Saturday, April 11, 2015

ಆಸೆ-ನಿರಾಸೆ!

ಅಮವಾಸ್ಯೆ ಕಳೆದು ಆಗಲೇ ಎರಡು ಮೂರು ದಿನ ಕಳೆದು ಹೋಗಿರಬಹುದೆಂದು ಪಂಚಾಂಗ ಹೇಳದಿದ್ದರೂ, ಆಗಲೇ ಸೂರ್ಯ ಮುಳುಗಿ ಅರ್ಧ ಗಂಟೆ ಕಳೆದರೂ ಕತ್ತರಿಸಿದ ಉಗುರಿನಂತೆ ಕಾಣುವ ಇನ್ನೂ ಮುಳುಗದ ಚಂದ್ರನನ್ನು ನೋಡಿ ತನ್ನ ಅನುಭವದಿಂದಲೇ ಗೃಹಿಸಬಲ್ಲವನಾಗಿದ್ದ ಸೋಮ. ಮುಂದೆ ಬರಲಿರುವ ಭಜೆನೆ ಆಟದ ನಿಮಿತ್ತ ಸಂಕ್ರಾಂತಿಯ ಮಾರನೇ ದಿನದಿಂದ ಸುರುವಾದ ಭಜನೆಗಾಗಿ ತನ್ನ ಮನೆ ಸೇರಿದ ಸಂಬಂಧಿಕರನ್ನು ಸಂತೃಪ್ತಿ ಪಡಿಸಲು ಮನೆಗೆ ಬಂದ ನೆಂಟರನ್ನು ಸಂಜೆಯ ತೀರ್ಥ ಸೇವನೆಗಾಗಿ ಕರೆದುಕೊಂಡು ಬಂದು ದೇವಿಯ ಅಂಗಳ ಸೇರಿದ. ದೇವಿಯೇನು ಸುಮ್ಮನೆ ಬಿಟ್ಟಿಯಾಗಿ ಕುಡಿಯಲು ಕೊಡುತ್ತಾಳೆಯೇ? ನಿನ್ನೆಯ ಸಾಲ ತೀರಿದರೆ ತಾನೇ ಇಂದಿನ ತೀರ್ಥ. ಅದು ಅವನಿಗೆ ತಿಳಿಯದ ವಿಷಯವೇ. ಹಾಗಾಗಿ ಕಳೆದು ಒಂದು ವಾರದಿಂದ ತಾನು ಸೊಪ್ಪು ತರುವಾಗ ಅಲ್ಲಲ್ಲಿ ಹೊರ ಬೇಣಗಳಲ್ಲಿ ಬಿಟ್ಟಿ ಬೆಳೆದ ಗೇರು ಮರಗಳಿಂದ ಕೊಯ್ದು ತಂದು ಶೇಖರಿಸಿಟ್ಟ ಒಣ ಗೇರುಬೀಜಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಬಂದಿದ್ದ. ತಂದ ಮಾಲನ್ನು ದೇವಿಯ ಅಂಗಡಿಯ ಅಳೆತೆಯಿಲ್ಲದ ತಕ್ಕಡಿಗೆ ಸುರಿದ. ದೇವಿಯ ಲೆಕ್ಕದಲ್ಲಿ ಅದು ನಿನ್ನೆ ಕುಡಿದ ಎಣ್ಣೆಗೆ ಸರಿಹೊಂದುವಷ್ಟಾಗಿ ಸ್ವಲ್ಪ ಮಿಕ್ಕಿತ್ತು. ಹೇಗಿದ್ದರೂ ಇವತ್ತಿನ ಸಾಲವನ್ನು ನಾಳೆ ತೀರಿಸುವುದು ಅಲ್ಲಿಯ ಸಂಪ್ರದಾಯವಲ್ಲವೇ. ನಾಳೆಯದನ್ನು ನಾಳೆ ನೋಡಿದರಾಯಿತು ಎಂದು ಮಿಕ್ಕ ಹಣವನ್ನು ಇಂದಿನ ಲೆಕ್ಕಕ್ಕೆ ಸರಿ ಹೊಂದಿಸುವುದು ಬೇಡವೆಂದು, ಉಳಿದ ಹಣವನ್ನು ಕಿಸೆಗೆ ತುರುಕಿಸಿದ. ದೇವಿ ಸಾಲಕ್ಕೆ ಕೊಟ್ಟ ತೀರ್ಥದ ಕೊಟ್ಟೆಗಳಲ್ಲಿ ಒಂದೆರಡು ಕೊಟ್ಟೆಯ ತೀರ್ಥವನ್ನು ಹೊಟ್ಟೆಗಿಳಿಸಿ ತನ್ನೊಂದಿಗೆ ಬಂದ ನೆಂಟರಿಗೂ ಕೊಟ್ಟು ತಾನು ಸಂತೃಪ್ತಿಯ ಭಾವ ಹೊಂದುತ್ತಿರುವಾಗಲೇ ಕಂತುತಿದ್ದ ಸೂರ್ಯನನ್ನು ನೋಡಿ, ಹೆಂಡತಿ ಬರುವಾಗ "ಆಸಿಗೇನಾರ್ ತಕಂಬರ್ರೇ" ಎಂದದ್ದು ನೆನಪಾಯ್ತು. ಶಿರೂರಿನ ಜಂತ್ರೋಡಿಗೆ ಹೋದರೆ ಸಿಟ್ಲಿ (ಸಿಗಡಿ ಮೀನು) ಸಿಕ್ಕರೂ ಸಿಗಬಹುದೇನೋ ಎಂದನಿಸಿ ತನ್ನೊಟ್ಟಿಗೆ ಬಂದವರಿಗೆ ತೀರ್ಥ ಸೇವನೆ ಮುಗಿದೊಡನೆಯೇ ಮನೆಗೆ ಹೋಗಲು ತಿಳಿಸಿ, ತಾನು ಚಡ್ಡಿಯ ಒಂದು ಕಿಸೆಯಲ್ಲಿ ಒಂದೆರಡು ಪ್ಯಾಕೆಟ್ ತೀರ್ಥ ತೂರಿಸಿ, ಇನ್ನೊಂದು ಕಿಸೆಯಲ್ಲಿ ಬೀಡಿ ಬಂಡಲ್ ಕಡ್ಡಿ ಪೆಟ್ಟಿಗೆ ತುರುಕಿಸಿ "ದೇವಕ್ಕ, ನಾಳೆಗ್ ಕುಡ್ತೆನೇ" ಎಂದು ದೇವಿಗೆ ಕೇಳುವಂತೆ ಹೇಳಿ ದೇವಿಯ ಸರಾಯಿ ಅಂಗಡಿಯಿಂದ ಶಿರೂರಿನ ಜಂತ್ರೋಡಿಯತ್ತ ಹೊರಟ ಸೋಮ.

ಅಮವಾಸ್ಯೆ ಹುಣ್ಣಿಮೆಯ ಸಂಧಿಗಳಲ್ಲಿ ಜಂತ್ರೋಡಿಯಲ್ಲಿ ಸೆಟ್ಲಿ ಹಿಡಿಯುವುದು ಸೋಮನಿಗೆ ತಿಳಿಯದ ವಿಷಯವೇನಲ್ಲ. ಅವನು ಚಿಕ್ಕಂದಿನಿಂದ ಇಲ್ಲಿಯವರೆಗೆ ಅದೆಷ್ಟೋ ಭಾರಿ ಹೋಗಿ ಬಂದಿದ್ದ. ಪ್ರತಿಭಾರಿಯೂ ಹೋದರೆ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲ. ಜಾಸ್ತಿ ಸಿಕ್ಕು ಜನ ಕಡಿಮೆ ಬಂದರೆ ಉಂಟು, ಇಲ್ಲವೆಂದರೆ ಸಾರಿಗಾಗಿ ಅರೆದು ಇಟ್ಟ ಬರಿಯ ಮಸಾಲೆಯೇ ಗತಿ. ಸಿಕ್ಕರೆ ಸಿಗಲಿ ನೋಡೋಣವೆಂದು ಹೊರಟಿದ್ದ ಸೋಮ.

ಹಗಲು ಕಡಿಮೆಯಾದ ಸಮಯವಾದ್ದರಿಂದಲೋ ಏನೋ ಬೀರರ ಮನೆ ದಾಟಿ ಬೊಮ್ಮಯ್ಯ ದೇವರ ಗುಡಿ ತಲುಪುವ ಹೊತ್ತಿಗೆ ಕತ್ತಲಾವರಿಸಿತ್ತು. ಬೊಮ್ಮಯ್ಯ ದೇವರ ಮನೆಯವರೆಗೆ ಗದ್ದೆ ಬಯಲಿನಲ್ಲಿ ಹೇಗೋ ನಡೆದುಕೊಂಡು ಬರಬಹುದು, ಆದರೆ ಮುಂದಿನ ದಾರಿ ಸ್ವಲ್ಪ ಕಡಿದಾದುದರಿಂದ ಸ್ವಲ್ಪ ಆಯ ತಪ್ಪಿದರೂ, ಕಾನುಮೂಲೆಯ ಗುಡ್ಡದ ಧರೆಯಿಂದ ಕೆಳಕ್ಕೆ ಜಾರುವ ಸಂಭವ ಉಂಟು. ಅದೇನು ಸೋಮನಿಗೆ ತಿಳಿಯದ ವಿಚಾರವೇನಲ್ಲ. ಮಂದವಾಗಿ ಬೀರುವ ತಿಂಗಳ ಬೆಳಕಿನಿಂದಾಗಿಯೋ ಅಥವಾ ತನಗಿರುವ ಆ ದಾರಿಯ ಅನುಭವದಿಂದಾಗಿಯೋ ಅವನು ಆ ದಾರಿಯನ್ನು ಕ್ರಮಿಸಿ ಅಂಬೇರರ ಮನೆ ದಾಟಿ ಜಿಂತ್ರೋಡಿಯ ಹತ್ತಿರ ಹತ್ತಿರ ಬಂದ.

ಹತ್ತಿರ ಹತ್ತಿರ ಬರುತ್ತಿದ್ದಂತೆ ಚಂದುಮಠದ ಕಡೆ ಗದ್ದೆ ಬಯಲಿನಲ್ಲಿ ಲಾಟೀನು ಬೆಳಕು ಕಾಣಿಸಿತು. ಲಾಟೀನಿನ ಬೆಳಕು ಕಾಣುವ ದಿಕ್ಕಿನತ್ತ ನೋಡಿದ. ಬೆಳಕಿನಲ್ಲಿ ಮಾಡುವ ಅಸ್ಪಷ್ಟ ಜನರ ನೆರಳುಗಳನ್ನು ನೋಡಿದಾಗ ಆಗಲೇ ಸಾಕಷ್ಟು ಜನರು ಸೇರಿರಬಹುದೆನಿಸಿತು.

ಗಂಗಾವಳಿ ನದಿಗೆ, ಬೆಳಸೆ, ತಳಗದ್ದೆ ಕಡೆಯಿಂದ ಬಂದು ಸೇರುವ ಕಿರಿದಾದ ಹಳ್ಳಕ್ಕೆ ಕಟ್ಟು ಕಟ್ಟಿ ಚಿಕ್ಕ ಗಂಡಿ ಬಿಟ್ಟು, ಇಳಿತದ ಸಮಯದಲ್ಲಿ ಆ ಗಂಡಿಗೆ ಕೊಳವೆಯಾಕಾರದ ಬಲೆ ತುರುಕಿಸಿ ಸಿಟ್ಲಿ ಹಿಡಿಯುತ್ತಿದ್ದರು. ನೀರು ಹೋಗುವ ಗಂಡಿಯ ಬಳಿ ಒಂದು ಲಾಟೀನು ಇಟ್ಟಿದ್ದರು. ಇಳಿತದ ಸಮಯದಲ್ಲಿ ನೀರಿನ ಹರಿವಿನ ರಭಸಕ್ಕೆ, ನೀರಿನಲ್ಲಿದ್ದ ಸಿಗಡಿ ಮೀನುಗಳಲ್ಲ ಬೆಳಕಿಗೆ ಆಕರ್ಷಣೆಗೊಂಡು ಸೋತು ನೀರು ಸೇರಿ ಬಲೆ ಸೇರುತಿದ್ದವು. ಸೋಮ ಮೆಲ್ಲಗೆ ಆ ಹಳ್ಳಕ್ಕೆ ಕಟ್ಟಿದ ಕಟ್ಟಿನ ಮೇಲೆ ನಡೆದುಕೊಂಡು ನಡೆವಾಗ ಲಾಟೀನಿನ ಬೆಳಕು ನೋಡಿ ಹಾರಾಡುವ ಸಿಟ್ಲಿಗಳನ್ನು ನೋಡಿದಾಗ ಬಾಯಲ್ಲಿ ಇನ್ನಷ್ಟು ನೀರೂರಿತು. "ಇವತ್ತ್ ಹೆಂಗಾರೂ ಮಾಡ್ ಸಿಟ್ಲಿನ್ ತಕ್ಕುಂಡೇ ಹೋಗುದೇ" ಎಂದು ಹಾರಾಡುವ ಸಿಟ್ಲಿಗಳನ್ನು ನೋಡುತ್ತಾ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ, ಹಾಗೆ ಒಂದೆರಡು ನಿಮಿಷ ನಿಂತವನು, ತಡ ಮಾಡಿದರೆ ಕಷ್ಟ ಎಂದು ಮೆಲ್ಲ ಮೆಲ್ಲನೆ ಕಟ್ಟನ್ನು ದಾಟಿ, ಚಂದುಮಠದ ಕಡೆಯ ಕಳದತ್ತ ಜೋರಾಗಿ ಹೆಜ್ಜೆ ಹಾಕಿದ.

ಅವನು ಕಳ ಸೇರುವ ಹೊತ್ತಿಗೆ ಶಿರೂರಿನ ಕಡೆಯವರು, ಚಂದುಮಠ-ಬೆಳಸೆ ಕಡೆಯವರು, ಹಿಚ್ಕಡ-ಕಣಗಿಲ ಕಡೆಯವರು, ಸಗಡಗೇರಿ-ಜೂಗಾ ಕಡೆಯವರು ಹೀಗೆ ಸಾಕಷ್ಟು ಜನ ಅಲ್ಲಿ ಸಿಗಲಿರುವ ತಾಜಾ ತಾಜಾ ಸಿಟ್ಲಿಗಾಗಿ ಅಲ್ಲಿ ಬಂದು ಸೇರಿದ್ದರು. ಅಲ್ಲಿ ಬಂದವರಲ್ಲಿ ತಾನು ಒಬ್ಬನಾಗಿ ದೂರದಲ್ಲಿ ಬೀಡಿ ಕಚ್ಚಿ ಹೊಗೆ ಉಗುಳುತ್ತಾ ಕುಳಿತ ಸೋಮ.

ತನಗರಿವಿಲ್ಲದಂತೆ ಬೀಡಿ ಸೇಯುವ ಕಾಯಕದಲ್ಲಿ ಅವನಿದ್ದರೂ ಅವನ ಮನಸ್ಸು ದೃಷ್ಟಿಯೆಲ್ಲಾ, ಕಳದತ್ತ ಬರಲಿರುವ ಸಿಟ್ಲಿ ಬಲೆಯತ್ತಲೇ ನಾಟೀತ್ತು. ಅವನು ಬೀಡಿ ಸೇದಿ ಮುಗಿಯುವ ಹೊತ್ತಿಗೆ ಕಳಕ್ಕೆ ಸಿಟ್ಲಿಯ ಮೊದಲ ಬಲೆ ಬಂತೆನ್ನುವ ಜನರ ಗುಸು-ಗುಸು ಸದ್ದು ಇವನ ಕಿವಿಗೂ ತಲುಪಿ, ಬಲೆ ತಂದು ಇಳಿಸಲಿರುವ ಕಡೆ ಇತರರಂತೆ ಓಡಿದ. ಅಲ್ಲಿ ಆ ಮಟ್ಟಿಗೆ ಬಲೆ ಹಿಡಿದು ಬಂದ ಶುಕ್ರುವೇ ಹಿರೋ. ಅವನು ಬಲೆ ಹಿಡಿದು ಆ ಕಡೆ, ಈ ಕಡೆ ಓಡಾಡಿ ಬಂದವರನ್ನು ತನ್ನೊಡನೆ ಓಡಾಡುವಂತೆ ಮಾಡಿ, ತನ್ನ ಸಹಾಯಕನಿಗೆ, "ಏ ಹನ್ಮು ಎಂತಾ ಮಾಡ್ತಾ ಇದ್ದಿಯಕಾ ನೀನು, ಚತ್ತೋನೆ ಕಣ್ಣ ಕಾಂಬುದಿಲ್ವೇನಾ ನಿಂಗೆ, ಬ್ಯಾಗ್ ಲಾಟೀನ್ ತಕಂಬಾರಾ" ಎಂದು ಕೂಗಿ ಒಂದು ಮೂಲೆಯಲ್ಲಿ ಬಂದು ಆಸೀನನಾದ. "ಆಯ್ತಾ ತಂದ್ನಾ ಚ್ವಲ್ಪ್ ತಡ್ಕಣಾ" ಎನ್ನುತ್ತಾ ಹನ್ಮು ಒಂದು ಬಕೇಟ ಮತ್ತು ಬುಟ್ಟೀಯನ್ನು ತಂದು ಶುಕ್ರುವಿನ ಮುಂದಿರಿಸಿದ. ಹನ್ಮು ತಂದ ಬುಟ್ಟಿಯಲ್ಲಿ ಬಲೆಯಿಂದ ತಂದ ಸಿಟ್ಲಿಯನ್ನು ಸುರುವಿದ ಶುಕ್ರು.

ಆ ಸಿಟ್ಲಿಯಲ್ಲಿ ದೊಡ್ಡ ದೊಡ್ಡ ಸೆಟ್ಲಿಗಳನ್ನು ಆರಿಸಿ ಆರಿಸಿ ಒಂದು ಪ್ಲಾಸ್ಟಿಕ್ ಬಕೇಟಿಗೆ ಹಾಕತೊಡಗಿದರು ಹನ್ಮು ಹಾಗೂ ಶುಕ್ರು.ದೊಡ್ಡ ಸೆಟ್ಲಿಗೆ ಜಾಸ್ತಿ ರೊಕ್ಕವಿದ್ದುದರಿಂದ ಅವೆಲ್ಲವನ್ನು ಕೇಜಿ ಲೆಕ್ಕದಲ್ಲಿ ಮಾರುತಿದ್ದರು. ಅಲ್ಲಿ ಬಂದವರಲ್ಲಿ ಬಹುಜನ ಸೋಮುವಿನಂತೆ ಬಯಸಿ ಬಂದದ್ದು ಸಿದ್ದೆ, ಅಳ್ಳದಲ್ಲಿ (ಹಳೆಯ ಕಾಲದ ಮಾಪುಗಳು) ಅಳೆದು ಕೊಡಬಹುದಾದ ಚಿಕ್ಕ ಚಿಕ್ಕ ಸಿಟ್ಲೆಯನ್ನು ಬಯಸಿ. ಸಿಟ್ಲಿಯ ಜೊತೆಗೆ ಬಂದ ಕೊಳ ಹಾವುಗಳನ್ನು (ಜೌಗು ನೀರಿನಲ್ಲಿರುವ ಹಾವುಗಳು) ದೊಡ್ಡ ಸೆಟ್ಲಿ ಆರಿಸುವಾಗ ಸಿಕ್ಕರೆ ಅವುಗಳನ್ನು ಹೊರಗೆ ಎಸೆಯುತಿದ್ದರೂ. ಅವುಗಳು ಕಚ್ಚುತ್ತಿಲ್ಲವಾದರೂ ಬಂದವರ ಕಾಲಿನ ಬಳಿಯಲ್ಲಿ ಹರಿದಾಡಿ ಬಂದವರ ಪಾದಗಳಲ್ಲಿ ಕಚಕುಳಿಯಿಡುತಿದ್ದವು. ಹಾಗೆ ಹರಿದು ಬಂದ ಒಂದು ಹಾವು ಸೋಮನ ಕಾಲಿನ ಬಳಿಬಂದು ಹರಿದಾಡಿತು. ಎಲ್ಲಾ ಆರಿಸಿದ ಮೇಲೆ ಎಷ್ಟು ಸೆಟ್ಲಿ ಸಿಗಬಹುದು, ಇಲ್ಲಿದ್ದವರಿಗೆ ಎಷ್ಟು ಜನಕ್ಕೆ ಸಿಗಬಹುದು ಎಂದು ಲೆಕ್ಕ ಹಾಕುತ್ತಾ ಕುಳಿತ ಸೋಮನಿಗೆ, ಹಾವು ತನ್ನ ಕಾಲ ಬಳಿಕಚಕುಳಿ ಇಡುತ್ತಿದ್ದುದನ್ನು ನೋಡಿ ಆ ಹಾವಿನ ಮೇಲೆ ಸಿಟ್ಟು ಬಂದು, ಆ ಹಾವನ್ನು ಕೈಯಲ್ಲಿ ಹಿಡಿದು ಎತ್ತಿ, "ನಿನ್ನ್ ಕುಲಾ ಹಾಳಾಗುಕ" ಎಂದು ಕಳದಿಂದ ಹೊರಕ್ಕೆ ಎಸೆದ. ಹಾಗೆ ಎಸೆದ ಹಾವು ಅಲ್ಲಿಗೆ ಬರುತ್ತಿರುವ ಯಾರದೋ ಮೈಮೇಲೆ ಬಿದ್ದು, ಆತನಿಗೆ ಸಿಟ್ಟು ಬಂದು, "ಆದ್ಯಾರಂವ, ಜನ ಬರುದ್ ನೋಡ್ಕಂಡೆ ಹುತಾಕುಗೆ ಆಗುಲ್ವಾ" ಎಂದು ಗದರಿದ. ಸೋಮ ತನಗೆ ಸಂಬಂಧವಿಲ್ಲದವನಂತೆ ಮತ್ತೆ ಸಿಟ್ಲಿಯ ಬುಟ್ಟಿಯ ಕಡೆಗೆ ದೃಷ್ಟಿ ಬೀರಿದ.

ಸೋಮ ಹಾವು ಎಸೆದು ಮತ್ತೆ ಬುಟ್ಟಿಯ ಕಡೆ ದೃಷ್ಟಿ ಬೀರುವ ಹೊತ್ತಿಗೆ, ದೊಡ್ಡ ಸೆಟ್ಲಿಯೆಲ್ಲ ಆರಿಸಿ ಮುಗಿಸಿದ್ದರೂ. ಈಗ ಸಿದ್ದೆಯಲ್ಲಿ ಅಳೆದು ಕೊಡಲಿರುವ ಸಣ್ಣ ಸಿಟ್ಲಿಗಾಗಿ ಅದಾಗಲೇ ಜನ ಪ್ಲಾಸ್ಟಿಕ್ ಚೀಲ ಹಿಡಿದು ಬುಟ್ಟಿಯ ಸುತ್ತಾ ನಿಂತಿದ್ದರು. ಸಿಟ್ಲಿಯನ್ನು ಅಳೆದು ಹಾಕಲಿರುವ ಶುಕ್ರು ಸುತ್ತಲೂ ದೃಷ್ಟಿ ಬೀರಿ, ತನಗೆ ಪರಿಚಯವಿರುವರ ಪ್ಲಾಸ್ಟಿಕ್ ಚೀಲಕ್ಕೆ ಮೊದಲು ಸುರಿದು ದುಡ್ಡು ಇಸಿದುಕೊಂಡು ಕಳಿಸಲಾರಂಭಿಸಿದ. ಹತ್ತು ಹದಿನೈದು ನಿಮಿಷದೊಳಗೆ ಬುಟ್ಟಿಯಲ್ಲಿದ್ದ ಸಿಟ್ಲಿಯೆಲ್ಲ ಖಾಲಿಯಾಯಿತು. ಬಂದ ಜನರಲ್ಲಿ ಅರ್ಧದಷ್ತು ಜನರು ಸಿಟ್ಲಿ ಸಿಗದೇ ಎರಡನೆಯ ಭಾರಿಯ ಬಲೆಗಾಗಿ ಕಾದು ನಿಂತರು. ದೂರದಿಂದ ಬಂದ ಕೆಲವರು ಇನ್ನೊಂದು ಬಲೆಗೆ ಕಾದು ನಿಂತರೆ ತಡವಾಗುತ್ತದೆ ಎಂದು ದೊಡ್ಡ ಸಿಟ್ಲಿಯನ್ನೇ ಅರ್ಧ ಅರ್ಧ ಕೇಜಿ ಹೆಚ್ಚಿಗೆ ದುಡ್ಡು ಕೊಟ್ಟು ಕೊಂಡು ಹೋದರು. ಅದು ಸೋಮುವಿನ ಕೈಗೆಟುಕದ್ದಾದ್ದರಿಂದ ಸೋಮು ಸುಮ್ಮನಾದ.

ಹೇಗೂ ಸಿಟ್ಲಿಗಾಗಿ ಬಂದಿದ್ದೇನೆ, ಇನ್ನೊಂದು ಬಲೆ ನೋಡಿಯೇ ಹೋಗೋಣವೆಂದು ಕಾದು ಕುಳಿತ ಸೋಮ. ಮುಕ್ಕಾಲು ಗಂಟೆ ಕಳೆದ ಮೇಲೆ ಎರಡನೆಯ ಬಲೆ ಬಂತು. ಜನ ಮತ್ತೆ ಮುಗಿ ಬಿದ್ದರು. "ಯಾರು ಗಡಿಬಿಡಿ ಮಾಡ್ಬೇಡ್ರಕಾ, ಬಂದೋರಿಗೆಲ್ಲಾ ತೊಡಿನಾದ್ರೂ ಸಿಗುವಂಗ ಮಾಡ್ತೆವ್ರಾ" ಎನ್ನುವ ಶುಕ್ರುವಿನ ವಾಣಿಯನ್ನು ಕೇಳಿ, ತನಗೆ ಒಂದು ಆಸಿಗಾದರೂ (ಸಾರಿಗಾದರೂ) ಆಗುವಷ್ಟು ಸಿಟ್ಲಿ ಸಿಗಬಹುದೆಂದು ಸಮಾಧಾನವಾಗಿ ನಿಂತ.

ಶುಕ್ರು ಹೇಳೋದನ್ನೇನೋ ಹೇಳಿದ ಆದರೆ ಜನ ಕೇಳಬೇಕಲ್ಲ, ತಂಗಿಷ್ಟು-ನಂಗಿಷ್ಟು ಎಂದು ಮುಗಿ ಬಿದ್ದರು. ಬುಟ್ಟಿ ಖಾಲಿಯಾಯಿತು ಆದರೆ ಸೋಮನಿಗೆ ಸಿಟ್ಲಿ ಸಿಗಲಿಲ್ಲ. ಇಲ್ಲಿಗೆ ಬಂದು ಪ್ರಯೋಜನವಾಗಲಿಲ್ಲವೆಂದು ಮನೆಗೆ ಹೋಗಲು ಅಣಿಯಾದ. ಕಳದಾಟಿ ಇನ್ನೇನು ಹೊರಡಬೇಕು ಎನ್ನುವವನಿಗೆ, ಇನ್ನೊಂದು ಬಲೆ ಇದೆ ಎನ್ನುವುದು ಯಾರೋ ಹೇಳಿದ್ದು ಕೇಳಿ, "ಸಿಟ್ಲಿ ತಕ್ಕುಂಡೆ ಹೋಗ್ವಾ" ಎಂದು ನಿಂತ. ಹಾಗೆ ನಿಂತವನಿಗೆ ಕಿಸೆಯಲ್ಲಿದ್ದ ತೀರ್ಥದ ನೆನಪಾಗಿ ಒಂದು ಕೊಟ್ಟೆಯನ್ನು ಹರಿದು ಒಳಗಿದ್ದ ತೀರ್ಥವನ್ನು ಹೊಟ್ಟೆಗೆ ಸೇರಿಸಿದ. ಮೈ-ಮನಗಳಿಗೆ ಸ್ವಲ್ಪ ಸಮಧಾನವಾದಂತೆನಿಸಿತು. ತೀರ್ಥದ ನಶೆಯನ್ನು ಅನುಭವಿಸುತ್ತಿರುವಾಗಲೇ ಮಾರನೆಯ ಹಾಗೂ ಕೊನೆಯ ಬಲೆ ಕಳಕ್ಕೆ ಬಂತು. ಮೊದಲಿನಷ್ಟು ಜನವಿರದ ಕಾರಣ ಸೋಮನಿಗೂ ಒಂದು ಸಿದ್ದೆ ಸಿಟ್ಲಿ ಸಿಕ್ಕಿಯೇ ಸಿಕ್ಕಿತು.

ಸಿಟ್ಲಿ ತೆಗೆದುಕೊಂಡು ಕಳದಿಂದ ಸಂತೋಷಿತನಾಗಿ ಯಕ್ಷಗಾನದ ಪದಗಳನ್ನು ಹಾಡುತ್ತಾ ಹೊರಬಂದವನು ಪಶ್ಚಿಮದ ದಿಕ್ಕನ್ನು ನೋಡಿದ. ಚಂದ್ರನಾಗಲೇ ಕಂತಿದ್ದ. ಅಮವಾಸ್ಯೆಯ ಸಂಧಾಗಿದ್ದರಿಂದ ಸುತ್ತಲೂ ಕತ್ತಲು ಹಾಸಿಕೊಂಡು ಮಲಗಿತ್ತು. ಹಾಗೂ ಹೀಗೂ ಅಲ್ಲಿ ಬಂದವರ ಬೆಳಕಿನ ಸಹಾಯದಿಂದ ಕಟ್ಟನ್ನು ದಾಟಿ ನದಿಯ ದಡದತ್ತ ಬಂದ. ಸುತ್ತಲು ಕತ್ತೆ ದಾರಿ ಕೂಡ ಕಾಣಿಸುತ್ತಿಲ್ಲ, ಜೊತೆಗೆ ತೀರ್ಥದ ನಶೆ ಬೇರೆ. ಕಾನುಮೂಲೆಯ ದಿಕ್ಕಿನಲ್ಲಿದ್ದ ಅಂಬೇರರ ಮನೆಯ ಕಡೆಯಿಂದ ಬೆಳಗುವ ದೀಪಗಳ ದಿಕ್ಕನ್ನು ಹಿಡಿದು ಅವರ ಮನೆಯತ್ತ ಹೊರಟ.

----------******----------
ಗಂಡನ ಜೊತೆ ಕುಡಿಯಲು ಹೊರಟ ನೆಂಟರೆಲ್ಲ ಮನೆ ತಲುಪಿದರೂ ಗಂಡ ಬರದಿದ್ದುದನ್ನು ನೋಡಿ ನಾಗಿ ಮನೆಗೆ ಬಂದವರಿಗೆ, "ಅವ್ರರೆಲ್ಲ್ ಹೋಗೇರ್?" ಎಂದು ಕೇಳಿದಳು. ಬಂದವರು "ಮೀನು ಅಂದ್ಕುಂಡ ಹೋಗೆ" ಎನ್ನುವುದನ್ನು ಕೇಳಿ ತರಲಿರುವ ಮೀನಿಗಾಗಿ ಮಸಾಲೆ ಅರೆದು ಗಂಡನಿಗಾಗಿ ಕಾಯುತ್ತಾ ಕುಳಿತಳು.

ಭಜನೆ ಮುಗಿದು ತಾಸು ಕಳೆದರೂ ಗಂಡ ಬರದಿದ್ದುದನ್ನು ನೋಡಿ, ಅವನೆಲ್ಲೋ ಕುಡಿದು ಬಿದ್ದಿರಬೇಕು ಅನಿಸಿತು ಅವಳಿಗೆ. ಅದೇನು ಹೊಸತೇನಲ್ಲ, ಆಗಾಗ ಕುಡಿದು ಎಲ್ಲೋ ಬಿದ್ದು, ಮಾರನೆಯ ದಿನ ಬೆಳಿಗ್ಗೆಯೋ, ಇಲ್ಲಾ ಮಧ್ಯಾಹ್ನದ ಹೊತ್ತಿಗೆ ಆತ ಮನೆ ಸೇರಿದ್ದೂ ಇದೆ. ಇಂದು ಅದೇ ರೀತಿ ಎಲ್ಲೋ ಕುಡಿದು ಬಿದ್ದಿರಬೇಕೆಂದು ತಿಳಿದು, ಬೆಳಿಗ್ಗೆ ತಾನು ಕೆಲ್ಸ ಮಾಡುವ ಮಾಣೇಶ್ವರ್ ಒಡೆಯರ ಹೆಂಡತಿ ಸಾವಿತ್ರಿ ಒಡ್ತೆಯರ ಕಡೆಯಿಂದ ಇಸಿದುಕೊಂಡು ಬಂದ ಐದು ಒಣ ಬಂಗಡೆಯಲ್ಲಿ ಮೂರನ್ನು ಕೊಯ್ದು, ಅರೆದಿಟ್ಟ ಮಸಾಲೆಗೆ ಹಾಕಿ ಕುಡಿಸಿದಳು.

ಮೊದಲು ಮಕ್ಕಳಿಗೆಲ್ಲ ಬಡಿಸಿದಳು ಗಂಡ ಬಂದರೆ ಬರಲೀ ಎಂದು ಸ್ವಲ್ಪ ಹೊತ್ತು ಕಾಯ್ದಳು. ಅರ್ಧ ಗಂಟೆ ಕಳೆದರೂ ಗಂಡ ಬರದಿದ್ದುದನ್ನು ನೋಡಿ ಬಂದ ನೆಂಟರಿಗೆಲ್ಲ ಆ ಒಣ ಬಂಗಡೆಯ ಆಸಿಯಲ್ಲಿ ಬಡಿಸಿದಳು. ಬಂದವರ ಊಟ ಮುಗಿದು, ಅವಳ ಊಟ ಮುಗಿದರೂ ಗಂಡ ಬರಲಿಲ್ಲ. ಈತ ಎಲ್ಲೋ ಕುಡಿದು ಬಿದ್ದಿರಬೇಕು, ಇನ್ನೂ ಇಂದು ಆತ ಬರಲಾರ ಎಂದು ಉಂಡ ಪಾತ್ರೆಗಳನ್ನೆಲ್ಲ ತೊಳೆದಿಟ್ಟು ಬಂದು, ಬಂದವರಿಗೆಲ್ಲಾ ಅಂಗಳದಲ್ಲಿ ಹಾಸಿಕೊಟ್ಟು ಮಲಗಲು ಹೇಳಿ, ತಾನು ಒಳಗೆ ಬಂದು ಮಲಗಿದಳು.

----------******----------
ಅಂಬೇರರ ಕೊನೆಯ ಮನೆಯವರೆಗೆ ಬಂದ ಸೋಮನಿಗೆ ಮುಂದೆ ಬೆಳಕಿಲ್ಲದೇ ನಡೆದು ಹೋಗುವುದು ಕಷ್ಟವೆನಿಸಿತು. ಅಂಬೇರರ ಮನೆಯ ಮುಂದೆ ಬಿದ್ದ ಒಣ ತೆಂಗಿನ ಹೆಡೆಯಿಂದ ಒಂದಿಷ್ಟು ಗರಿಗಳನ್ನು ಕಿತ್ತು ಚೂಡಿಯಾಕಾರ ಮಾಡಿ, ತಂದ ಬೆಂಕಿ ಪೆಟ್ಟಿಗೆಯಿಂದ ಒಂದು ಕಡ್ಡಿ ಗೀರಿ ಮೊದಲು ಬೀಡಿ ಕಚ್ಚಿಕೊಂಡು, ಉಳಿದ ಬೆಂಕಿಯಿಂದ ಆ ತೆಂಗಿನ ಗರಿಯ ಚೂಡಿಯನ್ನು ಕಚ್ಚಿಕೊಂಡು ಊರಿನತ್ತ ಹೊರಟ.

ಬೊಮ್ಮಯ್ಯ ದೇವರ ಗುಡಿಯವರೆಗೆ ಹಾಗೂ ಹೀಗು ನಿಧಾನವಾಗಿ ನಡೆದು ಬಂದು ಗದ್ದೆ ಬಯಲನ್ನು ತಲುಪಿದ. ಮುಂದೆ ಗದ್ದೆ ಬಯಲಾದ್ದರಿಂದ ಆರಾಂ ಆಗಿ ನಡೆದು ಹೋಗ ಬಹುದೆನಿಸಿತು. ಆದರೂ ಇದ್ದರೆ ಇರಲಿ ಎಂದು ಒಂದು ಕೈಯಲ್ಲಿ ಸಿಟ್ಲಿಯ ಚೀಲ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಸಿಟ್ಲಿಯ ಚೀಲ ಹಿಡಿದುಕೊಂಡು ಮನೆಯಲ್ಲಿ ಹೆಂಡತಿ ಮಾಡಬಹುದಾದ ಸಿಟ್ಲಿಯ ಸಾರಿನ ಬಗ್ಗೆ ಕನಸು ಕಾಣುತ್ತಾ ಹಳ್ಳದ ಬದಿಯಿಂದಲೇ ನಡೆಯುತ್ತಾ ಸಾಗಿದ. ಪಕ್ಕದಲ್ಲಿ ನದಿ ಉಬ್ಬರದಿಂದ ತುಂಬಿ ಹರಿಯುತಿತ್ತು. ಉಬ್ಬರದ ಸಮಯದಲ್ಲಿ ನದಿಯಿಂದ ಮುಳುಗೇಳುವ ಮೀನುಗಳ ಸದ್ದಾಗಲೀ, ಕಾನುಮೂಲೆ, ಮುಳ್ಳಾಕೇರಿ ಹಾಗು ಮೋಡುಕಟ್ಟೆಯ ಕಡೆಯಿಂದ ಆಗಾಗ ಊಳಿಡುವ ನರಿಗಳ ಸದ್ದಾಗಲೀ, ಊಳಿಡುವ ನರಿಗಳಿಗೆ ಪ್ರತಿಸ್ಪರ್ಧಿಗಳಾಗಿ ಕೂಗು ಹಾಕುತ್ತಿರುವ ನಾಯಿಗಳ ಕೂಗುಗಳಾಗಲೀ ತೀರ್ಥದ ನಶೆಯಲ್ಲಿದ್ದರಿಂದಲೋ ಅಥವಾ ಸಿಟ್ಲಿಯ ಆಸಿಯ ಕನಸಿನಲ್ಲಿದ್ದರಿಂದಲೋ ಸೋಮುವನ್ನಿಂದು ಅಧೀರನನ್ನಾಗಿಸಲಿಲ್ಲ.

ಸೋಮ ಜೂಗಾದೇವಿಯ ಮನೆಯನ್ನು ದಾಟಿ ಚಿರಕ್ಲಿಯತ್ತ ಮುಖಮಾಡುವ ಹೊತ್ತಿಗೆ ಕೈಯಲ್ಲಿದ್ದ ಚೂಡಿ ಸಂಪೂರ್ಣ ಆರಿ ಹೋಗಿತ್ತು. ಇನ್ನೇನು ಮಾಡುವುದು ಎನ್ನುವ ಯೋಚನೆಯಲ್ಲಿದ್ದವನಿಗೆ ಕಿಸೆಯಲ್ಲಿ ಮಿಕ್ಕಿದ್ದ ಇನ್ನೊಂದು ಪ್ಯಾಕೇಟನ ನೆನಪಾಯ್ತು. ಇನ್ನು ಇದನ್ನು ಕಿಸೆಯಲ್ಲೇ ಇಟ್ಟುಕೊಂಡು ಏನು ಮಾಡುವುದು ಎಂದು ತಿಳಿದು ಕೊನೆಯ ಪ್ಯಾಕೇಟನ್ನು ಹೊಟ್ಟೆಗೆ ಇಳಿಸಿದ. ತಲೆ ಗಿರ್ ಅನಿಸಿದಂತಾಗಿ ಅಲ್ಲೇ ಸ್ವಲ್ಪ ಹೊತ್ತು ಕುಳಿತುಕೊಳ್ಳೋಣವೆನಿಸಿ ಕುಳಿತ. ಮನದ ತುಂಬೆಲ್ಲ ನಾಗಿ ಮಾಡಲಿರುವ ಸಿಟ್ಲಿಯ ಆಸಿ ಆವರಿಸಿಕೊಂಡು ಬಿಟ್ಟಿತ್ತು. ನಾಗಿ ಮನೆಯಲ್ಲಿ ಸಿಟ್ಲಿಯ ಆಸಿ, ಪುಡಿ (ಪಲ್ಯೆ) ಮಾಡಿದಂತೆಯೂ, ತಾನು ಅದನ್ನು ಅನ್ನದಲ್ಲಿ ಹಾಕಿ ಕಲಸಿ ಕಲಸಿ ತಿಂದಂತೆಯೂ ಕನಸು ಕಾಣತೊಡಗಿದ. ಹಾಗೆ ಕನಸಿನಲ್ಲಿ ಮುಳುಗಿದ್ದವನು ಕುಳಿತಲ್ಲಿಂದಲೇ ಅನತಿ ದೂರ ಕಾಣುವ ಹಿಚ್ಕಡ್ ಕೊಪ್ಪದತ್ತ ದೃಷ್ಟಿ ಹಾಯಿಸಿದ, ಯಾರ ಮನೆಯಿಂದಲೂ ಬೆಳಕು ಕಾಣದ್ದನ್ನು ನೋಡಿ, ಕರೆಂಟ್ ಹೋಗಿರಬೇಕೆಂದು ತಿಳಿದ. ಅವನಿಗೇನು ಗೊತ್ತು ಸಮಯ ಆಗಲೇ ಹನ್ನೊಂದು ದಾಟಿದೆಯೆಂದು. ದಂಡೆಯ ಕಡೆ ಹೋಗುವ ದಾರಿಯ ಬಳಿ ಇರುವ ರಸ್ತೆ ದೀಪ ಇನ್ನೂ ಉರಿಯುತ್ತಿರುವುದು ಕಣ್ಣಿಗೆ ಬಿದ್ದೊಡನೆ ರಾತ್ರಿ ಬಹಳವಾಗಿದೆ ಅನಿಸಿ ಎದ್ದು ಬೇಗ ಬೇಗನೇ ಮನೆಯ ಕಡೆಯ ದಾರಿ ಹಿಡಿದ.

ಇವನು ಚಿರಕ್ಲಿಯನ್ನು ಹೊಕ್ಕೊಡನೆ ಬೀದಿ ನಾಯಿಗಳೆಲ್ಲ ಒಂದೊಂದಾಗಿ ಬೊಗಳಲು ಶುರು ಮಾಡಿದವು, ಕತ್ತಲಾವರಿಸಿದ ಒಂದೆರಡು ಗಂಟೆಯಲ್ಲಿ ಉಂಡು ಮಲಗುವ ಆ ಕೊಪ್ಪದಲ್ಲಿ, ಅಷ್ಟು ರಾತ್ರಿಯ ನಂತರ ಅಲ್ಲಿ ಓಡಾಡುತ್ತಿರುವ ಅಪರೂಪದ ವ್ಯಕ್ತಿಯಾಗಿದ್ದ ಸೋಮ. ಹಾಗಾಗಿ ಅವುಗಳಿಗೂ ಆಶ್ಚರ್ಯವಾಗಿತ್ತು. ಸೋಮ ಊರು ಹೊಕ್ಕು ತೂಗಾಡುತ್ತಾ, ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುತ್ತಾ ತನ್ನ ಮನೆಯ ಅಂಗಳಕ್ಕೆ ಬಂದು ಸೇರಿದ.

ಸೋಮನೊಟ್ಟಿಗೆ ಬರುವ ನಾಯಿಯ ಕೂಗುಗಳನ್ನು ಕೇಳಿ ಎಚ್ಚರಗೊಂಡು, "ಇಟ್ಟ್ ರಾತ್ರೆಗ್ ಅದ್ಯಾರದ್" ಎಂದು ಕೇಳುತ್ತಾ ಎದ್ದು ಹೊರಬಂದಳು ನಾಗಿ. ತನ್ನ ಮನೆಯ ಕಡೆಗೆ ಬರುತ್ತಿರುವ ವ್ಯಕ್ತಿಯನ್ನು ನೋಡಿ, "ಅದ್ಯಾರದ್? ಇಟ್ಟ ರಾತ್ರೇಗ್?" ಎಂದಳು.

"ನಾನೇ, ಸೋಮ" ಎಂದ ಸೋಮ.

"ಇಟ್ಟೋತ್ನೋರಿಗ ಎಲ್ಲ್ ಹಾಳಾಗ್ ಸತ್ತದ್ರಿ"

"ಸಿಟ್ಲೆಗ್ ಹೋಗೇದ್ನೆ, ಇದೇ, ನೋಡೇ.. ತಕ್ಕುಂಡ್ ಹೋಗ್ ಮಾಡ್ ಬಾರೇ" ಎಂದು ಹೆಂಡತಿಯನ್ನು ಕರೆದ.

ನಾಗಿಗೆ ಸಿಟ್ಟು ತಡೆಯಲಾಗದೇ, "ಇಟ್ಟ್ ರಾತ್ರೇಗಾ ನಾ ನಿಮ್ಗೆ ಸಿಟ್ಲೇ ಬೈಸಾಕ್ಬೇಕಾ? ನಿಮ್ಗೇನ್ ಬಾಯ್ಕೇನಾ? ಅಲ್ಲ ಉಣ್ಗುದ್ ಮೀನ್ ಸಾರೇತ್, ಅನ್ನಾನೂ ಇತ್ತ್. ಉಂಡ್ಕುಂಡ್ ಮನೇಕಣಿ, ಸುಮ್ಗ್" ಎಂದು ಗಂಡನ ಮೇಲೆ ಹರಿಹಾಯ್ದಳು.

ಸೋಮನಿಗೆ ಇಷ್ಟೊಂದು ಶ್ರಮಪಟ್ಟು ಸಿಟ್ಲಿ ತಂದದ್ದು ಇದಕ್ಕೇನಾ ಅನಿಸಿ ಬೇಸರವಾಗಿ, "ಹಂಗಾರ್ ಇದ್ನೇನ್ ಮಾಡುದೇ? ಸುಮ್ನೇ ಹೊತಾಕುದ್ ಏನೇ?" ಅಂದ.

"ಅಲ್ಲೇ ಮೂಲೇಲ್ ಬಕೇಟ್ನ್ ತುಂಡ್ ಇತ್ತ್, ನೀರಾಕ್ ಹಂಗೆ ಇಡ್ರೆ, ನಾಳಗ್ ಮದ್ಯಾನ್ಕ ಮಾಡ್ತೇನ್ರೆ" ಎಂದಾಗ, ಇಂದಿಲ್ಲದಿದ್ದರೇನಾಯ್ತು, ನಾಳೆಯಾದರೂ ತಿಂದರಾಯ್ತು ಎಂದನಿಸಿ, ತಂದ ಸಿಟ್ಲೆಯನ್ನೆಲ್ಲ ಒಳಗಿದ್ದ ಒಡೆದ ಬಕೇಟ್ನ ತುಂಡಿನಲ್ಲಿ ಸ್ವಲ್ಪ ನೀರು ಹಾಕಿ ಇಟ್ಟ. ಅಷ್ಟೊತ್ತು ಉಸಿರುಗಟ್ಟಿದಂತೆ ಬಿದ್ದುಕೊಂಡಿದ್ದ ಸಿಟ್ಲೆಗಳು, ನೀರಿಗೆ ಬಿದ್ದೊಡನೆ ಒಂದೊಂದಾಗಿ ಸುದಾರಿಸಿಕೊಂಡು ಹಾರಾಡಲು ಶುರು ಮಾಡಿದವು. ಅದನ್ನು ನೋಡಿದ ಸೋಮುವಿಗೆ ಇನ್ನೂ ಹಸಿಯಾಗಿವೆ, ನಾಳೆಯವರೆಗೆ ಹಳಸಲ್ಲ ಎಂದನಿಸಿ ಸ್ವಲ್ಪ ಸಮಾಧಾನವೆನಿಸಿ, ಮಡಿಕೆಗಳಲ್ಲಿ ಅಳಿದುಳಿದ ಅನ್ನ-ಸಾರು ಹಾಕಿಕೊಂಡು ಉಣ್ಣತೊಡಗಿದ. ಹೊಟ್ಟೆ ತುಂಬಿದೆಯೋ, ಇಲ್ಲವೋ ಎಂದು ತಿಳಿಯುವ ಹೊತ್ತಿಗೆ ಅನ್ನ ಕಾಲಿಯಾಗಿತ್ತು. ಉಣ್ಣುವ ಶಾಸ್ತ್ರ ಮುಗಿಸಿಬಂದು ಗೋಡೆಗೆ ಆನಿಸಿ ಇಟ್ಟ ಚಾಪೆಯನ್ನು ತೆಗೆದು ಹಾಸಿ ಮಲಗಿದ. ತೀರ್ಥದ ಗುಂಗಿಗೆ ತಲೆ ನೆಲ ಸೇರಿದೊಡನೆಯೇ ನಿದ್ದೆ ಆವರಿಸಿತು.


--ಮಂಜು ಹಿಚ್ಕಡ್