Thursday, April 20, 2017

ಬದುಕು-ಬವಣೆ: ಭಾಗ ೪

ಬದುಕು-ಬವಣೆ: ಭಾಗ ೩
ಸಂಜೆ ಸರಿದು ಕತ್ತಲು ಆವರಿಸಿತು. ರಾತ್ರಿಯ ಅನ್ನಕ್ಕಾಗಿ ಒಲೆಯ ಮೇಲೆ ಕುದಿಯುತ್ತಿದ್ದ ಅನ್ನದ ಪಾತ್ರೆಗೆ ಅಕ್ಕಿ ಹಾಕುತ್ತಿದ್ದ ನಾಗಿಗೆ, ಮನೆಯಿಂದ ಹತ್ತಿಪ್ಪತ್ತು ಮಾರು ದೂರದಿಂದಲೇ ಕುಡಿದು ಒದರುತ್ತಾ ಬರುತ್ತಿರುವ ಗಂಡ ಮಂಕಳುವಿನ ಧ್ವನಿ ಕೇಳಿ " ರಾತ್ರೆ ಆಯ್ತು ಇವ್ರಿಗ್, ಮನೆ ಕಡೆ ಏನಾಗ್ ಸತ್ರೂ ಇವ್ರೆಗ್ ಅಷ್ಟೇ". ಎಂದು ತನ್ನಷ್ಟಕ್ಕೆ ತಾನೆ ಹೇಳಿಕೊಳ್ಳುತ್ತಾ ಅಕ್ಕಿ ಹಾಕಿ ಹೊರಬಂದಳು. ಗಂಡ ಒದರುತ್ತಲೇ ತೂರಾಡುತ್ತಾ ಬಂದು ಮನೆಯ ದಣಪೆ ದಾಟಿ ಬಂದು ಹೊರಗೆ ನಿಂತ ಹೆಂಡತಿಯನ್ನು ನೋಡಿ, "ಹೆರ್ಗ್ ನಿಂತ ಏನ್ ಮಾಡ್ತೆ ಇಂವ್ಯೆ".

"ನೀವ್ ಯಾರ್ಕೋಡ ಜಗ್ಳಾ ಮಾಡ್ತೇ ಬತ್ತೇ ಇದ್ರಿ, ದಿನಾ ಒಂದೇ ಕತೆ ಅಲ್ಲಾ ನಿಮ್ದು".

"ನಿಂಗೆಂತಕ ಅವೆಲ್ಲಾ, ಸುಮ್ನೆ ಒಳ್ಗೆ ಹೋಗ್" ಎಂದು ಗದರಿಸಿದ.

ನಾಗಿಗೆ ಅದು ಅಭ್ಯಾಸವಾಗಿ ಹೋಗಿದೆ. ಇದೇನು ಹೊಸ ವಿಷಯವಲ್ಲ, ಕಳೆದ ೩೫ ವರ್ಷಗಳಿಂದ ರಾತ್ರಿಯಾದರೆ ಅದನ್ನೇ ನೋಡುತ್ತಾ ಬರುತ್ತಿದ್ದಾಳೆ. "ಕುಡುದ್ ಬಿಟ್ರೆ ಮತ್ತೆಂತದ ಬತ್ತಿದ" ಎಂದು ತನ್ನಷ್ಟಕ್ಕೆ ತಾನೇ ಗೊಣಗಿಕೊಳ್ಳುತ್ತಾ ಒಲೆಯ ಬಳಿ ಬಂದಳು. ಅನ್ನ ಆಗಲೇ ಕುದಿದು ಮೇಲೆ ಬರುತ್ತಿತು. ಸ್ವಲ್ಪ ಹೊತ್ತು ಕಾದು ಬೆಂದ ಅನ್ನವನ್ನು ಕೆಳಗಿಳಿಸಿ ಬಂದು ಮಗನ ಪಕ್ಕದಲ್ಲಿ ಕುಳಿತಳು. ವಾಸಿಯಾದರೆ ಸಾಕೆಂದು ಕಾಣದ ದೇವರಿಗಿಷ್ಟು, ದೆವ್ವಕಿಷ್ಟು ಮುಡಿಪು ಕಟ್ಟಿದಳು.

ರಾತ್ರಿ ಊಟ ಮುಗಿಸಿ, ಮಗನಿಗೆ ಔಷದಿಕೊಟ್ಟು ಮಲಗುವ ಹೊತ್ತಿಗೆ ರಾತ್ರಿ ಹತ್ತು ದಾಟಿತ್ತು. ನಾಳೆ ಬೇಗ ಏಳಬೇಕು,ಎದ್ದು ತಯಾರಾಗಿ ಆಸ್ಪತ್ರೆಗೆ ಹೋಗಬೇಕು ಎಂದುಕೊಂಡು ಮಲಗಿದಳು. ಮಲಗಿ ಕಣ್ಣು ಮುಚ್ಚಿದಳೇ ಹೊರತು ನಿದ್ರಿಸಲಿಲ್ಲ. ಮನಸ್ಸು ಪೂರ್ತಿ ಚಿಂತೆ ಆವರಿಸಿದರೆ ಕೇವಲ ಕಣ್ಣು ಮುಚ್ಚಬಹುದೇ ಹೊರತು ನಿದ್ರಿಸಲಾದೀತೇ, ಹಾಗೂ ಹೀಗೂ ಹೊರಳಾಡಿ ರಾತ್ರಿ ಕಳೆದಳು.

ಬೆಳಿಗ್ಗೆ ಬೇಗ ಎದ್ದು ಗಂಡನಿಗೆ ಮತ್ತು ಮಗನಿಗೆ ದೋಸೆ ಮಾಡಿಟ್ಟು, ಚಹಾ ಮಾಡಿದಳು. ಗಂಡ ಎದ್ದೊಡನೆ ಗಂಡನಿಗೆ "ಹನ್ಮುನ ಅಂಕೋಲೆ ಆಸ್ಪತ್ರೆಗಾ ಕರ್ಕುಂಡ ಹೋತೆ, ಬತ್ತರಿ" ಎಂದು ಕೇಳಿದಾಗ ಮಂಕಳು "ಆಯ್ತೇ ಬತ್ತೇ" ಎಂದು ತಾನೂ ಕೂಡ ಬರುವುದಾಗಿ ಒಪ್ಪಿಕೊಂಡ. ನಾಗಿಗೆ ತನ್ನ ಗಂಡನ ಮಾತು ಕೇಳಿ ಸ್ವಲ್ಪ ಸಮಾಧಾನವಾಯಿತು. ನಾಗಿ ಗಂಡನಿಗೆ ಚಹಾ ದೋಸೆ ಕೊಟ್ಟು ಮಗನಿಗೂ ತಿನ್ನಿಸಿ, ತಾನು ತಿಂದು ಮುಗಿಸಿ, ಮಗನನ್ನು ತಯಾರು ಮಾಡಿ ತಾನು ತಯಾರಾದಳು. ಅವಳು ತಯಾರಾಗುವ ಹೊತ್ತಿಗೆ ಮಂಕಾಳು ಕೂಡ ತಯಾರಾಗಿದ್ದ. ಗಂಡ ಹೆಂಡಿರಿಬ್ಬರೂ ಹನ್ಮೂನ ಕರೆದುಕೊಂಡು ಬರುವಾಗ ಸೊಸೆಗೆ ಮನೆಯ ಕಡೆ ನೋಡಿಕೊಂಡಿರುವಂತೆ ಹೇಳಿ ಹತ್ತು ಗಂಟೆಯ ಬಸ್ಸಿಗೆ ಹರೀಶನ ಆಸ್ಪತ್ರೆಗೆ ಹೊರಟರು.

ಹರೀಶನಿಗೆ ಆಗಲೇ ಅವನ ಅಮ್ಮ ಎಲ್ಲವನು ಹೇಳಿದ್ದರಿಂದ ನಾಗಿ ಮತ್ತು ಮಂಕಳು ಮಗನನ್ನು ಕರೆದುಕೊಂಡು ಬಂದೊಡನೆ ಅವರನ್ನು ಮೊದಲು ನೋಡಿ ಅವರಿಗೆ ಅಲ್ಲೇ ಉಳಿದುಕೊಳ್ಳಲು ಹೇಳಿದ. ತನ್ನ ಆಸ್ಪತ್ರೆಯ ನರ್ಸ ಒಬ್ಬಳಿಗೆ ಹನ್ಮುನ ರಕ್ತ ಹಾಗೂ ಉಚ್ಚೆಯ(ಯೂರಿನ್) ಸೆಂಪಲಗಳನ್ನು ತೆಗೆದುಕೊಂಡು ಹೆಚ್ಚಿನ ಪರೀಕ್ಷೆಗಾಗಿ ಕಾರವಾರಕ್ಕೆ ಕೂಡಲೇ ಕಳಿಸಿಕೊಡುವಂತೆ ತಿಳಿಸಿದ. ತಾನು ಇತರ ರೋಗಿಗಳನ್ನು ನೋಡುತ್ತಿದ್ದರೂ ಆಗಾಗ ಬಂದು ಹನ್ಮುವನ್ನು  ನೋಡಿ ಹೋಗುತಿದ್ದ. ಹನ್ಮುನ ಜ್ವರ ಕಡಿಮೆ ಮಾಡಲು ಹೆಚ್ಚಿನ ಡೋಸನ ಮಾತ್ರೆಗಳನ್ನು ನೀಡಿದ. ಆದಿನ ರಾತ್ರಿಯ ಹೊತ್ತಿಗೆ ಹನ್ಮುವಿನ ರಕ್ತ ಹಾಗೂ ಯೂರಿನಿನ ರಿಸಲ್ಟ ಬಂದಿತ್ತು. ಅದರಲ್ಲಿ ಹರಿಶ ಅಂದುಕೊಂಡಂತೆ ಹಂದೀ ಜ್ವರ ಇರುವುದು ಖಾತ್ರಿಯಾಗಿತ್ತು.
PC: Google

ನಾಗಿಯನ್ನು ಕರೆದು ಹರೀಶ ಏನನ್ನು ಮುಚ್ಚಿಟ್ಟುಕೊಳ್ಳದೇ ಹನ್ಮುಗೆ ಇರುವ ಹಂದೀ ಜ್ವರದ ಬಗ್ಗೆ ಹೇಳಿದ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದುಕೊಂಡು ಹೋಗುವುದು ಒಳ್ಳೆಯದು ಎಂದಾಗ ಅಂಕೋಲೆ, ಕಾರವಾರ, ಕುಮಟಾ ಬಿಟ್ಟು ಬೇರೆ ಊರುಗಳನ್ನು ನೋಡದ ನಾಗಿಗೆ ಮಣಿಪಾಲಕ್ಕೆ ಮಗನನ್ನು ಕರೆದುಕೊಂಡು ಹೋಗಬೇಕು ಎಂದಾಗ ಸ್ವಲ್ಪ ಅಧೀರಳಾಗಿ "ಅಲ್ಲಿಗೆ ಕರ್ಕಂಡೆ ಹೋಗ್ಲೇ ಬೇಕಾ? ಇಲ್ಲೇ ಏನೂ ಮಾಡಕ್ಕಾಗಲ್ರಾ?" ಎಂದು ಕೇಳಿದಳು.

"ನಾಗಿ ನಮ್ಮ ಹತ್ರೆ ಅದ್ಕೆ ಬೇಕಾಗು ಔಷಧವಿಲ್ಲಾ ಇಲ್ಲಿ. ನಾವ ಅಲ್ಲಿಂದ ತಂದೆ ಇಲ್ಲೆ ಚಿಕಿತ್ಸೆ ಕುಡುದ್ಕಿಂತ ನೀವೇ ಒಂದ್ಸಲಾ ಅಲ್ಲಿಗೆ ಹೋಗೆ ಬರುದ ಒಳ್ಳೇದ. ಹೆದ್ರುಕೊಳ್ಳುವಂತದೇನಿಲ್ಲಾ. ಅವ್ನಿಗೆ ಜ್ವರ ಮೊದಲಿನಷ್ಟಿಲ್ಲಾ. ಅಲ್ಲೆ ನನ್ನ ಕ್ಲಾಸಮೆಂಟ್ ಸಂಕೇತ್ ಅಂತೇ ಇಂವಾ. ಆಂವ್ಗೆ ನಾ ಒಂದು ಲೆಟರ ಬರ್ಕಂಡೆ ಕುಡ್ತಿ. ಆಂವ್ಗೆ ಕೊಡಿ, ಆಂವಾ ಎಲ್ಲಾ ನೋಡ್ಕಣ್ತಿಯಾ". ಎಂದು ಹೇಳಿ ಸ್ವಲ್ಪ ಧೈರ್ಯ ತುಂಬಿದ.

ಹರೀಶ ಅಷ್ಟು ಹೇಳಿದ ಮೇಲೆ ನಾಗಿಗೆ ಇಲ್ಲ ಎನ್ನಲಾಗಲಿಲ್ಲ. ಹೇಗೂ ಗೊತ್ತಿರಲಿ, ಇಲ್ಲದಿರಲಿ ಗಂಡ ಇದ್ದಾನೆ ಎನಿಸಿತು. ಮಾರನೆಯ ದಿನ ಹರೀಶನ ಆಸ್ಪತ್ರೆಯಿಂದ ಮಣಿಪಾಲಕ್ಕೆ ಹೊರಟರು. ಹರೀಶ ಅವರಿಂದ ಯಾವುದೇ ರೊಕ್ಕವನ್ನು ತೆಗೆದುಕೊಳ್ಳಲಿಲ್ಲ. ಹೋಗುವಾಗ ಮಂಕಾಳುಗೆ ಮುಂದೆ ಕರ್ಚಿಗೆ ಇರಲಿ ಎಂದು ಹೇಳಿ ಎರಡು ಸಾವಿರ ರೂಪಾಯಿ ಕೊಟ್ಟು ಕಳಿಸಿದ.

ಮಣಿಪಾಲಕ್ಕೆ ಬಂದಾಗ ಸಂಜೆ ನಾಲ್ಕು ದಾಟಿತ್ತು. ಹರೀಶ ಹೇಳಿದ ಸಂಕೇತನನ್ನು ಹುಡುಕಿಕೊಂಡು ಹೋದರು. ಸಂಕೇತನಿಗೆ ಹರೀಶ ಕೊಟ್ಟ ಲೆಟರನ್ನು ಕೊಟ್ಟರು. ಹರೀಶ ಪತ್ರದಲ್ಲಿ ಹನ್ಮುಗೆ ಇರುವ ಕಾಯಿಲೆಯನ್ನು, ಬಂದವರ ಪರೀಸ್ಥಿತಿಯನ್ನು ವಿವರಿಸಿದ್ದ. ಹರೀಶ ಕೊಟ್ಟ ಲೆಟರನ್ನು ನೋಡಿ ಅವರನ್ನು ಅಲ್ಲೇ ಎಡ್ಮಿಟ್ ಮಾಡಿಕೊಂಡು ಚಿಕಿತ್ಸೆಕೊಡಲು ಪ್ರಾರಂಭಿಸಿದ.

ಅಲ್ಲಿ ಸೇರಿದ ನಾಲ್ಕೈದು ದಿನಕ್ಕೆ ಹನ್ಮೂ ಸಂಪೂರ್ಣ ಗುಣಮುಖನಾದ. ಮಗನ ಈಗಿನ ಸ್ಥಿತಿಯನ್ನು ನೋಡಿ ನಾಗಿಗೆ ಸ್ವಲ್ಪ ಸಮಾಧಾನವಾಯಿತು. ಮಣಿಪಾಲಕ್ಕೆ ಬಂದು ಮಗ ಗುಣಮುಖನಾಗಿ ಊರು ಸೇರುವ ಹೊತ್ತಿಗೆ ನಾಗಿಯು ತಂದ ಹಣವೆಲ್ಲ ಕರಗಿ ಹೋಗಿತ್ತು. (ಹನ್ಮು ಸಂಪೂರ್ಣ ಗುಣಮುಖನಾದರೂ ಅವನಿಗೆ ಇನ್ನೆರಡು ವಾರದ ಔಷದಕ್ಕೆ ಇನ್ನೊಂದು ಸಾವಿರವಾದರೂ ಬೇಕು.) ಹನ್ಮುವೇನೋ ಗುಣಮುಖನಾದ, ಆದರೆ ನಾಗಿ ಹೊತ್ತ ಹರಕೆಗಳು. ಹಣವೆಲ್ಲ ಚಿಕಿತ್ಸೆಗೆ ಕರಗಿ ಹೋದಮೇಲೆ ಇನ್ನೂ ಹರಕೆಗಳಿಗೆ ಹಣವೆಲ್ಲಿ. ಈಗ ಸೀತಮ್ಮನವರಿಂದ ತೆಗೆದುಕೊಂಡ ರೊಕ್ಕ ತೀರಿಸಲು ದಿನ ನಿತ್ಯ ಅವರ ಮನೆಯಲ್ಲೇ ದುಡಿದರೂ ಇನ್ನೊಂದು ವರ್ಷವಾದರೂ ಬೇಕು. ಹರಕೆ ತೀರಿಸಿಲ್ಲವೆಂದರೆ ದೇವರು, ದೆವ್ವಗಳು ಸೇರಿ ಮತ್ತೆ ಹನ್ಮುಗೆ ತ್ರಾಸು ಕೊಟ್ಟರೆ ಎನ್ನುವ ಚಿಂತೆ ಕಾಡೀತು.

ಹೇಗೂ ಒಂದು ವರ್ಷ ತಾನೆ, ಈ ವರ್ಷಕಳೆದರೆ ಸಾಕು ಹನ್ಮುನ ಓದು ಮುಗಿಯುತ್ತದೆ. ಮುಂದೆ ಅವನು ದುಡಿಯುತ್ತಾನೆ. ಅವನಿಂದಲೇ ಹರಕೆ ತೀರೀಸಿ ಬಿಟ್ಟರೆ ಹೇಗೆ. ಈಗ ತಾನು ಹೊತ್ತ ಹರಕೆಗಳು ಸದ್ಯಕ್ಕೆ ಹನ್ಮುಗೆ ತೊಂದರೆ ಕೊಡದ ರೀತಿಯಲ್ಲಿ ತಪ್ಪು ಕಾಣಿಕೆ ಕೊಟ್ಟರೆ ಹೇಗೆ ಅನಿಸಿತು ನಾಗಿಗೆ. ಹಾಗೆ ಮನಸ್ಸಿಗೆ ಬಂದದ್ದೇ ತಡ, ಮನೆಯಿಂದ ಎರಡು ತೆಂಗಿನ ಕಾಯಿ ಸುಲಿದುಕೊಂಡು, ಮನೆಯ ಮುಂದಿನ ದಾಸವಾಳ ಗಿಡದಿಂದ ಒಂದಿಷ್ಟು ಹೂವು ಕೊಯ್ದುಕೊಂಡು ದೇವಸ್ಥಾನದ ಕಡೆ ಹೊರಟಳು ತಾನು ಹೊತ್ತ ಹರಕೆಗಳಿಗೆ ತಪ್ಪು ಕಾಣಿಕೆ ಸಲ್ಲಿಸಲು.
(ಮುಗಿಯಿತು...)

--ಮಂಜು ಹಿಚ್ಕಡ್