ಅಂದು ಆ ಶಾಲೆಯಲ್ಲಿ ಬರೀ ಗಡಿಬಿಡಿಯ ವಾತಾವರಣ. ಎಲ್ಲರ ಕೈಕಾಲುಗಳು ಓಡಾಡುತ್ತಿವೆ. ಒಮ್ಮೆ ಅವರವರ ಸ್ವಂತ ಆಲೋಚನೆಗಳಿಗೆ ಓಡಾಡಿದರೆ, ಇನ್ನೊಮ್ಮೆ ಇನ್ನಾರದೋ ಮನಸ್ಸಿನ ಮೋಲೆಯಲ್ಲಿ ಮೂಡಿದ ಆಲೋಚನೆಗಳ ಪರಿಣಾಮವಾಗಿ ಇವರ ಕೈಕಾಲುಗಳು ಓಡಾಡುತಿವೆ. ಕೋಣೆಯಲ್ಲಿ ಬೆಳಿಗ್ಗೆಯಿಂದ ಕುಳಿತೇ ಇದ್ದ ಮಕ್ಕಳಿಂದ ಹಿಡಿದು, ಹೊರಗೆ ಓಡಾಡುವ, ಆ ಅಕ್ಕೋರು, ಮಾಸ್ತರರು, ಅಷ್ಟೇ ಅಲ್ಲ ಘಂಟೆ ಹೊಡೆಯುವ ಗಣಪು ಇವರಿಗೆಲ್ಲ ಅದೊಂದೇ ಯೋಚನೆ, ಯಾವಾಗ ಅವರು ಬರಬಹುದು? ಹೇಗೆ ಬರಬಹುದು? ಬಂದರೆ ಯಾವ ಕಡೆಯಿಂದ ಬರಬಹುದು, ದಕ್ಷಿಣಕಡೆಯ ಗೇಟಿನಿಂದ ಒಳಗೆ ಬರಬಹುದೇ, ಅಥವಾ ಉತ್ತರದ ಆ ದಣಪೆಯ ಬಳಿಯಿಂದ ಒಳಗೆ ಬರಬಹುದೇ, ಈ ಯೋಚನೆಯಲ್ಲೇ ಗಂಟೆ ಹತ್ತು ಕಳೆದಿತ್ತೇ ಹೊರತು ಶಾಲೆಗೆ ಬರಬೇಕಾದ ಸಾಹೇಬರಿನ್ನೂ (ಇನ್ಸಪೆಕ್ಟರ್) ಮಾತ್ರ ಬಂದಿಲ್ಲ.
ಇನ್ನೆರೆಡು ವರ್ಷದಲ್ಲಿ ನಿವೃತ್ತಿಯಾಗಲಿರುವ ಮುಖ್ಯ ಶಿಕ್ಷಕಿ ಸುಮಿತ್ರಾರವರಿಗಂತೂ ಬೆಳಿಗ್ಗೆಯಿಂದ ಆಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಓಡಾಡಿ, ಕೈಕಾಲೆಲ್ಲ ಸುಸ್ತಾಗಿ ಮರಗಟ್ಟಿದಂತಾಗಿ ಬಿಟ್ಟೀದೆ. ಮೊನ್ನೆ ಬೆಂಗಳೂರಿನಿಂದ ಮಗ ತಂದುಕೊಟ್ಟ ನೋವಿನ ತೈಲವನ್ನು ಕಾಲಿಗೆ ಸ್ವಲ್ಪ ಹಚ್ಚಿಕೊಂಡರೆ ನೋವಾದರೂ ಸ್ವಲ್ಪ ಕಡಿಮೆಯಾಗಬಹುದಿತ್ತೇನೋ? ಆದರೆ ಹಚ್ಚಿಕೊಳ್ಳುವುದು ಈಗ ಹೇಗೆ ಸಾದ್ಯ? ಹಚ್ಚಿಕೊಳ್ಳುವಷ್ಟರಲ್ಲಿ ಸಾಹೇಬರು ಬಂದರೆ ಏನು ಮಾಡುವುದು? ಹಾಗಂತ ಹಚ್ಚಿಕೊಳ್ಳದೇ ಹೋದರೆ ಈ ನೋವು ಕಡಿಮೆಯಾಗಬೇಕಲ್ಲ, "ಹಾಳಾದ್ ಸಾಯ್ಬ್ರ, ಇಲ್ಲೆ ಹಾಳಾಗ್ ಹೋದ್ರೋ ಏನೋ?" ಎಂದು ಮನಸ್ಸಲ್ಲೇ ಒಂದಿಷ್ಟು ಹಿಡಿಸಾಪ ಹಾಕಿ, ಅಲ್ಲೇ ತಮ್ಮ ಕುರ್ಚಿಗೆ ಆನಿಸಿಕೊಂಡು ಕುಳಿತರು.
ಹಾಗೆ ಅನಿಸಿದಾಗಲೇ ಅವರಿಗೊಂದು ಆಲೋಚನೆ ಹೊಳದೇ ಬಿಟ್ಟಿತು. ಸಾಹೇಬರು ಬರುತ್ತಾರೆ ಎಂದು ಸರ್ಫ್ ಹಾಕಿ ತೊಳೆದು, ಅದಕ್ಕೆ ಮತ್ತೆ ನೀಲಿ ಹಾಕಿ ಒಪ್ಪವಾಗಿ ಇಸ್ತ್ರಿ ಮಾಡಿಸಿದ ಬಿಳಿ ಅಂಗಿ, ಬಿಳಿ ಪ್ಯಾಂಟು ಧರಿಸಿ ಬಾಯಲ್ಲಿ ಸೀಟಿ (ವಿಜಲ್) ತುರುಕಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಿರುವ ಹಾವೇರಿ ಕಡೆಯ ಪಿಟಿ ಮಾಸ್ತರ್ ಹನುಮಪ್ಪ ಅಲ್ಲೇ ಬಾಗಿಲನ್ನು ದಾಟಿ ಮುಂದಕ್ಕೆ ಹೋಗುತಿದ್ದುದನ್ನು ತಮ್ಮ ಕೋಣೆಯಿಂದ ನೋಡಿದ ಸುಮಿತ್ರಾ ಅವರು, "ಏ ಹನ್ಮಪ್ಪಾ, ಇಲ್ಲ್ ಬಾ, ಮಾತ್ರ ಬಾ" ಎಂದು ಕೂಗಿದರು.
"ಏನ್ರಿ ಮೆಡಂ, ಕರಿದ್ರೇನ್ರೀ" ಎಂದು ಕೇಳುತ್ತಲೆ ಒಳಗೆ ಬಂದ ಹನುಮಪ್ಪ.
"ಈ ಸಾಯ್ಬ್ರ ಇಟ್ಟೊತ್ತಿಗೆ ಬತ್ತರಾ ಏನಾ? ಹಾಳಾದೋರ ಬರುದ್ ಬತ್ತರ ಇಟ್ಟೊತ್ತಿಗೆ ಬತ್ತಿ ಅಂದೂ ಹೇಳಲಾ. ಅವ್ರ ಇಲ್ಲಿಂದ್ ಬತ್ತರಾ ಏನಾ ಬೆಲಾ. ಉಂದ್ ಕೆಲ್ಸಾ ಮಾಡ, ಆರ್ನೇ ಕ್ಲಾಸಂದೂ, ಏಳ್ನೇ ಕ್ಲಾಸಂದೂ ಮುಖ್ಯಮಂತ್ರಿಗಳ ಕರ್ದೆ, ಒಬ್ಬೊಬ್ಬ್ರಿಗೆ ಉಂದುಂದ ಕಡಿಗೆ ಹೋಗ್ ನಿಂತ್ಕಂಡೆ ಕಾಯುಕ್ ಹೇಳ್, ಸಾಹೇಬ್ರ್ ಬಂದಕೂಡ್ಲೇ ಓಡ್ ಬಂದೆ ಹೇಳುಕ್ ಹೇಳ". ಎಂದು ತಮ್ಮ ಸಲಹೆ ಮತ್ತು ಆಜ್ನೆ ಎರಡನ್ನೂ ಒಟ್ಟಿಗೆ ನೀಡಿ ಕಳಿಸಿದರು.
ಮೂರ್ನಾಲ್ಕು ವರ್ಷಗಳ ಹಿಂದೆ ಈ ಶಾಲೆಗೆ ಬಂದಿದ್ದ ಹನುಮಪ್ಪ, ಇದೇ ಕೊನೆ ವರ್ಷ, ಇದೇ ಕೊನೆ ವರ್ಷ ಎಂದು ನಾಲ್ಕು ವರ್ಷಗಳನ್ನು ಇಲ್ಲಿಯೇ ಕಳೆದಿದ್ದ. ಆಗ ಈತನಿಗೆ ಈ ಶಾಲೆ, ನೌಕರಿ ಎರಡು ಹೊಸತಾಗಿದ್ದರೆ, ಆ ಶಾಲೆಗೂ ಆತ ಹೊಸಬನಾಗಿದ್ದ. ಬರುವಾಗಲೇ ಒಂದು ವರ್ಷದೊಳಗೆ ತನ್ನೂರಿನ ಕಡೆ ಟ್ರಾನ್ಸಪರ್ ಮಾಡಿಕೊಂಡು ಹೋಗಬೇಕು ಎಂದು ಬಂದವನು, ಅತ್ತ ಟ್ರಾನ್ಸಪರು ಸಿಗದೇ, ಇತ್ತ ಈ ಊರು, ಈ ಭಾಷೆ, ಈ ಕಡೆಯ ಊಟವೂ ಹೊಂದಾಣಿಕೆಯಾಗದೇ ತ್ರಿಷಂಕು ತರಹ ಇಲ್ಲಿಯೇ ಉಳಿದು ಬಿಟ್ಟಿದ್ದ. ಆ ಊರಿನ ಕಡೆಯವರೇ ತುಂಬಿ ಹೋಗಿರುವ ಶಾಲೆಯಲ್ಲಿ ಹೊರಗಿನವನಾಗಿ ಹೊಸತಾಗಿ ಸೇರಿದಾಗ ಇಲ್ಲಿಯ ಜನರ ಆಡುಭಾಷೆ ಅರ್ಥವಾಗದೇ ತೊಳಲಾಡಿದ್ದ. ಆದರೆ ಈಗ ಅಲ್ಪ ಸ್ವಲ್ಪ ಅರ್ಥವಾಗುತಿತ್ತಾದರೂ ಸಂಪೂರ್ಣವಾಗಿ ಅರ್ಥವಾಗುತ್ತಿರಲಿಲ್ಲ. ಹೆಡ್ ಬಾಯಿಯವರ ಮಾತು ಸಂಪೂರ್ಣವಾಗಿ ಅರ್ಥವಾಗದೇ ಇದ್ದರೂ ಅಲ್ಪ ಸ್ವಲ್ಪವಾಗಿ ಅರ್ಥವಾದ ಕಾರಣ ವಿಷಯ ಏನೆಂದು ಅರ್ಥವಾಗಿ " ಆಯ್ತ್ರೀ ಮೇಡಂ ಅವ್ರ" ಎಂದು ಅಲ್ಲಿಂದ ಹೊರಟ.
ಪಿಟಿ ಮಾಸ್ತರರು ಕರೆದೊಡನೆ ಎದುರಿಗೆ ಹಾಜರಾದರೂ ಆಯಾ ಕ್ಲಾಸಿನ ಮಕ್ಕಳಿಂದ ಆಯ್ಕೆಯಾದ ಮುಖ್ಯ ಮಂತ್ರಿಗಳು. ಪಿಟಿ ಮಾಸ್ತರು ಆರನೇ ತರಗತಿಯವನನ್ನು ದಕ್ಷಿಣದಿಕ್ಕಿನ ಗೇಟಿನತ್ತಲೂ, ಏಳನೇ ತರಗತಿಯವನನ್ನು ಉತ್ತರದಿಕ್ಕಿನ ಕಡೆಗೂ ಹೋಗಿ ಸಾಹೇಬ್ರು ಬಂದಾಗ ಓಡಿ ಬಂದು ತನಗೆ ತಿಳಿಸುವಂತೆ ಅತ್ತ ಕಡೆ ಕಳಿಸಿ, ತಾನು ತನ್ನ ಕೆಲಸದತ್ತ ಹೊರಳಿದ. ಮಕ್ಕಳಿಗೂ ಅಷ್ಟೇ ಇಷ್ಟೊತ್ತು ಕ್ಲಾಸಲ್ಲಿ ಕೂತು ಕೂತು ಸಮಯ ಕಳೆಯುವುದು ಹೇಗೆಂದು ಅರ್ಥವಾಗದ ಅವರಿಗೆ ಪಿಟಿ ಮಾಸ್ತರರು ಹೇಳಿದ್ದು ವೈದ್ಯರು ಹಾಲು ಹಣ್ಣು ಅಂದಂತಾಗಿ ಮಾಸ್ತರರು ಹೇಳಿದ ಕಡೆ ಓಡಿದರು.
ಸುಮಿತ್ರಾ ಮೆಡಂಗೆ ಈಗ ಸ್ವಲ್ಪ ಸಮಾಧಾನವಾದಂತಾಗಿ ತಮ್ಮ ಬಗ್ಗೆ ಹಾಗೂ ತಾವು ಕೈಗೊಂಡ ಕಾರ್ಯದ ಬಗ್ಗೆ ಹೆಮ್ಮೆ ಮೂಡಿದಂತಾಯಿತು. ಮೆಲ್ಲಗೆ ಎದ್ದು ಕಪಾಟಿನಲ್ಲಿ ಇಟ್ಟ ತಮ್ಮ ಬ್ಯಾಗಿನತ್ತ ಹೊರಟು ಬ್ಯಾಗಿನಲ್ಲಿಟ್ಟ ನೋವಿನ ಎಣ್ಣೆಯನ್ನು ಹೊರತೆಗೆದು ತಮ್ಮ ಸ್ಥಳಕ್ಕೆ ಬಂದು ಕುಳಿತು ಸೀರೆಯನ್ನು ಸ್ವಲ್ಪ ಮಂಡಿಯವರೆಗೆ ಎತ್ತಿ ನೋವಿನ ಎಣ್ಣೆಯನ್ನು ಕೈಗೆ ಹಚ್ಚಿಕೊಂಡರು. ಯಾಕೋ ಮನಸ್ಸಿಗೆ ಸ್ವಲ್ಪ ಹಾಯಾದಂತೆನಿಸಿತು. ಆ ಹಿತವಾದ ಅನುಭವದಲ್ಲಿದ್ದ ಅವರಿಗೆ ಹೊರಗಡೆಯ ಅಡುಗೆ ಕೋಣೆಯಿಂದ ಗಡಿಬಿಡಿಯಲ್ಲಿ ಒಳಗೆ ಬಂದ ಲತಾ ಬಾಯಿ (ಮೆಡಂ) ಅವರ ಗಮನಕ್ಕೆ ಬರಲಿಲ್ಲ. ತಾವು ಕಾಲು ನೇವರಿಸಿಕೊಳ್ಳುವುದರಲ್ಲೇ ತನ್ಮಯರಾಗಿಬಿಟ್ಟಿದ್ದರು.
ಲತಾ ಬಾಯಿಯವರಿಗೆ ಇದೇನು ಹೊಸತಲ್ಲ. ಅವರು ಆಗಾಗ ಹೆಡ್ ಬಾಯಿಯವರು ಕಾಲಿಗೆ ಎಣ್ಣೆ ನೀವುತ್ತಿರುವುದನ್ನು ಆಗಾಗ ನೋಡಿದ್ದಾರೆ. ಮನಸ್ಸಲ್ಲಿ ಮಕ್ಕಳು ದೊಡ್ಡ ದೊಡ್ಡ ನೌಕರಿಯಲ್ಲಿ ಇರುವಾಗ ಇವರೇಕೆ ಇನ್ನೂ ಶಾಲೆಗೆ ಬರುತಿದ್ದಾರೆ? ಸುಮ್ಮನೇ ಸ್ವಯಂ ನಿವೃತ್ತಿ ತಗೊಂಡು ಮನೆಯಲ್ಲಿ ಹಾಯಾಗಿ ಕುಳಿತುಕೊಂಡರೆ ಸೀನಿಯಾರಿಟಿಯಲ್ಲಿ ಅವರ ನಂತರದವರಾಗಿದ್ದ ತಾವಾದರೂ ಹೆಡ್ ಬಾಯಿಯಾಗಿ ಮೆರೆಯಬಹುದಿತ್ತು ಅನಿಸಿದರೂ, ತೋರಿಸಿ ಕೊಳ್ಳದವರಂತೆ, "ಏನ್ ಮೆಡಂ, ಕಾಲ್ ನೋವ್ ಬಾಳೀದೆ?"ಎಂದು ಕೇಳಿದರು.
ಅವರ ಮಾತಿಗೆ ಎಚ್ಚೆತ್ತ ಸುಮಿತ್ರಾ ಬಾಯಿಯವರು ತಮ್ಮ ನೇವರಿಕೆಯನ್ನು ಅಷ್ಟಕ್ಕೆ ನಿಲ್ಲಸಿ, "ಓಹ್, ಲತಾ ಇಟ್ಟೊತ್ತಿಗೆ ಬಂದೆ?"
"ಏಗ್ ಬಂದದ್ದೇ, ಏನ್ ಬಾಳ್ ನೋವಿದೆ"
"ಹೌದೆ ಮಾರಾಯ್ತಿ, ಸತ್ತದ್ ಓಡಾಡೆ ಕಾಲ್ ನೋವ್ ಬಂದೋಯ್ತು ಅದಿರ್ಲೆ, ಅಡ್ಗೆ ಹೆಂಗೆ ನಡೀತೇ ಇದ, ಮಸಾಲೆ ಎಲ್ಲಾ ರೆಡಿ ಆಯ್ತೆ"
"ಹ, ಮಸಾಲಿ ಎಲ್ಲಾ ಹಾಕಾಯ್ತ, ಕುತ್ತುಂಬ್ರಿ ಸುಪ್ಪ ತಕಂಡೆ ಹೋಗುಕೆ ಮರ್ತೇ ಹೋಗತ್, ಅದ್ಕೇ ತಕಂಡೆ ಹೋಗ್ವಾ ಅಂತೆ ಬಂದೆ"
"ಹೌದೆ, ಕಾಡೀಗೆ ಕೋಳೆ ಸಾಕಾಗುದೆ?"
"ಸಾಕಾಗುದ್ ಮಡಿಯೆ, ಇಲ್ಲಾ ಅಂದ್ರು ಇದ್ದದ್ರಲ್ಲೇ ಎಡ್ಜಸ್ಟ ಮಾಡಿದ್ರ ಆಯ್ತ, ಸಾಯ್ಲ ಏಗ್ ಮಾತ್ತೆ ಯಾರ್ ತತ್ತೇ ಕುಳ್ಳುರ್. ಪೀಸ್ ಕಾಡ್ಮಿ ಆತೀದ್ ಅಂದೆ ಕಂಡಂಗೆ ಆದ್ರೆ, ಕೆಲ್ಸಕ್ಕಿರು ಮಕ್ಕಳಿಗೆ ಕಾಡೀಗ್ ಬಡ್ಸದ್ರ ಆಯ್ತ"
"ಹ, ಅದೂ ಹೌದೆ, ಬಡ್ಸುಕೆ ನೀವೇ ಇರಿ, ನೀವಾದ್ರೆ ಎಡ್ಜಸ್ಟ್ ಮಾಡ್ತರಿ, ಅದೇ ಶಕುಂತಲಾ ಮೆಡಂ ಆದ್ರೆ, ಪೀಸ್ ಎಲ್ಲಾ ಗೋರ್ ಹಾಕ್ ಬಿಡ್ತರ, ಕಾಡಿಗೆ ಊಟಕ್ಕೆ ಕುಳಿತೋರಿಗೆ ಪೀಸೇ ಇರುಲಾ" ಅಂದು ಹೇಳುತಿದ್ದವರು ಹೊರಗಡೆಯಿಂದ "ರೂಂಯ್, ರೂಂಯ್" ಎನ್ನುತ್ತಾ ಓಡಿ ಬರುತ್ತಿರುವ ಏಳನೇ ತರಗತಿಯ ಶಂಕರನನ್ನು ನೋಡಿ, ತಮ್ಮ ಮಾತನ್ನು ಅಷ್ಟಕ್ಕೆ ನಿಲ್ಲಿಸಿ, "ಏ ಶಂಕರಾ! ಯಾಕಾ ಓಡ್ ಬತ್ತೇ ಇಂವೆ? ಸಾಯ್ಬ್ರ ಬಂದ್ರೆ".
"ಹೌದಿರ್ಬೇಕ್ ಆಕ್ಕೋರೆ, ಯಾರೋ ಬೈಕ್ ಅಲ್ಲೆ ಬತ್ತೇ ಇವ್ರ, ಮಾಸ್ತರಿಗೆ ಹೇಳ್ವಾ ಅಂದೆ ಓಡ್ ಬಂದೆ, ಆದ್ರ ಅವ್ರ ಇಲ್ಲೂ ಕಾಣಸ್ತೇ ಇಲ್ಲಾ"
ಬೈಕ್ ಮೇಲೆ ಬಂದ್ರು ಅಂದ ತಕ್ಷಣ ಸುಮಿತ್ರಾ ಅವರಿಗೆ ಬಂದವರು ಸಾಹಿಬರೇ ಎನ್ನುವುದು ನಿಶ್ಚಯವಾಗಿ ಹೋಯಿತು. ಕೂಡಲೇ ಸೀಟಿನಿಂದ ಎದ್ದು, " ನೀ ಹೋಗೆ ಕ್ಲಾಸಲೆ ಕುತ್ಕಾ, ಗಲಾಟೆ ಮಾಡ್ಬೇಡಿ" ಎಂದು ಶಂಕರನನ್ನು ಕ್ಲಾಸಿಗೆ ಕಳಿಸಿ, "ಲತಾ, ಈ ಪಿಟಿ ಮಾಸ್ತರ್ ಇಲ್ಲೋಗೆ ಸತ್ನಾ ಬೆಲಾ, ಆಂವಾ ಅಲ್ಲಿಲ್ಲರೂ ಕಂಡ್ರೆ ಮಾತ್ರೆ ಇಲ್ಲೆ ಬರುಕ್ ಹೇಳ, ಹಾಂಗೆ ಅಡ್ಗಿ ಮುಗ್ದದ್ದೇ ಸ್ವಲ್ಪ ಬಂದೆ ಹೇಳಗಾ" ಎಂದು ಹೇಳಿ ಲತಾ ಮೆಡಂ ಅನ್ನು ಕಳಿಸಿದರು.
ಬೆಳಿಗ್ಗೆಯಿಂದ ಕಟ್ಟಿ ಹಿಡಿದ ಸೊಂಟದ ನಡುವಿನ ತೊಳಲಾಟವನ್ನು ಸ್ವಲ್ಪ ಹಗೂರಗೊಳಿಸಿಕೊಂಡು ನೆಮ್ಮದಿಯಿಂದ ಮೂತ್ರ ಕೋಣೆಯಿಂದ ಹೊರಬರುತ್ತಿರುವ ಪಿಟಿ ಮಾಸ್ತರರನ್ನು ನೋಡಿದ ಲತಾ ಮೆಡಂ "ಹೇ ಹನುಮಪ್ಪ ಅವ್ರೇ, ಹೆಡ್ ಬಾಯಿಯೋರ ನಿಮ್ಮ ಕರೀತೇ ಇವ್ರ ನೋಡಿ, ಸಾಯ್ಬ್ರ ಏನೋ ಬತ್ತೇ ಇವ್ರ ಕಡ ನೋಡ, ಬ್ಯಾಗ್ ಹೋಗ."
ಅಷ್ಟು ಹೇಳಿದ್ದೇ ಓಡಿದ ಹನುಮಪ್ಪ ಹೆಡ್ ಬಾಯಿಯವರ ಕೋಣೆಯ ಕಡೆಗೆ. ಓಡಿ ಕೋಣೆ ತಲುಪುತ್ತಿರುವವನನ್ನು ನೋಡಿದ ಸುಮಿತ್ರಾ ಬಾಯಿಯವರು ಸ್ವಲ್ಪ ಸಿಟ್ಟಿನಿಂದಲೇ "ಇಲ್ಲೆ ಹಾಳಾಗ್ ಹೋಗದೇ, ಅಲ್ಲೆ ಸಾಯ್ಬ್ರ ಬತ್ತೇ ಇವ್ರ ಕಡ, ಅವ್ರ ಒಳ್ಗ ಬರುದ್ರೊಳ್ಗೆ ಸೀತಾರಾಮ್ಗೆ ಬ್ಯಾಗ್ ಬಂದೆ ಕ್ಲಾಸಲ್ಲೆ ಕುತ್ಕಣುಕೆ ಹೇಳ್, ಹಂಗೆ ಎಲ್ಲಾ ಕ್ಲಾಸಿಗೂ ಹೋಗೆ ಸಾಯ್ಬ್ರ ಬತ್ತೇ ಇರು ವಿಷಯ ಹೇಳ್"
ಅಷ್ಟು ಹೇಳಿದ್ದೇ ಹನುಮಪ್ಪ ಅಲ್ಲಿಂದ ಹೊರಬಂದು ದಕ್ಷಿಣದಿಕ್ಕಿನ ದ್ವಾರಪಾಲಕ ಸೀತಾರಾಮನನ್ನೂ ದೂರದಿಂದಲೇ ಸನ್ನೆಯ ಮೂಲಕ ಕರೆದು ಕ್ಲಾಸಿಗೆ ಹೋಗಲು ತಿಳಿಸಿ, ತಾನು ಪ್ರತಿ ಕ್ಲಾಸಿಗೂ ಹೋಗಿ ಆಯಾ ಕ್ಲಾಸಿನ ಶಿಕ್ಷಕರಿಗೆ ಹೆಡಬಾಯಿಯವರ ಹೇಳಿದದ್ದನ್ನು ತಿಳಿಸಿ, ತಾನು ಹೆಡ್ ಬಾಯಿಯವರ ಕೋಣೆಯ ಬಳಿ ಹೋಗುವಷ್ಟರಲ್ಲಿ ಸಾಹೇಬರು ಆಗಲೇ ಒಳ ಬಂದು ಹೆಡ್ ಬಾಯಿಯವರ ಮುಂದಿನ ಕುರ್ಚಿಯಲ್ಲಿ ಅಲಂಕೃತರಾಗಿದ್ದು ಸುಮಿತ್ರಾ ಅವರೊಂದಿಗೆ ಮಾತಿಗೆ ಇಳಿದಿದ್ದರು. ತಾನು ಈಗ ಓಳ ಹೋಗುವುದು ಸರಿಯಲ್ಲವೆಂದು, ತನ್ನ ಕೆಲಸವೇನಿದ್ದರೂ ಹೆಡ್ ಬಾಯಿಯವರ ಜೊತೆ ಸಾಹೇಬರನ್ನು ಎಲ್ಲಾ ಕೋಣೆಗೂ ಕರೆದುಕೊಂಡು ಹೋಗಿ ಬರುವುದಷ್ಟೇ ಆದುದರಿಂದ ಅವರು ಹೊರ ಬರುವ ವರೆಗೂ ಕಾಯೋಣ ಎಂದು ಅಲ್ಲೇ ಕೋಣೆಯ ಪಕ್ಕದಲ್ಲೇ ಕಾಯುತ್ತಾ ನಿಂತ. ಗಂಟೆ ಹನ್ನೆರಡಾಯ್ತು, ಒಂದಾಯ್ತು, ಒಳಗಡೆ ಕುಳಿತ ಮೆಡಂ ಆಗಲೀ, ಸಾಹೇಬರಾಗಲೀ ಮಾತ್ರ ಹೊರಗಡೆ ಬರುತ್ತಿರಲಿಲ್ಲ.
ಗಣಪು ಬಂದು ಒಂದು ಗಂಟೆಯ ವಿರಾಮದ ಘಂಟೆ ಭಾರಿಸಿದೊಡನೆ ಹತ್ತಿರದ ಮಕ್ಕಳೆಲ್ಲ ಮಧ್ಯಾಹ್ನದ ಊಟಕ್ಕೆ ಮನೆಗೆ ಹೊರಟರೆ, ದೂರದ ಮಕ್ಕಳು ತಾವು ಮನೆಯಿಂದ ತಂದ ದೋಸೆಯನ್ನೋ, ಇಡ್ಲಿಯನ್ನೋ, ಉಪ್ಪಿಟ್ಟನ್ನೋ, ಇಲ್ಲಾ ನಿನ್ನೆ ಮಿಕ್ಕಿ ಉಳಿದ ಅನ್ನದ ಇಂದಿನ ಚಿತ್ರನ್ನವನ್ನೂ ತಿನ್ನುತ್ತಾ ಜಗುಲಿಯಲ್ಲಿ ಕುಳಿತರು.
ಇತ್ತ ಲತಾ ಮೆಡಂ ಅವರು ಬಂದು ಹೆಡ್ ಬಾಯಿಯವರ ಕೋಣೆಯ ಬಾಗಿಲಲ್ಲಿ ನಿಂತು ಹೆಡ್ ಬಾಯಿಯವರಿಗಷ್ಟೇ ಗೊತ್ತಾಗುವ ರೀತಿಯಲ್ಲಿ ಅಡಿಗೆ ರೆಡಿಯಾಗಿದೆ ಎನ್ನುವ ಸನ್ನೆ ಮಾಡಿ ಹೋದೊಡನೆಯೇ, ಹೆಡ್ ಬಾಯಿಯವರು ಊಟಕ್ಕೆ ಎಲೆ ಹಾಸಿ ರೆಡಿಯಾದರು. ಪಕ್ಕದ ಅಡುಗೆ ಕೋಣೆಯಿಂದ, ಬಿಸಿ, ಬಿಸಿ ಅನ್ನದ ಜೊತೆಗೆ ಗರಂ ಮಸಾಲೆಯಿಂದ ಸ್ವಾದ ಬರಿತ ಕೋಳಿ ಆಸಿ (ಸಾರು) ಲತಾ ಮೆಡಂ ಅವರ ಉಸ್ತುವಾರಿಯಲ್ಲಿ ಹೆಡ್ ಬಾಯಿಯವರ ಕೋಣೆ ಸೇರಿತು. ಉಳಿದ ಮಾಸ್ತರರು, ಅಕ್ಕೋರುಗಳು ಅಡುಗೆ ಕೆಲಸಕ್ಕೆ ನೆರವಾದ ಹುಡುಗರೊಂದಿಗೆ ಹೆಡ್ ಬಾಯಿಯವರ ಕೋಣೆ ಸೇರಿದೊಡನೆಯೇ, ಕೋಣೆಯ ಬಾಗಿಲು ಮುಚ್ಚಿಕೊಂಡಿತು.
ಬಾಗಿಲು ಮುಚ್ಚ ಬಹುದು ಆದರೆ ವಾಸನೆ ಮುಚ್ಚಿಡಲಾದೀತೇ? ಕೋಳಿ ಆಸೆಯ ಗಮಲಿನಲ್ಲಿ ಹೊರಗೆ ಊಟಕ್ಕೆ ಕುಳಿತ ಮಕ್ಕಳಿಗೆ ತಮ್ಮ ಊಟ ಹೊಟ್ಟೆಗೆ ಸೇರಿದ್ದೇ ಗೊತ್ತಾಗಲಿಲ್ಲ. ವಾಸನೆಯ ರುಚಿಯಲ್ಲಿಯೇ ಊಟ ಮುಗಿಸಿದ ಆ ಮಕ್ಕಳ ಜೊತೆ ಮನೆಗೆ ಊಟಕ್ಕೆ ಹೋದ ಮಕ್ಕಳು ಬಂದು ಕೋಣೆ ಸೇರಿದ್ದಾಯ್ತು, ಗಂಟೆ ಎರಡು, ಎರಡುವರೆ ಆಯ್ತು ಹೆಡ್ ಬಾಯಿಯವರ ಕೋಣೆಯ ಬಾಗಿಲು ತೆರಯಲಿಲ್ಲ, ಮಾಸ್ತರರಾರು ಹೊರಬರಲಿಲ್ಲ. ಮಕ್ಕಳಿಗೆ ಯಾರು, ಏಕೆ, ಏನು, ಎತ್ತ ಎಂದು ಕೇಳುವವರಿಲ್ಲದೇ ಅವರವರ ಲೋಕದಲ್ಲೇ ಕಾಲಕಳೆಯ ತೊಡಗಿದರು.
ಗಂಟೆ ಮೂರು ದಾಟಿತು, ಹೆಡ್ ಬಾಯಿಯವರ ಕೋಣೆಯ ಬಾಗಿಲು ಮೆಲ್ಲಗೆ ತೆರೆದುಕೊಂಡಿತು, ಮಕ್ಕಳೆಲ್ಲ ತಮ್ಮ ಕೋಣೆಯಿಂದಲೇ ಅತ್ತ ಇಣುಕಿ ನೋಡುತಿದ್ದರು. ಅವರು ಇದುವರೆಗೂ ನೋಡದ, ಮಾತನಾಡದ ಮನುಷ್ಯನ ಆಕೃತಿಯೊಂದು ಹೆಡ್ ಬಾಯಿಯವರ ಕೋಣೆಯಿಂದ ಹೊರ ಬಿತ್ತು. ಅದು ಹೊರ ಬಿಳುತ್ತಲೇ ಹೆಡ್ ಬಾಯಿಯವರನ್ನು ಕರೆದು, "ನೋಡಿ ಮೇಡಂ, ನಿಮ್ಮ ವಿನಂತಿಯಂತೆ ಈ ಬಾರಿ ನಾನು ಡಿಡಿಪಿಐ ಅವರಲ್ಲಿ ನಿಮ್ಮ ಶಾಲೆಯ ಅಡುಗೆ ಕೋಣೆಯ ಪಕ್ಕದಲ್ಲೇ ಒಂದು ಊಟದ ಕೋಣೆಯನ್ನು ಕಟ್ಟಿಸಲು ಸಿಪಾರಸು ಮಾಡುತ್ತೇನೆ" ಎಂದು ಹೇಳಿ ತಮ್ಮ ಬೈಕಿನತ್ತ ಹೆಜ್ಜೆ ಹಾಕಿದರು. ಮಕ್ಕಳೆಲ್ಲ " ಹೋ, ಅದೆ, ಅದೆ, ಅಲ್ಲೆ ಹೋತೆ ಇವ್ರ ಅಲಾ, ಅವ್ರೇ ನೋಡ್ರೋ ಸಾಯ್ಬ್ರು" ಎಂದು ಹೊರಡುತ್ತಿರುವ ಸಾಹೇಬರನ್ನು ನೋಡಿ ಕೇಕೆ ಹಾಕಲಾರಂಬಿಸಿದರು. ಸಾಹೇಬರಿಗೆ ಮೊದಲ ಬಾರಿಗೆ ಮುಜುಗರವಾದಂತಾಗಿ ಬೇಗ ಬೇಗನೇ ಹೆಜ್ಜೆಯಿಡತೊಡಗಿದರು. "ಏಯ್ ಏನ್ರಲೇ ಸುಮ್ಕಿರಲೇ" ಎನ್ನುತ್ತಾ ಮಕ್ಕಳನ್ನು ಗಧರಿಸಲು ಮೆಡಂ ಅವರ ಕೋಣೆಯಿಂದ ಹೊರ ಬಿದ್ದರು ಹನುಮಪ್ಪ ಮಾಸ್ತರು, ತಮ್ಮ ತಟ್ಟೆಯಲ್ಲೇ ಕೈತೊಳೆದು.
-ಮಂಜು ಹಿಚ್ಕಡ್

No comments:
Post a Comment