Monday, December 2, 2013

ಮತ್ತೆ ಕಟ್ಟಲಾದಿತೇ ರಾಮರಾಜ್ಯ!

[ಈ ವಾರದ ಪಂಜು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಇನ್ನೊಂದು ಕವನ www.panjumagazine.com/?p=5502]
ಹುಚ್ಚೆದ್ದು ಕುಣಿಯುತಿದೆ
ನಾಡಿನ ಜನತೆ.
ಮರೆಯಾಗಿ ಹೋಗುತಿದೆ
ಒಲವಿನ ಒರತೆ.

ಇತ್ತ ರೋಡಲಿ ಕಾರು
ಅತ್ತ ಬಾರಲಿ ಬೀರು
ಎಲ್ಲಿ ನೋಡಿದರಲ್ಲಿ
ಹಣದ ಕಾರುಬಾರು.

ಮಾನಕ್ಕೆ ಬೆಲೆಯಿಲ್ಲ
ಮಾನವಂತರು ಇಲ್ಲ.
ಆಗಿಹುದು ನಾಡು, ಸುಡುಗಾಡು
ಎರಡು ಮಾತಿಲ್ಲ.

ಹಣಕಾಗಿ ಜನ ಮರಳು
ಹಣಕಾಗಿ ಜಾತ್ರೆ ಮರಳು.
ಮರೆತು ಹೋಗಿದೆ ಇಂದು
ಮಾನವತೆಯ ತಿರುಳು.

ದ್ವೇಷದ ದಳ್ಳುರಿಯಲ್ಲಿ
ಪ್ರೀತಿ ಹೋಗಿದೆ ಸೋತು.
ಪ್ರೀತಿ-ಪ್ರೇಮ ಎನ್ನುವುದು
ಮರೀಚಿಕೆಯ ಮಾತು.

ಬೆಳೆದು ನಿಂತಿದೆ ಅಹಂ
ಇಂದು ಕಾಳ್ಗಿಚ್ಚಿನ ರೀತಿ
ಹುಡುಕಿದರು ಸಿಗಲಾರದು
ಇಲ್ಲಿ ನ್ಯಾಯ ನೀತಿ.

ಅಲ್ಲಿ ಕೊಲೆ ಅಂತೆ
ಇಲ್ಲಿ ಸುಲಿಗೆಯೂ ಅಂತೆ
ಅತ್ತ ಸ್ವಿಸ್ ಬ್ಯಾಂಕಲ್ಲಿ
ನೋಟುಗಳ ಕಂತೆ.

ಅಣ್ಣ-ತಮ್ಮರ ನಡುವೆ
ಅಕ್ಕ-ತಂಗಿಯರ ನಡುವೆ
ಬೆಳೆದು ನಿಂತಿದೆ ವ್ಯಾಜ್ಯ
ಮತ್ತೊಮ್ಮೆ ಹುಟ್ಟಿ ಬಂದರು ರಾಮ
ಕಟ್ಟಲಾಗದು ಮತ್ತೆ ರಾಮರಾಜ್ಯ.

ಛಲದಲ್ಲಿ ದುರ್ಯೋಧನನಾಗು
ದಾನಕ್ಕೆ ನೀ ಕರ್ಣನಾಗು
ಗುರುಭಕ್ತಿಯಲಿ ನೀ
ಏಕವಲವ್ಯನು ಆಗು.

ಮುಳ್ಳಲ್ಲಿರುವ ಹೂವಾಗಿ
ಎಲ್ಲರಿಗೂ ಹಿತವಾಗಿ
ಬಾಳಿದರೆ ನೀ ಬದುಕುವೆ
ಎಂದೆಂದು ಸುಖವಾಗಿ!

--ಮಂಜು ಹಿಚ್ಕಡ್ 

No comments:

Post a Comment