Thursday, December 25, 2014

ಚಿಂತೆ ಮತ್ತು ಚಿಂತನೆ

ಚಿಂತೆ ಯಾರಿಗಿರುವುದಿಲ್ಲ ಹೇಳಿ
ಚಿಂತೆ ಬಿಟ್ಟಿದ್ದಾರೆನ್ನುವಾದರು ಇದೆಯೇ.

ಸಾಮ್ರಾಜ್ಯವನ್ನು ಕಟ್ಟಿ ಮೆರೆದು
ಪ್ರಜೆಗಳಿಗೆ ಸುಖ ನೆಮ್ಮದಿಯನ್ನು
ದಯಪಾಲಿಸಿದ ಹೊಯ್ಸಳೇಶ್ವರ
ವಿಷ್ಣುವರ್ಧನನ್ನು ಬಿಟ್ಟಿದೆಯೇ ಚಿಂತೆ.

ತನ್ನ ಸಾಮ್ರಾಜ್ಯವನ್ನು
ಸುವರ್ಣಯುಗಕ್ಕೆ ಕೊಂಡೊಯ್ದು
ಪ್ರಜೆಗಳಿಂದ ಹಾಡಿ ಹೊಗಸಿಳಿಸಿಕೊಂಡ
ಕೃಷ್ಣದೇವರಾಯನನ್ನು ಬಿಟ್ಟಿದೆಯೇ ಚಿಂತೆ.

ಮರಾಠರನ್ನೆಲ್ಲ ಒಗ್ಗೂಡಿಸಿ
ಮರಾಠ ಸಾಮ್ರಾಜ್ಯವನ್ನೇ
ಸ್ಥಾಪಿಸಿದ ಶಿವಾಜಿಯನ್ನು
ಬಿಟ್ಟಿದೆಯೇ ಈ ಚಿಂತೆ.

ಅಷ್ಟೇ ಏಕೆ?
ರಾಮ, ಕೃಷ್ಣ, ಬುದ್ದ, ಗಾಂದಿ
ಇವರನ್ನು ಕೂಡ
ಕಾಡಿಲ್ಲವೇ ಆ ಚಿಂತೆ.

ಚಿಂತೆಯಿಲ್ಲದರಿದ್ದಾರೆಯೇ
ಬರೀಯ ಚಿಂತೆಯಲ್ಲಿಯೇ
ಬದುಕುವವರಿಗೆ ಮಾತ್ರ
ಈ ಬದುಕು ಚಿತೆಯೇರುವವರೆಗೆ ಮಾತ್ರ.

ಆದರೆ ಅದೇ ಚಿಂತೆಗಳನ್ನು
ಚಿಂತನೆಯನ್ನಾಗಿಸಿ, ಆ
ಚಿಂತನೆಗಳನ್ನೇ ಆದರ್ಶಗಳನ್ನಾಗಿಸಿ
ಬದುಕಿ ಬಾಳಿದವರು,
ಚಿತೆಯೇರಿ ಮರೆಯಾದರೂ
ಇತರರ ಜೀವನದಲ್ಲಿ
ಸದಾ ಹಸಿರಾಗಿ,
ಆದರ್ಶಪ್ರಾಯರಾಗಿ
ಇರುವುದಿಲ್ಲವೇ?

ಚಿಂತೆ ಚಿತೆಯೇರುವವರೆಗೆ
ಆದರೆ ಅದೇ ಚಿಂತನೆ
ವ್ಯಕ್ತಿ ಚಿತೆಯೇರಿ ಮರೆಯಾದರೂ
ಅದು ಅಜರಾಮರ.

--ಮಂಜು ಹಿಚ್ಕಡ್

Friday, December 19, 2014

ನಿರೀಕ್ಷೆ!

ರಾತ್ರಿ "ತೋಕು" ಹಿಡಿದು ತಂದ ಮೀನುಗಳನ್ನು, ತನ್ನ ಬುಟ್ಟಿಗೆ ಹಾಕಿಕೊಂಡು, ಗುಂಡಬಳ ಊರಿನಡೆ ಹೊರಡ ತೊಡಗಿದಳು ಕಲಾವತಿ. ಈಗ ಆಕೆಯ ಮನಸ್ಸಿನಲ್ಲಿದ್ದುದು ಒಂದೇ ಯೋಚನೆ, ಆದಷ್ಟು ಬೇಗ ಗುಂಡಬಳದಲ್ಲಿ ಮೀನು ಮಾರಿ, ಗುಂಡಬಳಕ್ಕೆ ಬರುವ ೧೦ ಗಂಟೆಯ ಬಸ್ಸಿಗೆ ಮಾದನಗೇರಿಗೆ ಹೋಗಿ, ಮೀನು ಮಾರುಕಟ್ಟೆಯಿಂದ  ಒಂದು ಬುಟ್ಟಿ ಮೀನು ಕೊಂಡು ಮತ್ತೆ ೧೧ ಗಂಟೆಯ ಬಸ್ಸಿಗೆ ಮಾದನಗೇರಿಯಿಂದ ಗುಂಡಬಳಕ್ಕೆ ವಾಪಸ್ ಬಂದು, ಒಂದೆರಡು ಗಂಟೆಯಲ್ಲಿ ಮಾರಿ, ಸಾದ್ಯವಾದಲ್ಲಿ ೧ ಗಂಟೆಯ ಬಸ್ಸಿಗೆ ತಪ್ಪಿದಲ್ಲಿ ೨ ಗಂಟೆಯ ಬಸ್ಸಿಗೆ ಮತ್ತೆ ಹೋಗಿ, ೪ ಗಂಟೆ ಬಸ್ಸಿಗೆ ಮೀನು ತಂದು ಊರಿನಲ್ಲಿ ಮತ್ತೆ ಮಾರಬೇಕು. ಅದು ಅವಳ ದಿನ ನಿತ್ಯದ ಉದ್ಯೋಗವೂ ಕೂಡ. ಆ ಊರಿನವರಿಗೂ ತಿಳಿದಿದೆ ಕಲಾವತಿ ಮೀನು ತಂದಿದ್ದು ಬೆಳಿಗ್ಗೆ ಸಿಕ್ಕಿಲ್ಲ ಅಂದರೂ ನಂತರ ಮತ್ತೆ ಸಾಯಂಕಾಲ ತಂದಾಗಲಾದರೂ ಸಿಗುತ್ತದೆ ಎಂದು. ಕಲಾವತಿಗೆ ಏನೋ ಸಮಸ್ಯೆ ಬಂದು ಒಂದು ದಿನ ಮೀನು ತಂದಿಲ್ಲ ಅಂದರೆ ಆ ಊರಿನ ಬಹುತೇಕ ಮನೆಯಲ್ಲೂ ತರಕಾರಿ ಊಟಾನೇ ಗತಿ. ಮಾದನಗೇರಿಗೆ ಹೋಗಿ ಬರುವವರ ಮನೆಯಲ್ಲಿ ಮಾತ್ರ ಆ ದಿನ ಮೀನು ಊಟ.

ಕಲಾವತಿಗೂ ಅಷ್ಟೇ, ಜೋರಾಗಿ ಮಳೆ ಬಂದೋ ಅಥವಾ ಆರಾಮು ತಪ್ಪಿ ಒಂದು ದಿನ ಗುಂಡಬಳಕ್ಕೆ ಹೋಗಿಲ್ಲ ಅಂದರೆ ಏನೋ ಕಳೆದು ಕೊಂಡಂತೆ ಅನಿಸುತ್ತದೆ. ಕಲಾವತಿ ಈ ಉದ್ಯೋಗವನ್ನು ಈಗ ಕೆಲವು ದಿನಗಳಿಂದ ಮಾಡುತ್ತಿಲ್ಲ. ಅವಳು ಈ ಉದ್ಯೋಗ ಮಾಡಲು ಪ್ರಾರಂಭಿಸಿ ಆಗಲೇ ಹತ್ತಿಪ್ಪತ್ತು ವರ್ಷಗಳಾಗಿವೆ. ಮದುವೆಯಾಗಿ ಹೊಸತಾಗಿ ಈ ಉರಿಗೆ ಮೊದಮೊದಲು ಅತ್ತೆ ಶಕುಂತಲಾಳ ಜೊತೆ ಗುಂಡಬಳಕ್ಕೆ ಮೀನು ಮಾರಲು ಬರುತಿದ್ದಳು. ಅತ್ತೇಯೇ ಆ ಊರಿನ ಪ್ರತಿ ಮನೆಗಳನ್ನು ಪರಿಚಯ ಮಾಡಿಕೊಟ್ಟದ್ದು. ಕ್ರಮೇಣ ಅತ್ತೆಗೆ ವಯಸ್ಸಾಗುತಿದ್ದ ಹಾಗೆ ತಾನೇ ಈ ವ್ಯಾಪಾರವನ್ನು ಮಾಡತೊಡಗಿದಳು. ಮನೆಯಿಂದ ಬರುವಾಗ ಹಳೆಯ ಮೀನು ಸಿಕ್ಕಿಲ್ಲ ಅಂದರೆ ಚಿಪ್ಪೆಕಲ್ಲನ್ನೋ, ಕಲಗಾ ಅನ್ನೋ, ಏನು ಇಲ್ಲ ಅಂದರೆ ಒಣಗಿದ ಸಿಗಡಿ ಮೀನನ್ನೋ ತೆಗೆದು ಕೊಂಡು ಬಂದು ಗುಂಡಬಳದಲ್ಲಿ ಮಾರಿ, ಆ ಮೇಲೆ ಅಲ್ಲಿಂದ ಮಾದನಗೇರಿಗೆ ಹೋಗಿ ಮೀನು ತಂದು ಮತ್ತೆ ಆ ಊರಲ್ಲಿ ಮಾರಿ ಸಾಯಂಕಾಲ ಸೂರ್ಯ ಮುಳುಗುವ ಹೊತ್ತಿಗೆ ಮನೆ ಸೇರುತ್ತಾಳೆ.

ದಿನಾ ಇದೇ ಯೋಚನೆಯಲ್ಲಿ ಗುಂಡಬಳಕ್ಕೆ ಬಂದರೂ, ಇವತ್ತಿನ ಯೋಚನೆಯೇ ಬೇರೆ. ಅವಳ ಮನಸ್ಸಿನ ಪೂರ್ತಿ ಒಂದು ವರ್ಷದ ಬಳಿಕ ಇಂದು ಮನೆಗೆ ಬರಲಿರುವ ಮಗಳೇ ಆಕ್ರಮಿಸಿಕೊಂಡಿದ್ದಳು. ಕಳೆದ ವರ್ಷ ಬಹುಶಃ ಇದೇ ಕಾಲವಿರಬಹುದು, ಆದಿನ ಬೆಳಿಗ್ಗೆ ಗುಂಡಬಳಕ್ಕೆ ಮೀನು ತೆಗೆದುಕೊಂಡು ಹೋಗಬೇಕು ಎಂದು ಬಲೆಯಿಂದ ಮೀನು ಬಿಡಿಸಿ ಬುಟ್ಟಿಗೆ ತುಂಬುತ್ತಿರುವಾಗ, ಸರಳೇಬೈಲ್ನ್ ಸೀತಾಬಾಯಿಯ ಗಂಡ ಬಂದು ತಮ್ಮ ಒಂದು ವರ್ಷದ ಬಾಲೆಯನ್ನು ನೋಡಿಕೊಳ್ಳಲು ಯಾರಾದ್ರೂ ಮಕ್ಕಳು ಬೇಕಿದ್ದರು. ನಿಮ್ಮ ಮಗಳನ್ನು ಕಳಿಸಿಕೊಡುವುದಾದರೆ ನೋಡಿ, ಅವಳಿಗೆ ಅಲ್ಲಿಯೇ ಶಿಕ್ಷಣ ಕೊಡಿಸುತ್ತೇವೆ ಎಂದಾಗ, ಕಲಾವತಿ ಹೇಗೂ ಮಗಳು ನಾಲ್ಕನೇ ತರಗತಿವರೆಗೆ ಓದಿ ಒಂದೆರಡು ವರ್ಷದಿಂದ ಮನೆಯಲ್ಲಿ ಖಾಲಿ ಕುಳಿತಿದ್ದಾಳೆ, ಹಾಗೆ  ಒಮ್ಮೆ ಕಳಿಸೋಣ ಅನ್ನಿಸಿದರೂ ಮನೆಯಲ್ಲೆ ಹುಟ್ಟಿ ಬೆಳೆದ ಮಗಳು ಮುಂದೆ ಹೇಗೂ ಮದುವೆಯಾಗಿ ಗಂಡನ ಮನೆಗೆ ಹೋಗುವುದು ಇದ್ದೇ ಇದೆ. ಇದ್ದರೆ ಮನೆಯಲ್ಲಿ ಇರಲಿ ಎಂದು ಮತ್ತೊಮ್ಮೆ ಅನ್ನಿಸಿ, "ನಮ್ಮ ಮಗಳನ್ನು ಹೊರಗೆ ಕೆಲಸಕ್ಕೆ ಕಳಿಸುವ ಯೋಚನೆ ಇಲ್ಲ" ಎಂದಳು. "ಹಾಗಲ್ಲ ಕಲಾವತಿ ನಾವೇನು ನಿನ್ನ ಮಗಳನ್ನು ಕೆಲಸ ಮಾಡುವುದಕ್ಕೆ ಕರೆದುಕೊಂಡು ಹೋಗುತ್ತಿಲ್ಲ, ನಾವು ಅವಳಿಗೆ ಮುಂದೆ ಓದಿಸುತ್ತೇವೆ, ಹೇಗೂ ನಿಮ್ಮ ಮಗಳು ಮನೆಯಲ್ಲಿ ಇದ್ದಾಳಲ್ಲ. ನಮ್ಮ ಜೊತೆ ಕಳಿಸಿಕೊಟ್ಟರೆ ಅವಳಿಗೆ ಮುಂದೆ ಓದಿಸುತ್ತೇವೆ, ಅವಳು ಸಮಯ ಇದ್ದಾಗ ಸ್ವಲ್ಪ ನಮ್ಮ ಬಾಲೆಯನ್ನು ನೋಡಿಕೊಂಡರೆ ಸಾಕು" ಎಂದಾಗ ಹೇಗೂ ಸೀತಾಬಾಯಿ ಮತ್ತು ಅವಳ ಗಂಡ ಇಬ್ಬರು ಒಳ್ಳೆಯ ನೌಕರಿಯಲ್ಲಿದ್ದಾರೆ, ತಮ್ಮ ಮಗಳಿಗೆ ಶಾಲೆಗೆ ಕಳಿಸಿದರು ಕಳಿಸಬಹುದು ಎಂದು ಅನ್ನಿಸಿತು ಕಲಾವತಿಗೆ. ಆದರೂ ಮಗಳ ಮತ್ತು ಗಂಡನ ಒಪ್ಪಿಗೆ ಪಡೆಯದೇ ಕಳಿಸುವುದು ಸರಿಯಲ್ಲ ಎಂದು ಎನಿಸಿ.

"ಮೂರ್ನಾಲ್ಕು ದಿನ ಬಿಟ್ಟು ಇದೇ ಹೊತ್ತಿಗೆ ಬನ್ನಿ, ನಮ್ಮ ಮನೆಯವರಿಗೆ ಕೇಳಿ ತಿಳಿಸುತ್ತೇನೆ" ಎಂದು ಹೇಳಿ ಕಳಿಸಿದಳು. ಮನೆಗೆ ಬಂದ ಸೀತಾಬಾಯಿಯ ಗಂಡ ಗೋವಿಂದನನ್ನು ಕಳಿಸಿ ಗುಂಡಬಳಕ್ಕೆ ಬಂದಳು. ಅದಾದ ಮೇಲೆ ಗಂಡ ಮಗಳ ಒಪ್ಪಿಗೆಯನ್ನು ಪಡೆದು ಮಗಳನ್ನು ಅವರ ಜೊತೆ ಕಳಿಸಿಕೊಟ್ಟಿದ್ದಳು. ಅದೇ ವಾರವೇ ಮಗಳು ಅವರೊಂದಿಗೆ ದೂರದ ಸಾಗರಕ್ಕೆ ಹೊರಟು ಹೋಗಿದ್ದಳು. ಇದಾಗಿ ಆಗಲೇ ಒಂದು ವರ್ಷ ಕಳೆದುಹೋಗಿತ್ತು. ಈಗ ಅವರು ಬೇಸಿಗೆಯ ರಜೆಗೆ ಬರುವವರಿದ್ದರು. ಅವರ ಜೊತೆಗೆ ಇನ್ನೊಂದು ವಾರದಲ್ಲಿ ತಾನು ಊರಿಗೆ ಬರುತ್ತೇನೆ ಎಂದು ಮಗಳು ಹಾಕಿದ ಕಾಗದ ಬಂದು ಆಗಲೇ ಮೂರು ದಿನವಾಗಿತ್ತು. ಅವಳ ಕಾಗದದ ಪ್ರಕಾರ ಇಂದು ಮಗಳು ಮನೆಗೆ ಬರುವಳಿದ್ದಳು. ಹೇಗೂ ಬೆಳಿಗ್ಗೆ ಬಂದಿಲ್ಲ, ಸಾಯಂಕಾಲದ ಒಳಗೆ ಬರಬಹುದು. ಅದಕ್ಕೆ ಬೇಗ ಹೋಗಿ ಗುಂಡಬಳಕ್ಕೆ ಮೀನು ಮಾರಿ, ಒಂದು ಬಾರಿ ಮಾದನಗೇರಿಗೆ ಹೋಗಿ ಬಂದರೆ ಸಾಕು. ಮದ್ಯಾಹ್ನದ ಹೊತ್ತಿಗೆ ಮನೆಗೆ ಬಂದು ಬಿಡಬೇಕು, ಎನ್ನುವ ಯೋಚನೆಯಲ್ಲಿ ಗುಂಡಬಳಕ್ಕೆ ಬಂದಳು.

ಗುಂಡಬಳಕ್ಕೆ ಬಂದು ತಂದ ಮೀನನ್ನು ಕಾಲಿ ಮಾಡುವ ಹೊತ್ತಿಗೆ ಗಂಟೆ ಒಂಬತ್ತು ದಾಟಿತ್ತು. ಮಾದನಗೇರಿಗೆ ಹೋಗುವ ಕೆಲವು ಜನ ಪ್ರಯಾಣಿಕರು ಆಗಲೇ ಗುಂಡಬಳದ ಬಸ ನಿಲ್ದಾಣದ ಕಡೆ ಹೊರಡತೊಡಗಿದರು. ಅವರಲ್ಲಿ ಹೋಗುವುದನ್ನು ನೋಡಿ "ಹೋ! ಬಸ್ ಬರುವ ಸಮಯವಾಯಿತು" ಎನಿಸಿತು. ಮೀನು ತಂದ ಬುಟ್ಟಿಯನ್ನು ಕೊಳವೆ ಬಾವಿಯಲ್ಲಿ ತೊಳೆದ ಶಾಸ್ತ್ರ ಮಾಡಿ, ಬಸ್ ನಿಲ್ದಾಣದ ಕಡೆ ಹೊರಡತೊಡಗಿದಳು. ಅವಳು ಆ  ಊರ ಮುಖ್ಯ ಬೀದಿಯನ್ನು ದಾಟಿ ಒಂದಹತ್ತು ಹೆಜ್ಜೆ ಹೋಗಿರಬಹುದು, ಬಸ್ ಬರುವ ಸಪ್ಪಳ ಕೇಳಿಸಿದಂತಾಗಿ ಸೊಂಟಕ್ಕೆ ಹಿಡಿದ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಬಸ್ ನಿಲ್ದಾಣದ ಕಡೆ ಓಡಿದಳು. ಅವಳು ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಮಾದನಗೇರಿ ಕಡೆಯಿಂದ ಬಂದ ಬಸ್ಸು ನಿಲ್ದಾಣದಲ್ಲಿ ನಿಂತು, ಮಾದನಗೇರಿಯಿಂದ ಬಂದ ಪ್ರಯಾಣಿಕರು ಆಗಲೇ ಇಳಿಯುತಿದ್ದರು. ಮಾದನಗೇರಿ ಕಡೆ ಹೋಗುವ ಪ್ರಯಾಣಿಕರು ಬಸ್ ಏರಲು ಬಾಗಿಲಲ್ಲಿ ನಿಂತುಕೊಂಡಿದ್ದರು. ಮಾದನಗೇರಿಗೆ ಹೋಗುವ ಪ್ರಯಾಣಿಕರಲ್ಲಿ ತಾನು ಒಬ್ಬಳಾಗಿ ನಿಂತುಕೊಂಡು, ಬಸ್ ಏರಿ ಹಿಂಬದಿಯ ಸೀಟಿನ ಕೆಳಗೆ ತನ್ನ ಬುಟ್ಟಿ ತುರುಕಿ, ಅದರ ಮೇಲಿನ ಸೀಟಿನಲ್ಲಿ ತಾನು ಕುಳಿತುಕೊಂಡಳು.

ಬಸ್ಸು ಮಾದನಗೇರಿ ತಲುಪಿದಾಗ ಬಸ್ಸಿಂದ ಇಳಿದು, ಸೀದಾ ಮೀನು ಮಾರುಕಟ್ಟೆಗೆ ಹೋಗಿ, ತಾನು ದಿನಾ ಮೀನು ತೆಗೆದು ಕೊಳುತ್ತಿದ್ದ ತುಳಸಿಯ ಬಳಿ ಹೋಗಿ, ತನಗೆ ಸಂಜೆ ಮೀನು ಇಡುವುದು ಬೇಡ, ತಾನು ಬರಲ್ಲ ಎಂದು ಹೇಳಿದಾಗ, ತುಳಸಿ, "ಯಾಕೆ ಕಲಾವತಿ, ಇಂದೇನು ವಿಶೇಷ, ಯಾಕೆ ಇವತ್ತು ಮೀನು ತೆಗೆದುಕೊಳ್ಳುವುದಿಲ್ಲ" ಎಂದು ಕೇಳಿದಾಗ "ಏನಿಲ್ಲ ತುಳಸಿ, ಇಂದು ಮಗಳು ಮನೆಗೆ ಬರುತ್ತಾಳೆ, ಅದಕ್ಕೆ ಬೇಗ ಮನೆಗೆ ಹೋಗಬೇಕು" ಎಂದು ಹೇಳಿ ಅವಳಿಂದ ಮೀನು ತೆಗೆದುಕೊಂಡು ಬಸ್ಸ್ ನಿಲ್ದಾಣಕ್ಕೆ ಬಂದಳು. ೧೧ ಗಂಟೆಯ ಬಸ್ಸು ಗುಂಡಬಳಕ್ಕೆ ಹೋಗಲು ತಯಾರಿಯಾಗಿ ನಿಂತಿತ್ತು. ಎಂದಿನಂತೆ ಮತ್ತೆ ಹಿಂದಿನ ಸೀಟಿನಲ್ಲಿ ಕೆಳಗೆ ಬುಟ್ಟಿ ಇಟ್ಟು ಕುಳಿತು ಕೊಂಡಳು.

ಗುಂಡಬಳಕ್ಕೆ ಬಂದು ಮೀನು ಮಾರಿ ಬೇಗ ಮನೆಗೆ ಹೋಗಬೇಕೆಂದಿದ್ದರು ಮೀನು ಮಾರಿ ಮುಗಿಸುವಷ್ಟರಲ್ಲಿ ಎರಡು ಗಂಟೆ ದಾಟಿತ್ತು. ಸೂರ್ಯ ಪಶ್ಚಿಮದೆಡೆಗೆ ಸರಿದದ್ದನ್ನು ನೋಡಿ ಮದ್ಯಾಹ್ನ ಕಳೆದ ಅನುಭವವಾಗಿ, ಮನೆಯತ್ತ ದೌಡಾಯಿಸುತ್ತಾ ಹೊರಟಳು. ಮನೆ ತಲುಪುತಿದ್ದಂತೆ, ಮನೆಗೆ ಆಗಲೇ ಮಗಳು ಬಂದಿರಬಹುದೇನೋ ಎಂದು "ತಂಗಿ", "ತಂಗಿ" ಎಂದು ಕರೆದಳು. ಮನೆಯಿಂದ ಯಾವುದೇ ಉತ್ತರ ಬಾರದರಿಂದ ಒಮ್ಮೆ ನಿರಾಸೆಯಾಯಿತು, ಸಾಯಂಕಾಲ ಬರಬಹುದೇನೋ? ಎಂದನಿಸಿ ಬುಟ್ಟಿಯನ್ನು ತೆಂಗಿನ ಮರದ ಬುಡದಲ್ಲಿಟ್ಟು, ಕೈ ಕಾಲು ತೊಳೆದು  ಅಡಿಗೆ ಕೆಲಸ ಮಾಡತೊಡಗಿದಳು. ಅಡಿಗೆ ಮುಗಿಸಿ, ಮಗಳು ಬರಬಹುದೇನೋ ಎಂದು ಒಂದೆರಡು ಬಾರಿ ಮನೆಯ ಹೊರಬಂದು ನೋಡಿ ಹೋದಳು. ಹಸಿವೆಯಾದಂತೆ ಅನಿಸಿ ಅಡಿಗೆ ಕೋಣೆ ಸೇರಿ ಮಾಡಿಟ್ಟ ಅಡಿಗೆಯಲ್ಲಿ ಒಂದಿಷ್ಟು ಬಡಿಸಿಕೊಂಡು ಹೊಟ್ಟೆಗೆ ಸೇರಿಸಿ, ಮನೆಯಿಂದ ಹೊರಬಂದು, ನಿನ್ನೆ ನೀರಿನಲ್ಲಿ ನೆನೆಸಿಟ್ಟ ಒಣ ತೆಂಗಿನ ಹೆಡೆಯನ್ನು ತೆಗೆದುಕೊಂಡು ಅಂಗಳಕ್ಕೆ ಬಂದು, ಅದನ್ನು ನೆಣೆಯಲು ಪ್ರಾರಂಭಿಸಿದಳು, ಮುಂದಿನ ಬೇಸಿಗೆಗೆ ಮನೆ ಹೊದಿಸಲು ನೆಣೆದ ತೆಂಗಿನ ಗರಿಗಳು ಬೇಕು ಎಂದು, ಆಗಾಗ ಬೇರೆ ಏನು ಕೆಲಸ ವಿಲ್ಲದಾಗ ಆಗಾಗ ತೆಂಗಿನ ಗರಿಗಳನ್ನು ನೆಣೆದು ಒಂದೆಡೆ ಸಾಕಿಡುತ್ತಿದ್ದಳು.

ಇನ್ನೇನು ಅರ್ಧ ಮಡಲನ್ನು ನೆಣೆದಿರಬಹುದು, ಮಗಳು ದೋಣಿಯಲ್ಲಿ ಆ ದಡ ದಾಟಿ, ಈ ದಡದತ್ತ ಬರುವುದು ಕಣಿಸಿತು. ಅರ್ಧ ನೆಣೆದ ಮಡಲನ್ನು ಅಲ್ಲಿಯೇ ಬಿಟ್ಟು ಹಳ್ಳದ ದಂಡೆಗೆ ಓಡಿದಳು. ಮಗಳನ್ನು ಹೊತ್ತ ದೋಣಿ ಹತ್ತಿರ ಬರುತ್ತಿದ್ದಂತೆ, ತಾನು ದಡದಿಂದ ಇಳಿದು ದೋಣಿಯೆಡೆಗೆ ಹೋದಳು. ಮಗಳು ದೋಣಿಯಿಂದ ಇಳಿಯುತ್ತಿದಂತೆ "ನಿಧಾನ, ನಿಧಾನ" ಎಂದು ಹೇಳಿ ಇಳಿದ ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋದಳು.

ಮಗಳನ್ನು ಜೊತೆಗೆ ಕರೆದುಕೊಂಡು ಮನೆಗೆ ಹೋಗುವಾಗ, ಮಗಳ ದೇಹ ಸ್ಥಿತಿ ನೋಡಿ ಮಗಳು ಸ್ವಲ್ಪ ಸೊರಗಿದಂತೆ ಅನ್ನಿಸಿ " ಏನೆ ಬಹಳ ಬಾರೀಕಾಗಿದ್ದಿಯಾ?" ಯಾಕೆ ಸರಿಯಾಗಿ ಊಟ ಮಾಡಿಲ್ವೋ ಹೆಂಗೆ? ಎಂದು ತರಾಟೆಗೆ ತೆಗೆದುಕೊಂಡಳು ಕಲಾವತಿ.

"ಸರಿಯಾಗಿ ಊಟ ಮಾಡಕ್ಕೆ, ಸರಿಯಾಗಿ ಊಟ ಹಾಕಿದರೆ ತಾನೆ?" ಎಂದು ಮಗಳು ಹೇಳಿದಾಗ, ಕಲಾವತಿಗೆ ಒಮ್ಮೆಲೆ ಆಶ್ಚರ್ಯವಾಯಿತು.

"ಅಂದರೆ, ಅವರು ನಿನ್ನ ಓದಿಸಲು ಕರೆದುಕೊಂಡು ಹೋದವರಲ್ಲವೇ?"

"ಅಯ್ಯೋ ಅಮ್ಮಾ, ಅದು ನಿನ್ನ ನಂಬಿಸಲು ಅವರು ಹಾಗೆ ಹೇಳಿದ್ದು. ಅವರು ನನ್ನನ್ನು ಕರೆದುಕೊಂಡು ಹೋಗಿದ್ದು ಅವರ ಮನೆ ಕೆಲಸಕ್ಕೆ ಮತ್ತು ಅವರ ಮಗು ಆಡಿಸಲಿಕ್ಕೆ. ನೀನು ಎಲ್ಲಿ ಮಗಳನ್ನು ಕಳಿಸುವುದಿಲ್ಲವೋ ಎಂದು ತಿಳಿದು, ನಿನಗೆ ಹಾಗೆ ಹೇಳಿದ್ದಾರೆ. ಅವರ ಮನೆಯಲ್ಲಿ ಕೆಲಸ ಮಾಡಿ, ಮಾಡಿ ಸುಸ್ತಾಗಿ ಹೋಯ್ತು. ಎಷ್ಟೋ ಸಾರಿ ಬಿಟ್ಟು ಬರಲು ಪ್ರಯತ್ನಿಸಿದೆ. ಆದರೆ ಬರಲು ರೊಕ್ಕ ಬೇಕಲ್ಲ. ಅದಕ್ಕೆ ಸುಮ್ಮನೆ ಉಳಿಯಬೇಕಾಯಿತು. ಹೋಗಲಿ ಊಟನಾದ್ರೂ ಸರಿ ಹಾಕುತಿದ್ರಾ ಅದೂ ಕೂಡ ಸರಿ,ಇಲ್ಲ. ದಯವಿಟ್ಟು ಮತ್ತೆ ಅವರು ಬಂದು ನನ್ನ ಕಳಿಸಿಕೊಡು ಎಂದರೆ ಕಳಿಸಿಕೊಡಬೇಡಮ್ಮಾ " ಎಂದು ಮಗಳು ಹೇಳಿದಾಗ, ಕಲಾವತಿಯಲ್ಲಿ ಇಲ್ಲಿಯವರೆಗಿದ್ದ ಉತ್ಸಾಹ ಇಳಿದು ಹೋಗಿತ್ತು. ಏನೋ ಅವರ ಮಾತು ನಂಬಿ ತನ್ನ ಮಗಳನ್ನು ಆ ಹಾಳು ಜನರಿದ್ದಲ್ಲಿ ಕಳಿಸಿ ತಪ್ಪು ಮಾಡಿ ಬಿಟ್ಟೆನಲ್ಲ, ಅನಿಸಿ "ಇನ್ನೊಮ್ಮೆ ಮತ್ತೆ ಮಗಳನ್ನು ಕರೆಯಲು ಬರಲಿ ಅವನ ಚಟ ಬಿಡಿಸಿ ಬಿಡುತ್ತೇನೆ" ಎಂದು ಮನಸ್ಸಲ್ಲೇ ಹೇಳಿಕೊಂಡು ಹಸಿದ ಮಗಳಿಗೆ ಊಟ ಬಡಿಸಲು ಒಳಗೆ ಹೊರಟಳು.

--ಮಂಜು ಹಿಚ್ಕಡ್

Friday, December 12, 2014

ಸಂಸಾರ ಸಾಗರದಲ್ಲಿ

ಸಂಸಾರ ಸಾಗರದಲ್ಲಿ
ಇದ್ದು ಜೈಸುತ್ತೇನೆ
ಅನ್ನುವುದಾದರೆ
ಅದಕೆ ಬದ್ದನಾಗು.
ಇಲ್ಲಾ ಇದ್ದುದೆಲ್ಲವ ಬಿಟ್ಟು
ಈಗಲೇ ಬುದ್ದನಾಗು.

--ಮಂಜು ಹಿಚ್ಕಡ್

Monday, December 8, 2014

ಅದೃಷ್ಟ ಕೈಕೊಟ್ಟಾಗ!

[೩೦-ನವೆಂಬರ್-೨೦೧೪ ರಂದು ಅವಧಿಯಲ್ಲಿ ಪ್ರಕಟವಾದ ನನ್ನ ಕತೆ ’ಅದೃಷ್ಟ ಕೈಕೊಟ್ಟಾಗ’http://avadhimag.com/2014/11/30/%E0%B2%AD%E0%B2%BE%E0%B2%A8%E0%B3%81%E0%B2%B5%E0%B2%BE%E0%B2%B0%E0%B2%A6-%E0%B2%B8%E0%B2%A3%E0%B3%8D%E0%B2%A3%E0%B2%95%E0%B2%A5%E0%B3%86/]

ಬೆಳಿಗ್ಗೆ ಎಂಟಾಗುತ್ತ ಬಂದರೂ ಇನ್ನೂ ಮಲಗಿಯೇ ಇದ್ದ ಶ್ಯಾಮ್. ಅಷ್ಟೊತ್ತಾದರೂ ಮಲಗಿಯೇ ಇದ್ದಾನೆ ಅಂದಾಕ್ಷಣ ಅವನೇನು ಕೆಲಸವಿಲ್ಲದ ನಿರೂದ್ಯೋಗಿಯೇನಲ್ಲ. ಅವನು ಕೂಡ ಒಳ್ಳೆಯ ಕಂಪನಿಯಲ್ಲಿ ಒಳ್ಳೆಯ ಸಂಬಳದಲ್ಲಿ ಇದ್ದಾನೆ. ಹೇಗಿದ್ದರೂ ಒಂಬತ್ತು ಗಂಟೆಯಿಂದ ತಾನೇ ಆಪೀಸು ಪ್ರಾರಂಭವಾಗುವುದು, ಎಂಟು ಗಂಟೆಗೆ ಎದ್ದು, ಮುಖ ಮಜ್ಜನ ಸ್ನಾನ ಇತ್ಯಾದಿ ಕೆಲಸಗಳನ್ನು ಮುಗಿಸಿ ರೆಡಿಯಾಗಲು ಅರ್ಧ ಗಂಟೆಯಿದ್ದರೆ ಸಾಕು. ಐದು ಕಿಲೋ ಮೀಟರ್ ದೂರವಿರುವ ಆಪೀಸನ್ನು ಬೈಕಲ್ಲಿ ತಲುಪಲು ಅಬ್ಬಾಬ್ಬಾ ಎಂದರೂ ಅರ್ಧ ಗಂಟೆ ಸಾಕು ಎನ್ನುವುದು ಅವನ ಅಭಿಪ್ರಾಯ ಹಾಗೂ ಅವನ ಅನುಭವವೂ ಕೂಡ. ಹಾಗಾಗಿ ಅವನೆಂದು ಎಂಟು ಗಂಟೆಯ ಒಳಗೆ ಎದ್ದವನೇ ಅಲ್ಲ. ಹಾಗೆ ಗಾಢವಾದ ನಿದ್ದೆಯಲ್ಲಿದ್ದವನನ್ನು ಸೀಮಾ ಮಾಡಿದ ಕರೆ ಅವನನ್ನು ನಿದ್ದೆಯಿಂದ ಎಚ್ಚರಿಸಿತು. ಸೀಮಾ ಕಳೆದ ಎರಡು ಮೂರು ವರ್ಷಗಳಿಂದ ಅವನು ಪ್ರೀತಿಸುತಿದ್ದ ಹುಡುಗಿ. ನಿನ್ನೆ ರಾತ್ರಿ ಅವಳು ಕರೆ ಮಾಡಿದಾಗ ಶ್ಯಾಮನನ್ನು ಪ್ರೀತಿಸುವ ವಿಷಯವನ್ನು ಅವಳ ಮನೆಗೆ ತಿಳಿಸುವ ವಿಚಾರವಾಗಿ ಹೇಳಿದ್ದಳು. ಈಗ ಅದರ ಬಗ್ಗೆ ಮಾತನಾಡಲು ಮತ್ತೆ ಕರೆ ಮಾಡಿದ್ದಳು.

ಮೊಬೈಲ್ ಮೂರು, ನಾಲ್ಕು ಬಾರಿ ರಿಂಗ್ ಆದಮೇಲೆ ಎಚ್ಚರಗೊಂಡ ಶ್ಯಾಮ್, ಹಾಗೆ ಮುಸುಕು ಹೊದ್ದೇ ಆ ಮೊಬೈಲನ ಕರೆಯನ್ನು ಸ್ವೀಕರಿಸಿ ಕಿವಿಗೆ ಇಟ್ಟುಕೊಂಡು "ಹಲೋ" ಎಂದ.

"ಏನೋ ಗೂಬೆ, ಎಂಟಾಯ್ತಲ್ಲೋ ಆಪೀಸಿಗೆ ಹೋಗಲ್ವೇನೋ?"

ಅವಳು ಅವನ ಹೆಸರಿಗಿಂತ ಗೂಬೆ ಅಂದು ಕರೆದಿದ್ದೇ ಹೆಚ್ಚು. ಮೊದ ಮೊದಲು ಸ್ವಲ್ಪ ಬೇಸರವೆನಿಸಿದರೂ ಈಗ ಅದು ಅಭ್ಯಾಸವಾದದ್ದರಿಂದ ಹಾಗೇನು ಅನ್ನಿಸುತ್ತಿರಲಿಲ್ಲ ಅವನಿಗೆ.

"ಹಾಂ, ಹೋಗ್ಬೇಕೆ, ಏನು ಇಷ್ಟು ಬೇಗ ಕಾಲ್ ಮಾಡಿದ್ದೀಯಾ" ಎಂದು ಮುಸುಕು ಹೊದ್ದೇ ಕೇಳಿದ.

"ಇಷ್ಟು ಬೇಗನಾ, ಎಂಟು ಗಂಟೆ ಆಯ್ತೋ, ನಿನ್ನ ಹತ್ರ ಒಂದು ವಿಷಯ ಹೇಳೋಣ ಅಂತ ಕಾಲ್ ಮಾಡಿದ್ದೆ"

"ಹೋ! ಎಂಟು ಗಂಟೆ ಆಯ್ತಾ? ಬೇಗ ಹೇಳು"

"ನಿನ್ನೆ ನಿನ್ನ ವಿಷಯವನ್ನು ಮನೆಯಲ್ಲಿ ಹೇಳಿದ್ದೇನೆ, ಮನೆಯಲ್ಲಿ ನೋಡೋಣ ಆತುರ ಬೇಡ ಅಂತಾ ಹೇಳಿದ್ದಾರೆ. ಹಾಗೆ ನೋಡಿದರೆ ಅವರಿಗೂ ಓ.ಕೆ ಎಂದು ಅನಿಸುತ್ತಿದೆ. ಇನ್ನೂ ಮುಂದೆ ಅವರು ನಿನ್ನನ್ನು ಗಮನಿಸಲು ಪ್ರಾರಂಭಿಸಬಹುದು, ಸ್ವಲ್ಪ ಹುಷಾರಾಗಿರು"

"ಹೋ, ಗುಡ್, ಒಳ್ಳೆ ವಿಷಯ, ಆಮೇಲೆ ಮಾತಾಡೋಣ, ಈಗ ಎದ್ದು ರೆಡಿಯಾಗ್ತಿನಿ" ಎಂದು ಹೇಳಿ ಹಾಸಿಗೆಯಿಂದ ಎದ್ದ. ಅವನ ರೂಮಿನಲ್ಲಿದ್ದ ಅವನ ಸಹಪಾಠಿಗಳೆಲ್ಲಾ ಆಗಲೇ ಆಪೀಸಿಗೆ ಹೊರಟು ಹೋಗಿದ್ದರು. ಎದ್ದು ಆಪೀಸಿಗೆ ರೆಡಿಯಾಗುವ ಹೊತ್ತಿಗೆ ೮:೩೦ ಆಗಿ ಹೋಗಿತ್ತು. ೮:೩೦ ಆಗಿ ಹೋದರೆ ಏನಾಯ್ತು, ಹೇಗೂ ಬೈಕ್ ಇದೆಯೆಲ್ಲ , ಇವತ್ತು ಸ್ವಲ್ಪ ಜೋರಾಗಿ ಹೋದರಾಯಿತು ಅಷ್ಟೇ ಎಂದು ಕೊಂಡು ತನ್ನಷ್ಟಕ್ಕೆ ತಾನೇ ಒಂದು ಹಿಂದಿ ಹಾಡನ್ನು ಗೊಣಗುತ್ತಾ ನಾಲ್ಕನೇ ಮಹಡಿಯಲ್ಲಿರುವ ತನ್ನ ರೂಮಿನಿಂದ ಕೆಳಗಿಳಿದು ಬಂದ.

ಕೆಳಗೆ ಬಂದು ಬೈಕ್ ಸ್ಟಾರ್ಟ ಮಾಡಲು ನೋಡಿದ, ಏನೇ ಪ್ರಯತ್ನ ಪಟ್ಟರೂ ಬೈಕ್ ಸ್ಟಾರ್ಟ ಆಗಲಿಲ್ಲ. ಪೆಟ್ರೋಲ್ ಚೆಕ್ ಮಾಡಿದ, ನಿನ್ನೆ ಸಾಯಂಕಾಲ ಸೀಮಾಳೊಂದಿಗೆ ಸೆಂಟ್ರಲ್ ಮಾಲಗೆ ಹೋಗುವಾಗ ತಾನೇ ಟ್ಯಾಂಕ್ ಪುಲ್ ಮಾಡಿದ್ದ ಪೆಟ್ರೋಲ್ ಬಹುತೇಕ ಹಾಗೇ ಇತ್ತು. ಬಹುಷಃ ಇಂಜಿನ್ ಅಲ್ಲಿ ಏನಾದರೂ ಸಮಸ್ಯೆಯಾಗಿದೆಯೇನೋ? ಹೇಗೂ ಇರ್ಫಾನನ ಗ್ಯಾರೇಜ್ ಸಮೀಪದಲ್ಲೇ ಇದೆಯಲ್ಲ ಎಂದು ಇರ್ಫಾನನ ಗ್ಯಾರೇಜ್ ಕಡೆಗೆ ತಳ್ಳಿಕೊಂಡು ಹೊರಟ. ಇರ್ಫಾನ್ ಗಾಡಿಯನ್ನು ನೋಡಿ "ಶ್ಯಾಮ್ ಬಾಯ್, ಗಾಡಿ ಇಂಜಿನ್ ಎಲ್ಲಾ ಬಿಚ್ಚಿ ನೋಡಬೇಕು, ಗಾಡಿ ಸಾಯಂಕಾಲ ಕೊಡ್ತಿನಿ" ಅಂದಾಗ ಬೇರೇ ಮಾರ್ಗವಿಲ್ಲದೇ ಬೈಕನ್ನು ಅಲ್ಲಿಯೇ ಬಿಟ್ಟು ಆಟೋನಾದರೂ ಮಾಡಿಕೊಂಡು ಹೋಗೋಣವೆಂದು ಮೇನ್ ರೋಡ್ ಹತ್ತಿರ ಬಂದ.

ಮುಖ್ಯ ರಸ್ಥೆಗೆ ಬರುತ್ತಿದ್ದಂತೆ ಶುಕ್ರವಾರ ಅವನ ಮ್ಯಾನೇಜರ್ ಸುಂದರ್ "ಸೋಮವಾರ ಆಪೀಸಿಗೆ ಕಸ್ಟಮರ್ ಬರ್ತಾ ಇದ್ದಾರೆ. ಅವರೊಂದಿಗೆ ಮೀಟಿಂಗ್ ಇದೆ. ನನಗೆ ನಿಮ್ಮ ಸಹಾಯ ಬೇಕಾಗಬಹುದು ಸ್ವಲ್ಪ ಬೇಗನೇ ಬನ್ನಿ" ಎಂದದ್ದು ಶುಕ್ರವಾರ ಆಪೀಸು ಬಿಟ್ಟ ಮೇಲೆ ಮರೆತು ಹೋಗಿದ್ದು ಈಗ ನೆನಪಾಯಿತು. "ಒಹ್, ಶಿಟ್" ಎಂದು ತನ್ನಷ್ಟಕ್ಕೆ ತಾನು ಅಸಹ್ಯ ಪಟ್ಟುಕೊಂಡು ತನ್ನ ಕೈ ಗಡಿಯಾರವನ್ನು ನೋಡಿದ. ಒಂಬತ್ತು ಗಂಟೆಗೆ ಹತ್ತು ನಿಮಿಷ ಬಾಕಿ ಇದೆ, ಬೇಗ ಆಟೋ ಸಿಕ್ಕರೆ ಸಾಕೆಂದುಕೊಂಡ. ರಸ್ತೆಯಲ್ಲಿ ಸುಮ್ಮನೆ ನಿಂತು ಯಾರಿಗಾಗಿಯೋ ಕಾಯುತ್ತಾ ನಿಂತಿರುವಾಗ, "ಎಲ್ಲಿಗೆ ಸಾರ್" ಎಂದು ಬಂದು ಹೋಗುವ ಆಟೋಗಳು ಇಂದು ಮಾತ್ರ ಒಬ್ಬರು ನಿಲ್ಲಿಸಲಿಲ್ಲ. ಅಂತೂ ಒಬ್ಬ ಆಟೋದವನು ನಿಲ್ಲಿಸಿ "ಸರ್, ೧೦೦ ರೂಪಾಯಿ ಕೊಟ್ಟರೆ ಬರ್ತಿನಿ" ಎಂದು ಡಿಮಾಂಡ್ ಮಾಡಿದಾಗ ಬೇರೆ ದಾರಿಯಿಲ್ಲದೇ ಓಕೆ ಎಂದು ಅದರಲ್ಲಿ ಹೊರಟ.

ಸಮಯ ಆಗಲೇ ಒಂಬತ್ತು ಆಗುತ್ತಾ ಬಂದಿತ್ತು, ಜೇಪಿ ನಗರದ ನಾಲ್ಕನೇ ಹಂತದಿಂದ ಬನ್ನೇರುಘಟ್ಟ ರಸ್ಥೆಯಲ್ಲಿರುವ ಐ.ಬಿ.ಎಮ್ ಆಪೀಸು ಅಷ್ಟೇನು ದೂರವಲ್ಲದಿದ್ದರೂ, ಬನ್ನೇರುಘಟ್ಟ ರಸ್ತೆಯಲ್ಲಿನ ಟ್ರಾಪಿಕನಿಂದಾಗಿ ಇನ್ನಷ್ಟು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ಬೈಕನಲ್ಲಾಗಿದ್ದರೆ ಒಳ ರಸ್ತೆಯಲ್ಲಿ ಹೇಗೋ ಒಂದೆರಡು ಸಿಗ್ನಲ್ ತಪ್ಪಿಸಿಕೊಂಡು ಹೋಗಬಹುದು. ಆದರೆ ಆಟೋದಲ್ಲಿ ಅದು ಹೇಗೆ ಸಾದ್ಯ. ಅಪರೂಪಕ್ಕೆ ನಿನ್ನೆ ರಾತ್ರಿ ಸುರಿದ ಮಳೆಗೆ ರಸ್ತೆಯಿನ್ನೂ ಒದ್ದೆಯಾಗಿಯೇ ಇತ್ತು. ಕೆಲವು ತಗ್ಗಿನ ಸ್ಥಳಗಳಲ್ಲಿ ನೀರು ನಿಂತೇ ಇತ್ತು. ಶ್ಯಾಮನ ಮನಸ್ಸು ಪೂರ್ತಿ ಇಂದಿನ ಮೀಟಿಂಗ್ ಆವರಿಸಿ ಕೊಂಡಿತ್ತು. ಈಗಾಗಲೇ ಮೀಟಿಂಗ್ ಪ್ರಾರಂಭಗೊಂಡಿರುತ್ತದೆ. ಸುಂದರ್ ಅದೇನು ಅಂದುಕೊಂಡಿರುತ್ತಾನೋ. ಇವತು ಅವನಿಂದ ಅದೇನೇನು ಬೈಸಿಕೊಳ್ಳಬೇಕೋ. ಯಾವತ್ತು ಇಲ್ಲದ್ದು ಇವತ್ತೇ ಒಕ್ಕರಿಸಿಕೊಂಡು ಬರಬೇಕೇ ಎಂದು ಯೋಚಿಸುತ್ತಾ ಕುಳಿತವನಿಗೆ ಯಾರೋ ಮೈ ಮೇಲೆ ನೀರು ಸೋಕಿದಂತಾಗಿ ಎಚ್ಚರಗೊಂಡ. ಮೈ ನೋಡಿದರೆ ಎಡಗಡೆಯ ದೇಹದ ಭಾಗ ಸಂಪೂರ್ಣ ನೀರಿನಿಂದ ಒದ್ದೆಯಾಗಿತ್ತು. ಶರ್ಟನ ತೋಳನ್ನು ಎತ್ತಿ ನೋಡಿದ ಶರ್ಟ ಅರಶಿಣ ಬಣ್ಣಕ್ಕೆ ತಿರುಗಿತ್ತು, ಏನೋ ಒಂಥರ ವಾಸನೆ ಕೂಡ ಬರುತ್ತಿದ್ದ ಹಾಗಿತ್ತು. ಏನಂತ ತಿರುಗಿ ನೋಡೋಣವೆಂದರೆ ಆಟೋ ಆ ಸ್ಥಳವನ್ನು ಬಿಟ್ಟು ಮುಂದಿರುವ ಸಿಗ್ನಲ್ ಹತ್ತೀರ ಬಂದು ನಿಂತಿತ್ತು.

"ಏನ್ರೀ ಇದು, ಯಾರು ನೀರು ಸೋಕಿದ್ದು?" ಎಂದು ಆಟೋ ಡ್ರೈವರನನ್ನು ಕೇಳಿದ.

"ಸರ್, ಅದು ಕಾರ್ನವನು ಸರ್, ಅಲ್ಲಿ ಜೈದೇವಾ ಪ್ಲೈಓವರನ ಕೆಳಗೆ ಗಟಾರದ ನೀರು, ಮಳೆಯ ನೀರು ಸೇರಿಕೊಂಡು ಕೆರೆಯಂತಾಗಿತ್ತು ಸರ್. ಅಲ್ಲಿ ಕಾರ್ನವನು ನಮ್ಮನ್ನು ಓವರ್ ಟೇಕ್ ಮಾಡಲು ಹೋಗಿ ಆಟೋ ಪೂರ್ತಿ ಗಲೀಜು ಮಾಡಿ ಬಿಟ್ಟಿದ್ದಾನೆ ಸರ್" ಎಂದ ಬಡಪಾಯಿ ಆಟೋ ಡ್ರೈವರ್.

ಶ್ಯಾಮಗೆ ಒಂಥರಾ ಹೊಟ್ಟೆ ತೊಳೆಸಿ ಬಂದಂಗಾಯಿತು. ಈ ಪರಿಸ್ಥಿತಿಯಲ್ಲಿ ಮನೆಗೆ ಹೋಗುವುದೋ, ಆಪೀಸಿಗೆ ಹೋಗುವುದೋ ಎನ್ನುವುದು ಸಮಸ್ಯೆಯಾಯಿತು. ಮನೆಗೆ ಹೋದರೆ ಸುಂದರನಿಂದ ಬೈಸಿ ಕೊಳ್ಳಬೇಕು. ಇನ್ನೂ ಆಪೀಸಿಗೆ ಹೋಗೋಣವೆಂದರೆ ಬಟ್ಟೆ ಪೂರ್ತಿ ಕೊಳೆಯಾಗಿ, ವಾಸನೆ ಬರುತ್ತಿದೆ. ಏನು ಮಾಡುವುದು ಎಂದು ಯೋಚಿಸಿದವನು ಏನಾದರಾಗಲೀ ನೋಡೇ ಬಿಡೋಣವೆಂದು ಆಪೀಸಿನ ಬಳಿ ಆಟೋ ನಿಲ್ಲಿಸಿ, ಆಟೋದಿಂದ ಇಳಿದು ಆಪೀಸಿನ ಕಡೆ ಹೊರಟ.

ಆಟೋದಿಂದ ಇಳಿದು ಆಪೀಸುತಲುಪಿ ಒಳ ಸೇರುವವರೆಗೂ ಅದೆಷ್ಟೋ ಕಣ್ಣುಗಳು ಅವನನ್ನು ದಿಟ್ಟಿಸುತ್ತಿದ್ದುದು ಅವನ ಗಮನಕ್ಕೆ ಬಂದರೂ, ಅದ್ಯಾವುದನ್ನು ಲಕ್ಷಿಸಿಸದೇ ತನ್ನ ಕ್ಯೂಬಿಕಲನತ್ತ ಹೊರಟ. ತನ್ನ ಕ್ಯೂಬಿಕಲ್ ತಲುಪಿದೊಡನೆ, ಅವನ ಕ್ಯೂಬಿಕಲನ ಸಹಪಾಠಿ ಆರತಿ " ಇದೇನಿದು ಶ್ಯಾಮ್ ನಿನ್ನ ವ್ಯವಸ್ಥೆ" ಎಂದು ನಕ್ಕು "ಸುಂದರ್ ನಿಮ್ಮನ್ನು ಕೇಳಿಕೊಂಡು ಮೂರು ಭಾರಿ ಬಂದು ಹೋದರು."

"ಓಹ್! ಹೌದಾ" ಎನ್ನುತ್ತಾ "ಏನಿಲ್ಲ ಆರತಿ ಚಿಕ್ಕ ಎಕ್ಷಿಡಂಟ್. ಬೈಕಿಂದ ಸ್ಕಿಡ್ ಆಗಿ ಬಿದ್ದೆ" ಎಂದು ತಕ್ಷಣಕ್ಕೆ ಬಾಯಿಗೆ ಬಂದ ಸುಳ್ಳನ್ನು ಹೊರಹಾಕಿದ. ಅದೇನು ಅವನಿಗೆ ಹೊಸ ಅಭ್ಯಾಸವೇನು ಅಲ್ಲ. ಇದೇ ರೀತಿ  ಹೀಗೆ ಅದೆಷ್ಟು ಸುಳ್ಳನ್ನು ಹೇಳಿದ್ದನೋ.

ಆರತಿ ಕಿವಿಗೆ ಆ ಸುದ್ದಿ ಬಿದ್ದಮೇಲೆ ಕೇಳಬೇಕೆ? ಆ ಸುದ್ದಿ ಚಂಡಮಾರುತದ ಗಾಳಿಗಿಂತ ವೇಗವಾಗಿ ಆ ಪ್ಲೋರಿನಲ್ಲಿರುವ ಎಲ್ಲರ ಕಿವಿಗೂ ತಲುಪಿತು. ಒಬ್ಬರಾದ ಮೇಲೆ ಒಬ್ಬರು ಬಂದು ಶ್ಯಾಮನ ಆರೋಗ್ಯ ವಿಚಾರಿಸಿಕೊಂಡು ಹೊರಟರು. ಮೀಟಿಂಗನಿಂದ ಹೊರಬಂದ ಸುಂದರಗೂ ಆ ಸುದ್ದಿ ತಲುಪಿ, ಶ್ಯಾಮ್ ಇದ್ದಲ್ಲಿಗೆ ಓಡಿ ಬಂದ. ಈಗ ಸುಂದರನ ಮುಖದಲ್ಲಿ ಸಿಟ್ಟಿನ ಬದಲಾಗಿ ಕರುಣೆ ಮೂಡಿತ್ತು. ಶ್ಯಾಮ್ ಇದ್ದಲ್ಲಿಗೆ ಬಂದವನೇ "ಹೇ, ಶ್ಯಾಮ್, ಎಲ್ಲೋ ಎಕ್ಷಿಡೆಂಟ್ ಆಯ್ತು?"

"ಸುಂದರ್, ಜೈದೇವಾ ಪ್ಲೈ ಓವರ್ನ ಕೆಳಗೆ ನೀರು ತುಂಬಿದ್ದರಿಂದ, ಅಲ್ಲಿ ಒಂದು ಚಿಕ್ಕ ಹೊಂಡ ಇದ್ದುದು ಗೊತ್ತಾಗದೇ ಅದರ ಮೇಲೆ ಹಾಯಿಸಿ ಬಿಟ್ಟೆ, ಆಯ ತಪ್ಪಿ ಬಿದ್ದು ಬಿಟ್ಟೆ" ಎಂದು ಸುಳ್ಳನ್ನು ಸತ್ಯದಂತೆ ಬಿಂಬಿಸಿ "ಸಾರಿ ಸುಂದರ್, ಹಾಗೆ ಬಿದ್ದು ಬಿಟ್ಟಿದ್ದರಿಂದ ಮೀಟಿಂಗಗೆ ಬರೋಕೆ ಆಗಲಿಲ್ಲ" ಅದೇ ಸುಳ್ಳನ್ನು ಮತ್ತಷ್ಟು ವಿಸ್ತರಿಸಿದ.

"ಇರಲಿ, ತೊಂದರೆ ಇಲ್ಲ, ನಾನೇ ಮ್ಯಾನೇಜ್ ಮಾಡಿದೆ, ನಿನಗೇನಾದರೂ ಗಾಯ ಆಗಿದೆಯೋ ಹೇಗೆ?"

"ಅಷ್ಟೊಂದೇನಿಲ್ಲ ಸುಂದರ್, ಮಂಡಿ ಹತ್ತಿರ ಸ್ವಲ್ಪ ನೋವಿದೆ, ಪರವಾಗಿಲ್ಲ" ಎಂದ

"ಓಹ್, ಹಾಗಿದ್ದರೆ ಒಂದು ಕೆಲಸ ಮಾಡು, ಈಗಲೇ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಅಲ್ಲಿಂದ ಮನೆಗೆ ಹೋಗಿ ರೆಸ್ಟ ತಗೋ, ಏನಾದ್ರೂ ತೊಂದರೆ ಇದ್ದರೆ ನನಗೆ ಕಾಲ್ ಮಾಡು, ಯಾವುದನ್ನು ನೆಗ್ಲೆಕ್ಟ ಮಾಡ ಕೂಡದು" ಎಂದು ಹೇಳಿದಾಗ ಶ್ಯಾಮಗೆ ತನಗೆ ತಕ್ಷಣ ಹೊಳೆದ ಸುಳ್ಳು ತನ್ನನ್ನು ಈ ಕ್ಷಣದಿಂದ ರಕ್ಷಿಸಿತಲ್ಲ ಎಂದು ಮನಸ್ಸು ಸಮಾಧಾನಕ್ಕೆ ಬಂತು. ಸುಂದರ್ ಹೇಳಿದ ಮೇಲೆ ಇನ್ನೂ ಆಪೀಸಿನಲ್ಲಿ ಮತ್ತೆ ನಿಲ್ಲೋದು ಬೇಡವೆಂದುಕೊಂಡು ಆಪೀಸಿನಿಂದ ಬೇಗ ಬೇಗ ಹೊರಬಂದ.

"ಏನೋ ಅದೃಷ್ಟ ಚೆನ್ನಾಗಿತ್ತು ಅಂತೂ ಬಚಾವಾದೆ ಎಂದು ಕೇಳುತ್ತಾ, ಆಪೀಸಿನಿಂದ ಹೊರಗೆ ರಸ್ಥೆಯಲ್ಲಿ ಟೀ ಮಾರುತ್ತಿದ್ದ ಪೆಟ್ಟಿಗೆ ಅಂಗಡಿಯ ಬಳಿ ಬಂದು ಚಹಾ ಕುಡಿಯುತ್ತಾ ನಿಂತ. ಅಲ್ಲಿ ನಿಂತ ಎಲ್ಲರೂ ಚಹಾದೊಂದಿಗೆ ಸಿಗರೇಟಿನ ಧಂ ಎಳೆಯುವುದನ್ನು ನೋಡಿ, ಇವತ್ತಿನ ಘಟನೆಗಳಿಂದ ಬೇಸತ್ತ ಅವನಿಗೆ ತಾನು ಒಂದು ಸಿಗರೇಟು ಸೇದರೆ ಹೇಗೆ ಎಂದು "ಒಂದು ಕಿಂಗ್" ಅಂದು ಹೇಳಿ "ಎಷ್ಟು?" ಎಂದ.

"ಹತ್ತು ರೂಪಾಯಿ ಸರ್" ಎಂದು ಟೀ ಅಂಗಡಿಯವನು ಹೇಳಿದಾಗ, ತಾನು ಕೊನೆಯ ಬಾರಿ ಸಿಗರೇಟು ತುಟಿಗಿಟ್ಟಾಗ, ೪-೩೦ ಅಥವಾ ೫ ರೂಪಾಯಿ ಇತ್ತಲ್ಲವೇ? ಈಗ ಹತ್ತು ರೂಪಾಯಿನಾ ಎಂದನಿಸಿತಾದರೂ, ಅಪರೂಪಕ್ಕೆ ಒಂದು ಸಿಗರೇಟು ತಾನೇ ಹೋದರೆ ಹೋಗಲೀ ಎಂದು ಹತ್ತು ರೂಪಾಯಿ ಕೊಟ್ಟು, ಸಿಗರೇಟನ್ನು ತುಟಿಗೆ ಇಟ್ಟು ಅಂಗಡಿಗೆ ತೂಗು ಹಾಕಿದ ಲೈಟರನಿಂದ ಬೆಂಕಿ ಹಚ್ಚಿಕೊಂಡು ಇನ್ನೇನು ಮೊದಲ ದಮ್ಮು ಎಳೆಯ ಬೇಕೆಂದುಕೊಂಡವನಿಗೆ, "ಹೇಗೂ ಇಷ್ಟು ದಿನ ಸಿಗರೇಟು ಬಿಟ್ಟಿದ್ದೇನೆ, ಇನ್ನೇಕೆ ಇದು" ಎಂದನಿಸಿ ಹೊಗೆಯಾಡುತಿದ್ದ ಸಿಗರೇಟನ್ನು ಎಸೆದು  ಬಿಟ್ಟ. ಕಾಲಿ ಟೀ ಕುಡಿದು ಮನೆಗೆ ಬಂದು ಬಟ್ಟೆ ಬದಲಾಯಿಸಿ ಮತ್ತೊಮ್ಮೆ ಸ್ನಾನ ಮಾಡಿ ಬಂದು ಸಮಯ ನೋಡಿದಾಗ ಗಂಟೆ ಆಗತಾನೇ ಒಂದು ಹೊಡೆದಿತ್ತು. ಊಟ ಮಾಡಿ ಬರುವ ಮನಸ್ಸಾಗಿ ಮನೆಯಿಂದ ಹೊರಟು ಬಂದ. "ನಕ್ಷತ್ರ ಹೋಟೇಲ್ನಲ್ಲಿ ನಾನ್ ವೆಜ್ ಚೆನ್ನಾಗಿರತ್ತೆ" ಎಂದು ಯಾರೋ ಹೇಳಿದ್ದು ನೆನಪಾಗಿ, ಅಲ್ಲೇ ಹೋಗಿ ಊಟ ಮಾಡೋಣವೆಂದು, ನಕ್ಷತ್ರ ಎಂದು ದೊಡ್ಡದಾಗಿಯೂ, ಪ್ಯಾಮಿಲಿ ಬಾರ್ ಎಂಡ್ ರೆಸ್ಟೋರೆಂಟ್ ಎಂದು ಚಿಕ್ಕದಾಗಿಯೂ ಬರೆದು ನೇತು ಹಾಕಿದ್ದ ಬೋರ್ಡನ್ನು ನೋಡಿ ಒಳಕ್ಕೆ ಹೋದ.

ಊಟ ಮುಗಿಸಿ ಮನೆಗೆ ಬಂದು ಸ್ವಲ್ಪ ಹೊತ್ತು ಟಿ.ವಿ ನೋಡಿ ಮಲಗಿದವನಿಗೆ ಸಂಜೆ ಎಚ್ಚರವಾಗಿದ್ದು ಐದು ಕಳೆದ ಮೇಲೆಯೇ. ಇಷ್ಟೊತ್ತು ಒಬ್ಬನೇ ಇದ್ದು ಬೋರಾಗಿತ್ತು, ಸೀಮಾಳಿಗೆ ಕರೆ ಮಾಡೋಣ ಅಂತಂದರೆ ಅವಳೂ ಆಪೀಸಿನಲ್ಲಿ ಇರುತ್ತಾಳೆ. ಇರಲಿ ನೋಡೋಣವೆಂದು "ಹಾಯ್" ಎಂದು ಅವಳ ಮೊಬೈಲಗೆ ಸಂದೇಶ ರವಾನಿಸಿದ. ಸಂದೇಶ ಕಳಿಸಿದ ಎರಡು ನಿಮಿಷದಲ್ಲೇ ಅವಳಿಂದ ಉತ್ತರ ಬಂತು "ಸ್ವಲ್ಪ ಬ್ಯೂಸಿ ಇದ್ದಿನಿ, ಆಮೇಲೆ ಮೆಸೇಜ್ ಮಾಡ್ತಿನಿ" ಎಂದು. ಹಾಗೆ ಅವಳಿಂದ ಉತ್ತರ ಬಂದ ಮೇಲೆ ಇನ್ನೂ ಅವಳಿಗೆ ತೊಂದರೆ ಕೊಡುವುದು ಬೇಡವೆಂದುಕೊಂಡು ಸಮೀಪದ ಗಾರ್ಡನಗೆ ಹೋಗಿ ಕುಳಿತ. ಗಾರ್ಡನನಲ್ಲಿ ಒಬ್ಬಂಟಿಯಾಗಿ ಕುಳಿತಿದ್ದವನೆಂದರೆ ಇವನೊಬ್ಬನೇ. ಅಲ್ಲಲ್ಲೀ ಕುಳಿತು ಲಲ್ಲೆ ಹೊಡೆಯುತ್ತಾ ಕುಳಿತ ಯುವ ಪ್ರೇಮಿಗಳನ್ನು ನೋಡಿದಾಗ ಸೀಮಾ ಇದ್ದರೆ ಚೆನ್ನಾಗಿತ್ತೇನೋ ಎಂದು ಅನಿಸದಿರಲಿಲ್ಲ. ಒಬ್ಬನೇ ಅಂತಾ ಗಾರ್ಡನ್ ಅಲ್ಲಿ ಎಷ್ಟು ಹೊತ್ತು ಕುಳಿತಿರಲು ಸಾದ್ಯ. ಕುಳಿತು ಕುಳಿತು ಬೇಸರವಾಗಿ ಗಾರ್ಡನ್ ಇಂದ ಹೊರಬಂದು, ಹೊಟೇಲ್ಗೆ ಹೋಗಿ ಟೀ ಕುಡಿದು ಮನೆಗೆ ಬಂದಾಗ ಸಂಜೆ ಕಳೆದು ಕತ್ತಲು ಆವರಿಸಿತ್ತು.

ಮನೆಗೆ ಬಂದು ಸ್ವಲ್ಪ ಸಮಯ ಕಳೆಯುವುದರಲ್ಲಿ ಒಬ್ಬೊಬ್ಬರಾಗಿ ಮನೆಗೆ ಬರಲಾರಂಬಿಸಿದರು. ಎಲ್ಲರೂ ಸೇರಿ ಅಡಿಗೆ ಮಾಡಿ ಊಟ ಮಾಡುವಷ್ಟರಲ್ಲಿ ಹತ್ತು ಗಂಟೆಯಾಗಿತ್ತು. ಕರೆ ಮಾಡುತ್ತೇನೆ ಎಂದು ಹೇಳಿದ ಸೀಮಾ ಇನ್ನೂ ಕರೆ ಮಾಡದೇ ಇದ್ದುದರಿಂದ ತಾನೇ ಅವಳಿಗೆ ಕರೆ ಮಾಡಲು ಪ್ರಯತ್ನಿಸಿದ. ಹತ್ತಾರು ಭಾರಿ ಪ್ರಯತ್ನಿಸಿದರೂ ಅವಳು ಕರೆಗೆ ಉತ್ತರಿಸದೇ ಇದ್ದಾಗ, ಅವಳಿಗೆ "ಹಾಯ್" ಎಂದು ಮೆಸೇಜ್ ಕಳಿಸಿಟ್ಟ, ಬಹುಷಃ ಈಗ ಬ್ಯೂಸಿ ಇದ್ದಿರಬಹುದು ಮೆಸೇಜ್ ನೋಡಿದ ಮೇಲಾದರೂ ಕರೆ ಮಾಡಬಹುದೆನ್ನುವ ಉದ್ದೇಶದಿಂದ.

ಗಂಟೆ ಹನ್ನೊಂದಾಗುತ್ತಾ ಬಂತು ಆದರೆ ಸೀಮಾಳಿಂದ ಕರೆ ಮಾತ್ರ ಬರಲಿಲ್ಲ. ಇನ್ನೂ ಅವಳು ಕರೆ ಮಾಡಲ್ಲ ಎಂದು ಕೊಂಡು ಮಲಗಲು ಹೋದವನ ಮೊಬೈಲಗೆ ಒಂದು ಮೆಸೇಜ್ ಬಂತು. ಸೀಮಾಳಿಂದ ಬಂದ ಮೆಸೇಜ್, ನೋಡಿ ಖುಸಿಯಿಂದ ಮೆಸೇಜ್ ಓಪನ್ ಮಾಡಿದ. "ವಾಟ್ಸ ಅಪ್ ನೋಡು" ಎಂದಷ್ಟೇ ಇತ್ತು. ಮೊಬೈಲನ ಇಂಟರ್ನೆಟ್ ಆನ್ ಮಾಡಿ "ವಾಟ್ಸ್ ಅಪ್ ನೋಡಿದ". ಅದರಲ್ಲಿ ಸೀಮಾ ಕಳಿಸಿದ ಎರಡು ಪೋಟೋಗಳಿದ್ದವು. ಒಂದು ಪೋಟೋದಲ್ಲಿ ಶ್ಯಾಮ್ ತುಟಿಗೆ ಸಿಗರೇಟು ಇಟ್ಟು ಬೆಂಕಿ ಹಚ್ಚುತ್ತಿದ್ದುದು, ಇನ್ನೊಂದು "ನಕ್ಷತ್ರ" ಬಾರೊಳಗೆ ಹೋಗುತ್ತಿದ್ದ ಪೋಟೋಗಳು. ಆ ಪೋಟೋಗಳನ್ನು ನೋಡಿದೊಡನೆ ಇಂದು ಬೆಳಿಗ್ಗೆ "ನಿನ್ನ ವಿಷಯವನ್ನು ಮನೆಯಲ್ಲಿ ಹೇಳಿದ್ದೇನೆ, ಇನ್ನೂ ಮುಂದೆ ಅವರು ನಿನ್ನನ್ನು ಗಮನಿಸಲು ಪ್ರಾರಂಭಿಸಬಹುದು, ಸ್ವಲ್ಪ ಹುಷಾರಾಗಿರು" ಎಂದು ಸೀಮಾ ಎಚ್ಚರಿಕೆ ಕೊಟ್ಟದ್ದಿ ಈಗ ನೆನಪಿಗೆ ಬಂತು. ಅಂದರೆ ಇವೆಲ್ಲ ಸೀಮಾಳ ಮನೆಯವರ ಕೆಲಸ, ಆಗಲೇ ಇವರು ನನ್ನ ಬಗ್ಗೆ ಇನ್ವೆಸ್ಟಿಗೇಷನ್ ಶುರು ಮಾಡಿದ್ದಾರೆ ಅಂತಾಯ್ತು ಎಂದು ಕೊಂಡು ಸೀಮಾಳಿಗೆ ಬೆಳಿಗ್ಗೆಯಿಂದ ನಡೆದ ಘಟನೆಗಳನ್ನು ಹೇಳಿ ಬಿಡಬೇಕು ಎಂದು ಕೊಂಡು ಅವಳ ಮೊಬೈಲಗೆ ಮತ್ತೆ ಕರೆ ಮಾಡಿದ. ಆದರೆ ಅವಳು ಮೊಬೈಲನ್ನು ಸ್ವಿಚ್ ಆಪ್ ಮಾಡಿಟ್ಟಿದ್ದಳು. ಮೊಬೈಲ್ ಆನ್ ಮಾಡಿದಾಗಲಾದರೂ ನೋಡಲಿ ಎಂದು ಕೊಂಡು ಬೆಳಿಗ್ಗೆಯಿಂದ ಇಲ್ಲಿಯವರೆಗೆ ನಡೆದ ಘಟನೆಗಳನ್ನು ವಿವರಿಸಿ ಮೆಸೇಜ್ ಕಳಿಸಿ ಮುಗಿಸುವ ಹೊತ್ತಿಗೆ ಗಂಟೆ ಒಂದಾಗಿತ್ತು.

ಅಬ್ಬಾ! ಒಂದು ದಿನ ಅದೃಷ್ಟ ಕೈ ಕೊಟ್ಟರೆ ಏನಲ್ಲಾ ಅವಘಡಗಳಾಗಿ ಬಿಡುತ್ತವಲ್ಲ ಎಂದು ಕೊಂಡು, ಮೊಬೈಲನಲ್ಲಿ ಎಂಟು ಗಂಟೆಗೆ ಇಟ್ಟ ಅಲಾರಾಂ ಅನ್ನು ಏಳು ಗಂಟೆಗೆ ಬದಲಾಯಿಸಿ ಮಲಗಿದ.

--ಮಂಜು ಹಿಚ್ಕಡ್

Friday, November 28, 2014

ಕತೆಗಾರನ ಬದುಕು ಕತೆಯಾದಾಗ!

ಬಹಳ ದಿನಗಳ ನಂತರ ಅದೇಕೋ ನನಗೆ ಬಸಲೆ ಸೊಪ್ಪಿನ ಸಾರಿನ ಆಸೆಯಾಗಿ, ಬಸಲೆ ಸೊಪ್ಪು ತರಲು ಮೊನ್ನೆ ಭಾನುವಾರ ಜಯನಗರದ ನಾಲ್ಕನೇ ಹಂತದ ಕಾಂಪ್ಲೆಕ್ಸನಲ್ಲಿರುವ ಮಂಗಳೂರು ಸ್ಟೋರ್ಸಗೆ ಹೋದೆ. ಊರಲ್ಲಿ ಆಗಿದ್ದರೆ ಮನೆಯ ಹಿತ್ತಲಲ್ಲಿ ಬೆಳೆದ ಬಸಲೆ ಬಳ್ಳಿಯಿಂದ ಸೊಪ್ಪು ತೆಗೆದು ಸಾರು ಮಾಡಬಹುದಿತ್ತು. ಆದರೆ ಬೆಂಗಳೂರಿನಲ್ಲಿ ಹಾಗಲ್ಲವಲ್ಲ, ಇರೋ ೩೦*೪೦ ಅಡಿಯ ಜಾಗದಲ್ಲಿ ಒಂದಿಂಚು ಬಿಡದೆ ಐದಾರು ಮಹಡಿಯ ಕಟ್ಟಡ ಕಟ್ಟಿ, ಆದರಲ್ಲಿ ಏಳೆಂಟು ಮನೆಮಾಡಿ ಬಾಡಿಗೆ ಎಣಿಸುವ ಇಂದಿನ ಕಾಲದಲ್ಲಿ ಬಸಲೆ ಬೆಳೆಯಲು ಜಾಗವೆಲ್ಲಿ.

ಮಂಗಳೂರು ಸ್ಟೋರ್ಸನಿಂದ ಒಂದು ಕಟ್ಟು ಬಸಲೆ ಜೊತೆಗೆ ಪತ್ರೊಡೆ ಮಾಡಲು ಐದಾರು ಕೆಸುವಿನ ಎಲೆ ತೆಗೆದುಕೊಂಡು ಅಲ್ಲಿಂದ ಹೊರಟು, ಮನೆಗೆ ಹೋಗಲು ಆಟೋ ಸಿಗುತ್ತದಾ ಎಂದು ಆ ಕಡೆಯಿಂದ ಬರುವ ಖಾಲಿ ಆಟೋಗಳನ್ನು ನೋಡುತ್ತಾ, ರಸ್ತೆಯಲ್ಲಿ ಹರಿದು ಬರುವ ವಾಹನಗಳನ್ನು ತಪ್ಪಿಸಿಕೊಳ್ಳುತ್ತಾ ಕೂಲ್ ಜೌಂಟ್ ಸಿಗ್ನಲ್ ಹತ್ತಿರ ನಡೆಯಲಾರಂಭಿಸಿದೆ. ಕಾಂಪ್ಲೆಕ್ಸ ಎದುರುಗಿನ ರಸ್ತೆ ದಾಟಿ ಇನ್ನೇನು ಹತ್ತು ಅಡಿ ನಡೆದಿರಬೇಕು, ಅಷ್ಟರಲ್ಲಿ ದೂರದಲ್ಲಿ ನನಗೆ ಅಭಿಮುಖವಾಗಿ ನಡೆದು ಬರುತ್ತಿರುವ ವ್ಯಕ್ತಿ ನನ್ನ ಗಮನ ಸೆಳೆದ. ಆ ವ್ಯಕ್ತಿ ದೂರದಿಂದ ನೋಡುವಾಗ ನನಗೆ ತುಂಬಾ ಪರಿಚಯವಿರುವ ವ್ಯಕ್ತಿಯಂತೆ ಗೋಚರಿಸಿದ್ದರಿಂದ ನನ್ನ ಕಾಲುಗಳು ಮುಂದೆ ಹೋಗಲು ಬಯಸಿದ್ದರೂ ನನ್ನ ಮನಸ್ಸು ಮುಂದೆ ಹೋಗದಂತೆ ತಡೆದು ಅಲ್ಲೇ ನಿಲ್ಲಿಸಿತು. ಹೌದು ಆತ ಕತೆಗಾರ ಗೋವಿಂದಣ್ಣನಲ್ಲವೇ? ಇದ್ದರೂ ಇರಬಹುದು. ಆದರೆ ಅವನು ಇಲ್ಲೇನು ಮಾಡಲು ಬಂದಿದ್ದಾನೆ? ಇವನು ಹೇಳುವ ಕತೆಗಳನ್ನು ಕೇಳಿ ಅವನ ಕತೆಯನ್ನು ಯಾರಾದರೂ ಸಿನಿಮಾ ಮಾಡಲು ಕರೆದಿರಬಹುದೇ? ಮತ್ತೊಮ್ಮೆ ಮನಸ್ಸಿಗೆ ಅವನಿರಲಿಕ್ಕಿಲ್ಲ ಅನ್ನಿಸಿತಾದರೂ, ನೋಡಿ ನಿರ್ಧರಿಸಿಯೇ ಹೋಗುವ ಮನಸ್ಸಾಗಿ ಅಲ್ಲಿಯೇ ನಿಂತೆ. ಅವನು ಬರುವ ವೇಗವನ್ನು ಗಮನಿಸಿದರೆ ಅವನು ನಾನಿರುವ ಜಾಗವನ್ನು ಸೇರಲು ಒಂದೈದು ನಿಮಿಷಗಳಾದರೂ ಬೇಕೆನಿಸಿ, ಅಲ್ಲಿಯವರೆಗೆ ಸುಮ್ಮನೆ ನಿಲ್ಲುವುದೇನು ಎಂದುಕೊಂಡು. ಅಲ್ಲೇ ಪಕ್ಕದಲ್ಲೇ ಹಸಿ ಕಡ್ಲೆಕಾಯಿ ಬೇಯಿಸುತ್ತಿದ್ದ ಹೆಂಗಸಿನ ಬಳಿಸಾರಿ ಹತ್ತು ರೂಪಾಯಿ ಕೊಟ್ಟು ಬೇಯಿಸಿದ ಕಡ್ಲೆಕಾಯಿ ತೆಗೆದುಕೊಂಡು ತಿನ್ನುತ್ತಾ ದೂರದಲ್ಲಿ ಬರುತ್ತಿರುವ, ಮನಸ್ಸಿಗೆ ಪರಿಚಿತ ಅನ್ನಿಸಿದ ವ್ಯಕ್ತಿಯನ್ನು ಕಾಯುತ್ತಾ ನಿಂತೆ. ಒಂದೊಂದು ಕಡ್ಲೆಕಾಯಿ ಬೀಜ ಬಾಯಿ ಸೇರುತ್ತಿದ್ದ ಹಾಗೆ ಇಲ್ಲಿಯವರೆಗೆ ಸುಮ್ಮನಿದ್ದ ಮನಸ್ಸು ಕತೆಗಾರ ಗೋವಿಂದಣ್ಣನ ಬಗ್ಗೆಯೇ ಯೋಚಿಸ ತೋಡಗಿತು.

                             -------*-*-*-------
ನಾನು ಮತ್ತು ಗೋವಿಂದಣ್ಣ ಹೇಳಿ ಕೊಳ್ಳಲು ಹೆಸರಿಗೆ ಒಂದೇ ಊರಿನವರಾದರೂ, ನಮ್ಮದು ಅರೆ ಮಲೆನಾಡಾದ್ದರಿಂದ ನಮ್ಮ ಮನೆಗೂ ಅವನ ಮನೆಗೂ ಒಂದು ಒಂದುವರೆ ಮೈಲಿಗಳಷ್ಟು ದೂರ. ನಮ್ಮಿಬ್ಬರ ಮನೆಗಳ ನಡುವಿನ ಅಂತರದಲ್ಲಿ ಇರೋದು ಅಂದರೆ ನಮ್ಮ ಮನೆಯ ಗದ್ದೆ ತೋಟಗಳು, ನಂತರ ಒಂದು ಚಿಕ್ಕ ತೊರೆ, ತೊರೆ ದಾಟಿದ ಮೇಲೆ ಸಿಗುವ ಒಂದು ಚಿಕ್ಕ ಕಾಡಿನ ಹಾಸು, ನಂತರ ಅವನ ಮನೆಯ ಗದ್ದೆ, ತೋಟಗಳು ಇವಿಷ್ಟು ಬಿಟ್ಟರೆ ಬೇರೆ ಯಾರ ಮನೆಗಳಿಲ್ಲ. ಗೋವಿಂದಣ್ಣ ನಮ್ಮ ಮನೆಗೆ ಬಂದು ಹೋಗುವುದು, ನಮ್ಮ ತಂದೆ ಅವರ ಮನೆಗೆ ಹೋಗಿ ಬರುವುದು ಇತ್ತಾದರೂ ನಾವು ಮಕ್ಕಳು ಅವರ ಮನೆಗೆ ಹೋಗಿ ಬರುತ್ತಿದ್ದುದು ಅಷ್ಟಕಷ್ಟೇ. ಗೋವಿಂದಣ್ಣ ನಮ್ಮ ಮನೆಗೆ ಬಂದಾಗಲೆಲ್ಲಾ ಮಾತಿನ ನಡುವೆ ಒಂದೆರಡು ಕತೆ ಹೇಳಿಯೇ ಹೋಗುವುದು ಕಾಯಂ ಆಗಿತ್ತು. ಕತೆ ಎಂದರೆ ರಾಮಾಯಣ, ಮಹಾಭಾರತದ ಕತೆಗಳಾಗಲೀ, ಅಥವಾ ಪಂಚತಂತ್ರದ ಕತೆಗಳಾಗಲೀ ಅಥವಾ ಯಕ್ಷಗಾನದ ಪ್ರಸಂಗದ ಕತೆಗಳಾಗಲೀ ಆಗಿರಲಿಲ್ಲ. ಅವು ಅಲ್ಲಿ ನಮ್ಮೂರಿನ ಮನೆಗಳಲ್ಲಿಯೋ ಅಥವಾ ಅಕ್ಕ ಪಕ್ಕದ ಊರುಗಳ ಮನೆಗಳಲ್ಲಿಯೋ ನಡೆದಿರಬಹುದಾದ, ನಡೆಯದೇ ಇರಬಹುದಾದ, ಅವನ ಊಹೆಗೆ ನಿಲುಕಬಹುದಾದ, ನಿಲುಕದೇ ಇರಬಹುದಾದ ವಿಷಯಗಳೇ ಅವನ ಕತೆಗಳು.

ಅವಳು ಅಲ್ಲಿ ಹೋದಳು, ಇವನು ಇಲ್ಲಿ ಬಂದ, ಅವನಿಗೂ ಅವಳಿಗೂ ಇರಬಹುದಾದ ಸಂಬಂಧ, ಅದ್ಯಾರದೋ ಮಗಳು ಮನೆ ಬಿಟ್ಟು ಓಡಿ ಹೋದದ್ದು, ಅದ್ಯಾರೋ ಗಂಡನನ್ನು ಬಿಟ್ಟು ಬಂದದ್ದು, ಅದ್ಯಾರದೋ ಮನೆಯಲ್ಲಿ ನಡೆದ ಅಣ್ಣ ತಮ್ಮಂದಿರ ಜಗಳ, ಅದ್ಯಾರದೋ ಮನೆ ಒಡೆದು ಪಾಲಾದುದ್ದು, ಅದ್ಯಾರದೋ ಮನೆಯಲ್ಲಿ ನಡೆದ ಅತ್ತೆ ಸೊಸೆಯರ ಜಗಳ. ಇಂತಹುದೇ ವಿಷಯಗಳ ಕುರಿತು ಹಾವ ಭಾವಗಳಿಂದ ಕೂಡಿದ ಕತೆ ಹೇಳುವುದರಲ್ಲಿ ನಿಸ್ಸೀಮನಾಗಿದ್ದ ಗೋವಿಂದಣ್ಣ. ಅವನು ಹೇಳುವ ಕತೆಗಳು ಇಂದಿನ ಯಾವ ಸಿನಿಮಾ ಕತೆಗಳಿಗೂ ಕಡಿಮೆಯಾಗಿರಲಿಲ್ಲ. ಅವನು ಹೇಳುವ ಕತೆಗಳನ್ನು ಕೇಳಿ ನಮ್ಮೂರಿನ ಜನ ಅವನಿಗೆ ಕತೆಗಾರ ಗೋವಿಂದಣ್ಣ ಎಂದು ಹೆಸರಿಟ್ಟಿದ್ದರು.

ನಾವು ಚಿಕ್ಕವರಿದ್ದಾಗ ಇವೆಲ್ಲ ಕತೆಗಳು ನಮಗೆ ಅರ್ಥವಾಗದ್ದರಿಂದ ಅವು ಯಾರಿಗೆ ಸಂಬಂಧಿಸದ ಕತೆಗಳು ಎಂದು ಅರ್ಥವಾಗದೇ ನಮ್ಮಷ್ಟಕ್ಕೆ ನಾವು ಸುಮ್ಮನಾಗಿ ಬಿಡುತಿದ್ದೆವು. ಆದರೆ ನಾವು ದೊಡ್ಡವರಾಗುತ್ತಾ ಹೋದ ಹಾಗೆ ಅವನ ಕತೆಗಳು ನಮಗೂ ಅರ್ಥವಾಗ ತೊಡಗಿದ ಮೇಲೆ ಅವನು ಯಾರ ಬಗ್ಗೆ ಕತೆ ಹೇಳುತಿದ್ದಾನೆ ಎನ್ನುವುದು ಸ್ಪಷ್ಟವಾಗತೊಡಗಿದವು. ಒಂದಂತೂ ಸತ್ಯ, ಅವನು ಹೇಳುತ್ತಿದ್ದ ಕತೆಗಳಲ್ಲಿ ಸತ್ಯ ಇತ್ತೋ, ಇಲ್ಲವೋ, ಅದರೆ ಅವನು ಹೇಳುವ ಶೈಲಿಯಿಂದ ಎದುರಿಗೆ ಕೂತಿರುವ ವ್ಯಕ್ತಿ ಒಮ್ಮೆ ಅದು ಸತ್ಯವಾದ ಕತೆ ಎಂದು ನಂಬದಿರಲು ಸಾದ್ಯವಿಲ್ಲದಿರಲಿಲ್ಲ. ಇಲ್ಲದಿದುದನ್ನು ಇದ್ದಂತೆ ನಿಖರವಾಗಿ ಹೇಳಬಲ್ಲವನಾಗಿದ್ದ ಗೋವಿಂದಣ್ಣ. ನಾವು ದೊಡ್ಡವರಾದ ಮೇಲಂತೂ ಅವನೆಲ್ಲಾದರೂ ಕತೆ ಹೇಳುತಿದ್ದರೆ ನಾವು ತಪ್ಪದೇ ಕೇಳುತಿದ್ದೆವು.

                             -------*-*-*-------
ಗೋವಿಂದಣ್ಣ ಹಾಗೂ ಅವನ ಕತೆಗಳ ಯೋಚನೆಯಲ್ಲಿ ಕಡ್ಲೆ ಬೀಜ ತಿನ್ನುತ್ತಾ ನಿಂತವನಿಗೆ, ಆತ ನನ್ನನ್ನು ದಾಟಿ ೧೦ ಹೆಜ್ಜೆ ಮುನ್ನಡೆದಿದ್ದು ಆತ ದಾಟಿ ಹೋದ ಮೇಲೆಯೇ ತಿಳಿದದ್ದು. ಮುಂದೆ ಹೋದವನು ನನ್ನನ್ನು ನೋಡದೇ, ಮಾತನಾಡದೇ ಹೋದುದ್ದರಿಂದ ಆತ ಗೋವಿಂದಣ್ಣನಿರಲಿಕ್ಕಿಲ್ಲ ಎಂದನಿಸಿ ಮನೆಗೆ ಹೋಗೋಣವೆಂದು ಹೆಜ್ಜೆ ತೆಗೆಯಲು ಯತ್ನಿಸಿದವನು, ಏನಾದರಾಗಲೀ ಅವನಿಗಾಗಿ ಇಷ್ಟು ಹೊತ್ತು ಕಾದಿದ್ದೇನೆ, ನೋಡಿಯೇ ಬಿಡೋಣವೆಂದು ಆತನನ್ನು ಹಿಂಬಾಲಿಸಿ ಜೋರಾಗಿ ಹೆಜ್ಜೆ ಹಾಕಿದೆ. ಇನ್ನೇನು ಆತನ ಹತ್ತಿರ ಹತ್ತಿರ ಬರುತ್ತಿದ್ದಂತೆ, ನೋಡೇ ಬಿಡೋಣವೆಂದು, "ಗೋವಿಂದಣ್ಣ, ಗೋವಿಂದಣ್ಣ" ಎಂದು ಧೈರ್ಯ ಮಾಡಿ ಅವನನ್ನು ಕರೆದು ಬಿಟ್ಟೆ. ನಾನು ಕರೆದಿದ್ದೇ ತಡ, ಆತ "ಯಾರು?" ಎನ್ನುತ್ತಾ ಹಿಂತಿರುಗಿದವನು, "ಓಹ್, ನೀನ ಸೀತಾರಾಮನ ಮಗ ಮೋಹನ ಅಲ್ವಾ" ಎಂದ.

ನನಗೆ ನಾನು ಮಾತನಾಡಿಸಿದ್ದು ಗೋವಿಂದಣ್ಣನನ್ನೇ ಎಂದನಿಸಿದಾಗ ಖುಶಿಯಾಗಿ, "ಹೌದ ಗೋವಿಂದಣ್ಣ, ನೀನೇನ್ ಇಲ್ಲೆ? ನಿನ್ನ ಅಲ್ಲೇ ನೋಡ್ದೇ, ನೀ ನನ್ನ ನೋಡ್ದೇ ಹಂಗೆ ಬಂದ್ಬಿಟ್ಟೆ ಅಲ್ಲಾ, ಅದ್ಕೆ ನೀನ ಹೌದಾ, ಅಲ್ವಾ ಅನ್ನಿಸ್ತ್."

"ಹೌದೆ ಆಣ್ಣಗೆ ಗುತ್ತಾಗಲಾ, ನಾನ ಯಾವ್ದೋ ಲಕ್ಸದಲ್ಲೇ ಬತ್ತೇ ಇದದೆ"

"ಇರ್ಲೆ ಬಿಡ ಆಣ್ಣಾ, ನೀನೇನ್ ಇಲ್ಲೆ?"

"ನಾನ್ ಇಲ್ಲೆ ಮೀನ್ ಮಾರ್ಕೆಟ್ಗೆ ಮೀನ್ ತಕಂಡೆ ಹೋಗುವಾ ಅಂತೆ ಬಂದೆ."

ನನಗೆ ತಲೆ ಬುಡ ಅರ್ಥವಾಗಲಿಲ್ಲ. ಊರಿನಲ್ಲಿದ್ದ ಗೋವಿಂದಣ್ಣ ಬೆಂಗಳೂರಿಗೆ ಬರುವುದೆಂದರೇನು? ಬೆಂಗಳೂರಿಗೆ ಬಂದು ಹೀಗೆ ಒಬ್ಬನೇ ಓಡಾಡುವುದೆಂದರೇನು? ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಅರವತ್ತಕ್ಕೂ ಹೆಚ್ಚು ವಸಂತಗಳನ್ನು ಕಳೆದ ಈತ ಬೆಂಗಳೂರಿನಲ್ಲಿ ಒಬ್ಬನೇ ಬಂದು ಮೀನು ತೆಗೆದುಕೊಂಡು ಹೋಗುವುದೆಂದರೇನು? ಇಲ್ಲಿ ಎಲ್ಲಿ ಉಳಿದು ಕೊಂಡಿರಬಹುದು ಎಂದು ಯೋಚಿಸುತ್ತಾ ಹೆಜ್ಜೆ ಹಾಕುತ್ತಿದ್ದ ನಾನು "ಏನ್ ತಮ್ಮಾ, ಖಾಲಿ ಬಸ್ಲೆ ಸುಪ್ಪ ತಕಂಡೆ ಹೋತೆ ಇಂವಿಯಲ್ಲಾ, ಅದ್ರ ಸಂತಿಗೆ ಸಿಟ್ಲಿ ತಕಂಡೆ ಹೋದ್ರೆ ಬೆರ್ಕಿ ಹಾಕುಕರು ಆತತಲಾ", ಎಂದು ಗೋವಿಂದಣ್ಣ ಹೇಳಿದಾಗ ನಾನು ಎಚ್ಚೆತ್ತು,

"ಹ ಹ, ಅದು ಹೌದ, ಬಾ ನೀನು ಹೆಂಗೆ ಆ ಬದಿಗೆ ಹೋತೆ ಇಂವಿಯಲ್ಲಾ, ನಾನು ಬತ್ತಿ ಬಾ" ಎಂದು ಅವನೊಟ್ಟಿಗೆ ಹೊರಟೆ. ಹಾಗೆ ಹೊರಡುವಾಗ ಗೋವಿಂದಣ್ಣ ಏಕೋ ಬದಲಾಗಿದ್ದಾನೆ ಅನಿಸತೊಡಗಿತು. ಮೊದಲು ಆತ ಹೀಗಿರಲಿಲ್ಲಾ ಅಂತೆನಿಸಿತು. ಮೊದಲಾಗಿದ್ದರೆ ಇಷ್ಟೊತ್ತಿಗೆ ಕನಿಷ್ಟ ಒಂದಾದರೂ ಕತೆ ಹೇಳಿ ಮುಗಿಸಿ ಬಿಡುತ್ತಿದ್ದ. ಆದರೆ ಆತ ಈಗ ಏನು ಮಾತನ್ನಾಡದೇ ಸುಮ್ಮನೆ ಬರುತ್ತಿದ್ದ.

ಇಬ್ಬರೂ ಮೀನು ಮಾರುಕಟ್ಟೆಗೆ ಬಂದು ಮೀನು ತೆಗೆದು ಕೊಂಡು ಅಲ್ಲಿಂದ ಹೊರ ಬಂದೆವು. ಮೀನು ಮಾರು ಕಟ್ಟೆಯಿಂದ ಹೊರಬಂದರೂ ಗೋವಿಂದಣ್ಣ ಮಾತನ್ನಾಡದ್ದನ್ನು ನೋಡಿ, ನನಗೆ ಸುಮ್ಮನಿರಲಾಗದೇ, "ಗೋವಿಂದಣ್ಣ ಇಲ್ಲೆ , ಎಲ್ಲಿ ಇರ್ತಿ?" ಎಂದೆ.

ಗೋವಿಂದಣ್ಣ ಏನನ್ನೋ ಅನುಮಾನಿಸುತ್ತಾ, " ಇಲ್ಲೇ ಮಯ್ಯಾಸ್ ಹೊಟೇಲ್ ಇದ ಅಲ್ಲಾ, ಅದ್ರ ಹಿಂದೆ, ೩-೪ ಮನಿ ದಾಟಿದ್ರೆ ನಮ್ಮ ಮನೆ ಸಿಕ್ತಿದ. ಆ ಮನಿಲೆ ೩ನೇ ಪ್ಲೋರ್ ನಲ್ಲೆ ನಾವ್ ಇರ್ತವ್" ಅಂದ.

ಆತ ಅಷ್ಟು ನಿಖರವಾಗಿ ಹೇಳುತ್ತಿದ್ದಾನೆ ಅಂದರೆ ಅದು ನಿಜವಿರಬಹುದು ಅನಿಸಿತು. ಆತನ ಮಾತಿನಲ್ಲಿ ಆಗಾಗ ಇಣುಕಿ ಮರೆಯಾಗುವ ಇಂಗ್ಲೀಷ ಪದಗಳನ್ನು ಗಮನಿಸಿದರೆ ಆತನಿಗಾಗಲೇ ಬೆಂಗಳೂರಿನ ಪ್ರಭಾವ ಸ್ವಲ್ಪ ಬೀರಿದೆ ಅನಿಸಿ, "ಹೌದೆ ಅಲ್ಲೆ ಯಾರ್ ಮನಿಲೆ ಇರ್ತಿ?" ಎಂದು ಕೇಳಿದೆ.

"ಮಗ್ಳ ಮನಿಲೆ" ಎಂದವನು ಮತ್ತೇನನ್ನು ಹೇಳಲು ಮನಸ್ಸಿಲ್ಲ ಎನ್ನುವವನಂತೆ, "ಮೀನ ತಕಂಡೆ ಬಾಳ ಹುತ್ತ ಆಯ್ತ, ಮನಿ ಬದಿಗೆ ಹೋತಿ ಆಗಾ" ಎಂದ.

ಆತ ಹಾಗೆ ಹೇಳಿದಾಗ ನನಗೆ ಮತ್ತೇನನ್ನು ಕೇಳುವ ಮನಸ್ಸಾಗದೇ, ನನ್ನ ವಿಸಿಟಿಂಗ್ ಕಾರ್ಡ ಕೊಟ್ಟು, ಅದರಲ್ಲಿರುವ ನನ್ನ ಮೊಬೈಲ್ ನಂಬರ್ ತೋರಿಸಿ, ಆ ನಂಬರಿಗೆ ಕರೆ ಮಾಡುವಂತೆ ತಿಳಿಸಿ, "ಮನಿ ಬದಿಗೆ ಬಾರಾ" ಎಂದು ಹೇಳಿದೆ.

ಆತ "ಹೋ, ಆಯ್ತ. ಬತ್ತಿ ಅಗಾ" ಎಂದು ಹೇಳಿ ಅಲ್ಲಿ ನಿಲ್ಲದೇ ಅವನ ಮನೆಯತ್ತ ಹೊರಟ. ನಾನು ಕೂಡ ಬಹಳ ಹೊತ್ತು ಅಲ್ಲಿ ನಿಲ್ಲಲಾರದೇ ಮನೆಯತ್ತ ಹೊರಟೆ.

                              -------*-*-*-------

ಗೋವಿಂದಣ್ಣನನ್ನು ನೋಡಿ ಮಾತನಾಡಿಸಿದಾಗಿನಿಂದ ನನ್ನ ಮನಸ್ಥಿತಿಯೇಕೋ ಸರಿ ಇರಲಿಲ್ಲ. ಅಂದು ಊರಲ್ಲಿ ಉತ್ಸಾಹದಿಂದ ಕತೆ ಹೇಳುವ ಗೋವಿಂದಣ್ಣನಿಗೂ, ಇಂದು ನನಗೆ ಸಿಕ್ಕ ಗೋವಿಂದಣ್ಣನಿಗೂ ಅಜಗಜಾಂತರ ವ್ಯತ್ಯಾಸವಿದೆ ಅನಿಸಿತು. ನಾನು ಕಳೆದೆರಡು ವರ್ಷದಲ್ಲಿ ಅದೆಷ್ಟು ಭಾರಿ ಊರಿಗೆ ಹೋಗಿದ್ದೆನಾದರೂ ಮನೆಯಲ್ಲಿ ಗೋವಿಂದಣ್ಣನ ವಿಷಯ ಬರದಿದ್ದುದರಿಂದ, ನಾನು ಅವನ ಬಗ್ಗೆ ಇಲ್ಲಿಯವರೆಗೆ ಯೋಚಿಸಿಯೇ ಇರಲಿಲ್ಲ. ಈಗ ಆತ ಕಾಣಿಸಿಕೊಂಡಾಗಿನಿಂದ ಮನಸ್ಸು ಸರಿ ಇರಲಿಲ್ಲ. ಮನೆಗೆ ಕರೆ ಮಾಡಿದರೆ ವಿಷಯ ತಿಳಿದರೂ ತಿಳಿಯಬಹುದೇನೋ ಅನಿಸಿ, ಮನೆಗೆ ಕರೆ ಮಾಡಿದೆ.

ಅಮ್ಮ ಕರೆಯನ್ನು ಸ್ವೀಕರಿಸಿ, "ಏನಪ್ಪಾ ಆರಾಂ? ಯಾವಾಗ್ಲೂ ಸಂಜಿಗೆ ಪೋನ್ ಮಾಡುವಂವಾ, ಇಂದೇನ್ ಇಟ್ಟೊತ್ತಿಗೆ ಪೋನ್ ಮಾಡಿ? ಯಾಕೆ ಆಪೀಸ್ ಇಲ್ವಾ ಹೆಂಗೆ?"

"ಇವತ್ತೆ ಆಯ್ತಾರಾ ಅಮ್ಮಾ, ಆಪೀಸಿಗೆ ರಜೆ."

"ಹೋ! ಅದೆ ಮರ್ತೆ ಹೋಗತ್, ಏನ್ ಇಟ್ಟೊತ್ತಿಗೆ ಪೋನ್ ಮಾಡಿ, ಏನಾರು ವಿಶೇಷ?"

"ಅಮ್ಮಾ, ಇಂದೆ ನಮ್ಮೂರ್ ಗೋವಿಂದಣ್ಣ ಸಿಕ್ಕದಾ, ಅದೇ ಕತೆಗಾರ ಗೋವಿಂದಣ್ಣ."

ಅಮ್ಮಾ ಆಶ್ಚರ್ಯದಿಂದ "ಹೌದೆ? ಹೆಂಗೀವಾ? ಆರಾಂ ಇವ್ನೆ?"

"ಹ, ಆರಾಂ ಇಂವಾ, ಆದ್ರೆ ಯಾಕೋ ಮುದ್ಲನಂಗೆ ಇಲ್ಲಾ. ಇಟ್ಟ ಬೇಕೋ ಅಟ್ಟೇ ಮಾತಾಡೆ ಹೋದಾ. ಯಾಕೋ ಬೆಜಾರ್ದಲ್ಲೆ ಇದ್ದಂಗೆ ಇದ್ದಾ."

"ಹೌದಪ್ಪಾ, ಆಗೆ ಆಂವಾ ಎಲ್ಲಾರ್ ಮನೀದು ಕತೆ ಹೇಳ್ತದಾ, ಏಗೆ ಆವ್ನ ಮನಿದೇ ಕತಿ ಆಗ್ಬಿಟ್ಟಿದ."

"ನನಗೆ ಏನೇನು ಅರ್ಥವಾಗದೇ "ಹಂಗಂದ್ರೆ, ಏನಮ್ಮಾ, ಸ್ವಲ್ಪ ಬಿಡ್ಸ ಹೇಳ್" ಅಂದಾಗ, ಅಮ್ಮಾ,

"ಏನ್ ಹೇಳುದ್ ಮಗಾ, ನಿಂಗೆ ಆವ್ನ ಮಗ್ಳ ಪ್ರೀಯಾ ಗುತ್ತಲಾ, ನಿಂಗಿಂತಾ ಉಂದ ವರ್ಷಾನಾ, ಎರ್ಡ ವರ್ಷನಾ ಏನಾ ಚಿಕ್ಕೋಳ, ಅವ್ಳ ಇಂಜಿನಿಯರ್ ಓದ್ ಬೇಕಾದ್ರೆ ಯಾರನ್ನೋ ಲವ್ ಮಾಡಿ, ಮನಿಯೋರ್ ಬೇಡಾ ಅಂದ್ರೂ ಕೇಳ್ದೇ ಕೊನೆಗೆ ಅವನನ್ನೇ ಮದ್ವೆಯಾಗಿ ಪುನಾದಲ್ಲೆಲ್ಲೋ ಇದ್ಲಂತೆ. ಆದ್ರೆ ಏಗುಂದ್ ಎರ್ಡ ವರ್ಷದ ಹಿಂದೆ ಗಂಡನ್ ಬಿಟ್ಟೆಕಂಡೆ ೫ ವರ್ಷದ್ ಮಗ್ನ ಕರ್ಕಂಡೆ ಬೆಂಗಳೂರಲ್ಲೆ ಬಂದೀದ ಅಂತೆ. ಊರಿಗೂ ಬರುದ್ ಕಡ್ಮಿ. ಅದ್ನ ಹಚ್ಕಂಡೆ ಪಾಪ ಗೋವಿಂದಣ್ಣನ ಹೆಂಡತಿ ಶಾರದೆ ಕುರ್ಗೆ, ಕುರ್ಗೆ ಆರಾಂ ತಪ್ಪೆ, ಏನ್ ಮಾಡ್ದ್ರೂ ಕಡ್ಮಿ ಆಗ್ದೇ ಸತ್ತೇ ಹೋದ್ಲ. ಅಮ್ಮಾ ಸತ್ತ ಹೋದಾಗ ಬಂದೋಳ ಆಪ್ನ ಕರ್ಕಂಡೆ ಬೆಂಗಳೂರಿಗೆ ಹೋದೋಳ ಮತ್ತೆ ಬರ್ಲಾ. ಈಲ್ಲಿರು ಗದ್ದೆ ತೋಟ ಎಲ್ಲಾ ಗೋವಿಂದಣ್ಣನ ಮಗಾ ಜಗದೀಶನೇ ನೋಡ್ಕಂಡೆ ಹೋತೆ ಇಂವಾ. ಬೆಂಗಳೂರಿಗೆ ಹೋದ್ಮೇಲೆ ಗೋವಿಂದಣ್ಣ ಎರ್ಡ ಮೂರ್ ಸಲಾ ಊರಿಗೆ ಬಂದ ಹೋಗಿಯಾ ಅಂತೆ ಜನಾ ಹೇಳ್ತರ, ಆದ್ರೆ ನಾವ್ಯಾರು ಆವ್ನಾ ನೋಡಲಾ"

ಅಮ್ಮಾ ಒಂದೇ ಉಸಿರಲ್ಲೇ ಅವನ ಕತೆಯನ್ನು ಹೇಳಿ ಮುಗಿಸಿದಳು, ನನಗೆ ಮತ್ತೆ ಮಾತನ್ನಾಡಲು ಮನಸ್ಸಾಗದ ಕಾರಣ "ಓಹ್ ಹೌದೆ ಇಷ್ಟೆಲ್ಲಾ ಆಗಿದೆ" ಎನ್ನುತ್ತಾ "ಆಯ್ತ ಹಂಗಾರೆ, ಆಮೆಲೆ ಸಂಜಿಗೆ ಮತ್ತೆ ಪೋನ್ ಮಾಡ್ತಿ" ಎಂದು ಅಮ್ಮನ ಉತ್ತರಕ್ಕೂ ಕಾಯದೇ ಪೋನಿಟ್ಟೆ.

ಮನಸ್ಸು ಹಳಿ ತಪ್ಪಿದ ರೈಲಿನಂತಾಗಿತ್ತು. ಒಂದೊಂದು ಬಾರಿ ಒಂದೊಂದು ಯೋಚನೆಗಳು. ಮೊದಲ ಯೋಚನೆಗೂ, ಎರಡನೆಯ ಯೋಚನೆಗೂ ಸಂಬಂಧವಿಲ್ಲದ ರೀತಿಯಲ್ಲಿ ಒಂದೊಂದೇ ಯೋಚನೆಗಳು. ಬದುಕು ಎಷ್ಟು ತಿರುವುಗಳಿಂದ ಕೂಡಿದೆಯಲ್ಲ, ಒಂದೊಂದು ತಿರುವಲ್ಲೂ ಒಂದೊಂದು ತೆರನಾದ ಬದಲಾವಣೆ. ಒಮ್ಮೆ ಯಾರದೋ ಬದುಕು ನಮಗೆ ಕತೆಯಾದರೆ, ಕೆಲವೊಮ್ಮೆ ನಮ್ಮ ಬದುಕು ಇನ್ನೋರ್ವರಿಗೆ ಕತೆಯಾಗುತ್ತದೆ. ಯಾರಿಗೆ ಗೊತ್ತು ಯಾರ ಬದುಕು, ಯಾರಿಗೆ, ಯಾವಾಗ, ಎಂದು, ಎಲ್ಲಿ ಕತೆಯಾಗುತ್ತದೆ ಎಂದು. ಇನ್ನೊಬ್ಬರ ಬದುಕನ್ನೇ ನೋಡಿ ನಾವು ಕತೆ ಕಟ್ಟುತ್ತೇವೆ, ಬರೆಯುತ್ತೇವೆ, ಹೇಳುತ್ತೇವೆ, ಮುಂದೊಂದು ದಿನ ನಮ್ಮ ಬದುಕು ಕೂಡ ಇನ್ನೊಬ್ಬರಿಗೆ ಕತೆಯಾಗಬಹುದು ಎಂದು ಯೋಚಿಸದೇ.

--ಮಂಜು ಹಿಚ್ಕಡ್

Tuesday, November 18, 2014

ವಿದ್ಯುತ್ತು

ಏನಿದ್ದರೇನು ನಮ್ಮ ವಿದ್ವತ್ತು
ಮನೆಯಲ್ಲಿದ್ದರೆ ತಾನೇ ವಿದ್ಯುತ್ತು
ಮನೆಗೆ ಬಂದು ಬರೆಯುವ ಚಿಂತೆ
ಮನೆ ತಲುಪುವಷ್ಟರಲ್ಲಿ ವಿದ್ಯುತ್ತೇ ನಾಪತ್ತೆ....


--ಮಂಜು ಹಿಚ್ಕಡ್

Wednesday, November 12, 2014

ಈ ಜೀವನ!

ನಮ್ಮ ಈ ಜೀವನ.
ನೀನಿತ್ತ ಬಿಕ್ಷೆಯೋ,
ನಾನಿತ್ತ ರಕ್ಷೆಯೋ,
ಎಂದು ಹುಡುಕಿ,ಹುಡುಕಿ
ಸವೆದು ಹೋಗಿದೆ
ನನ್ನ ಪಾದರಕ್ಷೆ.

--ಮಂಜು ಹಿಚ್ಕಡ್

Thursday, November 6, 2014

ಜೋಡಿ ಕೋಣಗಳು!

[೨೬-ಅಕ್ಟೋಬರ್-೨೦೧೪ ರಂದು ಅವಧಿಯಲ್ಲಿ ಪ್ರಕಟವಾದ ನನ್ನ ಕತೆ ’ಜೋಡಿ ಕೋಣಗಳು’]

ದನಗಳಿಗೆ ಒಂದಿಷ್ಟು ಹಸಿ ಹುಲ್ಲು ಕೊಯ್ದುತಂದು ಮೇವಿನ ವ್ಯವಸ್ಥೆ ಮಾಡಿ, ಹಾಸಲು ಒಂದಿಷ್ಟು ಸೊಪ್ಪು ತರಲು ಬಂದ ವಿಠ್ಠಲಿನಿಗೆ ಸ್ವಲ್ಪ ಸುಸ್ತಾದಂತೆ ಅನಿಸಿ ಮರದ ಕೆಳಗೆ ಕುಳಿತೆ. ಸ್ವಲ್ಪ ಸುಸ್ತಾದಂತೆ ಅನಿಸಿ ಅಲ್ಲಿಯೇ ಮರದ ಕೆಳಗೆ ಕುಳಿತ. ಕಳೆದ ಒಂದು ವಾರದಿಂದ ಬೆಂಬಿಡದೇ ಸುರಿಯುತ್ತಿದ್ದ ಮಳೆ ಕಳೆದೆರಡು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಬಾಂದಳದ ಸೂರ್ಯ ಮೋಡಗಳ ನಡುವೆ ಆಗಾಗ ಕಣ್ಣು ಮುಚ್ಚಾಲೆಯಾಟವಾಡುತ್ತಿದ್ದ. ಆ ಹೊನ್ನೆ ಮರದ ಕೆಳಗೆ ಕುಳಿತು, ಸೊಂಟಕ್ಕೆ ಕಟ್ಟಿದ ಚಿಂಚೆಯಿಂದ (ಚಿಕ್ಕದಾದ ಚೀಲದಿಂದ) ಎಲೆ ಆಡಿಕೆ ತೆಗೆದು ಬಾಯಿಗೆ ಹಾಕಿ ಮೆಲ್ಲುತ್ತಾ ಕುಳಿತ ಅವನಿಗೆ ಈ ಬಾರಿ ಗದ್ದೆ ಕೊಯ್ಲು ಮುಗಿದು, ಶೇಂಗಾ ಹೋಟಿ ಪ್ರಾರಂಭವಾಗುವುದರೊಳಗಾಗಿ ಈಗಿರುವ ಹಳೆಯ ಎತ್ತುಗಳನ್ನು ಬದಲಿಸಬೇಕು ಎನ್ನುವ ಯೋಚನೆ ಮತ್ತೆ ಕಾಡತೊಡಗಿತು. ಇದು ಇಂದು ನಿನ್ನೆಯ ಯೋಚನೆಯೇನಲ್ಲ, ಆ ಯೋಚನೆ ಬಂದು ಆಗಲೇ ಆರೇಳು ತಿಂಗಳುಗಳಾಗಿದ್ದವು. ಈಗಿನ ತುಟ್ಟಿ ಕಾಲದಲ್ಲಿ ಅದೇನು ಅಷ್ಟು ಸುಲಭದ ಮಾತಾಗಿರಲಿಲ್ಲ. ಮೊದಲು ಮಳೆಗಾಲದ ಹೋಟಿಗೆ ಎತ್ತುಗಳನ್ನು ಬದಲಿಸಬೇಕು ಎಂದುಕೊಂಡು ಗೇರುಬೀಜ, ಶೇಂಗಾ ಮಾರಿದ ಹಣವನ್ನೆಲ್ಲ ಹಾಗಿಯೇ ಇಟ್ಟುಕೊಂಡು ಕುಳಿತಿದ್ದ. ಆದರೆ ಈಗಿರುವ ಎತ್ತುಗಳಿಗೆ ಸಕಾಲದಲ್ಲಿ ಯಾವುದೇ ಗಿರಾಕಿಗಳು ಬರದ ಕಾರಣ ಅದೇ ಎತ್ತುಗಳಲ್ಲಿಯೇ ಮಳೆಗಾಲದ ಬೇಸಾಯ ಮಾಡಿ ಮುಗಿಸಿದ್ದ. ಎತ್ತುಗಳಿಗೇನು ವಯಸ್ಸಾಗಿರಲಿಲ್ಲ ಇನ್ನೂ ಒಂದೆರಡು ವರ್ಷ ಹೋದರೂ ಪರವಾಗಿರಲಿಲ್ಲ, ಆದರೆ ಇನ್ನೆರಡು ವರ್ಷ ಬೇಸಾಯ ಮಾಡಿ ಎತ್ತುಗಳನ್ನು ಮಾರುವ ಬದಲು ಈಗಲೇ ಮಾರಿದರೆ ಒಳ್ಳೆಯದು, ಸ್ವಲ್ಪ ರೇಟದರೂ ಇದ್ದಿತೂ ಎನ್ನುವ ಭಾವನೆ ಇದ್ದಿತಾದರೂ, ಆ ಎಡಕ್ಕೆ ಕಟ್ಟುವ ಮಂಜ ಎತ್ತು, ಬಲಕ್ಕೆ ಕಟ್ಟುವ ಹುಬ್ಬನಿಗಿಂತ ಸ್ವಲ್ಪ ಎಡ, ನಡಿಗೆಯಲ್ಲೂ ಸ್ವಲ್ಪ ನಿಧಾನ. ಈ ಎತ್ತುಗಳು ಅದೇನೇ ಎಂದರೂ ಆ ಹಳೆಯ ಕೋಣದ ಜೋಡಿಯಿದ್ದಂತೆ ಯಾವ ಎತ್ತಿನ ಜೋಡಿಗಳು ಬರಲಾರದೂ ಎನ್ನಿಸಿತು.

ಕಲಘಟಿಕೆಯಿಂದ ತಂದ ಹಿಂದಿನ ಎರಡು ಜೊತೆ ಎತ್ತುಗಳಿಗಿಂತ, ಹಿಲ್ಲೂರಿನ ಸುಬ್ರಾಯನ ಕಡೆಯಿಂದ ತಂದ ಹಳೆಯ ಕೋಣದ ಜೋಡಿಗಳೇ ಭಲವಾಗಿದ್ದವೂ ಎನಿಸಿತು. ಅಂದು ಆ ಹಳೆಯ ಕೋಣದ ಜೋಡಿಗಳಿದ್ದಾಗ, ತನ್ನ ಬೇಸಾಯ ಮುಗಿದ ಮೇಲೆ ಅದೆಷ್ಟೋ ಜನರಿಗೆ ಊಳಿಕೊಟ್ಟು ಸ್ವಲ್ಪ ಮನೆ ಕರ್ಚಿಗೆ ಎಂದು ಹಣ ಮಾಡಿಕೊಂಡದ್ದು ಇತ್ತು. ಆಗೆಲ್ಲ ಕಬ್ಬಿನ ಗಾಣದ ಸಮಯದಲ್ಲಿ ಗಾಣಕ್ಕೆ ಅಪರೂಪಕ್ಕೆ ನಮ್ಮ ಕೋಣಗಳನ್ನು ಕಟ್ಟಿದಾಗ, ಅವುಗಳ ಸಾಮರ್ಥ್ಯವನ್ನು ನೋಡಿ ಅದೆಷ್ಟೋ ಜನ ಹುಬ್ಬೇರಿಸಿದ್ದು ಇತ್ತು. ಹಾಗೆ ಅಪರೂಪಕ್ಕೆ ಕಬ್ಬಿನ ಗಾಣಕ್ಕೆ ತನ್ನ ಕೋಣಗಳನ್ನು ಕಟ್ಟಿದ್ದೂ ಕೂಡ ತಪ್ಪಾಯಿತೆಂದು ಈಗ ಎನಿಸುತ್ತಿದೆ.  ಆ ದಿನ ಇನ್ನೂ ಸರಿಯಾಗಿ ನೆನಪಿದೆ ಆತನಿಗೆ, ವಾಸರೆಯ ತಿಮ್ಮಣ್ಣನ ಗಾಣಕ್ಕೆ ಕೋಣ ಕಟ್ಟಿದ್ದಾಗ ಅವರ ಗಾಣ ನೋಡಲು ಬಂದಿದ್ದ ಆತನ ಹೆಂಡತಿಯ ಚಿಕ್ಕವ್ವಿಯ ಮಗ ಹೂವಣ್ಣ. ಬಂದವನು ತನ್ನ ಹೆಂಡತಿಯ ಸಂಬಂಧಿಕನಾಗಿದ್ದರಿಂದ ಸ್ವಲ್ಪ ಹೆಚ್ಚಾಗಿಯೇ ಮಾತನಾಡಿಸಿದ್ದ. ಅದೇ ತಪ್ಪಾಗಿದ್ದು. ಆ ಜನರೇ ಹಾಗೇ ಅವರಿಗೆ ತಮ್ಮ ಕೆಲಸವಿದ್ದಾಗಲೇ ಸಂಬಂಧವನ್ನು ನೆನೆಯುತ್ತಾರೆ ಎನ್ನುವುದು ಆಗ ತಿಳಿದಿರಲಿಲ್ಲ. ಅವರ ಮದುವೆಯಲ್ಲಿ ಇದೇ ಹೂವಣ್ಣನ ಮನೆಯವರು ಹೊಸ ಮದುಮಕ್ಕಳಿಗೆ ಒಂದೊಂದು ಸ್ಟಿಲಿನ ತಾಟು ಹಾಕಿ, ಉಡುಗೆರೆ ಹೊದ್ದು, ಹೊರಟು ಹೋದವರು, ಹೊಸ ಮದುಮಕ್ಕಳೆಂದು ಊಟಕ್ಕೂ ಕರೆದಿರಲಿಲ್ಲ. ಒಂದೆರಡು ಬಾರಿ ಅವನೂರ ಬಂಡಿ ಹಬ್ಬಕ್ಕೆ ಕರೆದಾಗ ಬಂದು ಕೋಳಿ ಆಸಿ ಉಂಡು ಹೋದರೇ ಹೊರತು ಅವರೂರಿನ ಬಂಡಿ ಹಬ್ಬಕ್ಕೆ ಎಂದು ಕರೆದಿರಲಿಲ್ಲ. ಇದೆಲ್ಲ ಗೊತ್ತಿದ್ದರೂ ಅಂತಹ ವ್ಯಕ್ತಿ ಅಲ್ಲಿಗೆ ಬಂದಾಗ ’ನಾನ್ಯಾಕೆ ಮಾತನಾಡಿಸಿದನೋ’ ಎಂದು ಅರ್ಥವಾಗಲಿಲ್ಲ. ಆಗ ಮಾತನಾಡಿದ್ದೇ ತಪ್ಪು ಎಂದು ಈಗ ಎನ್ನಿಸುತ್ತಿದೆಯಾದರೂ ಏನು ಮಾಡಲು ಆಗತ್ತೆ. ಕೆಟ್ಟ ಮೇಲೆ ಬುದ್ದಿ ಬಂದರೆ ಏನು ಪ್ರಯೋಜನ. ಮತ್ತೆ ಕೆಡದಂತೆ ನೋಡಬಹುದೇ ಹೊರತು ಕೆಟ್ಟು ಕಳೆದುಕೊಂಡದ್ದು ಮತ್ತೆ ಬರುತ್ತದೆಯೇ?

ಅಂದು ಗಾಣಕ್ಕೆ ಕಟ್ಟಿದ ಆ ಕೋಣಗಳನ್ನು ನೋಡಿದ ಹೂವಣ್ಣನ ಕಣ್ಣು ಅವನ ಕೋಣಗಳ ಮೇಲೆ ಇತ್ತು ಎನ್ನುವುದು ವಿಠ್ಠಲನಿಗೆ ನಂತರ ತಿಳಿಯಿತು. ಒಂದೆರಡು ದಿನಗಳು ಕಳೆದ ಮೇಲೆ ಇನ್ನೇನು ಗಾಣ ಮುಗಿಯುತ್ತಿದೆ ಎನ್ನುವುದು ತಿಳಿಯುತ್ತಿದ್ದಂತೆ, ವಿಠ್ಠಲ ತನ್ನ ಕೋಣಗಳನ್ನು ಊರಿಗೆ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸಿದ್ದ. ಆಗ ಅವನಿದ್ದಲ್ಲಿಗೆ ಬಂದ ಹೂವಣ್ಣ " ತಮ್ಮಾ ನಾಡ್ದಿಗೆ ನಮ್ಮ ಮನಿಲೂ ಗಾಣ ಇಟ್ಕಂಡಿ, ನೀ ಮಾತ್ರೆ ನಿನ್ನ ಕೋಣ್ಗೋಳ ನನ್ನ ಗಾಣಕ್ಕೆ ಕಟ್ಟದ್ರರೆ ಆಣ್ಗೂ ಇಟ್ಟ ಅನುಕೂಲ ಆತತ್" ಎಂದಾಗ, ವಿಠ್ಠಲನಿಗೆ ಅರ್ಧಂಬರ್ಧ ಮನಸ್ಸಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ "ಬೇಡಾ ಅಣ್ಣಾ, ಮೂರ್ನಾಲ್ಕ ದಿನಾ ಆಯ್ತ, ನಾನ್ ಮನಿ ಇಂದೆ ಹೊರ್ಗೆ ಬಂದೆ. ಪಾಪ ಕೊಣ್ಗೋಳಿಗೂ ತ್ರಾಸ್ ಆಗಿರ್ತಿದ" ಅಂದ.

"ತಮ್ಮಾ ನಂದೇನ್ ಬಾಳ್ ದಿವ್ಸಾ ಆಗುದಿಲ್ವಾ, ಬೇಕರೇ ತಂಗಿಗೆ ಇಲ್ಲಿಂದೆ ಯಾರ್ಕೋಡರು ಹೇಳ್ ಕಳಿಸ್ತಿ, ನಾ ಹೇಳಿದ್ರೆ ತಂಗಿ ಏನ್ ಬೇಡಾ ಅನ್ನುಲಾ" ಎಂದ.

"ಅದ್ಕಲ್ವಾ ಅಣ್ಣಾ ನಂಗೂ ಸ್ವಲ್ಪೆ ಮನಿ ಬದಿಗೆ ಕೆಲ್ಸ ಇದ, ತೋಟಕ್ಕೆ ನೀರ್ ಹಾಕ್ಬೇಕ್, ಕಾಯು ಇನ್ನೂ ಕುಯ್ಸಲಾ, ಬೆಣದ್ ಬದಿಗೆ ಹೋಗ್ದೇ, ಗೆರ್ಬೇಜಾ ಕುಯ್ದೇ ಉಂದ ವಾರ ಆಗೋಯ್ತ, ಅಲ್ಯಾರದ್ರೂ ಹುಕ್ಕದ್ರೆ ಮುಗ್ದೇ ಹೋಯ್ತ, ಉಂದ ಬೇಜಾನೂ ಇಡುಲಾ"

"ನಂಗೂ ಆರ್ಥಾ ಆತೀದಾ ತಮ್ಮಾ, ಆದ್ರೆ ಏನ್ ಮಾಡುದ್, ನಮ್ಮ್ದು ಉಂದೇ ವಾರ್ಲಾ ಆತಿದ್, ನಮ್ಮ ತಮ್ಮನ ವಾರ್ಲಾನೂ ಇಲ್ಲಾ ಏಗೆ, ಅಲ್ವಾ ಸಂಬಂಧಿಕರ್  ಆದ ಮೇಲೆ ಒಬ್ಬರಿಗೊಬ್ಬರ್ ಸಹಾಯ ಮಾಡ್ದೇ ಇದ್ರೆ ಹೆಂಗೆ? ನೀನೇ ಬರ್ಬೇಕ್ ಅನ್ನುದ್ ಇಲ್ಲಾ, ನಿನ್ನ ಕೊಣ್ಗೋಳ್ ಕುಟ್ರು ಸಾಕ, ನಾನೇ ತಕಂಡೆ ಹೋಗೆ ಗಾಣಕ್ಕೆ ಕಟ್ಟತಿ, ನೀ ಬೇಕರೆ ನಿಂದೆಲ್ಲಾ ಕೆಲ್ಸಾ ಮುಗ್ಸಕಂಡೆ ಬಂದೆ ಕೊಣ್ಗೋಳ್ ಹುಡ್ಕಂಡೆ ಹೋಗಕ್."

ವಿಠ್ಠಲಿನಿಗೂ ಒಂದು ಸಾರಿ ಇವನು ಇನ್ನೂ ಬಿಡುವುದಿಲ್ಲ ಅನ್ನಿಸಿ, "ಆಯ್ತ ಹಂಗಾರೆ, ನೀನ್ ಕೊಣ್ಗೋಳ್ ಹುಡ್ಕಂಡೆ ಹೋಗ, ನಂಗೆ ಗಾಣ ಮುಗದದ್ದೇ ಹೇಳ್ ಕಳ್ಸ್ ನಾ ಬಂದೆ ತಕಂಡೆ ಹೋಗ್ವೆ" ಎಂದ.

ಅವನು ಅದ್ಯಾವ ಗಳಿಗೆಯಲ್ಲಿ ಒಪ್ಪಿಗೆ ಕೊಟ್ಟನೋ, ಅದೇ ತಪ್ಪಾಗಿ ಹೋಯಿತು ಅನಿಸಿದ್ದು ನಂತರವೇ. ಹೂವಣ್ಣನಿಗೆ ಬೇಕಾಗಿದ್ದೂ ಅದೇ, ಖುಸಿಯಿಂದ ಕೋಣಗಳನ್ನು ಹೊಡೆದು ಕೊಂಡು ಹೋದ. ಗಾಣ ಮುಗಿದ ಮೇಲೆ ಅವನ ಪಾಲಿಗೆ ಬಂದ ಒಂದಿಷ್ಟು ಕಬ್ಬು, ಅವೆ ಬೆಲ್ಲ ತೆಗೆದುಕೊಂಡು ಅವನ ಊರಿಗೆ ಹೋದ ವಿಠ್ಠಲ. ಊರಿಗೆ ಬಂದು ಆಗಲೇ ಹದಿನೈದು ದಿನಗಳು ಕಳೆದಿದ್ದವೂ. ಅವನಿಗೂ ಊರ ಕಡೆ ಸ್ವಲ್ಪ ಕೆಲಸವಿದ್ದುದರಿಂದ ಹೂವಣ್ಣನ ಬಗ್ಗೆಯಾಗಲೀ, ಕೋಣಗಳ ಬಗ್ಗೆಯಾಗಲೀ ಯೋಚಿಸಲು ಹೋಗಿರಲಿಲ್ಲ. ’ಕೆಲಸ ಮುಗ್ದ ಕೂಡ್ಲೇ ಹೇಳ್ ಕಳಸ್ತಿ’ ಎಂದು ಕೋಣಗಳನ್ನು ಹೊಡೆದುಕೊಂಡು ಹೋಗುವಾಗ ಹೇಳಿದವನು ಎರಡು ವಾರ ಕಳೆದರೂ ಸುದ್ದಿ ಕಳಿಸಿರಲಿಲ್ಲ. ತನ್ನ ಹಾಗೆ ಅವನು ಕೆಲಸದಲ್ಲಿ ಮುಳುಗಿರಬೇಕು ಎಂದು ಕೊಂಡವನು, ’ಹೆಂಗೂ ಎರ್ಡವಾರ ಕಳ್ದೆ ಆಗಿದ್, ಇನ್ನುಂದ್ ವಾರ ಬಿಟ್ಟೇ ನೋಡ್ವಾ, ಸುದ್ದಿ ಬಂದ್ರೂ ಬಂತ’ ಎಂದು ತನ್ನಷ್ಟಕ್ಕೆ ಹೇಳಿಕೊಂಡು ಸುಮ್ಮನಾದ. ಮತ್ತೆ ಇನ್ನೆರಡೂ ವಾರ ಕಳೆದರೂ ಹೂವಣ್ಣನಿಂದ ಸುದ್ದಿ ಬರದೇ ಇದ್ದಾಗ, ಇನ್ನೂ ತಡ ಮಾಡುವುದು ಬೇಡ ಎಂದು, ಆ ದಿನ ಬೆಳಿಗ್ಗೆ ಹೆಂಡತಿಗೆ ಹೂವಣ್ಣನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೊರಟ.

ಹೂವಣ್ಣನ ಮನೆ ತಲುಪಿದಾಗ ಮಟ ಮಟ ಮಧ್ಯಾಹ್ನ. ಬೇಸಿಗೆಯ ದಿನಗಳು ಕಾಲಿಟ್ಟದ್ದರಿಂದ ಬಾಯಾರಿಕೆಯ ಜೊತೆಗೆ ಹಸಿವೂ ಕೂಡ ಕಾಡುತ್ತಿತ್ತು. ಹೇಗೂ ಹೂವಣ್ಣನ ಮನೆ ಇದೆಯಲ್ಲ ಅಂದು ಅಲ್ಲಿಯವರೆಗೂ ತಡೆದುಕೊಂಡು ಬಂದಿದ್ದ. ಹೂವಣ್ಣನ ಮನೆ ತಲುಪಿದಾಗ ಹೂವಣ್ಣ ಮನೆಯ ಜಗುಲಿಗೆ ಹೊಂದಿಕೊಂಡ ಚಿಟ್ಟೆಯ ಮೇಲೆ ಕುಳಿತಿದ್ದ. ವಿಠ್ಠಲ ಅವನ ಮನೆ ಬಾಗಿಲವರೆಗೂ ಬಂದರೂ, ನೋಡಿಯೂ ನೋಡದವನಂತೆ ಕುಳಿತಿದ್ದ. ಇವನೇ ಏನು ವಾಸ್ರೆ ಗಾಣದಲ್ಲಿ ಸಂಬಂಧದ ಬಗ್ಗೆ ಮಾತನಾಡಿದ್ದು ಎನ್ನುವ ಸಂದೇಹ ಬರದೇ ಇರಲಿಲ್ಲ. ಮನೆಯವರೆಗೆ ಬಂದವರನ್ನು ಮಾತನ್ನಾಡಿಸಲು ಮನಸ್ಸಿಲ್ಲದವರಿಗೆ ಸಂಬಂಧದ ಅರ್ಥ ತಿಳಿದಿರುತ್ತದೆಯೇ. ಅವರ ಮನೆಯವರೆಗೆ ಅವನ ಕೋಣಗಳಿಗಾಗಿ ಅವನೇ ಬಂದಿದ್ದರಿಂದ ಅವನಾದರೂ ಮಾತನಾಡಿಸಬೇಕಲ್ಲವೇ.

ಹಾಗಾಗಿ ಆತ "ಹೂವಣ್ಣ" ಎಂದು ಕರೆದ. "ಹೂಂ" ಎನ್ನುವುದನ್ನು ಬಿಟ್ಟರೆ ಮತ್ಯಾವ ಮಾತು ಬರಲಿಲ್ಲ ಹೂವಣ್ಣನ ಬಾಯಿಂದ.

ಇನ್ನೂ ತಡಮಾಡುವುದು ಬೇಡ ಎಂದು "ಆಣ್ಣಾ ಗಾಣ ಎಲ್ಲಾ ಮುಗಿತೆ?" ಎಂದು ಪೀಠಿಕೆ ಹಾಕಿ, "ಗಾಣಾ ಮುಗ್ದ್ರೆ ಕೋಣ ತಕಂಡೆ ಹೋಗ್ಲೆ?" ಎಂದ ವಿಠ್ಠಲ.

ಅದಕ್ಕೆ ಹೂವಣ್ಣ " ಹ, ಗಾಣಾ ಮುಗಿತ, ಆದ್ರೆ ಕೋಣ ತಕ್ಕಂಡೆ ಹೋಗುಕೆ ಕೊಣ್ಗೋಳ್ ಇರ್ಬೇಕಲ್ಲಾ?" ಎಂದಾಗ ವಿಠ್ಠಲಿನಿಗೆ ಅವನ ಮಾತಿನ ಅರ್ಥವಾಗದೇ "ಹಂಗಂದ್ರೆ, ಕೊಣವ ಇಲ್ಲೆ ಹೋಗವ್" ಎಂದು ಕೇಳಿದ.

ಹೂವಣ್ಣನಿಗೆ ಮಾತು ಕಲಿಸಬೇಕೇ, ಸುಳ್ಳು ಹೇಳುವುದನ್ನು ಅವನಿಗೆ ಹೇಳಿ ಕೊಡಬೇಕೇ. ಆತ ಈ ರೀತಿಯ ಅದೆಷ್ಟೋ ಗುರುವಿಲ್ಲದ ವಿದ್ಯೆಗಳನ್ನು ಕಲಿತವನಲ್ಲವೇ . ತಕ್ಷಣವೇ ಆತ "ಏನ್ ಹೇಳುದ್ ತಮ್ಮಾ, ನಮ್ಮ ಗಾಣಾ ಮುಗಿತೇ ಇದ್ದಂಗೆ ಅವ್ಕೆ ಯಾರ್ದೋ ದೃಷ್ಠಿ ಬಿಸ್ಟಿ ಆಯ್ತಾ ಏನಾ ಬೆಲಾ, ಕಣ್ಣಲ್ಲೇ ಏನೋ ಹೂವ್ ಬಿದ್ದದ್ದೇ ಹೆಳೆ, ಉಂಥಾರಾ ಮಾಡ್ದಂಗೆ ಮಾಡೆ ಸತ್ತೇ ಹೋಗ್ಬಿಟ್ಟು, ನಿಂಗೆ ಹೇಳ್ಕಳಿಸುವಾ ಅಂದ್ರೆ ಹೆಂಗೆ ಹೇಳುದ್ ಅಂದೆ ತಿಳಿದೇ ಸುಮ್ಗಾಗ್ಬಿಟ್ಟೆ" ಎಂದು ಆಗ ತಾನೆ ಹೊಳೆದ ಸುಳ್ಳನ್ನು ಸತ್ಯದಂತೆ ಬಿಂಬಿಸಿ ಹೇಳಿಯೇ ಬಿಟ್ಟ.

ವಿಠ್ಠಲಿನಿಗೆ ಏನು ಹೇಳಬೇಕೆಂದು ತಿಳಿಯದೇ ಗರಬಡಿದವನ ಹಾಗೆ ನಿಂತು ಬಿಟ್ಟ. "ಅಷ್ಟು ಚಲೋ ಇದ್ದ ಕೊಣ್ಗೋಳಿಗೆ ಇದ್ಕಿದ್ದ ಹಂಗೆ ಏನಾಗುಕೆ ಸಾದ್ಯ. ನಾನೇ ತಪ್ಪ ಮಾಡ್ದೆ, ಕೊಣ್ಗೋಳ ನಾನೇ ತಕಂಡ್ ಬಂದೆ, ಗಾಣಾ ಮುಗ್ಸಕಂಡೆ  ಹುಡ್ಕಂಡೆ ಹೋಗ್ಬೇಕಾಗತ್, ಆದ್ರೆ ಏನ್ ಮಾಡುದ್, ಆವಗೆ ಹಿಂಗೆ ಆತಿದ್ ಅಂದೆ ಗುತ್ತಿಲ್ಲಾ ಆಗತ್ ಅಲ್ಲಾ. ಏಗೆ ಮತ್ತೆ ಮಳಗಾಲದ್ ಹೋಟಿಗೆ ವಾರ್ಲಾ ಇಲ್ಲಿಂದೆ ತರುದ. ತರುಕೆ ರೊಕ್ಕಾನಾದ್ರೂ ಇದೆ." ಹೀಗೆ ಅವನ ಮನಸ್ಸಲ್ಲಿ ಒಂದಿಷ್ಟು ಪ್ರಶ್ನೆಗಳು ಮೂಡಿ ಮರೆಯಾದವು. ಅವನ ಒಳ ಮನಸ್ಸಿಗೆ ಇದು ಸಾದ್ಯವಿಲ್ಲ ಅನ್ನಿಸಿದರೂ ಹೂವಣ್ಣನೊಂದಿಗೆ ವಾದ ಮಾಡಲು ಮನಸ್ಸಾಗದೇ ಹೊರಡಲು ಅನುವಾದ. ಹೂವಣ್ಣನಿಗೂ ವಿಠ್ಠಲ ಹೊರಟು ಹೋದರೆ ಸಾಕಿತ್ತು ಎನಿಸಿತೋ ಏನೋ? ಏನು ಮಾತನ್ನಾಡದೇ ಸುಮ್ಮನೆ ಮತ್ತೆ ಚಿಟ್ಟೆಯ ಮೇಲೆ ಕುಳಿತ. ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಸುಮ್ಮನೆ ಅಲ್ಲಿಂದ ಹೊರಟ ವಿಠ್ಠಲ. ಮನದಲ್ಲಿ ಮಳೆಗಾಲದ ಹೋಟಿಗೆ ಏನು ಮಾಡುವುದು? ತನ್ನ ಕೋಣಗಳು ನಿಜವಾಗಿಯೂ ಸತ್ತು ಹೋಗಿರಬಹುದೇ? ಹೀಗೆ ತಕ್ಷಣಕ್ಕೆ ಉತ್ತರವಿಲ್ಲದ ಹಲವು ಪ್ರಶ್ನೆಗಳು ಸುಳಿಯ ತೊಡಗಿದವು.

ಮನೆಗೆ ಬಂದರೂ ಊಟ ಮಾಡಲು ಮನಸ್ಸಾಗಲಿಲ್ಲ. ಹೆಂಡತಿಗೆ ನಡೆದದ್ದನ್ನೆಲ್ಲ ಹೇಳಿ, "ಇನ್ಮುಂದೆ ನಿಮ್ಮ ಚಿಕ್ಕವ್ವಿ ಮನಿಯೋರ ಬಂದ್ರೆ ಜಾಸ್ತಿ ಮೆರವಣಿಗೆ ಮಾಡುದ್ ಬ್ಯಾಡಾ" ಎಂದು ಎಚ್ಚರಿಕೆಯನ್ನು ನೀಡಿದ. ಆಮೇಲೆ ಹಾಗೂ ಹೀಗೂ ಮಾಡಿ ಅವನೂರ ಸಹಕಾರಿ ಸಂಘದಿಂದ ಸಾಲ ಮಾಡಿ ಹೊಸ ಎತ್ತುಗಳನ್ನು ಕೊಂಡಿದ್ದ. ಸತ್ಯ ಎಷ್ಟು ದಿನ ಮುಚ್ಚಿಡಲು ಸಾದ್ಯ. ಅದೊಮ್ಮೆ ಹೊರ ಬರಲೇ ಬೇಕು. ಅವನ ಕೋಣದ ವಿಷಯ ಆಗಲೇ ಜನರಿಂದ, ಜನರ ಬಾಯಿಗೆ ಬಿದ್ದು ಸತ್ಯವೂ ಹೊರಗೆ ಬಂದಿತ್ತು. ಅವನ ಕೋಣಗಳು ಹೂವಣ್ಣ ಹೇಳಿದಂತೆ ಸತ್ತು ಹೋಗಿರಲಿಲ್ಲ. ಹೂವಣ್ಣ ಅವಗಳನ್ನು ಕುಮ್ಟೆ ಕಡೆಯ ಅವನ ಪರಿಚಿತರಾರಿಗೋ ತನ್ನದೇ ಕೋಣಗಳೆಂದು ಮಾರಿ ಕೊಟ್ಟಿದ್ದ ಎಂದು ಅವನನ್ನು ಹತ್ತೀರದಿಂದ ಬಲ್ಲವರಿಂದ ತಿಳಿದು ಬಂತು. ಅವನಿಗೆ ನಿಜ ತಿಳಿಯುವ ಹೊತ್ತಿಗೆ ಆ ಘಟನೆ ಮುಗಿದು ಆಗಲೇ ಬಹಳ ದಿನಗಳಾಗಿದ್ದರಿಂದ ಆ ಕುರಿತು ಯೋಚಿಸಲು ಹೋಗಿರಲಿಲ್ಲ. ಇದಾದ ಮೇಲೆ ಒಬ್ಬರ ಮುಖವನ್ನು ಒಬ್ಬರು ನೋಡಿರಲೂ ಇಲ್ಲ.

ಹೀಗೆ ಬಹಳ ಹೊತ್ತಿನಿಂದ ಯೋಚಿಸುತ್ತಾ ಕುಳಿತಿದ್ದ ಅವನಿಗೆ ಹೊತ್ತು ಮೇಲೇರುತ್ತಿರುವುದನ್ನು ನೋಡಿ, ಹೋ ಇಷ್ಟೊತ್ತು ಕುಳಿತು ಬಿಟ್ಟನೇ ಎಂದನಿಸಿ ಸೊಪ್ಪು ಕೊಯ್ಯಲು ಹೊರಟ. ಬೇಗ ಬೇಗ ಒಂದಿಷ್ಟು ಸೊಪ್ಪು ಕೊಯ್ದು ತಂದು ಕೊಟ್ಟಿಗೆಯಲ್ಲಿ ಹಾಸಿ ಬುಟ್ಟಿ ಹಿಡಿದು ಮನೆಯ ಕಡೆಗೆ ಹೊರಟ. ಮನೆಯ ಸಮೀಪ ಬರುತ್ತಿದ್ದಂತೆ, ಮನೆಯ ಜಗುಲಿಯ ಒಳಗೆ ಯಾರೋ ಕುಳಿತು ಮಾತನ್ನಾಡುವುದು ಕೇಳಿಸಿದಂತಾಗಿ ಮನೆಯ ಕಡೆ ಸ್ವಲ್ಪ ಲಕ್ಷ ಕೊಟ್ಟು ಮಾತನ್ನು ಆಲಿಸ ಹತ್ತಿದ.

"ತಂಗಿ ವಿಠ್ಠಲ ಇಟ್ಟೊತ್ತಿಗೆ ಬತ್ಯಾ, ಇನ್ನೂ ತಡಾ ಆತಿದಾ ಹೆಂಗೆ?" ಎಂದು ಕೇಳಿದವನ ಧ್ವನಿ ಎಲ್ಲೋ ಕೇಳಿದಂತಿದೆಯಲ್ಲ. ಬಹುಷಃ ಆತನಿರಬಹುದೇ? ಆತ ಈಗೇಕೆ ಮತ್ತೆ ಇಲ್ಲಿಗೆ ಬಂದ ಎನ್ನಿಸಿ, ನಾಣಿಗೆ ಕೊಟ್ಟಿಗೆಯ ಪಕ್ಕದಲ್ಲಿ ಸೊಪ್ಪಿನ ಮುಟ್ಟಿ ಇಟ್ಟು ಒಳಗೆ ಬರುತ್ತಿದ್ದಂತೆ ವಿಠ್ಠಲನ ಹೆಂಡತಿ, "ಆಣ್ಣಾ ಅವ್ರ ಬರೂಕೆ ಆಯ್ತ" ಎಂದವಳು ವಿಠ್ಠಲನನ್ನು ನೋಡಿ "ಅದೆ ಬಂದೇ ಬಿಟ್ರ" ಎಂದಳು.

ವಿಠ್ಠಲ ಅಷ್ಟೊತ್ತಿಗೆ ಒಳ ಜಗುಲಿಯ ಸಮೀಪಕ್ಕೆ ಬಂದು ಒಳಗೆ ಇಣುಕಿ ನೋಡಿದ. ಹೌದು ಅವನೇ. ಅವನು ಇಷ್ಟು ದಿನ  ಯಾರನ್ನು ನೋಡ ಬಾರದು, ಒಂದೊಮ್ಮೆ ನೋಡಿದರೂ ಮಾತನ್ನಾಡಿಸಬಾರದು ಎಂದು ಕೊಂಡಿದ್ದನೋ, ಅವನು ಮನೆಯ ಒಳಗೆ ಬಂದು ಕುಳಿತಿದ್ದ. ಅವನೆಂದು ಕೆಲಸವಿಲ್ಲದೇ ಬರುವವನಲ್ಲ, ಏನೋ ಯೋಜನೆ ಹಾಕಿ ಯೋಚಿಸಿ ಬಂದಿರ ಬೇಕು ಎನ್ನಿಸಿತು. ಮನೆಯ ಜಗುಲಿಯವರೆಗೆ ಬಂದವನು ಇನ್ನೇನು ಮನೆಯೊಳಗೆ ಅಡಿ ಇಡಬೇಕು ಎನ್ನುವಾಗ ಒಳಗೆ ಕುಳಿತಾತ "ವಿಠಲ, ಏಗ್ ಬಂದೆ, ಬಾ" ಎನ್ನುತ್ತಾ ಅವನ ಮನೆಯಲ್ಲಿ ಅವನನ್ನೇ ಆಹ್ವಾನಿಸಿದ. ವಿಠ್ಠಲ ಏನು ಮಾತನ್ನಾಡದೇ "ಹೂಂ" ಎಂದಷ್ಟೇ ಹೇಳಿ, ತಾಂಬೂಲದ ತಟ್ಟೆಗೆ ಕೈ ಹಾಕಿ ಕವಳ ಹಾಕಲು ಅಣಿಯಾದ. ವಿಠ್ಠಲನು ಅವನನ್ನು ಮಾತನ್ನಾಡಿಸಲಿಲ್ಲ, ಅವನು ವಿಠ್ಠಲನನ್ನು ಮಾತನಾಡಿಸಲಿಲ್ಲ. ಇಬ್ಬರು ತಮ್ಮಷ್ಟಕ್ಕೆ ತಾವೇ ಸುಮ್ಮನೆ ಕುಳಿತಿದ್ದರು. ವಿಠ್ಠಲನ ಹೆಂಡತಿ ಬಂದು "ಏನ್ರೆ, ಮಿಂದ್ಕಂಡರೂ ಬರ್ರಿ, ಗಂಜಿ ಉಣ್ಣಕಿ" ಎಂದು ಅವನಿಗೆ ಸ್ನಾನದ ಎಚ್ಚರ ಮಾಡಿದಳು. ವಿಠಲ ಸ್ನಾನ ಮಾಡಿ ಮುಗಿಸಿ ಬರುವಷ್ಟರಲ್ಲಿ ಮನೆಗೆ ಬಂದು ಕುಳಿತಿದ್ದ ಹೂವಣ್ಣ ಬಟ್ಟಲಿನ ಮುಕ್ಕಾಲು ಭಾಗ ಗಂಜು ಕಾಲಿಯಾಗಿತ್ತು. ವಿಠ್ಠಲ ಊಟಕ್ಕೆ ಕುಳಿತು ಕೊಳ್ಳುವಷ್ಟರಲ್ಲಿ ಅವನ ಊಟವೂ ಮುಗಿದಿತ್ತು. ವಿಠ್ಠಲ ಏನನ್ನು ಕೇಳದೇ ಸುಮ್ಮನೆ ಊಟ ಮಾಡಿ ಹೊರಗೆ ಬಂದ. ಹೂವಣ್ಣ ಏನನ್ನೋ ಹೇಳಲು ಬಂದವನು ಮನಸ್ಸಿನಲ್ಲೇ ಇಷ್ಟೊತ್ತು ಅದನ್ನು ಅಧುಮಿಕೊಂಡು ಕುಳಿತಿದ್ದ. ವಿಠ್ಠಲಿನಿಗೂ ಗೊತ್ತು ಹೂವಣ್ಣ ಹೀಗೆ ಸುಮ್ಮನೆ ಬಂದಿರಲಾರನೆಂದು. ಹಾಗಂತ ಅವನನ್ನು ಕೇಳಿ ತಿಳಿದು ಕೊಳ್ಳುವ ಅವಶ್ಯಕತೆ ವಿಠ್ಠಲಿನಿಗಿರಲಿಲ್ಲ.

ಊಟ ಮಾಡಿ ಬಂದವನು ಸ್ವಲ್ಪ ಹೊತ್ತು ಅಡ್ಡಾಗೋಣವೆಂದು ಮಾಳಿಗೆಗೆ ಹೋಗಲು ಅಣಿಯಾಗುತ್ತಿದ್ದುದನ್ನು ನೋಡಿದ ಹೂವಣ್ಣ ಇನ್ನೂ ತಡ ಮಾಡುವುದು ಬೇಡ ಎಂದುಕೊಂಡು, "ವಿಠಲ, ಯಾರೋ ಹೇಳ್ತೇ ಇದ್ದದ್ರ, ನೀನೇನೋ ವಾರ್ಲಾ ಮಾರ್ಬೇಕ ಅಂತೇ ಇಂವಿ ಕಡಾ. ಕುಡುದೇ ಆದ್ರೆ ಹೇಳ ನಾನೇ ತಕಂಡೆ ಹೋತಿ. ಒಳ್ಳೆ ರೇಟ್ ಹಿಡ್ಕಂಡೆ ಕುಡ್ತಿ" ಎಂದು ಒಂದೇ ಉಸಿರಿನಲ್ಲಿ ಹೇಳಿದ.

ವಿಠ್ಠಲನಿಗೆ ಅರ್ಥವಾಗಿ ಹೋಯಿತು, ಇದಕ್ಕೆ ಆತ ಬಂದಿರಬೇಕೆಂದು. ಹೋಗಿ ಹೋಗಿ ಯಾರಾದ್ರೂ ಇವನಂತೋರಿಗೆ ಮತ್ತೆ ಎತ್ತುಗಳನ್ನು ಕೊಡಕ್ಕೆ ಸಾದ್ಯಾನಾ? ಅದು ಇರುಳು ಕಂಡ ಬಾವಿಗೆ ಹಗಲಲ್ಲಿ ಬೀಳುವುದುಂಟೆ. "ಇಲ್ಲಾ ವಾರ್ಲಾ ಕುಡುಲಾ, ನಿಂಗೆ ಯಾರ್ ಹೇಳದ್ರ ನಾ ವಾರ್ಲಾ ಕುಡ್ತಿ ಅಂದೆ" ಎಂದ

"ಮೊನ್ನಗೆ ನಿಮ್ಮೂರ ಹೊನ್ನಯ್ಯ ಸಿಕ್ಕದ, ನೀನೇನೋ ವಾರ್ಲಾ ಮಾರ್ತೇ ಇಂವಾ ಅಂದ, ಅದ್ಕೆ ಕೇಳುವಾ ಅಂತೆ ಬಂದೆ"

"ಹೌದೆ, ನಾ ಇಲ್ಲಿವರಿಗೂ ಕೊಡ್ಬೇಕ ಅಂತೇ ಇದ್ದೆ, ಏಗೆ ನೋಡಿದ್ರೆ ಕುಡುದೇ ಬ್ಯಾಡಾ ಅನ್ನಿಸ್ತೇ ಇದ. ನಂಗೆ ಹೆಂಗೂ ಉಂದೆರ್ಡ ವರ್ಷ ತೊಂದ್ರೆ ಇಲ್ಲಾ.  ಅವ ಸತ್ರೆ ಇಲ್ಲೇ ಸಾಯ್ತವ. ಬೇರೆ ಕಡಿಗೆ ಹೋಗೆ ಸಾಯುದ್ ಬ್ಯಾಡಾ" ಎಂದಿಷ್ಟು ಹೇಳಿ ತನ್ನ ಕೆಲಸ ಮಾತು ಮುಗಿಯಿತು ಎನ್ನುವಂತೆ ಮಾಳಿಗೆ ಏರಿದ ಮಧ್ಯಾನದ ನಿದ್ದೆಗಾಗಿ.

ಹೂವಣ್ಣ ಮತ್ತೇನನ್ನೂ ಹೇಳದೇ ವಿಠ್ಠಲನ ಹೆಂಡತಿ ಮಾಡಿ ಕೊಟ್ಟ ಚಹಾ ಕುಡಿದು ಹೊರಟು ಹೋದ. ವಿಠ್ಠಲನಿಗೆ ನಿದ್ದೆ ಬಾರದಿದ್ದರೂ ಅವನಿರುವವರೆಗೆ ಕೆಳಗೆ ಬರುವ ಮನಸ್ಸಾಗಲಿಲ್ಲ. ಅವನು ಹೋದ ಮೇಲೆ ಕೆಳಗೆ ಬಂದು ಚಹಾ ಕುಡಿದು ಬೆಳಿಗ್ಗೆ ಹೊರಗೆ ಮೇಯಲು ಬಿಟ್ಟ ದನಗಳು ಬಂದರೆ ಕೊಟ್ಟಿಗೆ ಹತ್ತಿರ ಬಂದರೆ ಕಟ್ಟಿ ಬರುತ್ತೇನೆ ಎನ್ನುವುದಾಗಿ ಹೆಂಡತಿಗೆ ಹೇಳಿ ದನ ಕಟ್ಟಿ ಬರಲು ಕೊಟ್ಟಿಗೆಯತ್ತ ಹೊರಟ.

ಮಂಜು ಹಿಚ್ಕಡ್

Saturday, November 1, 2014

ಕನ್ನಡ

ಜನರಲ್ಲಿ ಉಸಿರಾಗಿ,
ನೆಲದಲ್ಲಿ ಹಸುರಾಗಿ,
ಬದುಕಲ್ಲಿ ಹಸನಾಗಿ,
ಬೆಳೆದು ಬಾಳಲಿ ಕನ್ನಡ.

ಶ್ರೀಗಂಧದ ಕಂಪಿನಂತೆ
ಕಾವೇರಿಯ ನೀರಿನಂತೆ
ಎಲ್ಲಡೆ ಹರಿದು ಪಸರಿಸಲಿ
ಈ ನಮ್ಮ ಕನ್ನಡ.


--ಮಂಜು ಹಿಚ್ಕಡ್ 

Thursday, October 30, 2014

ಎಣ್ಣೆ!

ಚಿಕ್ಕದಿರಲಿ,
ದೊಡ್ಡದಿರಲಿ,
ಬತ್ತಿ, ಹೊತ್ತಿ
ಉರಿಯಲು ಬೇಕು
ಪಾತ್ರೆಯಲ್ಲಿಷ್ಟು ಎಣ್ಣೆ.

--ಮಂಜು ಹಿಚ್ಕಡ್

Friday, October 24, 2014

ಕುಡಿವ ನೀರು!

ಬಯಲು ಸೀಮೆಯ
ಬಯಲ ನಡುವಲ್ಲಿರಲಿ
ದಟ್ಟ ಮಲೆನಾಡಿನ
ಗಿರಿ ವನಗಳ ನಡುವಲ್ಲಿರಲಿ
ಕರಾವಳಿಯ ಕಡಲಿನ
ಉಪ್ಪು ನೀರಿನ ತೀರದಲ್ಲಿರಲಿ
ಬೇಕಲ್ಲವೇ ನಮಗೆ ಕುಡಿವ ನೀರು!

ಮಾಂಸಹಾರಿಯೇ ಇರಲಿ
ಸಸ್ಯಹಾರಿಯೇ ಇರಲಿ
ಹಿಂದು, ಮುಸಲ್ಮಾನ,
ಕ್ರಿಸ್ತನೇ ಇರಲಿ
ಬೇಕಲ್ಲವೇ ನಮಗೆ ಕುಡಿವ ನೀರು!

ಕಂಡ ಕಂಡಲೆಲ್ಲಾ
ಕಿಂಡಿಯ ಕೊರೆದು
ಕೊಳವೆಗಳ ತುರುಕಿಸಿ
ಭೂಮಿ ಒಡಲ ಹಿಂಡಿದರೆ
ಇನ್ನೆಷ್ಟು ದಿನ ನಮಗೆ ಕುಡಿವ ನೀರು!

ಪಕ್ಕದ ಮನೆಯವನ ಗುಂಡಿಯಲಿ
ಹೆಪ್ಪುಗಟ್ಟಿದ ಹೊಲಸು ನೀರು
ನಮ್ಮ ಬಾವಿಯಲಿ ಇಂಗಿ
ತೇಪೆ ಕಟ್ಟಿ ಕುಳಿತಿರುವಾಗ
ಇನ್ನೆಲ್ಲಿ ನಮಗೆ ಕುಡಿವ ನೀರು!

ಕಾಡು ಕಡಿ ಕಡಿದು
ಕಾಡೆಲ್ಲಾ ನಾಡಾಗಿ
ಮಳೆಯಿರದೇ ಮುಂದೆ
ನಾಡು ಸುಡುಗಾಡು ಆದಲ್ಲಿ
ಇನ್ನೆಲ್ಲಿ ನಮಗೆ ಕುಡಿವ ನೀರು!

ಭೂಮಿ ಅವ್ವನ ಒಡಲ ಹಿಂಡಿ
ಬದುಕಬಹುದೇನೋ ನಾವು ನಾಲ್ಕು ದಿನ
ಮುಂದೆ ನಾವು ಹೆತ್ತು ಹೊತ್ತವರಿಗಾದರೂ
ಬೇಕಲ್ಲವೇ ಕುಡಿವ ನೀರು!

ಹಿತವಿರಲಿ, ಮಿತವಿರಲಿ
ನೀರು ಚೆಲ್ಲಿ ಹರಿದಾಡದಿರಲಿ
ಇರುವುದರಲ್ಲಿ ಉಳಿಸಿ ನಡೆದರೆ
ಮುಂದಿನ ಜನ್ಮಕ್ಕೂ ಸಿಗುವುದು
ಕುಡಿವ ನೀರು!

--ಮಂಜು ಹಿಚ್ಕಡ್

Saturday, October 11, 2014

ಪಯಣ

ಬೆರಳ ನೇವರಿಸಿ
ಮುಂಗುರುಳು ತೀಡಿ
ಆತರಿಸಿ, ಹುಚ್ಚೆದ್ದು
ಗಮ್ಯ ಸೇರುವ ಹೊತ್ತಿಗೆ
ಸೂರ್ಯ ಕಂತಿದ್ದ
ಚಂದ್ರ ನಕ್ಕಿದ್ದ.

--ಮಂಜು ಹಿಚ್ಕಡ್

Thursday, October 9, 2014

ಸಂಸಾರ ಸಾರ

[೨೯-ಸೆಪ್ಟಂಬರ್-೨೦೧೪ ರ ಪಂಜು ವಾರ ಪತ್ರಿಕೆಯಲ್ಲಿ ಪ್ರಕಟವಾದ ಕಥೆ ’ಸಂಸಾರ ಸಾರ’ http://www.panjumagazine.com/?p=8674]

ಟಕ್, ಟಕ್, ಟಕ್ ಎಂದು ಕೇಳಿ ಬರುವ ಜನರ ಹೆಜ್ಜೆಗಳ ಸಪ್ಪಳ. ಗುಂಯ್, ಗುಂಯ್, ಗುಂಯ್ ಎಂದು ರಸ್ತೆಯಲ್ಲಿ ಓಡಾಡುವ ವಾಹನಗಳ ಶಬ್ಧ. ಆಗೊಮ್ಮೆ ಈಗೊಮ್ಮೆ ಕೊಂಯ್, ಕೊಂಯ್, ಕೊಂಯ್ ಎಂದು ಕೇಳಿ ಬರುತ್ತಿದ್ದ ಅಂಬ್ಯೂಲನ್ಸ್ ಸಪ್ಪಳ. ಅಲ್ಲಲ್ಲಿ ಆಗಾಗ ಕೇಳಿ ಬರುತ್ತಿದ್ದ ಜನರ ಪಿಸುಮಾತುಗಳು. ಒಮ್ಮೊಮ್ಮೆ ಅಲ್ಲೊಬ್ಬರು, ಇಲ್ಲೊಬ್ಬರು ಅಳುವ ಸಪ್ಪಳ. ಇವೆಲ್ಲಾ ಆಗಾಗ ಕೇಳಿ ಬರುತ್ತಲೇ ಇದ್ದುದರಿಂದ ಇಂದಾದರೂ ಸ್ವಲ್ಪ ಹೊತ್ತು ನಿದ್ದೆ ಮಾಡಬೇಕೆಂದುಕೊಂಡು ಮಲಗಿದ ಸುಮಾಳಿಗೆ ನಿದ್ದೇನೆ ಹತ್ತಿರ ಸುಳಿಯುತ್ತಿರಲಿಲ್ಲ. ತಾನು ಮಲಗಿ ಆಗಲೇ ತುಂಬಾ ಗಳಿಗೆಯಾಯಿತು , ಬೆಳಿಗ್ಗೆಯಾಗಿರಬಹುದೇ ಎಂದು ಯೋಚಿಸಿ ತಲೆಯ ಹಿಂಬಾಗದ ಚಿಕ್ಕದಾದ ಟಿಪಾಯಿಯ ಮೇಲಿಟ್ಟ ಮೊಬೈಲನ್ನು ಕೈಗೊತ್ತಿಕೊಂಡು ಸಮಯ ನೋಡಿದಳು. ಸಮಯ ಆಗಷ್ಟೇ ಒಂದು ಕಳೆದು ಎರಡರತ್ತ ಮುಖಮಾಡಿತ್ತು. ಮೊಬೈಲಿನ ಬೆಳಕು ಕಣ್ಣ ಮೇಲೆ ಬಿದ್ದು ಪಕ್ಕದಲ್ಲೇ ಮಲಗಿದ ಆರು ವರ್ಷದ ಮಗ ಕಣ್ತೆರೆದು "ಅಮ್ಮಾ" ಎಂದು ಅಳಲಾರಂಭಿಸಿದ. ಹಾಗೆ ಎದ್ದ ಮಗನ ಹಣೆ ಮುಟ್ಟಿ ನೋಡಿದಳು, ಜ್ವರ ಸ್ವಲ್ಪ ಕಡಿಮೆಯಾಗಿದೆ. ಕಂಕುಳಿಗೆ ಥರ್ಮಮೀಟರ ಇಟ್ಟು ನೋಡಿದಳು. ಎರಡು ದಿನದಿಂದ ೧೦೦ ಡಿಗ್ರಿಯ ಮೇಲೆಯೇ ಇದ್ದ ಜ್ವರ ಇಂದು ೯೯ಕ್ಕೆ ಬಂದು ತಲುಪಿತ್ತು. ಮಗನನ್ನು ಸಮಾಧಾನ ಪಡಿಸಿ ಮತ್ತೆ ಮಲಗಿಸಿದಳು. "ಜ್ವರ ನಾಳೆ ಬೆಳಿಗ್ಗೆ ಅಷ್ಟೋತ್ತಿಗೆ ಕಡಿಮೆ ಆಗುತ್ತೆ ಅಮ್ಮ" ಎಂದು ರಾತ್ರಿ ಎಂಟು ಗಂಟೆಗೆ ತಪಾಸಣೆಗೆ ಬಂದುಹೊದ ಲೇಡಿ ಡಾಕ್ಟರ್ ಹೇಳಿ ಹೋಗಿದ್ದರಿಂದಲೋ , ಈಗ ಜ್ವರ ಇಳಿದಿದ್ದರಿಂದಲೋ ಸ್ವಲ್ಪ ಸಮಾಧಾನಗೊಂಡಳು.

ಈಗ ಅವಳ ಯೋಚನೆ ಗಂಡನತ್ತ ಹೊರಳಿತು. ಬೆಳಿಗ್ಗೆ ೯ ಗಂಟೆಗಲ್ಲವೇ ಇಂದು ಅವರು ಆಸ್ಪತ್ರೆಯಿಂದ ಆಪೀಸಿಗೆ ಹೊರಟಿದ್ದು. ಹೋಗುವಾಗ ಆದಷ್ಟು ಬೇಗ ಬರುತ್ತೇನೆ ಎಂದು ಬಿಲ್ ಕಟ್ಟಿ ಕರ್ಚಿಗಿರಲಿ ಎಂದು ಕೈಗೊಂದಿಷ್ಟು ಹಣ ತುರುಕಿ ಹೊರಟವರು ಇಷ್ಟೊತ್ತಾದರೂ ಬಂದಿಲ್ಲ. ಇದೇನು ಹೊಸತೇನಲ್ಲ ಅದೂ ದಿನಾ ಇದ್ದುದ್ದೇ. ನಿನ್ನೆ ಮೊನ್ನೆ ಒಂದೆರಡು ದಿನ ರಜೆ ಹಾಕಿ ಆಸ್ಪತ್ರೆಯಲ್ಲಿ ಇದ್ದುದೇ ದೊಡ್ಡದು. ಇಂದು ಆಪೀಸಿಗೆ ಹೋದವರು ಬೇಗ ಬರಬಹುದೆಂದು ಕೊಂಡವಳಿಗೆ ಇವತ್ತು ನೋಡಿದರೆ ದಿನಕ್ಕಿಂತ ಲೇಟು.

ಮನಸ್ಸು ಇನ್ನೂ ಹಿಂದಕ್ಕೆ ಓಡಿತು. ಅದು ಮದುವೆಯಾದ ಹೊಸತು, ಆಗತಾನೇ ಅವಳು ಬೆಂಗಳೂರಿಗೆ ಬಂದ ಹೊಸತು. ಆಗಲೂ ಗಂಡ ನೌಕರಿ ಮಾಡುತ್ತಿದ್ದ. ಆದರೆ ೬.೩೦-೭ ಗಂಟೆಗೆ ಮನೆಯಲ್ಲಿ ಇರುತ್ತಿದ್ದ. ಅದೆಷ್ಟೋ ಬಾರಿ ಅವನು ಮನೆಗೆ ಬಂದ ಮೇಲೆ ಇಬ್ಬರು ಹೊರಗೆಲ್ಲ ಸುತ್ತಾಡಿ ಮನೆಗೆ ಬಂದದ್ದು ಇದೆ. ದಿನ ಕಳೆದಂತೆ ಅವನು ಒಂದು ಹುದ್ದೆಯಿಂದ ಇನ್ನೊಂದು ಹುದ್ದೆಗೆ ಏರತೊಡಗಿದ, ಹುದ್ದೆಯ ಜೊತೆಗೆ ಸಂಬಳವು ಏರಿತು, ಸಂಬಳದ ಜೊತೆಗೆ ಕೆಲಸದ ಒತ್ತಡವೂ ಕೂಡ. ಮೊದ ಮೊದಲು ೬.೩೦-೭ಕ್ಕೆ ಬರುತ್ತಿದ್ದವನು ಮುಂದೆ ೮ ಆಯ್ತು, ೯ ಆಯ್ತು, ಈಗಂತೂ ೧೦ ಗಂಟೆಯೊಳಗೆ ಬಂದದ್ದೆ ಅಪರೂಪ. ಮುಂದೆ ಮಗ ಹುಟ್ಟಿದಾಗಲೂ ಅಷ್ಟೇ ಒಂದೆರಡು ದಿನ ಇದ್ದು ಮಗನನ್ನು ನೋಡಿ ಹೋದವರು ಆಮೇಲೆ ಬಂದದ್ದು ೩ ತಿಂಗಳ ನಂತರವೇ, ಅದೂ ಕೂಡ ಮಗುವಿನ ನಾಮಕರಣಕ್ಕೆ. ಯಾವತ್ತು ನೋಡಿದರೂ ಆಪೀಸು-ಕೆಲಸ, ಆಪೀಸು-ಕೆಲಸ ಅಷ್ಟೇ. ಹೋಗಲಿ ಮನೆಗೆ ಬಂದ ಮೇಲಾದರೂ ಆಪೀಸನ್ನು ಮರೆಯುತ್ತಾರೆಯೇ, ಅದೂ ಇಲ್ಲ. ಕ್ಲೈಂಟ ಕಾಲಂತೆ, ಕ್ಲೈಂಟ ಸಪೋರ್ಟ ಅಂತಾ ಲ್ಯಾಪ್ ಟಾಪ್ ಹಿಡಿದು ಕೂತು ಬಿಡುತ್ತಾರೆ. ಅದೆಷ್ಟೋ ಬಾರಿ ಇವನ್ನೆಲ್ಲ ನೋಡಿದಾಗ, ಇವರಿಗ್ಯಾಕೆ ಹೆಂಡತಿ ಮಕ್ಕಳು ಅನಿಸಿದ್ದು ಇದೆ.

ಹೀಗೆ ಯೋಚನೆಯಲ್ಲಿಯೇ ಕಾಲ ಕಳೆಯುತ್ತಿದ್ದವಳಿಗೆ ಗಂಡ ಬಂದು ಎರಡು ಬಾರಿ ಕದ ಬಡಿದದ್ದು ಅವಳಿಗೆ ಕೆಳಿಸಲಿಲ್ಲ. ಆಕೆ  ಬಹುಷ: ನಿದ್ದೆಗೆ ಜಾರಿರಬಹುದೆಂದು ತಿಳಿದು, ಮಲಗಿದರೆ ಮಲಗಲಿ ಎಂದು ಕದ ಬಡಿಯುವುದನ್ನು ನಿಲ್ಲಿಸಿ ಆಸ್ಪತ್ರೆಯ ಹೊರ ರೋಗಿಗಳು ಬಂದು ಕುಳಿತುಕೊಳ್ಳುವ ಸ್ಥಳಕ್ಕೆ ಬಂದು ಒಂದು ಮೂಲೆಯಲ್ಲಿ ಕುಳಿತ. ಅಂತೂ ನಾಳೆ ಶನಿವಾರ ಆಪೀಸಿಗೆ ಹೋಗುವ  ರಗಳೆಯಿಲ್ಲ ಎಂದು ಸ್ವಲ್ಪ ಸಮಾಧಾನವಾಯಿತು. ಹೊರ ರೋಗಿಗಳಿಗಾಗಿ ಟಿ.ವಿ ಹಚ್ಚಿಟ್ಟಿದ್ದರಾದರೂ, ಅಲ್ಲಿ ಕುಳಿತು ಸರಿಯಾಗಿ ಟಿ.ವಿ ನೋಡುವವರ್ಯಾರು ಇರಲಿಲ್ಲ. ಮನಸ್ಸಿನಲ್ಲಿ ನೋವು, ದುಗುಡಗಳು ತುಂಬಿಕೊಂಡಿರುವವರಿಗೆ ಮನರಂಜನೆಯ ಅವಶ್ಯಕತೆ ಇದೆಯೇ? ಎಲ್ಲರಂತೆಯೇ ರಮೇಶನಿಗೂ ಟಿ.ವಿ ನೋಡುವ ಮನಸ್ಸಿರದಿದ್ದುದರಿಂದ ಟಿ.ವಿಯ ಕಡೆ ನೋಡದೆ ದೂರದಲ್ಲೆಲ್ಲೊ ದ್ರಷ್ಟಿ ಇಟ್ಟು ಕುಳಿತಿದ್ದ. ನಿದ್ದೆ ಮಾಡೋಣವೆಂದರೆ ನಿದ್ದೆಯೂ ಸುಳಿಯುತ್ತಿಲ್ಲ. "ಥೂ ಹಾಳಾದದ್ದು" ಇವತ್ತಾದರೂ ಬೇಗ ಬರೋಣವೆಂದರೆ ಇವತ್ತೇ ಲೇಟಾಗಬೇಕೆ? ಅನಿಸಿತು. ಅದೊಂದೂ ಸಮಸ್ಯೆ ಬರದೇ ಇದ್ದರೆ ಬೇಗ ಬರಬಹುದಿತ್ತೇನೋ. ಯಾವಾಗ ಬೇಗ ಆಪೀಸಿನಿಂದ ಹೋಗಬೇಕೆಂದುಕೊಂಡಿರುತ್ತೇನೋ ಆವತ್ತೇ ಇಂತಹ ಸಮಸ್ಯೆಗಳು ಬಂದು ಒಕ್ಕರಿಸಿಕೊಂಡು ಬಿಡುತ್ತವೆಯಲ್ಲ. ಕಳೆದ ಒಂದು ತಿಂಗಳಿಂದ ಯಾವುದೇ ಕಾಲ್ ಮಾಡದೇ ಇದ್ದ ಜಾನ್ ಇವತ್ತೇ ಕಾಲ್ ಮಾಡಬೇಕಿತ್ತೇ. ಅವರಿಗೇನು ಅಮೇರಿಕಾದಲ್ಲಿ ಕುಳಿತಿರುತ್ತಾರೆ. ಅವರಿಗೆ ಹಗಲು ಆದರೆ ನಮಗೆ ಇಲ್ಲಿ ರಾತ್ರಿ. ಇಲ್ಲ ಎಂದು ಹೇಳುವಂತೆಯೂ ಇಲ್ಲ. ಅಕಸ್ಮಾತ್ ಇಲ್ಲ ಅಂದರೆ ನೌಕರಿಗೆ ಕುತ್ತು. ಈ ರೀತಿಯ ಹಾಳು ಹುದ್ದೆಗಿಂತ ಅಪ್ಪ ಮಾಡುತ್ತಿದ್ದ ರೈತಾಬಿ ಕೆಲಸವೇ ಒಳ್ಳೆಯದೆನಿಸಿತು. ಕಟ್ಟ ಕಡೆಯಲ್ಲಿ ಬೇಸಾಯವಿರದ ಸಮಯದಲ್ಲಿ ಸ್ವಲ್ಪ ನೆಮ್ಮದಿಯಾದರೂ ಇರುತ್ತದೆ. ಆದರೆ ಇಲ್ಲಿ ಅದೂ ಇಲ್ಲ. ಎಲ್ಲಾ ಬಿಟ್ಟು ಊರ ಕಡೆ ಹೊರಟು ಬಿಡೋಣವೆಂದರೆ ಮಗನ ಓದಿನ ಸಮಸ್ಯೆ. ಒಂದು ತರ ತ್ರಿಷಂಕು ಸ್ಥಿತಿ. ಆಕಡೆನೂ ಇಲ್ಲ, ಈಕಡೆನೂ ಇಲ್ಲ. ಪಾಪ ಸುಮ ಬೆಳಿಗ್ಗೆಯಿಂದ ಮಗುವನ್ನು ನೋಡಿಕೊಂಡು ಅದೆಷ್ಟು ಕಷ್ಟ ಪಡುತ್ತಿದ್ದಳೋ. ನನ್ನಿಂದಾಗಿ ಅವಳಿಗೂ ಸಮಸ್ಯೆ. ಪಾಪ ಅವಳಾಗಿದ್ದಕ್ಕಾಗಿ ಇಷ್ಟು ದಿನ ಹೊಂದಿಕೊಂಡು ಇದ್ದಾಳೆ. ಬೇರೆಯವರಾಗಿದ್ದರೆ ಎಲ್ಲಾ ಬಿಟ್ಟು ಹೊರಟು ಬಿಡುತ್ತಿದ್ದರೇನೋ. ಹೀಗೆ ಯೋಚನೆ ಮಾಡುತ್ತಾ ಕುಳಿತವನಿಗೆ ಬೆಳಿಗ್ಗೆಯಾಗುವ ಹೊತ್ತಿಗೆ ಸ್ವಲ್ಪ ನಿದ್ದೆ ಹತ್ತಿತ್ತು.


ಬೆಳಿಗ್ಗೆ ಕೋಣೆಗೆ ಬಂದ ನರ್ಸ, ಡಾಕ್ಟರ್ ಒಂದಿಷ್ಟು ಔಷಧಿ ತಂದಿಡಳು ಹೇಳಿದ್ದಾರೆ ಎಂದು ಔಷಧಿ ಚೀಟಿಯನ್ನು ಸುಮಳಿಗೆ ಕೊಟ್ಟಳು. ಮಗನಿನ್ನೂ ಮಲಗಿದ್ದ. ಬೇಗ ಹೋಗಿ ಔಷಧಿ ತೆಗೆದುಕೊಂಡು ಬರೋಣವೆಂದು ಆಸ್ಪತ್ರೆಯೊಳಗಿನ ಔಷಧಾಲಯಕ್ಕೆ ಬಂದು ಔಷಧಿ ತೆಗೆದುಕೊಂಡು ಇನ್ನೇನು ಒಳ ಹೋಗಬೇಕು ಎನ್ನುವವಳಿಗೆ, ಅಲ್ಲೇ  ಹತ್ತಿರದ ಮೂಲೆಯಲ್ಲಿ ಕುಳಿತ ಬಂಗಿಯಲ್ಲೇ ನಿದ್ರಿಸುತಿದ್ದ ರಮೇಶ ಕಣ್ಣಿಗೆ ಬಿದ್ದ. ಆಸ್ಪತ್ರೆಗೆ ಬಂದವರು ಕೊಣೆಗೆ ಬರದೇ ಇಲ್ಯಾಕೆ ಕುಳಿತಿದ್ದಾರೆ ಎಂದೆನಿಸಿ ಅವನ ಹತ್ತಿರ ಬಂದು ಮೈ ತಟ್ಟಿ ರಮೇಶ ಎಂದು ಎಚ್ಚರಿಸಿದಳು. ನಿದ್ದೆಯ ಗುಂಗಿನಲ್ಲಿದ್ದ ರಮೇಶ ಒಮ್ಮೆಲೆ ಬೆಚ್ಚಿಬಿದ್ದು "ಹಾಂ ಯಾರು" ಎಂದೆದ್ದ "ಹೇಯ್ ರಮೇಶ್ , ಇಲ್ಯಾಕೆ ಮಲಗಿದ್ದಿಯಾ? ರೂಮಿಗೇಕೆ ಬಂದಿಲ್ಲಾ" ಎಂದು ಕೇಳಿದಳು. ಅವಳು ಅವನನ್ನು ಕರೆಯುತ್ತಿದ್ದುದು ಹಾಗೆ. ಮದುವೆಯಾದಾಗಿನಿಂದ ಇಲ್ಲಿಯವರೆಗೂ ಎಂದೂ ಅವಳೂ ಅವನನ್ನು ಬಹುವಚನದಿಂದ ಮಾತನಾಡಿಸಲ್ಲಿಲ್ಲ. ಮೊದ ಮೊದಲು ಒಂದೆರಡು ಬಾರಿ ಪ್ರಯತ್ನಿಸಿದ್ದರೂ ರಮೇಶ ಬೇಡ ಎಂದಿದ್ದ. ರಮೇಶ ನಿದ್ದೆಯಿಂದ ಸ್ವಲ್ಪ ಹೊರಬಂದು "ಆಕಾಶ್ ಹೇಗಿದ್ದಾನೆ? ರಾತ್ರಿನೇ ಬಂದೆ. ಕದ ಬಡಿದೆ ನಿನು ಕದ ತೆಗೆಯಲಿಲ್ಲ ಬಹುಷ: ಮಲಗಿರಬಹುದೆಂದು ಇಲ್ಲಿ ಬಂದು ಕುಳಿತೆ."  

"ಹೌದೆ ಮೊಬೈಲ್ ಇತ್ತಲ್ಲ, ರಿಂಗ ಕೊಡಬಹುದಿತ್ತು"ಎಂದಳು.

"ಹಾಂ ಹೌದು ಕೊಡೋಣವೆಂದುಕೊಂಡಿದ್ದೆ, ಮಗ ಮಲಗಿದ್ದವನು ಎಚ್ಚರವಾದರೆ ಎಂದೆನಿಸಿತು ಅದಕ್ಕೆ ಕೊಡಲಿಲ್ಲ ಹೋಗಲಿ ಹೇಗಿದ್ದಾನೆ ಆಕಾಶ"

"ಈಗ ಪರವಾಗಿಲ್ಲ ಇವತ್ತು ಜ್ವರ ಸಂಪೂರ್ಣ ಬಿಡಬಹುದು" ಎಂದು ಡಾಕ್ಟರ್ ಹೇಳಿದ್ದಾರೆ

"ಓಹ್ ಗುಡ್ , ಬಾ ಹೋಗೋಣ"

ಇಬ್ಬರು ರೂಮಿಗೆ ಬಂದರು. ಅವರು ರೂಮಿಗೆ ಬರುತ್ತಿದ್ದಂತೆ ಬೆಳಗ್ಗಿನ ಪಾಳಿಯ ಡಾಕ್ಟರ್ ರೂಮಿಗೆ ಬಂದು ಮಗುವಿನ ಜ್ವರವನ್ನು ಪರಿಶೀಲಿಸಿ, "ಮಗುವಿನ ಸ್ಥಿತಿ ಈಗ ತುಂಬಾ ಇಂಪ್ರೂವ್ ಆಗಿದೆ, ಜ್ವರ ಅಷ್ಟೊಂದು ಇಲ್ಲಾ, ಸಂಜೆ ಅಷ್ಟೊತ್ತಿಗೆ ಸಂಪೂರ್ಣ ಕಡಿಮೆಯಾಗಬಹುದು" ಎಂದು ಹೇಳುತ್ತಾ ಬೆಡ್ನ ತುದಿಗೆ ನೇತು ಹಾಕಿದ್ದ ನೋಟ್ ಬುಕ್ ತೆಗೆದುಕೊಂಡು ನೋಡಿದರು. ಬೆಳಿಗ್ಗೆ ತರಲು ಹೇಳಿದ ಔಷಧಿಗಳನ್ನು ಸುಮಾಳಿಂದ ತೆಗೆದುಕೊಂಡು ನರ್ಸಗೆ ಕೊಟ್ಟು ಮಗುಗೆ ಕೊಡಲು ಹೇಳಿ ಹೊರಗೆ ಹೊರಡುವ ಮುನ್ನ ಸುಮಾಳನ್ನು ನೋಡಿ ಇನ್ನೊಮ್ಮೆ " ನಿನ್ನೆಗೆ ಹೋಲಿಸಿದರೆ ಜ್ವರ ಅಷ್ಟೊಂದು ಇಲ್ಲ, ಇವತ್ತು ಸಾಯಂಕಾಲದ ಹೊತ್ತಿಗೆ ಸಂಪೂರ್ಣ ಕಡಿಮೆಯಾಗ ಬಹುದು. ನಾಳೆ ಡಿಸ್ಚಾರ್ಜ ಮಾಡಿಕೊಂಡು ಹೊರಡಲು ತೊಂದರೆ ಇಲ್ಲಾ" ಎಂದು ಹೇಳಿ ಇನ್ನೊಂದು ರೂಮಿನ ಕಡೆ ಹೊರಟಾಗ ಇಬ್ಬರಿಗೂ ಸ್ವಲ್ಪ ಸಮಾಧಾನವಾಗಿತ್ತು.

ಎಲ್ಲರಿಗೂ ಆಸ್ಪತ್ರೆಯ ಕ್ಯಾಂಟಿನಿನಿಂದ ಚಹಾ ತಿಂಡಿ ತರುವುದಾಗಿ ಹೇಳಿ ಹೊರಟ ರಮೇಶ. ಮಗುವಿನ ಆರೋಗ್ಯ ಸುಧಾರಿಸಿದ್ದರಿಂದ ಸ್ವಲ್ಪ ಸಮಾಧಾನವಾಗಿತ್ತಾದರೂ ಮನಸ್ಸು ಇನ್ನೂ ಸಂಪೂರ್ಣ ಹತೋಟಿಗೆ ಬಂದಿರಲಿಲ್ಲ. ಈ ಸಂಸಾರ ಎನ್ನುವುದು ಎಷ್ಟೊಂದು ವಿಚಿತ್ರವಾಗಿದೆ. ಎಲ್ಲಿಯೋ ಹುಟ್ಟಿ ಬೆಳೆದ ಗಂಡು, ಇನ್ನೆಲ್ಲಿಯೋ ಹುಟ್ಟಿ ಬೆಳೆದ ಹೆಣ್ಣು. ಅವರವರದೇ ಆ ಕನಸುಗಳನ್ನು, ಭಾವನೆಗಳನ್ನು ಮರೆತು ಇಷ್ಟವಿದ್ದೋ, ಇಷ್ಟವಿಲ್ಲದೆಯೋ ಒಟ್ಟಿಗೆ ಬದುಕುವುದನ್ನೇ ಸಂಸಾರ ಎಂದರೆ ಎಷ್ಟರ ಮಟ್ಟಿಗೆ ಸರಿ. ಅವರವರು ಹೊತ್ತು ಬಂದ ಕನಸುಗಳು, ಭಾವನೆಗಳು ಮದುವೆಯಲ್ಲಿಯೇ ಕೊನೆಯಾದರೆ ಹೇಗೆ. ಕನಸುಗಳು ಮದುವೆಯಲ್ಲಿ ಕೊನರಿಹೋಗದೇ ನನಸಾಗಬೇಕು. ಅವರವರ ಭಾವನೆಗಳನ್ನು ಅರಿತು ಒಬ್ಬರಿಗೊಬ್ಬರು ಸಹಕಾರಕೊಟ್ಟು ಹೊಂದಿಕೊಂಡು ಹೋಗಬೇಕು. ಒಬ್ಬರ ಕನಸು ನನಸಾಗಲು ಇನ್ನೊಬ್ಬರು ಸಹಾಯಮಾಡಬೇಕು. ಒಬ್ಬರಿಗೊಬ್ಬರು ಸಹಾಯ, ಸಹಕಾರ ಕೊಟ್ಟು ಹೊಂದಿಕೊಂಡಿ ಹೋಗುವುದನ್ನು ಸಂಸಾರ ಎನ್ನಲಾದೀತೇ ಹೊರತು ಒಬ್ಬರ ಏಳ್ಗೆಗಾಗಿ ಇನ್ನೊಬ್ಬರು ತಮ್ಮ ಕನಸುಗಳನ್ನು ಬಲಿಕೊಟ್ಟು ಇನ್ನೊಬ್ಬರ ಏಳ್ಗೆಯಲ್ಲೇ ತಮ್ಮನ್ನು ಮರೆತು ಕೊನೆಗೆ ಪರಿತಪಿಸುವುದನ್ನು ಸಂಸಾರ ಎನ್ನಲಾದಿತೇ?

ಬಹುಷಃ ಸುಮಾ ಇಲ್ಲಾ ಅಂದರೆ ನಾನು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲವೇನೋ. ಆದರೆ ನನ್ನ ಬೆಳವಣಿಗೆಯಲ್ಲಿ ನಾನು ಅವಳನ್ನು ಅರಿಯಲು ಪ್ರಯತ್ನಿಸಿಲ್ಲ. ನನ್ನ ಹಾಗೆ ಅವಳಿಗು ತನ್ನದೇ ಆದ ಕನಸುಗಳು ಭಾವನೆಗಳು ಇರಲೇ ಬೇಕಲ್ಲವೇ. ನನ್ನ ಬೆಳವಣಿಗೆಯಲ್ಲಿ ನಾನು ಅವೆಲ್ಲವನ್ನು ಕಡೆಗಣಿಸಿ ಬಿಟ್ಟೆನಲ್ಲ. ಇನ್ನಾದರೂ ನಾನು ಅವಳಿಗಾಗಿ ಸ್ವಲ್ಪ ಸಮಯ ಮೀಸಲಿಡಬೇಕು. ನನ್ನಂತೆ ಅವಳಿಗೂ ಬೆಳೆಯಲು ಸಹಾಯ ಸಹಕಾರ ನೀಡಬೇಕು ಹಾಗಿದ್ದರೆ ಮಾತ್ರ ನಮ್ಮ ಸಂಸಾರಕ್ಕೊಂದು ಅರ್ಥ. ಈ ಹುದ್ದೆ ಹಣ, ಕಾರು, ಬಂಗಲೆ ಇವೆಲ್ಲವೂ ಯಾತಕ್ಕಾಗಿ? ಹೆಂಡತಿ ಮಕ್ಕಳಿಗಾಗಿಯೇ ಅಲ್ಲವೇ. ಹೆಂಡತಿ ಮಕ್ಕಳು ಇಲ್ಲ ಅಂದರೆ ಅವೆಲ್ಲವೂ ನಗಣ್ಯ ಅಲ್ಲವೇ. ಇನ್ನಾದರೂ ನಾನು ಸ್ವಲ್ಪ ಸಮಯವನ್ನಾದರೂ ಕಳೆಯಲೇ ಬೇಕು. ಹೀಗೆ ಯೋಚಿಸುತ್ತಾ ಹೆಂಡತಿ ಮಗನಿಗಾಗಿ ಚಹಾ ತಿಂಡಿ ತೆಗೆದುಕೊಂಡು, ತಾನು ಇಲ್ಲಿಯೇ ತಿಂದು ಹೋಗೋಣವೆಂದು ಕೊಂಡು ಬಂದವನು, ಚಹಾ ತಿಂಡಿಯನ್ನು ಪಾರ್ಸಲ್ ಮಾಡಿಸಿಕೊಂಡು ಹೆಂಡತಿ ಮಗನಿದ್ದ ಕೋಣೆಗೆ ಹೊರಟ, ಇಂದಿನಿಂದಲಾದರೂ ಹೆಂಡತಿ ಮಗನೊಂದಿಗೆ ಕುಳಿತು ತಿಂಡಿ ತಿನ್ನೋಣವೆಂದು.

ಮಂಜು ಹಿಚ್ಕಡ್

Wednesday, September 24, 2014

ಮುತ್ತಿನ ಮತ್ತು.

ಮುತ್ತಿನ ಮತ್ತು
ಬಲು ಗಮ್ಮತ್ತು
ಅದು
ನನ್ನವಳಿಗಾದರೆ

ತಪ್ಪಿ
ಇನ್ನೊಬ್ಬಳಿಗಾದರೆ
ಮೊದಲು
ಕಾದಿಹುದು ಆಪತ್ತು,
ಬಳಿಕ ವಿಪತ್ತು.


--ಮಂಜು ಹಿಚ್ಕಡ್

Sunday, September 7, 2014

ನೆನೆಯದ ಹೆಸರು ನೆನಪಾದಾಗ.

[೨೭-ಅಗಷ್ಟ-೨೦೧೪ ರಂದು ಅವಧಿಯಲ್ಲಿ ಪ್ರಕಟವಾದ ನನ್ನ ಕತೆ ’ನೆನೆಯದ ಹೆಸರು ನೆನಪಾದಾಗ’ http://avadhimag.com/2014/08/27/%E0%B2%A8%E0%B3%86%E0%B2%A8%E0%B3%86%E0%B2%AF%E0%B2%A6-%E0%B2%B9%E0%B3%86%E0%B2%B8%E0%B2%B0%E0%B3%81-%E0%B2%A8%E0%B3%86%E0%B2%A8%E0%B2%AA%E0%B2%BE%E0%B2%A6%E0%B2%BE%E0%B2%97-%E0%B2%B8%E0%B2%A3/]

ಗಂಡ ಸತ್ತು ಶ್ಮಶಾನ ಸೇರಿದಾಗ ಸುರೇಖಾಗೆ ಇನ್ನೂ ೨೮ರ ಹರೆಯ. ಗಂಡ ಸಾಯುವಾಗ ಬಿಟ್ಟು ಹೋದದ್ದೆಂದರೆ ವಾಸಿಸಲು ಎರಡು ಪಕ್ಕೆಯ ಮನೆ, ಮನೆಯ ಸುತ್ತಲಿನ ನಾಲ್ಕು ಗುಂಟೆಯ ಜಾಗ ಹಾಗೂ ಆರು ವರ್ಷದ ಮಗ ಸಂದೇಶ. ಗಂಡ ಸತ್ತ ಮೇಲೆ ಆತ ಯಾರದೋ ಒತ್ತಾಯಕ್ಕೆ ಮಾಡಿದ ಇನ್ಸೂರನ್ಸ ಹಾಗೂ ಅವನ ಭವಿಷ್ಯನಿಧಿಯಿಂದ ಸ್ವಲ್ಪ ಹಣ ಸೇರಿ ಒಂದೂವರೆ ಲಕ್ಷ ಬಂದಿತ್ತಾದರೂ, ಅದರಲ್ಲಿ ಕೇವಲ ೫೦ ಸಾವಿರದಷ್ಟನ್ನು ತುರ್ತು ಕರ್ಚಿಗೆ ಇಟ್ಟುಕೊಂಡು ಉಳಿದ ಒಂದು ಲಕ್ಷವನ್ನು ಹಾಗೆಯೇ ಬ್ಯಾಂಕಿನಲ್ಲಿ ಇಟ್ಟಿದ್ದಳು. ಗಂಡ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯವರೇ ಅವಳ ಅಸಹಾಯಕತೆಯನ್ನು ನೋಡಿ, ಅವಳ ಬದುಕಿನ ಆಸರೆಗಾಗಿ ಒಂದು ಪರೀಚಾರಿಕೆಯ ಕೆಲಸವನ್ನು ಅದೇ ಆಸ್ಪತ್ರೆಯಲ್ಲಿ ಕೊಟ್ಟಿದ್ದರು.

ಸುರೇಖಾ ಮಗನನ್ನು ಖಾಸಗಿ ಶಾಲೆಗೆ ಸೇರಿಸಿ ಓದಿಸುವುದು ಕಷ್ಟವೆಂದು ತಿಳಿದು ಅಲ್ಲಿಯೇ ಸಮೀಪದ ಸರ್ಕಾರಿ ಶಾಲೆಗೆ ಸೇರಿಸಿದ್ದಳು. ಸಂದೇಶ ಓದಲು ತುಂಬಾ ಚುರುಕಾಗಿದ್ದರಿಂದ, ಪ್ರತಿ ತರಗತಿಯನ್ನೂ ಪ್ರಥಮ ಶ್ರೇಣಿಯಲ್ಲಿಯೇ ಪಾಸಾಗುತ್ತಾ ಸಾಗಿದ. ಮಗನ ಓದು ಬರಹವನ್ನು ಗಮನಿಸುತ್ತಿದ್ದ ಸುರೇಖಾಗೂ ಮಗನೆಂದರೆ ತುಂಬಾ ಅಚ್ಚು ಮೆಚ್ಚು. ಅವನು ಕೇಳಿದ್ದಕ್ಕಾವುದಕ್ಕೂ ಇಲ್ಲ ಅಂದಿದ್ದೇ ಇಲ್ಲ. ತಾನು ದುಡಿದು ಸಂಪಾದಿಸುತ್ತಿದ್ದುದು                     ಕಡಿಮೆ ಪಗಾರವಾದರೂ ಮಗನಿಗೆ ಯಾವುದೇ ಕುಂದು ಕೊರತೆ ಬಾರದ ರೀತಿಯಲ್ಲಿ ನೋಡಿಕೊಂಡಲು. ಮುಂದೆ ಮಗ ಹತ್ತನೇ ತರಗತಿಯನ್ನು ಉನ್ನತ ಶ್ರೆಣಿಯಲ್ಲಿ ಪಾಸು ಮಾಡಿದಾಗ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾರಾದರೂ ಆಸ್ಪತ್ರೆಯಲ್ಲಿ ಅವಳ ಮಗನ ಬಗ್ಗೆ ಹೇಳಿ ಹೋಗಳಿದರಂತೂ ಅವಳು ತಾನು ನೆಲದ ಮೇಲೆ ಇದ್ದೆನೇಯೇ ಅನ್ನುವ ಪರೀಜ್ನಾನವೇ ಇಲ್ಲದ ರೀತಿಯಲ್ಲಿ ಓಡಾಡುತ್ತಿದ್ದಳು.

ಸಂದೇಶ ಮೆಟ್ರಿಕ್ ಮುಗಿಸಿ ಸಮೀಪದ ಸರ್ಕಾರಿ ಕಾಲೇಜನ್ನು ಸೇರಿದ. ಕಾಲೇಜಿನಲ್ಲಿ ಅವನಿಗೆ ಅವನದೇ ತರಗತಿಯ ರೇಣುಕಾ ಎನ್ನುವ ಹುಡುಗಿಯ ಪರೀಚಯವಾಯಿತು. ರೇಣುಕಾನು ಕೂಡ ಓದಿನಲ್ಲಿ ಇವನಷ್ಟೇ ಚುರುಕಾಗಿದ್ದಳು. ಇಬ್ಬರೂ ಒಟ್ಟಿಗೆ ಜೊತೆಯಲ್ಲಿ ಲೈಬ್ರರಿಗೆ ಹೋಗಿ ಓದುವುದು, ತರಗತಿಯ ಪಾಠದ ಬಗ್ಗೆ ಚರ್ಚಿಸುವುದನ್ನು ಮಾಡುತಿದ್ದರು. ರೇಣುಕಾ ರಶಾಯನ ಶಾಸ್ತ್ರ, ಜೀವಶಾಸ್ತ್ರದಲ್ಲಿ ಅವನಿಗಿಂತ ಉತ್ತಮವಾಗಿದ್ದರೆ, ಆತ ಗಣಿತ ಮತ್ತು ಬೌತಶಾಸ್ತ್ರಗಳಲ್ಲಿ ಚೆನ್ನಾಗಿದ್ದ. ಹೀಗಾಗಿ ಅವರಿಬ್ಬರೂ ಕೂಡಿ ಚರ್ಚಿಸಿ ರಚಿಸಿದ ಟಿಪ್ಪಣಿಗಳು ಇಬ್ಬರಿಗೂ ಉಪಯುಕ್ತವಾಗಿದ್ದವು. ಮುಂದೆ ಇವರಿಬ್ಬರ ಪರೀಚಯ ಸ್ನೇಹಕ್ಕೆ ತಿರುಗಿ ಒಬ್ಬರಿಗೊಬ್ಬರು ಬಿಟ್ಟಿರದ ಸ್ಥಿತಿ ತಲುಪಿ ಪ್ರೀತಿಯತ್ತ ಮುಖ ಮಾಡಿದ್ದರೂ್, ತಮ್ಮ ತಮ್ಮ ದ್ಯೇಯಕ್ಕೆ ಮಹತ್ವವನ್ನು ನೀಡಿದ್ದರಿಂದ ಅವರು ಆ ಬಗ್ಗೆ ಚರ್ಚಿಸಿರಲಿಲ್ಲ. ಇಬ್ಬರೂ ಪಿಯೂಸಿಯಲ್ಲಿ ಚೆನ್ನಾಗಿ ಓದಿ ಉನ್ನತ ಶ್ರೇಣಿಯಲ್ಲಿಯೇ ಪಾಸಾದರು. ಸಂದೇಶನಿಗಿಂತ ರೇಣುಕಾ ಪಿಯೂಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದರೂ ಮುಂದೆ ಬಿ.ಎಸ್.ಸಿಯನ್ನು ಆರಿಸಿಕೊಂಡು ಅದೇ ಕಾಲೇಜಿನಲ್ಲಿ ಓದತೊಡಗಿದಳು. ಸಂದೇಶ ತಾನು ಇಂಜಿನಿಯರ್ ಆಗಬೇಕೆಂಬ ಕನಸು ಹೊತ್ತು ಸುರತ್ಕಲನ ಇಂಜಿನಿಯರಿಂಗ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡ. ಮಗನಿಗೆ ಇಂಜಿನಿಯರಿಂಗ್ ಸೀಟು ಸಿಕ್ಕಾಗ ಸುರೇಖಾಗೆ ಖುಸಿಯಾದರೂ ಅವನನ್ನು ಓದಿಸುವುದು ಹೇಗೆ ಎನ್ನುವುದೇ ಚಿಂತೆಯಾಗಿ ಕಾಡಿತು.

ಗಂಡ ಸತ್ತಾಗ ಸಿಕ್ಕ ಹಣ, ಮತ್ತು ಅದರ ಬಡ್ಡಿ ಹಾಗೂ ತಾನೂ ಕೂಡಿಟ್ಟ ಹಣ ಸೇರಿಸಿ ಹೇಗಾದರೂ ಮಾಡಿ ಎರಡು-ಮೂರು ವರ್ಷ ಓದಿಸಬಹುದು. ಆದರೆ ಮುಂದೆ ಏನು ಮಾಡುವುದು ಎನ್ನಿಸಿದಾಗ ಯಾರೋ ಅವಳಿಗೆ ಮಗನ ಓದಿಗಾಗಿ ಶೈಕ್ಷಣಿಕ ಸಾಲದ ಬಗ್ಗೆ ತಿಳಿಸಿದರು. ಅವಳು ಕೆಲಸ ಮಾಡುವ ವೈದ್ಯರೊಬ್ಬರು ಅವನ ಹೊಸ್ಟೇಲ್ ಖರ್ಚನ್ನು ತಾವು ವಹಿಸಿಕೊಳ್ಳುವುದಾಗಿಯೂ ಭರವಸೆ ಇತ್ತರು. ಅವರ ಮಗನ ಶೈಕ್ಷಣಿಕ ಸಾಲವನ್ನು ತಾವು ತಮಗೆ ಪರೀಚಯವಿರುವ ಬ್ಯಾಂಕಿನಲ್ಲಿ ಕೊಡಿಸುವುದಾಗಿ ಹೇಳಿ ಕೊಡಿಸಿದರು.

ಅಂತೂ ಸಂದೇಶ ಸುರತ್ಕಲನ ಇಂಜಿನಿಯರಿಂಗ ಕಾಲೇಜು ಸೇರಿದ. ರೇಣುಕಾ ಅವಳು ಪಿಯುಸಿ ಓದಿದ ಕಾಲೇಜನಲ್ಲಿ ಬಿ.ಎಸ್.ಸಿಯನ್ನು ಸೇರಿದಳು. ಇಬ್ಬರು ದೂರ ದೂರವಿದ್ದರೂ ತಮ್ಮ ತಮ್ಮಲ್ಲಿ ಪತ್ರ ವಿನೀಮಯವನ್ನು ಇಟ್ಟುಕೊಂಡಿದ್ದರು. ಸಂದೇಶ ಆಗಾಗ ಊರಿಗೆ ಬಂದಾಗ ಅವಳೊಂದಿಗೆ ಒಂದಿಷ್ಟು ವೇಳೆ ಕಳೆದು ಹೋಗುತ್ತಿದ್ದ. ಹಾಗೂ ಹೀಗೂ ಮಾಡಿ ಮೂರು ವರ್ಷ ಕಳೆದವು. ಅವಳು ಬಿ.ಎಸ್.ಸಿ ಮುಗಿಸಿ ಎಂ.ಎಸ್.ಸಿ ಮಾಡಲು ಬೆಂಗಳೂರನ್ನು ಸೇರಿದಳು. ಅದೇ ವೆಳೆಗೆ ಆಕೆಯ ಕೈಯಲ್ಲಿ ಒಂದು ಮೊಬೈಲ್ ಕೂಡ ಬಂದಿತ್ತು. ಆತನ ಕೈಯಲ್ಲಿ ಮೊಬಲ್ ಇಲ್ಲದಿದ್ದರೂ ಹೊರಗೆ ಹೋಗಿ ಸ್ವಲ್ಪ ಹೊತ್ತು ಅವಳ ಜೊತೆ ಪೋನನಲ್ಲಿ ಮಾತಾಡಿ ಬರುತ್ತಿದ್ದ. ಅವಳ ಎಂ.ಎಸ್.ಸಿ ಮುಗಿಯುವಷ್ಟರಲ್ಲಿ ಅವನಿಗೆ ಇಂಜಿನಿಯರಿಂಗ ಮುಗಿಯುವಷ್ಟರಲ್ಲೇ ಕೆಲಸ ಸಿಕ್ಕಿದುದ್ದರಿಂದ ಇಂಜಿನಿಯರಿಂಗ ಮೂಗಿಸಿದೊಡನೆಯೇ ಬೆಂಗಳೂರು ಸೇರಿದ. ಮಗನಿಗೆ ಓದುತ್ತಿರುವಾಗಲೇ ಕೆಲಸ ಸಿಕ್ಕಿದ್ದನ್ನು ಕೇಳಿ ತಿಳಿದ ಸುರೇಖಾನ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಲ್ಲರೊಂದಿಗೂ ಅದನ್ನು ಹೇಳಿಕೊಂಡು ಸಂತೋಷ ಪಟ್ಟಿದ್ದೇ ಪಟ್ಟಿದ್ದು.

ಸಂದೇಶನಿಂಗತೂ ಈಗ ಕೈತುಂಬ ಸಂಬಳ. ತಾನು ಸೇರಿದ ಕಂಪನಿಯಲ್ಲಿ ಅವನಿಗೆ ಕಾಯಂ ಕೂಡ ಆಗಿತ್ತು. ರೇಣುಕಾ ಕೂಡ (ಜೀವರಶಾಯನ ಶಾಸ್ತ್ರದಲ್ಲಿ) ಎಂ.ಎಸ್.ಸಿ ಮುಗಿಸಿ ಉತ್ತಮವಾದ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಳು. ಈಗೀಗ ಇಬ್ಬರೂ ಒಬ್ಬರನ್ನು ಒಬ್ಬರೂ ಬಿಟ್ಟಿರದ ಸ್ಥಿತಿ ತಲುಪಿದ್ದರೂ. ಈ ಮದ್ಯೆ ರೇಣುಕಾಗೆ ಮದುವೆಯ ಪ್ರಸ್ಥಾಪಗಳು ಬರ ಹತ್ತಿದವು. ರೇಣುಕಾಳ ತಂದೆ ಸಾಕಷ್ಟು ಶ್ರೀಮಂತರಲ್ಲದಿದ್ದರೂ, ಸಂದೇಶನ ಮನೆಯಷ್ಟು ಬಡವರಾಗಿರಲಿಲ್ಲ. ಹೇಗಾದರೂ ಮಾಡಿ ರೇಣುಕಾಳನ್ನು ಒಳ್ಳೆಯ ಸ್ಥಿತಿವಂತ ಹುಡುಗನಿಗೆ ಮದುವೆ ಮಾಡಿ ಕೊಟ್ಟರೆ, ಉಳಿದ ಇನ್ನೊಬ್ಬ ಮಗಳನ್ನು ಅದೇ ರೀತಿ ಮದುವೆ ಮಾಡಬಹುದು ಎನ್ನುವುದು ಅವರ ಅನಿಸಿಕೆ. ಮನಸ್ಸಲೇ ಪ್ರೀತಿ ಚಿಗುರಿದ್ದ ರೇಣುಕಾಗೆ ತಂದೆ ತರುತಿದ್ದ ಗಂಡುಗಳು ಇಷ್ಟವಾಗದೇ ಮದುವೆಯನ್ನು ದೂರ ತಳ್ಳುತಿದ್ದಳು. ತನ್ನ ಪ್ರೀತಿಯ ಬಗ್ಗೆ ಹೇಳದಿದ್ದರೂ ತನಗೆ ಬರುತ್ತಿರುವ ಗಂಡಗಳ ಬಗ್ಗೆ ಸಂದೇಶನಲ್ಲಿ ಆಗಾಗ ಹೇಳಿಕೊಳ್ಳುತಿದ್ದಳು.

ಅದೆಷ್ಟೇ ತಮ್ಮ ಪ್ರೀತಿಯನ್ನು ಮುಚ್ಚಿಡಲು ಪ್ರಯತ್ನಿಸಿದರೂ ಅದೂ ತುಂಬಾ ದಿನ ಮುಚ್ಚಿಟ್ಟುಕೊಳ್ಳುಲಾಗಲಿಲ್ಲ. ಒಂದು ಭಾನುವಾರ ಇಬ್ಬರೂ ಇಸ್ಕಾನ ದೇವಸ್ಥಾನಕ್ಕೆ ಹೋಗಿದ್ದಾಗ ರೇಣುಕಾಳ ಬ್ಯಾಗಲಿದ್ದ ಮೊಬೈಲ್ ಜಾರಿ ಕೆಳಗೆ ಬಿದ್ದುದು ರೇಣುಕಾಳ ಗಮನಕ್ಕು, ಸಂದೇಶನ ಗಮನಕ್ಕು ಬಾರಲಿಲ್ಲ. ಅವರ ಹಿಂದೆ ನಿಂತ ಆಕೆ ಮೊಬೈಲನ್ನು ಎತ್ತಿಕೊಂಡು, ಸಂದೇಶನಿಗೆ "ನಿಮ್ಮಾಕೆಯ ಮೊಬೈಲ್ ಕೆಳಗೆ ಬಿದ್ದಿತ್ತು, ತಗೊಳ್ಳಿ"ಎಂದು ಕೊಟ್ಟಳು.

ಅವಳು ಹಾಗೆ ಹೇಳಿದಾಗ, ರೇಣುಕಾ ಮತ್ತು ಸಂದೇಶನಿಗೆ ನಗೂ ತಡೆಯಲಾಗಲಿಲ್ಲ. ಇಬ್ಬರಲ್ಲೂ ಯಾಕೆ ಅವಳು ಹೇಳಿದ ಹಾಗೆ ಆಗಬಾರದು ಅನಿಸಿತು. ದೇವಸ್ಥಾನದಿಂದ ಹೊರಗೆ ಬಂದು ಹೊಟೇಲಿನಲ್ಲಿ ಟೀ ಕುಡಿಯುತ್ತಿದ್ದಾಗ ಆಕೆ ಹೇಳಿದ ಮಾತು ನೆನಪಿಗೆ ಬಂದು ರೇಣುಕಾಗೆ ನಗೆ ತಡೆಯಲು ಆಗದೇ ತನ್ನಷ್ಟಕ್ಕೆ ತಾನೇ ನಗುತ್ತಿದ್ದಳು. ಸಂದೇಶ ಏನೆಂದು ಕೇಳಿದಾಗ ದೇವಸ್ಥಾನದಲ್ಲಿ ಮೊಬೈಲ್ ಕೊಡುತ್ತಾ ಆಕೆ ಹೇಳಿದ "ನಿಮ್ಮಾಕೆಯ" ಎನ್ನುವ ಶಬ್ದವನ್ನು ಒತ್ತಿ ಒತ್ತಿ ಹೇಳಿದಾಗ, ಸಂದೇಶ "ಅದರಲ್ಲಿ ತಪ್ಪೇನಿದೆ, ಈಗ ಅಲ್ಲದಿದ್ದರೂ ಮುಂದೆ ಆಗಬಹುದಲ್ಲವೇ" ಅಂದ. ಆತ ಹಾಗೆ ಹೇಳಿದ್ದನ್ನು ಕೇಳಿ ಅವಳಿಗೂ ಸಂತೋಷವಾಯಿತು. ಅಂತೂ ಇಬ್ಬರಿಗೂ ಪರಸ್ಪರ ಮನಸ್ಸಿರುವುದು ಅರೀಕೆಯಾಯಿತು.

ಮೊದಮೊದಲು ತಿಂಗಳಿಗೊಮ್ಮೆ ಊರಿಗೆ ಹೋಗುತ್ತಿದ್ದ ಸಂದೇಶ ಕ್ರಮೇಣ ಎರಡು ತಿಂಗಳಿಗೊಮ್ಮೆಯಾಗಿ, ಮೂರು ತಿಂಗಳಿಗೊಮ್ಮೆಯಾಗಿ, ಈಗಿಗ ಏಳು ತಿಂಗಳಿಗೋ, ವರ್ಷಕ್ಕೋ ಒಮ್ಮೆ ಊರಿಗೆ ಹೋಗಿ ಬರುತ್ತಿದ್ದ. ರಜಾ ಇದ್ದರೂ ಕೆಲಸ ಇದೆ ಎಂದು ಅಮ್ಮನಿಗೆ ಸುಳ್ಳು ಹೇಳಿ ರೇಣುಕಾಳೊಂದಿಗೆ ಬೆಂಗಳೂರು ಸುತ್ತುತ್ತಾ, ಹರಟೆ ಹೊಡೆಯುತ್ತಾ ಕಾಲಕಳೆಯುತ್ತಿದ್ದ. ಅಮ್ಮನಿಗೂ ಕೂಡ ಮಗ ಕೆಲಸದ ನೀಮಿತ್ತ ಊರಿಗೆ ಬರುತ್ತಿಲ್ಲ ಎಂದು ತಿಳಿದಳು. ಇಲ್ಲಿ ಬಂದು ತನ್ನನ್ನು ನೋಡದಿದ್ದರೇನಂತೆ, ಅಲ್ಲೆ ಉಳಿದು ಬೆಳೆದರೆ ಸಾಕು ಎಂದು ಮನಸ್ಸಿನಲ್ಲಿಯೇ ಹರಿಸಿದಳು.

ಈ ಮದ್ಯೆ ಸಂದೇಶ ಒಂದೆರಡು ಬಾರಿ ಅಮೇರಿಕಾ, ಇಂಗ್ಲೆಂಡ ಎಂದು ವಿದೇಶ ಪ್ರಯಾಣ ಮಾಡಿ ಬಂದ. ಹಾಗೆ ಹೋಗಿ ಬರುವಾಗ ಅಮ್ಮನಿಗಾಗಿ ಏನನ್ನೂ ತರದಿದ್ದರೂ ರೇಣುಕಾಳಿಗಾಗಿ ಮರೆಯದೇ ಒಂದು ಮೊಬೈಲ್, ಸುಗಂಧ ದ್ರವ್ಯದ ಶಿಸೆ, ಸೌದರ್ಯವರ್ಧಕದ ಸಾಮಾನುಗಳನ್ನು ತಂದು ಕೊಡುತ್ತಿದ್ದ. ರೇಣುಕಾಳು ಮನೆಯಲ್ಲಿ ತಾನು ಮದುವೆಯಾದರೆ ಸಂದೇಶನನ್ನೆ ಎಂದು ಸರಾಸಾಗಾಟವಾಗಿ ಹೇಳಿ ಬಿಟ್ಟಳು. ಮೊದಮೊದಲು ಆಕೆಯ ಮನೆಯವರು ವಿರೋಧಿಸಿದ್ದರಿಂದ ಇಬ್ಬರು ಬೆಂಗಳೂರಿನಲ್ಲಿ ರಿಜಿಸ್ಟರ ಮದುವೆ ಮಡಿಕೊಂಡು ಒಟ್ಟಿಗೆ ವಾಸಿಸತೊಡಗಿದರು. ತಾನು ಮದುವೆಯಾದ ವಿಷಯವನ್ನು ಅಮ್ಮನಿಗೆ ಹೇಳದೇ ಮುಚ್ಚಿಟ್ಟ ಸಂದೇಶ. ಆಮೇಲೆ ಅವರಿವರ ಬಾಯಿಂದ ಅಮ್ಮನಿಗೆ ಸುದ್ಧಿ ಮುಟ್ಟಿದಾಗ, ಅಮ್ಮ ಅತ್ತು ಕೇಳಿದರೆ ಹೌದು ಎಂದು ಅಷ್ಟು ಹೇಳಿ ಸುಮ್ಮನಾದ. ಸುರೇಖಾಳಿಗೆ ಹೇಗೂ ಮಗ ತನಗೆ ಹೇಳದೇ ಮದುವೆಯಾಗಿದ್ದಾನೆ ಸುಖವಾಗಿದ್ದರೆ ಸಾಕು ಎನಿಸಿತು.

ತನ್ನ ಮದುವೆಯಾದ ವಿಷಯ ಅಮ್ಮನಿಗೆ ತಿಳಿದಾಗ ಅಮ್ಮ ತನ್ನ ಮದುವೆಯನ್ನು ಒಪ್ಪಲಾರಳು ಎಂದು ತಿಳಿದ ಸಂದೇಶ ತಾನು ಊರಿಗೆ ಹೋಗುವುದನ್ನೇ ನಿಲ್ಲಿಸಿದ. ತನ್ನ ಮನೆ ಹಾಗೂ ಬಡತನದ ಸ್ಥಿತಿಯಲ್ಲಿದ್ದ ಅಮ್ಮನ ಬಗ್ಗೆ ಜಿಗುಪ್ಸೆ ಜಾಸ್ತಿಯಾಗಿತ್ತು. ಈಗೀಗ ಅಭಿವ್ರದ್ದಿ ಹೊಂದುತ್ತಿರುವ ಅವನ ಶ್ರೇಯಸ್ಸನ್ನು ನೋಡಿ, ಹೆಂಡತಿಯ ಮನೆಯವರು ಅವನಿಗೆ ಹತ್ತಿರವಾಗತೊಡಗಿದರೂ. ತನ್ನ ಮನೆಯ ಬಡತನಕ್ಕಿಂತ ಹೆಂಡತಿಯ ಮನೆಯ ಸಿರಿತನ ಅವನಿಗೆ ಹೆಚ್ಚು ರುಚಿಸಿತು.

ಮತ್ತೊಮ್ಮೆ ವಿದೇಶಕ್ಕೆ ಹೋಗುವುದು ಬಂದಾಗ ಹೆಂಡತಿಯನ್ನು ಜೊತೆಯಲ್ಲೇ ಕರೆದುಕೊಂಡು ಹೋದ. ಬರುವಾಗ ಹೆಂಡತಿಯ ಮನೆಯವರಿಗೆ ಅದು ಇದೂ ಅಂತ ಹಲವು ಕಾಣಿಕೆಗಳನ್ನು ತಂದು ನೀಡಿದ. ಈ ನಡುವೆ ಅವನಿಗೆ ಒಂದು ಮಗುವಾಯಿತು. ಅಮ್ಮನಿಗೆ ಆ ವಿಷಯ ತಿಳಿದು ಖುಷಿ ಎನಿಸಿತು. ಮಗ ಮನೆಗೆ ಬಾರದಿದ್ದರೇನಂತೆ ಖುಸಿಯಾಗಿದ್ದಾನಲ್ಲ ಎಂದು ತನ್ನಷ್ಟಕ್ಕೆ ತಾನು ಸಂತೋಷ ಪಟ್ಟಳು. ಆತನ ಹೆಂಡತಿಯ ತಂಗಿಯ ಮದುವೆ ನಿಶ್ಚಯವಾದಾಗ, ತನ್ನ ಹೆಂಡತಿಯ ತಂಗಿಯ ಮದುವೆಗಾಗಿ ಊರಿಗೆ ಬರಲಿರುವ ಮಗ ತನ್ನ ಮನೆಗೆ ಬರಬಹುದು ಎಂದು ಹಂಬಲಿಸಿ ಕಾದಳು. ಆದರೆ ಆತ ಹೆಂಡತಿಯ ಮನೆಗೆ ಬಂದವನು  ಮದುವೆ ಮುಗಿಸಿ ಹೆಂಡತಿಯ ಮನೆಯಿಂದಲೇ ವಾಪಸ್ ಬೆಂಗಳೂರಿಗೆ ಹೋದಾಗ, ಇನ್ನೂ ಮತ್ತೆ ಮಗ ತನ್ನನ್ನು ನೋಡಲು ಬರುವುದು ಕನಸೇ ಎನಿಸಿತು ಅವಳಿಗೆ.

ಮಗ ಇನ್ನೂ ತನ್ನನ್ನು ನೋಡಲು ಬರಲಾರ ಎಂದು ಮಾನಸಿಕ ಚಿಂತೆಗೆ ಒಳಗಾದ ಸುರೇಖಾ ದಿನೇ ದಿನೇ ಕ್ರಶವಾಗಹತ್ತಿದಳು. ವಯಸ್ಸು ಕೂಡ ಜಾಸ್ತಿಯಾಗಿ ತನ್ನ ಆರೋಗ್ಯದ ಸ್ಥೀಮಿತವನ್ನು ಕಳೆದುಕೊಳ್ಳಲಾರಂಭಿಸಿದಳು. ಮಗ ಬರಬಹುದೇನೋ ಎಂದು ಕನವರಿಸಿದಳು. ಆದರೆ ಸುಖದ ಸಾಗರದಲ್ಲಿ ತೇಲಾಡುತ್ತಿರುವ ಮಗನಿಗೆ ಈಗ ದು:ಖದಲ್ಲಿರುವ ತಾಯಿಯ ನೆನಪಾಗಲಿಲ್ಲ. ಅವನ ಲಕ್ಷವೆಲ್ಲ ಬೆಳೆಯುತ್ತಿರುವ ಅವನ ಮಗನ ಬಗ್ಗೆಯೇ ಹೊರತು ಸೊರಗುತ್ತಿರುವ ತಾಯಿಯ ಬಗ್ಗೆಯಲ್ಲ. ಊಟ ತಿಂಡಿ ನಿದ್ದೆ ಸರಿಯಿರದ ಕಾರಣ ಅವಳ ಆರೋಗ್ಯಸ್ಥಿತಿ ತುಂಬಾ ಹದಗೆಟ್ಟಿತ್ತು. ದೈಹಿಕ ಸ್ಥೀಮಿತವನ್ನು ಕಳೆದುಕೊಂಡ ಸುರೇಖಾಳನ್ನು ಅವಳು ಕೆಲಸಮಾಡುವ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅವಳು ಬದುಕಿಸಿಕೊಳ್ಳಲಾಗಲಿಲ್ಲ. ಅವಳು ತೀರಿಹೋದ ವಿಷಯವನ್ನು ಮುಖ್ಯವೈದ್ಯರು ತಮ್ಮ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಮಾತನಾಡಿ, ಸಂದೇಶನ ಮಾವನಿಗೆ ಹೇಳಿ ಕಳಿಸಿದರು. ಸಂದೇಶನ ಮಾವನಿಂದ ಸಂದೇಶನಿಗೆ ಕರೆ ಹೋಯ್ತು. ಇಲ್ಲಿಯವರೆಗೆ ಬಾರದ ಸಂದೇಶ ಊರಿಗೆ ಬಂದ. ತಾಯಿಯ ಅಂತ್ಯಕ್ರೀಯೆಯ ಶಾಸ್ತ್ರ ಮಾಡಿ ಮತ್ತೆ ಬೆಂಗಳೂರಿಗೆ ನಡೆದ.

ಹತ್ತಿಪ್ಪತ್ತು ವರ್ಷ ಬೆಂಗಳೂರಲ್ಲಿ ದುಡಿದ ಸಂದೇಶನಿಗೆ ಬೆಂಗಳೂರು ಈಗೀಗ ಬೇಸರ ಬರಲಾರಂಭಿಸಿತು.ಇನ್ನು ದುಡಿದದ್ದು ಸಾಕು ಎನಿಸಿ ಊರಿಗೆ ಹೋಗುವ ಮನಸ್ಸಾಯಿತು. ಹೇಗಿದ್ದರೂ ಊರ ಮುಖ್ಯ ರಸ್ಥೆಯಲ್ಲಿರುವ ತಾವಿದ್ದ ಮನೆಯ ಜಾಗದ ನೆನಪಾಯಿತು. ಅಲ್ಲಿಯೇ ಮನೆ ಕಟ್ಟಿದರೆ ಹೇಗೆ ಎನಿಸಿತು. ಮಾವನೊಂದಿಗೂ ವಿಷಯ ಪ್ರಸ್ತಾಪಿಸಿದ. ಮಾವನಿಗೂ ಅದು ಹೌದೆನಿಸಿ ಒಪ್ಪಿಗೆಯಿತ್ತ. ಅಲ್ಲಿದ ಎರಡು ಪಕ್ಕೆಯ ಮನೆ ಹೋಗಿ ಎರಡಂತಸ್ತಿನ ಭವ್ಯವಾದ ಮನೆ ನಿರ್ಮಾಣಗೊಂಡಿತು. ಮನೆಯ ಮುಂದೆ ಮನೆಯ ಹೆಸರನ್ನು ಸೂಚಿಸುವ ದೊಡ್ಡದಾದ ಫಲಕವನ್ನು ನೇತು ಹಾಕಲಾಗಿತ್ತು. ಆ ಫಲಕದಲ್ಲಿ ದೊಡ್ಡದಾಗಿ ಬರೆಯಲಾಗಿತ್ತು "ಸುರೇಖಾ ನಿಲಯ" ಎಂದು. ನೋಡಿದ ಜನ ನಕ್ಕರು, ಸಾಯುವರೆಗೂ ನೆನೆಯದ ಹೆಸರು, ಸತ್ತ ಮೇಲೆಯಾದರೂ ನೆನಪಿಗೆ ಬಂತಲ್ಲ ಎಂದು.

ಮಂಜು ಹಿಚ್ಕಡ್

Friday, September 5, 2014

ಶಿಕ್ಷಕ!

ಅಜ್ನಾನಿಗಳಲಿ, ಸುಜ್ನಾನವ ತುಂಬಿ
ದಾರಿ ತೋರುವೆ, ಬಂದರೆ ನಿನ್ನ ನಂಬಿ!

ತಪ್ಪಿರಲಿ, ಒಪ್ಪಿರಲಿ, ಎಲ್ಲರನು ಮನ್ನಿಸಿ
ಒಳಿತಾಗಲಿ ಎಂದು, ಎಂದೆಂದಿಗೂ ಹರಿಸಿ!

ದಾರಿ ತೋರುವೆ ನೀ, ದಿಕ್ಸೂಚಿಯಂತೆ,
ಬಾಳ ಬೆಳಗಿಸುವೆ ನೀ, ಹಣತೆಯಂತೆ!

ಬಾಲಕ, ಪಾಲಕರ ನಡುವೆ ಸ್ನೇಹಸೇತುವಾಗಿ,
ಸವಿಸುವೆ ಜೀವನವ ಶಿಕ್ಷಣಕ್ಕಾಗಿ!

ಕಷ್ಟವಿರಲಿ, ನಷ್ಟವಿರಲಿ, ನಗುವ ವಧನ ನಿನ್ನದು,
ನೋವೇ ಇರಲಿ, ನಲಿವೇ ಇರಲಿ, ಶಾಲೆ ಮಾತ್ರ ತಪ್ಪದು!

ನಗಿಸುವೆ ನೀ ನಿನ್ನ ನೋವ ಮರೆತು,
ಹರಸಿ, ಬೆಳೆಸುವೆ ನೀನು ಎಲ್ಲರನು ಅರಿತು!

ವಿದ್ಯಾರ್ಥಿಗಳಿಗೆಲ್ಲ ನೀ ಕಾಮಧೇನು,
ನಿನಗಿಂತ ಮಿಗಿಲಾದ ದೇವರುಂಟೇನು?


--ಮಂಜು ಹಿಚ್ಕಡ್ 

Sunday, August 31, 2014

ಬೀದಿ ದೀಪ

ಮಧ್ಯಾಹ್ನವಾದರೂ ಉರಿಯುವುದಿಲ್ಲಿ, ಬೀದಿ ದೀಪ
ಹೇಳಿ ಕೊಳ್ಳಬೇಕಾಗಿದೆ, ನಮಗೆ ನಾವೇ ಸಂತಾಪ.
ಹುಣ್ಣಿಮೆಯ ಬೆಳದಿಂಗಳೊಡನೆ, ರಸ್ತೆ ದೀಪಗಳ ಸುಗ್ಗಿ
ಅಮವಾಸ್ಯೆ ಬಂದರೆ ಹುಡುಕಬೇಕು ರಸ್ತೆ, ತಗ್ಗಿ ಬಗ್ಗಿ!

--ಮಂಜು ಹಿಚ್ಕಡ್

Thursday, August 21, 2014

ತಿಮ್ಮನ ಹುಚ್ಚು!

[೧೮-ಅಗಷ್ಟ-೨೦೧೪ ರ ಪಂಜು ವಾರ ಪತ್ರಿಕೆಯಲ್ಲಿ ಪ್ರಕಟವಾದ ಕಥೆ ’ತಿಮ್ಮನ ಹುಚ್ಚು!’ http://www.panjumagazine.com/?p=8332]

ರಾತ್ರಿ ಪೂರ್ತಿ ಹಿಮ್ಮೇಳದಲ್ಲಿ ಕುಳಿತು ಪೇನುಪೆಟ್ಟಿಗೆ ನುಡಿಸುತ್ತಾ ಕುಳಿತ ತಿಮ್ಮನಿಗೆ ಬೆಳಿಗ್ಗೆಯಾಗುತ್ತಿದ್ದಂತೆ ನಿದ್ದೆಯೋ ನಿದ್ದೆ. ಯಕ್ಷಗಾನ ಮುಗಿಸಿ ಬಜನೆಕಟ್ಟೆಯ ಮೇಲೆ ಕುಳಿತ ತಿಮ್ಮನಿಗೆ ಅಲ್ಲೇ ನಿದ್ದೆ ಹತ್ತಿತು. ಚಕ್ರಾಸನ ಹಾಕಿ ಕುಳಿತಿದ್ದ ಆತ ನಿದ್ದೆಯ ಗುಂಗಿನಲ್ಲಿ ಶವಾಸನದ ರೀತಿಯಲ್ಲಿ ಮಲಗಿದ್ದ. ವೇಷದಾರಿಗಳು ಬಣ್ಣ ಕಳಚಿ ಮನೆಗೆ ಹೋಗುವಾಗ ಮಾತನ್ನಾಡುತ್ತಿದ್ದುದು, ಯಕ್ಷಗಾನದ ಚಪ್ಪರ ಬಿಚ್ಚಲು ಬಂದವರು ಗುಸು ಗುಸು ಮಾತನ್ನಾಡುತ್ತಿದ್ದುದು ನಿದ್ದೆಯ ಮಂಪರಿನಲ್ಲಿದ್ದ ಅವನ ಕಿವಿಗೆ ಬಿಳುತ್ತಿದ್ದವಾದರೂ ಅವೆಲ್ಲ ಕನಸಿನಲ್ಲಿ ನಡೆದಂತೆ ಭಾಸವಾಗುತ್ತಿದ್ದವು. ನಿದ್ದೆಯ ಸೆಳೆತದಲ್ಲಿ ಮೈಮರೆತ ಆತನಿಗೆ ಹೊತ್ತು ಕಳೆದು, ಸೂರ್ಯ ನೆತ್ತಿಯನ್ನೇರಿದ್ದು, ಹೊಟ್ಟೆ ತಾಳ ಹಾಕುತ್ತಿದ್ದುದು ಅರಿಕೆಯಾಗಲಿಲ್ಲ. ಹೀಗೆ ಮಲಗಿದ್ದರೆ ರಾತ್ರಿಯಾಗುವವರೆಗೂ ಮಲಗಿರುತ್ತಿದ್ದನೇನೋ ಆದರೆ ಆ ಊರಿನ ಪಟೇಲ ಸುಬ್ರಾಯ ನಾಯ್ಕರು ಬಿಡಬೇಕಲ್ಲ.

ಸುಬ್ರಾಯ ನಾಯ್ಕರ ಮನೆಯ ಮುಂದಿನ ತೋಟದಲ್ಲಿದ್ದ ನಾಲ್ಕಾರು ತೆಂಗಿನ ಮರಗಳ ಕಾಯಿ ಬೆಳೆದು ನಿಂತಿದ್ದವು. ಒಂದೆರಡು ಮರದ ಕಾಯಿಗಳು ಆಗಲೇ ಬೀಳ ತೊಡಗಿದ್ದವು. ಒಂದೆರಡು ಮರದ ತೆಂಗಿನ ಹೆಡೆಗಳು ಕೂಡ ಒಣಗಿನಿಂತಿದ್ದವು. ಇನ್ನೆರಡು ವಾರದಲ್ಲಿ ಮಕ್ಕಳು, ಮೊಮ್ಮಕ್ಕಳು ಬೇಸಿಗೆ ರಜೆ ಕಳೆಯಲು ಊರಿಗೆ ಬರುವವರಿದ್ದರು. ಅವರು ಬರುವುದರೊಳಗೆ ಬೆಳೆದ ಕಾಯಿಗಳನ್ನು, ಒಣಗಿದ ಹೆಡೆಗಳನ್ನು ತೆಗೆಸಿ ಬಿಡಬೇಕೆಂದು ನಿಶ್ಚಯಿಸಿ ಸುಬ್ರಾಯ ನಾಯ್ಕರು ಮೂರ್ನಾಲ್ಕು ಬಾರಿ ತಿಮ್ಮನಿಗೆ ಹೇಳಿ ಕಳಿಸಿದ್ದರು. ಎರಡು ದಿನದ ಹಿಂದೆ ಅವರ ಮನೆಯವರೆಗೂ ಸ್ವತಃ ಅವರೇ ಹೋಗಿ ತಿಮ್ಮನ ತಾಯಿಯಲ್ಲಿ, "ನಿನ್ನ ಮಗ ಬಂದರೆ, ಮನೆಯ ಹತ್ತಿರ ಕಳಿಸಿಕೊಡು" ಎಂದು ಕೂಡ ಹೇಳಿ ಬಂದಿದ್ದರು. ಒಂದು ವಾರದಿಂದ ತಿಮ್ಮನಿಗಾಗಿ ಪ್ರಯತ್ನಿಸುತ್ತಿದ್ದರೂ ತಿಮ್ಮ ಮಾತ್ರ ಕೈಗೆ ಸಿಗುತ್ತಿರಲಿಲ್ಲ. ಈ ಯಕ್ಷಗಾನದ ಸಮಯದಲ್ಲಿ ತಿಮ್ಮನನ್ನು ಹಿಡಿದಿಟ್ಟುಕೊಳ್ಳುವುದೇ ಕಷ್ಟ. ಯಾವಾಗ, ಯಾವ ಊರಿನಲ್ಲಿ, ಏನು ಮಾಡುತ್ತಿರುತ್ತಾನೇ ಎನ್ನುವುದೇ ತಿಳಿಯುವುದಿಲ್ಲ. ಎಲ್ಲಿ ಯಕ್ಷಗಾನವಿರತ್ತದೋ ಆ ಊರಿನಲ್ಲಿ ತಿಮ್ಮನಿರುತ್ತಾನೆ ಎನ್ನುವುದು ಈಗೀಗ ಎಲ್ಲರಿಗೂ ಕಂಡು ತಿಳಿದ ವಿಷಯ. ಈ ವಿಷಯ ಸುಬ್ರಾಯ ನಾಯ್ಕರಿಗೂ ಕೂಡ ತಿಳಿದು ಹೋಗಿತ್ತು. ಹಾಗಾಗಿಯೇ ತಿಮ್ಮನನ್ನು ಹುಡುಕಿ ಅಲ್ಲಿಯವರೆಗೆ ಬಂದಿದ್ದು.

ತಿಮ್ಮನಿಗೆ ಇರೋದು ಎರಡೇ ಎರಡು ಹವ್ಯಾಸ. ಒಂದು ತೆಂಗಿನ ಮರ ಹತ್ತುವುದು, ಇನ್ನೊಂದು ಯಕ್ಷಗಾನ ನೋಡುವುದು. ಅದನ್ನು ತಿಮ್ಮನ ವಿಷಯದಲ್ಲಿ ಹವ್ಯಾಸ ಅನ್ನುವುದಕ್ಕಿಂತ ಉದ್ಯೋಗ ಎನ್ನುವುದೇ ವಾಸಿ. ಯಾಕಂದರೆ ಅವೆರಡನ್ನು ಬಿಟ್ಟು ತಿಮ್ಮ ಮತ್ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಅದರಲ್ಲೂ ಯಕ್ಷಗಾನ ಅಂದರೆ ಮುಗಿದೇ ಹೋಯ್ತು ಅದನ್ನು ಎಲ್ಲಿಯೂ ಬಿಡುತ್ತಿರಲಿಲ್ಲ. ಮೊದ ಮೊದಲು ಯಕ್ಷಗಾನ ನೋಡಲು ಹೋದವನು ವೇದಿಕೆಯ ಮುಂಬಾಗದಲ್ಲಿ ಕುಳಿತು ಯಕ್ಷಗಾನ ನೋಡುತಿದ್ದ. ಕ್ರಮೇಣ ಕಾಲ ಕಳೆಯುತ್ತಾ ಹೋದಂತೆ ಯಕ್ಷಗಾನದಲ್ಲಿ ಪಾತ್ರ ಮಾಡುವ ಕಲಾವಿದರನ್ನು ಪರಿಚಯ ಮಾಡಿಕೊಂಡ. ಹಾಗೆ ಪರಿಚಯವಾದವರಿಂದ ಮುಂದಿನ ಯಕ್ಷಗಾನ ಮತ್ತು ಅಲ್ಲಿ ನಡೆಯುವ ಪ್ರಸಂಗವನ್ನು ತಿಳಿದುಕೊಂಡು ಅಲ್ಲಿಗೂ ಹೋಗುತ್ತಿದ್ದ. ಮುಂದೆ ಕೆಲವು ದಿನಗಳ ನಂತರ ಆತ ವೇದಿಕೆಯ ಮುಂಬಾಗದಲ್ಲಿ ಕುಳಿತು ಕೊಳ್ಳುವುದನ್ನು ಬಿಟ್ಟು ಬಿಟ್ಟು, ವೇದಿಕೆಯ ಮೇಲಿನ ಹಿಮ್ಮೇಳದವರೊಂದಿಗೆ ಹೋಗಿ ಕುಳಿತುಕೊಳ್ಳಲು ಪ್ರಾರಂಬಿಸಿದ. ಒಂದೆರಡು ಬಾರಿ ಸುಮ್ಮನೆ ಹಿಂದೆ ಕುಳಿತ ಅವನಿಗೆ ಭಾಗವತರು ಸುಮ್ಮನೆ ಕುಳ್ಳುವ ಬದಲು ಕೈಗೆ ಪೇನು ಪೆಟ್ಟಿಗೆ ಕೊಟ್ಟು ಕುಳ್ಳಿಸಿದರು. ಈಗೀಗಂತೂ ಅವನಿಗೆ ಅದೇ ಕೆಲಸ. ಯಕ್ಷಗಾನಕ್ಕೆ ಹೋಗುವುದು, ಅಲ್ಲಿ ಹಿಮ್ಮೇಳದವರಂತೆ ಬಿಳಿಯ ಅಂಗಿ, ಬಿಳಿಯ ಪಂಚೆ, ತಲೆಗೆ ಕೇಸರಿಯ ರುಮಾಲು ಸುತ್ತಿ ಪೇನು ಪೆಟ್ಟಿಗೆ ಹಿಡಿದು ಕುಳಿತು ಕೊಳ್ಳುವುದು. ಇದು ಅವನ ಉಚಿತ ಸೇವೆಯೂ ಕೂಡ. ಆ ಕೆಲಸಕ್ಕಾಗಿ ಆತ ಯಾರಿಂದಲೂ ಏನನ್ನೂ ಬಯಸ್ಸುತಿರಲಿಲ್ಲ.

ರಾತ್ರಿ ಪೂರ್ತಿ ಯಕ್ಷಗಾನದಲ್ಲಿ ಪೇನು ಪೆಟ್ಟಿಗೆ ನುಡಿಸಿ, ಆ ಊರಲ್ಲೇ ಎಚ್ಚರವಾಗುವವರೆಗೆ ಮಲಗಿ. ಎದ್ದ ಮೇಲೆ ಆ ಊರಲ್ಲಿ ಯಾರಾದರೂ ಕೇಳಿದರೆ ಅವರ ಮನೆಯ ತೆಂಗಿನ ಮರ ಹತ್ತಿ ಮರದಿಂದ ಕಾಯಿ ತೆಗೆದುಕೊಟ್ಟು, ಸಾದ್ಯವಾದರೆ ಮರ ಹತ್ತಿದವರ ಮನೆಯಲ್ಲೇ ಊಟ ತಿಂಡಿ ಮುಗಿಸಿ, ಅವರು ಕೊಟ್ಟ ಹಣವನ್ನು ಜೇಬಿಗೆ ತುರುಕಿ ಮುಂದಿನ ಊರಿಗೆ ಹೊರಡುತ್ತಿದ್ದ. ಮತ್ತೆ ಆ ಊರಿನಲ್ಲಿ ನಡೆಯಲಿರುವ ಯಕ್ಷಗಾನ ನೋಡಲು. ಹಾಗೆ ಊರಿಂದ ಊರಿಗೆ ಹೋಗುವಾಗ ನಿದ್ದೆ ಆದರೆ ಆಯಿತು, ಇಲ್ಲ ಅಂದರೆ ಇಲ್ಲ. ಒಮ್ಮೊಮ್ಮೆ ನಿದ್ದೆ ಆವರಿಸಿದಾಗ ಎಲ್ಲಿ ಜಾಗ ಸಿಗತ್ತೋ ಅಲ್ಲಿ ಮಲಗಿ ಬಿಡುತ್ತಿದ್ದ. ಅದು ಮರದ ಬುಡವಿರಬಹುದು, ಬಸ್ ನಿಲ್ದಾಣವಿರಬಹುದು ಅಥವಾ ಯಾವುದೋ ಶಾಲೆಯ ಆವರಣವಿರಬಹುದು, ಇಲ್ಲಾ ಯಕ್ಷಗಾನ ಬಯಲಾಟ ನಡೆದ ಸ್ಥಳದ ಸಮೀಪವೇ ನೆರಳಿರುವ ಇನ್ನಾವುದೇ ಸ್ಥಳವಿರಬಹುದು. ಆ ಸಮಯದಲ್ಲಿ ಅವನಿಗೆ ಸ್ಥಳ ಮುಖ್ಯವಲ್ಲ, ನಿದ್ದೆ ಮುಖ್ಯ. ಯಾರಾದರೂ ಮರ ಹತ್ತಲು ಹೇಳುವವರನ್ನು ಬಿಟ್ಟರೆ ಬೇರ್ಯಾರು ತಿಮ್ಮನನ್ನು ನಿದ್ದೆಯಿಂದ ಎಬ್ಬಿಸುವವರು ಇರಲಿಲ್ಲ. ಅದು ಅಲ್ಲೊಬ್ಬರು, ಇಲ್ಲೊಬ್ಬರು ಮಾತ್ರ. ಹಾಗೆ ಬಂದವರಲ್ಲಿ ಇಂದು ಬಂದ ಸುಬ್ರಾಯ ನಾಯ್ಕರು ಒಬ್ಬರು ಕೂಡ. ಬಹುಷಃ ಮರ ಹತ್ತುವ ಕೆಲಸವಿಲ್ಲದಿದ್ದರೆ ಅವರು ಕೂಡ ಅಲ್ಲಿಗೆ ಬರುತ್ತಿರಲಿಲ್ಲವೇನೋ?

ಸುಬ್ರಾಯ ನಾಯ್ಕರು ಬಂದು "ಏ ತಿಮ್ಮಾ, ಏಳೋ. ಎಷ್ಟು ಹೊತ್ತು ಅಂತ ಮಲಗರ್ತಿಯಾ ಏಳೋ" ಎಂದು ಕೂಗಿದಾಗ, ನಿದ್ದೆಯ ಗುಂಗಿನಲ್ಲಿದ್ದ ತಿಮ್ಮನಿಗೆ ನಿನ್ನೆಯ ಗದಾಯುದ್ಧ ಪ್ರಸಂಗದಲ್ಲಿ, ಕೌರವ ವೈಸಂಪಾಯನ ಕೆರೆಯಲ್ಲಿ ಮುಳುಗಿದ್ದಾಗ, ಭೀಮ ಕೌರವನನ್ನು ಹೀಯಾಳಿಸುತ್ತಾ "ಎಲವೋ ದುರ್ಯೋಧನ ಏಳೋ" ಎಂದು ಕೂಗಿ ಕರೆದಂತೆನಿಸಿತು. ಒಮ್ಮೆ "ಹೂಂ" ಎಂದು ಮತ್ತೆ ನಿದ್ದೆಗೆ ಜಾರಿದ ತಿಮ್ಮ.

"ಏನೋ ತಿಮ್ಮಾ ಇನ್ನೂ ಮಲಗೇ ಇದ್ದಿಯಾ ಮದ್ಯಾಹ್ನ ಆಯ್ತಲ್ಲೋ, ಏಳೋ" ಎಂದು ಮತ್ತೊಮ್ಮೆ ನಾಯ್ಕರು ಕೂಗಿದಾಗ ತಿಮ್ಮನಿಗೆ ಯಾರೋ ತನ್ನನ್ನು ಕರೆಯುತ್ತಿದ್ದಾರೆ ಎಂದನಿಸಿ, ಎದ್ದು ನೋಡಿದ. ಎದುರಿಗೆ ಸುಬ್ರಾಯ ನಾಯ್ಕರು ನಿಂತಿದ್ದನ್ನು ನೋಡಿ ಗಡಿಬಿಡಿಯಿಂದ ಎದ್ದು "ನಮಸ್ಕಾರ ನಾಯ್ಕರೇ" ಎಂದ.

"ಏನಪ್ಪಾ, ತಿಮ್ಮ ಮಧ್ಯಾಹ್ನ ಆಯ್ತಲ್ಲೋ, ಇನ್ನೂ ಮಲಗೇ ಇದ್ದಿಯಾ, ನಿನಗಾಗಿ ಎಷ್ಟು ಸಾರಿ ಹೇಳಿ ಕಳಿಸಿದೆ ಗೊತ್ತಾ, ನೀನು ನೋಡಿದ್ರೆ ಸಿಗೋದೇ ಇಲ್ಲಾ ಅಂತಿಯಾ"

"ಹೌದಾ ನಾಯ್ಕರೇ? ಏನಾಗ್ಬೇಕಿತ್ತು, ಏನಾದ್ರೂ ಮರ ಹತ್ತೋ ಕೆಲಸ ಇತ್ತೇ?" ಎಂದು ಕೇಳಿದ ತಿಮ್ಮ. ತಿಮ್ಮನಿಗೆ ಗೊತ್ತಿಲ್ಲವೇ ಅವನನ್ನು ಕರೆಯಲು ಬರುವವರೆಲ್ಲ ಆ ಕೆಲಸಕ್ಕೆ ತನ್ನನ್ನು ಕರೆಯುವುದೆಂದು.

"ಹೌದೋ ಮಾರಾಯ, ಐದಾರು ಮರಕ್ಕೆ ಕಾಯಿ ಒಣಗಿ ಹೋಗಿದೆ, ಸ್ವಲ್ಪ ಬಂದು ಕಾಯಿ ಕೊಯ್ದು ಕೊಟ್ಟು ಹೋದರೆ ನಿನ್ನಿಂದ ಉಪಯೋಗವಾಗುತ್ತದೆ" ಎಂದರು ನಾಯ್ಕರು.

"ಆಯ್ತ್ರಾ ನಾಯ್ಕರೆ, ನಡಿರಿ ಹಂಗಾರೆ" ಎಂದು ಸುಬ್ರಾಯ ನಾಯ್ಕರನ್ನು ಹಿಂಬಾಲಿಸಿದ ತಿಮ್ಮ. ಗಂಟೆ ಆಗಲೇ ಹನ್ನೆರಡು ದಾಟಿ ಒಂದರ ಸಮೀಪ ಬಂದಿತ್ತು. ಬೆಳಿಗ್ಗೆಯಿಂದ ಏನು ತಿನ್ನದ ತಿಮ್ಮನಿಗೆ ಹಸಿವೆಯಾದಂತೆ ಅನ್ನಿಸಿತು. ಹೇಗೂ ಇವತ್ತಿನ ಊಟ ಸುಬ್ರಾಯ ನಾಯ್ಕರ ಮನೆಯಲ್ಲೇ ಎಂದನಿಸಿ ಮನಸ್ಸಿಗೆ ಸ್ವಲ್ಪ ನೆಮ್ಮದಿ ಎನಿಸಿತು.

ಸುಬ್ರಾಯ ನಾಯ್ಕರ ಮನೆಗೆ ಬಂದು ಒಂದೆರಡು ಮರ ಹತ್ತಿ ಕಾಯಿ ಇಳಿಸುವ ಹೊತ್ತಿಗೆ ಗಂಟೆ ಎರಡು ದಾಟಿ ಹೋಗಿತ್ತು. ಆಗಲೇ ಸುಬ್ರಾಯ ನಾಯ್ಕರ ಹೆಂಡತಿ ಪಾರ್ವತಿ, ಸುಬ್ರಾಯ ನಾಯ್ಕರನ್ನು ಊಟಕ್ಕೆ ಕರೆದು ಹೋಗಿದ್ದರೂ. ಸುಬ್ರಾಯ ನಾಯ್ಕರಿಗೂ ಹಸಿವೆ ಆದಂತೆ ಎನಿಸಿ ಮನೆಯತ್ತ ಹೆಜ್ಜೆ ಹಾಕುತ್ತಾ, "ಏ ತಿಮ್ಮಾ ಬಾರೋ, ಊಟ ಮಾಡಿ ಆಮೇಲೆ ಮತ್ತೆ ಮರ ಹತ್ತುವೆಯಂತೆ, ಹೋಗಿ ಕೈಕಾಲು ತೊಳೆದುಕೊಂಡು ಬಾ" ಎಂದು ತಿಮ್ಮನ್ನನ್ನು ಊಟಕ್ಕೆ ಆಹ್ವಾನಿಸಿದರು.

ತಿಮ್ಮನಿಗೆ ಬೇಕಾಗಿದ್ದೂ ಅದೇ. ಸುಬ್ರಾಯ ನಾಯ್ಕರ ಹೆಂಡತಿ ನಾಯ್ಕರಿಗೆ ಒಳಗೆ ಬಡಿಸಿದರೆ, ತಿಮ್ಮನಿಗೆ ಹೊರಗೆ ಬಾಳೆ ಎಲೆ ಇಟ್ಟು ಬಡಿಸಿದಳು. ತಿಮ್ಮ ಸಾಕು ಸಾಕು ಎನ್ನುತ್ತಲೇ ಮೂರ್ನಾಲ್ಕು ಬಾರಿ ಅನ್ನ ಹಾಕಿಸಿಕೊಂಡು ಉಂಡ. ಹೊಟ್ಟೆ ಈಗ ಸ್ವಲ್ಪ ತಣ್ಣಗೆನಿಸಿತು. ನೀರು ಕುಡಿದು ಉಂಡ ಎಲೆ ಎತ್ತಿ ತೋಟದ ಮೂಲೆಗೆ ಎಸೆದು ಬಂದ. ಕೈ ತೊಳೆದು ಬಂದು ಜಗುಲಿಯ ಮೇಲೆ ಕುಳಿತು ಕಿಸೆಯಿಂದ ಬೀಡಿ ತೆಗೆದು ಬಾಯಿಗೆ ತುರಿಕಿದ. ಅದರ ಮುಂದಿನ ತುದಿಗೆ ಬೆಂಕಿ ಹಚ್ಚಿ, ತುದಿ ಸಂಪೂರ್ಣ ಕೆಂಪಗಾಗಿದೆ ಎಂದ ಮೇಲೆ ಇನ್ನೂ ಉರಿಯುತ್ತಿದ್ದ ಬೆಂಕಿ ಕಡ್ಡಿಯನ್ನು ಹೊರಗೆಸೆದು, ಬೀಡಿ ಎಳೆಯುತ್ತಾ ಕುಳಿತ. ಸುಬ್ರಾಯ ನಾಯ್ಕರು ಆಗಲೇ ಊಟ ಮುಗಿಸಿ ತಾಂಬೂಲ ಹಾಕಿ ಅದರ ಸ್ವಾದವನ್ನು ಸವಿಯುತ್ತಾ ಆರಾಂ ಕುರ್ಚಿಯ ಮೇಲೆ ಕುಳಿತಿದ್ದರು. ಹೊರಗೆ ಜಗುಲಿಯ ಮೇಲೆ ಬೀಡಿ ಎಳೆಯುತ್ತಾ ಕುಳಿತ ತಿಮ್ಮನನ್ನು, "ಏನ್ ತಿಮ್ಮಾ, ಈ ವರ್ಷನಾದ್ರೂ ಮದುವೆ ಪಾಯಸ ಇದಯಾ ಹೇಗೆ?" ಎಂದು ಕೇಳಿದರು.

"ನೋಡ್ಬೇಕು ನಾಯ್ಕರೆ, ಎಲ್ಲಾದ್ರೂ ಹೊಂದಿಕೆಯಾದ್ರೆ ಈ ಮಳೆಗಾಲದಲ್ಲಿ ನೋಡ್ಬೇಕು" ಎಂದ ತಿಮ್ಮ.

"ಯಾಕೋ ನಿನಗೆ ಮದುವೆಯಾಗಲು ಮಳೆಗಾಲನೇ ಬೇಕೇನೋ" ಎಂದು ನಗುತ್ತಾ ಕೇಳಿದರು ನಾಯ್ಕರು.

"ಹಂಗಲ್ರಾ ನಾಯ್ಕರೇ, ಉಳಿದ ಟೈಮಲ್ಲಿ ನನಗೆ ಬಿಡುವೆಲ್ಲಿರತ್ತೆ ಹೇಳಿ. ಮಳೆಗಾಲ ಯಾಕಂದ್ರೆ ಆ ಟೈಮಲ್ಲಿ ಯಕ್ಷಗಾನನೂ ಇರಲ್ಲ, ಮರ ಹತ್ತಕ್ಕೂ ಆಗಲ್ಲ. ಅದಕ್ಕೆ ಆ ಟೈಮಲ್ಲೇ ನಾನು ಸ್ವಲ್ಪ ಆರಾಂ ಆಗಿ ಇರೋದಲ್ವೇ" ಎಂದು ತಿಮ್ಮ ಹೇಳಿದಾಗ ಸುಬ್ರಾಯ ನಾಯ್ಕರಿಗೆ ನಗೆ ತಡೆದು ಕೊಳ್ಳಲು ಆಗದೇ "ಆಯ್ತಪ್ಪಾ ನಿಂಗೆ ಯಕ್ಷಗಾನ ಇದ್ರೆ ಮದುವೆನು ಬೇಡ, ಹೆಂಡತಿನು ಬೇಡ." ಎಂದು ಹೇಳಿ ನಕ್ಕರು.

ಅವರ ಮಾತಿನ ನಡುವೆಯೇ ಪಾರ್ವತಿ ಊಟ ಮುಗಿಸಿ, ಚಹಾ ಮಾಡಿ ಇಬ್ಬರಿಗೂ ತಂದಿಟ್ಟಳು. ಚಹಾ ಕುಡಿದು, ಇನ್ನೊಂದು ಬೀಡಿ ಹೊತ್ತಿಸಿ ಎಳೆದು, "ನಾಯ್ಕರೆ ನಂಗೆ ಆಮೇಲೆ ಲೇಟಾಗುತ್ತೆ ಮರ ಹತ್ತತಿನಿ ಆಯ್ತಾ" ಎನ್ನುತ್ತಾ ಅವರ ಉತ್ತರಕ್ಕೂ ಕಾಯದೇ ಮತ್ತೆ ಮರ ಹತ್ತಲು ಅಣಿಯಾದ. ಉಳಿದ ಮರಗಳನ್ನು ಹತ್ತಿ ಕಾಯಿ, ಒಣಗಿದ ಹೆಡೆ ಕೀಳುವುದರೊಳಗೆ ಸಂಜೆಯ ಭಾನು ಕೆಂಪಾಯಿತು. ಬೇಗ ಬೇಗ ಮರದಿಂದ ಕಿತ್ತ ಕಾಯಿಗಳಲ್ಲೆವನ್ನು ಕೊಟ್ಟಿಗೆಯ ಮೇಲಿನ ಅಟ್ಟಕ್ಕೆ ಸಾಗಿಸಿ, ಮತ್ತೆ ಮನೆಯ ಎದುರಿಗೆ ಬಂದು "ನಾಯ್ಕರೇ ನಾನು ಬರ್ತಿನಿ ಆಯ್ತಾ" ಎಂದ.

"ಎಲ್ಲಿಗೋ ಮಾರಾಯಾ, ನಿಲ್ಲೋ ಬರ್ತಿನಿ." ಎಂದು ಹೇಳುತ್ತಾ ನಾಯ್ಕರು ಕೊಟ್ಟಿಗೆಗೆ ಹೋಗಿ ಕೈಯಲ್ಲಿ ಏಳೆಂಟು ತೆಂಗಿನ ಕಾಯಿ ಹಿಡಿದು ಹೊರಗೆ ಬಂದರು. ನಾಯ್ಕರ ಕೈಯಲ್ಲಿದ್ದ ತೆಂಗಿನ ಕಾಯಿಯನ್ನು ನೋಡಿದ ತಿಮ್ಮ,  "ನಾಯ್ಕರೇ ನನಗೆ ಕಾಯಿ ಬೇಡ, ನಾನು ಈಗ ಹನುಮಟ್ಟಾಗೆ ಯಕ್ಷಗಾನಕ್ಕೆ ಹೋಗ್ಬೇಕು. ಈ ಕಾಯಿ ತೆಗೆದುಕೊಂಡು ಅಲ್ಲಿಗೆ ಹೋಗಿ ಏನು ಮಾಡಲಿ, ಕೊಡೋದಿದ್ರೆ ರೊಕ್ಕನೇ ಕೊಡಿ" ಎಂದ ತಿಮ್ಮ.

"ಹೋ ಹೌದೆ, ಆಯ್ತ ಹಂಗಾರೆ ಬಂದೆ ನಿಲ್ಲು" ಎಂದು ಹೇಳಿ ತಾವು ತಂದ ತೆಂಗಿನ ಕಾಯಿಗಳನ್ನು ಅಲ್ಲಿಯೇ ಜಗುಲಿಯ ಮೇಲಿಟ್ಟು, ಒಳಗೆ ಹೋಗಿ ಅಂಗಿಯ ಕಿಸೆಯಿಂದ ಹತ್ತರ ಎಂಟ ಹತ್ತು ನೋಟುಗಳನ್ನು ತಂದು ತಿಮ್ಮನ ಕೈಗಿತ್ತರು.

ಅದಕ್ಕಾಗಿಯೇ ಇಷ್ಟೊತ್ತು ನಿಂತ ತಿಮ್ಮ, ರೊಕ್ಕ ಕೈಗೆ ಬರುತ್ತಿದ್ದಂತೆಯೇ, "ನಾಯ್ಕರೇ ಬರ್ತಿನಿ ಆಗಾ" ಎಂದು ನಾಯ್ಕರ ಉತ್ತರಕ್ಕೂ ಕಾಯದೇ ಹನುಮಟ್ಟಾದತ್ತ ಹೊರಟ. ಅಲ್ಲಿ ಅಂದು ನಡೆಯಲಿರುವ "ಬಸ್ಮಾಸುರ ಮೋಹಿನಿ" ಎನ್ನುವ ಯಕ್ಷಗಾನದಲ್ಲಿ ಹಿಮ್ಮೇಳದಲ್ಲಿ ಕುಳಿತು ಪೇನು ಪೆಟ್ಟಿಗೆ (ಹಾರ್ಮೋನಿಯಂ) ನುಡಿಸಲು.

--ಮಂಜು ಹಿಚ್ಕಡ್

Friday, August 15, 2014

ಗರುಡಾ ಮೂಲೆಯಲ್ಲಿ ಕಳೆದ ಆ ಒಂದು ದಿನ!

ನಾನು ಚಿಕ್ಕವನಿದ್ದಾಗ, ನನ್ನಪ್ಪ ಸಾಮಾನು ತರಲು ಅಂಕೋಲೆಗೆ ಹೋಗಲಿ, ಗದ್ದೆಗೆ ಹೋಗಲಿ, ಬತ್ತವನ್ನು ಅಕ್ಕಿ ಮಾಡಿಸಲು ಹೋಗಲಿ ಅಥವಾ ಗೋಧಿ ಹಿಟ್ಟು ಮಾಡಿಸಲು ಹಿಟ್ಟಿನ ಗಿರಣಿಗೆ ಹೋಗಲಿ, ಮೀನು ತರಲು ಹೋಗಲಿ, ಯಾರದ್ದಾದರೂ ಸಂಬಂಧಿಕರ ಮನೆಗೆ ಹೋಗಲಿ ಅವನನ್ನು ನಾನು ಬಾಲದಂತೆ ಹಿಂಬಾಲಿಸಿಕೊಂಡು ನಡೆದು ಬಿಡುತ್ತಿದ್ದೆ. ಒಮ್ಮೊಮ್ಮೆ ಎಲ್ಲಾದರೂ ದೂರದ ಊರಿಗೆ ಹೋಗುವುದ್ದಿದ್ದಲ್ಲಿ ಅಥವಾ ತುಂಬಾ ಹೊತ್ತು ನಡೆದು ಕೊಂಡು ಹೋಗುವುದಿದ್ದರೆ, ನನಗೆ ಬರುವುದು ಬೇಡಾ ಅಂತಾ ಹೇಳಿ ಬಿಟ್ಟು ಹೋದರೂ ಕೂಡ ನಾನು ಅಳುತ್ತಾ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಬಿಡುತ್ತಿದ್ದೆ. ಹೀಗೆ ಒಮ್ಮೆ ನಮ್ಮ ತಂದೆ ಗರುಡಾಮೂಲೆ ಎನ್ನುವ ಊರಿಗೆ ಯಾವುದೋ ಕೆಲಸದ ಮೇಲೆ ಹೊರಟಿದ್ದರು ಅದರ ಜೊತೆಗೆ ಗದ್ದೆ ಕಟಾವಿಗಾಗಿ ಅಲ್ಲಿಯ ಜನರಿಗೆ ಹೇಳುವ ಉದ್ದೇಶವೂ ಇತ್ತು. ನಾನಿನ್ನೂ ಆಗ ಆರೇಳು ವರ್ಷದ ಹುಡುಗ. ಅವರು ಹಾಗೆ ಹೊರಟು ನಿಂತಿದ್ದೇ ತಡ ನಾನು ಬರುತ್ತೇನೆ ಎಂದು ಹಟ ಹಿಡಿದೆ. ಅವರು ಬರುವುದು ಬೇಡ ಎಂದು ಹೇಳಿ ನನ್ನನ್ನು ಮನೆಯಲ್ಲೇ ಬಿಟ್ಟು ಹೊರಟರು. ನಾನು ಬಿಡಲಿಲ್ಲ ಅವರ ಹಿಂದೆ ಓಡಿದೆ, ಅವರಿನ್ನೂ ನಮ್ಮೂರ ಬಸ್ ನಿಲ್ದಾಣವನ್ನು ದಾಟಿರಲಿಲ್ಲ, ನಾನು ಓಡಿ ಹೋಗಿ ಅವರನ್ನು ಹಿಡಿದೆ. ನಾನು ಹಿಂದೆ ಬಿದ್ದಿದ್ದನ್ನು ನೋಡಿ ಮತ್ತೆ ಒಂದೆರಡು ಬಾರಿ ಬೈದು ಹೊರಟು ಹೋಗುವಂತೆ ಹೇಳಿದರೂ ನಾನು ಬಿಡಲಿಲ್ಲ, ಅವರ ಹಿಂದೆನೇ ಮತ್ತೆ ಹೊರಟೆ. ನಾನು ವಾಪಸ್ ಮನೆಗೆ ಹೋಗದ್ದನ್ನು ನೋಡಿ ತಾವಾಗೇ ತಮ್ಮ ಜೊತೆ ಕರೆದುಕೊಂಡು ಹೋದರು.

ಗರುಡಾಮೂಲೆ ಇರುವುದು ನಮ್ಮುರಿನಿಂದ ೫-೬ ಕಿಲೋ ಮೀಟರ್ ದೂರದಲ್ಲಿದ್ದು, ತಳಗದ್ದೆಯಿಂದ ಇನ್ನೂ ಎರಡು ಕಿಲೋ ಮೀಟರ್ ದೂರಕ್ಕೆ ನಡೆದು ಹೋಗಬೇಕು. ಗರುಡಾಮೂಲೆ ಇದು ಸುತ್ತಲು ಸಹ್ಯಾದ್ರಿ ಪರ್ವತ ಶ್ರೇಣಿಗಳಿಂದ ಸುತ್ತುವರೆದಿರುವ ಸುಂದರವಾದ ಊರು. ಅಲ್ಲೊಂದು ಇಲ್ಲೊಂದು ಚಿಕ್ಕ ಪುಟ್ಟ ಹಂಚಿನ ಮನೆಗಳು. ಪ್ರತಿ ಮನೆಯ ಮುಂದು ಸಗಣಿಯಿಂದ ಸಾರಿಸಿದ ಅಂಗಳ, ಆ ಅಂಗಳದ ಮುಂದೆ ಆ ಮನೆಗೆ ಸೇರಿದ ತೋಟ. ಆ ತೋಟದಿಂದ ಮುಂದೆ ಹೋದರೆ ಅವರವರಿಗೆ ಸಂಬಂಧಿಸಿದ ಗದ್ದೆಗಳು. ಆ ಗದ್ದೆಯ ಒಂದು ಬದಿಗೆ ಕಬ್ಬಿನ ತೋಟ. ಕಬ್ಬಿನ ತೋಟದ ಪಕ್ಕದಲ್ಲಿ ಮನೆಯ ಉಪಯೋಗಕ್ಕಾಗಿ ಬಸಲೆ, ಮೂಲಂಗಿ, ಗೆಣಸು, ಈರುಳ್ಳಿ, ಚವಳಿ, ಹರಿಗೆ ಮುಂತಾದ ತರಕಾರಿಗಳನ್ನು ಬೆಳೆದ ಒಂದು ಕೈದೋಟ. ಮನೆಯ ಹಿಂಬಾಗದಲ್ಲಿ ಬೆಟ್ಟ. ಆ ಬೆಟ್ಟದಲ್ಲಿ ಮೊದ ಮೊದಲು ವಿರಳವಾಗಿ ಸಿಗುವ ಮರಗಳು ಒಳಗೆ ಹೋಗುತ್ತಿದ್ದಂತೆ ದಟ್ಟವಾಗುತ್ತಾ ಹೋಗುತ್ತವೆ. ಸುತ್ತಲು ಮನೆಗಳೇ ತುಂಬಿರುವ ಊರಿನಲ್ಲಿ ಬೆಳೆದ ನನಗೆ ಇವೆಲ್ಲವನ್ನು ನೋಡಿದಾಗ ಏನೋ ಒಂದು ರೀತಿಯ ರೋಮಾಂಚನ. ಅದು ನನಗೆ ಪ್ರಥಮ ಅನುಭವ ಕೂಡ. ಗರುಡಾಮೂಲೆ ಕರಾವಳಿ ಸೀಮೆಯ ಭಾಗವಾದರೂ ಸುತ್ತಲೂ ಬೆಟ್ಟಗಳಿಂದ ಆವೃತ್ತವಾಗಿದ್ದುದರಿಂದ ಅಪ್ಪಟ ಮಲೆನಾಡಿನಂತೆ ತೋರುತ್ತಿತ್ತು. ಅದಕ್ಕೂ ಮೊದಲು ನಾನು ಅಂತಹ ಬೆಟ್ಟಗಳನ್ನು ನೋಡದ್ದರಿಂದ ನನಗೆಲ್ಲವೂ ಆ ಪಯಣದ ಅನುಭವ ರೋಮಾಂಚನಕಾರಿಯಾಗೇ ಇತ್ತು.

ನಾನು ನಮ್ಮ ತಂದೆ ಗರುಡಾಮೂಲೆ ಸೇರಿದಾಗ ಬಹುಶಃ ೯ ರಿಂದ ೧೦ ಗಂಟೆಯ ಒಳಗಿರಬಹುದು. ನಾವು ಅಲ್ಲಿಗೆ ಹೋದ ತಕ್ಷಣ ನಮ್ಮ ತಂದೆ ನನ್ನನ್ನು ಅವರ ಪರಿಚಯದವರ ಮನೆಗೆ ಕರೆದುಕೊಂಡು ಹೋಗಿ, ನನ್ನನ್ನು ಆ ಮನೆಯಲ್ಲಿರುವ ಅಜ್ಜಿಗೆ ಪರಿಚಯಿಸಿ ನನ್ನನ್ನು ಅಲ್ಲೇ ಇರಲು ಹೇಳಿ ತಾವು ಎಲ್ಲಿಗೋ ಹೋಗಿ ಬರುವುದಾಗಿ ಹೇಳಿ ಹೊರಟು ಹೋದರು. ಆ ಮನೆಯಲ್ಲಿ ಆಗ ಇದ್ದುದು ಒಂದು ಅಜ್ಜಿ ಹಾಗೂ ನನ್ನದೇ ವಯಸ್ಸಿನ ಅವಳ ಮೊಮ್ಮಗ. ಮನೆಯಲ್ಲಿರುವ ಉಳಿದ ಇತರರು ಯಾವುದೋ ಕೆಲಸ ಮೇಲೆ ಹೊರಗೆ ಹೋಗಿರಬೇಕು, ಹಾಗಾಗಿ ಅವರಿರ್ವರನ್ನು ಬಿಟ್ಟು ಯಾರು ಇರಲಿಲ್ಲ.

ನಾನು ಹಾಗೂ ಆ ಹುಡುಗ ಆ ಮನೆಯ ಅಂಗಳದಲ್ಲಿ ಆಟವಾಡುತ್ತಾ ಇದ್ದಾಗ ಅಜ್ಜಿ ನಮಗೆ ತೋಟಕ್ಕೆ ಹೋಗಿ ಒಂದಿಷ್ಟು ಮೂಲಂಗಿ ಕಿತ್ತುಕೊಂಡು ಬರುವಂತೆ ತಿಳಿಸಿದಳು. ನಮಗೆ ಅಷ್ಟು ಹೇಳಿದ್ದೇ ತಡ, ಇಬ್ಬರೂ ತೋಟಕ್ಕೆ ಓಡಿದೆವು. ಅಲ್ಲಿಯ ಕಬ್ಬಿನ ತೋಟದಿಂದ ಒಂದು ಕಬ್ಬು ಮುರಿದುಕೊಂಡು ಮೂಲಂಗಿ ಬೆಳೆದ ಕಡೆ ಬಂದೆವು. ಐದಾರು ಮೂಲಂಗಿ ಅಂತಾ ಅಜ್ಜಿ ಹೇಳಿದರೂ ನಾವು ೮-೧೦ ಮೂಲಂಗಿ ಕಿತ್ತು ಬಿಟ್ಟೆವು. ಕಿತ್ತ ಮೂಲಂಗಿಯನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಕಬ್ಬು ತಿನ್ನುತ್ತಾ ಮನೆಗೆ ಬಂದು ಅಜ್ಜಿಗೆ ಮೂಲಂಗಿ ಕೊಟ್ಟವು. "ಏಕೆ ಇಷ್ಟೊಂದು ಮೂಲಂಗಿ ಕಿತ್ತು ತಂದಿದ್ದಿರಾ" ಎಂದು ಅಜ್ಜಿ ಬಯ್ಯುತ್ತಿದ್ದನ್ನು ಲೆಕ್ಕಿಸದೇ ಬೆಟ್ಟದ ಕಡೆ ಓಡಿದೆವು. ನನಗೆ ಬೆಟ್ಟ ಹೇಗಿರುತ್ತೆ ಅಂತಾ ಮೊದಲು ಗೊತ್ತಿರದ ಕಾರಣ ಆ ಹುಡುಗ ಕರೆದು ಕೊಂಡು ಹೊದಲ್ಲೆಲ್ಲಾ ಹೋದೆ.

ಆತ ನನಗೆ ಪ್ರತಿ ವರ್ಷ ಅಲ್ಲಿ ಗಾಣ ನಡೆಯುವ ಸ್ಥಳ, ಅಲ್ಲಿ ಕಬ್ಬಿನ ಹಾಲು ಕಾಸಿ ಅವೆ ಬೆಲ್ಲ ಮಾಡುವ ಒಲೆ ಎಲ್ಲವನ್ನು ತೋರಿಸಿ ಬೆಟ್ಟ ಹತ್ತಿಸಿದ. ಆತ ಅಲ್ಲೇ ಹುಟ್ಟಿ ಬೆಳೆದಿದ್ದರಿಂದ ಅವನಿಗೆ ಆ ಪ್ರದೇಶವಲ್ಲ ಚಿರಪರಿಚಿತವಾದಂತಿತ್ತು. ಆತ ಅಲ್ಲಿ ಹರಿಯುವ ಜರಿ, ಅದರ ಸುತ್ತಲು ಬೆಳೆದ ಕಾಡು ಎಲ್ಲವನ್ನು ತೋರಿಸುತ್ತಾ ಹೋದ. ನಾವು ಹಾಗೆ ಕಾಡುಸುತ್ತುತ್ತಿದ್ದಾಗ ಆ ಕಾಡಿನಲ್ಲಿ ಎರಡು ದೊಡ್ಡ ಹಾವುಗಳು ತೆಕ್ಕೆ ಹಾಕಿಕೊಂಡು ಬುಸ್, ಬುಸ್ ಎನ್ನುತ್ತಾ ಹೊರಳಾಡುತ್ತಿದ್ದುದ್ದನ್ನು ನೋಡಿ ನಾನು ಮೈಮರೆತು ನೋಡುತ್ತಾ ನಿಂತು ಬಿಟ್ಟಿದ್ದೆ. ಆ ಹುಡುಗ ಇಲ್ಲಾ ಅಂದರೆ ಅಲ್ಲೇ ನಿಂತು ಬಿಡುತ್ತಿದ್ದನೇನೋ. ಆ ಹುಡುಗ ನನ್ನನ್ನು ಎಚ್ಚರಿಸಿ, "ಹಾಗೆಲ್ಲಾ ನಾವು ನೋಡಬಾರದು, ಹಾಗೆ ನೋಡಿದರೆ ನಮಗೆ ಪಾಪ ಬರುತ್ತೆ ಅಂತೆ ನಮ್ಮ ಅಜ್ಜಿ ಹೇಳುತ್ತಿದ್ದಳು" ಎಂದು ನನ್ನನ್ನು ಹೆದರಿಸಿ ಮನೆಗೆ ಕರೆದುಕೊಂಡು ಬಂದ.

ನಾವು ಅಲ್ಲೆಲ್ಲಾ ಸುತ್ತಾಡಿ ಮನೆ ತಲುಪುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ನಾವು ಮನೆ ತಲುಪಿದರೂ ನಮ್ಮ ತಂದೆಯಿನ್ನು ಅಲ್ಲಿಗೆ ಬಂದಿರಲಿಲ್ಲ. ನಾವು ಬರುತ್ತಿದ್ದಂತೆ, ಅಜ್ಜಿ ಆ ಹುಡುಗನಿಗೆ ಸ್ನಾನ ಮಾಡಲು ಹೇಳಿ, ಅವನ ಸ್ನಾನ ಮುಗಿಯುತ್ತಿದ್ದಂತೆ ನಮ್ಮಿಬ್ಬರನ್ನು ಊಟಕ್ಕೆ ಕರೆದಳು. ನಾವು ಊಟದ ಮನೆ ಸೇರಿದಾಗ ನಮಗಾಗಿ ದೊಡ್ಡ ದೊಡ್ಡ ಕಂಚಿನ ಬಟ್ಟಲುಗಳಲ್ಲಿ ಗಂಜಿಯನ್ನು ಬಡಿಸಿ, ಅದರ ಮುಂದೆ ಚಿಕ್ಕ ಚಿಕ್ಕ ಬಟ್ಟಲುಗಳಲ್ಲಿ ಮೂಲಂಗಿ ಪಲ್ಯೆ ಹಾಕಿದ್ದಳು. ತುಂಬಾ ರುಚಿ ಕಟ್ಟಾಗಿ ಮಾಡಿದ್ದಳು ಅಜ್ಜಿ. ನಾವು ಆ ಬಟ್ಟಲಲ್ಲಿದ್ದ ಗಂಜಿಯನ್ನೆಲ್ಲ ಕಾಲಿ ಮಾಡಿ ಕೈ ತೊಳೆದು ಮತ್ತೆ ತೋಟದ ಕಡೆ ಹೊರೆಟವು. ತೋಟ ಸುತ್ತಿ ಬರುವ ಹೊತ್ತಿಗೆ ನಮ್ಮ ತಂದೆ ಆ ಮನೆಗೆ ಬಂದು ನನಗಾಗಿ ಕಾಯುತ್ತಾ ಕುಳಿತಿದ್ದರು. ನಾನು ತೋಟದಿಂದ ಬಂದ ಕೆಲವೇ ಸಮಯದಲ್ಲೇ ನಾನು ಮತ್ತು ನಮ್ಮ ತಂದೆ ಅಲ್ಲಿಂದ ಹೊರಟು ನಿಂತೆವು. ನಾವು ಅಲ್ಲಿಂದ ಬಿಟ್ಟು ಮನೆ ಸೇರುವ ಹೊತ್ತಿಗೆ ಸಂಜೆಯಾಗಿತ್ತು. ಈ ಘಟನೆ ನಡೆದು ಅದಾಗಲೇ ೨೫ ವರ್ಷಗಳು ಕಳೆದು ಹೋದರು ನನಗಿನ್ನು ಅದು ತುಂಬಾ ಇತ್ತೀಚೆಗೆ ನಡೆದಂತಿದೆ.

ಮಂಜು ಹಿಚ್ಕಡ್

Wednesday, August 6, 2014

ನಾಚಿದ ಅವಳ ಮುಖ!

ನಾಚಿ ತಗ್ಗಿಸಿದ
ಅವಳ ಮುಖ
ಇಳಿ ಸಂಜೆಯ
ನಾಚಿಕೆ ಮುಳ್ಳಿನ
ಎಲೆಯಂತೆ.

--ಮಂಜು ಹಿಚ್ಕಡ್

Saturday, July 26, 2014

ಆಗಾಗ ನೆನಪಾಗುವ ಬೆಳಸೆ ಅಜ್ಜಿ!

ಬೆಳಸೆ ಇದು ರಾಷ್ಟ್ರೀಯ ಹೆದ್ದಾರಿ ೧೭ ಕ್ಕೆ ಹೊಂದಿಕೊಂಡ ಅಂಕೋಲಾ ತಾಲೋಖಿನ ಒಂದು ಹಳ್ಳಿ. ವಿಸ್ತಾರದಲ್ಲಿ ದೊಡ್ಡದಾಗಿದ್ದರೂ ಜನ ಸಾಂದ್ರತೆಯಲ್ಲಿ ಚಿಕ್ಕ ಊರು. ನಮ್ಮ ಊರಿನಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ನಮ್ಮೂರಿಗೂ,ಬೆಳಸೆ ಊರಿಗೂ ಹಿಂದಿನಿಂದ ಇಂದಿನವರೆಗೂ ಏನೋ ಒಂದು ರೀತಿಯ ಅವಿನಾಭಾವ ಸಂಭಂದ. ನಮ್ಮ ಊರಿನಲ್ಲಿ ಹಬ್ಬ ಹರಿದಿನಗಳಿರಲಿ, ಮದುವೆ ಸಮಾರಂಭಗಳಿರಲಿ ಅವರು ನಮ್ಮೂರಿಗೆ ಬರುವುದು, ನಾವು ಸಹಾಯಕ್ಕಾಗಿ ಅಲ್ಲಿಗೆ ಹೋಗುವುದು ಸರ್ವೇ ಸಾಮಾನ್ಯ.
ಬೆಳಸಯ ಮಧ್ಯಭಾಗದಿಂದ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯ ಸಮೀಪವೇ ವಿಠೋಬ ದೇವಸ್ತಾನವಿದ್ದು, ಆ ದೇವಸ್ತಾನದ ಹಿಂಬಾಗದಲ್ಲಿ ಒಂದು ಹಳೆಯ ಮನೆ. ಆ ಮನೆಯಲ್ಲಿ ಓರ್ವ ಅಜ್ಜಿ ವಾಸಿಸುತ್ತಿದ್ದಳು. ಆಕೆಯ ಗಂಡ ತೀರಿ ಹೋಗಿ ಅದೆಷ್ಟೋ ವರ್ಷಗಳಾಗಿದ್ದವು. ಅದು ಅವಳದೇ ಮನೆ ಎಂದು ನನಗೆ ತಿಳಿದದ್ದು ಹಲವು ವರ್ಷಗಳ ನಂತರವೇ. ಆಕೆಯ ಹೆಸರು ನಮಗೆ ತಿಳಿಯದ ಕಾರಣ ನಾವೆಲ್ಲರೂ ಅವಳನ್ನೂ ಬೆಳಸೆ ಅಜ್ಜಿ ಎಂದೇ ಕರೆಯುತ್ತಿದ್ದೆವು. ಆಕೆ ಜಾತಿಯಿಂದ, ಗುಣದಿಂದ ಶ್ರೀಮಂತಳಾಗಿದ್ದರೂ, ಹಣ ಐಶ್ವ್ರರ್ಯದಿಂದ ಬಡವಳಾಗಿದ್ದಳು. ಜಾತಿಯಿಂದ, ಗುಣದಿಂದ ಎಷ್ಟೇ ಶ್ರೀಮಂತವಾಗಿದ್ದರೂ, ಅದರಿಂದ ಹೊಟ್ಟೆ ಹೊರೆಯಲು ಸಾಧ್ಯವಿಲ್ಲ ಅಲ್ಲವೇ? ಅದು ವಯಸ್ಸಾಗಿದ್ದರಂತೂ ಇನ್ನೂ ಕಷ್ಟ.
ಆಕೆಯೆಂದರೆ ನಮಗೆ ಅದೇನೋ ಪ್ರೀತಿ. ನಾವಿನ್ನು ಆಗ ಚಿಕ್ಕ ಮಕ್ಕಳು. ಸರಿಯಾಗಿ ಚಡ್ಡಿ ಹಾಕಿಕೊಳ್ಳಲು ಬಾರದ ವಯಸ್ಸು. ಆಗ ನಮ್ಮ ಮನೆಗೆ ಈ ಅಜ್ಜಿ ಆಗಾಗ ಬಂದು ಹೋಗುತ್ತಿದ್ದಳು. ಬರುವಾಗ ನಮಗೆ ಪೆಪ್ಪರಮೆಂಟನ್ನೋ, ಹುರಿದ ಕಡಲೆಯನ್ನೋ ತೆಗೆದುಕೊಂಡು ಬರುತ್ತಿದ್ದಳು. ನಮಗೆ ಆಗ ಅವೇ ಅಮ್ರತವಿದ್ದಂತೆ. ಆಕೆ ಬಂದು ಒಂದೆರಡು ಗಂಟೆ ನಮ್ಮ ಮನೆಯಲ್ಲಿದ್ದು ಹೋಗುತ್ತಿದ್ದಳು. ಎಷ್ಟೇ ಹೊತ್ತು ಇದ್ದರೂ ನಮ್ಮ ಮನೆಯಲ್ಲಿ ಊಟ, ತಿಂಡಿ ಮಾಡುತ್ತಿರಲಿಲ್ಲ. ಹೋಗುವಾಗ ನಮ್ಮಮ್ಮ ಸ್ವಲ್ಪ ಅಕ್ಕಿಯನ್ನೋ ಅಥವಾ ಮನೆಯ ಹಿತ್ತಲಲ್ಲಿ ಬೆಳೆದ ತರಕಾರಿಗಳನ್ನೋ ಕೊಟ್ಟು ಕಳಿಸುತ್ತಿದ್ದಳು. ಆಕೆ ಕನಿಷ್ಟ ತಿಂಗಳಿಗೊಮ್ಮೆಯಾದರೂ ನಮ್ಮ ಮನೆಗೆ ಬಂದು ಹೋಗುತ್ತಿದ್ದಳು. ನನಗಂತೂ ಯಾವಾಗಲು ಅವಳು ಧರಿಸುತ್ತದ್ದ ಕನ್ನಡಕದ ಮೇಲೆಯೇ ಕಣ್ಣು. ಆ ಕನ್ನಡಕವನ್ನು ಆಕೆ ಏಕೆ ಧರಿಸುತ್ತಾಳೆ? ನಾವೇಕೆ ಅದನ್ನು ಧರಿಸುವುದಿಲ್ಲ ಎನ್ನುವ ಪ್ರಶ್ನೆಗಳನ್ನು ಕೇಳಿ ತಲೆಕೆಡಿಸುತ್ತಿದ್ದೆ. ನನಗೆ ಆ ಕನ್ನಡಕವನ್ನು ಕೊಟ್ಟು ಹೋಗುವಂತೆಯೂ ಬೇಡುತಿದ್ದೆ ಕೂಡ. ಒಮ್ಮೆ ನನ್ನ ಒತ್ತಾಯಕ್ಕೆ ಮಣಿದು ತಾನು ಬರುವಾಗ, ಯಾವುದೋ ಜಾತ್ರೆಯಿಂದ ನನಗೊಂದು ಬಣ್ಣದ ಕನ್ನಡಕವನ್ನು ತಂದು ಕೊಟ್ಟಿದ್ದಳು. ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ.
ಆಕೆ ಹಲವಾರು ಬಾರಿ ನಮ್ಮ ಮನೆಗೆ ಬಂದು ಹೋಗುತ್ತಿದ್ದರೂ ಆಕೆ ಯಾರು? ಯಾಕೆ ಹೀಗೆ ಬರುತ್ತಿರುತ್ತಾಳೆ? ಆಕೆ ಏಕೆ ನಮ್ಮ ಮನೆಯಲ್ಲಿ ಊಟ ಮಾಡುವುದಿಲ್ಲ? ಆಕೆಗೇಕೆ ಮಕ್ಕಳೆಂದರೆ ಅಷ್ಟೊಂದು ಪ್ರೀತಿ? ಎಂದು ತಿಳಿದಿರಲಿಲ್ಲ. ಆ ವಯಸ್ಸಿನಲ್ಲಿ ಅದನ್ನು ತಿಳಿಯುವ ವ್ಯವಧಾನವೂ ಇರಲಿಲ್ಲ. ಹುಡುಗ ಮುಂಡೇವು ತಿನ್ನುವುದು, ಆಡುವುದು ಬಿಟ್ಟರೆ ಇನ್ನೇನು ತಿಳಿಯುತ್ತದೆ? ನಮಗೆ ಆಕೆ ಬೆಳಸೆ ಅಜ್ಜಿ ಅಂತ ಗೊತ್ತಿತ್ತೇ ಹೊರತು, ಬೆಳಸಯಲ್ಲಿ ಆಕೆಯ ಮನೆ ಎಲ್ಲಿ ಎನ್ನುವುದು ತಿಳಿದಿರಲಿಲ್ಲ.
ಆಕೆ ಹೀಗೆ ತಿಂಗಳೂ ಬರುತ್ತಿದ್ದವಳೂ, ಕೊನೆಗೆ ಕಡಿಮೆ ಮಾಡುತ್ತಾ ಹೋಗಿ, ಬರುವುದನ್ನೇ ನಿಲ್ಲಿಸಿ ಬಿಟ್ಟಿದ್ದಳು. ಆವಳು ಊರಿಗೆ ಬರುವುದನ್ನು ನಿಲ್ಲಿಸಿದ ಹೊತ್ತಿಗೆ ನಾವು ಹೈಸ್ಕೂಲು ಮೆಟ್ಟಿಲೇರಿದ್ದೆವು, ಆಗ ತಾನೆ ತಿಳುವಳಿಕೆ ಮೂಡುತ್ತಿದ್ದ ಕಾಲ. ಅವಳು ಊರಿಗೆ ಬರುವುದನ್ನು ಬಿಟ್ತು ಆಗಲೇ ಒಂದೆರಡು ವರ್ಷಗಳೇ ಕಳೆದಿದ್ದವು. ಒಮ್ಮೆ ಹೀಗೆ ಅಮ್ಮನ ಜೊತೆಯಲ್ಲಿ ಬೆಳಸಗೆ ಹೋದಾಗ ಆಕೆ ಸಿಕ್ಕಳು. ಆಗ ಆಕೆ ನನ್ನನ್ನೂ, ನಮ್ಮಮ್ಮನನ್ನೂ ನೋಡಿ ತುಂಬಾ ಕುಸಿ ಪಟ್ಟಳು. ನನಗೆ ಬೇಡ ಅಂದರೂ ಹೋಗಿ ಪಕ್ಕದ ಅಂಗಡಿಯಿಂದ ಬಿಸ್ಕೆಟ್ ಪ್ಯಾಕೆಟ್ ತಂದು ಕೊಟ್ಟಳು. ಆಗ ಆಕೆಯ ಜೊತೆ ಯಾರೋ ದೂರದ ಸಂಬಂದಿಗಳಿದ್ದು ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಕೇಳಿ ತಿಳಿದ ನಮ್ಮ ಅಮ್ಮನಿಗೆ ಸ್ವಲ್ಪ ಸಮಾಧಾನವಾಗಿತ್ತು.
ನಾನು ಊರಿಗೆ ಬರುತ್ತಾ ನಮ್ಮಮ್ಮನಿಗೆ ಆಕೆ ಯಾರು, ಈಗೇಕೆ ನಮ್ಮ ಮನೆಗೆ ಬರುವುದಿಲ್ಲ ಎಂದು ಕೇಳಿದಾಗ. ನಮ್ಮ ಅಮ್ಮ ಆಕೆಯ ಬಗ್ಗೆ ಹೇಳತೊಡಗಿದಳು. ಆಕೆಯ ಹೆಸರು ಅದೇನು ಅಂತಾ ನಮ್ಮ ಅಮ್ಮನಿಗೂ ತಿಳಿದಿರಲಿಲ್ಲ. ಆಗಾಗ ಆಕೆ ಬರುತ್ತಿದ್ದುರಿಂದ ಅಕ್ಕ-ತಂಗಿ ಅಂತಾನೇ ಕರೀತಾ ಇದ್ದರೂ. ಸುಮಾರು ವರ್ಷಗಳ ಹಿಂದೆ ಆಕೆಯ ಗಂಡನನ್ನು ದೂರದ ಶಿರ್ಶಿಯೋ, ಸಿದ್ದಾಪುರದಿಂದಲೋ ಬೆಳಸೆಯ ದೇವಸ್ಥಾನಗಳ ಪೂಜೆಗಾಗಿ ಕರೆದುಕೊಂಡು ಬಂದು, ಬೆಳಸೆಯ ವಿಠೋಬ ದೇವಸ್ಥಾನದ ಹಿಂದುಗಡೆ ಇರುವ ಮನೆಯಲ್ಲಿ ವಾಸ್ಥವ್ಯಕ್ಕೆ ಎಡೆ ಮಾಡಿ ಕೊಟ್ಟಿದ್ದರು. ಆತ ಬೆಳಸಗೆ ಬಂದಾಗ ಆತನಿಗೆ ೧೭-೧೮ ವರ್ಷ. ಕ್ರಮೇಣ ಆತ ದೇವಸ್ಥಾನಗಳ ಪೂಜೆ ಮಾಡಿಕೊಂಡು ಅಲ್ಲಿಯೇ ನೆಲೆಸಿದನಂತೆ. ಆತ ಸೂಕ್ತ ವಯಸ್ಸಿಗೆ ಬಂದ ಮೇಲೆ ಮನೆಯವರೆಲ್ಲ ಸೇರಿ ಆಕೆ ಯೊಂದಿಗೆ ಮದುವೆ ಮಾಡಿಸಿದ್ದರಂತೆ.
ಮದುವೆಯಾಗಿ ಅದೆಷ್ಟು ವರ್ಷಕಳೆದರೂ ಅವರಿಗೆ ಮಕ್ಕಳಗಲಿಲ್ಲವಂತೆ. ಮಕ್ಕಳಿಲ್ಲದ್ದರಿಂದ ಅವಳಿಗೆ ಮಕ್ಕಳೆಂದರೆ ಆಕೆಗೆ ತುಂಬಾ ಪ್ರೀತಿಯಂತೆ. ಮಕ್ಕಳಿಲ್ಲದಿದ್ದರೂ ಒಳ್ಳೆಯ ರೀತಿಯಲ್ಲೇ ಸಾಗುತಿದ್ದ ಅವಳ ದಾಂಪತ್ಯಕ್ಕೆ ಅದೇನಾಯಿತು ಗೊತ್ತಿಲ್ಲ. ಕೆಲವು ವರ್ಷಗಳ ಹಿಂದೆ ಇದ್ದಕ್ಕಿದ್ದ ಹಾಗೆ ಅವಳ ಗಂಡನಿಗೆ ಯಾವುದೋ ಕಾಯಿಲೆ ಬಂದು ತೀರಿಕೊಂಡನಂತೆ. ಅವಳ ಗಂಡ ತೀರಿಕೊಂಡ ಮೇಲೆ, ಗಂಡನ ಕಡೆಯವರಾಗಲೀ, ಆಕೆಯ ಕಡೆಯವರಾಗಲೀ ಬಂದು ಹೋಗುವುದನ್ನೇ ನಿಲ್ಲಿಸಿಬಿಟ್ಟರಂತೆ. ಕೂಡಿಟ್ಟ ಹಣವೆಲ್ಲ ಎಷ್ಟು ದಿನ ಅಂತ ಇರುತ್ತೆ. ವಯಸ್ಸು ಆಗಲೇ ಅರವತ್ತು ದಾಟಿತ್ತು. ಮನೆಯಲ್ಲಿ ಬೇರೆ ಉತ್ಪನ್ನಗಳು ಇರಲಿಲ್ಲ. ಹಾಗಾಗಿ ಆಕೆ ಅವರಿವರಿಗೆ ಸಣ್ಣ ಪುಟ್ಟ ಸಹಾಯ ಮಾಡಿ ಕೊಟ್ಟೋ, ಅಥವಾ ಅವರಿವರ ಸಾಯದಿಂದಲೋ ಹೊಟ್ಟೆ ಹೊರೆದು ಕೊಳ್ಳುತ್ತಿದ್ದಳು. ಹೀಗೆ ಸಹಾಯದ ನಿರೀಕ್ಷೆಯಿಂದ ನಮ್ಮೂರಿಗೂ ಬರುತ್ತಿದ್ದಳಂತೆ. ನಮ್ಮೂರಿನಲ್ಲೂ ಆಕೆಯ ಪರಿಸ್ಥಿತಿ ಗೊತ್ತಿದ್ದರಿಂದ ಆಕೆಗೆ ಸಹಾಯ ಮಾಡುತ್ತಿದ್ದರೂ. ತಾನು ಬರುವಾಗ ಹಾಗೆ ಸುಮ್ಮನೆ ಬರುತ್ತಿರಲಿಲ್ಲ, ಮಕ್ಕಳಿಗಾಗಿ ಚಾಕಲೇಟನ್ನೋ, ಹುರಿದ ಕಡಲೆಯನ್ನೋ ತೆಗೆದುಕೊಂಡು ಬರುತ್ತಿದ್ದಳು. ಆಕೆ ಬ್ರಾಹ್ಮಣಳಾಗಿದ್ದರಿಂದ ಮಡಿ ಜಾಸ್ತಿಯಂತೆ, ಹಾಗಾಗಿ ಎಲ್ಲೂ ಊಟ ಮಾಡಲ್ಲವಂತೆ. ಕೆಲವು ವರ್ಷಗಳನಂತರ ಆಕೆಗೆ ವಯಸ್ಸಾಗಿ ಇನ್ನೂ ಆಕೆಗೆ ಹೊರಗಡೆ ಹೋಗುವುದು ಕಷ್ಟ ಅಂತಾ ಗೊತ್ತಾದ ಮೇಲೆ ಆಕೆಯ ತವರು ಮನೆಯ ಕಡೆಯವರಾರೋ ಬಂದು ಅವಳ ಜೊತೆ ಇರುತ್ತಿದ್ದಾರಂತೆ ಅಂತ ಅಮ್ಮ ಆಕೆಯ ಬಗ್ಗೆ ಹೇಳಿದಳು.
ಅಮ್ಮ ಆಕೆಯ ಬಗ್ಗೆ ಹೇಳಿದನಂತರ ಅವಳ ಮೇಲೆ ಒಂದು ರೀತಿಯ ಕರುಣೆ ಮೂಡತೊಡಗಿತು. ಅಪರೂಪಕ್ಕೊಮ್ಮೆ ಬೆಳಸಗೆ ಹೋದಾಗ, ಅವಳ ಮನೆಯ ಕಡೆ ಆಕೆ ಇದ್ದಾಳೆಯೇ ಇಲ್ಲವೇ ಎಂದು ನೋಡಿ ಹೋಗುವುದು ವಾಡಿಕೆಯಾಗಿ ಬಿಟ್ಟಿತ್ತು. ಅವಳು ಹೊರಗಡೆ ಇದ್ದರೆ ಅವಳನ್ನು ಮಾತನಾಡಿಸಿಯೇ ಹೋಗುತ್ತಿದ್ದೆ. ಆಮೇಲೆ ನಾವು ಬೆಳೆದು ದೊಡ್ಡವರಾದ ಹಾಗೆ ಓದು, ಕೆಲಸ ಎಂದು ಊರಿಂದ ಹೊರಗಡೆ ಬಂದ ಮೇಲೆ ಆ ಕಡೆ ಹೋಗುವುದು ಕಡಿಮೆಯಾಗಿ ಬಿಟ್ಟಿತು. ಆಕೆಯೂ ನಮ್ಮೂರಿಗೆ ಬರುವುದನ್ನು ಬಿಟ್ಟು ಬಹಳ ವರ್ಷಗಳೇ ಆದ್ದರಿಂದ ಆಕೆಯ ನೆನಪು ನಮ್ಮ ಮನೆಯಲ್ಲಿ, ನಮ್ಮ ಊರೀನ ಇತರೆ ಮನೆಗಳಲ್ಲಿಯೂ ಆಕೆಯ ನೆನಪು ಮಾಸತೋಡಗಿತ್ತು. ಆದರೆ ನನ್ನ ಮನಸ್ಸಲ್ಲಿ ಆಕೆಯ ನೆನಪು ಹಾಗೆ ಅಚ್ಚಳಿಯದೇ ಉಳಿದುಕೊಂಡು ಬಿಟ್ಟಿತು. ಬಹಳ ದಿನಗಳಿಂದ ಆಕೆಯನ್ನು ನೋಡದ ನಾನು ಆಕೆ ತೀರಿ ಹೋಗಿರಬಹುದೆಂದು ತಿಳಿದಿದ್ದೆ. ಆದರೆ ಆಕೆ ಆ ಮನೆಯಲ್ಲಿ ಈಗ ಇನ್ನೂ ಇದ್ದಾಳೆಂದು ನನ್ನ ಗೆಳೆಯರೊಬ್ಬರಿಂದ ತಿಳಿದುಬಂತು. ನಾನು ಆಕೆಯನ್ನು ನೋಡಿ ಬಹಳದಿನಗಳಾದರೇನೆಂತೆ, ಆಕೆ ನನ್ನ ಸಮೀಪವೇ ಇಲ್ಲದಿದ್ದರೇನಂತೆ ಆದರೆ ಆಕೆ ಮತ್ತು ಆಕೆಯ ಪ್ರೀತಿಯನ್ನು ನಾನು ಹೇಗೆ ಮರೆಯಲು ಸಾದ್ಯ?

--ಮಂಜು ಹಿಚ್ಕಡ್ 

Tuesday, July 22, 2014

ಗುರು ಇಲ್ಲದಿರೇನಂತೆ

ಗುರು ಇಲ್ಲದಿರೇನಂತೆ
ಮುಂದೆ ಗುರಿ ಇದೆಯಲ್ಲ.
ಇಂದು ಸೋತರೇನಂತೆ,
ಮುಂದೆ ಗೆಲುವಿದೆಯಲ್ಲ.
ಸಾಧಿಸುವ ಛಲ, ಆತ್ಮ ವಿಶ್ವಾಸ
ಇವೆರಡಿದ್ದರೆ ಗೆಳೆಯ
ನೀನೆಂದು ಹೆದರಬೇಕಿಲ್ಲ.

--ಮಂಜು ಹಿಚ್ಕಡ್

Saturday, July 19, 2014

ಕವಿತೆ ಬರೆಯುವುದು.

ಕವಿತೆ ಬರೆಯುವುದು
ಸ್ಪರ್ಧೆ ಪ್ರತಿಸ್ಪರ್ಧೆಗಾಗಿಯಲ್ಲ
ಪ್ರಸಸ್ಥಿ ಪುರಸ್ಕಾರಗಳಿಗಲ್ಲ
ಪೂಜೆ ಪುನಸ್ಕಾರಕ್ಕಲ್ಲ
ಮನಕೆ ಹೊಕ್ಕ ಭಾವನೆಗಳ ಹೊರಗೆಡುಹಿ
ಮನಸ ತಣ್ಣಗಾಗಿಸಲು
ಉಸಿರು ಸದಾ ಹಸಿರಾಗಿರಸಲು


--ಮಂಜು ಹಿಚ್ಕಡ್

Monday, July 14, 2014

ನಿರೀಕ್ಷೆ!

ಆತರಿಸಿ, ಕಾತರಿಸಿ
ಓಡೋಡಿ ಬರುವವಳೇ
ಇಂದೇಕೆ ಸಣ್ಣ
ನಿನ್ನ ನಡಿಗೆ.

ಆತುರದಿ, ಕಾತರದಿ
ಕಾಯ್ದುಕುರುವ ಹುಡುಗ
ಇನ್ನೂ ಮಿತಿ ಇರಲಿ
ನಿನ್ನ ಸಲಿಗೆ.

ನಿನ್ನೆಯವರೆಗೂ
ಹೀಗಿರದ ನೀನು
ಇಂದೇನಾಯ್ತು
ನಿನಗೆ ಚಲುವೆ.

ಹಾಳಾಯ್ತು ಚೆಲುವು
ಕೆಟ್ಟಿತಲ್ಲ ಒಲವು
ಮುಂದಿನ ತಿಂಗಳಂತೆ
ನನ್ನ ಮದುವೆ.

ಕೆಟ್ಟಿದ್ದು ಒಲವಲ್ಲ
ನಿನ್ನೆಯ ಮನವು
ತಿಳಿಹೇಳ ಬಾರದೇನೆ
ನೀ ನಿನ್ನ ಮನೆಗೆ.

ಹೇಳಾಯ್ತು, ಅತ್ತಾಯ್ತು
ಊಟ ಬಿಟ್ಟಾಯ್ತು
ಹೇಳಲೇನು ಉಳಿದಿಲ್ಲ
ಇನ್ನೂ ನನಗೆ.

ಅಳುವೇಕೆ ಗೆಳತಿ
ಮರೆತು ಬಿಡು ನನ್ನ
ಸುಖದಿ ಬಾಳಿನ್ನು
ನೀ ಅವನ ಜೊತೆಗೆ.

ದೇಹ ಹಂಚಬಹುದೇನೋ
ಮನಸ ಹಂಚಲಿ ಹೇಗೆ
ಉಂಟಲ್ಲ ಸಾವು
ಕಟ್ಟ ಕಡೆಗೆ.

ನನ್ನಷ್ಟೇ ಪ್ರೀತಿ
ಅವನಲ್ಲೂ ಇರಬಹುದು
ಹುಡುಕಿನೋಡು ಒಮ್ಮೆ
ನೀ ಒಂದು ಗಳಿಗೆ.

ಇದ್ದರು ಇರಬಹುದು
ಇಲ್ಲದೇ ಇರಬಹುದು
ಹೊಂದಿ ಬಾಳಲೇಬೇಕಲ್ಲ
ನಾನಿನ್ನೂ ಅವನ ಜೊತೆಗೆ.

ಅವನಿರಲಿ, ನಾನಿರಲಿ
ಇನ್ನೂ ಯಾರೇ ಇರಲಿ
ಬರುವವರಿಲ್ಲ ಯಾರು
ಕೊನೆಗೆ ನಮ್ಮ ಜೊತೆಗೆ.

ಯಾರು ಬಂದರೇನು
ಯಾರು ಬರದಿದ್ದರೇನು
ನೀ ಬರಲು ಮರೆಯದಿರು
ನನ್ನ ಮದುವೆ ಮನೆಗೆ.

--ಮಂಜು ಹಿಚ್ಕಡ್

Thursday, July 3, 2014

ನಮ್ಮ ಬದುಕು ನಮಗೆ.

ಕೆಸರಲ್ಲಿ ಅರಳಿನಿಂತ
ಸುಮಕು ಒಂದು ಬದುಕಿದೆ.
ಹೇಗೆ ಇರಲಿ ಅದರ ಬಾಳು
ಅದಕೂ ಒಂದು ಹೆಸರಿದೆ.

ಅದರದಾದ ಬಣ್ಣವದಕೆ
ಅದರದಾದ ಗಂಧವು.
ಅದರದಾದ ರೂಪವದಕೆ
ಅದರದಾದ ಚಂದವು.

ನಮ್ಮ ಬದುಕು ನಮಗೆ
ಅದರ ಬದುಕು ಅದಕೆ
ನಮ್ಮಂತೆ ನಾವಿರುವುದೊಳಿತು
ನಮ್ಮ ಅದರ ಹಿತಕೆ.

ಅದರ ಬದುಕ ಅದಕೆ ಬಿಟ್ಟು
ತೆಪ್ಪಗಿರುವುದು ಒಳಿತು
ಒಳಿತಾಗುವುದು ಇರ್ವರಿಗೂ
ಹೊಂದಿ ಬಾಳಿದರೆ ಕಲೆತು.

--ಮಂಜು ಹಿಚ್ಕಡ್

Saturday, June 28, 2014

ಕಾಗಕ್ಕ -ಗುಬ್ಬಕ್ಕ

ಆಗಿನ್ನೂ ನಾವು ಐದಾರು ವರ್ಷದ ಮಕ್ಕಳು, ಮನೆಯಲ್ಲಿ ಅಕ್ಷಾರಾಭ್ಯಾಸದ ಜೊತೆಗೆ ನಮ್ಮ ಆಟೋಟಗಳು ಸಾಗಿದ್ದವು. ಮನೆಯಲ್ಲಿ ಯಾರಾದರೂ ಹಿರಿಯರಿದ್ದರೆ ನಮ್ಮನ್ನೆಲ್ಲ ಕಥೆ ಹೇಳಿ ಮಲಗಿಸುತ್ತಿದ್ದುರು. ನಾವು ಅಷ್ಟೇ ಮನೆಗೆ ಯಾರಾದರೂ ಹಿರಿಯರು ಬರಲಿ, ಅಥವಾ ನಾವು ಯಾರದ್ದಾದರೂ ಹಿರಿಯರಿದ್ದ ಮನೆಗೆ ಹೋಗಲಿ, ಅಲ್ಲಿದ್ದ ಹಿರಿಯರಿಗೆ ಕಥೆ ಹೇಳುವಂತೆ ಒತ್ತಾಯಿಸುತ್ತಿದ್ದೆವು. ನಮ್ಮ ಮನೆಯಲ್ಲಿ ತಂದೆಯವರು ರಾಮಾಯಣ, ಮಹಾಭಾರತದಲ್ಲಿ ಬರುವ ಕಥೆಗಳನ್ನು ಹೇಳುತಿದ್ದರೂ, ಪಂಚತಂತ್ರದ ಕಥೆಗಳನ್ನು ಹೇಳಿದ್ದು ಕಡಿಮೆಯೇ. ನಾವು ಚಿಕ್ಕವರಿದ್ದಾಗ ನಮ್ಮ ಊರಲ್ಲಿ, ನಮ್ಮ ಮನೆಯಿಂದ ಒಂದೆರಡು ಮನೆಗಳಾಚೆ ಒಬ್ಬ ವಯಸ್ಸಾದ ಮಹಿಳೆಯಿದ್ದಳು. ಆಕೆಗಾಗ ೮೦ರ ವಯಸ್ಸು, ಅವಳಿಗೆ ಚಿಕ್ಕ ಮಕ್ಕಳೆಂದರೆ ತುಂಬಾ ಪ್ರೀತಿ. ನಾವು ಸಾಯಂಕಾಲ ಆಗುತ್ತಿದ್ದ ಹಾಗೆ ಆಕೆಯ ಮನೆಯ ಕಡೆ ಹೋಗಿ ಕಥೆ ಹೇಳುವಂತೆ ಒತ್ತಾಯಿಸಿದಾಗ ಆಕೆ ನಮಗೆ ಪಂಚತಂತ್ರದ ಕಥೆಯಬ್ಬು ಹೇಳುತ್ತಿದ್ದರು, ನಾವು ಕೂಡ ಅಷ್ಟೇ ಆಸಕ್ತಿಯಿಂದ ಅವಳು ಹೇಳುವ ಕಥೆಗಳನ್ನು ಕೇಳುತ್ತಿದ್ದೆವು. ನಮಗೆಲ್ಲ ಆಕೆ ಕಥೆ ಹೇಳುವ ಕಥೆ ಅಜ್ಜಿಯಾಗಿದ್ದಳೇ ಹೊರತು ಆಕೆಯ ಹೆಸರಾಗಲಿ, ಆಕೆಯ ಪೂರ್ವಾಪರ ವಿಷಯಗಳಾಗಲಿ ತಿಳಿದಿರಲಿಲ್ಲ. ತಿಳಿಯುವ ವಯಸ್ಸು ಅದಾಗಿರಲಿಲ್ಲ. ಒಮ್ಮೆ ಆಕೆ ಕಾಗೆ ಮತ್ತು ಗುಬ್ಬಿಗಳನ್ನು ಸೇರಿಸಿ ಒಂದು ಕಥೆ ಹೇಳಿದ್ದಳು, ಅದೇ ಕಾಗಕ್ಕ-ಗುಬ್ಬಕ್ಕರ ಕಥೆ. ಕಾಗೆ ಗುಬ್ಬಿಗಳು ಹೇಗೆ ಸ್ನೇಹಿತರಾಗಿದ್ದರು, ಒಮ್ಮೆ ಕಾಗೆ ಗುಬ್ಬಿಯ ಮೊಟ್ಟೆಯನ್ನು ಕದ್ದು ತಿಂದದ್ದರಿಂದ ಅವರಿಬ್ಬರಲ್ಲಿ ಧ್ವೇಷ ಬೆಳೆಯಿತು ಎನ್ನುವುದರ ಬಗ್ಗೆ ಆ ಕಥೆ.

ಇಂದೇಕೋ ಆ ಕಥೆ ತುಂಬಾ ನೆನಪಾಗುತಿತ್ತು. ಆ ಕಥೆ ನೆನಪಾಗಲು ಎರಡು ಮುಖ್ಯ ಕಾರಣಗಳಿವೆ. ಒಂದು ಕಥೆ ಹೇಳುವವರ ಬಗ್ಗೆ, ಇನ್ನೊಂದು ಕಥೆಯಲ್ಲಿ ಬಳಕೆಯಾಗುವ ಪ್ರಾಣಿ ಪಕ್ಷಿಗಳ ಬಗ್ಗೆ. ಹಿಂದೆಲ್ಲ ನಾವು ತಂದೆ-ತಾಯಿ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಚಿಕ್ಕಪ್ಪ-ದೊಡ್ಡಪ್ಪಂದಿರು, ಅಜ್ಜ-ಅಜ್ಜಿ ಹೀಗೆ ಒಂದು ದೊಡ್ಡ ಅವಿಭಕ್ತ ಕುಟುಂಬದಲ್ಲಿ ಜೀವಿಸುತ್ತಾ ಇದ್ವಿ. ಆಗೆಲ್ಲ ಅಪ್ಪ ಅಮ್ಮಂದಿರು ತಮ್ಮ ಕೆಲಸ ಕಾರ್ಯಗಳಲ್ಲಿ ಇದ್ದಾಗ, ನಾವು ಅಜ್ಜ ಅಜ್ಜಿಯರೊಂದಿಗೆ ಸೇರಿ ಕೇಳುವುದು, ಆಟ ಆಡುವುದು ಮಾಡುತಿದ್ದೆವು. ಅಜ್ಜ-ಅಜ್ಜಿಯರೂ ಅಷ್ಟೇ, ತಮ್ಮ ಜೀವನದ ಅನುಭವಗಳನ್ನ ಕಥೆಗಳ ರೂಪದಲ್ಲಿಯೋ ಅಥವಾ ತಲೆ ತಲಾಂತರದಿಂದ ಕೇಳಿ ತಿಳಿದು ಬಂದ ಪಂಚತಂತ್ರದ ಕಥೆಗಳನ್ನ ಮಕ್ಕಳಿಗೆ ಹೇಳುತ್ತಾ ಇದ್ದರು. ಆಮೇಲೆ ಅವಿಭಿಜಿತ ಅವಿಭಕ್ತ ಕುಟುಂಬಗಳು ಮಾಯವಾಗಿ, ವಿಭಕ್ತ ಕುಟುಂಬಗಳದ ಮೇಲೆ ನಾವು ನಮ್ಮ ತಂದೆ ತಾಯಿಯರಿಂದ ಕಥೆ ಕೇಳಲು ಪ್ರಾರಂಭಿಸಿದೆವು, ಅವರು ಅವರಿಗೆ ಎಷ್ಟು ನೆನಪಿದೆಯೋ ಅಷ್ಟು ಕಥೆಗಳನ್ನ ಹೇಳುತಿದ್ದರು.

ಆದರೆ ಇವತ್ತು ನಾವು ನಮ್ಮ ಮಕ್ಕಳಿಗೆ ಕಥೆ ಹೇಳಬೇಕು ಎಂದರೆ ನಮಗಾವ ಪಂಚತಂತ್ರದ ಕಥೆಗಳು ನೆನಪಿವೆ? ಅಲ್ಪ ಸ್ವಲ್ಪ ನೆನಪಿದ್ದರೂ ಹೇಳಲು ಸಮಯವೆಲ್ಲಿದೆ? ಬೆಳಿಗ್ಗೆ ಮನೆ ಬಿಟ್ಟು ರಾತ್ರಿ ಮಕ್ಕಳು ಮಲಗಿದ ಮೇಲೆ ಮನೆಗೆ ಬಂದರೆ ಕಥೆ ಹೇಳುವುದಾದರು ಯಾರಿಗೆ? ಇನ್ನೂ ನಮ್ಮ ಮಕ್ಕಳು ಕಥೆ ಕೇಳಬೇಕು ಎಂದರೆ ಅವರ ಶಾಲೆಯಲ್ಲಿ ಹೇಳಿಕೊಡುವ ಇಂಗ್ಲಿಷ್ ಕಥೆಗಳನ್ನೇ ಕೇಳಬೇಕು. ಅಪ್ಪ ಅಮ್ಮಂದಿರೇ ಊರು ಬಿಟ್ಟು ದೂರದಲ್ಲಿ ಕೆಲಸಮಾಡುತ್ತಿರುವಾಗ ಕಥೆ ಹೇಳಲು ಅಜ್ಜ-ಅಜ್ಜಿಯರೆಲ್ಲಿ? ನಮಗೆ ಪಂಚತಂತ್ರ ಗೊತ್ತಿಲ್ಲ ಅಂದ ಮೇಲೆ ನನ್ನ ಮಗೂಗೆ ಹೇಗೆ ಪಂಚತಂತ್ರದ ಕಥೆಗಳು ಗೊತ್ತಾಗುತ್ತವೆ. ಹೀಗೆ ಮುಂದುವರೆದರೆ ಆ ಕಾಗಕ್ಕ-ಗುಬ್ಬಕ್ಕ ಕಥೆಗಳು ನಮ್ಮೊಂದಿಗೆ ಕೊನೆಯಾಗಿ ಬಿಟ್ಟರು ಆಶ್ಚರ್ಯವೇನಿಲ್ಲ.

ನನ್ನ ಯೋಚನೆಗೆ ಇನ್ನೊಂದು ಕಾರಣವೆಂದರೆ, ಹಿಂದೆ ನಮಗೆಲ್ಲ ಕಾಗಕ್ಕ ಅಂದರೆ ಕಾಗೆ ಮತ್ತು ಗುಬ್ಬಕ್ಕ ಅಂದರೆ ಗುಬ್ಬಿ ಎಂದು ತಕ್ಷಣ ಅರ್ಥವಾಗುತ್ತಿತ್ತು. ಮನೆಯ ಚಾವಣಿಯ ಅಂಚಿಗೆ ಗೂಡು ಕಟ್ಟಿ ಆಟವಾಡುವ ಗುಬ್ಬಿಗಳನ್ನೋ, ಮನೆಯ ಜಗುಲಿಯ ಹೊರಗೆ ಅಂಗಳದಲ್ಲಿ ಸದಾ ಕಾ ಕಾ ಎಂದು ಓಡಾಡುವ ಕಾಗೆಗಳನ್ನ ನೋಡಿದಾಗ, ಓ ಗುಬ್ಬಿ ಹೀಗಿರುತ್ತೆ, ಕಾಗೆ ಹೀಗಿರುತ್ತೆ ಎಂದು ತಕ್ಷಣ ಅರ್ಥವಾಗಿಬಿಡುತ್ತಿತ್ತು. ಆದರೆ ಇವತ್ತು ಬೆಂಗಳೂರಿನಂತ ನಗರದಲ್ಲಿ, ಕಾಗೆ ಗುಬ್ಬಿಗಳನ್ನ ಹುಡುಕಬೇಕಂದರೆ ಅಸಾಧ್ಯವೇ ಸರಿ. ಇಂದು ಹಳ್ಳಿಗಳಲ್ಲೂ ಅಷ್ಟೇ, ಹಂಚಿನ ಮತ್ತು ಹುಲ್ಲಿನ ಮನೆಗಳು ಮಾಯವಾಗಿ, ಕಾಂಕ್ರೀಟ ಮನೆಗಳು ತಲೆ ಎತ್ತುತಿವೆ. ಹೆಚ್ಚುತಿರುವ ಕಾಂಕ್ರೀಟ ಮನೆಯಿಂದಾಗಿ ಹಾಗೂ ಸಂಚಾರಿ ದೂರವಾಣಿಯ ತರಂಗಾಂತರದಿಂದಾಗಿ ಗುಬ್ಬಿಗಳು ಮಾಯವಾಗುತ್ತಿವೆ. ಕಾಗೆಗಳೂ ಮೊದಲಿನಷ್ಟು ಹೇರಳವಾಗಿಲ್ಲ. ಇದು ಕೇವಲ ಕಾಗೆ-ಗುಬ್ಬಿಗಳಿಗೆ ಸೀಮಿತವಾಗಿಲ್ಲ. ಪಂಚತಂತ್ರದಲ್ಲಿ ಬರುವ ನರಿ, ಮೊಲ, ಸಿಂಹ, ಹುಲಿಗಳದ್ದು ಇದೇ ಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮುಂದಿನ ಪೀಳಿಗೆಗೆ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳೋದು ಹೇಗೆ? ಒಂದೊಮ್ಮೆ ಹೇಳಿದರೂ ಅವರಿಗೆ ಅರ್ಥ ಆಗೋದಾದರೂ ಹೇಗೆ?

--ಮಂಜು ಹಿಚ್ಕಡ್