Wednesday, January 28, 2015

ಅವಳ ಚಲುವಿಗೆ ಸೋತು

ಅವಳ ಚಲುವಿಗೆ ಸೋತು
ಧರೆಗಿಳಿದು ಬಂದ
ಆ ಚಂದಿರನಂದ,
ನನ್ನನ್ನಿರಲೀ, ಅವಳನ್ನಿರಲೀ
ದೂರದಿಂದ ನೋಡಿದರಷ್ಟೇ
ಭಲು ಚಂದ.

-ಮಂಜು ಹಿಚ್ಕಡ್

Wednesday, January 21, 2015

ನನ್ನ ಕಥೆ

(೨೦೦೩ ರಲ್ಲಿ ಹಿಚ್ಕಡ್ ಪ್ರಾಥಮಿಕ ಶಾಲೆಯ ಅಮ್ರತ ಮಹೋತ್ಸವದ ಸಂಚಿಕೆಗಾಗಿ ಬರೆದಿದ್ದು)

ಓ ಶಿಷ್ಯ, ನಿನಗಾಗಿ ಈ ಚಿಕ್ಕ ಓಲೆ
ಮರೆಯದಿರು, ’ನಿನ್ನವ್ವ’ ನಾ ಹಿಚಕಡ ಶಾಲೆ
ಸಹ್ಯಾದ್ರಿಯ ತಪ್ಪಲಲಿ ನನ್ನ ಪುಟ್ಟ ಮಹಲು
ಸುರ್ಯಚಂದ್ರರಳಿಯಬೇಕು ನನ್ನ ಹೆಸರು ಮಾಸಲು ||೧||

ಸ್ವಾತಂತ್ರ್ಯ ಪೂರ್ವದಲ್ಲೇ ನನ್ನಯ ಉಗಮ
ಇಂದು ನನಗೀಗ ಎಂಬತ್ತರ ಸಂಭ್ರಮ
ಎಂಟು ದಶಕಗಳಾದರೂ, ನನಗಿಂದು ಯವ್ವನ
ಅದರ ನೆನಪಿಗಾಗಿ ಈ ಪುಟ್ಟ ಕವನ ||೨||

ಕನ್ನಡಾಂಬೆಯ ಹಸುಗೂಸು ನಾನೆಂಬುದು ಸತ್ಯ
ನನ್ನ ಮಕ್ಕಳಿಗೆಲ್ಲ ನನ್ನದೇ ಸಾರಥ್ಯ
ಸರ್ವರಿಗೂ ಶಿಕ್ಷಣ ಎನ್ನುವುದು ಮಾತು
ಬೇರಾವುದು ಇಲ್ಲ ಕನ್ನಡದ ಹೊರತು ||೩||

ಓ ಶಿಷ್ಯ ನಿನ್ನ ಕೀರ್ತಿ ಹಬ್ಬಲಿ ದೂರ, ಬಲು ದೂರ
ಆಗಲೇ ಇಳಿಯುವುದು ನನ್ನ ತಲೆ ಭಾರ
ನಾ ಬಯಸುವುದಿಷ್ಟೇ ನನ್ನ ಶಿಷ್ಯರ ಅಭಿವೃದ್ಧಿ
ಅವರಿಗೆಂದೂ ಬರದಿರಲಿ ಕೆಡುಕು ಬುದ್ಧಿ ||೪||

ನಾನೆಂದಿಗೂ ಸಾರುವೆ ಏಕತೆಯ ಮಂತ್ರ
ನನಗೆಂದಿಗೂ ಇಲ್ಲ ಜಾತಿಬೇಧದ ಕುತಂತ್ರ
ಬಯಸಿ ಬಂದವರಿಗೆಲ್ಲ ನೀಡಿದೆ ವಿದ್ಯೆಯ ಕಾಣಿಕೆ
ಎಲ್ಲರಿಗೂ ಶುಭವಾಗಲಿ ಎನ್ನುವುದೇ ನನ್ನ ಹಾರೈಕೆ ||೫||

ಅಂದು ನನ್ನಂಗಳದಲ್ಲಿ ಸ್ವಾತಂತ್ರದ ಹೋರಾಟ
ಇಂದು ನನ್ನ ಪಕ್ಕದಲ್ಲೆ ಸೇಂದಿ-ಸಾರಾಯಿ ಮಾರಾಟ
ನನ್ನ ಮಕ್ಕಳಿಗೇಕೆ ಇಂತಹ ದುರ್ಬುದ್ದಿ
ಎಂದು ಮಾಡಿಕೊಳ್ಳುವರೋ ತಮ್ಮ ಆತ್ಮ ಶುದ್ದಿ ||೬||

ಇಲ್ಲಿಯವರೆಗೆ ಬದುಕಿದೆ ಮಳೆಗಾಲಿಗೆ ಅಂಜದೆ
ಇಂದಿಗೇಕೋ ಹೆದರುತಿದೆ ಈ ರಾಜಕೀಯಕೆ ನನ್ನೆದೆ
ಇತ್ತಿತ್ತಲಾಗಿ ಮರೆಯಾಗುತ್ತಿದೆ ನನ್ನ ನೆನಪು
ಹೇಗೆ ತೊರಲಿ ಇವರಿಗೆ ಈ ಚಿರ ಯವ್ವನೆಯ ಒನಪು ||೭||

ಓ ಶಿಷ್ಯ ಇಂದು ನಿನಗುಂಟು ನನ್ನ ರಕ್ಷಣೆಯ ಹೊಣೆ
ಎಂದಿಗೂ ಬದಲಿಸದಿರು ನಿನ್ನಯ ಧೋರಣೆ
ನನ್ನ ರಕ್ಷಣೆಯಲ್ಲಿರಲಿ ನಿನ್ನ ಪ್ರಮುಖ ಪಾತ್ರ
ಎಂದು ಹೇಳಿ ಮುಗಿಸುವೆನು ಈ ನನ್ನ ಪತ್ರ ||೮||

-ಮಂಜು ಹಿಚ್ಕಡ್

Saturday, January 17, 2015

ಚಿಂತೆಗೆ ಕೊನೆಯುಂಟೆ?

(೧೨-ಜನವರಿ-೨೦೧೫ ರ ಪಂಜು ಪತ್ರಿಕೆಯಲ್ಲಿ ಪ್ರಕಟವಾದ ಕತೆ )
ಒಮ್ಮೆ ಮೆದುಳಿಗೆ ಹೊಕ್ಕ ಚಿಂತೆಗಳಿಗೆ ಹೊಸತು ಹಳತು ಎನ್ನುವ ಭೇದಬಾವವಿಲ್ಲ. ಕುಳಿತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಮನಸ್ಸನ್ನು ಹೊಕ್ಕ ಚಿಂತೆಗಳು ಆಗಾಗ ಜಾಗ್ರತಗೊಂದು ಕಾಡುತ್ತಿರುತ್ತವೆ. ಇರಲಿ ಎಂದು ಹಾಗೆ ಸುಮ್ಮನೆ ಬಿಡುವಂತಿಲ್ಲ. ಹಾಗೇನಾದರೂ ಬಿಟ್ಟು ಬಿಟ್ಟರೆ ಅದು ಬೆಳೆಯುತ್ತಾ ಹೋಗಿ ಹೆಮ್ಮರವಾಗಿ ಬಿಡುತ್ತದೆ. ಆ ಚಿಂತೆಗಳಿಗೆ ಅದೆಷ್ಟು ಬೇಗ ಪರಿಹಾರ ಕಂಡುಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ಇದು ಸೋಮನಿಗೂ ಕೂಡ ತಿಳಿದ ವಿಷಯ. ಸೋಮ ಜಾಸ್ತಿ ಓದಿದವನಲ್ಲದಿದ್ದರೂ ತನ್ನ ಅರವತ್ತು ವರ್ಷದ ಅನುಭವದಿಂದಾಗಿ ಅವನಿಗೆ ಅದೆಲ್ಲವೂ ತಿಳಿದ ವಿಚಾರವಾರವೇ. ಹಾಗಂತ ಸೋಮನೇನು ಚಿಂತೆಯೇ ಇಲ್ಲದ ವ್ಯಕ್ತಿಯೇನಲ್ಲ. ಅವನ ಮನಸ್ಸಿನಲ್ಲೂ ಅದೆಷ್ಟೋ ಚಿಂತೆಗಳು ಬಂದು, ಕಾಡಿ ಹೊರಟು ಹೋಗಿವೆ. ಆದರೆ ಒಂದು ಚಿಂತೆ ಮಾತ್ರ ಹಲವಾರು ವರ್ಷಗಳಿಂದ ಕಾಡುತ್ತಲೇ ಇದೆ. ಅದು ಇತರರೊಂದಿಗೆ ಹೇಳಿಕೊಳ್ಳಲು ಆಗದ, ಪರಿಹರಿಸಲು ಆಗದಂತಹ ಚಿಂತೆಯಾದ್ದರಿಂದ ಆಗಾಗ ಕಾಡುತ್ತಲೇ ಇರುತ್ತದೆ.

ಸೋಮ ಗಿರಿಜಾಳನ್ನು ಮದುವೆಯಾಗಿ ಹತ್ತು ಹದಿನೈದು ವರ್ಷಕಳೆದರೂ ಮಕ್ಕಳಾಗಲಿಲ್ಲ. ಮಕ್ಕಳಾಗಲಿ ಎಂದು ಸಿಕ್ಕ ಸಿಕ್ಕವರೆಲ್ಲ ಕೊಟ್ಟ ಬಿಟ್ಟಿ ಸಲಹೆಗಳನ್ನು ಪಾಲಿಸಿದ್ದಾಯಿತು. ಕಂಡ ಕಂಡ ದೇವರಿಗೆಲ್ಲ ಕೈ ಮುಗಿದದ್ದಾಯಿತು. ಅವರು, ಇವರು ಕೊಟ್ಟ ಬೇರುಗಳನ್ನು ತೇಯ್ದು ಕುಡಿದಿದ್ದಾಯಿತು, ಹೆಂಡತಿಗೂ ಕುಡಿಸಿದ್ದಾಯ್ತು. ದೇವರಿಗೆ ಹರಕೆ ಹೊತ್ತಿದ್ದಾಯ್ತು. ಆದರೆ ಮಕ್ಕಳಾಗಲಿಲ್ಲ. ಮಕ್ಕಳಿಲ್ಲ ಎನ್ನುವ ಚಿಂತೆ ಕಾಡುತ್ತಲೇ ಇತ್ತು. ಹೀಗಿರುವಾಗ ಒಮ್ಮೆ ಗಿರೀಜಾಳಿಗೆ ಹುಷಾರು ತಪ್ಪಿದಾಗ, ಸೋಮ ಹೆಂಡತಿಯನ್ನು ನಗರದ ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋದ. ಆ ಆಸ್ಪತ್ರೆಯ ದೊಡ್ಡ ಡಾಕ್ಟ್ರೇನೂ ಅವನಿಗೆ ಪರೀಚಯವಿಲ್ಲದವರೇನಲ್ಲ. ಮಕ್ಕಳಿಲ್ಲವೆಂದು ಅವರ ಬಳಿಯೂ ಹತ್ತಾರು ಬಾರಿ ಹೋಗಿ ಔಷಧ ತಂದು ತಿಂದಿದ್ದರೂ ಕೂಡ. ಆ ದೊಡ್ಡ ಡಾಕ್ಟರಿಗೆ ಗಿರಿಜಾಳ ಸ್ಥಿತಿ ನೋಡಿದಾಗಲೇ ಇದು ಚಿಂತೆಯಿಂದ ಬಂದ ಕಾಯಿಲೆಯೆಂದು, ಗಂಡ ಹೆಂಡತಿಯನ್ನು ಕರೆದು ಕೂಡಿಸಿಕೊಂಡು ಡಾಕ್ಟರರು, "ನೋಡಿ ನಿಮಗೆ ಆಗಲೇ ೩೫ -೪೦ ವರ್ಷವಾಯಿತು. ಇನ್ನೂ ಸ್ವಂತ ಮಕ್ಕಳಿಗಾಗಿ ಪ್ರಯತ್ನಿಸುವ ಬದಲು ಯವುದಾದರೂ ಅನಾಥ ಮಗುವನ್ನು ಚಿಕ್ಕದಿದ್ದಾಗಲೇ ದತ್ತು ತೆಗೆದುಕೊಂಡು ಸಾಕಬಹುದಲ್ಲ. ನಿಮಗೂ ಮಕ್ಕಳಿಲ್ಲ ಎನ್ನುವ ಕೊರತೆಯೂ ನೀಗಿದಂತಾಗುತ್ತದೆ, ಆ ಅನಾಥ ಮಗುವಿಗೂ ಬಂದು ದಾರಿ ಸಿಕ್ಕಂತಾಗುತ್ತದೆ." ಎಂದು ಹೇಳಿದಾಗ ಗಂಡ ಹೆಂಡಿರಿಬ್ಬರೂ ಯೋಚಿಸಿ, ಡಾಕ್ಟರ್ ಹೇಳಿದ್ದು ನಿಜವೆನಿಸಿ "ಅದು ಸರಿ, ಆದರೆ ಅಂತಹ ಮಗು ಎಲ್ಲಿ ಸಿಗುತ್ತದೆ?" ಎಂದು ಕೇಳಿದರು. "ಬೇರೆ ಕಡೆ ಏಕೆ, ನಮ್ಮ ಆಸ್ಪತ್ರೆಯಲ್ಲೇ ಒಮ್ಮೊಮ್ಮೆ, ಅಪರೂಪಕ್ಕೆ ತ್ರಷೆಗೋ, ತೆವೆಲಿಗೋ ಹುಟ್ಟಿ ಯಾರಿಗೂ ಬೇಕಾಗದೇ, ಹಾಗೆ ಹುಟ್ಟಿದ ಶಿಶುವನ್ನು ಸಾಕಲೂ ಆಗದೇ, ನಮ್ಮ ಅರಿವಿಗೆ ಬಾರದಂತೆ ಇಲ್ಲೇ ಬಿಟ್ಟು ಹೋಗುವವರುಂಟು. ಅತಂಹ ಶಿಶು ಇದ್ದರೆ ಹೇಳಿ ಕಳಿಸುತ್ತೇನೆ. ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿ ಒಂದಿಷ್ಟು ಔಷಧ ಬರೆದು ಕೊಟ್ಟು ಕಳಿಸಿದ್ದರು.

ಇದಾಗಿ ಮೂರು ತಿಂಗಳು ಕಳೆದಿದ್ದವು. ಗಿರೀಜಾಳು ಸ್ವಲ್ಪ ಚೇತರಿಸಿ ಕೊಂಡಿದ್ದಳು. ಮನೆಯ ಎದುರಿಗೆ ಯಾರೋ ಬಂದು ಸೋಮನನ್ನು ಡಾಕ್ಟರರು ಗಂಡ ಹೆಂಡಿರಿಬ್ಬರು ಕೂಡಲೇ ಬಂದು ಹೋಗಲು ತಿಳಿಸಿದ್ದಾರೆ ಎಂದು ಹೇಳಿ ಹೋದರು. ಹೇಳಿದ ದಿನವೇ ಗಂಡ ಹೆಂಡಿರಿಬ್ಬರೂ ಆಸ್ಪತ್ರೆಗೆ ಹೋಗಿ ಡಾಕ್ಟರನ್ನು ಬೆಟ್ಟಿಯಾದರು. ಡಾಕ್ಟರ್ ಗಂಡ ಹೆಂಡಿರಿಬ್ಬರನ್ನು ಕರೆದುಕೊಂಡುಹೋಗಿ ಒಂದುವಾರದ ಹಿಂದೆ ಹುಟ್ಟಿದ, ತಂದೆ ತಾಯಿಗೆ ಬೇಡವಾಗಿಯೋ ಅಥವಾ ಬೇಡವಾದ ತಂದೆಗೆ ಹುಟ್ಟಿಯೋ ಅಥವಾ ಬಹಳ ಜನರಲ್ಲಿ ತಂದೆಯಾರೆಂದೋ ತಿಳಿಯದ ಮುಗ್ದ ಏಳು ದಿನಗಳ ಗಂಡು ಮಗುವನ್ನು ತೋರಿಸಿ, ನಿಮಗೆ ಬೇಕಾದಲ್ಲಿ ತೆಗೆದುಕೊಂಡು ಹೋಗಬಹುದೆಂದರು. ಮಗು ತುಂಬಾ ಕೆಂಪಗಾಗಿ ಮುದ್ದು ಮುದ್ದಾಗಿದ್ದು ತುಂಬಾ ಸುಂದರವಾಗಿತ್ತು. ಮಕ್ಕಳಿಲ್ಲದ ಅವರಿಗೆ ಬೇಡವೆನ್ನಲಾಗದೇ ಆ ಮಗುವನ್ನು ತೆಗೆದುಕೊಂಡು ಬಂದರು.
-------------+++++++-------------
ಇದೆಲ್ಲಾ ಆಗಿ ೨೫ ವರ್ಷಗಳೇ ಕಳೆದುಹೋಗಿವೆ, ಅಂದು ಆಸ್ಪತ್ರೆಯಿಂದ ತಂದ ಮಗು ಇಂದು ಬೆಳೆದು ಯುವಕನಾಗಿದ್ದಾನೆ. ಚಿಂತೆಗಳು ಪ್ರಾರಂಭವಾಗಿದ್ದೇ ಅವನು ದೊಡ್ಡವನಾದ ಮೇಲೆ. ಮಗು ತಂದು ಅದಕ್ಕೆ ದಿನೇಶ ಎನ್ನುವ ಹೆಸರನ್ನಿಟ್ಟು, ದೊಡ್ಡವನನ್ನಾಗಿ ಮಾಡಿ, ಪದವಿಯವರೆಗೂ ಕಷ್ಟ ಪಟ್ಟು ಓದಿಸಿದ್ದರೂ ಆ ದಂಪತಿಗಳು. ಆದರೆ ದಿನೇಶ ಎಂದು ಹೈಸ್ಕೂಲು ಮುಗಿದು ಕಾಲೇಜು ಸೇರಿಕೊಂಡನೋ, ಅಲ್ಲಿಂದ ಶುರುವಾಯಿತು ದಿನೇಶನ ಹುಚ್ಚಾಟ.                                  
ಕೆಟ್ಟ ಹುಡುಗರೊಂದಿಗೆ ಸೇರಿ ಬೀಡಿ ಸೇದುವುದು, ಇಸ್ಪೀಟು ಆಡುವುದು, ಜೂಜಾಡುವುದು, ಎಲ್ಲವನ್ನು ಶುರುಮಾಡಿದ. ಆಗಾಗ ಕುಡಿದು ತಡಮಾಡಿ ಮನೆಗೆ ಬರುತ್ತಿದ್ದ. ಇತ್ತೀಚೆಗೆ ಕೆಲವು ದಿನಗಳಿಂದ ಹುಡುಗಿಯರ ಚಟವು ಪ್ರಾರಂಭವಾಗಿತ್ತು. ಇದನ್ನೆಲ್ಲ ನೋಡಿದ ದಂಪತಿಗಳು ತಮಗೆ ಮಕ್ಕಳ್ಳಿಲ್ಲದೇ ಹಾಗೆ ಇದ್ದಿದ್ದರೆ ಚೆನ್ನಾಗಿತ್ತು. ಇವನನ್ನು ಕರೆದುಕೊಂಡು ಬಂದು ಸಾಕಿ ಸಲಹಿ ತಪ್ಪು ಮಾಡಿದೆವು ಅನ್ನುವ ಚಿಂತೆ ಕಾಡತೊಡಗಿತ್ತು.

ಇಂದು ಸುದಾರಿಸಿಕೊಳ್ಳಬಹುದು, ನಾಳೆ ಸುದಾರಿಸಿಕೊಳ್ಳಬಹುದು ಎಂದು ಕಾದಿದ್ದು ವ್ಯರ್ಥವಾಗಿತ್ತು. ದಿನಕಳೆದಂತೆ ದಿನೇಶನ ಕಾಟ ಜಾಸ್ತಿಯಾಗುತ್ತಲೇ ಹೋಗಿತ್ತು. ಈಗಿಗಂತೂ ಕುಡಿದು ತಂದೆ ತಾಯಿಯರಿಗೆ ಹೊಡೆಯುವ ಮಟ್ಟಕ್ಕೆ ಬೆಳೆದಿದ್ದ. ಒಂದೆರಡು ತಿಂಗಳ ಹಿಂದೆ ಅದಾವುದೋ ಹುಡುಗಿಯನ್ನು ಕರೆತಂದು ನಾನು ಇವಳನ್ನು ಮದುವೆಯಾಗುತ್ತೇನೆ ಎಂದು ಹೇಳಿ ಹೋದವನು ಮೂನ್ರಾಲ್ಕು ದಿನ ಮನೆ ಕಡೆ ಮುಖವನ್ನೇ ತೋರಿಸದವನು, ಒಂದು ವಾರ ಕಳೆದ ನಂತರ ಆಕೆಯೊಂದಿಗೆ ಬಂದು ಈಕೆಯನ್ನು ತಾನು ಮದುವೆಯಾಗಿದ್ದೇನೆ ಅಂದು ಹೇಳಿದಾಗ ದುಃಖದ ಬದಲು ಸಂತೋಷವೇ ಆಗಿತು. ಆ ಮುದಿ ದಂಪತಿಗಳಿಗೆ ಮದುವೆಯಾದ ಮೇಲಾದರೂ ಜವಾಬ್ದಾರಿ ಬಂದು ಹೆಂಡತಿಯನ್ನು ತಮ್ಮನ್ನು ನೋಡಿಕೊಳ್ಳಬಹುದೆಂದು ತಿಳಿದುಕೊಂಡವರಿಗೆ, ಅದು ಸುಳ್ಳು ಎಂದು ತಿಳಿಯಲು ತುಂಬಾ ದಿನಾ ಬೇಕಾಗಿರಲಿಲ್ಲ. ಅಂದು ಅಪ್ಪ ಅಮ್ಮನಿಗೆ ಹೊಡೆಯುತ್ತಿದ್ದವನು ಈಗ ಕುಡಿದು ಬಂದು ಹೆಂಡತಿಗೂ ಆಗಾಗ ಹೊಡೆಯುತ್ತಿದ್ದ. ಇದ್ಯಾವ ಧರಿಧ್ರ ಪಿಂಡವನ್ನು ತಂದು ಸಾಕಿದೆವೋ ಅನ್ನುವ ಚಿಂತೆ ಕಾಡಲು ಶುರುವಾಗಿ ಐದಾರು ವರ್ಷಗಳು ಗತಿಸಿದರೂ ಇಂದಿಗೆ ಅದು ಭಲವಾಗಿತ್ತು. ಒಮ್ಮೆ ಮಗ ಸೊಸೆ ಇಲ್ಲದಾಗ ಸೋಮು, ಹೆಂಡತಿಗೆ "ಈ ಧರಿದ್ರನ ಕಾಟ ಅತಿಯಾಗಿದೆ ಒಮ್ಮೆ ಅವನಿಗೆ ಅವನ ಹುಟ್ಟಿನ ಬಗ್ಗೆ ಹೇಳಿ ಬಿಡುತ್ತೇನೆ" ಎಂದಾಗ ಗಿರೀಜಾ "ಹಾಗೆ ಹೇಳೋದೂ ಬೇಡ, ನಮ್ಮ ಹೊಟ್ಟೆಯಲ್ಲಿ ಹುಟ್ಟದಿದ್ದರೂ, ನವು ಸಾಕಿ ಬೆಳೆಸಿದ್ದೇವೆ. ಇಷ್ಟು ವರ್ಷ ಹೇಗೋ ಸಹಿಸಿ ಕೊಂಡಿದ್ದಿವಿ. ನಾವು ಇನ್ನೆಷ್ಟು ವರ್ಷ ಬದುಕುತ್ತೇವೆ?" ಎಂದಳು. ಆಗ  ಸೋಮ "ಹಾಗಲ್ಲ ಗಿರೀಜಾ ನಾವೇನೋ ಸಹಿಸಿಕೊಳ್ಳಬಹುದು, ಆದರೆ ಆ ಹುಡುಗಿ, ಅವನನ್ನು ನಂಬಿ ಬಂದವಳು. ಅವಳಿಗಾದರೂ ಆತ ಒಳ್ಳೆಯವನಾದರೆ ಸಾಕಿತ್ತು. ಹೀಗೆ ಮುಂದುವರೆದರೆ ಅವಳ ಬಾಳು ಹಾಳಾಗುತ್ತದೆ".

"ಅವನಿಗೆ ಹಾಗೆ ಏನನ್ನು ಹೇಳುವುದು ಬೇಡಾ, ಹಾಗೆನಾದರೂ ಅವನಿಗೆ ತಿಳಿಸಿದರೆ, ನಾನು ಬದುಕುಳಿಯುವುದಿಲ್ಲ. ನೀವೇನಾದರೂ ಹೇಳಿದರೆ ನನ್ನ ಮೇಲಾಣೆ" ಎಂದು ಹೆಂಡತಿ ಆಣೆ ಇಟ್ಟಾಗ ಸೋಮನಿಗೆ ಇನ್ನೂ ಚಿಂತೆ ಹೆಚ್ಚಾಗಿತ್ತು. ಯಾರೊಂದಿಗೂ ಹೇಳಿಕೊಳ್ಳಲೂ ಆಗದೇ, ಮನಸ್ಸಲ್ಲೇ ಇಟ್ಟುಕೊಳ್ಳಲೂ ಆಗದ ರೀತಿಯಲ್ಲಿ ಕಾಡುತ್ತಲೇ ಇತ್ತು. ಇದೊಂದು ಚಿಂತೆ ಇಲ್ಲ ಅಂದಿದ್ದರೆ ಸೋಮನಷ್ಟು ಸುಖಿ ಜೀವಿಯಾರು ಇಲ್ಲ ಅನ್ನ ಬಹುದಿತ್ತು. ಈ ಜಗತ್ತೇ ಹಾಗೆ ಅಲ್ಲವೇ, ಇಲ್ಲಿ ಚಿಂತೆಯಿಲ್ಲದವರು ಯಾರಿದ್ದಾರೆ. ಎಲ್ಲ ಇದೆ ಅನ್ನುವವರಿಗೂ ಒಂದಲ್ಲಾ ಒಂದು ಚಿಂತೆ ಕಾಡುತ್ತಲೇ ಇರುತ್ತದೆ. ಕೆಲವರು ತೋರಿಸಿಕೊಳ್ಳುತ್ತಾರೆ, ಕೆಲವರು ತೋರಿಸಿಕೊಳ್ಳುವುದಿಲ್ಲ ಅಷ್ಟೆ.

--ಮಂಜು ಹಿಚ್ಕಡ್

Saturday, January 10, 2015

ಅನಿರೀಕ್ಷಿತ

ನಿನ್ನೆ ಬೆಳಿಗ್ಗೆಯಿಂದ ಹೊಳುವಾಗಿದ್ದ ಮಳೆ ನೋಡಿ, ಇಂದಾದರೂ ಹಕ್ಕಲದಲ್ಲಿ ಬೆಳೆದ ಬೆಂಡೆ ಹೀರೆ ಗಿಡಗಳಿಗೆ ಸ್ವಲ್ಪ ಸ್ವಲ್ಪ ಸಗಣಿ ಗೊಬ್ಬರ ಹಾಕಿ, ತಕ್ಷಣ ಮಳೆಗೆ ಕೊಚ್ಚಿ ಹೋಗದ ಹಾಗೆ ಮಣ್ಣು ಹೊರಿಸಿ(ಮುಚ್ಚಿ) ಬರಬೇಕೆಂದು ಬೆಳಿಗ್ಗಿನ ಚಹಾ ತಿಂಡಿ ಮುಗಿಸಿ, ದನದ ಕೊಟ್ಟಿಗೆಯ ಪಕ್ಕದ ಗೊಬ್ಬರದ ಕುಳಿಯಿಂದ ಒಂದು ಬುಟ್ಟಿಯಲ್ಲಿ ಸಗಣಿ ಗೊಬ್ಬರ ತುಂಬಿ ತಲೆಯ ಮೇಲೆ ಹೊತ್ತುಕೊಂಡು, ಹೆಗಲ ಮೇಲೆ ಸಗಣಿ ತುಂಬುತ್ತಿದ್ದ ಗುದ್ದಲಿಯನ್ನು ಏರಿಸಿಕೊಂಡು ಹಕ್ಕಲದತ್ತ ಹೊರಟ ಲಕ್ಷ್ಮಣನಿಗೆ ಓದು ಮುಗಿದು ಎರಡು ವರ್ಷವಾದರೂ ತನಗಿನ್ನೂ ಕೆಲಸವಿಲ್ಲ ಎನ್ನುವ ಚಿಂತೆಗಿಂತಲೂ, ಇಂದು ಬೆಳಿಗ್ಗೆ ನಡೆದ ಘಟನೆಯ ಬಗ್ಗಿನ ಚಿಂತೆಯೇ ಹೆಚ್ಚು ಕಾಡತೊಡಗಿತು. ಅವನ ಕೆಲಸದ ಚಿಂತೆ ಅವನ ಮನದೊಳಗಿನದಾಗಿದ್ದು, ದಿನ ನಿತ್ಯ ಕಾಡಿ ಮರೆಯಾಗುವಂತದ್ದು. ಆದರೆ ಬೆಳಗಿನ ಚಿಂತೆ ಹೊಚ್ಚ ಹೊಸದು ತಕ್ಷಣ ಮರೆಯುವಂತದ್ದಲ್ಲ. ಹಾಗೆ ನೋಡಿದರೆ ಅದೇನು ಅಂತಹ ದೊಡ್ಡ ಘಟನೆಯೇನಲ್ಲದಿದ್ದರೂ, ಅದು ಅವನ ಇಂದಿನ ಸಂಪೂರ್ಣ ಮನಸ್ಥಿತಿಯನ್ನೇ ಹಾಳು ಮಾಡಿತ್ತು. ನೋಡುವವರಿಗೆ ಆತ ಸುಮ್ಮನೆ ನಡೆಯುತ್ತಿರುವಂತೆ ಅನ್ನಿಸಿದರೂ ಮನಸ್ಸು ಮಾತ್ರ ಸುಮ್ಮನಿರಲಿಲ್ಲ.

ಅದು ನಡೆದ್ದಿದ್ದಷ್ಟೇ , ಬೆಳಿಗ್ಗೆ ಏಳಾದರೂ ತಂಗಿ ಎದ್ದೇಳದ್ದನ್ನು ನೋಡಿ ರೂಮಿಗೆ ಹೋಗಿ ನೋಡಿದರೆ ತಂಗಿ ಇನ್ನೂ ಮಲಗಿಯೇ ಇದ್ದಳು. ರಾತ್ರಿ ಪೂರ್ತಿ ಓದಿ ಮಲಗಿರಬೇಕು ಅದಕ್ಕೇ ಪುಸ್ತಕ ಪಕ್ಕದಲ್ಲೇ ಬಿದ್ದಿದೆ. ಪುಸ್ತಕವನ್ನಾದರೂ ಎತ್ತಿಡೋಣವೆಂದು ಪುಸ್ತಕ ಎತ್ತಿ ನೋಡಿದರೆ ಅದು ಕಾದಂಬರಿ ಪುಸ್ತಕ. ಆ ಪುಸ್ತಕ ನೋಡಿದೊಡನೆಯೇ ಉರಿದು ಬಿದ್ದ. ಇಲ್ಲಿಯವರೆಗೆ ತಂಗಿಯ ಮೇಲಿದ್ದ ಮಮತೆ ಕೋಪವಾಗಿ ಬದಲಾಯಿತು. ಅಲ್ಲಿಂದಲೇ ಅಡುಗೆ ಕೋಣೆಯಲ್ಲಿ ದೋಸೆ ಮಾಡುತ್ತಾ ಕುಳಿತಿದ್ದ ತನ್ನ ಅಮ್ಮನನ್ನು ಕೂಗಿದ. ಅವನ ಕೂಗಿಗೆ ಬೆಚ್ಚಿ ಎಚ್ಚೆತ್ತಳು ತಂಗಿ ಸರೋಜ. ದೋಸೆ ಮಾಡುತ್ತಿದ್ದ ಅಮ್ಮ ಓಡಿ ಬಂದು "ಏನಾಯ್ತೋ? ಯಾಕೆ ಅಷ್ಟು ಜೋರಾಗಿ ಅರಚುತ್ತೀಯಾ" ಎಂದು ಕೇಳಿದಾಗ. "ನೋಡೆ ನಿನ್ನ ಮಗಳು, ಇನ್ನೇನು ಎರಡು ತಿಂಗಳಲ್ಲಿ ಪರೀಕ್ಷೆ ಬಂತು, ಕಳೆದ ಸೆಮಿಸ್ಟರ್ನ ವಿಷಯಗಳೇ ಇನ್ನೂ ಬಾಕಿ ಇವೆ. ಹೀಗೆ ಕಾದಂಬರಿ ಓದುತ್ತಾ ಕುಳಿತರೆ ಪಾಸು ಮಾಡಿದ ಹಾಗೆಯೇ?"

ಅಣ್ಣನ ಕೂಗಾಟಕ್ಕೆ ಸರೋಜಾಳ ನಿದ್ದೆ ಓಡಿ ಹೋಗಿತ್ತು, ಆ ಹೊತ್ತಿಗೆ ಅವಳಿಗೆ ತನ್ನ ತಪ್ಪಿನ ಅರೀವು ಕೂಡ ಆಗಿ ಹೋಗಿತ್ತು. ತಾನು ಕಾದಂಬರಿ ಓದುತ್ತಿದ್ದುದು ಅಣ್ಣನಿಗೆ ತಿಳಿದು ಬಿಟ್ಟಿದೆ ಎಂದು ಗೊತ್ತಾದೊಡನೆ ಏನನ್ನು ಮಾತನ್ನಾಡದೇ ಸುಮ್ಮನೆ ಕುಳಿತಳು.

"ಹೌದೇನೇ? ಯಾಕೆ ಓದೋ ಮನಸಿಲ್ವೇನೇ? ಓದೋ ಮನಸ್ಸಿಲ್ಲದ್ದಿದ್ದರೆ ಕಾಲೇಜಿಗಾದರೂ ಯಾಕೆ ಹೋಗುತ್ತಿಯಾ?" ಎಂದು ತಾಯಿ ಕೇಳಿದಾಗ "ಇಲ್ಲಾ ಅಮ್ಮಾ ಹಾಗೇನಿಲ್ಲಾ, ಈ ಪುಸ್ತಕ ಇಲ್ಲೇ ನನ್ನ ಪುಸ್ತಕದ ಸೆಲ್ಪ ಮೇಲೆ ಇತ್ತು, ಅದು ಏನು ಎಂದು ನೋಡಿದೆ. ಅದು ಕಾದಂಬರಿ ಎಂದು ತಿಳಿದ ಮೇಲೆ ಇಲ್ಲೇ ಹಾಗೆ ಇಟ್ಟಿದ್ದೆ ಅಷ್ಟೆ" ಎಂದು ತಕ್ಷಣಕ್ಕೆ ಹೊಳೆದ ಸುಳ್ಳನ್ನು ಹೇಳಿದಳು.

"ಏನೆ ಸುಳ್ಳು ಹೇಳ್ತಿಯೇನೆ?  ಕಳೆದ ಸಾರಿನೂ ಹೀಗೆ ಕಾದಂಬರಿ ಓದುತ್ತಾ ಕಳೆದಿರಬೇಕು ಅದಕ್ಕೆ ಎರಡು ವಿಷಯದಲ್ಲಿ ನಪಾಸಾಗಿದ್ದಿಯಾ. ಏನು ಕಾದಂಬರಿ ಓದುತ್ತಾ ಕುಳಿತು ಬಿಟ್ಟರೆ ಪಾಸಾಗಿ ಬಿಡ್ತಿಯಾ ಎಂದು ತಿಳಿದಿದ್ದಿಯಾ? ಎಂದು ಗದರಿದ.

"ಹಂಗೇನಿಲ್ಲಾ ಅಣ್ಣಾ" ಎಂದು ಮತ್ತೆ ಏನನ್ನು ಮಾತನಾಡಲಾರದೇ ಸುಮ್ಮನಾದಳು.

"ಗೊತ್ತಾಯ್ತು ಬಿಡು, ನೀನು ಹೀಗೆ ಓದಿದರೆ ಈ ಸಾರಿಯೂ ಪಾಸು ಮಾಡಿದ ಹಾಗೆಯೇ?" ಎಂದು ಅಣ್ಣ ಮತ್ತೆ ಮತ್ತೆ ಪರೀಕ್ಷೆಯಲ್ಲಿ ಪಾಸು ಮಾಡುವ ವಿಷಯವನ್ನು ಎತ್ತಿದಾಗ ಸರೋಜಾಳಿಗೆ ಇಲ್ಲಿಯವರೆಗೆ ಬಚ್ಚಿಟ್ಟ ಕೋಪ, ಅಸಹನೆಗಳು ಒಮ್ಮೇಲೆ ಹೊರಬರಲಾರಂಭಿಸಿದವು, "ಓದಿ ನಾನು ಮಾಡುವುದೇನಿದೆ? ನೀನೇನು ಓದಿ ಉದ್ದಾರ ಮಾಡಿದ್ದೀಯಾ? ನಿನ್ನ ಓಡು ಮುಗಿದು ಎರಡು ವರ್ಷ ಕಳೆದಿಲ್ಲವೇ? ನಿನಗೇನು ನೌಕರಿ ಸಿಕ್ಕಿದೆಯೇ? ಎಂದು ತಾನೇನು ಕಡಿಮೆ ಇಲ್ಲಾ ಎನ್ನುವ ರೀತಿಯಲ್ಲಿ ಕೂಗಾಡಿದಾಗ ಲಕ್ಷ್ಮಣನಿಗೆ ಒತ್ತರಿಸಿ ಬರುತ್ತಿದ್ದ ಕೋಪವನ್ನು ತಡೆಯಲಾಗಲಿಲ್ಲ. ತಾನು ಅಲ್ಲಿ ನಿಂತರೆ ಮತ್ತೇನು ಮಾಡುತ್ತಾನೆಯೋ ಎಂದು ಅವಳ ಕೋಣೆಯಲ್ಲಿ ನಿಲ್ಲಲಾರದೇ ಹೊರಬಂದು ಜಗುಲಿಯ ಮೇಲೆ ಕುಳಿತ.

ಸರೋಜ ಅಳುತ್ತಾ ಕುಳಿತಳು, ಅಮ್ಮ ಅವಳನ್ನು ಸಮಾಧಾನ ಮಾಡಿ ಅಡಿಗೆ ಕೋಣೆ ಸೇರುವ ಹೊತ್ತಿಗೆ, ಅವಳು ಒಲೆಯ ಮೇಲಿಟ್ಟು ಹೋದ ಚಹಾ ಸಂಪೂರ್ಣ ಬತ್ತಿ ಹೋಗಿತ್ತು. ಇಬ್ಬರಿಗೂ ಮತ್ತೆ  ಚಹಾ ಮಾಡಿ ತಿಂಡಿ ಕೊಡುವ ಹೊತ್ತಿಗೆ ಗಂಟೆ ಎಂಟು ದಾಟಿತ್ತು. ತಿಂಡಿ ತಿಂದು ಮುಗಿದರೂ ಅಣ್ಣ ತಂಗಿಯರಿಬ್ಬರೂ ಒಬ್ಬರಿಗೊಬ್ಬರು ಮಾತನಾಡಿಸಲಿಲ್ಲ. ಲಕ್ಷ್ಮಣ ತಿಂಡಿ ತಿಂದು ಮುಗಿಸಿದೊಡನೆಯೇ ನೇರವಾಗಿ ಗೊಬ್ಬರದ ಕುಳಿಗೆ ಬಂದಿದ್ದ, ಎರೆ ಗೊಬ್ಬರ ತೆಗೆದು ಕೊಂಡು ಹಕ್ಕಲಕ್ಕೆ ಹೋಗಲು.

------******------
ಮನಸ್ಸಿನಲ್ಲಿ ಮೂಡಿದ್ದ ಗೊಂದಲಗಳಿಂದಾಗಿ ಹಕ್ಕಲವರೆಗೆ ತಲುಪಿದ್ದೇ ಗೊತ್ತಾಗಲಿಲ್ಲ. ಬೆಂಡೆ ಹೀರೆ ಗಿಡಗಳು ಬೇರು ಬಿಟ್ಟ ಜಾಗದಲ್ಲಿ ಸ್ವಲ್ಪ ಮಣ್ಣು ತೆಗೆದು ಎರೆ ಗೊಬ್ಬರ ಹಾಕಿ ಮಣ್ಣು ಮುಚ್ಚಿ ಮುಗಿಸಬೇಕು ಎನ್ನುವಷ್ಟರಲ್ಲಿ ಹನಿ ಹನಿಯಾಗಿ ಬಿಳತೊಡಗಿತು ಮಳೆ. ಮೊದಲಿಗೆ ಹನಿ ಹನಿಯಾಗಿ ಬಿಳತೊಡಗಿದ್ದು, ಕ್ರಮೇಣ ತನ್ನ ವೇಗವನ್ನು ಜೊತೆಗೆ ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳತೊಡಗಿತು. ಇಂದು ಮಳೆ ಬರಲಾರದು ಎಂದು ಹಕ್ಕಲಕ್ಕೆ ಬಂದವನಿಗೆ ಏನು ಮಾಡುವುದು ಎಂದು ತೋಚದೇ, ಹಕ್ಕಲದ ಮೂಲೆಯಲ್ಲಿ ಅಪ್ಪ ನೆಟ್ಟಿದ್ದ ಸಾಗವನಿ ಗಿಡದ ಕೆಳಗೆ ಹೋಗಿ ನಿಂತುಕೊಂಡ.

ಪಟ ಪಟನೆ ಎಲೆಯ ಮೇಲೆ ಬಿಳುವ ಮಳೆಹನಿಯ ಸದ್ದು, ದೂರದಿಂದ ಕೇಳಿ ಬರುವ ನವಿಲು ಉಲಿವ ಸದ್ದು. ಹೊರಗೆ ಬೋರ್, ಬೋರ್ ಎಂದು ಎಡೆ ಬಿಡದೇ ಸುರಿಯುವ ಮಳೆಯ ಸದ್ದು, ಇವ್ಯಾವುದು ಅವನ ಮನಸ್ಸನ್ನು ಸುಮ್ಮನಿರಲು ಬಿಡಲಿಲ್ಲ. ಮನಸ್ಸು ಬೆಳಗ್ಗಿನ ಘಟನೆಯಿಂದ ವಿಹ್ವಲಗೊಂಡಿತ್ತು. ಬೆಳಗ್ಗಿನ ಘಟನೆ ಅವನ ಮನಸ್ಸನ್ನು ಸುಮ್ಮನಿರಲು ಬಿಡದೇ ಸರಪಳಿಯಂತೆ ನೇಯ್ದ ಹಳೆಯ ಘಟನೆಗಳನ್ನು, ಅವಗಳು ಹುದುಗಿಸಿಟ್ಟ ನೆನಪುಗಳನ್ನು ಕೆದಕಿ, ಕೆದಕಿ ಹೊರತರಲಾರಂಭಿಸಿತು.

೫ ವರ್ಷಗಳ ಹಿಂದೆ ಅಲ್ಲವೇ, ನಾನು ಆಗ ಬಿ.ಎಸ್.ಸಿ ಓದುತ್ತಿರುವಾಗ ಅಪ್ಪ ಇದೇ ಹಕ್ಕಲದಿಂದ ಮನೆಗೆ ಬರುವಾಗ ಹಾವು ಕಡಿದು ಸತ್ತದ್ದು. ಅಪ್ಪ ಸಾಯುವವರೆಗೂ ಆರಾಂ ಆಗಿ ಇದ್ದ ನಾನು ಅಪ್ಪ ಸತ್ತ ಮೇಲೆ ಅಪ್ಪನ ಜವಬ್ಧಾರಿಯನ್ನು ಹೆಗಲಮೇಲೆ ಹೊತ್ತು, ನಾನು ಓದುತ್ತಾ, ತಂಗಿಯನ್ನು ಓದಿಸಿದ್ದು. ನಾನು  ಯಾವುದಕ್ಕಾದರೂ ಅವಳಿಗೆ ಕೊರತೆ ಮಾಡಿದ್ದೇನೆಯೇ, ಬಿ.ಎಸ್.ಸಿ ಓದಿ ನೌಕರಿ ಇಲ್ಲದಿದ್ದರೂ ಕೈಕಟ್ಟಿ ಸುಮ್ಮನೆ ಮನೆಯಲ್ಲಿ ಕುಳಿತು ಕೊಳ್ಳದೇ ನಮ್ಮದೇ ಆದ ಜಮೀನಿನಲ್ಲಿ ಬೇಸಾಯ ಮಾಡಿಕೊಂಡು ಬರುತ್ತಿಲ್ಲವೇ. ಹಾಗೇ ಹೇಳಿದರೆ ನಾನೇನು ನಿರುಧ್ಯೋಗಿ ಏನಲ್ಲ. ಸಂಬಳದ ನೌಕರಿ ಇಲ್ಲದಿದ್ದರೇನಂತೆ, ಈ ಕೆಲಸವಾದರು ಇದೆಯಲ್ಲ. ಇದೆಲ್ಲ ಅವಳಿಗೂ ಗೊತ್ತಿದೆ ಅಲ್ಲವೇ, ಹಾಗಿದ್ದರೂ ಆಕೆ ನನ್ನನ್ನು ನಿರುದ್ಯೋಗಿ ಅನ್ನುವ ರೀತಿಯಲ್ಲಿ ಹೇಲಿದಳಲ್ಲ. ತಾನು ಅಭ್ಯಾಸಮಾಡುವುದನ್ನು ಬಿಟ್ಟು ಕಾದಂಬರಿ ಓದುತ್ತಾ ಕುಳಿತು ಬಿಟ್ಟಿದ್ದಳಲ್ಲ. ನಾನೇನು ಕಾದಂಬರಿ ಓದುವುದನ್ನು ಬೇಡ ಅನ್ನುತ್ತೇನೆಯೇ, ಅದನ್ನೂ ಓದಲು ಒಂದು ಸಮಯ, ಸಂದರ್ಭ ಎನ್ನುವುದಿರುತ್ತದಲ್ಲ. ಪರೀಕ್ಷೆ ಮುಗಿದ ಮೇಲೆ ಕೂಡ ಅದನ್ನೂ ಓದಬಹುದಲ್ಲವೇ? ಅವಳು ಮಾಡಿದ್ದು ತಪ್ಪು ಎಂದು ತಂದೆಯ ಸ್ಥಾನದಲ್ಲಿ ಒಂದೆರಡು ಮಾತನ್ನಾಡಿದ್ದು ತಪ್ಪೇ. ನಾನು ಬಯ್ದೆ ಎಂದ ತಕ್ಷಣ  ಅವಳ ಮೇಲೇನು ನನಗೆ ಧ್ವೇಷವೇ. ಹಾಗೇನು ಇಲ್ಲ, ಈಗಲೂ ಅವಳು ನನಗೆ ಮುದ್ದಿನ ತಂಗಿಯೇ. ಈಗ ಸ್ವಲ್ಪ ಬೇಸರಗೊಂಡಿರಬಹುದು, ಆಮೇಲೆ ಅವಳೇ ಬಂದು ಮಾತನ್ನಾಡಿಸುತ್ತಾಳೆ.

ಹೀಗೆ ಯೋಚಿಸುತ್ತಾ ನಿಂತವನಿಗೆ ಸಮಯ ಜಾರಿದ್ದೇ ಗೊತ್ತಾಗಲಿಲ್ಲ. ಮಳೆ ತನ್ನ ಆರ್ಭಟವನ್ನು ಮುಗಿಸಿ ಈಗ ಸ್ವಲ್ಪ ಹೊಳುವಾದರೂ, ಮರದ ಕೆಳಗೆ ನಿಂತ ಅವನಿಗೆ ಎಲೆಯ ಮೇಲಿಂದ ಬಿಳುವ ದೊಡ್ಡ ಹನಿಗಳು ಮಳೆನಿಂತ ಅನುಭವವನ್ನು ನೀಡಲಿಲ್ಲ. ಸಂಪೂರ್ಣ ಒದ್ದೆಯಾಗದಿದ್ದರೂ, ಬಹುತೇಕ ಅವನ ಬಟ್ಟೆಗಳೆಲ್ಲ ತೊಯ್ದಿದ್ದವು. ತಲೆಯ ಮೇಲಿಂದ, ಕೂದಲುಗಳ ಮೂಲಕ ಒಂದೊಂದೇ ಹನಿ ಮುಖದ ಮೇಲೆ ಬೀಳಲಾರಂಭಿಸಿದವು. ಮನೆಯಿಂದ ಬರುವಾಗ ಕಂಬಳಿಯನ್ನಾಗಲೀ, ಕೊಡೆಯನ್ನಾಗಲೀ ತರುವುದನ್ನು ಬಿಟ್ಟು ಹಾಗೆ ಬಂದುದ್ದು ಈಗ ತಪ್ಪೆನಿಸಿತು. ಇನ್ನೂ ಮರದ ಕೆಳಗೆ ನಿಂತೇನು ಪ್ರಯೋಜನ ಅನಿಸಿ, ಮಳೆ ಬಂತು ಎಂದು ಬಿಟ್ಟು ಬಂದ ಗಿಡಗಳಿಗೆ ಗೊಬ್ಬರ ಹಾಕಿ ಮುಗಿಸುವ ಹೊತ್ತಿಗೆ ನೇಸರನು ಸಂಪೂರ್ಣವಾಗಿ ಗೋಚರಸಿದ್ದರೂ, ಪೂರ್ವದಿಂದ, ಪಶ್ಚಿಮದ ಕಡೆಗೆ ಸರಿದಿದ್ದಾನೆ ಎನ್ನುವುದನ್ನು ಮೋಡದ ಮರೆಯಿಂದಲೇ ಮಂದವಾಗಿ ಕಾಣ ಬಹುದಾಗಿತ್ತು.

ಹೇಗೂ ಬಂದ ಕೆಲಸ ಮುಗಿದ ಮೇಲೆ, ಹೀರೆ ಬಳ್ಳಿಗೆ ಬಿಟ್ಟ ತಕ್ಕ ಮಟ್ಟಿಗೆ ಬೆಳೆದ ಹೀರೆ ಕಾಯಿಗಳನ್ನು, ಒಂದು ಸಾದಾರಣ ಗಾತ್ರದ ಸಿಹಿಗುಂಬಳ ಕಾಯಿಯನ್ನು ಕೊಯ್ದು, ಗೊಬ್ಬರ ತಂದ ಬುಟ್ಟಿಯಲ್ಲಿ ಒಂದೆರೆಡು ಸಾಗವಾನಿ ಎಲೆ ಹಾಸಿ ಅದರ ಮೇಲೆ ಆಗತಾನೇ ಕೊಯ್ದ ತರಕಾರಿಗಳನ್ನಿಟ್ಟು ಬುಟ್ಟಿಯನ್ನು, ಗುದ್ದಲಿಯನ್ನು ಹೊತ್ತು ಮನೆಯ ಕಡೆ ತಿರುಗಿದ. ಮನಸ್ಸು ಮತ್ತೆ ಬೆಳಗ್ಗಿನ ಘಟೆನೆಗಳ ಸುತ್ತಲೇ ಸುತ್ತಲಾರಂಭಿಸಿದರೂ ಆಗಿನಷ್ಟು ಕಾಡಲಿಲ್ಲ. ಇಂದು ನಾನು ದುಡುಕಿ ಹಾಗೆ ಮಾತನಾಡಬಾರದಿತ್ತು. ಅವಳು ಮಾಡಿದ್ದು ತಪ್ಪಾದರೂ ನಾನು ಸಿಡುಕ ಬಾರದಿತ್ತು. ಅವಳೇನು ಈಗ ಚಿಕ್ಕ ಹುಡುಗಿಯೇನಲ್ಲ. ನಾನಾದರೂ ಸ್ವಲ್ಪ ಯೋಚಿಸಬೇಕಿತ್ತು. ನಡೆದದ್ದು ನಡೆದು ಹೋಯಿತು, ಇವತ್ತು ಊಟ ಮಾಡುವ ಮೊದಲೇ ಅವಳಿಗೆ ನನ್ನ ತಪ್ಪನ್ನು ಅರುಹಿ, ಕ್ಷಮೆ ಕೇಳಬೇಕು ಎಂದು ಕೊಳ್ಳುತ್ತಾ ಹಕ್ಕಲಿನಿಂದ ದಾಪುಗಾಲು ಹಾಕುತ್ತಾ ಮನೆಯ ತಲುಪಿದ. ಸ್ವಲ್ಪ ಹೊತ್ತು ತಣ್ಣಗಿದ್ದ ಮಳೆ ಮತ್ತೆ ಜೋರಾಗ ತೊಡಗಿತು. ನಿಂತರೆ ನಿಂತು ಬಿಡುತ್ತೇನೆ ಎಂದು ಅಲ್ಲಿ ಎಲ್ಲೂ ನಿಲ್ಲದೇ ಮಳೆಯಲ್ಲಿ ನೆನೆಯುತ್ತಾ ಮನೆ ಸೇರಿದ.

ಮನೆಯ ಜಗುಲಿಯ ಹತ್ತಿರಕ್ಕೆ ಬಂದವನೇ, "ಅಮ್ಮಾ, ಅಮ್ಮಾ", ಎಂದು ಒಳಗೆ ಅಡುಗೆ ಕೋಣೆಯಲ್ಲಿದ್ದ ಅಮ್ಮನನ್ನು ಕೂಗಿದ. ಅವನ ಆತುರದ ಸ್ವಭಾವದ ಅರಿವಿದ್ದ ಅವನಮ್ಮ ಅಡುಗೆ ಕೋಣೆಯಿಂದ ಆತುರ ಆತುರವಾಗಿ ಓಡೋಡಿ ಬಂದು, ಅವನ ಒದ್ದೆ ಮೈಯನ್ನು ನೋಡಿ, "ಏನಪ್ಪಾ, ಇದು ಮಳೆಗಾಲ ಎಂದು ಗೊತ್ತಿಲ್ಲವೇ? ಕೊಡೆಯನ್ನಾದರೂ ತೆಗೆದುಕೊಂಡು ಹೋಗಬಹುದಿತ್ತು ತಾನೇ? ಒದ್ದೆಯಾಗಿ ಬಂದಿದ್ದಿಯಾ, ಹೋಗಿ ಸ್ನಾನ ಮಾಡಿ ಬಾ." ಎಂದಾಗ, "ಬುಟ್ಟಿಯಲ್ಲಿದ್ದ ತರಕಾರಿಗಳನ್ನು ಒಳಗೆ ಇಡು." ಎಂದು ಸ್ನಾನ ಮಾಡಲು ಹೊರಟು ನಿಂತ. ಸ್ನಾನಕ್ಕೆ ಹೊರಟುನಿಂತವನಿಗೆ, "ಇದ್ಯಾಕಪ್ಪಾ, ಈ ಸಿಹಿಗುಂಬಳ ಕಾಯಿಯನ್ನು ಈಗಲೇ ಕೊಯ್ದು ತಂದಿದ್ದಿಯಾ? ಇನ್ನೂ ಸ್ವಲ್ಪ ತಡೆದರೆ ಬೆಳೆಯುತಿತ್ತಲ್ಲವೇನೋ" ಎಂದಳು ತಾಯಿ. "ಅಮ್ಮಾ ಅದು ಬೆಳೆಯುವರೆಗೆ ಜನ ನಿನಗೆ ಅಲ್ಲಿ ಇಡುತ್ತಾರೆಯೇ? ಅಲ್ಲಿ ದಿನಾ ಹೋಗಿ ಕಾದು ಕುಳಿತು ಕೊಳ್ಳಲು ಆದೀತೇ? ಅದಕ್ಕೆ ಇರಲಿ ಎಂದು ಈಗಲೇ ತಂದು ಬಿಟ್ಟೆ" ಎನ್ನುತ್ತಾ ಬಚ್ಚಲ ಮನೆಗೆ ಓಡಿದ.

ಒದ್ದೆಯಾದ ಅವನಿಗೆ ಬಿಸಿ ಬಿಸಿ ನೀರನ್ನು ಮೈಮೇಲೆ ಹೊಯ್ದುಕೊಳ್ಳುವಾಗ ಮನಸ್ಸಿಗೆ ಹಿತವೆನಿಸತೊಡಗಿತು. ಮೀಯುತ್ತಾ, ಮೀಯುತ್ತಾ ಅರ್ಧದಷ್ಟು ಹಂಡೆಯ ನೀರನ್ನು ಕಾಲಿಮಾಡಿ ಬಿಟ್ಟಿದ್ದ. ಇನ್ನೂ ಮಿಂದರೆ ಮೀಯಬಹುದು ಆದರೆ ಉಳಿದವರಿಗೆ ನೀರಬೇಕಲ್ಲ ಎಂದು ಒಲ್ಲದ ಮನಸ್ಸಿನಿಂದ ಸ್ನಾನ ಮುಗಿಸಿ, ಮನೆಯ ಎದುರಿನ ತುಳಸಿ ಮನೆಗೆ ಹೋಗಿ ಪೂಜೆ ಮಾಡಿ ಮನೆಗೆ ಬಂದವನೇ, ತಂಗಿಗಾಗಿ ಮನೆಯನ್ನಲ್ಲ ಹುಡುಕಿದ. ತಂಗಿ ಕಾಣಿಸಲಿಲ್ಲ. ಮಗ ಮಿಂದು ಬಂದವನು ಒಳಗೆಲ್ಲ ಹುಡುಕುತ್ತಿದ್ದುದ್ದನ್ನು ನೋಡಿ ತಾಯಿ ಯಶೋಧ, "ಯಾಕಪ್ಪ ಏನು ಹುಡುಕುತ್ತಿದ್ದಿಯಾ, ಬಡಿಸಲೇ?" ಅಂದಾಗ, "ಬೇಡ ನಿಲ್ಲಮ್ಮಾ, ತಂಗಿ ಎಲ್ಲಿ ಕಾಣಿಸ್ತಿಲ್ಲಾ"

"ಅವಳಿಲ್ಲಪ್ಪಾ ಮನೆಯಲ್ಲಿ, ನೀನು ಬರುವುದಕ್ಕಿಂತ ಒಂದು ಹತ್ತು ನಿಮಿಷ ಮೊದಲು ಇಲ್ಲೇ ಎಲ್ಲೋ ಹೋಗಿದ್ದಾಳೆ. ಬಹುಶಃ ಸ್ನೇಹಳ ಮನೆಗೆ ಹೋಗಿರಬಹುದು, ಮಳೆ ಅಂತ ಅಲ್ಲೇ ನಿಂತಿರಬಹುಸು. ಅವಳು ಎಷ್ಟೊತ್ತಿಗೆ ಬರುತ್ತಾಳೋ ಏನೋ?"

"ಹಾಗಿದ್ದರೆ ಅವಳು ಬರಲಿ ಬಿಡಮ್ಮಾ, ಅವಳು ಬಂದ ಮೇಲೆ ಊಟ ಮಾಡಿದ್ದರಾಯಿತು" ಎಂದು ಹೇಳಿ ತಂಗಿಗಾಗಿ ಕಾಯುತ್ತಾ ಕುಳಿತ.

------******------
ಬೆಳಿಗ್ಗೆ ಅಣ್ಣ ಬೈದಾಗಿನಿಂದ ಸರೋಜಾಳ ಮನಸ್ಥಿತಿ ಸರಿ ಇರದ ಕಾರಣ, ಮನೆಯಲ್ಲಿ ಒಂದಡೆ ಕೂಡಲಾಗದೇ, ಓದಲಾಗದೇ ಹಿತ್ತಲ ಕಡೆ ಹೋಗಿ ಬರೋಣ ಎಂದು ಮನೆಯಿಂದ ಹೋದ ಸರೋಜ ಮಳೆಯಲ್ಲಿ ಸಿಕ್ಕಿ ಹಾಕಿ ಕೊಂಡಳು. ಮಳೆ ಜೋರಾದಾಗ ಹಿತ್ತಲ ಭಾವಿಯ ಪಕ್ಕದಲ್ಲಿ ಕಟ್ಟಿದ ಪಂಪ ಹೌಸ್ನ್ ಪಕ್ಕದಲ್ಲೇ ನಿಂತಳು. ಎಷ್ಟು ಕಾದರೂ ಮಳೆ ಕಡಿಮೆಯಾಗಲಿಲ್ಲ. ಕೊಡೆಯನ್ನಾದರೂ ತರಬೇಕಿತ್ತು ಅಂದು ಮಳೆಯಿಲ್ಲಾದಾಗ ಅನಿಸದ್ದು, ಈಗ ಮಳೆ ಜೋರಾದಾಗ ಅನಿಸಿತು ಅವಳಿಗೆ.

ಹೊತ್ತು ಕಳೆದ ಮೇಲೆ ಅವಳಿಗೆ ಕಾದು ಕಾದು ಬೇಸರ್ವಾಗ ತೊಡಗಿತು ಈಗ ಮನಸ್ಸು ಮಳೆಯಿಂದ ಸ್ವಲ್ಪ ತಣ್ಣಗಾಗ ತೊಡಗಿತು. ಅಣ್ಣ ಬೈದಾಗ ನಾನಷ್ಟು ಕೋಪಗೊಳ್ಳಬಾರದಿತ್ತು. ನಾನು ಏನೇನೋ ಕಲ್ಪಿಸಿಕೊಂಡು ಅವನನ್ನು ಬೈದು ಬಿಟ್ಟೆ. ಮನೆಗೆ ಹೋದ ತಕ್ಷಣ ಅವನ ಬಳಿ ಕ್ಷಮೆ ಕೇಳಬೇಕು. ಅವನು ಬೈದದ್ದರಲ್ಲಿ ತಪ್ಪಿಲ್ಲ. ನಾನು ಓದುವುದನ್ನು ಬಿಟ್ಟು ಕಾದಂಬರಿ ಓದುತಿದ್ದುದು ತಪ್ಪಲ್ಲವೇ? ಅಪ್ಪ ಇದ್ದರೂ ಬೈಯುತ್ತಿರಲಿಲ್ಲವೇ? ಅಪ್ಪನ ಸ್ಥಾನದಲ್ಲಿದ್ದವನು ಬೈದರೆ ತಪ್ಪೇನಿದೆ ಎಂದು ಯೋಚಿಸುತ್ತ ನಿಂತಳು. ಅವಳು ಹಾಗೆ ಅದೇ ಜಾಗದಲ್ಲಿ ನಿಂತು ಅದೆಷ್ಟು ಹೊತ್ತಾಗಿತ್ತೋ, ನಿಂತು, ನಿಂತು ಬೇಸರ ಬಂದು ಮಳೆ ಕಡಿಮೆಯಾಯಿತೇ ನೋಡೋಣವೆಂದು ಒಂದು ಹೆಜ್ಜೆ ಮುಂದಿಟ್ಟು ಭಾವಿ ಕಟ್ಟೆಯ ಮೇಲೆ ಕಾಲಿಟ್ಟಳು. ಅವಳು ಕಾಲಿಟ್ಟ ಕಲ್ಲು ಗಟ್ಟಿಯಾಗಿ ಕುತಿರದ ಕಾರಣ ಕಲ್ಲು ಜಾರಿತು. ಕಲ್ಲು ಜಾರಿದ ಅನುಭವಾದ ತಕ್ಷಣ ಸರೋಜಾ ಕಂಗಾಲಾದಳು. ಆ ಒಂದು ಕ್ಷಣಕ್ಕೆ ತಾನೇನು ಮಾಡಬೇಕೆಂದು ತಿಳಿಯದೇ, ಇನ್ನೊಂದು ಕಲ್ಲಿನ ಮೇಲೆ ಕಾಲು ಹಾಕಲು ಹೋಗಿ ಆಯತಪ್ಪಿ ಭಾವಿಗೆ ಬಿದ್ದಳು.

ಅವಳು ಭಾವಿಗೆ ಬಿದ್ದ ಶಬ್ಧ ಕೇಳಿ ಪಕ್ಕದ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಕೃಷ್ಣ, ಭಾವಿಗೆ ಏನೋ ಬಿತು ಎಂದು ಓಡಿ ಬಂದು ನೋಡಿದ. ಅವನು ಬಂದು ನೋಡಿದಾಗ, ಸರೋಜಾ ಈಜು ಬಾರದೇ ನೀರಿನಲ್ಲಿ ಮುಳುಗೇಳುತ್ತಿದ್ದಳು. ಸಮೀಪದ ಮನೆಗೆ ಕೇಳಲಿ ಎಂದು ದೊಡ್ಡದಾಗಿ "ಸರೋಜಾ ಭಾವಿಗೆ ಹಾರಿದಳು, ಸರೋಜಾ ಭಾವಿಗೆ ಹಾರಿದಳು" ಎಂದು ದೊಡ್ಡದಾಗಿ ಕೂಗುತ್ತಾ ಸರೋಜಾಳ ರಕ್ಷಣೆಗಾಗಿ ಭಾವಿಗೆ ಹಾರಿದ.

ಐದು ಹತ್ತು ನಿಮಿಷ ಕಳೆಯುವುದರಲ್ಲಿ ಭಾವಿಯ ಬಳಿ ಅಕ್ಕ ಪಕ್ಕದ ಮನೆಯವರೆಲ್ಲ ಸೇರಿದ್ದರು. ವಿಷಯ ಲಕ್ಷ್ಮಣನ ಮನೆಗೂ ತಿಳಿದು, ಲಕ್ಷ್ಮಣ ಮತ್ತು ಯಶೋಧಾ ಓಡಿ ಬಂದರು. ಕ್ಷಣ ಮಾತ್ರದಲ್ಲೇ "ಸರೋಜಾ ಆತ್ಮ ಹತ್ಯೆ ಮಾಡಿಕೊಳ್ಳಲು ಭಾವಿಗೆ ಹಾರಿದಳು" ಎನ್ನುವ ಶುದ್ದಿ ಊರೆಲ್ಲ ಹಬ್ಬಿತು. ಲಕ್ಷ್ಮಣನಿಗೆ ತಾನೆಂತ ಕೆಲಸ ಮಾಡಿ ಬಿಟ್ಟೆ ಎಂದನಿಸಿತು. ಯಶೋಧಾ ಮಗನಿಗೆ ಶಪಿಸುತ್ತಾ ಅತ್ತಿದ್ದೇ, ಅತ್ತಿದ್ದು.

ಅಂತೂ ಕೊನೆಯಲ್ಲಿ ಪ್ರಯತ್ನ ಪೂರ್ವಕವಾಗಿ ಸರೋಜಾಳನ್ನು ಮೇಲೆತ್ತಲಾಯಿತು. ಪಂಪಿನ ಮನೆಯ ಪಕ್ಕದಲ್ಲೇ ಒಂದು ದೊಡ್ಡ ಹಂಡೆ ತರಿಸಿ ಅದರ ಮೇಲೆ ಸರೋಜಾಳನ್ನು ಬೋರಲಾಗಿ ಮಲಗಿಸಿ, ಅವಳ ಹೊಟ್ಟೆಯನ್ನು ಹಂಡೆಗೆ ಒತ್ತಿ, ಒತ್ತಿ ಅವಳು ಕುಡಿದ ನೀರನ್ನು ಹೊರಗೆ ತೆಗೆದರು. ಹೆಂಗಸರೆಲ್ಲಾ ಸೇರಿ ಅವಳಿಗೆ ಸ್ವಲ್ಪ ಶಾಖ ಕೊಟ್ಟು, ಬಟ್ಟೆ ಬದಲಾಯಿಸಿದರು. ಸರೋಜಾ ಕುಡಿದ ನೀರೆಲ್ಲ ಹೊರಬಂದು ಸ್ವಲ್ಪ ಚೇತರಿಸಿ ಕೊಳ್ಳುವ ಹೊತ್ತಿಗೆ ಸಂಜೆಯಾಗಿತ್ತು. ಅವಳು ಚೇತರಿಸಿಕೊಂಡವಳೇ ಅಣ್ಣನನ್ನು ಕರೆದು, "ಅಣ್ಣಾ ತಪ್ಪಾಯ್ತು" ಅಂದಳು. ಲಕ್ಷ್ಮಣನಿಗೆ ಅಳು ತಡೆಯಲಾಗದೇ "ತಪ್ಪೆಲ್ಲಾ ನಂದೇ, ನಾನು ನಿನಗೆ ಬಯ್ಯಬಾರದಾಗಿತ್ತು ನಿಜ. ಆದರೆ ನೀನು ಅಷ್ಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವುದೇ."

"ನಾನು ಆತ್ಮಹತ್ಯೆ ಮಾಡಿಕೊಳ್ಳುವವಳೇ? ಇಲ್ಲ ಅಣ್ಣ, ನಾನು ಕಲ್ಲು ಜಾರಿ ಬಿದ್ದದ್ದು. ಬೇಕಿದ್ದರೆ ಆ ಕಲ್ಲು ನೋಡು." ಎಂದಾಗ ಲಕ್ಷ್ಮಣನಿಗೆ ಸ್ವಲ್ಪ ಸಮಾಧಾನವಾಯಿತು. ಹಾಳಾದ ಕಲ್ಲು, ಯಾವಾಗ ಜಾರಿ ನಿಂತಿತ್ತೋ, ನನಗೇಕೆ ಇದು ಕಾಣಿಸಿಕೊಳ್ಳಲಿಲ್ಲ. ಮಳೆಗಾಲ ಮುಗಿಯುತ್ತಿದ್ದಂತೆ ಭಾವಿಯನ್ನು ಒಮ್ಮೆ ದುರಸ್ತಿ ಮಾಡಿಸಬೇಕು ಎಂದು ಕೊಂಡ. ಇಷ್ಟೊತ್ತು ಮರೆತ ಊಟದ ನೆನಪಾಗಿ ತನ್ನ ತಂಗಿ ಮತ್ತು ಅಮ್ಮನನ್ನು ಕರೆದುಕೊಂಡು ಮನೆಯತ್ತ ಹೊರಟ.

--ಮಂಜು ಹಿಚ್ಕಡ್

Sunday, January 4, 2015

ನಮ್ಮ ಬದುಕು

ನಮ್ಮ ಬದುಕು
ಮೂಗನೊರಿಸಿ ಒಳಸೇರಿಸುವ
ಕರವಸ್ತ್ರದಂತಾದರೂ,

ಉಂಡು ಹೊರಗೆಸೆಯುವ
ಬಾಳೆಯೆಲೆಯಂತಾಗಬಾರದು.


--ಮಂಜು ಹಿಚ್ಕಡ್