Tuesday, January 28, 2014

ವರ್ಷ ಹತ್ತು ಕಳೆದರೂ, ಬತ್ತದ ನೆನಪು!

ಇಂದಿಗೆ ಹತ್ತು ವರ್ಷಗಳ ಹಿಂದೆ, ಆಗಿನ್ನೂ ನಾನು ಬೆಂಗಳೂರಿಗೆ ಬಂದ ಹೊಸತು. ಮನದಲ್ಲಿ ಏನೇನೋ ಆಶೆಗಳು, ತವಕಗಳು, ದುಗುಡಗಳು. ಒಮ್ಮೊಮ್ಮೆ ಏನೂ ಇಲ್ಲ ಎನ್ನುವ ಆತಂಕ, ಮತ್ತೊಮ್ಮೆ ಏನು ಇಲ್ಲದಿದ್ದರೂ ಎಲ್ಲಾ ಇವೆ ಎನ್ನುವ ಉತ್ಸಾಹ. ಎಂ.ಸಿ.ಏ. ಪದವಿಯ ಕೊನೆಯ ಶಿಕ್ಷಣಾವಧಿಯ ವಿದ್ಯಾರ್ಥಿಯಾಗಿ, ಏನಾದರೂ ಒಂದು ಪ್ರೊಜೆಕ್ಟ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಬಂದವ ನಾನು. ಪರಿಚಿತರಿದ್ದರೂ ಅಪರಿಚಿತ ಎನಿಸುವ ಊರು, ಅಪರಿಚಿತ ರಸ್ತೆಗಳು, ಅಪರಿಚಿತ ಜನರು. ಇವೆಲ್ಲವುಗಳ ಮದ್ಯೆ ನಾನು ಬೆರಳಣಿಕೆಯಷ್ಟೇ ಜನರಿಗೆ ಪರಿಚಿತನಾಗಿ, ಹಲವರಿಗೆ ಅಪರಿಚಿತನಾಗಿ ಬೆಂಗಳೂರು ಎನ್ನುವ ಮಾಯಾಲೋಕದೊಳಗೆ ಸೇರಿಕೊಂಡಿದ್ದೆ. ಬಂದ ಹೊಸದರಲ್ಲಿ ಎಲ್ಲವೂ ವಿಶ್ಮಯ, ಎಲ್ಲೆಲ್ಲೂ ವಾಹನಗಳಿಂದ ಕಿಕ್ಕಿರಿದು ತುಂಬಿರುವ ರಸ್ತೆಗಳು, ಹತ್ತು ಇಪ್ಪತ್ತು ಮಾರಿಗೆ ಒಂದು ಸಿಗ್ನಲಗಳು. ಬಸಿರಾದ ಹೆಂಗಸಿನಂತೆ ಜನರನ್ನು ತುಂಬಿಕೊಂಡು ಓಡಾಡುವ ಬಿಎಂಟಿಸಿ ಬಸ್ಸುಗಳು. ರಸ್ತೆಯ ಮಗ್ಗುಲಗಳಲ್ಲಿ ಅಲ್ಲಲ್ಲಿ ಕಾಣ ಸಿಗುವ ಚಿಕ್ಕ ಪುಟ್ಟ ಉದ್ಯಾನವನಗಳು. ಒಂದು ಉದ್ಯಾನವನ್ನು ದಾಟಿ ಐವತ್ತು ಅರವತ್ತು ಮೀಟರ್ ಹೋದರೆ ಇನ್ನೊಂದು ಉದ್ಯಾನವನ. ಆ ಎಲ್ಲಾ ಉದ್ಯಾನವನಗಳನ್ನ ನೋಡಿದ ಮೇಲೆ ಅನಿಸುತಿತ್ತು, ಬಹುಷಃ ಇದಕ್ಕೆ ಬೆಂಗಳೂರನ್ನು "ಉದ್ಯಾನ ನಗರಿ" ಎಂದು ಕರೆದಿರಬೇಕೆಂದು.

ಬೆಂಗಳೂರಿಗೆ ಬಂದ ಒಂದು ತಿಂಗಳಲ್ಲಿಯೇ ಬಹುಪಾಲು ಬೆಂಗಳೂರನ್ನೂ ನೋಡಿಯಾಗಿತ್ತು, ಊರಿಂದ ಬರುವಾಗ ತಂದ ಕಾಸು ಕಾಲಿಯಾಗುತ್ತಾ ಬಂದಿತ್ತು, ಆದರೆ ಕೈಯಲ್ಲಿ ಪ್ರೊಜೆಕ್ಟ ಆಗಲಿ, ಕೆಲಸವಾಗಲಿ ಇರಲಿಲ್ಲ. ಮೊದಲಿನ ತರಹ ಸುತ್ತಾಡುವ ಆಸಕ್ತಿ ಕೂಡ ಕಡಿಮೆಯಾಗುತ್ತಾ ಬಂತು. ಬಂದ ಒಂದು ತಿಂಗಳಿಗೆ ಬೇಜಾರು ಬರಲು ಪ್ರಾರಂಭವಾಯಿತು. ಬೇಜಾರು ಎಂದು ವಾಪಸ್ ಊರಿಗೆ ಹೋಗುವಂತಿಲ್ಲ, ಪ್ರೊಜೆಕ್ಟ ಮುಗಿಸಿಯೇ ಹೋಗಬೇಕು. ಅಲ್ಲಿ ಇಲ್ಲಿ ಸುತ್ತಾಡಿದ್ದೇ ಬಂತು, ಪ್ರೊಜೆಕ್ಟ ಮಾತ್ರ ಸಿಗುತ್ತಿರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಪ್ರೊಜೆಕ್ಟ ಕೊಡಿಸುತ್ತೇನೆಂದು ಕೊಟ್ಟ ಬರವಸೆಗಳು ಬರವಸೆಗಳಾಗಿಯೇ ಉಳಿದ್ದವು. ಪ್ರೊಜೆಕ್ಟಗಾಗಿ ಸುತ್ತದ ಪ್ರದೇಶವಿರಲಿಲ್ಲ. ಬಿಟಿಎಂನಿಂದ ಕಾಲು ನಡಿಗೆಯಲ್ಲಿ ಹೊರಟರೆ ಕೋರಮಂಗಲ, ಬೊಮ್ಮನಹಳ್ಳಿ, ಎಚ್.ಎಸ್.ಆರ್. ಲೆ ಔಟಗಳನ್ನೆಲ್ಲ ಸುತ್ತಾಡಿ, ಸುಸ್ತಾಗಿ ರಾತ್ರಿ ನಿರಾಶರಾಗಿ ಮನೆ ತಲುಪುತಿದ್ದೆವು ಕೈಯಲ್ಲಿ ಪ್ರೊಜೆಕ್ಟ ಇಲ್ಲದೇ. ಮುಂದೇನು ಮಾಡುವುದು ಎಂದು ತಲೆ ಕೆರೆದುಕೊಂಡರೆ ತೆಲೆ ಹುಣ್ಣಾಗುತಿತ್ತೇ ಹೊರತು ಮನಸ್ಸಿಗೆ ಏನು ತೋಚುತ್ತಿರಲಿಲ್ಲ.

ಇಂತಹ ಬೇಸರದ ಸಂದರ್ಭಗಳಲ್ಲಿ ಮನೆಯಲ್ಲಿ ಕುಳಿತು ಕೊಳ್ಳಲು ಆಗದೇ, ಮನೆಯಿಂದ ಹೊರಬಂದು ಎಲ್ಲಿ ಹೋಗುವುದು ಎಂದು ತಿಳಿಯದೇ, ವಿಜಯನಗರದ ಬಸ್ ನಿಲ್ದಾಣದ ಕಲ್ಲು ಬೆಂಚಿನ ಮೇಲೆ ಗಂಟೆ ಗಟ್ಟಲೆ ಕುಳಿತಿದ್ದಿದೆ. ಅಲ್ಲಿ ಹಾಗೆ ಕುಳಿತಾಗ ಮನಸ್ಸಿಗೆ ಅದೇನೋ ಹಿತ. ನನ್ನಂತೆ ಅದೆಷ್ಟೋ ಜನ ಹಾಗೆ ಕುಳಿತಿರುತಿದ್ದರು. ಕೆಲವರು ಯಾವುದೋ ಸ್ಥಳದ, ಯಾವುದೋ ನಂಬರಿನ ಬಸ್ಸಿನಲ್ಲಿ ಬರಲಿರುವ ತಮ್ಮ ಪರಿಚಿತರಿಗಾಗಿ ಕಾದು ಕುಳಿತಿದ್ದರೆ, ಕೆಲವರು ಅಲ್ಲಿಗೆ ಹೋಗಲಿರುವ ಬಸ್ಸುಗಳಿಗೆ ಕಾದು ಕುಳಿತಿರುತಿದ್ದರು. ಕೆಲವು ಹುಡುಗರಂತು ಅಲ್ಲಿಗೆ ಬಣ್ಣ ಬಣ್ಣದ ಧಿರಿಸು ತೊಟ್ಟು ಬರುವ ಹುಡುಗಿಯರನ್ನೇ ನೋಡಲು ಬಂದು ಕುಳಿತಿರುತಿದ್ದರು. ತಮ್ಮ ಬಾಳಿನ ಮುಸ್ಸಂಜೆಯಲ್ಲಿದ್ದ ಕೆಲವರು ಮನೆಯಲ್ಲಿ ವೇಳೆ ವ್ಯಯಿಸಲಾಗದೇ ಇಲ್ಲಿ ಸುಮ್ಮನೆ ಬಂದು ಕುಳಿತು ಹೋಗುತಿದ್ದರು.

ನಮ್ಮ ಬದುಕಿನ ಪಯಣದಲ್ಲಿ ಜೊತೆ ಬಂದು ಹೋಗುವ ಅದೆಷ್ಟೋ ರೀತಿಯ ನಡತೆಯ ವ್ಯಕ್ತಿಗಳನ್ನು ಆ ಬಸ್ ನಿಲ್ದಾಣದಲ್ಲಿ ಒಂದೆರಡು ಗಂಟೆ ನಿಂತರೆ ನೋಡಬಹುದು. ಒಂದೊಂದು ಕ್ಷಣಕ್ಕೂ ಒಂದೊಂದು ರೀತಿಯ ಜನರನ್ನ ಅಲ್ಲಿ ನೋಡಬಹುದು. ಅಲ್ಲಿ ಬರುವ ಪ್ರತಿಯೊಂದು ಜೀವಿಯಲ್ಲೂ ಒಂದೊಂದು ತೆರನಾದ ಭಾವನೆ, ಕೆಲವರಿಗೆ ಇನ್ನೂ ಏಕೆ ಬಸ್ಸು ಬರಲಿಲ್ಲ ಎನ್ನುವ ಚಿಂತೆಯಾದರೆ, ಇನ್ನೂ ಕೆಲವರಿಗೆ ಬಸ್ಸು ಇಷ್ಟು ಬೇಗ ಬಂದಿತೇಕೆ ಎನ್ನುವ ಚಿಂತೆ. ಇಂದ್ರಪ್ರಸ್ಥ ಹೊಟೇಲಿನ ಎದುರಿಗೆ, ಬಸ್ ನಿಲ್ದಾಣದ ಪಕ್ಕದಲ್ಲಿ ಹಳೆಯ ಇಂಗ್ಲೀಷು ಪುಸ್ತಕ ಮಾರುವ ಆತನಿಗೆ, ಅಲ್ಲೇ ಪಕ್ಕದಲ್ಲಿ ಬಸ್ಸಿಗಾಗಿ ಕಾದು ನಿಂತು ಹಾಳು ಹರಟೆ ಹೊಡೆಯುವ ಜನರಲ್ಲಿ ಒಂದಿಬ್ಬರಾದರೂ ಬಂದು ತನ್ನ ಪುಸ್ತಕ ಕೊಳ್ಳಬಾರದೇ ಎನ್ನುವ ಚಿಂತೆ. ಬಸ್ ನಿಲ್ದಾಣದ ನಡುವಲ್ಲಿ ಎಸ್.ಟಿ.ಡಿ. ಇಟ್ಟುಕೊಂಡವನಿಗೆ, ಈ ಹಾಳು ಮೊಬೈಲಗಳು ಬಂದು ಜನ ತನ್ನಿದ್ದಲ್ಲಿಗೆ ಕರೆ ಮಾಡಲು ಬರುವುದನ್ನು ಕಡಿಮೆ ಮಾಡಿ ಬಿಟ್ಟರಲ್ಲಾ ಎನ್ನುವ ಚಿಂತೆ. ಆ ಒಂದು ರೂಪಾಯಿ ಹಾಕಿ ಕರೆ ಮಾಡುವ ಆ ಫೋನಿಗೆ ದಿನಾ ಅಷ್ಟೊಂದು ಒಂದು ರೂಪಾಯಿಯನ್ನು ಎಲ್ಲಿಂದ ತಂದು ಹಾಕುವುದು ಅದೂ ಈ ಚಿಲ್ಲರೆಯ ಅಭಾವದ ಕಾಲದಲ್ಲಿ ಎನ್ನುವ ಚಿಂತೆ ಆ ಕಾಯಿನ್ ಬೂತ್ ಇಟ್ಟು ಕೊಂಡವನಿಗೆ. ಆ ಚಪ್ಪಲಿ ಹೊಲಿಯುವನಲ್ಲಿ ಒಂದು ಚಪ್ಪಲಿ ಹೊಲಿಯಲು ಬಿಟ್ಟು, ಉಳಿದ ಇನ್ನೊಂದು ಎತ್ತರದ ಹಿಮ್ಮಡಿಯ ಚಪ್ಪಲಿಯನ್ನು ಕಾಲಲ್ಲೇ ಧರಿಸಿ, ಕಿವಿಗೆ ಮೊಬೈಲ್ ತೂರಿಸಿ ಮಾತನಾಡುತ್ತಾ ಬೆಳ್ಳಕ್ಕಿಯಂತೆ ನಿಂತ ಆ ಚಲುವೆಗೆ, ಇವನಿಗೆ ಇನ್ನೆಷ್ಟು ಹೊತ್ತು ಬೇಕಪ್ಪಾ ಆ ಚಪ್ಪಲಿಯ ಕಳಚಿದ ಹಿಮ್ಮಡಿ ಹೊಲಿಯಲು ಎನ್ನುವ ಚಿಂತೆ.

ಕಳೆದ ಅರ್ಧ ಗಂಟೆಯಿಂದ ನಿಂತ ಬಸನಲ್ಲಿ ಕುಳಿತ ಪ್ರಯಾಣಿಕರಿಗೆ, ಟಿಕೇಟ್ ತೆಗೆದು ಚಹಾ ಕುಡಿಯಲು ಹೋದ ಆ ಕಂಡಕ್ಟರ್ ಹಾಗೂ ಚಾಲಕ ಎಷ್ಟು ಹೊತ್ತಿಗೆ ಬರುತ್ತಾರೋ ಎನ್ನುವ ಚಿಂತೆ. ಅದರಲ್ಲೂ ಹಿಂದೆ ಬಂದ ಬಸ್ಸುಗಳಲ್ಲ ಕಾಲಿ ಕಾಲಿ ಹೋಗುತ್ತಿರುವಾಗ ಅಷ್ಟು ಬೇಗ ಬಂದು ಈ ಬಸ್ಸು ಹತ್ತಬಾರದಿತ್ತು, ಏಕೆ ಹತ್ತಿ ಬಿಟ್ಟೇನಪ್ಪ ಎನ್ನುವ ಚಿಂತೆ.

ಜಯನಗರದಿಂದ ಕೊಡಬೇಕಾದ ಚಿಲ್ಲರೆಯನ್ನು, ಮುಂದಿನ ನಿಲ್ದಾಣದಲ್ಲಿ ಚಿಲ್ಲರೆ ಕೊಡುತ್ತೇನೆ ಈಗ ಚಿಲ್ಲರೆ ಇಲ್ಲ ಎಂದು ಕಾಡಿಸಿ ಕಾಡಿಸಿ, ವಿಜಯನಗರ ಬಂದೊಡನೆ ಆತನೊಂದಿಗೆ ಹಿಂದಿನ ಬಾಗಿಲಲ್ಲಿ ಇಳಿದ ಕಂಡಕ್ಟರ್ ಚಿಲ್ಲರೆ ಕೊಡದೇ, ಇವನು ಚಿಲ್ಲರೆ ಕೇಳುತ್ತಿದ್ದರೂ ಲಕ್ಷಕೊಡದೇ ಮುಂದಿನ ಬಾಗಿಲಲ್ಲಿ ಹತ್ತಿ ಹೆಂಗಳೆಯರ ಮದ್ಯೆ ತೂರಿಕೊಂಡಾಗ, ಟಿಕೇಟ್ ಹಿಂಬಾಗದಲ್ಲಿ ೪೨ ಎಂದು ಬರೆದಿದ್ದ ಕಂಡಕ್ಟರನ ಹಸ್ತಾಕ್ಷಾರ, ಕಂಡಕ್ಟರ್ ಆತನಿಗೆ ಕೊಡಬೇಕಾದ ಚಿಲ್ಲರೆಯನ್ನು ನೆನಪಿಸುತಿತ್ತು. ಅದನ್ನು ಮತ್ತೆ ಮತ್ತೆ ನೋಡಿದ ಆತನಿಗೆ ಹಾಳು ಕಂಡಕ್ಟರ್ ಚಿಲ್ಲರೆ ಕೊಡದೇ ಹೋದನಲ್ಲ ಎನ್ನುವ ಚಿಂತೆ.

"ಈ ಬಸ್ ಮೆಜೆಸ್ಟಿಕ್ ಹೋಕ್ಕೇತ್ತೇನ್ರೀ" ಎಂದು ಮೆಜೆಸ್ಟಿಕ್ ಕಡೆ ಹೋಗುವ ಬಸ್ಸುಗಳನ್ನು ತೋರಿಸಿ ಒಂದಿಬ್ಬರು ಬೆಂಗಳೂರಿಗರನ್ನು ಕೇಳಿದಾಗ ಅವರ "ನೋ ಐಡಿಯಾ" ಎನ್ನುವ ಉತ್ತರ ಅರ್ಥವಾಗದೇ ಓಡಾಡುತ್ತಿದ್ದ ಉತ್ತರ ಕರ್ನಾಟಕದ ಆತನಿಗೆ, ಅಲ್ಲಿದ್ದ ಯಾರೋ ಒಬ್ಬ "ಆ ಬಸ್ ಹೋಕ್ಕೇತ್ರೀ, ಬನ್ರಿ" ಎಂದಾಗ, ಆತ ಏನೋ ಒಂದು ರೀತಿಯ ತನ್ನವರೆನ್ನುವ ಆತ್ಮೀಯತೆ ಆ ಉತ್ತರ ಕರ್ನಾಟಕದವನಿಗೆ. ಅಂತೂ ಇಷ್ಟು ಜನರಲ್ಲಿ ಒಬ್ಬನಾದರೂ ತಮ್ಮ ಊರ ಕಡೆಯವನು ಇದ್ದಾನಲ್ಲ ಎನ್ನುವ ಸಂತೋಷ.

ಸುಮಾರು ವರ್ಷಗಳಿಂದ ಬಿಡಿ ಹೂ ತಂದು, ಬಸ್ ನಿಲ್ದಾಣದ ಪಕ್ಕದಲ್ಲಿ ಒಂದಿಷ್ಟು ಕಡಲೆಕಾಯಿಯೊಂದಿಗೆ ಆ ಬಿಡಿ ಹೂಗಳನ್ನು ಪೋಣಿಸಿ ಮಾಲೆ ಕಟ್ಟುತ್ತಾ ಕುಳಿತು ಕೊಳ್ಳುವ ಆಕೆಗೆ, ಈ ಕಡಲೆಕಾಯಿ ಕೇಳಲು ಬರುವ ಜನ ತಾವು ಮುಡಿಯಲು ಅಲ್ಲದಿದ್ದರೂ ದೇವರಿಗೆ ಮುಡಿಸಲಾದರೂ ಈ ಹೂವ ಕೊಳ್ಳಬಾರದೇ ಎನ್ನುವ ಆಶೆ. ಕಡಲೆಕಾಯಿ ಉಳಿದರೆ ನಾಳೆ ಮಾರಬಹುದು, ಆದರೆ ಇಂದಿನ ಹೂವು ನಾಳೆಗೆ ಬಾಡುತ್ತದಲ್ಲ ಎನ್ನುವ ಚಿಂತೆ ಆಕೆಯ ಮೊಗದಲ್ಲಿ.

ಯಾರದೋ ಬರುವಿಗಾಗಿ ಕಳೆದರ್ಧ ಗಂಟೆಯಿಂದ ಕಾಯುತ್ತಾ ಕುಳಿತ ಆತನಿಗೆ, "ಥೂ, ಹಾಳಾದವರು, ಬಸ್ಸು ಹತ್ತಿದ ಮೇಲೆ ಫೋನು ಮಾಡುವುದನ್ನು ಬಿಟ್ಟು ಮನೆಯಲ್ಲಿರುವಾಗಲೇ ಫೋನು ಮಾಡುತ್ತಾರೆ" ಎಂದು ಬರುವವರಿಗಾಗಿ ಬಯ್ಯುತ್ತಾ ಕುಳಿತರೂ, ಅವರು ಇನ್ನರ್ಧ ಗಂಟೆ ಬಿಟ್ಟು ಬಂದು "ಕ್ಷಮಿಸಿ ಲೇಟಾಯ್ತು" ಎಂದಾಗ. "ಇರಲಿ ಪರವಾಗಿಲ್ಲ" ಎಂದು ಹುಸಿ ನಗೆ ಸೂಸಿ ಆತ್ಮೀಯತೆ ತೋರುವ ನಾಟಕೀಯತೆ.

ಕಳೆದ ಹತ್ತು ನಿಮಿಷದಿಂದ ಬಸ್ ನಿಲ್ದಾಣದ ಪಕ್ಕದಲ್ಲಿ ಆಟೋ ನಿಲ್ಲಿಸಿ ನಿಂತ ಆ ಕಾಲಿ ಆಟೋ ಚಾಲಕನಿಗೆ, ಬಸ್ಸಿಗಾಗಿ ಕಾಯುತ್ತಾ ನಿಂತ ಆ ನೂರಾರು ಜನರಲ್ಲಿ ಒಬ್ಬರಾದರೂ ಬಂದು ತನ್ನ ಆಟೋ ಹತ್ತಬಾರದೇ ಎನ್ನುವ ತವಕ. ಆಗ ತಾನೇ ಕಾಲೇಜು ಸೇರಿ ಸಿಗರೇಟು ಹೊತ್ತಿಸಲು ಕಲಿತ ಆತ, ಎಲ್ಲಿ ತನ್ನ ಪರಿಚಿತರಿಗೆ ಸಿಕ್ಕಿ ಹಾಕಿ ಕೊಳ್ಳುತ್ತೇನೋ ಎಂದು ಬಸ್ ನಿಲ್ದಾಣದ ಹಿಂಬಾಗದಲ್ಲಿ, ಇಂದ್ರಪ್ರಸ್ಥ ಹೊಟೇಲಿನ ಪಕ್ಕದ ಬೀಡಾ ಅಂಗಡಿಯ ಪಕ್ಕದಲ್ಲಿ ನಿಂತು, ಆ ಕಡೆ, ಈ ಕಡೆ ನೋಡುತ್ತಾ, ಹೆದರುತ್ತಾ ಉಗಿ ಬಂಡೆಯಂತೆ ಹೊಗೆ ಬಿಡುತ್ತಾ ನಿಂತಿದ್ದ.

ಈ ಎಲ್ಲ ಘಟನೆಗಳನ್ನು ಹತ್ತು ವರ್ಷಗಳ ಹಿಂದೆ ನಾನೂ ಬೆಂಗಳೂರಿಗೆ ಬಂದ ಹೊಸತರಲ್ಲಿ ನೋಡಿದ್ದು, ಅನುಭವಿಸಿದ್ದು. ನಾನು ವಿಜಯನಗರ ಬಿಟ್ಟು ಜೇ.ಪಿ.ನಗರ ಸೇರಿ ಆಗಲೇ ಐದಾರು ವರ್ಷಗಳು ಕೂಡ ಕಳೆದು ಹೋಗಿವೆ. ವಿಜಯನಗರದ ಬಸ್ ನಿಲ್ದಾಣವು ಮೊದಲಿಗಿಂತ ಹೆಚ್ಚು ದೊಡ್ಡದಾಗಿ ಬೆಳೆದಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಶೃಂಗಾರಗೊಂಡಿದೆ. ಆದರೆ ಹೊಸದಾಗಿ ಬಂದ ಬೆಂಗಳೂರಿಗರಿಗೆ ಮಾತ್ರ ಆ ಬಸ್ ನಿಲ್ದಾಣ ನನಗಾದ ಅದೇ ಅನುಭವವನ್ನು ನಿಡುವುದರಲ್ಲಿ ಎರಡು ಮಾತಿಲ್ಲ. ವ್ಯಕ್ತಿ ಬದಲಾಗಬಹುದು, ವ್ಯಕ್ತಿಯ ಭಾವನೆಗಳು, ನೋಡುವ ನೋಟಗಳು, ವ್ಯಕ್ತಿಯ ಹಾವ ಭಾವ ಎಲ್ಲವೂ ಬದಲಾಗಬಹುದು. ಆದರೆ ಹಳೆಯ ಅನುಭವಗಳು, ನೋಡಿ ಅನುಭವಿಸಿದ ಘಟನೆಗಳು, ಆಗಾಗ ಕಾಡುವ ಹಳೆಯ ನೆನಪುಗಳು ಇವೆಲ್ಲ ಬದಲಾಗಲು ಸಾದ್ಯವಿಲ್ಲ ಅಲ್ಲವೇ?

--ಮಂಜು ಹಿಚ್ಕಡ್ 

No comments:

Post a Comment