Monday, December 8, 2014

ಅದೃಷ್ಟ ಕೈಕೊಟ್ಟಾಗ!

[೩೦-ನವೆಂಬರ್-೨೦೧೪ ರಂದು ಅವಧಿಯಲ್ಲಿ ಪ್ರಕಟವಾದ ನನ್ನ ಕತೆ ’ಅದೃಷ್ಟ ಕೈಕೊಟ್ಟಾಗ’http://avadhimag.com/2014/11/30/%E0%B2%AD%E0%B2%BE%E0%B2%A8%E0%B3%81%E0%B2%B5%E0%B2%BE%E0%B2%B0%E0%B2%A6-%E0%B2%B8%E0%B2%A3%E0%B3%8D%E0%B2%A3%E0%B2%95%E0%B2%A5%E0%B3%86/]

ಬೆಳಿಗ್ಗೆ ಎಂಟಾಗುತ್ತ ಬಂದರೂ ಇನ್ನೂ ಮಲಗಿಯೇ ಇದ್ದ ಶ್ಯಾಮ್. ಅಷ್ಟೊತ್ತಾದರೂ ಮಲಗಿಯೇ ಇದ್ದಾನೆ ಅಂದಾಕ್ಷಣ ಅವನೇನು ಕೆಲಸವಿಲ್ಲದ ನಿರೂದ್ಯೋಗಿಯೇನಲ್ಲ. ಅವನು ಕೂಡ ಒಳ್ಳೆಯ ಕಂಪನಿಯಲ್ಲಿ ಒಳ್ಳೆಯ ಸಂಬಳದಲ್ಲಿ ಇದ್ದಾನೆ. ಹೇಗಿದ್ದರೂ ಒಂಬತ್ತು ಗಂಟೆಯಿಂದ ತಾನೇ ಆಪೀಸು ಪ್ರಾರಂಭವಾಗುವುದು, ಎಂಟು ಗಂಟೆಗೆ ಎದ್ದು, ಮುಖ ಮಜ್ಜನ ಸ್ನಾನ ಇತ್ಯಾದಿ ಕೆಲಸಗಳನ್ನು ಮುಗಿಸಿ ರೆಡಿಯಾಗಲು ಅರ್ಧ ಗಂಟೆಯಿದ್ದರೆ ಸಾಕು. ಐದು ಕಿಲೋ ಮೀಟರ್ ದೂರವಿರುವ ಆಪೀಸನ್ನು ಬೈಕಲ್ಲಿ ತಲುಪಲು ಅಬ್ಬಾಬ್ಬಾ ಎಂದರೂ ಅರ್ಧ ಗಂಟೆ ಸಾಕು ಎನ್ನುವುದು ಅವನ ಅಭಿಪ್ರಾಯ ಹಾಗೂ ಅವನ ಅನುಭವವೂ ಕೂಡ. ಹಾಗಾಗಿ ಅವನೆಂದು ಎಂಟು ಗಂಟೆಯ ಒಳಗೆ ಎದ್ದವನೇ ಅಲ್ಲ. ಹಾಗೆ ಗಾಢವಾದ ನಿದ್ದೆಯಲ್ಲಿದ್ದವನನ್ನು ಸೀಮಾ ಮಾಡಿದ ಕರೆ ಅವನನ್ನು ನಿದ್ದೆಯಿಂದ ಎಚ್ಚರಿಸಿತು. ಸೀಮಾ ಕಳೆದ ಎರಡು ಮೂರು ವರ್ಷಗಳಿಂದ ಅವನು ಪ್ರೀತಿಸುತಿದ್ದ ಹುಡುಗಿ. ನಿನ್ನೆ ರಾತ್ರಿ ಅವಳು ಕರೆ ಮಾಡಿದಾಗ ಶ್ಯಾಮನನ್ನು ಪ್ರೀತಿಸುವ ವಿಷಯವನ್ನು ಅವಳ ಮನೆಗೆ ತಿಳಿಸುವ ವಿಚಾರವಾಗಿ ಹೇಳಿದ್ದಳು. ಈಗ ಅದರ ಬಗ್ಗೆ ಮಾತನಾಡಲು ಮತ್ತೆ ಕರೆ ಮಾಡಿದ್ದಳು.

ಮೊಬೈಲ್ ಮೂರು, ನಾಲ್ಕು ಬಾರಿ ರಿಂಗ್ ಆದಮೇಲೆ ಎಚ್ಚರಗೊಂಡ ಶ್ಯಾಮ್, ಹಾಗೆ ಮುಸುಕು ಹೊದ್ದೇ ಆ ಮೊಬೈಲನ ಕರೆಯನ್ನು ಸ್ವೀಕರಿಸಿ ಕಿವಿಗೆ ಇಟ್ಟುಕೊಂಡು "ಹಲೋ" ಎಂದ.

"ಏನೋ ಗೂಬೆ, ಎಂಟಾಯ್ತಲ್ಲೋ ಆಪೀಸಿಗೆ ಹೋಗಲ್ವೇನೋ?"

ಅವಳು ಅವನ ಹೆಸರಿಗಿಂತ ಗೂಬೆ ಅಂದು ಕರೆದಿದ್ದೇ ಹೆಚ್ಚು. ಮೊದ ಮೊದಲು ಸ್ವಲ್ಪ ಬೇಸರವೆನಿಸಿದರೂ ಈಗ ಅದು ಅಭ್ಯಾಸವಾದದ್ದರಿಂದ ಹಾಗೇನು ಅನ್ನಿಸುತ್ತಿರಲಿಲ್ಲ ಅವನಿಗೆ.

"ಹಾಂ, ಹೋಗ್ಬೇಕೆ, ಏನು ಇಷ್ಟು ಬೇಗ ಕಾಲ್ ಮಾಡಿದ್ದೀಯಾ" ಎಂದು ಮುಸುಕು ಹೊದ್ದೇ ಕೇಳಿದ.

"ಇಷ್ಟು ಬೇಗನಾ, ಎಂಟು ಗಂಟೆ ಆಯ್ತೋ, ನಿನ್ನ ಹತ್ರ ಒಂದು ವಿಷಯ ಹೇಳೋಣ ಅಂತ ಕಾಲ್ ಮಾಡಿದ್ದೆ"

"ಹೋ! ಎಂಟು ಗಂಟೆ ಆಯ್ತಾ? ಬೇಗ ಹೇಳು"

"ನಿನ್ನೆ ನಿನ್ನ ವಿಷಯವನ್ನು ಮನೆಯಲ್ಲಿ ಹೇಳಿದ್ದೇನೆ, ಮನೆಯಲ್ಲಿ ನೋಡೋಣ ಆತುರ ಬೇಡ ಅಂತಾ ಹೇಳಿದ್ದಾರೆ. ಹಾಗೆ ನೋಡಿದರೆ ಅವರಿಗೂ ಓ.ಕೆ ಎಂದು ಅನಿಸುತ್ತಿದೆ. ಇನ್ನೂ ಮುಂದೆ ಅವರು ನಿನ್ನನ್ನು ಗಮನಿಸಲು ಪ್ರಾರಂಭಿಸಬಹುದು, ಸ್ವಲ್ಪ ಹುಷಾರಾಗಿರು"

"ಹೋ, ಗುಡ್, ಒಳ್ಳೆ ವಿಷಯ, ಆಮೇಲೆ ಮಾತಾಡೋಣ, ಈಗ ಎದ್ದು ರೆಡಿಯಾಗ್ತಿನಿ" ಎಂದು ಹೇಳಿ ಹಾಸಿಗೆಯಿಂದ ಎದ್ದ. ಅವನ ರೂಮಿನಲ್ಲಿದ್ದ ಅವನ ಸಹಪಾಠಿಗಳೆಲ್ಲಾ ಆಗಲೇ ಆಪೀಸಿಗೆ ಹೊರಟು ಹೋಗಿದ್ದರು. ಎದ್ದು ಆಪೀಸಿಗೆ ರೆಡಿಯಾಗುವ ಹೊತ್ತಿಗೆ ೮:೩೦ ಆಗಿ ಹೋಗಿತ್ತು. ೮:೩೦ ಆಗಿ ಹೋದರೆ ಏನಾಯ್ತು, ಹೇಗೂ ಬೈಕ್ ಇದೆಯೆಲ್ಲ , ಇವತ್ತು ಸ್ವಲ್ಪ ಜೋರಾಗಿ ಹೋದರಾಯಿತು ಅಷ್ಟೇ ಎಂದು ಕೊಂಡು ತನ್ನಷ್ಟಕ್ಕೆ ತಾನೇ ಒಂದು ಹಿಂದಿ ಹಾಡನ್ನು ಗೊಣಗುತ್ತಾ ನಾಲ್ಕನೇ ಮಹಡಿಯಲ್ಲಿರುವ ತನ್ನ ರೂಮಿನಿಂದ ಕೆಳಗಿಳಿದು ಬಂದ.

ಕೆಳಗೆ ಬಂದು ಬೈಕ್ ಸ್ಟಾರ್ಟ ಮಾಡಲು ನೋಡಿದ, ಏನೇ ಪ್ರಯತ್ನ ಪಟ್ಟರೂ ಬೈಕ್ ಸ್ಟಾರ್ಟ ಆಗಲಿಲ್ಲ. ಪೆಟ್ರೋಲ್ ಚೆಕ್ ಮಾಡಿದ, ನಿನ್ನೆ ಸಾಯಂಕಾಲ ಸೀಮಾಳೊಂದಿಗೆ ಸೆಂಟ್ರಲ್ ಮಾಲಗೆ ಹೋಗುವಾಗ ತಾನೇ ಟ್ಯಾಂಕ್ ಪುಲ್ ಮಾಡಿದ್ದ ಪೆಟ್ರೋಲ್ ಬಹುತೇಕ ಹಾಗೇ ಇತ್ತು. ಬಹುಷಃ ಇಂಜಿನ್ ಅಲ್ಲಿ ಏನಾದರೂ ಸಮಸ್ಯೆಯಾಗಿದೆಯೇನೋ? ಹೇಗೂ ಇರ್ಫಾನನ ಗ್ಯಾರೇಜ್ ಸಮೀಪದಲ್ಲೇ ಇದೆಯಲ್ಲ ಎಂದು ಇರ್ಫಾನನ ಗ್ಯಾರೇಜ್ ಕಡೆಗೆ ತಳ್ಳಿಕೊಂಡು ಹೊರಟ. ಇರ್ಫಾನ್ ಗಾಡಿಯನ್ನು ನೋಡಿ "ಶ್ಯಾಮ್ ಬಾಯ್, ಗಾಡಿ ಇಂಜಿನ್ ಎಲ್ಲಾ ಬಿಚ್ಚಿ ನೋಡಬೇಕು, ಗಾಡಿ ಸಾಯಂಕಾಲ ಕೊಡ್ತಿನಿ" ಅಂದಾಗ ಬೇರೇ ಮಾರ್ಗವಿಲ್ಲದೇ ಬೈಕನ್ನು ಅಲ್ಲಿಯೇ ಬಿಟ್ಟು ಆಟೋನಾದರೂ ಮಾಡಿಕೊಂಡು ಹೋಗೋಣವೆಂದು ಮೇನ್ ರೋಡ್ ಹತ್ತಿರ ಬಂದ.

ಮುಖ್ಯ ರಸ್ಥೆಗೆ ಬರುತ್ತಿದ್ದಂತೆ ಶುಕ್ರವಾರ ಅವನ ಮ್ಯಾನೇಜರ್ ಸುಂದರ್ "ಸೋಮವಾರ ಆಪೀಸಿಗೆ ಕಸ್ಟಮರ್ ಬರ್ತಾ ಇದ್ದಾರೆ. ಅವರೊಂದಿಗೆ ಮೀಟಿಂಗ್ ಇದೆ. ನನಗೆ ನಿಮ್ಮ ಸಹಾಯ ಬೇಕಾಗಬಹುದು ಸ್ವಲ್ಪ ಬೇಗನೇ ಬನ್ನಿ" ಎಂದದ್ದು ಶುಕ್ರವಾರ ಆಪೀಸು ಬಿಟ್ಟ ಮೇಲೆ ಮರೆತು ಹೋಗಿದ್ದು ಈಗ ನೆನಪಾಯಿತು. "ಒಹ್, ಶಿಟ್" ಎಂದು ತನ್ನಷ್ಟಕ್ಕೆ ತಾನು ಅಸಹ್ಯ ಪಟ್ಟುಕೊಂಡು ತನ್ನ ಕೈ ಗಡಿಯಾರವನ್ನು ನೋಡಿದ. ಒಂಬತ್ತು ಗಂಟೆಗೆ ಹತ್ತು ನಿಮಿಷ ಬಾಕಿ ಇದೆ, ಬೇಗ ಆಟೋ ಸಿಕ್ಕರೆ ಸಾಕೆಂದುಕೊಂಡ. ರಸ್ತೆಯಲ್ಲಿ ಸುಮ್ಮನೆ ನಿಂತು ಯಾರಿಗಾಗಿಯೋ ಕಾಯುತ್ತಾ ನಿಂತಿರುವಾಗ, "ಎಲ್ಲಿಗೆ ಸಾರ್" ಎಂದು ಬಂದು ಹೋಗುವ ಆಟೋಗಳು ಇಂದು ಮಾತ್ರ ಒಬ್ಬರು ನಿಲ್ಲಿಸಲಿಲ್ಲ. ಅಂತೂ ಒಬ್ಬ ಆಟೋದವನು ನಿಲ್ಲಿಸಿ "ಸರ್, ೧೦೦ ರೂಪಾಯಿ ಕೊಟ್ಟರೆ ಬರ್ತಿನಿ" ಎಂದು ಡಿಮಾಂಡ್ ಮಾಡಿದಾಗ ಬೇರೆ ದಾರಿಯಿಲ್ಲದೇ ಓಕೆ ಎಂದು ಅದರಲ್ಲಿ ಹೊರಟ.

ಸಮಯ ಆಗಲೇ ಒಂಬತ್ತು ಆಗುತ್ತಾ ಬಂದಿತ್ತು, ಜೇಪಿ ನಗರದ ನಾಲ್ಕನೇ ಹಂತದಿಂದ ಬನ್ನೇರುಘಟ್ಟ ರಸ್ಥೆಯಲ್ಲಿರುವ ಐ.ಬಿ.ಎಮ್ ಆಪೀಸು ಅಷ್ಟೇನು ದೂರವಲ್ಲದಿದ್ದರೂ, ಬನ್ನೇರುಘಟ್ಟ ರಸ್ತೆಯಲ್ಲಿನ ಟ್ರಾಪಿಕನಿಂದಾಗಿ ಇನ್ನಷ್ಟು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ಬೈಕನಲ್ಲಾಗಿದ್ದರೆ ಒಳ ರಸ್ತೆಯಲ್ಲಿ ಹೇಗೋ ಒಂದೆರಡು ಸಿಗ್ನಲ್ ತಪ್ಪಿಸಿಕೊಂಡು ಹೋಗಬಹುದು. ಆದರೆ ಆಟೋದಲ್ಲಿ ಅದು ಹೇಗೆ ಸಾದ್ಯ. ಅಪರೂಪಕ್ಕೆ ನಿನ್ನೆ ರಾತ್ರಿ ಸುರಿದ ಮಳೆಗೆ ರಸ್ತೆಯಿನ್ನೂ ಒದ್ದೆಯಾಗಿಯೇ ಇತ್ತು. ಕೆಲವು ತಗ್ಗಿನ ಸ್ಥಳಗಳಲ್ಲಿ ನೀರು ನಿಂತೇ ಇತ್ತು. ಶ್ಯಾಮನ ಮನಸ್ಸು ಪೂರ್ತಿ ಇಂದಿನ ಮೀಟಿಂಗ್ ಆವರಿಸಿ ಕೊಂಡಿತ್ತು. ಈಗಾಗಲೇ ಮೀಟಿಂಗ್ ಪ್ರಾರಂಭಗೊಂಡಿರುತ್ತದೆ. ಸುಂದರ್ ಅದೇನು ಅಂದುಕೊಂಡಿರುತ್ತಾನೋ. ಇವತು ಅವನಿಂದ ಅದೇನೇನು ಬೈಸಿಕೊಳ್ಳಬೇಕೋ. ಯಾವತ್ತು ಇಲ್ಲದ್ದು ಇವತ್ತೇ ಒಕ್ಕರಿಸಿಕೊಂಡು ಬರಬೇಕೇ ಎಂದು ಯೋಚಿಸುತ್ತಾ ಕುಳಿತವನಿಗೆ ಯಾರೋ ಮೈ ಮೇಲೆ ನೀರು ಸೋಕಿದಂತಾಗಿ ಎಚ್ಚರಗೊಂಡ. ಮೈ ನೋಡಿದರೆ ಎಡಗಡೆಯ ದೇಹದ ಭಾಗ ಸಂಪೂರ್ಣ ನೀರಿನಿಂದ ಒದ್ದೆಯಾಗಿತ್ತು. ಶರ್ಟನ ತೋಳನ್ನು ಎತ್ತಿ ನೋಡಿದ ಶರ್ಟ ಅರಶಿಣ ಬಣ್ಣಕ್ಕೆ ತಿರುಗಿತ್ತು, ಏನೋ ಒಂಥರ ವಾಸನೆ ಕೂಡ ಬರುತ್ತಿದ್ದ ಹಾಗಿತ್ತು. ಏನಂತ ತಿರುಗಿ ನೋಡೋಣವೆಂದರೆ ಆಟೋ ಆ ಸ್ಥಳವನ್ನು ಬಿಟ್ಟು ಮುಂದಿರುವ ಸಿಗ್ನಲ್ ಹತ್ತೀರ ಬಂದು ನಿಂತಿತ್ತು.

"ಏನ್ರೀ ಇದು, ಯಾರು ನೀರು ಸೋಕಿದ್ದು?" ಎಂದು ಆಟೋ ಡ್ರೈವರನನ್ನು ಕೇಳಿದ.

"ಸರ್, ಅದು ಕಾರ್ನವನು ಸರ್, ಅಲ್ಲಿ ಜೈದೇವಾ ಪ್ಲೈಓವರನ ಕೆಳಗೆ ಗಟಾರದ ನೀರು, ಮಳೆಯ ನೀರು ಸೇರಿಕೊಂಡು ಕೆರೆಯಂತಾಗಿತ್ತು ಸರ್. ಅಲ್ಲಿ ಕಾರ್ನವನು ನಮ್ಮನ್ನು ಓವರ್ ಟೇಕ್ ಮಾಡಲು ಹೋಗಿ ಆಟೋ ಪೂರ್ತಿ ಗಲೀಜು ಮಾಡಿ ಬಿಟ್ಟಿದ್ದಾನೆ ಸರ್" ಎಂದ ಬಡಪಾಯಿ ಆಟೋ ಡ್ರೈವರ್.

ಶ್ಯಾಮಗೆ ಒಂಥರಾ ಹೊಟ್ಟೆ ತೊಳೆಸಿ ಬಂದಂಗಾಯಿತು. ಈ ಪರಿಸ್ಥಿತಿಯಲ್ಲಿ ಮನೆಗೆ ಹೋಗುವುದೋ, ಆಪೀಸಿಗೆ ಹೋಗುವುದೋ ಎನ್ನುವುದು ಸಮಸ್ಯೆಯಾಯಿತು. ಮನೆಗೆ ಹೋದರೆ ಸುಂದರನಿಂದ ಬೈಸಿ ಕೊಳ್ಳಬೇಕು. ಇನ್ನೂ ಆಪೀಸಿಗೆ ಹೋಗೋಣವೆಂದರೆ ಬಟ್ಟೆ ಪೂರ್ತಿ ಕೊಳೆಯಾಗಿ, ವಾಸನೆ ಬರುತ್ತಿದೆ. ಏನು ಮಾಡುವುದು ಎಂದು ಯೋಚಿಸಿದವನು ಏನಾದರಾಗಲೀ ನೋಡೇ ಬಿಡೋಣವೆಂದು ಆಪೀಸಿನ ಬಳಿ ಆಟೋ ನಿಲ್ಲಿಸಿ, ಆಟೋದಿಂದ ಇಳಿದು ಆಪೀಸಿನ ಕಡೆ ಹೊರಟ.

ಆಟೋದಿಂದ ಇಳಿದು ಆಪೀಸುತಲುಪಿ ಒಳ ಸೇರುವವರೆಗೂ ಅದೆಷ್ಟೋ ಕಣ್ಣುಗಳು ಅವನನ್ನು ದಿಟ್ಟಿಸುತ್ತಿದ್ದುದು ಅವನ ಗಮನಕ್ಕೆ ಬಂದರೂ, ಅದ್ಯಾವುದನ್ನು ಲಕ್ಷಿಸಿಸದೇ ತನ್ನ ಕ್ಯೂಬಿಕಲನತ್ತ ಹೊರಟ. ತನ್ನ ಕ್ಯೂಬಿಕಲ್ ತಲುಪಿದೊಡನೆ, ಅವನ ಕ್ಯೂಬಿಕಲನ ಸಹಪಾಠಿ ಆರತಿ " ಇದೇನಿದು ಶ್ಯಾಮ್ ನಿನ್ನ ವ್ಯವಸ್ಥೆ" ಎಂದು ನಕ್ಕು "ಸುಂದರ್ ನಿಮ್ಮನ್ನು ಕೇಳಿಕೊಂಡು ಮೂರು ಭಾರಿ ಬಂದು ಹೋದರು."

"ಓಹ್! ಹೌದಾ" ಎನ್ನುತ್ತಾ "ಏನಿಲ್ಲ ಆರತಿ ಚಿಕ್ಕ ಎಕ್ಷಿಡಂಟ್. ಬೈಕಿಂದ ಸ್ಕಿಡ್ ಆಗಿ ಬಿದ್ದೆ" ಎಂದು ತಕ್ಷಣಕ್ಕೆ ಬಾಯಿಗೆ ಬಂದ ಸುಳ್ಳನ್ನು ಹೊರಹಾಕಿದ. ಅದೇನು ಅವನಿಗೆ ಹೊಸ ಅಭ್ಯಾಸವೇನು ಅಲ್ಲ. ಇದೇ ರೀತಿ  ಹೀಗೆ ಅದೆಷ್ಟು ಸುಳ್ಳನ್ನು ಹೇಳಿದ್ದನೋ.

ಆರತಿ ಕಿವಿಗೆ ಆ ಸುದ್ದಿ ಬಿದ್ದಮೇಲೆ ಕೇಳಬೇಕೆ? ಆ ಸುದ್ದಿ ಚಂಡಮಾರುತದ ಗಾಳಿಗಿಂತ ವೇಗವಾಗಿ ಆ ಪ್ಲೋರಿನಲ್ಲಿರುವ ಎಲ್ಲರ ಕಿವಿಗೂ ತಲುಪಿತು. ಒಬ್ಬರಾದ ಮೇಲೆ ಒಬ್ಬರು ಬಂದು ಶ್ಯಾಮನ ಆರೋಗ್ಯ ವಿಚಾರಿಸಿಕೊಂಡು ಹೊರಟರು. ಮೀಟಿಂಗನಿಂದ ಹೊರಬಂದ ಸುಂದರಗೂ ಆ ಸುದ್ದಿ ತಲುಪಿ, ಶ್ಯಾಮ್ ಇದ್ದಲ್ಲಿಗೆ ಓಡಿ ಬಂದ. ಈಗ ಸುಂದರನ ಮುಖದಲ್ಲಿ ಸಿಟ್ಟಿನ ಬದಲಾಗಿ ಕರುಣೆ ಮೂಡಿತ್ತು. ಶ್ಯಾಮ್ ಇದ್ದಲ್ಲಿಗೆ ಬಂದವನೇ "ಹೇ, ಶ್ಯಾಮ್, ಎಲ್ಲೋ ಎಕ್ಷಿಡೆಂಟ್ ಆಯ್ತು?"

"ಸುಂದರ್, ಜೈದೇವಾ ಪ್ಲೈ ಓವರ್ನ ಕೆಳಗೆ ನೀರು ತುಂಬಿದ್ದರಿಂದ, ಅಲ್ಲಿ ಒಂದು ಚಿಕ್ಕ ಹೊಂಡ ಇದ್ದುದು ಗೊತ್ತಾಗದೇ ಅದರ ಮೇಲೆ ಹಾಯಿಸಿ ಬಿಟ್ಟೆ, ಆಯ ತಪ್ಪಿ ಬಿದ್ದು ಬಿಟ್ಟೆ" ಎಂದು ಸುಳ್ಳನ್ನು ಸತ್ಯದಂತೆ ಬಿಂಬಿಸಿ "ಸಾರಿ ಸುಂದರ್, ಹಾಗೆ ಬಿದ್ದು ಬಿಟ್ಟಿದ್ದರಿಂದ ಮೀಟಿಂಗಗೆ ಬರೋಕೆ ಆಗಲಿಲ್ಲ" ಅದೇ ಸುಳ್ಳನ್ನು ಮತ್ತಷ್ಟು ವಿಸ್ತರಿಸಿದ.

"ಇರಲಿ, ತೊಂದರೆ ಇಲ್ಲ, ನಾನೇ ಮ್ಯಾನೇಜ್ ಮಾಡಿದೆ, ನಿನಗೇನಾದರೂ ಗಾಯ ಆಗಿದೆಯೋ ಹೇಗೆ?"

"ಅಷ್ಟೊಂದೇನಿಲ್ಲ ಸುಂದರ್, ಮಂಡಿ ಹತ್ತಿರ ಸ್ವಲ್ಪ ನೋವಿದೆ, ಪರವಾಗಿಲ್ಲ" ಎಂದ

"ಓಹ್, ಹಾಗಿದ್ದರೆ ಒಂದು ಕೆಲಸ ಮಾಡು, ಈಗಲೇ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಅಲ್ಲಿಂದ ಮನೆಗೆ ಹೋಗಿ ರೆಸ್ಟ ತಗೋ, ಏನಾದ್ರೂ ತೊಂದರೆ ಇದ್ದರೆ ನನಗೆ ಕಾಲ್ ಮಾಡು, ಯಾವುದನ್ನು ನೆಗ್ಲೆಕ್ಟ ಮಾಡ ಕೂಡದು" ಎಂದು ಹೇಳಿದಾಗ ಶ್ಯಾಮಗೆ ತನಗೆ ತಕ್ಷಣ ಹೊಳೆದ ಸುಳ್ಳು ತನ್ನನ್ನು ಈ ಕ್ಷಣದಿಂದ ರಕ್ಷಿಸಿತಲ್ಲ ಎಂದು ಮನಸ್ಸು ಸಮಾಧಾನಕ್ಕೆ ಬಂತು. ಸುಂದರ್ ಹೇಳಿದ ಮೇಲೆ ಇನ್ನೂ ಆಪೀಸಿನಲ್ಲಿ ಮತ್ತೆ ನಿಲ್ಲೋದು ಬೇಡವೆಂದುಕೊಂಡು ಆಪೀಸಿನಿಂದ ಬೇಗ ಬೇಗ ಹೊರಬಂದ.

"ಏನೋ ಅದೃಷ್ಟ ಚೆನ್ನಾಗಿತ್ತು ಅಂತೂ ಬಚಾವಾದೆ ಎಂದು ಕೇಳುತ್ತಾ, ಆಪೀಸಿನಿಂದ ಹೊರಗೆ ರಸ್ಥೆಯಲ್ಲಿ ಟೀ ಮಾರುತ್ತಿದ್ದ ಪೆಟ್ಟಿಗೆ ಅಂಗಡಿಯ ಬಳಿ ಬಂದು ಚಹಾ ಕುಡಿಯುತ್ತಾ ನಿಂತ. ಅಲ್ಲಿ ನಿಂತ ಎಲ್ಲರೂ ಚಹಾದೊಂದಿಗೆ ಸಿಗರೇಟಿನ ಧಂ ಎಳೆಯುವುದನ್ನು ನೋಡಿ, ಇವತ್ತಿನ ಘಟನೆಗಳಿಂದ ಬೇಸತ್ತ ಅವನಿಗೆ ತಾನು ಒಂದು ಸಿಗರೇಟು ಸೇದರೆ ಹೇಗೆ ಎಂದು "ಒಂದು ಕಿಂಗ್" ಅಂದು ಹೇಳಿ "ಎಷ್ಟು?" ಎಂದ.

"ಹತ್ತು ರೂಪಾಯಿ ಸರ್" ಎಂದು ಟೀ ಅಂಗಡಿಯವನು ಹೇಳಿದಾಗ, ತಾನು ಕೊನೆಯ ಬಾರಿ ಸಿಗರೇಟು ತುಟಿಗಿಟ್ಟಾಗ, ೪-೩೦ ಅಥವಾ ೫ ರೂಪಾಯಿ ಇತ್ತಲ್ಲವೇ? ಈಗ ಹತ್ತು ರೂಪಾಯಿನಾ ಎಂದನಿಸಿತಾದರೂ, ಅಪರೂಪಕ್ಕೆ ಒಂದು ಸಿಗರೇಟು ತಾನೇ ಹೋದರೆ ಹೋಗಲೀ ಎಂದು ಹತ್ತು ರೂಪಾಯಿ ಕೊಟ್ಟು, ಸಿಗರೇಟನ್ನು ತುಟಿಗೆ ಇಟ್ಟು ಅಂಗಡಿಗೆ ತೂಗು ಹಾಕಿದ ಲೈಟರನಿಂದ ಬೆಂಕಿ ಹಚ್ಚಿಕೊಂಡು ಇನ್ನೇನು ಮೊದಲ ದಮ್ಮು ಎಳೆಯ ಬೇಕೆಂದುಕೊಂಡವನಿಗೆ, "ಹೇಗೂ ಇಷ್ಟು ದಿನ ಸಿಗರೇಟು ಬಿಟ್ಟಿದ್ದೇನೆ, ಇನ್ನೇಕೆ ಇದು" ಎಂದನಿಸಿ ಹೊಗೆಯಾಡುತಿದ್ದ ಸಿಗರೇಟನ್ನು ಎಸೆದು  ಬಿಟ್ಟ. ಕಾಲಿ ಟೀ ಕುಡಿದು ಮನೆಗೆ ಬಂದು ಬಟ್ಟೆ ಬದಲಾಯಿಸಿ ಮತ್ತೊಮ್ಮೆ ಸ್ನಾನ ಮಾಡಿ ಬಂದು ಸಮಯ ನೋಡಿದಾಗ ಗಂಟೆ ಆಗತಾನೇ ಒಂದು ಹೊಡೆದಿತ್ತು. ಊಟ ಮಾಡಿ ಬರುವ ಮನಸ್ಸಾಗಿ ಮನೆಯಿಂದ ಹೊರಟು ಬಂದ. "ನಕ್ಷತ್ರ ಹೋಟೇಲ್ನಲ್ಲಿ ನಾನ್ ವೆಜ್ ಚೆನ್ನಾಗಿರತ್ತೆ" ಎಂದು ಯಾರೋ ಹೇಳಿದ್ದು ನೆನಪಾಗಿ, ಅಲ್ಲೇ ಹೋಗಿ ಊಟ ಮಾಡೋಣವೆಂದು, ನಕ್ಷತ್ರ ಎಂದು ದೊಡ್ಡದಾಗಿಯೂ, ಪ್ಯಾಮಿಲಿ ಬಾರ್ ಎಂಡ್ ರೆಸ್ಟೋರೆಂಟ್ ಎಂದು ಚಿಕ್ಕದಾಗಿಯೂ ಬರೆದು ನೇತು ಹಾಕಿದ್ದ ಬೋರ್ಡನ್ನು ನೋಡಿ ಒಳಕ್ಕೆ ಹೋದ.

ಊಟ ಮುಗಿಸಿ ಮನೆಗೆ ಬಂದು ಸ್ವಲ್ಪ ಹೊತ್ತು ಟಿ.ವಿ ನೋಡಿ ಮಲಗಿದವನಿಗೆ ಸಂಜೆ ಎಚ್ಚರವಾಗಿದ್ದು ಐದು ಕಳೆದ ಮೇಲೆಯೇ. ಇಷ್ಟೊತ್ತು ಒಬ್ಬನೇ ಇದ್ದು ಬೋರಾಗಿತ್ತು, ಸೀಮಾಳಿಗೆ ಕರೆ ಮಾಡೋಣ ಅಂತಂದರೆ ಅವಳೂ ಆಪೀಸಿನಲ್ಲಿ ಇರುತ್ತಾಳೆ. ಇರಲಿ ನೋಡೋಣವೆಂದು "ಹಾಯ್" ಎಂದು ಅವಳ ಮೊಬೈಲಗೆ ಸಂದೇಶ ರವಾನಿಸಿದ. ಸಂದೇಶ ಕಳಿಸಿದ ಎರಡು ನಿಮಿಷದಲ್ಲೇ ಅವಳಿಂದ ಉತ್ತರ ಬಂತು "ಸ್ವಲ್ಪ ಬ್ಯೂಸಿ ಇದ್ದಿನಿ, ಆಮೇಲೆ ಮೆಸೇಜ್ ಮಾಡ್ತಿನಿ" ಎಂದು. ಹಾಗೆ ಅವಳಿಂದ ಉತ್ತರ ಬಂದ ಮೇಲೆ ಇನ್ನೂ ಅವಳಿಗೆ ತೊಂದರೆ ಕೊಡುವುದು ಬೇಡವೆಂದುಕೊಂಡು ಸಮೀಪದ ಗಾರ್ಡನಗೆ ಹೋಗಿ ಕುಳಿತ. ಗಾರ್ಡನನಲ್ಲಿ ಒಬ್ಬಂಟಿಯಾಗಿ ಕುಳಿತಿದ್ದವನೆಂದರೆ ಇವನೊಬ್ಬನೇ. ಅಲ್ಲಲ್ಲೀ ಕುಳಿತು ಲಲ್ಲೆ ಹೊಡೆಯುತ್ತಾ ಕುಳಿತ ಯುವ ಪ್ರೇಮಿಗಳನ್ನು ನೋಡಿದಾಗ ಸೀಮಾ ಇದ್ದರೆ ಚೆನ್ನಾಗಿತ್ತೇನೋ ಎಂದು ಅನಿಸದಿರಲಿಲ್ಲ. ಒಬ್ಬನೇ ಅಂತಾ ಗಾರ್ಡನ್ ಅಲ್ಲಿ ಎಷ್ಟು ಹೊತ್ತು ಕುಳಿತಿರಲು ಸಾದ್ಯ. ಕುಳಿತು ಕುಳಿತು ಬೇಸರವಾಗಿ ಗಾರ್ಡನ್ ಇಂದ ಹೊರಬಂದು, ಹೊಟೇಲ್ಗೆ ಹೋಗಿ ಟೀ ಕುಡಿದು ಮನೆಗೆ ಬಂದಾಗ ಸಂಜೆ ಕಳೆದು ಕತ್ತಲು ಆವರಿಸಿತ್ತು.

ಮನೆಗೆ ಬಂದು ಸ್ವಲ್ಪ ಸಮಯ ಕಳೆಯುವುದರಲ್ಲಿ ಒಬ್ಬೊಬ್ಬರಾಗಿ ಮನೆಗೆ ಬರಲಾರಂಬಿಸಿದರು. ಎಲ್ಲರೂ ಸೇರಿ ಅಡಿಗೆ ಮಾಡಿ ಊಟ ಮಾಡುವಷ್ಟರಲ್ಲಿ ಹತ್ತು ಗಂಟೆಯಾಗಿತ್ತು. ಕರೆ ಮಾಡುತ್ತೇನೆ ಎಂದು ಹೇಳಿದ ಸೀಮಾ ಇನ್ನೂ ಕರೆ ಮಾಡದೇ ಇದ್ದುದರಿಂದ ತಾನೇ ಅವಳಿಗೆ ಕರೆ ಮಾಡಲು ಪ್ರಯತ್ನಿಸಿದ. ಹತ್ತಾರು ಭಾರಿ ಪ್ರಯತ್ನಿಸಿದರೂ ಅವಳು ಕರೆಗೆ ಉತ್ತರಿಸದೇ ಇದ್ದಾಗ, ಅವಳಿಗೆ "ಹಾಯ್" ಎಂದು ಮೆಸೇಜ್ ಕಳಿಸಿಟ್ಟ, ಬಹುಷಃ ಈಗ ಬ್ಯೂಸಿ ಇದ್ದಿರಬಹುದು ಮೆಸೇಜ್ ನೋಡಿದ ಮೇಲಾದರೂ ಕರೆ ಮಾಡಬಹುದೆನ್ನುವ ಉದ್ದೇಶದಿಂದ.

ಗಂಟೆ ಹನ್ನೊಂದಾಗುತ್ತಾ ಬಂತು ಆದರೆ ಸೀಮಾಳಿಂದ ಕರೆ ಮಾತ್ರ ಬರಲಿಲ್ಲ. ಇನ್ನೂ ಅವಳು ಕರೆ ಮಾಡಲ್ಲ ಎಂದು ಕೊಂಡು ಮಲಗಲು ಹೋದವನ ಮೊಬೈಲಗೆ ಒಂದು ಮೆಸೇಜ್ ಬಂತು. ಸೀಮಾಳಿಂದ ಬಂದ ಮೆಸೇಜ್, ನೋಡಿ ಖುಸಿಯಿಂದ ಮೆಸೇಜ್ ಓಪನ್ ಮಾಡಿದ. "ವಾಟ್ಸ ಅಪ್ ನೋಡು" ಎಂದಷ್ಟೇ ಇತ್ತು. ಮೊಬೈಲನ ಇಂಟರ್ನೆಟ್ ಆನ್ ಮಾಡಿ "ವಾಟ್ಸ್ ಅಪ್ ನೋಡಿದ". ಅದರಲ್ಲಿ ಸೀಮಾ ಕಳಿಸಿದ ಎರಡು ಪೋಟೋಗಳಿದ್ದವು. ಒಂದು ಪೋಟೋದಲ್ಲಿ ಶ್ಯಾಮ್ ತುಟಿಗೆ ಸಿಗರೇಟು ಇಟ್ಟು ಬೆಂಕಿ ಹಚ್ಚುತ್ತಿದ್ದುದು, ಇನ್ನೊಂದು "ನಕ್ಷತ್ರ" ಬಾರೊಳಗೆ ಹೋಗುತ್ತಿದ್ದ ಪೋಟೋಗಳು. ಆ ಪೋಟೋಗಳನ್ನು ನೋಡಿದೊಡನೆ ಇಂದು ಬೆಳಿಗ್ಗೆ "ನಿನ್ನ ವಿಷಯವನ್ನು ಮನೆಯಲ್ಲಿ ಹೇಳಿದ್ದೇನೆ, ಇನ್ನೂ ಮುಂದೆ ಅವರು ನಿನ್ನನ್ನು ಗಮನಿಸಲು ಪ್ರಾರಂಭಿಸಬಹುದು, ಸ್ವಲ್ಪ ಹುಷಾರಾಗಿರು" ಎಂದು ಸೀಮಾ ಎಚ್ಚರಿಕೆ ಕೊಟ್ಟದ್ದಿ ಈಗ ನೆನಪಿಗೆ ಬಂತು. ಅಂದರೆ ಇವೆಲ್ಲ ಸೀಮಾಳ ಮನೆಯವರ ಕೆಲಸ, ಆಗಲೇ ಇವರು ನನ್ನ ಬಗ್ಗೆ ಇನ್ವೆಸ್ಟಿಗೇಷನ್ ಶುರು ಮಾಡಿದ್ದಾರೆ ಅಂತಾಯ್ತು ಎಂದು ಕೊಂಡು ಸೀಮಾಳಿಗೆ ಬೆಳಿಗ್ಗೆಯಿಂದ ನಡೆದ ಘಟನೆಗಳನ್ನು ಹೇಳಿ ಬಿಡಬೇಕು ಎಂದು ಕೊಂಡು ಅವಳ ಮೊಬೈಲಗೆ ಮತ್ತೆ ಕರೆ ಮಾಡಿದ. ಆದರೆ ಅವಳು ಮೊಬೈಲನ್ನು ಸ್ವಿಚ್ ಆಪ್ ಮಾಡಿಟ್ಟಿದ್ದಳು. ಮೊಬೈಲ್ ಆನ್ ಮಾಡಿದಾಗಲಾದರೂ ನೋಡಲಿ ಎಂದು ಕೊಂಡು ಬೆಳಿಗ್ಗೆಯಿಂದ ಇಲ್ಲಿಯವರೆಗೆ ನಡೆದ ಘಟನೆಗಳನ್ನು ವಿವರಿಸಿ ಮೆಸೇಜ್ ಕಳಿಸಿ ಮುಗಿಸುವ ಹೊತ್ತಿಗೆ ಗಂಟೆ ಒಂದಾಗಿತ್ತು.

ಅಬ್ಬಾ! ಒಂದು ದಿನ ಅದೃಷ್ಟ ಕೈ ಕೊಟ್ಟರೆ ಏನಲ್ಲಾ ಅವಘಡಗಳಾಗಿ ಬಿಡುತ್ತವಲ್ಲ ಎಂದು ಕೊಂಡು, ಮೊಬೈಲನಲ್ಲಿ ಎಂಟು ಗಂಟೆಗೆ ಇಟ್ಟ ಅಲಾರಾಂ ಅನ್ನು ಏಳು ಗಂಟೆಗೆ ಬದಲಾಯಿಸಿ ಮಲಗಿದ.

--ಮಂಜು ಹಿಚ್ಕಡ್

No comments:

Post a Comment