ಚಿತ್ರಕೃಪೆ ಫೇಸಬುಕ್ |
ನಾವು ಆ ಹೆಣ್ಣು ಬಂದಗದ ತುದಿಯನ್ನು ಕಡೆದು, ಅದರಿಂದ ಪೆಟ್ಲಂಡಿಯನ್ನು ಮಾಡುತಿದ್ದೆವು. ಅದೇ ನಮ್ಮ ಆಗಿನ ಕಾಲದ ಪಿಸ್ತೂಲು, ಬಂದೂಕು ಎಲ್ಲಾ. ಬಿದಿರಿನ ನಳಿಕೆಯಲ್ಲಿ ಮುಂದೊಂದು, ಹಿಂದೊಂದು ಜುಮ್ಮನಕಾಯಿ(ಒಂದುರೀತಿಯ ಕಾಯಿ)ಯನ್ನೋ, ಕೆಸುವಿನ ಎಲೆಯ ಮುದ್ದೆಯನ್ನೋ ತುರುಕಿ, ಇನ್ನೊಂದು ಹಿಡಿಕೆಯಿಂದ ಹಿಂದಿನ ಕಾಯಿಯನ್ನು ಜೋರಾಗಿ ತಳ್ಳಿದರೆ ಅದು ಮುಂದಿನ ಕಾಯಿಗೆ ಬಡಿದು, ಮುಂದಿನ ಕಾಯಿ ಹೊರಗೆ ಸಿಡಿಯುತ್ತಿತ್ತು ಹಾಗೆ ಸಿಡಿದಾಗ ಟಪ್, ಟಪ್ ಎನ್ನುವ ಶಬ್ಧ ಬೇರೆ ಬರುತ್ತಿತ್ತು. ನಮ್ಮಲ್ಲಿ ಆಗ ತಾನೆ ಕಬ್ಬಿಣದ ತಗಡಿನಲ್ಲಿ ಮಾಡಿದ ಪಿಸ್ತೂಲಗಳು, ಅದಕ್ಕೆ ಕೇಪಗಳು ಸಿಗುತ್ತಿದ್ದರೂ ಆಗ ಅವು ನಮ್ಮ ಕೈಗೆಟಕುವಂತಿರಲಿಲ್ಲ. ನಮಗೇನಿದ್ದರೂ ಈ ಪೆಟ್ಲಂಡಿಗಳೇ ಸರ್ವಸ್ವ. ಆ ಪೆಟ್ಲಂಡಿ ಮಾಡಿಕೊಂಡು ಅಲ್ಲಿ, ಇಲ್ಲಿ ಜುಮ್ಮನಕಾಯಿ ಹುಡುಕುತ್ತಾ, ಊರ ಹೊರಗಿನ ಬಯಲು, ಬೇಣ ಸುತ್ತುತ್ತಾ, ನಮ್ಮಂತಹ ಉಳಿದ ಮಕ್ಕಳೊಂದಿಗೆ ಆಟವಾಡುತ್ತಾ ಕಾಲಕಳೆಯುತಿದ್ದೆವು. ಆಗ ನಮಗೆ ಯಾವ ಯಾವ ಜಾಗದಲ್ಲಿ ಜುಮ್ಮನಕಾಯಿ ಮರ ಇದೆ, ಯಾವ ಮರದ ಕಾಯಿ ಕೈಗೆಟಕುತ್ತದೆ, ಯಾವ ಮರದ ಕಾಯಿಯನ್ನು ಹೇಗೆ ಕೀಳಬಹುದು ಎನ್ನುವುದು ಕರಗತವಾಗಿ ಬಿಟ್ಟಿದ್ದವು. ನಮ್ಮೂರ ಕುರುಚಲು ಗುಡ್ಡಗಳಾದ ಮುಳ್ಳಾಕೇರಿ, ಹಿರೇಗದ್ದೆಯ ಪ್ರದೇಶಗಳು ನಮಗಾಗ ಬೆಟ್ಟವೆನಿಸುತ್ತಲೂ ಇರಲಿಲ್ಲ.(ಈಗ ಬೆಂಗಳೂರಿನ ಸುತ್ತ ಮುತ್ತಲಿನ ಕುರುಚಲು ಗುಡ್ಡ ಪ್ರದೇಶಗಳನ್ನು ಇಲ್ಲಿಯ ಜನರು ಬೆಟ್ಟ ಅನ್ನುವುದನ್ನು ನೋಡಿದರೆ ನಮ್ಮೂರಿನ ಕುರುಚಲು ಗುಡ್ಡಗಳನ್ನೂ ಕೂಡ ಬೆಟ್ಟವೆನ್ನಬಹುದೇನೋ).
ನಮ್ಮಲ್ಲಿ ಆಗ ಯಾರ ಹತ್ರ ಪೆಟ್ಲಂಡಿ ಇರುತ್ತಿರಲಿಲ್ವೋ ಆತನನ್ನು ನಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅವರನ್ನು ಪೆಟ್ಲಂಡಿ ತೋರಿಸಿ ಹೆದರಿಸಿ ಓಡಿಸಿ ಬಿಡುತ್ತಿದ್ದೆವು. ಪೆಟ್ಲೆಂಡಿ ಇಲ್ಲದವರು ಆಗ ಪೆಟ್ಲಂಡಿ ಮಾಡಿಸಿಕೊಳ್ಳಲು ಹಾತೊರೆಯುತ್ತಿದ್ದರು. ನಾವು ಚಿಕ್ಕವರಿದ್ದಾಗ, ಆಗಾಗ ನೆನಪಾಗುವ ಪೆಟ್ಲಂಡಿ ಘಟನೆಯೆಂದರೆ, ನಾವು ಪೆಟ್ಲಂಡಿ ಮಾಡಲು ಹೋದದ್ದು ೧೯೮೭-೧೯೮೮ನೇ ಇಸ್ವಿ, ನಾವು ಎರಡನೇ ತರಗತಿಯಲ್ಲಿ ಓದುತ್ತಾ ಇದ್ದೆವು. ಆಗ ತಾನೇ ಶ್ರಾವಣ ಮಾಸ ಪ್ರಾರಂಭವಾಗಿತ್ತು. ಇನ್ನೂ ಕೆಲವೇ ದಿನಗಳಲ್ಲಿ ಹೆರಬೈಲ್ ದೇವರ ಹಬ್ಬ ಎನ್ನುವುದು ಕೂಡ ನಿಶ್ಚಯವಾಗಿ ಬಿಟ್ಟಿತು. ನಮ್ಮ ಸ್ನೇಹಿತರಲ್ಲಿ ಒಂದಿಬ್ಬರು ಪೆಟ್ಲಂಡಿ ಮಾಡಿಸಿಕೊಂಡಿದು ನಮಗೆ ಕೆಲವು ಬಲ್ಲ ಮೂಲಗಳಿಂದ ತಿಳಿದು ಬಿಟ್ಟಿತು. ನಮಗೆ ಅವರು ಪೆಟ್ಲೆಂಡಿ ತೆಗೆದುಕೊಂಡು ಹಬ್ಬಕ್ಕೆ ಹೋದರೆ, ನಮ್ಮ ಹತ್ತಿರ ಪೆಟ್ಲೆಂಡಿ ಇಲ್ಲಾ ಅಂತಾದರೆ ನಮ್ಮನ್ನು ಸೇರಿಸಿಕೊಳ್ಳಲಾರರು ಎನ್ನುವುದು ತಿಳಿದಿತ್ತು. ಆಗ ಅವರ ಉದ್ದೇಶವು ಅದೇ ಆಗಿತ್ತು ಕೂಡ. ವಿಷಯ ತಿಳಿದ ನಾನು ಮತ್ತು ನನ್ನ ಸ್ನೇಹಿತ ಇರ್ವರೂ ಸೇರಿ ನಾವು ಕೂಡ ಪೆಟ್ಲಂಡಿ ಮಾಡಿಸಿಕೊಳ್ಳವುದಾಗಿ ತಿರ್ಮಾನಿಸಿದೆವು. ಆದರೆ ಹೇಗೆ, ನಮ್ಮ ಮನೆಯ ಜಾಗದಲ್ಲಾಗಲಿ ಅಥವಾ ಅವರ ಮನೆಯ ಜಾಗದಲ್ಲಾಗಲಿ ಬಿದಿರಿನ ಗಿಡಗಳಿರಲಿಲ್ಲ. ಹಾಗಂತ ಪೆಟ್ಲಂಡಿಯ ಆಸೆಯನ್ನು ಅಲ್ಲಿಗೇ ಬಿಟ್ಟು ಬಿಡಲಾಗತ್ತದೆಯೇ. ಆಗ ನೆನಪಾಗಿದ್ದು ನಮ್ಮೂರ ಹಿರೇಗದ್ದೆಯಲ್ಲಿ ಒಬ್ಬರ ಜಾಗದಲ್ಲಿ ಒಂದೆರಡು ಬಿದಿರು ಹಿಂಡುಗಳಿರುವುದು. ಹೇಗಾದರೂ ಮಾಡಿ ಹೋಗಿ ಒಂದೆರಡು ಚಿಕ್ಕ ಬಿದಿರಿನ ತುದಿಯನ್ನು ತಂದು ಪೆಟ್ಲಂಡಿ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಆ ದಿನ ಶನಿವಾರ, ಅರ್ಧ ದಿನ ಮಾತ್ರ ಶಾಲೆ. ನಾನು, ನನ್ನ ಗೆಳೆಯ ಇಬ್ಬರು ಸೇರಿ ಹೇಗಾದರು ಮಾಡಿ ಆ ಬಿದಿರಿನ ತುಂಡುಗಳನ್ನು ಕಡಿದು ತರಬೇಕು ಎಂದು ಶಾಲೆಯಿಂದ ಮನೆಗೆ ಬರುತ್ತಲೇ ನಿಶ್ಚಯಿಸಿ ಬಿಟ್ಟೆವು. ಮನೆಗೆ ಬಂದವರೇ ಪಠ್ಯ ಪುಸ್ತಕದ ಚೀಲದ ಅವಶ್ಯಕತೆ ಆ ವಾರಕ್ಕೆ ಮುಗಿದಿದ್ದರಿಂದ ಅದನ್ನು ಅಲ್ಲಿಯೇ ಎಲ್ಲೊ ಮೂಲೆಗೆ ಎಸೆದು, ಮನೆಯಿಂದ ಒಂದು ಕತ್ತಿಯನ್ನು ತೆಗೆದುಕೊಂಡು ಅಲ್ಲಿಗೆ ಹೊರಟೆವು.
ಬಿದಿರಿನ ಹಿಂಡಿನ ಬಳಿ ಹೋಗಿ ಅದರ ಬಾಗಿದ ತುದಿಯನ್ನು ನೋಡಿದವು, ಅವು ನಮ್ಮ ಕೈಗೆಟಕುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಿದ್ದ ಹಾಗೆ ನನ್ನ ಗೆಳೆಯ ಅದರ ಬುಡ ಕಡಿದರೆ ಅದರ ತುದಿ ನಮ್ಮ ಕೈಗೆ ಸಿಗುತ್ತದೆ ಎಂದು, ಒಂದು ಗಿಡದ ಬುಡ ಕಡಿದ, ನೋಡಿದರೆ ಅದು ಗಂಡು. ಅದು ಗಂಡು ಎಂದು ಇನ್ನೊಂದನ್ನು ಕಡಿದ, ಅದೂ ಕೂಡ ಗಂಡು. ಹೀಗೆ ಮೂರ್ನಾಲ್ಕು ಬಿದಿರನ್ನು ಕಡಿದಿರಬಹುದು. ಅಷ್ಟರಲ್ಲಿ, ಅಲ್ಲಿಯೇ ಸ್ವಲ್ಪ ದೂರದಲ್ಲಿ ತನ್ನ ಹಸುಗಳಿಗೆ ಹುಲ್ಲು ಕೊಯುತ್ತಿದ್ದ ಕುಂಬಾರ ಬಾಬು ನಮ್ಮ ಬಳಿಗೆ ಬಂದ. ನಮ್ಮಿಬ್ಬರಿಗೆ ಹೆದರಿಕೆ ಸುರುವಾಯ್ತು. ಅವನು ಬಂದವನು, ನಮ್ಮ ಸ್ಥಿತಿ ನೋಡಿ ಹೆದರಬೇಡಿ, ನಾನು ನಿಮ್ಮ ಬಗ್ಗೆ ಹೇಳುವುದಿಲ್ಲ ಎಂದು, ಇದು ಗಂಡು ಬಿದಿರು, ಅದರ ಪಕ್ಕದಲ್ಲಿಯ ಹಿಂಡು ಹೆಣ್ಣು ಬಿದಿರಿನ ಹಿಂಡು ಎಂದು ಹೇಳಿ, ಆ ಹೆಣ್ಣು ಬಿದಿರಿನಿಂದ ನಮ್ಮಿಬ್ಬರಿಗೂ ಒಂದೊಂದು ಪೆಟ್ಲಂಡಿ ಮಾಡಿಕೊಟ್ಟು ತಾನು ಹುಲ್ಲು ಕೊಯ್ಯಲು ಹೊರಟ. ನಮಗೆ ಪೆಟ್ಲಂಡಿ ಸಿಕ್ಕಿತಲ್ಲ ಎನ್ನುವ ಖುಸಿಯಿಂದ ಅಲ್ಲಿಂದ ಹೊರಟು ಮನೆಗೆ ಬಂದೆವು.
ಹೇಗೂ ಅಲ್ಲಿ ಹುಲ್ಲು ಕೊಯ್ಯುತಿದ್ದ ಬಾಬು ಆ ಜಾಗದ ಮಾಲಿಕನಿಗೆ ವಿಷಯ ತಿಳಿಸಲಾರ ಎನ್ನುವ ನಂಬಿಕೆಯಲ್ಲೇ ನಮ್ಮ ಪೆಟ್ಲಂಡಿಯೊಂದಿಗೆ ಕಾಲ ಕಳೆಯತೊಡಗಿದೆವು. ಈ ಘಟನೆ ನಡೆದು ಒಂದೆರಡು ದಿನ ಕಳೆದಿರಬಹುದು, ಸೋಮವಾರ ಮದ್ಯಾಹ್ನ ಶಾಲೆ ಮುಗಿಸಿ ಮನೆಗೆ ಊಟ ಮಾಡಿ ಬರಲು ಬರುತ್ತಿದ್ದೆವು. ನಮ್ಮೂರಿನ ಹೃದಯ ಭಾಗದಲ್ಲಿ ಆಗ ಗಾಂವಕರ್ ಬಾಬು ಎನ್ನುವವರ ಒಂದು ಕಿರಾಣಿ ಅಂಗಡಿ ಇತ್ತು. ಅಲ್ಲಿ ನಾವು ಪೆಟ್ಲಂಡಿಗಾಗಿ ಕಡಿದ ಬಂದಗದ ಜಾಗದ ಮಾಲೀಕ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದ. ನಾವು ಅಂಗಡಿ ಸಮೀಪಿಸುತ್ತಿದಂತೆ, ಆ ಜಾಗದ ಮಾಲೀಕ ನಮ್ಮ ಎದುರಿಗೆ ಬಂದು ನಿಂತು, ನನಗೂ ನನ್ನ ಸ್ನೇಹಿತನಿಗೂ ತಲಾ ಎರಡು ಏಟು ಕೊಟ್ಟು, ಇನ್ನು ಮುಂದೆ ಬಿದಿರು ಹಿಂಡಿನ ಬಳಿ ಹೋಗದಂತೆ ಎಚ್ಚರಿಕೆ ನೀಡಿ ಮನೆಗೆ ಕಳಿಸಿದ. ಆ ಏಟು ತಿಂದ ಮೇಲೆ ತಿಳಿದದ್ದು, ನಮ್ಮ ಮುಂದೆ, ತಾನು ಜಾಗದ ಮಾಲಿಕನಿಗೆ ಹೇಳುವುದಿಲ್ಲ ಎಂದ ಬಾಬು, ಆ ದಿನವೇ ಅವನ ಮನೆಗೆ ಹೋಗಿ ನಾವು ಬಿದಿರು ಕಡಿದ ವಿಷಯ ತಿಳಿಸಿ ಬಂದಿದ್ದನೆಂದು. ಆಗಲೇ ನಮ್ಮ ಬಳಿ ಪೆಟ್ಲಂಡಿಗಳಿದ್ದರಿಂದ ನಾವು ಆ ಬಿದಿರು ಹಿಂಡಿನ ಬಳಿ ಪೆಟ್ಲಂಡಿಗಾಗಿ ಮತ್ತೆ ಹೋಗಲಿಲ್ಲ. ಇಂದಿಗೂ ಆ ಜಾಗದ ಮಾಲಿಕನನ್ನಾಗಲೀ ಅಥವಾ ಬಾಬುವನ್ನಾಗಲೀ ನೋಡಿದಾಗ ನಮ್ಮ ಪೆಟ್ಲಂಡಿ ಕಥೆ ನೆನಪಾಗದೇ ಇರದು.
-ಮಂಜು ಹಿಚ್ಕಡ್
No comments:
Post a Comment