Saturday, November 30, 2013

ಬಯಕೆಗಳು!

ಹುಟ್ಟಿನಲ್ಲಲ್ಲದಿರೂ
ಹುಟ್ಟಿನನಂತರ ಜನ್ಮತಳೆಯುವವು
ಹಲವಾರು ಬಯಕೆಗಳು
ಮಳೆಗಾಲದ ಜವುಗು ಭೂಮಿಯಲಿ
ಒಂದಾದ ಮೇಲೊಂದರಂತೆ
ಜನ್ಮತಳೆವ ನಾಯಿಕೊಡೆಗಳಂತೆ
ಈ ನಮ್ಮ ಮನದ ಮೂಲೆಯಲ್ಲಿ.

ಆಕಾರ, ಪ್ರಾಕಾರವಿಲ್ಲದಿರೂ,
ಬಣ್ಣ, ರೂಪವಿಲ್ಲದಿರೂ
ನಮ್ಮ ರೂಪ ಬದಲಾಯಿಸುವಂತೆ
ಮಾರ್ಪಡಿಸುವವು
ತಾವು ಒಳಹೊಕ್ಕ ಮನಸನ್ನು ಆಗಾಗ.

ಒಂದೊಂದು ಬಯಕೆಗಳಿಗೂ
ಒಂದೊಂದು ವೇಷ
ಹಲವು ಬಯಕೆಗಳು
ಕೇವಲ ಆಶೆಗಳಾಗಿ
ಕೊನೆಗೊಳ್ಳುವವು,
ಒಳಹೊಕ್ಕ ವ್ಯಕ್ತಿಯ ಮರೆವಿನೊಂದಿಗೆ.

ಕೆಲವು ಅತಿಯಾಗಿ
ಪ್ರತಿಯಿಲ್ಲದಂತಾಗಿ
ಅಳಿದು ಹೋಗುವವು
ಕಾಲದೊಂದಿಗೆ.

ಕೆಲವಂತು ಆಕಾಂಕ್ಷೆಗಳಾಗಿ
ಕೈಗೆಟುಕದ ಹುಳಿದ್ರಾಕ್ಷಿಯಂತಾಗಿ
ಕಾಡುತ್ತಲೇ ಹೋಗುವವು
ಬದುಕು ಸಾಗುವವರೆಗೆ.

ಅಪರೂಪಕ್ಕೆಂಬಂತೆ,
ಅಲ್ಲೊಂದು, ಇಲ್ಲೊಂದು ಬಯಕೆಗಳು
ಗುರಿಯಾಗಿ ಮಾರ್ಪಟ್ಟು
ಒಂದಡೆಯೂ ನಿಲ್ಲದಂತೆ
ಓಡಿಸುವವು ಮನಸನ್ನ
ಗುರಿಯ ಸೇರುವವರೆಗೆ,
ಮತ್ತೊಂದು ಗುರಿಯೆಡೆಗೆ!

--ಮಂಜು ಹಿಚ್ಕಡ್

No comments:

Post a Comment