Thursday, January 2, 2014

ವಿರಹ ನೂರು ತರಹ!

ಗಣಕಯಂತ್ರದ ಮುಂದೆ ಅದು ಇದು ನೋಡುತ್ತಾ ಕುಳಿತ ನನಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಸಮಯ ಆಗಲೇ ಹತ್ತು ದಾಟಿತ್ತು. ಹೊಟ್ಟೆ ಒಂದಡೆ ಹಸಿವಿನಿಂದ ತಾಳಹಾಕುತಿತ್ತು. ಎದ್ದು ಅಡಿಗೆ ಕೋಣೆಗೆ ಹೋದೆ, ತಿನ್ನಲು ಏನಾದರು ಇದೆಯಾ ನೋಡಿದೆ, ಆಗ ನೆನಪಾಯಿತು ಬೆಳಿಗ್ಗೆ ಅಡಿಗೆ ಮಾಡದೇ ಹೊರಗಡೆ ತಿಂದು ಬಂದಿದ್ದು. ಶೀತಕದ ಬಾಗಿಲು ತೆರೆದೆ, ಅಂತು ನಿನ್ನೆ ಮಾಡಿದ ಸಾಂಬಾರ ಸ್ವಲ್ಪ ಇತ್ತು. ಅಬ್ಬಾ! ಇದಾದರು ಇದೆಯಲ್ಲ ಅಂದುಕೊಂಡು, ಸ್ವಲ್ಪ ಅನ್ನಕ್ಕಿಟ್ಟೆ. ನಿನ್ನೆ ರಾತ್ರಿ ಉಂಡು ತೊಳಯದೇ ಇದ್ದ ಪಾತ್ರೆಗಳನ್ನು ತೊಳೆಯುವುದೋ,ಬೇಡವೋ ಅನ್ನುವ ಇಬ್ಬಗೆಯ ಮನಸ್ಸಿಂದ ತೊಳೆದು ಪಕ್ಕಕ್ಕಿಟ್ಟು ಬರುವ ಹೊತ್ತಿಗೆ ಕುಕ್ಕರ ತನ್ನ ಕೆಲಸ ಅನ್ನುವದನ್ನು ಜ್ನಾಪಿಸತೊಡಗಿತು. ಮೂರುಸಾರಿ ಒಂದೇ ಸಮನೇ ಕೂಗಿಕೊಂಡ ಮೇಲೆ ಅದನ್ನು ಬಂದು ಮಾಡಿದೆ. ಶೀತಲಯಂತ್ರದಲ್ಲಿದ್ದ ಸಾಂಬಾರನ್ನು ತೆಗೆದು ಬಿಸಿ ಮಾಡಿದೆ. ಕುಕ್ಕರ ತನ್ನಸ್ಟಕ್ಕೇ ತಾನೇ ಏದುಸಿರು ಬಿಡುತ್ತಾ ಭದ್ರವಾಗಿ ಒಲೆಯ ಮೇಲೆ ಕುಳಿತಿತ್ತು. ಅದರ ಉಸಿರು ನಿಲ್ಲುವರೆಗೂ ಕಾಯುವಷ್ಟು ವ್ಯವಧಾನ  ನನಗಿರಲಿಲ್ಲ. ಅಂತೂ ಅದರ ಕವಾಟವನ್ನು ಎತ್ತಿ ಅದರ ಉಸಿರನ್ನ ನಿಲ್ಲಿಸಿದೆ. ಬೇಗ ಬೇಗ ಅದನ್ನ ಬಿಡಿಸಿ, ಅದರಲ್ಲಿದ್ದ ಅನ್ನವನ್ನ ತಟ್ಟೆಗೆ ಸುರಿವಿ, ಸಾಂಬಾರನ್ನ ಹಾಕಿಕೊಂಡು, ಅಡಿಗೆ ಕೋಣೆಯಲ್ಲೇ ನಿಂತು ಊಟ ಮಾಡಿ ಮುಗಿಸಿದೆ. ಬಟ್ಟಲಿಗೆ ಸ್ವಲ್ಪ ನೀರು ಹಾಕಿ ಅಲ್ಲೇ ತೊಳೆಯಲು ಇಟ್ಟು ಹೊರಗೆ ಬಂದೆ. ಅಂದು ಊಟ ಮಾಡಿದ ಬಟ್ಟಲನ್ನು ಅಂದೇ ತೊಳೆಯುವ ಅಭ್ಯಾಸವಿಲ್ಲದ್ದರಿಂದಲೋ ಅಥವಾ ತೊಳೆಯುವ ಮನಸ್ಸಿಲ್ಲದ್ದರಿಂದಲೋ ಅದನ್ನ ಹಾಗೇ ಅಲ್ಲೇ ಬಿಟ್ಟುಬರುವುದು ನನ್ನ ದೈನಂದಿನ ಅಭ್ಯಾಸ.

ಬಹುಷಃ ಬಹುತೇಕ ಒಂಟಿಜೀವಿಗಳ ಬದುಕು ಹೀಗೇ ಇರಬಹುದೇನೋ? ಈ ಒಂಟಿತನವೇ ಹಾಗೆ ಏನು ಮಾಡಲು ಮನಸ್ಸು ಬರುವುದಿಲ್ಲ. ಮನಸ್ಸು ಬಂದರೂ ಆಸಕ್ತಿ ಇರುವುದಿಲ್ಲ. ಒಂಟಿತನದಲ್ಲೂ ಎರಡು ವಿಧ ಒಂದು ಮದುವೆಯ ಮೊದಲಿನ ಒಂಟಿತನ, ಇನ್ನೊಂದು ಮದುವೆಯ ನಂತರದ ಒಂಟಿತನ. ನನಗೆ ಇವೆರಡರಲ್ಲೂ ಅನುಭವ ಇದ್ದುದರಿಂದಲೋ ಏನೋ, ಇವೆರಡರ ನಡುವೆ ಅಜಗಜಾಂತರವಾದ ವ್ಯತ್ಯಾಸ ಎದ್ದು ಕಾಣುತ್ತದೆ. ಮದುವೆಗೆ ಮೊದಲಾದರೆ ಒಬ್ಬಂಟಿ  ಇದ್ದಾಗ ಎಲ್ಲೋ ಒಬ್ಬನೇ ಹೊರಗಡೆ ಸುತ್ತಾಡಿ ಬರಬಹುದಿತ್ತು. ಎಲ್ಲಿಗೆ ಹೋದರೂ, ಏನೇ ಮಾಡಿದರೂ, ಎಷ್ಟೇ ಹೊತ್ತಿಗೆ ಬಂದರೂ ಕೇಳುವವರು ಏನ್ನುವವರು ಯಾರು ಇರುತ್ತಿರಲಿಲ್ಲ. ಆಗ ಏನು ಮಾಡಿದರು ಕೇಳುವವ್ರಾರು ಅನ್ನುವ ಭಾವನೆ ಬೇರೆ. ಆದರೆ ಮದುವೆಯ ನಂತರ ಅದು ಕಷ್ಟ. ಎಲ್ಲೋ ಹೊರಗಡೆ ಹೋಗಿ ಸ್ವಲ್ಪ ತಡವಾದರೂ ಹೆಂಡತಿಯಿಂದ ಕರೆ ಬರುತ್ತದೆ. ಎಲ್ಲಿದ್ದಿರಾ? ಏನು ಮಾಡ್ತಾ ಇದ್ದಿರಾ? ಇನ್ನೂ ಮನೆಗೆ ಹೋಗಿಲ್ವಾ? ಊಟ ಮಾಡಿದ್ದಿರಾ? ಏನು ಮಾಡಿದ್ದಿರಾ? ಹಾಗೆ ಹೀಗೆ ಇತ್ಯಾದಿ, ಇತ್ಯಾದಿ…..

ಹೆಂಡತಿ ಮಗಳು ಊರಿಗೆ ಹೋಗಿ ಅದಾಗಲೇ ಹದಿನೈದು ದಿನಗಳಾಗಿದ್ದವು. ಬರಲು ಇನ್ನೂ ಹದಿನೈದು ದಿನಗಳಾದರೂ ಆಗಬಹುದೇನೋ ಎಂದು ನೆನಸಿಕೊಂಡಾಗಲಂತೂ ಮನಸ್ಸಿಗೆ ಇನ್ನೂ ಬೇಸರವಾಗತೊಡಗಿತು. ಇನ್ನುಳಿದ ದಿನಗಳನ್ನ ಕಳೆಯುವುದು ಹೇಗೆ ಎನ್ನುವ ಚಿಂತೆ. ಅದು ವಾರದ ನಡುದಿನಗಳಾದರೆ ಪರವಾಗಿಲ್ಲ ಅಷ್ಟೊಂದು ಒಂಟಿತನ ಕಾಡುವುದಿಲ್ಲ. ಕಛೇರಿಯಲ್ಲೇ ಸ್ವಲ್ಪ ಜಾಸ್ತಿ ಸಮಯ ಕಳೆದು ಮನೆಗೆ ಬರಬಹುದಿತ್ತು. ಆದರೆ ವಾರಾಂತ್ಯಗಳೆಂದರೆ ಅದೇನೋ ಬೇಸರ ಜುಗುಪ್ಸೆಗಳೇ ಜಾಸ್ತಿ. ಮನಸ್ಸೆಂಬುದು ಹುಚ್ಚರ ಸಂತೆಯಂತಿರುತ್ತದೆ.

ಅದೇ ಹೆಂಡತಿ ಮಗಳಿದ್ದರೆ ಸಾಕು ಸಮಯ ಹೋದದ್ದೆ ಗೊತ್ತಾಗುತ್ತಿರಲಿಲ್ಲ. ಹೆಂಡತಿಯೊಂದಿಗೆ ಮಾತನ್ನಾಡುತ್ತಲೋ ಅಥವಾ ಜಗಳವಾಡುತ್ತಲೋ, ಇಲ್ಲಾ ಮಗುವಿನೊಂದಿಗೆ ಆಟವಾಡುತ್ತಲೋ ಸಮಯ ಕಳೆಯ ಬಹುದಿತ್ತು. ಆದರೆ ಈಗ? ಇರುವ ಸಮಯವನ್ನ ಕಳೆಯುವುದು ಹೇಗೆ ಅನ್ನುವುದೇ ಚಿಂತೆ. ಕೆಲವೊಮ್ಮೆ ಹೆಂಡತಿ ಜೊತೆಯಲ್ಲಿದ್ದಾಗ ಮಾತನ್ನಾಡಿದುದಕ್ಕಿಂತ ಜಗಳವಾಡಿದ್ದೇ ಜಾಸ್ತಿ. ಈಗ ಅನ್ನಿಸುತ್ತದೆ, ಅಯ್ಯೋ! ಅವಳಿರಬಾರದಿತ್ತೇ ಅಂತ. ಅದಕ್ಕೇ ಹಿಂದಿನವರು ಹೇಳಿರಬೇಕು "ಹತ್ತಿರವಿರುವುದಕ್ಕಿಂತ ದೂರವಿದ್ದಷ್ಟು ಪ್ರೀತಿ ಜಾಸ್ತಿ" ಅಂತ.

ಈ ವಿರಹ ವೇದನೆಯೇ ಹೀಗೆ, ಅದು ಕಾಡಿದಾಗ ಏನು ಮಾಡಲು ಸಾದ್ಯವಾಗುವುದಿಲ್ಲ. ದೂರದರ್ಶನದ ಮುಂದೆ ಕುಳಿತರೆ, ಕೈಯಲ್ಲಿದ್ದ ರಿಮೋಟ ಮನಸ್ಸಿಗಿಂತ ವೇಗವಾಗಿ ಚಾನೆಲಗಳನ್ನ ಬದಲಿಸುತ್ತಿರುತ್ತದೆ. ಅದಾಗಿ ಬದಲಿಸುತ್ತಿದೆಯೋ ಅಥವಾ ನಾನೇ ಬದಲಿಸುತ್ತಿದ್ದೆನೋ ಅನ್ನುವುದು ಅನುಭವಕ್ಕೆ ಬಾರದ ರೀತಿಯಲ್ಲಿ ಬದಲಾಗುತ್ತಿರುತ್ತದೆ. ಇನ್ನೂ ಗಣಕಯಂತ್ರದ ಮುಂದೆ ಕುಳಿತರಂತೂ ಅದೇನು ಮಾಡುತಿದ್ದೇನೆ ಅನ್ನುವುದು ಗೊತ್ತಾಗುವುದಿಲ್ಲ. ಹೊಟ್ಟೆಗೆ ಹಸಿವು ಎನ್ನಿಸುವುದಿಲ್ಲ. ಓದು ಬರಹಗಳಲ್ಲಾಗಲಿ ಅಥವಾ ಇನ್ನಾವುದೇ ಕೆಲಸಗಳಲ್ಲಾಗಲಿ ಆಸಕ್ತಿ ಇರುವುದಿಲ್ಲ. ಒಮ್ಮೆ ವಿರಹ ವೇದನೆ ಒಕ್ಕರಿಸಿದರೆ ಸಾಕು, ಅದು ಮನುಷ್ಯನನ್ನ ಒಂದಲ್ಲ ಎರಡಲ್ಲ ನೂರಾರು ತರಹದಲ್ಲಿ ಕಾಡತೊಡಗುತ್ತದೆ. ಅದಕ್ಕೇ ಅಲ್ಲವೇ ಕವಿಗಳು ಹಾಡಿದ್ದು..
"ವಿರಹಾ ನೂರು ನೂರು ತರಹ
ವಿರಹಾ ಪ್ರೇಮ ಕಾವ್ಯದಾ ಕಹಿ ಬರಹ"

--ಮಂಜು ಹಿಚ್ಕಡ್

No comments:

Post a Comment