Wednesday, January 21, 2015

ನನ್ನ ಕಥೆ

(೨೦೦೩ ರಲ್ಲಿ ಹಿಚ್ಕಡ್ ಪ್ರಾಥಮಿಕ ಶಾಲೆಯ ಅಮ್ರತ ಮಹೋತ್ಸವದ ಸಂಚಿಕೆಗಾಗಿ ಬರೆದಿದ್ದು)

ಓ ಶಿಷ್ಯ, ನಿನಗಾಗಿ ಈ ಚಿಕ್ಕ ಓಲೆ
ಮರೆಯದಿರು, ’ನಿನ್ನವ್ವ’ ನಾ ಹಿಚಕಡ ಶಾಲೆ
ಸಹ್ಯಾದ್ರಿಯ ತಪ್ಪಲಲಿ ನನ್ನ ಪುಟ್ಟ ಮಹಲು
ಸುರ್ಯಚಂದ್ರರಳಿಯಬೇಕು ನನ್ನ ಹೆಸರು ಮಾಸಲು ||೧||

ಸ್ವಾತಂತ್ರ್ಯ ಪೂರ್ವದಲ್ಲೇ ನನ್ನಯ ಉಗಮ
ಇಂದು ನನಗೀಗ ಎಂಬತ್ತರ ಸಂಭ್ರಮ
ಎಂಟು ದಶಕಗಳಾದರೂ, ನನಗಿಂದು ಯವ್ವನ
ಅದರ ನೆನಪಿಗಾಗಿ ಈ ಪುಟ್ಟ ಕವನ ||೨||

ಕನ್ನಡಾಂಬೆಯ ಹಸುಗೂಸು ನಾನೆಂಬುದು ಸತ್ಯ
ನನ್ನ ಮಕ್ಕಳಿಗೆಲ್ಲ ನನ್ನದೇ ಸಾರಥ್ಯ
ಸರ್ವರಿಗೂ ಶಿಕ್ಷಣ ಎನ್ನುವುದು ಮಾತು
ಬೇರಾವುದು ಇಲ್ಲ ಕನ್ನಡದ ಹೊರತು ||೩||

ಓ ಶಿಷ್ಯ ನಿನ್ನ ಕೀರ್ತಿ ಹಬ್ಬಲಿ ದೂರ, ಬಲು ದೂರ
ಆಗಲೇ ಇಳಿಯುವುದು ನನ್ನ ತಲೆ ಭಾರ
ನಾ ಬಯಸುವುದಿಷ್ಟೇ ನನ್ನ ಶಿಷ್ಯರ ಅಭಿವೃದ್ಧಿ
ಅವರಿಗೆಂದೂ ಬರದಿರಲಿ ಕೆಡುಕು ಬುದ್ಧಿ ||೪||

ನಾನೆಂದಿಗೂ ಸಾರುವೆ ಏಕತೆಯ ಮಂತ್ರ
ನನಗೆಂದಿಗೂ ಇಲ್ಲ ಜಾತಿಬೇಧದ ಕುತಂತ್ರ
ಬಯಸಿ ಬಂದವರಿಗೆಲ್ಲ ನೀಡಿದೆ ವಿದ್ಯೆಯ ಕಾಣಿಕೆ
ಎಲ್ಲರಿಗೂ ಶುಭವಾಗಲಿ ಎನ್ನುವುದೇ ನನ್ನ ಹಾರೈಕೆ ||೫||

ಅಂದು ನನ್ನಂಗಳದಲ್ಲಿ ಸ್ವಾತಂತ್ರದ ಹೋರಾಟ
ಇಂದು ನನ್ನ ಪಕ್ಕದಲ್ಲೆ ಸೇಂದಿ-ಸಾರಾಯಿ ಮಾರಾಟ
ನನ್ನ ಮಕ್ಕಳಿಗೇಕೆ ಇಂತಹ ದುರ್ಬುದ್ದಿ
ಎಂದು ಮಾಡಿಕೊಳ್ಳುವರೋ ತಮ್ಮ ಆತ್ಮ ಶುದ್ದಿ ||೬||

ಇಲ್ಲಿಯವರೆಗೆ ಬದುಕಿದೆ ಮಳೆಗಾಲಿಗೆ ಅಂಜದೆ
ಇಂದಿಗೇಕೋ ಹೆದರುತಿದೆ ಈ ರಾಜಕೀಯಕೆ ನನ್ನೆದೆ
ಇತ್ತಿತ್ತಲಾಗಿ ಮರೆಯಾಗುತ್ತಿದೆ ನನ್ನ ನೆನಪು
ಹೇಗೆ ತೊರಲಿ ಇವರಿಗೆ ಈ ಚಿರ ಯವ್ವನೆಯ ಒನಪು ||೭||

ಓ ಶಿಷ್ಯ ಇಂದು ನಿನಗುಂಟು ನನ್ನ ರಕ್ಷಣೆಯ ಹೊಣೆ
ಎಂದಿಗೂ ಬದಲಿಸದಿರು ನಿನ್ನಯ ಧೋರಣೆ
ನನ್ನ ರಕ್ಷಣೆಯಲ್ಲಿರಲಿ ನಿನ್ನ ಪ್ರಮುಖ ಪಾತ್ರ
ಎಂದು ಹೇಳಿ ಮುಗಿಸುವೆನು ಈ ನನ್ನ ಪತ್ರ ||೮||

-ಮಂಜು ಹಿಚ್ಕಡ್

No comments:

Post a Comment