ, ಭಯ ಎಲ್ಲವೂ ಒಟ್ಟಿಗೆ ಹರಿದು ಬಂದವು. ಅನಿರೀಕ್ಷಿತವಾಗಿ ಇಂತಹ ಘಟನೆಗಳು ಸಂಭವಿಸಿದ್ದರಲ್ಲಿ ಯಾರಿಗಾದರೂ ಹೀಗಾಗುವುದು ಸಹಜವೇ. ಪುಣ್ಯಕ್ಕೆ ನಮ್ಮಲ್ಲಿ ಯಾರಿಗೂ ಹೃದಯ ಸಂಭಂದಿ ಕಾಯಿಲೆಗಳಿರಲಿಲ್ಲ. ಹಾಗೇನಾದರೂ ಇದ್ದರೆ ಬಹುಷಃ ಒಂದು ವಿಕೇಟ್ ಅಲ್ಲಿಯೇ ಹಿಟ್ ವಿಕೇಟ್ ಆಗಿ ಭೂಲೋಕ ಬಿಟ್ಟು ಹೋಗುತಿತ್ತೇನೋ. ಆದರೆ ಹಾಗಾಲಿಲ್ಲ ಅದೇ ನಮ್ಮ ಪುಣ್ಯ. ನಮ್ಮ ಸಹೋದ್ಯೋಗಿಯೊಬ್ಬರಿಗೆ ಆಗಲೇ ಕೋಪವುಕ್ಕಿ ಬಂದು, ಆ ಹುಡುಗನಿಗೆ,

"ಯಾಕೆ ರಸ್ತೆಯಲ್ಲಿ ಜನ ಬರುವುದು ನಿನ್ನ ಕಣ್ಣಿಗೆ ಕಾಣುವುದಿಲ್ಲವೇ?" ಎಂದು ಬೆಂಗಳೂರಿನ ಇಂದಿನ ಆಡು ಭಾಷೆಯಾದ ಇಂಗ್ಲೀಷಿನಲ್ಲಿಯೇ ಕೇಳಿ ಬಿಟ್ಟರು.

ಆ ಹುಡುಗನೇನು ಕಡಿಮೆ ಇರಲಿಲ್ಲ. ನರ್ಸರಿಗಿಂತ ಮೊದಲೇ, ಬೇರೆ ಏನನ್ನು ಕಲಿಯದಿದ್ದರೂ ಇಂಗ್ಲೀಷನ್ನು ಕಲಿಯುವ ಇತರ ಬೆಂಗಳೂರು ಹುಡುಗರಂತೆ ಆತನು ಇಂಗ್ಲೀಷನ್ನು ಕಲಿತಿದ್ದವ ಆತ. "ಯಾಕೆ ನೀವು ಈ ರಸ್ತೆಯಲ್ಲಿ ನಡೆದು ಬರುವಾಗ ಯಾಕೆ ಸುಮ್ಮನೆ ನಡೆದು ಬರುತ್ತಿರಾ? ಆ ಕಡೆ, ಈ ಕಡೆ ನೋಡಿಕೊಂಡು ಬರಲಾಗುವುದಿಲ್ಲವೇ? ನಾನು ನೀವು ಬರುವುದಕ್ಕಿಂತ ಮೊದಲೇ ಇಲ್ಲಿ ನಿಂತು ಪಟಾಕ್ಷಿ ಸಿಡಿಸುತ್ತಿದ್ದೇನೆ. ನೀವು ನಂತರ ಬಂದವರು ನೋಡಿ ಬರಬೇಕು" ಎಂದ, ಅದು ಅಮೇರಿಕಾದ ಶೈಲಿಯಲ್ಲಿ. ಎಂತಹ ನಯ ವಿನಯ ಎನಿಸಿತು ನನಗೆ. 

ನಮ್ಮ ಸಹೋದ್ಯೋಗಿಗಳೆನು ಕಡಿಮೆಯೆ, ಅದೂ ಆ ಹುಡುಗನ ಮುಂದೆ, "ಏನೋ ಇದು, ರಸ್ತೆಯಲ್ಲಿ ಜನರು ಗಾಡಿಗಳು ಓಡಾಡುತ್ತಿರುತ್ತವೆ, ನೋಡಿ ಎಸೆಯುವುದನ್ನು ಬಿಟ್ಟು ಹೀಗೆಲ್ಲಾ ಮಾತನ್ನಾಡುತ್ತೀಯಾ? ಎರಡು ಕೊಡಲೇನು?" ಎಂದು ಗದರಿಸಿ ಮುಂದೆ ಹೋದರು. 

ಆತ ತಕ್ಷಣ ಮನಸ್ಸಿನಲ್ಲಿಯೇ ಬಯ್ದು ಕೊಳ್ಳುತ್ತಾ ಮನೆಯ ಒಳಗೋಡಿದ. ಮನೆಯಿಂದ ಯಾವುದೇ ಶಬ್ಧಗಳು ಕೇಳಿಬರಲಿಲ್ಲ. ಬಹುಷಃ ಮನೆಯಲ್ಲಿ ಬೆಂಗಳೂರಿನ ಇತರ ಬಹುತೇಕ ಮಕ್ಕಳಂತೆ ಈತನು ಒಂಟಿ ಎನಿಸಿ ಮರುಕ ಹುಟ್ಟಿತು. ನನಗೆ ಆತನ ವರ್ತನೆ ನೋಡು ಆಶ್ಚರ್ಯವೆನಿಸಲಿಲ್ಲ. ಅದು ಆತನ ತಪ್ಪು ಅಲ್ಲ. ಆತನನ್ನು ಹುಟ್ಟಿಸಿ ಬೆಳೆಸಿದವರು ತಪ್ಪು ಅನ್ನಿಸಿತು. ಆತನ ತಂದೆ ತಾಯಿಯರು, ಬೆಂಗಳೂರಿನ ಇತರ ತಂದೆ ತಾಯಿಯರಂತೆ ಹಣ ಪ್ರತಿಷ್ಟೆಯ ಬೆನ್ನು ಹತ್ತಿ ಹೋದುದರ ಪರಿಣಾಮವೇ ಆ ಮಗುವಿನ ವರ್ತನೆ. ಇಂದು ನಮಗೆ ಹಣ ಪ್ರತಿಷ್ಟೆಗಳೇ ಮುಖ್ಯವಾಗಿ ಬಿಟ್ಟಿವೆ. ಅವುಗಳ ಮುಂದೆ ನಾವು ಬೇರೆ ಏನನ್ನು ನೋಡಲಾರದಷ್ಟು ಸಂಕುಚಿತಗೊಂಡಿದ್ದೇವೆ. ಹಣ ಪ್ರತಿಷ್ತೆಗಾಗಿ ನಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದೇವೆ. ನಾವು ಗಳಿಸುವ ಹಣ ಯಾರಿಗಾಗಿ? ಏತಕ್ಕಾಗಿ? ಅದು ನಮಗಾಗಿ, ನಮ್ಮ ಪ್ರತಿಷ್ಟೆಗಾಗಿ ಎಂದರೂ ಅದು ನಮ್ಮ ಮಕ್ಕಳಿಗಾಗಿಯೇ ಅಲ್ಲವೇ? ಹಾಗಿದ್ದರೆ ಮಕ್ಕಳಿಗೆ ಹಣ, ಹಣಕ್ಕಾಗಿಯೇ ಶಿಕ್ಷಣಕೊಡುವ ಶೈಕ್ಷಣಿಕ ಸಂಸ್ತೆಗಳಲ್ಲಿ ಒಂದಿಷ್ಟು ಶಿಕ್ಷಣ ಕೊಡಿಸಿದರೆ ಸಾಕೇ? ಅವರಿಗೆ ಮುಂದಿನ ಬದುಕು ಸಾಗಿಸುವ, ತಮ್ಮ ಬದುಕನ್ನೇ ತಾವೇ ಕಟ್ಟಿ ಕೊಳ್ಳುವ ವಿದ್ಯೆಯನ್ನು ಹೇಳಿ ಕೊಡುವುದು ಬೇಡವೆ? ಅವೆಲ್ಲವನ್ನು ಒಂದಿಷ್ಟು ಹಣ ಪಡೆದು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಹೇಗೆ ಪಾಸು ಮಾಡುವುದು? ಹೇಗೆ ನೌಕರಿಗಿಟ್ಟಿಸಿ ಕೊಳ್ಳುವುದು ಎನ್ನುವುದನ್ನು ಹೇಳಿ ಕೊಡುತ್ತವಯೇ ಹೊರತು, ಬದುಕು ಸಾಗಿಸುವ ದಾರಿಯನ್ನಲ್ಲ. ಅವನ್ನು ನಾವೇ ನಮ್ಮ ಮಕ್ಕಳಿಗೆ ಹೇಳಿ ಕೊಡಬೇಕೇ ಹೊರತು ಬೇರೆಯವರಲ್ಲ. ನಮಗೆ ಅನಿಸಬಹುದು ಈಗೇನು ಬಿಡಿ ಹಣ ಕೊಟ್ಟರೆ ಮಾರು ಕಟ್ಟೆಯಲ್ಲಿ ವ್ಯಕ್ತಿ ವಿಕಸನದ ಪುಸ್ತಕಗಳು ಸಿಗುತ್ತಾವಲ್ಲ ಎಂದು. ಅದಕ್ಕಾಗಿಯೇ ಅಲ್ಲವೇ ಇಂದು ಒಳ್ಳೆಯ ಸಾಹಿತ್ಯದ ಕೃತಿಗಳಿಗಿಂತ ವ್ಯಕ್ತಿ ವಿಕಸನದ ಪುಸ್ತಕಗಳೇ ಜಗತ್ತಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವುದು. ಇಂದು ನಾವು ಹೇಳಿ ಕೊಡದಿದ್ದುದನ್ನು ಮುಂದೆ ಅವರೆಷ್ಟು ಓದಿ ತಿಳಿದು ಕೊಂಡರೇನು ಪ್ರಯೋಜನ? ಚಿಕ್ಕವರಾಗಿದ್ದಾಗ ಏನನ್ನು ತಿಳಿಹೇಳದ ನಾವು , ಮಕ್ಕಳು ದೊಡ್ಡವರಾಗಿ ದಾರಿ ತಪ್ಪಿದ ಮೇಲೆ ಬುದ್ದಿ ಹೇಳಿದರೆ ಏನು ಪ್ರಯೋಜನ? ನಿಮ್ಮ ಮಕ್ಕಳ ವಿಕಸನಕ್ಕಾಗಿ, ಅವರ ಅಬಿವ್ರದ್ದಿಗಾಗಿ ಕನಿಷ್ಟ ಪಕ್ಷ ದಿನದ ಅರ್ಧ ಗಂಟೆಯಾದರೂ ಮೀಸಲಾಗಿಡಿ. ನೆನಪಿಡಿ ಇಂದು ಗಿಡವಾಗಿ ಬಗ್ಗಿಸಲಾಗದ್ದನ್ನು ಮುಂದೆ ಮರವಾಗಿ ಬೆಳೆದ ಮೇಲೆ ಬಗ್ಗಿಸಲಾಗುವುದಿಲ್ಲ.

--ಮಂಜು ಹಿಚ್ಕಡ್ 

Friday, October 18, 2013

ಅಮಲು!

ಹುಚ್ಚು ಹುಚ್ಚಾಗಿ
ನೀ ನನ್ನ ನೋಡಿ
ನಗದಿರು ಚಲುವೆ.
ಇಂದು ನಿನಗವನ
ಪ್ರೀತಿ ಹೆಚ್ಚಾಗಿ
ಅಮಲು ಹತ್ತಿರಬಹುದು.

ಮರೆಯದಿರು, ಚಲುವೆ
ನನಗೂ ಇನ್ನು
ಇಳಿದಿಲ್ಲ ಅಮಲು.
ಆದರೆ ಅದು
ನಿನ್ನ ಪ್ರೀತಿಯದಲ್ಲ
ನಿನ್ನೆಯ ಕುಡಿತದ್ದು!

--ಮಂಜು ಹಿಚ್ಕಡ್ 

Thursday, October 17, 2013

ಕಣ್ಣು ಮುಚ್ಚಿದ ಮಣ್ಣು!!

ಕಾರು ಬಂತು, ಲಾರಿ ಬಂತು
ಅದರ ಹಿಂದೆ ಹಣವು ಬಂತು
ದೂರ ಪಶ್ಚಿಮದ ತೀರಕೆ.
ಯಾಕೆಂದು ಕೇಳುವವರಿಲ್ಲ
ತಿಳಿಯುವುದು ಬೇಕಿರಲಿಲ್ಲ
ಆ ಹಣದ ಕಂತೆಗಳ ಮುಂದೆ.

ಎಲ್ಲಿಯದೋ ಮಣ್ಣಂತೆ
ಎಲ್ಲಿಗೋ ಹೋಗುವುದಂತೆ
ಅದಕೆ ಅಲ್ಲಿ ಬೆಲೆಯುಂಟಂತೆ.
ಎಲ್ಲಿಂದ ಬಂದರೇನು?
ಎಲ್ಲಿಗೆ ಹೋದರೇನು?
ಹಣ ಹರಿದು ಬರುವಾಗ
ಏಕೆ ಅದರ ಚಿಂತೆ?

ಓದು ಬಿಟ್ಟರು ಕೆಲವರು
ಬೇಸಾಯ ಮಾಡುವ
ಭೂಮಿ ಕೊಟ್ಟರು.
ತಂದು ನಿಲ್ಲಿಸಿದರು ಲಾರಿಗಳ
ಸಾಲಾಗಿ ಮನೆಯ ಮುಂದೆ
ಬರಲಿರುವ ಹಣದ ಗುಂಗಿನಲಿ.

ಹಣದ ಮಹಿಮೆಯ ಕಂಡು
ತೀರಿ ಹೋದ ಹೆಣಕು 
ಹೊಟ್ಟೆ ಕಿಚ್ಚಂತೆ.
ಕರೆದು ಕೊಂಡವು ಕೆಲವು
ಜನರನು, ತಮ್ಮ ತಕ್ಕಗೆ.

ಬೆಳೆ ಬೆಳೆವ ಗದ್ದೆಗಳಲಿ
ಕೆಂಪು ದೂಳಿನ ರಾಶಿ.
ವೇಗದ ಲಾರಿಗೆ ಸಿಕ್ಕಿ
ಒಂದಡೆ ಹೆಣಗಳ ರಾಶಿ.
ಏನಾದರೇನು? ಯಾಕಾದರೇನು?
ಹಣ ತಾನಾಗೇ ಬರುವಾಗ
ಚಿಂತಿಸಿ ಫಲವೇನು?

ಇದು ಬರೀಯ ಮಣ್ಣಲ್ಲ
ಆರೋಗ್ಯಕ್ಕೆ ಒಳ್ಳೆಯದಲ್ಲ
ಎಂದು ತಿಳಿಸಹೋದರು ಹಲವರು.
ಹೊಟ್ಟೆ ಕಿಚ್ಚಿನ ಜನ
ಎಂದು ಜರಿದು ಬಿಟ್ಟರು ಕೆಲವರು.

ನಮ್ಮದು ನಮ್ಮಿಷ್ಟ 
ನಿಮಗೇಕೆ ಕಷ್ಟ
ಎಂದವರೆಲ್ಲಿ ಹಲವರಿಗೆ
ಇಂದು ಮಣ್ಣಿಲ್ಲ, ಕೈಯಲ್ಲಿ ಕಾಸಿಲ್ಲ
ಹಾಗಾಗಿ. ಲೆಕ್ಕ ಹಾಕುತ್ತಿದ್ದಾರೆ
ಹಣವನ್ನಲ್ಲ. ಮುಂದೆ
ಕಳೆಯಬೇಕಿರುವ ದಿನವನ್ನ.

Wednesday, October 16, 2013

ಮಳೆ

ಬಿಳಿ ಮೋಡವಿದ್ದರೆ,
ಮಳೆ ಬರದು,
ಕಪ್ಪು ಮೋಡವಿದ್ದರೆ
ಮಳೆ ಬರುವುದು
ಹಾಗಿನಿಲ್ಲ ಚಿನ್ನಾ
ಎಡೆಬಿಡದೇ ಸುರಿಯಲು
ಇದು ನಿನ್ನ ಕರಾವಳಿಯಲ್ಲ,
ನನ್ನ ಬೆಂಗಳೂರು.
ಕೈಯಲ್ಲಿ ಕೊಡೆಯಿದ್ದರೆ ಇಲ್ಲ,
ಕೊಡೆಯಿಲ್ಲದಿರೆ ಉಂಟು.

--ಮಂಜು ಹಿಚ್ಕಡ್

Tuesday, October 15, 2013

ಹೊಸತು

ಹೊಸತು, ಹೊಸತು ಎಂದು
ಹಳೆತನ್ನು ಮರೆಯದಿರು ಚಿನ್ನ,
ಒಮ್ಮೊಮ್ಮೆ ಹಳೆತು
ಹೊಸತೆನಿಸುವುದು
ತನ್ನ ಬಣ್ಣ ಬದಲಿಸಿ
ಹೊಸ ರೂಪ ಪಡೆದಾಗ!


--ಮಂಜು ಹಿಚ್ಕಡ್

Monday, October 14, 2013

ರೈತನ ಗೋಳು!

ಉತ್ತುವಾಗ ಇಲ್ಲ
ಬಿತ್ತುವಾಗ ಇಲ್ಲ
ಬೆಳೆ ಕೊಯ್ದು
ಹೊತ್ತೊಯ್ಯುವಾಗ
ಏಕೆ ಕಾಡುತಿಹುದು
ಈ ಮಳೆ?

--ಮಂಜು ಹಿಚ್ಕಡ್

ಹೊಸದಾರಿ. ಹಳೇದಾರಿ..

ಹೊಸದಾರಿ, ಹಳೇದಾರಿ
ಯಾವುದು ಬದುಕಿನ ರಹದಾರಿ?

ಹೊಸದಾರಿ ಸೇರೊದೆದು
ಮನೆ, ಮನ ಸೇರಿದ
ಹೊಸ ಮಧುಮಗನ
ನವ ವಧುವಿನಂತೆ
ಹೊಸ ಬಾಳ್ವೆ
ಹೊಸ ಕಲ್ಪನೆ
ಹೊಸ ಕನಸು
ಹೊಸ ನಡೆ
ಹೊಸ ಅನುಭವ
ಎಲ್ಲವೂ ಹೊಸತು.

ಹಳೆದಾರಿ ಹೆತ್ತು, ಹೊತ್ತು
ಸಾಕಿ ಸಲುಹಿದ
ತಾಯಿಯಂತೆ.
ಸರಿ ತಪ್ಪುಗಳ 
ತೂಗಿಸಿ ನೋಡಿ
ಸರಿದೂಗಿಸುವ ಆತುರ.
ಹೊಸದಾರಿಯಲಿ ಹೆಜ್ಜೆ
ತಪ್ಪದ ಹಾಗೆ ಮಗುವ
ಮುನ್ನೆಡೆಸುವ ಕಾತುರ. 
ಕೊಳಕಿಲ್ಲ, ಹಗೆಯಿಲ್ಲ
ಹಳತಾದರೂ ಸೊಗಸು ಮಾಸಿಲ್ಲ
ಅದು ಅನುಭವಗಳ ಸಾಕಾರ. 

ತನ್ನ ಮೇಲ್ನಡೆವರನು
ಗುರಿಯ ತಲುಪಿಸಿ
ಅವರ ಸೋಲು, ಗೆಲುವಿಗೆ
ಮೂಕ ಪ್ರೇಕ್ಷಕನಂತಿದ್ದು
ತಾನು ಹಳತಾಗಿ
ಮುಂದಿನ ಹೊಸದಾರಿಗೆ
ಮಾದರಿಯಾಗುವುದಲ್ಲವೇ
ಇಂದಿನ ಹೊಸದಾರಿ. 

ಜೀವನದ ಮುನ್ನಡೆಗೆ
ಹೊಸದಾರಿ ಭವಿಷ್ಯತ್ತಾದರೆ
ಹಳೇದಾರಿ ಇತಿಹಾಸದಂತೆ.
ಇತಿಹಾಸದ ಅನುಭವ
ಭವಿಷ್ಯದ ಕನಸುಗಳೆರಡಿರಲು
ಬಾಳ್ವೆಯೆಂಬುದು ಹೋಳಿಗೆಯ
ನಡುವಿನ ಹೂರಣದಂತೆ!

--ಮಂಜು ಹಿಚ್ಕಡ್ 

Saturday, October 12, 2013

ಸಲಹೆ!

ನನ್ನ ಬಳಿ ನೀ ಬರಲು
ಹೊತ್ತಾದರೇನಂತೆ
ನನ್ನ ಗೊತ್ತಿದೆಯಲ್ಲ.

ನನ್ನ ಅರಿತ ಮೇಲೆ
ನಾಚಿಕೆಯು ಬೇಕಿಲ್ಲ.
ನಂಬಿಕೆಯಿದ್ದರೆ ಸಾಕು
ನೀ ಹೆದರ ಬೇಕಿಲ್ಲ. 

ಹೃದಯದಿ ಪ್ರೀತಿ
ತುಂಬಿರುವಾಗ
ಸ್ವಲ್ಪ ಮಾತಿರಲಿ,
ಮೌನ ಬೇಕಿಲ್ಲ.

ಬಯಸಿ ಬಂದ ಮೇಲೆ
ನಗುವಿರಲಿ ತುಟಿಯಲ್ಲಿ
ದುಮ್ಮಾನ ಬೇಡ!

--ಮಂಜು ಹಿಚ್ಕಡ್ 

Tuesday, October 8, 2013

ಗೆಳತಿ ನೀನಿರುವಾಗ!

ನನ್ನ ಹೃದಯದಲಿ ನೀ 
ಪ್ರೀತಿ ತುಂಬಿದ ಮೇಲೆ, 
ಪ್ರೀತಿ ಹುಟ್ಟದೇ
ದ್ವೇಷ ಹುಟ್ಟಲು ಸಾಧ್ಯವೇ

ನನ್ನುಸಿರಲಿ ನಿನ್ನುಸಿರು
ಬೆರೆತಾಗ ನನ್ನುಸಿರು,
ಮೆಲ್ಲುಸಿರಾಗದೇ
ನಿಟ್ಟುಸಿರಾಗಲು ಸಾದ್ಯವೇ?

ನನ್ನ ಮನಸೆಲ್ಲಾ
ನಿನ್ನನಾವರಿಸಿ ಕೊಂಡಿರುವಾಗ,
ನನಗೆ ಬೇರೆ
ಯೋಚಿಸಲು ಸಾದ್ಯವೇ?

ನನ್ನ ಜೊತೆ ನೀನಿರುವಾಗ
ನನ್ನ ಬಾಳು
ಹಸನಾಗದಿರುತ್ತದೆಯೇ, 
ನನ್ನ ಮನಸು
ಹಿತವಾಗದಿರುತ್ತದಯೇ ಗೆಳತಿ!

ನನ್ನಲಿ ನೀನು
ತುಂಬಿ ಬೆರೆತಿರುವಾಗ
ನನಗೆ ಬೇರೆ ಇನ್ನಾರು
ಬೇಕು ಗೆಳತಿ!

--ಮಂಜು ಹಿಚ್ಕಡ್ 

Saturday, October 5, 2013

ಬರೆಯಲೇನುಂಟು?

ಏನಾದರು ಒಂದು 
ವಿಷಯದ ಕುರಿತು ಕವನ
ಬರಿ ಎಂದರೆ ಏನು
ಬರೆಯಲಿ ಗೆಳೆಯ?

ಕಾಡು ಮೇಡುಗಳಿಂದ ತುಂಬಿ
ಹಲವಾರು ಪ್ರಾಣಿ ಪಕ್ಷಿಗಳಿಗೆ 
ಆಶ್ರಯವಾಗಿದ್ದ ಈ ನಮ್ಮ
ಸುಂದರ ನಿಸರ್ಗ
ಕಣ್ಮರೆಯಾಗುತ್ತಿರುವುದರ ಕುರಿತು ಬರೆಯಲೇ?

ಕಾಡ ಕಡಿದು, ನಾಡ ಮಾಡುವ
ಅಂತ್ಯ ಬಯಕೆಯಿಂದ
ಮಲೆನಾಡು ಕಣ್ಮರೆಯಾಗಿ
ಕೇವಲ ನಾಡಾನ್ನಾಗಿಸುತಿಹ
ಈ ನಮ್ಮ ಜನತೆಯ 
ಕುರಿತು ಬರೆಯಲೇ?

ನಿಸರ್ಗ ನಾಶದ ಪರಿಣಾಮವಾಗಿ
ಮಳೆ ಸರಿಯಾಗಿ ಬೀಳದೇ
ಮಳೆ ಎಂದು ಬರತ್ತೋ
ಎಂದು ಹೋಗತ್ತೋ ಎಂದು
ಆಲೋಚನೆಯಲ್ಲೇ ಕಾಲ ಕಳೆಯುತಿಹ
ಬಡ ರೈತರ ಬಗ್ಗೆ ಬರೆಯಲೇ?

ಮಳೆ ಸರಿಯಾಗಿ ಬಾರದೇ
ನದಿ ಬತ್ತಿ, ವಿದ್ಯುತ್ತಿಗೆ
ನೀರಿಗೆ ತೊಂದರೆಯುಂಟಾಗಿ
ಪೇಚಾಡುತ್ತಿರುವ ನಮ್ಮಂತ
ಸಾಮಾನ್ಯ ಜನತೆಯ ಬಗ್ಗೆ ಬರೆಯಲೇ?

ಸ್ವರ್ಗವಾಗಿರಬೇಕಾದ ನಿಸರ್ಗ
ವಾಯುಮಾಲಿನ್ಯ, ಶಬ್ಧಮಾಲಿನ್ಯ
ಜಲಮಾಲಿನ್ಯಗಳಿಂದ ಕಂಗೆಟ್ಟು
ನರಕವಾಗುತಿರುವುದರ 
ಕುರಿತು ಬರೆಯಲೇ ಗೆಳೆಯ!

--ಮಂಜು ಹಿಚ್ಕಡ್ 

Thursday, October 3, 2013

ಹೆಣ್ಣು-ಹೊನ್ನು-ಮಣ್ಣು

ಹೆಣ್ಣು, ಹೊನ್ನು, ಮಣ್ಣು
ಯಾಕಿಷ್ಟು ಬೆಲೆ ಇವಕೆ

ಹೆಣ್ಣು:
ಅವನಲ್ಲಿ ಇದ್ದಾಗ, ನನ್ನಲ್ಲಿಲ್ಲ ಎನ್ನುವ ಚಿಂತೆ
ನನ್ನಲ್ಲಿ ಇದ್ದಾಗ ಅವ ನೋಡುವನೆನ್ನುವ ಚಿಂತೆ!

ಹೊನ್ನು:

ಇದ್ದಾಗ ಕಾದಿಡುವ ತವಕ
ಇಲ್ಲದಿದ್ದಾಗ ಕೂಡಿಸುವ ತವಕ!

ಮಣ್ಣು:
ಅಗಿದು ತೆಗೆಯಲು ಖರ್ಚು
ತೆಗೆದಿದ್ದು ಮುಚ್ಚಲೂ ಖರ್ಚು!

--ಮಂಜು ಹಿಚ್ಕಡ್