Wednesday, September 9, 2015

ಆ ರಾತ್ರಿ

ಬೆಳಿಗ್ಗೆಯಿಂದ ಎಡೆಬಿಡದೇ ಸುರಿಯುತಿದ್ದ ಶ್ರಾವಣದ ಮಳೆ ಸಂಜೆಯಾದರೂ ಸುರಿಯುತ್ತಲೇ ಇತ್ತು. ಈಗ ಕಡಿಮೆಯಾಗಬಹುದು, ಆಗ ಕಡಿಮೆಯಾಗಬಹುದು ಎಂದುಕೊಂಡಿದ್ದೇ ಬಂತು ಆದರೆ ಮಳೆ ಮಾತ್ರ ಕಡಿಮೆಯಾಗುತ್ತಲೇ ಇರಲಿಲ್ಲ. ಇನ್ನೂ ಕಾಯುತ್ತಾ ಕುಳಿತರೆ ರಾತ್ರಿಯಾಗಬಹುದೇ ಹೊರತು ಮಳೆ ಕಡಿಮೆಯಾಗಲಾರದು ಎಂದುಕೊಂಡ ರಾಮ, ಬೆಳಿಗ್ಗೆ ಹುಲ್ಲು ತರಲು ಹೋದಾಗ ಕೊಯ್ದು ತಂದು ಒಣಗಿಸಿ ಮಡಚಿ ಇಟ್ಟ ಬಾಳೆ ಎಲೆಯನ್ನು ಕೈಚೀಲದಲ್ಲಿ ತೂರಿಸಿ, ಬೆಳಿಗ್ಗೆ ಬುಟ್ಟಿಯಲ್ಲಿಯೇ ಮುಚ್ಚಿಟ್ಟ  ನಾಲ್ಕೈದು ತಿಂಗಳ ಕೋಳಿಮರಿಯನ್ನು  ಹಿಡಿದು ಕಾಲು ಕಟ್ಟಿ ಬಾಳೆ ಎಲೆ ಇಟ್ಟ ಚೀಲದಲ್ಲೇ ತುರುಕಿಕೊಂಡು, ಉದ್ದ ದಂಟಿನ ಕೊಡೆಯನ್ನು ಹಿಡಿದು ಹೆರಬೈಲ ದೇವರ ಮನೆಯತ್ತ ಹೊರಡಲು ಅಣಿಯಾದ. ಅವನು ಮನೆಯ ಮುಂದಿನ ದಣಪೆಯ ಹತ್ತಿರ ಹತ್ತಿರ ನಡೆದಿರಬಹುದು, ಆಗ ಅವನ ಮಗ "ಆಪ್ಪಾ, ನಾನೂ ಬತ್ತೀ" ಎಂದು ಅಳುತ್ತಾ ಅವನ ಬೆನ್ನು ಹತ್ತಿದ.

"ನಿಂಗೇನ್ ತಾಲಿ ಕಿಟ್ಟಿದೆ, ಸುಮ್ಗೇ ಮನಿಲೆ ಕುತ್ಕಾ, ಮೊಳೆ ಹುಯ್ತೇ ಇರುದ್ ಕಾಣುಲಾ", ಎಂದು ಹಿಂದೆ ಮಳೆಯಲ್ಲೇ ನೆನೆಯುತ್ತಾ ಬಂದ ಮಗನನ್ನು ಗದರಿಸಿ ಮನೆಯೊಳಗೆ ಕಳಿಸಲು ಪ್ರಯತ್ನಿಸಿದ.

"ಇಲ್ಲಾ, ನಾನು ಬತ್ತೀ" ಎಂದು ಮಗ ಹಠ ಹಿಡಿದ. ಮಗನ ಹಠಕ್ಕೆ ಮಣಿದ ರಾಮ ಮಗನನ್ನು ಕರೆದುಕೊಂಡು ಹೆರಬೈಲ ದೇವರ ಮನೆಯ ಕಡೆ ಹೊರಟ.

ಅದಾಗಲೇ ಊರಿನ ಜನರೆಲ್ಲಾ ಅವರವರ ಹರಕಗೆ ತಕ್ಕಂತೆ, ಕೋಳಿ, ಕುರಿ ಹಾಗೂ ದೇವರ ನೈವೇದ್ಯಕ್ಕೆ ಪಂಚಕಜ್ಜಾಯ ಹೀಗೆ ಹಿಡಿದು ದೇವರ ಮನೆಯ ಕಡೆಗೆ ಹೊರಟು ನಡೆದಿದ್ದರು. ಇಂದು ಅಲ್ಲಿಗೆ ಹೊರಡುತ್ತಿರುವವರ ಬಾಯಲೆಲ್ಲಾ ಎಡೆಬಿಡದೇ ಸುರುಯುತ್ತಿರುವ ಮಳೆಯದೇ ಮಾತು.

"ಏನ್ ರಾಮಾ, ಮೊಳೆ ಸಾಕಾ? ಬೇಕಾ?" ಎಂದು ಹಿಂದಿನಿಂದ ಬರುತಿದ್ದ ಸುಬ್ರಾಯ ಕೇಳಿದ.

"ಮೊಳೆ ಏಗ್ ಸದ್ಯಕ್ಕೆ ಸಾಕಾಗತಾ ಮಾರಾಯಾ, ಹಿಂಗೆ ರಾತ್ರಿ ಪೂರ್ತಿ ಬೀಳ್ತೇ ಇದ್ರೆ, ಗಾದ್ದಿಯವೆಲ್ಲಾ ಹೋದಂಗೇ"

"ಹ, ನೀ ಹೇಳುದು ಖರೇನೇಯಾ. ನಿಮ್ಮ ಗಾದ್ದಿಯವೆಲ್ಲಾ ಹೆಂಗಾಗವ?"

"ಗಾದ್ದಿಯವ ಈ ಸಲಾ ಸ್ವಲ್ಪೆ ಅಡ್ಡಿಲ್ಲಾ, ಹೊಡಿಗೆ ಬಂದವ, ಏಗೆ ದಿವ್ಸಕೆ ಉಂದ ಮೊಳೆ ಬಂದ್ರೆ ಸಾಕ, ನಿನ್ನ ಗಾದ್ದಿಯವ ಹೆಂಗಾಗವ?"

"ನಮ್ದ್ ಹಳ್ಳದ್ ಬದಿಗೆ ಇದ್ದದ್ ಈ ಸಲಾ ಹಳ್ಳಾ ಮರ್ದೆಗೆ ಮಣ್ಣೆಲ್ಲಾ ಕುಚ್ಕಂಡ್ ಹೋಗೆ ಸ್ವಲ್ಪ ಪಡಪೂಸ್ ಆಗವ್ ಬಿಟ್ರೆ ಉಳ್ದ ಗದ್ದಿಯವ ಅಡ್ಡಿಲ್ಲಾ"

ಹೀಗೆ ಮಾತನಾಡುತ್ತಾ ಹೋದವರಿಗೆ ಹೆರಬೈಲ್ ದೇವರ ಗುಡಿಯವರೆಗೆ ಬಂದು ತಲುಪಿದ್ದೇ ಗೊತ್ತಾಗಲಿಲ್ಲ. ದೇವರ ಗುಡಿ ತಲುಪಿದಾಗ ಆಗಲೇ ಹಲವಾರು ಜನ ಬಂದು ಸೇರಿದ್ದರು. ರಾಮ ಮತ್ತು ಸುಬ್ರಾಯ ಒಂದು ಮತ್ತಗಿನ ಜಾಗವನ್ನು ನೋಡಿ, ಹಾಗೆ ನೆಲಕ್ಕೆ ಕುಳಿತರೆ ಮಣ್ಣಾಗುತ್ತೆ ಎಂದು ಕೊಡೆ ಹಿಡಿದುಕೊಂಡು ತುದಿಗಾಲಲ್ಲೇ ಕುಳಿತರು. ಕುಳಿತ ಸ್ವಲ್ಪ ಹೊತ್ತಿನಲ್ಲಿಯೇ ದೇವರ ಪೂಜೆ ಪ್ರಾರಂಭವಾಯಿತು. ಎಲ್ಲರು ದೇವರ ಪೂಜೆ ಮುಗಿದೊಡನೆ ಪಂಚಕಜ್ಜಾಯದ ನೈವೇದ್ಯ ಮಾಡಿಸಿಕೊಂಡು ಬಂದು ಅಲ್ಲಿ ಕುಳಿತವರಿಗೆಲ್ಲಾ ಹಂಚಲು ಪ್ರಾರಂಭಿಸಿದರು. ಮಕ್ಕಳೆಲ್ಲಾ ಮಳೆಯಲ್ಲಿಯೇ ಓಡಾಡಿ ಪಂಚಕಜ್ಜಾಯ ತಿನ್ನಲು ಪಂಚಕಜ್ಜಾಯ ಹಚ್ಚುವಲ್ಲಿಗೆ ಓಡಾಡತೊಡಗಿದರು. ಹಾಗೆ ಓಡಾಡುವ ಆ ಮಕ್ಕಳನ್ನು ನೋಡಿದ ರಾಮನ ಮಗನಿಗೂ ಪಂಚಕಜ್ಜಾಯದ ಆಸೆಯಾಗಿ, "ಆಪ್ಪಾ, ನಂಗೆ ಪಾಂಚ್ಕಾಯ್ ಬೇಕ್, ಹೋಗ್ಲೆ ಅಲ್ಲೆ?" ಅಂದಾ.

"ಅಲ್ಲೆಂತಕೆ ಈ ಮಳೀಲೆ, ಇಲ್ಲೇ ಹಚ್ಚುಕೆ ಬತ್ತರ್. ಸುಮ್ನೆ ಕುತ್ಕಾ ಇಲ್ಲೆ" ಎಂದು ಗದರಿದ ರಾಮಾ.

ಸುಬ್ರಾಯ ಅದನ್ನು ನೋಡಿ "ಯಾಕ್ ಆಂವ್ಗೆ ಹಿದ್ರಸ್ತಿ, ನಿಲ್ಲ್ ಅಪು ಆಣ್ಣಾ ಬೆಗೆ ದೆವ್ರಿಗೆ ಪಂಚ್ಕಾಯ ಮಾಡ್ಸಕಂಡೆ ಬತ್ತಿ, ನಿಲ್ಲ ಹಾಂ. ಇಲ್ಲೇ ತಿನ್ನಕ" ಎಂದು ಹೇಳಿ ದೇವರ ಗುಡಿಯ ಬಳಿ ಹೊರಟ.

ಸುಬ್ರಾಯ ಪಂಚಕಜ್ಜಾಯದ ನೈವೇದ್ಯ ದೇವರಿಗೆ ಒಪ್ಪಿಸಿ ಬರುವ ಹೊತ್ತಿಗಾಗಲೇ ರಾಮನ ಮಗ ಅಲ್ಲಿಗೆ ಪ್ರಸಾದ ಹಂಚಲು ಬಂದ ಮೂರ್ನಾಲ್ಕು ಜನರಿಂದ ಪ್ರಸಾದವನ್ನು ಕೇಳಿ ಪಡೆದು ತಿಂದು ಮುಗಿಸಿದ್ದರೂ, ಸುಬ್ರಾಯ ಕೊಟ್ಟ ಪ್ರಸಾದವನ್ನು ಬೇಡ ಎಂದು ಹೇಳದೇ ತೆಗೆದುಕೊಂಡ.

"ಪ್ರಸಾದ ಎಲ್ಲಾ ಮುಗ್ದೆ, ಏಗೆ ಕುರಿ ಕಡಿಯುಕೆ ಸುರು ಮಾಡರ, ನೀ ಹೋಗೆ ಕೋಳಿ ಕುಟ್ಟೆ ಬಾ" ಎಂದು ಹೇಳುತ್ತಾ ಪಂಚಕಜ್ಜಾಯಿಯ ಡಬ್ಬವನ್ನು ಮುಚ್ಚಿ ಕುಳಿತುಕೊಂಡ.

"ಹೌದೆ, ಹಂಗಾರೆ ಕೋಳಿ ಕುಟ್ಟೇ ಬತ್ತಿ, ನೀ ಇಲ್ಲೇ ಇರ್" ಎಂದು ಮಗನಿಗೆ ಹೇಳಿ ತಾನು ದೇವರ ಗುಡಿಯ ಬಳಿ ಹೊರಟ. ಅಪ್ಪ ಹೇಳಿದ್ದಷ್ಟೇ ಬಂತು, ಮಗ ಕೇಳ ಬೇಕಲ್ಲ. "ನಾನು ಬತ್ತಿ" ಎನ್ನುತ್ತಾ ಅಪ್ಪನ ಬೆನ್ನು ಹಿಡಿದು ಹೊರಟ.

ರಾಮ ದೇವರ ಬಳಿ ಬಂದರೂ ಕುರಿ ಕಡಿಯುವುದಿನ್ನು ಮುಗಿದಿರಲಿಲ್ಲ. ಇನ್ನೂ ಐದಾರು ಕುರಿಗಳು ಬಾಕಿಯಿದ್ದವು. ಕುರಿ ಕಡಿದು ಮುಗಿದು ಕೋಳಿ ಕಡಿಯುವ ಹೊತ್ತಿಗಾಗಲೇ ಸಾಯಂಕಾಲ ಸರಿದು ರಾತ್ರಿಯ ಕತ್ತಲೆ ಮೆಲ್ಲಗೆ ಮುತ್ತಿಕೊಳ್ಳಲಾರಂಬಿಸಿತು.

ಕಳೆದ ವರ್ಷ ಇದೇ ಸಮಯದಲ್ಲಿ ಮಗನಿಗೆ ಚಳಿ ಜ್ವರ ಬಂದದ್ದು ಒಂದು ವಾರವಾದರೂ ಕಡಿಮೆಯಾಗದೇ ಇದ್ದಾಗ, ಆದಷ್ಟು ಬೇಗ ವಾಸಿಯಾದರೆ ಹೆರಬೈಲ ದೇವರಿಗೆ ಕೋಳಿ ಕೊಡುತ್ತೇನೆ ಎಂದು ಹರಕೆ ಹೊತ್ತು ಕೊಂಡಿದ್ದ ರಾಮ. ಹರಕೆಯ ಪ್ರಭಾವವೋ, ವೈದ್ಯರು ಕೊಟ್ಟ ಔಷಧಿಯ ಪ್ರಭಾವವೋ, ಅಂತೂ ಹರಕೆ ಹೊತ್ತ ಒಂದೆರಡು ದಿನದಲ್ಲೇ ಮಗನಿಗೆ ಬಂದ ಜ್ವರ ಕಡಿಮೆಯಾಯಿತು. ಹರಕೆಯಿಂದಲೇ ಜ್ವರ ಕಡಿಮೆಯಾಯಿತು ಎಂದುಕೊಂಡು ಮುಂದಿನ ವರ್ಷದ ಹಬ್ಬಕ್ಕೆ ಕೋಳಿ ಕೊಡಲೇ ಬೇಕೆಂದು ನಿರ್ಧರಿಸಿದ್ದ. ಹಾಗಾಗಿಯೇ ಈ ವರ್ಷಯಾರೋ ಈ ತಿಂಗಳ ೨೦ಕ್ಕೆ ಹೆರಬೈಲ್ ದೇವರ ಹಬ್ಬ ಎಂದಾಗ ಅಂಕೋಲೆಗೆ ಹೋಗಿ ಮೀನು ಪೇಟೆಯ ಪಕ್ಕದಲ್ಲೇ ಕೋಳಿ ಮಾರುವ ಲಕ್ಷ್ಮಿಯಿಂದ ೧೫೦ ರೂಪಾಯಿ ಕೊಟ್ಟು ನಾಲ್ಕೈದು ತಿಂಗಳ ಒಂದು ಕೋಳಿ ಮರಿಯನ್ನು ಕೊಂಡು ತಂದಿದ್ದ. ೨೫೦-೩೦೦ ರೂಪಾಯಿ ಕೊಟ್ಟು ದೊಡ್ಡ ಕೋಳಿಯನ್ನು ತಂದು ಕೊಡುವಷ್ಟು ಸ್ಥಿತಿವಂತನಾಗಿರಲಿಲ್ಲ ರಾಮ.

ತಾನು ತಂದ ಕೋಳಿಯನ್ನು, ಕೋಳಿ ಕೊಯ್ಯುವ ಬೀರನ ಕತ್ತಿಗೆ ಒಡ್ಡಿ, ಅದನ್ನು ಅಂದಿನ ರಾತ್ರಿಯ ಊಟಕ್ಕೆ ಅಲ್ಲಿಯೇ ಬಿಟ್ಟು, ಮಗನನ್ನು ಕರೆದುಕೊಂಡು ಸುಬ್ರಾಯನ ಬಳಿ ಬಂದು ಕುಳಿತ. ಮಳೆ ಆಗತಾನೇ ಸ್ವಲ್ಪ ಹೊಳುವಾಗಿತ್ತು.

ಇಬ್ಬರು ಊರ ಕಡೆಯ ಮಾತು, ಗದ್ದೆಯ ಮಾತು, ಹಬ್ಬ ಹರಿದಿನಗಳ ಮಾತು, ಕಳೆದ ಬಾರಿಯ ಹೆರಬೈಲ್ ಹಬ್ಬದ ಬಗ್ಗೆಯ ಮಾತು, ಹೀಗೆ ಅದು ಇದು ಮಾತನಾಡುವ ಹೊತ್ತಿಗೆ ಹಿಚಕಡ ಊರಿನ ಎಂಟುವರೆಗಿನ ಗಾಡಿ ಬಂದು ಅಂಕೋಲೆಯ ಕಡೆ ಹೊರಟು ಹೋಗಿತ್ತು. ಇಷ್ಟೊತ್ತು ಹೆದ್ದಾರಿಯಲ್ಲಿ ಓಡಾಡುವ ವಾಹನಗಳನ್ನು ನೋಡುತ್ತಾ ಮನಸ್ಸಲ್ಲೇ ಕಾಗುಣಿತ ಹಾಕುತ್ತಾ ಕುಳಿತಿದ್ದ ರಾಮನ ಮಗನಾಗಲೇ ನಿದ್ದೆಯಿಂದ ಕುಳಿತಲ್ಲಿಯೇ ತೂಕಡಿಸ ತೊಡಗಿದ. ಮಳೆ ಹೊಳುವಾಗಿದ್ದರಿಂದ ಮಗನಿಗೆ ತಾನು ಹೆಗಲಮೇಲೆಯೇ ಇಟ್ಟುಕೊಂಡು ಬಂದ ಚಿಕ್ಕ ಪಂಚೆಯನ್ನು ಹಾಸಿ ಅಲ್ಲಿಯೇ ಮಲಗಿಸಿ ಸುಬ್ರಾಯನೊಂದಿಗೆ ಮತ್ತೆ ಮಾತಿಗೆ ಇಳಿದ.

"ಈಸರಿ ಇಪ್ಪತ್ತೈದೋ, ಇಪ್ಪತ್ಯೋಳೋ ಕುರಿಯವ ಬಂದವ ಕಡಾ, ಹೊದ್ ವರ್ಷೆ ಹದಿನೆಂಟೋ ಹತ್ತೊಂಬತ್ತೋ ಏನೋ ಆಗತ್ ಅಂತೇ ಇವ್ರ."

"ಓಹ್! ಹೌದೆ, ಪಾಪಾ ಅಡ್ಗಿ ಮಾಡುವರಿಗೆ ಅಟ್ಟೆಲ್ಲಾ ಕುರಿ ಮಾಡೆ ಪುರೈಸುಕೆ ಬೇಕ"

"ಹ, ಅದೂ ಖರೇನೇ, ಆದ್ರೆ ಈ ಸಲಾ ಕುರಿ ಸುಲುಕೆ ಯಾರ್ನೋ ಕರ್ಸರ್ ಕಡಾ"

"ಹಂಗರೆ ಅಡ್ಡಿಲ್ಲಾ. ಅಲ್ನೋಡಾ! ಆಗೆ ೩೦೦-೪೦೦ ಜನಾ ಆಗುರ್ ಅನ್ಸತ್, ಏಗೆ ನೋಡಾ ೧೦೦೦ ಜನಾ ಮೆನಾಗುರ"

"ಹೌದಲಾ ಮಾರಾಯಾ! ಮೊಳೆ ಕಡ್ಮಿ ಆಯ್ತಲಾ ಜನಾ ಬರುಕೆ ಸುರು ಆಗರ. ಊಟದ್ ಟೈಮ್ ಬರುವರಿಗೆ ಮತ್ತೂ ೨೦೦-೩೦೦ ಜನನರೂ ಆಗುರ."

"ಹ ಜನಾ ಏನ್ ಕಡ್ಮಿ ಆಗುಲಾ"

ಹೀಗೆ ಮಾತುಕತೆಯಲ್ಲಿ ತೊಡಗಿರುವಾಗಲೇ ಕೆಳಗೆ ಅಡಿಗೆ ಮಾಡುತ್ತಿರುವರ್ಯಾರೋ ಲಾಟೀನು ಹಿಡಿದು ಮೇಲೆ ಬಂದು ಸುತ್ತಲೂ ನೋಡಿ ಮತ್ತೆ ಕೆಳಕ್ಕೆ ಹೋದರು.

"ಅಡ್ಗಿ ಆಯ್ತ ಮಡಿ, ಬಂದೆ ನೋಡ್ಕಂಡೆ ಹೋದ್ರ" ಅಂದ ರಾಮ.

"ಹ, ಹ ಹೊಂಡಾ ತಿಗಿ, ಹಂಗೆ ಮಾಗ್ನೂ ಏಳ್ಸ"

ಇಬ್ಬರು ಆಗಲೇ ದೇವರಿಗೆ ಒಡೆಸಿ ತಂದು ತಿಂದ ತೆಂಗಿನಕಾಯಿಯ ಚಿಪ್ಪಿನಿಂದ ನೆಲವನ್ನು ಅಗಿದು, ಅದರ ಮೇಲೆ ಬಾಳೆ ಎಲೆ ಹರಡಿ ಕುಳಿತರು. ರಾಮ ಮಲಗಿದ ಮಗನನ್ನು ಎಬ್ಬಿಸಿ ಕುಳಿಸಿದ. ಎಲೆ ಹಾಸಿಕೊಂಡು ಅರ್ಧ ಗಂಟೆ ಕಾದರೂ ಊಟ ಬಡಿಸುವವರು ಮೇಲೆ ಬರಲಿಲ್ಲ. ರಾಮನ ಮಗನ ಹೊಟ್ಟೆ ಹಸಿವಿನಿಂದ ಚುರುಗುಟ್ಟುತಿತ್ತು, "ಇನ್ನೂ ಇಟ್ಟುತ್ತ್ ಆಪ್ಪಾ" ಎಂದು ಅಪ್ಪನನ್ನು ಕೇಳಿದ.

"ನೋಡ್ವಾ ತಡಿ, ಅಡ್ಗಿ ಮಾಡೆ ಬಡ್ಸಬೇಡಾ, ಅದ್ಕೇ ನಿಂಗೆ ಬರ್ಬೇಡಾ ಅಂದದೆ, ಮನೀಲೆ ಇದ್ರೆ ಇಟ್ಟೋತ್ತಿಗೆ ಉಂಡ್ಕಂಡೆ ಮಲ್ಗುಲಾ ಆಗದೆ?" ಎಂದ.

ಮಗ ಮರು ಮಾತನಾಡದೇ ಕುಳಿತ. ಸ್ವಲ್ಪ ಹೊತ್ತಿನಲ್ಲಿಯೇ ಲಾಟಿನು ಹಿಡಿದವನೊಬ್ಬ ಕೆಳಗಿನಿಂದ ಮೇಲೇರಿ ಬಂದ. ಜನ ಮತ್ತೆ ಎಲೆಯನ್ನು ಸರಿಪಡಿಸಿಕೊಂಡು ಕುಳಿತರು. ಆದರೆ ಈಗ ಮೊದಲಿನಂತೆ ಲಾಟೀನು ಹಿಡಿದವನೊಬ್ಬನೇ ಬರದೇ, ಅವನ ಹಿಂದೆ ಅನ್ನ, ಬೇಯಿಸಿದ ಮಾಂಸ, ಹಾಗೂ ಸಾರು ಹಿಡಿದು ಎರಡು ಮೂರು ಜನ ಮೇಲೇರಿದರು. ಇಷ್ಟೊತ್ತು, ನಿಂತವರೆಲ್ಲಾ ಸಿಕ್ಕ ಸಿಕ್ಕಲ್ಲಿಯೇ ಕುಳಿತುಕೊಂಡರು. ಬಡಿಸುವವರು ಒಂದು ಕಡೆಯಿಂದ ಬಡಿಸುತ್ತಾ ನಡೆದರೆ ಇನ್ನೊಂದು ಕಡೆ, ಈ ಕಡೆ ಬನ್ನಿ ಎಂದು ಜನ ಕರೆಯತೊಡಗಿದರು. ಈ ಕಡೆ ಬಂದರೆ ಆ ಕಡೆಯವರು ನಮ್ಮ ಕಡೆ ಬನ್ನಿ ಎಂದು ಕರೆದರು. ಹಾಗೆ ಕರೆದವರನ್ನೆಲ್ಲಾ ಲಾಟೀನು ಹಿಡಿದವ ಸಮಧಾನ ಪಡಿಸುತ್ತಾ, "ಬೇಜಾರ ಮಾಡ್ಬೇಡಿ ಎಲ್ಲಾ ಕಡೀಗೂ ಬತ್ತವ" ಎಂದು ಕರೆದವರೆಲ್ಲರಿಗೂ ಅಶ್ವಾಸನೆ ಕೊಡುತ್ತಾ ಸಾಗೀದ.

ರಾಮ, ಸುಬ್ರಾಯ ಇರುವ ಕಡೆ ಬಡಿಸುವವರು ಬಂದು ತಲುಪಲು ಅರ್ಧ ಗಂಟೆಯ ಮೇಲೆಯೇ ತಗುಲಿತ್ತು. ಬೇಯಿಸಿದ ಬಿಸಿ ಬಿಸಿ ಕುಸಲಕ್ಕಿಯ ಅನ್ನದ ಮೇಲೆ, ಬೇಯಿಸಿದ ಮಾಂಸದ ಜೊತೆಗೆ, ಗಮಗಿಡುವ ತಿಳಿಸಾರು ಎಲೆಗೆ ಬಿದ್ದೊಡನೆ ಎಲೆಯ ಮುಂದಿದ್ದವರ ಮಾತು ನಿಂತು, ಕೈ ಬಾಯಿಯ ಕೆಲಸ ಪ್ರಾರಂಭವಾಯಿತು. ರಾಮನ ಮಗ ಒಂದೆರೆಡು ಮಾಂಸದ ತುಂಡು ತಿಂದು, ನಾಲ್ಕೈದು ತುತ್ತು ತಿಂದು ಸಾಕು ಎಂದು ಅಷ್ಟಕ್ಕೆ ತನ್ನ ಊಟವನ್ನು ಮುಗಿಸಿದ, ರಾಮ ತನ್ನ ಎಲೆಯಲ್ಲಿದ್ದುದ್ದನ್ನೆಲ್ಲ ಬರೀದು ಮಾಡಿ ಮಗ ಬಿಟ್ಟ ಎಲೆಯನ್ನು ಖಾಲಿ ಮಾಡಿದರೂ ಹೊಟ್ಟೆ ತುಂಬಿದಂತೆ ಎನಿಸಲಿಲ್ಲ. ಮತ್ತೆ ಇನ್ನೊಂದು ಸುತ್ತು ಬಡಿಸಲು ಬರುವುದನ್ನು ಕಾಯುವುದರಿಂದ ಪ್ರಯೋಜನವಿಲ್ಲವೆಂದು, ಬೇರೆ ಉಪಾಯವಿಲ್ಲದೇ ಸುಮ್ಮನೇ ಎಲೆ ಬಿಟ್ಟು ಏಳಬೇಕಾಯಿತು. ಊಟ ಮುಗಿಸಿ ಅಲ್ಲಿಯೇ ನಿಂತ ನೀರಿನಲ್ಲಿ ಕೈ ಅಷ್ಟೇ ತೊಳೆದು ಮಗನಿಗೂ ಕೈ ಅಷ್ಟೇ ತೊಳಿಸಿ, ಸುಬ್ರಾಯನೊಂದಿಗೆ ಮನೆಯ ಕಡೆ ದಾರಿ ಹಿಡಿದ.

ಊರಿನ ಹುಲಿ ದೇವರ ಮನೆಯ ಸಮೀಪ ಬಂದೊಡನೆ ನೆನಪಾಯ್ತು. ಹೆರಬೈಲ್ ದೇವರ ಮನೆಯಿಂದ ಏನನ್ನೂ ತೆಗೆದುಕೊಂಡು ಮನೆಗೆ ಹೋಗಬಾರದು, ಹಾಗೇನಾದರೂ ತೆಗೆದುಕೊಂಡು ಬಂದಿದ್ದರೆ ಅದನ್ನೂ ಹುಲಿದೇವರ ಮನೆಗಿಂತ ಮೊದಲೇ ತೆಗೆದಿಟ್ಟು ಹೊರಡಬೇಕು, ಹಾಗೇನಾದರೂ ತೆಗೆದುಕೊಂಡು ಹೋದರೆ ಮನೆಗೆ ಹುಲಿ ಬರುತ್ತೆ ಎಂದು ಹಿಂದಿನಿಂದಲೂ, ಹಿಂದಿನವರಿಂದಲೂ ನೆಡೆದುಕೊಂಡು, ಆಚರಿಸಿಕೊಂಡು ಬಂದ ವಾಡಿಕೆ. ಹಾಗೆ ನೆನಪಾದೊಡನೆಯೇ ಎಲ್ಲಾದರೂ ದೇವರ ಹೂವಿನ ಎಸಳಿದೆಯೇ ಎಂದು ತಲೆಯ ಕೂದಲೆನ್ನೆಲ್ಲಾ ಕೆದರಿ ನೋಡಿದ. ಹಣೆಯ ಕುಂಕುಮವೆನ್ನೆಲ್ಲಾ ಅಳಿಸಿದ. ಕೈ ಚೀಲವನ್ನು ಕೊಡವಿ ಮತ್ತೆ ಮಡಿಚಿಟ್ಟು ಕೊಂಡ. ಮಗನ ಚಡ್ಡಿಯ ಕಿಸೆ, ಅಂಗಿಯ ಕಿಸೆ, ತಲೆ, ಕಿವಿ, ಹಣೆ ಎಲ್ಲವನ್ನು ಪರೀಕ್ಷಿಸಿ, ಸಂಸಯ ಬಂದದ್ದನೆಲ್ಲ ಕತ್ತಲೆಯಲ್ಲಿಯೇ ತೆಗೆದು ಎಸೆದ.

ಸುಬ್ರಾಯ, "ಉಳ್ದ್ ಪಂಚ್ಕಾಯಾ, ಚೌತಿಗೆ ಊರಿಗೆ ಮಕ್ಕಳ್ ಬಂದಗರೂ ತಿನ್ನುರ್, ಇಲ್ಲೇ ಗೇರ್ ಬ್ಯಾಣದಲ್ಲೆ ಇಟ್ಟ್ ಬತ್ತಿ, ನಾಳಗೆ ಗಾದ್ದಿ ಬದಿಗೆ ಬಂದಗೆ ಸಿಗ್ವಾ ಆಗಾ" ಎಂದು ಹೇಳಿ ರಾಮನ ಉತ್ತರಕ್ಕೂ ಕಾಯದೇ ಅವನ ಗೇರು ಹಕ್ಕಲಿನತ್ತ ಹೋದ. ಮಗನ ಮೈಮೇಲೆ, ತನ್ನ ಮೈಮೇಲೆ ಇನ್ನೇನು ಉಳಿದಿಲ್ಲ ಎನ್ನುವುದು ನಿಶ್ಚಿತವಾದೊಡನೆ, ರಾಮ ಮಗನೊಂದಿಗೆ ಮನೆಯ ದಾರಿ ಹಿಡಿದ.

-ಮಂಜು ಹಿಚ್ಕಡ್

No comments:

Post a Comment