Saturday, March 15, 2014

ಬದುಕಿಗಾಗಿ ಹುಡುಕಾಟ!

ಹೊಸ ನೆಲಗಟ್ಟಿನ ಮುಂದಿನ
ಗುಡಿಸಲೆಂಬ ಅರಮನೆಯಲ್ಲಿ ವಾಸ
ಆ ನೆಲಗಟ್ಟು ಮನೆಯಾಗಿ
ಆ ಮನೆಯ ಯಜಮಾನ
ಮನೆ ಸೇರುವವರೆಗೆ,
ಸಂಬಳ ಕೈ ಸೇರುವವರೆಗೆ,
ಆಮೇಲೆ ಅವನ್ಯಾರೋ, ನಾವ್ಯಾರೋ.

ಬೆವರು ಸುರಿಸಿ, ರಕ್ತ ಹನಿಸಿ
ಹೊಟ್ಟೆ ಹೊರೆಯಲು
ಕಟ್ಟಿದ ಕಟ್ಟಡಕೆ ನಮ್ಮ ಹೆಸರು ಬೇಕಿಲ್ಲ
ಹೆಸರಿಡಲು ಊಂಟಲ್ಲ
ಹಣ ಸುರಿಸಿ, ಕಟ್ಟಡವ ಕಟ್ಟಿಸಿ
ಮೆರೆವವನ ಹೆಸರು.

ನಾವು ಒಳಹೊಕ್ಕು ಕಟ್ಟಿದ
ಮನೆಗೆ ಆಗ ಹೆಸರಿರಲಿಲ್ಲ
ಈಗ ಯಜಮಾನ ಒಳಹೋಗುವಾಗ
ಅದಕ್ಕೊಂದು ಹೆಸರು
ಅದೂ ಅವನು ಬರೆದಿದ್ದಲ್ಲ
ಹಣ ನೀಡಿ ಬರೆಸಿದ್ದು.

ನಾವು ಸಂಬಳದ ಜನರಲ್ಲವೇ
ನಮ್ಮ ಹೆಸರು ನೆನಪಾಗುವುದು
ಗುದ್ದಲಿ ಪೂಜೆಯಾದಗ,
ಮನೆಯ ಒಳಪ್ರವೇಶಕ್ಕಲ್ಲ

ಆತ ಹುರುಪಿನಿಂದ
ಹಮ್ಮಿನಿಂದ, ಬಿಮ್ಮಿನಿಂದ
ಮನೆಯೊಳಗೆ ಹೋದರೆ
ನಾವು ಹೊರಡಬೇಕು
ಗುದ್ದಲಿ ಪೂಜೆಮಾಡಿಟ್ಟ
ಹೊಸ ನೆಲಗಟ್ಟಿನ ಎದುರಿನ
ಹೊಸ ಸೂರು ಹುಡುಕಿ.
ಮತ್ತದೇ ಬೆವರು, ಮತ್ತದೇ ರಕ್ತ
ಹನಿಸಿ, ಹನಿಸಿ
ಹೊಸಮನೆಯ ಕಟ್ಟಲು.

ನಮ್ಮ ಬೆವರು, ರಕ್ತದಲ್ಲಿ ನೆನೆದ
ಇಟ್ಟಿಗೆಯ ಮೇಲೆ
ಮತ್ತದೇ ಹೊಸ ಯಜಮಾನನ
ಹೊಸ ಮನೆ, ಹೊಸ ದೌಲತ್ತು
ಮತ್ತೊಮ್ಮೆ ನಾವು
ಅಲ್ಲಿಂದ ಹೊರಡಬೇಕು
ಮತ್ತೋರ್ವ ಯಜಮಾನನ
ಹೊಸ ನೆಲಗಟ್ಟ ಹುಡುಕಿ,

--ಮಂಜು ಹಿಚ್ಕಡ್

No comments:

Post a Comment