ದಿನದಂಚಿನ ಸೂರ್ಯಂಗೂ !
ಕೆಲಸವಿಹುದಂತೆ ನಾಳೆ
ಮತ್ತೆ ಇಲ್ಲಿ
ಇಣುಕುತ್ತಾ , ಹುಡುಕುತ್ತಾ
ಬರುವ ನಾಳೆ
ಬರುವಾಗ ಕೆಂಬಣ್ಣ
ನಡೆವಾಗ ಕೆಂಬಣ್ಣ
ಆಗೊಮ್ಮೆ, ಈಗೊಮ್ಮೆ
ಕರಿ ಇದ್ದಿಲ ಬಣ್ಣ
ನಡುವೆ ಚಂದ್ರನಂತಣ್ಣ.
ಸೊಕ್ಕಿಲ್ಲ ಸೊಗಡಿಲ್ಲ
ಬಿಗುಡು ದುಮ್ಮಾನಗಳಿಲ್ಲ
ರಜೆಯ ಪರಿಯಿಲ್ಲ ಅಂವಗೆ
ತನ್ನ ತಾ ಸುಟ್ಟು
ಜಗವ ಬೆಳಗುವುದೊಂದೇ
ಬಯಕೆ ದಿನವೂ ಅಂವಗೆ.
ಅವನಿರಲು ಹಗಲು
ಅವನಿಂದಲೇ ರಾತ್ರಿ
ನಿಂತಿಲ್ಲ ಒಂದು ದಿನವೂ
ಸುತ್ತುತ್ತಲೇ ಇರುವ
ಉರಿಯುತ್ತಲೇ ಇರುವ
ಎಂದಿಲ್ಲ ಎಂದು ದಣಿವು .
ಅವನಿದ್ದರೆ ತಾನೇ
ಈ ಜೀವ
ಜೀವನವು ಎಲ್ಲ
ನಾನು ತಾನೆನ್ನುವ ಹಮ್ಮು
ಈ ಮನುಕುಲಕೇಕೊ
ಅವನೇ ಬಲ್ಲ.
--
0 comments:
Post a Comment