ಓ ಹುಣ್ಣಿಮೆಯ ಚಂದಿರ
ಕೆಣಕುತಿಹೆ ಏನು ನನ್ನ
ಕನಸುಗಳ ಹಂದರ.
ಒಳಹೊಕ್ಕು ಮನೆ ಮನೊದಳು,
ನಿನ್ನ ಬೆಳಕನ್ನು ಬಿಟ್ಟು
ನಿನಗಲ್ಲದೇ ಇನ್ನಾರಿಗೆ ಗೊತ್ತು
ನನ್ನ ಕನಸುಗಳ ಗುಟ್ಟು.
ದುಡಿಯುವ ಚೈತನ್ಯವಿದೆ,
ಸಾಧಿಸುವ ಬಯಕೆಗಳಿವೆ.
ಹಣವಿಲ್ಲ ಕೂಡಿಡಲು,
ಆದರೂ ಮನದಿ ಆಶೆಗಳಿವೆ.
ಹಗಲಲ್ಲಿ ಸೂರ್ಯನ ಬೆಳಕು
ರಾತ್ರಿ ನಿನ್ನಯ ಬೆಳಕು
ಮನೆಯ ಒಳ ಬರುವಾಗ
ಇನ್ನೇಕೇ ಬೇಕು ನನಗೆ
ಉಳಿದ ಬೆಳಕು.
ನನ್ನ ಮನೆ ಕೌರವರ
ಚಕ್ರವ್ಯೂಹವಲ್ಲ,
ಒಳ ಬಂದವರು, ಹೊರಹೋಗಲು
ಮುರಿದ ಬಾಗಿಲುಗಳುಂಟಲ್ಲ.
ಗೋಡೆಯುಂಟು, ಬಾಗಿಲುಂಟು
ಕಳ್ಳ ಬಂದರೂ ಕಳೆಯಲೂ ಏನಿಲ್ಲ
ಸೊಳ್ಳೆಗಳುಂಟು, ತಿಗಣೆಗಳುಂಟು
ನಾನಿರುವಾಗ ಅವಕ್ಕೆ ತೊಂದರೆ ಇಲ್ಲ.
ಕೆಳಗೆ ಹರಿದ ಚಾಪೆ,
ಮೇಲೆ ಸೋರುವ ಮಾಡು
ಎಂದು ನನಸಾಗುವುದೋ,
ನನ್ನ ಕನಸಿನ ಗೂಡು.
--ಮಂಜು ಹಿಚ್ಕಡ್
No comments:
Post a Comment