Friday, December 19, 2014

ನಿರೀಕ್ಷೆ!

ರಾತ್ರಿ "ತೋಕು" ಹಿಡಿದು ತಂದ ಮೀನುಗಳನ್ನು, ತನ್ನ ಬುಟ್ಟಿಗೆ ಹಾಕಿಕೊಂಡು, ಗುಂಡಬಳ ಊರಿನಡೆ ಹೊರಡ ತೊಡಗಿದಳು ಕಲಾವತಿ. ಈಗ ಆಕೆಯ ಮನಸ್ಸಿನಲ್ಲಿದ್ದುದು ಒಂದೇ ಯೋಚನೆ, ಆದಷ್ಟು ಬೇಗ ಗುಂಡಬಳದಲ್ಲಿ ಮೀನು ಮಾರಿ, ಗುಂಡಬಳಕ್ಕೆ ಬರುವ ೧೦ ಗಂಟೆಯ ಬಸ್ಸಿಗೆ ಮಾದನಗೇರಿಗೆ ಹೋಗಿ, ಮೀನು ಮಾರುಕಟ್ಟೆಯಿಂದ  ಒಂದು ಬುಟ್ಟಿ ಮೀನು ಕೊಂಡು ಮತ್ತೆ ೧೧ ಗಂಟೆಯ ಬಸ್ಸಿಗೆ ಮಾದನಗೇರಿಯಿಂದ ಗುಂಡಬಳಕ್ಕೆ ವಾಪಸ್ ಬಂದು, ಒಂದೆರಡು ಗಂಟೆಯಲ್ಲಿ ಮಾರಿ, ಸಾದ್ಯವಾದಲ್ಲಿ ೧ ಗಂಟೆಯ ಬಸ್ಸಿಗೆ ತಪ್ಪಿದಲ್ಲಿ ೨ ಗಂಟೆಯ ಬಸ್ಸಿಗೆ ಮತ್ತೆ ಹೋಗಿ, ೪ ಗಂಟೆ ಬಸ್ಸಿಗೆ ಮೀನು ತಂದು ಊರಿನಲ್ಲಿ ಮತ್ತೆ ಮಾರಬೇಕು. ಅದು ಅವಳ ದಿನ ನಿತ್ಯದ ಉದ್ಯೋಗವೂ ಕೂಡ. ಆ ಊರಿನವರಿಗೂ ತಿಳಿದಿದೆ ಕಲಾವತಿ ಮೀನು ತಂದಿದ್ದು ಬೆಳಿಗ್ಗೆ ಸಿಕ್ಕಿಲ್ಲ ಅಂದರೂ ನಂತರ ಮತ್ತೆ ಸಾಯಂಕಾಲ ತಂದಾಗಲಾದರೂ ಸಿಗುತ್ತದೆ ಎಂದು. ಕಲಾವತಿಗೆ ಏನೋ ಸಮಸ್ಯೆ ಬಂದು ಒಂದು ದಿನ ಮೀನು ತಂದಿಲ್ಲ ಅಂದರೆ ಆ ಊರಿನ ಬಹುತೇಕ ಮನೆಯಲ್ಲೂ ತರಕಾರಿ ಊಟಾನೇ ಗತಿ. ಮಾದನಗೇರಿಗೆ ಹೋಗಿ ಬರುವವರ ಮನೆಯಲ್ಲಿ ಮಾತ್ರ ಆ ದಿನ ಮೀನು ಊಟ.

ಕಲಾವತಿಗೂ ಅಷ್ಟೇ, ಜೋರಾಗಿ ಮಳೆ ಬಂದೋ ಅಥವಾ ಆರಾಮು ತಪ್ಪಿ ಒಂದು ದಿನ ಗುಂಡಬಳಕ್ಕೆ ಹೋಗಿಲ್ಲ ಅಂದರೆ ಏನೋ ಕಳೆದು ಕೊಂಡಂತೆ ಅನಿಸುತ್ತದೆ. ಕಲಾವತಿ ಈ ಉದ್ಯೋಗವನ್ನು ಈಗ ಕೆಲವು ದಿನಗಳಿಂದ ಮಾಡುತ್ತಿಲ್ಲ. ಅವಳು ಈ ಉದ್ಯೋಗ ಮಾಡಲು ಪ್ರಾರಂಭಿಸಿ ಆಗಲೇ ಹತ್ತಿಪ್ಪತ್ತು ವರ್ಷಗಳಾಗಿವೆ. ಮದುವೆಯಾಗಿ ಹೊಸತಾಗಿ ಈ ಉರಿಗೆ ಮೊದಮೊದಲು ಅತ್ತೆ ಶಕುಂತಲಾಳ ಜೊತೆ ಗುಂಡಬಳಕ್ಕೆ ಮೀನು ಮಾರಲು ಬರುತಿದ್ದಳು. ಅತ್ತೇಯೇ ಆ ಊರಿನ ಪ್ರತಿ ಮನೆಗಳನ್ನು ಪರಿಚಯ ಮಾಡಿಕೊಟ್ಟದ್ದು. ಕ್ರಮೇಣ ಅತ್ತೆಗೆ ವಯಸ್ಸಾಗುತಿದ್ದ ಹಾಗೆ ತಾನೇ ಈ ವ್ಯಾಪಾರವನ್ನು ಮಾಡತೊಡಗಿದಳು. ಮನೆಯಿಂದ ಬರುವಾಗ ಹಳೆಯ ಮೀನು ಸಿಕ್ಕಿಲ್ಲ ಅಂದರೆ ಚಿಪ್ಪೆಕಲ್ಲನ್ನೋ, ಕಲಗಾ ಅನ್ನೋ, ಏನು ಇಲ್ಲ ಅಂದರೆ ಒಣಗಿದ ಸಿಗಡಿ ಮೀನನ್ನೋ ತೆಗೆದು ಕೊಂಡು ಬಂದು ಗುಂಡಬಳದಲ್ಲಿ ಮಾರಿ, ಆ ಮೇಲೆ ಅಲ್ಲಿಂದ ಮಾದನಗೇರಿಗೆ ಹೋಗಿ ಮೀನು ತಂದು ಮತ್ತೆ ಆ ಊರಲ್ಲಿ ಮಾರಿ ಸಾಯಂಕಾಲ ಸೂರ್ಯ ಮುಳುಗುವ ಹೊತ್ತಿಗೆ ಮನೆ ಸೇರುತ್ತಾಳೆ.

ದಿನಾ ಇದೇ ಯೋಚನೆಯಲ್ಲಿ ಗುಂಡಬಳಕ್ಕೆ ಬಂದರೂ, ಇವತ್ತಿನ ಯೋಚನೆಯೇ ಬೇರೆ. ಅವಳ ಮನಸ್ಸಿನ ಪೂರ್ತಿ ಒಂದು ವರ್ಷದ ಬಳಿಕ ಇಂದು ಮನೆಗೆ ಬರಲಿರುವ ಮಗಳೇ ಆಕ್ರಮಿಸಿಕೊಂಡಿದ್ದಳು. ಕಳೆದ ವರ್ಷ ಬಹುಶಃ ಇದೇ ಕಾಲವಿರಬಹುದು, ಆದಿನ ಬೆಳಿಗ್ಗೆ ಗುಂಡಬಳಕ್ಕೆ ಮೀನು ತೆಗೆದುಕೊಂಡು ಹೋಗಬೇಕು ಎಂದು ಬಲೆಯಿಂದ ಮೀನು ಬಿಡಿಸಿ ಬುಟ್ಟಿಗೆ ತುಂಬುತ್ತಿರುವಾಗ, ಸರಳೇಬೈಲ್ನ್ ಸೀತಾಬಾಯಿಯ ಗಂಡ ಬಂದು ತಮ್ಮ ಒಂದು ವರ್ಷದ ಬಾಲೆಯನ್ನು ನೋಡಿಕೊಳ್ಳಲು ಯಾರಾದ್ರೂ ಮಕ್ಕಳು ಬೇಕಿದ್ದರು. ನಿಮ್ಮ ಮಗಳನ್ನು ಕಳಿಸಿಕೊಡುವುದಾದರೆ ನೋಡಿ, ಅವಳಿಗೆ ಅಲ್ಲಿಯೇ ಶಿಕ್ಷಣ ಕೊಡಿಸುತ್ತೇವೆ ಎಂದಾಗ, ಕಲಾವತಿ ಹೇಗೂ ಮಗಳು ನಾಲ್ಕನೇ ತರಗತಿವರೆಗೆ ಓದಿ ಒಂದೆರಡು ವರ್ಷದಿಂದ ಮನೆಯಲ್ಲಿ ಖಾಲಿ ಕುಳಿತಿದ್ದಾಳೆ, ಹಾಗೆ  ಒಮ್ಮೆ ಕಳಿಸೋಣ ಅನ್ನಿಸಿದರೂ ಮನೆಯಲ್ಲೆ ಹುಟ್ಟಿ ಬೆಳೆದ ಮಗಳು ಮುಂದೆ ಹೇಗೂ ಮದುವೆಯಾಗಿ ಗಂಡನ ಮನೆಗೆ ಹೋಗುವುದು ಇದ್ದೇ ಇದೆ. ಇದ್ದರೆ ಮನೆಯಲ್ಲಿ ಇರಲಿ ಎಂದು ಮತ್ತೊಮ್ಮೆ ಅನ್ನಿಸಿ, "ನಮ್ಮ ಮಗಳನ್ನು ಹೊರಗೆ ಕೆಲಸಕ್ಕೆ ಕಳಿಸುವ ಯೋಚನೆ ಇಲ್ಲ" ಎಂದಳು. "ಹಾಗಲ್ಲ ಕಲಾವತಿ ನಾವೇನು ನಿನ್ನ ಮಗಳನ್ನು ಕೆಲಸ ಮಾಡುವುದಕ್ಕೆ ಕರೆದುಕೊಂಡು ಹೋಗುತ್ತಿಲ್ಲ, ನಾವು ಅವಳಿಗೆ ಮುಂದೆ ಓದಿಸುತ್ತೇವೆ, ಹೇಗೂ ನಿಮ್ಮ ಮಗಳು ಮನೆಯಲ್ಲಿ ಇದ್ದಾಳಲ್ಲ. ನಮ್ಮ ಜೊತೆ ಕಳಿಸಿಕೊಟ್ಟರೆ ಅವಳಿಗೆ ಮುಂದೆ ಓದಿಸುತ್ತೇವೆ, ಅವಳು ಸಮಯ ಇದ್ದಾಗ ಸ್ವಲ್ಪ ನಮ್ಮ ಬಾಲೆಯನ್ನು ನೋಡಿಕೊಂಡರೆ ಸಾಕು" ಎಂದಾಗ ಹೇಗೂ ಸೀತಾಬಾಯಿ ಮತ್ತು ಅವಳ ಗಂಡ ಇಬ್ಬರು ಒಳ್ಳೆಯ ನೌಕರಿಯಲ್ಲಿದ್ದಾರೆ, ತಮ್ಮ ಮಗಳಿಗೆ ಶಾಲೆಗೆ ಕಳಿಸಿದರು ಕಳಿಸಬಹುದು ಎಂದು ಅನ್ನಿಸಿತು ಕಲಾವತಿಗೆ. ಆದರೂ ಮಗಳ ಮತ್ತು ಗಂಡನ ಒಪ್ಪಿಗೆ ಪಡೆಯದೇ ಕಳಿಸುವುದು ಸರಿಯಲ್ಲ ಎಂದು ಎನಿಸಿ.

"ಮೂರ್ನಾಲ್ಕು ದಿನ ಬಿಟ್ಟು ಇದೇ ಹೊತ್ತಿಗೆ ಬನ್ನಿ, ನಮ್ಮ ಮನೆಯವರಿಗೆ ಕೇಳಿ ತಿಳಿಸುತ್ತೇನೆ" ಎಂದು ಹೇಳಿ ಕಳಿಸಿದಳು. ಮನೆಗೆ ಬಂದ ಸೀತಾಬಾಯಿಯ ಗಂಡ ಗೋವಿಂದನನ್ನು ಕಳಿಸಿ ಗುಂಡಬಳಕ್ಕೆ ಬಂದಳು. ಅದಾದ ಮೇಲೆ ಗಂಡ ಮಗಳ ಒಪ್ಪಿಗೆಯನ್ನು ಪಡೆದು ಮಗಳನ್ನು ಅವರ ಜೊತೆ ಕಳಿಸಿಕೊಟ್ಟಿದ್ದಳು. ಅದೇ ವಾರವೇ ಮಗಳು ಅವರೊಂದಿಗೆ ದೂರದ ಸಾಗರಕ್ಕೆ ಹೊರಟು ಹೋಗಿದ್ದಳು. ಇದಾಗಿ ಆಗಲೇ ಒಂದು ವರ್ಷ ಕಳೆದುಹೋಗಿತ್ತು. ಈಗ ಅವರು ಬೇಸಿಗೆಯ ರಜೆಗೆ ಬರುವವರಿದ್ದರು. ಅವರ ಜೊತೆಗೆ ಇನ್ನೊಂದು ವಾರದಲ್ಲಿ ತಾನು ಊರಿಗೆ ಬರುತ್ತೇನೆ ಎಂದು ಮಗಳು ಹಾಕಿದ ಕಾಗದ ಬಂದು ಆಗಲೇ ಮೂರು ದಿನವಾಗಿತ್ತು. ಅವಳ ಕಾಗದದ ಪ್ರಕಾರ ಇಂದು ಮಗಳು ಮನೆಗೆ ಬರುವಳಿದ್ದಳು. ಹೇಗೂ ಬೆಳಿಗ್ಗೆ ಬಂದಿಲ್ಲ, ಸಾಯಂಕಾಲದ ಒಳಗೆ ಬರಬಹುದು. ಅದಕ್ಕೆ ಬೇಗ ಹೋಗಿ ಗುಂಡಬಳಕ್ಕೆ ಮೀನು ಮಾರಿ, ಒಂದು ಬಾರಿ ಮಾದನಗೇರಿಗೆ ಹೋಗಿ ಬಂದರೆ ಸಾಕು. ಮದ್ಯಾಹ್ನದ ಹೊತ್ತಿಗೆ ಮನೆಗೆ ಬಂದು ಬಿಡಬೇಕು, ಎನ್ನುವ ಯೋಚನೆಯಲ್ಲಿ ಗುಂಡಬಳಕ್ಕೆ ಬಂದಳು.

ಗುಂಡಬಳಕ್ಕೆ ಬಂದು ತಂದ ಮೀನನ್ನು ಕಾಲಿ ಮಾಡುವ ಹೊತ್ತಿಗೆ ಗಂಟೆ ಒಂಬತ್ತು ದಾಟಿತ್ತು. ಮಾದನಗೇರಿಗೆ ಹೋಗುವ ಕೆಲವು ಜನ ಪ್ರಯಾಣಿಕರು ಆಗಲೇ ಗುಂಡಬಳದ ಬಸ ನಿಲ್ದಾಣದ ಕಡೆ ಹೊರಡತೊಡಗಿದರು. ಅವರಲ್ಲಿ ಹೋಗುವುದನ್ನು ನೋಡಿ "ಹೋ! ಬಸ್ ಬರುವ ಸಮಯವಾಯಿತು" ಎನಿಸಿತು. ಮೀನು ತಂದ ಬುಟ್ಟಿಯನ್ನು ಕೊಳವೆ ಬಾವಿಯಲ್ಲಿ ತೊಳೆದ ಶಾಸ್ತ್ರ ಮಾಡಿ, ಬಸ್ ನಿಲ್ದಾಣದ ಕಡೆ ಹೊರಡತೊಡಗಿದಳು. ಅವಳು ಆ  ಊರ ಮುಖ್ಯ ಬೀದಿಯನ್ನು ದಾಟಿ ಒಂದಹತ್ತು ಹೆಜ್ಜೆ ಹೋಗಿರಬಹುದು, ಬಸ್ ಬರುವ ಸಪ್ಪಳ ಕೇಳಿಸಿದಂತಾಗಿ ಸೊಂಟಕ್ಕೆ ಹಿಡಿದ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಬಸ್ ನಿಲ್ದಾಣದ ಕಡೆ ಓಡಿದಳು. ಅವಳು ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಮಾದನಗೇರಿ ಕಡೆಯಿಂದ ಬಂದ ಬಸ್ಸು ನಿಲ್ದಾಣದಲ್ಲಿ ನಿಂತು, ಮಾದನಗೇರಿಯಿಂದ ಬಂದ ಪ್ರಯಾಣಿಕರು ಆಗಲೇ ಇಳಿಯುತಿದ್ದರು. ಮಾದನಗೇರಿ ಕಡೆ ಹೋಗುವ ಪ್ರಯಾಣಿಕರು ಬಸ್ ಏರಲು ಬಾಗಿಲಲ್ಲಿ ನಿಂತುಕೊಂಡಿದ್ದರು. ಮಾದನಗೇರಿಗೆ ಹೋಗುವ ಪ್ರಯಾಣಿಕರಲ್ಲಿ ತಾನು ಒಬ್ಬಳಾಗಿ ನಿಂತುಕೊಂಡು, ಬಸ್ ಏರಿ ಹಿಂಬದಿಯ ಸೀಟಿನ ಕೆಳಗೆ ತನ್ನ ಬುಟ್ಟಿ ತುರುಕಿ, ಅದರ ಮೇಲಿನ ಸೀಟಿನಲ್ಲಿ ತಾನು ಕುಳಿತುಕೊಂಡಳು.

ಬಸ್ಸು ಮಾದನಗೇರಿ ತಲುಪಿದಾಗ ಬಸ್ಸಿಂದ ಇಳಿದು, ಸೀದಾ ಮೀನು ಮಾರುಕಟ್ಟೆಗೆ ಹೋಗಿ, ತಾನು ದಿನಾ ಮೀನು ತೆಗೆದು ಕೊಳುತ್ತಿದ್ದ ತುಳಸಿಯ ಬಳಿ ಹೋಗಿ, ತನಗೆ ಸಂಜೆ ಮೀನು ಇಡುವುದು ಬೇಡ, ತಾನು ಬರಲ್ಲ ಎಂದು ಹೇಳಿದಾಗ, ತುಳಸಿ, "ಯಾಕೆ ಕಲಾವತಿ, ಇಂದೇನು ವಿಶೇಷ, ಯಾಕೆ ಇವತ್ತು ಮೀನು ತೆಗೆದುಕೊಳ್ಳುವುದಿಲ್ಲ" ಎಂದು ಕೇಳಿದಾಗ "ಏನಿಲ್ಲ ತುಳಸಿ, ಇಂದು ಮಗಳು ಮನೆಗೆ ಬರುತ್ತಾಳೆ, ಅದಕ್ಕೆ ಬೇಗ ಮನೆಗೆ ಹೋಗಬೇಕು" ಎಂದು ಹೇಳಿ ಅವಳಿಂದ ಮೀನು ತೆಗೆದುಕೊಂಡು ಬಸ್ಸ್ ನಿಲ್ದಾಣಕ್ಕೆ ಬಂದಳು. ೧೧ ಗಂಟೆಯ ಬಸ್ಸು ಗುಂಡಬಳಕ್ಕೆ ಹೋಗಲು ತಯಾರಿಯಾಗಿ ನಿಂತಿತ್ತು. ಎಂದಿನಂತೆ ಮತ್ತೆ ಹಿಂದಿನ ಸೀಟಿನಲ್ಲಿ ಕೆಳಗೆ ಬುಟ್ಟಿ ಇಟ್ಟು ಕುಳಿತು ಕೊಂಡಳು.

ಗುಂಡಬಳಕ್ಕೆ ಬಂದು ಮೀನು ಮಾರಿ ಬೇಗ ಮನೆಗೆ ಹೋಗಬೇಕೆಂದಿದ್ದರು ಮೀನು ಮಾರಿ ಮುಗಿಸುವಷ್ಟರಲ್ಲಿ ಎರಡು ಗಂಟೆ ದಾಟಿತ್ತು. ಸೂರ್ಯ ಪಶ್ಚಿಮದೆಡೆಗೆ ಸರಿದದ್ದನ್ನು ನೋಡಿ ಮದ್ಯಾಹ್ನ ಕಳೆದ ಅನುಭವವಾಗಿ, ಮನೆಯತ್ತ ದೌಡಾಯಿಸುತ್ತಾ ಹೊರಟಳು. ಮನೆ ತಲುಪುತಿದ್ದಂತೆ, ಮನೆಗೆ ಆಗಲೇ ಮಗಳು ಬಂದಿರಬಹುದೇನೋ ಎಂದು "ತಂಗಿ", "ತಂಗಿ" ಎಂದು ಕರೆದಳು. ಮನೆಯಿಂದ ಯಾವುದೇ ಉತ್ತರ ಬಾರದರಿಂದ ಒಮ್ಮೆ ನಿರಾಸೆಯಾಯಿತು, ಸಾಯಂಕಾಲ ಬರಬಹುದೇನೋ? ಎಂದನಿಸಿ ಬುಟ್ಟಿಯನ್ನು ತೆಂಗಿನ ಮರದ ಬುಡದಲ್ಲಿಟ್ಟು, ಕೈ ಕಾಲು ತೊಳೆದು  ಅಡಿಗೆ ಕೆಲಸ ಮಾಡತೊಡಗಿದಳು. ಅಡಿಗೆ ಮುಗಿಸಿ, ಮಗಳು ಬರಬಹುದೇನೋ ಎಂದು ಒಂದೆರಡು ಬಾರಿ ಮನೆಯ ಹೊರಬಂದು ನೋಡಿ ಹೋದಳು. ಹಸಿವೆಯಾದಂತೆ ಅನಿಸಿ ಅಡಿಗೆ ಕೋಣೆ ಸೇರಿ ಮಾಡಿಟ್ಟ ಅಡಿಗೆಯಲ್ಲಿ ಒಂದಿಷ್ಟು ಬಡಿಸಿಕೊಂಡು ಹೊಟ್ಟೆಗೆ ಸೇರಿಸಿ, ಮನೆಯಿಂದ ಹೊರಬಂದು, ನಿನ್ನೆ ನೀರಿನಲ್ಲಿ ನೆನೆಸಿಟ್ಟ ಒಣ ತೆಂಗಿನ ಹೆಡೆಯನ್ನು ತೆಗೆದುಕೊಂಡು ಅಂಗಳಕ್ಕೆ ಬಂದು, ಅದನ್ನು ನೆಣೆಯಲು ಪ್ರಾರಂಭಿಸಿದಳು, ಮುಂದಿನ ಬೇಸಿಗೆಗೆ ಮನೆ ಹೊದಿಸಲು ನೆಣೆದ ತೆಂಗಿನ ಗರಿಗಳು ಬೇಕು ಎಂದು, ಆಗಾಗ ಬೇರೆ ಏನು ಕೆಲಸ ವಿಲ್ಲದಾಗ ಆಗಾಗ ತೆಂಗಿನ ಗರಿಗಳನ್ನು ನೆಣೆದು ಒಂದೆಡೆ ಸಾಕಿಡುತ್ತಿದ್ದಳು.

ಇನ್ನೇನು ಅರ್ಧ ಮಡಲನ್ನು ನೆಣೆದಿರಬಹುದು, ಮಗಳು ದೋಣಿಯಲ್ಲಿ ಆ ದಡ ದಾಟಿ, ಈ ದಡದತ್ತ ಬರುವುದು ಕಣಿಸಿತು. ಅರ್ಧ ನೆಣೆದ ಮಡಲನ್ನು ಅಲ್ಲಿಯೇ ಬಿಟ್ಟು ಹಳ್ಳದ ದಂಡೆಗೆ ಓಡಿದಳು. ಮಗಳನ್ನು ಹೊತ್ತ ದೋಣಿ ಹತ್ತಿರ ಬರುತ್ತಿದ್ದಂತೆ, ತಾನು ದಡದಿಂದ ಇಳಿದು ದೋಣಿಯೆಡೆಗೆ ಹೋದಳು. ಮಗಳು ದೋಣಿಯಿಂದ ಇಳಿಯುತ್ತಿದಂತೆ "ನಿಧಾನ, ನಿಧಾನ" ಎಂದು ಹೇಳಿ ಇಳಿದ ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋದಳು.

ಮಗಳನ್ನು ಜೊತೆಗೆ ಕರೆದುಕೊಂಡು ಮನೆಗೆ ಹೋಗುವಾಗ, ಮಗಳ ದೇಹ ಸ್ಥಿತಿ ನೋಡಿ ಮಗಳು ಸ್ವಲ್ಪ ಸೊರಗಿದಂತೆ ಅನ್ನಿಸಿ " ಏನೆ ಬಹಳ ಬಾರೀಕಾಗಿದ್ದಿಯಾ?" ಯಾಕೆ ಸರಿಯಾಗಿ ಊಟ ಮಾಡಿಲ್ವೋ ಹೆಂಗೆ? ಎಂದು ತರಾಟೆಗೆ ತೆಗೆದುಕೊಂಡಳು ಕಲಾವತಿ.

"ಸರಿಯಾಗಿ ಊಟ ಮಾಡಕ್ಕೆ, ಸರಿಯಾಗಿ ಊಟ ಹಾಕಿದರೆ ತಾನೆ?" ಎಂದು ಮಗಳು ಹೇಳಿದಾಗ, ಕಲಾವತಿಗೆ ಒಮ್ಮೆಲೆ ಆಶ್ಚರ್ಯವಾಯಿತು.

"ಅಂದರೆ, ಅವರು ನಿನ್ನ ಓದಿಸಲು ಕರೆದುಕೊಂಡು ಹೋದವರಲ್ಲವೇ?"

"ಅಯ್ಯೋ ಅಮ್ಮಾ, ಅದು ನಿನ್ನ ನಂಬಿಸಲು ಅವರು ಹಾಗೆ ಹೇಳಿದ್ದು. ಅವರು ನನ್ನನ್ನು ಕರೆದುಕೊಂಡು ಹೋಗಿದ್ದು ಅವರ ಮನೆ ಕೆಲಸಕ್ಕೆ ಮತ್ತು ಅವರ ಮಗು ಆಡಿಸಲಿಕ್ಕೆ. ನೀನು ಎಲ್ಲಿ ಮಗಳನ್ನು ಕಳಿಸುವುದಿಲ್ಲವೋ ಎಂದು ತಿಳಿದು, ನಿನಗೆ ಹಾಗೆ ಹೇಳಿದ್ದಾರೆ. ಅವರ ಮನೆಯಲ್ಲಿ ಕೆಲಸ ಮಾಡಿ, ಮಾಡಿ ಸುಸ್ತಾಗಿ ಹೋಯ್ತು. ಎಷ್ಟೋ ಸಾರಿ ಬಿಟ್ಟು ಬರಲು ಪ್ರಯತ್ನಿಸಿದೆ. ಆದರೆ ಬರಲು ರೊಕ್ಕ ಬೇಕಲ್ಲ. ಅದಕ್ಕೆ ಸುಮ್ಮನೆ ಉಳಿಯಬೇಕಾಯಿತು. ಹೋಗಲಿ ಊಟನಾದ್ರೂ ಸರಿ ಹಾಕುತಿದ್ರಾ ಅದೂ ಕೂಡ ಸರಿ,ಇಲ್ಲ. ದಯವಿಟ್ಟು ಮತ್ತೆ ಅವರು ಬಂದು ನನ್ನ ಕಳಿಸಿಕೊಡು ಎಂದರೆ ಕಳಿಸಿಕೊಡಬೇಡಮ್ಮಾ " ಎಂದು ಮಗಳು ಹೇಳಿದಾಗ, ಕಲಾವತಿಯಲ್ಲಿ ಇಲ್ಲಿಯವರೆಗಿದ್ದ ಉತ್ಸಾಹ ಇಳಿದು ಹೋಗಿತ್ತು. ಏನೋ ಅವರ ಮಾತು ನಂಬಿ ತನ್ನ ಮಗಳನ್ನು ಆ ಹಾಳು ಜನರಿದ್ದಲ್ಲಿ ಕಳಿಸಿ ತಪ್ಪು ಮಾಡಿ ಬಿಟ್ಟೆನಲ್ಲ, ಅನಿಸಿ "ಇನ್ನೊಮ್ಮೆ ಮತ್ತೆ ಮಗಳನ್ನು ಕರೆಯಲು ಬರಲಿ ಅವನ ಚಟ ಬಿಡಿಸಿ ಬಿಡುತ್ತೇನೆ" ಎಂದು ಮನಸ್ಸಲ್ಲೇ ಹೇಳಿಕೊಂಡು ಹಸಿದ ಮಗಳಿಗೆ ಊಟ ಬಡಿಸಲು ಒಳಗೆ ಹೊರಟಳು.

--ಮಂಜು ಹಿಚ್ಕಡ್

No comments:

Post a Comment