Wednesday, February 5, 2014

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ!

ಊರಿಂದ ಬಂದು ೧೫ ದಿನ ಆಗಿತ್ತು, ಊರಿಂದ ಹೊತ್ತು ತಂದ ಚೀಲ ಹಾಗೆ ದಿವಾನದ ಮೇಲೆ ಇತ್ತು.  ಎರಡು ಶನಿವಾರ ಎರಡು ಭಾನವಾರಗಳು ಕಳೆದರೂ ಆ ಬ್ಯಾಗ ಅಲ್ಲಿ ಏನಿದೆ, ಅದರಲ್ಲಿರು ಬಟ್ಟೆ ಬರೆಗಳನ್ನು ತೆಗೆದಿಡಬೇಕು ಎನ್ನುವ ಪರಿಜ್ನಾನವು ಇರಲಿಲ್ಲ. ಅದೇ ನನ್ನ ಹೆಂಡತಿ ಆಗಿದ್ದರೆ ಬಂದ ತಕ್ಷಣ ಬಟ್ಟೆ ಬದಲಿಸುವುದಕ್ಕೂ ಮೊದಲೆ, ತಂದ ಚೀಲವನ್ನೆಲ್ಲ ಬಿಚ್ಚಿ ಇರುವ ವಸ್ತುಗಳನ್ನೆಲ್ಲ ತೆಗೆದು ಒಂದಡೆ ಜೋಡಿಸುವುದು ಅವಳ ಅಭ್ಯಾಸ. ಅವಳೇ ಎಲ್ಲ ಮಾಡುತ್ತಿರುವದರಿಂದ, ನಾನೇನು ಮಾಡುತ್ತಿರಲಿಲ್ಲ. ಅದೇ ಅಭ್ಯಾಸವಾಗಿಬಿಟ್ಟಿದೆ. ಹೆಂಡತಿ ಊರಿಗೆ ಹೋಗಿ ಆಗಲೇ ಒಂದು ವರ್ಷ ಆಗ್ತಾ ಬಂತು. ಅವಳು ಊರಿಗೆ ಹೋದಾಗಲೇ ಗೊತ್ತಾಗಿದ್ದು, ಅವಳು ಎರಡು ತಿಂಗಳ ಬಸುರಿ ಅಂತ. ಆ ಮೇಲೆ ವೈಧ್ಯರು ಅವಳು ದೂರ ಪ್ರಯಾಣ ಮಡಬಾರದು ಅಂತಾ ಹೇಳಿದ ಮೇಲೆ ಅವಳ ವಾಸ್ತವ್ಯ ಊರಲ್ಲೆ ಆಗಿಬಿಟ್ಟಿತ್ತು. ಹಾಗಾಗಿ ನಾನು ಬೆಂಗಳೂರಲ್ಲೆ ಇದ್ದು, ಆಗಾಗ ಹೋಗಿ ಅವಳನ್ನು ನೋಡಿಕೊಂಡು ಬರುತ್ತಿದ್ದೆ. ಇವಾಗ ಹೋಗಿದ್ದು ಅವಳನ್ನು, ನನ್ನ ಪುಟ್ಟ ಮಗಳನ್ನು ನೋಡಿ ಬರಲು. ಇನ್ನೇನು ಒಂದೆರಡು ತಿಂಗಳಲ್ಲಿ, ಅವರಿಬ್ಬರೂ ಬೆಂಗಳೂರಿಗೆ ಬರುವವರಿದ್ದರಿಂದ ಸ್ವಲ್ಪ, ಸಾಮಾನನ್ನೂ ಇಗಲೇ ತೆಗೆದು ಕೊಂಡು ಹೋಗುವುದರಿಂದ ಅಮೇಲೆ ಸ್ವಲ್ಪ ಭಾರ ಕಡಿಮೆ ಆಗುತ್ತೆ ಅಂತ, ನನ್ನ ಹೆಂಡತಿ ಹೇಳಿದ್ದರಿಂದ, ಒಂದು ಬ್ಯಾಗ ತುಂಬಾ ಅವಳ ಮತ್ತು ಮಗಳ ಬಟ್ಟೆಗಳನ್ನು, ಊಳಿದ ಸಾಮಾನುಗಳನ್ನು ತುಂಬಿಟ್ಟಿದ್ದಳು. ಅದನ್ನೇ ನಾನು ತೆಗೆದುಕೊಂಡು ಬಂದು, ನನ್ನ ರೂಮಲ್ಲಿ ಇಟ್ಟಿದು. ಆ ಬ್ಯಾಗನ್ನ ನೋಡಿದಾಗ, ಅಲ್ಲಿರುವ ಸಾಮಾನುಗಳನ್ನು ತೆಗೆದಿಡಬೇಕು ಅಂದುಕೊಳ್ಳುತ್ತೇನೆ. ಆಮೇಲೆ ಏನೋ ಒಂಥರ ಆಲಸ್ಯ, ಆಮೇಲೆ ತೆಗದರಾಯಿತ್ತು ಎಂದುಕೊಳ್ಳುತ್ತಾ ಹಾಗೆ ಬಿಟ್ಟುಬಿಡುವುದು. ಹಾಗೆ ಅಂದುಕೊಳ್ಳುತ್ತಾ ಎರಡು ವಾರಗಳು ಕಳೆದು ಹೋಗಿದ್ದರಿಂದ ಇವತ್ತು, ಅಲ್ಲಿರುವ ಸಾಮಾನುಗಳನ್ನೆಲ್ಲ ತೆಗೆದು ಜೋಡಿಸಿ ಇಟ್ಟಿದ್ದೆ.

ಇದು ಕೇವಲ ಒಂದು ಉದಾಹರಣೆ ಅಷ್ಟೇ, ಈ ರೀತಿ ಅನೇಕ ಘಟನೆಗಳು ನಡೆದು ಹೋಗಿವೆ. ಒಮ್ಮೆ ನಮ್ಮ ಮಾವ ಮತ್ತು ನನ್ನ ನೆಂಟ (ಹೆಂಡತಿಯ ತಮ್ಮ) ಇಬ್ಬರು ಬೆಂಗಳೂರಿಗೆ ಬರುವವರಿದ್ದರು. ಆಗ ನನ್ನ ಹೆಂಡತಿ ಊರಲ್ಲೆ ಇದ್ದಳು. ನನಗೆ ಇವರು ಬರುವ ಸುದ್ದಿಯನ್ನು ಕೇಳಿದಾಗ, ನಾನೊಮ್ಮೆ ದಿಗ್ಬ್ರಾಂತನಾಗಿಬಿಟ್ಟೆ, ಏನು ಮಾಡುವುದೆಂದು. ಯಾಕೆ ಅಂತಾ ಕೇಳ್ತಾ ಇದ್ದಿರಾ, ನಾವು ವಾಸವಾಗಿರುವ ಮನೆ, ಒಂದು ರೀತಿ ಭೂತ ಬಂಗಲೆಯಾಗಿ ಬಿಟ್ಟಿತ್ತು. ನನ್ನ ಮನೆಯಲ್ಲಿ ಹೆಂಡತಿ ಇಲ್ಲ ಅನ್ನೋದನ್ನ ಬಿಟ್ಟರೆ, ಊಳಿದೆಲ್ಲ ಕ್ರೀಮಿ, ಕೀಟಗಳು ವಾಸವಾಗಿದ್ದವು. ಜೇಡು ಹುಳುಗಳಿಗಂತು, ಯಾರೂ ಪ್ರತಿಸ್ಪರ್ಧಿಗಳಿರಲಿಲ್ಲ. ಮನೆ ತುಂಬ, ಬಲೆ ನೇಯ್ದಿದ್ದವು. ಜೀರಲೆಗಳಂತು ತಮ್ಮ ಸಂಸಾರವನ್ನು ಬೇಕಾಬಿಟ್ಟಿ ಬೆಳೆಸಿದ್ದವು. ಅಡಿಗೆ ಕೋಣೆಯಂತು, ನೀರು ಕಾಣದೆ ಹಾಗೆ ಉಳಿದು ಬಿಟ್ಟಿತ್ತು. ಕಸಬರಿಗೆಯಂತೂ ಒಂದು ಮೂಲೆಯಲ್ಲಿ ಬದ್ರವಾಗಿ ಕುಳಿತಿತ್ತು. ನಾನಂತೂ ಅದರ ತಂಟೆಗೆ ಹೋಗದೆ ಒಂದು ತಿಂಗಳಾಗಿತ್ತು. ನನ್ನ ಹಾಸಿಗೆ ದಿಂಬುಗಳು ನೀರು ಕಾಣದೇ ಏಳೆಂಟು ತಿಂಗಳುಗಳಾಗಿದ್ದವು.

ನನ್ನ ಮಾವನಿಗೆ ದೇವರೆಂದರೆ, ಎಲ್ಲಿಲ್ಲದ ಭಕ್ತಿ. ಹಾಗಂತ ನಾನೇನು ನಾಸ್ತಿಕ ನಾಗಿರಲಿಲ್ಲ. ನಾನು ದೀನಾ ದೇವರಿಗೆ ಉದಿನ ಕಡ್ಡಿ ಕಚ್ಚಿ, ಭಕ್ತಿಯಿಂದ ನಮಸ್ಕರಿಸುವುದು ಅಭ್ಯಾಸ. ಹಾಗೆ ದೀನಾ ಉದಿನ ಕಡ್ಡಿ ಕಚ್ಚಿ -ಕಚ್ಚಿ, ದೇವರ ಸುತ್ತಾ ಉದಿನ ಕಡ್ಡಿಯ ಬುಧಿ ತುಂಬಿಕೊಂಡು ಬಿಟ್ಟಿತ್ತು. ದೇವರ ಫೋಟೋಗಳು, ಮೂರ್ತಿಗಳ ತುಂಬೆಲ್ಲ ಬುದಿ ಮುಚ್ಚಿಕೊಂಡು ಬಿಟ್ಟಿತ್ತು. ಯಾರಾದರೂ ನೋಡಿದರೆ, ನನ್ನ ದೇವರುಗಳೆಲ್ಲ, ಯಾವುದು ಬುದಿ ಮುಚ್ಚಿದ ಹೊಂಡದಿಂದ ಎದ್ದು ಬಂದಂತಿದ್ದವು. ನನಗಂತೂ ಮನೆಯಲ್ಲಿ ಕುಳಿತು ಕೊಳ್ಳೊಕ್ಕೇ ಹೆದರಿಕೆಯಾಗಿ ಬಿಟ್ಟಿತ್ತು. ಆಫೀಸ ಇಂದ ಮನೆಗೆ ಬಂದ ತಕ್ಷಣ, ಬೂಟನ್ನು ತೆಗೆದು, ತಕ್ಷಣ ಒಳಗೆ ಹೋಗಿ ಬಟ್ಟೆಯನ್ನು ಬದಲಾಯಿಸಿ ಬಿಡುತಿದ್ದೆ. ಯಾಕೆಂದರೆ, ಎಲ್ಲಿ ದೂಳು ನನ್ನ ಬಟ್ಟೆಗಳಿಗೆ, ಅಂಟಿಕೊಳ್ಳುತ್ತೋ ಅನ್ನುವ ಭಯ. ಅಷ್ಟೇ ಅಲ್ಲ ಹದಿನೈದು ಇಪ್ಪತ್ತೋ ದಿನಕ್ಕೆ ಬಟ್ಟೆ ತೊಳೆಯುವುದು ತಪ್ಪಿ ಹೋಗಿ ವಾರಕೊಮ್ಮೆ ಬಟ್ಟೆ ತೊಳೆಯಬೇಕಾಗತ್ತೋ ಅಂತಾ.

ಬಹುಷ, ಇಂತಹ ಪರಿಸ್ಥಿತಿಯಲ್ಲಿ ಯಾರಿದ್ದರೂ ಹೆದರುತಿದ್ದರೋ ಏನೋ. ಪುಣ್ಯಕ್ಕೆ ನನ್ನ ಹೆಂಡತಿ ಮಾಡಿದ ಒಂದು ಒಳ್ಳೆಯ ಕೆಲಸ ಅಂದರೆ, ಅವರು ಬರುವುದಕ್ಕೆ ಹದಿನೈದು ದಿನ ಮುಂಚಿತವಾಗಿ ಹೇಳಿದ್ದು. ಅವಳಿಗೆ ಬಹುಷ ನನ್ನ ಪರಿಸ್ಥಿತಿ ಗೊತ್ತಾಗಿರಬೇಕೆನಿಸುತ್ತೆ. ಅವಳೇನಾದರೂ ಎರಡು ದಿನ ಮೊದಲೆನಾದ್ರೂ ಹೇಳಿ ಬಿಟ್ಟದ್ದರೆ ನನ್ನ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿರುತ್ತಿತು. ಇನ್ನೂ ಹದಿನೈದು ದಿನ ಇದೆ ಅನ್ನೊ ಸಮಾಧಾನದಲ್ಲಿ, ಒಂದು ವಾರ ಬೇರೆ ಕಳೆದು ಹೋಗಿತ್ತು. ಇನ್ನುಳೀದುದ್ದು ಒಂದು ವಾರ ಮಾತ್ರ. ಎರಡು ವಾರಾಂತ್ಯಗಳು ಇವೆ ಎನ್ನುವ ದೈರ್ಯವಿತ್ತು. ಏನೇ ಆಗಲಿ ಆಗಿದ್ದು, ಆಗತ್ತೆ ಅನ್ನುವ ದೈರ್ಯದಿಂದ ಕೆಲಸ ಆರಂಭಿಸಿದೆ. ದೇವರ ಕೊಣೆಯನ್ನೆಲ್ಲ ಸ್ವಚ್ಚಗೊಳಿಸಿ, ಅಡಿಗೆ ಕೊಣೆಯನ್ನು ಸ್ವಚ್ಚಗೊಳಿಸೋ ಹೊತ್ತಿಗೆ ಒಂದು ದಿನ ಕಳೆದಿತ್ತು. ಹಾಗೆ ಇನ್ನೊಂದು ದಿನ ಉಳಿದೆಲ್ಲ ರೂಮುಗಳನ್ನು ಸ್ವಚ್ಚಗೊಳಿಸಿದೆ. ಹೀಗೆ ಇನ್ನೊಂದು ದಿನ, ಹಾಸಿಗೆ ದಿಂಬುಗಳನ್ನು ಸ್ವಚ್ಚಗೊಳಿಸಿದೆ. ಅಂತೂ ಒಂದು ವಾರ ಬೇಕಾಗಿತ್ತು. ಸಂಪೂರ್ಣ ಮನೆಯನ್ನು ಸ್ವಚ್ಚಗೊಳಿಸಿ ರೆಡಿ ಮಾಡಲು. ಅಂತೂ ನಮ್ಮ ಮಾವ ಬಂದು ಉಳಿದಿದ್ದು ಕೇವಲ ಒಂದು ಹಗಲು ಒಂದು ರಾತ್ರಿ ಮಾತ್ರ. ಅದೇ ನನ್ನ ಹೆಂಡತಿ ಇದ್ದಿದ್ದರೆ ದಿನಾ ಮನೆಯನ್ನು ಸ್ವಚ್ಚಗೊಳಿಸಿಟ್ಟುಕೊಳ್ಳುವವಳು. ನನ್ನ ಬಟ್ಟೆಗಳನ್ನೆಲ್ಲ ನೋಡಿ ಯಾವುದಾದರೂ ಬಟ್ಟೆ ಕೊಳೆಯಾಗಿದ್ದರೆ ಅದನ್ನು ತೆಗೆದುಕೊಂಡು ಹೋಗಿ ತೊಳೆಯುವುದು ಅವಳ ಅಭ್ಯಾಸ. ಅವಳಿದ್ದಾಗ ನನಗಂತೂ ಯಾವ ಕೆಲಸವು ಇರಲಿಲ್ಲ.

ಇನ್ನೂ ಊಟದ ವಿಷಯದಲ್ಲೂ ಅಷ್ಟೇ, ಹಗಲಲ್ಲಿ ಕಿತ್ತು ಹೋಗಿರೋ ಕಛೇರಿ ಊಟವನ್ನು, ರಾತ್ರಿ ಒಮ್ಮೊಮ್ಮೆ ಹೊರಗಡೆ ಒಮ್ಮೊಮ್ಮೆ ಮನೆಯಲ್ಲೂ ಊಟ ಮಾಡತೊಡಗಿದೆ. ಕಛೇರಿಯ ಊಟವನ್ನು ಎಷ್ಟು ವರ್ಣಿಸಿದರೂ ಸಾಲದು. ಸೋಮವಾರ ಚೆನ್ನಾ ಬಟೋರಾ, ಅಥವಾ ಪುರಿ. ಅದರ ಜೊತೆ, ಬೆಂಡೆಕಾಯಿ ಅಥವಾ ಹೀರೆಕಾಯಿ ಪಲ್ಯ. ಮಂಗಳವಾರ ಚಪಾತಿ ಅದರ ಜೊತೆ ದಾಲ್, ಬುದವಾರ ರುಮಾಲಿ ರೋಟಿ ಅದರ ಜೊತೆ ಚನ್ನಾದಾಲನ ಪಲ್ಲೆ, ಗುರವಾರ ಸೆಟ್ ದೋಸಾ ಅದರ ಜೊತೆ ದಾಲ್, ಶುಕ್ರವಾರ ರೊಟ್ಟಿ ಅದರ ಜೊತೆ ಚಟ್ನಿ ಅಥವಾ ಕ್ಯಾಬೇಜ್ ಪಲ್ಯ. ಇದು ಕೇವಲ ರೋಟಿ ಚಪಾತಿ ಕಥೆಯಾದರೆ ಇನ್ನು ಉಳಿದ ಪದಾರ್ಥಗಳ ಕಥೆ ಹೇಗಿರಬಹುದೆಂದು ನಿವೇ ಉಹಿಸಿ. ಅಂತಹ ಊಟವನ್ನು ವಾರಕ್ಕೆ ಐದು ದಿನವೂ ಮಾಡಬೇಕಾದ ಪರಿಸ್ಥಿತಿ. ಇನ್ನೂ ರಾತ್ರಿ ಊಟದ ಬಗ್ಗೆ ಹೇಳಬೇಕೆಂದರೆ, ರಾತ್ರಿ ಒಂದು ದಿನ ಹೊರಗಡೆಯಿಂದ ಸಾಂಬಾರ ತಂದು, ಮನೆಯಲ್ಲಿ ಅನ್ನ ಮಾಡಿಕೊಂಡು ಎರಡೆರಡು ದಿನ ಊಟ ಮಾಡುತ್ತಿದ್ದೆ. ಒಂದು ದಿನ ಸಾಂಬಾರ ಮಾಡಿಕೊಂಡು ಬಿಟ್ಟರೆ ಅದನ್ನಾ ರೆಪ್ರಿಜರೇಟರನಲ್ಲಿಟ್ಟು ಮೂರ್ನಾಲ್ಕು ದಿನ ಮಾಡಿಕೊಳ್ಳುತ್ತಿದ್ದೆ. ಅದೇ ನನ್ನ ಹೆಂಡತಿ ಇದ್ದರೆ ಈ ಯಾವ ತೊಂದರೆಗಳಿರಲಿಲ್ಲ. ಮದ್ಯಾಹ್ನ - ರಾತ್ರಿ ದಿನಾ ಮನೆಯಲ್ಲೇ ಊಟ ಮಾಡುತಿದ್ದೆ.

ಇವೆಲ್ಲ ಒಂದೊಂದು ಉದಹರಣೆಗಳಷ್ಟೇ. ಇಂತಹ ಘಟನೆಗಳು ಸಾವಿರಾರಿದೆ. ಇದು ಬಹುಷ ನನ್ನದೊಬ್ಬನದೇ ಕಥೆಯಾಗಿರಲಿಕ್ಕಿಲ್ಲ. ಇಂತಹ ಘಟನೆಗಳು ಹಲವರ ಜೀವನದಲ್ಲೂ ನಡೆದಿರಬಹುದು. ತಾಯಿ ಹೇಗೆ ತನ್ನ ಮಗುವಿನ ಬೇಕು ಬೇಡಗಳನ್ನು ಅರ್ಥೈಸಿಕೊಂಡು, ಅವನ ಸಮಸ್ಯೆಗಳಿಗೆ ಸ್ಪಂಧಿಸುತ್ತಳೆ. ಹಾಗೆ ಹೆಂಡತಿ, ತನ್ನ ಗಂಡನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅವನ ಹೆಗಲಿಗೆ ತನ್ನ ಹೆಗಲನ್ನ ಕೊಟ್ಟು, ಸಂಸಾರದ ಅರ್ಧಾಂಗಿ ಅನ್ನುವ ಹೆಸರನ್ನ ಗಳಿಸಿಕೊಂಡಿದ್ದಾಳೆ. ಎಂತಹ ದು:ಖವಿರಲಿ, ಸುಖವಿರಲಿ, ನೋವಿರಲಿ, ನಲಿವಿರಲಿ ಎನೇ ಇದ್ದರು ಗಂಡಸು ಹೇಳಿಕೊಳ್ಳುವುದು ಮದುವೆ ಮೊದಲು ತಾಯಿಯಲ್ಲಿ, ಮದುವೆಯ ನಂತರ ಹೆಂಡತಿಯಲ್ಲಿ. ಆದರೆ ಅಂತಹ ವಿಷಯಗಳನ್ನ ಹೇಳಿಕಳ್ಳಲು ಹೆಂಡತಿ ಹತ್ತಿರ ಇಲ್ಲ ಅಂದರೆ ಅವನ ಸ್ಥಿತಿ ಹೇಗಿರಬಹುದೆಂದು ನಿವೇ ಊಹಿಸಿ ಅಂತಹ ಸುಖ ಎಷ್ಟು ಕೋಟಿಕೊಟ್ಟರು ಬಾರದು. ಅದಕ್ಕೆ ಅಲ್ಲವೇ ಷರೀಪರು ಹಾಡಿದ್ದು,
" ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ನನಗದು ಕೋಟಿ ರೂಪಾಯಿ" ಎಂದು.

--ಮಂಜು ಹಿಚ್ಕಡ್ 

No comments:

Post a Comment