Wednesday, February 3, 2016

ಆ ರುಚಿಯ ಮರೆಯುವುದು ಹೇಗೆ!

ಇಲ್ಲಿ ಬರೆಯ ಹೊರಟಿರುವ ವಿಷಯ ಹಲವು ವರ್ಷಗಳ ಹಿಂದೆ ನಡೆದಿದ್ದು, ಅದು ನೋಡಿದ್ದು, ಕೇಳಿದ್ದು, ಆಡಿದ್ದು ಮರೆತು ಹೋಗುವ ವಯಸ್ಸು ಕಳೆದು ಅಲ್ಪ ಸ್ವಲ್ಪ ಘಟನೆಗಳು ಮನಸ್ಸಲ್ಲಿ ನೆನಪು ಮೂಡುತಿದ್ದ ಬಾಲ್ಯದ ವಯಸ್ಸದು ನನಗೆ. ನಮ್ಮ ತಂದೆ ತಾಯಿ ಹೋದಲೆಲ್ಲ ನನಗರಿವಿಲ್ಲದೇ ಬೆನ್ನು ಹತ್ತಿ ಹೋಗುತಿದ್ದ ವಯಸ್ಸದು. ಅಂತಹ ವಯಸ್ಸಲ್ಲಿಯೇ ನಡೆದ, ಅರ್ಧಂಬರ್ಧ ನೆನಪಾಗುವ ಒಂದು ರುಚಿಕರವಾದ ಅಡುಗೆಯ ಬಗ್ಗೆ ಇಲ್ಲಿ ಬರೆಯ ಹೊರಟಿದ್ದೇನೆ. ಇದು ಅರ್ಧಂಬರ್ಧ ನೆನಪಿರುವ ವಿಷಯವಾಗಿರುವ ವಿಷಯವಾಗಿರುವುದರಿಂದ ಎಷ್ಟು ನೆನಪಿದೆಯೋ ಅಷ್ಟನ್ನು ನನಗೆ ತಿಳಿದ ಮಟ್ಟಿಗೆ ಬರೆಯಲು ಪ್ರಯತ್ನಿಸುತ್ತೇನೆ.

ಅಂಕೋಲೆ ಇದು ನಮ್ಮ ತಾಲೋಕಾ ಕೇಂದ್ರವಾಗಿದ್ದು, ನಮ್ಮೂರಿಂದ ೬-೭ ಕೀಲೋ ಮೀಟರ್ ದೂರದಲ್ಲಿದೆ. ಕೇವಲ ಆರೇಳು ಕೀಲೋ ಮೀಟರ್ ದೂರದಲ್ಲಿದ್ದರೂ ೮೦ರ ದಶಕದ ಅಂತ್ಯದ ಅಂದಿನ ದಿನಗಳಲ್ಲಿ ನಮಗೆ ಅಂಕೋಲೆ ಎನ್ನುವುದು ಚಿರಪರಿಚಿತವಾಗಿದ್ದರೂ, ನಮಗೆ ಅಪರೂಪದ ಸ್ಥಳವಾಗಿತ್ತು. ಆಗ ನಾವು ವರ್ಷಕ್ಕೆ ನಾಲ್ಕೈದು ಬಾರಿ ಅಂಕೋಲೆಗೆ ಹೋದರೆ ಹೆಚ್ಚು. ಅಂತಹ ವಯಸ್ಸಲ್ಲಿ ನಮಗೆ ಅಂಕೋಲೆಗೆ ಹೋಗಲು ಅವಕಾಶ ಸಿಕ್ಕರೆ ನಮಗೆ ಪಾರವೇ ಇರುತ್ತಿರಲಿಲ್ಲ.

ನಮ್ಮಲ್ಲಿ ವರ್ಷಕ್ಕೆ ಎರಡು ಭಾರಿ, ಅದರಲ್ಲೂ ವಿಶೇಷವಾಗಿ ಶ್ರಾವಣ ಮತ್ತು ಕಾರ್ತಿಕ ಮಾಸಗಳಲ್ಲಿ ಬರುವ ಶನಿವಾರದ ದಿನ ಊರವರೆಲ್ಲ ಸೇರಿ ಅಂಕೋಲೆಯ ವೆಂಕಟ್ರಮಣ ದೇವಸ್ಥಾನಕ್ಕೆ ಹೋಗಿ ಉಪಹಾರ ಮಾಡಿಸಿಕೊಂಡು ಬರುವುದು ನಮ್ಮ ಕಡೆಯ ಎಲ್ಲಾ ಊರುಗಳಲ್ಲಿಯೂ ನಡೆದು ಬಂದಿರುವ ವಾಡಿಕೆ. ಆ ವಾಡಿಕೆ ಇತರ ಊರುಗಳಂತೆ ನಮ್ಮೂರಲ್ಲೂ ರೂಡಿಯಲ್ಲಿದೆ. ಅಂದು ಹಾಗೆ ಉಪಹಾರಕ್ಕೆ ಹೋಗುವಾಗ ಅಕ್ಕಿ, ಕಾಯಿ ಮತ್ತು ಪೂಜಾ ಸಾಮಾಗ್ರಿಗಳ ಜೊತೆ ಬಾಳೆಯೆಲೆಯನ್ನು ತೆಗೆದುಕೊಂಡು ಹೋಗುತಿದ್ದರು. ಇಂದಿಗೂ ಊಪಹಾರದ ವಾಡಿಕೆ ಮುಂದುವರೆದಿದೆಯಾದರೂ ಬಾಳೆಯೆಲೆಯನ್ನು ತೆಗೆದುಕೊಂದು ಹೋಗುವ ಪದ್ದತಿ ಇಲ್ಲ. ಏಕೆಂದರೆ ಊಟದ ವ್ಯವಸ್ಥೆ ಅಲ್ಲಿಯೇ ಇರುವುದರಿಂದ. ನಮ್ಮ ತಂದೆಯವರು ಉಪಹಾರಕ್ಕೆ ಹೊರಟು ನಿಂತ ಸಮಯದಲ್ಲಿ ನನಗೇನಾದರೂ ಶಾಲೆಗೆ ರಜಾ ಇತ್ತು ಎಂದಾದರೆ ನಾನು ನಮ್ಮ ತಂದೆಯವರು ಬೇಡ ಎಂದರೂ ಕೇಳದೇ ಹಟ ಮಾಡಿ ಹೊರಟು ಬಿಡುತಿದ್ದೆ.

ಅಂದು ಅಲ್ಲಿ ಉಪಹಾರಕ್ಕೆ ತಂದ ಅಕ್ಕಿಯಲ್ಲಿ ದೇವರಿಗೆ ಅರ್ಪಿಸಿ ಉಳಿದ ಮಿಕ್ಕ ಅಕ್ಕಿಯನ್ನು ಪೂಜೆ ಮುಗಿದೊಡನೆಯೇ ಅಲ್ಲಿಯೇ ಬೇಯಿಸಿ ಊಟ ಮಾಡಿಕೊಂಡು ಬರುತಿದ್ದರು. ಆಗ ಅಲ್ಲಿ ಈಗಿನಂತೆ ಅಡುಗೆ ಕೋಣೆಯಿರಲಿಲ್ಲ, ಕುಳಿತು ಉಣ್ಣಲು ಪ್ರತ್ಯೇಕ ಕೋಣೆ ಇರಲಿಲ್ಲ, ಬೇಯಿಸಲು ಪಾತ್ರೆ ಪಗಡೆಗಳಿರಲಿಲ್ಲ. ಆ ಕಾಲದಲ್ಲಿ ನಮ್ಮ ಊರಿನವರು ಸೇರಿ ತಯಾರಿಸುತಿದ್ದ ಆ ಅಡುಗೆಯನ್ನು ನೆನೆಸಿಕೊಂಡರೆ ಇಂದಿಗೂ ಒಮ್ಮೆ ಬಾಯಲ್ಲಿ ನೀರು ಬರುತ್ತದೆ.

ಪೂಜೆ ಮುಗಿದೊಡನೆ ಒಬ್ಬರು ಪೇಟೆಗೆ ಹೋಗಿ ಮೆಣಸು, ಹುಣಸೆಹಣ್ಣು, ಬೆಳ್ಳುಳ್ಳಿ, ಉಪ್ಪು ತರಲು ಹೋಗಲು ಹೋಗುತಿದ್ದರು. ಇನ್ನೊಬ್ಬರು ದೇವಸ್ಥಾನದ ಪಕ್ಕದಲ್ಲಿ ಇರುವ ಐಗಳರ ಮನೆಗೆ ಹೋಗಿ ಅಡುಗೆ ಮಾಡಲು ಮೂರ್ನಾಲ್ಕು ಪಾತ್ರೆಗಳನ್ನು, ಕಾಯಿ ತುರಿಯಲು ಈಳಿಗೆ ಮಣೆಯನ್ನು ತೆಗೆದುಕೊಂಡು ಬರುತಿದ್ದರು. ಪಾತ್ರೆಗಳು ಬಂದೊಡನೆ ಒಬ್ಬರು ಪಾತ್ರೆಯಲ್ಲಿ ನೀರು ಕಾಯಿಸಿ, ಅದಕ್ಕೆ ಅಕ್ಕಿ ಹಾಕಿ ಬೇಯಿಸಲು ಸುರು ಹಚ್ಚಿಕೊಂಡರು, ಇನ್ನೊಂದಿಬ್ಬರು ಈಳಿಗೆ ಮಣೆ ಹಿಡಿದು ದೇವರಿಗೆ ಒಡೆಸಿದ ಕಾಯಿಗಳನ್ನು ತುರಿಯಲು ಪ್ರಾರಂಭಿಸುತಿದ್ದರು. ಕಾಯಿ ತುರಿಯುವುದು ಮುಗಿಯುವಷ್ಟರಲ್ಲಿ ಪೇಟೆಗೆ ಹೋದವರು ಮೆಣಸು, ಹುಣಸೆಹಣ್ಣು, ಬೆಳ್ಳುಳ್ಳಿ ಮತ್ತು ಉಪ್ಪು ಮುಂತಾದ ಸಾಮಾನುಗಳೊಂದಿಗೆ ಬಂದು ಸೇರುತಿದ್ದರು. ತುರಿದ ಕಾಯಿಗೆ ಪ್ರಮಾಣ ಬದ್ದವಾಗಿ ಮೆಣಸು, ಹುಣಸೆಹಣ್ಣು, ಬೆಳ್ಳುಳ್ಳಿ ಮತ್ತು ಉಪ್ಪು ಹಾಕಿದೊಡನೆಯೇ ಇನ್ನೊಬ್ಬರು ಅದನ್ನು ತೆಗೆದುಕೊಂಡು ಹೋಗಿ ಐಗಳರ ಮನೆಯಲ್ಲಿರುವ ರುಬ್ಬುವ ಕಲ್ಲಲ್ಲಿ ರುಬ್ಬಿ ಗುಂಡಗಿನ ಚಟ್ಣಿಯ ಮುದ್ದೆಯನ್ನು ಮಾಡಿ ತರುತಿದ್ದರು. ಆ ಚಟ್ಣಿ ಮುದ್ದೆ ಬರುವಷ್ಟರಲ್ಲಿ ಇಲ್ಲಿ ಬಿಸಿ ಬಿಸಿ ಅನ್ನವು ರೆಡಿಯಾಗಿರುತಿತ್ತು. ಚಟ್ಣಿ ಅನ್ನ ರೆಡಿಯಾದೊಡನೆ ಎಲ್ಲರು ಅವರವರ ಮನೆಯಿಂದ ತಂದ ಬಾಳೆ ಎಲೆ ಹರಡಿ ಕೂಡುತಿದ್ದರು.

ಆ ಬಿಸಿ ಬಿಸಿ ಅನ್ನಕ್ಕೆ ಆ ಚಟ್ನಿಯೇ ಪಲ್ಯೆ ಹಾಗೂ ಸಾರು. ಆ ಚಟ್ನಿಯ ಹುಳಿ ಖಾರ ಮಿಶ್ರಿತ ರುಚಿ ಹಾಗೂ ಸ್ವಾಧಕ್ಕೆ ಅನ್ನ ಹೊಟ್ಟೆಗೆ ಸೇರಿದ್ದೇ ನೆನಪಾಗುತ್ತಿರಲಿಲ್ಲ. ಆ ಊಟ, ಆ ಚಟ್ಣಿ, ಆ ರುಚಿ ಮತ್ತೆಲ್ಲೂ ಅನುಭವಿಸಲು ಸಾಧ್ಯವಿಲ್ಲ. ಆ ಚಟ್ಣಿಯ ನೆನಪಾದಾಗಲೆಲ್ಲಾ ಆ ರೀತಿಯ ಚಟ್ಣಿ ಮಾಡಲು ಹೋಗಿ ನಾನೇ ಅದೆಷ್ಟೋ ಬಾರಿ ಸೋತಿದ್ದೇನೆ ಹೊರತು ಆ ರುಚಿಯನ್ನು ಅನುಭವಿಸಲಾಗಲಿಲ್ಲ.

ಆದರೆ ಈಗ ಅಲ್ಲಿ ಸಂಪೂರ್ಣ ಬದಲಾಗಿದೆ. ಈಗ ಉಪಹಾರಕ್ಕೆ ಹೋದವರು ಅಲ್ಲಿ ಸ್ವ ಅಡುಗೆ ಮಾಡುವ ಅವಶ್ಯಕತೆ ಇಲ್ಲ. ಅಲ್ಲಿ ಈಗ ದೇವಸ್ಥಾನದ ಆಡಳಿತ ಮಂಡಳಿಯವರೇ ಊಟದ ವ್ಯವಸ್ಥೆಯನ್ನು ಮಾಡುತಿದ್ದಾರೆ. ಅಂದು ಶಿಥಿಲಗೊಂಡಿದ್ದ ಅಡುಗೆ ಕೋಣೆ ಪುನರ್ ನಿರ್ಮಿತಗೊಂಡಿದೆ. ಮದುವೆ ಮತ್ತು ಇತರ ಕಾರ್ಯಕ್ರಮಗಳು ನಡೆಯಲು ಚಿಕ್ಕದಾದರೂ ಚೊಕ್ಕದಾದ ಸಬಾಂಗಣವಿದೆ. ಸುಸಜ್ಜಿತ ಊಟದ ಕೊಠಡಿಯಿದೆ. ಒಟ್ಟಿನಲ್ಲಿ ಹಳೆಯತನ ಮರೆಯಾಗಿ ಹೊಸತನದ ಸೊಗಡು ಮೂಡ ತೊಡಗಿದೆ. ಅದೇನೆ ಇರಲಿ. ನಾವು ಅದೆಷ್ಟೇ ಸ್ಥಿತಿವಂತರಾಗಿ, ಆಧುನಿಕರಣಗೊಂಡು, ಹೊಸ ಹೊಸ ವಸ್ತು ಸಲಕರಣೆಗಳನ್ನು ಬಳಸಿಕೊಂಡರೂ ಅಂದಿನ ಹಳೆಯ ಸೊಗಡನ್ನು ಮತ್ತೆ ಪುನರ್ ಸೃಷ್ಠಿಸುವುದು ಅಷ್ಟೊಂದು ಸಾದ್ಯವಾಗದ ಮಾತು. ಅಂದಿನ ಆ ಜನರ ಆ ರುಚಿ, ಆ ಸ್ವಾಧವನ್ನು ಅಂದು ಅನುಭವಿಸಿದ ನಾವೇ ಒಂದು ರೀತಿಯಲ್ಲಿ ಧನ್ಯರು ಅಂತಾ ಭಾವಿಸುತ್ತೇನೆ.

-ಮಂಜು ಹಿಚ್ಕಡ್

No comments:

Post a Comment