ಬೆಲೇಕೇರಿ ಎಂದ ತಕ್ಷಣ ಇಂದು ಎಲ್ಲರಿಗೂ ನೆನಪಾಗುವುದು ಮ್ಯಾಂಗನೀಸ್ ಹಾಗೂ ಅದರ ಸುತ್ತ ಆವರಿಸಿರುವ ರಾಜಕೀಯ ಹಗರಣಗಳಿರಬಹುದು, ಆದರೆ ನನಗೆ ನೆನಪಾಗುವುದು ನನ್ನ ಬಾಲ್ಯದ ದಿನಗಳಲ್ಲಿ ನಾ ಅಲ್ಲಿ ಕಳೆದ ರಜಾ ದಿನಗಳು, ಅಲ್ಲಿನ ಜನರ ಪ್ರೀತಿ, ಮುಗ್ಧತೆ, ಆ ಊರಿನ ಸುಂದರ ಕಡಲ ತೀರ ಇತ್ಯಾದಿ. ಇತ್ಯಾದಿ.. ಆ ನೆನಪುಗಳೇ ಇಂದಿಗೂ ನನ್ನನ್ನು ಆ ಊರಿಗೆ ಕರೆದುಕೊಂಡು ಹೋಗುತ್ತದೆ ಅಂದರೂ ತಪ್ಪಾಗಲಾರದು. ನನಗೂ ಬೆಲೇಕೇರಿಗೂ ಹುಟ್ಟಿನಿಂದಲೂ ಏನೋ ಒಂದು ರೀತಿಯ ಆತ್ಮೀಯ ಸಂಭಂದ. ಬೆಲೇಕೇರಿ ನನ್ನ ತಾಯಿಯ ತವರು ಮನೆಯ ಊರು ಹಾಗು ನನ್ನಾಕೆಯ ತವರು ಮನೆಯ ಊರು ಕೂಡ. ನನ್ನ ತಾಯಿಯ ತವರು ಮನೆಯ ಊರಾದ್ದರಿಂದ ನಾನು ಆಗಾಗ ಬೆಲೇಕೇರಿಗೆ ಹೋಗಿಬರುತ್ತಿದ್ದೆ. ಚಿಕ್ಕವರಿದ್ದಾಗ ರಜೆ ಬಿದ್ದರೆ ಸಾಕು ನಾನು ಬೆಲೇಕೇರಿಗೆ ಹೊರಟುಬಿಡುತಿದ್ದೆ. ಅಲ್ಲಿ ನಮ್ಮ ಮಾವನ ಮಕ್ಕಳು, ಆಡಲು ಅಕ್ಕ ಪಕ್ಕದ ಮಕ್ಕಳು, ಜೊತೆಗೆ ಪ್ರೀತಿಯ ಚಿಕ್ಕಮ್ಮಂದರು ಹಾಗು ಅವರ ಆತ್ಮೀಯತೆ ನನ್ನನ್ನೂ ಅಲ್ಲಿಗೆ ಸೆಳೆಯುತ್ತಿದ್ದವೂ.
ನಮ್ಮ ಮಾವನಿಗೆ ಮೂರು ಮಕ್ಕಳಲ್ಲಿ, ಮಗಳು ನನಗಿಂತ ೩ ವರ್ಷ ದೊಡ್ಡವಳು, ಮದ್ಯದವನು ನನ್ನ ಓರಗೆಯವನು, ಚಿಕ್ಕವನು ನನ್ನ ತಮ್ಮನ ಓರಗೆಯವನು, ನನಗಿಂತ ೩ ವರ್ಷ ಚಿಕ್ಕವನು. ನಮ್ಮ ಮಕ್ಕಳ ತಂಡಕ್ಕೆ ಆಗ ನಮ್ಮ ಮಾವನ ಮಗಳೇ ನಾಯಕಿ. ಆಗ ನಾವೇನಿದ್ದರೂ ಅವಳು ಹೇಳಿದ ಹಾಗೆ ಕೇಳುವ ಅನುಯಾಯಿಗಳು ಮಾತ್ರ. ನಮ್ಮ ತಾಯಿಯ ತವರು ಮನೆಯನ್ನು ದಾಟಿ ಆಗ ತೋಟವಿದ್ದ (ಈಗ ಆ ಜಾಗದಲ್ಲಿ ನನ್ನಾಕೆಯ ಚಿಕ್ಕಪ್ಪನ ಮನೆಯಿದೆ) ಸ್ಥಳವನ್ನು ದಾಟಿ ಹೋದರೆ, ಇನ್ನೊಂದು ಚಿಕ್ಕ ತೋಟ. ಆ ತೋಟದಲ್ಲಿ ಒಂದು ತೋತಾಪುರಿ ಮಾವಿನ ಮರ, ಮರದ ತುಂಬಾ ಕಾಯಿಗಳು ಎಂತಹ ಮಕ್ಕಳ ಬಾಯಲ್ಲೂ ನೀರೂರಿಸುವಂತಿತ್ತು. ಒಂದು ದಿನ ಮಧ್ಯಾಹ್ನ ಮನೆಯ ಹೊರಗೆ ಆಟ ಆಡುತಿದ್ದ ನಮಗೆ ನಮ್ಮ ಮಾವನ ಮಗಳು, ಆ ಮಾವಿನ ಮರದಿಂದ ಒಂದೆರೆಡು ಕಾಯಿಗಳನ್ನು ಕಿತ್ತು ತರುವಂತೆಯೂ, ನಾವು ಬರುವರೆಗೆ ಆಕೆ ಉಪ್ಪು ಕಾರ ಕೂಡಿಸಿಡುವುದಾಗಿಯೂ ಹೇಳಿ ನಮ್ಮನ್ನು ಕಳಿಸಿದಳು. ನನಗೆ ಆಗಿನ್ನೂ ಆರೇಳು ವರ್ಷ. ನಮಗೆ ಆಗ ಅದು ಯಾರ ಮರವಾದರೇನು? ನಮಗೆ ಬೇಕಿದ್ದುದು ಆಮರದ ಮಾವಿನ ಕಾಯಿ. ನಾವು ಹೋಗಿ ಆ ತೋಟದ ಒಳಗೆ ಪ್ರವೇಶಿಸಿ ಒಂದೆರೆಡು ಮಾವಿನ ಕಾಯಿ ಕಿತ್ತು ಕೊಂಡಿರಬಹುದು, ಅಷ್ಟರಲ್ಲಿ ಒಂದೆರಡು ಮಕ್ಕಳು ಓಡಿಬಂದು ನಮ್ಮನ್ನು ವಿರೋಧಿಸಿದರು. ಆ ವಯಸ್ಸಿನಲ್ಲಿ ಜಗಳವಾಡುವುದನ್ನು ಹೇಳಿಕೊಡಬೇಕೆ, ಅವರಲ್ಲಿ ಒಬ್ಬಳು ನನಗಿಂತ ಚಿಕ್ಕವಳು, ನನಗೆ ಕೋಪ ತಡೆಯಲಾಗಲಿಲ್ಲ ಅಲ್ಲಿಯೇ ಬಿದ್ದಿದ್ದ ಒಂದು ಒಡೆದ ಹಂಚಿನ ಚಿಕ್ಕ ತುಂಡನ್ನು ತೆಗೆದುಕೊಂಡು ಆಕೆಯ ತಲೆಯತ್ತ ಬೀಸಿದೆ. ಪುಣ್ಯಕ್ಕೆ ಅದು ಅವಳಿಗೆ ತಾಗಿದರೂ ಅಷ್ತೊಂದು ದೊಡ್ಡ ಗಾಯಗಳಾಗಿರಲಿಲ್ಲ. ಅವಳು ಅಳುತ್ತಾ ಅವಳ ಮನೆಯತ್ತಾ ಓಡಿದರೆ, ನಾವು ಕಿತ್ತುಕೊಂಡ ಮಾವಿನಕಾಯಿಗಳನ್ನು ನಮ್ಮ ಮನೆಗೆ ತಂಡು ತಿನ್ನ ತೊಡಗಿದವು. ಆಗ ನಮಗೆ ಮಾವಿನ ಕಾಯಿಯ ರುಚಿ ಹಿಡಿಸುತ್ತಿತ್ತೇ ಹೊರತು ಆಕೆಯ ನೋವಿಲ್ಲ. ಈಗಲೂ ಆ ಸಹೋದರಿಯನ್ನು ನೋಡಿದಾಗ ಆ ಮಾವಿನ ಕಾಯಿಯ ನೆನಪುಗಳು ಒಮ್ಮೆ ಮನಸ್ಸಲ್ಲಿ ಸುಳಿಯದೇ ಇರದು.
ನಾವು ತವರು ಮನೆಯಲ್ಲಿರುವಷ್ಟು ದಿನ, ಆ ಮನೆಯಲ್ಲಿರುವವರಿಗೆ ಒಂದಿಲ್ಲ ಒಂದು ಸಮಸ್ಯೆಯನ್ನು ತಂದೊಡ್ಡುತ್ತಿದ್ದುದು ಸರ್ವೆ ಸಾಮಾನ್ಯ. ನಮ್ಮ ಅಜ್ಜಿಮನೆಯ ಒಂದು ಪಕ್ಕದ ಮನೆಯವರ ತೋಟದಲ್ಲಿ ಒಂದು ದಾಳಿಂಬೆಯ ಗಿಡ, ನಮ್ಮ ಅಜ್ಜಿಮನೆಯವರ ತೋಟಕ್ಕೆ ಹೊಂದಿಕೊಂಡಂತೆ ಇತ್ತು. ಗಿಡ ಪಕ್ಕದ ತೋಟದಲ್ಲಿದ್ದರೂ, ಟಿಸಿಲುಗಳೆಲ್ಲವು ನಮ್ಮ ಅಜ್ಜಿ ಮನೆಯ ತೋಟದಲ್ಲೇ ಇತ್ತು. ಆ ಗಿಡ ಆಗ ತಾನೇ ಕಾಯಿ ಬಿಡಲು ಪ್ರಾರಂಭವಾಗಿ ಒಂದೆರಡು ತಿಂಗಳು ಕಳೆದಿರಬಹುದೇನೋ. ಅದರ ಕಾಯಿಗಳು ಹಣ್ಣಾಗದಿದ್ದರೂ ಕೆಂಪಗಾಗಿದ್ದು ನಮಗೆ ಹಣ್ಣಿನಂತೆಯೇ ಕಾಣುತ್ತಿದ್ದರಿಂದ, ನಮಗೆ ಹೇಗಾದರೂ ಮಾಡಿ ಅದನ್ನು ಕೀಳಲೇ ಬೇಕೆಂದು ಒಂದು ದಿನ ನಿರ್ಧಾರಮಾಡಿದ್ದೆವು. ಹಗಲಲ್ಲಿ ಅದು ಸಾದ್ಯವಿಲ್ಲವೆಂದು ರಾತ್ರಿಗಾಗಿ ಕಾಯುತ್ತಾ ಕುಳಿತೆವು. ಆರಾತ್ರಿ ಊಟ ಮಾಡಿದವರೇ ಹೋಗಿ ಒಂದಿಷ್ಟು ಕಾಯಿಗಳನ್ನು ಕಿತ್ತು ತಂದೆವು. ಮನೆಗೆ ತಂದು ತಿನ್ನಲೂ ನೋಡಿದಮೇಲೆಯೇ ತಿಳಿದಿದ್ದು ಅವು ಕಾಯಿಗಳೆಂದು. ತಿನ್ನಲೂ ಆಗದೇ, ಇಟ್ಟುಕೊಳ್ಳಲು ಆಗದೇ ಹಾಗೆ ಅವನ್ನು ಎಸೆದು ಬಿಟ್ಟೆವು. ಮಾರನೇ ದಿನ ಆ ಗಿಡ ನೋಡಿದ ಆಮನೆಯವರಿಗೆ ಅಲ್ಲಿ ಒಂದಿಷ್ಟು ಕಾಯಿಗಳಿಲ್ಲವೆನ್ನುವುದನ್ನು ತಿಳಿದು ನಮ್ಮ ಮನೆಯಲ್ಲಿ ತಿಳಿಸಿದರು. ನಮ್ಮ ಮನೆಯಲ್ಲಿ ನಮಗೊಂದಿಷ್ಟು ಏಟುಗಳನ್ನು ತಿಂದಿದ್ದು ಆಯಿತು. ಆಗ ಆ ಹೊಡೆತಗಳೆಷ್ಟು ದಿನ ನೆನಪಿರುತ್ತವೆ. ಮತ್ತೊಮ್ಮೆ ತಪ್ಪು ಮಾಡುವವರೆಗೆ ಅವೆಲ್ಲಾ ಮರೆತು ಹೋಗುತ್ತವೆ ಅಷ್ಟೇ.
ಒಮ್ಮೆ ನಾನು ನಮ್ಮ ಅಜ್ಜಿ ಮನೆಗೆ ಹೋದಾಗ ನಮ್ಮ ಮಾವನ ಮಕ್ಕಳೆಲ್ಲ, ಅವರ ತಾಯಿಯ ತವರು ಮನೆಗೆ ಹೋಗಿದ್ದರು. ಅಮ್ಮನ ಜೊತೆ ಹೋದ ನಾನು ಅಲ್ಲಿ ಅವರು ಇಲ್ಲದ ಮೇಲೆ ನಾನು ಅಮ್ಮನ ಜೊತೆಗೆ ಮತ್ತೆ ಊರಿಗೆ ಹೊರಡುವುದಾಗಿ ತೀರ್ಮಾನಿಸಿದ್ದೆ. ಆದರೆ ನಮ್ಮ ಚಿಕ್ಕಮ್ಮಂದಿರು ನಮ್ಮ ಮಾವನ ಮಕ್ಕಳು ಕೆಲವು ದಿನಗಳಲ್ಲೇ ಬರುತ್ತಾರೆ ಎಂದು ನನಗೆ ಅಲ್ಲಿಯೇ ಇರುವಂತೆ ಹೇಳಿ ಇಟ್ಟುಕೊಂಡರು. ನನಗೆ ಬೇಸರವಾದರೂ ಒಂದೆರಡು ದಿನ ಅಂತಾ ಸುಮ್ಮನಿದ್ದೆ. ಮಾರನೆಯ ದಿನಾ ಹೀಗೆ ಮನೆಯ ಎದುರುಗಡೆಯ ಜಗುಲಿಯ ಹೊರಗಡೆ ಆಡುತ್ತಾ ಕುಳಿತಿದ್ದಾಗ ಒಬ್ಬ ಹುಡುಗ ಬಂದ. ನನಗೆ ಆತನ ನಿಜ ಹೆಸರು ಏನಂತ ತಿಳಿಯದಿದ್ದರೂ ಆತನನ್ನು ಎಲ್ಲರೂ ಮಾಣಿಕೋಸ (ಮಾಣಿಯ ಮಗ) ಎಂದೇ ಕರೆಯುತ್ತಿದುರಿಂದ ನಾನು ಅವನ ಹೆಸರು ಮಾಣಿಕೋಸ ಎಂತನೇ ತಿಳಿದಿದ್ದೆ ಆಗ. ಆಮೇಲೆ ದೊಡ್ಡವನಾದ ಮೇಲೆ ತಿಳಿದಿದ್ದು ಆತನ ಹೆಸರು ಮಹಾಬಲೇಶ್ವರನೆನ್ನುವುದು. ಆತ ಅಲ್ಲಿಗೆ ಬಂದಾಗ ನನಗೆ ಸಂತೋಷವಾಯಿತು. ನಾವಿಬ್ಬರು ಆಟ ಆಡುತ್ತಾ ಹಾಗೆ ಜೈನಬೀರ ದೇವಸ್ಥಾನದ ಹತ್ತಿರ ಹೋದೆವು. ಜೈನಬೀರ ದೇವಸ್ಥಾನದ ಹಿಂದೆ, ಪಾಂಡುರಂಗ ನಾಯಕರ ಮನೆಯ ಪಕ್ಕದ ಹೊಲದಲ್ಲಿ ಯಾರೋ ಕಲ್ಲಂಗಡಿ ಬೆಳೆ ಬೆಳೆಸಿದ್ದರು, ಕಾಯುಗಳಿನ್ನು ಬೆಳೆಯುತ್ತಿದ್ದವು, ಇನ್ನೂ ಹಣ್ಣಾಗಿರದಿದ್ದರೂ ದೊಡ್ಡದಾಗುತ್ತಾ ಬಂದಿದ್ದವು. ಆ ಕಾಯಿಗಳನ್ನು ನೋಡಿ ನಮಗೆ ಅವನ್ನು ತಿನ್ನುವ ಆಸೆ. ಆ ವಯಸ್ಸೇ ಹಾಗಲ್ಲವೇ ತಿನ್ನುವ ವಸ್ತುಗಳನ್ನು ನೋಡಿದಾಗ ಅವು ಯಾರದ್ದಾದರೇನು? ಸಿಕ್ಕರೆ ತಿಂದು ಬಿಡುವುದು ಅಷ್ಟೇ. ನಾವಿಬ್ಬರೂ ಆ ಹೊಲದತ್ತ ಹೋದೆವು ಯಾರು ಇರಲಿಲ್ಲ, ಸಮಯ ಮಧ್ಯಾಹ್ನವಾಗುತ್ತಾ ಬಂದಿತ್ತು. ಇಬ್ಬರು ಒಂದು ಕಾಯಿ ಕಿತ್ತು ಒಡೆದು ನೋಡಿದೆವು ಹಣ್ಣಾಗಿರಲಿಲ್ಲ. ಅದು ಹಣ್ಣಾಗಿಲ್ಲವೆಂದು ಇನ್ನೊಂದನ್ನು ಕಿತ್ತೆವೂ ಅದು ಹಣ್ಣಾಗಿರಲಿಲ್ಲ. ಹೀಗೆ ಒಂದಾದ ಮೇಲೊಂದರಂತೆ ಐದಾರು ಕಾಯಿಗಳನ್ನು ಕಿತ್ತಿರಬಹುದು. ದೇವಸ್ಥಾನ ಪೂಜೆಗೆ ಬಂದ ಯಾರೋ ನಮ್ಮನ್ನು ನೋಡಿ "ಏಯ್" ಎಂದು ಕೂಗಿದರು. ಅವರಿಗೂ ನಾವ್ಯಾರು ಅಂತ ಬಹುಷಃ ತಿಳಿದಿರಲಿಕ್ಕಿಲ್ಲ ಹಾಗಾಗಿ ಮನೆಗೆ ತಿಳಿಸಿರಲಿಲ್ಲ. ನಮಗೆ ಒಂದಡೆ ನಿರಾಶೆ, ಇನ್ನೊಂದೆಡೆ ಅವರೆಲ್ಲಿ ಮನೆಗೆ ತಿಳಿಸುತ್ತಾರೋ ಎನ್ನುವ ಹೆದರಿಕೆ, ಅಲ್ಲಿಂದ ಓಡಿ, ಗದ್ದೆಯನ್ನು ದಾಟಿ, ಕಂಡಕ್ಟರ್ ಗಿರಿಯಣ್ಣನವರ ಮನೆಯ ಹಿಂಬಾಗದಿಂದ ಊರ ಒಳಗೆ ಸೇರಿ, ಹೇನಜ್ಜಿ ದೇವಸ್ಥಾನವನ್ನು ಬಳಸಿ ಮನೆ ಸೇರಿದ್ದೆವು. ದೇವಸ್ಥನಕ್ಕೆ ಬಂದವರಿಗೆ ನಾವ್ಯಾರು ಅಂತ ತಿಳಿಯದ ಕಾರಣದಿಂದಲೋ ಅಥವಾ ಹೋಗಲಿ ಮಕ್ಕಳು ಅಂತಲೋ ಮನೆಗೆ ತಿಳಿಸದೇ ಇದ್ದುದರಿಂದ ಮನೆಗೆ ಈ ವಿಷಯದ ಬಗ್ಗೆ ಅರಿವಿರದಿದ್ದರಿಂದ ಬೈಸಿಕೊಳ್ಳುವುದೇನೋ ತಪ್ಪಿತು. ಆದರೆ ಕಾಡುವ ನೆನಪುಗಳಿಂದ ತಪ್ಪಿಸಿಕೊಳ್ಳಲು ಸಾದ್ಯವೇ?
ಇಂದಿಗೂ ನಾನು ಮಾವಿನಕಾಯಿಯನ್ನಾಗಲಿ, ದಾಳಿಂಬೆ, ಕಲ್ಲಂಗಡಿಯ ಹಣ್ಣುಗಳನ್ನಾಗಲಿ ನೋಡಿದರೆ ಮೊದಲು ನೆನಪಾಗುವುದು ಬೆಲೇಕೇರಿಯಲ್ಲಿ ನಡೆದ ಈ ಘಟನೇಗಳೇ.
--ಮಂಜು ಹಿಚ್ಕಡ್
No comments:
Post a Comment