Monday, August 19, 2013

ಗಂಗಾವಳಿ (ಬೇಡ್ತಿ )

(೧೯೯೯-೨೦೦೦ ರಲ್ಲಿ ಗಂಗಾವಳಿ ನದಿಗೆ ಬೇಡ್ತಿ ಯೋಜನೆ ಜಾರಿಗೆ ಬರುತ್ತದೆ ಎಂದಾಗ ಬರೆದ ಕವನ. )

ಮೈತುಂಬಿ ಕುಣಿಯುತಿದೆ 
ಗಂಗಾವಳಿಯ ನಡುವು
ಮೇನಕೆಯನೇ ನಾಚಿಸುವ
ಆ ನಿನ್ನ ಚೆಲುವು.

ಸಹ್ಯಾದ್ರಿಯ ತಪ್ಪಲೇ
ನಿನ್ನಯ ತಾಣ
ನಿನ್ನಿಂದಲೇ ಉಳಿದಿಹುದು
ಬಡ ರೈತರ ಪ್ರಾಣ.

ನಡು ಬಗ್ಗಿಸಿ, ತನು ತಗ್ಗಿಸಿ
ನೀ ಕುಣಿಯುವೆ ನ್ರತ್ಯ
ಆ ಗಂಗೆಯೇ ನಿನ್ನವ್ವ
ಎನ್ನುವುದು ಸತ್ಯ.

ಮಳೆಗಾಲ ಬಂದೊಡನೆ
ನಿನಗೆ ತುಂಬು ಜವ್ವನ
ಅಪ್ಪಿಕೊಳ್ಳಲು ಓಡುತ್ತಿರುವೆ
ನಿನ್ನ ಪ್ರಿಯ ಮಾವನ.

ನಿನ್ನಲ್ಲಿ ಹುದುಗಿಹುದು
ಹಲವು ಜೀವರಾಶಿ
ಇಕ್ಕಲಗಳ ದೇಗುಲಗಳೇ
ಹರಿದ್ವಾರ ಕಾಶಿ.

ಕವಿಗಳಿಗೆ ಪ್ರಿಯವು
ಆ ನಿನ್ನ ಮಡಿಲು
ಇದುವರೆಗೂ ಗುಪ್ತವು
ಆ ನಿನ್ನ ಒಡಲು

ಪತಿವ್ರತೆಯು ನೀ
ಕಂಡಿಲ್ಲ ಕೊಳಕು
ನೀ ಹಾಕಿ ಕುಳಿತಿರುವೆ
ಇಬ್ಬನಿಯ ಮುಸುಕು.

ಈಗಾಗಲೇ ಬಿದ್ದಿವೆ
ಶತ್ರುಗಳ ಕಣ್ಣು
ಹಬ್ಬಿಸಿ ಬಿಟ್ಟಿದ್ದಾರೆ 
ಬೇಡ್ತಿಯ ಹುಣ್ಣು.

ನಾನಿರುವವರೆಗೆ ಹೆದರಬೇಡ
ಓ ನನ್ನ ದೇವಿ
ಸಮಯ ಬಂದಾಗ ಎತ್ತಿದರಾಯ್ತು
ಅಹಿಂಸೆಯ ಕೋವಿ.

-- ಮಂಜು ಹಿಚ್ಕಡ್

1 comment: