Friday, August 15, 2014

ಗರುಡಾ ಮೂಲೆಯಲ್ಲಿ ಕಳೆದ ಆ ಒಂದು ದಿನ!

ನಾನು ಚಿಕ್ಕವನಿದ್ದಾಗ, ನನ್ನಪ್ಪ ಸಾಮಾನು ತರಲು ಅಂಕೋಲೆಗೆ ಹೋಗಲಿ, ಗದ್ದೆಗೆ ಹೋಗಲಿ, ಬತ್ತವನ್ನು ಅಕ್ಕಿ ಮಾಡಿಸಲು ಹೋಗಲಿ ಅಥವಾ ಗೋಧಿ ಹಿಟ್ಟು ಮಾಡಿಸಲು ಹಿಟ್ಟಿನ ಗಿರಣಿಗೆ ಹೋಗಲಿ, ಮೀನು ತರಲು ಹೋಗಲಿ, ಯಾರದ್ದಾದರೂ ಸಂಬಂಧಿಕರ ಮನೆಗೆ ಹೋಗಲಿ ಅವನನ್ನು ನಾನು ಬಾಲದಂತೆ ಹಿಂಬಾಲಿಸಿಕೊಂಡು ನಡೆದು ಬಿಡುತ್ತಿದ್ದೆ. ಒಮ್ಮೊಮ್ಮೆ ಎಲ್ಲಾದರೂ ದೂರದ ಊರಿಗೆ ಹೋಗುವುದ್ದಿದ್ದಲ್ಲಿ ಅಥವಾ ತುಂಬಾ ಹೊತ್ತು ನಡೆದು ಕೊಂಡು ಹೋಗುವುದಿದ್ದರೆ, ನನಗೆ ಬರುವುದು ಬೇಡಾ ಅಂತಾ ಹೇಳಿ ಬಿಟ್ಟು ಹೋದರೂ ಕೂಡ ನಾನು ಅಳುತ್ತಾ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಬಿಡುತ್ತಿದ್ದೆ. ಹೀಗೆ ಒಮ್ಮೆ ನಮ್ಮ ತಂದೆ ಗರುಡಾಮೂಲೆ ಎನ್ನುವ ಊರಿಗೆ ಯಾವುದೋ ಕೆಲಸದ ಮೇಲೆ ಹೊರಟಿದ್ದರು ಅದರ ಜೊತೆಗೆ ಗದ್ದೆ ಕಟಾವಿಗಾಗಿ ಅಲ್ಲಿಯ ಜನರಿಗೆ ಹೇಳುವ ಉದ್ದೇಶವೂ ಇತ್ತು. ನಾನಿನ್ನೂ ಆಗ ಆರೇಳು ವರ್ಷದ ಹುಡುಗ. ಅವರು ಹಾಗೆ ಹೊರಟು ನಿಂತಿದ್ದೇ ತಡ ನಾನು ಬರುತ್ತೇನೆ ಎಂದು ಹಟ ಹಿಡಿದೆ. ಅವರು ಬರುವುದು ಬೇಡ ಎಂದು ಹೇಳಿ ನನ್ನನ್ನು ಮನೆಯಲ್ಲೇ ಬಿಟ್ಟು ಹೊರಟರು. ನಾನು ಬಿಡಲಿಲ್ಲ ಅವರ ಹಿಂದೆ ಓಡಿದೆ, ಅವರಿನ್ನೂ ನಮ್ಮೂರ ಬಸ್ ನಿಲ್ದಾಣವನ್ನು ದಾಟಿರಲಿಲ್ಲ, ನಾನು ಓಡಿ ಹೋಗಿ ಅವರನ್ನು ಹಿಡಿದೆ. ನಾನು ಹಿಂದೆ ಬಿದ್ದಿದ್ದನ್ನು ನೋಡಿ ಮತ್ತೆ ಒಂದೆರಡು ಬಾರಿ ಬೈದು ಹೊರಟು ಹೋಗುವಂತೆ ಹೇಳಿದರೂ ನಾನು ಬಿಡಲಿಲ್ಲ, ಅವರ ಹಿಂದೆನೇ ಮತ್ತೆ ಹೊರಟೆ. ನಾನು ವಾಪಸ್ ಮನೆಗೆ ಹೋಗದ್ದನ್ನು ನೋಡಿ ತಾವಾಗೇ ತಮ್ಮ ಜೊತೆ ಕರೆದುಕೊಂಡು ಹೋದರು.

ಗರುಡಾಮೂಲೆ ಇರುವುದು ನಮ್ಮುರಿನಿಂದ ೫-೬ ಕಿಲೋ ಮೀಟರ್ ದೂರದಲ್ಲಿದ್ದು, ತಳಗದ್ದೆಯಿಂದ ಇನ್ನೂ ಎರಡು ಕಿಲೋ ಮೀಟರ್ ದೂರಕ್ಕೆ ನಡೆದು ಹೋಗಬೇಕು. ಗರುಡಾಮೂಲೆ ಇದು ಸುತ್ತಲು ಸಹ್ಯಾದ್ರಿ ಪರ್ವತ ಶ್ರೇಣಿಗಳಿಂದ ಸುತ್ತುವರೆದಿರುವ ಸುಂದರವಾದ ಊರು. ಅಲ್ಲೊಂದು ಇಲ್ಲೊಂದು ಚಿಕ್ಕ ಪುಟ್ಟ ಹಂಚಿನ ಮನೆಗಳು. ಪ್ರತಿ ಮನೆಯ ಮುಂದು ಸಗಣಿಯಿಂದ ಸಾರಿಸಿದ ಅಂಗಳ, ಆ ಅಂಗಳದ ಮುಂದೆ ಆ ಮನೆಗೆ ಸೇರಿದ ತೋಟ. ಆ ತೋಟದಿಂದ ಮುಂದೆ ಹೋದರೆ ಅವರವರಿಗೆ ಸಂಬಂಧಿಸಿದ ಗದ್ದೆಗಳು. ಆ ಗದ್ದೆಯ ಒಂದು ಬದಿಗೆ ಕಬ್ಬಿನ ತೋಟ. ಕಬ್ಬಿನ ತೋಟದ ಪಕ್ಕದಲ್ಲಿ ಮನೆಯ ಉಪಯೋಗಕ್ಕಾಗಿ ಬಸಲೆ, ಮೂಲಂಗಿ, ಗೆಣಸು, ಈರುಳ್ಳಿ, ಚವಳಿ, ಹರಿಗೆ ಮುಂತಾದ ತರಕಾರಿಗಳನ್ನು ಬೆಳೆದ ಒಂದು ಕೈದೋಟ. ಮನೆಯ ಹಿಂಬಾಗದಲ್ಲಿ ಬೆಟ್ಟ. ಆ ಬೆಟ್ಟದಲ್ಲಿ ಮೊದ ಮೊದಲು ವಿರಳವಾಗಿ ಸಿಗುವ ಮರಗಳು ಒಳಗೆ ಹೋಗುತ್ತಿದ್ದಂತೆ ದಟ್ಟವಾಗುತ್ತಾ ಹೋಗುತ್ತವೆ. ಸುತ್ತಲು ಮನೆಗಳೇ ತುಂಬಿರುವ ಊರಿನಲ್ಲಿ ಬೆಳೆದ ನನಗೆ ಇವೆಲ್ಲವನ್ನು ನೋಡಿದಾಗ ಏನೋ ಒಂದು ರೀತಿಯ ರೋಮಾಂಚನ. ಅದು ನನಗೆ ಪ್ರಥಮ ಅನುಭವ ಕೂಡ. ಗರುಡಾಮೂಲೆ ಕರಾವಳಿ ಸೀಮೆಯ ಭಾಗವಾದರೂ ಸುತ್ತಲೂ ಬೆಟ್ಟಗಳಿಂದ ಆವೃತ್ತವಾಗಿದ್ದುದರಿಂದ ಅಪ್ಪಟ ಮಲೆನಾಡಿನಂತೆ ತೋರುತ್ತಿತ್ತು. ಅದಕ್ಕೂ ಮೊದಲು ನಾನು ಅಂತಹ ಬೆಟ್ಟಗಳನ್ನು ನೋಡದ್ದರಿಂದ ನನಗೆಲ್ಲವೂ ಆ ಪಯಣದ ಅನುಭವ ರೋಮಾಂಚನಕಾರಿಯಾಗೇ ಇತ್ತು.

ನಾನು ನಮ್ಮ ತಂದೆ ಗರುಡಾಮೂಲೆ ಸೇರಿದಾಗ ಬಹುಶಃ ೯ ರಿಂದ ೧೦ ಗಂಟೆಯ ಒಳಗಿರಬಹುದು. ನಾವು ಅಲ್ಲಿಗೆ ಹೋದ ತಕ್ಷಣ ನಮ್ಮ ತಂದೆ ನನ್ನನ್ನು ಅವರ ಪರಿಚಯದವರ ಮನೆಗೆ ಕರೆದುಕೊಂಡು ಹೋಗಿ, ನನ್ನನ್ನು ಆ ಮನೆಯಲ್ಲಿರುವ ಅಜ್ಜಿಗೆ ಪರಿಚಯಿಸಿ ನನ್ನನ್ನು ಅಲ್ಲೇ ಇರಲು ಹೇಳಿ ತಾವು ಎಲ್ಲಿಗೋ ಹೋಗಿ ಬರುವುದಾಗಿ ಹೇಳಿ ಹೊರಟು ಹೋದರು. ಆ ಮನೆಯಲ್ಲಿ ಆಗ ಇದ್ದುದು ಒಂದು ಅಜ್ಜಿ ಹಾಗೂ ನನ್ನದೇ ವಯಸ್ಸಿನ ಅವಳ ಮೊಮ್ಮಗ. ಮನೆಯಲ್ಲಿರುವ ಉಳಿದ ಇತರರು ಯಾವುದೋ ಕೆಲಸ ಮೇಲೆ ಹೊರಗೆ ಹೋಗಿರಬೇಕು, ಹಾಗಾಗಿ ಅವರಿರ್ವರನ್ನು ಬಿಟ್ಟು ಯಾರು ಇರಲಿಲ್ಲ.

ನಾನು ಹಾಗೂ ಆ ಹುಡುಗ ಆ ಮನೆಯ ಅಂಗಳದಲ್ಲಿ ಆಟವಾಡುತ್ತಾ ಇದ್ದಾಗ ಅಜ್ಜಿ ನಮಗೆ ತೋಟಕ್ಕೆ ಹೋಗಿ ಒಂದಿಷ್ಟು ಮೂಲಂಗಿ ಕಿತ್ತುಕೊಂಡು ಬರುವಂತೆ ತಿಳಿಸಿದಳು. ನಮಗೆ ಅಷ್ಟು ಹೇಳಿದ್ದೇ ತಡ, ಇಬ್ಬರೂ ತೋಟಕ್ಕೆ ಓಡಿದೆವು. ಅಲ್ಲಿಯ ಕಬ್ಬಿನ ತೋಟದಿಂದ ಒಂದು ಕಬ್ಬು ಮುರಿದುಕೊಂಡು ಮೂಲಂಗಿ ಬೆಳೆದ ಕಡೆ ಬಂದೆವು. ಐದಾರು ಮೂಲಂಗಿ ಅಂತಾ ಅಜ್ಜಿ ಹೇಳಿದರೂ ನಾವು ೮-೧೦ ಮೂಲಂಗಿ ಕಿತ್ತು ಬಿಟ್ಟೆವು. ಕಿತ್ತ ಮೂಲಂಗಿಯನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಕಬ್ಬು ತಿನ್ನುತ್ತಾ ಮನೆಗೆ ಬಂದು ಅಜ್ಜಿಗೆ ಮೂಲಂಗಿ ಕೊಟ್ಟವು. "ಏಕೆ ಇಷ್ಟೊಂದು ಮೂಲಂಗಿ ಕಿತ್ತು ತಂದಿದ್ದಿರಾ" ಎಂದು ಅಜ್ಜಿ ಬಯ್ಯುತ್ತಿದ್ದನ್ನು ಲೆಕ್ಕಿಸದೇ ಬೆಟ್ಟದ ಕಡೆ ಓಡಿದೆವು. ನನಗೆ ಬೆಟ್ಟ ಹೇಗಿರುತ್ತೆ ಅಂತಾ ಮೊದಲು ಗೊತ್ತಿರದ ಕಾರಣ ಆ ಹುಡುಗ ಕರೆದು ಕೊಂಡು ಹೊದಲ್ಲೆಲ್ಲಾ ಹೋದೆ.

ಆತ ನನಗೆ ಪ್ರತಿ ವರ್ಷ ಅಲ್ಲಿ ಗಾಣ ನಡೆಯುವ ಸ್ಥಳ, ಅಲ್ಲಿ ಕಬ್ಬಿನ ಹಾಲು ಕಾಸಿ ಅವೆ ಬೆಲ್ಲ ಮಾಡುವ ಒಲೆ ಎಲ್ಲವನ್ನು ತೋರಿಸಿ ಬೆಟ್ಟ ಹತ್ತಿಸಿದ. ಆತ ಅಲ್ಲೇ ಹುಟ್ಟಿ ಬೆಳೆದಿದ್ದರಿಂದ ಅವನಿಗೆ ಆ ಪ್ರದೇಶವಲ್ಲ ಚಿರಪರಿಚಿತವಾದಂತಿತ್ತು. ಆತ ಅಲ್ಲಿ ಹರಿಯುವ ಜರಿ, ಅದರ ಸುತ್ತಲು ಬೆಳೆದ ಕಾಡು ಎಲ್ಲವನ್ನು ತೋರಿಸುತ್ತಾ ಹೋದ. ನಾವು ಹಾಗೆ ಕಾಡುಸುತ್ತುತ್ತಿದ್ದಾಗ ಆ ಕಾಡಿನಲ್ಲಿ ಎರಡು ದೊಡ್ಡ ಹಾವುಗಳು ತೆಕ್ಕೆ ಹಾಕಿಕೊಂಡು ಬುಸ್, ಬುಸ್ ಎನ್ನುತ್ತಾ ಹೊರಳಾಡುತ್ತಿದ್ದುದ್ದನ್ನು ನೋಡಿ ನಾನು ಮೈಮರೆತು ನೋಡುತ್ತಾ ನಿಂತು ಬಿಟ್ಟಿದ್ದೆ. ಆ ಹುಡುಗ ಇಲ್ಲಾ ಅಂದರೆ ಅಲ್ಲೇ ನಿಂತು ಬಿಡುತ್ತಿದ್ದನೇನೋ. ಆ ಹುಡುಗ ನನ್ನನ್ನು ಎಚ್ಚರಿಸಿ, "ಹಾಗೆಲ್ಲಾ ನಾವು ನೋಡಬಾರದು, ಹಾಗೆ ನೋಡಿದರೆ ನಮಗೆ ಪಾಪ ಬರುತ್ತೆ ಅಂತೆ ನಮ್ಮ ಅಜ್ಜಿ ಹೇಳುತ್ತಿದ್ದಳು" ಎಂದು ನನ್ನನ್ನು ಹೆದರಿಸಿ ಮನೆಗೆ ಕರೆದುಕೊಂಡು ಬಂದ.

ನಾವು ಅಲ್ಲೆಲ್ಲಾ ಸುತ್ತಾಡಿ ಮನೆ ತಲುಪುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ನಾವು ಮನೆ ತಲುಪಿದರೂ ನಮ್ಮ ತಂದೆಯಿನ್ನು ಅಲ್ಲಿಗೆ ಬಂದಿರಲಿಲ್ಲ. ನಾವು ಬರುತ್ತಿದ್ದಂತೆ, ಅಜ್ಜಿ ಆ ಹುಡುಗನಿಗೆ ಸ್ನಾನ ಮಾಡಲು ಹೇಳಿ, ಅವನ ಸ್ನಾನ ಮುಗಿಯುತ್ತಿದ್ದಂತೆ ನಮ್ಮಿಬ್ಬರನ್ನು ಊಟಕ್ಕೆ ಕರೆದಳು. ನಾವು ಊಟದ ಮನೆ ಸೇರಿದಾಗ ನಮಗಾಗಿ ದೊಡ್ಡ ದೊಡ್ಡ ಕಂಚಿನ ಬಟ್ಟಲುಗಳಲ್ಲಿ ಗಂಜಿಯನ್ನು ಬಡಿಸಿ, ಅದರ ಮುಂದೆ ಚಿಕ್ಕ ಚಿಕ್ಕ ಬಟ್ಟಲುಗಳಲ್ಲಿ ಮೂಲಂಗಿ ಪಲ್ಯೆ ಹಾಕಿದ್ದಳು. ತುಂಬಾ ರುಚಿ ಕಟ್ಟಾಗಿ ಮಾಡಿದ್ದಳು ಅಜ್ಜಿ. ನಾವು ಆ ಬಟ್ಟಲಲ್ಲಿದ್ದ ಗಂಜಿಯನ್ನೆಲ್ಲ ಕಾಲಿ ಮಾಡಿ ಕೈ ತೊಳೆದು ಮತ್ತೆ ತೋಟದ ಕಡೆ ಹೊರೆಟವು. ತೋಟ ಸುತ್ತಿ ಬರುವ ಹೊತ್ತಿಗೆ ನಮ್ಮ ತಂದೆ ಆ ಮನೆಗೆ ಬಂದು ನನಗಾಗಿ ಕಾಯುತ್ತಾ ಕುಳಿತಿದ್ದರು. ನಾನು ತೋಟದಿಂದ ಬಂದ ಕೆಲವೇ ಸಮಯದಲ್ಲೇ ನಾನು ಮತ್ತು ನಮ್ಮ ತಂದೆ ಅಲ್ಲಿಂದ ಹೊರಟು ನಿಂತೆವು. ನಾವು ಅಲ್ಲಿಂದ ಬಿಟ್ಟು ಮನೆ ಸೇರುವ ಹೊತ್ತಿಗೆ ಸಂಜೆಯಾಗಿತ್ತು. ಈ ಘಟನೆ ನಡೆದು ಅದಾಗಲೇ ೨೫ ವರ್ಷಗಳು ಕಳೆದು ಹೋದರು ನನಗಿನ್ನು ಅದು ತುಂಬಾ ಇತ್ತೀಚೆಗೆ ನಡೆದಂತಿದೆ.

ಮಂಜು ಹಿಚ್ಕಡ್

No comments:

Post a Comment