Tuesday, December 3, 2013

ಅಂದು ಸವಿದ ಆ ನಾಟಿ ಮಾವಿನ ಹಣ್ಣುಗಳು!

ಅಂದು ನಾವು ಚಿಕ್ಕವರಿದ್ದಾಗ ನಮ್ಮೂರಿನ ಮೂಡಣ ದಿಕ್ಕಿನಲ್ಲಿ ನೂರಾರು ಜಾತಿಯ ನಾಟಿ ಮಾವಿನ ಮರಗಳಿದ್ದವು. ಜನವರಿ, ಪೆಬ್ರುವರಿ ತಿಂಗಳು ಮುಗಿಯುವ ಹೊತ್ತಿಗೆ ಮರಗಳೆಲ್ಲ ಹೂ ಬಿಟ್ಟು, ಎಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಆ ಹೂವುಗಳೆಲ್ಲ ಕಾಯಾಗಿ, ಹಣ್ಣಾಗುತ್ತಿದ್ದವು. ಆಗ ನಮಗೆಲ್ಲ ಬೇಸಿಗೆಯ ರಜೆ, ಆ ರಜೆ ನಮಗೆ ಮಾವಿನ ಹಣ್ಣನ್ನು ತಿನ್ನಲೆಂಬಂತೇ ಇದ್ದಂತಿತ್ತು. ಒಂದೊಂದು ಮರಕ್ಕು ಒಂದೊಂದು ತರಹದ ಹಣ್ಣುಗಳು, ಕೆಲವು ಅರ್ಧ ಅಂಗುಲದಷ್ಟು ಚಿಕ್ಕದಾಗಿದ್ದರೆ, ಕೆಲವು ಐದಾರು ಅಂಗುಲದಷ್ಟು ದೊಡ್ಡ ಹಣ್ಣುಗಳು. ಐದಾರು ಮರದ ಹಣ್ಣುಗಳು ಹುಳಿ ಎನಿಸಿದರೂ, ಉಳಿದ ಮರಗಳ ಹಣ್ಣುಗಳು ಸಿಹಿಯಾಗಿದ್ದವೂ. ಕೆಲವು ಹಣ್ಣುಗಳು ತುಂಬಾ ರುಚಿಯಿದ್ದರೂ ಆ ಹಣ್ಣುಗಳ ಅರ್ಧದಷ್ಟು ಸೊನೆ ತುಂಬಿರುತಿತ್ತು. ಅದೆಂತಹ ಸೊನೆಯೆಂದರೆ ಸಂಪೂರ್ಣ ತುಟಿ, ಬಾಯಿಗಳೆಲ್ಲವೂ ಹುಣ್ಣಾಗುವಷ್ಟು ಸೊನೆ. ಕೆಲವು ಹಣ್ಣುಗಳ ಗೊರಟೆಗಳು ಒಳಗೆ ತುಂಬಾ ದೊಡ್ಡದಾಗಿದ್ದರೆ, ಕೆಲವಕ್ಕಂತೂ ತುಂಬಾ ಚಿಕ್ಕ ಗಾತ್ರದ ಗೊರಟೆಗಳು. ಕೆಲವು ಹಣ್ಣುಗಳಿಗಂತೂ ತುಂಬಾ ಬಿಗಿಯಾದ ನಾರುಗಳಿದ್ದರೂ ರುಚಿ ತುಂಬಾ ಸೊಗಸಾಗಿರುತಿತ್ತು. ರಸ ಎಳೆಯಲು ಸಾಧ್ಯವಾಗದೇ, ಸಿಪ್ಪೆ ಸುಲಿದು ತಿನ್ನುತಿದ್ದೆವು. ಕೆಲವು ಮರಕ್ಕೆ ಮಾರ್ಚ-ಎಪ್ರಿಲಗಳಲ್ಲಿ ಹಣ್ಣು ಬಿಡುತಿದ್ದರೆ, ಕೆಲವು ಮರಗಳಿಗೆ ಮಳೆಗಾಲ ಪ್ರಾರಂಬವಾಗುತಿದ್ದಂತೆ ಹಣ್ಣು ಬಿಡಲು ಆರಂಭವಾಗುತಿದ್ದವು. ಹೀಗೆ ಒಂದೊಂದು ತರನಾದ ಮಾವಿನ ಮರಗಳು ನಮ್ಮ ಊರಿನಲ್ಲಿದ್ದವು.

ಮಾರ್ಚ ತಿಂಗಳಲ್ಲಿ ನಮ್ಮ ಪರೀಕ್ಷೆಗಳು ಮುಗಿದೊಡನೆ, ನಮ್ಮ ಮಾವಿನ ಹಣ್ಣಿನ ಬೇಟೆ ಪ್ರಾರಂಭವಾಗುತ್ತಿತ್ತು. ಯಾವ ಯಾವ ಮರಕ್ಕೆ ಹೂಬಿಟ್ಟಿದೆ, ಯಾವ ಮರಕ್ಕೆ ಹಣ್ಣುಗಳಾಗಿವೆ ಎಂಬೆಲ್ಲ ವಿವರಗಳನ್ನು ಸಂಗ್ರಹಿಸಿ ಹೊರಡುತ್ತಿದ್ದೆವು. ಬೆಳಿಗ್ಗೆ ಮಾವಿನ ಹಣ್ಣಿನ ಮರ ಸುತ್ತಿ ಹಣ್ಣು ತಿಂದು ಮನೆಗೆ ಬರುವಾಗ ಮಧ್ಯಾಹ್ನವಾಗುತಿತ್ತು. ಹೊಟ್ಟೆ ಪೂರ್ತಿ ಮಾವಿನ ಹಣ್ಣು ತಿಂದದ್ದರಿಂದ ಊಟವು ಅಷ್ಟಕಷ್ಟೇ. ಆ ಸುಡು ಬೇಸಿಗೆಯಲ್ಲಿ ಊಟವು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಮಧ್ಯಾಹ್ನ ಒಂದಿಷ್ಟು ಗಂಜಿ, ಬೆರಕೆ ಹಾಕಿದ ಬಸಲೆ ಹುಳಗಾ ತಿಂದು, ಮಲಗಬೇಕೆನಿಸಿದರೆ ಒಂದಿಷ್ಟು ಹೊತ್ತು ಮಲಗಿ, ಇಲ್ಲಾ ಅಂದರೆ ಮತ್ತೆ ಮಾವಿನ ಹಣ್ಣು ಹುಡುಕಿ ಹೋಗುತಿದ್ದೆವು.
.                  
ಆಗ ನಮಗೆ ಜೋರಾಗಿ ಗಾಳಿ ಬಿಸಿದರೆ ಅಥವಾ ಮಂಗಗಳ ಹಾರಾಟ ಜಾಸ್ತಿಯಾಗಿದ್ದರೆ ತುಂಬಾ ಸಂತೋಷವಾಗುತಿತ್ತು. ಆ ಸಂದರ್ಭದಲ್ಲಿ ಮರದ ಕೊಂಬೆಗಳೆಲ್ಲ ಅಲುಗಾಡಿ ಹಣ್ಣಾದ ಮಾವೆಲ್ಲವು ನೆಲಕುದುರುತ್ತಿದ್ದುದರಿಂದ ನಮಗೆಲ್ಲ ಸಂತೋಷ. ಒಂದೊಂದು ಹಣ್ಣು ಬಿದ್ದಾಗಲೂ, ಓಡಿ, ಓಡಿ ಹೋಗಿ ಆರಿಸಿ ತಂದು ತಿನ್ನುವುದು, ಅದರಲ್ಲೂ ಚಿಕ್ಕ ಹಣ್ಣುಗಳಾಗಿದ್ದರೆ, ಮೇಲಿನ ಸೊನೆ ತೆಗೆದು ಇಡಿ ಹಣ್ಣನ್ನೆ ಬಾಯಿಯಲ್ಲಿ ಸ್ವಾಹ ಮಾಡಿ, ಗೊರಟೆಯನ್ನು ಹೊರಗೆಸೆಯುವುದು. ಅದು ಕೂಡ ಇನ್ನೊಂದು ಮಾವಿನ ಹಣ್ಣು ಬಿಳುವವರಿಗೆ, ಇಲ್ಲಾ ಸಿಹಿಯ ಅಂಸ ಸಂಪೂರ್ಣ ಮಾಯವಾಗಿ ಸಪ್ಪೆಯಾಗುವರೆಗೆ, ನಮ್ಮ ಬಾಯಲ್ಲಿಯೇ ಬದ್ರವಾಗಿರುತಿತ್ತು.    

ನಮ್ಮ ಮನೆಯ ಅಣತಿ ದೂರದಲ್ಲಿ ಒಂದು ಮಾವಿನ ಮರವಿತ್ತು. ಅದರ ಹಣ್ಣು ಸ್ವಲ್ಪ ಹುಳಿ ಇದ್ದುದರಿಂದ ಅದಕ್ಕೆ ಊರವರೆಲ್ಲ " ಹುಳಿಯಪ್ಪಿ " ಮಾವಿನ ಮರ ಎಂದೇ ಕರೆಯುತ್ತಿದ್ದರೂ. ಬೇಡುವವರಿಗೆ ಕುಸಲಕ್ಕಿಯಾದರೇನು, ಬೆಣತಕ್ಕಿಯಾದರೇನು ಅಂತಾರಲ್ಲಾ, ಹಾಗೆ ಬಾಲ್ಯದಲ್ಲಿ ನಮಗೆ ಮಾವಿನ ಹಣ್ಣು ಸಿಹಿಯಾದರೇನು, ಹುಳಿಯಾದರೇನು? ಎಳೆಯ ಹುಳಿಯ ಮಾವಿನ ಕಾಯಿಯನ್ನೇ ತಿನ್ನುವ ನಮಗೆ, ಈ ಹಣ್ಣು ಅದ್ಯಾವ ಲೆಕ್ಕ. ಆ ಹುಳಿಯಪ್ಪಿ ಮಾವಿನ ಮರದ ಸುತ್ತಲು ನಮ್ಮ ಮನೆಯನ್ನು ಸೇರಿ ನಾಲ್ಕು ಮನೆಗಳು, ನಾಲ್ಕು ಮನೆಗಳಲ್ಲಿ, ಮೂರು ಮನೆಯ ಮಕ್ಕಳು ಹೆಚ್ಚು ಕಡಿಮೆ ನನ್ನ ವಯಸ್ಸಿನವರೇ. ಎಲ್ಲರ ಅಭಿರುಚಿಯೂ ಹೆಚ್ಚು ಕಡಿಮೆ ಒಂದೇ ತೆರನಾಗಿತ್ತು. ಆ ಮರಕ್ಕೆ ಹಣ್ಣು ಬಿಡಲು ಪ್ರಾರಂಭಿಸಿದಾಗ ನಮ್ಮ ಲಕ್ಷವೆಲ್ಲ ಆ ಮರದತ್ತಲೇ ಕೇಂದ್ರಿಕ್ರತವಾಗಿರುತ್ತಿತ್ತು. ಹಣ್ಣು ಗಾಳಿಗೆ ಕೆಳಕ್ಕೆ ಬಿದ್ದು "ಡಪ್" ಎನ್ನುವ ಶಬ್ಧ ಬಂದರೆ ಸಾಕು, ಶತ್ರು ಸೈನ್ಯದ ಮೇಲೆ ದಾಳಿಯಿಡುವ ಯುದ್ದ ವಿಮಾನಗಳಂತೆ, ನಾವು ಮೂರು ಕಡೆಯಿಂದಲೂ ಅಲ್ಲಿಗೆ ದಾಳಿ ಮಾಡುತಿದ್ದೆವು. ಯುದ್ದದಲ್ಲಿ ಶತ್ರು ಯಾರಿಗೆ ಸೆರೆ ಸಿಕ್ಕರೇನು, ಒಟ್ಟಿನಲಿ ಅದು ಆ ದೇಶಕ್ಕೆ ಹೆಮ್ಮೆ. ಆದರೆ ಇಲ್ಲಿ ಹಾಗಲ್ಲ, ಎಲ್ಲರೂ ಹಣ್ಣಿನ ವಿಷಯದಲ್ಲಿ ಶತ್ರುಗಳೇ. ಸಿಕ್ಕವನಿಗೆ ಗೆದ್ದ ಸಂಭ್ರಮ, ಸಿಗದಿದ್ದವರಿಗೆ ಸಿಗಲಿಲ್ಲ ಎನ್ನುವ ಚಿಂತೆ. ಸೋತರು, ಮುಂದೆ ಬಿಳಲಿರುವ ಹಣ್ಣು ನನಗೆ ಸಿಕ್ಕೀತು ಎನ್ನುವ ಆತ್ಮವಿಶ್ವಾಸ. ಆ ಆತ್ಮವಿಶ್ವಾಸವೇ ಇನ್ನೋಂದು ಹಣ್ಣಿಗಾಗಿ ಮತ್ತೆ ಕಾಯಲು ಪ್ರೇರೇಪಿಸುತ್ತಿತ್ತು.                        

ಅದೆಷ್ಟು ಹಣ್ಣು ತಿನ್ನುತ್ತಿದ್ದೇವೆಂದರೆ, ಮಾವಿನ ಹಣ್ಣಿನ ಸೊನೆಗೆ ಸೀತವಾಗಿ ಮೂಗು ಸೋರುತಿದ್ದರೂ ಮಾವಿನ ಹಣ್ಣನ್ನು ಬಿಡುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ಮಾವಿನ ಹಣ್ಣಿನ ಮೇಲೆ. ಆಗ ಮನೆಯಲ್ಲಿ ಈಸಾಡ ಹಾಗೂ ಹೈಬ್ರಿಡ್ ತಳಿಯ ಮಾವಿನ ಹಣ್ಣುಗಳಿದ್ದರೂ, ನಮಗೆ ಆ ನಾಟಿ ತಳಿಯ ಮಾವಿನ ಹಣ್ಣಿನಷ್ಟು ರುಚಿಯೆನಿಸುತ್ತಿರಲಿಲ್ಲ. ಇಂದು ಊರಿನಲ್ಲಿ ಅಂದಿನಷ್ಟು ನಾಟಿತಳಿಯ ಮಾವಿನ ಮರಗಳಿಲ್ಲ. ಕೆಲವು ಬಹುಗಾತ್ರದ ಮರಗಳು, ಇಂದಿನ ಹೈಬ್ರಿಡ್ ತಳಿಯ ಮಾವುಗಳಿಗಾಗಿ ಹುತಾತ್ಮವಾಗಿ ಬಿಟ್ಟಿವೆ. ಅಂದು ನಾಟಿ ಮಾವಿನ ಹಣ್ಣುಗಳನ್ನು ಸವಿದ ಮೇಲೆ ಹೈಬ್ರಿಡ್ ಹಣ್ಣುಗಳು ಅಷ್ಟೊಂದು ರುಚಿಯೆನಿಸುವುದಿಲ್ಲ. ಅದರಲ್ಲೂ ಇಂದಿನ ಹೈಬ್ರಿಡ್ ಹಣ್ಣುಗಳಲ್ಲಿ ರುಚಿಯಾದರೂ ಎಲ್ಲಿರುತ್ತೆ? ಎಳೆಯ ಕಾಯಿಯನ್ನೇ ಕೊಯ್ದು ರಾಸಾಯನಿಕಗಳನ್ನು ಹಾಕಿ, ಹಣ್ಣಿನಂತೆ ಮಾಡಿ ದುಪ್ಪಟ್ಟು ಬೆಲೆಗೆ ಮಾರುವ ಇಂದಿನ ಹೈಬ್ರಿಡ್ ಹಣ್ಣುಗಳು, ನಾಟಿ ಹಣ್ಣುಗಳ ಮುಂದೆ ರುಚಿಯಲ್ಲಿ ಎಂದೂ ಸರಿಸಾಟಿಯಾಗಲಾರವು ಎನ್ನುವುದು ನನ್ನ ಅನಿಸಿಕೆ. ಈಗಂತೂ ಹೈಬ್ರಿಡ್ ಹಣ್ಣುಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಅದರಲ್ಲೂ ಮಾವಿನ ಹಣ್ಣು ಸುರುವಾದ ಹೊಸದರಲ್ಲಂತೂ ಅದರ ಬೆಲೆ ಕೇಳಿದರೆ ಸಾಕು ತಲೆತಿರುಗತ್ತೆ, ಇನ್ನೆಲ್ಲಿ ಆ ಮಾವಿನ ಹಣ್ಣು. ಮಳೆಗಾಲ ಸುರುವಾದರೆ ಆ ಹಣ್ಣುಗಳನ್ನ ತಿನ್ನಲಾಗಲ್ಲ.

ಕೊನೆಯಲ್ಲಿ ಒಂದು ಮಾತು, ನಮ್ಮ ತಂದೆಯವರು ಆಗಾಗ ಹೇಳುತಿದ್ದರು ಅವರು ಚಿಕ್ಕವರಿದ್ದಾಗ ನಮ್ಮೂರಲ್ಲಿ ತುಂಬಾ ನಾಟಿ ಮಾವಿನ ಮರಗಳಿದ್ದವೂ ಅಂತ, ಈಗ ನಾನು ಹೇಳುತಿದ್ದೇನೆ ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ತುಂಬಾ ನಾಟಿ ಮಾವಿನ ಮರಗಳಿದ್ದವು ಅಂತ. ನಾವು ಚಿಕ್ಕವರಿರುವಾಗಲೇ ಅಷ್ಟೊಂದು ಮಾವಿನ ಮರಗಳಿದ್ದುದು ನಮ್ಮ ತಂದೆಯವರು ಚಿಕ್ಕವರಿರುವಾಗ ಇನ್ನೆಷ್ಟು ನಾಟಿ ಮಾವಿನ ಮರಗಳಿರಬೇಕು ಅಲ್ಲವೇ!

--ಮಂಜು ಹಿಚ್ಕಡ್

No comments:

Post a Comment