Sunday, October 15, 2017

ಸುಂದರಮ್ಮನ ವಾರ್ತೆ

ವಿಜಯ ನಗರದ ಮೂರನೇ ಬೀದಿಯಲ್ಲಿನ ಮೊದಲೆನೆ ಮನೆಯ ನೆಲಮಹಡಿಯನ್ನು ಬಾಡಿಗೆ ಹಿಡಿದಿದ್ದರು ಸುಂದರಮ್ಮನವರು.  ಹೆಸರಲ್ಲೇನಿದೆ ಎಂಬಂತೆ, ಕಪ್ಪು ದೃಡಕಾಯದ ಶರೀರ. ವಯಸ್ಸು ಐವತ್ತರ ಆಸುಪಾಸಿರಬಹುದೇನೋ ಆ ಹೆಂಗಸಿಗೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದರಿಂದಲೋ ಏನೋ ಬಹುಭಾಷಾ ಪಾರಂಗತೆ. ಇಂಗ್ಲೀಷ ಒಂದನ್ನು ಬಿಟ್ಟು. ಬಹುಶಃ ಹೈಸ್ಕೂಲು ಮೆಟ್ಟಿಲು ಏರಿದ್ದರೆ ಆ ಭಾಷೆಯನ್ನು ಬಿಡುತ್ತಿರಲಿಲ್ಲ. ಏನು ಮಾಡುವುದು ವಿದ್ಯೆ ತಲೆಗೆ ಹತ್ತ ಬೇಕಲ್ಲ. ಹಾಗೂ ಹೀಗೂ ಜಗ್ಗಿ ಜಗ್ಗಿ ಏಳನೇ ತರಗತಿ ತಲುಪುವುದರಲ್ಲೇ ಸುಸ್ತಾಗಿ, ಅಲ್ಲಿಗೆ ಮೊಟಕುಗೊಳಿಸಿದ್ದರು ತಮ್ಮ ಶಿಕ್ಷಣವನ್ನು. ಇಸ್ - ವಾಸ್ ಎನ್ನುವುದನ್ನೇ , ಹೇಗೆ ಉಪಯೋಗಿಸಬೇಕು ಎನ್ನುವುದೇ ಅರ್ಥವಾಗದ ಅವರಿಗೆ ಅದೊಂದು ಕಬ್ಬಿಣದ ಕಡಲೆಯಾದ್ದರಿಂದಲೋ ಎನೋ ಆ ಭಾಷೆಯೊಂದು ಮಾತ್ರ ಕಡೆಯವರೆಗೂ ಒಲಿಯಲಿಲ್ಲ. ಆ ಕೊರಗಂತು ಆಗಾಗ ಅವರಿಗೆ ಕಾಡುತಿತ್ತು, ಈಗಲೂ ಕಾಡುತ್ತಿದೆ ಕೂಡ.

ವಿದ್ಯೆ ತಲೆಗೆ ಹತ್ತದಿದ್ದರು ಉಳಿದ ವಿಷಯಗಳಲ್ಲಿ ಚುರುಗಾಗಿದ್ದ ಸುಂದರಮ್ಮನವರಿಗೆ ಅವರ ತಂದೆ ಶ್ಯಾಮಣ್ಣ, ಮನೆಯಲ್ಲಿ ಮಗಳು ಖಾಲಿ ಕುಳಿತು ಕೊಂಡಿದ್ದಾಳೆ ಎಂದು, ಅವಳನ್ನು ಮೊದಲು ಟೈಪಿಂಗ್ ತರಗತಿಗೆ ಕಳುಹಿಸಿ ನೋಡಿದರು. ಆದರೆ ಅದೂ ಕೂಡ ಅವರ ತಲೆಗೆ ಹತ್ತಲಿಲ್ಲ. ಮುಂದೆ ಸಂಗೀತ, ನಾಟ್ಯ ತರಗತಿಗಳಿಗೂ ಪ್ರಯತ್ನಿಸಿ ಸೋತಿದ್ದೂ ಆಯಿತು. ಅವ್ಯಾವು ತಲೆಗೆ ಹೋಗದೇ ಅರ್ಧದಲ್ಲೇ ಬಿಟ್ಟು ಮನೆ ಸೇರಿದ್ದೂ ಆಗಿತ್ತು. ಮನೆಯಲ್ಲಿ ಆಗಾಗ ಹಳೆಯ ಬಟ್ಟೆಗಳನ್ನು ಕತ್ತರಿಸಿ ಗೊಂಬೆಗಳಿಗೆ ಬಟ್ಟೆ ಮಾಡಿ ತೊಡಿಸುವುದು, ದಿಂಬುಗಳಿಗೆ ಬಟ್ಟೆಯಿಂದ ಕವರ್ ಮಾಡಿ ತೋಡಿಸುವುದನ್ನು ಗಮನಿಸಿದ ಶಾಮಣ್ಣ, ಮಗಳಿಗೆ ಟೇಲರಿಂಗ್ನಲ್ಲಿ ಆಸಕ್ತಿ ಇರಬೇಕೆಂದು ತಿಳಿದು ತಮಗೆ ಪರಿಚಯವಿರುವ ಟೇಲರ್ ಬಳಿ ಟೇಲರಿಂಗ್ ಆದರೂ ಕಲಿಯಲಿ ನೋಡೋಣ ಎಂದು ಬಿಟ್ಟು ನೋಡಿದರು. ಬೇರೆ ಯಾವ ವಿದ್ಯೆಯು ತುರುಕದ ಆ ಮೆದುಳಿನಲ್ಲಿ ಆ ಹೊಲಿಗೆಯ ವಿದ್ಯೆ ಮಾತ್ರ ಬಹುಬೇಗ ಒಳಸೇರಿತು.

ಮುಂದೆ ಮದುವೆಯಾಗುವವರೆಗೆ ಒಂದಿಬ್ಬರು ಪ್ರತಿಷ್ಠಿತ ಟೇಲರ್ಗಳ ಜೊತೆ ಕೆಲಸ ಮಾಡಿ ಒಂದಿಷ್ಟು ಅನುಭವವನ್ನು ಪಡೆಯುವುದರ ಜೊತೆಗೆ ಅಲ್ಪ ಸ್ವಲ್ಪ ಹೆಸರನ್ನು ಸಂಪಾದಿಸಿ ಬಿಟ್ಟರು ಸುಂದರಮ್ಮ. ಬಹುಮಂದಿಯ ಬಾಯಲ್ಲಿ ಸುಂದರಮ್ಮ ಅದಾಗಲೇ ಟೇಲರಮ್ಮಳಾಗಿ ಹೆಸರಾಗಿದ್ದಳು. ಮುಂದೆ ನಾರಾಯಣ್ ಅವರನ್ನು ಮದುವೆಯಾಗಿ ಒಂದಿಬ್ಬರು ಮಕ್ಕಳಾದಮೇಲಂತು ಹೊರಗೆ ಕೆಲಸಕ್ಕೆ ಹೋಗುವುದು ಕಷ್ಟ ಎಂದು ತಿಳಿದು, ಮನೆಯಲ್ಲಿಯೇ ಎಲ್ಲಾ ತರಹದ ಮಷೀನುಗಳನ್ನು ಖರೀದಿಸಿ ಹೊಲಿಗೆ ಕೆಲಸಮಾಡಲಾರಂಭಿಸಿದರು. ಮೊದ ಮೊದಲು ಎಲ್ಲಾ ತರಹದ ಬಟ್ಟೆಗಳನ್ನು ಹೊಲಿಯುತಿದ್ದ ಅವರು, ಇತ್ತೀಚೆಗೆ ಕೆಲವು ವರ್ಷಗಳಿಂದ ತಮ್ಮ ಹೊಲಿಗೆಯನ್ನು ಕೇವಲ ಮಹಿಳೆಯರ ದಿರಿಸುಗಳಿಗಷ್ಟೇ ಮೀಸಲಾಗಿರಿಸಿಕೊಂಡಿದ್ದರು. ಬೇರೆ ದಿರಿಸುಗಳನ್ನು ಹೊಲೆಯಲು ಬಾರದು ಅಂತಲ್ಲ, ಮಹಿಳೆಯರ ದಿರಿಸುಗಳಿಗಿರುವಷ್ಟು ಬೇಡಿಕೆ ಪುರುಷರ ದಿರಿಸುಗಳಿರುವುದಿಲ್ಲ ಎನ್ನುವ ಕಾರಣಕ್ಕೆ ಮಾತ್ರ ಆ ಬದಲಾವಣೆ ಅಷ್ಟೇ.

ಒಂದು ಕಾಲದಲ್ಲಿ ಚಿಕ್ಕ ಓಣಿಯಲ್ಲಿದ್ದ ಸಂಸಾರ ಒಂದೆರಡು ವರ್ಷಗಳ ಹಿಂದೆಯಷ್ಟೇ ಆ ಬೀದಿಗೆ ಸ್ಥಳಾಂತರಗೊಂಡಿತ್ತು.   ಮೊದ ಮೊದಲು ಆ ಬೀದಿ ಅವಳಿಗೆ ಹೊಸತು, ಆ ಬೀದಿಯ ಜನರು ಹೊಸಬರು. ಅದರಲ್ಲೂ ಆ ಬೀದಿಯಲ್ಲಿ ವಾಸವಿರುವ ಬಹುತೇಕ ಜನ, ಆ ಬೀದಿಯಲ್ಲಿ  ಮದ್ಯಾಹ್ನದ ಸೂರ್ಯನನ್ನು ನೋಡುವುದು ರಜಾ ದಿನಗಳಲ್ಲೇ. ಉಳಿದ ಸಮಯದಲ್ಲಿ ನಡುವಯಸ್ಕ ಹೆಂಗಸರನ್ನು ಬಿಟ್ಟರೆ ಆ ಬೀದಿ ಬಹುತೇಕ ಖಾಲಿ ಖಾಲಿ ಇರುತಿತ್ತು. ಸದಾ ತಮ್ಮ ಕೆಲಸಗಳಲ್ಲಿ ಮಗ್ನರಾಗಿರುವ ಆ ಬೀದಿಯ ಜನರಿಗೆ ಸುಂದರಮ್ಮನವರ ಬಗ್ಗೆ ಅವರಿಗೇನು ಗೊತ್ತು. ಸುಂದರಮ್ಮನವರಿಗಾದರೂ ಆ ಬೀದಿಯ ಜನರ ಬಗ್ಗೆ ಗೊತ್ತಿದೆಯೇ? ಇಲ್ಲ. ಯಾಕಂದರೆ ಅವರು ಆ ಬೀದಿಗೆ ಹೊಸಬರಲ್ಲವೇ? ಹಾಗೆ ಗೊತ್ತಿಲ್ಲದೇ ತಮ್ಮ ಹೊಲಿಗೆಯ ಕರಾಮತ್ತನ್ನಾದರೂ ಪ್ರದರ್ಶಿಸುವುದು ಹೇಗೆ? ಹಾಗಂತ ಸುಮ್ಮನೇ ಕುಳಿತು ಬಿಟ್ಟರಾದೀತೇ?

ಆ ಬೀದಿಯ ಮೊದಲನೆಯ ಮನೆಯ ನೆಲಮಹಡಿ ಎಂದರೆ ಕೇಳಬೇಕೇ, ಆ ಬೀದಿಯ ತುದಿಯಲ್ಲಿರುವ ಐವತ್ತನೆಯ ಮನೆಯವರು ದಿನಕ್ಕೆ ಒಂದಿಲ್ಲ ಒಂದು ಬಾರಿ ಆ ಮನೆಯ ದಾರಿಯಲ್ಲಿಯೇ ಹಾದು ಹೋಗಬೇಕು. ಇದನ್ನರಿತ ಸುಂದರಮ್ಮ ಮೊದಲು ಮಾಡಿದ್ದೇನೆಂದರೆ ತಮ್ಮ ಒಂದು ಚಿಕ್ಕ ಹೊಲಿಗೆಯಂತ್ರವನ್ನು ಆ ಮನೆಯ ಹೊರಬಾಗದಲ್ಲಿ ಗಾಡಿ ನಿಲ್ಲಿಸಲು ಇರುವ ಜಾಗಕ್ಕೆ ಸ್ಥಳಾಂತರಿಸಿ, ಅಲ್ಲಿಯೇ ಕುಳಿತು ಹೊಲಿಯಲು ಸುರುಹಚ್ಚಿಕೊಂಡದ್ದು. ಸದಾ ವಾಚಾಳಿಯಾದ ಸುಂದರಮ್ಮನವರು ಬಹು ಭಾಷಾ ಪರಿಣಿತರು ಬೇರೇ. ಹಾಗಿದ್ದ ಮೇಲೆ ಕೇಳಬೇಕೇ. ಮೊದ ಮೊದಲು ಅಲ್ಲಿ ಮನೆಗೆಲಸ ಮಾಡುವ ಹೆಂಗಸರನ್ನು ತನ್ನ ತಕ್ಕೆಗೆ ತೆಗೆದುಕೊಂಡರು, ಆ ಕೆಲಸದವರ ಮೂಲಕ ತಮ್ಮ ವೃತ್ತಿ ಪ್ರಚಾರದ ಜೊತೆ ಜೊತೆಗೆ, ಅಕ್ಕ ಪಕ್ಕದವರ ಮನೆಯ ಮನೆ - ಮನ ವಾರ್ತೆಯನ್ನು ತಿಳಿದುಕೊಳ್ಳಲಾರಂಭಿಸಿದರು. ಹಾಗೆ ಕೇಳಿ ತಿಳಿದುಕೊಂಡ ಇನ್ನೊಬ್ಬರ ಮನೆಯ ವಾರ್ತೆಗಳಿಗೆ, ತಾವೊಂದಿಷ್ಟು ಉಪ್ಪು ಖಾರ ಸೇರಿಸಿ, ಅಕ್ಕ ಪಕ್ಕದಲ್ಲಿರುವ ನಡು ವಯಷ್ಕ ಮಹಿಳೆಯರಿಗೆ ಅವರವರ ಭಾಷೆಯಲ್ಲೇ ಬಿತ್ತರಿಸತೊಡಗಿದರು. ತಮ್ಮ ತಮ್ಮ ಮನೆಯ ದೋಸೆಯ ತೂತು ಕಾಣದ ಆ ಹೆಂಗಸರಿಗೆ, ಬೇರೊಬ್ಬರ ಮನೆಯ ದೋಸೆಯ ತೂತಿನ ವಿಷಯವೇ ಹಿತವಾಗಿರುತಿತ್ತು. ದಾರವಾಹಿಗಳು ಇರದ ಹೊತ್ತಿನಲ್ಲಿ ಹೊತ್ತು ಕಳೆಯಲಾರದ ಅವರಿಗೆ ಸುಂದರಮ್ಮ ಬಿತ್ತರಿಸುತಿದ್ದ, ಅಕ್ಕ ಪಕ್ಕದ ಮನೆಯವರ ಬಿಸಿ ಬಿಸಿ ಮನೆ ವಾರ್ತೆಗಳು ಆ ಮಹಿಳೆಯರಿಗೆ ತಮ್ಮ ಮನೆಯ ವಾರ್ತೆಗಳಿಗಿಂತ ಹಿತವೆನಿಸುತಿತ್ತು.

ದಿನಾ ಒಂದಲ್ಲ ಒಂದು ಸುದ್ದಿ ಬಿತ್ತರಿಸುತಿದ್ದ ಸುಂದರಮ್ಮನವರಿಗೆ ಆ ಬೀದಿಯಲ್ಲಿ ತಮ್ಮ ಹೊಲಿಗೆಯ ವಿಷಯಕ್ಕಿಂತ ಸುದ್ದಿ ಹೇಳುವುದಕ್ಕೆ ಪ್ರಸಿದ್ಧಿಯನ್ನು ಗಿಟ್ಟಿಸಿಬಿಟ್ಟರು. ಅವರ ಮನೆಯ ಸುದ್ದಿ ಇವರಿಗೆ, ಇವರ ಮನೆಯ ಸುದ್ದಿ ಅವರಿಗೆ ಹೇಳಿ, ಅವರಿಂದ ತಾವು ಒಂದಿಷ್ಟು ಹೊಸ ಸುದ್ದಿ ಕೇಳಿ ಇನ್ನಾರಿಗೋ ಹೇಳಿ, ಹೀಗೆ ಎರಡೇ ವರ್ಷದಲ್ಲಿ ಸುಂದರಮ್ಮ ಆ ಬೀದಿಯಲ್ಲಿ ಮನೆ ಮಾತಾಗಿಬಿಟ್ಟರು. ಆ ಬೀದಿಯಲ್ಲಿ ಯಾರಾದರು ಬಂದು ’ಇಲ್ಲಿ ಮನೆ ಖಾಲಿ ಇದೆಯೇ?’ ಎಂದು ಕೇಳಿದರೆ, ಉತ್ತರ, "ಆ ಸುಂದರಮ್ಮನವರಿಗೆ ಗೊತ್ತಿರತ್ತೇ ಕೇಳಿ". ’ಈ ಬೀದಿಯಲ್ಲಿ ಒಬ್ಬರು ಮನೀಶ್ ಅಂತಾ ಇದ್ದಾರೆ, ಇನ್ಪಿಯಲ್ಲಿ ಕೆಲಸ ಮಾಡ್ತಾರೆ, ಅವರ ಮನೆ ನಂಬರ್ ಗೊತ್ತಾ?’ ಎಂದು ಕೇಳಿದರೆ , ಉತ್ತರ, "ಆ ಸುಂದರಮ್ಮನವರಿಗೆ ಗೊತ್ತಿರತ್ತೇ ಕೇಳಿ". ’ಇಲ್ಲಿ ವಿನುತಾ ಅಂತಾ ಒಬ್ಬರು ವಿಧಾನಸೌಧದಲ್ಲಿ ಕೆಲಸ ಮಾಡ್ತಾರೆ ಗೊತ್ತಾ?" ಎಂದು ಯಾರಾದರೂ ಬಂದು ಕೇಳಿದರೆ, ಮತ್ತದೇ ಉತ್ತರ,  ಆ ಸುಂದರಮ್ಮನವರಿಗೆ ಗೊತ್ತಿರತ್ತೇ ಕೇಳಿ". ಅಷ್ಟರ ಮಟ್ಟಿಗೆ ಪ್ರಚಾರಗಿಟ್ಟಿಸಿಕೊಂಡುಬಿಟ್ಟಿದ್ದರು ಸುಂದರಮ್ಮ. ಹಾಗಾಗಿಯೇ ಏನೋ ಇತ್ತೀಚೆಗೆ, ಸದಾ ನೇತಾಡುತಿದ್ದ "ಸುಂದರಮ್ಮ ಲೇಡೀಸ್ ಟೇಲರ್" ಎನ್ನುವ ಹಳೆಯ ಬೋರ್ಡು ಹೋಗಿ, "ಸುಂದರಮ್ಮ ಲೇಡೀಸ್ ಟೇಲರ್ ಮತ್ತು ರಿಯಲ್ ಎಸ್ಟೇಟ್" ಎನ್ನುವ ಹೊಸ ಬೋರ್ಡು ನೇತಾಡುತಿತ್ತು ಮನೆಯ ಬಾಗೀಲ ಪಕ್ಕ.

ಸದಾ ಬೇರೆಯವರ ಮನೆಯ ದೋಸೆಯ ತೂತಿನ ವಿಚಾರದಲ್ಲೇ ಮಗ್ನಳಾಗಿರುತಿದ್ದ ಸುಂದರಮ್ಮನವರಿಗೆ ತಮ್ಮ ಮನೆಯ ದೋಸೆಯಲ್ಲೂ ತೂತಿದೆ ಎಂದು ಗೊತ್ತಾಗಲು ಬಹಳ ದಿನವೇನು ಹಿಡಿಯದೇ ಇರಲಿಲ್ಲ. ಕಾಲ ಎಲ್ಲಾ ಕಾಲಕ್ಕೂ ಒಂದೇ ತೆರನಾಗಿದ್ದರೆ, ಈ ಜೀವ ಸಂಕುಲಗಳಲ್ಲಿ ಅಷ್ಟೊಂದು ವೈವಿಧ್ಯತೆಯಾದರೂ ಎಲ್ಲಿರುತಿತ್ತು, ಜೀವ ವಿಕಾಸವಾದರೂ ಎಲ್ಲಾಗುತಿತ್ತು. ಕಾಲ ಬದಲಾಗದೇ ಇದ್ದಿದ್ದರೆ, ಮಂಗನಿಂದ ಮಾನವನಾಗಬೇಕಿದ್ದವನು ಮಂಗನಾಗಿಯೇ ಇದ್ದು ಬಿಡುತಿದ್ದ ಅಲ್ಲವೇ.  

ಅದು ಮೇ ತಿಂಗಳ ಮೊದಲ ವಾರ, ರಾತ್ರಿ ಸುಮಾರು ಹನ್ನೆರೆಡು ಗಂಟೆ, ಮನೆಯ ಹೊರಗಿನ ರಸ್ಥೆಯ ಬದಿಯ ದೀಪಗಳು ಒಮ್ಮೆ ಹಿಗ್ಗಿ ಬೆಳಗುತ್ತಾ, ಮತ್ತೆ ಕುಗ್ಗಿ ಮರೆಯಾಗುತ್ತಾ ಕಣ್ಣು ಮುಚ್ಚಾಲೆಯಾಟವಾಡುತಿದ್ದವು. ಒಂದೆರೆಡು ದಿನಗಳ ಹಿಂದಷ್ಟೇ ಪದವಿ ಪರೀಕ್ಷೆ ಬರೆದು ಮುಗಿಸಿದ ಮಗಳು, ಇನ್ನೂ ಸಿಇಟಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಗ ಒಳಗೆ ಮಲಗಿದ್ದರು. ಗಂಡ ಅದ್ಯಾವುದೋ ಕೆಲಸದ ಮೇಲೆ ಹೈದರಾಬಾದ್ಗೆ ಹೋಗಿದ್ದರು. ಮದುವೆ ಸೀಸನ್ ಜೋರಾಗಿದ್ದುದರಿಂದ ಸುಂದರಮ್ಮನವರಿಗೆ ಹೊಲಿಗೆಯ ಕೆಲಸವು ಜೋರಾಗಿತ್ತು. ವಾರ ಬಿಟ್ಟು ಕೊಡುತ್ತೇನೆ ಎಂದು  ಕಮಲಮ್ಮನವರಿಂದ ಇಸಿದುಕೊಂಡ ವಸ್ತ್ರಗಳಿನ್ನೂ ಬರೀಯ ವಸ್ತ್ರಗಳಾಗಿಯೇ ಇದ್ದವು ಬಿಟ್ಟರೆ ಅವಕ್ಕಾವುದೇ ಆಕಾರ ಬಂದಿರಲಿಲ್ಲ. ಕಮಲಮ್ಮನವರು ದೀನಾ ಬಂದು ಕೇಳಿದ್ದೇ ಕೇಳಿದ್ದು. ಸುಂದರಮ್ಮ ನಾಳೆ ಕೊಡುತ್ತೇನೆ ಎಂದು ಹೇಳಿದ್ದೇ ಹೇಳಿದ್ದು. ಬಟ್ಟೆ ಮಾತ್ರ ಇದ್ದಲ್ಲಿಯೇ ಇತ್ತು. ದೀನಾ ಕೇಳಿ ಬೇಸೆತ್ತಿದ್ದ ಕಮಲಮ್ಮನವರು ಇಂದು ಬೆಳಿಗ್ಗೆ ಸ್ವಲ್ಪ ಸಿಟ್ಟಿನಲ್ಲಿಯೇ

"ನೋಡಿ ಸುಂದರಮ್ಮನವರೇ, ದೀನಾ ನೀವು ನಾಳೆ, ನಾಳೆ ಎಂದು ಆಗಲೇ ಒಂದು ತಿಂಗಳು ಕಳೆದು ಬಿಟ್ಟಿರಿ, ಮುಂದಿನ ವಾರವೇ ಮೊಮ್ಮಗಳ ಮದುವೆ, ನೀವು ನೋಡಿದ್ರೆ, ಬಟ್ಟೆ ಹೊಲಿಯೋ ತರನೇ ಕಾಣಲ್ಲ, ಹೀಗೆ ಆದ್ರೆ ಹೇಗೆ?"

ಅದಕ್ಕೆ ಸುಂದರಮ್ಮನವರು " ಸಾರೀರಿ, ಕಮಲಮ್ಮನವರೇ, ದಯವಿಟ್ಟು ಬೇಜಾರು ಮಾಡ್ಕೋಬೇಡಿ, ನಾಳೆ ಅದೇನೇ ಆಗಲೀ ಖಂಡಿತ ಕೋಟ್ಟು ಬಿಡುತ್ತೇನೆ."

"ಅಯ್ಯೋ ಇನ್ನೆಷ್ಟು ನಾಳೆಗಳಮ್ಮ, ಬಾಯಿ ತೆರೆದರೆ ನಾಳೆ ಅಂತಿರಲ್ರೀ. ನೋಡಿ ನನಗೆ ನಾಳೆ ಬಟ್ಟೆ ಬೇಕೇ ಬೇಕು, ನಿಮ್ಮ ಹತ್ರ ಹೋಲಿಯೋಕ್ಕೆ ಆಗಲ್ಲ ಅಂದ್ರೆ ಹಾಗೆ ಕೊಡಿ, ನಾನು ೩ ನೇ ಪೇಸ್ ಅಲ್ಲಿರೋ ಮೋಹನ್ ಹತ್ರ ಕೊಡ್ತಿನಿ. ಮತ್ತೆ ನಾಳೆ ಅಂದ್ರೆ ಸುಮ್ಮನಿರಲ್ಲ ನೋಡಿ." ಎಂದು ಗದರಿಸಿ ಹೋಗಿದ್ದರು ಕಮಲಮ್ಮ.

ನಾಳೆ ಕೊಡುತ್ತೇನೆ ಎಂದು ಹೇಳಿ ಒಪ್ಪಿಕೊಂಡರೂ, ಇಷ್ಟೊತ್ತು ಹೊಲಿಯಲು ಪುರುಸೊತ್ತು ಸಿಕ್ಕಿರಲಿಲ್ಲ ಸುಂದರಮ್ಮನವರಿಗೆ. ಹಗಲಲ್ಲಿ ಅದ್ಯಾರೋ, ಮನೆ ಬಾಡಿಗೆಗೆ ಕೇಳಿಕೊಂಡು ಬಂದುದ್ದರಿಂದ, ಅವರಿಗೆ ಮನೆ ತೋರಿಸುವುದರಲ್ಲೇ ಕಳೆದು ಹೋಗಿತ್ತು. ಹೇಗಾದರು ಮಾಡಿ ರಾತ್ರಿ ಕುಳಿತು ಆದಷ್ಟು ಬಟ್ಟೆಯ ಕೆಲಸ ಮುಗಿಸಬೇಕೆಂದು ಒಳಗೆ ಕುಳಿತರೆ ಮಗನ ಓದಿಗೆ ತೊಂದರೆ ಆಗುತ್ತದೆಂದು ಹೊರಗೆ ದೀಪ ಹಚ್ಚಿ ಕುಳಿತರು ಸುಂದರಮ್ಮನವರು.

ಗಂಟೆ ಒಂದಾಯ್ತು, ಎರಡಾಯ್ತು, ಆದರೆ ಕೆಲಸ ಮಾತ್ರ ಅಂದುಕೊಂಡಷ್ಟು ಮುಗಿದಿರಲಿಲ್ಲ. ನಿದ್ದೆ ಬೇರೆ ಎಳೀತಾ ಇತ್ತು, ಆಗಾಗ ತೂಕಡಿಕೆ, ಆದರೆ ಎದ್ದು ಮಲಗಲು ಮನಸ್ಸಿಲ್ಲ. ನಾಳೆ ಬಟ್ಟೆ ಕೊಡಲೇ ಬೇಕೆನ್ನುವ ಚಿಂತೆ. ಅದೆಷ್ಟೇ ಪ್ರಯತ್ನಪಟ್ಟರು ನಿದ್ದೆಯ ಗುಂಗು ಕಣ್ಣ ಪೂರ್ತಿ ಆವರಿಸಿ ಕುಳಿತಿತ್ತು. ಅವರಿಗೆ ಅರಿವಿಲ್ಲದೇ ಒಂದೈದು ನಿಮಿಷ ತೂಕಡಸಿ ಅಲ್ಲೇ ನಿದ್ದೆಗೆ ಜಾರಿಬಿಟ್ಟರು. ತಕ್ಷಣ ಗೇಟಿನ ಶಬ್ಧ, ಯಾರದೋ ಹೆಜ್ಜೆಯ ಶಬ್ಧ ಕೇಳಿದಂತಾಗಿ, ಒಮ್ಮೇಲೆ ಹೆದರಿ, ತಡಬಡಿಸಿ, ಎದ್ದು, "ಯಾರು?" ಎಂದರು. ಉತ್ತರವಿಲ್ಲ. ಹೊರಗಡೆಯ ಬೀದಿದೀಪ, ಅಮವಾಸ್ಯೆಯ ಚಂದ್ರನಂತಾಗಿತ್ತು. ಬಹುಶಃ ಅವರಿಗೆ ಕನ್ನಡ ಬರಲಿಕ್ಕಿಲ್ಲವೆಂದು "ಅದಿ ಯಾರ್?" ಎಂದು ತಮಿಳಿನಲ್ಲೊಮ್ಮೆ ಕೇಳಿದರು. ಉತ್ತರವಿಲ್ಲ. ಹೌದು ಯಾರೋ ನಡೆದಾಡಿದ್ದಂತು ನಿಜ ಎಂದು, ಬಟ್ಟೆಗಳನ್ನು ಹೊಲಿಗೆಯಂತ್ರದ ಟೇಬಲ್ ಮೇಲಿಟ್ಟು, "ಯಾರಂಡಿ" ಎನ್ನುತ್ತಾ ಗೇಟು ತೆರೆಯಲು ನೋಡಿದರು. ಗೇಟಿನ  ಚಿಲಕ ಅರ್ಧಂಬರ್ಧ ತೆರೆದಂತಿದೆ. ಹೌದು ಯಾರೋ ಇಲ್ಲಿಯವರೆಗೆ ಬಂದು ಹೋದಂತಿದೆ. ಬಹುಶಃ ನನಗೆ ಎಚ್ಚರವಾಯಿತೆಂದು ಹೋಗಿರಬೇಕು. ನೋಡೋಣ ಎಂದು ಮುಖ್ಯರಸ್ಥೆಯವರೆಗೆ ನಡೆದು ಬಂದು, ಆ ಕಡೆ-ಈ ಕಡೆ ಸ್ವಲ್ಪ ದೂರದವರೆಗೆ ಕಣ್ಣಿಟ್ಟು ನೋಡಿದರು. ಅದ್ಯಾವುದೋ ಒಂದು ಬೈಕ್ ದೂರದಲ್ಲಿ ಕಾರ್ಡ್ ರೋಡ್ ನತ್ತ ಹೋಗುತಿತ್ತು ಬಿಟ್ಟರೆ ಮತ್ಯಾವುದೇ ಜನರ ಸುಳಿವಿರಲಿಲ್ಲ. ತನ್ನದೇ ಏನೋ ಭ್ರಮೆ ಇರಬೇಕೆಂದು ಮನೆಯತ್ತ ದಾವಿಸಿದರು.

ಮನೆಗೆ ಬಂದು ಮತ್ತೆ ಬಟ್ಟೆ ಕೈಗೆತ್ತಿಕೊಂಡರೂ, ಕೆಲಸಮಾಡಲು ಮೊದಲಿನ ಹುರುಪಿರಲಿಲ್ಲ. ಯಾಕೋ ಮನಸ್ಸು ಕುಲುಕಿದಂತಾಗಿತ್ತು. ಒಳಗೆ ದೃಷ್ಟಿಹಾಯಿಸಿದರೆ, ಒಳಗಡೆಯ ದೀಪಗಳೆಲ್ಲ ಅದಾಗಲೇ ಆರಿದ್ದವು. ಮಕ್ಕಳು ಮಲಗಿರಬೇಕೆಂದುಕೊಂಡರು. ಹೊರಗೆ ತೂಗು ಹಾಕಿದ ಗಡಿಯಾರ ನೋಡಿದರೆ, ಅದಾಗಲೇ ಗಂಟೆ ಮೂರು ಕಳೆದಿದ್ದನ್ನು ತೋರಿಸುತಿತ್ತು. ಇನ್ನೂ ಎಷ್ಟೊತ್ತು ಬಟ್ಟೆ ಹೊಲಿಯುವುದು. ಮಗಳಿಗೆ ಹೇಗೂ ಪರೀಕ್ಷೆ ಮುಗಿದಿದೆ. ನಾಳೆ ಅಡಿಗೆಯ ಕೆಲಸವನ್ನೆಲ್ಲ ಅವಳಿಗೆ ನೋಡಲು ಹೇಳಿ, ತಾನು ಕಮಲಮ್ಮನವರು ಕೊಟ್ಟ, ಬಟ್ಟೆಯ ಕೆಲಸವನ್ನೆಲ್ಲ ಮುಗಿಸಿ ಬಿಡುತ್ತೇನೆ ಎಂದು ಒಳನಡೆದು, ನಿದ್ದೆಗೆ ಜಾರಿದರು.

ಬೆಳಿಗ್ಗೆ ಇದ್ದಕ್ಕಿದ್ದ ಹಾಗೆ ಸುಂದರಮ್ಮನವರ ಮನೆಯಲ್ಲಿ ಅಳುವಿನ ಶಬ್ಧ ಕೇಳಿ, ಅಕ್ಕ ಪಕ್ಕದ ಮನೆಯವರೆಲ್ಲ ಬಂದು ಜಮಾಯಿಸಿ ಬಿಟ್ಟರು. ತಾನಾಯ್ತು, ತನ್ನ ಮನೆಯಾಯಿತು ಎಂದು ಕೊಂಡಿರುವ ವಿನುತಾ, ಇನ್ನೇನು ಕೆಲಸಕ್ಕೆ ಹೊರಡಬೇಕು ಎಂದು ಹೆಗಲಿಗೆ ಬ್ಯಾಗ್ ತುಗಿಕೊಂಡು, ತುಟಿಗೆ ಬಳಿದ ಬಣ್ಣದ ಚಪ್ಪಲಿ ಧರಿಸಿ, ಹೊರನಡೆಯುವುದಕ್ಕೆ ಬಾಗಿಲು ತೆರೆಯುವುದಕ್ಕೂ, ಮನೆಯ ಕೆಲಸದ ಮುನಿಯಮ್ಮ ಬಾಗಿಲ ಬಳಿ ಬರುವುದಕ್ಕೂ ಸರಿಯಾಯಿತು. ಇವಳೊಬ್ಬಳು ಹೊತ್ತಿಲ್ಲ ಗೊತ್ತಿಲ್ಲ, ತನಗೆ ಮನಸ್ಸಿಗೆ ಬಂದ ಹಾಗೆ ಕೆಲ್ಸಕ್ಕೆ ಬರ್ತಾಳೆ ಎಂದು ಮನಸ್ಸಿನಲ್ಲೇ ಬಯ್ಯುತ್ತಾ, "ಏನ್ ಮುನಿಯಮ್ಮ ಯಾಕೆ ಲೇಟ್ ಇವತ್ತು" ಎಂದು ಕೇಳಿದರು.

"ಸಾರಿ ಅಮ್ಮೋರೇ ಸ್ವಲ್ಪ ಲೇಟಾಯ್ತು. ಆ ಸುಂದರಮ್ಮನವರ ಮನೆ ಇದೆಯಲ್ಲಾ, ಅಲ್ಲಿ ಜನಾ ಸೇರಿದ್ದರು, ಏನಾಂತಾ ಕೇಳಿದ್ರೆ, ಅವಳ ಮಗಳು ರಾತ್ರಿ ಮನೆ ಬಿಟ್ಟು ಹೋಗಿದ್ದಾಳಂತೆ. ಅದ್ಯಾರ್ನೋ ಪ್ರೀತಿಸ್ತಿವ್ನಿ, ಮದ್ವೆ ಆಗ್ತೀವ್ನಿ, ಅಂತಾ ಕಾಗ್ದಾ ಬರ್ದು ಹೋಗವಳಂತೆ. ಅದನ್ನಾ ಕೇಳ್ತಾ ಲೇಟಾಗೋಯ್ತು, ಸಾರೀರೀ ಅಮ್ಮೋರೆ"

"ಓಹ್ ಹಾಗಾ, ನೋಡು ಇವಾಗ ನಾನು ಕೆಲಸಕ್ಕೆ ಹೋಗ್ಬೇಕು, ಲೇಟಾಗತ್ತೆ. ನಾಳೆ ಸ್ವಲ್ಪ ಬೇಗ ಬಂದು ಬಿಡು ಆಯ್ತಾ" ಎನ್ನುತ್ತಾ ಬಿರ ಬಿರನೇ ನಡೆದೇ ಬೀಟ್ಟರು ವಿನುತಾ ತನ್ನ ಕೆಲಸಕ್ಕೆ. ತನಗೂ ಅದೇ ಬೀದಿಯಲ್ಲಿನ ಪಕ್ಕದ ಮನೆಯ ಸುಂದರಮ್ಮನ ಸಂಸಾರಕ್ಕೂ ಏನು ಸಂಬಂಧ ಎನ್ನುವಂತೆ.

--ಮಂಜು ಹಿಚ್ಕಡ್

No comments:

Post a Comment